ಮೊಬೈಲ್‌ನ ಡಿಜಿಟಲ್ ವೆಬ್ ಚಿತ್ರ ಧಾರಾವಾಹಿಗಳು ಎಲ್ಲೆಲ್ಲೂ ಹೆಸರು ಮಾಡುತ್ತಿರುವ ಈ ಆಧುನಿಕ ಕಾಲದಲ್ಲಿ ಯಾವುದೇ ಗಾಡ್ ಫಾದರ್ ನೆರವಿಲ್ಲದೆ, `ಅಮವಾಸ್’ ಚಿತ್ರದಿಂದ ಬಾಲಿವುಡ್‌ಗೆ ಮಾನವಿ ದಿಢೀರ್ ಎಂದು ಪ್ರವೇಶಿಸಿದಳು. ಮುಂದೆ ಈಕೆಯ ಕೆರಿಯರ್ ಗ್ರಾಫ್ ಅದ್ಭುತವಾಗಿ ಬೆಳೆಯಿತು. `ನೋ ಒನ್ ಕಿಲ್ಡ್ ಜೆಸ್ಸಿಕಾ, ….’ ಇತ್ಯಾದಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳೇ ಆದರೂ ಎಲ್ಲರ ಗಮನ ಸೆಳೆದಳು. ಆದರೆ ವೆಬ್ ಸೀರೀಸ್ `ಪಿಕ್ಚರ್ಸ್’ ಅವಳ ಕೆರಿಯರ್‌ಗೆ ಹೊಸ ರೂಪ ನೀಡಿತೆಂದೇ ಹೇಳಬಹುದು. ಈಗಾಗಲೇ ಈಕೆ ಹಲವು ಯಶಸ್ವೀ ವೆಬ್ ಸೀರೀಸ್ ಧಾರಾವಾಹಿಗಳಲ್ಲಿ ಖ್ಯಾತಿ ಗಳಿಸಿದ್ದಳು. ಇದಾದ ಮೇಲೆ ಈಕೆ ನಟಿಸಿದ್ದ `ಉಜ್ಡಾ ಚಮನ್’ ಚಿತ್ರ ಸಹ ಉತ್ತಮ ಹೆಸರು ಗಳಿಸಿಕೊಟ್ಟಿತು. ಅದೇ ತರಹ `ಶುಭ್ ಮಂಗಲ್ ಝ್ಯಾದಾ ಸಾವ್ ಧಾನ್’ ಚಿತ್ರ ಉತ್ತಮ ಯಶಸ್ಸು ಗಳಿಸಿ, ಹೆಸರು ನೀಡಿತು. ಆ ಕುರಿತಾಗಿ ಗೃಹಶೋಭಾ ಜೊತೆ ನಡೆಸಿದ ಮಾತುಕಥೆ :
ಬಾಲಿವುಡ್ ಪರಂಪರೆಯ ಪ್ರಕಾರ ಹೊಸದಾಗಿ ಬಂದ ನಟ ನಟಿಯರು ಮೊದಲು ಎಂಥ ಪಾತ್ರಗಳಲ್ಲಿ ಹೆಸರು ಗಳಿಸುತ್ತಾರೋ ಖಾಯಂ ಅದೇ ಪಾತ್ರಗಳಲ್ಲಿ ಉಳಿದುಬಿಡುತ್ತಾರೆ. ಆದರೆ ನೀನು ಮೊದ ಮೊದಲು ಸಣ್ಣಪುಟ್ಟ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾಗ, ಇದರಲ್ಲಿ ಟೈಪ್ ಕಾಸ್ಟ್ ಆಗಿಹೋದರೆ ಎಂಬ ಚಿಂತೆ ಇರಲಿಲ್ಲವೇ?
