ಒಂದು ಕಾಲದಲ್ಲಿ ಪ್ರಸಿದ್ಧ ಅಥ್ಲೀಟ್‌ ಎನಿಸಿ, ಕಳೆದ 8 ವರ್ಷಗಳಿಂದ ಬಂಜೆತನದ ನೋ ಅನುಭವಿಸುತ್ತಿರುವ ಜೈಪುರದ ಸುನೀತಾ ಆರ್ಯ ಬಗ್ಗೆ ಮಗುವಿನ ಕಳ್ಳತನದ ಆರೋಪ ಬಂದಾಗ ಎಲ್ಲರೂ ದಂಗಾಗಿ ಹೋದರು. ಅಸಲಿಗೆ, ಸಾಮಾಜಿಕ ರೀತಿಗಳು ಹಾಗೂ ಮೂಢನಂಬಿಕೆಯ ಪರಾಕಾಷ್ಠತೆ ಸುನೀತಾರನ್ನು ಹೇಗೆ ಆಕ್ರಮಿಸಿದ್ದ ಎಂದರೆ, ಆಕೆ ಎಲ್ಲಾ ಪರಿಧಿಯನ್ನೂ ದಾಟಿ ಹೋಗಿಬಿಟ್ಟಿದ್ದರು.

ಸುನೀತಾ ಆರ್ಯ ಜೈಪುರದ ಒಬ್ಬ ಯಶಸ್ವಿ ಅಥ್ಲೀಟ್‌ ಎನಿಸಿದ್ದರು. 2002ರಲ್ಲಿ ಆಕೆ ಅಂತಾರಾಜ್ಯಗಳ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ಗೆ ಬಂದಿದ್ದರು. ಅಲ್ಲಿ ಅವರು ಮತ್ತೊಬ್ಬ ಅಥ್ಲೀಟ್‌ ನೀರಜ್‌ ಕುಮಾರ್‌ರನ್ನು ಭೇಟಿಯಾದರು. ಈ ಭೇಟಿ ಮೊದಲು ಗೆಳೆತನ, ನಂತರ ಪ್ರೇಮ, ಆಮೇಲೆ ಮದುವೆಯಲ್ಲಿ ಮುಕ್ತಾಯವಾಯಿತು. ಇಬ್ಬರ ಮನೆಯವರೂ ಈ ಪ್ರೇಮ ವಿವಾಹ ಒಪ್ಪಿರಲಿಲ್ಲ, ಆದರೆ ಈ ಸಂಗಾತಿಗಳಲ್ಲಿ ಪ್ರೇಮ ಗಾಢವಾಗಿತ್ತು.

ಆದರೆ ಸುನೀತಾರ ಸಂತಸ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾಗಿ 2 ವರ್ಷ ಕಳೆದರೂ ಸುನೀತಾರಿಗೆ ಮಗು ಆಗದಿದ್ದಾಗ, ಅತ್ತೆ ಮನೆಯವರು ಸಹಜವಾಗಿಯೇ ಸಿಡುಕುತೊಡಗಿದರು. ಆಕೆ ಸತತ 2 ಸಲ ಬಸುರಾದರೂ, ಗರ್ಭಪಾತ ಆಗಿಹೋಯ್ತು.

ಇದಾದ ಮೇಲೆ ಪತಿ ನೀರಜ್‌ ಸಹ ಮುಖ ಸಿಂಡರಿಸತೊಡಗಿದರು. ಪತಿಯ ನಿರ್ಲಕ್ಷ್ಯವನ್ನು ಸುನೀತಾ ಸಹಿಸದಾದರು. ಯಾರಾದರೂ ಅವಿವಾಹಿತ ತಾಯಿಯ ಅಥವಾ ಆಸ್ಪತ್ರೆಯ ಅನಾಥ ಮಗುವನ್ನು ಪಡೆಯೋಣವೆಂದು ಅಂದುಕೊಂಡರು. ಈ ವಿಷಯವನ್ನು ಗಂಡನಿಗೆ ಹೇಳಿದರು ಏನೂ ಲಾಭ ಆಗಲಿಲ್ಲ.

ಏನು ಮಾಡಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದೆಂದು ಸುನೀತಾರಿಗೆ ಅರ್ಥವಾಗಲಿಲ್ಲ. ಹೀಗಿರುವಾಗ ಯಾವುದಾದರೂ ಸಣ್ಣ ಮಗುವನ್ನು ಕದಿಯಬಾರದೇಕೆ ಎಂದುಕೊಂಡರು. ಹೀಗಾಗಿ ಆಕೆ ಜೈಪುರದ ಸಂಗಾನೇರಿ ಗೇಟ್‌ ಬಳಿಯ ಹೆರಿಗೆ ಆಸ್ಪತ್ರೆ ಬಳಿ ಸುಳಿದಾಡತೊಡಗಿದರು. ಒಂದು ದಿನ ಅಲ್ಲಿನ ಹೆರಿಗೆ ವಾರ್ಡ್‌ನಿಂದ ಮಗು ಕದಿಯುವುದರಲ್ಲಿ ಯಶಸ್ವಿಯಾದರು. ಆದರೆ ಹೊರಗೆ ಓಡಿ ಬರುವಷ್ಟರಲ್ಲಿ ಸೆಕ್ಯೂರಿಟಿ ಬಳಿ ಸಿಕ್ಕಿಬಿದ್ದರು.

ಸಾಮಾಜಿಕ ಮಾನ್ಯತೆಗಳ ದೋಷ

ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಮಗುವಾಗದ ಮಹಿಳೆಗೆ `ಬಂಜೆ’ ಎಂಬ ಪಟ್ಟ ಕಟ್ಟಿ ಬಹಳ ಕೀಳಾಗಿ ಕಾಣಲಾಗುತ್ತದೆ. ಆಕೆ ಶುಭ ಸಮಾರಂಭಗಳಲ್ಲಿ ಭಾಗವಹಿಸದಂತೆ ಅಶುಭ ಎನ್ನುತ್ತಾರೆ. ಇಂಥ ಸಂತಾನರಹಿತ ಹೆಂಗಸರು ಬದುಕಿರುವುದೇ ಬೇಡ ಎಂದು ಮಾಡಿಬಿಡುತ್ತಾರೆ, ಸಮಾಜದಲ್ಲಿ ನಾನಾ ಕಟಕಿಗಳು ಕೇಳಿಬರುತ್ತವೆ. ಮಗು ಇಲ್ಲದ ಕಾರಣ ಆಕೆ ಮದುವೆಯಾದದ್ದೇ ಮಹಾ ತಪ್ಪು ಎಂಬಂತೆ ದೂಷಿಸುತ್ತಾರೆ. ಹೀಗಾಗಿ ಇಂಥ ಮಹಿಳೆಯರು ಈ ಕಳಂಕ ತೊಡೆದುಹಾಕಲು ಏನಾದರೂ ಸರಿಯೇ ಮಾಡಿ ತೀರುತ್ತೇವೆ ಎಂಬ ಹಂತ ತಲುಪುತ್ತಾರೆ. ಹೀಗಾಗಿ ಯಾರಾದರೂ ಸಾಧು ಬಾಬಾಗಳ ನೆರವಾದರೂ ಪಡೋಣ ಎಂದು ಧಾವಿಸುತ್ತಾರೆ. ಹಾಗೆ ಅವರ ವಂಚನೆಯ ಜಾಲಕ್ಕೆ ಸಿಲುಕುತ್ತಾರೆ.

