“ನ್ಯಾಯಪೀಠದಲ್ಲಿ ನನ್ನದೊಂದು ಪ್ರಾರ್ಥನೆ. ನನ್ನ ಕಕ್ಷಿದಾರರಿಗೆ ಆದಷ್ಟು ಶೀಘ್ರ ನ್ಯಾಯ ದೊರೆತಲ್ಲಿ ಅವರು ತಮ್ಮ ಹೊಸ ಬದುಕನ್ನು ಆರಂಭಿಸಬಹುದು…!”

ಮಾಲಾಳ ವಕೀಲರು ತಮ್ಮ ವಕಾಲತ್ತನ್ನು ಮಂಡಿಸುತ್ತಾ ಜಡ್ಜ್ ಸಾಹೇಬರಲ್ಲಿ ವಿನಂತಿಸಿಕೊಂಡರು. ವಿಷಯದ ಗಂಭೀರತೆಯನ್ನು ಅರಿತ ಜಡ್ಜ್ ಸಾಹೇಬರು ಮುಂದಿನ ದಿನಾಂಕ ನೀಡಿದರು. ವಿಚ್ಛೇದನ ಪ್ರಕರಣದಲ್ಲಿ ದಿಢೀರ್‌ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಗಂಡ ಹೆಂಡಿರು ಮತ್ತೆ ಒಂದಾಗಿ ಬದುಕು ಸಾಗಿಸಲಿ ಎನ್ನುವ ಆಶಯವನ್ನು ನ್ಯಾಯಾಲಯ ಬಯಸುತ್ತಾದ್ದರಿಂದ ಎಂದಿನಂತೆ ಇಂದು ಕೂಡ ನ್ಯಾಯಾಲಯದಲ್ಲಿ ಯಾವುದೇ ನಿರ್ಧಾರವಾಗಲಿಲ್ಲ. ಎರಡೂ ಕಡೆಯ ವಕೀಲರು, ತಂತಮ್ಮ ಕೋರಿಕೆಯನ್ನು ನಿವೇದಿಸಿಕೊಂಡರೂ ಕೂಡ, ಜಡ್ಜ್ ಸಾಹೇಬರು ಮಾತ್ರ ಎಂದಿನಂತೆ ಮುಂದಿನ ದಿನಾಂಕವನ್ನು ನೀಡುವ ಕೆಲಸವನ್ನಷ್ಟೇ ಮಾಡಿ ಕೈ ತೊಳೆದುಕೊಂಡರು.

ವಲ್ಲಭ್ ಹಾಗೂ ಮಾಲಾ ಇಬ್ಬರೂ ಒಲ್ಲದ ಮನಸ್ಸಿನಿಂದಲೇ ನಿರಾಶೆ ಹಾಗೂ ಖಿನ್ನತೆಯ ಭಾವ ಹೊತ್ತು ನ್ಯಾಯಾಲಯದಿಂದ ಹೊರಬಂದ ಅವರಿಗೆ ಸ್ನೇಹಾ ಹಾಗೂ ಭಾನುರ ಆವೇಶಭರಿತ ನೋಟವನ್ನು ಎದುರಿಸುವುದು ತುಸು ಕಷ್ಟವಾಗಿತ್ತು. ಅವರಲ್ಲಿ ಮಡುಗಟ್ಟಿದ ಆಕ್ರೋಶ, ಅಸಹ್ಯ ಭಾವನೆ ಹಾಗೂ ಕ್ರೋಧದೊಂದಿಗೆ ಒಬ್ಬರನ್ನೊಬ್ಬರು ಮೋಸ ಮಾಡಲು ಹೊರಟಿರುವ ಈ ಪರಿಸ್ಥಿತಿಯನ್ನು ಕಳೆದ 5 ವರ್ಷಗಳಿಂದಲೂ ನೋಡುತ್ತಲೇ ಬಂದಿದ್ದರು. ಈಗೀಗಂತೂ ಅದು ರೂಢಿಯಾಗಿಬಿಟ್ಟಿದೆ. ವಲ್ಲಭ್ ಈ ಎಲ್ಲ ವಿದ್ಯಮಾನಗಳಿಂದ ಸಾಕಷ್ಟು ಕುಗ್ಗಿಹೋಗಿದ್ದ. ಅಸಹನೆ ಹಾಗೂ ಅಪರಾಧಿ ಭಾವನೆ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಕೋರ್ಟು ಕಛೇರಿಯ ಈ ಜಂಜಾಟದ ನಡುವೆ ಜೀವನ, ಹೈರಾಣಾಗಿತ್ತು. ಮಾಲಾಳ ಪರಿಸ್ಥಿತಿಯೂ ಕೂಡ ಅಷ್ಟೇನೂ ಭಿನ್ನವಾಗಿರಲಿಲ್ಲ. ಕಳೆದ 5 ವರ್ಷಗಳಿಂದ ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಪ್ರತಿ ಕ್ಷಣ ಹೋರಾಟದ ಹಾದಿಯಾಗಿತ್ತು. ಗೆಳತಿಯರ ಅಕ್ಕಪಕ್ಕದವರ ನಿಂದನೆಯ ನುಡಿ, ಅಸಹಾಯಕ ಸ್ಥಿತಿಯಲ್ಲಿ ಒಂಟಿ ಹೋರಾಟ, ಜೊತೆಗೆ ಸ್ವತಃ ಮಕ್ಕಳು ಕೂಡ ತನ್ನಿಂದ ದೂರಾದ ಪರಿ ಎಲ್ಲ ಅವಳನ್ನು ನಿರ್ಭಾಕಳನ್ನಾಗಿಸಿತ್ತು. ಅಷ್ಟಕ್ಕೂ ಅವಳು ತೆಗೆದುಕೊಂಡ ಈ ನಿರ್ಧಾರದಿಂದ ಸಿಕ್ಕಿದ್ದಾದರೂ ಏನು…?

“ಬಾ… ಮನೆವರೆಗೂ `ಡ್ರಾಪ್‌’ ಕೊಡ್ತೀನಿ,” ವಲ್ಲಭ ಮಾಲಾಳಿಗೆ ಹೇಳುತ್ತಿದ್ದಂತೆ, ಮಾಲಾ ಗದ್ಗದಿತ ಕಂಠದಿಂದ “ಪರವಾಗಿಲ್ಲ… ನಾನೇ ಹೋಗ್ತೀನಿ. ನಿಮಗೆ ಈಗಾಗಲೇ ಲೇಟಾಗಿದೆ,” ಎಂದಳು.

