ಇದೀಗ  ತಾನೇ ಹುಟ್ಟಿದ ಎಳೆ ಕೂಸಿಗೆ ಪ್ರಪಂಚದ ಪ್ರತಿಯೊಂದು ವಸ್ತು ಹೊಸದೇ ಆಗಿರುವಂತೆ, ಜನರು ಹೊಸತನವನ್ನು ಎಲ್ಲದರಲ್ಲೂ ಹುಡುಕುತ್ತಲೇ ಇರುತ್ತಾರೆ, ಇದು ಜೀವಮಾನವಿಡೀ ನಡೆಯುತ್ತಲೇ ಇರುತ್ತದೆ. ಹೊಸ ಜಾಗಗಳು, ಹೊಸ ಉಡುಗೆಗಳು, ಹೊಸ ತಿನಿಸು, ಹೊಸ ಜ್ಞಾನ, ಹೊಸ ಬಗೆಯ ಮನರಂಜನೆ, ಹೊಸ ಸಾಹಸ…… ಹೀಗೆ ಪಟ್ಟಿ ಬೆಳೆಯುತ್ತದೆ. ಒಟ್ಟಾರೆ ಹೊಸತೆಂಬುದು ಎಲ್ಲರಿಗೂ ಅತ್ಯಗತ್ಯ.

ಈ ನಿಟ್ಟಿನಲ್ಲಿ ಪ್ರಕೃತಿ ಮಾನವನಿಗೆ ಎಂದೂ ನಿರಾಸೆ ಮಾಡಿಲ್ಲ. ಆಕೆ ಪ್ರತಿ ವರ್ಷ ಋತುಮಾನಕ್ಕೆ ತಕ್ಕಂತೆ ಬದಲಾಗುತ್ತಲೇ ಇರುತ್ತಾಳೆ. ಇದು ಸಮಯಕ್ಕೆ ಸಂಬಂಧಿಸಿದಂತೆ ನಿಯಮಬದ್ಧವಾಗಿ ನಡೆಯುತ್ತಿರುತ್ತದೆ. ಪಾಶ್ಚಿಮಾತ್ಯರಲ್ಲಿ ಬೇಸಿಗೆ, ಮಳೆಗಾಲ, ಚಳಿಗಾಲ, ವಸಂತಕಾಲ ಎಂಬಂತೆ ಭಾರತದಲ್ಲಿ ಪ್ರಕೃತಿಯನ್ನು ನಾವು 6 ಋತುಗಳಲ್ಲಿ ಕಾಣಬಯಸುತ್ತೇವೆ. ಗ್ರೀಷ್ಮ, ವರ್ಷ, ಶರತ್‌, ಹೇಮಂತ, ಶಿಶಿರ ಹಾಗೂ ವಸಂತ.

ugadi-pachad

ಬೇಸಿಗೆಯ ಕಡು ಬಿಸಿಲಿನಿಂದ ಚಳಿಗಾಲದ ಕುಳಿರ್ಗಾಳಿಯವರೆಗೆ, ಮಳೆಗಾಲದ ತುಂತುರು ಹನಿಗಳಿಂದ ವಸಂತಕಾಲದ ಸುರಸುಂದರ ತರುಲತೆಗಳವರೆಗೆ, ಅರಳಿ ಹಿಗ್ಗುವ ಹೂಗಳಿಂದ ಕಾಯಿ ಹಣ್ಣುಗಳವರೆಗೆ ಎಲ್ಲೆಲ್ಲೂ ಪ್ರಕೃತಿಯ ಆಹ್ಲಾದಕರ ವಾತಾವರಣ ಕಂಡುಬರುತ್ತದೆ. ಸಂತಸ ಅರಳುವ ಈ ಸಮಯದಲ್ಲಿ ರಮ್ಯ ಚೈತ್ರಕಾಲ ಧರೆಗಿಳಿದು ಬರುತ್ತದೆ.

