ನೀಳ್ಗಥೆನಳಿನಿ ಶರ್ಮಾ (WRITER)

ಇಳೆಯೇ ಮುರಿದು ಧರೆಯ ಮೇಲೆ ಬಿದ್ದಂತೆ, ಭಯಾನಕವಾಗಿ ಮಳೆ ಸುರಿಯುತ್ತಿತ್ತು. ಎತ್ತ ನೋಡಿದರೂ ಧೋ ಎಂದು ಬೀಳುತ್ತಿದ್ದ ಮಳೆಯ ನೀರು ಹರಿಯುತ್ತಿತ್ತು. ಸುನಾಮಿಯೇ ಎದ್ದು ಬಂದು ಅಪ್ಪಳಿಸುತ್ತಿದೆಯೇನೊ ಎಂಬಷ್ಟು ಭಯಭೀತಳಾಗಿದ್ದಳು ಅಮೃತಾ. ಮನುಕುಲದ ಜೀವಜಲವಾದ ಮಳೆ, ಇಷ್ಟೊಂದು ರಭಸದಿಂದ ಭೂಮಿಗೆ ಅಪ್ಪಳಿಸುತ್ತಾ ಇನ್ನೇನು ಮನುಷ್ಯ ಜೀವಗಳನ್ನು ಬಲಿ ತೆಗೆದುಕೊಳ್ಳುವ ಹಂತಕ್ಕೆ ತಲುಪಿದ ಆ ದೃಶ್ಯ ಭಯಂಕರವಾಗಿತ್ತು. ಆಫೀಸಿನ ಪೋರ್ಟಿಕೋದ ಮರೆಯಲ್ಲಿ ನಿಂತುಕೊಂಡು, ಮಳೆಯಿಂದ ರಕ್ಷಿಸಿಕೊಳ್ಳುತ್ತಾ ಪತಿಯ ಬರುವಿಕೆಗಾಗಿ ಆಮೃತ ಕಾಯುತ್ತಾ ನಿಂತಿದ್ದಳು. 5 ಗಂಟೆಯಾದ ಮೇಲೆ ಒಬ್ಬೊಬ್ಬರಾಗಿ ಎಲ್ಲ ಸಹೋದ್ಯೊಗಿಗಳೂ ಮನೆಗೆ ಹೊರಟು ಹೋಗಿದ್ದರು. ತಾನು ಬರುವುದು ಎಷ್ಟೇ ವಿಳಂಬವಾದರೂ ಸರಿ, ಬೇರೆಯವರಿಂದ ಮಾತ್ರ ಡ್ರಾಪ್‌ ತೆಗೆದುಕೊಳ್ಳಬೇಡ ಎಂದು ಇವಳಿಗೆ ಪತಿಯ ಆದೇಶವಾಗಿತ್ತು. ಪರಪುರುಷನ ಜೊತೆ, ಅವನ ಬೈಕ್‌ನಲ್ಲಿ ಅಂಟಿಕೊಂಡು ಕುಳಿತ ಹೆಂಗಸರೆಲ್ಲ ಇವನ ದೃಷ್ಟಿಯಲ್ಲಿ ಬಜಾರಿಯರು ಎಂದೇ ಅರ್ಥ. ಇನ್ನು ಪರಪುರುಷನೊಂದಿಗೆ ಕಾರ್‌ನಲ್ಲಿ ಹೋಗುವವರು ಎಂದರೆ ಮುಗಿದೇ ಹೋಯಿತು, ಕಾರ್‌ನ ಒಳಗೆ, ಆ ಏಕಾಂತದಲ್ಲಿ ಅದೇನೇನು ನಡೆಯುತ್ತೊ ಏನೋ? ಎನ್ನುವುದು ಇವನ ಅಭಿಪ್ರಾಯ.

ಆಫೀಸಿನ ಸ್ಟಾಫ್‌ನಲ್ಲಿ ಅರ್ಧದಷ್ಟು ಜನ ಮಹಿಳೆಯರೇ ಇದ್ದು, ಬೇರೆ ಬೇರೆ ಡೆಸಿಗ್ನೇಶನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಆಕರ್ಷಕವಾದ ತರುಣಿಯರೇ ಇದ್ದಾರೆ. ಆದರೆ ಯಾರೊಬ್ಬರ ಗಂಡಂದಿರೂ ಈ ರೀತಿಯ ವಿಕೃತ ಮನೋಭಾವ ಮತ್ತು ಸಂಶಯಪಡುವ ಮನಸ್ಸಿನವರಾಗಿಲ್ಲ. ಎಲ್ಲರೂ ತಂತಮ್ಮ ನೌಕರಿ ಮಾಡುತ್ತಿರುವ ಪತ್ನಿಯರ ಶ್ರೇಯಸ್ಸನ್ನೇ ಬಯಸುತ್ತಿದ್ದರು.

ಇವರ ಬಾಸ್‌ ವಿನೋದ್‌ ಜೋಷಿ, ಎಲ್ಲ ನೌಕರರ ಮೆಚ್ಚುಗೆ ಪಡೆದಿದ್ದರು. ಅವರು ನೌಕರರನ್ನು ಗೌರವಿಸುತ್ತಿದ್ದರು. ಹೀಗೆ ಅಮೃತಾ, ಪ್ರತಿದಿನ ಪೋರ್ಟಿಕೊದಲ್ಲಿ ನಿಂತುಕೊಂಡು ತನ್ನ ಪತಿ ಪಿಕಪ್‌ ಮಾಡಲು ಬರುವುದನ್ನೇ ಎದುರು ನೋಡುವುದನ್ನು ಗಮನಿಸಿದ್ದರು. ಮತ್ತೆ ಕೆಲವೊಂದು ಸಲ, “ಅಮೃತಾ, ನೀವು ಕೂಡ ಬೇರೆ ಹೆಣ್ಣುಮಕ್ಕಳಂತೆ ಯಾವತ್ತೂ ಡ್ರಾಪ್‌ತೆಗೆದುಕೊಳ್ಳುದಿಲ್ಲವಲ್ಲ ಏಕೆ?” ಎಂದು ಕೂಡ ಕೇಳಿದ್ದರು. ಇದಕ್ಕೆ ಅಮೃತಾಳ ಮೌನವೇ ಪ್ರತ್ಯುತ್ತರಾಗಿರುತ್ತಿತ್ತು. ತನ್ನ ಪತಿಯ ಕಟ್ಟುನಿಟ್ಟಿನ ಆದೇಶವನ್ನು ಇನ್ನೊಬ್ಬರಿಗೆ ತಿಳಿಸುವುದಾದರೂ ಹೇಗೆ? ಅವಳ ಮೂಕವೇದನೆ ಮಾತ್ರ ಅವಳ ಕಣ್ಣುಗಳಲ್ಲಿಯೇ ಪ್ರತಿಫಲಿಸುತ್ತಿತ್ತು. ಕೊನೆಗೊಂದು ದಿನ ವಿನೋದ್‌ ತಮಾಷೆಯಾಗಿ ಹೇಳಿಯೇಬಿಟ್ಟರು.

“ನೀವು ತುಂಬಾ ಸುಂದರವಾಗಿ ಇದ್ದೀರಾ, ಅದಕ್ಕೆ ನಿಮ್ಮ ಗಂಡ….”

ಆಗ ನೆನಪಾಯಿತು ಅಮೃತಾಳಿಗೆ, ಅವತ್ತೊಂದು ದಿನ ತನ್ನ ಪತಿಗೋಸ್ಕರ ಕಾಯುತ್ತ ನಿಂತು ಒಂದು ಗಂಟೆ ಕಳೆದಿದ್ದರೂ, ಆತ ಎಷ್ಟು ಹೊತ್ತು ಆದರೂ ಬಂದಿರಲಿಲ್ಲ. ಅದೇ ವೇಳೆಗೆ ತಾನೂ ಕೂಡ ಮನೆಗೆ ಹೊರಟಿದ್ದ ಅವರ ಬಾಸ್‌ ಕಾರ್‌ನಲ್ಲಿ ಹೊರಟು ಬಂದಾಗ, “ ಅಮೃತಾ, ಆನ್‌ ದಿ ವೇ ನಿಮ್ಮನ್ನು ಡ್ರಾಪ್‌ ಮಾಡ್ತೀನಿ. ಹೇಗಿದ್ದರೂ ನಿಮ್ಮ ಮನೆ ಕ್ರಾಸ್‌ ಮಾಡಿಕೊಂಡೇ ನನ್ನ ಅಪಾರ್ಟ್‌ಮೆಂಟಿಗೆ ಹೋಗಬೇಕು ನಾನು….” ಎಂದರು.

ಆ ಮಾತು ಕೇಳಿ, ಹಾವು ತುಳಿದಳಂತೆ “ಇಲ್ಲ…” ಎಂದು ಕಿರುಚುತ್ತಾ ಹಿಂದಕ್ಕೆ ಎಗರಿದಳು ಅಮೃತಾ.

ಅವಳ ಧ್ವನಿಯಲ್ಲಿನ ಭೀತಿಯನ್ನು ಗಮನಿಸಿದ ವಿನೋದ್‌ ಗಾಬರಿಯಿಂದ ಸರಕ್ಕನೆ ಕಾರ್‌ನಿಂದ ಹೊರಬಂದು ಅಮೃತಾಳನ್ನು ವಿಚಾರಿಸಿದರು, “ಯಾಕೆ ಅಮೃತಾ? ಏನಾಯಿತು? ನಿಮ್ಮ ಆರೋಗ್ಯ ಚೆನ್ನಾಗಿಲ್ಲವೇ ಅಥವಾ ನಾನೇನಾದ್ರೂ ತಪ್ಪಾಗಿ ಮಾತನಾಡಿದೆನೇ?” ಎಂದು.

ಆಗಲೇ ಅವಳ ಪತಿ ಸದಾಶಿವ ಅಲ್ಲಿಗೆ ಬಂದು ತಲುಪಿದ. ಇವರನ್ನು ಗಮನಿಸಿದ ಸದಾಶಿವ, “ಯಾಕೆ ಒಬ್ಬಳೆ ಕಾಯುತ್ತಾ ನಿಲ್ಲಲು ಆಗುದಿಲ್ಲವೇ? ಟೈಮ್ ಪಾಸ್‌ ಮಾಡುವುದಕ್ಕೆ ಇನ್ನೊಬ್ಬ ಗಂಡಸು ಬೇಕೇ ಬೇಕಾ ನಿನಗೆ…?” ಎಂದು ಹುಬ್ಬುಗಂಟಿಕ್ಕಿಕೊಂಡು ಪ್ರಶ್ನಿಸತೊಡಗಿದನು. ಕಾರ್‌ನಲ್ಲಿ ಕುಳಿತುಕೊಳ್ಳುತ್ತಲೇ ತನ್ನ ಮಾತುಗಳನ್ನು ಮುಂದುವರಿಸಿದ, “ಈ ನಿನ್ನ ಬಾಸ್‌ ಎಲ್ಲಾ ಲೇಡಿ ಸ್ಟಾಫ್‌ ಜೊತೆಗೆ ಹೀಗೆ ಹರಟೆ ಹೊಡೆಯುತ್ತಾನೋ ಅಥವಾ ಸ್ಪೆಷಲ್ ಆಗಿ ನಿನ್ನ ಜೊತೆ ಮಾತ್ರ ಟೈಮ್ ಪಾಸ್ ಮಾಡುತ್ತಾನೋ..?” ಎಂದು ಸಂಶಯದಿಂದಲೇ ಕೇಳಿದ. ಅಮೃತಾಳಿಗೆ ಗಂಟಲುಬ್ಬಿ ಬಂದಾಂತಾಯಿತು. ಆದರೂ ಸಹಿಸಿಕೊಂಡು, “ಸಂಜೆ 5 ಗಂಟೆಯ ನಂತರ, ಇಲ್ಲಿ ಯಾವ ಹೆಂಗಸೂ ನಿಂತುಕೊಳ್ಳುವುದಿಲ್ಲ. ಎಲ್ಲ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಲಿಫ್ಟ್ ತೆಗೆದುಕೊಂಡು ಹೊರಟು ಬಿಡುತ್ತಾರೆ…”

“ಓಹ್‌ ಅನುಕೂಲಕ್ಕೆ ತಕ್ಕಂತೆ!” ವ್ಯಂಗ್ಯವಾಗಿ ನಗುತ್ತಿದ್ದನು ಸದಾಶಿವ.

“ನಿನ್ನ ಅನುಕೂಲ ಏನು ಅಂತಾ ನನಗೆ ಚೆನ್ನಾಗಿ ಗೊತ್ತಿದೆ ಬಿಡು. ನಿನಗೆ ನನಗಿಂತಲೂ ಪರಪುರುಷರ ಸಾನ್ನಿಧ್ಯವೇ ಬೇಕೆನಿಸುತ್ತದೆ ಅಲ್ವ…?” ಎಂದನು.

ಇಂತಹ ಅಸಭ್ಯ ಸುಳ್ಳು ಅಪವಾದಗಳಿಂದ ಅಮೃತಾ ಬೇಸತ್ತು ಹೋಗಿದ್ದಳು. ಅವಮಾನದಿಂದಾಗಿ ಅವಳ ಮುಖದ ಬಣ್ಣವೇ ಬದಲಾಗಿತ್ತು. ಸದಾಶಿವ ತನ್ನ ಮನಸ್ಸಿನಲ್ಲಿ ಇಲ್ಲಸಲ್ಲದ ಸಂಶಯಗಳನ್ನು ತುಂಬಿಕೊಂಡು ಕಾರ್‌ ಓಡಿಸುತ್ತಿದ್ದ ಕಾರಣ ಡ್ರೈವ್ ಮಾಡುವುದಕ್ಕಿಂತಲೂ ಹೆಚ್ಚು ತನ್ನ ಹೆಂಡತಿಯ ಮುಖದ ಮೇಲೆ ಸುಳಿದಾಡುತ್ತಿದ್ದ ಭಾವನೆಗಳನ್ನು ಗಮನಿಸುತ್ತಿದ್ದ. ಅದೇ ಸಮಯದಲ್ಲಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಇನ್ನೊಂದು ಕಾರ್‌, ರಭಸದಿಂದ ನುಗ್ಗಿ ಬಂದು ಗುದ್ದುಕೊಡುವಷ್ಟರಲ್ಲಿ ದೈವವಶಾತ್‌ ಕೂದಲೆಳೆ ಅಂತರದಲ್ಲಿ ಬಚಾವಾದನು. ಎರಡೂ ಕಾರುಗಳು ಸಮಯಕ್ಕೆ ಸರಿಯಾಗಿ ಬ್ರೇಕ್‌ ಹಾಕಿದ್ದರಿಂದ ಭೀಕರ ಅಪಘಾತವೆಂದು ತಪ್ಪಿದಂತಾಯಿತು.

