ಅದೊಂದು ಸುಂದರ ಸಂಗೀತ ಸಾಹಿತ್ಯ ಸಮಾರಂಭ. ಖ್ಯಾತ ಕವಿಗಳಾದ ಡಾ. ಕೆ.ಎಸ್‌. ನಿಸಾರ್‌ ಅಹಮದ್‌ರವರು ಈ ಕಾರ್ಯಕ್ರಮ ನಿರೂಪಣೆಯಲ್ಲಿ `ನನಗೆ ಅದೇ ಹುಡುಗಿ ಇರಲಿ, ಕನ್ನಡಕ್ಕೆ, ಕನ್ನಡ ಭಾಷೆಗೆ ಆ ಹುಡುಗಿಯಿಂದ ಎಂದೂ ಕುಂದುಬಾರದು. ಸ್ಪಷ್ಟ ಕನ್ನಡ ಪದಗಳ ಉಚ್ಚಾರಣೆಯಿಂದಾಗಿ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಹಾಗಾಗಿ ಸಂಧ್ಯಾ ಭಟ್ಟೇ ನಿರೂಪಣೆಯಲ್ಲಿ ಇರಲಿ,’ ಎಂದು ಆಯೋಜಕರಲ್ಲಿ ಹೇಳಿಕಳಿಸಿದಾಗ ಜೀವನದ ಸಾರ್ಥಕತೆಯನ್ನು ಕಂಡವರು ಮಲೆನಾಡಿನ ಈ ಅಪ್ಪಟ ದೇಸೀ ಪ್ರತಿಭೆ!

ಸ್ವಚ್ಛ ಪದ ಉಚ್ಚಾರಣೆ, ಪ್ರಚಲಿತ ವಿದ್ಯಮಾನಗಳ ವಿಷಯ ಜ್ಞಾನ, ಮಾತಲ್ಲಿ ಘನತೆ ಅವುಗಳ ಮೇಲಿನ ಹಿಡಿತವಿದ್ದರೆ ಎಂತಹ ಕಾರ್ಯಕ್ರಮವನ್ನೂ ಬಹಳ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರೂಪಿಸಲು ಸಾಧ್ಯ. ಇತ್ತೀಚಿನ ಟ್ರೆಂಡ್‌ ಹೇಗಾಗಿದೆ ಎಂದರೆ, ಸಂಘ ಸಂಸ್ಥೆ, ಸಾರ್ವಜನಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಕುಟುಂಬ ಸಮಾರಂಭಗಳಲ್ಲೂ ಸಹ ಈ ನಿರೂಪಣಾ ವಿಧಾನ ಬೆಳವಣಿಗೆ ಕಾಣುತ್ತಿರುವುದು ಸ್ವಾಗತಾರ್ಹವೇ. ಪ್ರಭಾಶಾಲಿಯಾಗಿ ಬೆಳೆಯುತ್ತಿರುವ ಈ ಕ್ಷೇತ್ರದ ಸಾಲಿಗೆ ಸೇರುವ ಮಲೆನಾಡಿನ ಬೆಡಗಿ, ನಿರೂಪಕಿ, ಕಂಠದಾನ ಕಲಾವಿದೆ, ಲೇಖಕಿ, ಛಾಯಾಗ್ರಾಹಕಿ ಸಂಧ್ಯಾ ಭಟ್‌.

ಪದಗಳೊಟ್ಟಿಗೆ ಆಟವಾಡೋದು ಒಂದು ಕಲೆಯೇ. ಇದಕ್ಕೆ ಭಾಷಾ ಜ್ಞಾನವಿರಬೇಕಷ್ಟೆ! ಅಂತಹ ಭದ್ರ ಬುನಾದಿ ಹಾಕಿಕೊಡೋದು ಶಾಲಾ ದಿನಗಳು. ಪ್ರಾರ್ಥನಾ ಸಮಯದಲ್ಲಿ ಸುದ್ದಿ ವಾಚನವೊಂದು ಅಜೆಂಡಾ ಆಗಿರುತ್ತದೆ. ಗಂಗಮ್ಮ ಹಾಗೂ ಸರೋಜಮ್ಮ ಮೇಡಂರವರುಗಳ ಅಂದಿನ ಆ ಪ್ರೋತ್ಸಾಹವೇ ಇವರ ಇಂದಿನ ಈ ಅಕ್ಷರ ಲೋಕಕ್ಕೆ ನಾಂದಿ ಹಾಡಿತು.