“ಕೂತ್ಕೋ,” ಎನ್ನುತ್ತಾ ವಲ್ಲಭ ಕಾರಿನ ಬಾಗಿಲು ತೆರೆದು ಅವಳನ್ನು ಆಹ್ವಾನಿಸಿದ. ತಕ್ಷಣ ಕಾರು ಹತ್ತಿ ಕುಳಿತ ಮಾಲಾಳನ್ನು ಅವಳು ಪೇಯಿಂಗ್‌ ಗೆಸ್ಟ್ ಆಗಿ ಉಳಿದಿದ್ದ ಕಡೆ ಡ್ರಾಪ್‌ ಮಾಡಿ ಆಫೀಸಿನತ್ತ ಕಾರು ತಿರುಗಿಸಿದ. ಒಡನೆಯೇ ಕೈಗಡಿಯಾರ ನೋಡಿಕೊಂಡ ಗಂಟೆ ಎರಡಾಗಿತ್ತು. ಊಟದ ಟೈಮ್ ಮೀರಿ ಹೋಗಿತ್ತು. ಇಂದು ಕೂಡ ಅರ್ಧ ದಿನ ರಜೆ ತಗೋಬೇಕು. ಈ ಕೇಸಿನ ಓಡಾಟದ ತೀವ್ರತೆಯಿಂದಾಗಿ ಅರ್ಧ ಅಥವಾ ಒಂದು ದಿನದ ರಜೆ ಹಾಕುವುದು ಈಗ ಅನಿವಾರ್ಯವಾಗಿದೆ. ಸರ್ಕಾರಿ ಕಛೇರಿಗಳಂತೆ ಖಾಸಗಿ ಸಂಸ್ಥೆಯಲ್ಲಿ ಬೇಕೆಂದಾಗೆಲ್ಲಾ ರಜೆ ಪಡೆಯುವುದು ಸಾಧ್ಯವಿರಲಿಲ್ಲ. ಮಣ ಭಾರ ಕೆಲಸದ ಒತ್ತಡ ಹೇರುವ ಈ ಸಂಸ್ಥೆಗಳಲ್ಲಿ ಸಮಯಕ್ಕೆ ಬೆಲೆಯೇ ಇಲ್ಲ. ಇದೇ ಕಾರಣನ್ನು ಮುಂದಿಟ್ಟುಕೊಂಡು ಮಾಲಾ ಕೂಡ ಕೆಲಸ ಬಿಟ್ಟಿದ್ದಳು. ಕೋರ್ಟಿಗೆ ಸುತ್ತಾಡಿ ಸುತ್ತಾಡಿ ಬೇಸತ್ತ ಮಾಲಾಳಿಗೆ ವಕೀಲರ ಫೀಸು ಭರಿಸುವಲ್ಲಿ ಸಾಕುಸಾಕಾಗಿತ್ತು. ಈ ನಡುವೆ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ ಅವಳ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು. ಈ ವಿಚಾರದಲ್ಲಂತೂ ಮಾಲಾ ಹಾಗೂ ವಲ್ಲಭ ಒಬ್ಬರಿಗೊಬ್ಬರು ತುಂಬಾ ಸಹಕರಿಸುತ್ತಿದ್ದರು. ಹಾಗೇ ಕಳೆದ 5 ವರ್ಷಗಳಿಂದಲೂ ಪರಸ್ಪರರ ನಡುವಿನ ಪ್ರೀತಿ ಗೌರವದಲ್ಲಿ ಸ್ವಲ್ಪ ಕುಂದುಂಟಾಗಿಲ್ಲ. ಆದರೂ ಇಬ್ಬರಿಗೂ ಇಂತಹ ನಿರ್ಧಾರ ತೆಗೆದುಕೊಂಡು ತಪ್ಪು ಮಾಡಿದ್ವಿ ಅಂತ ಅನಿಸುತ್ತಿತ್ತು. ಬೇರೆ ಬೇರೆಯಾಗಿ ವಾಸಿಸುತ್ತಿದ್ದರೂ ಬೇರೆಯಾಗಿದ್ದೀವಿ ಅಂತ ಅನಿಸುತ್ತಾ ಇರಲಿಲ್ಲ. ಮನೆಯವರು, ಸ್ನೇಹಿತರು, ಬಂಧುಗಳು ಎಲ್ಲರ ದೃಷ್ಟಿಯಲ್ಲೂ ತಪ್ಪಿತಸ್ಥರಾದ ನಮಗೆ ಒಂದೊಮ್ಮೆ ನ್ಯಾಯಾಲಯದಿಂದ ಒಟ್ಟಿಗೆ ಬದುಕುವ ಹಕ್ಕು ದೊರೆತುಬಿಟ್ಟರೆ….  ನಮ್ಮಷ್ಟು ಸುಖಿಗಳು ಬೇರೊಬ್ಬರಿರಲಾರರು ಎನ್ನುವ ಕನಸು ಇವರದಾಗಿತ್ತು. ದಿನವಿಡೀ ಆಫೀಸ್‌ ಚಿಂತೆಯಲ್ಲೇ ಒದ್ದಾಡುತ್ತಿದ್ದ ವಲ್ಲಭ್ ಗೆ ಕೆಲಸದತ್ತ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ಮುಖದ ಮೇಲೆ ಕೈ ಒತ್ತಿ ಹಿಡಿದು ಒತ್ತಡವನ್ನು ಕಮ್ಮಿಯಾಗಿಸಿಕೊಂಡ.

“ಏನಾದ್ರೂ ಹೊಸ ವಿಚಾರ ನಡೀತೇ?” ಸಹಪಾಠಿ ರಾಮನ್‌ ಕೇಳಿದಾಗ `ಇಲ್ಲ’ ಎಂಬಂತೆ ತಲೆ ಅಲ್ಲಾಡಿಸಿದ.

“ಮಾಲಾಗೋಸ್ಕರ ಇಷ್ಟೆಲ್ಲಾ ಕಷ್ಟ ಕೋಟಲೆಗಳನ್ನು ಎದುರಿಸಿದರೂ ಕೂಡ ಅದರಲ್ಲೊಂದು ಸಾರ್ಥಕತೆ ಇದೆ. ನಿನಗೋಸ್ಕರ ಮಿಡಿಯುವ, ಹೃದಯಪೂರ್ವಕವಾಗಿ ಪ್ರೀತಿಸುವ ಮಾಲಾ ನಿನ್ನ ಅಂತರಂಗದ ಅಧಿಕಾರಿಣಿಯಾಗಿದ್ದಾಳೆ. ನಿನ್ನ ಮೇಲೆ ಪ್ರಾಮಾಣಿಕವಾದ ಪ್ರೀತಿ ಇರದೇ ಹೋಗಿದ್ರೆ ಯಾವತ್ತೋ ಅವಳು ಭಾನು ಚಂದ್ರ ಬಳಿ ವಾಪಸ್ಸು ಹೋಗುತ್ತಿದ್ದಳು.”

ರಾಮನ್‌ ಮಾತಿನಲ್ಲಿ ಸತ್ಯವಿದೆ ಅನ್ನಿಸಿತು ವಲ್ಲಬ್‌ಗೆ. `ಈ ಹೋರಾಟದಲ್ಲಿ ನಾವಿಬ್ರೂ ಎಷ್ಟೊಂದು ಹೈರಾಣಾಗಿ ಬಿಟ್ವಿ. 5 ವರ್ಷದ ಹಿಂದಿನ ಬದುಕು ಎಷ್ಟೊಂದು ಸೊಗಸಾಗಿತ್ತು. ಮಾಲಾ ನನ್ನ ಬದುಕಿನಲ್ಲಿ ಬಾರದೇ ಹೋಗಿದ್ರೆ ತಂಗಾಳಿಯಂತಿದ್ದ ನಮ್ಮ ಬಾಳಿನಲ್ಲಿ `ಬಿರುಕು’ ಎಂಬ ಈ ಬಿರುಗಾಳಿ ಬೀಸದೆ ಹೋಗಿದ್ರೆ ಜೀವನ ಎಷ್ಟು ಸಂತಸಮಯವಾಗಿರುತ್ತಿತ್ತು… ವಯಸ್ಸು 42ರ ಅಂಚಿಗೆ ತಲುಪಿದರೂ ಇನ್ನೂ ತನ್ನ ಬದುಕನ್ನು, ತನ್ನನ್ನು ನಂಬಿದ ಕುಟುಂಬವನ್ನು ಒಂದು ವ್ಯವಸ್ಥೆಯಲ್ಲಿ ನೋಡಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಮನಸ್ಸು ಪಿಚ್ಚೆನಿಸಿತು. ಮಾಲಾಳಿಗೂ ಈಗ 40 ತುಂಬಿದೆ. ನನ್ನಿಂದಾಗಿಯೇ ಮಾಲಾ, ಭಾನುಚಂದ್ರನಿಂದ ದೂರ ಉಳಿಯಬೇಕಾಯಿತು,’ ಅನ್ನೋ ಅಪರಾಧಿ ಭಾವನೆ ಅವನ ಇಡೀ ದೇಹವನ್ನು ಹಿಂಡಿ ಹಿಪ್ಪೆ ಮಾಡಿತ್ತು.

