ಕೊರೋನಾದ ಹಾವಳಿ ಇಡೀ ಜಗತ್ತನ್ನು ಬಾಧಿಸಿದೆ. ಜಗತ್ತಿನ ಬಹುತೇಕ ದೇಶಗಳು ಇದರ ಕಪಿಮುಷ್ಟಿಗೆ ಸಿಲುಕಿವೆ. ಜನರು ತಮ್ಮ ಮನೆಗಳಲ್ಲಿ ಬಂಧಿಯಾಗುವುದು ಅನಿವಾರ್ಯ ಆಗಿತ್ತು. ಕೊರೋನಾದಿಂದ ರಕ್ಷಿಸಿಕೊಳ್ಳಲು ಹಾಗೆ ಮಾಡಲೇಬೇಕಿತ್ತು. ಜನದಟ್ಟಣೆಯ ಪ್ರದೇಶಗಳಿಗೆ ತೆರಳದೆ, ಸ್ವಚ್ಛತೆಯ ಬಗ್ಗೆ ಗಮನ ಕೊಡುವುದರ ಮೂಲಕ ಸೋಂಕಿನಿಂದ ರಕ್ಷಿಸಿಕೊಳ್ಳಬೇಕಿತ್ತು. ಇಂತಹ ಸ್ಥಿತಿಯಲ್ಲಿ ಗಂಡ ಹೆಂಡತಿ ಅಥವಾ ಲಿವ್ ಇನ್ ರಿಲೇಶನ್‌ಶಿಪ್ ಮನೆಯಲ್ಲಿ ಸದಾ ಜೊತೆ ಜೊತೆಗೆ ಇದ್ದು ಇದ್ದೂ ಏನಾಗಬಹುದು? ಹಾಗೆ ನೋಡಿದರೆ ಅದೇನೂ ಹನಿಮೂನ್ ಅವಧಿ ಕೂಡ ಅಲ್ಲ. ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೆಂದರೆ, ಹಾಗೆ ನಿರಂತರವಾಗಿ ಜೊತೆ ಜೊತೆಗೆ ಇದ್ದುದರಿಂದ ಹತಾಶೆ, ಕೋಪ, ಒತ್ತಡದಂತಹ ಭಾವನೆಗಳನ್ನು ಎದುರಿಸಬೇಕಾಗಿ ಬಂದಿರಬಹುದು.
ಗಂಡ ಹೆಂಡತಿ ನಡುವಣ ಸಂಬಂಧ ಜೀವನ ಪರ್ಯಂತರದ ಸಂಬಂಧ. ಆದರೂ ಇಬ್ಬರ ನಡುವೆ ಅಷ್ಟಿಷ್ಟು `ಬ್ರೀದಿಂಗ್ ಸ್ಪೇಸ್’ ಇರಲೇಬೇಕು. ಹಾಗಾಗಿ ಗಂಡ ಮುಂಜಾನೆ ಆಫೀಸಿಗೆ ಹೋದರೆ, ಹೆಂಡತಿ ಮನೆಯಲ್ಲಿ ತನ್ನದೇ ಆದ ಲೋಕದಲ್ಲಿ ವಿಹರಿಸಬೇಕು. ಸಂಜೆ ಗಂಡ ವಾಪಸ್ಸಾದ ಬಳಿಕ ಅವರ ನಡುವೆ ನಿಕಟತೆ ಉಂಟಾಗುತ್ತದೆ ಎಂದೆಲ್ಲ ಹೇಳಲಾಗುತ್ತದೆ. ಈ ರೀತಿಯ ವಾತಾವರಣದಿಂದ ಅವರ ಸಂಬಂಧದಲ್ಲಿ ತಾಜಾತನ ಇರುತ್ತದೆ. ಕೊರೋನಾದ ಕಾರಣದಿಂದ ತಾಜಾ ಗಾಳಿಯ ಪ್ರವೇಶ ಬಂದ್ ಆಗಿದ್ದಲ್ಲಿ, ಅಷ್ಟಿಷ್ಟು ಉದಾಸೀನತೆ, ನಿರಾಶೆ ಆಗುವುದು ಸಹಜ. ಜೊತೆಗೆ ಮಕ್ಕಳು ಇದ್ದಲ್ಲಿ ಅಂತಹ ಯಾವುದೇ ಸಮಸ್ಯೆಗಳು ಆಗುವುದು ಕಡಿಮೆ. ಕೆಲವು ಸಲಹೆಗಳನ್ನು ಅನುಸರಿಸಿ ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಿ.
