ನಾನು ಮದುವೆಯಾಗೋ ಹುಡುಗಿ ಬ್ಯೂಟೀಶಿಯನ್‌ ಕೋರ್ಸ್‌ ಮಾಡುತ್ತಿದ್ದಾಳೆಂದು ನನಗೆ ಮೊದಲೇ ಗೊತ್ತಿತ್ತು. ನಾವು ಅವಳನ್ನು ನೋಡಲು ಅವರ ಮನೆಗೆ ಹೋದಾಗ ನಾನಷ್ಟೇ ಅಲ್ಲ, ನಮ್ಮ ಇಡೀ ಪರಿವಾರದವರು ಅವಳ ಸೌಂದರ್ಯದಿಂದ ಪ್ರಭಾವಿತರಾಗಿದ್ದೆವು. ಅಲ್ಲಿಂದ ಬಂದ ನಂತರ ನನಗಿನ್ನೂ ನೆನಪಿದೆ. ಅಮ್ಮ ತಮ್ಮ ಭಾವಿ ಸೊಸೆಯ ಸೌಂದರ್ಯದ ಬಗ್ಗೆ ಅಕ್ಕಪಕ್ಕದ ಮನೆಯವರ ಬಳಿ ಗುಣಗಾನ ಮಾಡಿದರು. ಮನೆಗೆ ಬಂದು ಹೋಗುವವರ ಮುಂದೆಲ್ಲಾ ತಮ್ಮ ಭಾವಿ ಸೊಸೆಯ ಸೌಂದರ್ಯದ ಬಗ್ಗೆ ಹೇಳಲು ಮರೆಯುತ್ತಿರಲಿಲ್ಲ. ಅದನ್ನು ಕೇಳಿದ ನೆರೆಹೊರೆಯರಲ್ಲಿ ಕೆಲವರು ನೋಡ್ತಾ ಇರಿ. ನಿಮ್ಮ ಸೊಸೆಯ ಸೌಂದರ್ಯದ ಬಿರುಗಾಳಿಯಲ್ಲಿ ನಿಮ್ಮ ಮಗನೂ ಕೊಚ್ಚಿಕೊಂಡು ಹೋಗಬಹುದು ಎಂದು ಎಚ್ಚರಿಸುತ್ತಿದ್ದರು.

ಕೆಲವು ಮಹಿಳೆಯರು, ನೋಡಿ ನಾವು ಮದುವೆಗೆ ಮೊದಲೇ ಎಚ್ಚರಿಸ್ತಾ ಇದ್ದೀವಿ. ಮೊದಲೇ ಯಾಕೆ ಹೇಳಲಿಲ್ಲ ಅಂತ ಆಮೇಲೆ ದೂರಬೇಡಿ, ಎನ್ನುತ್ತಾ  ತಮ್ಮ ಪರಿಚಿತರು ಹಾಗೂ ಅಕ್ಕಪಕ್ಕದ ಕೆಲವು ಮನೆಗಳ ಉದಾಹರಣೆ ನೀಡಿ ತಮ್ಮ ಹೇಳಿಕೆಗೆ ಸಾಕ್ಷ್ಯ ಒದಗಿಸುತ್ತಿದ್ದರು. ಆದರೆ ಅವರೆಲ್ಲರ ಹೇಳಿಕೆಗಳನ್ನು ಅಮ್ಮ ಹೊಟ್ಟೆಕಿಚ್ಚು ಎಂದು ಪರಿಗಣಿಸಿ ತಮ್ಮ ಅದೃಷ್ಟಕ್ಕೆ ಹೆಮ್ಮೆಪಡುತ್ತಿದ್ದರು. ಅವರ ಮಾತುಗಳನ್ನು ಕೇಳುವಾಗ ಅಮ್ಮ ತಮ್ಮ ಎರಡೂ ಕಿವಿಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಒಂದು ಕಿವಿಯಿಂದ ಆ ಮಹಿಳೆಯರ ಮಾತುಗಳನ್ನು ಕೇಳಿ ಮರುಕ್ಷಣವೇ ಇನ್ನೊಂದು ಕಿವಿಯಿಂದ ಬಿಟ್ಟುಬಿಡುತ್ತಿದ್ದರು. ಅವರು ಹೋದ ನಂತರ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳು, ಅಸೂಯಾಪರರು, ಒಬ್ಬರ ಒಳಿತನ್ನು ಸಹಿಸದವರು ಎಂದೆಲ್ಲಾ ಬಿರುದುನ್ನು ಕೊಡುತ್ತಿದ್ದರು. ನಾನು ಅಮ್ಮನ ಮಾತುಗಳನ್ನು ಕೇಳಿ ನನ್ನ ಅದೃಷ್ಟಕ್ಕೆ ಎಣೆಯೇ ಇಲ್ಲ ಎಂದುಕೊಂಡಿದ್ದೆ. ಕೊನೆಗೂ ಆ ದಿನ ಬಂದೇ ಬಿಟ್ಟಿತು. ನಮ್ಮಮ್ಮನ ಬ್ಯೂಟೀಶಿಯನ್‌ ಸೊಸೆ ನನ್ನ ಪತ್ನಿಯಾಗಿ ಬಲಗಾಲಿಟ್ಟು ನಮ್ಮ ಮನೆ ಪ್ರವೇಶ ಮಾಡಿದಳು. ಅವಳ ಅದ್ವಿತೀಯ ಸೌಂದರ್ಯ ಕಂಡು ನನಗೆ ಪ್ರಪಂಚದ ಎಲ್ಲ ಸಂತಸಗಳೂ ಒಟ್ಟಿಗೇ ಸಿಕ್ಕಂತಾಯಿತು. ಅವಳ ರೂಪ ಕಂಡು ನನ್ನ ಕಣ್ಣು ಕುಕ್ಕಿತು.

