ನೀವು ಬಹುಶಃ ಊಹೆ ಕೂಡ ಮಾಡಿರುವುದಿಲ್ಲ, ಟೂರಿಸಂನಂತಹ ರೋಚಕ ಕ್ಷೇತ್ರ ಈಗ ಸೆಕ್ಸ್ ಮತ್ತು ಶೋಷಣೆಯ ಮಾಧ್ಯಮವಾಗಿದೆ. ಈ ಕಾರಣದಿಂದಾಗಿ ಕೆಲವರು ಪ್ರವಾಸದ ನೆಪದಲ್ಲಿ ತಮ್ಮ ದೈಹಿಕ ಕಾಮನೆಗಳನ್ನು ಈಡೇರಿಸಿಕೊಳ್ಳಲು ಬರುತ್ತಿದ್ದಾರೆ. ಒಂದು ದುರಂತದ ಸಂಗತಿಯೆಂದರೆ, ಇರು ದೈಹಿಕ ಕಾಮನೆ ತಣಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ಮುಗ್ಧ ಮಕ್ಕಳನ್ನು. ಅವರು ಅಷ್ಟಿಷ್ಟು ಹಣದಾಸೆಗಾಗಿ ಇವರ ಕಪಿಮುಷ್ಟಿಗೆ ಸಿಲುಕುತ್ತಿದ್ದಾರೆ. ಹೀಗಾಗಿ ಚೈಲ್ಡ್ ಸೆಕ್ಸ್ ಪ್ರವಾಸೋದ್ಯಮದ ಸ್ವರೂಪವನ್ನೇ ಬದಲಿಸಿಬಿಟ್ದಿದೆ. ಇಂತಹ ಹಲವು  ದೇಶಗಳಿವೆ, ಅವು ಚೈಲ್ಡ್ ಸೆಕ್ಸ್ ಟೂರಿಸಂಗೆ ಕುಖ್ಯಾತಿ ಪಡೆದಿವೆ.

ಕಾಂಬೋಡಿಯಾದ ಉದಾಹರಣೆಯನ್ನೇ ತೆಗೆದುಕೊಳ್ಳಿ, ಇಲ್ಲಿ ಪ್ರವಾಸಕ್ಕೆ ಬರುವವರ ಜೊತೆಗೆ ಕೆಲವು ಜನರು ಟೂರಿಸಂನ ಹೆಸರಿನಲ್ಲಿ ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡಲು ಬರುತ್ತಾರೆ, ಒಂದು ಅಂದಾಜಿನ ಪ್ರಕಾರ, ಅಲ್ಲಿ 80 ಸಾವಿರಕ್ಕೂ ಹೆಚ್ಚು ಮಕ್ಕಳು ಲೈಂಗಿಕ ವ್ಯಾಪಾರದಲ್ಲಿ ತೊಡಗಿದ್ದಾರೆ. ಕಾಂಬೊಡಿಯಾದ ಹಾಗೆ ಭಾರತ ಕೂಡ ಸೆಕ್ಸ್ ಟೂರಿಸಂ ಪಟ್ಟಿಯಲ್ಲಿ ಸೇರಿಕೊಂಡಿದೆ.

ಭಾರತದಲ್ಲೂ ಕಾಲು ಚಾಚುತ್ತಿರುವ ಸೆಕ್ಸ್ ಟೂರಿಸಂ

ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಪ್ರವಾಸೋದ್ಯಮ ಕೇಂದ್ರ ಎಂದು ಪರಿಗಣಿಸಲ್ಪಟ್ಟಿದೆ. ಭಾರತದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದಲ್ಲಿ ಅಸಂಖ್ಯ ಪ್ರವಾಸಿ ತಾಣಗಳಿವೆ. ಅದರಲ್ಲೂ ವಿಶೇಷವಾಗಿ ದಕ್ಷಿಣದಲ್ಲಿ ಕೇರಳ ಹಾಗೂ ಗೋವಾ ರಾಜ್ಯಲ್ಲಿ ವರ್ಷವಿಡೀ ಪ್ರವಾಸಿಗರು ಬರುತ್ತಲೇ ಇರುತ್ತಾರೆ.

ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ದೇಶಿ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ ಹಾಗೂ ಇಲ್ಲಿನ ನೈಸರ್ಗಿಕ ಸೌಂದರ್ಯದ ಆಸ್ವಾದನೆ ಮಾಡುತ್ತಾರೆ. ಆದರೆ ಕೆಲವು ತಿಂಗಳುಗಳಿಂದ ಪ್ರವಾಸಿಗರ ಆನಂದದಲ್ಲಿ ಲಂಪಟತನದ ದುರ್ನಾತ ಬರಲಾರಂಭಿಸಿದೆ. ಈಗ ಈ ರಾಜ್ಯಕ್ಕೆ ಬರುವ ಪ್ರವಾಸಿಗರು ಮನರಂಜನೆಯ ಹೆಸರಿನಲ್ಲಿ ತಮ್ಮ ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳುತ್ತಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಕೊಚ್ಚಿನ್‌ನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಕ್ಕಳ ಮೇಲೆ ಆಗುತ್ತಿರುವ ಶೋಷಣೆ ಕುರಿತಂತೆ ಒಂದು ಸೆಮಿನಾರ್‌ ಆಯೋಜಿಸಲಾಗಿತ್ತು. ಇದರಲ್ಲಿ ಚಿಲ್ಡ್ರನ್ಸ್ ರೈಟ್ಸ್ ಇನ್‌ ಗೋವಾದ ಪ್ರತಿನಿಧಿ ನಿಷಿಧಾ ದೇಸಾಯಿ ಮಂಡಿಸಿದ ಕೇಸ್ ಸ್ಟಡೀಸ್‌ನಲ್ಲಿ ಇಂತಹ ಗಾಬರಿ ಹುಟ್ಟಿಸುವ ಅನೇಕ ಸಂಗತಿಗಳಿವೆ. ಅದು ಪ್ರವಾಸೋದ್ಯಮದ ವ್ಯಾಖ್ಯೆಯನ್ನೇ ಬದಲಿಸಿಬಿಟ್ಟಿದೆ. ಅವರ ವರದಿಯ ಪ್ರಕಾರ, ಲೈಂಗಿಕ ಕಾಮನೆ ತೀರಿಸಿಕೊಳ್ಳಲೆಂದೇ ಕೆಲವು ಪ್ರವಾಸಿಗರು ತೀರ ಪ್ರದೇಶಕ್ಕೆ ಬಂದು ಮುಗ್ಧ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ.

ಕೇರಳ ಕೂಡ ಇದಕ್ಕೆ ಕುಖ್ಯಾತಿ

ಭಾರತದಲ್ಲಿ ಗೋವಾ ಮೊದಲಿನಿಂದಲೇ ಸೆಕ್ಸ್ ಟೂರಿಸಂಗೆ ಕುಖ್ಯಾತಿ. ಇಲ್ಲಿನ ಜನಸಂಖ್ಯೆ 15 ಲಕ್ಷ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ದ್ವಿಗುಣ ಅಂದರೆ 28 ಲಕ್ಷಕ್ಕೂ ಹೆಚ್ಚು. ಅದರಲ್ಲಿ ಸುಮಾರು 4 ಲಕ್ಷದಷ್ಟು ವಿದೇಶಿ ಪ್ರವಾಸಿಗರೇ ಆಗಿರುತ್ತಾರೆ.

ವಿದೇಶಿ ಪ್ರವಾಸಿಗರು ಕೇವಲ ಪ್ರವಾಸದ ಖುಷಿಗೆಂದಷ್ಟೇ ಬರುವುದಿಲ್ಲ, ಕಡಿಮೆ ಖರ್ಚಿನಲ್ಲಿ ತಮ್ಮ ಕಾಮಲಾಲಸೆ ತೀರಿಸಿಕೊಂಡು ಹೋಗುವುದಾಗಿರುತ್ತದೆ. ಅಂದಹಾಗೆ ಈ ಭಾಗದಲ್ಲಿ ಮೀನುಗಾರರ ಮನೆಗಳೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿವೆ. ಈ ಮೀನುಗಾರರ ಮಕ್ಕಳು ಸಮುದ್ರದ ದಂಡೆಯಲ್ಲಿಯೇ ಆಟ ಆಡುತ್ತಿರುತ್ತಾರೆ. ಎಷ್ಟೋ ಸಲ ಪ್ರವಾಸಿಗರು ಇಂತಹ ಮಕ್ಕಳನ್ನು ಪರಿಚಯ ಮಾಡಿಕೊಂಡು ಅಥವಾ ಅವರನ್ನು ಪುಸಲಾಯಿಸಿ ಲೈಂಗಿಕ ಚಟುವಟಿಕೆಗಾಗಿ ಬಳಸಿಕೊಳ್ಳುತ್ತಾರೆ. ಮಕ್ಕಳು ಕೂಡ ಹಣದ ಆಮಿಷಕ್ಕೆ ತುತ್ತಾಗುತ್ತಾರೆ.