ರೊಟೀನ್ ಲೈಫ್‌ನಿಂದ ಹೊರಬನ್ನಿ
ಕೊರೋನಾ ಲಾಕ್ ಡೌನ್‌ನಿಂದಾಗಿ ಕುಟುಂಬದವರೊಂದಿಗೆ ಇರುವುದು ಅನಿವಾರ್ಯವಾಗಿತ್ತು. ಹಾಗೆಂದು ಅವನ್ನು ಕಠಿಣ ದಿನಗಳೆಂದು ಭಾವಿಸಬಾರದು. ಅದು ಕಹಿ ಅನುಭವಗಳ ಜೊತೆ ಸಿಹಿ ಅನುಭವಗಳನ್ನು ಕೊಟ್ಟಿದೆ. ಕೆಲವರಿಗೆ ಕುಟುಂಬದೊಂದಿಗೆ ಇರುವ ಸದಾವಕಾಶ ಕೊಟ್ಟಿತ್ತು. ಮತ್ತೆ ಕೆಲವರಿಗೆ ಅದು ಶಿಕ್ಷೆಯೆಂಬಂತೆ ಅನಿಸಿತು. ಅನಾರೋಗ್ಯದ ಸಮಯದಲ್ಲಿ ನಾವು ಹಾಸಿಗೆ ಹಿಡಿದು ಮಲಗಬೇಕಾಗುತ್ತದೆ. ಇದನ್ನು ಕೂಡ ಹಾಗೆಯೇ ಅಂದುಕೊಂಡು ಸಮಾಧಾನ ಪಟ್ಟುಕೊಳ್ಳಬೇಕು. ಅನಾರೋಗ್ಯದಿಂದ ಚೇತರಿಸಿಕೊಳ್ಳುವಂತೆ ನಾವು ಈಗ ಕೊರೋನಾ ಲಾಕ್ ಡೌನ್‌ನಿಂದ ಹೊರಬಂದು ವಾಸ್ತವ ಜಗತ್ತಿಗೆ ಹೊಂದಿಕೊಳ್ಳಬೇಕು. ಮತ್ತೆ ಕೆಲಸ ಕಾರ್ಯಗಳ ನಡುವೆ ನಮ್ಮನ್ನು ತೊಡಗಿಸಿಕೊಂಡು ದಾಂಪತ್ಯ ಜೀವನದ ಮಧುರತೆಯ ಸ್ವಾದವನ್ನು ಮತ್ತೆ ಪಡೆದುಕೊಳ್ಳಬೇಕು.
ಮನೆಗೆಲಸಗಳನ್ನು ಹಂಚಿಕೊಳ್ಳಿ
ಕೊರೋನಾ ದೆಸೆಯಿಂದಾಗಿ ಮನೆಗೆಲಸದವಳು ಹಾಗೂ ಇತರ ಸಹಾಯಕರು ಬರುವಿಕೆ ಸಂಪೂರ್ಣ ನಿಂತುಹೋಗಿದೆ. ಹೀಗಾಗಿ ಮನೆಯ ಸಮಸ್ತ ಕೆಲಸಗಳನ್ನು ಗೃಹಿಣಿಯೊಬ್ಬಳೇ ನಿಭಾಯಿಸುವುದು ಕಷ್ಟವಾಗುತ್ತದೆ. ಹೀಗಾಗಿ ದಂಪತಿಗಳು ಪರಸ್ಪರ ಮಾತನಾಡಿಕೊಂಡು ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಹಂಚಿಕೊಳ್ಳುವುದು ಅನಿವಾರ್ಯ. ಈ ರೀತಿ ಮಾಡುವುದರಿಂದ ಮನೆ ಶುಭ್ರವಾಗಿ, ಅಡುಗೆ ಸಕಾಲಕ್ಕೆ ತಯಾರಾಗಿ ಜೊತೆಗೆ ಮನರಂಜನೆ ಅವಕಾಶ ಸಿಗುತ್ತದೆ. ಮನಸ್ಸಿದ್ದಲ್ಲಿ ಯಾವ ಕೆಲಸವನ್ನು ನಿಭಾಯಿಸುವುದೂ ಕಷ್ಟವಲ್ಲ.
