ಪತಿ : ನೀನೇಕೆ ಸದಾ ಹೀಗೆ ಜಗಳ ಆಡ್ತೀಯಾ? ಯಾವಾಗಲೂ ನನ್ನ ಮಾತುಗಳಲ್ಲಿ ಏನಾದರೊಂದು ಕೊರತೆ ಹುಡುಕುತ್ತಾ ಖಂಡಿಸುತ್ತೀಯಲ್ಲ…… ಹೀಗೇಕೆ?

ಪತ್ನಿ : ಅಸಲಿಗೆ ನಮ್ಮಿಬ್ಬರ ಮೊದಲ ಭೇಟಿ ಆಗಿದ್ದೇ ಕಾಲೇಜಿನ ವಾದ ವಿವಾದದ ಪೈಪೋಟಿಯಲ್ಲಲ್ಲವೇ? ಅದಕ್ಕೆ ಅದು ಅಭ್ಯಾಸವಾಗಿದೆ.

 

ಪತ್ನಿ ಬಹಳ ಪ್ರೀತಿಯಿಂದ ತನ್ನ ಪತಿಯನ್ನು ರಮಿಸುತ್ತಾ ಹೇಳಿದಳು, “ಡಿಯರ್‌, ನಾವಿಬ್ಬರು ಪ್ರತಿ ಜನುಮದಲ್ಲೂ ಹೀಗೆ ಪರಸ್ಪರ ಭೇಟಿಯಾಗುತ್ತಾ ಒಂದಾಗಿರೋಣ. ಹೀಗೆ ಪ್ರತಿ ಜನುಮದಲ್ಲೂ ಪ್ರೀತಿ ಮಾಡುತ್ತಿರೋಣ…..”

ಪತಿ ದೀರ್ಘ ನಿಟ್ಟುಸಿರುಬಿಡುತ್ತಾ ಹೇಳಿದ, “ಅದೆಲ್ಲ ಸರಿ ಬಿಡು, ನೀನು ಈ ಜನುಮದಲ್ಲಿ ನನ್ನ ಬೆನ್ನು ಹತ್ತುವುದನ್ನು ಬಿಟ್ಟರೆ ತಾನೇ ನಾವು ಮುಂದಿನ ಜನುಮದಲ್ಲಿ ಮತ್ತೆ ಭೇಟಿಯಾಗಲು ಸಾಧ್ಯ?”

 

ಬಹಳ ದಿನಗಳಿಂದ ಆಸ್ಪತ್ರೆಯಲ್ಲಿ  ಅಡ್ಮಿಟ್‌ ಆಗಿದ್ದ ರಾಮು ಕೊನೆಗೆ ಓ.ಟಿ.ಗೆ ಹೊರಡುವ ಘಳಿಗೆ ಬಂದಿತು.

ರಾಮು : ನನಗೆ ಆಪರೇಷನ್‌ ಅಂತ ಗಾಬರಿ ಆಗ್ಬೇಡ. ಅಕಸ್ಮಾತ್‌ ಆಪರೇಷನ್‌ ಮಧ್ಯೆ ನಾನು ಸತ್ತುಹೋದ್ರೆ ನೀನೊಂದು ಕೆಲಸ ಮಾಡ್ಬೇಕು.

ರೇಖಾ : ಹಾಗೆಲ್ಲ ಹೇಳಬೇಡಿ…. ಆದರೂ ಅದೇನೂಂತ ಹೇಳಿ.

ರಾಮು : ನಾನು ಸತ್ತುಹೋದರೆ ನೀನು ನನಗೆ ಆಪರೇಷನ್‌ ಮಾಡಿದ ಆ ಡಾಕ್ಟರ್‌ನ್ನೇ ಮದುವೆ ಆಗಬೇಕು.

ರೇಖಾ : ಹಾಗೇಕೆ ಹೇಳ್ತಿದ್ದೀರಿ?

