ಹೊಸ ಚಿಗುರುಗಳನ್ನು ಕಂಡಾಗೆಲ್ಲ ಅವುಗಳಂತೆ ಆಗುವ ಇಚ್ಛೆಯನ್ನು ನನಗೆ ತಡೆದುಕೊಳ್ಳಲಾಗುತ್ತಿರಲಿಲ್ಲ. ಚಿಕ್ಕ ಗಿಡಗಳಿಂದ ಹಿಡಿದು ದೊಡ್ಡ ದೊಡ್ಡ ಮರಗಳ ಕೊಂಬೆಗಳ ತುದಿಯವರೆಗೆ ಕೆಂಪು ಗುಲಾಬಿ ಹಾಗೂ ಹೊಳೆಯುವ ಚಿಗುರುಗಳನ್ನು ಕಂಡಾಗ ಅವನ್ನೊಮ್ಮೆ ಮುಟ್ಟಲು ಆಸೆಯಾಗುತ್ತಿತ್ತು. ಆದರೆ ಕೀರ್ತನಾಗೆ ನನ್ನ ಮಾತುಗಳು ಇಷ್ಟವಾಗುತ್ತಿರಲಿಲ್ಲ. ಅವಳು ರೇಗುತ್ತಿದ್ದಳು, “ನೀನೆಂಥ ಸೈನ್ಸ್ ಸ್ಟೂಡೆಂಟ್? ಚಿಗುರುಗಳು ತಮ್ಮತನದ ಇಲ್ಲವೇ ಪ್ರೀತಿಯ ಸೂಚಕವಲ್ಲ, ಬದುಕಿನ ಸೂಚಕವಾಗಿದೆ. ಮರಗಿಡಗಳಲ್ಲಿ ಚಿಗುರೊಡೆಯುವವರೆಗೆ ಅವು ಜೀವಂತಾಗಿವೆ ಎಂದರ್ಥ. ಮರಗಿಡಗಳ ಬದುಕು ಮುಗಿದಾಗ ಅವುಗಳಲ್ಲಿ ಚಿಗುರು ತಳೆಯುವುದಿಲ್ಲ. ಚಿಗುರುವುದು ನಿಂತಾಗ ಅವು ಸತ್ತಂತೆ. ಇದನ್ನೂ ಹೇಳಿಕೊಡಬೇಕೇನೇ ನಿನಗೆ?”
ಮುಂದೆ ನಾನು ಇದೆಲ್ಲವನ್ನೂ ಮರೆತುಬಿಡುತ್ತಿದ್ದೆ ಅಥವಾ ಮನದ, ಮೂಲೆಯೆಲ್ಲಿಯೋ ಅದುಮಿಡುತ್ತಿದ್ದೆ. ಆದರೆ ಕೆಲವು ವರ್ಷಗಳ ನಂತರ ಕೀರ್ತನಾ ಮೇಲ್ ಕಳಿಸಿದಾಗ ಇದೆಲ್ಲಾ ಮತ್ತೆ ನೆನಪಾಗಿತ್ತು. ಅವಳು ಕ್ಯಾಲಿಫೋರ್ನಿಯಾದಿಂದ ಹಿಂತಿರುಗಿದ್ದಳು. ಅವಳ ರಿಸರ್ಚ್ ಪೂರ್ತಿಯಾಗಿತ್ತು. ಅವಳನ್ನು ಭೇಟಿಯಾಗದೆ ಕೆಲವು ವರ್ಷಗಳು ಕಳಿದಿದ್ದವು.
ನಾನು ಚಿಕ್ಕಂದಿನಿಂದಲೂ ಏನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದೆ. ಏನಾದರೂ ಹೊಸತು, ಎಲ್ಲರಿಗಿಂತ ಭಿನ್ನವಾದುದು, ಯಾವಾಗಲೂ ಎಲ್ಲರಿಗಿಂತ ಮುಂದೆ ಇರಬೇಕೆಂಬ ಮಹತ್ವಾಕಾಂಕ್ಷೆ. ಅದೇ ಗುಣಗಳನ್ನು ಚಿಗುರುಗಳಲ್ಲೂ ಕಾಣುತ್ತಿದ್ದೆ. ಅವುಗಳಂತೆ ಆಗಬೇಕೆಂಬ ಪ್ರೇರಣೆ ಮನದಲ್ಲಿರುತ್ತಿತ್ತು.
“ಒಳ್ಳೆಯ ಸಂಬಂಧ ಬಂದಿದೆ. ಇದನ್ನು ಕಳೆದುಕೊಂಡರೆ ಇಂಥ ಸಂಬಂಧ ಮತ್ತೆ ಸಿಗಲ್ಲ.”
ಅಪ್ಪನ ಈ ಮಾತು ಏನಾದರೂ ಸಾಧಿಸಬೇಕೆನ್ನುವ ನನ್ನ ಮಹತ್ವಾಕಾಂಕ್ಷೆಗೆ ಮೊದಲ ಪೆಟ್ಟು ಕೊಟ್ಟಿತ್ತು. ಆದರೆ ಅಪ್ಪನ ವ್ಯಾಪಾರದಲ್ಲಾದ ನಷ್ಟ ಮನೆಯ ಆರ್ಥಿಕ ಪರಿಸ್ಥಿತಿಯ ಹೊಯ್ದಾಟಗಳು ನನ್ನ ಮಹತ್ವಾಕಾಂಕ್ಷೆಗಾಗಿ ಹಟ ಮಾಡಲು ಅನುಮತಿ ಕೊಡಲಿಲ್ಲ.
ಪಿಯುಸಿ ನಂತರ ಮದುವೆ ಮಾಡಿಕೊಂಡು ತವರುಮನೆಯಿಂದ ಅತ್ತೆಮನೆಗೆ ತಲುಪಿದೆ. ಮೆಡಿಕಲ್ ಎಂಟ್ರೆನ್ಸ್ ಟೆಸ್ಟ್ ಗೆ ಹೋಗುವ ಇಚ್ಛೆಯನ್ನು ಮನದಲ್ಲೇ ಹುದುಗಿಸಿ ನಾನು ಕುಮಾರಿಯಿಂದ ಶ್ರೀಮತಿಯಾಗಿ ಬದಲಾದೆ.
ನನ್ನ ಗಂಡ ರಜತ್ ಒಂದು ಬ್ಯಾಂಕ್‌ನಲ್ಲಿ ಕ್ಲರ್ಕ್ ಆಗಿದ್ದರು. ನಾನು ಡಾಕ್ಟರ್ ಆಗಲು ಇಚ್ಛಿಸುತ್ತೇನೆ ಎಂದು ಅವರಿಗೆ ಹೇಳಿದಾಗ ಅವರಿಗೆ ಆಶ್ಚರ್ಯವಾಗಿತ್ತು. ನಾನು ಆವಕಾಶವನ್ನು ಮುಟ್ಟುವ ಬಗ್ಗೆ ಮಾತಾಡುತ್ತಿದ್ದೇನೆ ಎಂದುಕೊಂಡಿದ್ದರು. ಬೇಡವೆಂದು ಹೇಳುತ್ತಾ ಕೊನೆಗೂ ಒಪ್ಪಿಕೊಂಡರು.
“ಆಯ್ತು. ಟ್ರೈ ಮಾಡು. ನಾನು ನಿನಗೆ ಬಿ.ಎಡ್ ಓದಿಸೋಣ ಎಂದುಕೊಂಡಿದ್ದೆ. ಡಾಕ್ಟರ್ ಆಗಬೇಕೆನ್ನುವ ಸಾಮರ್ಥ್ಯ ನಿನ್ನಲ್ಲಿ ಇದ್ದರೆ ಓ.ಕೆ. ಈಗ ಡಾಕ್ಟರ್‌ಗಳ ಸಂಪಾದನೆಯೂ ಜೋರಾಗಿದೆ,” ಎಂದರು.
