ಬದಲಾಗಿರುವ ಇಂದಿನ ಯಾಂತ್ರಿಕ ಯುಗದಲ್ಲಿ ಮಹಿಳೆಯರು ವೇಗದ ಬದುಕಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಈ ಅನಿವಾರ್ಯತೆಗಳಲ್ಲಿ ವಾಹನ ಚಾಲನೆಯೂ ಒಂದು. ಅದು ದ್ವಿಚಕ್ರ ವಾಹನವಾಗಿರಬಹುದು ಅಥವಾ ಕಾರು, ಜೀಪುಗಳಾಗಿರಬಹುದು. ಇವುಗಳ ಚಾಲನೆ ಸಮಯದಲ್ಲಿ ಅರಿವಿದ್ದೋ ಅಥವಾ ಅರಿವಿಲ್ಲದೆಯೋ ಕೆಲವು ಮುಂಜಾಗ್ರತಾ ಕ್ರಮಗಳನ್ನು ಸಾಮಾನ್ಯವಾಗಿ ಮರೆತುಬಿಡುತ್ತಾರೆ. ಇತ್ತೀಚೆಗಂತೂ ಕೆಲವು ಹುಡುಗಿಯರು ತಮ್ಮ ಸ್ನೇಹಿತರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ಗಾಡಿ ಚಲಾಯಿಸುತ್ತಾ ಅಪಘಾತಕ್ಕೀಡಾಗುವುದನ್ನು ಕಂಡಾಗ ಹುಡುಗಿಯರಿಗೆ ಡ್ರೈವಿಂಗ್ ಎಷ್ಟು ಸೇಫ್‌….? ಎನ್ನುವ ಪ್ರಶ್ನೆ ಮೂಡುತ್ತದೆ. ಈಗಿನ ಕಾಲೇಜು ಹುಡುಗಿಯರಿಗಂತೂ ಮೊಬೈಲ್ ‌ತಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದೆ. ಒಂದು ಕ್ಷಣ ಮೊಬೈಲ್ ‌ಬಿಟ್ಟಿರಲಾರದಷ್ಟೇ ಅವಿನಾಭಾವ. ಹಾಗಾಗಿ ಗಾಡಿ ಓಡಿಸುವಾಗ ಇಯರ್ ಫೋನಿನಲ್ಲಿ ಮಧುರವಾದ ಹಾಡು ಕೇಳುತ್ತಾ ತಮ್ಮದೇ ಆದ  ಭ್ರಮಾಲೋಕದಲ್ಲಿ ತೇಲಾಡುತ್ತ ಸಾಗುವುದು ಇಂದಿನ ಫ್ಯಾಷನ್ ಎನಿಸಿಕೊಂಡಿದೆ. ಹಾಡು ಕೇಳಿದರಷ್ಟೇ ಗಾಡಿ ಓಡಿಸಲು ಸ್ಛೂರ್ತಿ ಎನ್ನುವಂತಾಗಿದ್ದು, ಈ ಹವ್ಯಾಸ ಅಪಘಾತಕ್ಕೆ ಆಹ್ವಾನವಿತ್ತಂತೆ.

ಇನ್ನು ಕಾರು ಚಲಾಯಿಸುವ ಹುಡುಗಿಯರಂತೂ ಒಂದು ಕೈಯಲ್ಲಿ ಸ್ಟೇರಿಂಗ್‌ ಇನ್ನೊಂದು ಕೈಯಲ್ಲಿ ಮೊಬೈಲ್ ‌ಹಿಡಿದುಕೊಂಡು ಮಾತನಾಡುತ್ತಲೋ ಅಥವಾ ಮೇಕಪ್‌ ಮಾಡಿಕೊಳ್ಳುವಲ್ಲಿ ಮಗ್ನರಾಗಿರುತ್ತಾರೆ. ಅಷ್ಟೇ ಅಲ್ಲ ಕೆಲವು ಹುಡುಗಿಯರು ಅವಸರದಲ್ಲಿ ಮನೆಯಿಂದ ಹೊರಟು ಡ್ರೈವಿಂಗ್‌ ಮಾಡುತ್ತಲೇ ಕಾರಿನಲ್ಲಿ ತಿಂಡಿ ಕೂಡ ಮುಗಿಸಿಬಿಡುತ್ತಾರೆ. ಆದರೆ ಇದು ಸರಿಯಾದ ರೀತಿಯಲ್ಲ. ಇದರಿಂದ ಅಪಘಾತವಾಗುವ ಸಂಭವವೇ ಹೆಚ್ಚು. ಹಾಗೆಯೇ ದ್ವಿಚಕ್ರ ವಾಹನ ಚಲಾಯಿಸುವ ಬಹುತೇಕ ಹುಡುಗಿಯರು ಒಂದೋ ಸೀರೆ ಉಟ್ಟಿರುತ್ತಾರೆ, ಇಲ್ಲವೇ ಚೂಡಿದಾರ್‌ ಧರಿಸಿರುತ್ತಾರೆ. ಸೀರೆಯ ಸೆರಗಿನ ಅಂಚು ಚಕ್ರಕ್ಕೆ ಸಿಲುಕಬಹುದು ಅಥವಾ ಚೂಡಿದಾರ್‌ ದುಪಟ್ಟಾ ಗಾಡಿಗೆ ಸಿಲುಕಿದಲ್ಲಿ ಅದೂ ಗಂಭೀರ ಸ್ವರೂಪದ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ.