IMG_20190115_205858_849

ತೀರ್ಥಹಳ್ಳಿಯ ಹೊರಣೆ ಬೈಲಿನ ಬಡ ಕುಟುಂಬ. ಬೇಸಾಯವೇ ಆದಾಯ. ತಂದೆ ಶಂಕರ್‌ಭಟ್‌ ತಾಯಿ ಸುಶೀಲಾ ಭಟ್‌. ಸುಸಂಸ್ಕೃತ ಸಂಪ್ರದಾಯಸ್ಥ ಕೂಡು ಕುಟುಂಬ. ದೊಡ್ಡಪ್ಪನ ಯಜಮಾನಿಕೆ. ಅಕ್ಕ ತಮ್ಮ ಇವರೊಟ್ಟಿಗೆ ಹುಟ್ಟಿದರು. ಆಸೆ ಕನಸುಗಳಿದ್ದರೂ ಸಾಕಾರಗೊಳ್ಳೋದು ವಿರಳವೇ ಆಗಿತ್ತು. ಸಜ್ಜನಿಕೆ ಸೌಹಾರ್ದತೆಗಳೇ ಕುಟುಂಬದ ಗುರುತು. ಕಷ್ಟಗಳೇ ಜೀವನವಾದರೂ ಬಾಲ್ಯ ಸುಂದರವಾಗಿತ್ತು. ಶಾಲೆಗೆ 48 ಕಿ.ಮೀ. ನಡೆಯಬೇಕಿತ್ತು. ಮೇಳಗೆ ಸರ್ಕಾರಿ ಶಾಲೆ, ತೀರ್ಥಹಳ್ಳಿಯ ಸೇವಾ ಭಾರತಿಯಲ್ಲಿ ಶಾಲಾ ವಿದ್ಯಾಭ್ಯಾಸ. ತುಂಗಾ ಮಹಾವಿದ್ಯಾಲಯದಿಂದ ಪದವಿ. ಕನ್ನಡ ಮಾಧ್ಯಮದ ಕುರಿತ ಭಾಷಾಭಿಮಾನ ಹೆಚ್ಚು, ಸಮಾಜ ಶಾಸ್ತ್ರ ಫೇವರೇಟ್‌, ಗಣಿತ ಕಷ್ಟ ಕಷ್ಟ! ಎಸ್‌.ಎಸ್‌.ಎ್‌.ಸಿವರೆವಿಗೂ ಚಿಮಣಿ ದೀಪದಲ್ಲೇ ಓದು. ಸೌಲಭ್ಯ ಸವಲತ್ತುಗಳು ಬಹಳವೇ ಕಡಿಮೆ. ಹೊಸ ಬಟ್ಟೆ ಶಾಲಾ ಶುಲ್ಕಕ್ಕೂ ಪರದಾಡಿದ ದಿನಗಳು ಹಲವು. ಇವೆಲ್ಲ ಆಗ ಏನೂ ಅನಿಸುತ್ತಿರಲಿಲ್ಲ. ನೆನೆಸಿಕೊಂಡರೆ ಒಂಥರಾ ಎನಿಸುತ್ತದೆ ಎನ್ನುತ್ತಾರೆ. ಮತ್ತೊಂದೆಡೆಗೆ ಚುರುಕಾದ ಹುಡುಗಿ ಗುರುಗಳ ನೆಚ್ಚಿನ ಶಿಷ್ಯೆ, ಸ್ನೇಹವೃಂದ ಅಷ್ಟಾಗಿರಲಿಲ್ಲ, ಅಪಾರ ಗುರು ಭಕ್ತಿ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದು. ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ್ತಿ, ಶಾಲಾ ಮಟ್ಟಿಗಿನ ಶಾಟ್‌ಪುಟ್‌ ಬಹುಮಾನಿತೆ. ಡಿಸ್ಕ್ ಥ್ರೋ, ಆಶುಭಾಷಣ ಸ್ಪರ್ಧೆ, ಪ್ರಬಂಧ ಲೇಖನ ಹೀಗೆ ಸಕ್ರಿಯರಾಗಿದ್ದರೂ ಕೂಡ ಪದವಿಯೊಂದಿಗೆ ಶಿಕ್ಷಣ ಮುಕ್ತಾಯವಾಯಿತು.