“ರೀ, ಇಲ್ನೋಡಿ,” ಒಂದು ದಿನ ನಾನು ಆಫೀಸಿಗೆ ಹೊರಟಾಗ ನನ್ನ ಸೌಂದರ್ಯ ತಜ್ಞೆ ಪತ್ನಿಯ ಮಧುರ ಧ್ವನಿ ನನ್ನ ಕಿವಿಗಳಲ್ಲಿ  ಝೇಂಕರಿಸಿತು. ನಾನು ಮೋಟರ್‌ ಬೈಕಿಗೆ ಕಿಕ್‌ ಮಾಡುವುದನ್ನು ಬಿಟ್ಟು ನನ್ನಾಕೆಯತ್ತ ಪ್ರಶ್ನಾರ್ಥಕ ನೋಟ ಬೀರಿದೆ.

“ಅಂತಾ ವಿಶೇಷವೇನೂ ಇಲ್ಲ. ನೀವು ಸಂಜೆ ಆಫೀಸಿನಿಂದ ಬಂದ ಮೇಲೆ ಹೇಳ್ತೀನಿ ಬಿಡಿ,” ಎಂದಳು.

ತಾನು ಮಾತು ಮುಗಿಸಿದೆನೆಂದು ನನ್ನವಳಿಗೆ ಅನ್ನಿಸಿತ್ತು. ಆದರೆ ಅದು ಅವಳ ಮೂಲಕ ಯಾವುದೋ ಚರ್ಚೆಗೆ ಆರಂಭವೆಂದು ನನಗೆ ಅನ್ನಿಸಿತ್ತು. ಅಂದು ಆಫೀಸಿನಲ್ಲಿ ಯಾವುದೇ ಕೆಲಸದಲ್ಲೂ ನನಗೆ ಆಸಕ್ತಿ ಇರಲಿಲ್ಲ. ಆ ವಿಷಯ ಏನಿರಬಹುದೆಂದು ಯೋಚಿಸುವುದರಲ್ಲಿ ಇಡೀ ದಿನ ಕಳೆದುಹೋಯಿತು. ನನ್ನಾಕೆ ನನಗೆ ಏನು ಹೇಳಬೇಕೆಂದಿದ್ದಾಳೆ? ಅಂದು 2-3 ಬಾರಿ ನನ್ನಾಕೆ ನನ್ನ ಮೊಬೈಲ್‌ಗೆ ಫೋನ್‌ ಮಾಡಿದಳು. ಆದರೆ ಪ್ರತಿ ಬಾರಿಯೂ ಬೇರಾವುದೋ ವಿಷಯ ಮಾತಾಡಿದಳು. ನಾನು ಕೇಳಿದಾಗ, ಮನೆಗೆ ಬಂದ ಮೇಲೆ ಹೇಳುತ್ತೇನೆ ಎಂದಳು.

