ಆಕೆಗೆ ಬಾಲ್ಯದಿಂದಲೇ ಚಟಪಟನೆ ಮಾತನಾಡಿ, ಸುತ್ತಲಿನ ವಾತಾವರಣವನ್ನು ಚಕಿತಗೊಳಿಸುವ ವರ ಸಿದ್ಧಿಸಿತ್ತು. ಜೊತೆಗೆ ಹಾಡಿನ ಹುಚ್ಚು ಕೂಡ ಇತ್ತು. ತನ್ನ ಮಾತಿನ ಚಮತ್ಕಾರದಿಂದಲೇ ಮೋಡಿ ಮಾಡುತ್ತಾ ಮೀಡಿಯಾಗೆ ಕಾಲಿಟ್ಟರು, ಅವರೇ ರಶ್ಮಿ!

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ರಶ್ಮಿ, ತಮ್ಮ ಚಟುವಟಿಕೆಗಳನ್ನೆಲ್ಲ ಬಸವನಗುಡಿಯಿಂದಲೇ ಶುರು ಹಚ್ಚಿಕೊಂಡರು.

ವಾಣಿಜ್ಯೋದ್ಯಮದಲ್ಲಿ ಪದವೀಧರೆಯಾದ ಈಕೆ ಎಪಿಎಸ್‌ ಕಾಲೇಜಿನಲ್ಲಿ ಕಲಿತರು.

ತಮ್ಮ ಅಪೂರ್ವ ಬಗೆಯ ಮಾತುಗಳಿಂದ ಮೀಡಿಯಾಗೆ ಎಂಟ್ರಿ ಪಡೆದ ರಶ್ಮಿ, ಮೊದಲು ಉದಯ, ನಂತರ ಈ. ಟಿವಿ ವಾಹಿನಿಗಳಲ್ಲಿ ಆ್ಯಂಕರ್‌ ಆಗಿ ಕನ್ನಡಿಗರಿಗೆ ಪರಿಚಿತರಾದರು, ನಂತರ ರೇಡಿಯೋ ಜಾಕಿಯಾಗಿ ಜುಲೈ 2006ರಲ್ಲಿ  FM ರೇಡಿಯೋ ಸೇರಿದ ರಶ್ಮಿ ಮಾತಿನ ಮಳೆ ಸುರಿಸುವ ಮೂಲಕ ಇಂದು ಕನ್ನಡಿಗರ ಮನೆ ಮಾತಾಗಿದ್ದಾರೆ.

ಮೊದ ಮೊದಲು ಬೆಳಗಿನ `ಸುಪ್ರಭಾತ’ ಕಾರ್ಯಕ್ರಮದಿಂದ ತಮ್ಮನ್ನು ಶ್ರೋತೃಗಳಿಗೆ ಪರಿಚಯಿಸಿಕೊಂಡ ರಶ್ಮಿ ನಂತರ ಮಧ್ಯಾಹ್ನದ `ಬ್ರಾಡ್‌ ಕಾಸ್ಟ್ ಬಂಡಿ’ ಮೂಲಕ ಜನಮಾನಸದಲ್ಲಿ ಗಟ್ಟಿಯಾಗಿ ಉಳಿದುಕೊಂಡರು.

