ಸೌತೆಯ ಸ್ಪೆಷಲ್ ಸಲಾಡ್

ಸಾಮಗ್ರಿ :  1 ಮಾಗಿದ ಮಾವಿನಹಣ್ಣಿನ ಹೋಳು,  1 ಸಣ್ಣ ತಾಜಾ ಸೌತೇಕಾಯಿಯ ಹೋಳು, ಸಣ್ಣಗೆ ಹೆಚ್ಚಿಕೊಂಡ 1-2 ಈರುಳ್ಳಿ, 2-3 ಹಸಿ ಮೆಣಸಿನಕಾಯಿ, ಸಣ್ಣಗೆ ಹೋಳು ಮಾಡಿಕೊಂಡ ಕೆಂಪು ಹಳದಿ ಹಸಿರು ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು ನಿಂಬೆರಸ ಚಾಟ್‌ ಮಸಾಲ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ತೆಂಗಿನ ತುರಿ.

ವಿಧಾನ : ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನೂ ಬೆರೆಸಿಕೊಂಡು 2-3 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ. ನಂತರ ಹೊರತೆಗೆದು ಉಪ್ಪು ಸೇರಿಸಿ, ತಕ್ಷಣ ಸವಿಯಲು ಕೊಡಿ.

kheere-ka-krunchi-achar-_6_

ಸೌತೆಯ ದಿಢೀರ್ಉಪ್ಪಿನಕಾಯಿ

ಸಾಮಗ್ರಿ : 1 ದೊಡ್ಡ ಸೌತೇಕಾಯಿ (ಬಿಲ್ಲೆಗಳಾಗಿ ಹೆಚ್ಚಿಡಿ), ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಸಕ್ಕರೆ, ವಿನಿಗರ್‌, ಉದ್ದುದ್ದಕ್ಕೆ ಹೆಚ್ಚಿಕೊಂಡ ಒಂದಿಷ್ಟು ಈರುಳ್ಳಿ ಕ್ಯಾಪ್ಸಿಕಂ (ಹಸಿರು ಹಳದಿ ಕೆಂಪು), 2-2 ಚಿಟಕಿ ಅರಿಶಿನ ಸಾಸುವೆ ಪುಡಿ, ಒಗ್ಗರಣೆಗೆ ಎಣ್ಣೆ, ಜೀರಿಗೆ, ಮೆಂತ್ಯ.

ವಿಧಾನ : ಒಂದು ಸಾಸ್‌ ಪ್ಯಾನ್‌ನಲ್ಲಿ ವಿನಿಗರ್‌, ಉಪ್ಪು, ಸಕ್ಕರೆ ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. 10 ನಿಮಿಷಗಳ ನಂತರ ಕೆಳಗಿಳಿಸಿ ಸಾಮಗ್ರಿ ಆರಲು ಬಿಡಿ. ಒಂದು ಗಾಜಿನ ಬಟ್ಟಲಿಗೆ ಸೌತೇಕಾಯಿ ಹೋಳು ಮತ್ತಿತರ ಸಾಮಗ್ರಿ, ಮಸಾಲೆ ಬೆರೆಸಿಕೊಂಡು ಅದಕ್ಕೆ ವಿನಿಗರ್‌ ಮಿಶ್ರಣ ಬೆರೆಸಿಕೊಳ್ಳಿ. ನಂತರ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, 2 ತಾಸು ಫ್ರಿಜ್ ನಲ್ಲಿರಿಸಿ. ಆಮೇಲೆ ಅದಕ್ಕೆ ಒಗ್ಗರಣೆ ಕೊಟ್ಟು, ಅನ್ನ ಚಪಾತಿ ಜೊತೆ ಸವಿಯಲು ಕೊಡಿ.

kakari-friuty-raita

ಸೌತೇಕಾಯಿ ರಾಯ್ತಾ

ಸಾಮಗ್ರಿ : 1 ಸಣ್ಣ ತಾಜಾ ಸೌತೇಕಾಯಿ (ತುರಿದಿಡಿ), 2-3 ಕಪ್‌ ಗಟ್ಟಿ ಕೆನೆ ಮೊಸರು, ಅರ್ಧರ್ಧ ಕಪ್‌ ದಾಳಿಂಬೆ ಸೀಡ್ಸ್, ದ್ರಾಕ್ಷಿ (ಉದ್ದಕ್ಕೆ ಹೆಚ್ಚಿಡಿ), 2-3 ಕಿವೀ ಫ್ರೂಟ್‌ (ತುಂಡರಿಸಿ), ರುಚಿಗೆ ತಕ್ಕಷ್ಟು ಉಪ್ಪು ವೈಟ್‌ ಪೆಪ್ಪರ್‌ ಪೌಡರ್‌, ಸಕ್ಕರೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಬೆರೆಸಿಕೊಂಡು, 2 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

