ಪ್ರಿಯಾಳ ಬರ್ತ್ ಡೇ
ತಾರೆಯರ ಬರ್ತ್ ಡೇ ಅಂದರೆ ಅಭಿಮಾನಿಗಳ ಪಾಲಿಗದು ಹಬ್ಬ. ವಾರದಿಂದಲೇ ತಯಾರಿ ಮಾಡಿಕೊಳ್ಳುತ್ತಾರೆ. ಸ್ಟಾರುಗಳನ್ನು ಕಟ್ಟೋದು, ಬ್ಯಾನರ್ ಹಾಕೋದು, ಕೇಕ್‌ಗಳನ್ನು ಹೊತ್ತು ತಂದು ತಾರೆಯರ ಮನೆ ಮುಂದೆ ಕಟ್ ಮಾಡಿಸೋದು, ಆದರೆ ಇವೆಲ್ಲದಕ್ಕಿಂತ ವಿಭಿನ್ನವಾಗಿ ಇತ್ತೀಚೆಗೆ ಹರಿಪ್ರಿಯಾ ತಮ್ಮ ಬರ್ತ್ ಡೇಯನ್ನು ಆಚರಿಸಿಕೊಂಡದ್ದು ವಿಶೇಷ. `ನೀರ್ ದೋಸೆ’ ಚಿತ್ರಕ್ಕೆ ರಮ್ಯಾ ಮಾಡಬೇಕಾಗಿದ್ದ ಪಾತ್ರವನ್ನು ನಿರ್ವಹಿಸುತ್ತಿರುವ ಹರಿಪ್ರಿಯಾ ಚಿತ್ರೀಕರಣಕ್ಕೆ ಹಾಜರಾಗಿ ಅಲ್ಲಿಯೇ ತಂಡದೊಂದಿಗೆ ಕೇಕ್ ಕತ್ತರಿಸಿ ಆಚರಿಸಿಕೊಂಡಳು. ಚಿತ್ರದ ನಿರ್ದೇಶಕರು ಅಭಿಮಾನಿಗಳ ಜೊತೆ ಹರಿಪ್ರಿಯಾ ಸೆಲ್ಛಿ ತೆಗೆಸಿಕೊಳ್ಳುವಂತೆ ಅನುಕೂಲ ಮಾಡಿಕೊಟ್ಟರು. `ಉಗ್ರಂ’ ನಂತರ ದಿಢೀರನೇ ಜನಪ್ರಿಯಳಾದ ಹರಿಪ್ರಿಯಾ ಕನ್ನಡದಲ್ಲೀಗ ಅತ್ಯಂತ ಬಿಜಿ ತಾರೆ. 5 ಚಿತ್ರಗಳ ಚಿತ್ರೀಕರಣದಲ್ಲಿ ಪಾಲ್ಗೊಂಡು ಜನಪ್ರಿಯ ತಾರೆಯರ ಪಟ್ಟಿಗೆ ಸೇರಿಕೊಂಡಿದ್ದಾಳೆ.
ಮುದ್ದಾದ ಜೋಡಿ ಸ್ಯಾಂಡಲ್ ವುಡ್‌ನ ಡಿಂಪಲ್ ಕ್ವೀನ್
ರಚಿತಾ ರಾಮ್ ದೊಡ್ಡ ದೊಡ್ಡ ನಾಯಕರ ಜೊತೆ ನಟಿಸುತ್ತಲೇ ತನ್ನ ತಾರಾ ವೃತ್ತಿ ಶುರು ಮಾಡಿದಂಥ ಅದೃಷ್ಟದ ಹುಡುಗಿ. ದರ್ಶನ್ ಜೊತೆ `ಬುಲ್ ಬುಲ್,’ `ಅಂಬರೀಷ’ ಚಿತ್ರದಲ್ಲಿ ನಟಿಸಿ ಸುದೀಪ್ ಜೊತೆ `ರನ್ನ’ ಚಿತ್ರದಲ್ಲಿ ನಟಿಸಿದ್ದ ರಚಿತಾಳಿಗೆ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ನಟಿಸುವ ಅವಕಾಶ ಸಿಕ್ಕಾಗ ಈ ಜೋಡಿ ತೆರೆ ಮೇಲೆ ಹೇಗೆ ಕಾಣಬಹುದೆಂಬ ಕುತೂಹಲ ಎಲ್ಲರಿಗೂ ಮೂಡಿಬಂದಿತು. ಹೆಸರಿಡದ ಹೊಸ ಚಿತ್ರದಲ್ಲಿ ಪುನೀತ್ ರಚಿತಾ ಜೋಡಿಯಾಗಿ ನಟಿಸುತ್ತಿದ್ದು ಚಿತ್ರೀಕರಣ ಭರದಿಂದ ಸಾಗಿದೆ. ಅದ್ಧೂರಿಯಾಗಿ ವಿಶೇಷವಾಗಿ ಹಾಕಲಾಗಿರುವ ಸೆಟ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ. ಪುನೀತ್ ಅವರ ಬಗ್ಗೆ ಹೇಳುತ್ತಾ, “ಅಪ್ಪು ದೊಡ್ಡ ತಾರೆಯಾದರೂ ತುಂಬಾನೆ ಸರಳ ವ್ಯಕ್ತಿ ಶೂಟಿಂಗ್‌ನಲ್ಲಿ ಎಲ್ಲರೊಂದಿಗೆ ಮಾತನಾಡುತ್ತಾ ಸಿಂಪಲ್ಲಾಗಿ ಇರುತ್ತಾರೆ. ಅವರಿಂದ ನಾನು ತುಂಬಾ ಕಲಿಯುತ್ತಿದ್ದೇನೆ,” ಎನ್ನುತ್ತಾಳೆ ರಚಿತಾ.
