ಇತ್ತೀಚೆಗೆ ಕೇರಳದಲ್ಲಿ ನಡೆದ 2 ಆನೆಗಳ ದಾರುಣ ಹತ್ಯೆ ಇಡೀ ಮಾಧ್ಯಮಗಳಲ್ಲಿ ದೊಡ್ಡ ಅಲ್ಲೋಕಲ್ಲೋಲ ಉಂಟು ಮಾಡಿತು. ಎರಡೂ ಘಟನೆಗಳಲ್ಲಿ ಹೆಣ್ಣಾನೆ ಮಾನವರ ಕಿಡಿಗೇಡಿತನದಿಂದಾಗಿ ಭಯಂಕರ ವಿಷಭರಿತ ರಾಸಾಯನಿಕಗಳು ತುಂಬಿದ್ದ ಆಹಾರ ಸೇವಿಸಿ ಅನ್ಯಾಯವಾಗಿ ಕೊರಗಿ ಕೊರಗಿ ಪ್ರಾಣಬಿಟ್ಟ. ಪಾಲಕ್ಕಾಡ್‌ನಲ್ಲಿ ನಡೆದ ಮೊದಲ ಘಟನೆ ಅಲ್ಲಿನ ಸ್ಥಳೀಯ ರಾಜಕೀಯ ಧುರೀಣರ ಸಿಟ್ಟು ಕೆರಳಿಸಿ ವಿಷಯ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿಯವರನ್ನೂ ತಲುಪಿ ಸಂಚಲನ ಉಂಟುಮಾಡಿತು. ಕ್ರಮೇಣ ಈ ಆನೆಗಳ ಸಾವು ವೈರಲ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿಪ್ರಿಯರು ಕೆಂಡ ಕಾರಿದರು. ಅದರಲ್ಲೂ ಒಂದು ಹೆಣ್ಣಾನೆ ಗರ್ಭ ಧರಿಸಿತ್ತು. ಮಾನವರ ಅಟ್ಟಹಾಸದಿಂದಾಗಿ ಮರಿ ಸಮೇತ ತುಂಬು ಗರ್ಭಿಣಿ ಆನೆ ಅಸುನೀಗಿತು. ಈ ದಾರುಣ ಘಟನೆ ನಡೆದಿದ್ದು ಹೀಗೆ.

ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ, ಹಲವು ವಾರಗಳ ಹಿಂದೆ, ಕೆಲವು ಕಿಡಿಗೇಡಿಗಳು ಬೇಕೆಂದೇ ಅನಾನಸ್‌ ಹಣ್ಣು ಕೊರೆದು ಅದರಲ್ಲಿ ಭಯಂಕರವಾಗಿ ಸಿಡಿಯುವ ವಿಷಭರಿತ ರಾಸಾಯನಿಕಗಳ ಪಟಾಕಿ ಇರಿಸಿ, ಆಹಾರ ಅರಸುತ್ತಾ ಬಂದ ಮೂಕ ಬಸುರಿ ಹೆಣ್ಣಾನೆಗೆ ತಿನ್ನಿಸಿ ಮಜಾ ನೋಡುತ್ತಾ ನಿಂತರು. ಅದಾದ ಸ್ವಲ್ಪ ಹೊತ್ತಿಗೆ ಆನೆ ವಿಷಪ್ರಾಶನದಿಂದ ಅಸುನೀಗಿತ್ತು. ಹಳ್ಳಿಗೆ ಆಹಾರ ಅರಸುತ್ತಾ ಬಂದ ಆನೆ,  ಅನಾನಸ್‌ ಕಂಡು ಆಸೆಪಟ್ಟಿದ್ದೇ ಮುಳುವಾಯ್ತು. ಅದು ಬೇಕೆಂದೇ ಹಾಗೆ ಮಾಡಿದ್ದಲ್ಲ, ಕಾಡು ಹಂದಿಗಳ ಕಾಟ ತಪ್ಪಿಸಲೆಂದು ಇರಿಸಿದ್ದು ಎಂದು ಕಿಡಿಗೇಡಿಗಳು ಸಮರ್ಥಿಸಿಕೊಂಡರು, ಆದರೆ ಅದರ ದುಷ್ಪರಿಣಾಮ ಅನುಭವಿಸಿದ್ದು ಮಾತ್ರ ಮೂಕ ಹೆಣ್ಣಾನೆ.

