ರಾಜಶ್ರೀ ಮೈಸೂರಿನಲ್ಲಿ ಖರೀದಿ ಮಾಡುತ್ತಿರುವಾಗ ಒಂದು ಧ್ವನಿ ಕೇಳಿ ಚಕಿತಳಾದಳು. ಅವಳು ಅತ್ತಿತ್ತ ತಿರುಗಿ ನೋಡಿದಳು. ಆದರೆ ಯಾರೊಬ್ಬರೂ ಕಾಣಿಸಲಿಲ್ಲ. ಬಹುಶಃ ಅದು ತನ್ನದೇ ಹೆಸರಿನ ಬೇರೆ ಯಾರನ್ನೋ ಕೂಗಿದ ಶಬ್ದವಾಗಿರಬಹುದು ಎಂದುಕೊಂಡು ಆಕೆ ಅಂಗಡಿಯವನಿಗೆ ಹಣ ಕೊಟ್ಟು ಹೆಜ್ಜೆ ಹಾಕಬೇಕು ಎನ್ನುತ್ತಿರುವಾಗಲೇ ಪುನಃ `ರಾಜಶ್ರೀ’ ಎಂದು ಕೂಗಿದ ಶಬ್ದ ಕೇಳಿಸಿತು. ಈ ಸಲ ಅವಳು ತಿರುಗಿ ನೋಡಿದಾಗ ಚಾಕಲೇಟ್ ಬಣ್ಣದ ಡ್ರೆಸ್ ತೊಟ್ಟಿದ್ದ ಯುವತಿಯೊಬ್ಬಳು ತನ್ನತ್ತಲೇ ಓಡಿ ಬರುತ್ತಿರುವುದು ಕಾಣಿಸಿತು.
ರಾಜಶ್ರೀ ಅವಳ ಕಡೆಯೇ ದಿಟ್ಟಿಸಿ ನೋಡುತ್ತ ಆಕೆ ಯಾರಿರಬಹುದು ಎಂದು ತರ್ಕ ಮಾಡಿದಳು. ತಕ್ಷಣವೇ ಹೊಳೆದಂತಾಗಿ, “ನೀವಾ, ನೀನಿಲ್ಲಿ?” ಎಂದು ಆಶ್ಚರ್ಯಚಕಿತಳಾಗಿ ಕೇಳಿದಳು.
ಅವಳು ತನ್ನ ಹಳೆಯ ಗೆಳತಿಯನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದಳು.
“ನಾವಿಬ್ಬರೂ ಅಗಲಿ 5 ವರ್ಷಗಳೇ ಆದಲ್ಲ. ಹೇಗಿದ್ದೀಯಾ ನೀನು?” ನೀಲಾ ಅಚ್ಚರಿಯ ಧ್ವನಿಯಲ್ಲಿ ಕೇಳಿದಳು.
“ನಾನು ಸೆಮಿನಾರ್ ಅಟೆಂಡ್ ಮಾಡಲು ಇಲ್ಲಿಗೆ ಬಂದಿದ್ದೆ, ಇಂದು ರಾತ್ರಿ ವಾಪಸ್ ಹೋಗಲೇಬೇಕು. ನಿನ್ನನ್ನು ಇಲ್ಲಿ ಕಂಡು ನನಗೆ ನಂಬಿಕೆಯೇ ಬರ್ತಿಲ್ಲ. ನಾವಿಬ್ಬರೂ ಹೀಗೆ ಭೇಟಿ ಆಗ್ತೀವಿ ಎಂದು ಖಂಡಿತ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ,” ರಾಜಶ್ರೀ ಆಶ್ಚರ್ಯಬೆರೆತ ಸ್ವರದಲ್ಲಿ ಹೇಳಿದಳು, “ನಿನ್ನೊಂದಿಗೆ ಇನ್ನೂ ಬಹಳಷ್ಟು ಮಾತನಾಡಬೇಕಿದೆ. ನಿನಗೆ ಅರ್ಜೆಂಟ್ ಕೆಲಸ ಏನೂ ಇಲ್ಲ ತಾನೆ? ಯಾವುದಾದರೂ ಕಾಫಿ ಶಾಪ್‌ಗೆ ಹೋಗಿ ಕಾಫಿ ಕುಡೀತಾ ಮಾತಾಡೋಣ ಬಾ.”