“ನಿನಗೆ ನೀನೇ ಧೈರ್ಯ ತಂದುಕೊ… ಪ್ರೀತಿ ಯೋಚಿಸಿ, ಅಳೆದು ಸುರಿದು ಮಾಡುವಂತ ಪ್ರಕ್ರಿಯೆ ಅಲ್ಲ. ಅದು ಹೃದಯದ ಅಂತರಾಳದಿಂದ ಆವಿರ್ಭವಿಸುವ ಅನುಭೂತಿ. ಅಷ್ಟಕ್ಕೂ ನಿನ್ನನ್ನು ನೀನೇ ಯಾಕೆ ದೂಷಿಸಿಕೊಳ್ತೀಯ…? ಎಲ್ಲ ಸರಿಹೋಗುತ್ತೆ ಬಿಡು,” ಎನ್ನುತ್ತಾ ಗೆಳೆಯ ರಾಮನ್‌ ಸಮಾಧಾನಪಡಿಸಿದರೂ ಕೂಡ ವಿಚಾರ ತುಂಬ ಗಂಭೀರವಾಗಿದ್ದು, ಸುಲಭದಲ್ಲಿ ಮುಗಿಯುಂತದಲ್ಲ ಎಂದೆನಿಸಿದಾಗ ಮನಸ್ಸು ಇನ್ನಷ್ಟು ಹಿಡಿಯಾಯಿತು.

“ಪರಿಸ್ಥಿತಿ ಸುಧಾರಿಸುವುದಾದರೂ ಹೇಗೆ? ನಾನು ಅಂದ್ಕೊಂಡಿರೋ ಹಾಗೇ ಸ್ನೇಹಾ ಸುಲಭವಾಗಿ ನಿಭಾಯಿಸುವಂತಹ ಸಂಸಾರಿ ಹೆಣ್ಣಲ್ಲ. ಬಹಳ  `ಜಿದ್ದಿ.’ ಯಾವುದೇ ಕಾರಣಕ್ಕೂ ಅವಳು ವಿಚ್ಛೇದನ ನೀಡಲಾರಳು. ನನ್ನನ್ನು ಬೆದರಿಸಲೆಂದೇ ನ್ಯಾಯಾಲಯಕ್ಕೆ ಅಲೆದಾಡಿಸುತ್ತಿದ್ದಾಳೆ. ಕೆಲವರಿರುತ್ತಾರೆ ತಾವೂ ನೆಮ್ಮದಿಯಿಂದ ಬದುಕಲ್ಲ. ಬೇರೆಯವರಿಗೂ ಬದುಕಲು ಬಿಡೋಲ್ಲ.” ವಲ್ಲಭನ ಇಕ್ಕಟ್ಟಿನ ಪರಿಸ್ಥಿತಿಯನ್ನು ಅವಲೋಕಿಸುತ್ತಾ ರಾಮನ್‌ ಅವನ ಭುಜದ ಮೇಲೆ ಕೈಯಿಟ್ಟು.

“ನಾನು ಜೊತೆಗಿದ್ದೀನಿ,” ಅನ್ನೋ ಬೆಂಬಲ ನೀಡಿದರೂ ಅದೂ ಕೂಡ ಅವನಿಗೇನೂ ಉಪಯೋಗಕ್ಕೆ ಬರೋಲ್ಲಾ ಅಂತ ಅನ್ನಿಸಿತು. ಆಫೀಸಿನಿಂದ ನೇರವಾಗಿ ಮನೆಗೆ ಬಂದ ವಲ್ಲಭ್, ಬಾಗಿಲು ತೆರೆದು ಲೈಟ್‌ ಕೂಡ ಹಾಕದೆ ಕತ್ತಿಯಲ್ಲೇ ಸೋಫಾ ಮೇಲೆ ಹಾಗೇ ಒರಗಿದ. ದೇಹ ಹಾಗೂ ಮನಸ್ಸುಗಳೆರಡು ಒಂದೇ ಬಾರಿ ಸುಸ್ತಾದರೆ ಮನುಷ್ಯ ಸಾಕಷ್ಟು ಜರ್ಝರಿತನಾಗುತ್ತಾನೆ. ಕಳೆದುಹೋದ ನೆನಪುಗಳು ಹಿಂಸೆಯಾಗಿ ಕಾಡುತ್ತವೆ. ಆ ನೆನಪುಗಳೆಲ್ಲಾ ವಲ್ಲಭನ ಸೃತಿ ಪಟಲದಲ್ಲಿ ಹಾದುಹೋದ.

ಸುಮಾರು 15 ವರ್ಷಗಳ ಹಿಂದೆ ವಲ್ಲಭ್ ಹಾಗೂ ಸ್ನೇಹಾಳ ಮದುವೆ ನಡೆದಿತ್ತು. ಆಗ ಅವನು ಅದ್ಯಾವುದೋ ಖಾಸಗಿ ಸಂಸ್ಥೆಯಲ್ಲಿ ನೌಕರಿ ಮಾಡುತ್ತಾ ಇದ್ದ. ಆದರೆ ಮದುವೆಯಾದ ಹೊಸತರಲ್ಲಿ ಸ್ನೇಹಾಳ ಎಲ್ಲಾ ಬೇಡಿಕೆಗಳನ್ನು ಪೂರೈಸುವಷ್ಟು ಸಂಬಳ ಸಿಕ್ತಾ ಇರಲಿಲ್ಲ. ಜೊತೆಗೆ ತಂಗಿಯ ಜವಾಬ್ದಾರಿ ಇವನ ಹೆಗಲಿಗೇರಿತ್ತು. ತಂದೆಯನ್ನು ಕಳೆದುಕೊಂಡಿದ್ದರಿಂದ ತಾಯಿಯನ್ನು ನೋಡ್ಕೋಬೇಕಾಗಿತ್ತು. ಮದುವೆಗೆ ಮುಂಚೆ ಸ್ನೇಹಾಳಿಗೂ ಅವನ ಮನೆಯ ಪರಿಸ್ಥಿತಿ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಆದರೂ ಕೂಡ ಅವಳ ತಂದೆ ತಾಯಿ ವಲ್ಲಭನೊಂದಿಗೆ ಮದುವೆ ಮಾಡಿ ಕೈತೊಳೆದುಕೊಂಡಿದ್ದರು. ಸ್ನೇಹಾ ಸ್ವಭಾವತಃ ಹಠಮಾರಿ ಹೆಣ್ಣು. ಜೊತೆಗೆ ಅತೀ ಕೋಪಿಷ್ಠ ಸ್ವಭಾವದವಳಾಗಿದ್ದು, ಮಾತುಮಾತಿಗೂ ಜಗಳವಾಡುವುದಲ್ಲದೆ, ಅತ್ತೆಯೊಂದಿಗೆ ಆಗಾಗ ಎದುರಾಡುವ, ವಾದಕ್ಕಿಳಿಯುವ ಚಾಳಿ ಮಾಮೂಲಾಗಿತ್ತು. ಯಾವುದೋ ನೆಪ ಮಾಡಿಕೊಂಡು ಚಿಕ್ಕಪುಟ್ಟ ವಿಚಾರಗಳಿಗೆಲ್ಲಾ `ಕ್ಯಾತೆ’ ತೆಗೆಯುವುದು ಅವಳ ದಿನಚರಿಯಾಗಿ ಹೋಯಿತು. ಬಿಂದಾಸ್‌ ಆಗಿ ಓಡಾಡುತ್ತಾ, ಶಾಪಿಂಗ್‌ ಮಾಡೋ ಹುಚ್ಚು ಬೆಳೆಸಿಕೊಂಡಿದ್ದ ಈಕೆಗೆ ಮನೆಗೆಲಸ ಮಾಡುವತ್ತ ಆಸಕ್ತಿ ಇರಲಿಲ್ಲ. ಅವಳನ್ನು ಬದಲಾಯಿಸಬೇಕೆಂದು ಬಯಸಿದಾಗೆಲ್ಲಾ `ಇದು ಅಸಾಧ್ಯವಾದ ಮಾತು’ ಎನಿಸುತ್ತಿತ್ತು. ದಿಢೀರ್‌ ಅಂತ ಮಾಯವಾಗಿ ಬಿಡೋಳು ಎಷ್ಟೋ ಹೊತ್ತಿನ ನಂತರ ಮತ್ತೆ ಪ್ರತ್ಯಕ್ಷವಾಗೋ ಇವಳನ್ನು ಕಟ್ಟಿಹಾಕುವುದು ತುಸು ಕಷ್ಟವೆನಿಸಿತ್ತು. ಮದುವೆಯಾಗಿ 2 ವರ್ಷದ ನಂತರ ಗಂಡು ಮಗುವಿಗೆ ಜನ್ಮ ನೀಡಿದ ಸ್ನೇಹಾ ಇನ್ನಾದರೂ ಸುಧಾರಿಸಬಹುದೆಂದು ನಿರೀಕ್ಷಿಸಿದ್ದ ವಲ್ಲಭ್ ಗೆ ಅದೂ ಸುಳ್ಳಾಯಿತು.