ಸಂಜೆಯಾಗುವ ಹೊತ್ತಿಗೆ ನನ್ನ ಕುತೂಹಲ ಚರಮಸ್ಥಿತಿಗೆ ಮುಟ್ಟಿತ್ತು. ನನ್ನ ನೂತನ ಪತ್ನಿ ನನ್ನೊಡನೆ ಏನು ಹೇಳಬಯಸಿರಬಹುದು? ನನ್ನ ಕಿವಿಗಳು ಆ ವಿಷಯ ಕೇಳಲು ಕಾತರದಿಂದಿದ್ದ. ಸಂಜೆ ಕಾಫಿ ಕುಡಿಯುವಾಗಲೂ ನನ್ನಾಕೆ ಆ ವಿಷಯ ಹೇಳಲು ಉತ್ಸುಕತೆ ತೋರಲಿಲ್ಲ. ಕೊನೆಗೆ ನಾನೇ ಸೋತು ಕೇಳಿದೆ, “ಬೆಳಗ್ಗೆ ಆಫೀಸಿಗೆ ಹೊರಟಾಗ ಏನೋ ಹೇಳಬೇಕೂಂತಿದ್ದೆ. ಏನು ವಿಷಯ?”

“ಅಂತಾದ್ದೇನಿಲ್ಲ…. ನಾನು ಏನು ಹೇಳೋದು ಅಂದ್ರೆ ನೀವು ಈ ಮೀಸೇನ ಬೋಳಿಸಿಬಿಡಿ. ಆಗ ನೀವು ಇನ್ನೂ ಹೆಚ್ಚು ಸ್ಮಾರ್ಟ್ ಆಗಿ ಯುವಕನಂತೆ ಕಾಣಿಸ್ತೀರಿ. ಮೀಸೇನ ತೆಗೆದರೆ ಇನ್ನೂ 10 ವರ್ಷ ಚಿಕ್ಕವರ ಹಾಗೆ ಕಾಣ್ತೀರಿ,” ನನ್ನಾಕೆ ಆರಾಮವಾಗಿ ಹೇಳಿದಳು. ಆಗ ನನಗೆ ಯಾರೋ ಬೆಟ್ಟದ ತುದಿಯಿಂದ ತಳ್ಳಿದಂತಾಯಿತು.

“ಮೀಸೆ ಇದ್ರೂನೂ ಜನ ಸ್ಮಾರ್ಟ್‌ ಆಗಿ ಕಾಣಬಹುದು. ಕೆಲವರ ಮುಖಗಳಿಗೆ ಮೀಸೆ ಬಹಳ ಚೆನ್ನಾಗಿ ಕಾಣುತ್ತದೆ. ಮೀಸೆ ಇರೋದ್ರಿಂದ ಅವರ ಸಂಪೂರ್ಣ ವ್ಯಕ್ತಿತ್ವ ಅರಳಿರುತ್ತದೆ. ಮೀಸೆ ಇಲ್ಲದಿದ್ದರೆ ಅವರ ಮುಖಾನ ಕಲ್ಪಿಸಿಕೊಳ್ಳೋದೂ ಕಷ್ಟ. ಮೀಸೆ ಅವರ ವ್ಯಕ್ತಿತ್ವದ ಪ್ರತೀಕವಾಗಿದೆ,” ನಾನು ಮೀಸೆಯ ಬಗ್ಗೆ ಹಾಗೂ ಮೀಸೆ ಬಿಟ್ಟವರ ಪರವಾಗಿ ನನ್ನ ತರ್ಕ ಮಂಡಿಸಿದೆ.

“ಕೆಲವರ ವಿಷಯದಲ್ಲಿ ಹಾಗೂ ಆಗುತ್ತೆ. ಆದರೆ ನಾನು ಹೇಳೋದು ಏನೆಂದರೆ ಮೀಸೆಯಿಲ್ಲದ ನಿಮ್ಮ ಮುಖ ಹೆಚ್ಚು ಆಕರ್ಷಕವಾಗಿ, ಹೆಚ್ಚು ಯಂಗ್‌ ಆಗಿ ಕಾಣುತ್ತೆ,” ನನ್ನಾಕೆ ನಿರ್ಣಾಯಕ ಸ್ವರದಲ್ಲಿ ಹೇಳಿದಳು.