ಈಗಾಗಲೇ ಹಲವಾರು ಮಹಿಳೆಯರು ಸೀರೆ, ದುಪಟ್ಟಾ ಗಾಡಿಗೆ ಸಿಲುಕಿ ಗಂಭೀರ ಗಾಯ, ಶಾಶ್ವತ ಅಂಗವಿಕಲತೆ ಕೆಲವೊಮ್ಮೆ ಮಾರಣಾಂತಿಕ ಹಂತ ತಲುಪಿ, ಸಾವನ್ನಪ್ಪಿದ ಉದಾಹರಣೆಗಳೂ ನಮ್ಮ ಕಣ್ಣ ಮುಂದಿದೆ.

ಇನ್ನು ಕೆಲವು ತಾಯಂದಿರು ತಮ್ಮದೇ ಗಡಿಬಿಡಿಯಲ್ಲಿ ಒಂದೇ ಸಮಯದಲ್ಲಿ ಎರಡೆರಡು ಕೆಲಸ ಮಾಡಲು ಮುಂದಾಗುತ್ತಾರೆ. ಒಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು, ಇನ್ನೊಂದು ಕೈಲಿ ಗಾಡಿ ಓಡಿಸುವ ದೃಶ್ಯ ಕಾಣಬಹುದು. ಇದು ಎಷ್ಟೊಂದು ಅಪಾಯಕಾರಿ ಚಾಲನೆ ಎನ್ನುವುದು ಅವರಿಗೆ ಅರಿವಿರುವುದಿಲ್ಲ. ಕ್ಲುಪ್ತ ಸಮಯದಲ್ಲಿ ತನ್ನ ಕೆಲಸವನ್ನು ಮಾಡಿ ಮುಗಿಸಬೇಕೆನ್ನುವ ಧಾವಂತ. ಇನ್ನು ಕೆಲವು ಮಹಿಳೆಯರಂತೂ ತಮ್ಮ ಸುಂದರವಾದ ಕೇಶರಾಶಿ ಎಲ್ಲಿ ಹಾಳಾಗುತ್ತೋ ಎನ್ನುವ ಚಿಂತೆಯಲ್ಲಿ ಹೆಲ್ಮೆಟ್ ಧರಿಸುವುದೇ ಇಲ್ಲ. ಹೆಲ್ಮೆಟ್‌ ಧರಿಸದೆ ಗಾಡಿ ಚಲಾಯಿಸುವ ಇವರಿಗೆ ಪ್ರಾಣಕ್ಕಿಂತ ಕೇಶದ ಕುರಿತು ಕಾಳಜಿ ಮುಖ್ಯವಾಗಿ ಇರುತ್ತದೆ. ಹೆಲ್ಮೆಟ್‌ ಧರಿಸದೇ ಗಾಡಿ ಚಲಾಯಿಸುವುದು ಕಾನೂನಿನ ಪ್ರಕಾರ ಅಪರಾಧ ಎನ್ನುವ ಸಾಮಾನ್ಯ ಅರಿವಿಲ್ಲದೆ `ನಮ್ಮ ಗಾಡಿ ನಾವು ಹೇಗಾದರೂ ಓಡಿಸ್ತೀವಿ ನಿಮಗೇನು?’ ಎಂದು ದೌಲತ್ತಿನಿಂದಲೇ ಸಾಗುತ್ತಿರುತ್ತಾರೆ. ಇನ್ನು ಕೆಲವು ಯುವತಿಯರು ಸಿಗ್ನಲ್ ಜಂಪ್‌ ಮಾಡುವ ಚಾಳಿ ಬೆಳೆಸಿಕೊಂಡಿರುತ್ತಾರೆ. ಅಷ್ಟು ಸಾಲದೆಂಬಂತೆ ರಾಂಗ್‌ ರೂಟಿನಲ್ಲಿ ಗಾಡಿ ಚಲಾಯಿಸಿಕೊಂಡು ಬಂದು ಹಲ್ಲು ಕಿರಿಯುವುದನ್ನು ಕಾಣಬಹುದು.