ನನ್ನ ಆಕಾಂಕ್ಷೆಯನ್ನು ಪೂರೈಸಿಕೊಳ್ಳುವ ಅವಕಾಶ ಸಿಕ್ಕಾಗ ನಾನು ರೋಮಾಂಚಿತಳಾಗಿದ್ದೆ. ಒಂದು ವರ್ಷದ ಸಂಪೂರ್ಣ ಸಿದ್ಧತೆ ಪರೀಕ್ಷೆಯಲ್ಲಿ ಯಶಸ್ಸು ಕೊಟ್ಟಿತು. ನಾನು ಮೆಡಿಕಲ್ ಎಂಟ್ರೆನ್ಸ್ ಎಗ್ಸಾಮ್ ನಲ್ಲಿ ಉತ್ತೀರ್ಣಳಾಗಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಗಳಿಸಿದ ದಿನ ನನ್ನ ಜೀವನದ ಅತ್ಯಂತ ಸಂತಸದ ದಿನವಾಗಿತ್ತು. ನಾನು ಪರಿಸ್ಥಿತಿಗಳ ಜೊತೆ ಹೊಂದಿಕೊಳ್ಳದೆ ಜಯವನ್ನು ಸಾಧಿಸಿದ್ದು ನನಗೆ ಖುಷಿಯಾಗಿತ್ತು.
ನಾನು ಮೆಡಿಕಲ್ ಸ್ಟೂಡೆಂಟ್ ಮತ್ತು ಗೃಹಿಣಿ ಎರಡೂ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದೆ. ಅಭಿರುಚಿ, ಸಮರ್ಪಣೆ ಮತ್ತು ಸಫಲತೆಯಿಂದ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೆ. ನಮ್ಮ ಕಾಲೇಜು ಹಾಗೂ ಮನೆಯಲ್ಲಿ ಯಾರಿಗೂ ದೂರಲು ಅವಕಾಶ ಕೊಡಲಿಲ್ಲ. ಆದರೆ ನನ್ನ ಪ್ರಯತ್ನದಲ್ಲಿ ನನಗೆಷ್ಟು ತೊಂದರೆಯಾಯಿತೆಂದು ನನಗೊಬ್ಬಳಿಗೆ ಮಾತ್ರ ಗೊತ್ತು.
ಮೂರನೆಯ ವರ್ಷ ಪೃಥ್ವಿ ಹುಟ್ಟಿದ ಮೇಲೆ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಯಿತು. ಎಳೆಯ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗುವಾಗ ನನ್ನ ನೆಮ್ಮದಿ ಹಾಳಾಗುತ್ತಿತ್ತು. ಆದರೆ ನಮ್ಮ ಅತ್ತೆ ಮೊಮ್ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದ್ದರಿಂದ ನಿಶ್ಚಿಂತಳಾಗಿರುತ್ತಿದ್ದೆ. ಪ್ರೊಫೆಸರ್ ಕಿರಣ್ ನನ್ನ ಪರಿಶ್ರಮವನ್ನು ಹೊಗಳುತ್ತಿದ್ದರು ಮತ್ತು ಚೆನ್ನಾಗಿ ಮಾರ್ಗದರ್ಶನ ನೀಡುತ್ತಿದ್ದರು. ನಾನು ರಜತ್‌ಗೂ ಪ್ರೊ. ಕಿರಣ್‌ರ ಮಾರ್ಗದರ್ಶನದ ಬಗ್ಗೆ ಹೇಳುತ್ತಿದ್ದೆ.
ಒಂದು ದಿನ ರಜತ್, “ಏನು ಸಮಾಚಾರ? ಈ ನಡುವೆ ಯಾವಾಗಲೂ ಕಿರಣ್ ಹಿಂದೆ ಸುತ್ತುತ್ತಾ ಇರ್ತೀಯ?” ಎಂದರು.
ರಜತ್ ಯಾವ ಉದ್ದೇಶದಿಂದ ಹೀಗೆ ಹೇಳುತ್ತಿದ್ದಾರೆಂದು ಮೊದಲು ಅರ್ಥವಾಗಿರಲಿಲ್ಲ. ಆದರೆ ಅರ್ಥ ತಿಳಿದಾಗ ಸುಮ್ಮನಿರಲಾಗಲಿಲ್ಲ, “ಏನ್ರಿ ಮಾತಾಡ್ತೀರಿ? ಮಾತಾಡೋ ಮುಂಚೆ ಯೋಚಿಸಿ ಮಾತಾಡಬೇಕು. ಹುಚ್ಚುಹುಚ್ಚಾಗಿ ಏನೇನೋ ಮಾತಾಡಬಾರದು.”
“ಏನು ಯೋಚಿಸಿ ಮಾತಾಡೋದು? ಡಾಕ್ಟರ್ ಆಗಿದ್ದು ನಿನಗೆ ಆರಾಮಾಗಿಹೋಯ್ತು.”
ಇಷ್ಟೊಂದು ನೀಚತನ, ಉಫ್… ಅಂದಿನಿಂದ ನನಗೊಂದು ಸೀಮಾರೇಖೆ ಹಾಕಿಕೊಂಡೆ. ರಜತ್‌ಗೆ ಏನಾದರೂ ಹೇಳುವ ಅವಕಾಶ ಕೊಡಲಿಲ್ಲ. ಆದರೂ ಒಂದು ವಿಷಯ ಮನದಲ್ಲಿ ನೋವುಂಟು ಮಾಡುತ್ತಿತ್ತು. ನಿನ್ನಂಥ ಹೆಂಡತಿ ಪಡೆದಿದ್ದು ನನಗೆ ಬಹಳ ಖುಷೀಂತ ಹೇಳ್ತಿದ್ದ ರಜತ್ ಹೇಗೆ ಇಷ್ಟೊಂದು ಬದಲಾದರು? ಆದರೆ ಆಗ ನಾನು ರಜತ್‌ರ ಸಂಕೀರ್ಣ ಆಲೋಚನೆಯ ವಿಷಯುಕ್ತ ಬೀಜ ಚಿಗುರಿ ಹೂವಾಗಿ ನನ್ನ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ತಿಳಿದಿರಲಿಲ್ಲ.
ನಂತರದ ಸುಮಾರು 10 ವರ್ಷಗಳು ನನ್ನ ಪಾಲಿಗೆ ತಪಸ್ಸಾಗಿದ್ದವು. ಎಂ.ಎಸ್. ಮಾಡಿದ ನಂತರ ಇಲ್ಲಿಯೇ ಡಾ. ಕಾರ್ತಿಕ್‌ರ ನರ್ಸಿಂಗ್ ಹೋಮ್ ನಲ್ಲಿ ದೊಡ್ಡ ಸಂಬಳದ ಕೆಲಸಕ್ಕೆ ಸೇರಿದೆ. ನಾನು ಮಾಡಿದ ಆಪರೇಶನ್‌ಗಳ ಬಗ್ಗೆ ಪ್ರಶಂಸೆ ನರ್ಸಿಂಗ್‌ಹೋಮ್ ನಿಂದ ಶುರುವಾಗಿ ನಿಧಾನವಾಗಿ ಇಡೀ ನಗರದಲ್ಲಿ ಹರಡತೊಡಗಿತು. ಎಂದಾದರೂ ರಜತ್ ನನ್ನನ್ನು ಕರೆದೊಯ್ಯಲು ಬಂದಾಗ ಕಾರ್ತಿಕ್ ಅವರ ಬಳಿ ನನ್ನನ್ನು ಹೊಗಳುತ್ತಿದ್ದರು.