ಜನ ತಮ್ಮ ನೂತನ ಪತ್ನಿಯನ್ನು ಖುಷಿಯಾಗಿಡಲು ಏನೇನು ತಾನೆ ಮಾಡುವುದಿಲ್ಲ. ನನ್ನ ಪತ್ನಿ ಒಂದು ಚಿಕ್ಕ ಬೇಡಿಕೆ ಇಟ್ಟಿದ್ದಾಳೆ ಎಂದು ಯೋಚಿಸಿ ನಾನು ನನ್ನ ಪ್ರಿಯವಾದ, ಬಹಳ ವರ್ಷಗಳ ಕಾಲ ಪೋಷಿಸಿದ ನನ್ನ ಮೀಸೆಯನ್ನು ಕೂಡಲೇ ಬೋಳಿಸಿಬಿಟ್ಟೆ. ಆದರೆ ಇದಂತೂ ಒಂದು ಆರಂಭ ಮಾತ್ರವಾಗಿತ್ತು. ಒಂದು ಸಂಜೆ ನಾನು ಆಫೀಸಿನಿಂದ ಮನೆಗೆ ಬಂದಾಗ ನನ್ನಾಕೆ ಅಲಂಕರಿಸಿಕೊಂಡು ಸಿದ್ಧಳಾಗಿರುವುದನ್ನು ಕಂಡು ಆಶ್ಚರ್ಯವಾಯಿತು. “ಎಲ್ಲಾದರೂ ಹೊರಟಿದ್ದೀಯಾ?” ಎಂದು ಕೇಳಿದೆ.

“ಹೌದು. ನಿಮಗೋಸ್ಕರ ಸ್ವಲ್ಪ ಶಾಪಿಂಗ್‌ ಮಾಡಬೇಕಿತ್ತು,” ನನ್ನಾಕೆ ಹೇಳಿದಳು.

ಸ್ವಲ್ಪ ಹೊತ್ತಿಗೆ ನಾವು ಒಂದು ದೊಡ್ಡ ಶಾಪಿಂಗ್‌ ಮಾಲ್‌ನಲ್ಲಿದ್ದೆ. ಅಲ್ಲಿ ನನ್ನಾಕೆ ನನಗಾಗಿ ಕೆಲವು ಟೀ ಶರ್ಟ್‌ಗಳನ್ನು ಜೀನ್ಸ್ ಪ್ಯಾಂಟ್‌ಗಳನ್ನು ಖರೀದಿಸಿ, “ಒಂದೇ ರೀತಿಯ ಬಟ್ಟೆಗಳನ್ನು ಧರಿಸುವ ಬದಲು ಕೆಲವು ಹೊಸ ಬಗೆಯದನ್ನು ಪ್ರಯತ್ನಿಸಬೇಕು. ಅದನ್ನು ಧರಿಸಿದ್ರೆ ನೀವು ತೆಳ್ಳಗೆ, ಯುವಕರಂತೆ ಕಾಣ್ತೀರಿ,” ಎಂದಳು.