ಪ್ರತಿಯೊಬ್ಬರಲ್ಲೂ ಕಲೆ ಎಂಬುದಿರುತ್ತದೆ. ಬಡತನ, ಹಳ್ಳಿಯ ಬದುಕಲ್ಲೇ ಬೆಳೆದ ಈ ಪ್ರತಿಭೆಯೊಳಗಿದ್ದ ಕಲೆ ಅನಾವರಣಗೊಳ್ಳಲು ಅಂಥಾ ಹೆಚ್ಚಿನ ಸಮಯವೇನು ಬೇಕಾಗಲಿಲ್ಲ. ಶಾಲಾ ದಿನಗಳಲ್ಲಿ ಮೇಷ್ಟ್ರು ಒಬ್ಬರಿಂದ ಮೂದಲಿಕೆಯ ಅಣಕದ ಮಾತುಗಳಿಂದ ಮನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠ ಮೂಡಿತು. ಆಗಾಗ ದೊರೆಯುತ್ತಿದ್ದ ಅವಕಾಶಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತ ನಡೆದಿದ್ದರು. 8ನೇ ತರಗತಿಯಲ್ಲಿದ್ದಾಗ ಸ್ವಂತ ಅಕ್ಕ ರೇಖಾಳನ್ನು ಕುರಿತು ಬರೆದ ಪದ್ಯ ಸ್ಥಳೀಯ ಪತ್ರಿಕೆ `ಪ್ರಚಂಡ’ದಲ್ಲಿ  ಪ್ರಕಟಗೊಂಡಾಗ ಅಪ್ಪ ಏನೂ ಮಾತಾಡಲಿಲ್ಲ. ಅಮ್ಮನ ಹೊಗಳಿಕೆಯ ಪ್ರೋತ್ಸಾಹ ದೊರೆಯಿತು. ವಯಸ್ಸಿನ ಸ್ಥಿತಿಗತಿ ಭಾವನೆಗಳ ಮನಸ್ಥಿತಿ, ಕವನ ರೂಪದಿ ಹೊರಹೊಮ್ಮಿ ಪತ್ರಿಕೆಗಳಲ್ಲಿ ಪ್ರಕಟ. ಕಾಲೇಜು ದಿನಗಳಲ್ಲಿನ ಇವರ ಚುರುಕುತನ ನೋಡಿದ ಆಗಿನ `ನಾವಿಕ’ ಪತ್ರಿಕೆಯ ವೈದ್ಯ ಶಿವಮೊಗ್ಗರವರಿಂದ ತೀರ್ಥಹಳ್ಳಿಯ ವರದಿಗಾರ್ತಿಯಾಗುವ ಸುಯೋಗ. ಹಾಗೇ ಸಾಗುತ್ತಾ ಬಂದ ಹಾದಿಗೆ ಬೆಳಕು ನೀಡಿತು.

ಇವರೊಳಗೆ ಸುಪ್ತವಾಗಿ ಅಡಗಿ ಕುಳಿತಿದ್ದ ಮಾತಿನ ತೋರಣ ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕ್ರಮದ ಮುಖೇನ ನಿರೂಪಣೆಗೆ ಎಂಟ್ರಿ. ಅಳುಕಿನಿಂದ ಪ್ರಾರಂಭವಾದ ಕಾರ್ಯಕ್ರಮ ಮುಗಿಯುವ ವೇಳೆಗೆ ಭರಪೂರ ಶಹಭಾಷ್‌ ಗಿರಿ. ಆತ್ಮೀಯರಿಂದ ಮುಂದುವರಿಸಿ ಎಂಬ ಪ್ರೋತ್ಸಾಹದ ನುಡಿಗಳು. ಇಲ್ಲಿದ್ದರೆ ಅವಕಾಶಗಳು ಕಡಿಮೆ. ಮಾಯಾನಗರಿ ಬೆಂಗಳೂರಿಗೆ ಹೋದರೆ ಸುವರ್ಣ, ಉದಯ ಚಾನೆಲ್‌ಗಳಲ್ಲಿ ಖಂಡಿತಾ ಅವಕಾಶಗಳು ದೊರೆಯುತ್ತದೆಂಬ ಹುರುದುಂಬಿಕೆ ಬೇರೆ. ಬೆಂಗಳೂರಿಗೆ ಹೊರಟೇ ಬಿಟ್ಟರು. ಮನೆಯಲ್ಲೂ ಯಾರೂ ಪ್ರಶ್ನಿಸಲಿಲ್ಲ. ದೂರದ ಬೆಟ್ಟ ನುಣ್ಣಗೆ ಎಂಬುದು ಅರಿವಾಗಲು ಬಹಳ ಸಮಯ ಬೇಕಾಗಲಿಲ್ಲ. ಆಗಿದ್ದ ಒಂದಷ್ಟು ಚಾನೆಲ್‌ಗಳಿಗೆ ಅಪ್ಲಿಕೇಶನ್‌ ಹಾಕೋದು ರಿಜೆಕ್ಟ್ ಆಗೋದೇ ಒಂದು ಕ್ಯಾಮೆ ಆಗಿಹೋಯಿತು.