“ಬೇಡ ಬೇಡ ರಾಜಶ್ರೀ. ಇಲ್ಲಿಯೇ ಸಮೀಪದಲ್ಲಿಯೇ ನನ್ನ ಮನೆ ಇದೆ. ಅಲ್ಲಿಯೇ ಹೋಗಿ ಹರಟೆ ಹೊಡೆಯೋಣ. ಬಹಳ ವರ್ಷಗಳ ನಂತರ ಭೇಟಿಯಾಗಿದ್ದೇವಾ?” ನೀಲಾ ತನ್ನ ಮನಸ್ಸಿನ ಮಾತು ಹೇಳಿದಳು. ರಾಜಶ್ರೀ ನೀಲಾಳೊಂದಿಗೆ ಹರಟೆ ಹೊಡೆಯುವ ಅವಕಾಶ ತಪ್ಪಿಸಿಕೊಳ್ಳಲು ಸಿದ್ಧಳಿರಲಿಲ್ಲ. ಅವಳು ತನ್ನ ಅತ್ತೆಗೆ ಫೋನ್ ಮಾಡಿ ನಾನು ಸಂಜೆ ಹೊತ್ತಿಗೆ ವಾಪಸ್ ಬರ್ತೀನಿ ಎಂದು ಹೇಳಿದಳು. ಅಷ್ಟರಲ್ಲಿಯೇ ನೀಲಾ ಆಟೋವೊಂದನ್ನು ನಿಲ್ಲಿಸಿದ್ದಳು. ಮಾತುಮಾತಿನಲ್ಲಿ ಮನೆ ಯಾವಾಗ ಬಂತು ಅಂತಾ ಗೊತ್ತೇ ಆಗಲಿಲ್ಲ.
“ವಾಹ್! ನೀಲಾ, ನೀನು ಮೈಸೂರಿನಲ್ಲೇ ಫ್ಲ್ಯಾಟ್ ತಗೊಂಡೆ ಅನ್ನು.”
“ಇಲ್ಲ, ಇಲ್ಲ, ಇದು ಬಾಡಿಗೆ ಫ್ಲ್ಯಾಟ್.”
ಮೂರನೇ ಮಹಡಿಯಲ್ಲಿ ನೀಲಾಳ ಪುಟ್ಟದಾದ ಫ್ಲ್ಯಾಟ್ ನೋಡಿ ರಾಜಶ್ರೀ ಬಹಳ ಖುಷಿಗೊಂಡಳು. ಕೋಣೆಯನ್ನು ಅಂದವಾಗಿ ಅಲಂಕರಿಸಲಾಗಿತ್ತು.
ನೀಲಾ ಆರಂಭದಿಂದಲೇ ರಿಸರ್ವ್ ಮೈಂಡೆಡ್. ಆದರೆ ರಾಜಶ್ರೀ ಬಿಂದಾಸ್ ಪ್ರವೃತ್ತಿಯವಳು. ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜಿನತನಕ ಇಬ್ಬರ ಸ್ನೇಹ ಉತ್ತುಂಗ ತಲುಪಿತ್ತು. ರಾಜಶ್ರೀಗೆ ಹುಬ್ಬಳಿಯ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು ಹಾಗೂ ನೀಲಾ ಮೈಸೂರಿಗೆ ಹೊರಟುಹೋದಳು. ಆರಂಭದಲ್ಲಿ ಇಬ್ಬರೂ ಗೆಳತಿಯರು ಪತ್ರ ಹಾಗೂ ಫೋನ್ ಮುಖಾಂತರ ಸಂಪರ್ಕದಲ್ಲಿದ್ದರು. ಆ ಬಳಿಕ ಇಬ್ಬರೂ ಅದೆಷ್ಟು ವ್ಯಸ್ತರಾಗಿ ಬಿಟ್ಟರೆಂದರೆ, ಹಲವು ವರ್ಷಗಳ ಬಳಿಕ ಇಂದೇ ಭೇಟಿಯಾಗಿದ್ದರು.