ರಾಮು : ಇನ್ನೇನು….? ಡಾಕ್ಟರ್‌ನ್ನು ಹಾಗೇ ಕ್ಷಮಿಸಿಬಿಡಲೇ?

 

ಹೊಸದಾಗಿ ಮದುವೆಯಾಗಿದ್ದ ಗುಂಡನಿಗೆ ಹೆಂಡತಿ ಮೊದಲು ಮಾಡಿದ ಪಲಾವ್ ತಂದಿಟ್ಟು ನಾಚಿಕೊಳ್ಳುತ್ತಾ, ಸವಿಯಲು ಹೇಳಿದಳು. ಒಂದು ಚಮಚ ಬಾಯಿಗಿಟ್ಟ ಗುಂಡ ಥಟ್ಟನೇ ಸಿಡುಕಿದ, “ಇದೇನು ಕರ್ಮ? ಒಳ್ಳೆ ಗೊಬ್ಬರ ತರಹ ಮಾಡಿದ್ದೀಯಲ್ಲ….”

“ಛೇ…ಛೇ… ನೀವು ಬ್ಯಾಚುಲರ್‌ ಆಗಿದ್ದಾಗ ಅದನ್ನೂ ಬಿಟ್ಟವರಲ್ಲ ಅಂತ ನನಗೆ ಹೇಗೆ ಗೊತ್ತಾಗಬೇಕು?” ಎಂದು ಗುಡುಗುವುದೇ?

 

ಗಂಡ : ಪ್ರತಿ ದಿನ ಬೆಳಗ್ಗೆ ದೇವರಿಗೆ ಕೈ ಮುಗಿಯುವಾಗ ಭಗವಂತ ಎಲ್ಲ ಗಂಡಸರಿಗೂ ನಿನ್ನಂಥ ಹೆಂಡತಿಯನ್ನೇ ಸಂಗಾತಿಯಾಗಿ ಕೊಡಲಿ ಅಂತ ಪ್ರಾರ್ಥಿಸುತ್ತೇನೆ.

ಹೆಂಡತಿ : ಹೌದೇನ್ರಿ…..? ನನ್ನನ್ನು ಅಷ್ಟು ಮೆಚ್ಚಿಕೊಂಡಿದ್ದೀರಿ ಅಂತಾಯ್ತು.

ಗಂಡ : ಮತ್ತೆ….? ನಾನೊಬ್ಬನೇ ಕರ್ಮ ಅನುಭವಿಸುತ್ತಾ ಅವರೆಲ್ಲಾ ನೆಮ್ಮದಿಯಾಗಿದ್ದಾರಲ್ಲ ಅಂತ!

 

ಕಿಲಾಡಿ ಕಿಟ್ಟಿ ಕೆಲಸಕ್ಕಾಗಿ ಅಲೆದಲೆದು ದಣಿದು ಹೋದ. ಎಲ್ಲೂ ಕೆಲಸ ಕೊಡದ ಈ ಸಮಾಜಕ್ಕೆ ಟೋಪಿ ಹಾಕಿಯೇ ಸಂಪಾದಿಸಬೇಕು ಎಂದು ನಿರ್ಧರಿಸಿದ. ಹೀಗಾಗಿ ತಾನೊಂದು ಕ್ಲಿನಿಕ್‌ ತೆರೆದು, `ನಿಮ್ಮ ಆರೋಗ್ಯ ಸಮಸ್ಯೆಗೆ ಇಲ್ಲಿ ಚಿಕಿತ್ಸೆ ಪಡೆಯಿರಿ. ಒಂದು ಚಿಕಿತ್ಸೆಗೆ ಕೇವಲ ರೂ.500 ಮಾತ್ರ. ಗುಣವಾಗದಿದ್ದರೆ ರೂ.1000/ ವಾಪಸ್ಸು ಕೇಳಿ ಪಡೆಯಿರಿ,’ ಎಂದು ಬೋರ್ಡು ಹಾಕಿದ.