ಈ ಆಕಸ್ಮಿಕ ಅವಘಡದಿಂದಾಗಿ ಇನ್ನೊಂದು ಕಾರ್‌ನ ಡ್ರೈವರ್‌ ಬಾಯಿಗೆ ಬಂದಂತೆ ಬಯ್ಯತೊಡಗಿದನು. ತುಂಬಾ ಕೋಪದಿಂದ ಮಾತುಗಳಲ್ಲೇ ಸದಾಶಿವನ ಮೇಲೆ ಮುಗಿಬಿದ್ದ.

“ಯಾರ ಹೆಂಡತಿಯನ್ನು ಓಡಿಸಿಕೊಂಡು ಹೋಗುತ್ತಿರುವೆಯೋ ಕರಿಯ? ಪಕ್ಕದಲ್ಲಿ ಬ್ಯೂಟಿಫುಲ್ ಸೆಟಪ್‌ ಇದೆ ಅಂತಾ ರಸ್ತೆ ಮೇಲೆ ಗಮನವೇ ಇಲ್ಲವೇನೋ ನಿನಗೆ ಭಡವಾ!” ಎನ್ನತೊಡಗಿದ. ಹೆಂಡತಿಯ ಎದುರಿನಲ್ಲೇ ಈ ರೀತಿಯ ಅವಮಾನ ಆಗುತ್ತಿರುವುದು ಸದಾಶಿವನಿಗೆ ಸಹಿಸಲಾಗಲಿಲ್ಲ. ಕೋಪದಿಂದ ಕೆಂಡಾಮಂಡಲನಾಗಿಬಿಟ್ಟ. ಆ ಡ್ರೈವರ್‌ನಿಗೆ ಪಾಠ ಕಲಿಸಲೇಬೇಕೆಂದು ಥಟ್ಟನೇ ಕಾರ್‌ನ ಬಾಗಿಲು ತೆರೆದು ಹೊರಗೆ ಬಂದ. ಆದರೆ ಅಷ್ಟರಲ್ಲಿ ಆ ಕಾರ್‌ ಡ್ರೈವರ್‌ ಆ್ಯಕ್ಸಿಲರೇಟರ್‌

ರೈಸ್‌ ಮಾಡುತ್ತಾ ಭರ್ರೆಂದು ಅಲ್ಲಿಂದ ಪರಾರಿಯಾದ. ಹೀಗಾಗಿ ಸದಾಶಿವನ ಕೋಪ ಇನ್ನೂ ಉಗ್ರವಾಯಿತು.

ಸರಿ, ಇನ್ನೇನು ಕಾರಿನಲ್ಲಿ ಕುಳಿತು ಇಗ್ನಿಷನ್‌ ತಿರುಗಿಸುವಷ್ಟರಲ್ಲಿ, ಎಡಭಾಗದ ವಿಂಡೋ ಪಕ್ಕದಲ್ಲಿ ಒಂದು ಬೈಕ್‌ ಬಂದು ನಿಂತಿತು. ಬೈಕ್‌ ಮೇಲಿನ ಪುರುಷ ಸಹಜವಾಗಿ ಅತ್ತಿತ್ತ ನೋಡುತ್ತಿರುವಾಗ ಅಮೃತಾಳನ್ನು ಕಂಡು ಅಚ್ಚರಿಗೊಂಡು.

“ಅರೆ ಅಮೃತಾ ನೀವು?” ಎಂದು ಉದ್ಗರಿಸಿದ. ಅಮೃತಾ ಧ್ವನಿಯತ್ತ ತಿರುಗಿ ನೋಡಿ, ಮುಗುಳ್ನಗುತ್ತ ಅವನನ್ನು ಗುರುತಿಸಿ, “ಅಲ್ಲಾ, ನೀವಿಬ್ಬರೂ 5 ಗಂಟೆಗೇ ಹೊರಟು ಹೋಗಿದ್ದಿರಲ್ವಾ! ಎಕೆ ಇಷ್ಟು ಹೊತ್ತು ಇನ್ನೂ ಇಲ್ಲೇ ಇರುವಿರಿ?” ಎಂದು ಪ್ರಶ್ನಿಸಿದಳು.

ಆಗ ಹಿಂದಿನ ಸೀಟ್‌ನಲ್ಲಿದ್ದ ಕಲೀಗ್‌ ಶೋಭಾ ಉತ್ತರಿಸಿದಳು. “ಮನೋಜ್‌ಗೆ ಆ್ಯಕ್ಸಿಡೆಂಟ್‌ ಆಗಿದೆ. ಅವನನ್ನು ನೋಡೋಕ್ಕೆ ಅಂತಾ ಹಾಸ್ಪಿಟಲ್‌ಗೆ ಹೋಗಿದ್ದೆ. ಹೀಗಾಗಿ ಲೇಟಾಯಿತು. ಅದ್ಸರಿ, ಆ್ಯಕ್ಸಿಡೆಂಟ್‌ ಸುದ್ದಿ ನಿನಗೆ ತಿಳಿದಿರಲಿಲ್ವಾ?” ಎಂದಳು.

ಇಂತಹ ಪ್ರಶ್ನೆಗಳಿಗೆ ಮೌನಹಿಸುವುದು ಅಮೃತಾಳಿಗೆ ಅಭ್ಯಾಸವಾಗಿತ್ತು. ಆದರೆ ಅವಳ ಪ್ರತಿಕ್ರಿಯೆ ಭಾವಗಳು ಕಣ್ಣುಗಳಲ್ಲಿ ಕಂಡುಬರುತ್ತಿತ್ತು. ಹೀಗಾಗಿ ಅವಳೊಂದಿಗೆ ಮಾತನಾಡುವವರೆಲ್ಲ ಅವಳ ಮೌನವನ್ನು, ಮುಖದ ಭಾವನೆಗಳಿಂದಲೇ ಅರ್ಥೈಸಿಕೊಳ್ಳಬೇಕಾಗುತ್ತಿತ್ತು.

ಮಾತು ಮುಂದುವರಿಸದೆ, ವಿಷಯವನ್ನು ಬದಲಾಯಿಸುತ್ತಾ, “ ಸರಿ, ಹೊರಡೋಣ ಗಿರೀಶ್‌, ನಿಮಗೂ ಲೇಟಾಗುತ್ತದೋ ಏನೋ? ನಿಮ್ಮ ವೈಫ್‌ ನಿಮಗೋಸ್ಕರ ಕಾಯುತ್ತಿರಬಹುದು…?” ಎಂದಳು ಅಮೃತಾ.

ಅದಕ್ಕೆ ಗಿರೀಶ್‌, “ಹಾಗೇನೂ ಇಲ್ಲ, ಇವತ್ತು ನನ್ನ ವೈಫ್‌ಗೆ 2 ಅವರ್‌ ಎಕ್ಸ್ ಟ್ರಾ ಕೆಲಸ ಇದೆಯಂತೆ. ಯಾವುದೋ ಅರ್ಜೆಂಟ್ ಪ್ರಾಜೆಕ್ಟ್ ರಿಪೋರ್ಟ್‌ ರೆಡಿ ಮಾಡುವುದಿದೆಯಂತೆ. ಅದಕ್ಕೆ ಶೋಭಾ ಅವರನ್ನು ಡ್ರಾಪ್‌ ಮಾಡಿ, ಪಕ್ಕದ ಮಾರ್ಕೆಟ್‌ನಲ್ಲಿ ಸ್ವಲ್ಪ ತರಕಾರಿ ಖರೀದಿಸಿ, ನಂತರ ವೈಫ್‌ನ ಪಿಕಪ್‌ ಮಾಡ್ತೀನಿ. ಅಷ್ಟರಲ್ಲಿ 2 ಅವರ್‌ ಆಗ್ಹೋಗುತ್ತೆ.” ಎಂದ. ಇಬ್ಬರೂ ನಸುನಗುತ್ತಾ ಹೊರಟುಹೋದರು.

“ತರಕಾರಿ…..” ಎನ್ನುತ್ತಾ ಅಮೃತಾ “ನಡೀರಿ, ನಾವು ತರಕಾರಿ ತಗೋಬೇಕು. ಫ್ರಿಜ್ಜೆಲ್ಲ ಖಾಲಿ ಆಗಿದೆ,” ಎಂದಳು.

ಈ ಮಾತು ಸದಾಶಿವನಿಗೆ ಇರಿದಂತಾಯಿತು, “ಯಾಕೇ? ಅಲ್ಲಿಯೂ ಅವನನ್ನು ಭೇಟಿ ಮಾಡಬೇಕಾ? ಏನಂದೆ ಅವನ ಹೆಸರು? ಹಾಂ….. ಗಿರೀಶ್‌!” ಎಂದು ಕುಹಕವಾಡಿದನು.

`ಏನು ಮೇಡಮ್, ಇವತ್ತು ರಾತ್ರಿ ಪೂರ್ತಿ ಇಲ್ಲಿಯೇ ನಿಂತುಕೊಂಡಿರಬೇಕು ಅಂತಾ ನಿರ್ಧಾರ ಮಾಡಿದ್ದಿರೋ ಹೇಗೇ? ಆಫೀಸ್‌ಕ್ಲೋಸ್‌ ಮಾಡಿ 2 ಗಂಟೆ ಆಗ್ತಾ ಬಂತು. ನಾನೂ ಮೇನ್‌ ಗೇಟಿಗೆ ಬೀಗ ಹಾಕ್ಕೊಂಡು ಹೋಗ್ಬೇಕು!” ಎಂದು ದೊಡ್ಡ ದನಿಯಲ್ಲಿ ಮಾತನಾಡುತ್ತ ಬಂದ ಜವಾನನ ಧ್ವನಿಯಿಂದ ಅಮೃತಾಳ ವಿಚಾರಲಹರಿ ಭಗ್ನಗೊಂಡಿತು.

ಅಮೃತಾ ಗಡಿಯಾರ ನೋಡಿಕೊಂಡಾಗ, ಆರೂಮುಕ್ಕಾಲು ಗಂಟೆಯಾಗಿತ್ತು. ಆ ಜವಾನನನ್ನು ನೋಡಿದರೇನೇ ಕೋಪ ಬರುವಂತಾಗಿತ್ತು. ದುರ್ವಾಸನೆಯ ಬೀಡಿ ಸೇದುತ್ತಾ ಇವಳನ್ನೇ ಗುರಾಯಿಸಿಕೊಂಡು ನೋಡುತ್ತಿದ್ದ. ಅಮೃತಾಳಿಗೆ ಅವನತ್ತ ತಿರುಗಿ ನೋಡುವುದಕ್ಕೇ ಅಸಹ್ಯವೆನಿಸತೊಡಗಿತ್ತು. ಅಷ್ಟು ದೊಡ್ಡ ಬಿಲ್ಡಿಂಗ್‌ನ ಪೋರ್ಟಿಕೋದಲ್ಲಿ ಇವಳೊಬ್ಬಳೇ ಹೆಣ್ಣು ನಿಂತಿದ್ದಳು. ಜೊತೆಗೆ ಇಂಥ ಜವಾನ ಬೇರೆ ಇದ್ದ. ಮಳೆ ನಿಲ್ಲು ಲಕ್ಷಣವೇ ಇರಲಿಲ್ಲ. ಎಲ್ಲಿ ನೋಡಿದರೂ ಮಳೆಯ ನೀರು ಹರಿಯುತ್ತಿತ್ತು. ಏನು ಮಾಡಬೇಕು ಎನ್ನುವುದೇ ಅಮೃತಾಳಿಗೆ ತಿಳಿಯದಂತಾಯಿತು. ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿತ್ತು ಅವಳ ಸ್ಥಿತಿ. ಇಂತಹ ವಿಕೃತ ಮನಸ್ಸಿನ ಗಂಡ ಹಾಳಾಗಿ ಹೋಗಲಿ. ಇನ್ನು ಮುಂದೆ ಯಾರಿಂದಾದ್ರೂ ಡ್ರಾಪ್‌ ತೆಗೆದುಕೊಳ್ಳಲೇಬೇಕು ಎಂದು ಮನಸಲ್ಲೇ ನಿರ್ಧರಿಸಿದಳು. ಆದರೆ ಈಗಿನ ಪರಿಸ್ಥಿತಿಗೆ ಏನು ಮಾಡುವುದು? ಮೊಬೈಲ್ ‌ಕೂಡ ಮರೆತು ಬಂದಿದ್ದಳು. ಜವಾನನಿಗೆ ಹೇಳಿ ಆಫೀಸಿನ ಬಾಗಿಲು ತೆಗಿಸಿ, ಒಳ ಹೋಗಿ ಫೋನ್‌ ಮಾಡಬೇಕೆಂದರೆ ಧೈರ್ಯವಾಗಲಿಲ್ಲ. ಆದದ್ದಾಗಲಿ ನೋಡಿಯೇಬಿಡೋಣ ಎಂದು ಛತ್ರಿ ಏರಿಸಿಕೊಂಡು ಮಳೆಯಲ್ಲಿಯೇ ಹೊರಟುಬಿಟ್ಟಳು.

ರಸ್ತೆ ಪೂರ್ತಿ ಮಳೆಯಿಂದಾಗಿ ನಿರ್ಜನವಾಗಿತ್ತು. ದೂರ ದೂರದವರೆಗೂ ಯಾರೂ ಗೋಚರಿಸುತ್ತಿರಲಿಲ್ಲ. ತುಂಬಾ ಕಷ್ಟದಿಂದ, ಜಾಗರೂಕತೆಯಿಂದ ಒಂದಿಷ್ಟು ಮುಂದೆ ಬಂದಿದ್ದಳು. ರಭಸದ ಗಾಳಿಯಿಂದಾಗಿ ಛತ್ರಿ ಉಲ್ಟಾ ತಿರುಗಿಬಿಟ್ಟಿತು. ಅದನ್ನು ಲಗುಬಗೆಯಿಂದ ಸರಿಪಡಿಸುವಷ್ಟರಲ್ಲಿ ಸಂಪೂರ್ಣ ಮಳೆಯಲ್ಲಿ ತೊಯ್ದು ಹೋದಳು. ಸೀರೆ ಕಾಲಿನಲ್ಲಿ ಸಿಕ್ಕಿ ಹಾಕಿಕೊಳ್ಳತೊಡಗಿತು. ಇದರಿಂದ ಹೆಜ್ಜೆ ಕಿತ್ತು ಇಡುವುದೂ ದುಸ್ಸಾಧ್ಯವೆನಿಸತೊಡಗಿತು. ರಸ್ತೆ ಬದಿಯ ಚರಂಡಿಗಳೆಲ್ಲ ಉಕ್ಕಿ ಹರಿಯುತ್ತಿದ್ದ. ಸೀರೆ ಸ್ವಲ್ಪ ಮೇಲೆತ್ತಿಕೊಂಡು ಹರಿಯುವ ನೀರಿನಲ್ಲಿ ಜಾಗೂಕತೆಯಿಂದ ತುದಿಗಾಲ ಮೇಲೆ ನಡೆಯುತ್ತಿದ್ದಳು. ಅಚಾನಕ್ಕಾಗಿ ಕಾಲ ಕೆಳಗಿನ ಮಣ್ಣು ಕುಸಿದಂತಾಗಿ ಅವಳ ಎಡಗಾಲು ಹಳ್ಳದಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟಿತು. ನೀರು ತುಂಬಾ ಹರಿಯುತ್ತಿರುವುದರಿಂದ ಯಾವುದೊ ದೊಡ್ಡ ಗುಂಡಿಯ ಮೇಲೆ ಹೊದಿಸಲಾಗಿದ್ದ ಚಪ್ಪಟೆ ಕಲ್ಲುಗಳ ಮಧ್ಯದಲ್ಲಿ ಕಾಲು ಸಿಕ್ಕಿಕೊಂಡಿತ್ತು. ಅವಳು ಎಷ್ಟೇ ಪ್ರಯತ್ನಿಸಿದರೂ ಕಾಲು ಆಚೆಗೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಬದಲಾಗಿ ವಿಪರೀತ ನೋಯತೊಡಗಿತು. ನೋವಿನಿಂದ ಒದ್ದಾಡುತ್ತ ಅಲ್ಲಿಯೇ ನೀರಲ್ಲಿ ಕುಳಿತುಬಿಟ್ಟಳು.

