ಯು.ಎಸ್‌.ನ ಪ್ರಿನ್ಸ್ ಟನ್‌ ಯೂನಿವರ್ಸಿಟಿಯ ನ್ಯೂರೋಸೈನ್ಸ್ ಇನ್‌ಸ್ಟಿಟ್ಯೂಟ್‌ನ ಅಧ್ಯಯನದಂತೆ ನಮ್ಮ ಸುತ್ತಮುತ್ತಲಿನ ವಾತಾವರಣ ಕೊಳೆಯಾಗಿ ಅವ್ಯವಸ್ಥಿತವಾಗಿದ್ದರೆ ನಾವು ಏಕಾಗ್ರತೆಯಿಂದ ಕೆಲಸ ಮಾಡು, ಹೊಸ ವಿಚಾರಗಳನ್ನು ಆಲೋಚಿಸುವ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಒಂದು ಚಿಕ್ಕ ಮಗು ಒಂದೇ ಸಮನೆ “ಟಾಫಿ….ಟಾಫಿ….ಟಾಫಿ….ನನಗೆ ಟಾಫಿ ಬೇಕು” ಎಂದು ಹಟ ಮಾಡುತ್ತಿದ್ದಾಗ ನಮ್ಮ ಮೂಡ್‌ ಹಾಳಾಗುವಂತೆ ಕೊಳೆ, ಕಸವಿದ್ದರೂ ನಮ್ಮ ಮೂಡ್‌ ಹಾಳಾಗುತ್ತದೆ.

ಆದ್ದರಿಂದ ನಮ್ಮ ಮೆದುಳನ್ನು ಶಾಂತವಾಗಿಟ್ಟು, ಅದನ್ನು ಕೇಂದ್ರೀಕರಿಸಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಾದರೆ, ನಮ್ಮ ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿ ಹಾಗೂ ವ್ಯವಸ್ಥಿತವಾಗಿಟ್ಟುಕೊಳ್ಳಬೇಕು.

ನಾನು ಚಿಕ್ಕವಳಿದ್ದಾಗ ನಮಗೆ ಒಬ್ಬ ಮೆಡಿಟೇಶನ್‌ ಟೀಚರ್‌ ಮೈತ್ರಿ ಮೇಡಂ ಇದ್ದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಅವರ ಬಳಿ ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತಿದ್ದರು. ಏಕಾಗ್ರತೆಯ ಕೊರತೆ ಅಥವಾ ನೆನಪಿನ ಶಕ್ತಿ ಕಡಿಮೆ ಎಂದು ಯಾರಾದರೂ ಹೇಳಿದಾಗ ಇದರ ಬಗ್ಗೆ ಮೈತ್ರಿ ಮೇಡಂ ಒಂದೇ ಪ್ರಶ್ನೆ ಕೇಳುತ್ತಿದ್ದರು, `ನಿಮ್ಮ ಮನೆ ಅಥವಾ ಓದುವ ಕೊಠಡಿಯನ್ನು ಕಡೆಯ ಬಾರಿ ಯಾವಾಗ ಸ್ವಚ್ಛಗೊಳಿಸಿದ್ದೆ?’

ಅವರು ಹೇಳುತ್ತಿದ್ದುದು ನೂರಕ್ಕೆ ನೂರು ನಿಜ ಎಂದು ನನಗೆ ಈಗ ತಿಳಿಯುತ್ತಿದೆ. ನಾನು ಏನಾದರೂ ಮಾಡಲು ಹೊರಟಾಗ ಅಥವಾ ಏಕಾಗ್ರತೆ ಹೊಂದಲು ವಿಫಲಳಾದಾಗ ನನ್ನ ಸುತ್ತಮುತ್ತ ನೋಡುತ್ತೇನೆ. ನನ್ನ ಮಾನಸಿಕ ಸ್ಥಿತಿ ನನ್ನ ಮನೆಯಂತೆಯೇ ಅವ್ಯವಸ್ಥಿತವಾಗಿದೆ ಎಂದು ತಿಳಿಯುತ್ತದೆ. ಕೂಡಲೇ ನಾನು ಮನೆಯನ್ನು ಸ್ವಚ್ಛಗೊಳಿಸತೊಡಗುತ್ತೇನೆ. ಆಶ್ಚರ್ಯವೆಂದರೆ, ಆಗ ನನ್ನ ಮೆದುಳೂ ಸ್ವಚ್ಛವಾಗುತ್ತದೆ ಹಾಗೂ ಕೇಂದ್ರೀಕೃತವಾಗುತ್ತದೆ.

