ಗುಂಡು ಬದನೆಯ ಗ್ರೇವಿ

ಸಾಮಗ್ರಿ : 500 ಗ್ರಾಂ ಗುಂಡು ಬದನೆ, 3-4 ಈರುಳ್ಳಿ, 4-5 ಹುಳಿ ಟೊಮೇಟೊ, 1-1 ಚಮಚ ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಅರ್ಧ ಚರ್ಮ ಹಸಿಮೆಣಸಿನ ಪೇಸ್ಟ್, 2 ಚಮಚ ಟೊಮೇಟೊ ಕೆಚಪ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ ಗರಂಮಸಾಲ, 1-1 ಸಣ್ಣ ಚಮಚ ಮೆಂತ್ಯ ಸೋಂಪು, ಜೀರಿಗೆ, ಅರ್ಧ ಸೌಟು ಎಣ್ಣೆ, ಒಗ್ಗರಣೆ ಸಾಮಗ್ರಿ, 2-3 ಚಿಟಕಿ ಅರಿಶಿನ.

ವಿಧಾನ : ಮೊದಲು ಚಿಕ್ಕ ಬಾಣಲೆಯಲ್ಲಿ ಜೀರಿಗೆ, ಸೋಂಪು, ಮೆಂತ್ಯ ಹುರಿದು ಪುಡಿ ಮಾಡಿ. ಇದಕ್ಕೆ ಗರಂಮಸಾಲ, ಖಾರ, ಅರಿಶಿನ ಬೆರೆಸಿಕೊಳ್ಳಿ. ಗುಂಡು ಬದನೆಗಳನ್ನು ಶುಚಿಗೊಳಿಸಿ, ತೊಟ್ಟು ಇರುವಂತೆಯೇ 4 ಸೀಳಾಗಿ ಕತ್ತರಿಸಿ, ಒಳಭಾಗಕ್ಕೆ ಈ ಮಸಾಲೆಯನ್ನು ಸಮನಾಗಿ ತುಂಬಿಸಿ, ನೆನೆಯಲು ಬಿಡಿ. ಗ್ರೇವಿ ತಯಾರಿಸಲು ಮೊದಲು ಈರುಳ್ಳಿ, ಟೊಮೇಟೋಗಳನ್ನು ಬೇರೆ ಬೇರೆಯಾಗಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಕೊಟ್ಟು, ಕರಿಬೇವು ಚಟಪಟಾಯಿಸಿ. ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಅದಾದ ಮೇಲೆ ಈರುಳ್ಳಿ, ನಂತರ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ನಂತರ ನೆನೆದ ಬದನೆಗಳನ್ನು ಇಡಿಯಾಗಿ ಹಾಕಿ ಚೆನ್ನಾಗಿ ಬಾಡಿಸಬೇಕು. ಆಮೇಲೆ ಉಳಿದ ಮಸಾಲೆ, ಉಪ್ಪು, ಅರಿಶಿನ ಎಲ್ಲಾ ಹಾಕಿ ಕೈಯಾಡಿಸಿ. ಚೆನ್ನಾಗಿ ಬೆಂದಿದೆ ಎನಿಸಿದಾಗ ಕೆಳಗಿಳಿಸಿ ಪೂರಿ, ಚಪಾತಿ ಜೊತೆ ಬಿಸಿಯಾಗಿ ಸವಿಯಲು ಕೊಡಿ.

ಗಾರ್ಲಿಕ್ಪೂರಿ

ಸಾಮಗ್ರಿ : 250 ಗ್ರಾಂ ಗೋದಿಹಿಟ್ಟು, 50 ಗ್ರಾಂ ಮೈದಾ, 4 ಚಮಚ ಬೆಳ್ಳುಳ್ಳಿ ಪೇಸ್ಟ್, 2 ಚಿಟಕಿ ಅರಿಶಿನ, 1 ಚಮಚ ಬ್ಯಾಡಗಿ ಮೆಣಸಿನಪುಡಿ, ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ, ತುಪ್ಪ, ಉಪ್ಪು.

