ಬಾಲ್ಯದಿಂದ ಕಲೆ, ಗಾಯನ, ನೃತ್ಯಗಳಲ್ಲಿ ಪಳಗಿದ್ದ ಹುಡುಗಿ ಖುಷಿ ದಿಯಾ ಚಿತ್ರಕ್ಕೆ ಆಯ್ಕೆಯಾದದ್ದು ಹೆಚ್ಚಿನ ಖುಷಿ ನೀಡಿತಂತೆ. ನಾಟಕಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಖುಷಿ ಮುಂದೆ `ಸೋಡಾಬುಡ್ಡಿ’ ಚಿತ್ರದ ನಂತರ ದಿಯಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುವಂತಾಯಿತು. ವಿವಾಹಿತರಾದ ಖುಷಿ ಇಷ್ಟೆಲ್ಲಾ ಗ್ಲಾಮರ್ ಗಳಿಸಿ `ನಕ್ಷೆ’ ಚಿತ್ರದವರೆಗೂ ಪಯಣ ಬೆಳೆಸಿ ಯಶಸ್ವಿಯಾಗಿ ಮುಂದುವರಿಯುತ್ತಿರುವ ಬಗ್ಗೆ ತಿಳಿಯೋಣವೇ…….
ಅಭಿನಯ, ಕಲೆ, ಗಾಯನ, ನೃತ್ಯ ಇವೆಲ್ಲ ಕೆಲವರಿಗೆ ಮಾತ್ರ ಒಲಿಯುವ ವರ. ಕೆಲವರಿಗಂತೂ ತಮ್ಮಲ್ಲಿ ಅಂತಹದೊಂದು ಪ್ರತಿಭೆ ಇದೆ ಎಂಬುದು ಸಹ ಗೊತ್ತಿರುವುದಿಲ್ಲ. ಈ ಎರಡನೇ ಗುಂಪಿಗೆ ದಿಯಾ ಖ್ಯಾತಿಯ ಖುಷಿ ಕೂಡಾ ಸೇರುತ್ತಾಳೆ. ಪುಟ್ಟ ಹುಡುಗಿಯಾಗಿ ಇದ್ದಾಗಿನಿಂದಲೂ ನೃತ್ಯ, ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಖುಷಿಗೆ ಮುಂದೊಂದು ದಿನ ತಾನು ತಾರೆಯಾಗುತ್ತೇನೆಂದು ಯಾವತ್ತೂ ಅಂದುಕೊಂಡಿರಲಿಲ್ಲ. ನಾಟಕಗಳಲ್ಲಿ ನಟಿಸುವಾಗ ಸಿನಿಮಾದಲ್ಲಿ ನಟಿಸಬಹುದು ಎಂದು ಕೆಲವರು ಹೇಳಿದ್ದುಂಟು. `ನಾನು ಸಿನಿಮಾದಲ್ಲಿ ನಟಿಸಲು ಸಾಧ್ಯವೇ? ಎಂದು ಅನುಮಾನಪಟ್ಟರೂ ಒಳಗೊಳಗೇ ನಟಿಯಾಗಬೇಕೆಂಬ ಆಸೆ ಮೂಡುತ್ತಿದ್ದುದು ಸತ್ಯ,’ ಎಂದು ಖುಷಿ ಹೇಳುತ್ತಾಳೆ.
`ದಿಯಾ’ ಚಿತ್ರ ಅಭೂತಪೂರ್ವ ಪ್ರಶಂಸೆ ಪಡೆದಂಥ ಚಿತ್ರ. ದಿಯಾ ಪಾತ್ರ ವಹಿಸಿದ್ದ ಖುಷಿ ಒಂದೇ ದಿನದಲ್ಲಿ ತಾರೆಯಾಗಿಬಿಟ್ಟಳು. ಯಾರೀ ಹುಡುಗಿ ಎಂಬ ಕುತೂಹಲ ಎಲ್ಲರಲ್ಲೂ ಮೂಡತೊಡಗಿತು. `ದಿಯಾ’ ಚಿತ್ರಕ್ಕೆ ಕೊರೋನಾ ವಿಲನ್ ಆದನಂತರ ಈ ಚಿತ್ರವನ್ನು ಅಮೆಝಾನ್ ಫ್ರೈಮ್ ವಿಡಿಯೋದಲ್ಲಿ ನೋಡಿ ಮೆಚ್ಚಿದ ಪ್ರೇಕ್ಷಕರು ಥಿಯೇಟರ್‌ನಲ್ಲಿ ರೀ ರಿಲೀಸ್ ಮಾಡಿ ಎಂದು ನಿರ್ಮಾಪಕರಲ್ಲಿ ಬೇಡಿಕೆ ಇಟ್ಟರು. ಆದರೆ ಥಿಯೇಟರ್ ತೆರೆಯುವ ಲಕ್ಷಣಗಳು ಕಾಣುತ್ತಿಲ್ಲವಾದ್ದರಿಂದ ಮನೆಯಲ್ಲಿಯೇ ದಿಯಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಖುಷಿ ತನ್ನ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿದ್ದಾಳೆ.