ಕಡೆಗೆ ಒಂದು ಕಛೇರಿಯಲ್ಲಿ ಕೆಲಸ ದೊರಕಿತು. ಕೈಯಲ್ಲಿ ಪುಡಿಗಾಸಿಲ್ಲದ ದಿನಗಳೆಷ್ಟೊ. ಸ್ವಂತದವರಿದ್ದರೂ ಯಾರ ಮನೆಯ ಬಾಗಿಲಿಗೂ ಹೋಗದ ಸ್ವಾಭಿಮಾನಿ. ಆಗೆಲ್ಲ ಹೊಟ್ಟೆ ತುಂಬಿಸಿದ್ದು ದೊಡ್ಡ ಗಣೇಶ ದೇವಸ್ಥಾನದ ಪುಳಿಯೋಗರೆ ಪ್ರಸಾದ. ಪಿಜಿಯಲ್ಲೊಮ್ಮೆ ಲೋ ಬಿಪಿಯಾಗಿ ಬಿದ್ದು ಅಪ್ಪ ಅಮ್ಮನಿಗೆ ಫೋನಾಯಿಸಿ ಓನರ್‌ ತಿಳಿಸಿದಾಗಲೇ ತಿಳಿದದ್ದು ಇವರ ಕಷ್ಟ. ಅಮ್ಮ ಬೈದದ್ದೇ ಬೈದದ್ದು. ಇಲ್ಲಮ್ಮ ನಾನಿಲ್ಲಿದ್ದೇ ಸಾಧಿಸುವೆ ಎಂಬ ಛಲದ ಮಾತುಗಳು ತಾಯಿಯ ಕರುಳಿಗೆ ಪೆಟ್ಟಾಯಿತು.

ಪರಿಚಯಸ್ಥರ ಒತ್ತಾಯದ ಮೇರೆಗೆ ಶಂಕರ ಚಾನೆಲ್‌ನವರಿಗೆ ಅಪ್ಲೀಕೇಶನ್‌ ಹಾಕಿದ್ದು…. ಉಡಲು ಸೀರೆ ಇರಲಿಲ್ಲ… ಊರಿಗೆ ವಿಷಯ ತಿಳಿಸಿದಾಗ ರಾತ್ರಿಯ ಬಸ್ಸಿನಲ್ಲಿ ಅಮ್ಮನೇ ರವಿಕೆಯನ್ನು ಹೊಲಿದು ಸೀರೆಯೊಟ್ಟಿಗೆ ಕಳಿಸಿದರು. ಬೆಳಗಿನ ಜಾವ 5 ಗಂಟೆಗೆ ಮೆಜೆಸ್ಟಿಕ್‌ನಲ್ಲಿ ಕಲೆಕ್ಟ್ ಮಾಡಿ ಇಂಟರ್‌ ವ್ಯೂಗೆ ಹೋಗಿದ್ದನ್ನು ನೆನೆಸಿಕೊಂಡರು.