ನನ್ನ ಬ್ಯೂಟೀಶಿಯನ್‌ ಪತ್ನಿ ನನ್ನಲ್ಲಿ ಇನ್ನೆಷ್ಟು ರೀತಿಯ ಬದಲಾವಣೆಗಳನ್ನು ತರುತ್ತಾಳೋ ಎಂದು ಅರ್ಥವಾಗಲಿಲ್ಲ. ಒಮ್ಮೆ ಫೇಶಿಯಲ್, ಇನ್ನೊಮ್ಮೆ ಕೂದಲಿಗೆ ಬಣ್ಣ ಹಚ್ಚುವುದು ಇತ್ಯಾದಿ. ನಾನಂತೂ ಈ ಪರಿಸ್ಥಿತಿಗೆ ಒಗ್ಗಿಕೊಂಡು ನನ್ನನ್ನು ನನ್ನಾಕೆಯ ವಶಕ್ಕೆ ಒಪ್ಪಿಸಿಬಿಟ್ಟಿದ್ದೆ. ನಾನೇನು ಮಾಡಿದರೂ ನನ್ನಾಕೆ ಬಿಡುವುದಿಲ್ಲ. ನನ್ನ ಕಾಯಕಲ್ಪ ಮಾಡಿಯೇ ತೀರ್ತಾಳೆ. ಆದರೆ ಇದು ನನಗೆ ಮಾತ್ರ ಸೀಮಿತಾಗಿದ್ದರೆ ಚೆನ್ನಾಗಿತ್ತು. ನನ್ನಾಕೆ ಇಡೀ ಮನೆಯನ್ನು ಬದಲಿಸಿಬಿಡುತ್ತೇನೆಂದು ನಿರ್ಧಾರ ಮಾಡಿಯಾಗಿತ್ತು. ಅವಳು ಮನೆಯ ಎಲ್ಲ ಸದಸ್ಯರ ವ್ಯಕ್ತಿತ್ವದಲ್ಲಿ ಆಮೂಲಾಗ್ರ ಬದಲಾಣೆ ಮಾಡುತ್ತೇನೆಂದು ದೃಢ ನಿಶ್ಚಯ ಮಾಡಿದ್ದಳು. ಒಂದು ದಿನ ನಾನು ಆಫೀಸಿನಿಂದ ಮನೆಗೆ ಬಂದಾಗ ಡ್ರಾಯಿಂಗ್‌ ರೂಮ್ ನಲ್ಲಿ ಜೀನ್ಸ್ ಪ್ಯಾಂಟ್‌ ಧರಿಸಿದ್ದ ಮಹಿಳೊಬ್ಬರು ಕುಳಿತಿದ್ದರು. ಅವರು ಮುಖಕ್ಕೆ ಫೇಸ್‌ ಪ್ಯಾಕ್‌ ಹಾಕಿಕೊಂಡು ಕಣ್ಣುಗಳ ಮೇಲೆ ಸೌತೆಕಾಯಿ ತುಂಡುಗಳನ್ನು ಇಟ್ಟುಕೊಂಡಿದ್ದರು. ಎಲ್ಲೋ ನೋಡಿದಂತಿದೆ ಅನ್ನಿಸಿತು. ಅವರನ್ನು ಗುರುತಿಸಲು ಪ್ರಯತ್ನಿಸುವಷ್ಟರಲ್ಲಿ ಹಿಂದಿನಿಂದ ಒಂದು ಧ್ವನಿ ಕೇಳಿಸಿತು.

“ಯಾಕ್ರೀ, ನಿಮಗೆ ಜನ್ಮ ಕೊಟ್ಟ ತಾಯಿಯ ಗುರುತೂ ಸಿಗಲಿಲ್ವಾ ನಿಮಗೆ? ಅಷ್ಟೊಂದು ಒದ್ದಾಡ್ತಾ ಇದ್ದೀರಿ. ನೋಡಿದ್ರಾ ಅಮ್ಮಾ, ನಾನು ಹೇಳ್ತಿರಲಿಲ್ವಾ? ನಿಮ್ಮ ಶರೀರವನ್ನು ಸರಿಯಾಗಿ ನೋಡಿಕೊಂಡರೆ, ನಿಮ್ಮ ಸೌಂದರ್ಯದ ಬಗ್ಗೆ ಗಮನ ಇಟ್ಟು ಸರಿಯಾದ ರೀತೀಲಿ ಫ್ಯಾಷನ್‌ಗೆ ತಕ್ಕಂತೆ ಉಡುಪುಗಳನ್ನು ಧರಿಸಿದರೆ ನಿಮ್ಮ ವ್ಯಕ್ತಿತ್ವದಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತದೆ. ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಂಡುಬರುವುದಲ್ಲದೆ, ಅಕ್ಕಪಕ್ಕದ ಮನೆಗಳ ಹೆಂಗಸರು ನಿಮ್ಮನ್ನು ಕಂಡು ಅಸೂಯೆಪಡುತ್ತಾರೆ,” ಇದು ನನ್ನಾಕೆಯ ಧ್ವನಿ.