ಇದನ್ನು ಗಮನಿಸಿದ ಗುಂಡನಿಗೆ, `ಎಲಾ ಇವನ… ಮಾಡ್ತೀನಿ ತಾಳು, ಹೇಗಾದರೂ ರೂ.1000/ ಗಿಟ್ಟಿಸದೇ ಬಿಡುವುದಿಲ್ಲ!’ ಎಂದು ನಿರ್ಧರಿಸಿ ಕಿಟ್ಟಿಯ ಕ್ಲಿನಿಕ್‌ಗೆ ಬಂದ.

 

ಗುಂಡ : ಡಾಕ್ಟ್ರೇ…. ಇತ್ತೀಚೆಗೆ ಏನು ತಿಂದರೂ ನನ್ನ ನಾಲಿಗೆಗೆ ರುಚಿಯೇ ಗೊತ್ತಾಗೋಲ್ಲ. ಏನಾಯ್ತೆಂದು ಸ್ವಲ್ಪ ನೋಡ್ತೀರಾ?

ಕಿಟ್ಟಿ : ಹ್ಞಾಂ….. ಎಲ್ಲಿ ನಾಲಿಗೆ ಹೊರಗೆ ಚಾಚಿ.. ಆ, ತಿಳೀತು ಬಿಡಿ. ನರ್ಸ್‌, ಎಲ್ಲಿ ಆ 22ನೇ ಬಾಕ್ಸಿನ ಡ್ರಾಪ್ಸ್ ತೆಗೆದುಕೊಂಡು ಬಂದು ಇವರ ಬಾಯಿಗೆ 3 ತೊಟ್ಟು ಹಾಕಿ.

ನರ್ಸ್‌ ಹಾಗೆ ಮಾಡಿದ ತಕ್ಷಣ ಗುಂಡ ಥಟ್ಟನೆ ಕಿರುಚಿದ, “ಡಾಕ್ಟ್ರೇ… ಇದು ಹಾಳು ಪೆಟ್ರೋಲ್ ಹನಿಗಳು… ಥೂ…ಥೂ…!”

“ನೋಡಿದ್ರಾ…. ನನ್ನ ಔಷಧಿ ಹಾಕಿದ ತಕ್ಷಣ ನಿಮಗೆ ನಾಲಿಗೆ ರುಚಿ ತಿಳೀತು, ಎಲ್ಲಿ  500/ ರೂ. ಫೀಸ್‌ ಕೊಡಿ,” ಎಂದ.

ಅದರ ಮುಂದಿನ ವಾರ ಸೇಡು ತೀರಿಸಿ ಕೊಳ್ಳಲೆಂಬಂತೆ ಗುಂಡ ಮತ್ತೆ ಕಿಟ್ಟಿ ಕ್ಲಿನಿಕ್‌ಗೆ ಧಾಳಿಯಿಟ್ಟ.

ಗುಂಡ : ಡಾಕ್ಟ್ರೇ….. ಇತ್ತೀಚೆಗೆ ನನಗೆ ನೆನಪಿನ ಶಕ್ತಿಯೇ ಹೊರಟುಹೋಗಿದೆ. ಈಗಷ್ಟೇ ನಡೆದ ವಿಷಯ ಸಹ ಜ್ಞಾಪಕ ಇರೋಲ್ಲ.

ಕಿಟ್ಟಿ : ಎಲ್ಲಿ ನಿಮ್ಮ ತಲೆ ತೋರಿಸಿ. ಆ ಗೊತ್ತಾಯ್ತು…. ಸಿಸ್ಟರ್‌, ಸ್ವಲ್ಪ ಆ 22ನೇ ಬಾಕ್ಸಿನ ಡ್ರಾಪ್ಸ್ ತಂದು ಇವರ ಬಾಯಿಗೆ 3 ತೊಟ್ಟು ಹಾಕಿ.