47ನೇ ಸ್ಪರ್ಧಾಳು. ಅದಾಗಲೇ ರೋಸಿಹೋಗಿತ್ತು ಜೀವ. ಪ್ರಜಾವಾಣಿ ಪೇಪರ್‌ ಕೊಟ್ಟು ಓದಲು ಹೇಳಿದರು. ತಮ್ಮೆಲ್ಲ ಕ್ವಾಲಿಟೀಸ್‌ನಿಂದಾಗಿ ಅಲ್ಲಿ ಉತ್ತೀರ್ಣಳಾಗಿದ್ದು ಹೇಳಿಕೊಳ್ಳಲಾಗದಷ್ಟು ಸಂತಸ ಕೊಟ್ಟಿತು. ಮೊದಲಿಗೆ ಖ್ಯಾತ ಶಿಲ್ಪಿ ಕನಕಮೂರ್ತಿಯವರನ್ನು ಸಂದರ್ಶಿಸಿದ್ದು. ಎರಡನೆಯವರಾಗಿ ಸಂದರ್ಶಿಸಿದ್ದು ಸಿ. ಅಶ್ವತ್ಥ್. ಎಷ್ಟು ಜನ್ಮದ ಪುಣ್ಯವೋ ಅವರೊಟ್ಟಿಗೆ ಕಳೆದ ಆ ಸಮಯ ಎಂದು ಬಹಳ ಹರ್ಷಿತರಾದರು. ಮೂರೂವರೆ ವರ್ಷ ಇಲ್ಲಿ ದುಡಿದರು. ತದನಂತರ ಅದೃಷ್ಟ ಖುಲಾಯಿಸಿತು. ಹಿಂತಿರುಗಿ ನೋಡಲೇ ಇಲ್ಲ. ಅವಕಾಶಗಳ ಮೇಲೆ ಅವಕಾಶಗಳು. ವೇದಿಕೆ ಕಾರ್ಯಕ್ರಮಗಳು, ಬೇರೆ ಚಾನೆಲ್‌ಗಳಲ್ಲೂ ನಿರೂಪಣೆಗೆ ಆಹ್ವಾನ ಹೀಗೇ ಬೆಳೆಯುತ್ತಾ ಬಂದರು.

IMG_20181203_221635_323

ಕರ್ನಾಟಕ ಸರ್ಕಾರದ ಅಡಿಯಲ್ಲಿ ಹಲವಾರು ಜಾಹೀರಾತುಗಳಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನಕದಾಸರ ಸಾಕ್ಷ್ಯ ಚಿತ್ರದಲ್ಲಿ, ಸಿನಿಮಾಗಳಲ್ಲಿ, ಥಿಯೇಟರ್‌ಗಳಲ್ಲಿ ಚಲನಚಿತ್ರ ಬರುವ ಮುಂಚೆಗೂ ಬರುವ ಕಥೆಗೆ ದನಿಯಾಗಿ, ಸ್ಯಾನ್‌ ಎಂಬ ಚಿತ್ರಕ್ಕೆ ಕುರಿ ಪ್ರತಾಪ್‌ ಜೊತೆಗೆ ದನಿಯಾಗಿ, ತೋಟಗಾರಿಕೆ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಯುತ್ತಿದ್ದ ಹಲವಾರು ಕಾರ್ಯಕ್ರಮಗಳಿಗೆ ಇವರದೇ ದನಿ ಇರುತ್ತಿತ್ತು.

ಜ್ಯೋತಿಷ್ಯ, ದೇಗುಲದರ್ಶನ ಕಾರ್ಯಕ್ರಮಗಳ ಜಾಹೀರಾತುಗಳು ಬಿತ್ತರವಾಗೋದು ಇವರ ದನಿಯಲ್ಲೇ. ಹೀಗೆ ಸಾಗಿದ ಜರ್ನಿಯಲ್ಲಿ ಖ್ಯಾತನಾಮರುಗಳು ದೊರೆತರು. ಹವ್ಯಾಸವಾಗಿದ್ದ ಮಾತಿನ ಮಂಟಪವೀಗ ದೇಗುಲದಷ್ಟು ಬೆಳೆಯುವಂತಾಯಿತು. ಇಂದೂ ವಿಶ್ವನಾಥ್‌, ಕಸ್ತೂರಿ ಶಂಕರ್‌, ಎಚ್‌.ಆರ್‌. ಲೀಲಾವತಿ, ಮಾಲತಿ ಶರ್ಮ ಇವರುಗಳ ಕಾರ್ಯಕ್ರಮದಲ್ಲಿ  ಖಾಯಂ ನಿರೂಪಕಿಯಾದರು. ರತ್ನಮಾಲಾ ಪ್ರಕಾಶ್‌ರವರಿಗೆ ಸಂತ ಶಿಶುನಾಳ ಶರೀಫ್‌ ಪ್ರಶಸ್ತಿ ದೊರೆತಾಗ ಅವರ ಪರಿಚಯ ಲೇಖನವನ್ನು ಪತ್ರಿಕೆಗೆ ಪ್ರಥಮ ಬಾರಿಗೆ ನೀಡಿದ್ದು ಹೆಗ್ಗಳಿಕೆಯ ವಿಷಯವೇ ಹೌದು.