ವಿಧಾನ : ಬೆಳ್ಳುಳ್ಳಿ ಪೇಸ್ಟ್ ಗೆ ತುಸು ಉಪ್ಪು, ಬ್ಯಾಡಗಿ ಮೆಣಸಿನಪುಡಿ ಹಾಕಿ ಬೆರೆಸಿಕೊಳ್ಳಿ. ಗೋದಿಹಿಟ್ಟಿಗೆ ಮೈದಾ, ಉಪ್ಪು, ಅರಿಶಿನ ಹಾಕಿ ತುಸು ನೀರು ಬೆರೆಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ. ನಾದಿಕೊಂಡು, ನೆನೆಯಲು ಬಿಡಿ. ಇದನ್ನು ಸಣ್ಣ ಉಂಡೆಗಳಾಗಿ ಲಟ್ಟಿಸಿ. ಮಧ್ಯೆ 1-1 ಚಮಚ ಬೆಳ್ಳುಳ್ಳಿ ಮಿಶ್ರಣ ಹರಡಿ, ಮಡಿಚಿ ಮತ್ತೆ ಲಟ್ಟಿಸಿ. ಹೀಗೆ ಎಲ್ಲ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು, ಬದನೆ ಗ್ರೇವಿ ಜೊತೆ ಸವಿಯಲು ಕೊಡಿ.

cookry-single-02

ಪೀನಟ್ಕರೀ

ಸಾಮಗ್ರಿ : 250 ಗ್ರಾಂ ಬೇಯಿಸಿ ಮಸೆದ ಆಲೂ, 100 ಗ್ರಾಂ ಹುರಿದ ಕಡಲೆಬೀಜ, 2 ಚಮಚ ಬ್ಯಾಡಗಿ ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಧನಿಯಾಪುಡಿ, ಅಮ್ಚೂರ್‌ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಓಮ, ಎಳ್ಳು, 2 ಈರುಳ್ಳಿ, 3 ಟೊಮೇಟೊ, ತುಸು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಹುರಿದ ಕಡಲೆಬೀಜವನ್ನು ತರಿತರಿಯಾಗಿ ಪುಡಿ ಮಾಡಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಆಮೇಲೆ ಇದಕ್ಕೆ ಹೆಚ್ಚಿದ ಈರುಳ್ಳಿ ನಂತರ ಟೊಮೇಟೊ ಹಾಕಿ ಬಾಡಿಸಿ. ಇವೆರಡು ಚೆನ್ನಾಗಿ ಬೆಂದಾಗ ಕೆಳಗಿಳಿಸಿ ಆರಲು ಬಿಡಿ. ನಂತರ ತುಸು ಗಸಗಸೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಮತ್ತೆ ಅದೇ ಬಾಣಲೆಯಲ್ಲಿ ಉಳಿದ ಎಣ್ಣೆ ಬಿಸಿ ಮಾಡಿ, ಕರಿಬೇವು ಹಾಕಿ ಚಟಪಟಾಯಿಸಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಆಮೇಲೆ ರುಬ್ಬಿದ ಮಿಶ್ರಣ ಹಾಕಿ ಕೆದಕಬೇಕು. ಇದಕ್ಕೆ ಉಪ್ಪು, ಖಾರ, ಅರಿಶಿನ, ಉಳಿದ ಮಸಾಲೆ ಹಾಕಿ ಕೈಯಾಡಿಸಿ. ಕೊನೆಯಲ್ಲಿ ಮಸೆದ ಆಲೂ, ಕಡಲೆಬೀಜ ಸೇರಿಸಿ, ಅರ್ಧ ಲೋಟ ನೀರು ಬೆರೆಸಿ ಮಂದ ಉರಿಯಲ್ಲಿ ಗ್ರೇವಿ ಕುದಿಸಿ ಕೆಳಗಿಸಿ. ಚಿತ್ರದಲ್ಲಿರುವಂತೆ ಕೊ.ಸೊಪ್ಪಿನಿಂದ ಅಲಂಕರಿಸಿ ಚಪಾತಿ, ದೋಸೆ, ಇಡ್ಲಿ ಜೊತೆ ಸವಿಯಲು ಕೊಡಿ.

