ನಾನು ಎವೆಯಿಕ್ಕದೆ ನೋಡುತ್ತಿದ್ದ ಆ ಅದ್ಭುತ ಸುಂದರ ಮಹಿಳೆ ಅಚಾನಕ್ಕಾಗಿ ತನ್ನ ಕುರ್ಚಿಯಿಂದ ಎದ್ದು ನನ್ನತ್ತಲೇ ವೈಯ್ಯಾರದಿಂದ ಬಂದು ಮಾದಕವಾಗಿ ನಕ್ಕಾಗ, ಅಂತಹ ಏರ್‌ ಕಂಡೀಷನ್ಡ್ ಬ್ಯಾಂಕ್ವೆಟ್‌ ಹಾಲ್‌ನಲ್ಲೂ ನನ್ನ ಮೈ ಬೆವರೊಡೆದಿತ್ತು.

ನನ್ನ ಗೆಳೆಯ ವಿವೇಕ್‌ನ ತಮ್ಮನ ಮದುವೆಯ ರಿಸೆಪ್ಷನ್‌ ಇತ್ತು. ಆ ಪಾರ್ಟಿಗೆ ಇನ್ನೂ ಸಾಕಷ್ಟು ಜನ ಬಂದಿರಲಿಲ್ಲ. ಆ ಮಹಿಳೆ ಅಚಾನಕ್ಕಾಗಿ ಎದ್ದು ನನ್ನ ಬಳಿ ಬಂದದ್ದು ಅಲ್ಲಿರುವ ಎಲ್ಲಾ ಜನರ ಗಮನಕ್ಕೆ ಬಂದಿರುವುದಂತೂ ಗ್ಯಾರಂಟಿ.

“ಹಾಯ್‌ ಮಿಸ್ಟರ್‌ ರವಿ, ನಾನು ಸೀಮಾ,” ಅತ್ಯಂತ ಸಮೀಪ ಬಂದು ನಸುನಗುತ್ತಲೇ ತನ್ನ ಪರಿಚಯ ಮಾಡಿಕೊಂಡಳು. ನಾನು ಅವಳನ್ನು ಗೌರವಿಸಲೆಂದೇ, ಕುರ್ಚಿಯಿಂದ ಎದ್ದು ನಿಂತೆ. ನಂತರ ತಡರಿಸುತ್ತ, “ನಿಮಗೆ ನನ್ನ ಪರಿಚಯವಿದೆಯೇ?” ಎಂದು ಅಚ್ಚರಿಯಿಂದ ಕೇಳಿದೆ.

“ಹೌದು, ನನ್ನ ಗೆಳತಿಯೊಬ್ಬಳ ಪತಿ ನಿಮ್ಮ ಕಂಪನಿಯಲ್ಲೇ ಕೆಲಸ ಮಾಡುತ್ತಾನಂತೆ. ಅವರೇ ಒಂದು ಸಲ ಕ್ಲಬ್‌ನಲ್ಲಿ ನಿಮ್ಮ ಬಗ್ಗೆ ಹೇಳಿದ್ದರು.”

“ಓಕೆ….ಓಕೆ…..ಹಾಂ…. ಅವರೇ ನಿಂತುಕೊಂಡೇ ಇದ್ದೀರಲ್ಲ! ಕುಳಿತುಕೊಳ್ಳಿ ಪ್ಲೀಸ್‌.”

“ಥ್ಯಾಂಕ್ಸ್, ನೀವು ಹೇಳಿದ ಮೇಲೆ ಕುಳಿತುಕೊಳ್ಳದೆ ಇರೋಕಾಗುತ್ಯೆ?” ಎಂದು ಮಾದಕವಾಗಿ ನುಲಿಯುತ್ತ ಹೇಳಿದ ಅವಳು ನನ್ನ ಕಣ್ಣುಗಳನ್ನೇ ದಿಟ್ಟಿಸುತ್ತಿದ್ದಳು.

“ಓಹ್‌, ದೊಡ್ಡ ಮಾತು…. ಆದ್ರೆ ಸೀಮಾ ಇಫ್‌ ಯು ಡೋಂಟ್‌ ಮೈಂಡ್‌…. ನಿಮ್ಮನ್ನು ನೋಡ್ತಾ ಇದ್ದರೆ ನೋಡುತ್ತಲೇ ಇರಬೇಕು ಅನಿಸುತ್ತೆ. ಬಹುಶಃ ಇವತ್ತಿನ ಈ ಪಾರ್ಟಿಗೆ ನಿಮ್ಮಂತಹ ಸೌಂದರ್ಯವತಿ ಬೇರೆ ಯಾರೂ ಬರಲಾರರು ಅನಿಸುತ್ತಿದೆ,” ಅವಳ ನಗುವಿನಲ್ಲಿನ ಮಾದಕತೆಯೇ ಹಾಗಿತ್ತು. ಅವಳ ಕಿರುನಗೆ, ಮೋಹಕ ನೋಟ, ಮಾದಕ ಕಣ್ಣುಗಳು ನನ್ನನ್ನು ಇನ್ನಿಲ್ಲದಂತೆ ಕುಣಿಸತೊಡಗಿದ.