ಹತ್ತಿರವಿದ್ದೂ ದೂರ ದೂರ
ಕೊರೋನಾ ವೈರಸ್ ನವದಂಪತಿಗೆ ಸೇರಿದಂತೆ ಬಹುತೇಕ ಎಲ್ಲ ಜೋಡಿಗಳಿಗೆ ಹೇಗೆ ಹೆದರಿಸಿಬಿಟ್ಟಿತ್ತೆಂದರೆ, ಮನೆಯಲ್ಲಿ ಹತ್ತಿರವಿದ್ದೂ ದೂರ ಇರುವಂತೆ ಮಾಡಿಬಿಟ್ಟಿತ್ತು. ನವದಂಪತಿಗಳಿಗೆ ಪರಸ್ಪರರ ಆಕರ್ಷಣೆಗಳು ಇದ್ದೇ ಇರುತ್ತದೆ. ತಮ್ಮ ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕುವುದು ಅವರಿಗೆ ಸಾಧ್ಯವಿರುವುದಿಲ್ಲ. ಆದರೂ ವೈರಸ್ ಭೀತಿಯಿಂದಾಗಿ ದೂರ ಇರುವುದು ಅನಿವಾರ್ಯವಾಗಿತ್ತು. ಹೀಗಾಗಿ ಒಂದಷ್ಟು ನಿರಾಶೆ ಆಗಿರುತ್ತದೆ. ಕೊರೋನಾದ ಸೋಂಕಿನ ಹಾವಳಿ ಕಡಿಮೆಯಾದ ಬಳಿಕ ದಂಪತಿಗಳು ತಮ್ಮ ಉಲ್ಲಾಸದ ಜೀವನ ಆರಂಭಿಸಬಹುದು. ಆದರೆ ಒಂದಿಷ್ಟು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹೊರಗಿನಿಂದ ಬಂದ ಬಳಿಕ ಸ್ನಾನ ಮಾಡಿಯೇ ಪರಸ್ಪರ ಭೇಟಿಯಾಗಬೇಕು. ಹೀಗೆ ಮಾಡಿದಲ್ಲಿ ಮೊದಲಿನ ಪ್ರೀತಿ ಮರುಕಳಿಸುತ್ತದೆ.