ಗೋವಾದ ಬಳಿಕ ಅತಿ ಹೆಚ್ಚು ಪ್ರವಾಸಿಗರು ಆಗಮಿಸುವ ರಾಜ್ಯವೆಂದರೆ ಕೇರಳ, ಇಲ್ಲೂ ಕೂಡ ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡುವುದು ನಡೆಯುತ್ತಿರುತ್ತದೆ. ಗೋವಾಕ್ಕೆ ಹೋಲಿಸಿದರೆ ಕೇರಳದಲ್ಲಿ ವೇಶ್ಯಾವೃತ್ತಿಗೆ ಇಳಿಯುವವರ ಸಂಖ್ಯೆ ಕಡಿಮೆ. ಆದರೆ ಸೆಕ್ಸ್ ರಾಕೆಟ್‌ಗಳ ಸಂಖ್ಯೆ ಇಲ್ಲಿ ಕಡಿಮೆ ಏನಿಲ್ಲ. 2006ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಉಸ್ತುವಾರಿಯಲ್ಲಿ ನದೆಹಲಿಯ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್ ಸೈನ್ಸ್ ನ `ಟ್ರ್ಯಾಫಿ ಕಿಂಗ್‌ ಇನ್‌ ವಿಮೆನ್‌ ಅಂಡ್‌ ಚಿಲ್ಡ್ರನ್‌ ಇನ್‌ ಇಂಡಿಯಾ’ ಹೆಸರಿನಲ್ಲಿ ನಡೆಸಿದ ಒಂದು ಸಮೀಕ್ಷೆಯಲ್ಲಿ ಕೇರಳದ ಅಲಪ್ಪುಳಾದಲ್ಲಿ ಮಕ್ಕಳ ಜೊತೆಗಿನ ಸೆಕ್ಸ್ ಘಟನೆಯ ಹೆಚ್ಚು ಪ್ರಕರಣಗಳು ಕೇಳಿಬಂದಿವೆ.

