ತನ್ನ 17ರ ಹರೆಯದಲ್ಲೇ ನಟನೆಯ ಕ್ಷೇತ್ರಕ್ಕೆ ಕಾಲಿರಿಸಿದ ಶಿಲ್ಪಾ ಶೆಟ್ಟಿ ಮಾಡೆಲ್, ನಟಿ, ಪತ್ನಿ, ತಾಯಿ, ಇದೀಗ ಮಹಿಳಾ ಉದ್ಯಮಿಯಾಗಿ ಸೈ ಎನಿಸಿದ್ದಾರೆ. ಈಕೆ ಬಾಲಿವುಡ್‌ನ ಸುಮಾರು 60 ಹಾಗೂ ತೆಲುಗು, ಕನ್ನಡ, ತಮಿಳು ಸೇರಿದಂತೆ ದಕ್ಷಿಣದ ಸುಮಾರು ಚಿತ್ರಗಳಲ್ಲೂ ಮಿಂಚಿದ್ದಾರೆ.
ಶಿಲ್ಪಾ ಸದಾ ಏನಾದರೊಂದು ಹೊಸತನ್ನು ವಿಭಿನ್ನವಾದುದನ್ನು ಮಾಡಲು ಬಯಸುತ್ತಾರೆ. ಇದೇ ಕಾರಣದಿಂದಲೇ ಆಕೆ ನಟನೆಯ ಜೊತೆ ಬಿಸ್‌ನೆಸ್ ಸಹ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರ ತಾಯಿ ತಂದೆಯರದೇ ಮೂಲ ಪ್ರೇರಣೆ. ಜೊತೆಗೆ ಮದುವೆ ನಂತರ ಪತಿ ರಾಜ್ ಕುಂದ್ರಾರಿಂದ ಶಿಲ್ಪಾ `ಸತ್ ಯುಗ್ ಗೋಲ್ಡ್,’ `ಐಓಸಿಸ್ ಸ್ಪಾ ಸೆಲೂನ್.’ `ಯೋಗ ಥೆರಪಿ ಸೆಂಟರ್ಸ್’ ಹಾಗೂ `ಬೆಸ್ಟ್ ಡೀಲ್ ಟಿವಿ ಚಾನೆಲ್’ ಮುಂತಾದ ಸಂಸ್ಥೆಗಳ ಚೇರ್‌ಪರ್ಸನ್ ಆಗಿದ್ದಾರೆ.
ನಟಿ ಆಗಲು ಬಯಸಿರಲಿಲ್ಲ
ಶಿಲ್ಪಾ ಮುಂಬೈನಲ್ಲಿ ಹುಟ್ಟಿ ಬೆಳೆದರು. ಸೇಂಟ್ ಆ್ಯಂಟನಿ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಜೂನಿಯರ್ ಕಾಲೇಜ್ ನಂತರ ವಾಣಿಜ್ಯ ಪದವಿ ಪಡೆಯಲು ಮಾತುಂಗಾದ ಪೊದ್ದಾರ್ ಕಾಲೇಜ್ ಸೇರಿದರು. ಆಕೆಗೆ ಕಲಿಕೆಯಲ್ಲಿ ಆಸಕ್ತಿ ಇರಲಿಲ್ಲ. ಪದವಿ ಕಾಲೇಜಿನಲ್ಲೂ ಸ್ಪೋರ್ಟ್ಸ್ ಕೋಟಾ ಕಾರಣದಿಂದ ಅಡ್ಮಿಶನ್ ಸಿಕ್ಕಿತ್ತು. ಆಕೆ ವಾಲಿಬಾಲ್ ನಲ್ಲಿ ರಾಜ್ಯ ಮಟ್ಟದ ಚಾಂಪಿಯನ್ ಆಗಿದ್ದರು. ಬಿಸ್‌ನೆಸ್‌ಮನ್ ಆಗುವುದು ಆಕೆಯ ಕನಸಾಗಿತ್ತು. ತಾನು ಮುಂದೆ ನಟಿ ಆಗಬೇಕೆಂದು ಅವರೆಂದೂ ಬಯಸಿರಲಿಲ್ಲವಂತೆ.
