ಭಾರತದ ಆಗ್ರಾದಲ್ಲಿ ನಿರ್ಮಾಣಗೊಂಡ ಅದ್ವಿತೀಯ ಪ್ರೇಮದ ಪ್ರತೀಕ ತಾಜ್‌ಮಹಲ್ ತನ್ನದೇ ಆದ ಸೌಂದರ್ಯ, ಭವ್ಯತೆ ಮತ್ತು ಆಕರ್ಷಣೆಯ ಕಾರಣದಿಂದ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದೆ. ಇದು ಜಗತ್ತಿನ ಏಕೈಕ ಪ್ರೇಮ ಸ್ಮಾರಕವಾಗಿದೆ.

ಆಗ್ರಾದ ತಾಜ್‌ಮಹಲ್‌ನ್ನು ನೋಡಿದ ಬಳಿಕ ನನಗೆ ಅಂಥದೇ ಪ್ರೇಮ ಸ್ಮಾರಕವೊಂದನ್ನು ನೋಡುವ ಅವಕಾಶ ಈಚೆಗಷ್ಟೇ ದೊರಕಿತು. ಕಳೆದ ಡಿಸೆಂಬರ್‌ನಲ್ಲಿ ನಮಗೆ ಕೆನಡಾದ ಟೋರಾಂಟೊ ಹಾಗೂ ಅಕ್ಕಪಕ್ಕದ ಸ್ಥಳಗಳನ್ನು ನೋಡುವ ಅವಕಾಶ ದೊರಕಿತು. ಕೆನಡಾದ 1000 ಐಲ್ಯಾಡ್ಸ್ ನಲ್ಲಿರುವ ಈ ಹಾರ್ಟ್‌ ಲ್ಯಾಂಡಿನಲ್ಲಿರುವ ಬೋಲ್ಟ್ ಕ್ಯಾಸ್‌ರ ಕಥೆ ಹಾಗೂ ಅದರ ಭವ್ಯತೆಯ ಬಗ್ಗೆ ನಾನು ಬಹಳಷ್ಟು ಕೇಳಿದ್ದೆವು.

ಒಂದು ವೈಭವದ ಮಹಲು

1000 ಐಲ್ಯಾಂಡಿನ  ರಾಕ್‌ ಪೋರ್ಟಿನಿಂದ ನಾವು ಅಮೆರಿಕದ ಗಡಿರೇಖೆಯ ಬಳಿ ಇರುವ ಹಾರ್ಟ್‌ ಲ್ಯಾಂಡಿಗೆ ಹೋಗುವ ಕ್ರೂಸ್‌ನ ಟಿಕೆಟ್‌ ಖರೀದಿಸಿ ಲಾರೆನ್ಸ್ ನದಿಯಲ್ಲಿ ಹಾರ್ಟ್‌ ಲ್ಯಾಂಡಿನತ್ತ ಪ್ರಯಾಣ ಬೆಳೆಸಿದೆವು.

ಸುಮಾರು 45 ನಿಮಿಷಗಳ ಪ್ರಯಾಣದ ಬಳಿಕ ನದಿಯ ನಾಲ್ಕೂ ಬದಿಯ ವಿಭಿನ್ನ ದೃಶ್ಯಗಳನ್ನು ಕಣ್ಣಲ್ಲಿ ತುಂಬಿಸಿಕೊಳ್ಳುತ್ತ ನಮ್ಮ ಕ್ರೂಸ್‌ ಹಾರ್ಟ್‌ ಲ್ಯಾಂಡಿನ ದಡ ತಲುಪಿತು. ಎದುರಿನಲ್ಲಿಯೇ ಕಾಣುತ್ತಿದ್ದ ಒಂದು ಭವ್ಯ ಕಟ್ಟಡದತ್ತ ಕೈ ಮಾಡಿ ತೋರಿಸುತ್ತಾ ಇದೇ ಬೋಲ್ಟ್ ಕ್ಯಾಸೆಲ್ ಎಂದ. ಬೋಲ್ಟ್ ಕ್ಯಾಸೆಲ್ ಒಂದು ಹೆಸರು. ಆದರೆ ಅದೊಂದು ವಿಶಾಲಕಾಯ ಸ್ಮಾರಕದ ರೀತಿಯಲ್ಲಿ ಭವ್ಯವಾಗಿತ್ತು.