ದಿಯಾ ಯಶಸ್ಸಿನ ಗುಂಗಿನಲ್ಲಿರುವ ಖುಷಿಯನ್ನು ಮಾತನಾಡಿಸಿದಾಗ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು.
ಯಾರೀ ಖುಷಿ…..?
ನಾನೊಬ್ಬಳು ಸರಳ ಹುಡುಗಿ. ಸ್ಕೂಲ್ ನಂತರ ಕಾಲೇಜ್ ಸೇರುವ ನಡುವೆ ಭರತನಾಟ್ಯ, ಗಾಯನ, ನಾಟಕ ಇವುಗಳನ್ನು ಕಲಿತುಕೊಂಡಿದ್ದೆ. ಬಿ. ಜಯಶ್ರೀಯವರ ತಂಡದಲ್ಲೂ ನಾಟಕಗಳಲ್ಲಿ ಪಾತ್ರ ಮಾಡಿದ್ದುಂಟು. ಅಲ್ಲಿದ್ದರಲ್ಲಿ ಒಬ್ಬರು ಸಿನಿಮಾದಲ್ಲೇಕೆ ನಟಿಸಬಾರದು ಎಂದು ಛಾಯಾಗ್ರಾಹಕರೊಬ್ಬರಿಗೆ ನನ್ನ ಬಗ್ಗೆ ಹೇಳಿದ್ದುಂಟು. ಶಾರ್ಟ್ ಫಿಲಂಸ್‌ಗಳಲ್ಲಿ ನಟಿಸಿದೆ. ಸೀತಾರಾಂ ಸರ್‌ರವರ `ಮಹಾಪರ್ವ’ ಧಾರಾವಾಹಿಯಲ್ಲೂ ನಟಿಸಬೇಕಿತ್ತು. ಕಾಲೇಜಿನಲ್ಲಿ ಇದ್ದಾಗ ನಾನು ಸಖತ್ ತೆಳ್ಳಗಿದ್ದೆ. ಪಾತ್ರಕ್ಕೆ ಸರಿ ಹೋಗಲ್ಲ ಅಂತ ಆಯ್ಕೆ ಆಗಲಿಲ್ಲ. ಆದರೆ ಅವರ ಮಗನ `ಸೋಡಾಬುಡ್ಡಿ’ ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ಮಾಡಿದ್ದೆ. ನನಗೆ ಮೊದಲಿನಿಂದಲೂ ಟಿವಿಗಿಂತ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ. ಹಾಗಾಗಿ ಧಾರಾವಾಹಿಗಳಲ್ಲಿ ಹೆಚ್ಚು ಒಲವು ತೋರಿಸಲಿಲ್ಲ.
ಒಂದು ಸಲ ಮಂಡ್ಯ ರಮೇಶ್, `ನೀನು ಸಿನಿಮಾ ನಟಿಯಾಗು…. ಹೇಳಿ ಮಾಡಿಸಿದಂತಿದ್ದೀಯಾ,’ ಎಂದು ಕಾಂಪ್ಲಿಮೆಂಟ್‌ಕೊಟ್ಟಾಗ ಖುಷಿಯಾಯಿತು. ಆದರೆ ನಿಜಕ್ಕೂ ನಟಿಯಾಗುವೆನೇ ಎಂಬ ಅನುಮಾನವಿತ್ತು. ನನ್ನ ಕಾಲೇಜಿನಲ್ಲಿ ಎಲ್ಲದರಲ್ಲೂ ಭಾಗಹಿಸುತ್ತಿದ್ದೆ. ದೆಹಲಿಯ ರಿಪಬ್ಲಿಕ್ ಕ್ಯಾಂಪ್‌ನಲ್ಲಿದ್ದಾಗ ರಿಪಬ್ಲಿಕ್ ಪೆರೇಡ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತಂಡದಲ್ಲಿ ನಾನೂ ಇದ್ದೆ.
ಖುಷಿ ದಿಯಾ ಆಗಿದ್ದು ಹೇಗೆ?