ಆಧುನಿಕ, ವೈಜ್ಞಾನಿಕ, ಇಂಟರ್‌ನೆಟ್‌ನ ಈ ಕಾಲದಲ್ಲೂ ಇಂಥ ಮೂಢನಂಬಿಕೆಯೇ? ಎಂಥ ವಿಧದ ಕಾಯಿಲೆಯಾದರೂ ವಾಸಿಯಾಗಬಲ್ಲ ಈ ಕಾಲದಲ್ಲಿ, ರೋಗಗಳೂ ಅದೇ ವೇಗದಲ್ಲಿ ಹೆಚ್ಚುತ್ತಲಿವೆ ಎಂಬುದು ನಿಜ. ಇಂದಿನ ಕಾಲದ ಒಂದು ದೊಡ್ಡ ಸಮಸ್ಯೆ ಎಂದರೆ ಸಂತಾನಹೀನತೆ. ಮಕ್ಕಳಿಲ್ಲದ ದಂಪತಿಗಳ ನೋವು, ಸಂಕಟ ದಿನೇದಿನೇ ಹೆಚ್ಚುತ್ತಿರುತ್ತದೆ. ಈ ದಂಪತಿ ಹತಾಶೆ, ನಿರಾಶೆಗಳಿಂದ ಕೈಚೆಲ್ಲಿ ಏನಾದರೂ ಪವಾಡ ನಡೆದು ಎಲ್ಲ ಸರಿಹೋಗಬಾರದೇ ಎಂದು ಬಯಸುತ್ತಾರೆ. ಸಮಾಜದ ಚುಚ್ಚುನುಡಿಗಳು ಅವರನ್ನು ಎಡವಟ್ಟಿನ ದಾರಿ ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ.

ಇದರಲ್ಲಿ ವಿದ್ಯಾವಂತರು, ಅವಿದ್ಯಾವಂತರು ಎಂಬ ಭೇದ ಇರುವುದಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಸುಶಿಕ್ಷಿತ, ಸಭ್ಯ, ಮಾಡರ್ನ್‌ ಜನ ಕೂಡ ಇಂಥ ಕಪಟಿ ಬಾಬಾಗಳ ಜಾಲಕ್ಕೆ ಸಿಲುಕುತ್ತಾರೆ. ಇವತ್ತಿಗೂ ನಮ್ಮ ದೇಶದಲ್ಲಿ ಮದುವೆಯ ಏಕೈಕ ಉದ್ದೇಶ ಮಕ್ಕಳನ್ನು ಪಡೆಯುವುದು ಎಂದೇ ಆಗಿದೆ. ಸಂತಾನವೆಂಬುದು ದಕ್ಕಲೇಬೇಕು, ಅದಕ್ಕಾಗಿ ಏನು ಮಾಡಲಿಕ್ಕೂ ಸಿದ್ಧ ಎಂಬಂತಾಗಿದೆ.

ಇದರ ಹಿಂದಿರುವ ಮಾನಸಿಕತೆ ಎಂದರೆ, ಮಗು ಹುಟ್ಟದಿದ್ದರೆ, ಮನೆತನದ ಗೌರವ ಏನಾದೀತು? ಆಸ್ತಿ ಮುಂದೆ ಯಾರ ಪಾಲಾದೀತು? ಮುದಿತನದಲ್ಲಿ ಸಹಾಯ ಮಾಡುವರಾರು? ಇತ್ಯಾದಿ. ಆದರೆ ಇಂದಿನ ಕಾಲದಲ್ಲಿ ಎಷ್ಟು ಜನ ಮಕ್ಕಳು ತಮ್ಮ ಮುದಿ ತಾಯಿತಂದೆಯರಿಗೆ ನಿಜಕ್ಕೂ ಆಸರೆಯಾಗಿದ್ದಾರೆ ಎಂಬ ಕಟುವಾಸ್ತವ ಮರೆಯುತ್ತಾರೆ. ಮಕ್ಕಳೇ ಶತ್ರುಗಳಾಗಿ ಜೀವನ ದುಸ್ತರ ಮಾಡಿಕೊಂಡವರೆಷ್ಟು ಮಂದಿ ಇಲ್ಲ? ಅವರೆಲ್ಲ ಬದುಕಿಲ್ಲವೇ….? ಇದೆಲ್ಲ ತರ್ಕವನ್ನು ಬದಿಗಿರಿಸಿ, ಸಮಾಜ ಮಕ್ಕಳಿಲ್ಲದ ಮಂದಿಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿರುತ್ತದೆ.

ಹೊಸದಾಗಿ ಮದುವೆಯಾದವರಿಗೆ 2-3 ವರ್ಷಗಳಾದರೂ ಮಗು ಆಗದಿದ್ದರೆ, ಅತ್ತೆ ಮನೆಯಲ್ಲಿನ ಹೆಂಗಸರೇ ಆ ಸೊಸೆ ವಿರುದ್ಧ ತಕರಾರು ಶುರು ಮಾಡುತ್ತಾರೆ. ಅಷ್ಟು ಮಾತ್ರವಲ್ಲ, ತವರಿಗೆ ಬಂದಾಗಲೂ ಆ ಹೆಣ್ಣಿಗೆ ನೆಮ್ಮದಿ ಇಲ್ಲದಂತೆ ಅಲ್ಲಿನ ಹೆಂಗಸರೂ ಏನಾದರೊಂದು ಕಟಕಿಯಾಡುತ್ತಾರೆ. ವಿಜ್ಞಾನ ಇಷ್ಟೆಲ್ಲ ಪ್ರಗತಿ ಸಾಧಿಸಿದ್ದರೂ ಈ ವಿಷಯದಲ್ಲಿ ಒಂದು ಇಂಚಿನಷ್ಟಾದರೂ ಈ ಮೂಢನಂಬಿಕೆ ಬದಲಾಗಬೇಡವೇ? ಇವತ್ತಿಗೂ ಸಹ ಮಗುವಾಗದೆ ಇದ್ದರೆ ಅದರ ಸಂಪೂರ್ಣ ತಪ್ಪನ್ನು ಹೆಣ್ಣಿನ ಮೇಲೆ ಹೊರಿಸಲಾಗುತ್ತದೆ. ಎಷ್ಟೋ ಸಲ ಗಂಡನಲ್ಲೇ ದೋಷ ಇರುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಹಿಂದಿನಿಂದಲೂ ನಡೆದು ಬಂದ ಪದ್ಧತಿ ಎಂದರೆ ಮದುವೆಯಾದ ತಕ್ಷಣ ಮಾಡ ಆಶೀರ್ವಾದ, ಮಕ್ಕಳಾಗಿ ಸುಖವಾಗಿರಿ ಎಂಬುದು. ಹೀಗಾಗಿ ಆ ಸೌಭಾಗ್ಯ ಪಡೆಯಲು ಈ ದಂಪತಿಗಳು ಏನು ಮಾಡಲಿಕ್ಕೂ ತಯಾರಾಗಿಬಿಡುತ್ತಾರೆ. ಯಾರು ಇಂಥದನ್ನು ವಿರೋಧಿಸಿ, ಮೂಢನಂಬಿಕೆಗೆ ಬಲಿಯಾಗುವುದಿಲ್ಲವೇ, ಸಮಾಜ ಅವರನ್ನು ಇನ್ನಷ್ಟು ತುಳಿದುಹಾಕುತ್ತದೆ. ಅವರಿಗೆ ಮಕ್ಕಳ ವ್ಯಾಮೋಹವೇ ಇಲ್ಲ ಎಂದು ಹಂಗಿಸುತ್ತಾರೆ.