ಮನೆ ತಲುಪುತ್ತಿದ್ದಂತೆಯೇ ರಾಜಶ್ರೀ ತನ್ನ ಕೆರಿಯರ್ ಹಾಗೂ ಮದುವೆ ನಿಶ್ಚಯ ಆಗುವ ಬಗ್ಗೆ ಎಲ್ಲ ಮಾಹಿತಿ ನೀಡಿದಳು. ಆದರೆ ನೀಲಾ ಮಾತ್ರ ಇಂತಹ ಪ್ರಶ್ನೆಗಳ ಉತ್ತರದಿಂದ ದೂರ ದೂರ ಇರಲು ಪ್ರಯತ್ನಿಸುತ್ತಿದ್ದಳು. ರಾಜಶ್ರೀ ಸೋಫಾದ ಮೇಲೆ ಕೂರುತ್ತಿದ್ದಂತೆಯೇ ಉತ್ಸಾಹದಿಂದ ಕೇಳಿದಳು, “ನೀಲಾ, ನೀನು ಈವರೆಗೂ ಮದುವೆಯ ಬಗ್ಗೆ ಏನಾದರೂ ಯೋಚಿಸಿದಿಯೋ ಅಥವಾ ಇಲ್ಲವೇ?”
“ಇಲ್ಲ, ಯೋಚಿಸಿಲ್ಲ,” ಎಂದು ಹೇಳಿದ ಆಕೆ “ನೀನು ಕುಳಿತುಕೊ, ಟೀ ತೆಗೆದುಕೊಂಡು ಬರ್ತೀನಿ,” ಎಂದು ಒಳಹೋದಳು.
ರಾಜಶ್ರೀ ನೀಲಾಳ ಮನೆಯನ್ನು ಅವಲೋಕಿಸತೊಡಗಿದಳು. ಡ್ರಾಯಿಂಗ್ ರೂಮ್ ನ್ನು ಅಂದವಾಗಿ ಅಲಂಕರಿಸಲಾಗಿತ್ತು. ಒಂದು ಶೆಲ್ಫ್ ನಲ್ಲಿ ಕೇವಲ ಪುಸ್ತಕಗಳು ಮಾತ್ರ ಇದ್ದವು. ನೀಲಾ ಆಟೋದಲ್ಲಿ ಬರುವಾಗಲೇ ತಾನೊಂದು ಪಬ್ಲಿಕೇಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಳು. ಅಲ್ಲಿ ಹಾಕಲಾಗಿದ್ದ ಪ್ರತಿಯೊಂದು ಚಿತ್ರಗಳನ್ನು ಆಕೆ ಗಮನವಿಟ್ಟು ನೋಡತೊಡಗಿದಳು. ಆಗ ಅವಳಿಗೆ ತನ್ನ ಮತ್ತು ನೀಲಾಳೊಂದಿಗಿನ ನೆನಪುಗಳು ತಾಜಾ ಆಗತೊಡಗಿದ. ತಾನು ಅವಳನ್ನು ಭೇಟಿಯಾಗ್ತೀನಿ ಅಂತ ರಾಜಶ್ರೀ ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ರಾಜಶ್ರೀ ಅಲ್ಲಿಂದ ಬೆಡ್ ರೂಮಿನ ಕಡೆಗೆ ಹೋದಳು. ಆ ಪುಟ್ಟ ರೂಮ್ ನ್ನು ಕೂಡ ಅಷ್ಟೇ ನೀಟಾಗಿ ಅಲಂಕರಿಸಲಾಗಿತ್ತು. ಅವಳಿಗೆ ಬಹಳ ಹಿತಕರ ಎನಿಸಿತು. ಅವಳು ಅಲ್ಲಿಯೇ ಆರಾಮವಾಗಿ ಕುಳಿತಳು.