“ಪರಿಚಯವಾದ ಕೆಲವೇ ಕ್ಷಣಗಳಲ್ಲಿಯೇ ಎಂತಹ ಸುಳ್ಳು ಹೊಗಳಿಕೆ…. ನೀವು ತುಂಬಾ ಪಳಗಿದ ಬೇಟೆಗಾರನಂತೆ ಗೋಚರಿಸುತ್ತಿರುವಿರಿ ರವಿ,” ಎಂದು ಹೇಳುತ್ತ ಮೊಣಕಾಲ ಮೇಲೆ ಕಾಲು ಹಾಕಿ ಕುರ್ಚಿಯ ಮೇಲೆ ಕುಳಿತ ಅವಳ ಭಂಗಿ ನನ್ನ ಹೃದಯಾಂತರಾಳದಲ್ಲಿ ಸುನಾಮಿಯ ಅಲೆಯನ್ನೇ ಎಬ್ಬಿಸಿತ್ತು.

“ಅಯ್ಯೋ ಇಲ್ಲಪ್ಪ. ನಾನು ಇವತ್ತಿನವರೆಗೂ ಒಂದು ಸೊಳ್ಳೆಯನ್ನು ಕೂಡ ಸಾಯಿಸಿಲ್ಲ.”

ಅವಳು ಮತ್ತದೇ ಮಾದಕ ನಗೆ ಬೀರುತ್ತ, “ಆದರೆ ನೀವು ಅಷ್ಟೊಂದು ಸಂಪನ್ನರಂತೆ ಕಾಣಿಸುತ್ತಿಲ್ಲವಲ್ಲ! ಸರಿ…. ನಿಮಗೆ ಮದುವೆ ಆಗಿದೆಯಾ?”

“ಹೌದು, ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದೆ. ನೀವು ಇನ್ನೇನಾದರೂ ಕೇಳುವುದಕ್ಕೆ ಮುಂಚೆಯೇ ಎಲ್ಲಾನೂ ಹೇಳಿಬಿಡುತ್ತೇನೆ ಕೇಳಿ. ನನ್ನ ಮದುವೆಯೂ ಆಗಿದೆ, ಆ ಮದುವೆಯಿಂದ ನಾನು ಎಲ್ಲ ರೀತಿಯಿಂದಲೂ ಸಂತುಷ್ಟನಾಗಿದ್ದೇನೆ.”

“ರಿಯಲಿ…..”

“ಎಸ್‌, ರಿಯಲಿ…..”

“ಹಾಗಾದ್ರೆ, ಗಡದ್ದಾಗಿ ಮನೆ ಊಟ ತಿನ್ನುವವರಿಗೆ, ಹೊರಗಿನ ತಿಂಡಿಯ ಆಸೆ ಏಕೋ?” ಎಂದು ನನ್ನ ಕಣ್ಣುಗಳನ್ನೇ ತೀಕ್ಷ್ಣವಾಗಿ ನೋಡುತ್ತ ಕೇಳಿದಳು.

“ಕೆಲವೊಮ್ಮೆ ಇನ್ನೊಬ್ಬರ ತಟ್ಟೆಯಲ್ಲಿರುವ ಸ್ವಾದಿಷ್ಟಕರ ತಿಂಡಿ ತಿನಿಸು ಕಂಡು, ಬಾಯಲ್ಲಿ ನೀರೂರುವುದು ಸಹಜ,” ಎಂದು ನಾನು ನಿಸ್ಸಂಕೋಚದಿಂದಲೇ ಹೇಳಿದೆ.

“ಮನುಷ್ಯರಾದವರು ಇನ್ನೊಬ್ಬರ ತಟ್ಟೆಗೆ ಕೈ ಹಾಕುವ ಚಪಲ ಬೆಳೆಸಿಕೊಳ್ಳಬಾರದು. ಅವರ ಮನೆಯ ಊಟ ಅವರಿಗೇ ರುಚಿಸದಿದ್ದರೆ ಇನ್ನಿಲ್ಲದ ತಾಪತ್ರಯಗಳು ಎದುರಾಗುತ್ತವೆ ರವಿ ಸಾಹೇಬರೆ.”

“ತಟ್ಟೆಗೆ ಕೈ ಹಾಕುವವರಿಗೆ ಬ್ಯಾಲೆನ್ಸ್ ಮಾಡುವ ಕಲೆಯೂ ತಿಳಿದಿರುತ್ತದೆ. ನೀನೇನೂ ತಲೆ ಕೆಡಿಸಿಕೊಳ್ಳಬೇಡ. ಈಗ ಹೇಳು ನಿನಗೆ ಇಷ್ಟಾನಾ?”

“ಇಷ್ಟಾನಾ? ಯಾವ ಇಷ್ಟ?” ಎಂದು ಸಂದಿಗ್ಧಕ್ಕೆ ಒಳಗಾದವಳಂತೆ ಹುಬ್ಬು ಗಂಟಿಕ್ಕಿದಳು.

“ಎದುರಿಗೇ ಇರುವ ತಟ್ಟೆಯಲ್ಲಿನ ಅಮೃತದಂತಹ ಊಟವನ್ನು ಕಣ್ತುಂಬ ನೋಡುವುದು, ಬಾಯಲ್ಲಿ ನೀರೂರಿದ ಚಪಲವನ್ನು ಶಮನಗೊಳಿಸುವುದು, ನಿನಗೆ ಇಷ್ಟವೇ?”