“ಓಹೋ, ನನ್ನ ನಂತರ ಈಗ ನಮ್ಮಮ್ಮನ ಸರದೀನಾ?” ನನ್ನಾಕೆಗೆ ಹೇಳಲು ನನಗೆ ಬೇರೆ ಶಬ್ದಗಳಿರಲಿಲ್ಲ.

ನಾನು ಅಂದುಕೊಂಡಿದ್ದಂತೆಯೇ ಆಯಿತು. ಅಮ್ಮನ ಬಳಿಕ ನನ್ನಾಕೆಯ ಮುಂದಿನ ಬೇಟೆ ನನ್ನ ಪರಮಪೂಜ್ಯ ತಂದೆ ಆಗಿದ್ದರು. ತನ್ನ ಪೂಜ್ಯ ಮಾವನ ಮೇಲೆ ನನ್ನಾಕೆ ಏನು ತಾನೆ ಪ್ರಯೋಗಿಸುತ್ತಾಳೆ. ಅವರಲ್ಲಿ ಯಾವ ಬದಲಾವಣೆ ತರಬಹುದು ಎಂದೆಲ್ಲಾ ನೀ ಯೋಚಿಸಬಹುದು. ಆದರೆ, `ಎಲ್ಲಿ ಗುರಿ ಇದೆಯೋ ಅಲ್ಲಿ ದಾರಿಯೂ ಇದೆ’ ಎಂಬ ಉಕ್ತಿಯಂತೆ ನನ್ನಾಕೆ ತಾನು `ಸೌಂದರ್ಯ ತಜ್ಞೆ’ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಳು.

ಯಾವಾಗಲೂ ಸಡಿಲವಾದ ಉಡುಪುಗಳನ್ನು ಧರಿಸುವ ನಮ್ಮ ತಂದೆ ಈಗ ಟೀ ಶರ್ಟ್‌ ಮತ್ತು ಜೀನ್ಸ್ ಪ್ಯಾಂಟ್‌ ಬಿಟ್ಟು ಬೇರೆ ಉಡುಪಿನತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅವರ ಕಾಲುಗಳಲ್ಲಿ ಚಪ್ಪಲಿಯ ಬದಲು ಸ್ಪೋರ್ಟ್ಸ್ ಶೂ ಇತ್ತು. ತಲೆಯಲ್ಲಿದ್ದ ಬಿಳಿ ಕೂದಲಿಗೆ ಕಪ್ಪು ಡೈ ಮಾಡಲಾಗಿತ್ತು. ಅದಲ್ಲದೆ, ನಮ್ಮ ಅಪ್ಪ ಅಮ್ಮ, ಸಾರಿ ಮಮ್ಮಿ ಪಪ್ಪಾರಲ್ಲಿ ಬಹಳಷ್ಟು ಅದ್ಭುತ ಬದಲಾವಣೆಗಳಾಗಿದ್ದವು. ಇಬ್ಬರೂ ತಮ್ಮ ಸೌಂದರ್ಯದ ಬಗ್ಗೆ ಬಹಳ ಜಾಗರೂಕರಾಗಿದ್ದರು.

ನನ್ನ ಬ್ಯೂಟೀಶಿಯನ್‌ ಪತ್ನಿಯ ಪ್ರಸಿದ್ಧಿ ನಿಧಾನವಾಗಿ ಇಡೀ ಓಣಿಯನ್ನು ಹಬ್ಬಿತು. ಇಡೀ ಓಣಿಯರಲ್ಲಿ ಸೌಂದರ್ಯದ ಬಗ್ಗೆ ಜಾಗರೂಕತೆ ವೇಗವಾಗಿ ಹೆಚ್ಚಿತು. ಮಹಿಳೆಯರು, ಪುರುಷರು, ಯುವಕರು, ವೃದ್ಧರು ಎಲ್ಲರೂ ಸಮಯದ ಚಕ್ರವನ್ನು ತಡೆಯಲು ಇಚ್ಛಿಸುತ್ತಿದ್ದಾರೆ. ಅವರು ಕಾಲಚಕ್ರವನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸಲು ಬಯಸುತ್ತಿದ್ದಾರೆ. ತಮ್ಮ ಇಚ್ಛೆ ನೆರವೇರಲು ಅವರಿಗೆ ಒಂದೇ ಒಂದು ಸಾಧನ ಕಂಡುಬರುತ್ತದೆ. ಅದು ನನ್ನ ಪತ್ನಿ.