ಸುರಕ್ಷಿತ ಸೆಕ್ಸ್ ನಲ್ಲಿ ವಿಶ್ವಾಸ

ಅಂದಹಾಗೆ, ಕೇರಳ ತನ್ನ ನೈಸರ್ಗಿಕ ಸೌಂದರ್ಯ, ಆಹಾರ, ಆಯುರ್ವೇದಿಕ್‌ ಮಸಾಜ್‌, ಸ್ವಚ್ಛತೆ ಮುಂತಾದವುಗಳಿಗೆ ಪ್ರಸಿದ್ಧಿ ಪಡೆದಿದೆ. ಈ ಕಾರಣದಿಂದ ಅಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ದೇಶ ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ. ಕೇರಳದಲ್ಲಿ ಕೋಲಂ, ಕಾರ್ಲಾ, ಕೋಳಿಕ್ಕೊಡ್‌, ಕೊಚ್ಚಿ ಬಂದರು ತೀರ ಪ್ರವಾಸಿಗರಿಗಾಗಿ ಆಕರ್ಷಣೆಯ ಕೇಂದ್ರಗಳಾಗಿವೆ. ಅದರಲ್ಲೂ ವಿಶೇಷವಾಗಿ ಕಾರ್ಲಾದಲ್ಲಿ ಮೀನುಗಾರರ ಸಂಖ್ಯೆ ಹೇರಳವಾಗಿದೆ. ಇಲ್ಲಿಗೆ ಬರುವ ಹಲವು ಪ್ರವಾಸಿಗರು ಮೀನುಗಾರರ ಮನೆಯಲ್ಲೇ ಉಳಿದುಕೊಳ್ಳುವ ತಮ್ಮ ಅಭಿಲಾಷೆ ವ್ಯಕ್ತಪಡಿಸುತ್ತಾರೆ. ಮೀನುಗಾರರು ಕೂಡ ತಮ್ಮ ಮನೆಯಲ್ಲಿ ಖುಷಿಯಿಂದಲೇ ಉಳಿದುಕೊಳ್ಳಲು ಅವಕಾಶ ಕೊಡುತ್ತಾರೆ.  ಕೆಲವರು ಅಂತಹ ಮನೆಗಳಲ್ಲಿ ಉಳಿದುಕೊಳ್ಳುವ ನೆಪದಲ್ಲಿ ಅವರ ಮಕ್ಕಳನ್ನು ಕಾಮತೃಷೆಗಾಗಿ ಬಳಸಿಕೊಳ್ಳುತ್ತಾರೆ. ಕೆಲವರು ಇದನ್ನು ಒತ್ತಾಯಪೂರ್ವಕವಾಗಿ ಮಾಡಿದರೆ, ಇನ್ನು ಕೆಲವು ಮನೆಗಳಲ್ಲಿ ಮನೆಯವರೇ ಹಣದಾಸೆಗಾಗಿ ತಮ್ಮ ಮಕ್ಕಳನ್ನು ಅವರಿಗೆ ಒಪ್ಪಿಸುವುದುಂಟು. ಹೀಗಾಗಿ ಯಾವುದೇ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಅದಕ್ಕೆ ಪ್ರತಿಯಾಗಿ ಪ್ರವಾಸಿಗರು ಹಣ ನೀಡುತ್ತಾರೆ. ಈ ರೀತಿ ಸೆಕ್ಸ್ ಟೂರಿಸಂನ ದಂಧೆ ಬೆಳೆಯುತ್ತಾ ಇರುತ್ತದೆ. ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ನೀಲಾ ಗಂಗಾಧರನ್‌ ಹೀಗೆ ಹೇಳುತ್ತಾರೆ, “ಎಲ್ಲಕ್ಕೂ ಮೊದಲು ಕೋಲಂ ಬೀಚ್‌ನಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಆ ಬಳಿಕ ಇಂತಹ ಪ್ರಕರಣಗಳ ಬಗ್ಗೆ ವರದಿಯಾಗಿರಲಿಲ್ಲ. ಈ ಘಟನೆಯಿಂದ ತಿಳಿದುಬಂದ ಸಂಗತಿಯೆಂದರೆ, ಕೇರಳದಲ್ಲಿ ಮಕ್ಕಳ ಜೊತೆ ಸೆಕ್ಸ್ ಹಾಗೂ ಶೋಷಣೆಯಂತಹ ಘಟನೆಗಳು ನಡೆಯುತ್ತಲೇ ಇವೆ. ಆದರೆ ಅವುಗಳ ದೂರನ್ನು ಮಾತ್ರ ದಾಖಲಿಸಲಾಗುತ್ತಿಲ್ಲ.”

ಆ ವರದಿಯಿಂದ ತಿಳಿದುಬಂದ ಸಂಗತಿಯೆಂದರೆ, ಈ ಮಕ್ಕಳಲ್ಲಿ ಹುಡುಗರೇ ಹೆಚ್ಚಾಗಿ ಸೇರಿರುತ್ತಾರೆ. ಅಂದಹಾಗೆ ಭಾರತದಲ್ಲಿ ಸಲಿಂಗ ಸಂಬಂಧಕ್ಕೆ ಮಾನ್ಯತೆ ಇಲ್ಲ. ಆದರೂ ಕದ್ದು ಮುಚ್ಚಿ ಈ ಕೆಲಸಕ್ಕಾಗಿ ಹುಡುಗರನ್ನು ಬಳಸಿಕೊಳ್ಳಲಾಗುತ್ತಿದೆ. ವಿದೇಶಿ ಪ್ರವಾಸಿಗರು ಸುರಕ್ಷಿತ ಸೆಕ್ಸ್ ಬಯಸುವುದೇ ಇದಕ್ಕೆ ಕಾರಣ ಎನ್ನಲಾಗುತ್ತದೆ.