ನರ್ಸ್‌ ಇನ್ನೇನು ಡ್ರಾಪ್ಸ್ ಹಾಕಬೇಕು ಎನ್ನುವಷ್ಟರಲ್ಲಿ ಗುಂಡ ಮತ್ತೆ ಜೋರಾಗಿ ಕಿರುಚಿದ, “ಅಯ್ಯೋ… ಬೇಡ. ಇದು ಆವತ್ತು ಹಾಕಿದ ಅದೇ ಪೆಟ್ರೋಲ್ ‌ಹನಿ ತಾನೇ?”

ಕಿಟ್ಟಿ ತಕ್ಷಣ ಹೇಳಿದ, “ನೋಡಿದ್ರಾ….  ಚಿಕಿತ್ಸೆ ಆರಂಭಿಸುವಷ್ಟರಲ್ಲೇ ರೋಗ ವಾಸಿ ಆಯ್ತು, ಎಲ್ಲಿ 500 ರೂ. ಫೀಸ್‌ ಕೊಡಿ.”

ತಲೆ ಚೆಚ್ಚಿಕೊಳ್ಳುತ್ತಾ ಹಣ ತೆತ್ತ ಗುಂಡ ಮುಂದಿನ ವಾರ ಬಂದು ಸೇಡು ತೀರಿಸಿಕೊಳ್ಳುವೆ ಎಂದುಕೊಂಡ. ಅದೇ ತರಹ ಬಂದು ಕಿಟ್ಟಿಯನ್ನು ಭೇಟಿಯಾದ.

ಗುಂಡ : ಇತ್ತೀಚೆಗೆ ಯಾಕೋ ನನ್ನ ದೃಷ್ಟಿ ಮಂದವಾಗುತ್ತಿದೆ… ಯಾವುದೂ ಸರಿಯಾಗಿ ಕಾಣಿಸೋಲ್ಲ… ಸ್ವಲ್ಪ ನೋಡಿ ಡಾಕ್ಟ್ರೇ.

ಕಿಟ್ಟಿ : ಎಲ್ಲಿ ನಿಮ್ಮ ಕಣ್ಣನ್ನು ಇನ್ನೂ ಅಗಲವಾಗಿ ತೆರೆಯಿರಿ… ಓ ಇದಾ, ಎಲ್ಲಿ ಸಿಸ್ಟರ್‌…. ಆ 23ನೇ ಬಾಕ್ಸಿನ ಡ್ರಾಪ್ಸ್ ತಂದು ಇವರ ಕಣ್ಣಿಗೆ ಹಾಕಿ.

ನರ್ಸ್‌ ಅದನ್ನು ಹಾಕಿ ಹೋದ ನಂತರ, ಗುಂಡ ಚಾಲಾಕಿತನದಿಂದ, “ಏನೂ ಪ್ರಯೋಜನ ಇಲ್ಲ ಡಾಕ್ಟ್ರೇ…. ಈಗಲೂ ಹಾಗೇ ಇದೆ….” ಎಂದ.

“ಓ ವೆರಿ ಸಾರಿ, ತಗೊಳ್ಳಿ ನಿಮ್ಮ 1000 ರೂ.,” ಎಂದು ಒಂದು ನೋಟನ್ನು ನೀಡಿದ. ಗುಂಡ ಖುಷಿಯಿಂದ ಅದನ್ನು ಲಬಕ್ಕನೇ ಕಿತ್ತುಕೊಂಡು ಜೇಬಿಗೆ ಹಾಕುವ ಮುನ್ನ, “ಅಯ್ಯೋ…. ಇದು 500 ರೂ. ನೋಟು ಡಾಕ್ಟ್ರೇ…. 1000 ರೂ. ನೋಟು ಕೊಡಿ,” ಎಂದ.