ಇದನ್ನು ಚೆನ್ನಾಗಿ ಗಮನಿಸಿಕೊಂಡಿರುವ ಸಾಧು ಬಾಬಾಗಳು ಮುಗ್ಧ ಜನರ ಈ ದೌರ್ಬಲ್ಯದ ದುರ್ಲಾಭ ಪಡೆಯುತ್ತಾರೆ. ಕೆಲವು ದಂಪತಿಯರನ್ನು ಪೂರ್ವಜರ ಹೆಸರು ಹೇಳಿ ಅವರಿಗೆ ಮುಂದೆ ಮೋಕ್ಷ ಸಿಗುವುದಿಲ್ಲ ಎಂದು ಭಯಪಡಿಸಿದರೆ, ಉಳಿದವರನ್ನು ಅವರು ತಮ್ಮ ಬಳಿ ಇರುವ ಎಲ್ಲವನ್ನೂ ದಾನ ಮಾಡಬೇಕೆಂದು ಒತ್ತಾಯಿಸುತ್ತಾರೆ. ಅಷ್ಟು ಮಾತ್ರವಲ್ಲ, ಕೆಲವು ಸಾಧು ಸಂತರು ಸಂತಾನಭಾಗ್ಯ ಕರುಣಿಸುವ ನೆಪದಲ್ಲಿ ಹೆಣ್ಣಿನ ದೇಹಸುಖ ಪಡೆದು ತಮ್ಮ ಆಸೆ ತೀರಿಸಿಕೊಳ್ಳುತ್ತಾರೆ.

ಕೇವಲ ಅಶಿಕ್ಷಿತ, ಅನಕ್ಷರಸ್ಥ ಹಳ್ಳಿಗಾಡಿನ ಜನ ಮಾತ್ರ ಇಂಥಕ್ಕೆ ಬಲಿಯಾಗುತ್ತಾರೆ ಎಂದೇನಲ್ಲ. ಎಷ್ಟೋ ಸುಶಿಕ್ಷಿತ ಜನರ ಮನದಲ್ಲೂ ಇಲ್ಲದ ಆಸೆ ಹುಟ್ಟಿಸಿ, ಅವರನ್ನು ಚೆನ್ನಾಗಿ ಕೊಳ್ಳೆ ಹೊಡೆಯುತ್ತಾರೆ. ಸಾಧು ಬಾಬಾಗಳು ಮೊದಲು ಈ ಮುಗ್ಧ, ಅಮಾಯಕ ಜನರ ಸೈಕಾಲಜಿಯ ಕುರಿತು ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ನಂತರ ಅದಕ್ಕೆ ತಕ್ಕ ಹಾಗೆ ಅವರ ಮನದಲ್ಲಿ ಭಯ ಹುಟ್ಟಿಸುತ್ತಾರೆ. ಎಲ್ಲ ಸುಸೂತ್ರವಾಗಿ ಆಗಿಬಿಡುತ್ತದೆ ಎಂದು ಢೋಂಗಿ ಭರವಸೆ ತುಂಬುತ್ತಾರೆ. ಹೇಗಾದರೂ ಸರಿ, ತಮ್ಮ ಬಳಿ ಸಲಹೆಗೆ ಬಂದವರನ್ನು ತಮ್ಮ ಹಿಂಬಾಲಕರಾಗಿ ಬದಲಾಗುವಂತೆ ಮಾಡಿಬಿಡುತ್ತಾರೆ.

ಹೀಗೆ ಹಲವು ವರ್ಷ ಈ ಸಾಧು ಬಾಬಾಗಳ ಆಶ್ರಮದ ಬಳಿ ಗಿರಕಿ ಹೊಡೆದು, ತಮ್ಮ ಪರಿಶ್ರಮದ ಆದಾಯವನ್ನೆಲ್ಲ ಅವರ ಬಾಯಿಗೆ ಸುರಿದು ಎಲ್ಲಾ ಲೂಟಿಯಾಗಿ, ಮುಂದೂ ಮಕ್ಕಳಾಗದು ಎಂದು ಅರಿವಾದಾಗ, ತಲೆ ಚೆಚ್ಚಿಕೊಳ್ಳುತ್ತಾರೆ. ಇಂಥ ಢೋಂಗಿ ಬಾಬಾಗಳಿಗೆ ಹಿಡಿಶಾಪ ಹಾಕುವುದನ್ನು ಬಿಟ್ಟು ಅವರು ಬೇರೇನೂ ಮಾಡಲಾಗದು.