“ನಿನ್ನ ಆತುರ ನೋಡಿದರೆ ಈಗಿಂದೀಗ್ಲೆ ಊಟ ಮಾಡಿಬಿಡುವಂತಿರುವೆ,” ಎಂದು ಕೆಲವು ಕ್ಷಣ ಮುಖ ಗಂಟಿಕ್ಕಿದ ಅವಳು ನಂತರ ನಸುನಗುತ್ತಲೇ ಹೇಳಿದ್ದಳು.

“ಏಕೆ? ನಾನು ಊಟ ಮಾಡುವುದು ನಿನಗೆ ಇಷ್ಟವಿಲ್ಲವೇ?” ಅವಳು ನೋಡು ನೋಡುತ್ತಿದ್ದಂತೆಯೇ ನಾನೂ ಫ್ಲರ್ಟ್ ಮಾಡತೊಡಗಿದ್ದೆ.

“ನನಗೇನೊ ಇಷ್ಟ, ಆದರೂ…..” ಎನ್ನುತ್ತಾ ಗದ್ದದ ಮೇಲೆ ಬೆರಳಿಟ್ಟುಕೊಂಡು ಏನೋ ಯೋಚಿಸುತ್ತಿರುವಂತೆ ನಾಟಕವಾಡತೊಡಗಿದಳು.

“ಆದರೂ….ಏನು?”

“ಹಕ್ಕಿಯಂತೆ ಬಲೆಗೆ ಹಾಕಿಕೊಳ್ಳುವ ನಿನ್ನ ಸ್ಟೈಲ್ ‌ಮಾತ್ರ ನನಗೆ ಇಷ್ಟವಾಗುತ್ತಿಲ್ಲ. ಮನುಷ್ಯ ವಿಪರೀತ ಹಸಿವಿನಿಂದ ಬಳಲುತ್ತಿದ್ದರೆ, ನೆಮ್ಮದಿಯಿಂದ ಊಟ ಮಾಡಲಾರ.”

“ಹಾಗಾದರೆ ನೆಮ್ಮದಿಯಿಂದ ಊಟ ಮಾಡುವುದು ಹೇಗೆ ಅಂತ ನೀನೇ ನನಗೆ ಹೇಳಿಕೊಡು,” ಎಂದು ನಾನೂ ಮಾದಕವಾಗಿ ಹೇಳುತ್ತ ಅವಳ ಕೈ ಹಿಡಿದೆ.

“ನೀನು ನನ್ನ ಸ್ಟೂಡೆಂಟ್‌ ಆಗುವೆಯಾ?” ಅವಳ ಕಣ್ಣುಗಳಲ್ಲಿ ತುಂಟತನ ತುಂಬಿ ತುಳುಕುತ್ತಿತ್ತು.

“ಓಹ್‌, ಖಂಡಿತ ಟೀಚರ್‌!”

“ಹಾಗಾದರೆ ನಿನಗೊಂದು ಸಣ್ಣ ಟೆಸ್ಟ್. ಈ ತಕ್ಷಣ ನೀನು ಏನಾದ್ರೂ ಮಾಡಿ ನನ್ನ ಮನಸ್ಸು ಗೆಲ್ಲಬೇಕು.”

“ನೀನು ತುಂಬಾ ಆಕರ್ಷಕವಾಗಿದ್ದೀಯ, ತುಂಬಾ ಸೆಕ್ಸಿಯಾಗಿರುವೆ,” ಎಂದು ರೊಮ್ಯಾಂಟಿಕ್‌ ಧ್ವನಿಯಲ್ಲಿ ಹೇಳುತ್ತ ಅವಳನ್ನು ಹೊಗಳಿದೆ.

“ಹೇಳುವುದಲ್ಲ, ಏನನ್ನಾದ್ರೂ ಮಾಡಿ ತೋರಿಸೋ ಪೆದ್ದು.”

“ನಿನ್ನನ್ನು ತಬ್ಬಿಕೊಳ್ಳಲೇ?” ಎಂದು ಕೊಂಚ ತುಂಟತನದಿಂದಲೇ ಕೇಳಿದೆ.

“ಯಾಕಪ್ಪ, ನನ್ನ ಮಾನ ಹರಾಜು ಹಾಕಬೇಕೆಂದಿರುವೆಯಾ? ನನ್ನನ್ನು ನಗೆಪಾಟಲಿಗೆ ಈಡು ಮಾಡಬೇಕೆಂದಿರುವೆಯಾ?” ಎಂದು ಅವಳು ಹುಸಿಮುನಿಸು ತೋರಿದಳು.

“ಇಲ್ಲ….ಇಲ್ಲ… ಹಾಗೇನಿಲ್ಲ, ಸಾರಿ.”

“ಬೇಗ ಏನಾದರೂ ಯೋಚಿಸು, ಇಲ್ಲಾಂದ್ರೆ ನಿನ್ನನ್ನು ಫೇಲ್ ‌ಮಾಡಿಬಿಡುವೆ,” ಎಂದು ಬಿನ್ನಾಣದಿಂದ ದಬಾಯಿಸಿದಳು.

ಅವಳ ಹೃದಯ ಗೆಲ್ಲಲು ಒಂದೇ ಒಂದು ಉಪಾಯ ಹೊಳೆಯಿತು. ಜೇಬಿನಲ್ಲಿದ್ದ ಪೆನ್ನು ಹೊರತೆಗೆದು ಕೆಳಕ್ಕೆ ಹಾಕಿ ಅದನ್ನು ಎತ್ತಿಕೊಳ್ಳುವ ನೆಪದಿಂದ ಬಗ್ಗಿ ಅವಳ ಮುಂಗೈಗೆ ಮುತ್ತು ನೀಡಿದೆ.