ನನ್ನ ಜೊತೆ ಹೀಗೇ ಆಯಿತು. `ನೋ ಒನ್ ಕಿಲ್ಡ್ ಜೆಸ್ಸಿಕಾ’ ಚಿತ್ರದಲ್ಲಿ ನನಗೆ ನಾಯಕಿಯ ಗೆಳತಿ, ನಾಯಕನ ತಂಗಿ ಇಂಥ ಪಾತ್ರಗಳೇ ಸಿಗತೊಡಗಿದವು. ಅಷ್ಟು ಮಾತ್ರವಲ್ಲದೆ ನನ್ನನ್ನು ಪ್ರತಿ ಬಾರಿಯೂ ಅದೇ ತರಹದ ಪಾತ್ರ ನಿಭಾಯಿಸಬೇಕೆಂದು ಒತ್ತಾಯಿಸುತ್ತಿದ್ದರು. ಹೊಸ ಪಾತ್ರಗಳು ಅಂತ ಒಂದೂ ಸಿಗಲೇ ಇಲ್ಲ. ಆಗ ಕೆಲವು ದಿನ ನಾನು ಆಡಿಶನ್ ಕೊಡುವುದನ್ನೇ ನಿಲ್ಲಿಸಿಬಿಟ್ಟೆ. ಅದಾದ ಮೇಲೆ ನನಗೆ ವೆಬ್ ಸೀರೀಸ್ `ಪಿಕ್ಚರ್ಸ್’ನಲ್ಲಿ ಶ್ರೇಯಾಳ ಪಾತ್ರ ದೊರಕಿತು. ಆಗ ನನ್ನ ಸಿನಿ ಸಮೀಕರಣವೇ ಬದಲಾಯಿತು. ಇದಕ್ಕೆ ಮುಖ್ಯ ಕಾರಣವೆಂದರೆ ವೆಬ್ ಕಾರಣದಿಂದಲೇ ಬಾಲಿವುಡ್ ಚಿತ್ರಗಳು ಬದಲಾಗುವಂತಾಗಿದ್ದು, `ಉಜ್ಡಾ ಚಮನ್’ ಚಿತ್ರದಲ್ಲಿ ನನಗೆ ಅಪ್ಸರಾ ಪಾತ್ರ ದೊರಕಿತು. ಇದೀಗ `ಶುಭ್ ಮಂಗಲ್ ಝ್ಯಾದಾ ಸಾವ್ ಧಾನ್’ ಚಿತ್ರದಲ್ಲಿ ಗೋಗ್ ತ್ರಿಪಾಠಿಯ ಪಾತ್ರ ದೊರಕಿತು, ಅದಂತೂ ಎಂಥ ಪರಿಣಾಮಕಾರಿ ಪಾತ್ರ ನಿಮಗೆಲ್ಲ ಗೊತ್ತೇ ಇದೆ, ಚಿತ್ರದ ಯಶಸ್ಸು ಅದನ್ನು ಸಾಬೀತುಪಡಿಸಿದೆ.
ಸಿನಿಮಾದ ಬದಲಾವಣೆ ಹಾಗೂ ಡಿಜಿಟಲ್ ಮೀಡಿಯಾದಲ್ಲಿ ನಿನಗೆ ಏನಾದರೂ ಲಾಭ ಆಯ್ತೇ?
ಹ್ಞೂಂ, ಲಾಭ ಆಗಿದೆ. ಜನ ನನ್ನನ್ನು ಈಗ ವೆಬ್ ಸೆನ್ಸೇಶನ್ ಎಂದೇ ಭಾವಿಸುತ್ತಾರೆ. ಡಿಜಿಟಲ್ ಮೀಡಿಯಾದ ದೆಸೆಯಿಂದಾಗಿ ಪ್ರತಿ ಕಲಾವಿದರು, ಲೇಖಕರು, ನಿರ್ದೇಶಕರು, ಟೆಕ್ನಿಶಿಯನ್ಸ್ ಎಲ್ಲರಿಗೂ ಧಾರಾಳ ಕೆಲಸ ಸಿಗುತ್ತಿದೆ. ಈ ಹೊಸ ಮಾಧ್ಯಮದಿಂದ ಪ್ರತಿಯೊಬ್ಬರೂ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಇದೀಗ ಪ್ರತಿ ಪ್ರೊಡಕ್ಷನ್ ಹೌಸ್ ಹಾಗೂ ಪ್ರತಿ ಚ್ಯಾನೆಲ್‌ಗೂ ತನ್ನದೇ ಆದ ಡಿಜಿಟಲ್ ವಿಂಗ್ ಇದೆ. ಪ್ರತಿಯೊಬ್ಬರೂ ತಾವು ಗುಂಪಿನ ಕುರಿ ಮಂದೆಯಲ್ಲ ವಿಭಿನ್ನರು ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ವೆಬ್‌ನಲ್ಲಂತೂ ಬೋಲ್ಡ್ ಸೀನ್ಸ್ ಧಾರಾಳ ತೋರಿಸಲಾಗುತ್ತಿದೆ. ಇತ್ತೀಚೆಗಂತೂ ಎಲ್ಲರೂ ಹೇಗೆ ತಮಾಷೆ ಮಾಡುತ್ತಾರೆಂದರೆ, ಕೆಲಸವಿಲ್ಲದೆ ನೀವು ಕುಳಿತಿದ್ದರೆ ನಿಮಗಿಂತ ಕೆಟ್ಟ ಕಲಾವಿದರಿಲ್ಲ ಅಂತ!