ಹೀಗೆ ಹೆಚ್ಚುತ್ತದೆ ಒತ್ತಡ

ಈ ರೀತಿ ಎಲ್ಲಾ ಕಡೆಯಿಂದಲೂ ನಿರಾಸೆ ದಟ್ಟಾದಾಗ, ಇಂಥ ಜನ ತಮ್ಮ ಅದೃಷ್ಟ ಹಣೆಬರಹಗಳನ್ನು ನಿಂದಿಸತೊಡಗುತ್ತಾರೆ. ತಮಗೆ ಜೀವನದಲ್ಲಿ ಇನ್ನೇನೂ ಉಳಿದಿಲ್ಲ ಅಂದುಕೊಳ್ಳುತ್ತಾರೆ. ಅವರಿಗೆ ಈ ಸಮಾಜದಿಂದ ದೂರ ಉಳಿಯಬೇಕು ಎನಿಸುತ್ತದೆ. ಅಂಥವರು ಎಲ್ಲಿಗೇ ಹೋಗಲಿ ಅಲ್ಲಿ, `ಯಾವಾಗ ಗುಡ್‌ ನ್ಯೂಸ್‌ ಕೊಡ್ತೀರಿ?’ ಅಥವಾ `ಇಂಥ ಡಾಕ್ಟರ್‌ ಬಳಿ ಹೋಗಿ ನಿಮಗೆ ಬೇಗ ಮಗು ಆಗುತ್ತೆ,’ ಇತ್ಯಾದಿ ಪುಕ್ಕಟೆ ಸಲಹೆ ಕೊಡುತ್ತಿರುತ್ತಾರೆ. ಇದರಿಂದ ಮಗು ಪಡೆಯುವ ಅವರಾಸೆ ಇನ್ನೂ ಪ್ರಬಲವಾಗುತ್ತದೆ. ಅಕಸ್ಮಾತ್‌ ಇರು ಯಾವುದೇ ಬರ್ತ್‌ಡೇ ಪಾರ್ಟಿ ಅಥವಾ ಸೀಮಂತದಂಥ ಶುಭ ಸಮಾರಂಭಕ್ಕೆ ಹೋದರೆ, ಅಲ್ಲಿನ ಜನರ ಕೃತಕ ಸಹಾನುಭೂತಿ ಇವರ ಕಡೆ ಧಾರಾಳವಾಗಿರುತ್ತದೆ. ಇವರನ್ನು ನೋಡಿ ನೋಡಿ ತಮ್ಮ ತಮ್ಮಲ್ಲೇ ಗುಸುಗುಸು ಪಿಸಪಿಸ ಮಾತನಾಡುತ್ತಾರೆ. ಕೆಲವರಂತೂ ಎಂಥ ಕೂಪ ಮಂಡೂಕಗಳಾಗಿ ಇರುತ್ತಾರೆಂದರೆ ಇಂಥವರು ಶುಭ ಸಮಾರಂಭಕ್ಕೆ ಬರಲೇಬಾರದು, ಬಂಜೆಯ ಕೈಲಿ ಉಡಿ ತುಂಬಿಸಬಾರದು, ಆಕೆ ಮಗುವನ್ನು ಎತ್ತಿಕೊಳ್ಳಬಾರದು, ದಾನದಕ್ಷಿಣೆ ನೀಡುವಂತಿಲ್ಲ ಇತ್ಯಾದಿ ಹೇಳುತ್ತಾರೆ. ಜನರ ಈ ನಿಂದನೆ ತಾಳಲಾರದೆ ಇಂಥವರು ಹೊರಗೆ ಬರುವುದೇ ಇಲ್ಲ.

ಮಗುವಿನ ಹಂಬಲದಿಂದ ಇರುವ ತಮ್ಮ ಒಡಹುಟ್ಟಿದವರ ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಾರೆ, ಆದರೆ ಸಮಾಜ ಅದನ್ನೂ ಆಡಿಕೊಳ್ಳುತ್ತದೆ. ನೆಂಟರ ಜೊತೆ ಇವರ ಸಂಬಂಧ ತುಸು ಏರುಪೇರಾದರೆ ತಕ್ಷಣ, ಅವರ ಮಕ್ಕಳನ್ನು ಇವರ ಬಳಿ ಸುಳಿಯದಂತೆ ತಡೆಯೊಡ್ಡುತ್ತಾರೆ ಅಥವಾ ಚುಚ್ಚು ಮಾತುಗಳಿಂದ ಎತ್ತಿಕೊಂಡ ಮಗುವನ್ನು ಕೆಳಗಿಳಿಸುವಂತೆ ಮಾಡುತ್ತಾರೆ.

ಹೀಗೆ ಎಲ್ಲೆಲ್ಲೂ ಅಪಸ್ವರಗಳೇ ಕೇಳಿಬರುವಾಗ, ಈ ದಂಪತಿಗಳು ಪರಸ್ಪರರಲ್ಲಿ ದೋಷ ಹುಡುಕುತ್ತಾ ಎಲ್ಲಾ ವಿಷಯಗಳಿಗೂ ಜಗಳವಾಡುತ್ತಾರೆ. ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ ಸಂಬಂಧ ಕೆಡಿಸಿಕೊಳ್ಳುತ್ತಾರೆ.

ಧರ್ಮಶಾಸ್ತ್ರಗಳ ಹಿಂಸಾಕಾಂಡ

ಹಿಂದಿನಿಂದ ಚಾಲ್ತಿಯಲ್ಲಿರುವ ನಮ್ಮ ಧರ್ಮಶಾಸ್ತ್ರಗಳಲ್ಲಿ ಹೆಣ್ಣನ್ನು ಕೇವಲ ಸಂತಾನೋತ್ಪತ್ತಿಯ ಸಾಧನ, ಗಂಡಸಿನ ಕಾಮ ತೃಪ್ತಿಗಿರುವ ಮಾಧ್ಯಮ ಎಂದು ಹೇಳಿದೆಯೇ ಹೊರತು ಇನ್ನೇನಲ್ಲ. ಧರ್ಮ ಎಂದೂ ಹೆಣ್ಣಿನ ಪರ ನಿಂತಿಲ್ಲ. ಧರ್ಮ ಹೆಣ್ಣನ್ನು ಭೋಗ ಲಾಲಸೆಯ ವಸ್ತುವೆಂದೇ ಪರಿಗಣಿಸಿದೆ. ನಮ್ಮ ಧರ್ಮಗ್ರಂಥಗಳಲ್ಲಿ ಇದರ ಬೀಭತ್ಸ ಉದಾಹರಣೆಗಳಿವೆ.

ಮಹಾಭಾರತದ ಆದಿ ಪರ್ವದ ಅಧ್ಯಾಯವೊಂದರಲ್ಲಿ ಪಾಂಡುರಾಜ ತನ್ನ ಪತ್ನಿ ಕುಂತಿಗೆ, ವಿವಾಹ ಪದ್ಧತಿ ಜನ್ಮ ತಳೆದ ಕುರಿತು ವಿವರಿಸುತ್ತಾ ಹೇಳಿರುವ ಕಥೆಯ ಪ್ರಕಾರ, ಉದ್ದಾಲಕನೆಂಬ ಮುನಿಯ ಸತಿಯನ್ನು ಅವನು ಮತ್ತು ಮಗನ ಕಣ್ಣೆದುರೇ ದುಷ್ಟ ರಾಜನೊಬ್ಬ ಎಳೆದುಕೊಂಡು ಹೋದಾಗ, ಉದ್ದಾಲಕನ ವಯಸ್ಕ ಮಗ ಶ್ವೇತಕೇತು, ತನ್ನ ಕಂಗಳ ಎದುರಲ್ಲಿ ತಾಯಿಗಾದ ಅನ್ಯಾಯ ಸಹಿಸಲಾರದೆ ಪ್ರತಿಭಟಿಸಿದಾಗ, ಉದ್ದಾಲಕನು, “ಬಿಡು ಮಗ, ಇದು ಸನಾತನವಾಗಿದೆ. ಇದಕ್ಕಾಗಿ ಸಿಟ್ಟಾಗಬೇಡ,” ಎಂದು ಸಮಾಧಾನಪಡಿಸುತ್ತಾನೆ.