ಓವರ್ ಎಕ್ಸ್ಪೋಶರ್‌ನ ಅಪಾಯ
ಲಾಕ್ ಡೌನ್‌ನ ಕಾರಣದಿಂದ ಗಂಡ ಹೆಂಡತಿ ಸದಾ ಜೊತೆ ಜೊತೆಗೆ ಇದ್ದರೂ ಕೆಲವರಲ್ಲಿ ಪ್ರೀತಿಯ ಭಾವನೆಯೇ ಇರುತ್ತಿರಲಿಲ್ಲ. ಅದರಿಂದಾಗಿ ಕೆಲವರಲ್ಲಿ ಮನಸ್ತಾಪ ಕೂಡ ಉಂಟಾಗಿರಬಹುದು. ಚೀನಾದಲ್ಲಿ ನಮಗಿಂತ ಮುಂಚೆಯೇ ಲಾಕ್ ಡೌನ್ ಮಾಡಲಾಗಿತ್ತು. ಅಲ್ಲಿ ಜೊತೆ ಜೊತೆಗೆ ಇರುವ ಅನಿವಾರ್ಯತೆಯಿಂದ ಜಗಳಗಳು ಉಂಟಾಗಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗಿದ್ದವು. ದಕ್ಷಿಣ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಫೆಬ್ರವರಿ 24ರ ಬಳಿಕ 300ಕ್ಕೂ ಹೆಚ್ಚು ವಿಚ್ಛೇದನದ ಅರ್ಜಿಗಳು ದಾಖಲಾಗಿದ್ದ. ಪಝಿಯಾನ್ ಪ್ರಾಂತ್ಯ ಒಂದು ದಿನಕ್ಕೆ 10 ಅರ್ಜಿಗಳನ್ನು ಮಾತ್ರ ಪರಿಶೀಲಿಸುವುದಾಗಿ ಹೇಳಿತ್ತು. ದಂಪತಿಗಳು ಅಗತ್ಯಕ್ಕಿಂತ ಹೆಚ್ಚು ಅವಧಿ ಜೊತೆ ಜೊತೆಗೆ ಇರುವುದು ಅನಿವಾರ್ಯವಾದುದರಿಂದ ಹೀಗಾಯಿತೆಂದು ಹೇಳಲಾಗಿದೆ. ಈಗ ಲಾಕ್ ಡೌನ್‌ನಿಂದ ಹೊರಬಂದ ಬಳಿಕ ನಮ್ಮ ಅಹಂನ್ನು ಕೊನೆಗೊಳಿಸಿ ದಾಂಪತ್ಯ ಜೀವನವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಕ್ಕೆ ಕೈ ಹಾಕಬೇಕು. ಅದೇನೂ ಕಷ್ಟದ ಕೆಲಸವಲ್ಲ. ಅದಕ್ಕೆ ಸಕಾರಾತ್ಮಕ ಪ್ರಯತ್ನ ಬೇಕು ಅಷ್ಟೆ.
ಮನೆಯಲ್ಲಿದ್ದೂ ಅಂತರ ಸಾಧ್ಯವಿತ್ತು
ಪ್ರತಿಯೊಬ್ಬರಿಗೂ ತಮಗಾಗಿ ಒಂದಿಷ್ಟು ಸಮಯ ಬೇಕಿರುತ್ತದೆ. ಆದರೆ ಕೊರೋನಾದ ಕಾರಣದಿಂದಾಗಿ ಮನೆಯಲ್ಲಿಯೇ ಸದಾ ಉಳಿದಿರಬೇಕಾದ ಅನಿವಾರ್ಯವಿತ್ತು. ಹಾಗಾಗಿ ಒಂದಿಷ್ಟು ದಂಪತಿಗಳಲ್ಲಿ ಅದು ಬೇಸರ, ಮುನಿಸು ಉಂಟು ಮಾಡಿತು. ನೀವು ಪರಸ್ಪರ ಮಾತನಾಡಿಕೊಂಡು ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿತ್ತು. ನಿಮ್ಮಿಬ್ಬರಲ್ಲಿ ಒಬ್ಬರದ್ದು ವರ್ಕ್ ಫ್ರಮ್ ಹೋಮ್ ಇದ್ದಿದ್ದರೆ ಆ ಸಮಸ್ಯೆಯೇ ಬರುತ್ತಿರಲಿಲ್ಲ. ಈಗ ಆ ಮುನಿಸನ್ನು ಮರೆತು ಬದಲಾದ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ಮತ್ತೆ ಯಥಾಸ್ಥಿತಿ ಉಂಟಾದರೆ ನಿಮ್ಮಿಬ್ಬರ ನಡುವಿನ ಮನಸ್ತಾಪ ಕೊನೆಗೊಂಡು ಅದು ಪ್ರೀತಿಯ ಜೀವನದಲ್ಲಿ ಪರಿವರ್ತನೆಗೊಳ್ಳುತ್ತದೆ. ಅದಕ್ಕಾಗಿ ಒಂದಷ್ಟು ತಾಳ್ಮೆ ಅಗತ್ಯ. ಪರಸ್ಪರರನ್ನು ದೂರುವುದಕ್ಕಿಂತ ಪರಸ್ಪರರ ವಿಶೇಷತೆಗಳನ್ನು ಅರಿತುಕೊಂಡು ದಾಂಪತ್ಯ ಜೀವನವನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕು.