“ನೀಲಾ, ನನಗೆ ಏನಾದರೂ ತಿನ್ನಲು ತೆಗೆದುಕೊಂಡು ಬಾ,” ರಾಜಶ್ರೀ ಕೂತಲ್ಲಿಂದಲೇ ಕೂಗಿದಳು. ನೀಲಾ ನಕ್ಕಳು. ಅವಳಿಗಾಗಿಯೇ ಸ್ಯಾಂಡ್‌ವಿಚ್ ತಯಾರಿಸುತ್ತಿದ್ದಳು. ಅವಳು ಅಲ್ಲಿಂದಲೇ ಕೂಗಿ ಹೇಳಿದಳು, “ರಾಜಶ್ರೀ, ನೀನು ಮೈಸೂರಿನಲ್ಲಿ ಇನ್ನೂ ಎಷ್ಟು ದಿನ ಇರ್ತಿಯಾ?”
“ಇಂದು ರಾತ್ರಿಯೇ ನಾನು ರೈಲಿಗೆ ಹೊರಡಬೇಕು. ರಿಸರ್ವೇಶನ್ ಕೂಡ ಆಗಿದೆ.”
“ಇನ್ನು ಕೆಲವು ದಿನ ನೀನು ಇಲ್ಲಿಯೇ ಯಾಕಿರಬಾರದು?”
“ಇಲ್ಲ ನೀಲಾ. ಬಹಳ ಒತ್ತಾಯಿಸಿದಾಗ ಅಮ್ಮ ನನಗೆ ಈ ಸೆಮಿನಾರ್ ಅಟೆಂಡ್ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ. ನಾಳೆ ಹುಡುಗನ ಮನೆಯವರು ನನ್ನನ್ನು ನೋಡಲು ಬರ್ತಿದ್ದಾರೆ.” ರಾಜಶ್ರೀ ಖುಷಿಯಿಂದಲೇ ಹೇಳಿದಳು.
“ರಾಜಶ್ರೀ, ನೀನು ಅರೇಂಜ್ಡ್ ಮ್ಯಾರೇಜ್ ಮಾಡ್ಕೊತಿದೀಯಾ? ನನಗೆ ನಂಬಿಕೆನೇ ಬರ್ತಿಲ್ಲ,” ನೀಲಾ ನಗುತ್ತಲೇ ಕೇಳಿದಳು.
“ಸಂತೋಷ್ ಒಳ್ಳೆ ಹುಡುಗ. ಹ್ಯಾಂಡ್ಸಮ್ ಕೂಡ ಆಗಿದ್ದಾನೆ. ಅವನ ಫೋಟೋ ನೋಡ್ತಿಯಾ?” ಎಂದ ರಾಜಶ್ರೀ, ನಂತರ ಕುತೂಹಲದಿಂದ ನೀಲಾಳ ಡೈರಿಯೊಂದನ್ನು ಎತ್ತಿಕೊಳ್ಳುತ್ತಾ ಕೇಳಿದಳು, “ನಿನಗೆ ಈಗಲೂ ಡೈರಿ ಬರೆಯಲು ಸಮಯ ಸಿಗುತ್ತೆ ಅನ್ನು,” ಎಂದು ಹೇಳುತ್ತಿರುವಂತೆಯೇ ಡೈರಿಯಿಂದ ಕೆಲವು ಫೋಟೋಗಳು ಕೆಳಗೆ ಬಿದ್ದ. ರಾಜಶ್ರೀ ಆ ಚಿತ್ರಗಳನ್ನು ಕೈಗೆತ್ತಿಕೊಂಡು ಗಮನವಿಟ್ಟು ನೋಡತೊಡಗಿದಳು.