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಓಡಾಡಿ, ತಂತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ಶ್ರೋತೃಗಳನ್ನು ನೇರವಾಗಿ ಮಾತನಾಡಿಸುತ್ತಾ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಾ, ಅವರಿಗೆ ಬೇಕುಬೇಕಾದ ಅತ್ಯುತ್ತಮ ಹಾಡುಗಳನ್ನು ಪ್ರಸಾರ ಮಾಡುತ್ತಾ ರಶ್ಮಿ ಕೇಳುಗರ ಮನದಲ್ಲಿ ಬಲವಾಗಿ ಬೇರೂರಿದರು. ಸದಾ ಸ್ಟುಡಿಯೋಗೆ ಅಂಟಿಕೊಂಡು ಇನ್‌ ಹೌಸ್‌ ನಿರೂಪಕಿ ಆಗದೆ, ಹೊರಗಿನ ಜನರೊಂದಿಗೆ ಮನೆಮಗಳಂತೆ ಸಹಜವಾಗಿ ಬೆರೆತು, ಅವರೊಂದಿಗೆ ಮಾತಿನ ಮಳೆಗರೆದು, ನಕ್ಕುನಗಿಸಿ, ಹಲವು ರಸಪ್ರಶ್ನೆಗಳನ್ನು ಕೇಳುತ್ತಾ, ವಿವಿಧ ವಿನೋದಾವಳಿಯ ಹಾಸ್ಯ ಚಟಾಕಿ ಹಾರಿಸುತ್ತಾ…. ಮಾತಿನ ಮೂಲಕ ಮಳೆಯನ್ನೇ ಸುರಿಸುವರು ಈ ಮಾತಿನಮಲ್ಲಿ. ಹಾಗಾಗಿಯೇ `ಬ್ರಾಡ್‌ ಕಾಸ್ಟ್ ಬಂಡಿ’ ಕಾರ್ಯಕ್ರಮ ವಹಿಸುವವರಿಗೆ ಅನ್ವರ್ಥಕವಾಗಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಬಂಡಿಯಂತೆ ಸಾಗುತ್ತಾ ರೋಡ್‌ ಶೋ ಕವರ್‌ ಮಾಡುತ್ತಿತ್ತು. ಹೀಗೆ ಅವರ ಕಾರ್ಯಕ್ರಮಗಳ ಪಟ್ಟಿ ಮುಂದುವರಿಯುತ್ತಾ, `ರಾಪಿಡ್‌ ಅಡ್ಡ, ಭಾರಿ ಬಿಂದಾಸ್‌’ ಇತ್ಯಾದಿಗಳೊಂದಿಗೆ ಆಕೆ ಹೆಚ್ಚಿನ ಜನಪ್ರಿಯತೆ ಪಡೆದರು. ಸಹಜವಾಗಿಯೇ ಈ ಚಿನಕುರುಳಿಯಂಥ ಮಾತುಗಳು ಈಕೆಗೆ `ರಾಪಿಡ್‌ ರಶ್ಮಿ’ ಎಂದು ಹೆಸರು ತಂದುಕೊಟ್ಟವು.