ಯಾವ ವೆಬ್ ಸೀರೀಸ್ನಿಂದ ನಿನಗೆ ಹೆಚ್ಚಿನ ಹೆಸರು ಬಂತು?
`ಪಿಕ್ಚರ್ಸ್’ನಲ್ಲಿ ಶ್ರೇಯಾಳ ಪಾತ್ರ ವಹಿಸಿದಾಗಿನಿಂದ ಎಲ್ಲರ ಕಡೆಯಿಂದಲೂ ಪ್ರಶಂಸೆಯ ಸುರಿಮಳೆ ಸುರಿಯಿತು ಎಂದೇ ಹೇಳಬೇಕು. ಈ ಪಾತ್ರ ನಿರ್ವಹಿಸುತ್ತಾ ರಚನಾತ್ಮಕವಾಗಿ ಕೆಲಸ ಮಾಡಲು ಹೆಚ್ಚಿನ ಹುರುಪು ಸಿಕ್ಕಿತು. `ಫಾರ್ ಮೋರ್ ಶಾರ್ಟ್ಸ್’ ಸೀರೀಸ್‌ನಲ್ಲೂ ನನಗೆ ಒಳ್ಳೆ ಹೆಸರು ಸಿಕ್ಕಿತೆಂದೇ ಹೇಳಬಹುದು.
`ಉಜ್ಡಾ ಚಮನ್’ ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ ನೀನು `ಶುಭ್ ಮಂಗಲ್ ಝ್ಯಾ ಸಾವ್ ಧಾನ್’ ಚಿತ್ರದಲ್ಲಿ ನಾಯಕನ ಅಕ್ಕನ ಪಾತ್ರ ಒಪ್ಪಿಕೊಂಡದ್ದೇಕೆ?
ಫಸ್ಟ್ ಆಫ್ ಆಲ್, ಈ ಚಿತ್ರದಲ್ಲಿ ಯಾರೂ ಹೀರೋಯಿನ್ ಇಲ್ಲ…… ಹೀರೋ ಸಹ ಒಬ್ಬನೇ ಅಂತ ಹೇಳುವ ಹಾಗಿಲ್ಲ, ಇಬ್ಬರೂ ಹೀರೋಗಳೂ ಪರಸ್ಪರ ಪ್ರೇಮಿಸುವ ಚಿತ್ರ! ಇಂಥ ಸಲಿಂಗ ಕಾಮದ ಚಿತ್ರದಲ್ಲಿ ನಾಯಕಿ ಎಲ್ಲಿಂದ ಬರಲು ಸಾಧ್ಯ? ಇನ್ನೊಂದು ಮುಖ್ಯ ವಿಷಯವೆಂದರೆ, ಇದರಲ್ಲಿ ನಾನು ದ್ವಿತೀಯ ನಾಯಕನ ಅಕ್ಕನಾದರೂ ಅವಳಿಂದಲೇ ಕಥೆಗೆ ಮುಖ್ಯ ತಿರುವು! ಹೀಗಾಗಿ ಇದರ ಸ್ಕ್ರಿಪ್ಟ್ ಓದಿದ ನಾನು ಬಹಳ ಪ್ರಭಾವಿತಳಾಗಿ ಒಪ್ಪಿಕೊಂಡೆ. `ಉಜ್ಡಾ ಚಮನ್’ ಚಿತ್ರದಲ್ಲಿ ನಾಯಕಿ ಆಗುವುದಕ್ಕೆ ಮೊದಲೇ ಈ ಪಾತ್ರಕ್ಕೆ ಸೈನ್ ಮಾಡಿದ್ದೆ. ಈ ಚಿತ್ರದ ನಂತರ ಮಡಿವಂತಿಕೆ ತೊರೆದು, ಓಪನ್ ಮೈಂಡೆಡ್ ಆಗಿ `ಗೇ’ ಬಗ್ಗೆ ಜನ ವಿಮರ್ಶೆ ಮಾಡುತ್ತಿರುವುದು ನಮ್ಮ ಭಾರತೀಯ ಸಮಾಜ ಆಧುನಿಕತೆಯತ್ತ ದಿಟ್ಟ ಹೆಜ್ಜೆ ಹಾಕುತ್ತಿರುವ ಲಕ್ಷಣವಾಗಿದೆ!