ನೀಲಾ ಆ ಚಿತ್ರದಲ್ಲಿ ಯಾರೊ ಒಬ್ಬ ಪುರುಷನೊಂದಿಗೆ ಇದ್ದಳು. ಅತ್ಯಂತ ಆತ್ಮೀಯ ಕ್ಷಣದ ಆ ಚಿತ್ರಗಳು ಆ ವ್ಯಕ್ತಿಯ ಜೊತೆಗೆ ಆಕೆಗೆ ಅದೆಷ್ಟು ನಿಕಟ ಸಂಬಂಧವಿತ್ತು ಎಂಬುದು ಸ್ಪಷ್ಟವಾಯಿತು. ರಾಜಶ್ರೀ ಮತ್ತೆ ಮತ್ತೆ ಆ ಚಿತ್ರಗಳನ್ನೇ ನೋಡುತ್ತಿದ್ದಳು. ಅವಳ ಮುಖಭಾವ ಬದಲಾಗುತ್ತ ಹೋಯಿತು. ಆ ಕೋಣೆ ಸುತ್ತುತ್ತಿರುವಂತೆ ಭಾಸವಾಯಿತು.
ಅಷ್ಟರಲ್ಲಿಯೇ ನೀಲಾ ಒಳಗೆ ಬಂದಳು. ಅವಳು ಟ್ರೇ ಕೆಳಗಿಟ್ಟು ರಾಜಶ್ರೀಯ ಕೈಯಿಂದ ಫೋಟೋಗಳನ್ನು ಗಡಿಬಿಡಿಯಿಂದ ಕಿತ್ತುಕೊಳ್ಳುವ ರೀತಿಯಲ್ಲಿ ತೆಗೆದುಕೊಂಡಳು. ರಾಜಶ್ರೀ ಅಚ್ಚರಿಯಿಂದ ಕೇಳಿದಳು, “ನೀಲಾ, ಏನು ವಿಷಯ?”
ನೀಲಾ ಅವಳ ಕಣ್ತಪ್ಪಿಸಿ ವಿಷಯ ಬದಲಿಸಲು ಪ್ರಯತ್ನಿಸಿದಳು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ರಾಜಶ್ರೀ ಸ್ವಲ್ಪ ಕಠೋರ ಶಬ್ದಗಳಲ್ಲಿಯೇ ಕೇಳಿದಾಗ ನೀಲಾಳ ಕಣ್ಣು ತುಂಬಿಬಂದ. ನಂತರ ಅವಳು ಹೇಳಿದ ವಿಷಯ ಕೇಳಿ ರಾಜಶ್ರೀಗೆ ಕಾಲ ಕೆಳಗಿನ ನೆಲವೇ ಕುಸಿದಂತೆ ಭಾಸವಾಯಿತು.
4 ವರ್ಷಗಳ ಹಿಂದೆ ನೀಲಾ ಮೈಸೂರಿಗೆ ಬಂದಾಗ ಅವಳಿಗೆ ಕುಮಾರ್‌ನ ಪರಿಚಯವಾಯಿತು. ಇಬ್ಬರೂ ಆಗ ಉದ್ಯೋಗಕ್ಕಾಗಿ ಬಹಳ ಸಂಘರ್ಷ ನಡಿಸಿದ್ದರು. ಕಾಲ್ ಸೆಂಟರ್‌ನ ಒಂದು ಇಂಟರ್‌ವ್ಯೂ ಸಂದರ್ಭದಲ್ಲಿ ಆದ ಭೇಟಿ ನಂತರ ಸ್ನೇಹದಲ್ಲಿ ಪರಿವರ್ತನೆಗೊಂಡಿತು. ನೀಲಾಳಿಗೆ ನೌಕರಿಯ ಅಗತ್ಯವಿತ್ತು. ಆದರೆ ದುಬಾರಿ ಬಾಡಿಗೆ ಕೊಡುವುದು ಮಾತ್ರ ಆಕೆಗೆ ಸಾಧ್ಯವಿರಲಿಲ್ಲ. ಏಕೆಂದರೆ ಮನೆಗೆ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಹಣ ಕೊಡುವ ಅಗತ್ಯವಿತ್ತು. ಸದ್ಯಕ್ಕೆ ಕಾಲ್ ಸೆಂಟರ್‌ನ ನೌಕರಿಯ ಆಫರ್‌ನ್ನು ಒಪ್ಪಿಕೊಳ್ಳುವುದು, ನಂತರ ಒಳ್ಳೆಯ ನೌಕರಿ ಸಿಕ್ಕರೆ ಬಿಟ್ಟುಬಿಡುವುದು ಎಂದು ಯೋಚಿಸಿ ಅವಳು ಕಾಲ್ ಸೆಂಟರ್ ನೌಕರಿ ಸೇರಿಕೊಂಡಳು.