`ನಾವು ಹುಡುಗಿಯರು…. ನಮಗಾರು ದಂಡ ವಿಧಿಸುತ್ತಾರೆ…..? ಹೆಣ್ಮಕ್ಕಳು ಎನ್ನುವ ಕಾರಣಕ್ಕೆ ಬಿಟ್ಟುಬಿಡುತ್ತಾರೆ,’ ಎನ್ನುವ ಮೊಂ ಧೈರ್ಯದಿಂದ ಮುನ್ನುಗ್ಗುತ್ತಿರುತ್ತಾರೆ. ಸಿಗ್ನಲ್ ಜಂಪ್‌ ಹಾಗೂ ರಾಂಗ್‌ ರೂಟ್‌ನಲ್ಲಿ ಚಾಲನೆ ಎಷ್ಟು ಅಪಾಯಕಾರಿ ಅನ್ನೋದನ್ನು ಇಂದಿನ ಹುಡುಗಿಯರು ಅರಿತುಕೊಳ್ಳುವುದು ಬಹಳ ಮುಖ್ಯ. ಇನ್ನೂ ಸ್ವಾರಸ್ಯಕರವೆಂದರೆ ಕೆಲವು ಮಹಿಳೆಯರು ತಮ್ಮ ದ್ವಿಚಕ್ರ ವಾಹನದಲ್ಲಿ ಇಡೀ ಸಂಸಾರವನ್ನೇ ಸಾಗಿಸುತ್ತಿರುತ್ತಾರೆ. 3-4 ಮಕ್ಕಳನ್ನು ಹಿಂದೆ ಮುಂದೆ ಕೂರಿಸಿಕೊಂಡು ಅಪಾಯಕಾರಿ ಚಾಲನೆ ಮಾಡುತ್ತಿರುತ್ತಾರೆ. ಗಾಡಿಯಲ್ಲಿ ಕೇಕೆ ಹಾಕಿ ಸಾಗುವ ಮಕ್ಕಳು ಆಯತಪ್ಪಿ ಕೆಳಗೆ ಬಿದ್ದು ಅನಾಹುತ ಸಂಭವಿಸುವುದೂ ಉಂಟು. ಹಲವು ಮಕ್ಕಳನ್ನು ಒಂದೇ ಗಾಡಿಯಲ್ಲಿ ಕುಳ್ಳಿರಿಸಿಕೊಂಡಲ್ಲಿ ಸಲೀಸಾಗಿ ಡ್ರೈವ್ ಮಾಡಲಾಗುವುದಿಲ್ಲ. ಜೊತೆಗೆ ಮಕ್ಕಳು ಆಕಡೆ ಈಕಡೆ ವಾಲುವುದರಿಂದ ಡ್ರೈವಿಂಗ್‌ ಹಿಡಿತ ತಪ್ಪಿರುತ್ತದೆ. ಆಗ ಅಪಘಾತವಾಗುವ ಸಂಭವವೇ ಹೆಚ್ಚು. ಇಂತಹ ಹತ್ತು ಹಲವಾರು ವಿಚಾರಗಳನ್ನು ವಾಹನ ಚಾಯಿಸುವ ಎಲ್ಲಾ ಮಹಿಳೆಯರು ಅರಿತುಕೊಳ್ಳುವುದು ಒಳಿತು. `ನಮಗಾಗಿ…. ನಮ್ಮ ರಕ್ಷಣೆಗಾಗಿ ಮಾಡಿರುವ ಸಂಚಾರಿ ನಿಯಮಗಳನ್ನು ಪಾಲಿಸುವುದು ನಮಗೂ ಹಾಗೂ ನಮ್ಮ ಸಮಾಜಕ್ಕೂ ಒಳಿತು,’ ಎಂಬುದುನ್ನು ಮನಗಾಣಬೇಕು.

ಸೇಫ್ಡ್ರೈವಿಂಗ್ಗಾಗಿ ಮುಂಜಾಗ್ರತಾ ಕ್ರಮಗಳು

ವಾಹನ ಚಲಾಯಿಸುವ ಮಹಿಳೆಯರು ರಸ್ತೆಯಲ್ಲಿ ಸಾಗುವಾಗ ಮುನ್ನೆಚ್ಚರಿಕೆಯಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು.

ದ್ವಿಚಕ್ರ ವಾಹನ ಚಲಾಯಿಸುವ ಮಹಿಳೆಯರು ಸೀರೆ ಅಥವಾ ಚೂಡಿದಾರ್‌ ಧರಿಸಿದ್ದಲ್ಲಿ, ಗಾಡಿಯಲ್ಲಿ ಕುಳಿತುಕೊಳ್ಳುವ ಮುನ್ನ ತಮ್ಮ ಸೀರೆಯ ಸೆರಗಿನ ಅಂಚು ಅಥವಾ ಚೂಡಿದಾರ್‌ನ ದುಪಟ್ಟಾವನ್ನು ಸರಿಯಾಗಿಸಿಕೊಂಡು ಕುಳಿತುಕೊಳ್ಳಿ.