“ನಾನು ಪಾಸ್‌ ಆದೆನಾ, ಫೇಲ್ ಆದೆನಾ ಟೀಚರ್‌?” ಎಂದು ಮೇಲೆದ್ದು ಅವಳ ಕಣ್ಣುಗಳಲ್ಲಿ ಕಣ್ಣಿಟ್ಟು ಕೇಳಿದಾಗ, ಲಜ್ಜೆಯಿಂದ ಅವಳ ಕೆನ್ನೆ ಕೆಂಪೇರಿದ್ದವು.

“ಪಾಸ್‌…. ಈಗ ಹೇಳು ಏನು ಬಹುಮಾನ ಬೇಕು ನಿನಗೆ?” ಎಂದು ಇನ್ನಿಲ್ಲದ ಗತ್ತಿನಿಂದ ಕೇಳಿದಳು.

“ಈ ಕ್ಷಣ ನೀನು ಏನಾದ್ರೂ ಮಾಡಿ ನನ್ನ ಮನಸ್ಸನ್ನು ಗೆಲ್ಲಬೇಕು,” ಎಂದೆ.

“ಇದ್ಯಾವ ದೊಡ್ಡ ವಿಷಯ ಬಾ….” ಎಂದ ಅವಳು ನನ್ನ ಕೈ ಹಿಡಿದು ಡ್ಯಾನ್ಸ್ ಫ್ಲೋರ್‌ನತ್ತ ಆಲ್ ಮೋಸ್ಟ್ ಎಳೆದುಕೊಂಡೇ ಹೊರಟಳು.

ಆ ಅಂದಗಾತಿಯೊಂದಿಗೆ ಡ್ಯಾನ್ಸ್ ಫ್ಲೋರ್‌ ತಲುಪುತ್ತಿದ್ದಂತೆ ನಾನು ರೋಮಾಂಚನದಿಂದ ಕಂಪಿಸತೊಡಗಿದ್ದೆ. ಅಲ್ಲಿರುವ ಜನರೆಲ್ಲ ನಮ್ಮನ್ನೇ ಅವಾಕ್ಕಾಗಿ ನೋಡತೊಡಗಿದರು.

ಡ್ಯಾನ್ಸ್ ಫ್ಲೋರ್‌ ಮೇಲೆ ಕೆಲವು ಯುವಕರು ಹಾಗೂ ಮಕ್ಕಳು ಡಿಜೆಯ ಅಬ್ಬರದ ಸಂಗೀತಕ್ಕೆ ಕುಣಿಯತೊಡಗಿದ್ದರು. ಸೀಮಾ ನವಿಲಿನಿಂತೆ ಗರಿಬಿಚ್ಚಿ ಕುಣಿಯತೊಡಗಿದಳು. ನಾನು ಉಸಿರು ಬಿಗಿಹಿಡಿದು ತದೇಕಚಿತ್ತನಾಗಿ ಅವಳ ಮೈಮಾಟವನ್ನೇ ಗಮನಿಸುತ್ತಿದ್ದೆ. ಡ್ಯಾನ್ಸ್ ಕಡೆಗೆ ನನ್ನ ಗಮನವೇ ಇರಲಿಲ್ಲ. ಅವಳ ದೇಹದ ಉಬ್ಬು ತಗ್ಗುಗಳೆಲ್ಲ ಒಂದೊಂದಾಗಿ ನನ್ನ ಮೈಗೆ ಕರೆಂಟ್‌ ತಗಲಿದಂತೆ ಭಾಸವಾಗತೊಡಗಿತ್ತು. ಅರೆ ತೆರೆದ ಕಂಗಳಿಂದ ಇದೇನು ಕನಸೊ, ನನಸೊ? ಎಂಬ ಸಂದಿಗ್ಧತೆಗೆ ಒಳಗಾಗಿದ್ದೆ.

ಸುಮಾರು ಅರ್ಧ ಗಂಟೆ ಡ್ಯಾನ್ಸ್ ಮಾಡಿ ಸುಸ್ತಾದ ಬಳಿಕ ನಮ್ಮ ಜಾಗಕ್ಕೆ ಮರಳಿ ಬಂದು ಕುಳಿತೆ. ಸ್ವತಃ ನಾನೇ ಹೋಗಿ ಎರಡು ಕೋಲ್ಡ್ ಡ್ರಿಂಕ್ಸ್ ತೆಗೆದುಕೊಂಡು ಬಂದೆ.

“ಥ್ಯಾಂಕ್ಯೂ ರವಿ, ಆದರೆ ನನಗೇಕೊ ಕೋಲ್ಡ್ ಡ್ರಿಂಕ್ಸ್ ಬಿಟ್ಟು ಬೇರೆ ಏನಾದ್ರೂ ಕುಡೀಬೇಕು ಅನಿಸ್ತಾ ಇದೆ,” ಎಂದು ನಸುನಗುತ್ತಲೇ ತಂಪು ಪಾನೀಯ ನಿರಾಕರಿಸಿದಳು.

“ಹಾಗಾದ್ರೆ ಏನು ಬೇಕೂಂತಿಯಾ?”