ಆಫೀಸ್‌ನಿಂದ ಕರೆದುಕೊಂಡು ಹೋಗಿ ಬಿಡಲು ವ್ಯಾನ್ ಬರುತ್ತಿತ್ತು. ಆದರೆ ಮನೆ ಮಾಲೀಕನಿಗೆ ಮಾತ್ರ ಹುಡುಗಿ ರಾತ್ರಿ ಹೊತ್ತು ಮನೆಯಿಂದ ಹೊರಗೆ ಹೋಗುವುದು ಇಷ್ಟವಿರಲಿಲ್ಲ.
ಅತ್ತ ಕುಮಾರನಿಗೂ ಕೂಡ ಒಂದು ಒಳ್ಳೆಯ ನೌಕರಿ ಸಿಕ್ಕಿತು. ಅವನೀಗ ವಾಸಿಸಲು ಒಂದು ಮನೆ ಹುಡುಕುತ್ತಿದ್ದ. ಮೈಸೂರಿನಲ್ಲಿ ಸುತ್ತಾಡುತ್ತಿದ್ದಾಗ ಅವನು ಒಂದು ಫ್ಲ್ಯಾಟ್‌ನ್ನು ಬಾಡಿಗೆಗೆ ತೆಗೆದುಕೊಳ್ಳುವ ಬಗ್ಗೆ ನೀಲಾಳ ಮುಂದೆ ಪ್ರಸ್ತಾಪವಿಟ್ಟ. ಅವನ ಪ್ರಸ್ತಾಪ ಕೇಳಿ ಅವಳು ಒಮ್ಮೆಲೆ ಗಲಿಬಿಲಿಗೊಂಡಳು.
ಕುಮಾರ್ ಅವಳ ಮುಖಭಾವ ಅರಿತು ಹೇಳಿದ, “ನೀಲಾ, ನೀನು ರಾತ್ರಿ 8 ಗಂಟೆಗೆ ಹೊರಡ್ತೀಯಾ ಹಾಗೂ ಮುಂಜಾನೆ 8 ಗಂಟೆಗೆ ಬರ್ತಿಯಾ. ನಾನು ಮುಂಜಾನೆ 8.30ಕ್ಕೆ ಹೊರಟು ರಾತ್ರಿ 7.30ಕ್ಕೆಲ್ಲ ಬಂದುಬಿಡ್ತೀನಿ. ಮುಂಜಾನೆ ಉಪಾಹಾರದ ಜವಾಬ್ದಾರಿ ನನ್ನದು ಹಾಗೂ ರಾತ್ರಿ ಊಟದ ಜವಾಬ್ದಾರಿ ನಿನ್ನದು. ಈ ರೀತಿಯಾಗಿ ನಾವು ಜೊತೆಗಿದ್ದೂ ಕೂಡ ದೂರ ದೂರ ಇರ್ತೀವಿ.”