ಆಗಲೇ ಯಾವುದೋ ಒಂದು ಗಂಡಸಿನ ಧ್ವನಿ ಕೇಳಿ ಬಂದಿತು. “ಕಾಲು ಅಲ್ಲಾಡಿಸಬೇಡಿ, ನಿಶ್ಚಲವಾಗಿ ಕುಳಿತಿರಿ, ನಾನು ನಿಮ್ಮ ಸಹಾಯಕ್ಕೆಂದೇ ಬರುತ್ತಿದ್ದೇನೆ,” ಎನ್ನುತ್ತಾ ಯಾರೋ ಒಬ್ಬ ಆಸಾಮಿ ಕಾರಿನಿಂದ ಇಳಿದು ಅಳತ್ತಲೇ ಬರುತ್ತಿದ್ದ. ಇವಳ ಬಳಿಗೆ ಬರುಷ್ಟವರಲ್ಲಿ ಅವನೂ ತೊಪ್ಪನೆ ತೊಯ್ದಿದ್ದ. ಬಂದನಂತರ ಸ್ವಲ್ಪ ಸಮಯ ಸಿಲುಕಿಬಿದ್ದ ಇವಳ ಕಾಲ ಬಳಿ ನೀರಿನಲ್ಲಿ ಕೈಯಾಡಿಸಿ, ಚಪ್ಪಡಿ ಕಲ್ಲುಗಳ ಜೋಡಣೆಯನ್ನು ಅರಿತುಕೊಂಡ. ನಂತರ ಮೈಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಂಡು ಒಂದು ಚಪ್ಪಡಿ ಕಲ್ಲನ್ನು ಮೇಲಕ್ಕೆ ಎತ್ತಿದನು. ಸರಕ್ಕನೆ ಇವಳು ಕಾಲು ಹೊರಗೆ ಎಳೆದುಕೊಂಡು ಕುಸಿದು ಕುಳಿತಳು. ಅಮೃತಾಳ ಕಾಲು ಪೂರಿ ಉಬ್ಬಿದಂತೆ ಊದಿಕೊಂಡಿತ್ತು. ಇನ್ನು ಅವಳು ನೆಲದ ಮೇಲೆ ಪಾದ ಊರುವುದೇ ಸಾಧ್ಯವಿಲ್ಲದಂತಾಯಿತು.

ಇನ್ನು ಆ ಆಗಂತುಕ ಅವಳ ಪ್ರತಿಕ್ರಿಯೆಗೂ ಕಾಯದೇ, ಅವಳನ್ನು ತನ್ನ ಬಾಹುಗಳಲ್ಲಿ ಅನಾಮತ್ತಾಗಿ ಎತ್ತಿಕೊಂಡು ಹೋಗಿ, ತನ್ನ ಕಾರ್‌ನ ಹಿಂದಿನ ಸೀಟಿನಲ್ಲಿ ಮಲಗಿಸಿದ. ಅಮೃತಾಳಿಗಂತೂ ಏನನ್ನಾದರೂ ಹೇಳಬೇಕು, ಕೇಳಬೇಕು ಅಥವಾ ಪ್ರತಿರೋಧಿಸಬೇಕೆಂದರೂ ಶಕ್ತಿ ಇಲ್ಲವಾಗಿತ್ತು. ಅವಳಿಗೆ ಆಗಂತುಕನ ಬಗ್ಗೆ ಭಯ ಆಗುತ್ತಿರಲಿಲ್ಲ, ತನ್ನ ಪತಿಯ ಬಗ್ಗೆ ಯೋಚನೆಯೂ ಬರಲಿಲ್ಲ. ಅವನು ತನ್ನ ರಕ್ಷಣೆಗೆಂದೇ ದೇವಲೋಕದಿಂದ ಇಳಿದು ಬಂದ ರಾಜಕುಮಾರನಂತೆ ಕಾಣಿಸುತ್ತಿದ್ದ. ಖಾಸಗಿ ಆಸ್ಪತ್ರೆ ಕಾಂಪೌಂಡಿನಲ್ಲಿ ಬಂದು ನಿಂತಿತು ಆಗಂತುಕನ ಕಾರು. ಎಮರ್ಜೆನ್ಸಿ ವಿಭಾಗದಲ್ಲಿನ ತೀವ್ರ ಬೆಳಕಲ್ಲಿ, ಮೊದಲ ಸಲ ಪರಸ್ಪರ ಮುಖ ನೋಡಿಕೊಂಡರು. ಅಮೃತಾಳ ಅದ್ಭುತ ಸೌಂದರ್ಯವನ್ನು ಕಂಡ ಆಗಂತುಕನ ಕಣ್ಣುಗಳು ಕೋರೈಸಿದ್ದವು. ಕಣ್ಣು ಮಿಟುಕಿಸದೆ ಅವಳನ್ನು ತದೇಕಚಿತ್ತದಿಂದ ನೋಡುತ್ತಾ ಮೈ ಮರೆತನು.

ಅಪ್ರತಿಮ ಸುಂದರಿ. ಹಣೆಯ ಮೇಲಿನ ಕುಂಕುಮ ಮಳೆ ನೀರಲ್ಲಿ ನೆಂದು ಸಣ್ಣಗೆ ಮುಖದ ಮೇಲೆ ಹರಿದಾಡಿತ್ತು. ಅದೊಂದು ವಿಶಿಷ್ಟ ಆಕರ್ಷಣೆ ಮೂಡಿತ್ತು ಅವಳ ಮುಖದಲ್ಲಿ. ಮಳೆಯಲ್ಲಿ ತೊಯ್ದಿದ್ದರಿಂದ, ಬೆಳದಿಂಗಳ ನೊರೆಹಾಲಿನಂತಹ ಅವಳ ಗೌರವರ್ಣದ ಮೈಮಾಟ ಮೋಹಗೊಳಿಸುವಂತಿತ್ತು. ದೇಹದ ಏರಿತಗಳೆಲ್ಲ ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ದಟ್ಟ ನೀಳ ಕೇಶರಾಶಿ ಹರಡಿಕೊಂಡು, ಸೊಂಟದವರೆಗೂ ಇಳಿದುಕೊಂಡಿದ್ದ. ಕಲ್ಪನಾ ಲೋಕದ ಕನಸಿನ ಕನ್ಯೆಯಂತೆ ಕಂಗೊಳಿಸುತ್ತಿದ್ದಳು. ಸಮ್ಮೋಹನಗೊಂಡವನಂತೆ ನಿಂತು ಅವಳ ಸೌಂದರ್ಯವನ್ನೇ ಆಸ್ವಾದಿಸುತ್ತಿದ್ದ. ಅಮೃತಾ ಕೂಡ ಇದೇ ಪರಿಸ್ಥಿತಿಯಲ್ಲಿದ್ದಳು. ಅವನ ಆಕರ್ಷಕ ಮೈಕಟ್ಟು ಮತ್ತು ವ್ಯಕ್ತಿತ್ವಕ್ಕೇ ಮಾರುಹೋಗಿ, ತನಗರಿವಿಲ್ಲದಂತೆಯೇ ತನ್ನ ಗಂಡನನ್ನು ಅವನೊಂದಿಗೆ ಹೋಲಿಕೆ ಮಾಡತೊಡಗಿದಳು.

“ನೋಡಿ, ಈಗ ಇವರನ್ನು ನೀವು ಮನೆಗೆ ಕರೆದುಕೊಂಡು ಹೋಗಬಹುದು. ಆಸ್ಪತ್ರೆಗೆ ಬರುವುದಕ್ಕೆ ಇನ್ನೊಂದು ಸ್ವಲ್ಪ ಲೇಟಾಗಿದ್ರೆ ನಿಮ್ಮ ಪತ್ನಿಯ ಕಾಲು….” ಎಂದು ಡಾಕ್ಟರ್‌ ಹೇಳಿದಾಗ ಇಬ್ಬರೂ ತಂತಮ್ಮ ಸಮ್ಮೋಹನೆಯಿಂದ ಹೊರಬಂದರು. ಸ್ವಲ್ಪ ದಿನ ನಡೆದಾಡಬಾರದೆಂದು ಡಾಕ್ಟರ್‌ ಸೂಚಿಸಿ ಕಳಿಸಿದರು. ಆಗಂತುಕ ಮತ್ತೆ ಅಮೃತಾಳನ್ನು ತನ್ನ ಬಾಹುಗಳಲ್ಲಿ ಎತ್ತಿಕೊಂಡು ಹೋಗಿ ಕಾರ್‌ನಲ್ಲಿ ಮಲಗಿಸಿದ. ಈಗ ಅಮೃತಾಳಿಗೆ ಕೊಂಚ ಹಾಯ್‌ ಎನಿಸುತ್ತಿತ್ತು. ಅವಳಿಗೆ ಮನೆ ಮತ್ತು ಗಂಡನ ಬಗ್ಗೆ ಮರೆತೇ ಹೋದಂತಾಗಿತ್ತು. ಅವಳ ಪತಿಯಲ್ಲಿ ಪ್ರೀತಿ, ಮೋಹ, ಮಮತೆ, ಸ್ನೇಹ, ವಾತ್ಸಲ್ಯಗಳಂಥ ಭಾವನೆಗಳೇ ಇರಲಿಲ್ಲ ಭಾವನಾತ್ಮಕತೆಯ ನೆಲೆಗಟ್ಟಿನಲ್ಲಿ ಅವನು ನಿಕೃಷ್ಟನಾಗಿದ್ದನು.

“ನಿಮ್ಮ ಮನೆ ಎಲ್ಲಿದೆ?” ಎಂದು ಆಗಂತುಕ ಕೇಳಿದ.

ಅವನು ಪ್ರಶ್ನೆ ಕೇಳಿದ ತಕ್ಷಣ ಇವಳ ಮುಖ ಬಿಳಚಿಕೊಂಡಿತು. ತೀರಾ ಯಾಂತ್ರಿಕತೆಯಿಂದ ತನ್ನ ಮನೆಯ ವಿಳಾಸ ಹೇಳಿದಳು.

“ಮನೆಯಲ್ಲಿ ಯಾರು ಯಾರು ಇದ್ದೀರಿ?”

“ನಾನು, ನನ್ನ ಪತಿ…” ಎಂದಳು.

“ಮತ್ತೆ ಮಕ್ಕಳು?”

“ಇಲ್ಲ….” ಎಂದು ಜೋರಾಗಿ…. ಅರಚಿದಳು. ಗಾಬರಿಗೊಂಡ ಆಗಂತುಕ ಕಾರನ್ನು ಪಕ್ಕಕ್ಕೆ ನಿಲ್ಲಿಸಿ, ಇನ್ನಿಲ್ಲದ ಮಮಕಾರದಿಂದ “ಯಾಕೆ, ನಿಮ್ಮ ಮಗುವಿಗೆ ಏನಾದರೂ ಆಗಬಾರದ್ದು ಆಯಿತೆ?” ಎಂದು ಕೇಳಿದ.

“ಇಲ್ಲಾ, ಮಕ್ಕಳನ್ನು ಹೆರುವುದು ಒಂದು ಸಂಕಟ,” ಎಂದಳು.

“ಏನು, ನಿಮ್ಮ ಮಾತಿನ ಅರ್ಥ?”

“ನಾನು ನನ್ನ ಅನಿಷ್ಟ ಗಂಡನಿಗೆ ಮಕ್ಕಳನ್ನು ಹೆತ್ತುಕೊಡಲು ಸಿದ್ಧಳಿಲ್ಲ,” ಎಂದು ಕೋಪದಿಂದಲೇ ಹೇಳಿದಳು.

ಅಮೃತಾ ನೋವಿನಿಂದ ದುಃಖಿಸತೊಡಗಿದ್ದಳು. ಅವಳು ತನ್ನ ದೌರ್ಭಾಗ್ಯವನ್ನು ಇಲ್ಲಿಯವರೆಗೂ ಯಾರ ಜೊತೆಯಲ್ಲೂ ಹಂಚಿಕೊಂಡಿರಲಿಲ್ಲ. ಆದರೆ ಈ ಆಗಂತುಕ ಹಿತೈಷಿಯೊಂದಿಗೆ 2 ಗಂಟೆ ಕಳೆಯುವುಷ್ಟರಲ್ಲಿ, ಅವನು ಆಗಂತುಕನ ಬದಲಾಗಿ ಒಬ್ಬ ಆಪದ್ಭಾಂಧವನಂತೆ ಕಾಣಿಸತೊಡಗಿದ್ದ. ಅವನೊಂದಿಗೆ ತನ್ನ ಮನಸ್ಸಿನ ಎಲ್ಲ ದ್ವಂದ್ವಗಳನ್ನು ಹೇಳಿಕೊಳ್ಳಬೇಕು ಎಂದೆನಿಸತೊಡಗಿತ್ತು. ಆಫೀಸಿನಲ್ಲಿ ಕಲೀಗ್‌ಗಳು ಅಂತರಂಗದ ವಿಷಯಗಳನ್ನು ಕೆದಕುವಂತಹ ಪ್ರಶ್ನೆಗಳನ್ನು ಕೇಳಿದಾಗ, ಉತ್ತರಿಸಲಾಗದೆ ಮೌನವನ್ನು ಧರಿಸುತ್ತಿದ್ದಳು. ಆದರೆ ಇವತ್ತು ಬಹುಕಾಲದಿಂದಲೂ ಎದೆಯೊಳಗೆ ಅದುಮಿಟ್ಟುಕೊಂಡು ಬಂದ ನೋವು, ದುಃಖ, ಸಂತಾಪ, ಅಸಹನೆಗಳೆಲ್ಲ ಕಟ್ಟಯೊಡೆದು ಹೊರ ನುಗ್ಗತೊಡಗಿದವು. ಅವಳು ತೀವ್ರವಾಗಿ ಬಿಕ್ಕಳಿಸುತ್ತಲೇ ಆಗಂತುಕನಿಗೆ ತನ್ನೆಲ್ಲ ಕಥೆಯನ್ನು ಹೇಳತೊಡಗಿದಳು.