“ಸ್ವಲ್ಪ ಹೊತ್ತು ಹೊರಗಿನ ತಂಗಾಳಿಯನ್ನು ಆಸ್ವಾದಿಸೋಣ. ಏನಂತಿಯಾ?”

“ಓಹ್‌ ಗ್ರೇಟ್‌ ಐಡಿಯಾ. ಇತ್ತೀಚೆಗಷ್ಟೆ ನಮ್ಮ ಮನೆಯಲ್ಲಿ ಹೊಸ ಎ.ಸಿ.ಗಳನ್ನು ಹಾಕಿಸಿದ್ದೇನೆ. ಅಲ್ಲಿಗೇ ಹೋಗೋಣಾ?”

“ಹಲೋ ಮರಿ, ಈ ಟೀಚರ್‌ ಮಾತನ್ನು ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊ. ಯಾರದಾದರೂ ಹೃದಯ ಗೆಲ್ಲಲೇಬೇಕೆಂದಿದ್ದರೆ ಮೊದಲು ಅವರ ಸ್ನೇಹ ಗಳಿಸಬೇಕು, ಅವರ ಆಸೆ, ಆಕಾಂಕ್ಷೆಗಳನ್ನು ತಿಳಿದುಕೊಳ್ಳಬೇಕು, ನಿಸ್ವಾರ್ಥದಿಂದ ಅವರ ಬಯಕೆಗಳನ್ನು ಈಡೇರಿಸಲು ಸನ್ನದ್ಧರಾಗಬೇಕು. ತಂತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಇನ್ನೊಬ್ಬರನ್ನು ಭೋಗದ ವಸ್ತುವಿನಂತೆ ಕಾಣಬಾರದು. ಅದು ಮೂರ್ಖತನವೇ ಸರಿ,” ಎಂದು ಸೀಮಾ ಖಡಕ್ಕಾಗಿ ಹೇಳಿದಾಗ ನಾನು ತುಂಬಾ ಅವಮಾನಿತನಂತೆ ಮುಖ ಮಾಡಿ ನಾಟಕವಾಡಿದೆ.

“ನಾಟಕ ಸಾಕು ಮಾಡು,” ಎಂದ ಅವಳು ಒಮ್ಮಿಂದೊಮ್ಮೆಲೆ ಕಿಲಕಿಲ ಎಂದು ನಗತೊಡಗಿದಳು. ನಂತರ ನನ್ನ ಕೈ ಹಿಡಿದು ಎಬ್ಬಿಸುತ್ತ, “ನಿನ್ನ ಕಾರ್‌ನಲ್ಲಿ ಒಂದು ಲಾಂಗ್‌ ಡ್ರೈವ್ ತೆರಳಿ ತಂಗಾಳಿಯ ಮಜಾ ಪಡೋಣ,” ಎಂದಳು.

“ವಾಹ್‌…. ನನಗೆ ಲಾಂಗ್‌ ಡ್ರೈವ್ ಎಂದರೆ ತುಂಬಾ ಇಷ್ಟ ಅಂತ ನಿನಗೆ ಹೇಗೆ ಗೊತ್ತು?” ಎಂದು ಅತ್ಯುತ್ಸಾಹದಿಂದ ಕೇಳಿದೆ.

“ಅರೆ, ನಾನಿನ್ನೂ ಮದುಮಕ್ಕಳಿಗೆ ವಿಶ್‌ ಮಾಡಲೇ ಇಲ್ಲ ಒಂದ್ನಿಮಿಷ ಬಂದ್ಬಿಟ್ಟೆ….” ಎನ್ನುತ್ತಾ ನಾನು ಸ್ಟೇಜ್‌ ಕಡೆಗೆ ಹೊರಟಾಗ, ಸೀಮಾ ನನ್ನ ತೋಳನ್ನು ಗಟ್ಟಿಯಾಗಿ ಹಿಡಿದು, “ಸಾಕು ಸುಮ್ಮನಿರು. ಡಿನ್ನರ್‌ಗೆಂದು ವಾಪಸ್‌ ಬರಲೇಬೇಕಲ್ಲ. ಆಗ ವಿಶ್‌ ಮಾಡುವಿಯಂತೆ! ಈಗ ಹೊರಡು,” ಎಂದು ಬಾಗಿಲಿನತ್ತ ಎಳೆದೊಯ್ದಳು.

“ಅಕಸ್ಮಾತ್‌ ವಾಪಸ್‌ ಬರಲು ಸಾಧ್ಯವಾಗದಿದ್ದರೆ….?” ಎಂದು ನಾನು ಅರ್ಥಗರ್ಭಿತವಾಗಿ ಅವಳ ತುಂಬುದೋಳನ್ನು ಹಿಸುಕಿ ಕೇಳಿದಾಗ ಅವಳು ನಾಚಿ ನೀರಾದಳು.

teacher-story-2

ಕೆಲವೇ ನಿಮಿಷಗಳಲ್ಲಿ ನನ್ನ ಕಾರು ನಿರ್ಜನ ಹೈವೇನಲ್ಲಿ ಓಡತೊಡಗಿತ್ತು. ಕಾರಿನ ಎ.ಸಿ. ಆನ್‌ ಮಾಡಲು ಬಿಡಲಿಲ್ಲ ಅವಳು. ಕಾರಿನ ಕಿಟಕಿ ಗಾಜನ್ನು ಕೆಳಗಿಳಿಸಿ, ನೈಸರ್ಗಿಕ ತಂಗಾಳಿಯ ಮಜ ಆನಂದಿಸತೊಡಗಿದ್ದಳು. ಸಂಪೂರ್ಣವಾಗಿ ಕಣ್ಮುಚ್ಚಿ ಕುಳಿತಿದ್ದ ಅವಳು ಯಾವುದೊ ಕನಸಿನ ಲೋಕಕ್ಕೆ ಜಾರಿದಂತೆ ಕಾಣುತ್ತಿದ್ದಳು.

