ಇದು ಕೆಲವು ವರ್ಷಗಳ ಹಿಂದಿನ ಮಾತು. ನನ್ನ ಸಂಬಂಧ ಇವರ ಜೊತೆ ಫಿಕ್ಸ್ ಆದಾಗ, ಮದುವೆ ಸಮಯದಲ್ಲಿ ಇವರಿಗೆ ಒಳ್ಳೆಯ ಹದನಾದ ರಟ್ಟೆ ಗಾತ್ರದ ಮೀಸೆ ಇತ್ತು. ಮದುವೆ ಗಂಡಿಗೆ ಭಾರಿ ಮೀಸೆ ಎಂದು ಲಗ್ನಪತ್ರಿಕೆಗೆ ಬಂದಿದ್ದ ನಮ್ಮ ಕಡೆಯವರೆಲ್ಲ ರೇಗಿಸುತ್ತಿದ್ದರು. ಆದರೆ…. ಅದೇಕೋ ನನಗೆ ಮೊದಲಿನಿಂದಲೂ ಮೀಸೆ ಕಂಡರೆ ಅಲರ್ಜಿ! ಎಂಗೇಜ್‌ ಮೆಂಟ್‌ ಮುಗಿದು ನಮ್ಮ ಓಡಾಟ ಜೋರಾದಾಗ, ನಾನು ಇವರಿಗೆ ಸಣ್ಣ ಗಾತ್ರದ ಗಿರಿಜಾಮೀಸೆ ಇರಿಸಿಕೊಳ್ಳಲು ಒತ್ತಾಯಿಸಿದೆ. ಬಹಳ ಸಲ ಬೇಕು, ಬೇಡ ಚರ್ಚೆ ಮಾಡಿದ ನಂತರ ಕೊನೆಗೂ ಒಪ್ಪಿದ ಇವರು, ನಡಿ ಈಗಲೇ ಸೆಲೂನ್‌ಗೆ ಹೋಗೋಣ ಎಂದರು. ಇಬ್ಬರೂ ಒಟ್ಟಿಗೆ ಹೊರಟೆ. ಅಲ್ಲಿ ಇವರ ಮೀಸೆ ಪೂರ್ತಿ ಟ್ರಿಮ್ ಮಾಡಿಸಿ ಸಣ್ಣ ಗೆರೆಯ ಗಿರಿಜಾ ಮೀಸೆ ಉಳಿಸಲಾಯಿತು.

ಅಲ್ಲಿಂದ ವಾಪಸ್ಸು ಬರುವಾಗ ಯಾರಾದರೂ ಇವರ ಸ್ನೇಹಿತರು ಕಂಡು ಹಾಸ್ಯ ಮಾಡಿದರೆ, ಇಷ್ಟು ಬೇಗ ಹೆಂಡ್ತಿ ದಾಸನಾದೆಯಾ ಎಂದು ಚುಡಾಯಿಸಿದರೆ ಏನು ಹೇಳುವುದು? ನಾನೇನೋ ಬೇಗ ಮನೆಗೆ ಹೋಗ್ತೀನಿ ಎಂದು ಅವಸರಪಡಿಸಿದೆ, ಇವರು ಹತ್ತಿರದ ಹೋಟೆಲ್‌ಗೆ ಕರೆದೊಯ್ದು ಕಾಫಿ, ತಿಂಡಿಗೆ ಹೇಳಿದರು.

ಮಂಗಳೂರು ಬಜ್ಜಿ ತಂದಿತ್ತ ಮಾಣಿ ಮಸಾಲೆ ದೋಸೆಗೆ ತಡವಾಗುತ್ತೆ ಎಂದು ಹೇಳಿ ಹೋದ. ಆಗ ನಾನು ಗಮನವಿಟ್ಟು ಇವರ ಮೀಸೆ ಕಡೆ ನೋಡಿದರೆ, ಅದು ಸ್ವಲ್ಪ ಸೊಟ್ಟಂಪಟ್ಟ ಆಗಿತ್ತು. ಯಾಕಾದರೂ ಈ ಮೀಸೆ ವಿಷಯಕ್ಕೆ ಕೈ ಹಾಕಿದೆನೋ ಎಂದು ನನಗೇ ಕಸಿವಿಸಿ ಆಯ್ತು. ಅಲ್ಲೇ ಸೈಡ್‌ನಲ್ಲಿದ್ದ ಕನ್ನಡಿ ನೋಡಿಕೊಂಡಾಗ ಇವರಿಗೂ ತಮ್ಮ ಸ್ಥಿತಿಯ ಅರಿವಾಗಿ ತಲೆ ತಗ್ಗಿಸಿದರು. ನನಗೆ ಒಂದು ಕಡೆ ನಗು, ಯಾರು ಏನು ಹಾಸ್ಯ ಮಾಡುತ್ತಾರೋ ಎಂದು ಭಯ, ಇವರು ಕೋಪಿಸಿಕೊಂಡರೆ ಏನು ಸಮಾಧಾನ ಹೇಳಲಿ ಎಂಬ ಆತಂಕ…. ಈ ಮಧ್ಯೆ ಮಸಾಲೆ ದೋಸೆ ಸವಿಯುವ ಮೂಡೇ ಹೋಯ್ತು. ಕೊನೆಗೆ ಅಳೆದೂ ಸುರಿದೂ ಯೋಚಿಸಿ, ಇವರಿಗೆ ನನ್ನ ಐ ಬ್ರೋ ಪೆನ್ಸಿಲ್ ‌ನೀಡಿ, ಸೊಟ್ಟಗಿರುವ ಮೀಸೆ ನೆಟ್ಟಗೆ ಮಾಡಿಕೊಳ್ಳುವಂತೆ ವಿನಂತಿಸಿಕೊಂಡೆ.

ಅದೆಲ್ಲ ಆಗಿ ಮದುವೆ ಮಂಟಪದಲ್ಲಿ ಮತ್ತೆ ಮತ್ತೆ ಇವರ ಕೈ ಮೀಸೆ ಸರಿಪಡಿಸಿಕೊಳ್ಳುವುದರಲ್ಲಿ ಹೋಗುತ್ತಿತ್ತು. ಪಾಪ, ಬಹಳ ಸಂಕೋಚಗೊಳ್ಳುತ್ತಾ ಮದುವೆಯ ಕಲಾಪಗಳಲ್ಲಿ ಪಾಲ್ಗೊಂಡರು. ನಾನು ಓರೆನೋಟ ಬೀರುತ್ತಾ ಇವರನ್ನೂ ಕಣ್ಣಲ್ಲೇ ನಗಿಸುತ್ತಿದ್ದೆ. ಸಮಯ ಸಿಕ್ಕಾಗ ನನ್ನ ಕೈ ಹಿಡಿದು ಮೆಲ್ಲಗೆ ಗಿಲ್ಲುತ್ತಿದ್ದರು. ನಾನು ನಗು ನಿಯಂತ್ರಿಸಲು ಕೃತಕ ಕೆಮ್ಮಿನ ನಾಟಕವಾಡುತ್ತಿದ್ದೆ. ಆ ಗಲಾಟೆಯಲ್ಲಿ ಇತರರ ಗಮನಕ್ಕೆ ಇದು ಬರಲಿಲ್ಲ ಎಂಬುದೇ ನನ್ನ ಪುಣ್ಯ.

– ಜ್ಯೋತಿ, ತಿಪಟೂರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