ಶಿವಮೊಗ್ಗೆಯ ಹಸಿರು ತಪ್ಪಲಿನ ನಿಸರ್ಗ ಸೌಂದರ್ಯದ ಮಡಿಲಲ್ಲಿ ಅವಳು ಬೆಳೆದಿದ್ದಳು. ತಂದೆ, ಸೈನ್ಯದಲ್ಲಿ ಮೇಜರ್ ಹುದ್ದೆಯಲ್ಲಿದ್ದರು. ತಂದೆ ತಾಯಿಗೆ ಒಬ್ಬಳೇ ಮಗಳು, ಭವ್ಯವಾದ ಮನೆ, ಸಕಲ ಸೌಕರ್ಯಗಳಿಂದ ಕೂಡಿದ ಬದುಕು ವೈಭಯುತವಾಗಿತ್ತು. ತಂದೆಯ ಆಸೆಯಂತೆಯೇ ಇವಳೂ ಡಾಕ್ಟರ್‌ ಆಗಬೇಕೆಂಬ ಕನಸು ಕಂಡಳು. ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಡ್ಮಿಷನ್‌ ಕೂಡ ಪಡೆದುಕೊಂಡಿದ್ದಳು.

“ಈಗ ಎಲ್ಲಿ ಕೆಲಸ ಮಾಡುತ್ತಿರುವಿರಿ?” ಆಗಂತುಕ ಪ್ರಶ್ನಿಸಿದ.

“ಟಾಟಾ ಟೆಲಿಸರ್ವಿಸಸ್‌ನಲ್ಲಿ…”

“ಮತ್ತೆ ಮದುವೆ?”

ಅಮೃತಾ ಮತ್ತೆ ಬಿಕ್ಕಳಿಸುತ್ತಾ ಹೇಳತೊಡಗಿದಳು. “ಅದೊಂದು ನತದೃಷ್ಟ ಭಾನುವಾರ. ನನ್ನ ಜೀವನದ ಅತ್ಯಂತ ದುರ್ಭರ ದಿನ. ನನ್ನ ಸೌಂದರ್ಯವೇ ನನ್ನ ಶತ್ರುವಾಗಿ ಪರಿಣಮಿಸಿದ ದಿನ. ಇವತ್ತಿನಂತೆಯೇ ಅವತ್ತೂ ಮಳೆ ಸುರಿಯುತ್ತಲಿತ್ತು. ನಾನು ನನ್ನ ಗೆಳತಿಯೊಂದಿಗೆ ಮನೆಯಂಗಳದಲ್ಲಿ ಮಳೆಯ ಹನಿಗಳೊಂದಿಗೆ ಆಟವಾಡುತ್ತಿದ್ದೆ.

“ಆಗ ಗೇಟಿನ ಆಚೆ ಒಂದು ಆಟೋ ಬಂದು ನಿಂತ ಶಬ್ದವಾಯಿತು. ಆಟೋದಿಂದ ಇಳಿದ ವ್ಯಕ್ತಿ ಗೇಟ್‌ ತೆರೆದುಕೊಂಡು, ಮನೆಯಂಗಳದಲ್ಲಿ ಹೆಜ್ಜೆ ಇಟ್ಟಾಗ, ನನ್ನ ಗೆಳತಿ ನಾಚಿಕೆಯಿಂದ ಒಂದು ಮರದ ಹಿಂದೆ ಅಡಗಿಕೊಂಡರೆ, ನಾನು ಮನೆಯ ಒಳಗೆ ಓಡಿ ಹೋದೆನು. ಅದೇ ನಾನು ಮಾಡಿದ ತಪ್ಪು. ಆ ವ್ಯಕ್ತಿಯ ವಕ್ರದೃಷ್ಟಿ ನನ್ನ ಮೇಲೆ ಬಿದ್ದಿತು. ಆತ ಬೇರೆ ಯಾರೂ ಅಲ್ಲ, ನನ್ನ ಚಿಕ್ಕಮ್ಮನ ಕಿರಿಯ ತಮ್ಮನಾಗಿದ್ದ. ನನ್ನ ದುರ್ದೈವ, ಅವನೇ ಈಗ ನನ್ನ ಗಂಡನಾಗಿದ್ದಾನೆ.

“ಈಗ ತಾನೇ ಮಳೆಯಲ್ಲಿ ನೆಂದುಕೊಂಡು, ಒಳಗೇ ಓಡಿ ಬಂದಳಲ್ಲ, ಆ ಹುಡುಗಿ  ಯಾರು?” ಎಂದು, ಒಳಗೆ ಬಂದ ತಕ್ಷಣವೇ ಚಿಕ್ಕಮ್ಮನನ್ನು ಕೇಳಿದ. ಚಿಕ್ಕಮ್ಮ ನನ್ನ ಪರಿಚಯ ಹೇಳುತ್ತಿದ್ದರು. ನಾನು ಬಾಗಿಲಿನ ಹಿಂದೆಯೇ ಅವಿತಿಟ್ಟುಕೊಂಡು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಲಿದ್ದೆ.

“ಅಕ್ಕ, ಇವತ್ತು ನಿನ್ನ ಮನಸಿನ ಆಸೆಯನ್ನು ಈಡೇರಿಸುತ್ತೇನೆ ಬಿಡು ಹಾಗಾದ್ರೆ….”

“ಯಾವ ಆಸೆಯಪ್ಪ? ನಾನು ನಿನ್ನಿಂದ ಯಾವ ಆಸೆಯನ್ನು ಬಯಸಿರಲಿಲ್ಲವಲ್ಲ!” ಎಂದಳು ಚಿಕ್ಕಮ್ಮ.

“ಮರೆತುಬಿಟ್ಟೆಯಾ ಅಕ್ಕ? ಬೇಗ ಮದುವೆಯಾಗು, ನಿನಗೂ ವಯಸ್ಸಾಗುತ್ತಲಿದೆ ಎಂದು ಪದೇ ಪದೇ ಹೇಳುತ್ತಿದ್ದೆಯಲ್ಲ! ಈಗ ನನಗೊಂದು ಹುಡುಗಿ ಇಷ್ಟವಾಗಿದ್ದಾಳೆ,” ಎಂದು ತುಂಬಾ ಸರಳವಾಗಿ ಹೇಳಿದ.

“ಹೌದಾ? ನಿಜವೇನೋ….? ಯಾರು ಆ ಹುಡುಗಿ?” ಎಂದು ಚಿಕ್ಕಮ್ಮ ಇನ್ನಿಲ್ಲದ ಉತ್ಸಾಹದಿಂದ ಕೇಳಿದರು.

“ಹುಡುಗಿ ನಿನ್ನ ಮನೆಯಲ್ಲೇ ಇದ್ದಾಳೆ ಅಕ್ಕ! ಅವಳೇ, ಮಳೆಯಲ್ಲಿ ತೋಯಿಸಿಕೊಂಡು ಒಳಗೆ ಓಡಿ ಹೋದಳಲ್ಲ!” ಎಂದ.

“ಯಾರು…. ನಮ್ಮ ಅಮೃತಾನಾ…..? ಅಬ್ಬಾ ಎಂಥ ಸುದ್ದಿ ಹೇಳಿದೆ. ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು, ಊರು ತುಂಬಾ ತುಪ್ಪಕ್ಕಾಗಿ ತಿರುಗಾಡುವುದು ತಪ್ಪಿಲ್ಲ,” ಎಂದು ಚಿಕ್ಕಮ್ಮ ಸಂತೋಷದಿಂದ ಹೇಳಿದರು. ಇದನ್ನೆಲ್ಲಾ ಕೇಳುತ್ತಾ ನನಗೆ ಸಿಡಿಲು ಬಡಿದಂತಾಯಿತು. ಆ ಕರಿಕೋತಿಯಂತಹ ಠೊಣಪ ನನಗೆ ಇಷ್ಟವೇ ಇರಲಿಲ್ಲ. ಈ ಆಘಾತದಿಂದ ನನ್ನ ಬುದ್ಧಿಯೇ ಮಂಕಾಗಿ ಹೋಯಿತು. ಆದರೂ ಎದೆಗುಂದದೆ, ಒದ್ದೆ ಬಟ್ಟೆಯಲ್ಲೇ ಚಿಕ್ಕಮ್ಮನ ಎದುರಿಗೆ ಹೋಗಿ “ನಾನು ಇವರನ್ನು ಮದುವೆಯಾಗಲು ತಯಾರಿಲ್ಲ,” ಎಂದು ಖಡಕ್ಕಾಗಿಯೇ ಹೇಳಿದೆ.

ಚಿಕ್ಕಮ್ಮ ಅವಾಕ್ಕಾದರು. ಅವರ ತೆರೆದ ಬಾಯಿ ಮುಚ್ಚಲೇ ಇಲ್ಲ. ಮಾತುಗಳೇ ನಿಂತು ಹೋದವು. ಮೊಟ್ಟ ಮೊದಲ ಬಾರಿ ಚಿಕ್ಕಮ್ಮನಿಗೆ ಎದುರು ಮಾತನಾಡಿದ್ದೆ. ಚಿಕ್ಕಮ್ಮ ನಿರುತ್ತರಳಾದಾಗ ನಾನೇ ಆತನಿಗೆ ಜೋರು ಮಾಡಿ ಹೇಳಿದೆ, “ನೋಡಿ, ನಾನು ನಿಮ್ಮನ್ನು ಮದುವೆಯಾಗುವುದು ಸಾಧ್ಯವೇ ಇಲ್ಲ. ಇನ್ನು ಮುಂದೆ ಕನಸು ಮನಸ್ಸಿನಲ್ಲಿಯೂ ಕೂಡ ಈ ವಿಚಾರವನ್ನು ನೆನಪಿಸಿಕೊಳ್ಳಬೇಡಿ.”

ನಾನು ಹೀಗೆ ನಿರ್ಭಿಡೆಯಿಂದ ಹೇಳುತ್ತಲಿದ್ದರೆ, ಆತ ಮಾತ್ರ ಮಳೆಯಲ್ಲಿ ನೆಂದುಕೊಂಡಿದ್ದ ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಲಿದ್ದ. ತನ್ನ ಕಣ್ಣುಗಳಲ್ಲೇ ನಗ್ನಳನ್ನಾಗಿ ಕಾಣುತ್ತಿದ್ದನೇನೋ! ಅಂತಹ ಕಾಮಾಂಧುರ ಅವನು. ಆಗಲೇ ನಾನು ವಾಸ್ತವಕ್ಕೆ ಬಂದಿದ್ದು. ತಕ್ಷಣ ಅವನನ್ನೊಮ್ಮೆ ಹೀನವಾಗಿ ದೃಷ್ಟಿಸಿ, ಬಟ್ಟೆ ಬದಲಾಯಿಸಲು ಸರಕ್ಕನೆ ಒಳಹೋದೆ. ಆದರೂ ಚಿಕ್ಕಮ್ಮ ಮತ್ತು ಅವನಾಡುವ ಮಾತುಗಳು ನನಗೆ ಕೇಳಿಸುತ್ತಲೇ ಇದ್ದವು.

“ಅಕ್ಕ, ಅವಳ ಮಾತು ಕೇಳಿಕೊಂಡು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಕಬ್ಬಿಣ ಸರಿಯಾಗಿ ಕಾಯ್ದಿರುವಾಗಲೇ ಬಗ್ಗಿಸಬೇಕು. ಯೋಚನೆ ಮಾಡು ಅಕ್ಕ. ಅಮೃತಾಳನ್ನು ನನಗೆ ಕೊಟ್ಟು ಮದುವೆ ಮಾಡಿದರೆ ನಿಮಗೆ ಯಾವುದೇ ಖರ್ಚು ಬರುವುದಿಲ್ಲ. ವರದಕ್ಷಿಣೆ, ವರೋಪಚಾರದ ಸಮಸ್ಯೆಯೇ ಬರುವುದಿಲ್ಲ. ಅಕಸ್ಮಾತ್‌ ಬೇರೆಯವರೊಂದಿಗೆ ಮದುವೆ ಮಾಡಿದರೆ, ಕಡಿಮೆ ಎಂದರೂ 5-6 ಲಕ್ಷ ಖರ್ಚಾಗುತ್ತೆ, ಇದರಿಂದಾಗಿ ನಿನಗೇ ಇನ್ನಿಲ್ಲದ ಕಷ್ಟ ಕಾರ್ಪಣ್ಯ ಎದುರಾಗುತ್ತದೆ. ಸುಮ್ಮನೆ ಬುದ್ಧಿ ಉಪಯೋಗಿಸಿ ಅವಳನ್ನು ಒಪ್ಪಿಸು ಅಕ್ಕ. ಅವಳು ಒಪ್ಪದೇ ಇದ್ದರೆ, ಆ ಜವಾಬ್ದಾರಿಯನ್ನು ನನಗೇ ಬಿಡು. ನಾಳೆ ಬಂದು ನಾನೇ ಒಪ್ಪಿಕೊಳ್ಳುವಂತೆ ಮಾಡುತ್ತೇನೆ. ನಾನು ಮದುವೆ ಅಂತಾ ಆದರೆ ಈ ಕಾಮನಬಿಲ್ಲನ್ನೇ ಆಗೋದು.”

ನಿಂತಲ್ಲಿಯೇ ನಾನು ಸ್ತಂಭೀಭೂತಳಾದೆ. ಧುತ್ತನೇ ಬಂದೆರಗಿದ ಈ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗುವುದು ಹೇಗೆಂದು ಯೋಚಿಸುತ್ತಿದ್ದಾಗ, ಒಂದೇ ಒಂದು ಉಪಾಯ ಹೊಳೆಯಿತು. ಗೆಳತಿಯ ಸಹಕಾರದೊಂದಿಗೆ, ಚಿಕ್ಕಮ್ಮನಿಗೂ ತಿಳಿಸದೆ ಗಂಟು ಮೂಟೆ ಕಟ್ಟಿಕೊಂಡು ಮರಳಿ ಶಿವಮೊಗ್ಗೆಗೆ ಅಮ್ಮನ ಪಾದವೇ ಗತಿ ಎಂದು ಹೋರಟು ಬಂದುಬಿಟ್ಟೆ. ಆದರೆ ಅಮ್ಮ ವಿಪರೀತ ಮದ್ಯ ಸೇವನೆಯಿಂದಾಗಿ `ಲಿವರ್‌ ಸಿರೋಸಿಸ್‌’ ಗೆ ಬಲಿಯಾಗಿ, ಆಸ್ಪತ್ರೆಯ ಮರಣಶಯ್ಯೆಯಲ್ಲಿ ಮಲಗಿದ್ದಳು. ಮಾರನೆಯ ದಿನವೇ ಅಮ್ಮ ತೀರಿಹೋದಳು. ತಂದೆ ಇಲ್ಲದ ನಾನು, ಮತ್ತೇ ಚಿಕ್ಕಮ್ಮನೊಂದಿಗೆ ಬೆಂಗಳೂರಿಗೆ ಬಂದು ತಲುಪಿದೆ. ಅಮ್ಮ ತೀರಿದಾಗ ಅಂತಿಮ ಸಂಸ್ಕಾರಕ್ಕೆಂದು ಬಂದಿದ್ದ ಚಿಕ್ಕಮ್ಮ ಮತ್ತು ಅವರ ತಮ್ಮ ನನ್ನನ್ನು ಬಲವಂತವಾಗಿಯೇ ಕರೆದುಕೊಂಡು ಬಂದಿದ್ದರು. ನಾನು ನನ್ನ ವಿನಾಶದ ಅಂಚಿಗೆ ಬಂದಂತಾಗಿತ್ತು.