ಲೇಖಕ ಬೆರಿ ಎ. ಡೆನಿಸ್‌ ತಮ್ಮ ಪುಸ್ತಕ `ದಿ ಚೌಚಕಿ ಚಾಲೆಂಜ್‌’ನಲ್ಲಿ ಹೀಗೆ ಬರೆಯುತ್ತಾರೆ. ಚೌಚಕಿ ಎಂದರೆ ಆಗಾಗ್ಗೆ ಸಂಗ್ರಹವಾಗುವ ಏನೂ ಉಪಯೋಗವಿಲ್ಲದಿರುವ ವಸ್ತುಗಳು. ನಾವು ಕೊಂಚ ಸಮಯ ತೆಗೆದುಕೊಂಡು ಈ ಹಳೆಯ ಕೆಲಸಕ್ಕೆ ಬಾರದ ವಸ್ತುಗಳನ್ನು ಎಸೆಯುವುದು ಹಾಗೂ ಸುತ್ತಮುತ್ತ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರೆ ನಮ್ಮ ಮೆದುಳು ಹೆಚ್ಚು ರಚನಾತ್ಮಕವಾಗುತ್ತದೆ. ಶಾಂತಿ ಮತ್ತು ಏಕಾಗ್ರತೆ ಸಿಗುತ್ತದೆ. ಹೊಸ ವಿಚಾರಗಳನ್ನು ಆಲೋಚಿಸಬಹುದು.

ಮನೆ ಕಸದಿಂದ ತುಂಬಿದ್ದರೆ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಆಶ್ಚರ್ಯಕರವಾದರೂ ವಾಸ್ತವವಾಗಿದೆ.

ಮನೆಯಲ್ಲಿ ಹೆಚ್ಚು ಕಸ ಕಡ್ಡಿ ಹರಡಿದ್ದರೆ ನಮ್ಮ ಮೆದುಳಿನ ಕಾರ್ಯ ವಿಧಾನ ನಿಧಾನವಾಗುತ್ತದೆ, ಸಿಕ್ಕುಗಳುಂಟಾಗುತ್ತದೆ. ಹೊಸ ವಿಚಾರಗಳನ್ನು ಆಲೋಚಿಸುವ ಶಕ್ತಿ ಕಡಿಮೆಯಾಗುತ್ತದೆ. ಉತ್ಸಾಹ ಕುಂದುತ್ತದೆ ಮತ್ತು ಮೆದುಳಿನ ಮೇಲೆ ಒತ್ತಡ ಹೆಚ್ಚುತ್ತದೆ ಎಂದು ಡೆನಿಸ್‌ ಹೇಳುತ್ತಾರೆ.

ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ, ಶೇ.69ರಷ್ಟು ಜನ ತಮ್ಮ ಮನೆ ಕಸದಿಂದ ಕೂಡಿದ್ದು, ಅವ್ಯವಸ್ಥಿತವಾಗಿದ್ದರೆ ತಮ್ಮ ಮೆದುಳು ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಸ್ವಚ್ಛ ಮನೆ ಸ್ವಸ್ಥ ಶರೀರ

ನಿಮ್ಮ ಮನೆ ನಿಮ್ಮ ಜೀವನಶೈಲಿಯ ಕನ್ನಡಿಯಾಗಿದೆ. ಕಸವಿರುವ ಒಂದು ಮನೆ ಅಸ್ವಸ್ಥ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ. ಮನೆಯಲ್ಲಿ ಕಸ ತುಂಬಿದ್ದರೆ ಹಾಳುಮೂಳು ತಿಂಡಿಗಳನ್ನು ಹೆಚ್ಚು ತಿನ್ನುತ್ತೀರಿ. ಅದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ.

ಅಂದಹಾಗೆ ನಾವು ಕಸವನ್ನು ನಿಯಂತ್ರಿಸಲಾಗದಿದ್ದಾಗ ಅವ್ಯವಸ್ಥೆ ಹೆಚ್ಚುತ್ತದೆ. ಅದೇ ರೀತಿ ನಮ್ಮ ಡಯೆಟ್‌ ಬಗ್ಗೆ ನಿಯಂತ್ರಣ ಇಲ್ಲದಿದ್ದಾಗ ತೂಕ ಹೆಚ್ಚಾಗುತ್ತದೆ.