ಈ ದಾರುಣ ಘಟನೆ ನಡೆದು, ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರು ಸತ್ತ ಆನೆಯನ್ನು ಗುರುತಿಸಿದ್ದು ಮೇ 24ರಂದು.  ಅವರೇನೋ ಅದನ್ನು ಕಾಡಿಗೆ ಬಿಟ್ಟು ಬರುವ ಪ್ರಯತ್ನ ನಡೆಸಿದರು, ಆದರೆ ಹೆಣ್ಣಾನೆ ಮತ್ತೆ ಅಲ್ಲಿಗೇ ಮರಳಿತು. ಮರಳಿದ ಆನೆಗೆ ಒಂದಿಷ್ಟು ಬಾಳೆಹಣ್ಣು ತಿನ್ನಿಸುವ ಪ್ರಯತ್ನ ನಡೆಸಿದರು. ಆದರೆ ಅವಳ ಗಂಟಲಲ್ಲಿ ಪ್ರಾಣಾಂತಿಕ ಗಾಯಗಳಾಗಿ, ಅದನ್ನು ನುಂಗಲಿಕ್ಕೂ ಅವಳಿಂದಾಗಲಿಲ್ಲ….. ಮಾರನೇ ದಿನ ಪಶು ವೈದ್ಯರು ಬಂದು ಅದನ್ನು ಪರೀಕ್ಷಿಸಿ, ಚಿಕಿತ್ಸೆ ಆರಂಭಿಸುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು.

ಅತ್ಯಧಿಕ ನೋವು, ಸಂಕಟಗಳನ್ನು ತಡೆಯಲಾರದೆ ಮರ್ಮಘಾತಕವಾಗಿ ಘೀಳಿಡುತ್ತಾ, ಕಣ್ಣೀರು ಸುರಿಸುತ್ತಾ, ತನ್ನ ದೇಹದ ಉರಿ ಶಮನ ಮಾಡಿಕೊಳ್ಳಲು ಆ ಹೆಣ್ಣಾನೆ ಹತ್ತಿರದ ವೆಳ್ಳಿಯಾರ್‌ ನದಿಗೆ ಇಳಿದು ಬಹಳ ಹೊತ್ತು  ಹೊರಳಾಡಿ, ಹಲವು ಘಂಟೆ ಕಾಲ ನರಳಿ ಸಾವನ್ನಪ್ಪಿತು. ಅಲ್ಲಿನ ಸ್ಥಳೀಯರು, ಅರಣ್ಯ ಅಧಿಕಾರಿಗಳು, ಪಳಗಿದ ಆನೆಗಳನ್ನು ಬಳಸಿ ಇವಳನ್ನು ಹೊರಕ್ಕೆಳೆಯಲು ನಡೆಸಿದ ಉಪಾಯವೆಲ್ಲ ವ್ಯರ್ಥವಾಯಿತು. ಅದಾದ ಮೇಲೆ ಪಶು ವೈದ್ಯರು ನಡೆಸಿದ ಪೋಸ್ಟ್ ಮಾರ್ಟಂನಿಂದಾಗಿ ಈ ಆನೆ 2 ವಾರಗಳಿಂದ ತೀವ್ರ ಹಸಿವು, ಗಂಟಲು ಜೀರ್ಣಾಂಗ ವ್ಯೂಹದಲ್ಲಿ ಅಪಾರ ಹುಣ್ಣುಗಳ ಉರಿನೋವಿನಿಂದ, ನರಳಿ ನರಳಿ ಪ್ರಾಣ ಬಿಟ್ಟಿತೆಂದು ಖಾತ್ರಿಯಾಯಿತು. ಅವಳ ಮೇಲ್ಭಾಗ ಕೆಳಭಾಗದ ದವಡೆಗಳೆರಡೂ ತೀವ್ರ ಹಾನಿಗೊಳಗಾಗಿದ್ದವು. ಆನೆಯ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದೇ ಅವಳ ಪತನಕ್ಕೆ ಹಠಾತ್‌ ಕಾರಣ. ಇದನ್ನು ತಮ್ಮ ಅಟಾಪ್ಸಿಯಿಂದ ಖಾತ್ರಿಪಡಿಸಿದ ಸರ್ಜನ್ ಡೇವಿಡ್‌ ಅಬ್ರಹಾಂ, ಅನಾನಸ್‌ನಲ್ಲಿ ಸಿಡಿಮದ್ದಿನ ಪಟಾಕಿ ಸೇವನೆ ಆನೆಯ ಸಾವಿಗೆ ಮೂಲ ಕಾರಣವಾದರೆ, ಅವಳು ಉರಿ ತಡೆಯಲಾರದೆ ನೀರಿಗಿಳಿದು ಗಂಟೆಗಟ್ಟಲೆ ಹೊರಳಾಡಿದ್ದು, ಶ್ವಾಸಕೋಶಕ್ಕೆ ನೀರು ನುಗ್ಗಲು ದಾರಿಯಾಯ್ತು. ಗಂಟಲಿನ ಹುಣ್ಣು ತೀವ್ರ ಉಲ್ಬಣಗೊಂಡಿದ್ದರಿಂದ, ಅದು ಸತತ 2 ವಾರ ಏನನ್ನೂ ಸೇವಿಸಲು ಆಗಿರಲೇ ಇಲ್ಲ. ಮೂಕಪ್ರಾಣಿ ಬೇರೆ ದಾರಿ ಇಲ್ಲದೆ ತನ್ನ ಉರಿ ಶಮನ ಮಾಡಿಕೊಳ್ಳಲು ನೀರಿಗಿಳಿದು, ಮಾನವರ ಕುಕೃತ್ಯದಿಂದ ಮಾಡದ ತಪ್ಪಿಗೆ ಸಾವಿಗೆ ಶರಣಾಯ್ತು.