ನಾವು ಕ್ರೂಸ್‌ನಿಂದ ಇಳಿದು ಹೋಟೆಲ್‌ನ ಕಡೆ ಹೊರಟೆವು. ಬಳಿಕ ಆ ಗೈಡ್‌ ಹೇಳಿದ ವಿಷಯ ಬಹಳ ರೋಚಕವಾಗಿತ್ತು. 1851ರಲ್ಲಿ  ಜನಿಸಿದ ಜಾರ್ಜ್‌ ಚಾರ್ಲ್ಸ್ ಬೋಲ್ಟ್ ಅಮೆರಿಕದ ಒಬ್ಬ ಕೋಟ್ಯಧೀಶನಾಗಿದ್ದ. ಅವನು ಅಮೆರಿಕದಲ್ಲಿ ದೊಡ್ಡ ದೊಡ್ಡ ಹೋಟೆಲ್ ನಿರ್ಮಿಸುವುದರಲ್ಲಿ ನಿಷ್ಣಾತನಾಗಿದ್ದ.

ಯುವಕನಿದ್ದಾಗಲೇ ಅವನದು ಆಕರ್ಷಕ ವ್ಯಕ್ತಿತ್ವ, ಬೇರೆಯವರನ್ನು ಪ್ರಭಾವಿತಗೊಳಿಸುವ ಸಾಮರ್ಥ್ಯ ಹೊಂದಿದ್ದರಿಂದ ಅವನಿಗೆ ಫಿಲಡೆಲ್ಛಿಯಾದ ಒಂದು ಕ್ಲಬ್‌ನಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗೆ ನೇಮಕವಾಯಿತು. ಕ್ಲಬ್ಬಿನ ಮ್ಯಾನೇಜರ್‌ ಮಗಳು ಲೂಯಿಸ್‌ ತನ್ನ ತಂದೆಗೆ ನೆರವಾಗಲು ಆಗಾಗ ಹೋಟೆಲ್‌ಗೆ ಬರುತ್ತಿದ್ದಳು. ಲೂಯಿಸ್‌ ಅಪ್ರತಿಮ ಸುಂದರಿ. ಅವಳ ಬಂಗಾರ ವರ್ಣದ ಕೂದಲು, ಹಾಲಿನಲ್ಲಿ ಅದ್ದಿ ತೆಗೆದಂತಹ ಬೆಳ್ಳಗಿನ ದೇಹ, ಮುಖದಲ್ಲಿ ಸದಾ ಮಿನುಗುತ್ತಿದ್ದ ಮುಗುಳ್ನಗೆ ಬೋಲ್ಟ್ ಗೆ ತುಂಬಾ ಹಿಡಿಸಿಬಿಟ್ಟಿತು. ಅವನು ಅವಳ ಅಭಿಮಾನಿಯಾಗಿಬಿಟ್ಟಿದ್ದ.