ಮನೋತಜ್ಞರ ದೃಷ್ಟಿಯಲ್ಲಿ
ಲಾಕ್ ಡೌನ್ ಸಮಯದಲ್ಲಿ ಗಂಡ ಹೆಂಡತಿ ಮನೆಯಲ್ಲಿಯೇ ಇದ್ದಾಗ ಹಲವು ತಪ್ಪು ಕಲ್ಪನೆಗಳು ಕೂಡ ಉಂಟಾಗಿರಬಹುದು. ಅವನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸದ ಪರಿಣಾಮವಾಗಿ ಮನಸ್ತಾಪ ಇನ್ನಷ್ಟು ಹೆಚ್ಚಾಗಿರಬಹುದು. ಲಾಕ್ ಡೌನ್ ಅಂತ್ಯಗೊಂಡ ಬಳಿಕ ಗಂಡ ಹೆಂಡತಿ ಪುನಃ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿ ಹಿಂದಿನ ಮುನಿಸನ್ನು ಬೇಸರವನ್ನು ಬದಿಗಿಟ್ಟು ಒಂದಾಗಲು ಪ್ರಯತ್ನಿಸಬೇಕು.
ಮನೋ ವೈದ್ಯೆ ಡಾ. ಪ್ರಿಯಾಂಕಾ ಹೀಗೆ ಹೇಳುತ್ತಾರೆ, “ಸಂಗಾತಿಯ ಬಗ್ಗೆ ನಿಮಗೆ ಯಾವುದಾದರೂ ದೂರು ಇದ್ದಲ್ಲಿ, ಅದರ ಬಗ್ಗೆ ಕುಳಿತು ಮಾತನಾಡಬೇಕು. ಹಾಗೆ ಮಾಡಿದರೆ ನಿಮ್ಮ ಮನಸ್ಸಿನಲ್ಲಿರುವ ಸಂದೇಹ ನಿವಾರಣೆಯಾಗುತ್ತದೆ. ಸಂಗಾತಿಯಲ್ಲಿ ಏನೇ ಕೊರತೆಗಳು, ಲೋಪಗಳು ಇದ್ದರೂ ಅವನ್ನು ದೊಡ್ಡದು ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ. ಸಕಾರಾತ್ಮಕ ಧೋರಣೆ ಹೊಂದುವುದರ ಮೂಲಕ ಹಿಂದಿನ ಒಳ್ಳೆಯ ಕ್ಷಣಗಳನ್ನು ನೆನಪಿಸಿಕೊಂಡು ಅವನ್ನು ಪುನಃ ಪಡೆಯುವುದರತ್ತ ಮನಸ್ಸು ಮಾಡಬೇಕು. ಸಂಗಾತಿಯ ಒಳ್ಳೆಯ ಗುಣಗಳನ್ನಷ್ಟೇ ನೋಡುವ ಪ್ರಯತ್ನ ನಿಮ್ಮದಾಗಬೇಕು. ಆಗ ನೋಡಿ, ನಿಮ್ಮಿಬ್ಬರ ನಡುವಿನ ಮನಸ್ತಾಪ ಹೇಗೆ ದೂರವಾಗುತ್ತದೆಂದು.”