ಶ್ವೇತ ಕೇತು ಈ ಘಟನೆಯಿಂದ ಬಹಳ ಉದ್ವಿಗ್ನಗೊಂಡು, ಸನಾತನ ಧರ್ಮವನ್ನು ಟೀಕಿಸಿ, ತಂದೆಯ ಮಾತು ಧಿಕ್ಕರಿಸಿ, ಸ್ತ್ರೀ ಸಮಾಜದ ಸಂರಕ್ಷಣೆಗಾಗಿ ಹಲವು ವ್ಯವಸ್ಥೆಗಳನ್ನು ಮಾಡಿದ. ಅದರಲ್ಲಿ ಬೇಕೆಂದೇ ಒಂದು ಕಟ್ಟುಪಾಡು ಸೇರಿಸಿದ. ಪುತ್ರಾಕಾಂಕ್ಷಿ ಪತಿಗಾಗಿ, ಅವನು ಹೇಳಿದಂತೆ ನಿಯೋಗಕ್ಕೆ ಒಪ್ಪಿ ಪರಪುರುಷನನ್ನು ಕೂಡದ ಸತಿ, ಅವನ ಆಜ್ಞೆ ಧಿಕ್ಕರಿಸಿದ್ದೇ ಆದರೆ, ಅವಳಿಗೆ ಭ್ರೂಣ ಹತ್ಯಾ ದೋಷದ ಪಾಪ ಬರುತ್ತದೆಂದು ಸೂಚಿಸಿದ್ದ.

ಈ ವ್ಯವಸ್ಥೆಯ ಹೆಸರಲ್ಲಿ ಅಂದಿನ ರಾಜರು, ಶ್ರೀಮಂತರು ಇದನ್ನು ಒಂದು ದಂಧೆಯಾಗಿಸಿಕೊಂಡರು. ಪುತ್ರಾಕಾಂಕ್ಷಿಗಳಾಗಿ ಅಂಥವರು ಪತ್ನಿಯನ್ನು ಯಾವ ಪರಪುರುಷನ ಬಳಿ ಕಳುಹಿಸಿದರೂ ಅವಳು ಅದನ್ನು ಒಪ್ಪಲೇಬೇಕಿತ್ತು. ಈ ಪದ್ಧತಿಯೇ ನಿಯೋಗ. ಈ ನಿಯೋಗದಿಂದ ಅನೇಕ ಪ್ರಸಿದ್ಧರು ಹುಟ್ಟಿದರೆಂಬ ಆಧಾರ ಸಿಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ಪ್ರತಿ ಯುಗದಲ್ಲೂ ಹೆಣ್ಣಿನ ಮೇಲೆ ನಡೆಯುವ ಶೋಷಣೆ ನಿರಂತರ.

ಜೈಪುರದಲ್ಲಿ ಇತ್ತೀಚೆಗೆ ನಡೆದ ಒಂದು ಅಂತಾರಾಷ್ಟ್ರೀಯ ಸೆಮಿನಾರ್‌ನಲ್ಲಿ ದೇಶ ವಿದೇಶಗಳಿಂದ ಬಂದಿದ್ದ ವಿಶೇಷಜ್ಞರು, ಕಳೆದ ಕೆಲವು ವರ್ಷಗಳಿಂದ ಗಂಡಸರಲ್ಲಿ ನಪುಂಸಕತೆ ಹೆಚ್ಚುತ್ತಲೇ ಇದೆ ಎಂಬ ಮಾತನ್ನು ಒತ್ತಿ ಹೇಳಿದರು.

ಸೆಮಿನಾರ್‌ಗೆ ಬಂದಿದ್ದ ಚೆನ್ನೈನ ಪ್ರಶಾಂತ್‌ ಹಾಸ್ಪಿಟಲ್ಸ್ನ ಇನ್‌ಫರ್ಟಿಲಿಟಿ ತಜ್ಞೆ ಡಾ. ಗೀತಾ ಹರಿಪ್ರಿಯಾ ಹೇಳುತ್ತಾರೆ, ಕಳೆದ 10 ವರ್ಷಗಳಲ್ಲಿ ಗಂಡಸರ ಸಂತಾನೋತ್ಪತ್ತಿಯ ಶಕ್ತಿ ಭಾರಿ ಕುಸಿದಿದೆ. ಹಿಂದೆಲ್ಲ ಸಂತಾನ ಪ್ರಾಪ್ತಿಗಾಗಿ ಆಸ್ಪತ್ರೆಗೆ ಬರುತ್ತಿದ್ದ ದಂಪತಿಗಳಲ್ಲಿ ಶೇ.60 ರಷ್ಟು ಮಹಿಳೆಯರು ಗರ್ಭ ಧರಿಸಲಾಗದೆ ತೊಡಕಿನ ಸ್ಥಿತಿಯಲ್ಲಿದ್ದರು. ಈಗ ಪರಿಸ್ಥಿತಿ ಬದಲಾಗಿ ಅದೇ ಪ್ರಮಾಣದಲ್ಲಿ ಗಂಡಸರು ಮಗು ಕೊಡಲಾಗದ ಸ್ಥಿತಿಯಲ್ಲಿದ್ದಾರೆ.

ಅಹಮದಾಬಾದ್‌ನ ನಾಗೋರಿ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫರ್ಟಿಲಿಟಿಯ ಡಾ. ಚೈತನ್ಯ ನಾಗೋರಿ ಹೇಳುತ್ತಾರೆ, ಹಿಂದೆಲ್ಲ ಹೆಣ್ಣು ಗರ್ಭವತಿ ಆಗದಿದ್ದರೆ ಆ ಮನೆಯವರು ಕೇವಲ ಆಕೆಯ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಜೊತೆಗೆ ಬಗೆಬಗೆಯ ಪೂಜೆ ಪುನಸ್ಕಾರ, ವ್ರತ ನೇಮ ಮಾಡಿಸುತ್ತಿದ್ದರು. ಜೊತೆಗೆ ಆ ಹೆಣ್ಣನ್ನು ಬಹಳ ನಿಂದಿಸುತ್ತಿದ್ದರು.