ಅಕ್ಕಪಕ್ಕದ ಹುಡುಗರಂತೂ ಅವಳ ಒಂದು ಮುಗುಳ್ನಗೆಯ ಚಮಕ್‌ ನೋಡಲು ಹೋಟೆಲ್‌ಗೆ ಬರುತ್ತಿದ್ದರು. ಬೋಲ್ಟ್ ಕೂಡ ಅವಳನ್ನು ಆರಾಧಿಸಲಾರಂಭಿಸಿದ್ದ. ಕ್ರಮೇಣ ಅವರಿಬ್ಬರ ಮಧ್ಯೆ ಪ್ರೀತಿ ಅಂಕುರಿಸಿತು. 1877ರಲ್ಲಿ ಅವರ ಪ್ರೀತಿ ಮದುವೆಯಲ್ಲಿ ಪರಿವರ್ತನೆಗೊಂಡಿತು. ಮದುವೆಯ ಬಳಿಕ ಅವರು ಫಿಲಡೆಲ್ಛಿಯಾದಲ್ಲಿ `ಹೋಟೆಲ್ ‌ಬೋಲ್ಟ್ ವ್ಯಾಲಿ’ ನಿರ್ಮಿಸಿದರು. ಹೋಟೆಲ್‌ನ ಪ್ರತಿಯೊಂದು ಕೋಣೆಯಲ್ಲಿ ಲೂಯಿಸ್‌ ಮಾಡಿದ ಡಿಸೈನ್ಸ್ ನಿಂದಾಗಿ ಆ ಹೋಟೆಲ್ ‌ಬಹಳ ಪ್ರಸಿದ್ಧಿ ಪಡೆಯಿತು.

ಈ ಹೋಟೆಲಿನ ಅತ್ಯಂತ ರುಚಿ ರುಚಿಯಾದ ಆಹಾರ ರಾಜಮನೆತನದವರ ತನಕ ತಲುಪಿತು. ಹೀಗಾಗಿ ಇವರಿಬ್ಬರ ಪರಿಚಯ ವಿಶೇಷ ವ್ಯಕ್ತಿಗಳಲ್ಲಿ ಒಬ್ಬರೆಂಬಂತೆ ಆಗತೊಡಗಿತು. ಈ ಒಂದು ಆಪ್ತ ಸಂಬಂಧದಿಂದಾಗಿ ನ್ಯೂಯಾರ್ಕ್‌ನಲ್ಲಿ ನಿರ್ಮಾಣವಾಗುತ್ತಿದ್ದ ಅತ್ಯಂತ ದೊಡ್ಡ ಹೋಟೆಲ್‌`ವಾರ್ಡಿಫ್‌’ಗೆ ಜಾರ್ಜ್‌ ಬೋಲ್ಟ್ ನನ್ನು ಪ್ರೊಪ್ರೈಟರ್‌ ಎಂದು ನೇಮಕ ಮಾಡಲಾಯಿತು.

ಲೂಯಿಸ್ಮತ್ತು ಬೋಲ್ಟ್

ಇವರಿಬ್ಬರ ಅದ್ಭುತ ಪ್ರಯತ್ನ ಮತ್ತು ಕ್ರಿಯಾಶೀಲ ಮನಸ್ಸಿನಿಂದಾಗಿ 1854ರಲ್ಲಿ ನಿರ್ಮಾಣವಾದ `ವಾರ್ಡಿಫ್‌’ ಜಗತ್ತಿನ ಅತ್ಯುತ್ತಮ ಹೋಟೆಲ್‌ಗಳಲ್ಲಿ ಒಂದೆನಿಸಿತು. ಆ ಹೋಟೆಲ್‌ನಿಂದಾಗಿ ಬೋಲ್ಟ್ ರಾಜ ಕುಟುಂಬದವರಿಗೆ ಮತ್ತಷ್ಟು ನಿಕಟವಾದವು. ಬೋಲ್ಟ್ ದಂಪತಿಗಳು ಅದೇ ರೀತಿಯಲ್ಲಿ ಅನೇಕ ದೊಡ್ಡ ದೊಡ್ಡ ಹೋಟೆಲ್‌‌ಗಳನ್ನು ನಿರ್ಮಿಸಿದರು. ಆ ಹೋಟೆಲ್‌ಗಳಲ್ಲಿ ಬಂದು ವಾಸಿಸುವುದೆಂದರೆ ತಮ್ಮ ಪ್ರತಿಷ್ಠೆ ಹೆಚ್ಚುತ್ತದೆಂದು ಅನೇಕರು ಭಾವಿಸಿದ್ದರು.