ಕ್ವಾಲಿಟಿ ಟೈಮ್ ಕೊಡಿ
ಲಾಕ್ ಡೌನ್ ಆಗಿದ್ದ ಸಮಯ ಎಲ್ಲರಿಗೂ ಕಷ್ಟವಾಗಿದ್ದ ಕಾಲ. ಅದನ್ನು ನೀವು ಇಬ್ಬರೂ ನೆಮ್ಮದಿಯಿಂದಲೂ ಕಳೆಯಬಹುದಿತ್ತು. ಪರಸ್ಪರರ ಹವ್ಯಾಸಗಳನ್ನು ಅರಿತು ಅವನ್ನು ಪುನಃ ಅನುಷ್ಠಾನಕ್ಕೆ ತರಲು ಪ್ರಯತ್ನಿಸಬಹುದಾಗಿತ್ತು. ಅದು ನಿಮ್ಮಿಂದ ಸಾಧ್ಯವಾಗದಿರಬಹುದು. ಈಗ ಅದರ ಬಗ್ಗೆ ಪಶ್ಚಾತ್ತಾಪ ಪಡದೆ ಲಾಕ್ ಡೌನ್ ನಂತರದ ದಿನಗಳಲ್ಲಿ ಪರಸ್ಪರರ ಬಗ್ಗೆ ಗೌರವ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿ. ರಜೆ ಸಿಕ್ಕಾಗ ಪರಸ್ಪರಿಗಾಗಿ ಕ್ವಾಲಿಟಿ ಟೈಮ್ ಕೊಡುವ ಪ್ರಯತ್ನ ಮಾಡಿ. ಪರಸ್ಪರರ ಹವ್ಯಾಸಗಳನ್ನು ಗೌರವಿಸಿ. ಅವಕಾಶ ಸಿಕ್ಕರೆ ಕಡಿಮೆ ಅಂತರದ ಪ್ರವಾಸಕ್ಕೆ ಹೋಗಿ ಬನ್ನಿ. ಏಕಾಂತದಲ್ಲಿ ಕಳೆಯುವ ಅವಕಾಶ ಮಿಸ್ ಮಾಡಿಕೊಳ್ಳಬೇಡಿ. ಇದು ನಿಮ್ಮಿಬ್ಬರ ನಡುವಿನ ತಪ್ಪು ಕಲ್ಪನೆ, ಮನಸ್ತಾಪಗಳನ್ನು ದೂರ ಮಾಡಿ ನೀವು ಪುನಃ ಮಾನಸಿಕವಾಗಿ ಒಂದಾಗುವಂತೆ ಮಾಡುತ್ತದೆ.
– ಪ್ರಮೀಳಾ
ಕೊರೋನಾ : ಯಾವುದು ಸತ್ಯ, ಯಾವುದು ಸುಳ್ಳು? ಕೊರೋನಾ ಇನ್ನೂ ದೇಶದಿಂದ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಲಾಕ್ ಡೌನ್‌ನಿಂದ ಕ್ರಮೇಣ ಹೊರಬಂದರೂ ಅದರ ಭೀತಿ ಅಷ್ಟಿಷ್ಟು ಇದ್ದೇ ಇದೆ. ಈ ಮಧ್ಯೆ ಕೆಲವು ಸುದ್ದಿಗಳು ನಿಮ್ಮನ್ನು ಗೊಂದಲಕ್ಕೆ ಕೆಡಬಹುದು ಆ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ.
ತಪ್ಪು ಕಲ್ಪನೆ 1 : ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ವ್ಯಾಕ್ಸಿನ್ ಬಂದುಬಿಟ್ಟಿದೆ.