ಬೆಳ್ಳಿ ತೆರೆಯ ಬಂಗಾರದ ಹಾಡುಗಳನ್ನು ಪ್ರಸಾರ ಮಾಡುವ FM 92.7 ಸದಾ, `ಅಂದಿಗೂ ಹಿಟ್‌ ಎಂದೆಂದಿಗೂ ಹಿಟ್‌’  ಗೀತೆಗಳನ್ನಷ್ಟೇ ಕೇಳಿಸುತ್ತದೆ. ತನ್ನ ಚಾಕಚಕ್ಯತೆಯಿಂದ ಕಾರ್ಯಕ್ರಮಗಳನ್ನು ಅಮೋಘವಾಗಿ ನಿರೂಪಿಸುವ ರಾಪಿಡ್‌ ರಶ್ಮಿ, ಈಗ ಪ್ರತಿದಿನ ಮಧ್ಯಾಹ್ನ 1 ಗಂಟೆಯ `ರೆಟ್ರೋ ಸವಾರಿ’ ಕಾರ್ಯಕ್ರಮದ ಮೂಲಕ ಕೇಳುಗರ ಮನಗೆದ್ದಿದ್ದಾರೆ. ರಾಪಿಡ್‌ ರಶ್ಮಿ ಇಲ್ಲದೆ ರೆಟ್ರೋ ಸವಾರಿ ಇಲ್ಲ ಎಂಬಷ್ಟು ಖ್ಯಾತಿ ಪಡೆದಿದ್ದಾರೆ. ಹೀಗೆ ಸೆಲೆಬ್ರಿಟಿ ಎನಿಸಿದ ರಶ್ಮಿ, ಯಾವುದೇ ಜನಪ್ರಿಯ ಸಾರ್ವಜನಿಕ ಕಾರ್ಯಕ್ರಮಕ್ಕೆ ಅತಿ ಅನಿವಾರ್ಯ ಎನ್ನುವಂತಾಗಿಬಿಟ್ಟರು. ಕಲರ್ಸ್‌ ಕನ್ನಡ ವಾಹಿನಿ `ಡ್ಯಾನ್ಸಿಂಗ್‌ ಸ್ಟಾರ್ಸ್‌’ ಕಾರ್ಯಕ್ರಮ ಏರ್ಪಡಿಸಿದ್ದಾಗ, ಈಕೆಯ ಜನಪ್ರಿಯತೆ ಸತತ 8 ವಾರ ರಶ್ಮಿ ಅಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಸೃಜನ್ ಲೋಕೇಶ್‌ರ `ಮಜಾ ಟಾಕೀಸ್‌’ನಲ್ಲೂ ಸೆಲೆಬ್ರಿಟಿಯಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಾರ್ವಜನಿಕರ ಹಿತಾಸಕ್ತಿಗಾಗಿ ಬ್ರೆಸ್ಟ್ ಕ್ಯಾನ್ಸರ್‌ ಅವೇರ್‌ನೆಸ್‌ ಕ್ರಿಯೇಟ್‌ ಮಾಡಲು ರಾಷ್ಟ್ರೀಯ ಖ್ಯಾತಿವೆತ್ತ ಮಿಲಿಂದ್‌ ಸೋಮನ್‌ ಕಂಠೀರವ ಸ್ಟೇಡಿಯಂನಲ್ಲಿ 10 ಕಿ.ಮೀ. ಓಟದ `ಪಿಂಕಥಾನ್‌’ ಏರ್ಪಡಿಸಿದ್ದಾಗ, ರಾಪಿಡ್‌ ರಶ್ಮಿ ಅದಕ್ಕೆ ಮುಖ್ಯ ಮ್ಯಾಸ್ಕಾಟ್‌ ಆಗಿ, ಇಡೀ ಕಾರ್ಯಕ್ರಮದ ಜವಾಬ್ದಾರಿ ಹೆಗಲ ಮೇಲೆ ಹೊತ್ತು ಅದನ್ನು ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.

ಕಿರಣ್‌ ಮುಜುಮ್ ದಾರ್‌, ಅಶ್ವಿನಿ ನಾಚಪ್ಪ, ರಾವತ್‌ ಅಬ್ರಹಾಂ, ಪ್ರಿಯಾಂಕಾ ಉಪೇಂದ್ರ ಮುಂತಾದ ಪ್ರಮುಖ ಸೆಲೆಬ್ರಿಟಿಗಳು ಇದಕ್ಕೆ ಹಾಜರಿದ್ದರು.

ರಶ್ಮಿಯ ಜನಪ್ರಿಯತೆ ಮುಂದುವರಿದಂತೆ ಆಕೆ ಮುಂದೆ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡು ಪ್ರೇಕ್ಷಕರಿಗೆ ಸಂತಸ ನೀಡಿದರು. ಪಯಣ, ಗಾನ ಬಜಾನಾ, ಕಾಳಿ ಇತ್ಯಾದಿ ಚಿತ್ರಗಳಲ್ಲಿ ಲಾ ಆಗಿಯೇ ಕಾಣಿಸಿಕೊಂಡ ರಶ್ಮಿ ಸಿನಿಮಾಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡರು. ಮುಂದೆ, ನಿರ್ದೇಶಕ ಪೀಣ್ಯ ನಾಗರಾಜ್‌ ಇವರನ್ನು ಸಂಪರ್ಕಿಸಿ ತಮ್ಮ `ನಮಕ್‌ ಹರಾಮ್’ ಚಿತ್ರಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಆರಿಸಿದರು. ಗೋಲ್ಡನ್‌ ಸ್ಟಾರ್‌ ಗಣೇಶ್‌ ತಮ್ಮ ಮಹೇಶ್‌ ಈ ಚಿತ್ರದ ನಾಯಕ. ಇದೀಗ `-4′ ಚಿತ್ರದ ಶೂಟಿಂಗ್‌ನಲ್ಲಿ ಬಿಝಿ ಆಗಿರುವ ರಶ್ಮಿಗಾಗಿ ಇನ್ನೂ ಹಲವಾರು ಚಿತ್ರಗಳು ಕಾದಿವೆ. ಅದರಲ್ಲಿ ಪಕ್ಕಾ ಚೂಸಿ ಆಗಿರುವ ರಶ್ಮಿ, ಒಳ್ಳೆಯ ಸ್ಕ್ರಿಪ್ಟ್ ಇದ್ದಾಗ ಮಾತ್ರ ಒಪ್ಪಿಕೊಳ್ಳುತ್ತಾರಂತೆ.