ಈ ಚಿತ್ರದಲ್ಲಿ ನಿನ್ನ ಪಾತ್ರದ ಕುರಿತು ಏನು ಹೇಳ್ತೀಯಾ?
ಈ ಚಿತ್ರದಲ್ಲಿ ನಾನು ದ್ವಿತೀಯ ನಾಯಕ ಅಮನ್‌ನ ಅಕ್ಕನಾಗಿ ಗೋಗ್ ತ್ರಿಪಾಠಿಯ ಪಾತ್ರದಲ್ಲಿ, ಮನೆಯೊಳಗೂ ಸದಾ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುವ ಫನ್ನಿ ಡುಮ್ಮಿಯ ಪಾತ್ರ ನಿರ್ವಹಿಸಿದ್ದೇನೆ. ಮುಖದ ತುಂಬಾ ಮೊಡವೆ, ಸಿಡುಬಿನ ಕಲೆ ಇರುವ ವಿಲಕ್ಷಣ ಯುವತಿಯ ಪಾತ್ರವದು. ಗ್ಲಾಮರಸ್ ನಟೀಮಣಿಯರು ಈ ಪಾತ್ರ ಬೇಡ ಎಂದು ತಿರಸ್ಕರಿಸಿದಾಗ ನಾನು ಚಾಲೆಂಜಿಂಗ್‌ಆಗಿ ತೆಗೆದುಕೊಂಡೆ.
ಹೇಗಾದರೂ ಸರಿ, ತನ್ನಂಥ ಕುರೂಪಿಯೂ ವಿವಾಹಿತೆ ಅನಿಸಿಕೊಳ್ಳಬೇಕೆಂಬುದೇ ಇವಳ ಗುರಿ. ಸದಾ ರೊಮಾನ್ಸ್ ಕುರಿತು ಚಿಂತಿಸುತ್ತಾ, ಹದಿಹರೆಯದ ಮಕ್ಕಳಿರುವ ವಯಸ್ಸಾದ ವ್ಯಕ್ತಿಯನ್ನೇ ಮದುವೆಯಾಗಲು ನಿರ್ಧರಿಸುತ್ತಾಳೆ. ಈ ಚಿತ್ರದಲ್ಲಿ ಯಾರು ನೋಡಿದರೂ ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆಯೇ ಮಾತನಾಡುತ್ತಿರುತ್ತಾರೆ, ವೆರಿ ಇಂಟರೆಸ್ಟಿಂಗ್ ಪಾತ್ರ!
ಈ ಚಿತ್ರದಲ್ಲಿ ನಿನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇತ್ತು ಅಂತೀಯಾ?