ಪ್ರಜ್ವಲ್ ರಾಗಿಣಿ ಮದುವೆ
ಇಷ್ಟು ದಿನ ತನ್ನ ಬ್ಯಾಚುಲರ್ ದಿನಗಳನ್ನು ಕಳೆಯುತ್ತಿದ್ದ ಪ್ರಜ್ವಲ್ ದೇವರಾಜ್ ಗುಟ್ಟು ಗುಟ್ಟಾಗಿಯೇ ರಾಗಿಣಿಯನ್ನು ಪ್ರೀತಿಸುತ್ತಿದ್ದುದು ಯಾರಿಗೂ ತಿಳಿದಿರಲಿಲ್ಲ. ಗಾಸಿಪ್ ಕಾಲಂಗಳಲ್ಲಿ ಆಹಾರವಾಗುವ ಮೊದಲೇ ನಾನು ಮದುವೆಯಾಗ್ತಿದ್ದೀನಿ ಎಂದು ಹೇಳಿ ಅಚ್ಚರಿ ಮೂಡಿಸಿದ್ದ. ರಾಗಿಣಿ ನೃತ್ಯಪಟು ಹಾಗೂ ಮಾಡೆಲ್. ಪ್ರಜ್ವಲ್‌ನ ಆಪ್ತ ಗೆಳತಿಯಾಗಿದ್ದಳು. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದಾಗ ಎರಡೂ ಮನೆಯ ಕುಟುಂಬದವರು ಸಂತೋಷವಾಗಿಯೇ ಮದುವೆಯಾಗಿ ಎಂದು ಹಾರೈಸಿದ್ದರು. ಇತ್ತೀಚೆಗೆ ಪ್ರಜ್ವಲ್ ರಾಗಿಣಿ ವಿವಾಹ ಅದ್ಧೂರಿಯಾಗಿ ಅರಮನೆ ಆವರಣದಲ್ಲಿ ನಡೆಯಿತು. ಸ್ಯಾಂಡಲ್ ವುಡ್‌ನ ತಾರೆಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ರಾಜಕಾರಣಿಗಳು ಆಗಮಿಸಿ ಹೊಸ ಜೋಡಿಗೆ ಶುಭ ಕೋರಿದರು. ದೇವರಾಜ್ ದಂಪತಿ ಮಗನ ಮದವೆ ಸಂಭ್ರಮದಲ್ಲಿ ಎಲ್ಲರನ್ನು ಸ್ವಾಗತಿಸುತ್ತಾ ಸಡಗರ ಪಡುತ್ತಿದ್ದರು.