ಮುಂದಿನ ಕೆಲವು ನಿಮಿಷಗಳಲ್ಲಿ ತುಂತುರು ಮಳೆ ಹನಿ ಸುರಿಯತೊಡಗಿದರೂ ಅವಳು ಕಿಟಕಿಯ ಗಾಜನ್ನು ಮುಚ್ಚಲಿಲ್ಲ. ಕಣ್ಣು ಮುಚ್ಚಿಕೊಂಡೇ ಯಾವುದೊ ಹಾಡೊಂದನ್ನು ಗುನುಗುನಿಸತೊಡಗಿದಳು.

ಹಾಡು ಗುನುಗುತ್ತ ಉಲ್ಲಸಿತಳಾಗಿದ್ದ ಅವಳ ಸೌಂದರ್ಯವನ್ನು ವರ್ಣಿಸಲು ಶಬ್ದಗಳೇ ಎಟುಕುತ್ತಿಲ್ಲ. ಅವಳ ಮೂಡ್ ಹಾಳಾಗಬಾರದೆಂಬ ಒಂದೇ ಒಂದು ಕಾರಣಕ್ಕೆ ನಾನು ಒಂದು ಮಾತನ್ನೂ ಆಡಲಿಲ್ಲ. ತುಂಬಾ ಹೊತ್ತು ತುಟಿ ಪಿಟಕ್ಕೆನ್ನದಂತೆ ಶಾಂತವಾಗಿ ಕುಳಿತಿದ್ದೆ.

ಹಾಡುವುದು ಮುಗಿದರೂ ಅವಳು ಕಣ್ಣು ತೆರೆದಿರಲಿಲ್ಲ. ಅಚಾನಕ್ಕಾಗಿ ಕೈಚಾಚಿ ನನ್ನ ಸೊಂಟನ್ನು ಅವುಚಿಕೊಂಡು ಉಸಿರು ತಾಗುವಷ್ಟು ಸನಿಹಕ್ಕೆ ಬಂದಳು.

“ತುಂಬಾ ಹಸಿವಾಗ್ತಿದೆಯಾ? ವಾಪಸ್‌ ಹೊರಡೋಣವೇ?” ಎಂದು ಮೃದುವಾಗಿ ಅವಳ ತಲೆ ನೇವರಿಸುತ್ತಾ ಕೇಳಿದೆ.

“ನಿನಗೂ ಹಸಿವಾಗಿದೆಯಾ?” ಎಂದವಳು ಕಣ್ಣು ತೆರೆಯದೇ ನಸುನಗುತ್ತ ಕೇಳಿದಳು.

“ಇನ್ನು ನಾನು ಏನೇ ಮಾಡಿದರೂ, ನಿನ್ನ ಇಚ್ಛೆಯ ಪ್ರಕಾರವೇ ಮಾಡುವುದು,” ಎಂದೆ.

“ಓಹ್‌, ಏನು ನಮ್ಮ ಸ್ಟೂಡೆಂಟ್‌ ತುಂಬಾ ಬುದ್ಧಿವಂತನಾದಂತೆ ಕಾಣುತ್ತಿದೆ?”

“ಥ್ಯಾಂಕ್ಯೂ ಟೀಚರ್‌. ಹೇಳಿ…. ಎಲ್ಲಿಗೆ ಹೋಗೋಣ?”

“ನೀನು ಎಲ್ಲಿಗೆ ಕರೆದೊಯ್ಯುವೆಯೊ ಅಲ್ಲಿಗೆ…” ಎನ್ನುತ್ತಾ ಅವಳು ನನ್ನನ್ನು ಇನ್ನಷ್ಟು ಬಿಗಿಯಾಗಿ ಅವುಚಿಕೊಂಡಳು.

“ಸರಿ ಹಾಗಾದ್ರೆ ಊಟ ಮಾಡಲು ಹೊರಡೋಣ. ಆದರೆ ಮದುವೆ ಮಂಟಪಕ್ಕೆ ಊಟ ಮಾಡಲು ಹೋಗುವುದೋ ಅಥವಾ ಇದೇ ಹೈವೇನಲ್ಲಿ ಯಾವುದಾದ್ರೂ ಢಾಬಾದಲ್ಲಿ ಊಟ ಮಾಡುವುದೊ ಅಂತ ನೀನೇ ಡಿಸೈಡ್‌ ಮಾಡಬೇಕು.”

“ಇಂತಹ ಸಮಯದಲ್ಲಿ ಮದುವೆ ಮನೆಗೆ ಹೊರಟರೆ ಚೆನ್ನಾಗಿರಲ್ಲ.”

“ಹಾಗಾದ್ರೆ ಯಾವುದಾದರೂ ಲಕ್ಷುರಿಯಸ್‌ ಢಾಬಾಕ್ಕೆ ಹೊರಡೋದು…..”