parwal-muthiya-_5_

ತೊಂಡೆಕಾಯಿ ನುಚ್ಚಿನುಂಡೆ

ಮೂಲ ಸಾಮಗ್ರಿ : 250 ಗ್ರಾಂ ತೊಂಡೆಕಾಯಿ (ಸಣ್ಣಗೆ ಹೆಚ್ಚಿಡಿ), ಸಣ್ಣ ರವೆ, ಕಡಲೆಹಿಟ್ಟು, ಗೋದಿಹಿಟ್ಟು (ತಲಾ ಅರ್ಧರ್ಧ ಕಪ್‌), ಸಣ್ಣಗೆ ಹೆಚ್ಚಿದ 2-3 ಈರುಳ್ಳಿ, 3-4 ಹಸಿ ಮೆಣಸಿನಕಾಯಿ, 1 ತುಂಡು ಶುಂಠಿ, 7-8 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಗರಂಮಸಾಲ, ಧನಿಯಾಪುಡಿ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪಿನ ಪುಡಿ, ಸಕ್ಕರೆ, ನಿಂಬೆರಸ, ಅರ್ಧ ಸೌಟು ರೀಫೈಂಡ್ ಎಣ್ಣೆ, 2 ಚಿಟಕಿ ಸೋಡ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ.

ಒಗ್ಗರಣೆಗೆ ಸಾಮಗ್ರಿ : 2 ಚಮಚ ಎಣ್ಣೆ, ಒಂದಿಷ್ಟು ಕರಿಬೇವು, ಸಾಸುವೆ, ಜೀರಿಗೆ, ಎಳ್ಳು.

ಅಲಂಕರಿಸಲು ಸಾಮಗ್ರಿ : ಒಂದು ಗಿಟುಕು ತೆಂಗಿನ ತುರಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ತುಸು ಚಾಟ್‌ ಮಸಾಲ.

ವಿಧಾನ : ಮೊದಲು ಮಿಕ್ಸಿಗೆ ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು, ಶುಂಠಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಅತಿ ಸಣ್ಣಗೆ ಹೆಚ್ಚಿದ ತೊಂಡೆಕಾಯಿ, ಹುರಿದ ರವೆ, ಕಡಲೆಹಿಟ್ಟು, ಗೋದಿಹಿಟ್ಟು, ಉಪ್ಪು, ಮಸಾಲೆ ಎಲ್ಲಾ ಬೆರೆಸಿ ನುಚ್ಚಿನುಂಡೆಯ ಮಿಶ್ರಣ ಸಿದ್ಧಪಡಿಸಿಕೊಳ್ಳಿ. ಕೊನೆಯಲ್ಲಿ ರೀಫೈಂಡ್‌ ಎಣ್ಣೆ ಬೆರೆಸಿ ಮಿಶ್ರಣ ಸಾಫ್ಟ್ ಸ್ಮೂಥ್‌ ಆಗಿರುವಂತೆ ಮಾಡಿ. ಇದನ್ನು ನುಚ್ಚಿನುಂಡೆಗೆ ಮಾಡಿಕೊಳ್ಳುವಂತೆ ಸಣ್ಣ ಗಾತ್ರದ ಉದ್ದನೆ ಉಂಡೆಗಳಾಗಿ ಹಿಡಿಯಿರಿ. ಆಮೇಲೆ ಇಡ್ಲಿ ಬೇಯಿಸುವಂತೆ, ಆವಿಯಲ್ಲಿ ಇವನ್ನೆಲ್ಲ ಒಟ್ಟಾಗಿ ಬೇಯಿಸಿ. ಹೊರತೆಗೆದು ತುಸು ಆರಿದಾಗ, ಉದ್ದಕ್ಕೆ ಅರ್ಧರ್ಧ ಭಾಗ ಆಗುವಂತೆ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಅದರಲ್ಲಿ ಈ ಉಂಡೆಗಳನ್ನು ಬಾಡಿಸಿ ಹೊರ ತೆಗೆಯಿರಿ. ಒಂದು ಟ್ರೇನಲ್ಲಿ ನೀಟಾಗಿ ಜೋಡಿಸಿಕೊಂಡು ಮೇಲೆ ಚಾಟ್‌ ಮಸಾಲ, ತೆಂಗಿನ ತುರಿ, ಕೊ.ಸೊಪ್ಪು ಉದುರಿಸಿ. ಬಿಸಿ ಬಿಸಿಯಾಗಿ ಪುದೀನಾ ಚಟ್ನಿ ಅಥವಾ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.