ಅದ್ಭುತ ಪ್ರೀತಿಯ ದ್ಯೋತಕ

ಬೋಲ್ಟ್ ತನ್ನ ಪತ್ನಿ ಲೂಯಿಸ್‌ಳನ್ನು ‘ಬ್ಯೂಟಿಫುಲ್ ಪ್ರಿನ್ಸೆಸ್‌’ ಎಂದೇ ಕರೆಯುತ್ತಿದ್ದ. ಆತ ಅವಳನ್ನು ಅಷ್ಟೇ ಪ್ರೀತಿಸುತ್ತಿದ್ದ. ಅವಳ ಹೊರತಾಗಿ ಜೀವಿಸುವ ಬಗ್ಗೆ ಅವನಿಗೆ ಕಲ್ಪನೆ ಕೂಡ ಮಾಡಲು ಆಗುತ್ತಿರಲಿಲ್ಲ.

ಅವಳ ಪ್ರೀತಿಯ ದ್ಯೋತಕವಾಗಿ ಏನನ್ನಾದರೂ ವಿಶೇಷವಾದುದನ್ನು ನಿರ್ಮಿಸಬೇಕೆಂದು ಅವನು ಸದಾ ಯೋಚಿಸುತ್ತಿದ್ದ. ತನ್ನ ಕಾರ್ಯಯೋಜನೆಗೆ ಒಂದು ರೂಪು ಕೊಡಲು 1000 ಐಲ್ಯಾಂಡ್‌ನಲ್ಲಿರುವ ಹಾರ್ಟ್‌ ಲ್ಯಾಂಡ್‌ನ್ನು ಆಯ್ದುಕೊಂಡ. ಅದರಲ್ಲೊಂದು ಸ್ಮರಣಾರ್ಹ ಸ್ಮಾರಕ ಮಾಡಲು ನಿರ್ಧರಿಸಿದ. ಆ ಕಾಲದ ಹೆಸರಾಂತ ಶಿಲ್ಪಿಗಳು ಮತ್ತು ಕರಕುಶಲ ಕಲೆಯಲ್ಲಿ ನಿಪುಣರಾದವರನ್ನು ಈ ಕೆಲಸದಲ್ಲಿ ತೊಡಗಿಸಿದ.

ಪ್ರತಿಯೊಂದು ಕೆಲಸ ಲೂಯಿಸ್‌ಳ ಆಸಕ್ತಿ, ಅವಳ ಅಪೇಕ್ಷೆಯ ಮೇರೆಗೆ ನಡೆಯುತ್ತಿತ್ತು. ಆತ ನಿರ್ಮಿಸುತ್ತಿದ್ದ ಹೋಟೆಲ್ ಎಂತಹುದಾಗಿತ್ತೆಂದರೆ, ಆ ಹೋಟೆಲ್‌ನಲ್ಲಿ ಸರ್ವ ಸುಖ ಸೌಲಭ್ಯಗಳು, ಮನರಂಜನೆ ದೊರೆಯಬೇಕು ಎಂಬುದಾಗಿತ್ತು. ಲೂಯಿಸ್‌ಸ್ವತಃ ತಾನೇ ನಿಂತು ಪ್ರತಿಯೊಂದು ರೂಮಿಗೂ ವಿಶೇಷ ವಿನ್ಯಾಸ, ಅಲಂಕಾರ ಮಾಡಿಸಿದಳು. ಆಕೆ ಚಿಕ್ಕಪುಟ್ಟ ವಿಷಯಗಳ ಬಗೆಗೂ ಬಹಳ ಆಸಕ್ತಿ ವಹಿಸುತ್ತಿದ್ದಳು.