ಪರೀಕೆಯ ನಂತರ ಆಕೆಯಲ್ಲೇನೂ ಕೊರತೆ ಇಲ್ಲ ಎಂದು ದೃಢಪಟ್ಟ ನಂತರ ಅವಳ ಗಂಡನನ್ನು ಪರೀಕ್ಷೆಗೂ ಕಳಿಸುತ್ತಿರಲಿಲ್ಲ, ಅವನಲ್ಲಿ ಇರಬಹುದಾದ ದೋಷವನ್ನು ಒಪ್ಪುತ್ತಿರಲಿಲ್ಲ. ಆದರೆ ಕ್ರಮೇಣ ಜನರಲ್ಲಿ ಜಾಗೃತಿ ಮೂಡುತ್ತಿದೆ, ಇಬ್ಬರೂ ಕೂಡಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ. ನಾಗೋರಿ ಪ್ರಕಾರ, ಗಂಡಸರಲ್ಲಿ ತಗ್ಗುತ್ತಿರುವ ಸಂತಾನೋತ್ಪತ್ತಿಯ ಶಕ್ತಿಗೆ ಕಾರಣ ಎಂದರೆ ಹೆಚ್ಚು ಹೆಚ್ಚು ಕಾಫಿ ಟೀ ಸೇವನೆ, ಹೆಂಡ, ತಂಬಾಕು, ಸಿಗರೇಟ್‌, ಮಾನಸಿಕ ಒತ್ತಡ ಜೊತೆಗೆ ಆನುವಂಶಿಕತೆಯೂ ಆಗಿರಬಹುದು. ಇತ್ತೀಚೆಗೆ ಅನೈತಿಕ ಸಂಬಂಧಗಳನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆಗಳಿವೆ. ಈ ಕೊರತೆ ಕೇವಲ ನಗರದ ಕಡೆ ಮಾತ್ರವಲ್ಲದೆ, ಹಳ್ಳಿ ಹೋಬಳಿಗಳಲ್ಲೂ ಇದು ಮಾಮೂಲಿ ಆಗಿಬಿಟ್ಟಿದೆ. ಬಡ ಬಲ್ಲಿದರ ಭೇದವಿಲ್ಲದೆ ಎಲ್ಲೆಡೆಯೂ ಇದು ವ್ಯಾಪಿಸಿದೆ.

ದೆಹಲಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಇನ್‌ಫರ್ಟಿಲಿಟಿ,  ತಜ್ಞೆ ಡಾ. ಆಂಚ್‌ ಅಗರ್ವಾಲ್ ‌ಹೇಳುತ್ತಾರೆ, ವಿಧಾನ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಾ, ದೂರ ದೂರದ ಹಳ್ಳಿಗಳಿಂದಲೂ ಜನ ಬಂದು ಇದರ ಲಾಭ ಪಡೆಯುತ್ತಿದ್ದಾರೆ. ಹೆಣ್ಣಿನ ಕಾರಣದಿಂದಲ್ಲದೆ, ಗಂಡಿನಲ್ಲಿನ ದೋಷದಿಂದ ಸಂತಾನಪ್ರಾಪ್ತಿ ಆಗುತ್ತಿಲ್ಲ ಎಂಬ ವಾಸ್ತವಾಂಶ ಎಲ್ಲರಿಗೂ ಅರಿವಾಗುತ್ತಿದೆ. ಹೀಗಾಗಿ ಈ ವಿಷಯದಲ್ಲಿ ಜನ ಹೆಚ್ಚು ಜಾಗೃತರಾಗುತ್ತಿದ್ದಾರೆ.

ಸಾಮಾನ್ಯವಾಗಿ ಇಂಥ ಆಸ್ಪತ್ರೆಗಳಿಗೆ ಬರುವವರ ವಯಸ್ಸು 35-40 ಆಗಿರುತ್ತದೆ. ಚಿಕಿತ್ಸೆಗಾಗಿ ಅವರು ಇತರರ ವೀರ್ಯಾಣು, ಅಂಡಾಣು ಸ್ವೀಕರಿಸಲು ಒಪ್ಪುವುದಿಲ್ಲ. ಆಗ ಅನಿವಾರ್ಯವಾಗಿ ತಾಂತ್ರಿಕ ವಿಧಾನಗಳಿಂದ ಇದೇ ರೋಗಿಗಳ ಅಂಡಾಣು, ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಿ ಅದರಿಂದಲೇ ಮಗು ಪಡೆಯುವಂತೆ ಮಾಡಲಾಗುತ್ತದೆ. ಇದು ಯಶಸ್ವಿಯಾಗಲು ಬಹಳ ಸಮಯ ಬೇಕಾಗುತ್ತದೆ.

ಬಂಜೆತನಕ್ಕೆ ಚಿಕಿತ್ಸೆ

ಸಂತಾನಹೀನ ದಂಪತಿ ದುಷ್ಟ ಸಾಧು ಬಾಬಾಗಳ ಜಾಲಕ್ಕೆ ಸಿಲುಕುವ ಬದಲು, ಉತ್ತಮ ಇನ್‌ಫರ್ಟಿಲಿಟಿ ತಜ್ಞರನ್ನು ಭೇಟಿಯಾಗುವುದರಿಂದ, ಸಂತಾನ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಾಧುಗಳ ಆಶ್ರಮದ ಅಲೆದಾಟ, ಹವನ ಹೋಮ, ದಾನ ದಕ್ಷಿಣೆ ಖರ್ಚಿನಲ್ಲಿ 10% ವೈದ್ಯರ ಬಳಿ ಖರ್ಚು ಮಾಡಿದರೂ ಅವರಾಸೆ ಖಂಡಿತಾ ನೆರವೇರುತ್ತದೆ, ಮನಶ್ಶಾಂತಿ ದಕ್ಕುತ್ತದೆ.

ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುವ ಹೆಂಗಸರಿಗೆ ಹಿಸ್ಟೆರೋಸ್ಕೋಪಿ ದೊಡ್ಡ ವರದಾನವೇ ಸರಿ. ಈ ವಿಧಾನ ಮುಟ್ಟಿನಲ್ಲಿ ಹೆಚ್ಚು ರಕ್ತಸ್ರಾವ ಆಗುವ ಹೆಂಗಸರಿಗೂ ಎಷ್ಟೋ ನೆರವಾಗುತ್ತದೆ. ಹಿಸ್ಟೆರೋಸ್ಕೋಪಿಯಿಂದ ಹೆಣ್ಣಿನ ಗರ್ಭಕೋಶಕ್ಕೆ ಟ್ಯೂಬ್ ಅಳವಡಿಸಿ, ಕಂಪ್ಯೂಟರ್‌ ಕನೆಕ್ಷನ್‌ ನೀಡಿ, ಮಾನಿಟರ್‌ ನೋಡುತ್ತಾ ಚಿಕಿತ್ಸೆ ನಡೆಸುತ್ತಾರೆ. ಗರ್ಭಾಶಯದ ಕೊರಳು ತೆರೆದಿದ್ದರೆ, ಮಧ್ಯೆ ಫೈಬ್ರಾಯಿಡ್‌ಗಳ ತೊಂದರೆ ಇದೆಯೇ, ಗರ್ಭಚೀಲದ ಒಳಭಾಗ ಸರಿಯಾಗಿ ಬೆಸೆದಿದೆಯೇ ಇತ್ಯಾದಿ ಎಲ್ಲ ವೈದ್ಯರ ಚಿಕಿತ್ಸೆಗೆ ಹೆಚ್ಚು ಅನುಕೂಲಕರ ಎನಿಸುತ್ತದೆ.