chana-dal-with-kakari

ಕಡಲೆಬೇಳೆ ಸೌತೆಯ ಉಸುಲಿ

ಸಾಮಗ್ರಿ : 1 ಕಪ್‌ ಕಡಲೆಬೇಳೆ, 1 ಸಣ್ಣ ಸೌತೇಕಾಯಿ, 2-3 ಈರುಳ್ಳಿ, 2-3 ಟೊಮೇಟೊ, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ ಪುಡಿ, ಗರಂಮಸಾಲ, 2 ಲಂಗದ ಎಲೆ, 1-2 ಒಣ ಮೆಣಸಿನಕಾಯಿ, ಒಗ್ಗರಣೆಗೆ ಅರ್ಧ ಸೌಟು ತುಪ್ಪ, ಸಾಸುವೆ, ಜೀರಿಗೆ, ಕರಿಬೇವು, ಇಂಗು, 1 ಗಿಟುಕು ತೆಂಗಿನ ತುರಿ, ತುಸು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಕಡಲೆಬೇಳೆಯನ್ನು ಕನಿಷ್ಠ ಪ್ರಮಾಣದ ನೀರಿನಲ್ಲಿ ತುಸು ಎಣ್ಣೆ, ಅರಿಶಿನ ಹಾಕಿ 1 ಸೀಟಿ ಬರುವಂತೆ ಬೇಯಿಸಿಕೊಳ್ಳಿ. ಆರಿದ ನಂತರ ಸೋಸಿಕೊಂಡು ನೀರನ್ನು ಬೇರ್ಪಡಿಸಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಕೊಟ್ಟು, ಒಣ ಮೆಣಸಿನಕಾಯಿ, ಲಂಗದೆಲೆ ಹಾಕಿ ಚಟಪಟಾಯಿಸಿ. ಆಮೇಲೆ ಸಣ್ಣಗೆ ಹೆಚ್ಚಿದ ಸೌತೇಕಾಯಿ ಹಾಕಿ ಬೇಗ ಬೇಗ ಬಾಡಿಸಬೇಕು. ಆಮೇಲೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಟೊಮೇಟೊ ಸೇರಿಸಿ ಬಾಡಿಸಬೇಕು. ಆಮೇಲೆ ಉಪ್ಪು, ಖಾರ, ಮಸಾಲೆ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಬೆಂದ ಕಡಲೆಬೇಳೆ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ ಕೆದಕಿ, ಕೆಳಗಿಳಿಸಿ. ಕೊನೆಯಲ್ಲಿ ಹೆಚ್ಚಿದ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಉಸುಲಿ ಸವಿಯಲು ಕೊಡಿ.

nutricious-kheere-ka-jam-_9_

ಸೌತೆಯ ಜ್ಯಾಂ

ಸಾಮಗ್ರಿ : 1 ಸಣ್ಣ ತಾಜಾ ಸೌತೇಕಾಯಿ (ಸಿಪ್ಪೆ ಹೆರೆದು ತುರಿದಿಡಿ), 100 ಗ್ರಾಂ ಸಕ್ಕರೆ, 2-2 ಚಿಟಕಿ ಏಲಕ್ಕಿ, ಒಣಶುಂಠಿ ಪುಡಿ ಸಿಟ್ರಿಕ್‌ ಆ್ಯಸಿಡ್‌ (ರೆಡಿಮೇಡ್‌ ಲಭ್ಯ), ಉಪ್ಪು, 3-4 ಹನಿ ಹಸಿರು ಬಣ್ಣ, ತುಸು ತುಪ್ಪ.