ನಿಧಾನವಾಗಿ ಮನೆಯ ಆರ್ಥಿಕ ಪರಿಸ್ಥಿತಿ ಬದಲಾಗಿತ್ತು. ಮನೆಯಲ್ಲಿ ಸುಖ ಸೌಲಭ್ಯಗಳು ಮತ್ತು ಅಲಂಕಾರದ ವಸ್ತುಗಳು ಬರತೊಡಗಿದ್ದವು. ಆದರೆ ರಜತ್ ಮತ್ತು ನನ್ನ ಸಂಬಂಧದಲ್ಲಿ ಬಂದ ಅಸಂತೋಷ ನನಗೆ ನೋವುಂಟು ಮಾಡಿತು. ಯಾವುದಾದರೂ ಸೀರಿಯಸ್ ಕೇಸ್‌ಗಾಗಿ ಆಸ್ಪತ್ರೆಯಲ್ಲಿ ಕೊಂಚ ಹೆಚ್ಚು ಹೊತ್ತು ಇದ್ದರೆ ರಜತ್‌ಗೆ ಸರಿಹೋಗುತ್ತಿರಲಿಲ್ಲ. ಡಾಕ್ಟರ್‌ರ ಉದ್ಯೋಗದಲ್ಲಿ ಸಮಯಕ್ಕಿಂತ ಹೆಚ್ಚಾಗಿ ಸಮರ್ಪಣಾ ಭಾವ ಮಹತ್ವಪೂರ್ಣವೆಂದು ಅವರೆಂದೂ ತಿಳಿಯುವ ಪ್ರಯತ್ನ ಮಾಡುತ್ತಿರಲಿಲ್ಲ. ನಮ್ಮ ಕೆಲಸ ಗಡಿಯಾರದ ಮುಳ್ಳುಗಳೊಂದಿಗೆ ನಡೆಯುತ್ತಿದ್ದು ನಿಲ್ಲುತ್ತಿರಲಿಲ್ಲ. ಯಾರಾದರೂ ರೋಗಿಗೆ ಸರಿಯಾದ ಸಮಯಕ್ಕೆ ನೀಡಿದ ಚಿಕಿತ್ಸೆಯ ಮಹತ್ವದ ಮುಂದೆ ಲಕ್ಷ, ಕೋಟಿ ರೂ.ಗಳೂ ಕಡಿಮೆಯೇ.
ಒಂದು ದಿನ ಒಂದು ಸೀರಿಯಸ್ ಕೇಸ್ ನೋಡಿ ತಡವಾಗಿ ಮನೆಗೆ ಬಂದೆ. ರಜತ್ ವರ್ತನೆ ನನ್ನಲ್ಲಿ ಅಪರಾಧಿ ಮನೋಭಾವ ಹುಟ್ಟುಹಾಕಿತ್ತು. ನಾನು ತಡವಾಗಿ ಬಂದುದಕ್ಕೆ ಕಾರಣ ಹೇಳಲು ಯತ್ನಿಸಿದೆ, “ರಜತ್, ಒಬ್ಬ ಪೇಶೆಂಟ್ ಸೀರಿಯಸ್….” ನನ್ನ ಮಾತನ್ನು ಮಧ್ಯದಲ್ಲೇ ತುಂಡರಿಸುತ್ತಾ ರಜತ್, “ಯಾರು ಡಾ. ಕಾರ್ತಿಕ್ ತಾನೇ ಪೇಶೆಂಟ್?” ಎಂದರು.
ನಾನು ದಿಗ್ಮೂಢಳಾಗಿದ್ದೆ, ಮತ್ತೆ, ಅದೇ ನೀಚತನ.
“ರಜತ್, ಮಾತಾಡೋಕೆ ಮುಂಚೆ ಯೋಚಿಸಿ ಮಾತಾಡಿ.”
“ಅವರೇನು ಸುಮ್ಮನೆ ನಿನ್ನನ್ನು ಹೊಗಳ್ತಾರಾ? ನಿನಗೂ ಸಮಾಜಕ್ಕೆ ತೋರಿಸೋಕೆ ಈ ಸಾಧಾರಣ ಕ್ಲರ್ಕ್ ಗಂಡನ ಪಾತ್ರ ವಹಿಸಬೇಕು. ಆಸ್ಪತ್ರೇಲಿ ಮೋಜು ಮಾಡು. ಯಾರಿಗೂ ಗೊತ್ತಾಗಲ್ಲ.”
“ರಜತ್…..”
ನಾನು ಏನಾದರೂ ಹೇಳುವ ಮೊದಲೇ ರಜತ್ ಹೇಳಿದರು, “ನನ್ನನ್ನು ಪೆದ್ದಾಂತ ತಿಳ್ಕೋಬೇಡ. ನಿಮ್ಮ ಆಸ್ಪತ್ರೆಗೆ ಬಂದು ಕೇಳ್ಲಾ?”
ಇದರ ಬಗ್ಗೆ ರಜತ್ ನರ್ಸಿಗ್ ಹೋಮ್ ನಲ್ಲಿ ಚರ್ಚೆ ಮಾಡ್ತಾರಂತೆ. ನನ್ನ ಗೌರವ, ಪ್ರೆಸ್ಟೀಜ್ ಎಲ್ಲ ಮಣ್ಣಾಗುತ್ತಿತ್ತು. ಆದರೆ ಮುಂದೆ ಇವೆಲ್ಲಾ ನನ್ನ ಬದುಕಿನ ಭಾಗವಾಗಿ ಹೋಯಿತು. ಏನು ಮಾಡುವುದೆಂದು ನನಗೆ ತಿಳಿಯುತ್ತಿರಲಿಲ್ಲ. ಆಸ್ಪತ್ರೆಗೆ ಹೋಗುವುದನ್ನು ನಿಲ್ಲಿಸಿಬಿಡಲೇ? ನನ್ನ ಇಷ್ಟು ವರ್ಷಗಳ ತಪಸ್ಸು ಈ ದಿನಕ್ಕಾಗಿಯೇ ಮಾಡಿದ್ದಾ? ಒಂದು ವೇಳೆ ನಾನು ಆಸ್ಪತ್ರೆ ಕೆಲಸ ಬಿಟ್ಟುಬಿಟ್ಟರೆ ರಜತ್‌ರ ಸಂಬಳದಿಂದ ಮನೆಯ ಖರ್ಚುಗಳನ್ನು ಸಂಭಾಳಿಸಲು ಆಗುತ್ತದೆಯೇ? ನಾನ್ಯಾಕೆ ಕೆಲಸ ಬಿಡಬೇಕು ರಜತ್ ವರ್ತನೆ ದಿನದಿನಕ್ಕೂ ಹದಗೆಡುತ್ತಿತ್ತು. ಯಾರಾದರೂ ಪುರುಷ ರೋಗಿಗಳು ತಮಗೆ ಗುಣವಾದ ನಂತರ ನಮ್ಮ ಮನೆಗೆ ಬಂದು ಹಣ್ಣು, ಸ್ವೀಟ್ಸ್ ಕೊಡುವುದು, ನಾನು ಅವರೊಂದಿಗೆ ನಗುನಗುತ್ತಾ ಮಾತಾಡುವುದು ಕೂಡ ರಜತ್ ದೃಷ್ಟಿಯಲ್ಲಿ ಕೀಳಾಗಿ ಕಂಡುಬರುತ್ತಿತ್ತು. ಡಾಕ್ಟರ್ ಸಂಪಾದನೆ ಅವರಿಗೆ ಬೇಕಿತ್ತು. ಆದರೆ ಹೆಂಡತಿ ಡಾಕ್ಟರ್ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವುದು ಅವರಿಗೆ ಇಷ್ಟವಿರಲಿಲ್ಲ.
ಒಂದು ದಿನ ರಜತ್ ಒಳ್ಳೆಯ ಮೂಡ್‌ನಲ್ಲಿರುವುದನ್ನು ಕಂಡು ಅವರೇಕೆ ಹಾಗೆ ವರ್ತಿಸುತ್ತಾರೆ ಎಂದು ಕೇಳಿದೆ.
“ಬಿಡು ಕಾವ್ಯಾ. ನಾನು ಕೋಪದಲ್ಲಿ ಏನೇನೋ ಮಾತಾಡಿಬಿಡ್ತೀನಿ,” ಎಂದರು.
ಆದರೆ ಈ ಕೋಪದ ಮಾತುಗಳು ನಿಧಾನವಾಗಿ ನನ್ನ ಅಸ್ತಿತ್ವವನ್ನು ಚೂರು ಚೂರು ಮಾಡುತ್ತಿದ್ದ. ನನ್ನ ಉತ್ಸಾಹ ಹಾಗೂ ನನ್ನ ಕೆಲಸಗಳಲ್ಲಿ ಅದರ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತಿತ್ತು. ನಾನು ನಾರ್ಮಲ್ ಆಗಿರಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ.