ಸುರಕ್ಷಿತ ತಾಣ

ಕೇರಳ ಅದ್ಭುತ ನಿಸರ್ಗ ಸೌಂದರ್ಯದ ಜೊತೆಗೆ ಹೌಸ್‌ ಬೋಟ್‌ಗೂ ಕೂಡ ಪ್ರಸಿದ್ಧವಾಗಿವೆ. ಅಷ್ಟಿಷ್ಟು ಹಣ ಕೊಟ್ಟರೆ  ಪ್ರವಾಸಿಗರಿಗೆ ಹೌಸ್‌ ಬೋಟ್‌ನಲ್ಲಿಯೇ 2-3 ದಿನ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಹೌಸ್‌ ಬೋಟ್‌ ದೊರೆತರೆ ಲೈಂಗಿಕ ಚಟುವಟಿಕೆ ನಡೆಸಲು ಸುರಕ್ಷಿತ ಸ್ಥಳ ದೊರೆತಂತಾಗುತ್ತದೆ.

ಒಂದು ವರದಿಯ ಪ್ರಕಾರ, ಸೆಕ್ಸ್ ರಾಕೆಟ್ಸ್ ಗಾಗಿ ಹೌಸ್‌ ಬೋಟ್‌ಗಳು ಭಾರಿ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ ಎಂದು ಹೇಳಲಾಗಿದೆ. ಅವು ದೇಶಿ ಹಾಗೂ ವಿದೇಶಿ ಪ್ರವಾಸಿಗಾರಿಗಾಗಿ ಲೈಂಗಿಕ ಚಟುವಟಿಕೆ ನಡೆಸುವ ಸುರಕ್ಷಿತ ತಾಣಗಳಾಗಿಬಿಟ್ಟಿವೆ. ಹೌಸ್‌ ಬೋಟ್‌ ಹೊರತಾಗಿ ಕೇರಳದಲ್ಲಿ ರೆಸ್ಟೋರೆಂಟ್‌, ಹೋಟೆಲ್‌, ಪಾರ್ಕ್‌ ಮತ್ತು ಥಿಯೇಟರ್‌ಗಳು ಸೆಕ್ಸ್ ಅಡ್ಡೆಗಳಾಗಿಬಿಟ್ಟಿವೆ. ಆಶ್ಚರ್ಯದ ಸಂಗತಿಯೇನೆಂದರೆ, ಲೈಂಗಿಕ ತೃಷೆ ನೀಗಿಸಿಕೊಳ್ಳಲು ಕೇವಲ ವಿದೇಶಿ ನಾಗರಿಕರಷ್ಟೇ ಅಲ್ಲ, ದೇಶದ ಬೇರೆ ಬೇರೆ ಭಾಗಗಳ ನಾಗರಿಕರು ಕೂಡ ಪ್ರವಾಸದ ನೆಪದಲ್ಲಿ ಇಲ್ಲಿಗೆ ಬರುತ್ತಾರೆ.

ಕಡಿಮೆ ವಯಸ್ಸಿನ ಮಕ್ಕಳೇ ಬಲಿ

ಪ್ರವಾಸಿಗರ ಲೈಂಗಿಕ ತೃಷೆಗೆ ಚಿಕ್ಕ ವಯಸ್ಸಿನ ಮಕ್ಕಳೇ ಬಳಕೆಯಾಗುತ್ತಿರುವುದು ನಿಜಕ್ಕೂ ದುರಂತದ ವಿಷಯ. ಅವರನ್ನು ಸುಲಭವಾಗಿ ಪುಸಲಾಯಿಸಬಹುದು ಎನ್ನುವುದು ಇದರ ಹಿಂದಿನ ಕಾರಣವಾಗಿರುತ್ತದೆ. ಏಕೆಂದರೆ ಅವರಿಗೆ ಸೆಕ್ಸ್ ಬಗ್ಗೆ ಏನೂ ಗೊತ್ತಿರುವುದಿಲ್ಲ.

ವಸುಂಧರಾ

Tags:
COMMENT