ನಮ್ಮ ಓಣಿಯಲ್ಲಿರುವವರೆಲ್ಲಾ ನನ್ನಾಕೆಯ ಮೂಲಕವೇ ತಮ್ಮೆಲ್ಲರ ದೇಹದ ಜೀರ್ಣೋದ್ಧಾರ ಸಾಧ್ಯವೆಂದು ತಿಳಿದಿದ್ದಾರೆ. ಅವರಿಗೆ ನೂತನ ಬಣ್ಣ, ರೂಪ ಸಿಗುತ್ತದೆ. ಪ್ರಕೃತಿದತ್ತವಾದ ಅವರ ಶರೀರಕ್ಕೆ ನನ್ನಾಕೆಯೇ ಒಂದು ಹೊಸ ಆಕರ್ಷಕ ರೂಪ ಕೊಡಬಲ್ಲಳು. ಅವರು ನನ್ನಾಕೆಯ ಸೌಂದರ್ಯ ಜ್ಞಾನದ ಲಾಭ ಪಡೆಯಲು ಹಾಗೂ ತಮ್ಮನ್ನು ಸುಂದರ ಹಾಗೂ ಆಕರ್ಷಕವಾಗಿ ಮಾಡಿಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲದೆ ನಮ್ಮ  ಮನೆಗೆ ಬರುತ್ತಾರೆ. ಅವರು ಬಂದು ಹೋಗುವುದರೊಂದಿಗೆ ಫೇಶಿಯಲ್, ಕಟಿಂಗ್‌, ಥ್ರೆಡಿಂಗ್‌, ಬ್ಲೀಚಿಂಗ್‌, ಬಾಡಿ ಮಸಾಜ್‌ನಂತಹ ಶಬ್ದಗಳೊಂದಿಗೆ ಶರೀರವನ್ನು ಸುಂದರಗೊಳಿಸುವ ಪ್ರಕ್ರಿಯೆ ಶುರುವಾಗುತ್ತದೆ.

ಈಗ ಸಂಜೆ ಆಫೀಸಿನಿಂದ ಬರುವಷ್ಟರಲ್ಲಿ ಅವಳ 3-4 ಕಸ್ಟಮರ್‌ಗಳು ಬಂದಿರುತ್ತಾರೆ. ಅವರ ಎದುರು ನಾನು ಹೊರಗಿನನೇನೋ ಅನ್ನಿಸುತ್ತದೆ. ಇಷ್ಟೇ ಅಲ್ಲ `ಅತ್ತಿಗೆ ಅತ್ತಿಗೆ’ ಎನ್ನುತ್ತಾ ಓಣಿಯ ನವಯುವಕರು ನನ್ನಾಕೆಯಿಂದ ಸೌಂದರ್ಯದ ಬಗ್ಗೆ ಸಲಹೆಗಳನ್ನು ಪಡೆಯುವ ನೆಪದಲ್ಲಿ ಅವಳ ಸುತ್ತಲೂ ನೆರೆದಿರುತ್ತಾರೆ. ನನ್ನಾಕೆ ಆ ಚಪಲಚಿತ್ತರಾದ ಮೈದುನಂದಿರಿಗೆ ಉಪಯುಕ್ತ ಸಲಹೆಗಳನ್ನು ನೀಡುತ್ತಿರುತ್ತಾಳೆ. ನಾನು ತೆಪ್ಪಗೆ ಒಂದು ಮೂಲೆಯಲ್ಲಿ ಕುಳಿತು ತಲೆ ಚಚ್ಚಿಕೊಳ್ಳುತ್ತಿರುತ್ತೇನೆ.

ಯಾವಾಗಲೂ ಸಡಿಲವಾದ ಉಡುಪುಗಳನ್ನು ಧರಿಸುವ ನಮ್ಮ ತಂದೆ ಈಗ ಟೀಶರ್ಟ್‌ ಮತ್ತು ಜೀನ್ಸ್ ಪ್ಯಾಂಟ್‌ ಬಿಟ್ಟು ಬೇರೆ ಉಡುಪಿನತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