ಕಳೆದ ನವೆಂಬರ್‌ನಲ್ಲಿ ಗೃಹಶೋಭಾ ತನ್ನ ಓದುಗರಿಗಾಗಿ `ಐಟಿಸಿ ಆಶೀರ್ವಾದ್‌ ಮೇರಾ ವಾದಾ ಈವೆಂಟ್‌’ನ ಈ ವರ್ಷದ ಕೊನೆಯ ಕಾರ್ಯಕ್ರಮವನ್ನು ವಿಜಯನಗರದ ಕ್ಲಬ್‌ನಲ್ಲಿ ಏರ್ಪಡಿಸಿದ್ದಾಗ, ಅಲ್ಲಿಗೆ ಆಗಮಿಸಿದ್ದ ರಾಪಿಡ್‌ ರಶ್ಮಿ, 350ಕ್ಕೂ ಹೆಚ್ಚು ಮಂದಿಯಿದ್ದ  ಮಹಿಳಾ ಸಭಿಕರೊಂದಿಗೆ ಅತ್ಯಂತ ಆತ್ಮೀಯತೆಯಿಂದ ಸ್ಪಂದಿಸುತ್ತಾ, ಅವರನ್ನು ತಮ್ಮ ಚಿನಕುರುಳಿ ಮಾತುಗಳಿಂದ ನಗೆಗಡಲಲ್ಲಿ ತೇಲಿಸಿದರು. ಸಭಿಕರನ್ನು ಹಲವು ರಸಮಯ ಪ್ರಶ್ನೋತ್ತರಗಳಿಂದ ರಂಜಿಸಿ, ಅವರಿಗೆ ಬಹುಮಾನ ಹಂಚಿದರು. ಒಟ್ಟಾರೆ ರಾಪಿಡ್‌ ರಶ್ಮಿಯಿಂದ ಕಾರ್ಯಕ್ರಮಕ್ಕೆ ವಿಶೇಷ ಕಳೆ ಬಂದಿತ್ತು.

ಯಾವುದೇ ಹೊಸ ಕಾರ್ಯಕ್ರಮದ ಲಾಂಚ್‌, ಶೋಗಳಲ್ಲಿ ರೆಡ್‌ ಕಾರ್ಪೆಟ್‌ ವೆಲ್ ‌ಕಮ್ ಇರುವೆಡೆ ಸಹಜವಾಗಿ ಮುಂದಿರುವ ರಶ್ಮಿಗೆ ಗೃಹಶೋಭಾ ಓದುಗರೆಲ್ಲರ ಪರವಾಗಿ `ಆಲ್ ದಿ ಬೆಸ್ಟ್!’ ಅವರ ಎಲ್ಲಾ ಕನಸುಗಳೂ ನನಸಾಗಲಿ, FM 92.7ನ್ನು ತಮ್ಮ ಮಾತುಗಳಿಂದ ಇನ್ನಷ್ಟು, ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸೋಣ.

ರಾಪಿಡ್‌ ರಶ್ಮಿಯನ್ನು ಸಂಪರ್ಕಿಸಲು : ಫೋನ್‌ – 080 -39890927. ವಾಟ್ಸ್ ಆ್ಯಪ್‌ : 7815027927

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