ಆಡಿಷನ್ ನಡೆಯುತ್ತಿರುವ ಸುದ್ದಿ ತಿಳಿದಾಗ ನೀನು ಟ್ರೈ ಮಾಡು ಎಂದು ರಂಗಭೂಮಿ ಸ್ನೇಹಿತರು ಹುರಿದುಂಬಿಸಿದರು. ಒಂದೊಳ್ಳೆಯ ಚಿತ್ರ ಮಾಡ್ತಿದ್ದಾರೆ. ನಾಯಕರಿಗಾಗಿ ಹುಡುಕುತ್ತಿದ್ದಾರೆ ಎಂದಷ್ಟೇ ಗೊತ್ತಿತ್ತು. ಅಲ್ಲಿಗೆ ಹೋದನಂತರ `65=2′ ನಿರ್ದೇಶಕರೆ ಎಂದು ತಿಳಿಯಿತು. ಆಡಿಷನ್ ನಂತರ ಮೂರು ತಿಂಗಳಾದರೂ ಫೋನ್ ಬರಲಿಲ್ಲ. ಬೇರೆ ಯಾರೋ ಸಿಕ್ಕಿರಬಹುದು ಎಂದು ಸುಮ್ಮನಾದೆ. ಪುನಃ ಕರೆ ಬಂತು. ಆಡಿಷನ್‌ಗೆ ಎಲ್ಲಾ ಎಫರ್ಟ್ ಹಾಕಿ ಕ್ಯಾಮೆರಾ ಮುಂದೆ ನಟಿಸಿದೆ. ಸಿನಿಮಾದ ಶೂಟಿಂಗ್ ಶುರುವಾಗಿದೆ. ನಾನೇ ಅದರ ನಾಯಕಿ ಎಂದು ಆಗಲೇ ಗೊತ್ತಾಗಿದ್ದು. ನಿರ್ದೇಶಕ ಅಶೋಕ್ ಪಾತ್ರದ ಬಗ್ಗೆ ವಿವರವಾಗಿ ಎಕ್ಸ್ ಪ್ಲೇನ್ ಮಾಡಿದ್ದಷ್ಟೇ ಅಲ್ಲ, ಯಾರೊಂದಿಗೂ ಹೆಚ್ಚು ಮಾತನಾಡಬಾರದು, ನಗಬಾರದು ದಿಯಾಳಂತಿರಬೇಕು ಎಂದಿದ್ದರು. ಅದರ ಫಲಿತಾಂಶ ಸಿನಿಮಾ ನೋಡಿದ ಮೇಲೆ ಸ್ಪಷ್ಟವಾಯಿತು. ಹತ್ತು ಸಿನಿಮಾದಿಂದ ಸಿಗುವ ಅನುಭವ ದಿಯಾ ಚಿತ್ರಿವೊಂದರಲ್ಲೇ ಸಿಕ್ಕಿತು. ಎಲ್ಲಾ ಕ್ರೆಡಿಟ್ ಡೈರೆಕ್ಟರ್ ಸರ್ ಅವರಿಗೆ ಸೇರತಕ್ಕದ್ದು.
ದಿಯಾ ಮೊದಲ ಶೋ ಮೊದಲ ಕಾಂಪ್ಲಿಮೆಂಟ್?
ಇಡೀ ಚಿತ್ರ ನೋಡಿದ್ದು ಪ್ರೀಮಿಯರ್ ಶೋನಲ್ಲಿ. ರಕ್ಷಿತ್ ಶೆಟ್ಟಿ ಬಂದಿದ್ದರು. ಸಿನಿಮಾ ನೋಡಿ ಬಂದ ಕೂಡಲೇ ಎಲ್ಲಿ ಆ ಹುಡುಗಿ ದಿಯಾ ರೋಲ್ ಮಾಡಿರೋರು ಎಂದು ಕರೆದರು. ಅಭಿನಯದ ಬಗ್ಗೆ ಹೊಗಳುತ್ತಾ ನನಗೆ ಲವ್ ಆಗಿಹೋಗಿದೆ ಈ ಹುಡುಗಿ ಮೇಲೆ ಎಂದಾಗಲಂತೂ ನನಗಾದ ಖುಷಿ ಅಷ್ಟಿಷ್ಟಲ್ಲ! ಏಕೆಂದರೆ ನಾನು ಅವರ ಗ್ರೇಟ್ ಫ್ಯಾನ್. ಅವರ ಆಫೀಸಿಗೆ ದಿಯಾ ತಂಡವನ್ನು ಕರೆದಿದ್ದಾಗ…. ನಿಮ್ಮ ಜೊತೆ ಒಂದು ಸೆಲ್ಛಿ ಎಂದಾಗ…. ಇಲ್ಲಾ ನಿನ್ನ ಜೊತೆ ಸೆಲ್ಛಿ ಬೇಕು ಎಂದು ತಾವೇ ಕ್ಲಿಕ್ ಮಾಡಿದರು. ಅದು ಸದಾ ನೆನಪಿನಲ್ಲಿರುವ ಕ್ಷಣ.