ಅವಳನ್ನು ಸಂತೈಸುತ್ತ “ ಅಮೃತಾ, ನೀನು ತುಂಬಾ ಸಂಘರ್ಷದ ಬದುಕನ್ನು ಬಾಳುತ್ತಿರುವೆ. ಹಿಂದೆ ನಡೆದಿರುವ ಕಹಿ ಘಟನೆಗಳನ್ನು ಮರೆತುಬಿಡು. ಭವಿಷ್ಯದ ನಿರ್ಮಾಣ ಮಾಡಿಕೊಳ್ಳುವುದು ನಿನ್ನ ಕೈಯಲ್ಲೇ ಇದೆ…” ಎಂದನು ಆಗಂತುಕ.

ಅಮೃತಾ ಕಣ್ಣೀರಿನಿಂದ ಒದ್ದೆಯಾದ ರೆಪ್ಪೆಗಳನ್ನು ಒರೆಸಿಕೊಳ್ಳುತ್ತಾ “ಅದು ಹೇಗೆ?” ಎಂದು ಕೇಳಿದಳು.

“ಎರಡು ಮಾರ್ಗಗಳಿವೆ. ಆದರೆ ಅವುಗಳನ್ನು ಅನುಸರಿಸುವ ಧೈರ್ಯವಿರಬೇಕು. ಅಳುತ್ತಾ ಕುಳಿತುಕೊಳ್ಳುವುದರಿಂದ ಏನೂ ಉಪಯೋಗವಿಲ್ಲ. ಈ ಪ್ರಪಂಚ ಅಳುವವರನ್ನು ಕಂಡರೆ ಇನ್ನೂ ಅಳಿಸುತ್ತದೆ, ತುಳಿಸಿಕೊಳ್ಳುವವರನ್ನು ಕಂಡರೆ ಇನ್ನೂ ಜೋರಾಗಿ ತುಳಿಯುತ್ತೆ. ಉದಾಹರಣೆಗೆ, ನೀನು ಪತಿಯ ಭಯದಿಂದಾಗಿ ಪ್ರತಿದಿನ ಆಫೀಸಿನ ಅಂಗಳದಲ್ಲಿ ಅವನಿಗೋಸ್ಕರ ಕಾಯುತ್ತ ನಿಲ್ಲುವೆ, ಅವನು ಪ್ರತಿದಿನ ಕಾಯಿಸುತ್ತಲೇ ಇರುತ್ತಾನೆ. ಆದ್ದರಿಂದ ಮೊದಲು ನೀನು ಅವನಿಗೆ ಭಯಪಡುವುದನ್ನು ಬಿಟ್ಟು ಬಿಡು. ನಿನ್ನ ಕಲೀಗ್‌ಗಳಂತೆ ಸಹಜವಾಗಿ ಇರುವುದನ್ನು ರೂಢಿ ಮಾಡಿಕೊ. ಬೇಕೆನಿಸಿದಾಗ ಬೇರೆಯವರಿಂದ ಲಿಫ್ಟ್ ತೆಗೆದುಕೋ. ಮನುಷ್ಯರೇ ಮನುಷ್ಯರಿಂದ ಸಹಕಾರ ಪಡೆಯದಿದ್ದರೆ ಹೇಗೆ….?” ಎಂದನು.

“ಅಯ್ಯೋ ಲಿಫ್ಟ್ ತೆಗೆದುಕೊಳ್ಳುವುದೇ? ಅದು ಎಂದಿಗೂ ಸಾಧ್ಯವಿಲ್ಲ. ಅವನು ಮೊದಲೇ ಸಂಶಯದ ಪಿಶಾಚಿ!” ಎಂದು ಚಡಪಡಿಸಿದಳು.

“ಸಂಶಯ ಪಿಶಾಚಿ” ಕಾರ್‌ನ ಮಿರರ್‌ನಲ್ಲಿ ಅಮೃತಾಳನ್ನು ನೋಡಿ ನಸುನಕ್ಕ.

“ಪಾಪ, ಇಂತಹ ಅದ್ಭುತ ಸೌಂದರ್ಯವತಿಯನ್ನು ಹೆಂಡತಿಯಾಗಿ ಪಡೆದಿದ್ದಕ್ಕೆ ರಾತ್ರಿ ಪೂರ್ತಿ ನಿನ್ನನ್ನು ಕಾಯುತ್ತಲೇ ಇರುತ್ತಾನೇನೋ….! ನಿನ್ನನ್ನು ನೋಡಿದರೆ ಎಂತಹ ಗಂಡಸಿನ ಮನಸ್ಸೂ ಚಡಪಡಿಸಬೇಕು. ಹೀಗಿರಲು, ಅವನು ಸಂಶಯಪಡುವುದರಲ್ಲಿ ಸಂದೇಹವೇ ಇಲ್ಲ. ಈಗಲೂ ಕೂಡ ಅವನು ಊರೆಲ್ಲಾ ಸುತ್ತಾಡಿ ನಿನ್ನನ್ನು ಹುಡುಕಾಡುತ್ತಿರಬಹುದು.”

ಹೀಗೆ ಅವನು ತನ್ನನ್ನು, ತನ್ನ ಸೌಂದರ್ಯವನ್ನು ಹೊಗಳಿ ಅಟ್ಟಕ್ಕೇರಿಸುತ್ತಿರಬೇಕಾದರೆ ಅಮೃತಾ ನಾಚಿ ನೀರಾದಳು. ತನ್ನ ಗಂಡನಿಗೆ ಈ ರೀತಿ ಹೊಗಳುವ ಬುದ್ಧಿಯೇ ಇಲ್ಲವಲ್ಲ, ಮೃಗದಂತೆ ಗುಟರಾಯಿಸಿಕೊಂಡು ಬಂದು ದೇಹವನ್ನು ಆಕ್ರಮಿಸಿಕೊಳ್ಳುವುದನ್ನು ಬಿಟ್ಟರೆ ಇನ್ಯಾವುದೇ ಸೂಕ್ಷ್ಮ ಜ್ಞಾನ ಆತನಲ್ಲಿಲ್ಲ ಎಂದುಕೊಂಡಳು.

ಅಮೃತಾ ಮಾತು ಬದಲಾಯಿಸುವ ಉದ್ದೇಶದಿಂದ, “ಇನ್ನೊಂದು ಮಾರ್ಗ ಯಾವುದು?” ಎಂದು ಕೇಳಿದಳು.

“ಆ ರಾಕ್ಷಸನಿಂದ ಶಾಶ್ವತವಾಗಿ ದೂರಾಗುವುದು. ವಿನಾಕಾರಣ ಅವಮಾನ, ಅಪನಿಂದೆ, ಹಿಂಸೆಗಳನ್ನು ಹೇಡಿಯಂತೆ ಸಹಿಸಿಕೊಳ್ಳುವುದನ್ನು ಬಿಟ್ಟು ಅನ್ಯಾಯದ ವಿರುದ್ಧ ಸಿಡಿದು ಎದ್ದೇಳಬೇಕು…” ಅಮೃತಾಳ ಮನೆ ಬಂದಿತ್ತು. ಕಾರಿನಿಂದ ಕೆಳಗೆ ಇಳಿಯುತ್ತಲೇ, “ ಆ ನಿನ್ನ ಮಹಾನ್‌ ಗಂಡನ ಹೆಸರು ಏನು?” ಎಂದ.

“ಸದಾಶಿವ”

“ವಾವ್‌, ಇಟ್ಟುಕೊಂಡಿರೋದು ದೇವರ ಹೆಸರು, ಮಾಡೋದು ಎಲ್ಲ ದೆವ್ವದ ಕೆಲಸವೇ…!” ಎಂದು ವ್ಯಂಗ್ಯವಾಡಿದ.

ಮನೆಯ ಬಾಗಿಲಿಗೆ ಬೀಗ ಹಾಕಿರುವುದನ್ನು ನೋಡಿ, “ನಿನ್ಹತ್ರ ಬೀಗದ ಕೈ ಇದೇ ತಾನೆ? ಮೊದಲು ಬೀಗ ತೆಗೆದು ನಂತರ ನಿನ್ನನ್ನು ಒಳಗೆ ಸಾಗಿಸುತ್ತೇನೆ,” ಎಂದು ಹಾಸ್ಯದಿಂದ ಹೇಳಿದ.

ಅವನಿಗೆ ಬೀಗದ ಕೈ ಕೊಟ್ಟಾಗ, ಇನ್ನು ಅವನಿಂದ ದೂರಾಗಬೇಕಲ್ಲ, ಮತ್ತೆ ಆ ವಿಕೃತ ಮನುಷ್ಯನೊಂದಿಗೆ ನರಕ ಅನುಭವಿಸಬೇಕಲ್ಲ ಎಂಬ ಭಾವನೆಗಳು ಮನದಲ್ಲಿ ಮೂಡಿದಾಗ ತುಂಬಾ ಭಾವುಕಳಾದಳು. ಆಗ ಮೆಲ್ಲಗೆ “ನಿಮ್ಮ ಪರಿಚಯವೇ ಆಗಲಿಲ್ಲವಲ್ಲ…..?” ಎಂದು ತೊದಲಿದಳು.

ಅಪ್ಯಾಯಮಾನತೆಯಿಂದ ಮುಗುಳ್ನಗುತ್ತ ಅವನು “ಅಮೃತಾ, ನಾನು ನಿನ್ನನ್ನು ಚಿಕ್ಕಂದಿನಿಂದಲೇ ನೋಡುತ್ತಿದ್ದೇನೆ!” ಎಂದನು.

ಇದನ್ನು ಕೇಳಿ ಅಮೃತಾ ಆಶ್ಚರ್ಯಚಕಿತಳಾದಳು. “ಅರೇ ಅದ್ಹೇಗೆ ಸಾಧ್ಯ? ನನಗೆ ನಿಮ್ಮ ಪರಿಚಯವೇ ಇಲ್ಲವಲ್ಲ!”

“ಯಾವತ್ತೂ ಸಿಗದೇ ಇರೋಳು ನೀನು ಅದ್ಹೇಗೆ ಪರಿಚಯಾಗಲು ಸಾಧ್ಯ? ನಾನು ನಿನ್ನ ಜೀವನದ ಹಸಿ ಬಿಸಿ ಅನುರಾಗದ ಅವಿಭಾಜ್ಯ ಅಂಗ. ನಿನ್ನ ತಂದೆ ತೀರಿ ಹೋದ ಮೇಲೆ, ನಿಮ್ಮ ತಾಯಿಗೆ ಆಸರೆಯಾಗಿದ್ದರಲ್ಲ ಮೇಜರ್‌ ಸುಧೀರ್‌ ರೆಡ್ಡಿ, ಅವರ ಮಗ ನಾನು.”

ಅಮೃತಾ ರೋಮಾಂಚಿತಳಾದಳು “ಅಂದರೆ…. ಅಭಿಷೇಕ್‌ ರೆಡ್ಡಿ!”

“ಹಾಂ, ಸರಿಯಾಗಿಯೇ ಗುರುತಿಸಿದೆ. ನಾನು ಮೊದಲಿನಿಂದಲೂ ಮೈಸೂರು ರೆಜಿಮೆಂಟ್‌ ಸ್ಕೂಲಿನಲ್ಲಿಯೇ ಇದ್ದೆ. ರಜಾ  ದಿನಗಳಲ್ಲಿ ಶಿವಮೊಗ್ಗೆಗೆ ಬಂದಾಗೆಲ್ಲಾ ನಿನ್ನನ್ನು ನೋಡುತ್ತಲಿದ್ದೆ. ಮನದಲ್ಲಿಯೇ ನಿನ್ನನ್ನು ಇಷ್ಟಪಡತೊಡಗಿದ್ದೆ.

“ನಿಮ್ಮ ತಂದೆ ತೀರಿಹೋದ ಮೇಲೆ, ಎರಡು ಮನೆಗಳು ಸರ್ವನಾಶ ಆಗಿದ್ದಂತೂ ಸತ್ಯ. ನಿನ್ನ ತಾಯಿಗೇನೋ ನನ್ನ ತಂದೆ ಆಸರೆಯಾದರು ನಿಜ. ಆದರೆ ನನ್ನ ತಾಯಿಯ ಸ್ಥಿತಿ…. ಯಾರೊಬ್ಬರ ಆಸರೆಯೂ ಸಿಗಲಿಲ್ಲ. ಆಗಲೇ ನನಗೆ ಗೊತ್ತಾಯಿತು, ಗಂಡನಿಂದ ದೂರಾದ ಹೆಣ್ಣಿನ ನೋವು ಒಬ್ಬ ವಿಧವೆಗಿಂತಲೂ ಕ್ರೂರಾಗಿರುತ್ತದೆ ಎಂದು. ಸಾವಿನ ಕಟು ಸತ್ಯವನ್ನು ಮನುಷ್ಯ ಹೇಗೋ ಏನೋ ಸಹಿಸಿಕೊಂಡುಬಿಡಬಹುದು, ಅದರೆ ಜೀವಂತವಿರುವ ಪತಿಯನ್ನು ಪರಸ್ತ್ರೀಯ ಆಶ್ರಯದಲ್ಲಿ ಬಿಟ್ಟು ಪತಿತ್ಯಾಗ ಮಾಡುವುದು ಇದೆಯ್ಲಾ, ಅದೊಂದು ಭಯಾನಕ ಹಿಂಸೆ.