ರಜತ್‌ರ ಆಧಾರವಿಲ್ಲದ ಆಪಾದನೆಗಳು ನನ್ನ ಕಿವಿಗಳಲ್ಲಿ ಗುಂಯ್‌ಗುಡುತ್ತಿದ್ದವು. ಯಾರಾದರೂ ರೋಗಿಗೆ ಚಿಕಿತ್ಸೆ ನೀಡುವಾಗ ನಾಳೆ ಆತನಿಗೆ ಗುಣವಾದ ನಂತರ ಮನೆಗೆ ಬಂದರೆ ರಜತ್ ಮತ್ತೆ ಹಿಂದಿನಂತೆಯೇ ವರ್ತಿಸುತ್ತಾರೆ ಅನ್ನಿಸುತ್ತಿತ್ತು. ಏನು ಮಾಡಲಿ ಆ ರೋಗಿಗೆ ವಾಸಿಯಾಗದಂತೆ ಮಾಡಬೇಕೆ? ತಲೆಕೊಡವಿ ಆ ವಿಚಾರಗಳನ್ನು ಮನಸ್ಸಿನಿಂದ ತೆಗೆದು ಹಾಕಲು ಪ್ರಯತ್ನಿಸಿದೆ.
ನನ್ನ ಹಾಗೂ ರಜತ್‌ರ ಸಂಬಂಧಗಳ ಬುಡವನ್ನು ಮತ್ತೆ ಭದ್ರಗೊಳಿಸಲು ಮಾಡಿದ ಪ್ರಯತ್ನ ನಿಷ್ಪಲವಾಯಿತು. ಮನೆ ಕೆಲಸದ ರಾಧಾ ಹಾಗೂ ಕೆಲವರಿಂದ ರಜತ್ ಹಾಗೂ ಬ್ಯಾಂಕಿನ ಕ್ಯಾಶಿಯರ್ ಶೀಲಾರ ನಡುವೆ ಹೆಚ್ಚುತ್ತಿರುವ ಸಂಬಂಧಗಳ ಬಗ್ಗೆ ಕೇಳಿದೆ. ಒಂದು ದಿನ ನಾನು ಸಂಪೂರ್ಣವಾಗಿ ಕುಸಿದುಹೋದೆ. ಅಂದು ಬಹಳ ಸುಸ್ತಾಗಿದ್ದು ಬೇಗನೆ ಮನೆಗೆ ಬಂದೆ. ಅದನ್ನು ತಿಳಿಯದೆ ರಜತ್ ಆ ಹೆಣ್ಣಿನೊಂದಿಗೆ ಅಸಹಜ ಸ್ಥಿತಿಯಲ್ಲಿ ಮನೆಯಲ್ಲೇ ಇದ್ದರು. ಆ ಸಮಯದಲ್ಲಿ ನನ್ನನ್ನು ಕಂಡು ಇಬ್ಬರೂ ಬೆಚ್ಚಿಬಿದ್ದರು.
ರಜತ್ ಏನೂ ನಡೆದಿಲ್ಲವೆಂಬಂತೆ ವರ್ತಿಸುತ್ತಿದ್ದರು. ಆದರೆ ಆ ಹೆಂಗಸಿಗೆ ಅದೂ ಸಾಧ್ಯವಾಗಲಿಲ್ಲ. ಅತ್ತೆ ಪೃಥ್ವಿಯನ್ನು ಕರೆದುಕೊಂಡು ನನ್ನ ಮೈದುನನ ಮನೆಗೆ ಹೋಗಿದ್ದರು.
ಅಂದು ರಾತ್ರಿ ರಜತ್‌ರನ್ನು ಆ ವಿಷಯದ ಬಗ್ಗೆ ಕೇಳಿದಾಗ ನನ್ನ ಮೇಲೆ ಮುಗಿಬಿದ್ದರು, “ವಿದ್ಯಾವಂತಳಾಗಿದ್ದು, ಅವಿದ್ಯಾವಂತಳ ರೀತಿ ಮಾತಾಡ್ಬೇಡ. ಶೀಲಾ ನನ್ನ ಒಳ್ಳೆಯ ಗೆಳತಿ. ಅವಳ ಗಂಡನಿಗೂ ನಾನು ಗೊತ್ತು. ಅವರ ಮನೇಲಿ ನನ್ನನ್ನು ಎಷ್ಟು ಆದರಿಸುತ್ತಾರೆಂದು ನಿನಗೇನು ಗೊತ್ತು? ನೀನು ಡಾಕ್ಟರ್ ಆಗಿದ್ದೀಯಾಂತ ನಿನಗೆ ಬಹಳ ಅಹಂಕಾರ.
“ನಿನ್ನ ವರ್ತನೆ ನೋಡಿದರೆ ಕೆಲಸದವಳಿಗಿಂತ ಕೀಳಾಗಿದೆ. ನಿನ್ನಲ್ಲಿ ಸ್ತ್ರೀಯರ ಲಕ್ಷಣಗಳೇ ಇಲ್ಲ. ಒಂದು ಮಾತು ಜ್ಞಾಪಕದಲ್ಲಿಟ್ಟುಕೋ. ಇವತ್ತು ನೀನು ಏನೇ ಆಗಿದ್ರೂ ಅದು ನನ್ನಿಂದಾನೆ. ನಾನು ನಿನ್ನನ್ನು ಓದಿಸಿದ್ದು, ನಿಮ್ಮಪ್ಪ ಅಲ್ಲ. ನನ್ನ ಮೇಲೆ ಅಧಿಕಾರ ನಡೆಸಬೇಡ. ಗಂಡನಿಗೆ ಮರ್ಯಾದೆ ಕೊಡೋದೂ ತಿಳಿದಿಲ್ಲಾಂದ್ರೆ ನಿನ್ನ ಸರ್ಟಿಫಿಕೇಟ್‌ಗಳನ್ನು ಹರಿದುಹಾಕು.”
`ಹೌದು ಅಥವಾ ಅಲ್ಲ’ ಎಂಬ ಎರಡು ಶಬ್ದಗಳಲ್ಲಿ ಮುಗಿದುಹೋಗ್ತಿದ್ದ ವಿಷಯವನ್ನು ಇಷ್ಟು ಒರಟಾಗಿ, ಕಟುವಾಗಿ ಏಕೆ ಹೇಳುತ್ತಾರೆ? ಮತ್ತೆ ನಾನು ಆ ವಿಷಯ ಕೆದಕಲಿಲ್ಲ. ಆದರೆ ತನ್ನನ್ನು ನಿರಪರಾಧಿಯೆಂದು ಸಾಬೀತುಪಡಿಸಲು ರಜತ್ ಅನೇಕ ಅಸ್ತ್ರಗಳನ್ನು ಬಳಸಿದರು.
ನಾನು ಅವರನ್ನು ಮತ್ತು ಮಗುವನ್ನು ಯಾವಾಗಲೂ ನಿರ್ಲಕ್ಷ್ಯ ಮಾಡುತ್ತೇನೆ. ನಾನು ಮೆಡಿಕಲ್ ಓದುವಾಗ ಅವರ ಅಮ್ಮನನ್ನು ದಾಸಿಯನ್ನಾಗಿ ಮಾಡಿಬಿಟ್ಟಿದ್ದೆ. ಇದೆಲ್ಲಾ ಕಾರ್ತಿಕ್ ಹೇಳಿಕೊಟ್ನಾ? ಎಂದೆಲ್ಲಾ ದೂರಿದರು.