ವೆಜ್ಕಚೋಡಿ

ಸಾಮಗ್ರಿ : 500 ಗ್ರಾಂ ಹೂಕೋಸು (ಶುಚಿಗೊಳಿಸಿ ಸಣ್ಣಗೆ ಹೆಚ್ಚಿದ್ದು), ಬೆಂದ ಆಲೂ, ಫ್ರೆಂಚ್‌ ಬೀನ್ಸ್, ಹಸಿ ಬಟಾಣಿ. ಕ್ಯಾಪ್ಸಿಕಂ (ತಲಾ 100 ಗ್ರಾಂ), 500 ಗ್ರಾಂ ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಧನಿಯಾಪುಡಿ, ಜೀರಿಗೆ ಪುಡಿ, ಕಸೂರಿಮೇಥಿ ಅಮ್ಚೂರ್‌ ಪುಡಿ (ರೆಡಿಮೇಡ್‌ ಲಭ್ಯ), ಕರಿಯಲು ಎಣ್ಣೆ, 1 ಕಪ್‌ ಕಾದಾರಿದ ಹಾಲು.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಇದಕ್ಕೆ ಬೇಯಿಸಿ ಮಸೆದ ಆಲೂ, ಬೀನ್ಸ್, ಬಟಾಣಿ ಸೇರಿಸಿ ಬಾಡಿಸಬೇಕು. ಆಮೇಲೆ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಕೆದಕಬೇಕು. ಕೆಳಗಿಳಿಸಿ ಆರಲು ಬಿಡಿ.

ಗೋಧಿಹಿಟ್ಟಿಗೆ ತುಸು ಉಪ್ಪು, ಹಾಲು ಬೆರೆಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು, ನೆನೆಯಲು ಬಿಡಿ. ಇದರಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಪುಟ್ಟ ಪೂರಿಗಳಾಗಿ ಲಟ್ಟಿಸಿ. ಒಂದರ ಮೇಲೆ 2-3 ಚಮಚ ಮಿಶ್ರಣ ಹರಡಿ, ಇನ್ನೊಂದರಿಂದ ಕವರ್‌ ಮಾಡಿ, ಲಘುವಾಗಿ ಲಟ್ಟಿಸಿ ಅಂಚು ಬಿಡದಂತೆ ಮಾಡಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

cookry-single-03

ಗ್ರೀನ್ಪೂರಿ

ಸಾಮಗ್ರಿ : 500 ಗ್ರಾಂ ಗೋಧಿಹಿಟ್ಟು, 100 ಗ್ರಾಂ ಮೈದಾ, 2 ಕಂತೆ ಪಾಲಕ್‌ ಸೊಪ್ಪು, 8-10 ಹಸಿ ಮೆಣಸು, 200 ಗ್ರಾಂ ತುರಿದ ಪನೀರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಧನಿಯಾಪುಡಿ, ಜೀರಿಗೆ ಪುಡಿ, 2 ಚಿಟಕಿ ಅರಿಶಿನ, ಕರಿಯಲು ಎಣ್ಣೆ, ತುಸು ತುಪ್ಪ.

ವಿಧಾನ : ಮೊದಲು ಪಾಲಕ್‌ ಶುಚಿಗೊಳಿಸಿ, ಹೆಚ್ಚಿ, ಹಸಿ ಮೆಣಸಿನ ಜೊತೆ ಬೇಯಿಸಿ. ಇದು ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಗೋಧಿಹಿಟ್ಟಿಗೆ ಮೈದಾ, ಉಪ್ಪು, ಖಾರ, ಪಾಲಕ್‌ ಪೇಸ್ಟ್, ಜೀರಿಗೆ ಪುಡಿ, ಅರಿಶಿನ, ಗರಂಮಸಾಲೆ ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ನಾದಿಕೊಂಡು ನೆನೆಯಲು ಬಿಡಿ.

ತುರಿದ ಪನೀರ್‌ಗೆ ತುಸು ಉಪ್ಪು, ಖಾರ, ಮಸಾಲೆ ಹಾಕಿ ಲಘುವಾಗಿ ಬಾಡಿಸಿ ಕೆಳಗಿಳಿಸಿ. ನೆನೆದ ಮಿಶ್ರಣದಿಂದ ಸಣ್ಣ ಉಂಡೆಗಳಾಗಿ ಲಟ್ಟಿಸಿ, ಮಧ್ಯೆ 2-3 ಚಮಚ ಪನೀರ್‌ ಮಿಕ್ಸ್ ಹರಡಿ, ಮಡಿಚಿ, ಮತ್ತೆ ಲಟ್ಟಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಸಾಗು, ಪಲ್ಯ ರಗಳೆ ಇಲ್ಲದೆ ಇದನ್ನು ಹಾಗೇ ಸವಿಯಬಹುದು.