ವಿಷಯ ತಿಳಿದು ತನಿಖೆಗೆ ಇಳಿದ ಅಧಿಕಾರಿಗಳು, ಈ ರೀತಿ ತಮ್ಮ ಬೆಳೆ ರಕ್ಷಿಸಲು ಹಣ್ಣುಗಳ ಮಧ್ಯೆ ಪಟಾಕಿ ಇರಿಸಿ, ಕಾಡು ಹಂದಿ ಹಾವಳಿ ತಡೆಯಲು ಅನಾದಿ ಕಾಲದಿಂದಲೂ ರೈತರು ಪ್ರಯಾಸಪಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಅರಣ್ಯ ಇಲಾಖೆಯ ತನಿಖಾಧಿಕಾರಿ ಆಶಿಕ್‌ ಅಲಿ ಪ್ರಕಾರ ಅನಾನಸ್‌, ತೆಂಗಿನಕಾಯಿಗಳಲ್ಲಿ ಪಟಾಕಿ ಇರಿಸಿ ಕಾಡು ಹಂದಿಗಳಿಂದ ತಮ್ಮ ಬೆಳೆ ರಕ್ಷಿಸಿಕೊಳ್ಳಲು ರೈತರು ಹಾಗೆ ಮಾಡುತ್ತಿದ್ದುದು ವಾಡಿಕೆಯಂತೆ.ಈ ಪ್ರಕರಣದಲ್ಲಿ ಕಿಡಿಗೇಡಿಗಳು ಬೇಕೆಂದೇ ಮೂಕಪ್ರಾಣಿಗೆ ಇದನ್ನು ತಿನ್ನಿಸಿ ತಮಾಷೆ ನೋಡಿದ್ದಾರೆ. ಇದುವರೆಗೂ ಅದರಲ್ಲಿ ಒಬ್ಬ ಮಾತ್ರ ಸಿಕ್ಕಿದ್ದಾನೆ, ಉಳಿದಿಬ್ಬರ (ಈ ವರದಿ ತಯಾರಾಗುತ್ತಿದ್ದ ಸಂದರ್ಭ) ತಲಾಶೆ ನಡೆದಿದೆ. ಒಬ್ಬ ಎಸ್ಟೇಟ್‌ ಮಾಲೀಕ, ಆತನ ಮಗ, ಅವರ ಆವಳು ಈ ಕುಕೃತ್ಯದಲ್ಲಿ ಶಾಮೀಲಾಗಿದ್ದಾರೆಂದು ತಿಳಿದುಬಂದಿದೆ. ತಾವು ಬೇಕೆಂದೇ ಹೀಗೆ ಮಾಡಿಲ್ಲ ಎಂದು ಹುರುಳಿಲ್ಲದ ಸ್ಪಷ್ಟೀಕರಣ ನೀಡಿದ್ದಾರೆ. ಇಲ್ಲಿನ ಸ್ಥಳೀಯರು ಕಾಡುಹಂದಿಯ ಕಾಟ ತೀವ್ರವಾಗಿದ್ದು, ತಮ್ಮ ಬೆಳೆಗಳ ನಾಶವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅರಣ್ಯ ಇಲಾಖೆಯ ಪ್ರಕಾರ, ಕಾಡುಹಂದಿಗಳ ಸಂಖ್ಯೆ ಸುಮಾರು ಹೆಚ್ಚಿದೆ. ಈ ಪ್ರಕರಣದಲ್ಲಿ ಈ ಎರಡೂ ಹೆಣ್ಣಾನೆಗಳು ಬಲಿಪಶುಗಳಾಗಿದ್ದು ನಿಜಕ್ಕೂ ದುರದೃಷ್ಟಕರ, ಎಂದಿದ್ದಾರೆ ವೈನಾಡಿನ ರೈತ ಜೋಸ್‌. ಅರಣ್ಯಗಳ ಸನಿಹ ತೋಟಗಳನ್ನು ಹೊಂದಿರುವ ರೈತರು ತಮ್ಮ ಬೆಳೆಗೆ ಸರ್ಕಾರದಿಂದ ಯಾವುದೇ ರಕ್ಷಣೆ ಇಲ್ಲವಾಗಿದೆ, ಇದು ತಮ್ಮ ಬದುಕಿಗೆ ಭಾರಿ ತೊಡಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಕಳೆದ 2 ವರ್ಷಗಳಿಂದ ಸುಮಾರು 24 ಪ್ರಕರಣಗಳಲ್ಲಿ ಹೀಗೆ ರೈತರು ಅನಾನಸು, ತೆಂಗಿನಲ್ಲಿ ಪಟಾಕಿ ಬಳಸಿದ ಸಂಗತಿ ಅರಣ್ಯ ಇಲಾಖೆಯ ಗಮನಕ್ಕೆ ಬಂದಿದೆ.