“ಆದ್ದರಿಂದ, ಯಾವ ಹೆಣ್ಣಿನಿಂದ ತನ್ನ ಸಿಂಧೂರ ದೂರವಾಯಿತೋ, ಅದೇ ಹೆಂಗಸಿನ ಮಗಳನ್ನು ನಾನು ಇಷ್ಟಪಡುತ್ತಿದ್ದೇನೆ, ಅವಳನ್ನೇ ಮದುವೆಯಾಗಬಯಸುತ್ತೇನೆ ಎಂದು ಅಮ್ಮನಿಗೆ ನಾನು ಹೇಳುವುದಾದರೂ ಹೇಗೆ ಎಂದು ತಿಳಿಯದಾಯಿತು. “ನಿನ್ನನ್ನು ನನ್ನ ಬಾಳಸಂಗಾತಿಯನ್ನಾಗಿ ಪಡೆದುಕೊಳ್ಳಬೇಕೆಂಬ ನನ್ನ ಕನಸು ಕ್ಷಣಾರ್ಧದಲ್ಲಿ ನುಚ್ಚುನೂರಾಗಿ ಹೋಯಿತು. ಆದರೆ ಈಗ ಇದೊಂದು ವಿಚಿತ್ರ ವಿಡಂಬನೆಯೇ ಸರಿ. ಇವತ್ತು ನೀನು ಸಿಕ್ಕಿರುವೆ, ಅದು ಇಂತಹ ವಿಷಮ ಸಂಕಷ್ಟಗಳ ಸರಮಾಲೆಯಲ್ಲಿ! ನೀನು ಮದುವೆಯಾಗಿ ಸುಖವಾಗಿ ಇದ್ದಿದ್ದರಾದರೂ ನನಗೆ ನೆಮ್ಮದಿ ಇರುತ್ತಿತ್ತೇನೋ? ಆದರೆ ನಿನ್ನ ಸಂಘರ್ಷಮಯ ಬದುಕು ನೋಡಿದರೆ ನನಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಮೊದಲು ನೀನು ಭಯಪಡುವುದನ್ನು ಬಿಡು. ಅದೂ ಅಲ್ಲದೆ ಅನ್ಯಾಯವನ್ನು ಯಾವ ಕಾರಣಕ್ಕೂ ಸಹಿಸಬಾರದು ಎಂದು ನಿರ್ಧರಿಸು,” ಎಂದು ಅಭಿಷೇಕ್‌ ಸಾದ್ಯಂತವಾಗಿ ವಿವರಿಸಿದ.

ಈ ಅನಿರೀಕ್ಷಿತ ರಹಸ್ಯನ್ನು ಅರಿತು, ಅಮೃತಾಳ ಹೃದಯ ಉತ್ಸಾಹದ ಚಿಲುಮೆಯಂತಾಯಿತು. ತಬ್ಬಿಬ್ಬಾಗಿ ಅವನನ್ನೇ ನೋಡತೊಡಗಿದಳು. ಅಲ್ಲಿ ಕಾಲವೇ ಸ್ತಂಭಿಸಿದಂತಹ ವಾತಾರಣ ಮೂಡಿತ್ತು. ಸ್ವಲ್ಪ ಸಮಯದ ನಂತರ “ಬಹುಶಃ ನೀನು ಅವತ್ತೇ ಧೈರ್ಯದಿಂದ ನಿನ್ನ ಪ್ರೇಮವನ್ನು ನನಗೆ ತಿಳಿಸಿದ್ದರೆ…?” ಎಂದು ಅಮೃತ ಕನವರಿಸಿದಳು. ಬೀಗ ತೆರೆದು ಬಂದ ಅಭಿಷೇಕ್‌, ಅಮೃತಾಳನ್ನು ತನ್ನ ಬಾಹುಗಳಲ್ಲಿ ಎತ್ತಿಕೊಂಡಾಗ ಸದಾಶಿವನ ಕಾರ್‌ ಅಲ್ಲಿಗೆ ಬಂದು ತಲುಪಿತು. ಇವರಿಬ್ಬರೂ ಒಂದು ಸಲ ತಂತಮ್ಮ ಮುಖ ನೋಡಿಕೊಂಡರು, ಇನ್ನೊಂದು ಸಲ ಸದಾಶಿವನ ಮುಖ ನೋಡಿದರು. ಸದಾಶಿವ ತನ್ನ ಹೆಂಡತಿಯನ್ನು ಇನ್ನೊಬ್ಬನ ಬಾಹುಗಳಲ್ಲಿ ಕಂಡು ತಕ್ಷಣ ಸಿಡಿದುಹೋದನು. ಕೆಲಕ್ಷಣ ಇಲ್ಲಿ ಏನು ನಡೆಯುತ್ತಿದೆ  ಎಂದೇ ಅವನಿಗೆ ಅರ್ಥವಾಗಲಿಲ್ಲ.

ಮರುಕ್ಷಣದಲ್ಲೇ ಸದಾಶಿವ ಘರ್ಜಿಸತೊಡಗಿದ, “ಏನು ನಡೀತಾ ಇದೆ ಇಲ್ಲಿ? ಅವಳು ನನ್ನ ಹೆಂಡತಿ! ಅವಳನ್ನು ನಿನ್ನ ಬಾಹುಗಳಲ್ಲಿ ಎತ್ತಿಕೊಳ್ಳುವುದು ಎಂದರೆ ಏನು ಅರ್ಥ?”

ಅವನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಭಿಷೇಕ್‌, ಅಮೃತಾಳನ್ನು ಅವನತ್ತ ತಿರುಗಿಸುತ್ತಾ, “ತಗೊಳ್ಳಿ ಹಾಗಾದ್ರೆ, ನಿಮ್ಮ ಹೆಂಡತಿಯನ್ನು ನೀವೇ ಸಂಭಾಳಿಸಿರಿ. ರಸ್ತೆಯ ಮೇಲೆ ಸಿಕ್ಕಿಹಾಕಿಕೊಂಡವಳನ್ನು ಸಂರಕ್ಷಿಸಿದೆನಲ್ಲ, ತಪ್ಪಾಯಿತೇನೋ…?” ಎಂದು ಮಾತಿನಲ್ಲೇ ಏಟು ಕೊಟ್ಟನು.

ಸದಾಶಿವ ಹುಬ್ಬು ಗಂಟಿಕ್ಕಿಕೊಂಡ. ಅವನು ಇನ್ನಷ್ಟು ಕ್ರೋಧದಿಂದ ಕುದಿಯತೊಡಗಿದ. ಕಣ್ಣುಗಳಲ್ಲೇ ಕೆಂಡ ಕಾರತೊಡಗಿದ. “ರಸ್ತೆಯ ಮೇಲಾ….? ಏಯ್‌, ಯಾಕೆ? ನೀನು ಯಾಕೆ ಹೊರಗೆ ಬಂದಿದ್ದು? ಕಾಂಪೌಂಡಲ್ಲೇ ವೆಯ್ಟ್ ಮಾಡೋಕೆ ಆಗಲಿಲ್ವಾ? ನಾನು ನೋಡಿದ್ರೆ ಅಲ್ಲಿ ಊರೆಲ್ಲ ನಿನ್ನನ್ನು ಹುಡುಕಿಕೊಂಡು ತಿರುಗಾಡುತ್ತಿದ್ರೆ, ಇಲ್ಲಿ ನೀನು…?”

ಅವನು ಇನ್ನೂ ಏನೋ ಹೇಳೋದಿಕ್ಕೆ ಮುಂಚೆಯೇ ಅಭಿಷೇಕ್‌ ಮಧ್ಯೆ ಮಾತನಾಡಿದ, “ಹಲೋ, ಈ ವಿಚಾರಣೆಗಳನ್ನೆಲ್ಲ ಮನೆಯ ಒಳಗಡೆ ಮಾಡಿಕೊಳ್ಳಿ. ಮೊದಲು ಇವರನ್ನು ಒಳಗೆ ಕರೆದುಕೊಂಡುಹೋಗಿ. ಡಾಕ್ಟರ್‌ ಇವರಿಗೆ ಹೆಜ್ಜೆಯೂರಬಾರದು ಎಂದು ಹೇಳಿದ್ದಾರೆ,” ಎಂದು ದಬಾಯಿಸಿದ. ಮನೆಯ ಒಳಗೆ ಪ್ರವೇಶಿಸಿದ ನಂತರ ಸದಾಶಿವ ಅಮೃತಾಳನ್ನು ಸೋಫಾದ ಮೇಲೆ ಆಲ್ ಮೋಸ್ಟ್ ಎಸೆದುಬಿಟ್ಟ. ನೋವಿನಿಂದ ಉಯಿಲಿಟ್ಟಳು ಅಮೃತಾ. ನೆಂದ ಬಟ್ಟೆಯಲ್ಲಿ ಥರಥರನೆ ನಡುಗತೊಡಗಿದಳು. ಮೈತುಂಬಾ ಜ್ವರ ಬೇರೆ ತಗುಲಿಕೊಂಡಿತ್ತು, ಕಾಲಿನ ನೋವು ಸಹಿಸಲಸಾಧ್ಯವಾಗಿತ್ತು. ಮೇಲಾಗಿ ಈ ನಿಕೃಷ್ಟ ಗಂಡನ ಹಿಂಸೆಯ ವರ್ತನೆಗಳು. ಆಗ ಅಭಿಷೇಕ್‌ ಹೇಳಿದ. ಭಯಪಡಬೇಡ ಎಂಬ ಮಾತು ನೆನಪಾಯಿತು.

“ಆಫೀಸ್‌ ಕಾಂಪೌಂಡಲ್ಲೇ ವೆಯ್ಟ್ ಮಾಡೋದು ಬಿಟ್ಟು ಏಕೆ ಬಂದೆ ನೀನು?” ಎಂದು ಮತ್ತೆ ಗರ್ಜಿಸಿದ್ದ ಅವಳ ಗಂಡ.

“ನೋಡಿ, ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೇಳುತ್ತೇನೆ, ಆದರೆ ಅದಕ್ಕೂ ಮೊದಲು ತೊಯ್ದಿರೋ ಈ ಬಟ್ಟೆ ಬದಲಾಯಿಸಿ, ನನಗೆ ತಗುಲಿರುವ ಜ್ವರಕ್ಕೆ ಒಂದು ಮಾತ್ರೆ ನುಂಗಿ ಬರುತ್ತೇನೆ ಇರಿ.” ಎಂದು ಅಷ್ಟೇ ಶಾಂತವಾಗಿ ಹೇಳಿದಳು. ಅವಾಕ್ಕಾದ ಸದಾಶಿವ, `ಒಂದು ಮಾತು ಜೋರಾಗಿ ಹೇಳಿದರೆ ಸಾಕು ಗಡಗಡನೆ ನಡುಗುತ್ತಿದ್ದ ಇವಳು ಅದ್ಹೇಗೆ ಮಾರುತ್ತರ ಕೊಡುವಷ್ಟು ಧೈರ್ಯವಂತಳಾದಳು? ಎಷ್ಟೊಂದು ಶಾಂತಿ ಮತ್ತು ಸಂಯಮದಿಂದ ಇರುವವಳು! ಇದೇನು ಇವತ್ತು ನನಗೇ ಬುದ್ದಿ ಹೇಳುವಂತಾಗಿದ್ದಾಳಲ್ಲ…!’ ಎಂದು ಯೋಚಿಸಿತೊಡಗಿದ.

ಚಂಡಮಾರುತ ಬೀಸುವುದಕ್ಕೂ ಮೊದಲು ಆವರಿಸುವ, ಗಂಯ್ ಎನ್ನುವ ನಿಶ್ಯಬ್ದತೆ ಆವರಿಸಿತ್ತು ಆ ಮನೆಯಲ್ಲಿ. ದಿಗ್ಭ್ರಾಂತನಾಗಿದ್ದ ಸದಾಶಿವ, ಅತ್ತಿತ್ತ ತಿರುಗಾಡುತ್ತ ಸ್ಛೋಟಿಸಲು ಸನ್ನದ್ಧನಾಗುತ್ತಿದ್ದ. ಬಟ್ಟೆ ಬದಲಾಯಿಸಿ, ಮಾತ್ರೆ ತಿಂದು ಬಂದು ಅಮೃತಾ ಮೆಲ್ಲಗೆ, “ ಇವತ್ತಿನ ಈ ದುರ್ಘಟನೆಗೆ ನೀವೇ ನೇರೆ ಹೊಣೆಗಾರರು. ಏಕೆಂದರೆ ಆಫೀಸ್‌ ಟೈಂ ಮುಗಿದ ನಂತರ ಅಲ್ಲಿಯೇ ಎರೆಡೆರಡು ಗಂಟೆ ವೆಯ್ಟ್ ಮಾಡುತ್ತಾ ನಿಲ್ಲುವುದೆಂದರೆ ಅಸಾಧ್ಯದ ಮಾತು. ಅದೂ ಅಲ್ಲದೆ ಆ ಟೈಮಿನಲ್ಲಿ ಬಿಲ್ಡಿಂಗ್‌ಬಿಕೋ ಎನ್ನುತ್ತಿರುತ್ತೆ. ಆದ್ದರಿಂದ ಇನ್ನು ಮುಂದೆ 5 ಗಂಟೆ ನಂತರ ಒಂದು ನಿಮಿಷ ಅಲ್ಲಿ ನಿಲ್ಲುವುದಿಲ್ಲ,” ಎಂದು ಖಡಾಖಂಡಿತಾಗಿ ಹೇಳಿದಳು.

ಸದಾಶಿವನೆಂಬ ಪುರುಷ ಸಿಂಹನಿಗೆ ಮರ್ಮಾಘಾತ ಆದಂತಾಯಿತು. “ಒಹ್ಹೊಹೋ, ಹಾಗಾದರೆ ಹಕ್ಕಿಗೆ ರೆಕ್ಕೆ ಬಲಿತಿದೆ ಎಂದಂತಾಯಿತು. ನಾನು ಬರುವಷ್ಟರಲ್ಲಿ  ಸ್ವಲ್ಪ ಲೇಟಾಗಿದ್ದಕ್ಕೆ, ಆ ಲಫಂಗ ನಿನ್ನ ಬ್ರೈನ್‌ ವಾಶ್‌ ಮಾಡಿದ್ದಾನೆಯೇ? ಯಾರವನು? ನಿನ್ನ ಹಳೆಯ ಬಾಯ್‌ಫ್ರೆಂಡಾ?” ಎಂದು ಗುರಾಯಿಸತೊಡಗಿದ.

ಅಮೃತಾ ಕೆಟ್ಟ ಕೋಪದಿಂದ “ರೀ, ಆ ಆಪದ್ಭಾಂದವನ ಬಗ್ಗೆ ಇನ್ನೊಂದೇ ಒಂದು ಮಾತಾಡಿದಿರೋ, ಚೆನ್ನಾಗಿರಲ್ಲ. ಅಕಸ್ಮಾತ್‌ಆ ಆಗಂತುಕ ಸಮಯಕ್ಕೆ ಸರಿಯಾಗಿ ಬಂದು ನನ್ನ ರಕ್ಷಿಸದೇ ಇದ್ದಿದ್ದರೆ, ನಾನು ಶಾಶ್ವತವಾಗಿ ಕಾಲು ಕಳೆದುಕೊಳ್ಳಬೇಕಾಗಿತ್ತು. ಅದು ಗೊತ್ತಾ ನಿಮಗೆ?” ಎಂದು ಸವಾಲು ಹಾಕಿದಳು.