kaisa-mode-hai-yah-story-2-atul

ಯಾವುದೇ ತರಹದ ಬದಲಾವಣೆಯೂ ಕೂಡ ಅವಳಲ್ಲಿ ಕಾಣಲಿಲ್ಲ. ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ತಾಯಿ ತಂಗಿಯರದ್ದಾಗಿತ್ತು. ಮಗುವಿಗೆ ಹುಷಾರಿಲ್ಲದಿದ್ದಾಗಲೂ ಕೂಡ ಸ್ನೇಹಿತೆಯರೊಂದಿಗೆ ಸಿನಿಮಾಗೆ ಹೋಗಿದ್ದಳು. ಒಮ್ಮೆಯಂತೂ ಮಗುವಿಗೆ ನಿಮೋನಿಯಾ ಆಗಿತ್ತು. ಆಗ ಮಗುವಿಗೆ ತಣ್ಣೀರಲ್ಲಿ ಸ್ನಾನ ಮಾಡಿಸಿದ ಪರಿಣಾಮ ಜ್ವರ ಇನ್ನಷ್ಟು ಹೆಚ್ಚಾಯಿತು. 2 ದಿನಗಳವರೆಗೆ ಥಂಡಿಯನ್ನು ತಡೆಯಲಾಗದೆ ಮಗು ತೀರಿಕೊಂಡಿತು. ಒಂದೆರಡು ದಿನ ಅತ್ತು ಕರೆದ ಸ್ನೇಹಾ ಆಮೇಲೆ ಮೊದಲಿನಂತಾಗಿಬಿಟ್ಟಳು. ಈ ನಡುವೆ ವಲ್ಲಭನಿಗೆ ಮನೆಯೇ `ನರಕ’ ಎಂಬಂತಾಗಿ ಮನೆಯಲ್ಲಿ ಹೆಚ್ಚು ಹೊತ್ತು ಇರಲು ಇಷ್ಟಪಡುತ್ತಿರಲಿಲ್ಲ. ಈ ಎಲ್ಲಾ ಪರಿಸ್ಥಿತಿಯನ್ನು ನೋಡಿ ಬೇಸತ್ತ ತಾಯಿ, ತಂಗಿಯನ್ನು ಕರೆದುಕೊಂಡು ಊರಿಗೆ ಹೋಗಿಬಿಟ್ಟರು. ಇತ್ತೀಚೆಗಂತೂ ಸ್ನೇಹಾ ಒಮ್ಮೊಮ್ಮೆ ಮನೆಯಲ್ಲಿ ಅಡುಗೆ ಮಾಡುವುದನ್ನೇ ಮರೆತುಬಿಟ್ಟಿದ್ದಳು. ಮನೆಯಂತೂ ಇನ್ನಿಲ್ಲದಷ್ಟು ಕೊಳಕಾಗಿಹೋಗಿತ್ತು. ಆದರೂ ಕೂಡ ಸ್ನೇಹಾ ಹೊರಗಡೆ ಸುತ್ತಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಇಂತಹ ಸ್ಥಿತಿಯಲ್ಲಿ ವಲ್ಲಭ್ ಪಾರ್ಕುಗಳಲ್ಲೇ ಕೂತು ಹೆಚ್ಚು ಸಮಯ ಕಳೆಯುತ್ತಿದ್ದ. ಮನಸ್ಸು ಸೂತ್ರ ಹರಿದ ಗಾಳಿಪಟದಂತಾಗಿತ್ತು.

“ವಲ್ಲಭ್, ಈ ನಡುವೆ ನೀವು ಮನೆಯಲ್ಲಿ ಹೆಚ್ಚು ಇರ್ತಾ ಇಲ್ಲ ಯಾಕೆ….? ಕಂಪನಿ ನೀಡಲು ಬೇರೆ ಯಾರಾದ್ರೂ ಸಿಕ್ಕಿದ್ಲಾ….. ಹೇಗೇ….?” ಸ್ನೇಹಾಳ ಚುಚ್ಚು ಮಾತು ನೊಂದ ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸಿತ್ತು. ಬಹಳಷ್ಟು ಸಾರಿ ಕುಳ್ಳಿರಿಸಿಕೊಂಡು ಅವಳಿಗೆ ತಿಳಿ ಹೇಳಲು ಪ್ರಯತ್ನಿಸಿದ ವಲ್ಲಭನಿಗೆ ನಿರಾಶೆಯಾಯಿತು. ಅತ್ತೆ ಹಾಗೂ ನಾದಿನಿ ಊರಿಗೆ ಹೊರಟುಹೋದ ಮೇಲಂತೂ ಸ್ನೇಹಾಳಿಗೆ ಇನ್ನಷ್ಟು ಸ್ವಾತಂತ್ರ್ಯ ಸಿಕ್ಕಿದಂತಾಗಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಯಂತಾದಳು.