ಈ ರೀತಿಯ ಎಲ್ಲಾ ಬದಲಾವಣೆಗಳನ್ನೂ ಸೇರಿಸಿ ಒಂದು ವರ್ಷದ ಕಾಲಾವಧಿ ಎಂದು ಹೇಳುತ್ತೇವೆ. ಇಂಥ ಹೊಸರ್ಷದ ಮೊದಲ ದಿನವನ್ನೇ ವಿಶ್ವಾದ್ಯಂತ ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಇದರಲ್ಲಿನ ಒಂದು ಸಾಮಾನ್ಯ ಅಂಶವೆದರೆ, ಇದನ್ನು ಕಟಾವಿನ ಕಾಲದ ನಂತರ ಆಚರಿಸಲಾಗುತ್ತದೆ. ಎಲ್ಲೆಡೆ ಕಣಜಗಳು ತುಂಬಿರುತ್ತವೆ, ಪ್ರಕೃತಿ ರಮಣೀಯವಾಗಿ ಕಣ್ಮನ ತುಂಬಿ ತುಳುಕುವಂತಿರುತ್ತದೆ. ಎಲ್ಲೆಲ್ಲೂ ಹಸಿರು, ಮಾವಿನ ತಳಿರು, ಬೇವಿನ ಚಿಗುರು, ಬಣ್ಣ ಬಣ್ಣದ ಹೂಗಳ ಚಿತ್ತಾರ ಎಲ್ಲೆಲ್ಲೂ ರಂಗೋಲಿ ಬಿಡಿಸಿದಂತಿರುತ್ತದೆ.

HYM16UGADI-2_66032e

ಹಿಂದೆ ಮೊಘಲರ ಆಳ್ವಿಕೆಯ ಸಂದರ್ಭದಲ್ಲಿ ಅವರು ಇದನ್ನು ಪರಿಪಾಲಿಸದೆ, ಪ್ರಾಚೀನ ಕಾಲಕ್ಕೆ ತಕ್ಕಂತೆ ಚಂದ್ರನ ಚಲನವಲನ ಆಧರಿಸಿದ `ಹಿಜರಿ’ ಕ್ಯಾಲೆಂಡರ್‌ ಅನುಸರಿಸುತ್ತಿದ್ದರು. ಆದರೆ ಬೆಳೆಯ ಚಕ್ರ ಸೂರ್ಯನನ್ನು ಅನುಸರಿಸುತ್ತದೆ, ಇದನ್ನೇ ಹಿಂದೂ ಪಂಚಾಂಗದಲ್ಲೂ ಪ್ರತಿಪಾದಿಸಲಾಗಿದೆ. ಹೀಗಾಗಿ ಜನಸಾಮಾನ್ಯರಲ್ಲಿ ದೊಡ್ಡ ಗೊಂದಲ ಉಂಟುಮಾಡಿತು. ಜೊತೆಗೆ ಸುಂಕ ವಸೂಲಿ ಮಾಡುವ ಅಧಿಕಾರಿಗಳು ಹಾಗೂ ತೆರಿಗೆ ಪಾವತಿಸುವ ಪ್ರಜೆಗಳ ಮಧ್ಯೆ ಭಾರಿ ರಗಳೆ ಎಬ್ಬಿಸಿತು. ಕೊನೆಗೆ ಅಕ್ಬರ್ ಚಕ್ರವರ್ತಿ ಇದಕ್ಕೊಂದು ಪರಿಹಾರ ಹುಡುಕುವಂತೆ ತನ್ನ ಆಸ್ಥಾನದ ಜ್ಯೋತಿಷಿಗೆ ತಿಳಿಸಿದ. ಕೊನೆಗೆ ಜ್ಯೋತಿಷಿಗಳ ತಂಡ ಹೊಸತೊಂದು ವಿಧಾನದ ಪಂಚಾಂಗ ರೂಪಿಸಿತು. ಇದರಲ್ಲಿ ಸೂರ್ಯನ ಚಲನವಲನ ಆಧರಿಸಿ ತಿಂಗಳು ಗುರುತಿಸಲ್ಪಟ್ಟರೆ, ಚಂದ್ರನ ಚಲನವಲನವನ್ನೂ ಅದು ಅಂತರ್ಗತ ಮಾಡಿಕೊಳ್ಳುವಂತೆ ರೂಪಿಸಲಾಗಿತ್ತು. ಇದರಿಂದ ಎಲ್ಲರಿಗೂ ಸಂತೋಷವಾಯಿತು. ಮುಂದೆ ಅದುವೇ ಕ್ರಮವಾಗಿ ಸೌರಮಾನ ಹಾಗೂ ಚಾಂದ್ರಮಾನ ಪಂಚಾಂಗಗಳಾಗಿ ರೂಪಿತಗೊಂಡವು. ಹೀಗಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಚಾಂದ್ರಮಾನ ಪಂಚಾಂಗ ಚಾಲ್ತಿಗೆ ಬಂದಿತು ಹಾಗೂ ತಮಿಳುನಾಡು, ಕೇರಳ, ಪಂಜಾಬ್‌, ಪ.ಬಂಗಾಳದಂಥ ರಾಜ್ಯಗಳಲ್ಲಿ ಸೌರಮಾನ ಪಂಚಾಂಗ ಚಾಲ್ತಿಯಲ್ಲಿದೆ.