ಮದುವೆ, ಗಂಡ, ಮಗು ಬಗ್ಗೆ ಬಂದ ದಿಢೀರ್ ಸುದ್ದಿ ಕೇಳಿ ನಿಮ್ಮ ಅಭಿಮಾನಿಗಳು ಏನಾಗಿರಬಾರದು? ಎಂದು ತಮಾಷೆ ಮಾಡಿದಾಗ….
ಹೌದು, ನನಗೆ ಮದುವೆಯಾಗಿದೆ. ಮುದ್ದಾದ ಮಗಳಿದ್ದಾಳೆ. ಪ್ರೋತ್ಸಾಹಿಸುವ ಅತ್ತೆ, ಮಾವ ಇದ್ದಾರೆ. ನಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮದುವೆಯಾಗಿ ಮೂರು ವರ್ಷಗಳಾಗಿವೆ. ನಾನು ವಿವಾಹಿತಳು ಎಂದು ಹೇಳಿಕೊಳ್ಳಲು ಮುಜುಗರವಿಲ್ಲ. ಖುಷಿ ಖುಷಿಯಾಗಿ ಹೇಳಿಕೊಂಡಿದ್ದೇನೆ. ಹಾಗೆ ನೋಡಿದರೆ ನನ್ನ ಮದುವೆ ಸುದ್ದಿಯಿಂದ ನಾನು ಇನ್ನಷ್ಟು ಫೇಮಸ್ ಆಗಿದ್ದೀನಿ ಎಂದು ಖುಷಿಪಡುತ್ತಾಳೆ ಖುಷಿ.
ದಿಯಾ ನಂತರ ವಾಟ್ ನೆಕ್ಸ್ಟ್?
ಸಿನಿಮಾ ಆಫರ್ಸ್ ತುಂಬಾ ಬರುತ್ತಿವೆ. ಆದರೆ ದಿಯಾ ಪಾತ್ರ ಮಾಡಿದ ಮೇಲೆ ನನ್ನ ಬಗ್ಗೆ ನಿರೀಕ್ಷೆ ಜಾಸ್ತಿ ಇರುತ್ತದೆ. ಹಾಗಾಗಿ ಆಯ್ಕೆಯಲ್ಲಿ ಚ್ಯೂಸಿಯಾಗಿದ್ದೀನಿ. ಈಗ `ನಕ್ಷೆ’ ಎನ್ನುವ ಚಿತ್ರ ಒಪ್ಪಿಕೊಂಡಿದ್ದೇನೆ. ಅದು ಮಧು ಅವರ ಮೊದಲ ನಿರ್ದೇಶನದ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್…. ನನ್ನದು ಪತ್ರಕರ್ತೆ ಪಾತ್ರ. ಅರ್ಚನಾ ಜೋಯಿಸ್, ಪ್ರಮೋದ್ ಶೆಟ್ಟಿ, ಸುಮನ್ ನಗರ್‌ಕರ್ ಮುಂತಾದವರಿದ್ದಾರೆ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರನ್ನು ಕೂಡ ಅಭಿಮಾನಿಗಳೇ ಸೂಚಿಸಿದ್ದಾರೆ. ಖುಷಿ ಎಂದು ಸೆಲೆಕ್ಟ್ ಮಾಡಿದ್ದಾರೆ.
ನಿಮಗಿಷ್ಟೊಂದು ಅಭಿಮಾನಿಗಳಿದ್ದಾರೆ….. ನೀವು ಯಾರ ಅಭಿಮಾನಿ?
ಯಶ್, ರಕ್ಷಿತ್ ಶೆಟ್ಟಿ, ಸುದೀಪ್‌ನನ್ನ ಫೇವರಿಟ್. ಇವರ ಜತೆ ನಟಿಸುವ ಅವಕಾಶ ಸಿಕ್ಕರೆ ಕಥೆ, ರೋಲ್ ಯಾವುದೂ ಕೇಳೋದಿಲ್ಲ. ಅವರ ಜೊತೆ ಸ್ಕ್ರೀನ್ ಶೇರ್ ಮಾಡಬೇಕಷ್ಟೆ. ಅಂತಹ ಅಭಿಮಾನಿ ನಾನು…. ಎಂದು ಖುಷಿ ಹೇಳಿದಾಗ ಆ ಟೈಮ್ ಬೇಗ ಬರಲಿ ಎಂದಷ್ಟೇ ವಿಶ್ ಮಾಡಿದೆ.
– ಸರಸ್ವತಿ