ರಜತ್‌ರ ನಿರಾಧಾರದ ಆರೋಪಗಳನ್ನು ನಾನು ಅವರ ಪೊಸೆಸಿವ್ನೆಸ್ ಎಂದು ಒಪ್ಪಿಕೊಂಡು ಸಹಿಸಿಕೊಳ್ಳುತ್ತಿದ್ದೆ. ಆದರೆ ತಾನು ಗಂಡಸು ಎಂಬ ಅಹಂಗೆ ಬೇರೆಲ್ಲೋ ತೃಪ್ತಿ ಕಂಡುಕೊಳ್ಳುವುದನ್ನು ಹೇಗೆ ಒಪ್ಪಲಿ? ಈಗ ಅವರು ನನಗೆ ಗಂಡನಾಗಿರದೆ ಬರೀ ಒಬ್ಬ ಗಂಡಸಾಗಿ ಉಳಿದುಹೋದರು. ಮಗುವನ್ನೂ ಗಮನಿಸುತ್ತಿರಲಿಲ್ಲ. ನಾನು ಏನನ್ನು ಪಡೆದುಕೊಂಡೆ ಹಾಗೂ ಏನನ್ನು ಕಳೆದುಕೊಂಡೆ ಎಂಬ ಪ್ರಶ್ನೆ ಪದೇ ಪದೇ ನನ್ನ ಮನಸ್ಸಿನಲ್ಲಿ ಮೂಡುತ್ತಿತ್ತು. ನಾನು ಮುಂದೆ ಓದಲೇಬಾರದಿತ್ತೇ? ಕೀರ್ತನಾಳ ಪ್ರೋತ್ಸಾಹದಿಂದ ನನ್ನ ಆಕಾಂಕ್ಷೆ, ನನ್ನ ಮದುವೆ, ನನ್ನ ಸಂಘರ್ಷ ಮತ್ತು ಧೂಳಿನಲ್ಲಿ ಸೇರಿದ ನನ್ನ ಆಸೆಯ ಚಿಗುರುಗಳು ಇವೆಲ್ಲ ಮತ್ತೆ ನನ್ನೆದುರಿಗೆ ಪ್ರತ್ಯಕ್ಷವಾದವು. ಮನಸ್ಸನ್ನು ಹಗುರ ಮಾಡಿಕೊಳ್ಳಲು ನಾನು ಈ ಸಂಪೂರ್ಣ ಸಂಘರ್ಷಕ್ಕೆ ಬರಹದ ರೂಪ ಕೊಟ್ಟೆ. ಈಗ ಇನ್ನೇನು ತಾನೇ ಕೆಲಸ? ಆಸ್ಪತ್ರೆಗೆ ಹೋಗುವುದನ್ನು ನಿಲ್ಲಿಸಿದ್ದೆ. ನಾನು ಕಾಯಿಲೆಯವಳಂತೆ ಇದ್ದೇನೆ ಅನ್ನಿಸುತ್ತಿತ್ತು. ಹೀಗಾಗಿ ಬದುಕಿನ ಬಗ್ಗೆ ಸರಿಯಾಗಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿರಲಿಲ್ಲ. ನಾನೇನು ಬೇರೆಯವರಿಗೆ ಚಿಕಿತ್ಸೆ ಮಾಡೋದು? ನಿಧಾನವಾಗಿ ನಾನು ಸ್ಪಂದನವಿಲ್ಲದ ಬದುಕಿನಲ್ಲಿ ಮುಳುಗುತ್ತಾ ಹೋದೆ. ಸಂಪಾದನೆ ಇಲ್ಲದಾದಾಗ ಅಸಂತೋಷಗೊಂಡ ರಜತ್ ನಾನು ಕಾರ್ತಿಕ್‌ರೊಂದಿಗೆ ಸುತ್ತಾಡಲು ಹೀಗೆ ಮಾಡುತ್ತಿದ್ದೇನೆಂದು ಆರೋಪಿಸಿದರು. ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟೆ.
“ಕಾವ್ಯಾ, ಯಾಕೆ ಮಾತಾಡೋದಿಲ್ಲ. ಏನಾಗಿದೆ ನಿನಗೆ? ನಾನು ಅಷ್ಟು ದೂರದಿಂದ ಬಂದಿದ್ದು ನಿನ್ನನ್ನು ಭೇಟಿಯಾಗೋಕೆ,” ನಾನು ಮೌನವಾಗಿದ್ದನ್ನು ಕಂಡು ಕೀರ್ತನಾ ಬೇಸರದಿಂದ ಹೇಳಿದಳು.
“ಆಸ್ಪತ್ರೆಗೆ ಹೋಗೋದನ್ನು ಯಾಕೆ ನಿಲ್ಲಿಸಿದೆ?”
“ನಾನು ಏನ್ಮಾಡ್ಲಿ ಕೀರ್ತನಾ? ನಾನೆಷ್ಟೇ ಪ್ರಯತ್ನಪಟ್ಟರೂ ನನ್ನೊಳಗಿನ ಡಾಕ್ಟರ್‌ಳನ್ನು ಜೀವಂತವಾಗಿ ಇಡೋಕಾಗ್ತಿಲ್ಲ.”
“ಯಾಕೆ?”
ಕೀರ್ತನಾಳ ಪ್ರಶ್ನೆಗೆ ನನ್ನ ಬಳಿ ಒಂದೇ ಉತ್ತರ ಇತ್ತು. ನಾನು ನಿಧಾನವಾಗಿ ಅವಳಿಗೆ ಎಲ್ಲ ವಿಷಯಗಳನ್ನೂ ತಿಳಿಸಿದೆ.
ಕೀರ್ತನಾ ನನ್ನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡಳು. ನನಗೇನಾಯ್ತೋ ತಿಳಿಯಲಿಲ್ಲ. ಅವಳನ್ನು ಅಪ್ಪಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದೆ. ಅವಳು ನನ್ನ ಬೆನ್ನು ಸವರುತ್ತಿದ್ದಳು. ನನ್ನನ್ನು ಸುಮ್ಮನಿರಿಸುವ ಪ್ರಯತ್ನವನ್ನೂ ಅವಳು ಮಾಡಲಿಲ್ಲ. ಹಿಂದೆ ನನಗೆ ಅಳು ಬಂದಾಗ ನೀರಿನ ಎರಡು ಗುಟುಕು ಕುಡಿದು ಅದರೊಂದಿಗೆ ಕಣ್ಣೀರನ್ನೂ ಕುಡಿದುಬಿಡುತ್ತಿದ್ದೆ. ಆದರೆ ಇಂದು ನನಗೆ ಅಳಲು ಸ್ವಾತಂತ್ರ್ಯ ಕೊಟ್ಟುಬಿಟ್ಟೆ.
ಸಂಜೆ ರಜತ್ ಬ್ಯಾಂಕಿನಿಂದ ಬಂದಾಗ ಕೀರ್ತನಾಗೆ ಅವನೊಂದಿಗೆ ಸರಿಯಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ಆದರೆ ರಜತ್ ತನ್ನನ್ನು ಒಳ್ಳೆಯ ಗಂಡನೆಂದು ಸಾಬೀತುಪಡಿಸಲು ಸಂಪೂರ್ಣವಾಗಿ ಪ್ರಯತ್ನಿಸಿದರು, “ನೀವೇ ನೋಡಿ, ಹೀಗೆ ಯಾರಾದರೂ ತಮ್ಮ ಕೆರಿಯರ್ ಹಾಳು ಮಾಡ್ಕೋತಾರಾ? ಇವಳನ್ನು ಓದಿಸೋಕೆ ನಾನು ಎಷ್ಟು ಹಣ ಖರ್ಚು ಮಾಡಿದೆ.
“ಅಷ್ಟು ಓದಿದ್ರೂ ಇವಳು ಅಶಿಕ್ಷಿತರ ತರಹ ವರ್ತಿಸ್ತಾಳೆ. ನನ್ನನ್ನು ಅರ್ಥ ಮಾಡಿಕೊಳ್ಳೋದೇ ಇಲ್ಲ. ನಾನು ಕೋಪದಲ್ಲಿ ಹೇಳಿದ ಮಾತುಗಳನ್ನು ನಿಜಾಂತ ತಿಳ್ಕೋತಾಳೆ.”
ರಾತ್ರಿ ಊಟದ ನಂತರ ನಾನು ಮತ್ತು ಕೀರ್ತನಾ ಟೆರೇಸಿಗೆ ಹೋಗಿ ಕೂತಾಗ ಅವಳು ಹೇಳಿದಳು, “ಕಾವ್ಯಾ, ಇವರನ್ನು ಬಿಟ್ಟುಬಿಡು. ಇಂಥವರ ಜೊತೆ ಬಾಳೋದು ಬಹಳ ಕಷ್ಟ. ಮಗೂಗೆ ಏನೂ ಆಗಲ್ಲ. ಇಂಥ ಅಪ್ಪನ ಜೊತೆ ಇರದಿದ್ದರೆ ಅವನಿಗೆ ಏನೂ ನಷ್ಟ ಆಗಲ್ಲ,” ಎಂದಳು.
“ಇಲ್ಲ ಕೀರ್ತನಾ, ನನಗಷ್ಟು ಧೈರ್ಯ ಇಲ್ಲ.”
ಕೀರ್ತನಾ ದೀರ್ಘವಾಗಿ ಉಸಿರೆಳೆದುಕೊಂಡು, “ಈ ವಿಷಯವಾಗಿ ನೀನು ಯೋಚನೆ ಮಾಡಬೇಡ. ನಿನ್ನ ಬದುಕಿನ ಬಗ್ಗೆ ಯೋಚಿಸು. ಒಂದು ಮಾತು ಹೇಳ್ತೀನಿ, ಕೇಳ್ತೀಯಾ?”