ಜೈಪುರದ ಹೆರಿಗೆ ಆಸ್ಪತ್ರೆಯ ಡಾ. ವಿಮಲಾ ಜೈನ್‌ ಪ್ರಕಾರ, ಯಾರಿಗೆ ಮುಟ್ಟಿನಲ್ಲಿ ಹೆಚ್ಚಿನ ರಕ್ತಸ್ರಾವ ಆಗುತ್ತದೋ, ಅವರನ್ನು ಈ ಹಿಸ್ಟೆರೋಸ್ಕೋಪಿ ವಿಧಾನದಿಂದ ಸರಿಪಡಿಸಬಹುದು. ಮಗುವಾಗದ ಹೆಂಗಸಿಗೂ ಸಹ ಈ ವಿಧಾನದಿಂದ ಚಿಕಿತ್ಸೆ ನೀಡಬಹುದು. ಎಷ್ಟೋ ಹೆಂಗಸರಿಗೆ ಹುಟ್ಟಿನಿಂದಲೇ ಗರ್ಭಾಶಯದ ಕೊರಳು ಮುಚ್ಚಿಹೋಗಿರುತ್ತದೆ. ಇದುವೇ `ಕಾರ್ನುಯಲ್ ಬ್ಲಾಕ್‌’ ಸ್ಥಿತಿ. ಹಿಸ್ಟೆರೋಸ್ಕೋಪಿಯಿಂದ ಇದರ ನಿವಾರಣೆ ಸಾಧ್ಯ.

ಮಗು ಆಗಲಿಲ್ಲ ಎಂಬ ಕಾರಣಕ್ಕೆ ಎಷ್ಟೋ ಹೆಂಗಸರು ಮಾಟಮಂತ್ರ, ಚಿತ್ರವಿಚಿತ್ರ ಅಮಾವಾಸ್ಯೆ ಪೂಜೆಗಳು, ತಾಯಿತ ಯಂತ್ರಗಳ ಮೊರೆಹೋಗುತ್ತಾರೆ. ಇಂಥ ಚಿಕಿತ್ಸೆಗಳಿಗೆ ಅವರ ಕುಟುಂಬದವರೇ ಸಾಧು ಬಾಬಾಗಳ ಬಳಿ ಕರೆದೊಯ್ಯುತ್ತಾರೆ. ಅಲ್ಲಿ ಲಕ್ಷಾಂತರ ರೂ.ಗಳನ್ನು ನೀರಿನಂತೆ ಚೆಲ್ಲಾಡಿದರೂ ಫಲ ಮಾತ್ರ ದೊರಕದು. ದೇಹದ ಒಳಗಿನ ದೋಷವನ್ನು ಮಂತ್ರ, ಹೊಗೆ ಹಾಕಿ ಹೊರಗಿನಿಂದ ಸರಿಪಡಿಸುತ್ತೇವೆ ಎಂಬುದು ಮೂಢನಂಬಿಕೆಯ ಪರಮಾವಧಿ ಎನ್ನಲೇಬೇಕಾಗುತ್ತದೆ.

ರಾಜಸ್ಥಾನದ ಅಜ್ಮೀರ್‌ ಜಿಲ್ಲೆಯ ಕೇಕಡಿ ತಾಲ್ಲೂಕಿನ ರಾಜೇಶ್‌ ಕುಮಾರ್‌ ಹೇಳುತ್ತಾರೆ, ಮದುವೆಯಾಗಿ 6 ವರ್ಷಗಳಾದರೂ ಅವರಿಗೆ ಮಕ್ಕಳಾಗಲಿಲ್ಲವಂತೆ. ಆಗ ಇವರನ್ನು ಬಾಬಾ ಬಳಿ ಕರೆದೊಯ್ಯಲಾಯಿತು. 2006-12ರವರೆಗೆ ಸಾಧು ಬಾಬಾಗಳ ಆಶ್ರಮಕ್ಕೆ ಅಲೆದಾಡಿದ್ದೇ ಬಂತು, ಒಟ್ಟು 2 ಲಕ್ಷ ರೂ. ಖರ್ಚಾಯಿತು. ಆದರೆ ಲಾಭ ಮಾತ್ರ ಏನೂ ಇಲ್ಲ.

ಆಗ ಜೈಪುರದ ಗೆಳೆಯನೊಬ್ಬ, ಉತ್ತಮ ತಜ್ಞರ ಬಳಿಹೋಗಲು ಸೂಚಿಸಿದ. ಆಗ ಅವರು ಜೈಪುರದ `ಸ್ಪರ್ಶ್‌’ ಆಸ್ಪತ್ರೆಯ ಡಾ. ಜಾಹ್ನವಿ ಶರ್ಮ ಬಳಿ ಬಂದರು. ಡಾಕ್ಟರ್‌ ರಾಜೇಶ್‌ ಪತ್ನಿಯ ಪರೀಕ್ಷೆ ನಡೆಸಿ, ನೀಡಿದ ಹಿಸ್ಟೆರೋಸ್ಕೋಪಿ ಚಿಕಿತ್ಸೆಯಿಂದ ಅಂಟಿದ್ದ ಗರ್ಭಾಶಯದ ಒಳಪದರ ತೆರೆದು, ಗರ್ಭ ನಿಲ್ಲಲು ಅವಕಾಶವಾಯಿತು. ಈಗವರು ಮಗು ಜೊತೆ ಆನಂದವಾಗಿದ್ದಾರೆ.

ಡಾ. ಜಾಹ್ನವಿ ವಿವರಿಸುತ್ತಾರೆ, ಈ ವಿಧಾನದಿಂದ ಗರ್ಭಾಶಯ ಪರೀಕ್ಷಿಸಿ, ಯಾವುದೇ ಕತ್ತರಿ ಇಲ್ಲದೆ, ಗರ್ಭಾಶಯಕ್ಕೆ ನಳಿಕೆ ತೂರಿಸಿ, ಮಾನಿಟರ್‌ ಪರೀಕ್ಷಿಸುತ್ತಾ ನಂತರ ಸರ್ಜರಿ ನಡೆಸಬಹುದು. ಇದು 7-8 ನಿಮಿಷಗಳ ಸಣ್ಣ ಸರ್ಜರಿಯಷ್ಟೆ. ಅದಾದ 3-4 ಗಂಟೆಗಳಲ್ಲೇ ರೋಗಿ ಆಹಾರ ಸೇವಿಸಬಹುದು. ಯಾರಿಗೆ ಗಂಭೀರ ಪ್ರಮಾಣದ ತೊಂದರೆ ಇದೋ ಅವರಿಗೆ ದೀರ್ಘಾವಧಿಯ ಸರ್ಜರಿ ನಡೆಸುತ್ತಾರೆ.