“ಏನೇ, ನನಗೆ ಆವಾಜ್‌ ಹಾಕುತ್ತಿಯಾ? ನನ್ನ ಬಗ್ಗೆ ಗೊತ್ತು ತಾನೇ?” ಎನ್ನುತ್ತಾ ಅಮೃತಾಳ ಮೇಲೆ ಹಲ್ಲೇ ಮಾಡಲು ಕೈ ಎತ್ತಿದ. ಎಚ್ಚೆತ್ತ ಅಮೃತಾ ಸರಕ್ಕನೆ ಅವನ ಕೈಯನ್ನು ಹಿಡಿದು ಹಿಂದಕ್ಕೆ ನೂಕಿದಳು ಮತ್ತು “ನೋಡು, ಇಷ್ಟು ದಿನದವರೆಗೂ ಸಹಿಸಿಕೊಂಡಿದ್ದಾಯಿತು ಇನ್ನು ಮುಂದೆ ಅದೆಲ್ಲ ನಡೆಯುವುದಿಲ್ಲ. ನೀನೇನು ಮನುಷ್ಯನೋ ಅಥವಾ ರಾಕ್ಷಸನೋ…..” ಎಂದಳು ಕಟುವಾಗಿ.

ಸದಾಶಿವ ಅಟ್ಟಹಾಸ ಗೈಯುತ್ತ, “ ನೀನಿನ್ನೂ ನನ್ನ ರಾಕ್ಷಸ ಮುಖವನ್ನು ನೋಡಿಲ್ಲ ಇರು. ನಿನಗೆ ಸುರಸುಂದರ ಗಂಡನೇ ಬೇಕಾಗಿತ್ತೆಂದು, ನನ್ನ ಜೊತೆ ಮದುವೆಯಾಗಲು ನಿರಾಕರಿಸಿದ್ದೆಯಲ್ಲವೇ? ಇವತ್ತು ನಿನ್ನ ಆಪದ್ಭಾಂಧವನನ್ನು ನೋಡಿ ಎಲ್ಲ ಗೊತ್ತಾಯಿತು ಬಿಡು. ನನ್ನನ್ನೇ ಏಮಾರಿಸಬೇಕೆಂದು ನೀವಿಬ್ಬರೂ ಸೇರಿಕೊಂಡು ಈ ದುರ್ಘಟನೆಯ ನಾಟಕವಾಡುತ್ತಿರುವಿರಾ?” ಎಂದು ಹೇಳಿದ.

“ನಾಟಕವೇ!” ಅಕ್ಷರಶಃ ಕಿರುಚಿದ್ದಳು ಅಮೃತಾ.

“ನಾಟಕವನ್ನು ನೀನು ಮತ್ತು ನಿನ್ನ ಅಕ್ಕ ಸೇರಿಕೊಂಡು ಆಡಿರುವಿರಿ. ನಿನ್ನಂತ ದಾನವನಿಗೆ ಒಂದೂ ಕನ್ಯೆ ಸಿಗದಂತಾಗಿತ್ತಲ್ಲ! ಅದಕ್ಕೆ ನನ್ನ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡಿರುವಿರಾ?” ಎಂದಳು. ಸದಾಶಿವ ಬಲೆಯೊಳಗೆ ಸಿಕ್ಕಿಬಿದ್ದ ಹಿಂಸ್ರಪಶುವಿನಂತೆ ಗುಟರಾಯಿಸುತ್ತಿದ್ದ. ಬೆಕ್ಕಿನ ಮರಿಯಂತೆ ಮೆತ್ತಗೆ ಇರುತ್ತಿದ್ದ ತನ್ನ ಹೆಂಡತಿ, ಈಗ ಹುಲಿಯಂತೆ ಗರ್ಜಿಸುತ್ತಿರುವುದನ್ನು ಕಂಡು ಅಯೋಮಯನಾಗಿದ್ದ. ಅವಳನ್ನು ಹೇಗೆ ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂದು ಉಪಾಯ ಹುಡುಕುತಿದ್ದ. ಈಗಾಗಲೇ ಅವಳ ಒಂದು ಕಾಲು ಊನವಾಗಿದೆ, ಇನ್ನೊಂದು ಕಾಲನ್ನೂ ತಿರುಚಿಬಿಟ್ಟರೆ…… ಬೇಡ ಬೇಡ ಮತ್ತೆ ಅವಳು ಎದ್ದು ಓಡಾಡಬಹುದು. ಅಲ್ಲದೇ ಅವಳು ನನ್ನ ಸೇವೆ ಮಾಡಬೇಕೆಂದರೆ ಕೈಕಾಲು ಚೆನ್ನಾಗಿಯೇ ಇರಬೇಕು. ಇಲ್ಲವಾದರೆ ನಾನೇ ಅವಳ ಸೇವೆ ಮಾಡಬೇಕಾಗುತ್ತದೆ. ಹಾಗಾದ್ರೆ ಮುಖದ ಅಂದವನ್ನು ಹಾಳು ಮಾಡಿಬಿಡೋಣ, ಅಂದ್ರೆ ಯಾರು ಇವಳತ್ತ ಆಕರ್ಷಿಸಲ್ಪಡುವುದಿಲ್ಲ. ಮುಖ ಮುಚ್ಚಿಕೊಂಡೇ ಓಡಾಡಬೇಕಾಗುತ್ತೆ ಓಡಾಡಲಿ…ಉಹೂಂ…., ಬೇಡ ಇದೂ ಚೆನ್ನಾಗಿರುವುದಿಲ್ಲ, ಇವಳ ಸೌಂದರ್ಯವೇ ನನ್ನ ಆಸ್ತಿ. ಇವಳನ್ನು ನೋಡುತ್ತಿದ್ದರೇ ಕುಡಿಯದೆಯೇ ಮತ್ತೇರುತ್ತದೆ. ಏನು ಮಾಡಲಿ ಇವಳಿಗೆ….? ಎಂದು ಕೈ ಕೈ ಹೊಸಕಿಕೊಳ್ಳತೊಡಗಿದ. `ಹ್ಞಾಂ! ಇವಳನ್ನು ಕೆಲಸದಿಂದ ಬಿಡಿಸೋದೆ ಸರಿ. ಅಂದರೇನೇ ಸರಿ ಹೋಗುತ್ತಾಳೆ… ಇಲ್ಲ….  ಇದೂ ಸರಿಹೋಗುವುದಿಲ್ಲ. ಇವಳು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದರೇ…! ನನ್ನ ಸಂಬಳವಂತೂ ಕಾರ್‌ ಮತ್ತು ಮನೆ ಸಾಲ ಕಟ್ಟು ಕಂತಿನಲ್ಲೇ ಮುಗಿದು ಹೋಗುತ್ತದೆ, ಇನ್ನು ಮನೆ ನಡೆಸುವುದು ಹೇಗೆ? ಇನ್ನೇನು ಮಾಡುವುದು ಇವಳಿಗೆ? ಎಂದು ಹುಲುಬತೊಡಗಿದನು.

ಹೀಗೆ ಯೋಚಿಸುತ್ತಾ, ಚಿಂತಿಸುತ್ತಾ ಸದಾಶಿವನ ತಲೆ ಸಿಡಿಯತೊಡಗಿತೇ ಹೊರತು, ಯಾವುದೇ ಉಪಾಯ ಹೊಳೆಯಲಿಲ್ಲ. ಮೇಲ್ನೋಟಕ್ಕೆ ಅವನು ಶಾಂತನಾಗಿದ್ದರೂ, ಮನದಲ್ಲಿ ಜ್ವಾಲಾಮುಖಿ ಭುಗಿಲೆದ್ದಿತು. ಹಾವು ಸಾಯಬಾರದು, ಕೋಲು ಮುರಿಯಬಾರದು ಅಂತಹ ಪಾಠ ಕಲಿಸಬೇಕು ಅಮೃತಾಳಿಗೆ ಎಂದುಕೊಳ್ಳುತ್ತಿದ್ದ.

ಒಂದು ದಿನ ಬೆಳಗ್ಗೆ ಎದ್ದ ಕೂಡಲೇ ಅಮೃತಾಳಿಗೆ ವಾಂತಿಯಾಗತೊಡಗಿತು. ಪದೇ ಪದೇ ಆಗತೊಡಗಿದ್ದರಿಂದ, ತಕ್ಷಣ ಡಾಕ್ಟರನ್ನು ಕರೆಸಿ ಪರೀಕ್ಷಿಸಿದಾಗ, ಅವಳು ಗರ್ಭವತಿ ಎಂದು ತಿಳಿಯಿತು. ಈ ವಿಷಯವನ್ನು ಕೇಳಿ ಆಘಾತಗೊಂಡ ಅಮೃತಾ, “ಬೇಡ, ನನಗೆ ಮಗುವೇ ಬೇಡ,” ಎಂದು ಆಕ್ರಂದನವಿಟ್ಟಳು.

ಆದರೆ ಸದಾಶಿವನಿಗೆ ಡಬ್ಬಲ್ ಖುಷಿಯಾಯಿತು. ಒಂದು ತಾನು ತಂದೆಯಾಗುತ್ತಿರುವುದರಿಂದ, ಇನ್ನೊಂದು ಇವಳು ಬಸುರಿ ಎನ್ನುವ ಕಾರಣಕ್ಕೆ. ಅವಳ ಅಟಾಟೋಪವೆಲ್ಲ ನಿಂತು ಹೋಗುತ್ತದೆ ಎಂದು. ಆದರೆ ಕ್ಷಣ ಮಾತ್ರದಲ್ಲಿ ಅನವ ಸಂತಸವೆಲ್ಲ ತಣ್ಣಗಾಯಿತು. ಸಂಶಯದ ಹುಳು ಅವನಲ್ಲಿ ಮಿಸುಕಾಡತೊಡಗಿತು. `ಇವಳು ನನ್ನ ಮಗುವಿಗೆ ತಾಯಿಯಾಗುತ್ತಿದ್ದಾಳೋ ಅಥವಾ ಆ ಆಗಂತುಕನ ಮಗುವಿಗೋ…? ಅದ್ಯಾವಾಗಿನಿಂದ ಅವನನ್ನು ಭೇಟಿಯಾಗುತ್ತಿದ್ದಾಳೋ ಏನೋ?’ ಎಂದು ಚಡಪಡಿಸತೊಡಗಿದ. ಈ ಆಲೋಚನೆ ಮನಸ್ಸಿನಲ್ಲಿ ಬಂದ ಕೂಡಲೇ, ಹೆಡೆ ತುಳಿದ ಸರ್ಪದಂತಾಗಿಬಿಟ್ಟ ಸದಾಶಿವ. ವಿಪರೀತ ಅಸಹನೆಯಿಂದ ಅತ್ತಿಂದಿತ್ತ ಸುಳಿದಾಡತೊಡಗಿದ. ಕೊನೆಗೆ ಒಂದು ಸಿಗರೇಟ್‌ಗೆ ಬೆಂಕಿ ಹಚ್ಚಿ ಅಮೃತಾ ಎದುರಿಗೆ ಕುರ್ಚಿ ಎಳೆದುಕೊಂಡು ಕುಳಿತ. ವಿಪರೀತ ಕೋಪಗೊಂಡಿದ್ದವನಾದ್ದರಿಂದ ಅವನ ಮೈಯೆಲ್ಲ ಅದುರುತ್ತಿತ್ತು. ಕಣ್ಣುಗಳು ಬೆಂಕಿಯ ಉಂಡೆಗಳಂತಾಗಿದ್ದವು. ಉಸಿರಾಟದ ವೇಗ ನಿಯಂತ್ರಣ ತಪ್ಪಿತ್ತು. ಸಿಗರೇಟ್‌ ಹೊಗೆಯನ್ನು ಅಮೃತಾಳ ಮುಖದ ಮೇಲೆ ಉಗುಳುದು ಇವನಿಗೆ ಅಭ್ಯಾಸವಾಗಿತ್ತು. ಸಿಗರೇಟಿನ ದುರ್ಗಂಧದಿಂದ ತಕ್ಷಣ ವಾಂತಿ ಬಂದಂತಾಗಿ, ಅಮೃತಾ ಎದ್ದು ಬಾಥ್‌ರೂವ್‌ನತ್ತ ಹೊರಡಲನುವಾದಳು, ಆದರೆ ಸದಾಶಿವ ಸರಕ್ಕನೆ ಅವಳ ಕೈ ಹಿಡಿದು ಎಳೆದು ಬಲವಂತಾಗಿ ಮತ್ತೆ ಮಂಚದ ಮೇಲೆ ಕೂರಿಸಿದನು. ಸಿಗರೇಟ್‌ನ್ನು ಧೀರ್ಘವಾಗಿ ಎಳೆದು ತನ್ನ ಉಸಿರಲ್ಲಿ ಹೊಗೆ ತುಂಬಿಕೊಳ್ಳುತ್ತಾ ಕೆಂಗಣ್ಣಿನಿಂದ ಅಮೃತಾಳನ್ನು ಗುರಾಯಿಸತೊಡಗಿದ. ಆಗಲೇ ಮನೆಯ ಪರಿಸರದ ನಿಶ್ಯಬ್ದತೆಯನ್ನು ಭೇದಿಸಿಕೊಂಡು ಬಂದಿತು, ಅಮೃತಾಳ ಹೃದಯವಿದ್ರಾವಕ ಆರ್ತನಾದ. ಸಿಗರೇಟಿನ ಹೊಗೆಯೊಂದಿಗೆ ಮಾಂಸ ಸುಟ್ಟಿರುವ ದುರ್ವಾಸನೆ ಮನೆ ತುಂಬಾ ಹರಡಿಕೊಂಡಿತು. ಉರಿಯುತ್ತಿರುವ ಸಿಗರೇಟನ್ನು ಅಮೃತಾಳ ಕೋಮಲ ಕೆನ್ನೆಯ ಮೇಲೆ ಒತ್ತಿದ್ದನು ಸದಾಶಿವ.

“ನಿಜ ಹೇಳು! ನೀನು ಯಾರ ಮಗುವಿಗೆ ತಾಯಿಯಾಗುತ್ತಿರುವೆ? ನನ್ನ ಮಗುವಿಗಾ ಅಥವಾ ಆ ನಿನ್ನ ಆಪದ್ಬಾಂಧವನ ಮಗುವಿಗಾ? ನಿಜ ಹೇಳು!” ಎಂದು ಬಲವಂತ ಮಾಡತೊಡಗಿದ.