ಗೋಗ್ ತನ್ನ ಕುಟುಂಬದ ಒಬ್ಬಳೇ ಹೆಣ್ಣುಮಗಳು, ಅವಳಿಗೆ ದೊಡ್ಡಪ್ಪನ ಮಗನಾಗಿ ಚಿತ್ರದ ದ್ವಿತೀಯ ಹೀರೋ ಅಮನ್ ಇರ್ತಾನೆ. ಸಲಿಂಗ ವಿವಾಹಕ್ಕೆ ಮುಂದಾದ ತಮ್ಮನನ್ನು ಹಿರಿಯರೆಲ್ಲರೂ ವಿರೋಧಿಸಿದಾಗ, ಇವಳೊಬ್ಬಳೇ ಪ್ರೀತಿ, ಪ್ರೇಮ ಒಂದೇ ಬದುಕಲು ಆಧಾರ ಎಂದು ಅವನಿಗೆ ಸಪೋರ್ಟ್ ಮಾಡುತ್ತಾಳೆ. ಭಾರತೀಯ ಮಧ್ಯಮ ವರ್ಗದ ಪಕ್ಕಾ ಸಾಮಾಜಿಕ ದೃಶ್ಯವಿದು. ತೀರಾ ಹೈಕ್ಲಾಸ್ ಅಥವಾ ಲೋಕ್ಲಾಸ್‌ನಲ್ಲಿ ಈ ಕುರಿತು ಯಾರೂ ತಲೆ ಕೆಡಿಸಿಕೊಳ್ಳಲ್ಲ. ಮಧ್ಯಮ ವರ್ಗದವರ ಮನಸ್ಸಿನ ತುಡಿತಗಳು ಇಲ್ಲಿ ಹೃದಯಂಗಮವಾಗಿವೆ. ಹೋಮೋ ಸೆಕ್ಸ್ ಬಗ್ಗೆ ಅರಿಯದ, ಸಮಾಜದ ಭಯದಿಂದ ಅಮನ್‌ನನ್ನು ಎಲ್ಲರೂ ವಿರೋಧಿಸುತ್ತಾರೆ. ತಾನಂತೂ ಮದುವೆ ಮುರಿದುಕೊಂಡು ಅಸಹಾಯಕಳಾಗಿ ಒಬ್ಬಂಟಿಯಾಗಿದ್ದೇನೆ. ಬಯಸಿದ ಪ್ರೇಮ ತಮ್ಮನಿಗೆ ಸಿಗುತ್ತಿರುವಾಗ, ಅವನಾದರೂ ಸುಖವಾಗಿರಲಿ ಎಂಬುದೇ ಇವಳ ಗುರಿ!
ನಮ್ಮ ಭಾರತೀಯ ಕಾನೂನಿನ ಪ್ರಕಾರ ಈಗ ಹೋಮೋ ಸೆಕ್ಸ್ ಅಪರಾಧವಲ್ಲ. ಅಂಥವರು ಯಾರು ಬಯಸಿ ಒಂದಾಗುತ್ತಾರೋ ಯಾರೂ ಅವರನ್ನು ತಡೆಯಲಾಗದು. ಈ ಸಂದರ್ಭದಲ್ಲಿ ಈ ಚಿತ್ರ ಎಂಥ ಪರಿಣಾಮ ಬೀರಬಹುದು?
ಈ ಕಾನೂನು ಜಾರಿಗೊಂಡ ನಂತರ ಭಾರತದಲ್ಲಿ ಮೊದಲ ಬಾರಿಗೆ ಇಂಥ ಒಂದು ಗಂಭೀರ ವಿಷಯವನ್ನು ಹೃದಯಸ್ಪರ್ಶಿಯಾಗಿ ಇಲ್ಲಿ ತೋರಿಸಲಾಗಿದೆ, ಇಲ್ಲಿ ಯಾವುದೇ ವಲ್ಗರಿಸಂ ಇಲ್ಲ. ಅಶ್ಲೀಲತೆಯ ಸೋಂಕಿಲ್ಲದ ಈ ಚಿತ್ರ ಪ್ರೀತಿ ಪ್ರೇಮದ ಬಗ್ಗೆ ಮಾತ್ರ ಹೇಳುತ್ತದೆ. ಒಂದು ವಿಧದಲ್ಲಿ ಮಡಿವಂತಿಕೆಯ ಜನರ ಮನದಲ್ಲಿ ಜಾಗೃತಿ ಉಂಟು ಮಾಡಿದೆ! ಈ ಚಿತ್ರ ಬಂದ ಮಾತ್ರಕ್ಕೆ ನಮ್ಮ ಇಡೀ ಭಾರತೀಯರ ಮೈಂಡ್ ಸೆಟ್ ಬದಲಾಗಿಬಿಡುತ್ತದೆ ಎಂದು ಹೇಳಲಾಗದು, ಇದೊಂದು ಪ್ರಾಮಾಣಿಕ ಪ್ರಯತ್ನವಷ್ಟೆ. ಇನ್ನು ಮುಂದೆ ಹುಡುಗ, ಹುಡುಗಿ ತಮ್ಮ ಮನೆಯವರ ಮುಂದೆ ತಮ್ಮ ಪ್ರೀತಿ ಪ್ರೇಮದ ಬಗ್ಗೆ ಮುಕ್ತವಾಗಿ ತೋಡಿಕೊಳ್ಳಲು ಒಂದು ಅವಕಾಶ ಸಿಕ್ಕಿದಂತೆ!
– ಪ್ರತಿನಿಧಿ