ವಲ್ಲಭನ ಆಫೀಸ್‌ ಎದುರಿಗಿರುವ ಬಿಲ್ಡಿಂಗ್‌ನಲ್ಲಿ ಮಾಲಾಳ ಆಫೀಸ್‌ ಇತ್ತು. ಲಿಫ್ಟ್ ನಲ್ಲಿ ಹೋಗಿ ಬರುವಾಗೆಲ್ಲಾ ಎದುರಾಗುತ್ತಿದ್ದ ಮಾಲಾಳನ್ನು ಭೇಟಿಯಾಗುವ ಅವಕಾಶ ವಲ್ಲಭನಿಗೆ ದೊರೆಯಿತು. ಸ್ನೇಹ ಮಾತುಕತೆ ನಡೆಸುವ ಹಂತಕ್ಕೆ ಬಂದಿತು. ಸ್ನೇಹ ಪ್ರೀತಿಯಾಗಿ ಬದಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಒಬ್ಬರನ್ನೊಬ್ಬರು ಪ್ರೀತಿಸತೊಡಗಿದರು. ಹಿಡಿ ಪ್ರೀತಿಗಾಗಿ ಹಂಬಲಿಸುತ್ತಿದ್ದ ವಲ್ಲಭನಿಗೆ ಹುಡುಕುತ್ತಿದ್ದ ಬಳ್ಳಿ ಕೈಗೆ ಸಿಕ್ಕಂತಾಗಿ ಮಾಲಾಳನ್ನು ಬಿಟ್ಟಿರಲಾರದಷ್ಟು ಹತ್ತಿರವಾದ. ಇತ್ತ ಮಾಲಾಳಿಗೂ ಕುಡುಕ ಗಂಡನಿಂದ ಮುಕ್ತಿ ಬೇಕಾಗಿದ್ದು ಮನಸ್ಸು ಸಹಜವಾಗಿಯೇ ವಲ್ಲಭನತ್ತ ವಾಲಿತು. ಪತಿ ಭಾನುಚಂದ್ರ ಕುಡಿದ ಅಮಲಿನಲ್ಲಿ ಮಾಲಾಳಿಗೆ ಆಗಾಗ್ಗೆ ಹೊಡೆಯುತ್ತಿದ್ದ. ಪ್ರತಿ ಸಾರಿ ಅನುಮಾನದಿಂದಲೇ ನೋಡುತ್ತಾ ಚುಚ್ಚು ಮಾತುಗಳನ್ನಾಡುತ್ತಾ ಮನಸ್ಸನ್ನು ಘಾಸಿಗೊಳಿಸುತ್ತಿದ್ದ. ಎಲ್ಲವನ್ನೂ ತನ್ನೆರಡು ಮಕ್ಕಳಿಗಾಗಿ ಸಹಿಸಿಕೊಂಡಿದ್ದ ಮಾಲಾ ಮುಂದೆ ಇವನೊಂದಿಗೆ ಸಂಸಾರ ಸಾಧ್ಯವಿಲ್ಲ ಎನ್ನುವ ಹಂತಕ್ಕೆ ಬಂದುಬಿಟ್ಟಿದ್ದಳು. ಈ ನಡುವೆ ವಲ್ಲಭ್ ಮಾಲಾರ ಭೇಟಿ, ಮಾತುಕಥೆ ಎಲ್ಲ ಮಾಮೂಲಾಗಿಬಿಟ್ಟಿತ್ತು. ತಮಗರಿವಿಲ್ಲದಂತೆ ಒಬ್ಬರಿಗೊಬ್ಬರು ತೀರಾ ಹತ್ತಿರವಾದರು. ಇಬ್ಬರೂ ತಮ್ಮ ಸಂಗಾತಿಗಳಿಂದ ಬೇರ್ಪಟ್ಟು ತಮ್ಮದೇ ಆದ ಸುಂದರ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ಕಾಣತೊಡಗಿದರು. ಇದಕ್ಕಾಗಿ ವಿಚ್ಛೇದನ ಪಡೆಯುವುದು ಅನಿವಾರ್ಯವಾಗಿತ್ತು. ಸ್ನೇಹಾ ಮಕ್ಕಳನ್ನು ತನ್ನ ಜೊತೆಯಲ್ಲೇ ಇರಿಸಿಕೊಳ್ಳಲು ಒಪ್ಪಿಕೊಂಡಿರುವುದರಿಂದ ವಲ್ಲಭನಿಗೆ ಮನಸ್ಸು ನಿರಾಳವಾಯಿತು. ಮುಂದೆ ನಾನು ನನ್ನ ಬದುಕು ಅಷ್ಟೇ ನೋಡಿಕೊಂಡರಾಯಿತು,’ ಎಂದು ಒಳಗೊಳಗೇ ಖುಷಿಪಟ್ಟ. ಆದರೆ ಈ ಖುಷಿ ಬಹಳ ಕಾಲ ಉಳಿಯಲಿಲ್ಲ.

ಈ ನಡುವೆ ಅನಿರೀಕ್ಷಿತವಾಗಿ ಒಂದು ಎಡವಟ್ಟು ನಡೆದುಹೋಗಿತ್ತು. ಮಾಲಾಳೊಂದಿಗಿನ ಪ್ರೇಮ ಕಹಾನಿ ಊರೆಲ್ಲಾ ಹಬ್ಬಿ, ಸ್ನೇಹಾ ಕಿವಿಗೂ ಬಿತ್ತು. ರಣಚಂಡಿಯಾದ ಸ್ನೇಹಾ, “ನಿನ್ನ ತಾರಮ್ಮಯ್ಯ ನಾಟಕವೆಲ್ಲಾ ನನಗೆ ಗೊತ್ತಾಗಿಹೋಗಿದೆ. ಅಷ್ಟು ಸುಲಭವಾಗಿ ಡೈವೋರ್ಸ್‌ ಕೊಡ್ತೀನಿ ಅಂದುಕೊಂಡಿದೀಯಾ? ಅದು ಎಂದಿಗೂ ಸಾಧ್ಯವಿಲ್ಲ! ನನಗೀಗ ಅರ್ಥವಾಗ್ತಿದೆ. ಈ ನಡುವೆ ನನ್ನಿಂದ ನೀನ್ಯಾಕೆ ದೂರ ಇರ್ತಿದ್ದೀಯಾ ಅಂತ!

“ನನಗೆ ಕೈ ಕೊಟ್ಟು ಬೇರೆಯವಳ ಜೊತೆ ಮದುವೆ ಮಾಡಿಕೊಂಡು ಹಾಯಾಗಿ ಇರಬಹುದು ಎಂಬ ಕನಸು ಕಾಣ್ತಾ ಇದೀಯಾ? ಅದು ಈ ಜನ್ಮದಲ್ಲೇ ಸಾಧ್ಯವಿಲ್ಲ. ಇಡೀ ಜೀವನ ನ್ಯಾಯಾಲಯದ ಹೋರಾಟದಲ್ಲೇ ಕಳೆದರೂ ಸರಿ…. ನಾನಂತೂ ನಿನಗೆ ವಿಚ್ಛೇದನ ನೀಡೋಲ್ಲ….” ಎಂದು ಕಡ್ಡಿ ಮುರಿದಂತೆ ಹೇಳಿದಾಗ ವಲ್ಲಭ್ ಇನ್ನಷ್ಟು ಚಿಂತಾಕ್ರಾಂತನಾಗಿಬಿಟ್ಟ.

ಇತ್ತ ಮಾಲಾಳ ಮನೆಯಲ್ಲೂ ಕೂಡ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಪತಿ ಭಾನುಚಂದ್ರನಂತೂ ವ್ಯಗ್ರನಾಗಿ ಕೋಪದಿಂದಲೇ “ನಾಚಿಕೆ ಆಗೊಲ್ವಾ ನಿಂಗೆ. ಬೇರೊಬ್ಬನ ಜೊತೆ ಸಂಬಂಧ ಬೆಳೆಸ್ಕೊಂಡು ನನ್ನ ಮುಖಕ್ಕೆ ಮಸಿ ಬಳಿಯಬೇಕೆಂದುಕೊಂಡಿದ್ದೀಯಾ? ನಿನ್ನನ್ನು ಹಾಗೇ ಸುಮ್ಮನೆ ಬಿಡೋಲ್ಲ…” ಎಂದು ಕೂಗಾಡುತ್ತಾ ಹಾದಿ ಬೀದಿ ರಂಪ ಮಾಡಿಬಿಟ್ಟ. ಕಂಡಕಂಡವರ ಎದುರಿಗೆಲ್ಲಾ ಮಾಲಾಳನ್ನು ಅಮಾನಿಸುತ್ತಾ ಓಡಾಡುತ್ತಿದ್ದ. ಅಷ್ಟು ಸಾಲದೆಂಬಂತೆ ಪ್ರತಿದಿನ ಏನಾದರೊಂದು ನೆಪ ಮಾಡಿಕೊಂಡು ದನಕ್ಕೆ ಬಡಿಯುವಂತೆ ಹೊಡೆಯಲು ಶುರು ಮಾಡಿದ. ಮಕ್ಕಳಂತೂ ಏನೊಂದೂ ಅರ್ಥವಾಗದೆ ಗೊಂದಲಕ್ಕೀಡಾಗಿದ್ದರು. ಈ ಎಲ್ಲಾ ಅನಾಹುತಕ್ಕೂ ವಲ್ಲಭ್ ತಮ್ಮ ಮನೆಗೆ ಬರುವುದೇ ಮುಖ್ಯ ಕಾರಣವೆಂದರಿತ ಮಕ್ಕಳು ನೇರವಾಗಿ ಮಾಲಾಳನ್ನೇ ಪ್ರಶ್ನೆ ಮಾಡಲಾರಂಭಿಸಿದರು.