ವಾಸ್ತವ : ಕೊರೋನಾ ವೈರಸ್‌ನ್ನು ಬುಡ ಸಮೇತ ಹೋಗಲಾಡಿಸುವ ಯಾವುದೇ ಲಸಿಕೆ ಇನ್ನೂ ಸಿದ್ಧಗೊಂಡಿಲ್ಲ. ಆದರೆ ಜಗತ್ತಿನಾದ್ಯಂತ ವಿಜ್ಞಾನಿಗಳು ಅದಕ್ಕೆ ಲಸಿಕೆ ಕಂಡುಹಿಡಿಯಲು ಬಹಳ ಪ್ರಯತ್ನ ನಡೆಸಿದ್ದಾರೆ ಎನ್ನುವುದಂತೂ ಸತ್ಯ. ಮನುಷ್ಯನಿಗೆ ಕೊರೋನಾ ವಿರುದ್ಧ ಹೋರಾಡುವಂತಹ, ಸುರಕ್ಷಿತ ಲಸಿಕೆ ಮಾತ್ರ ಇನ್ನೂ ಹೊರಬಂದಿಲ್ಲ ಎನ್ನುವುದಂತೂ ಸತ್ಯ. ಏಕೆಂದರೆ ಯಾವುದೇ ಒಂದು ಲಸಿಕೆ ಕಂಡುಹಿಡಿದು, ಅದನ್ನು ಪ್ರಯೋಗ ಮಾಡಿ ಖಚಿತಪಡಿಸಿ ಸಾರ್ವಜನಿಕರಿಗೆ ಒದಗಿಸಲು ಒಂದು ವರ್ಷದ ಸಮಯವಾದರೂ ಬೇಕೇ ಬೇಕು. ಲಂಡನ್ನಿನ ವಿಜ್ಞಾನಿ ಪ್ರೊ. ರಾಬಿನ್ ಹೇಳುವುದೇನೆಂದರೆ, ಯಾವುದೇ ಒಂದು ಲಸಿಕೆ ಆರಂಭದ ಹಂತದಲ್ಲಿ ವೈರಸ್‌ನ್ನು ತಡೆಯಲು ಪ್ರಯತ್ನ ಮಾಡುತ್ತದೆ. ಏಕೆಂದರೆ ಅದು ಇತರರಿಗೆ ಹರಡದಿರಲಿ ಎಂಬುದಾಗಿರುತ್ತದೆ. ಆ ಬಳಿಕವೇ ಮನುಷ್ಯನ ದೇಹದಲ್ಲಿರುವ ವೈರಸ್‌ನ್ನು ನಾಶಗೊಳಿಸುವ ಲಸಿಕೆ ಸಿದ್ಧಗೊಳ್ಳುತ್ತದೆ.
ತಪ್ಪು ಕಲ್ಪನೆ 2 : ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಬಿಸಿ ನೀರು ಅಥವಾ ಉಪ್ಪು ಮಿಶ್ರಿತ ನೀರು ಉಪಯುಕ್ತ.
ವಾಸ್ತವ : ಬಿಸಿ ನೀರು ಅಥವಾ ಉಪ್ಪು ಮಿಶ್ರಿತ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಬಹುದು ಎನ್ನುವುದು ಇನ್ನೂ ಖಚಿತಗೊಂಡಿಲ್ಲ. ಹೀಗಾಗಿದ್ದರೆ ಯಾರಿಗೂ ಸುಲಭವಾಗಿ ಆ ವೈರಸ್‌ನ ಸೋಂಕು ತಗುಲುತ್ತಿರಲಿಲ್ಲ. ರಕ್ತದೊತ್ತಡದ ರೋಗಿಗಳು ಪ್ರತಿನಿತ್ಯ ಉಪ್ಪು ಮಿಶ್ರಿತ ನೀರನ್ನು ಸೇವಿಸುತ್ತಿದ್ದರೆ ಅದು ಅವರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಏಕೆಂದರೆ ಒಂದೆಡೆ ಸೋಡಿಯಂ ದೇಹದಲ್ಲಿ ರಕ್ತದ ಸಮತೋಲನವನ್ನು ಕಾಯ್ದುಕೊಳ್ಳುವ ಕೆಲಸ ಮಾಡುತ್ತದಾದರೆ, ಇನ್ನೊಂದೆಡೆ ರಕ್ತದ ಹರಿವಿನಲ್ಲಿ ಅದರ ಪ್ರಮಾಣ ಹೆಚ್ಚಾಗಿಬಿಟ್ಟರೆ, ಅದು ರಕ್ತನಾಳಗಳಲ್ಲಿ ನೀರು ಹೀರಿಕೊಳ್ಳುತ್ತದೆ. ಅದರಿಂದ ರಕ್ತದ ಹರಿವು ಹೆಚ್ಚಾಗಿ ರಕ್ತದೊತ್ತಡ ಅಧಿಕಗೊಳ್ಳುತ್ತದೆ. ಒಂದಂತೂ ಸತ್ಯ, ಬಿಸಿ ನೀರನ್ನು ಸೇವಿಸುವುದರಿಂದ ಗಂಟಲು ಒಣಗುವ ಸಮಸ್ಯೆಯಿಂದ ಮುಕ್ತಿ ಸಿಗಬಹುದು.