ಸುಮ್ಮನೆ ಕಲ್ಪಿಸಿಕೊಳ್ಳಿ. ಹರಿದ ಹಳೆಯ ಪುಸ್ತಕಗಳು ಮತ್ತು ಕಾಗದಗಳು ರಾಶಿಗಟ್ಟಲೆ ಟೇಬಲ್ ಮೇಲೆ ಬಿದ್ದಿವೆ. ಶೂಗಳು ಮೆಟ್ಟಿಲುಗಳ ಮೇಲೆ ಉರುಳಾಡುತ್ತಿವೆ. ಸೋಫಾದ ಮೇಲೆ ಕುಳಿತಾಗ ಕೆಳಗೆ ಬಿದ್ದಿರುವ ಚಪ್ಪಲಿಗಳು ಕಾಲಿಗೆ ತಾಕುತ್ತಿರುತ್ತವೆ. ಒಡೆದ ಗೊಂಬೆಗಳು ಹಾಸಿಗೆಯ ಮೇಲೆ ಬಿದ್ದಿರುತ್ತವೆ. ಅಲ್ಮೆರಾಗಳಲ್ಲಿ ರಾಶಿ ರಾಶಿ ಅಸ್ತವ್ಯಸ್ತವಾಗಿ ಬಿದ್ದಿರುವ ಕೊಳೆ ಬಟ್ಟೆಗಳು, ಕಾಲುಚೀಲಗಳು, ಹಳೆಯ ನಿರರ್ಥಕ ವಸ್ತುಗಳು ಕಣ್ಣಿಗೆ ರಾಚುತ್ತಿರುತ್ತವೆ. ಅಡುಗೆಮನೆಯ ಸ್ಥಿತಿಯಂತೂ ಕೇಳುವುದೇ ಬೇಡ. ಸಿಂಕ್‌ನಲ್ಲಿ ಎಂಜಲು ತಟ್ಟೆಗಳು, ಮುಸುರೆ ಪಾತ್ರೆಗಳು, ಸ್ಲ್ಯಾಬ್‌, ಕೊಳೆಯಾದ ಗ್ಯಾಸ್‌ ಸ್ಟವ್….  ಹೀಗಿರುವಾಗ ಏನಾದರೂ ಒಳ್ಳೆಯ ಅಡುಗೆ ಮಾಡಿ ತಿನ್ನಲು ಮನಸ್ಸಾಗುತ್ತದೆಯೇ? ಖಂಡಿತಾ ಇಲ್ಲ. ನೀವು ಫ್ರಿಜ್‌ನಲ್ಲಿ ಏನಾದರೂ ಮಿಕ್ಕಿದ್ದರೆ ಅದನ್ನು ತೆಗೆದು ತಿನ್ನುತ್ತೀರಿ ಅಥವಾ ಗಂಡನಿಗೆ, “ನಡೀರಿ, ಆಚೆ ಹೋಗಿ ಏನಾದರೂ ತಿನ್ನೋಣ,” ಅಥವಾ “ನೀವು ಬ್ರೆಡ್‌ ತನ್ನಿ, ರಾತ್ರಿ ಪಲ್ಯ ಮಿಕ್ಕಿದೆ. ಸ್ಯಾಂಡ್‌ವಿಚ್‌ ಮಾಡ್ತೀನಿ,” ಎನ್ನುತ್ತೀರಿ.

ಹೀಗೆ ಮಾಡಿದಾಗ ನಿಮ್ಮ ಸಂಬಂಧಗಳ ಸ್ಯಾಂಚ್‌ವಿಚ್‌ ಕೂಡ ಆಗುತ್ತದೆ ಎಂದು ನೀವು ಯೋಚಿಸುವುದಿಲ್ಲ. ಹೃದಯದ ಸಂಬಂಧ ಹೊಟ್ಟೆಯ ಮೂಲಕವೇ ಉಂಟಾಗುತ್ತದೆ. ಆದರೆ ಒಳ್ಳೆಯ ಅಡುಗೆ ತಯಾರಿಸಿ ಮನೆಯವರಿಗೆ ತಿನ್ನಿಸೋಣವೆಂದು ನಿಮಗೆ ಮನಸ್ಸಾಗದಿದ್ದರೆ ಹೃದಯದವರೆಗೆ ವಿಷಯ ಹೇಗೆ ತಲುಪುತ್ತದೆ? ಸಂಬಂಧಗಳಲ್ಲಿ ಅಂತರ ಹೆಚ್ಚಾಗುತ್ತದೆ. ಅಸ್ತವ್ಯಸ್ತ ಅಡುಗೆಮನೆ ಹಾಗೂ ಕಸ ತುಂಬಿದ ಮನೆ ನಿಮ್ಮನ್ನು ಸ್ಥೂಲಕಾಯರನ್ನಾಗಿಸುತ್ತದೆ.