“ಅಮ್ಮಾ…. ಆ ವಲ್ಲಭ್ ಅಂಕಲ್ ನಮ್ಮ ಮನೆಗೇಕೆ ಬರ್ತಾರೆ? ನಮಗಂತೂ ಒಂಚೂರು ಇಷ್ಟವಿಲ್ಲ. ನಮ್ಮ ಶಾಲೆಯ ಅಕ್ಕಪಕ್ಕದ ಬೀದಿಯವರೆಲ್ಲಾ ನೀನು ಆ ಅಂಕಲ್ ಜೊತೆ ಮತ್ತೆ ಮದುವೆ ಆಗ್ತೀ ಅಂತ ಮಾತಾಡಿಕೊಳ್ತಾ ಇದ್ರು. ನಿಜಾನಾ ಅಮ್ಮಾ….. ನೀನು ಬೇಕಾದ್ರೆ ಅವರನ್ನು ಮದುವೆ ಮಾಡ್ಕೊಂಡು ಅವರ ಜೊತೆ ಇದ್ದುಬಿಡು. ನಾವು ಮಾತ್ರ ನಮ್ಮ ಅಪ್ಪನ ಜೊತೆ ಇರ್ತೀವಿ. ಅವರು ಹೇಗಿದ್ದರೂ ಸರಿ ಅವರ ಜೊತೇನೇ ನಾವು ಇರೋದು,” ಎಂದರು ಮಕ್ಕಳು.

ಇವೆಲ್ಲದರ ನಡುವೆ ಭಾನುಚಂದ್ರ ಮಾಲಾಳಿಗೆ ವಿಚ್ಛೇದನ ನೀಡಲು ಮುಂದಾದ. ಆದರೆ ತನ್ನೆರಡು ಮಕ್ಕಳನ್ನು ಅವಳ ಸುಪರ್ದಿಗೆ ನೀಡಬೇಕಾದರೆ ತನಗೆ 30 ಲಕ್ಷ ರೂಪಾಯಿ ನೀಡಬೇಕೆನ್ನುವ ಷರತ್ತು ಹಾಕಿದ. ಮೊದಲೇ ಹೈರಾಣಾಗಿದ್ದ ಮಾಲಾಳಿಗೆ ಗಾಯದ ಮೇಲೆ ಬರೆ ಹಾಕಿದಂತಾಯಿತು. ಇಷ್ಟೊಂದು ದೊಡ್ಡ ಮೊತ್ತವನ್ನು ಎಲ್ಲಿಂದ ತಂದಾಳು…..? ಸಮಸ್ಯೆ ಪ್ರತಿ ಕ್ಷಣ ಗೊಂದಲದ ಗೂಡಾಯಿತು. ಕಳೆದ 5 ವರ್ಷಗಳಿಂದ ವಿಚ್ಛೇದನ ಪಡೆಯುವ ಸಲುವಾಗಿ ಮಾಲಾ ಹಾಗೂ ವಲ್ಲಭ್ ನಡೆಸಿದ ಹೋರಾಟ ಚಿಕ್ಕದೇನಲ್ಲ. ಹತ್ತಾರು ಕಡೆ ಓಡಾಟ, ವ್ಯಯಿಸಿದ ಸಮಯ, ಹಣ ಎಲ್ಲ ಅಗಣಿತ. ಇಷ್ಟಾದರೂ ವಿಚ್ಛೇದನ ಪಡೆಯುವ ನಿರ್ಧಾರ ಮಾತ್ರ ಮರೀಚಿಕೆಯಾಗಿ ಉಳಿದಿದೆ. ಇತ್ತ ನೆಮ್ಮದಿಯಿಂದ ಇರಲಾಗದೆ ಅತ್ತ ಮಾಲಾಳೊಂದಿಗೆ ಪ್ರತ್ಯೇಕವಾಗಿ ವಾಸಿಸಲಾರದೆ ಬದುಕು ಡೋಲಾಯಮಾನವಾಗಿ ಹೋಗಿತ್ತು.

ಮೊಬೈಲ್ ‌ರಿಂಗಣಿಸಿದಂತೆ ಯೋಚನಾ ಲಹರಿಯಿಂದ ಹೊರಬಂದ ವಲ್ಲಭನಿಗೆ ರಾತ್ರಿ 9 ಗಂಟೆಯಾಗಿರುವುದೇ ಮರೆತುಹೋಗಿತ್ತು. ನಿಧಾನವಾಗಿ ಎದ್ದು ಲೈಟ್‌ ಹಾಕುತ್ತಿದ್ದಂತೆ ಮಾಲಾ ಫೋನ್‌ ಲೈನ್‌ನಲ್ಲಿದ್ದಳು.

“ವಲ್ಲಭ್….. ಈ ನ್ಯಾಯಾಲಯದ ಹೋರಾಟದಲ್ಲಿ ತುಂಬಾ ಸುಸ್ತಾಗಿದ್ದೀನಿ. ಭಾನುಚಂದ್ರ ಇವತ್ತು ಕೂಡ ಎಚ್ಚರಿಕೆ ನೀಡಿಹೋದ. ಅವನು ಕೇಳಿದ ಹಣ ನೀಡದೇ ಹೋದರೆ ಮಕ್ಕಳನ್ನು ಜೊತೆಯಲ್ಲೇ ಕರೆದುಕೊಂಡು ಬೇರೆ ಊರಿಗೆ ಹೋಗುವುದಾಗಿ ಬೆದರಿಸುತ್ತಿದ್ದಾನೆ. ಏನು ಮಾಡಬೇಕು ಅಂತಾನೇ ಅರ್ಥ ಆಗ್ತಿಲ್ಲ ನಂಗೆ.”

“ಮಾಲಾ…. ಎಲ್ಲ ಸರಿಹೋಗುತ್ತೆ.. ನೀನೇನೂ ಚಿಂತೆ ಮಾಡಬೇಡ. ನಾನು ನಿನ್ನ ಜೊತೆ ಇದ್ದೀನಿ ಭಯಪಡಬೇಡ. ಎಲ್ಲ ಒಂದು ಹಂತಕ್ಕೆ ಬರುತ್ತೆ. ನಾಳೆ ಭೇಟಿ ಮಾಡಿ ಮಾತಾಡ್ತೀನಿ,” ಎನ್ನುತ್ತಾ ಫೋನ್‌ ಕಟ್‌ ಮಾಡಿದ.