ಮನುಷ್ಯನ ಸಂಶಯಗಳಿಗೆ ತಲೆಬುಡವೇ ಇರುವುದಿಲ್ಲ. ವಿವೇಚನಾರಹಿತ ಆಲೋಚನೆಗಳಿಂದ ಅಸುರಕ್ಷತೆಯ ಮನೋಭಾವ ಉಂಟಾಗಿ ಸಂಶಯದ ಹುಳುವಿನ ಉಗಮವಾಗುತ್ತದೆ. ಕೈ ಕೊಸರಿಕೊಂಡು ಎದ್ದು ನಿಂತಳು ಅಮೃತಾ. ಅಸಹ್ಯ ಪಶುವನ್ನು ನೋಡಿದಂತೆ ದೃಷ್ಟಿಸುತ್ತಾ ಕ್ಯಾಕರಿಸಿ ಥೂ…. ಎಂದು ಸದಾಶಿವನ ಮುಖದ ಮೇಲೆ ಉಗುಳುತ್ತಾ, “ಗಂಡ ಅನ್ನುವ ಹೆಸರಿಗೇ ನೀನು ಒಂದು ದೊಡ್ಡ ಕಳಂಕ. ನನಗೆ ಇಷ್ಟ ಇಲ್ಲವಾದರೂ ಕೂಡ ನಿನ್ನನ್ನು ಮದುವೆಯಾದ ದಿನದಿಂದಲೇ, ನೀನೇ ನನ್ನ ಸರ್ವಸ್ವ ಎಂದುಕೊಂಡು ನನ್ನನ್ನು ನಿನಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರೂ ಕೂಡ ಇವತ್ತು ನನ್ನ ಚಾರಿತ್ರ್ಯದ ಬಗ್ಗೆಯೇ ಅನುಮಾನಪಡುತ್ತಿರುವೆಯಲ್ಲ ನೀನೇನು ಮನುಷ್ಯನಾ? ಪ್ರತಿದಿನ ನಿನ್ನ ಲೈಂಗಿಕ ಹಿಂಸೆಗಳನ್ನು ಸಹಿಸಿಕೊಂಡೇ ನನ್ನ ಪತ್ನಿ ಧರ್ಮವನ್ನು ನಿಷ್ಠೆಯಿಂದ ಕಾಪಾಡಿಕೊಂಡು ಬಂದಿದ್ದೇನೆ. ಅಂತಹ ನನ್ನ ಪಾತಿವ್ರತ್ಯಕ್ಕೆ ಇವತ್ತು ನೀನು ಮಸಿ ಬಳಿಯುತ್ತಿರುವೆಯಲ್ಲ…! ಪಾಪಿ…. ಈ ಕ್ಷಣದಿಂದಲೇ ನಾನು ನಿನ್ನನ್ನು ತ್ಯಾಗ ಮಾಡುತ್ತಿದ್ದೇನೆ, ತಿರಸ್ಕರಿಸುತ್ತಿದ್ದೇನೆ. ಭ್ರೂಣದ ರೂಪದಲ್ಲಿ ಮೊಳೆತುಕೊಂಡಿರುವ ಈ ನಿನ್ನ ಅಂಶವನ್ನು, ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ನನ್ನ ಕೈಯಾರೇ ತೆಗೆದುಹಾಕುತ್ತೇನೆ. ನಿನ್ನಂತಹ ರಾಕ್ಷಸನ ಪ್ರತಿರೂಪ ಈ ಭೂಮಿಯ ಮೇಲೆ ಬರುವುದೇ ಬೇಡ. ಇನ್ನು ಮುಂದೆ ನಾನಾಯಿತು, ನನ್ನ ಬದುಕಾಯಿತು, ನೀನು ಮಾತ್ರ ಮುಗಿದು ಹೋದ ಕಥೆ!” ಎಂದು ನಿರ್ದಾಕ್ಷಿಣ್ಯವಾಗಿ ಖಡಾಖಂಡಿತವಾಗಿ ಅಮೃತಾ ಕೂಗಿ ಹೇಳಿದಳು. ಅಮೃತಾ ಹೀಗೆ ಬ್ರಹ್ಮಾಂಡ ಕೋಪದಿಂದ ತನ್ನ ಗಂಡನ ಮೇಲೆ ಕೂಗಾಡುತ್ತಿರುವಾಗಲೇ ದೇವತೆಗಳು ಅವಳ ಶಾಪಕ್ಕೆ ತಥಾಸ್ತು ಎಂದರೇನೋ…? ಅವಳ ಕಿಬ್ಬೊಟ್ಟೆಯಾಳದಲ್ಲಿ ಸುಳಿದಿರುಗಿದಂತಾಗಿತ್ತು. ಸಣ್ಣಗೆ ಶುರುವಾದ ನೋವು ಕ್ಷಣಾರ್ಧದಲ್ಲಿ ಅವಳ ಪ್ರಾಣ ಹೋಗುವಷ್ಟು ಹಿಂಸಿಸತೊಡಗಿತು. ಸಹಿಸಿಕೊಳ್ಳಲಾಗದೆ ನೆಲದ ಮೇಲೆ ಕುಸಿದುಬಿದ್ದು, ಹೊಟ್ಟೆ ಹಿಡಿದುಕೊಂಡು ವಿಲವಿಲ ಒದ್ದಾಡತೊಡಗಿದಳು.

ಸದಾಶಿವ ದಿದ್ಭ್ರಾಂತನಾಗಿಹೋದ. ತನ್ನ ಅತಿರೇಕದ ಪರಿಣಾಮ ಇಷ್ಟೊಂದು ಕ್ರೂರವಾಗಿದ್ದೀತೆಂದು ಅವನು ಯೋಚಿಸಿಯೇ ಇರಲಿಲ್ಲ. ವಿಪರೀತ ಪೊಸೆಸಿವ್ ಆಗಿದ್ದರಿಂದ ಪರಿಸ್ಥಿತಿ ಕೈಮೀರಿಹೋಗಿತ್ತು. ಸಿಗರೇಟಿನ ಬೆಂಕಿಯಿಂದ ಸುಟ್ಟ ಪಾಶವೀಕೃತದಿಂದ ಆದ ಆಘಾತಕ್ಕೆ ಅಮೃತಾಳ ಗರ್ಭಪಾತವಾಗಿತ್ತು. ಗಾಬರಿಗೊಂಡ ಸದಾಶಿವ ಅಳನ್ನು ಎತ್ತಿ ಕೂರಿಸಲೆಂದು ಸ್ಪರ್ಷಿಸಿದ್ದಷ್ಟೇ, ಮತ್ತೆ ಅಮೃತಾ ಗರ್ಜಿಸಿದಳು, “ಏಯ್‌ ಪಾಪಿ, ನನ್ನನ್ನೇನಾದ್ರೂ ಮುಟ್ಟಿದೆಯಾದರೆ ಎಚ್ಚರ!”

ಭಯಭೀತನಾದ ಸದಾಶಿವ ತೆಪ್ಪಗೆ ಹಿಂದೆ ಸರಿದನು. ಅಮೃತಾಳಿಗೆ ರಕ್ತಸ್ರಾವ ಆಗತೊಡಗಿತ್ತು. ಅಕ್ಷರಶಃ ಅವಳು ರಕ್ತದ ಮಡುವಿನಲ್ಲೇ ಬಿದ್ದು ಒದ್ದಾಡುತ್ತಿದ್ದಳು. ಕೆಲಕ್ಷಣಗಳ ನಂತರ ಅಪರಿಮಿತ ನೋವಿನಿಂದ ತೊಳಾಡಿ, ಒದ್ದಾಡಿ ಧರಿಸಿರುವ ಬಟ್ಟೆಯೆಲ್ಲ ಸಂಪೂರ್ಣ ರಕ್ತದಿಂದ ಒದ್ದೆಯಾದ ನಂತರ ಅಮೃತಾ ಗಹಗಹಿಸಿ ನಗತೊಡಗಿದಳು. ಅಟ್ಟಹಾಸದಿಂದ ನಗುತ್ತಲೇ, “ಏಯ್‌ ಪಾಪಿ ನೋಡು, ನಿನ್ನ ಪಾಪದ ಪಿಂಡದಿಂದ ಈಗ ನನಗೆ ಮುಕ್ತಿ ದೊರೆಯಿತು” ಎಂದು ರೋದಿಸತೊಡಗಿದಳು.

ಅದೇ ಸಮಯದಲ್ಲಿ ಕೆಲಸಕ್ಕೆಂದು ಮನೆಗೆಲಸದವಳು ಒಳಗೆ ಬಂದುಬಿಟ್ಟಳು. ರಕ್ತದಮಡುವಿನಲ್ಲಿ ಅರೆಪ್ರಜ್ಞಾಸ್ಥೆಯಲ್ಲಿ ಬಿದ್ದಿದ್ದ ಮನೆಯ ಯಜಮಾನಿಯನ್ನು ಕಂಡು ಅಳಿಗೆಲ್ಲಾ ಅರ್ಥವಾಗಿ ಹೋಯಿತು. ಮನೆಯ ಯಜಮಾನನ ಹೇಯ ನಡವಳಿಕೆಗಳು ಅವಳಿಗೆ ತಿಳಿದೇ ಇತ್ತು. ಕೆಲಸದವಳು ಇದೇ ಸಮಯಕ್ಕೆ ಬಂದಿರುವುದನ್ನು ಕಂಡು ಸದಾಶಿವನಿಗೆ ಭಾರೀ ಆಘಾತವೇ ಆಯಿತು. ಅವನು ಅಳಿಗೆ ಇನ್ನೇನು ಸಮಜಾಯಿಷಿ ಹೇಳಬೇಕು ಎನ್ನುಷ್ಟರಲ್ಲಿ, ಕೆಲಸದವಳು ಮನೆಯ ಅಂಗಳಕ್ಕೆ ಬಂದು ಬಾಯಿ ಬಾಯಿ ಬಡಿದುಕೊಂಡು ಭಾರಿ ಗುಲ್ಲೆಬ್ಬಿಸಿ ಅಕ್ಕಪಕ್ಕ, ನೆರೆಹೊರೆಯವರೆಲ್ಲ ಅಲ್ಲಿ ಬಂದು ಜಮಾಯಿಸುವಂತೆ ಮಾಡಿದ್ದಳು. ಮುಂದಿನ ಕೆಲವು ಗಳಿಗೆಯಲ್ಲಿಯೇ ಸದಾಶಿವ ಸೆರೆಮನೆ ಕಂಬಿ ಎಣಿಸುತ್ತಿದ್ದರೆ, ಅಮೃತಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಡಾಕ್ಟರುಗಳ ಆರೈಕೆಯಲ್ಲಿ ಸುರಕ್ಷಿತವಾಗಿ ದಾಖಲಾಗಿದ್ದಳು.

ಎರಡು ವಾರಗಳು ಕಳೆದು ಹೋದವು. ಅದೊಂದು ಭಾನುವಾರ ರಿಟೈರ್ಡ್ ಮೇಜರ್‌ ಜನರಲ್ ಸುಧೀರ್‌ರೆಡ್ಡಿ, ತಮ್ಮ ಎದುರಿಗೆ ನಿಂತಿರುವ, ಗಂಧರ್ವ ಕನ್ಯೆಯಂತಹ, ಅಪ್ರತಿಮ ಸುಂದರ ತರುಣಿಯನ್ನು ಗುರುತಿಸಿ ಆಶ್ಚರ್ಯ, ಆನಂದ ತುಂದಿಲರಾಗಿದ್ದರು. “ನೀನು ಅಮೃತಾ ಅಲ್ಲವೇ? ನನ್ನ ಪ್ರಾಣ ಸ್ನೇಹಿತ ಅರವಿಂದ ಶೆಟ್ಟಿಯ ಮಗಳು…” ಎನ್ನುತ್ತಾ ತಮ್ಮ ಹರ್ಷವನ್ನು ಹೊರಚೆಲ್ಲುತ್ತಿದ್ದರು.

“ಹೌದು ಅಂಕಲ್, ನಾನು ಅದೇ ಅಮೃತಾ, ಇನ್ನು ಮೇಲೆ ಶಾಶ್ವತವಾಗಿ ನಿಮ್ಮ ಮನೆಯಲ್ಲಿಯೇ ಇರಬೇಕು ಅನ್ಕೊಂಡಿದೀನಿ….” ಎನ್ನುತ್ತಾ ತಡವರಿಸಿದಳು. ಅವಳ ಮಾತಿಗೆ ಪ್ರತ್ಯುತ್ತರವಾಗಿ ಸುಧೀರ್‌ ತಮ್ಮ ಬಾಹುಗಳನ್ನು ಅವಳತ್ತ ಚಾಚುತ್ತ, “ ಅಂಕಲ್ ಅನ್ನಬೇಡ ಮಗಳೇ, ಇನ್ನು ಮುಂದೆ ಡ್ಯಾಡಿ ಎಂದೇ ಕೂಗು. ಅಭಿಷೇಕ್‌ ನಿನ್ನ ಬಗ್ಗೆ ಮತ್ತು ತನ್ನ ಪ್ರೀತಿಯ ಬಗ್ಗೆ ಎಲ್ಲವನ್ನು ನನಗೆ ತಿಳಿಸಿದ್ದಾನೆ,” ಎಂದರು. ತುಂಬಾ ಭಾವುಕಳಾದ ಅಮೃತಾ ತಂದೆಯ ರೂಪದಂತೆಯೇ ಕಂಡ ಸುಧೀರ್‌ರ ಬಾಹುಗಳಲ್ಲಿ ಪುಟ್ಟ ಮಗುವಿನಂತೆ ಲೀನವಾದಳು. ಇವರ ಧ್ವನಿ ಕೇಳಿದ ಅಭಿಷೇಕ್‌ ತನ್ನ ರೂಮಿನಿಂದ ಆಚೆಗೆ ಬಂದ. ಅತ್ಯಾಶ್ಚರ್ಯಗಳಿಂದ ಅವನು ಅಮೃತಾಳನ್ನೇ ನೋಡುತ್ತಾ ನಿಂತುಬಿಟ್ಟ.

ಅಭಿಷೇಕ್‌ನನ್ನು ಕಂಡು ಅವನತ್ತ ಸಾವರಿಸಿ ಬಂದ ಅಮೃತಾ, “ನಾನು ದೃಢಸಂಕಲ್ಪ ಮಾಡಿ, ರಾಕ್ಷಸನಂತಿದ್ದ ಆ ಗಂಡನನ್ನು ಶಾಶ್ವತವಾಗಿ ತ್ಯಜಿಸಿ ನಿನ್ನ ಬಳಿ ಬಂದಿದ್ದೇನೆ. ನೀನಿನ್ನೂ ನನ್ನನ್ನು ಪ್ರೀತಿಸುತ್ತಿದ್ದರೇ….”

ಇನ್ನೂ ಅವಳ ಮಾತು ಮುಗಿದಿರಲಿಲ್ಲ, ಅಷ್ಟರಲ್ಲಿ ಅಭಿಷೇಕ್‌ ಅವಳ ಕೈ ಹಿಡಿದು ಬರಸೆಳೆದು ಬಿಗಿದಪ್ಪಿಕೊಂಡ. ಈ ಆಕಸ್ಮಿಕ ಸಮ್ಮಿಲನವನ್ನು ಕಂಡ ಹಿರಿಯ ಜೀವ ಸಂತೋಷಪಡುತ್ತ ಬಹುಕಾಲ ಚೆನ್ನಾಗಿ ಬಾಳಿ ಬದುಕಲಿ ಎಂದು ಮನಸಿನಲ್ಲಿಯೇ ಹಾರೈಸಿದರು. ನಂತರ ಕೆಲವೇ ದಿನಗಳಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಂಡು, ಕಾನೂನು ರೀತ್ಯ ಅಮೃತಾ ಮತ್ತು ಅಭಿಷೇಕ್

ವಿವಾಹವಾದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