ನಾನು ಆಗಲಿ ಎಂದು ತಲೆಯಾಡಿಸಿದೆ.
“ಆಯ್ತು. ನಾಳೆ ಇದರ ಬಗ್ಗೆ ಮಾತಾಡೋಣ. ಮಲಕ್ಕೋ,” ಎಂದಳು.
ಮರುದಿನ ಪೃಥ್ವಿಯನ್ನು ಶಾಲೆಗೆ ಕಳಿಸಿದ ನಂತರ ಅವಳು ಹಠ ಮಾಡಿ ಆಚೆ ಕರೆದುಕೊಂಡು ಹೋದಳು.
“ಎಲ್ಲಿ ಹೋಗೋಣ?” ನಾನು ಕೇಳಿದೆ.
“ಹೇಳ್ತೀನಿ. ನಡಿ,” ಕೀರ್ತನಾ ಒಂದು ಟ್ಯಾಕ್ಸಿ ನಿಲ್ಲಿಸುತ್ತಾ ಹೇಳಿದಳು.
ಟ್ಯಾಕ್ಸಿ `ಕರುಣಾಲಯ’ದ ಎದುರು ನಿಂತಿತು. ಅದೊಂದು ಸೇವಾ ಸಂಸ್ಥೆಯಾಗಿದ್ದು, ಅನಾಥಾಶ್ರಮ ಹಾಗೂ ಆಸ್ಪತ್ರೆ ನಡೆಸುತ್ತಿತ್ತು. ಇಲ್ಲಿನ 2-3 ರೋಗಿಗಳಿಗೆ ನಾನು ಕಾರ್ತಿಕ್ ನರ್ಸಿಂಗ್ ಹೋಮ್ ನಲ್ಲಿ ಆಪರೇಷನ್ ಮಾಡಿದ್ದೆ.
“ಇಲ್ಲಿಗ್ಯಾಕೆ ಬಂದ್ವಿ?”
“ಹೇಳ್ತೀನಿ. ಇಲ್ಲಿನ ಚೀಫ್ ನನಗೆ ತುಂಬಾ ಪರಿಚಿತರು. ಅವರನ್ನು ಭೇಟಿಯಾಗೋಣ ಬಾ.”
ಅವಳು ನೇರವಾಗಿ ಚೀಫ್‌ರ ಕೋಣೆಗೆ ಕರೆದುಕೊಂಡು ಹೋಗಿ, “ಗುಡ್ ಮಾರ್ನಿಂಗ್ ಸಿಸ್ಟರ್,” ಎಂದಳು.
ಏನೋ ಬರೆಯುವುದರಲ್ಲಿ ಮಗ್ನರಾಗಿದ್ದ ಚೀಫ್ ತಲೆ ಎತ್ತಿ ಕೀರ್ತನಾಳನ್ನು ನೋಡಿ ಖುಷಿಯಿಂದ, “ಓಹ್ ಕೀರ್ತನಾ! ಗುಡ್ ಮಾರ್ನಿಂಗ್. ಯಾವಾಗ ಬಂದೆ ಕ್ಯಾಲಿಫೋರ್ನಿಯಾದಿಂದ?” ಎಂದರು.
“ಹದಿನೈದು ದಿನ ಆಯ್ತು ಸಿಸ್ಟರ್. ನೀವು ಹೇಗಿದ್ದೀರಿ?”
“ಚೆನ್ನಾಗಿದ್ದೀನಿ. ಏನು ಬಂದಿದ್ದು?”
ಕೀರ್ತನಾ ನನ್ನ ಪರಿಚಯ ಮಾಡಿಕೊಟ್ಟಳು. ಕೂಡಲೇ ಸಿಸ್ಟರ್, “ನನಗೆ ಇವರು ಗೊತ್ತು. ಕಾರ್ತಿಕ್ ನರ್ಸಿಂಗ್ ಹೋಮ್ ನ ಪ್ರಸಿದ್ಧ ಡಾಕ್ಟರ್,” ಎಂದರು.
“ಓಹೋ. ನಿಮಗೆ ಇವರು ಮೊದಲೇ ಗೊತ್ತಿತ್ತಾ?” ಕೀರ್ತನಾ ನನ್ನನ್ನು ಹಾಗೂ ಸಿಸ್ಟರ್‌ನ್ನು ಆಶ್ಚರ್ಯದಿಂದ ನೋಡುತ್ತಾ ಹೇಳಿದಳು.
“ಹೌದು ನನಗೆ ಗೊತ್ತು. ಆದರೆ ಮೊದಲ ಬಾರಿ ಭೇಟಿಯಾಗ್ತಿರೋದು. ಇವರು ಆಪರೇಷನ್‌ನಿಂದ ಬಹಳ ಜನರ ಪ್ರಾಣ ಉಳಿಸಿದ್ದಾರೆ. ನಮ್ಮ ಆಸ್ಪತ್ರೆಯ ಕೆಲವು ಪೇಶೆಂಟ್‌ಗಳನ್ನು ಇವರ ಬಳಿ ಕಳಿಸಿದ್ವಿ, ಡಾ. ಕಾವ್ಯಾ ಅವರ ಪ್ರಾಣ ಉಳಿಸಿದರು. ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತೋಷ ಡಾ. ಕಾವ್ಯಾ,” ಚೀಫ್‌ರ ಕಣ್ಣಲ್ಲಿ ಸಂತಸದ ಹೊಳಪಿತ್ತು.
“ಡಾ. ಕಾವ್ಯಾ ನಿಮ್ಮ ಆಸ್ಪತ್ರೇಲಿ ಕೆಲಸ ಮಾಡೋಕೆ ಇಚ್ಛಿಸಿದ್ದಾರೇಂತ ಗೊತ್ತಾದ್ರೆ ನಿಮಗೆ ಇನ್ನೂ ಸಂತೋಷವಾಗುತ್ತೆ. ನೀವು ಒಪ್ಪಿಗೆ ಕೊಡಬೇಕು ಅಷ್ಟೆ,” ಎಂದಳು ಕೀರ್ತನಾ.
ನಾನು ಗಾಬರಿಯಾದೆ. ನಾನು ಕೀರ್ತನಾಳನ್ನು ತಡೆಯುವ ಪ್ರಯತ್ನ ಮಾಡಿದೆ. ಆದರೆ ಅವಳು ಅದನ್ನು ಗಮನಿಸದೆ ಚೀಫ್‌ರೊಂದಿಗೆ ಮಾತಾಡುತ್ತಿದ್ದಳು.
“ಓಹ್ ಇದಂತೂ ಬಹಳ ಸಂತೋಷದ ವಿಷಯ. ನಿಮಗೆ ಸ್ವಾಗತ ಡಾ. ಕಾವ್ಯಾ. ಆದರೆ…. ಕೀರ್ತನಾ, ಇವರಿಗೆ ಹೆಚ್ಚು ಸಂಬಳ ಕೊಡೋಕಾಗಲ್ಲ ನಮಗೆ.”
“ಅದರ ಬಗ್ಗೆ ಚಿಂತಿಸಬೇಡಿ. ಎಷ್ಟಾಗುತ್ತೋ ಅಷ್ಟು ಕೊಡಿ. ಸೋಮವಾರದಿಂದ ಇವರು ಕೆಲಸಕ್ಕೆ ಬರಬಹುದಾ?”
“ಖಂಡಿತಾ ಬರಲಿ. ನಮ್ಮ ಆಸ್ಪತ್ರೆಗೆ ಇವರಿಂದ ಉಪಕಾರ ಆಗುತ್ತೆ.”
ಚೀಫ್‌ಗೆ ಧನ್ಯವಾದ ಹೇಳಿ ಕೀರ್ತನಾ ಎದ್ದಳು. ನಾನೂ ಚೀಫ್‌ಗೆ ವಂದಿಸಿ ಕೀರ್ತನಾ ಜೊತೆ ಟ್ಯಾಕ್ಸಿಯಲ್ಲಿ ಕುಳಿತೆ.