ಯಾಂತ್ರೀಕೃತ ಬದುಕಿನ ಜಂಜಾಟದಲ್ಲೇ ಕಳೆದುಹೋಗಿದ್ದ ವಲ್ಲಭ್ ದೈಹಿಕವಾಗಿ ಸಾಕಷ್ಟು ಬದಲಾಗಿದ್ದ. ಬೆಳ್ಳಗಾಗಿರೋ ತಲೆಗೂದಲು, ಹಣೆಯಲ್ಲಿ ಮೂಡಿದ ಗೆರೆಗಳು ವೃದ್ಧಾಪ್ಯದ ಆಗಮನದ ಸೂಚಕಗಳಾಗಿದ್ದವು. ನಡುವೆ ಕೆಲಸದಲ್ಲಿ ಅಷ್ಟಾಗಿ ಮಗ್ನನಾಗದೇ ಇದ್ದುದರಿಂದ ಸಿಗಬೇಕಾಗಿದ್ದ `ಪ್ರಮೋಷನ್‌’ ಕೂಡ ಸಿಗಲಿಲ್ಲ.

ತಾಯಿಯ ಚಿಂತೆಯೇ ಬೇರೆ ತರಹದ್ದಾಗಿತ್ತು. ಕಟ್ಟಿಕೊಂಡ ಹೆಂಡತಿ ಎಂತಹವಳಾದರೂ ಬಾಳ್ವೆ ಮಾಡಲೇಬೇಕಾದ ಅನಿವಾರ್ಯತೆಯಿಂದ ಬದುಕುತ್ತಿರೋ ಮಗನಿಗೆ, ಮಗಳ ಮದುವೆ ಜವಾಬ್ದಾರಿಯನ್ನು ಹೊರಿಸಲು ಇಷ್ಟವಿಲ್ಲದೆ ಮದುವೆಯನ್ನು  ಮುಂದೂಡಿದ್ದರಿಂದ ಬಂಧುಗಳ ನಡುವೆ ಸಂಬಂಧ, ಮಾತುಕಥೆ ಎಲ್ಲ ಅಷ್ಟಕ್ಕಷ್ಟೆ ಅನ್ನುವಂತಾಗಿತ್ತು.

ಈ ಎಲ್ಲಾ ಘಟನೆಗಳಿಂದಾಗಿ ವಲ್ಲಭ್ ಇನ್ನಷ್ಟು ಕುಗ್ಗಿಹೋಗಿ ಸ್ನೇಹಿತರು, ಬಂಧುಗಳ ನಡುವೆ ತಮಾಷೆಯ ವಸ್ತುವಾಗಿದ್ದ. ಮಾಲಾಳನ್ನು ಪ್ರೀತಿಸಿದ್ದಕ್ಕೆ ಇಂತಹ ಶಿಕ್ಷೆ ಸಿಗುತ್ತೆ ಅಂತ ಅವನು ಖಂಡಿತಾ ಊಹಿಸಿರಲಿಲ್ಲ. ಸ್ನೇಹಾಳಿಂದ ವಿಚ್ಛೇದನ ಪಡೆದು ಮಾಲಾಳೊಂದಿಗೆ ನೆಮ್ಮದಿಯ, ಸುಂದರ ಬದುಕನ್ನು ರೂಪಿಸಿಕೊಳ್ಳಬಯಸಿದ್ದ. ಆದರೆ ಈಗ ಅವೆಲ್ಲ ತಲೆಕೆಳಗಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕುವುದಕ್ಕಿಂತ ಸ್ನೇಹಾಳೊಂದಿಗೆ ಹೇಗೋ ಹೊಂದಿಕೊಂಡು ಬಾಳುವುದೇ ಲೇಸು ಎಂಬ ಭಾವನೆ ಮೂಡಿದೆ. ಈಗಂತೂ ಅವನ ಸ್ಥಿತಿ `ಅತ್ತ ದರಿ ಇತ್ತ ಪುಲಿ’ ಎಂಬಂತಾಗಿದೆ. ಮನದ ಮೂಲೆಯಲ್ಲೊಂದು ಕಡೆ ಮಾಲಾಳೊಂದಿಗೆ ಜೀವನ ಸಾಗಿಸೋ ಅದೃಷ್ಟ ತನ್ನ ಹಣೆಯಲ್ಲಿ ಬರೆದಿಲ್ಲವೇನೋ ಎಂಬಂತೆ ಕೈಚೆಲ್ಲಿ ಕುಳಿತು ನಿರಾಳವಾದ ದೀರ್ಘ ಉಸಿರೊಂದನ್ನು ಎಳೆದ.

“ಕೊನೆಗೂ ನಮಗೆ ದಕ್ಕಿದ್ದಾದರೂ ಏನು ವಲ್ಲಭ್…? ಭಾನುಚಂದ್ರನ ಜೊತೆ ಜೀವನ ಸಾಗಿಸೋದು ಬಿಡು. ಕನಸಲ್ಲೂ ಕೂಡ ಅವನ ಮುಖ ನೋಡೋಕೆ ಇಷ್ಟಪಡಲ್ಲ. ಅದರೂ ಕೂಡ ಅವನಿಂದ ಬೇರಾಗಿ ಏನು ಸಾಧಿಸಿದಂತಾಯಿತು? ಕನಿಷ್ಠ ನನ್ನ ಮಕ್ಕಳೂ ಕೂಡ ನನ್ನಿಂದ ದೂರಾಗಿ ನನ್ನನ್ನು ನೋಡಲೂ ಬರಲ್ಲ. ಈ ನಡುವೆ ಪ್ರಪಂಚವೇ ಶೂನ್ಯ ಅನ್ನಿಸುತ್ತಿದೆ. ನಿನ್ನಿಂದಲೂ ದೂರ ಇರಬೇಕೆಂದೆನಿಸುತ್ತಿದೆ ವಲ್ಲಬ್.

“ಇತ್ತೀಚೆಗಂತೂ ಸಮಾಜ ನನ್ನನ್ನು ಯಾವ ರೀತಿ ನೋಡ್ತಿದೆ ಅಂದ್ರೆ, ಗಂಡನ್ನ ತೊರೆದು ನಾನೇನೋ ಮಹಾ ಅಪರಾಧ ಮಾಡಿದ್ದೀನಿ ಅನ್ನೋ ಹಾಗೆ ನನ್ನನ್ನು ಅಪರಾಧಿ ಸ್ಥಾನದಲ್ಲಿ ಕುಳ್ಳಿರಿಸಿ ಬಹಿಷ್ಕಾರ ಹಾಕ್ತಿದೆ. ವಯಸ್ಸಂತೂ 40 ದಾಟಿದೆ. ಇನ್ನು ಕೆಲವೇ ವರ್ಷಗಳಲ್ಲಿ ವೃದ್ಧಾಪ್ಯದ ಆಗಮನವಾಗುತ್ತೆ. ಆಗ ನನ್ನ ಪರಿಸ್ಥಿತಿ ಏನು? ವಯಸ್ಸಾದ ನನ್ನನ್ನು ಯಾರು ನೋಡಿಕೊಂಡಾರು? ಹಗಲು ರಾತ್ರಿ ಈ ಜಂಜಾಟದಲ್ಲೇ ಕಾಲ ಕಳೆದುಹೋದುದರಿಂದ ವೃತ್ತಿ ಜೀವನದಲ್ಲಿ ಕೂಡ ಸರಿಯಾಗಿ ಯಶಸ್ಸು ಕಾಣಲಿಲ್ಲ. ಹೆತ್ತ ತಂದೆತಾಯಿ ಕೂಡ ನನಗೆ ಬೆಂಬಲ ನೀಡಲು ಬರಲಿಲ್ಲ,” ಎನ್ನುತ್ತಾ ಎಷ್ಟೋ ದಿನಗಳಿಂದ ಹೆಪ್ಪುಗಟ್ಟಿದ ನೋವು, ಒಮ್ಮೆಲೇ ಹೊರಬಂದಂತೆ ಎಲ್ಲವನ್ನೂ ವಲ್ಲಭ್ ಮುಂದೆ ಹೇಳಿಕೊಂಡು ನಿರಾಳಾದಳು.