ಬೆಳದಿಂಗಳ ಬಾಲೆ ಬಂದಳು
`ಬೆಳದಿಂಗಳ ಬಾಲೆ’ ಸುಮನ್ ನಗರ್‌ಕರ್ ಮತ್ತೆ ಸ್ಯಾಂಡಲ್ ವುಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ದಿಲ್ಲದೇ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ಅವರ `ರೇ….’ ಚಿತ್ರದಲ್ಲಿ ಗೆಸ್ಟ್ ರೋಲ್‌ನಲ್ಲಿ ಹಾಗೂ ನಾಗತೀಹಳ್ಳಿ ಚಂದ್ರಶೇಖರ್ ಅವರ ಹೊಸ ಚಿತ್ರದಲ್ಲೂ ನಟಿಸಿದ್ದಾರೆ. ದೇಸಾಯಿ ಅವರ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕೆ ಸುಮನ್ ಆಗಮಿಸಿ ಸರ್‌ಪ್ರೈಸ್ ಕೊಟ್ಟಿದ್ದರು. ಒಳ್ಳೆ ಅವಕಾಶಗಳು ಸಿಕ್ಕರೆ ಖಂಡಿತ ನಟಿಸುವೆ ಎಂದು ಹೇಳುವ ಸುಮನ್ ಕ್ಯಾಲಿಫೋರ್ನಿಯಾದಲ್ಲಿ ಪತಿ ಜೊತೆ ನೆಲೆಸಿದ್ದಾರೆ. ಅಲ್ಲಿಯೇ ಮ್ಯೂಸಿಕ್ ಕ್ಲಾಸ್ ನಡೆಸುತ್ತಿದ್ದಾರೆ. ಕನ್ನಡದಲ್ಲಿ ನಟಿಸಲು ಆಸೆ ಹೊತ್ತಿರುವ ಸುಮನ್ ಒಳ್ಳೆ ಪಾತ್ರ ಸಿಕ್ಕರೆ ವಿದೇಶದಿಂದ ಹಾರಿ ಬಂದು ಶೂಟಿಂಗ್ ಮುಗಿಸಿ ಹೋಗಲು ರೆಡಿ. ಇಂಥ ಪ್ರತಿಭಾವಂತ ನಟಿಗೆ ಒಳ್ಳೆ ಅವಕಾಶಗಳು ಸಿಗಲಿ ಎಂದು ಹಾರೈಸೋಣ.
ಕಾಡುತ್ತಿರುವ ಪಾತ್ರ
ಸ್ಯಾಂಡಲ್ ವುಡ್‌ನ ಜನಪ್ರಿಯ ತಾರೆ ರಾಧಿಕಾ ಪಂಡಿತ್ ತಾನಾಯಿತು ತನ್ನ ಕೆಲಸವಾಯಿತು ಎನ್ನುವಂಥ ನಟಿ. ತನ್ನ ಬಗ್ಗೆ ಏನೇ ಗಾಸಿಪ್ ಬಂದರೂ ತಲೆ ಕೆಡಿಸಿಕೊಳ್ಳದೇ ಒಳ್ಳೆ ಪಾತ್ರಗಳ ಮುಖಾಂತರ ಅಭಿಮಾನಿಗಳನ್ನು ಗೆಲ್ಲುತ್ತಲೇ ಇರುತ್ತಾಳೆ. `ಮಿಸ್ಟರ್‌ಅಂಡ್ ಮಿಸಿಸ್ ರಾಮಾಚಾರಿ’ ಚಿತ್ರದ ನಂತರ ಯಶ್ ರಾಧಿಕಾ ಲವ್ ಸ್ಡೋರಿ ಗುಲ್ಲೆದ್ದಾಗ ಮೌನವೇ ಉತ್ತರ ಎಂಬಂತೆ ಪ್ರತಿಕ್ರಿಯೆ ನೀಡದೆ ಸುಮ್ಮನಾದಳು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಮತ್ತೊಂದು ಹೊಸ ಚಿತ್ರದಲ್ಲಿ ಯಶ್ ಜೊತೆ ನಟಿಸಲು ಸಜ್ಜಾಗುತ್ತಿದ್ದಾಳೆ. `ದೊಡ್ಮನೆ ಹುಡ್ಗ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ನಟಿಸುತ್ತಿದ್ದಾಳೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಧಿಕಾ ತನಗಿಷ್ಟವಾದ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾಳೆ. `ಜೋಧಾ ಅಕ್ಬರ್’ ಚಿತ್ರ ನೋಡಿದಾಗಿನಿಂದ ಜೋಧಾ ಪಾತ್ರ ಮಾಡುವಾಸೆಯಾಗಿದೆ. ಅದೇ ನನ್ನ ಡ್ರೀಮ್ ರೋಲ್ ಎಂದು ಹೇಳುತ್ತಾ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾಳೆ.
ಯಾರಿಗಾಗಿ ಪ್ರೀತಿ…..?