ವಿಧಾನ : ಒಂದು ನಾನ್‌ಸ್ಟಿಕ್‌ ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿಕೊಂಡು ತುರಿದ ಸೌತೇಕಾಯಿ ಹಾಕಿ ಬಾಡಿಸಿ. ಇದಕ್ಕೆ ತುಸು ಉಪ್ಪು ಹಾಕಿ ಚೆನ್ನಾಗಿ ಕೆದಕಬೇಕು. ಆಮೇಲೆ ಒಂದೊಂದಾಗಿ ಉಳಿದ ಸಾಮಗ್ರಿ ಸೇರಿಸುತ್ತಾ ತಳ ಹತ್ತದಂತೆ ತುಪ್ಪ ಹಾಕಿ ಕೆದುಕುತ್ತಿರಬೇಕು. ಇದು ಜ್ಯಾಂ ತರಹ ಗಟ್ಟಿಯಾದಾಗ ಹಸಿರು ಬಣ್ಣ ಬೆರೆಸಿ, ಕೆದಕಿ ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಬಾಟಲಿಗೆ ಹಾಕಿ ಫ್ರಿಜ್‌ನಲ್ಲಿಡಿ. ಬೇಕೆನಿಸಿದಾಗ ಬೆಣ್ಣೆ ಸವರಿದ ಬ್ರೆಡ್‌ ಸ್ಲೈಸಿಗೆ ಇದನ್ನು ಹರಡಿ ಸವಿಯಲು ಕೊಡಿ. ಚಪಾತಿ, ಪೂರಿಗಳಿಗೆ ಸವರಿ ರೋಲ್ ಮಾಡಿ ಮಕ್ಕಳ ಟಿಫನ್‌ ಬಾಕ್ಸಿಗೆ ಹಾಕಿಕೊಡಿ.

ಸೌತೇಕಾಯಿ ರವೆ ಪ್ಯಾಟೀಸ್

ಸಾಮಗ್ರಿ : 1 ಸಣ್ಣ ಸೌತೇಕಾಯಿ (ನೀಟಾಗಿ ತುರಿದಿಡಿ), 100 ಗ್ರಾಂ ತುರಿದ ಪನೀರ್‌, ಅರ್ಧ ಕಪ್‌ ಸಣ್ಣ ರವೆ, ಅರ್ಧ ಸೌಟು ಮೊಸರು, ಅರ್ಧ ಚಮಚ ಓಮ, 1 ದೊಡ್ಡ ಚಮಚ ಬಾದಾಮಿ ಪುಡಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಹಸಿಮೆಣಸು ಶುಂಠಿ, ಕರಿಬೇವು, 2-3 ಚಮಚ ಕಡಲೆಹಿಟ್ಟು, ಒಂದಿಷ್ಟು ಬ್ರೆಡ್‌ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ ಮಸಾಲ, ನಿಂಬೆರಸ, 2-3 ಚಮಚ ಕಾರ್ನ್‌ಫ್ಲೋರ್‌, ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ.

ವಿಧಾನ : ಒಂದು ನಾನ್‌ಸ್ಟಿಕ್‌ ಪ್ಯಾನಿನಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಓಮ ಹಾಕಿ ಒಗ್ಗರಣೆ ಕೊಡಿ. ಆಮೇಲೆ ತುರಿದ ಸೌತೆ ಹಾಕಿ ಬಾಡಿಸಿ. ನಂತರ ಇದಕ್ಕೆ ರವೆ ಹಾಕಿ ಹುರಿಯಿರಿ. ನಂತರ (ಮಂದ ಉರಿಯಲ್ಲಿ) ಮೊಸರು ಬೆರೆಸಿ ಕೆದಕಬೇಕು. ನಂತರ ಉಳಿದೆಲ್ಲ ಸಾಮಗ್ರಿಗಳನ್ನೂ ಒಂದೊಂದಾಗಿ ಹಾಕಿ ಕೆದಕಬೇಕು. ಮಿಶ್ರಣ ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ ಆರಲು ಬಿಡಿ. ನಂತರ ಉಂಡೆ ಕಟ್ಟಿ, ಗುಂಡಗೆ ತಟ್ಟಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ನಾನ್‌ಸ್ಟಿಕ್‌ ಪ್ಯಾನಿನಲ್ಲಿ ತುಸು ಎಣ್ಣೆ ಬಿಡುತ್ತಾ ಎರಡೂ ಬದಿ ತಿರುವಿಹಾಕಿ  ಬೇಯಿಸಬೇಕು. ಇದೀಗ ಈ ಸ್ವಾದಿಷ್ಟ ಪ್ಯಾಟೀಸ್‌ನ್ನು, ಸ್ಪೆಷಲ್ ಸೌತೆಯ ಸಲಾಡ್‌ ಹಾಗೂ ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