ಒಂದು ವೇಳೆ ನಿಮ್ಮ ಜೀವನಶೈಲಿಯ ಮೇಲೆ ನಿಯಂತ್ರಣ ಹೊಂದದೆ ಮನೆಯಲ್ಲಿ ಕುಳಿತೇ ನಿರರ್ಥಕ ವಸ್ತುಗಳನ್ನು ತಿನ್ನುವುದರಿಂದ ಕೊಬ್ಬು ಹೆಚ್ಚಾಗುತ್ತದೆ. ಅದರ ಬದಲು ಮನೆಯನ್ನು ಸ್ವಚ್ಛವಾಗಿಟ್ಟರೆ ಮನಸ್ಸು ಹಾಗೂ ಮೆದುಳು ಸ್ವಚ್ಛ ಹಾಗೂ ಸಂತಸಗೊಳ್ಳುತ್ತವೆ.

ಸ್ವಚ್ಛತೆ ಹಾಗೂ ಮಾನಸಿಕ ಸ್ವಾಸ್ಥ್ಯ

wardrobe-1

ಶಿಕಾಗೋನ ಒಂದು ಜರ್ನಲ್ ಅಧ್ಯಯನದ ಪ್ರಕಾರ ಮನೆಯನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿ ಇಡುವುದರಿಂದ, ಮುಪ್ಪಿನಲ್ಲಿ ಉಂಟಾಗುವ ಅಲ್ಜೈಮರ್‌ ರೋಗದ ರಿಸ್ಕ್ ಕಡಿಮೆಯಾಗುತ್ತದೆ ಎಂದು ನಿರೂಪಿತವಾಗಿದೆ. ಸ್ವಚ್ಛಗೊಳಿಸುವಾಗ ನೀವು ಕೆಲವು ಸಕಾರಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಮತ್ತು ಕೆಲವು ಹೊಸ ಕೆಲಸಗಳನ್ನು ಮಾಡುತ್ತೀರಿ. ಅದು ಮೆದುಳಿನ ಕ್ರಿಯಾಶೀಲತೆ ಹೆಚ್ಚಿಸುತ್ತದೆ ಹಾಗೂ ನೀವು ಹೆಚ್ಚು ರಿಲ್ಯಾಕ್ಸ್ ಆಗಿರುತ್ತೀರಿ.

ನೀವು ಹೊರಗೆ ಹೋಗುವಾಗ ಸ್ವಚ್ಛವಾದ ಒಂದು ಬಟ್ಟೆಯನ್ನು ಹುಡುಕುತ್ತಿದ್ದು ಅದು ಕೊಳೆಯಾಗಿದ್ದರೆ, ಮನಸ್ಸಿಗೆ ಬಹಳ ಬೇಸರವಾಗುತ್ತದೆ. ಏನು ಮಾಡಬೇಕೆಂದು ಮರೆತುಹೋಗುತ್ತದೆ ಮತ್ತು ಸುಸ್ತಾಗಿ ಕುಳಿತುಬಿಡುತ್ತೀರಿ. ಮೆದುಳಿನೊಂದಿಗೆ ಮನಸ್ಸಿನ ಮೇಲೂ ಒತ್ತಡ ಹೆಚ್ಚಾಗುತ್ತದೆ. ಹೀಗೆ ನಿಮ್ಮ ಇಡೀ ಕಾರ್ಯಕ್ರಮಕ್ಕೆ ಹೊಡೆತ ಬೀಳುತ್ತದೆ.

ಅದಕ್ಕೆ ಬದಾಲಾಗಿ ನಿಮಗೆ ಎಲ್ಲ ವಸ್ತುಗಳೂ ಸರಿಯಾದ ಜಾಗದಲ್ಲಿ ಸ್ವಚ್ಛವಾಗಿ ಸಿಕ್ಕರೆ ನೀವು ಯೋಚಿಸಿದ್ದ ಎಲ್ಲ ಕೆಲಸಗಳೂ ಸುಲಭವಾಗಿ ಒಂದೊಂದಾಗಿ ನಡೆಯುತ್ತವೆ. ಆಗ ಮನೆಯಲ್ಲಿ ಹಾಗೂ ಸಂಬಂಧಗಳಲ್ಲಿ ಯಾವುದೇ ರೀತಿಯ ಗೊಂದಲವಾಗಲೀ ಕೋಲಾಹಲವಾಗಲೀ ಉಂಟಾಗುವುದಿಲ್ಲ.