ಬೋಲ್ಟ್ ಕ್ಯಾಸ್‌ ನಿರ್ಮಾಣಗೊಂಡಿತು. ಬೋಲ್ಟ್ ತನ್ನ ಪ್ರೀತಿಯ ಪತ್ನಿಯ ಜೊತೆ ಇದೇ ಹೋಟೆಲ್‌ಗೆ 4 ಸಲ ರಜೆ ಕಳೆಯಲು ಬಂದಿದ್ದ. ಪ್ರತಿಸಲ ಬಂದಾಗಲೂ ಅವನು ಅವಳನ್ನು ಸಾಕಷ್ಟು ಸುತ್ತಾಡಿಸುತ್ತಿದ್ದ. ಅವಳಿಗೆ ಏನೊಂದೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದ. ತನ್ನ ಪ್ರೀತಿಪಾತ್ರಳ ಸವಿ ನೆನಪಿಗಾಗಿ ಆ ಹೋಟೆಲ್‌ನ್ನು ಹೃದಯದ ಆಕಾರದಲ್ಲಿ ರೂಪಿಸಿದ.

ನಾಲ್ಕು ವರ್ಷ ಬೇಸಿಗೆ ರಜೆ ಕಳೆದ ಬಳಿಕ ಬೋಲ್ಟ್ ಮುಂದಿನ ವರ್ಷ ಲೂಯಿಸ್‌ಳ ಹುಟ್ಟುಹಬ್ಬಕ್ಕೆ ಆ ಪ್ರೀತಿಯ ಸ್ಮಾರಕವನ್ನು ಉಡುಗೊರೆಯಾಗಿ ಕೊಡಲು ನಿರ್ಧರಿಸಿದ್ದ. ಆದರೆ ವಿಧಿಗೆ ಅದು ಮಾನ್ಯವಿರಲಿಲ್ಲವೇನೊ? ತನ್ನ ಹುಟ್ಟುಹಬ್ಬಕ್ಕೆ ಸರಿಯಾಗಿ 1 ತಿಂಗಳ ಮುಂಚೆ ಬೋಲ್ಟ್ ನನ್ನು ಏಕಾಂಗಿಯಾಗಿ ಬಿಟ್ಟು 42 ವರ್ಷದ ಲೂಯಿಸ್‌ ಆಕಸ್ಮಿಕವಾಗಿ ನಿಧನಳಾದಳು. 1904ರಲ್ಲಿ ಹಾರ್ಟ್‌ ಲ್ಯಾಂಡ್‌ನಲ್ಲಿ ಬೋಲ್ಟ್ ಕ್ಯಾಸೆಲ್  ಕೆಲಸವನ್ನು ಹೆಂಡತಿಯ ಅಗಲಿಕೆಯ ಕಾರಣದಿಂದ ನಿಲ್ಲಿಸಲೇಬೇಕಾಯಿತು. ಕ್ರಮೇಣ ಬೋಲ್ಟ್ ಹುಚ್ಚನಂತಾಗಿಬಿಟ್ಟ.

1916ರಲ್ಲಿ 65 ವರ್ಷದ ಬೋಲ್ಟ್ ನಿಧನ ಹೊಂದಿದ. ಹೆಂಡತಿ ನಿಧನಳಾದ ತರುವಾಯ 12 ವರ್ಷಗಳಲ್ಲಿ ಅವನು ಒಂದೇ ಒಂದು ಸಲ ಬೋಲ್ಟ್ ಕ್ಯಾಸೆಲ್‌ಗೆ ಹೋಗಲಿಲ್ಲ. ಕ್ರಮೇಣ ಬೋಲ್ಟ್ ಕ್ಯಾಸೆಲ್ ನಾಶವಾಗುತ್ತ ಹೋಯಿತು. ಕಳ್ಳರು, ದರೋಡೆಕೋರರು ಅಲ್ಲಿನ ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡು ಹೋದರು. ಯಾವುದೇ ಉಸ್ತುವಾರಿಯಿಲ್ಲದೆ ಆ ಸ್ಮಾರಕ ಅನೇಕ ವಿನಾಶಕಾರಿ ನೈಸರ್ಗಿಕ ವಿಪತ್ತುಗಳನ್ನು ಸಹಿಸಿಕೊಂಡು ಬಂಡೆಗಲ್ಲಿನಂತೆ ನಿಂತಿತ್ತು.