ನೀಲಾ ಯೋಚಿಸಲಾರಂಭಿಸಿದಳು. ಸಂಸ್ಕಾರವಂತ ಮನೆತನದ ಆಕೆಗೆ ಈ ಹೊಂದಾಣಿಕೆ ಸ್ವಲ್ಪ ಕಷ್ಟಕರ ಎನಿಸತೊಡಗಿತ್ತು. ಆದರೆ ಕುಮಾರನ ನಿಷ್ಕಳಂಕ ವರ್ತನೆ ಅವಳನ್ನು ಒಪ್ಪಿಸಲು ಸಾಧ್ಯವಾಯಿತು. ಇಬ್ಬರೂ ಪರಸ್ಪರ ಪ್ರಾಮಾಣಿಕತೆಯಿಂದ ಪರಸ್ಪರರಿಗೆ ಜೊತೆ ಕೊಡಲಾರಂಭಿಸಿದರು. ಒಂದು ಗಂಟೆಯ ಸಮಯದಲ್ಲಿ ಇಬ್ಬರೂ ದಿನವಿಡೀ ನಡೆದ ಘಟನೆಯ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಇಬ್ಬರ ಸ್ನೇಹ ಪರಸ್ಪರರ ಸುಖ ದುಃಖದಲ್ಲಿ ನೆರವಾಗತೊಡಗಿತು. ನೀಲಾ ಆ ಎರಡು ಕೋಣೆಯ ಫ್ಲ್ಯಾಟ್‌ನ್ನು ಚೆನ್ನಾಗಿ ಅಲಂಕರಿಸಿದಳು. ಅವನಿಗೆ ಇಷ್ಟವಾಗುವ ಪರದೆಯನ್ನು ಹಾಕಿದಳು. ಅವನು ಅವಳಿಗೆ ಅಡುಗೆ ಕೋಣೆಯಲ್ಲಿ ಎಲ್ಲ ಬಗೆಯ ನೆರವನ್ನು ನೀಡುತ್ತಿದ್ದ.
ಭಾನುವಾರದ ರಜೆ ದಿನದ ವ್ಯವಸ್ಥೆಯನ್ನು ಕೂಡ ತಾನೇ ಮಾಡಿಕೊಂಡಿದ್ದ. ದಿನವಿಡೀ ಇಬ್ಬರೂ ಅಲ್ಲಿ ಇಲ್ಲಿ ಸುತ್ತುತ್ತಿದ್ದರು. ಸಂಜೆ ನೀಲಾ ಮನೆಗೆ ಬರುತ್ತಿದ್ದಂತೆ ಅವನು ತನ್ನ ಸ್ನೇಹಿತರ ಮನೆಗೆ ಹೊರಟುಹೋಗುತ್ತಿದ್ದ. ಮನುಷ್ಯ ಸಂಬಂಧಗಳು ಬಹಳ ವಿಚಿತ್ರವಾಗಿರುತ್ತವೆ. ಅವು ಪರಸ್ಪರರ ಸಹಾಯಕ್ಕೆ ಯಾವಾಗ, ಹೇಗೆ ಬರುತ್ತವೆ ಎಂಬುದು ಗೊತ್ತೇ ಆಗುವುದಿಲ್ಲ. ಕುಮಾರ್ ಹಾಗೂ ನೀಲಾ ಯಾವುದನ್ನು ಸ್ನೇಹ ಎಂದು ಭಾವಿಸಿದ್ದರೋ, ಅದೀಗ ಪ್ರೇಮದಲ್ಲಿ ಬದಲಾಗಿತ್ತು.
ನೀಲಾ ಒಮ್ಮಲೆ ನಿಂತಳು. ಅವಳು ತನ್ನ ಉಸಿರನ್ನು ಬಿಗಿ ಹಿಡಿದು ರಾಜಶ್ರೀಗೆ ಹೇಳಿದಳು. ಮಳೆ ಬರುತ್ತಲಿತ್ತು, ಗಾಳಿಯೂ ಜೋರಾಗಿ ಬೀಸುತ್ತಲಿತ್ತು. ಆಟೋ ಅಥವಾ ಟ್ಯಾಕ್ಸಿ ಸಿಗುವುದು ಹೆಚ್ಚು ಕಡಿಮೆ ಅಸಾಧ್ಯ ಎಂಬಂತಾಗಿತ್ತು. ಮಳೆ ನಿಂತ ಬಳಿಕ ಕುಮಾರ್ ತನ್ನ ಗೆಳೆಯನ ರೂಮಿಗೆ ಹೋಗುವವನಿದ್ದ. ಆದರೆ ಮಳೆ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿರಲಿಲ್ಲ.