ನಮ್ಮ ಭಾರತ ಕೇವಲ ಒಂದು ದೇಶ ಮಾತ್ರ ಆಗಿರದೆ ಒಂದು ಉಪಖಂಡವೇ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ. ಇಲ್ಲಿ ಹಲವು ಬಗೆಯ ಭಾಷೆ, ಧರ್ಮ, ಸಂಸ್ಕೃತಿ, ಉಡುಗೆ ತೊಡುಗೆ, ಆಹಾರ ಕ್ರಮಗಳು ವಿಭಿನ್ನ ರೀತಿಯಲ್ಲಿ ಮೇಳೈಸಿವೆ. ಅದರಲ್ಲೂ ಒಂದು ಬಗೆಯ ಏಕತೆ ಇರುವುದು ಸುಸ್ಪಷ್ಟ. ಹೀಗಾಗಿ `ವಿಭಿನ್ನತೆಯಲ್ಲಿ ಏಕತೆ’ ನಮ್ಮ ದೇಶದ ಅತಿ ದೊಡ್ಡ ವೈಶಿಷ್ಟ್ಯವಾಗಿದೆ.

ಹೀಗಾಗಿಯೇ ಹೊಸ ವರ್ಷದ ಆರಂಭದ ದಿನವನ್ನು ಆಯಾ ಪ್ರಾಂತ್ಯಗಳಿಗೆ ಅನುಗುಣವಾಗಿ, (ವಿಭಿನ್ನ ಆಂಗ್ಲ ದಿನಾಂಕಗಳ ಪ್ರಕಾರ) ಬೇರೆ ಬೇರೆ ದಿನ ಆಚರಿಸುವ ಕ್ರಮ ರೂಢಿಗೆ ಬಂದಿತು. ಈ ಕಾರಣದಿಂದಾಗಿಯೇ ಚೈತ್ರ ಮಾಸ ಶುಕ್ಲ ಪಕ್ಷದ ಪಾಡ್ಯದಂದು ನಮ್ಮ ಕರ್ನಾಟಕ, ಆಂಧ್ರ, ಮಹಾರಾಷ್ಟ್ರದ ರಾಜ್ಯಗಳಲ್ಲಿ `ಚಾಂದ್ರಮಾನ ಯುಗಾದಿ’ ವರ್ಷದ ಮೊದಲ ದಿನಿವೆನಿಸಿದರೆ, ಇದರ 2 ವಾರಗಳ ಅಂತರದಲ್ಲಿ ಸೌರಮಾನ ಯುಗಾದಿಯು ತಮಿಳುನಾಡಿನಲ್ಲಿ ಪುತ್ತಾಂಡುವಿಳಾ, ಕೇರಳದಲ್ಲಿ ವಿಷು, ಪಶ್ಚಿಮ ಬಂಗಾಳದಲ್ಲಿ ಪೊಯಿಲಾ ಬೈಸಾಖಿ, ಪಾರ್ಸಿಗಳಲ್ಲಿ ನರೋಜ್‌, ಸಿಂಧಿಗಳಲ್ಲಿ ಚೇಟಿ ಚಾಂದ್‌, ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ವಸಂತ ಪಂಚಮಿಯಾಗಿ ಆಚರಣೆಯಲ್ಲಿದೆ. ಗುಜರಾತ್‌, ರಾಜಾಸ್ಥಾನ್‌ ರಾಜ್ಯಗಳಲ್ಲಿ ದೀಪಾವಳಿಯಿಂದ (ನರಕ ಚತುರ್ದಶಿಯ ಮಾರನೇ ದಿನದಿಂದ) ಹೊಸ ವರ್ಷ ಮೊದಲುಗೊಳ್ಳುತ್ತದೆ.