ಪ್ರವಾಸಿ ತಾಣವಾದ ಸ್ಮಾರಕ

1977ರಿಂದ ಇದು ಒಂದು ಪ್ರವಾಸಿ ತಾಣದ ರೂಪ ಪಡೆದುಕೊಂಡಿತು. ಇದನ್ನು ನೋಡಲು ಪ್ರತಿವರ್ಷ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ಕೊಟ್ಟು ಗೈಡ್‌ಗಳಿಂದ ಪ್ರೇಮ ಸ್ಮಾರಕದ ಕಥೆ ಕೇಳಿ ಚಕಿತರಾಗುತ್ತಾರೆ. ಮಧ್ಯಾಹ್ನ ಊಟದ ಬಳಿಕ ನಾವು ಗೈಡ್‌ ಜೊತೆಗೆ ಬೋಲ್ಟ್ ಕ್ಯಾಸೆಲ್ ನೋಡಲು ಹೋದೆವು. 5 ಎಕರೆ ಜಾಗದಲ್ಲಿ ಪಸರಿಸಿದ 120 ಕೋಣೆಗಳ, 6 ಮಹಡಿಯ ಬೋಲ್ಟ್ ಕ್ಯಾಸೆಲ್ ವೈಭವ ನೋಡಿದೆ. ಅಲ್ಲಿನ ವೆಲ್‌‌ಕಮ್ ಗೇಟ್‌ ರೋಮನ್‌ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಅಲ್ಲಿಂದ ನಾವು ಆಲ್ಟರ್‌ ಟವರ್‌ಗೆ ಹೋದೆವು. ಬೋಲ್ಟ್ ಹಾಗೂ ಲೂಯಿಸ್‌ ಬೇಸಿಗೆಯಲ್ಲಿ ಇದೇ ಟವರ್‌ನಲ್ಲಿ ಬೇಸಿಗೆ ರಜೆ ಕಳೆಯುತ್ತಿದ್ದರು.

ಅದರ ಎದುರಿನಲ್ಲಿಯೇ ಕಣ್ಣುಗಳಿಗೆ ತಾಜಾತನ ಕೊಡುವ ಅತ್ಯಂತ ಸುಂದರ, ಬಗೆಬಗೆಯ ಬಣ್ಣಗಳ ಹೂವುಗಳ ಗಾರ್ಡನ್‌ಕಂಡುಬಂತು. ಅದು ಇಟಾಲಿಯನ್‌ ಶೈಲಿಯಲ್ಲಿದೆ. ಇಲ್ಲಿರುವ ಹೂಗಳು ಅಪರೂಪದಲ್ಲಿಯೇ ಅಪರೂಪದ ಹೂವುಗಳು. ನಡುಗಡ್ಡೆಯ ಇನ್ನೊಂದು ಬದಿ ಒಂದು ಪವರ್‌ ಹೌಸ್‌ ನಿರ್ಮಾಣಗೊಂಡಿದೆ. ಬೋಲ್ಟ್ ಗೆ ತನ್ನ ಪ್ರಿಯತಮೆಯ ಬಗ್ಗೆ ಅದೆಷ್ಟು ಚಿಂತೆ ಇತ್ತೆಂದರೆ, ಆಕೆ ವಿದ್ಯುತ್‌ ಇಲ್ಲದೆ ತೊಂದರೆ ಪಡಬಾರದೆಂದು ತನ್ನದೇ ಮನೆ ಉಪಯೋಗಕ್ಕೆಂದು ಒಂದು ಪವರ್‌ ಹೌಸ್ ನಿರ್ಮಿಸಿಕೊಂಡಿದ್ದ.