ತಪ್ಪು ಕಲ್ಪನೆ 3 : ಚೀನಾದ ವಸ್ತುಗಳನ್ನು ಖರೀದಿಸುವುದರಿಂದ ಅನಾರೋಗ್ಯಕ್ಕೀಡಾಗುವ ಭೀತಿ.
ವಾಸ್ತವ : ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೇನೆಂದರೆ, ಹೊಸ ವೈರಸ್ ಕೋವಿಡ್ ವಾತಾವರಣದಲ್ಲಿ ಹೆಚ್ಚು ಹೊತ್ತು ಜೀವಂತ ಇರುದಿಲ್ಲ. ಆದರೆ ನೀವು ಚೀನಾದ ಯಾವ ವಸ್ತುಗಳನ್ನು ಖರೀದಿಸಲು ಹೊರಟಿದ್ದೀರೊ, ಅವು ತಿಂಗಳು, ವಾರಗಳ ಹಿಂದಿನಿಂದ ಇಟ್ಟಿದ್ದರಿಂದ ಅವನ್ನು ಖರೀದಿಸುವುದರಿಂದ ನಿಮಗೆ ಯಾವುದೇ ಸೋಂಕು ತಗುಲದು. ನೀವು ಯಾವುದಾದರೂ ಸೋಂಕಿಗೀಡಾದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರೆ ಮಾತ್ರ ನಿಮಗೆ ಕೋವಿಡ್ ಉಂಟಾಗಬಹುದು.
ತಪ್ಪು ಕಲ್ಪನೆ 4 : ಪ್ರತಿಯೊಂದು ಬಗೆಯ ಮಾಸ್ಕ್ ಕೋವಿಡ್‌ನಿಂದ ರಕ್ಷಣೆ ಕೊಡುತ್ತದೆ.
ವಾಸ್ತವ : ಮಾರುಕಟ್ಟೆಯಲ್ಲಿ ಹಲವು ಬಗೆಯ ಮಾಸ್ಕ್ ಗಳು ಲಭ್ಯವಿದ್ದು, ಅವು ಹೇಳಿಕೊಳ್ಳಲಷ್ಟೇ ಮಾಸ್ಕ್ಗಳು. ಪ್ರತಿಯೊಂದು ಬಗೆಯ ಮಾಸ್ಕ್ ನಿಂದ ಕೋವಿಡ್‌ನ್ನು ತಡೆಯಲಾಗದು. ವಾಸ್ತವ ಏನೆಂದರೆ, ನೀವು ಧರಿಸುವ ಮಾಸ್ಕ್ ಟೈಟ್ ಫಿಟಿಂಗ್‌ನದು ಆಗಿರದಿದ್ದರೆ ಸೋಂಕಿಗೀಡಾದ ವ್ಯಕ್ತಿಯ ಬಾಯಿಂದ ಹೊರ ಹೊಮ್ಮುವ ಹನಿಗಳು ನಿಮ್ಮ ಬಾಯಿ ಪ್ರವೇಶಿಸಿ ನಿಮ್ಮನ್ನು ಸೋಂಕಿಗೀಡು ಮಾಡಬಹುದು ಅಥವಾ ಸೋಂಕಿಗೀಡಾದ ವ್ಯಕ್ತಿಯನ್ನು ಮುಟ್ಟಿದ ಬಳಿಕ ಅದೇ ಕೈಯಿಂದ ಬಾಯಿ, ಮೂಗು ಒರೆಸಿಕೊಂಡರೆ ಸೋಂಕು ತಗುಲಬಹುದು.