ಇದೆಲ್ಲ ಒಬ್ಬ ಅರಣ್ಯಾಧಿಕಾರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರಿಂದ ಬಯಲಿಗೆ ಬಂತು. ಆತ ಹಾಗೆ ಆನೆಗಳ ಕುರಿತಾಗಿ ಹೇಳಿದ್ದು ವೈರಲ್ ಆಗಿ, ಎಲ್ಲೆಲ್ಲೂ ಹಾಹಾಕಾರ ಉಂಟಾಯಿತು. ಕೊನೆಗೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಬಸುರಿ ಹೆಣ್ಣಾನೆಯನ್ನು ಕೊಂದವರಿಗೆ ಶಿಕ್ಷೆ ಆಗಲೇಬೇಕೆಂದು ಆಕ್ರಂದನ ಮುಗಿಲು ಮುಟ್ಟಿತು.

Screen-Shot-2020-06-19-at-11.16.34-AM

ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಡುತ್ತಿದ್ದಂತೆ, ಈ ಪ್ರಕರಣಕ್ಕೆ ಹೊಸ ತಿರುವು ಮೂಡಿ, ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಎಲ್ಲೆಲ್ಲೂ ಸಂಚಲನ ಉಂಟಾಯಿತು. ಅರಣ್ಯ ಇಲಾಖೆಯ ಗಡಿ ಪ್ರದೇಶವಾದ ಮುನ್ನಾರ್‌ ಕಾಡಿನ ವಸತಿ ಪ್ರದೇಶದ ಬಳಿ ಆನೆ ಸತ್ತು ಬಿದ್ದಿದ್ದು ತಿಳಿಯಿತು. ಇದು ಪಕ್ಕದ ಮಲಪುರಂ ಜಿಲ್ಲೆಯ ಗಡಿಯಲ್ಲಿ ನಡೆದಿದ್ದೆಂದು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು.