– ಗಿರಿಜಾ ಶಂಕರ್‌

ಇವನ್ನು ಅನುಸರಿಸಿ

ದಿನ ಸ್ವಚ್ಛತೆಗಾಗಿ ಕೊಂಚ ಸಮಯವನ್ನು ನಿಗದಿಪಡಿಸಿ. ಕೆಲಸದ ಒತ್ತಡವನ್ನು ಒಂದೇ ಸಲ ಹೊರುವಂತಾಗದಿರಲಿ.

ಕಸವನ್ನು ಒಟ್ಟುಗೂಡಿಸಬೇಡಿ. ಕೊಳೆಯಾದ ಉಡುಪುಗಳು, ಸಿಂಕ್‌ನಲ್ಲಿ ಬಿದ್ದಿರುವ ಮುಸುರೆ ಪಾತ್ರೆಗಳನ್ನು ಕೂಡಲೇ ಸ್ವಚ್ಛಗೊಳಿಸಿ.

ಯಾವುದೇ ವಸ್ತುಗಳನ್ನು ಉಪಯೋಗಿಸಿದ ನಂತರ ಅದೇ ಜಾಗಗಳಲ್ಲಿ ಇಟ್ಟಾಗ ಮನೆ ಸ್ವಚ್ಛವಾಗಿ ಕಾಣಿಸುತ್ತದೆ.

ಎಲ್ಲಾ ಕೋಣೆಗಳಲ್ಲೂ ಡಸ್ಟ್ ಬಿನ್‌ ಇಡಿ. ಕಸಕಡ್ಡಿಗಳನ್ನು ಡಸ್ಟ್ ಬಿನ್‌ನಲ್ಲೇ ಹಾಕಲು ಮಕ್ಕಳಿಗೆ ಕಲಿಸಿಕೊಡಿ.

ಆಫೀಸಿಗೆ ಹೋಗುವ ಮೊದಲು ಸಾಧ್ಯವಾದಷ್ಟೂ ಮನೆಯನ್ನು ಸ್ವಚ್ಛಗೊಳಿಸಿ. ನೀವು ಆಫೀಸಿನಿಂದ ಹಿಂತಿರುಗಿದಾಗ ಸ್ವಚ್ಛವಾದ ಮನೆಯನ್ನು ಕಂಡು ಮನಸ್ಸು ಹಾಗೂ ಮೆದುಳು ಹೆಚ್ಚು ಫ್ರೆಶ್‌ ಆಗುತ್ತದೆ.

ರಾತ್ರಿ ಮಲಗುವ ಮೊದಲು ಸಾಧ್ಯವಾದಷ್ಟೂ  ಸ್ವಚ್ಛತೆಯ ಕೆಲಸ ಮಾಡಿ. ವಿಶೇಷವಾಗಿ ಅಡುಗೆಮನೆಯನ್ನು ವ್ಯವಸ್ಥಿತವಾಗಿಡಿ. ಬೆಳಗಿನ ತರಾತುರಿಯಲ್ಲಿ ನೀವು ಈ ಕೆಲಸ ಮಾಡಲಾಗುವುದಿಲ್ಲ. ಕಸ ಸಂಗ್ರಹವಾಗುತ್ತದೆ.

ಫ್ರಿಜ್‌, ಟಿ.ವಿ. ಇತ್ಯಾದಿಗಳ ಮೇಲೆ ಆಗಾಗ್ಗೆ ನಾವು  ಬಿಲ್‌ಗಳು, ಫೋನ್‌ನಂ. ಇತ್ಯಾದಿ ಕಾಗದಗಳನ್ನು ಇಡುತ್ತೇವೆ. ಅದರಿಂದ ಕೊಳೆ ತುಂಬಿಕೊಳ್ಳುತ್ತದೆ. ಅವನ್ನೆಲ್ಲಾ ತೆಗೆದು ಅಗತ್ಯ ವಿಷಯಗಳಾದ ಫೋನ್‌ ನಂಬರ್‌, ಬಿಲ್ ಅಮೌಂಟ್‌, ಅಡ್ರೆಸ್ ಇತ್ಯಾದಿಗಳನ್ನು ಕ್ಯಾಲೆಂಡರ್‌ ಮೇಲೆ ಬರೆದು ಇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