ಅದೇ ವೇಗದಲ್ಲಿ ಅವನ ಕೈಯಿಂದ ಆ ನೋಟನ್ನು ಕಿತ್ತುಕೊಂಡ ಕಿಟ್ಟಿ, “ನೋಡಿದ್ರಾ…. ಚಿಕಿತ್ಸೆ ಫಲಕಾರಿಯಾಗಿ ನಿಮ್ಮ ದೃಷ್ಟಿ ಸರಿಹೋಯ್ತು. ಮೊದಲು 500 ರೂ. ಕೊಡಿ,” ಎಂದಾಗ ತಲೆ ತಲೆ ಚೆಚ್ಚಿಕೊಂಡ ಗುಂಡ ಜೇಬಿನಿಂದ ಬೇರೆ ನೋಟು ತೆಗೆದುಕೊಟ್ಟು ಪೆಚ್ಚಾಗಿ ಆಚೆ ನಡೆದ.

 

ಪತಿ : ಬೇರೆ ಯಾವುದೂ ಬೇಡ, ನಾಯಿಯನ್ನೇ ತಗೊಂಡು ಸಾಕ್ತೀನಿ ಅಂತೀಯಲ್ಲ…. ಯಾಕೆ?

ಪತ್ನಿ : ಮತ್ತೆ….. ನೀವು ಆಫೀಸಿಗೆ ಹೋದ ಮೇಲೆ ನನ್ನ ಹಿಂದೆ ಮುಂದೆ ಓಡಾಡುತ್ತಾ ಬಾಲ ಆಡಿಸುವವರು ಒಬ್ಬರು ಬೇಕು ತಾನೇ?

 

ಇಡೀ ರಾತ್ರಿ ಊರು ಸುತ್ತಿದ ಗುಂಡ ಅಂತೂ ಬೆಳಗ್ಗೆ 7 ಗಂಟೆಗೆ ಮನೆ ಸೇರಿಕೊಂಡ. ಅವನ ಹೆಂಡತಿ ಕೋಪದಿಂದ ಬುಸುಗುಟ್ಟುತ್ತಾ, “ಇದೀಗ ಮನೆ ಸೇರೋದಿಕ್ಕೆ ನಿಮಗೆ ಮುಹೂರ್ತ ಕೂಡಿಬಂತೋ? ಬಂದಿದ್ದು ಯಾಕೆ ಅಂತ?”

“ಮತ್ತೆ ಟಿಫನ್‌ ಮಾಡಬೇಕಲ್ಲ…” ಭಂಡನಾಗಿ ನುಡಿದಿದ್ದ ಆ ಗುಂಡ.

 

ಮಹಿಳಾ ಕ್ಲಬ್ಬಿನಲ್ಲಿ ಎಲ್ಲರೂ ಒಂದೆಡೆ ಸೇರಿ ಹರಟೆ ಹೊಡೆಯುತ್ತಿದ್ದರು.

ಅಧ್ಯಕ್ಷೆ : ನೋಡಿ ನನ್ನ ಅನುಭವದ ಒಂದು ಮಾತು ಹೇಳ್ತೀನಿ, ನಾವು ನಮ್ಮ ಕೈಯಾರೆ ಅಡುಗೆ ಮಾಡಿದಾಗ ಮಾತ್ರ ಎಷ್ಟೋ ಉಳಿತಾಯ ಆಗೋದು.

ಖಜಾಂಚಿ : ಅದೇನೋ ನಿಜ ಕಣ್ರಿ, ಮುಂಚೆ ನಮ್ಮ ಮನೇಲಿ ಅಡುಗೆ ಭಟ್ಟರಿದ್ದರು. ಅವರನ್ನು ಬಿಡಿಸಿ ನಾನೇ ಅಡುಗೆ ಶುರು ಮಾಡಿದಾಗಿನಿಂದ, ಯಜಮಾನರು ಬಹಳ ಸಣ್ಣ ಆಗೋಗಿದ್ದಾರೆ, ಖರ್ಚೂ ಉಳಿಯುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