ಪನೀರ್ಕುರ್ಮ

ಸಾಮಗ್ರಿ : ಚೌಕಾಕಾರವಾಗಿ ತುಂಡರಿಸಿದ 250 ಗ್ರಾಂ ಪನೀರ್‌, 1 ಕಪ್‌ ಹುಳಿ ಮೊಸರು, 2 ಈರುಳ್ಳಿ, 3 ಟೊಮೇಟೊ, 10-12 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, ಚಕ್ಕೆ ಲವಂಗ ಮೊಗ್ಗು ಏಲಕ್ಕಿ (ಒಟ್ಟಾಗಿ 1 ದೊಡ್ಡ ಚಮಚ), 2-2 ಚಮಚ ಗಸಗಸೆ ಹುರಿಗಡಲೆ, 1 ಗಿಟುಕು ತೆಂಗಿನ ತುರಿ, 5-6 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಣಿಸೇರಸ, ಅರ್ಧ ಸೌಟು ಬೆಣ್ಣೆ ಅಥವಾ ತುಪ್ಪ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು ಪುದೀನಾ, ತುಸು ಕಾರ್ನ್‌ ಫ್ಲೋರ್‌.

ವಿಧಾನ : ಮೊದಲು ಪನೀರ್‌ ಕ್ಯೂಬ್ಸ್ ನ್ನು ಕಾರ್ನ್‌ಫ್ಲೋರ್‌ನಲ್ಲಿ ಹೊರಳಿಸಿ, ತುಸು ತುಪ್ಪದಲ್ಲಿ ಹುರಿದಿಡಿ. ತೆಂಗಿನ ತುರಿಗೆ ಹುರಿಗಡಲೆ, ಗಸಗಸೆ, ಪುದೀನಾ, ಹಸಿಮೆಣಸು, 1 ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ ಲವಂಗ, ಹುಣಿಸೇರಸ ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಟೊಮೇಟೋ ಪೇಸ್ಟ್ ಮಾಡಿಡಿ. ಬಾಣಲೆಯಲ್ಲಿ ಬೆಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಒಗ್ಗರಣೆ ಕೊಡಿ. ಇದರಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಟೊಮೇಟೊ ಪೇಸ್ಟ್, ಆಮೇಲೆ ತೆಂಗಿನ ಮಸಾಲೆ ಹಾಕಿ ಬಾಡಿಸಬೇಕು. ಇದಕ್ಕೆ ಹುರಿದ ಪನೀರ್‌ ಸೇರಿಸಿ ಉಪ್ಪು, ಖಾರ, ಅರಿಶಿನ ಹಾಕಿ ಕೆದಕಿ. ಅರ್ಧ ಲೋಟ ನೀರು, ಮೊಸರು ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಕುದಿಸಿ ಕೆಳಗಿಳಿಸಿ. ಹೆಚ್ಚಿದ ಕೊ.ಸೊಪ್ಪು ಉದುರಿಸಿ, ಬಿಸಿಯಾಗಿ ಚಪಾತಿ ಪೂರಿ ಜೊತೆ ಸವಿಯಲು ಕೊಡಿ.

cookry-single-04

ಸಿಹಿ ಸಿಹಿ ಪೂರಿ

ಸಾಮಗ್ರಿ : 500 ಗ್ರಾಂ ಗೋಧಿಹಿಟ್ಟು, 100 ಗ್ರಾಂ ಮೈದಾ, 200 ಗ್ರಾಂ ಬೆಲ್ಲ, ಅರ್ಧ ಸಣ್ಣ ಚಮಚ ಬೇಕಿಂಗ್‌ ಸೋಡ, ರುಚಿಗೆ ತಕ್ಕಷ್ಟು ಉಪ್ಪು, ಅಮ್ಚೂರ್‌ ಪುಡಿ, ಸೋಂಪು, ಏಲಕ್ಕಿ ಪುಡಿ, ತೆಂಗಿನ ತುರಿ, ಗಸಗಸೆ, ನೈಲಾನ್‌ ಎಳ್ಳು, ಅಗತ್ಯವಿದ್ದಷ್ಟು ಎಣ್ಣೆ ತುಪ್ಪ.