ಒಟ್ಟಾರೆ ಹೇಳಬೇಕೆಂದರೆ, ಯಾವ ಹೆಣ್ಣಿಗಾದರೂ ಮಗು ಆಗಿಲ್ಲವೆಂದರೆ, ಕಂಡ ಕಂಡ ಸಾಧು ಬಾಬಾ, ಮಾಂತ್ರಿಕರ ಮೋಡಿಯ ಮಾತಿಗೆ ಮರುಳಾಗಿ ಅವರ ದುಷ್ಟ ಜಾಲಕ್ಕೆ ಸಿಲುಕದಿರಿ. ಉತ್ತಮ ತಜ್ಞರ ಸಲಹೆ ಪಡೆಯಿರಿ. ಇದರಿಂದ ಸಂತಾನಹೀನ ದಂಪತಿಗಳ ಪರಿಶ್ರಮದ ಹಣ ವ್ಯರ್ಥ ಆಗುವುದು ತಪ್ಪುತ್ತದೆ, ಮನೆಯಂಗಳದಿ ಮಗುವಿನ ಕಿಲಕಿಲ ನಗು ತುಂಬುತ್ತದೆ.

ಕೆ. ಮದನ್ಕುಮಾರ್

ಸಂತಾನ ಹೀನತೆಗೆ ಮುಖ್ಯ ಕಾರಣ ಗಂಡಸು

ಭಾರತೀಯ ಸಮಾಜದ ಅಜ್ಞಾನ ಹಾಗೂ ಪುರುಷ ಕಾಳಜಿಯ ಪಕ್ಷಪಾತ ಬುದ್ಧಿಯಿಂದ, ಸಂತಾನಹೀನತೆಗೆ ಸಾಮಾನ್ಯವಾಗಿ ಮಹಿಳೆಯನ್ನೇ ದೋಷಿ ಮಾಡಲಾಗುತ್ತದೆ. ಆದರೆ ಇದು ಕೇವಲ ನಾಣ್ಯದ ಒಂದು ಮುಖ ಮಾತ್ರ. ಇನ್‌ಫರ್ಟಿಲಿಟಿ ತಜ್ಞರ ಪ್ರಕಾರ, ದೊಡ್ಡ ಸತ್ಯದ ವಿಚಾರವೆಂದರೆ, ಹೆಣ್ಣು ಗರ್ಭವತಿ ಆಗದೆ ಇರಲು ಕಾರಣ, ಶೇ.60ರಷ್ಟು ಗಂಡಸಿನಲ್ಲಿನ ಸಂತಾನೋತ್ಪತ್ತಿಯ ಶಕ್ತಿಯ ಕೊರತೆ ಆಗಿರುತ್ತದೆ.

ಮಹಿಳೆಯ ಹಾಗೂ ಪುರುಷರ ಸಂತಾನೋತ್ಪತ್ತಿ ಶಕ್ತಿಯ ಕುರಿತು ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ತಜ್ಞರ ಪ್ರಕಾರ, ಹೆಣ್ಣು ಗರ್ಭವತಿ ಆಗದಿರಲು ಶೇ.60 ರಷ್ಟು ಕಾರಣ ಗಂಡಸರ ವೀರ್ಯಾಣುವಿನಲ್ಲಿ ಸೀರಮ್ ನ ಕೊರತೆಯಾಗಿದೆ. ಇಂದಿಗೆ 15 ವರ್ಷ ಹಿಂದೆ ಹೋಲಿಸಿದರೆ ಇದರ ಅನುಪಾತ 60:40 ಆಗಿರುತ್ತಿತ್ತು. ಕಳೆದ 10 ವರ್ಷಗಳಿಂದಂತೂ 40:60 ಆಗಿಹೋಗಿದೆ.

ಈ ಬದಲಾವಣೆಗೆ ಮೂಲಕಾರಣವೆಂದರೆ ಬದಲಾಗಿರುವ ಋತುಮಾನ, ಬದಲಾದ ಜೀವನಶೈಲಿ, ಪೌಷ್ಟಿಕ ಆಹಾರದ ಕೊರತೆ, ಮಾದಕ ವಸ್ತುಗಳ ಸೇವನೆ, ಒಂದೇ ಸಮ ಏರು ಮಾನಸಿಕ ಒತ್ತಡ, ಆಹಾರ ಪದಾರ್ಥಗಳಲ್ಲಿ ಬೆರೆತುಕೊಳ್ಳುತ್ತಿರುವ ಕೀಟನಾಶಕಗಳ ಬಳಕೆ, ಆನುವಂಶಿಕತೆ ಇತ್ಯಾದಿ. ಇದರ ಒಟ್ಟಾರೆ ಪರಿಣಾಮ. ಗಂಡಸಿನ ಸಂತಾನೋತ್ಪತ್ತಿ ಶಕ್ತಿಯ ಮೇಲಾಗುತ್ತಿದೆ.

ಬಂಜೆಯ ಶೋಷಣೆ V/S ಧರ್ಮಾಂಧತೆ

ಯಾವ ಪತ್ನಿ ಪತಿಗೆ ಸಂತಾನ ಸುಖ ನೀಡಲಾರಳೋ ಅವಳನ್ನು ತ್ಯಜಿಸುವುದರಲ್ಲಿ ಏನೂ ತಪ್ಪಿಲ್ಲ. ಮನುಸ್ಮೃತಿ ಪತಿ ಚರಿತ್ರಹೀನ, ಅತ್ಯಧಿಕ ದುರಾಚಾರಿ, ಗುಣಹೀನನೇ ಆಗಿರಲಿ, ಅವನ ಪತ್ನಿ ಬಂಜೆಯಾಗಿದ್ದರೆ, ಅಂಥ ಪತಿ ಸವತಿಯನ್ನು ತಂದಾಗ ಈಕೆ ಅವಳ ನೆರಳೂ ಸೋಂಕಿಸಿಕೊಳ್ಳದೆ ದೂರ ಇರಬೇಕು. ಮನುಸ್ಮೃತಿ ಹೆಣ್ಣಿಗೆ ಮಗು ಆಗದಿದ್ದರೆ ಅದೊಂದು ಮಹಾಪಾಪ!  ಮಹಾಭಾರತದ ಆದಿಪರ್ವ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