ಗಾಡಿ ಓಡಿಸುವಾಗ ಕಡ್ಡಾಯವಾಗಿ ಮೊಬೈಲ್ ಫೋನ್‌ನಲ್ಲಿ ಮಾತನಾಡಬೇಡಿ. ಇದರಿಂದ ನಿಮ್ಮ ಏಕಾಗ್ರತೆಗೆ ಧಕ್ಕೆ ಉಂಟಾಗಿ ಅಪಘಾತ ಸಂಭವಿಸುವ ಸಾಧ್ಯತೆಯೇ ಹೆಚ್ಚು.

ದ್ವಿಚಕ್ರ ವಾಹನದಲ್ಲಿ ಹೋಗುವಾಗ ಚಿಕ್ಕ ಮಕ್ಕಳನ್ನು ಒಂದು ಕೈಯಲ್ಲಿ ಎತ್ತಿಕೊಂಡು ಇನ್ನೊಂದು ಕೈಯಲ್ಲಿ ಗಾಡಿ ಓಡಿಸುವ ಕಸರತ್ತು ಮಾಡಲು ಮುಂದಾಗಬೇಡಿ.

ಒಂದೇ ಗಾಡಿಯಲ್ಲಿ 3-4 ಮಕ್ಕಳನ್ನು ಕುಳ್ಳಿರಿಸಿಕೊಂಡು ಹೋಗಬೇಡಿ. ನೀವು ರಸ್ತೆಯಲ್ಲಿ ಶಿಸ್ತುಬದ್ಧರಾಗಿ ಗಾಡಿ ಓಡಿಸಬೇಕೇ ಹೊರತು ಯಾವುದೋ ಸರ್ಕಸ್‌ ಕಂಪನಿಯಲ್ಲಿ ಕಾರ್ಯಕ್ರಮ ನೀಡುತ್ತಿಲ್ಲ ಅನ್ನೋದನ್ನು ಗಮನದಲ್ಲಿಡಿ.

ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸಿ. ಇದರಿಂದ ನಿಮ್ಮ ತಲೆ ಹಾಗೂ ಜೀವ ಎರಡೂ ಸೇಫ್‌.

ಸಾಧ್ಯವಾದಷ್ಟು ಸಿಗ್ನಲ್ ಜಂಪ್‌ ಹಾಗೂ ರಾಂಗ್‌ ರೂಟ್‌ನಲ್ಲಿ ಸಾಗುವುದನ್ನು ತಪ್ಪಿಸಿ. ಇಲ್ಲವಾದಲ್ಲಿ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳಿಂದ ನಿಮ್ಮ ಜೀವಕ್ಕೆ ಆಕಸ್ಮಿಕವಾಗಿ ಅಪಾಯ ಉಂಟಾದೀತು.

ಗಾಡಿ ಓಡಿಸುವಾಗ ಇಯರ್‌ ಫೋನ್‌ ಹಾಕಿಕೊಂಡು ಹಾಡುಗಳನ್ನು ಕೇಳುತ್ತಾ ಸಂಭ್ರಮಿಸುವುದನ್ನು ಬಿಟ್ಟುಬಿಡಿ. ಇಯರ್‌ ಫೋನ್ ಕಿವಿಯಲ್ಲಿದ್ದಾಗ ಬೇರೆ ವಾಹನಗಳ ಹಾರ್ನ್‌ ಶಬ್ದ ಕೇಳಿಸದೆ ಗಲಿಬಿಲಿಯಿಂದ ಅಪಘಾತ ಸಂಭವಿಸಬಹುದು.

ಕಾರಿನಲ್ಲಿ ಡ್ರೈವ್ ಮಾಡುತ್ತಾ ಮೇಕಪ್‌ ಮಾಡಿಕೊಳ್ಳುವುದು ಹಾಗೂ ತಿಂಡಿ ತಿನ್ನುವ ಅಭ್ಯಾಸಗಳಿದ್ದರೆ ಈಗಲೇ ಬಿಟ್ಟುಬಿಡಿ.

ರಸ್ತೆ ನಿಯಮವನ್ನು ಪಾಲಿಸಿ. ಇದು ನಮಗಾಗಿ ನಮ್ಮ ರಕ್ಷಣೆಗಾಗಿ ಮಾಡಿರುವ ನಿಯಮ ಎಂಬುದನ್ನು ಮರೆಯದಿರಿ.

– ಅಶೋಕ್‌ ಎಂ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