“ಇದೇನು ತಮಾಷೆ ಕೀರ್ತನಾ? ನನಗೆ ನೀನು ಹೇಳಿರಲಿಲ್ಲ,” ನಾನು ಕೀರ್ತನಾಳ ಮೇಲೆ ರೇಗಿದೆ. ಅವಳಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ಆದರೂ ಇಷ್ಟು ದೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲೆ ಹಾಕೋದಾ? ನನ್ನ ಡಿಪ್ರೆಶನ್‌ನಿಂದಾಗಿ ಆ ರೋಗಿಗಳನ್ನು ಸರಿಯಾಗಿ ಗಮನಿಸದಿದ್ದರೆ ಎಷ್ಟು ತೊಂದರೆಯಾಗುತ್ತೆ, ಕೀರ್ತನಾ ಯಾಕೆ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಲ್ಲ?
“ನನಗೆ ನಿನ್ನ ಬಗ್ಗೆ ಗೊತ್ತು ಕಾವ್ಯಾ. ನೀನು ಎಲ್ಲವನ್ನೂ ಮಾಡಬಲ್ಲೆ, ಇದುವರೆಗೆ ನೀನು ನಿನ್ನ ಹಣದ ಅಗತ್ಯ ಇರೋರಿಗಾಗಿ ದುಃಖ ಸಹಿಸಿದೆ. ಈಗ ನಿನ್ನ ಅಗತ್ಯ ಇರೋರಿಗಾಗಿ ಕೆಲಸ ಮಾಡು. ಇದರಿಂದ ನಿನಗೆ ನಿನ್ನ ಮಹತ್ವ ಗೊತ್ತಾಗುತ್ತೆ.
“ಒಂದು ವಿಷಯ ಜ್ಞಾಪಕ ಇಟ್ಕೋ ಕಾವ್ಯಾ, ಗಿಡಮರಗಳಲ್ಲೂ ಚಿಗುರುಗಳನ್ನು ಹೊರಗಿನಿಂದ ಹಾಕಕ್ಕಾಗಲ್ಲ. ಅವುಗಳ ಪ್ರಯಾಸದಿಂದಲೇ ಚಿಗುರುಗಳು ಮೊಳೆಯುತ್ತವೆ. ಹಾಗೆಯೇ ಮನುಷ್ಯರೂ ಎಂತಹ ಪರಿಸ್ಥಿತಿಯಲ್ಲಾದರೂ ತಮ್ಮ ಜೀವನ ತಾವೇ ರೂಪಿಸಿಕೊಳ್ಳಬೇಕು.”
ನಾನು ತೆಪ್ಪಗೆ ಕೇಳಿಸಿಕೊಳ್ಳುತ್ತಿದ್ದೆ. ಆದರೆ ನನ್ನ ನಂಬಿಕೆ ಗಟ್ಟಿಯಾಗುತ್ತಿರಲಿಲ್ಲ.
ಅವಳು 2 ದಿನ ಇದ್ದು ನನಗೆ ಬಹಳಷ್ಟು ಉಪದೇಶಗಳನ್ನು ನೀಡುತ್ತಿದ್ದಳು. ರಜತ್ ಬಗ್ಗೆ ಹಾಗೂ ಅವರ ವರ್ತನೆಗಳ ಬಗ್ಗೆ ನಿರ್ಲಕ್ಷ್ಯ ತೋರುವುದು, ನನಗಾಗಿ ಬದುಕುವುದು, ಪೃಥ್ವಿಯ ಭವಿಷ್ಯದ ಬಗ್ಗೆ ಗಮನ ಕೊಡುವುದು ಇತ್ಯಾದಿ.
ಮರುದಿನ ಅವಳು ಹೊರಟು ನಿಂತಾಗ ನನಗೆ ಮತ್ತೆ ಭಯವಾಗತೊಡಗಿತು. ಅವಳು ನನ್ನ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು, “ಇಲ್ಲ ಕಾವ್ಯಾ, ಹೇಡಿಯಾಗಬೇಡ. ಕಾವ್ಯಾ ಹೇಡಿಯಾಗಬಾರದು. ನಾನು ಡಾ. ಕಾವ್ಯಾಳನ್ನು ಮತ್ತೆ ನೋಡಬೇಕೆಂದಿದ್ದೇನೆ. ಒಂದು ವಿಷಯ ಜ್ಞಾಪಕದಲ್ಲಿಟ್ಕೋ. ನಿನಗೆ ಪುಟ್ಟ ಪೃಥ್ವಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಿನ್ನೊಳಗಿನ ಡಾ. ಕಾವ್ಯಾ. ಅವಳು ಜೀವಂತವಾಗಿರುವುದು ಬಹಳ ಅಗತ್ಯ. ಅದು ನಿನ್ನ ಕೈಯಲ್ಲೇ ಇದೆ.”
ಕೀರ್ತನಾಳ ಮಾತು ಉಳಿಸಲು ನಾನು ಮರುದಿನದಿಂದ `ಕರುಣಾಲಯ’ಕ್ಕೆ ಹೋಗತೊಡಗಿದೆ. ನಿಧಾನವಾಗಿ ನನಗೆ ನನ್ನ ಪ್ರಿಯವಾದ ಕೆಲಸದಿಂದ, ನನ್ನ ಅಸ್ತಿತ್ವದಿಂದ ಏಕೆ ದೂರಾಗಿದ್ದೆ ಎಂದು ಅನಿಸತೊಡಗಿತು. ದಿನಗಳು ಕಳೆಯತೊಡಗಿದವು. ಅಲ್ಲಿ ರೋಗಿಗಳ ಚಿಕಿತ್ಸೆ ಮಾಡುತ್ತಾ ಕಹಿ ಘಟನೆಗಳನ್ನು ಮರೆಯತೊಡಗಿದೆ. ನಾನು ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂದಿದ್ದೆ, ಕಾಲದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ನನಗೆ ಹೀಗೆಲ್ಲಾ ಆಯ್ತು ಎಂದುಕೊಳ್ಳುವುದನ್ನು ನಿಲ್ಲಿಸಿದೆ. ಒಂದು ವೇಳೆ ನಾನು ಡಾಕ್ಟರ್ ಆಗಿರದಿದ್ದಲ್ಲಿ ನನ್ನ ಸಂಸಾರ ಸುಖಿಯಾಗಿರುತ್ತಿತ್ತು ಎಂಬುದನ್ನೂ ನನ್ನ ಮನಸ್ಸಿನಿಂದ ಹೊರಹಾಕಲು ಪ್ರಯತ್ನಿಸಿದೆ. ನನ್ನೊಳಗಿನ ಡಾ. ಕಾವ್ಯಾಳನ್ನು ಜೀವಂತವಾಗಿಡುವ ಪ್ರಯತ್ನದಲ್ಲಿ ತೊಡಗಿದೆ.
“ಡಾ. ಕಾವ್ಯಾ, ಈಗ ನಿಮಗೆ ಇಷ್ಟೇ ಕೊಡೋಕೆ ಆಗ್ತಿರೋದು. ನಿಮ್ಮ ಯೋಗ್ಯತೆ ಹಾಗೂ ಸೇವೆಗೆ ಹೋಲಿಸಿದರೆ ಇದು ಬಹಳ ಕಡಿಮೆ,” ಒಂದು ತಿಂಗಳ ನಂತರ ಒಂದು ಕವರ್‌ನ್ನು ನನ್ನ ಕೈಗೆ ಕೊಡುತ್ತಾ ಚೀಫ್ ಹೇಳಿದರು.
“ಇಲ್ಲ ಸಿಸ್ಟರ್, ಹಾಗೆ ಹೇಳಬೇಡಿ. ಇಲ್ಲಿಗೆ ಬಂದು ನಾನೇನು ಪಡೆದಿದ್ದೀನೀಂತ ನಿಮಗೆ ಗೊತ್ತಿಲ್ಲ. ಬಹಳ ಥ್ಯಾಂಕ್ಸ್.”