ಇಲ್ಲಿಂದ ನದಿಯ ಮೂಲಕ ನಡುಗಡ್ಡೆಗೆ ತಲುಪಲು ಒಂದು ಸುಂದರ ಸೇತುವೆ `ಆರ್ಕ್‌ ಬ್ರಿಜ್‌’ ಇದೆ. ಅದರ ಬಳಿ ಒಂದು ಸುಂದರ ಕ್ಲಾಕ್‌ ಟವರ್‌ ಇದೆ. ಅದು ತನ್ನ ಸೌಂದರ್ಯದಿಂದ ಪ್ರವಾಸಿಗರ ಮನಸೆಳೆಯುತ್ತದೆ.

ಬಳಿಕ ಗೈಡ್‌ ನಮ್ಮನ್ನು ವಿಶಾಲವಾದ ಮಹಲಿಗೆ ಕರೆದುಕೊಂಡು ಹೋದ. ಸೆಂಟ್ರಲ್ ಹಾಲಿನ ಗೋಡೆಯ ಮೇಲೆ ಹಾಕಿರುವ ಪೇಂಟಿಂಗ್ಸ್, ಮೂವೆಯಲ್ಲಿಟ್ಟ ಪಿಯಾನೋ, ಹಾಲ್‌ನ ನಟ್ಟನಡುವೆ ಇಟ್ಟ ಅಲಂಕೃತ ಸೆಂಟರ್‌ ಟೇಬಲ್ ಮತ್ತು  ಬೋಲ್ಟ್ ಲೂಯಿಸ್‌ರ ಆಕರ್ಷಕ ಛಾಯಾಚಿತ್ರಗಳು ನೋಡುಗರನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತವೆ.

ತನ್ನ ಆಧುನಿಕ ಡಿಸೈನಿಂಗ್‌ ಮತ್ತು ವಿಶ್ವದ ಬೇರೆ ಬೇರೆ ಭಾಗಗಳಿಂದ ತಂದ ಕಲಾಕೃತಿಗಳಿಂದ ಅಲಂಕರಿಸಲ್ಪಟ್ಟ ಈ ಕ್ಯಾಸೆಲ್ ಜಗತ್ತಿನ ಯಾವುದೇ ಅರಮನೆಗಿಂತ ಕಡಿಮೆ ಏನಿಲ್ಲ. ಅತ್ಯಾಕರ್ಷಕ ಡ್ರಾಯಿಂಗ್‌ ರೂಮ್ ಗ್ಯಾಲರಿ ನೋಡಿ ನಾವೆಲ್ಲ ಅದರ ಅಂದ ಚೆಂದಕ್ಕೆ ಮರುಳಾಗಿಬಿಟ್ಟೆವು.

ಆಕರ್ಷಣೆಯ ಕೇಂದ್ರ

ಮಾರ್ಬಲ್ ಮತ್ತು ಹೊಳೆಯುವ ಸುಂದರ ವುಡನ್‌ ಮೆಟ್ಟಿಲುಗಳ ಮುಖಾಂತರ ಮೇಲ್ಭಾಗದತ್ತ ನಡೆದೆವು. ಅಲ್ಲಿನ ಗೋಡೆಯ ಮೇಲೆ ಲೂಯಿಸ್‌ ಮತ್ತು ಬೋಲ್ಟ್ ರ ಅತ್ಯಂತ ಸುಂದರ ಫೋಟೋಗಳನ್ನು ನೇತುಹಾಕಲಾಗಿತ್ತು.

ಕೊನೆಯಲ್ಲಿ 15 ನಿಮಿಷಗಳ ಒಂದು ವಿಡಿಯೋ ತೋರಿಸಲಾಯಿತು. ಅದರಲ್ಲಿ ಬೋಲ್ಟ್ ಕ್ಯಾಸೆಲ್ ನಿರ್ಮಾಣವಾದ ಕಥೆ ಮತ್ತು ಆಸುಪಾಸಿನ ಅನೇಕ ಪ್ರವಾಸಿ ತಾಣಗಳ ಬಗ್ಗೆ ವಿವರ ಮಾಹಿತಿ ನೀಡಲಾಯಿತು.

ದಿವ್ಯಪ್ರಭಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