“ರವಿ, ಇನ್ನೊಂದು ಮಾತು ಗಮನದಲ್ಲಿರಲಿ. ಕಬ್ಬಿಣ ಕೆಂಪಗೆ ಕಾದಿರುವಾಗಲೇ ಏಟು ಹಾಕಬೇಕು. ಇಲ್ಲದಿದ್ದರೆ ಮೂರ್ಖತನವಾದೀತು,” ಎಂದು ಅವಳು ನನ್ನ ಕಣ್ಣುಗಳನ್ನೇ ತೀಕ್ಷ್ಣವಾಗಿ ನೋಡುತ್ತಾ ಹೇಳಿದಾಗ ನನ್ನ ರಕ್ತ ಬಿಸಿಯೇರಿ ಕುದಿಯತೊಡಗಿತ್ತು.

“ಖಂಡಿತ ಟೀಚರ್‌, ಯಾವ ಢಾಬಾನೂ ಬೇಡ, ಮದುವೆ ಮಂಟಪ ಬೇಡ,” ಎನ್ನುತ್ತ ಅವಕಾಶ ಸಿಕ್ಕ ತಕ್ಷಣವೇ ಕಾರ್‌ ತಿರುಗಿಸಿ ಶರವೇಗದಲ್ಲಿ ಓಡಿಸತೊಡಗಿದೆ.

ನನ್ನ ಮನೆಯ ಬೀಗ ತೆರೆದು ಡ್ರಾಯಿಂಗ್‌ ರೂಮ್ ತಲುಪಿದರೂ ಕೂಡ ಸೀಮಾ ತನ್ನ ಬಿಗಿತ ಸಡಿಲಿಸಿರಲಿಲ್ಲ ಒಂದು ಮಾತನ್ನೂ ಆಡಿರಲಿಲ್ಲ. ಅವಳನ್ನು ನೋಡಿದಾಗೆಲ್ಲ ಆ ಹುಚ್ಚು ಹಿಡಿಸುವ ನೋಟ, ಮಾದಕ ನಗೆ ನನ್ನ ಉಸಿರಾಟದ ಲಯವನ್ನೇ ಬದಲಾಯಿಸಿಬಿಡುತ್ತಿದ್ದವು.

ತಕ್ಷಣ ಅವಳನ್ನು ಎತ್ತಿಕೊಂಡು ಡ್ರಾಯಿಂಗ್‌ ರೂಮಿನಿಂದ ಬೆಡ್‌ ರೂಮಿನವರೆಗೂ ಬಂದೆ. ನಂತರ “ನೀನು ಪ್ರಪಂಚದ ಅಪರೂಪದ ಸೌಂದರ್ಯ ರಾಶಿ. ನಿನ್ನ ಗುಲಾಬಿ ಅಧರಗಳು……”

ಅವಳು ನನ್ನ ತುಟಿಗಳ ಮೇಲೆ ಬೆರಳನ್ನಿಟ್ಟು, “ಶ್‌….. ಡಿಯರ್‌ ಸ್ಟೂಡೆಂಟ್‌, ಇದು ಡೈಲಾಗ್‌ ಹೊಡೆಯುವ ಟೈಮ್ ಅಲ್ಲ. ಇಟ್ಸ್ ಟೈಮ್ ಆಫ್‌ ಆ್ಯಕ್ಷನ್ಸ್,” ಎನ್ನುತ್ತಾ ನನ್ನ ಅಧರಗಳನ್ನು ಲಾಕ್‌ ಮಾಡಿ ನನ್ನನ್ನು ನಿಶ್ಶಬ್ದಗೊಳಿಸಿಬಿಟ್ಟಳು.

ನಂತರ ಶುರುವಾದ ಆ್ಯಕ್ಷನ್‌ಗಳು ತಹಬಂದಿಗೆ ಬರಲು ಗಂಟೆಗಳೇ ಬೇಕಾದವು. ಏಕೆಂದರೆ ನನ್ನ ಟೀಚರ್‌, ವರ್ಷಗಳಿಂದ ಹಸಿದಿದ್ದ ನನಗೆ ಲಗುಬಗೆಯಿಂದ ಉಣ್ಣಲು ಬಿಟ್ಟಿರಲಿಲ್ಲ.

ಮರುದಿನ ಭಾನುವಾರ. ಹಾಲಿನವನು ಡೋರ್‌ ಬೆಲ್ ‌ಬಾರಿಸಿದಾಗ, ತುಂಬಾ ಕಷ್ಟದಿಂದ ಕಣ್ಣುಬಿಟ್ಟೆ.

“ನೀವು ಮಲಗಿರಿ. ನಾನು ಹಾಲು ತೆಗೆದುಕೊಳ್ತೀನಿ,” ಎಂದ ಸೀಮಾ ನನ್ನನ್ನು ಮಂಚದಿಂದ ಎದ್ದೇಳಲು ಬಿಡಲಿಲ್ಲ.

“ಬೇಡ ಟೀಚರ್‌ ಬೇಡ. ನೀವು ಅಲ್ಲಾಡಲೂಬೇಡಿ. ಏಕೆಂದರೆ, ಈ ನಿಮ್ಮ ಸ್ಟೂಡೆಂಟ್‌ ನಿನ್ನೆ ರಾತ್ರಿಯ ಪಾಠಗಳನ್ನು ಮತ್ತೊಮ್ಮೆ ಕಲಿಯಬೇಕೆಂದು ಬಯಸುತ್ತಿದ್ದಾನೆ,” ಎನ್ನುತ್ತಾ ಅವಳ ತುಟಿಯ ಮೇಲೊಂದು ಹೂಮುತ್ತಿಕ್ಕಿ ಹಾಲು ತೆಗೆದುಕೊಳ್ಳಲು ಎದ್ದು ಹೊರಟೆ.