ಹೀಗೆ ಸೋಶಿಯಲ್ ಮೀಡಿಯಾ ಹಗರಣ ಇದ್ದಕ್ಕಿದ್ದಂತೆ ದೊಡ್ಡ ಕ್ರಾಂತಿ ಎಬ್ಬಿಸಿ, ಹೊಸ ತಿರುವು ಪಡೆದು, ಇದು ಕೋಮು ಗಲಭೆಗೂ ಮೂಲವಾಯ್ತು. ಬಿಜೆಪಿ ಎಂ.ಪಿ. ಮೇನಕಾ ಗಾಂಧಿ ಮಲಪ್ಪುರಂ ಪ್ರಾಣಿಹತ್ಯೆಗೆ ಮೂಲ ಎಂದು ಸ್ಟೇಟ್‌ಮೆಂಟ್‌ ಕೊಟ್ಟರು. ಅಲ್ಲಿನ ಸ್ಥಳೀಯರು, ಅದು ಹಾಗಲ್ಲ, ಪ್ರಕರಣ ನಡೆದಿದ್ದು ಪಾಲಕ್ಕಾಡ್‌ನಲ್ಲಿ ಎಂದು ಆಕೆಗೆ ಮನವರಿಕೆ ಮಾಡಿಕೊಟ್ಟರೂ, ತಮ್ಮ ಹೇಳಿಕೆ ಬದಲಾಯಿಸಲು ಆಕೆ ಯತ್ನಿಸಲಿಲ್ಲ.

ಈ ಪ್ರಕರಣ, ಸಂಗತಿಗಳನ್ನು ಒಮ್ಮೊಮ್ಮೆ ಉತ್ಪ್ರೇಕ್ಷಿಸಿ ಹೇಳಬಹುದು ಎಂಬುದಕ್ಕೆ ಸಾಕ್ಷಿಯಾಯಿತು. ಹಾಗಾಗಿ ಅದು ಮತ್ತೊಂದು ಹಂತಕ್ಕೆ ಉರುಲಾಯಿತು. ಇದೊಂದು ತೀವ್ರ ನಿರ್ಲಕ್ಷದ ಪರಿಣಾಮ ಎಂದು ಅಲ್ಲಿನ ಪರಿಸರ ಸಚಿವಾಲಯ, ಕೇರಳ ರಾಜ್ಯ ಸರ್ಕಾರಕ್ಕೆ ಈ ವಿಷಯವನ್ನು ಆಮೂಲಾಗ್ರವಾಗಿ ತನಿಖೆ ನಡೆಸಬೇಕೆಂದು ಆದೇಶಿಸಿದೆ. ಸದ್ಯದ ಅಗತ್ಯವೆಂದರೆ, ಎಲ್ಲ ವನ್ಯ ಮೃಗಗಳ ತೀವ್ರ ರಕ್ಷಣೆ. ಅದು ಕಾಡುಹಂದಿ ಅಥವಾ ಆನೆಗಳೇ ಇರಲಿ, ಮೂಕಪ್ರಾಣಿಗಳು ಅನ್ಯಾಯವಾಗಿ ಸಾಯುವಂತಾಗಬಾರದು. ಅವು ತಮ್ಮ ವಾಸಸ್ಥಳದಲ್ಲಿ ಸುರಕ್ಷಿತವಾಗಿರುವಂತೆ ತೀವ್ರ ನಿಗಾ ವಹಿಸಬೇಕಾಗಿದೆ. ಜೊತೆಗೆ ಬಡ ರೈತರು ಅನಗತ್ಯವಾಗಿ ತಮ್ಮ ಪರಿಶ್ರಮದ ಬೆಳೆ ಹಾಳು ಮಾಡಿಕೊಳ್ಳುವಂತೆ ಆಗಬಾರದು ಎಂದು ಅಲ್ಲಿನ ಪ್ರಾಣಿಪ್ರಿಯರು, ಪರಿಸರವಾದಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

– ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