ವಿಧಾನ : ಮೊದಲು ಬೆಲ್ಲಕ್ಕೆ ತುಸು ನೀರು ಬೆರೆಸಿ ಬಿಸಿ ಮಾಡಿಕೊಂಡು ಕರಗಿಸಿ ಕೆಳಗಿಳಿಸಿ, ಸೋಸಿಕೊಳ್ಳಿ. ಗೋಧಿಹಿಟ್ಟಿಗೆ ಉಪ್ಪು, ಅಮ್ಚೂರ್‌ ಪುಡಿ, ಸೋಂಪು, ಬೆಲ್ಲದ ನೀರು, ಏಲಕ್ಕಿ ಪುಡಿ ಸೇರಿಸಿ ಮೃದುವಾಗಿ ಪೂರಿ ಹಿಟ್ಟು ಕಲಸಿ, ತುಪ್ಪ ಹಾಕಿ ನಾದಿಕೊಂಡು ನೆನೆಯಲು ಬಿಡಿ. ತೆಂಗಿನ ತುರಿಗೆ, ಹುರಿದ ಎಳ್ಳು, ಗಸಗಸೆ ಸೇರಿಸಿ. ನೆನೆದ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಲಟ್ಟಿಸಿ, ಮಧ್ಯೆ 2-2 ಚಮಚ ತೆಂಗಿನ ಮಿಶ್ರಣ ಹರಡಿ, ಮಡಿಚಿ ಲಟ್ಟಿಸಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದು ಬಿಸಿಯಾಗಿ ಸವಿಯಲು ಕೊಡಿ.

ಕೋಕೋನಟ್ಕರೀ

ಸಾಮಗ್ರಿ : 3 ಕಪ್‌ ಗಟ್ಟಿ ತೆಂಗಿನ ಹಾಲು, 1 ದೊಡ್ಡ ನಿಂಬೆಹಣ್ಣು, 7-8 ಎಸಳು ಬೆಳ್ಳುಳ್ಳಿ, 4-5 ಈರುಳ್ಳಿ, ಟೊಮೇಟೊ, ಅರ್ಧ ಸೌಟು ಎಣ್ಣೆ, 1 ದೊಡ್ಡ ನಿಂಬೆ ಗಾತ್ರ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಣಿಸೇರಸ, ಗರಂಮಸಾಲ, 1-2 ಬೇಯಿಸಿ ಮಸೆದ ಆಲೂ, 2-3 ಚಮಚ ಅಕ್ಕಿ, ಅರ್ಧರ್ಧ ಚಮಚ ಮೆಂತ್ಯ, ಜೀರಿಗೆ, ಸೋಂಪು, 2 ಎಸಳು ಕರಿಬೇವು, ಅರ್ಧ ಕಪ್‌ ಹುರಿದ ಕಡಲೇಬೀಜ.

ವಿಧಾನ : ಮೊದಲು ಕಡಲೆಬೀಜವನ್ನು ತರಿತರಿಯಾಗಿ ಪುಡಿ ಮಾಡಿಡಿ. ಅಕ್ಕಿ ನೆನೆಹಾಕಿ ಬೇರೆಯಾಗಿ ರುಬ್ಬಿಕೊಳ್ಳಿ. 1 ಈರುಳ್ಳಿ, 2 ಟೊಮೇಟೊ ಬೆರೆಸಿ ಪೇಸ್ಟ್ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಮೆಂತ್ಯ, ಕರಿಬೇವಿನ ಒಗ್ಗರಣೆ ಕೊಡಿ. ಸಣ್ಣಗೆ ಹೆಚ್ಚಿಕೊಂಡ ಬೆಳ್ಳುಳ್ಳಿ, ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಹೆಚ್ಚಿದ ಟೊಮೇಟೊ ಬಾಡಿಸಿ. ಆಮೇಲೆ ಚೆನ್ನಾಗಿ ಮಸೆದ ಆಲೂ ಸೇರಿಸಿ ಕೆದಕಬೇಕು. ನಂತರ ಪುಡಿ ಮಾಡಿದ ಬೆಲ್ಲ, ಹುಣಿಸೇ ರಸ, ಉಪ್ಪು, ಖಾರ, ಉಳಿದ ಮಸಾಲೆ, ರುಬ್ಬಿದ ಪೇಸ್ಟ್, ಅಕ್ಕಿ ಮಿಶ್ರಣ ಎಲ್ಲಾ ಹಾಕಿ ಕೆದಕಬೇಕು. ಕೊನೆಯಲ್ಲಿ ತೆಂಗಿನ ಹಾಲು ಬೆರೆಸಿ ಎಲ್ಲ ಮಿಶ್ರಗೊಳ್ಳುವಂತೆ ಕೈಯಾಡಿಸಿ. ಚೆನ್ನಾಗಿ ಕುದಿ ಬಂದಾಗ ಕೆಳಗಿಳಿಸಿ, ತೆಂಗಿನ ತುರಿ ಉದುರಿಸಿ, ನಿಂಬೆಹಣ್ಣು  ಹಿಂಡಿಕೊಂಡು, ಚಪಾತಿ, ರೊಟ್ಟಿ ಜೊತೆ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