ನಾನು ಹೇಳಿದ್ದು ಅರ್ಥವಾಗಿಲ್ಲವೆಂದು ಚೀಫ್‌ರ ಮುಖದಲ್ಲಿ ಸ್ಪಷ್ಟವಾಗಿತ್ತು. ಇದರ ಮಧ್ಯೆ ರಜತ್‌ಗೆ ಟ್ರಾನ್ಸ್ಫರ್ ಆಗಿತ್ತು. ಅತ್ತೆ ಕೂಡ ಅವರೊಂದಿಗೇ ಹೋಗಿದ್ದರು. ನನ್ನ ಸಂಪಾದನೆ ಕಡಿಮೆ ಆಗಿದ್ದಕ್ಕೆ ರಜತ್ ಬಹಳ ಕೋಪಗೊಂಡಿದ್ದರು. ಕರುಣಾಲಯಕ್ಕೆ ಹೋಗ್ತಿರೋದು ಅವರಿಗೆ ಅವಮಾನಕರವಾಗಿತ್ತು.
ಆಸ್ಪತ್ರೆಯಿಂದ ಹೊರಡುವಾಗ ನಾನು ದಿನ ಅನಾಥಾಶ್ರಮದ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆಯುತ್ತಿದ್ದೆ. ಆ ಮಕ್ಕಳ ಮುಗ್ಧ ಹಾಗೂ ಉದಾಸಭರಿತ ಕಣ್ಣುಗಳಲ್ಲಿ ಮಕ್ಕಳು ತಾವು ಮಾಡದಿರುವ ತಪ್ಪಿಗಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ ಅನಿಸುತ್ತಿತ್ತು. ಆ ಮಕ್ಕಳಿಗೆ ಏನಾದರೂ ಮಾಡೋಣ ಎಂದುಕೊಳ್ಳುತ್ತಿದ್ದೆ.
ದಿನ ಆ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಕಳೆಯುವುದು ನನಗೆ ಹೊಸ ಜೀವನ ಬಂದಂತಾಗಿತ್ತು. ಎಂದಾದರೂ ಆಸ್ಪತ್ರೆಯಲ್ಲಿ ತಡವಾದರೆ ಆ ಮಕ್ಕಳು ನನಗಾಗಿ ಕಾಯುತ್ತಿದ್ದರು. ಅವರೊಂದಿಗೆ ನಾನು ಸ್ವಲ್ಪ ಹೊತ್ತು ಕಳೆಯದಿದ್ದರೆ ಅವರಿಗೆ ನೆಮ್ಮದಿ ಇರುತ್ತಿರಲಿಲ್ಲ. ಕಾರ್ತಿಕ್ ನರ್ಸಿಂಗ್ ಹೋಮ್ ನಿಂದ ತಡವಾಗಿ ಮನೆಗೆ ಬರುವಾಗ ಇರುತ್ತಿದ್ದ ಅಪರಾಧಪ್ರಜ್ಞೆ ಹಾಗೂ ಭಯ ಈಗ ಇರಲಿಲ್ಲ. ಈಗ ರಜತ್‌ರ ವಿಷಭರಿತ ಕಣ್ಣುಗಳ ಸ್ಥಾನದಲ್ಲಿ ಸ್ವಚ್ಛ ಹಾಗೂ ಪ್ರೇಮಭರಿತ ಮಕ್ಕಳ ಕಣ್ಣುಗಳು ಕಾಣುತ್ತಿದ್ದ. ಪೃಥ್ವಿಯ ರಿಕ್ಷಾ ಶಾಲೆ ಬಿಟ್ಟ ನಂತರ ಇಲ್ಲಿಗೇ ಬರುತ್ತಿತ್ತು. ಹೀಗಾಗಿ ನನಗೆ ಅವನ ಚಿಂತೆಯೂ ಇರಲಿಲ್ಲ. ಆ ಅನಾಥ ಮಕ್ಕಳ ಸಂತೋಷ ನನ್ನ ಸಂತೋಷವಾಗಿತ್ತು. ಅವರ ಬೇಸರ ನನ್ನ ಬೇಸರವಾಗಿತ್ತು. ಯಾವುದೇ ಸ್ಪಂದನವಿಲ್ಲದ ಆ ಹಳೆಯ ಜೀವನ ಎಲ್ಲಿ ಕಳೆದುಹೋಯಿತೋ ತಿಳಿಯಲೇ ಇಲ್ಲ. ಒಂದು ದಿನ ಕರುಣಾಲಯದ ಗೇಟ್‌ವರೆಗೆ ನನ್ನನ್ನು ಬಿಡಲು ಬಂದ ಚೀಫ್, “ಕಾವ್ಯಾ, ನೀವು ಇಲ್ಲಿಗೆ ಬಂದ ಮೇಲೆ ಕರುಣಾಲಯಕ್ಕೆ ಎಲ್ಲ ರೀತಿ ಅನುಕೂಲವಾಗಿದೆ. ನೀವು ಬರೀ ರೋಗಿಗಳಲ್ಲಷ್ಟೇ ಅಲ್ಲ, ಇಲ್ಲಿನ ವಾತಾವರಣದಲ್ಲೂ ಹೊಸ ಜೀವ ತುಂಬಿದ್ದೀರಿ.
“ನಾನು ನಿಮಗೆ ಹೇಗೆ ಕೃತಜ್ಞತೆ ಅರ್ಪಿಸಲಿ? ಮೊದಲು ಈ ಮಕ್ಕಳು ಒಣಗಿದ ಹೂಗಳಂತೆ ಕಾಣುತ್ತಿದ್ದರು. ಆದರೆ ಈಗ ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹದಿಂದ ಬೆಳೆಯುತ್ತಿರುವ ಬಳ್ಳಿಗಳಾಗಿದ್ದಾರೆ. ಈಗ ಅವರ ಕಣ್ಣುಗಳಲ್ಲಿ ಏನಾದರೂ ಸಾಧಿಸಬೇಕೆನ್ನುವ ವಿಶ್ವಾಸವಿದೆ. ಇದಕ್ಕೆಲ್ಲಾ ಕಾರಣ ನೀವೇ,” ಎಂದರು.
ಚೀಫ್‌ರ ಬೆನ್ನು ತಟ್ಟುವಿಕೆಯ ಮಾತುಗಳು ಸುಮಧುರ ಸಂಗೀತದಂತಿತ್ತು. ಬರೀ ಮಕ್ಕಳ ವಿಶ್ವಾಸವಷ್ಟೇ ಅಲ್ಲ, ನನ್ನ ವಿಶ್ವಾಸ ಹೆಚ್ಚಾಗಿದೆಯೆಂದು ನಾನು ಚೀಫ್‌ಗೆ ತಿಳಿಸಲು ಇಚ್ಛಿಸುತ್ತಿದ್ದೆ.
ಈಗ ನಾನು ಮತ್ತೆ ಆಶಾಭಾವದ ಹೊಸ ಹೊಸ ಚಿಗುರುಗಳನ್ನು ಕಾಣುತ್ತಿದ್ದೇನೆ. ಆಸ್ಪತ್ರೆಯ ರೋಗಿಗಳ ಸುಧಾರಿಸಿದ ಆರೋಗ್ಯದಲ್ಲಿ, ಅನಾಥಾಶ್ರಮದ ಮಕ್ಕಳ ಹೊಳೆಯುವ ಕಣ್ಣುಗಳಲ್ಲಿ, ಪೃಥ್ವಿಯ ಉಜ್ವಲ ಭವಿಷ್ಯದಲ್ಲಿ ಎಲ್ಲ ಕಡೆ ಹೊಸ ಹೊಸ ಚಿಗುರುಗಳು ಕಾಣುತ್ತವೆ, ನಡುವೆ ಇರುವ ಮುಳ್ಳುಗಳು ಈಗ ನನ್ನನ್ನು ಹೆದರಿಸುವುದಿಲ್ಲ.
ನಾನು ಈ ಚಿಗುರುಗಳ ತಾಜಾತನ ಹಾಗೂ ಹಸಿರನ್ನು ನೋಡಿ ಅರಳುತ್ತೇನೆ. ಕೀರ್ತನಾಳ ಮಾತು ನಿಜ. ಮನುಷ್ಯನಾಗಿರಲಿ, ಗಿಡಮರಗಳಾಗಿರಲಿ ಜೀವಿಸಿರುವಷ್ಟು ಕಾಲ ಅವುಗಳಲ್ಲಿ ಚಿಗುರುಗಳು ಮೊಳೆಯುತ್ತವೆ. ಜೀವನ ಎಲ್ಲ ಕ್ಷಣಗಳಲ್ಲೂ ವಿಕಾಸ ಹೊಂದುತ್ತಿರುತ್ತದೆ.