ಕುವೆಂಪು ಜನ್ಮಶತಾಬ್ಧಿ ಕಾರ್ಯಕ್ರಮದ, ತುಂಗಾ ಮಹೋತ್ಸವ, ಮುಸ್ಸಂಜೆಯಿಂದ ಮುಂಜಾವಿನವರೆವಿಗೂ ಒಂದು ವಿನೂತನ ಕಾನ್ಸೆಪ್ಟ್ ಉಳ್ಳ ಕಾರ್ಯಕ್ರಮ, ಕೆ.ಎಸ್‌. ನರಸಿಂಹಸ್ವಾಮಿಯವರ ಕಾರ್ಯಕ್ರಮ, ಸುಗಮ ಸಂಗೀತ ಸಮ್ಮೇಳನ, ಕವಿಯ ನೋಡಿ ಕವಿತೆ ಕೇಳಿ ಕಾರ್ಯಕ್ರಮ ಪ್ರತಿ ತಿಂಗಳೂ ವೈ.ಕೆ. ಮುದ್ದುಕೃಷ್ಣರ ಸಾರಥ್ಯ, ಬಿ.ಕೆ. ಸುಮಿತ್ರಾರವರಿಗೆ 75 ತುಂಬಿದ ಸಂಭ್ರಮದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ಜೊತೆಗೆ ಹೊರತಂದ ಅಭಿನಂದನಾ ಗ್ರಂಥಕ್ಕೆ ಸಹಸಂಪಾದಕಿಯಾಗಿದ್ದು ಮಗದೊಂದು ಅನುಭವ ಕೊಟ್ಟಿತು.

ನಾಗಚಂದ್ರಿಕಾ ಭಟ್‌ ಸಾರಥ್ಯದಲ್ಲಿ ನಡೆದ ಎಂ.ಎನ್‌. ವ್ಯಾಸರಾವ್ ‌ಶ್ರದ್ಧಾಂಜಲಿ ಕಾರ್ಯಕ್ರಮ, 70ರ ಸಂಭ್ರಮದ ಬಿ.ಆರ್‌. ಲಕ್ಷ್ಮಣ್‌ ರಾವ್‌ರವರ ಕಾರ್ಯಕ್ರಮ, ಅಮೃತವರ್ಷಿಣಿ ಸಂಸ್ಥೆಯವರು ನಡೆಸುವ ಎಲ್ಲಾ ಕಾರ್ಯಕ್ರಮಗಳಿಗೂ ಖಾಯಂ ನಿರೂಪಣೆ ಇರದೆ. ಕುಮಾರ್‌ ಬಂಗಾರಪ್ಪ, ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿಯವರುಗಳಿದ್ದ ಬೃಹತ್‌ ವೇದಿಕೆಗಳು, ನಾಡಿನ ಹೆಸರಾಂತ ಕವಿವರ್ಯರು ಸಾಹಿತಿಗಳಿದ್ದ ವೇದಿಕೆಗಳು, ಚಲನಚಿತ್ರ ನಟರುಗಳಿದ್ದ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡಿದ್ದಾರೆ. ಮಗಳು ಜಾನಕಿ ಸೀರಿಯಲ್‌ನಲ್ಲಿ ನಿರೂಪಕಿಯ ಪಾತ್ರ ಮಾಡಿದಾಗಿನಿಂದ ಅಭಿಮಾನಿ ಬಳಗ ಹೆಚ್ಚಾಗಿದೆ.