“ನನ್ನ ಪರಿಸ್ಥಿತಿ ಕೂಡ ಅಷ್ಟೇನೂ ಭಿನ್ನವಾಗಿಲ್ಲ ಮಾಲಾ….. ಆದ್ರೆ ಏನು ಮಾಡೋದು ಹೇಳು?” ಎನ್ನುತ್ತಾ ವಲ್ಲಭ್ ನಿಟ್ಟುಸಿರಿಟ್ಟ.

“ಹಾಂ, ವಲ್ಲಭ್, ನಾನಿರೋ ಪೇಯಿಂಗ್‌ ಗೆಸ್ಟ್ ವಾರ್ಡನ್‌ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಅದು ಈಗ ನಿಜ ಅನಿಸುತ್ತೆ. ಹೇಗೆ ತಂದೆ ತಾಯಿನಾ ನಾವು ಇವರೇ ಬೇಕು ಅಂತ ಆಯ್ಕೆ ಮಾಡಿಕೊಂಡು ಹುಟ್ಟೊಕ್ಕಾಗಲ್ವೋ….. ಹಾಗೇ ಜೀವನ ಸಂಗಾತಿನೂ ಇಂಥವರೇ ಬೇಕು ಅನ್ನೋ ಆಯ್ಕೆ ಮಾಡಿಕೊಂಡು ಮದುವೇ ಆಗೋ ಅವಕಾಶ ನಮಗಿರಲ್ಲ. ಒಬ್ಬರೊಂದಿಗೆ ಮದುವೆ ಆಯಿತು ಅಂದ್ರೆ ಮುಗೀತು. ನಂತರ ಏನೇ ಆದ್ರೂ ಅವರನ್ನೇ ಸ್ವೀಕಾರ ಮಾಡ್ಕೋಬೇಕು…. ಅದನ್ನೇ `ಪ್ರಾಕ್ಟಿಕಲ್ ಅಪ್ರೋಚ್‌’ ಅಂತ ಒಪ್ಕೋಬೇಕು….”

ಮಾಲಾ ಹೇಳುವುದರಲ್ಲಿ ಸತ್ಯವಿದೆ ಅನ್ನಿಸಿತು ವಲ್ಲಭ್ ಗೆ. ಆದ್ರೂ ಮದುವೆ ಆದ ಮೇಲೆ ಪ್ರೀತಿಯಲ್ಲಿ ಬಿದ್ದಿರೋ ಮಾಲಾಗೆ ದಕ್ಕಿದ್ದಾದರೂ ಏನು? ಡೈವೋರ್ಸ್‌ ಯಾವಾಗ ಸಿಗುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಸಿಗುತ್ತೊ ಅಥವಾ ಸಿಗೋದೇ ಇಲ್ವೋ ಯಾರಿಗ್ಗೊತ್ತು? ವಲ್ಲಭನಿಗೆ ಎಲ್ಲ ಗೊಂದಲದ ಗೂಡಾಗಿತ್ತು.

ದಿನಕಳೆದಂತೆ ಕೇಸು ಗಂಭೀರವಾಗುತ್ತ ಹೋಯಿತು. ಈ ಬಾರಿ ಸ್ನೇಹಾಳಂತೂ ಡೈವೋರ್ಸ್‌ ನೀಡಲ್ಲ ಅಂತ ಪಟ್ಟುಹಿಡಿದು ಕೂತಳು. ಅತ್ತ ಭಾನುಚಂದ್ರ ಕೂಡ ಪರಿಹಾರದ ಹಣ ನೀಡುವಂತೆ ಬೆದರಿಕೆ ಹಾಕಲು ಶುರು ಮಾಡಿದ. ನ್ಯಾಯ ಕಲಾಪದಲ್ಲಿನ ವಾದ ವಿವಾದನ್ನು ಅವಲೋಕಿಸುತ್ತಾ ಮಾಲಾ ಹಾಗೂ ವಲ್ಲಭ್ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ ಈಗೇನು ಮಾಡೋದು ಎಂಬಂತೆ ಜಿಜ್ಞಾಸೆಯಲ್ಲಿ ನಿಂತಿದ್ದರು. ಈ ಪ್ರಶ್ನೆಗಂತೂ ಇಬ್ಬರಲ್ಲೂ ಖಚಿತ ಉತ್ತರವಿಲ್ಲ. ಬಹುಶಃ ಈಗ ಇಬ್ಬರಿಗೂ ಸವೆಸಿದ ಹಾದಿ, ವ್ಯಯಿಸಿದ ಸಮಯ ಎಲ್ಲ ಅರಿವಾಗಿದೆ. ಡೈವೋರ್ಸ್‌ ಪಡೆಯಬೇಕೆನ್ನುವ ತಮ್ಮ ನಿರ್ಧಾರ ತಪ್ಪು ಎಂದೆನಿಸಿದೆ. ಮದುವೆಯ ನಂತರ ಪ್ರೀತಿಸುವುದು ಹಾಗೂ ಅದನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ ಎನ್ನುವ ಕಟು ಸತ್ಯದ ಅರಿವಾಗುತ್ತಲೇ ಇಬ್ಬರೂ ಮೌನವಾಗಿ ಅಲ್ಲೇ ಇದ್ದ ಕಲ್ಲು ಹಾಸಿನ ಮೇಲೆ ಕುಳಿತುಕೊಂಡರು. ಬದುಕು ಅವರನ್ನು ಕವಲು ದಾರಿಯಲ್ಲಿ ಕರೆದೊಯ್ದಿತ್ತು…. ಆ ದಾರಿಯಿಂದ ಮತ್ತೆ ತಿರುಗಿ ಬರುವುದು ಅಷ್ಟು ಸುಲಭವೇ…..?

ಮೌನ ಮುರಿಯುತ್ತಾ ಎದ್ದು ನಿಂತ ಮಾಲಾ ಏನೂ ಹೇಳದೆ ಹಾಗೇ ಹೋಗಿಬಿಟ್ಟಳು. ಪ್ರತಿಸಲದಂತೆ ವಲ್ಲಭ್ ಈ ಬಾರಿ ಮಾಲಾಗೆ ಮನೆಯವರೆಗೂ ಡ್ರಾಪ್‌ ನೀಡುವ ಮಾತಾಡಲಿಲ್ಲ. ಕಾರಲ್ಲಿ ಕುಳಿತುಕೊಳ್ಳುವಂತೆ ಆಹ್ವಾನಿಸಲೂ ಇಲ್ಲ. ಬದುಕು ಬರೀ ಬೆಳಗಲ್ಲ…. ಎನ್ನುವ ಸತ್ಯದ ಅನಾವರಣವಾಗಿತ್ತು. ನ್ಯಾಯ ದೇಗುಲದ ಮೆಟ್ಟಿಲುಗಳನ್ನೇ ದಿಟ್ಟಿಸಿ ನೋಡುತ್ತಿದ್ದ ಇಬ್ಬರಿಗೂ ಇಷ್ಟು ದಿವಸ ಅವರು ಸವೆಸಿದ ಪಾದಗಳಷ್ಟೇ ಸುಸ್ತಾಗಿರಲಿಲ್ಲ. ಜೊತೆಗೆ ಹೃದಯ, ಮನಸ್ಸುಗಳೂ ಕೂಡ ಸುಸ್ತಾಗಿದ್ದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