ಶಿಲ್ಪಾ ಇನ್ನೂ 10ನೇ ತರಗತಿಯಲ್ಲಿದ್ದಾಗ, ಫ್ರೆಂಡ್ ಒಬ್ಬ ಆಕೆಯ ಫೋಟೋ ಕ್ಲಿಕ್ಕಿಸಿ ಮಾಡೆಲಿಂಗ್ ಏಜೆನ್ಸಿಗೆ ಕಳುಹಿಸಿದನಂತೆ. ಈ ರೀತಿ ಆಕೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಹೀಗೆ 2 ವರ್ಷ ಕಳೆದಾಗ `ಬಾಜಿಗರ್’ ಚಿತ್ರದ ಆಫರ್ ಸಿಕ್ಕಿತು. ತಾನು ಜೀವನದಲ್ಲಿ ಇಷ್ಟೆಲ್ಲ ಬದಲಾವಣೆ ಕಾಣಬೇಕಾಗಬಹುದೆಂದು ಆಕೆ ಅಂದುಕೊಂಡಿರಲಿಲ್ಲ.
ತಾಯಿ, ತಂದೆ, ಪತಿಯ ಸಹಕಾರ
ನಟನೆ ಹಾಗೂ ಬಿಸ್‌ನೆಸ್ ಕೆರಿಯರ್‌ನಲ್ಲಿ ಎಲ್ಲಕ್ಕಿಂತ ಹೆಚ್ಚು ಸಹಕಾರ ನೀಡಿದವರಾರು? ಈ ಕುರಿತಾಗಿ ಶಿಲ್ಪಾ, “ನಟನೆ ಆರಂಭಿಸಿದಾಗ ನನಗಿನ್ನೂ 17ರ ಹರೆಯ. ಆ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿಯನ್ನು ಇಷ್ಟು ಆದರದಿಂದ ಕಾಣುತ್ತಿರಲಿಲ್ಲ. ನಾನು ಶೆಟ್ಟಿ ಸಮುದಾಯದ ಮೊದಲ ಹುಡುಗಿಯಾಗಿ ನಾಯಕಿಯಾದೆ. ಈಗಿನ 22 ವರ್ಷಗಳ ಹಿಂದಿನ ಮಾತದು. “ನನ್ನ ತಂದೆ ಮೊದಲು ನಾನು ಪದವಿ ಮುಗಿಸಿಕೊಳ್ಳಬೇಕು ಎಂದರು, ಅದು ಪೂರ್ತಿ ಆಗಲೇ ಇಲ್ಲ. ಸದಾ ಔಟ್‌ಡೋರ್ ಶೂಟಿಂಗ್ ಇದರ ಮೂಲಕಾರಣ. ನಾನು ಅಮ್ಮನ ಜೊತೆ ಆಗಾಗ ಯಾತ್ರೆಗೆ ಹೋಗುತ್ತಿದ್ದೆ, ನಾನು ಅವರಿಗೆ ಬಹಳ ನಿಕಟವರ್ತಿ ಆಗಿದ್ದೆ. ಆ್ಯಕ್ಟಿಂಗ್, ಫ್ಯಾಷನ್, ಸ್ಟೈಲ್ ಏನೊಂದೂ ಗೊತ್ತಿರಲಿಲ್ಲ. ಆಗ ನನ್ನ ತಾಯಿ ತಂದೆ ನನಗೆ ಬಹಳ ಸಹಕಾರ ನೀಡಿದರು.
“ಬಿಸ್‌ನೆಸ್ ಮಾಡಲು ಹಣ ಹಾಗೂ ತಿಳಿವಳಿಕೆ ಎರಡೂ ಮುಖ್ಯ. ನಮ್ಮ ತಂದೆ ಸಹ ಬಿಸ್‌ನೆಸ್‌ನಲ್ಲಿದ್ದರು, ಹೀಗಾಗಿ ನಾನು ಅಂಥದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದರು. ಆದರೆ ರಾಜ್ ನನ್ನ ಸಂಗಾತಿಯಾದಾಗ, ತಾವೇ ಬಿಸ್‌ನೆಸ್ ಮ್ಯಾನ್ ಆಗಿದ್ದ ಅವರು ನನಗೂ ಅದರಲ್ಲಿ ಮುಂದುವರಿಯುವಂತೆ ಪ್ರೋತ್ಸಾಹ ನೀಡಿದರು. ಯೋಗ ಡಿವಿಡಿ ತಯಾರಿಸುವಂತೆ ಸಲಹೆ ಕೊಟ್ಟರು. ಅಲ್ಲಿಂದ ನನಗೆ ಸತತ ಮುಂದುವರಿಯಲು ಪ್ರೇರಣೆ ನೀಡಿದರು.”