ಬಡಗನಾಡು ಬ್ರಾಹ್ಮಣ ಮಹಾಸಭಾದಲ್ಲಿ ಹರಿಹರಪುರದ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಮೈಸೂರಿನ ಮಹಾರಾಜರಾದ ಯದುವೀರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದ್ದು ನನ್ನ ಸುಕೃತವೇ ಹೌದೆನ್ನುತ್ತಾರೆ. ಇಂತಹ ಸುವರ್ಣಾವಕಾಶ ಕೊಟ್ಟ ಸಂಘದ ಅಧ್ಯಕ್ಷರಾದ ಜಿ.ಎಸ್‌. ನಾಗೇಶ್‌ರವರಿಗೂ ಅಭಿನಂದನೆಗಳು ಎನ್ನುತ್ತಾರೆ. ಒಂದೊಂದು ವೇದಿಕೆಯೂ ಒಂದೊಂದು ಪಾಠ ಕಲಿಸೋದು ಮಾತ್ರ ದಿಟ! ಅತ್ಯಂತ ಖುಷಿಕೊಟ್ಟ ಸಂಗತಿ. ಅಂದು ಮೂದಲಿಸಿದ ಶಾಲಾ ಗುರುಗಳೇ ತನ್ನನ್ನು ಆಹ್ವಾನಿಸಿ ಸನ್ಮಾನಿಸಿದ್ದು ಎನ್ನುತ್ತಾರೆ ನಾಚಿಕೆಯಿಂದ. ಅದೇ ರೀತಿ ತಮ್ಮ ಮಗಳು ಓದುತ್ತಿರುವ ಶಾಲೆಗೆ ಗೆಸ್ಟ್ ಆಗಿ ಕರೆದು ಗೌರವಿಸಿದ್ದು ಕೂಡಾ. ಸಾಗರದಲ್ಲಿ ನಡೆದ ಬೃಹತ್‌ ಕಾರ್ಯಕ್ರಮವೊಂದರಲ್ಲಿ `ಸಹೃದಯ ಕಲಾವಿದೆ’ ಬಿರುದು ನೀಡಿ ಗೌರವಿಸಿರುವರು. ಮಗಳು ಹುಟ್ಟಿದಾಗ 2 ವರ್ಷ ಬ್ರೇಕ್‌. ನಂತರ ಬಹಳಷ್ಟು ಜನಪ್ರಿಯತೆ ಪಡೆದರು. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಿರೂಪಣೆ ಮಾಡಲೊಲ್ಲರು. ಸಂಧ್ಯಾಕಾಲಂನ ಅಂಕಣ ಬರಹಗಾರ್ತಿ, ಪುಟ್ಟಗೌರಿ ಮದುವೆ ಧಾರಾವಾಹಿಯ ಪ್ರಮುಖ ಪಾತ್ರಧಾರಿಗೆ ದನಿಯಾದ ಕಂಠದಾನ ಕಲಾವಿದೆಗೆ, 200 ಲೇಖನಗಳನ್ನು ಬರೆದಿರುವ ಲೇಖಕಿ, ಸೆನ್ಸಾರ್‌ ಬೋರ್ಡ್‌ನಲ್ಲಿ ಸದಸ್ಯೆಯಾಗಿರುವವರಿಗೆ, ಇನ್ನಷ್ಟು ಅವಕಾಶಗಳು ದೊರಕಲಿ. ಪ್ರೋತ್ಸಾಹ ನೀಡುತ್ತಿರುವ ಪತಿ ಅಜೇಯ್‌ ಕುಮಾರ್‌ ಭಟ್‌, ಅತ್ತೆ ಮಾವ ಹಾಗೂ 2ನೇ ತರಗತಿಯಲ್ಲಿರುವ ಮಗಳು ಆತ್ಮೀಕಾ ಭಟ್‌ ಇವರುಗಳು ಬೆನ್ನೆಲುಬಾಗಿದ್ದಾರೆ. ನಮ್ಮ ನೆಲ ನಾಡು ನುಡಿ ಎನ್ನುವ ಈ ಅಪ್ಪಟ ಕನ್ನಡದ ಹುಡುಗಿಗೆ ಉಜ್ವಲ ಭವಿಷ್ಯ ದೊರೆಯಲಿ. ಆಲ್ ದಿ ಬೆಸ್ಟ್ ಸಂಧ್ಯಾ ಮೇಡಂ!

– ಸವಿತಾ ನಾಗೇಶ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