ಇತ್ತೀಚೆಗೆ ನನ್ನ ಪತ್ನಿ ಸೀಮಾಳ ಬುದ್ಧಿವಂತಿಕೆಗೆ ನಾನು ತುಂಬಾ ಬೆರಗಾದದ್ದಿದೆ. ನಾನು ಕಂಪನಿಯ ಕೆಲಸಗಳಲ್ಲಿ ಮುಳುಗಿರುತ್ತಿದ್ದರೆ, ಅವಳು ತನ್ನ ನೌಕರಿಯನ್ನು ನಿಭಾಯಿಸುವುದರಲ್ಲಿ ವ್ಯಸ್ತಳಾಗಿರುತ್ತಾಳೆ. ನಮ್ಮಿಬ್ಬರಿಗೂ ಆಪ್ತವಾಗಿ ಕಾಲ ಕಳೆಯಲು ಸಮಯದ ಅಭಾವ ತುಂಬಾ ಕಾಡುತ್ತಿತ್ತು. ಆದ್ದರಿಂದ ನಮ್ಮಿಬ್ಬರಲ್ಲೂ ತಪ್ಪಿತಸ್ಥ ಮನೋಭಾವ ಗೂಡು ಕಟ್ಟಿದಂತಾಗಿತ್ತು, ನಮ್ಮ ಬದುಕು ಯಾಂತ್ರಿಕವಾಗಿತ್ತು.

“ನಾವಿಬ್ಬರೂ ನಮ್ಮ ಆಪ್ತ ಸಮಯವನ್ನು ಬೆಳೆಸಿಕೊಳ್ಳಲು ಸಾಧ್ಯವಾಗದೇ ಇದ್ದರೂ, ಇರುವಷ್ಟೇ ಸಮಯವನ್ನು ಸಾಕಷ್ಟು ಕ್ರಿಯಾಶೀಲವಾಗಿ ಕಳೆಯೋಣ,” ಎಂಬ ಸೀಮಾಳ ಸಲಹೆಯನ್ನು ಸಾಕಷ್ಟು ಅಳೆದೂ, ತೂಗಿ, ಯೋಚಿಸಿ ನಿನ್ನೆ ರಾತ್ರಿಯಿಂದಲೇ ಈ ಟೀಚರ್‌ ಮತ್ತು ಸ್ಟೂಡೆಂಟ್‌ ಆಟವನ್ನು ಪ್ರಾರಂಭಿಸಿದ್ದೆವು.

ನಿನ್ನೆ ರಾತ್ರಿ ರಿಸೆಪ್ಷನ್‌ ಪಾರ್ಟಿಯಲ್ಲಿ ಅಪರಿಚಿತರಂತೆ ಪರಸ್ಪರ ಪರಿಚಯಿಸಿಕೊಂಡೆವು. ನಂತರ ಪರಸ್ಪರ ಫ್ಲರ್ಟ್‌  ಕೂಡ ಮಾಡತೊಡಗಿದೆವು. ಹೀಗಾಗಿಯೇ ನಿನ್ನೆ ಅವಳು ಟೀಚರ್‌ ಆದಳು, ನಾನು ಸ್ಟೂಡೆಂಟ್‌ ಆದೆ. ಅವಳ ಸಲಹೆಯ ಮೇರೆಗೆ ನಿನ್ನೆ ನಾನವಳಿಗೆ ಸ್ಟೂಡೆಂಟ್‌ ಆಗಿದ್ದು ಮತ್ತು ಸಾಕಷ್ಟು ಸಮಯ ಇಬ್ಬರೂ ಸಂತೋಷದಿಂದ ಕಳೆದದ್ದು.

ಮುಂದಿನ ಭಾನುವಾರ ಅಥವಾ ಇನ್ಯಾವುದಾದರೂ ರಜೆಯ ದಿನದಂದು, ನಾನು ಅವಳಿಗೆ ಟೀಚರ್‌ ಆಗುವೆ ಮತ್ತು ಅವಳು ನನ್ನ ಸ್ಟೂಡೆಂಟ್‌. ಆ ಸಂದರ್ಭ ಸಂಪೂರ್ಣ ಯಶಸ್ವಿಯಾಗಲು ಬೇಕಾದ ಎಲ್ಲಾ ವ್ಯವಸ್ಥೆಗೆ ಈಗಿನಿಂದಲೇ ಸಿದ್ಧತೆ ಪ್ರಾರಂಭಿಸಿದ್ದೇನೆ. ಏಕೆಂದರೆ ನನಗೆ ಇದರಿಂದ ಭರವಸೆ ಮೂಡಿದೆ. ನಾವು ತುಂಬಾ ಕಡಿಮೆ ಸಮಯವನ್ನು ಜೊತೆ ಜೊತೆಯಲ್ಲಿ ಕಳೆದರೂ, ಕ್ರಿಯಾಶೀಲಾಗಿ ಕಳೆಯುವುದರಿಂದ ನಮ್ಮ ವೈವಾಹಿಕ ಬದುಕು ಯಾವತ್ತೂ ನೀರಸ ಎನಿಸುವುದಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