ತನ್ನ ಖಾಸಗಿ ಜೀವನದ ಕುರಿತು ಹೇಳುತ್ತಾ ಶಿಲ್ಪಾ, ತಾನಿನ್ನೂ ಆ್ಯಕ್ಟಿಂಗ್ ಬಿಟ್ಟಿಲ್ಲ ಎನ್ನುತ್ತಾರೆ. ಆದರೆ ಅದಕ್ಕೆ ಹಿಂದಿನಷ್ಟು ಪ್ರಾಮುಖ್ಯತೆ ಕೊಡಲಾರೆ ಎನ್ನುತ್ತಾರೆ. ಬಿಸ್‌ನೆಸ್ ಜೊತೆ ಆಕೆಗೆ ಮಗ ವಿಯಾನ್ ರಾಜ್ ಕುಂದ್ರಾನನ್ನೂ ನೋಡಿಕೊಳ್ಳಬೇಕು. ಮಗ ಶಾಲೆಗೆ ಹೋದ ನಂತರ ಶಿಲ್ಪಾ ತಮ್ಮೆಲ್ಲ ಕೆಲಸಕಾರ್ಯಗಳ ಕಡೆ ಗಮನಹರಿಸುತ್ತಾರೆ.
ಶಿಲ್ಪಾ ತನ್ನನ್ನು ತಾನು ಸಾಧಾರಣ ಮಹಿಳೆ ಎಂದು ಭಾವಿಸುತ್ತಾರೆ, ಕ್ವಾಲಿಟಿ ಕೆಲಸ ಮಾಡಲು ಬಯಸುತ್ತಾರೆ. ಎಲ್ಲಿಯವರೆಗೂ ನೀವು ಸಾಧಾರಣ ಆಗಿ ನಿಲ್ಲುವುದಿಲ್ಲವೇ, ಮುಂದೆ ಕೆಲಸದಲ್ಲಿ ಶ್ರೇಯಸ್ಸು ಸಿಗುವುದಿಲ್ಲ ಎನ್ನುತ್ತಾರೆ. ಈಕೆ ಬಹಳ ಧೈರ್ಯಸ್ಥೆ ಕೂಡ. ಹೀಗೆ ಉದ್ಯಮಿ ಆದರು.
ಉದ್ಯಮಿ ಆದದ್ದು ಹೇಗೆ?
ಇದಕ್ಕೆ ಶಿಲ್ಪಾ, “ಮದುವೆ ನಂತರ ನಾನು ಮೊದಲು ಯೋಗ ಡಿವಿಡಿ ಬಿಸ್‌ನೆಸ್ ಶುರು ಮಾಡಿದೆ. ನಂತರ `ಐಓಸಿಸ್’ ಶುರು ಮಾಡಿದೆ. ಇದಕ್ಕೆ ಕಿರನ್ ಬಾಲಾ ನನ್ನ ಪಾರ್ಟ್‌ನರ್ ಆಗಿ ಸೇರಿದರು. ಇಲ್ಲಿಯವರೆಗೂ ಸುಮಾರು 17 ಐಓಸಿಸ್ ಸ್ಪಾ ಸ್ಯಾಪ್ಸ್ ಇಡೀ ದೇಶಪೂರ್ತಿ ಹರಡಿದೆ. ಅದರಲ್ಲಿ 4 ನನ್ನೀ, ಉಳಿದ ಫ್ರಾಂಚೈಸ್‌ನಲ್ಲಿವೆ. ರಾಯ್‌ಪುರ್, ಲಖ್ನೌ, ಗೌಹಾಟಿ, ಮುಂಬೈ ಮುಂತಾದೆಡೆ ಇವೆ.