ಒಟ್ಟಾರೆ ಎಲ್ಲರೂ ತಂತಮ್ಮ ಹೊಸ ವರ್ಷದ ಮೊದಲ ದಿನವನ್ನು ಅತ್ಯಂತ ಸಾಂಪ್ರದಾಯಿಕವಾಗಿ, ಎಲ್ಲರೂ ಒಟ್ಟುಗೂಡಿ ಆಚರಿಸುತ್ತಾರೆ. ಮನೆ ಸುಣ್ಣಬಣ್ಣ ಕಂಡು, ಒಳಾಲಂಕಾರದಿಂದ ಹೊಸ ಕಳೆ ಬಂದಿರುತ್ತದೆ. ಮನೆಯ ಮುಂದೆ ತಳಿರುತೋರಣ, ಬಣ್ಣ ಬಣ್ಣದ ರಂಗವಲ್ಲಿ ಚಿತ್ತಾರಗಳು ಎಲ್ಲರ ಕಣ್ಮನ ತಣಿಸುತ್ತವೆ. ಹೊಸ ಬಟ್ಟೆ ತೊಟ್ಟು, ಪಂಚಾಂಗ ಶ್ರವಣ ಮಾಡಿ, `ಬೇವುಬೆಲ್ಲ’ ಹಂಚಿ ಕಷ್ಟಸುಖ ಸಮನಾಗಿ ಸ್ವೀಕರಿಸಬೇಕೆಂದು ಸಂಕಲ್ಪ ತೊಡುತ್ತಾರೆ. ಗೃಹಿಣಿಯರು ವಿವಿಧ ಬಗೆಯ ಭಕ್ಷ್ಯಭೋಜ್ಯಗಳು, ಪಾಯಸ ಪರಮಾನ್ನಗಳನ್ನು ತಯಾರಿಸಿ ಎಲ್ಲರೊಂದಿಗೆ ಸವಿಯುತ್ತಾರೆ. ಆ ದಿನ ವಿಶೇಷ ಬಗೆಯ ಸಂಗೀತ ಮಹೋತ್ಸವ, ಸಡಗರ ಸಂಭ್ರಮದಿಂದ ವಿವಿಧ ಜಾನಪದ ನೃತ್ಯಗಳನ್ನು ಮಾಡುತ್ತಾರೆ. ದಕ್ಷಿಣ  ಕನ್ನಡ, ಕರಾವಳಿ ಪ್ರದೇಶಗಳಲ್ಲಿ ಯಕ್ಷಗಾನ ಇರುವಂತೆ, ಕೇರಳದಲ್ಲಿ ಮೋಹಿನಿಯಾಟ್ಟಂ, ತಮಿಳುನಾಡಲ್ಲಿ ತೆರು ಕೂತ್ತು, ಅಸ್ಸಾಮಿನಲ್ಲಿ ಬಿಹು, ಪಂಜಾಬ್‌ನಲ್ಲಿ ಭಾಂಗ್ರಾ ಜಾನಪದ ನೃತ್ಯಗಳು ಪ್ರಖ್ಯಾತವಾಗಿವೆ.

ಭಾರತವನ್ನು ಒಳಗೊಂಡಂತೆ ವಿಶ್ವಾದ್ಯಂತ ಜನವರಿ ಒಂದರಂದು ಹೊಸ ವರ್ಷಕ್ಕೆ ಸ್ವಾಗತ ಕೋರುವುದು ಪಾಶ್ಚಾತ್ಯ ರೂಢಿ ಎನಿಸಿದೆ. ಡಿಸೆಂಬರ್‌ 31ರ ನಡುರಾತ್ರಿಯೇ ಎಲ್ಲರೂ ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಹೋಟೆಲ್ ‌ಕ್ಲಬ್‌ಗಳಲ್ಲಿ ಸ್ನೇಹಿತರೊಡಗೂಡಿ ತಮ್ಮದೇ ವಿಶಿಷ್ಟ, ವಿನೂತನ ವಿಧಾನಗಳಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಒಟ್ಟಾರೆ ಹೊಸ ಬದಲಾವಣೆಗೆ ಇದು ನಾಂದಿ. ವರಕವಿ ದ.ರಾ. ಬೇಂದ್ರೆಯರು ಹೇಳುವಂತೆ, `ವರುಷಕೊಂದು ಹೊಸತು ಜನ್ಮ ಅಖಿಲ ಜೀವಜಾತಕೆ….. ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೆ ಏತಕೆ….. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ….. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…… ನಮ್ಮನಷ್ಟೆ ಮರೆತಿದೆ.’

ಈ ಗಾನ ಲಹರಿ ನಿತ್ಯನೂತನ, ದಿವ್ಯ ಚೇತನವಾಗಿ ರೇಡಿಯೋ, ಸಿ.ಡಿ. ಮುಖಾಂತರ ಎಲ್ಲೆಡೆ ಸಹಜವಾಗಿ ಹರಿದಾಡಿದಾಗಲೇ ನಮ್ಮ ಯುಗಾದಿಯ ಆಚರಣೆಗೊಂದು ಕಳೆ ಬರುವುದು.

ಓದುಗರೆಲ್ಲರಿಗೂ `ಜಯ’ ನಾಮ ಸಂವತ್ಸರ ಸನ್ಮಂಗಳನ್ನು ಉಂಟುಮಾಡಿ, ಅಷ್ಟೈಶ್ವರ್ಯ, ಅಭಿವೃದ್ಧಿ ತರಲಿ ಎಂದು ಗೃಹಶೋಭಾ ಹಾರ್ದಿಕ ಶುಭಾಶಯ ಕೋರುತ್ತಾಳೆ!

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