ದರ್ಶನ್ ಎಲ್ಲವನ್ನೂ ಚಾಲೆಂಜಾಗಿ ಸ್ವೀಕರಿಸುವಂಥ ಹೀರೋ. ಅವರು ಆ್ಯಕ್ಷನ್ ದೃಶ್ಯಗಳಲ್ಲಿ ಭಾಗಹಿಸುವಾಗ ತಾವೇ ಖುದ್ದಾಗಿ ಎಂಥದ್ದೇ ರಿಸ್ಕೀ ಶಾಟ್ ಇದ್ದರೂ ಡ್ಯೂಪ್ ಬಳಸದೇ ಮಾಡುತ್ತಾರೆ. ಆ್ಯಕ್ಷನ್ ಸೀನ್‌ಗಳು ನೈಜವಾಗಿ ಮೂಡಿಬರಬೇಕೆಂಬುದೇ ದರ್ಶನ್ ಆಸೆ. ಅದಕ್ಕಾಗಿ ಅವರು ಪ್ರತಿನಿತ್ಯ ವರ್ಕ್ ಔಟ್ ಮಾಡುತ್ತಾರೆ. `ಜಗ್ಗು ದಾದ’ ಚಿತ್ರೀಕರಣ ನಡೆದಿದ್ದಾಗ ಆ್ಯಕ್ಷನ್ ಸೀನ್‌ಗಾಗಿ ತಯಾರಿ ಮಾಡಿಕೊಂಡು ಬರಲೆಂದು ಮನೆಯಲ್ಲಿದ್ದ ಜಿಮ್ ನಲ್ಲಿ ವರ್ಕ್ ಔಟ್ ಮಾಡಿ ಬರುವೆ ಎಂದು ಹೋಗಿದ್ದಾಗ ಎಡಭುಜಕ್ಕೆ ಪೆಟ್ಟಾಗಿದ್ದರೂ ಚಿತ್ರೀಕರಣ ನಿಲ್ಲಿಸಬಾರದೆಂದು ಹಟ ಹಿಡಿದಿದ್ದರು, ನಿರ್ದೇಶಕರ ಒತ್ತಾಯದ ಮೇಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಒಂದಷ್ಟು ದಿನ ರೆಸ್ಟ್ ತೆಗೆದುಕೊಳ್ಳಬೇಕಾಯಿತು. ದರ್ಶನ್ ಗಾಯ ಮಾಡಿಕೊಳ್ಳುವುದು ಇದೇ ಮೊದಲೇನೂ ಅಲ್ಲ. ಅನೇಕ ಸಲ ಅವರು ಆ್ಯಕ್ಷನ್ ಸೀನ್ ಮಾಡುವಾಗ ಪೆಟ್ಟು ಮಾಡಿಕೊಂಡಿದ್ದರೂ ಶೂಟಿಂಗ್ ತಪ್ಪಿಸಿರಲಿಲ್ಲ. ಇಪ್ಪತ್ತು ದಿನ ವಿರಾಮ ಪಡೆದಾಗ ದರ್ಶನ್ ತಮ್ಮ ಮೆಚ್ಚಿನ ಹೊಸ ಪಕ್ಷಿಯೊಂದಿಗೆ ಕಾಲಕಳೆದರು. ಅದರೊಂದಿಗೆ ಆಟವಾಡಿದರು. ಸೌತ್ ಅಮೆರಿಕಾದಿಂದ ತರಿಸಿಕೊಂಡಿರುವಂಥ ಕೆಂಪು ಬಣ್ಣದ ಪಕ್ಷಿಯದು. ದರ್ಶನ್‌ಗದು ತುಂಬಾನೆ ಪ್ರಿಯವಂತೆ.
ಲಿಫ್ಟ್ ಸಿಗುತ್ತಾ….
ಹುಬ್ಬಳ್ಳಿ ಹುಡುಗಿ, ಕನ್ನಡ ಸಿನಿಮಾ ರಂಗದಲ್ಲಿ ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳಲು ಬಂದು ಸುಮಾರು ವರ್ಷಗಳೇ ಕಳೆದಿವೆ. `ತೆನಾಲಿ ರಾಮ’ ಚಿತ್ರದಲ್ಲಿ ಕಾಣಿಸಿಕೊಂಡ ನಂತರ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದಳು. ಅಚಾನಕ್ಕಾಗಿ `ರಾಂಬೊ’ ಚಿತ್ರದಲ್ಲಿ ಶರಣ್ ಜೋಡಿಯಾಗಿ ಕಾಣಿಸಿಕೊಂಡ ಮಾಧುರಿಗೆ ಈ ಸಿನಿಮಾದ ಭರ್ಜರಿ ಯಶಸ್ಸು ಕೂಡಾ ಸಹಾಯ ಮಾಡಲಿಲ್ಲ. ಎಲ್ಲದಕ್ಕೂ ಸಮಯ ಬರಬೇಕು ಎನ್ನುವಂತೆ. ಈಗ ಮಾಧುರಿ `ಊಜಾ’ ಚಿತ್ರದಿಂದ ಸುದ್ದಿ ಮಾಡುತ್ತಿದ್ದಾಳೆ. ಅಷ್ಟೇ ಅಲ್ಲ ಎಲ್ಲಕ್ಕಿಂತ ಹೆಚ್ಚು ಪ್ರಚಾರ ಸಿಕ್ಕಿದ್ದು ಮಾಧುರಿ ಬಿಗ್‌ಬಾಸ್ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಒಳಗೆ ಹೊಕ್ಕಾಗ. ಇನ್ನಷ್ಟು ಮಾಡಲ್ ಆಗಿ ಗ್ಲಾಮರಸ್ಸಾಗಿ ಕಂಡ ಮಾಧುರಿ ಬಿಗ್‌ಬಾಸ್ ಮನೆಯೊಳಗಿದ್ದದ್ದು ಒಂದೇ ವಾರ. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವಷ್ಟರಲ್ಲಿ ಹೊರಬಂದುಬಿಟ್ಟಳು. ಬಿಗ್‌ಬಾಸ್ ಮನೆಯಲ್ಲಿ ಕಳೆದ ಆ ಒಂದು ವಾರವನ್ನು ನಾನು ಎಂದಿಗೂ ಮರೆಯಲಾರೆ, ಸವಿ ಸವಿ ನೆನಪುಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಭಾವುಕಳಾಗಿದ್ದು ಸತ್ಯ. ಮಾಧುರಿ ಈಗ ಸುದ್ದಿಯಾಗಿದ್ದಾಳೆ. ಪ್ರಚಾರ ಸಿಗುತ್ತಿದೆ. ಬಿಗ್‌ಬಾಸ್ ಮನೆ ಎಲ್ಲರಿಗೂ ಒಂದಲ್ಲ ಒಂದು ರೀತಿ ಲಿಫ್ಟ್ ಕೊಟ್ಟಿದೆ. ಮಾಧುರಿಗೂ ಅಂಥವೊಂದು ಸುಯೋಗ ಸಿಗಬಹುದೇ……?
ಹೊಸ ಲುಕ್
`ಚೆಲುವಿನ ಚಿತ್ತಾರ’ದ ಐಶೂಳನ್ನು ಸ್ಕೂಲ್ ಯೂನಿಫಾರ್ಮ್ ನಲ್ಲಿ ನೋಡಿದ್ದ ಆಕೆಯ ಅಭಿಮಾನಿಗಳಿಗೆ `ಗಜ ಕೇಸರಿ’ ಚಿತ್ರದಲ್ಲಿ ವಿಭಿನ್ನವಾಗಿ ನೋಡಿ ಆಶ್ಚರ್ಯವಾಗಿತ್ತು. ಅಮೂಲ್ಯಾ ಕಂಪ್ಲೀಟಾಗಿ ಬದಲಾಗಿದ್ದಳು. ಮೇಕ್ ಓವರ್ ಮಾಡಿಕೊಂಡು ಹೊಸ ಲುಕ್‌ನಲ್ಲಿ ಮಿಂಚಿದ್ದಳು. ಮಾಡಲ್ ಉಡುಗೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಳು. ಅಮೂಲ್ಯಾಳಲ್ಲಿ ಆದ ಈ ಹೊಸ ಬದಲಾವಣೆಯನ್ನು ಸಿನಿಮಾದವರು ಕೂಡಾ ಸ್ವಾಗತಿಸಿದರು. ಹೊಸ ಹೊಸ ಪಾತ್ರಗಳು ಸೃಷ್ಟಿಯಾದವು. ಕವಿರಾಜ್ ನಿರ್ದೇಶನದ ಮೊದಲ ಚಿತ್ರ `ಮದುವೆಯ ಮಮತೆಯ ಕರೆಯೋಲೆ’ ಚಿತ್ರದಲ್ಲಿ ಅಮೂಲ್ಯಾ ರಾಯಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಕವಿರಾಜ್ ತಾವೇ ಸ್ವತಃ ಆಸಕ್ತಿ ವಹಿಸಿ ಅಮೂಲ್ಯಾ ಉಡುಗೆ ತೊಡುಗೆ ಬಗ್ಗೆ ಗಮನ ವಹಿಸಿದ್ದಾರಂತೆ. ತೂಗುದೀಪ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಅಮೂಲ್ಯಾ ವಿಭಿನ್ನವಾಗಿ ಕಂಗೊಳಿಸಲಿದ್ದಾಳೆ. `ರಾಮ್ ಲೀಲಾ’ ಚಿತ್ರದಲ್ಲೂ ಸಹಾ ಅಮೂಲ್ಯಾ ಚಿರುವಿಗೆ ಜೋಡಿಯಾಗಿ ನಟಿಸುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.