“ನಂತರ ರಾಜ್ ಜೊತೆ ಬೆರೆತು ನಾನು `ಗ್ರೂಪ್ ಹೋಂ ಲೈಸ್’ ಸ್ಥಾಪಿಸಿದೆ. ಇದು ಅಗತ್ಯವಿರುವ ಜನರಿಗೆ ಒಟ್ಟಾಗಿ ಕಲೆತು ಮನೆ ಕೊಳ್ಳುವ ಅವಕಾಶ ಕಲ್ಪಿಸುತ್ತದೆ, ಇದರಲ್ಲಿ ಬ್ರೋಕರೇಜ್ ಇರುವುದಿಲ್ಲ. ನಂತರ `ಸತ್ ಯುಗ್ ಗೋಲ್ಡ್’ ಶುರು ಮಾಡಿದೆ. ಇದರಿಂದ ಸಾಮಾನ್ಯ ಜನರೂ ಚಿನ್ನ ಕೊಳ್ಳುವಂತಾಯ್ತು. ಜನ ಪ್ರತಿದಿನ 50/ ರೂ. ಕಟ್ಟಿ ವರ್ಷದಲ್ಲಿ ಒಮ್ಮೆ ಚಿನ್ನ ಕೊಳ್ಳಬಹುದು.
“ಇದರ ನಂತರ ಹೋಂ ಶಾಪಿಂಗ್‌ನಲ್ಲಿ ಸೀರೆಗಳನ್ನು ಲಾಂಚ್ ಮಾಡಿದೆ. ಆಗ ನನಗೆ ಹೋಂ ಶಾಪಿಂಗ್‌ನಲ್ಲಿ ನಟಿ ಆದಕಾರಣ ಒಳ್ಳೆ ಪ್ರತಿಕ್ರಿಯ ಸಿಗಬಹುದು ಎನಿಸಿತು. ಇಲ್ಲಿಂದ ಟಿವಿಯಲ್ಲಿ ಬೆಸ್ಟ್ ಡೀಲ್ ಸಿಕ್ಕಿತು. ಪತಿಯಿಂದಲೇ ಪ್ರೇರಣೆ ಪಡೆದ ನಾನು, ಏನಾದರೂ ಸಾಧಿಸಿ ತೋರಿಸಬೇಕು ಎನಿಸಿತು.”
ಶಿಲ್ಪಾ ಮುಂದೆ ಹೇಳುತ್ತಾರೆ, ಅವರ ಬೆಸ್ಟ್ ಡೀಲ್, ಟಿವಿ ಚಾನೆಲ್ ಸೆಲೆಬ್ರಿಟಿ ಡ್ರಿಲೆನ್ ಬಿಸ್‌ನೆಸ್ ವೆಂಚರ್ ಆಗಿತ್ತಂತೆ. ಇದು 24×7 ಸತತ ಪ್ರಸಾರವಾಗುವ ಹೋಂ ಶಾಪಿಂಗ್ ಚಾನೆಲ್. ಇಲ್ಲಿ ಲೈಫ್ ಸ್ಟೈಲ್, ಮನೆ, ಫ್ಯಾಷನ್, ಹೆಲ್ತ್ ಬ್ಯೂಟಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಖರೀದಿಸಬಹುದು. ಇಲ್ಲಿಗೆ ಬರುವ ಎಲ್ಲಾ ಸೆಲೆಬ್ರಿಟಿಗಳೂ, ಮೊದಲು ಆ ಉತ್ಪನ್ನವನ್ನು ಪರೀಕ್ಷೆ ಮಾಡಿ, ತೃಪ್ತಿ ಎನಿಸಿದರೆ ಮಾತ್ರ ಅದರ ಕುರಿತಾಗಿ ಗ್ಯಾರಂಟಿ ನೀಡುತ್ತಾರೆ. ಇಲ್ಲಿ ಯಾವ ಉತ್ಪನ್ನವನ್ನೂ ಚಾನೆಲ್ ನಲ್ಲಿ ಸುಮ್ಮನೆ ಹಾಗೇ ಪ್ರಸಾರ ಮಾಡುವುದಿಲ್ಲ. ಯಾವ ಉತ್ಪನ್ನವೇ ಇರಲಿ, ಮೊದಲು ಅದನ್ನು ಒಂದು ಉತ್ತಮ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುತ್ತದೆ. ಸಮರ್ಪಕ ಹಾಗೂ ಗುಣಮಟ್ಟದ ಉತ್ಪನ್ನಗಳು ಮಾತ್ರವೇ ಇಲ್ಲಿ ಮಾರಲ್ಪಡುತ್ತವೆ. ಅಂಥ ಉತ್ಪನ್ನಗಳನ್ನು ಯಾವುದಾದರೂ ಸೆಲೆಬ್ರಿಟಿಯ ಇಷ್ಟದ ಆಯ್ಕೆ ಎಂದು ಘೋಷಿಸಲಾಗುತ್ತದೆ. ಉದಾ, ನೇಹಾ ಧೂಪಿಯಾ ಹೇರ್ ಕೇರ್ ಪ್ರಾಡಕ್ಟ್ ಬಗ್ಗೆ ಮಾತನಾಡಿದರೆ, ಫರಾಖಾನ್ ಏರ್‌ಟೈಟ್ ಡಬ್ಬಿಗಳನ್ನು ಎಂಡೋರ್ಸ್ ಮಾಡುತ್ತಾರೆ.
ಟರ್ನಿಂಗ್ ಪಾಯಿಂಟ್
ಜೀವನದ ಟರ್ನಿಂಗ್ ಪಾಯಿಂಟ್ ಕುರಿತು ಶಿಲ್ಪಾ, “ನನ್ನ ಜೀವನದಲ್ಲಿ ಹಲವಾರು ಟರ್ನಿಂಗ್ ಪಾಯಿಂಟ್ಸ್ ಇವೆ. `ಬಾಜಿಗರ್’ ಚಿತ್ರ ಹಿಟ್ ಆದದ್ದು, ಬಿಗ್ ಬ್ರದರ್ ಟಿವಿ ರಿಯಾಲಿಟಿ ಶೋನಲ್ಲಿ ವಿಜೇತಳಾದದ್ದು, ಮದುವೆ, ತಾಯ್ತನ ಇವೆಲ್ಲಾ ನನ್ನಲ್ಲಿ ಹೆಚ್ಚಿನ ಬದಲಾವಣೆ ತಂದ.”
ಶಿಲ್ಪಾ ಪ್ರಕಾರ ಮಹಿಳೆ ಯಾವುದೇ ಕ್ಷೇತ್ರದಲ್ಲಿ ಯಶಸ್ವಿ ಎನಿಸಬೇಕಾದರೆ, ಧೈರ್ಯ ಜಾಸ್ತಿ ಇರಬೇಕು. ಅವರು ವೈಯಕ್ತಿಕ ಜೀವನದಲ್ಲಿ ಸಂತೋಷವಾಗಿರಬೇಕು, ಅಹಂಕಾರ ಹೊಂದಿರಬಾರದು, ತಮ್ಮ ಯೋಗ್ಯತೆ ಅರಿತಿರಬೇಕು.
ಪ್ರಗತಿಪರ ಮಹಿಳೆಯರಿಗೆ ಆಕೆ ನೀಡುವ ಸಂದೇಶ ಎಂದರೆ, “ಯಾವುದರಲ್ಲಿ ನಿಮಗೆ ಖುಷಿ ಅನಿಸುತ್ತದೋ ಅದನ್ನೇ ಮಾಡಿ. ಈಗೋ ತೋರಿಸಬೇಡಿ. ವಿವಾಹಿತರಾಗಿದ್ದರೆ ಮದುವೆ ಉಳಿಸಿಕೊಳ್ಳಲು ಪ್ರಾಶಸ್ತ್ಯ ನೀಡಿ. ಎಂದೂ ಶೋಷಣೆ ಸಹಿಸಬೇಡಿ, ಸ್ವಾಭಿಮಾನಿಗಳಾಗಿ ಮುಂದುವರಿಯಿರಿ.”
– ಜಿ. ಸೀಮಾ