ಬಹುಶಃ ಆ ಬಿರುಗಾಳಿ ಸಹಿತದ ಮಳೆಯಲ್ಲಿ ಕುಮಾರ್ ಹೇಗೋ ಹೊರಟುಹೋಗುತ್ತಿದ್ದ. ನೀಲಾಳೇ ಅವನನ್ನು ತಡೆದಳು. ಆದರೆ ಆ ರಾತ್ರಿ ತನ್ನ ಜೀವನದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಬಹುದು ಎಂದು ಆಕೆ ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ತೀವ್ರ ಚಳಿಗಾಳಿ ಇಬ್ಬರ ಮೈಮನಸ್ಸನ್ನು ನಡುಗಿಸಿಬಿಟ್ಟಿತ್ತು. ನೀಲಾ ಹಾಗೂ ಕುಮಾರ್ ಕತ್ತಲಲ್ಲಿ ಸುಮ್ಮನೆ ಕೂತುಬಿಟ್ಟಿದ್ದರು. ಏಕೆಂದರೆ ವಿದ್ಯುತ್ ಹೋಗಿ ಆಗಲೇ ಅದೆಷ್ಟೋ ಹೊತ್ತಾಗಿತ್ತು. ನೀಲಾಳಿಗೆ ಭಯ ಶುರುವಾಗಿಬಿಟ್ಟಿತ್ತು. ಕುಮಾರ್ ಅವಳ ಕೈಹಿಡಿದು ಧೈರ್ಯ ಹೇಳಿದ. ಅಷ್ಟರಲ್ಲಿಯೇ ಜೋರಾಗಿ ಗುಡುಗು ಸಿಡಿಲಿನ ಸದ್ದಾಯಿತು. ನೀಲಾ ಒಮ್ಮೆಲೆ ಕುಮಾರನ ಹತ್ತಿರ ಬಂದಳು. ಅವರಿಗೆ ಪರಸ್ಪರರ ಉಸಿರಾಟದ ಹೊರತಾಗಿ ಬೇರೇನೂ ಸದ್ದು ಕೇಳಿಸುತ್ತಿರಲಿಲ್ಲ. ನೀಲಾಳ ಅಂತರ್ಮನಸ್ಸಿನಲ್ಲಿ ಹುದುಗಿಸಿಟ್ಟಿದ್ದ ಕುಮಾರನ ಬಗೆಗಿನ ಪ್ರೀತಿ ಸಮರ್ಪಣೆಯಲ್ಲಿ ಪರಿವರ್ತನೆಗೊಂಡಿತು. ಕುಮಾರ್ ಅವಳನ್ನು ಬಾಹುಗಳಲ್ಲಿ ಬಂಧಿಯಾಗಿಸಿದ. ನೀಲಾ ಯಾವುದೇ ಪ್ರತಿರೋಧ ಒಡ್ಡಲಿಲ್ಲ. ಇಬ್ಬರೂ ತಮ್ಮ ಗಡಿರೇಖೆಯನ್ನು ಹೇಗೆ ಮೀರಿದರೆಂದರೆ, ತುಂಬಿ ಹರಿಯುತ್ತಿರುವ ನದಿಯೊಂದು ಸುಲಭವಾಗಿ ಕಟ್ಟೆಯೊಡೆದು ಹೊರಗೆ ಹೋದಂತೆ.ಬಿರುಗಾಳಿ ಮುಂಜಾನೆ ಹೊತ್ತಿಗೆ ನಿಂತಿತ್ತು. ಆದರೆ ಈ ಬಿರುಗಾಳಿ ನೀಲಾಳ ಜೀವನವನ್ನೇ ಬದಲಿಸಿಬಿಟ್ಟಿತ್ತು. ನೀಲಾ ಈ ಪ್ರೇಮವನ್ನೇ ಒಪ್ಪಿಕೊಂಡಿದ್ದಳು. ಅವಳ ಈ ಪ್ರೇಮ ಬಳ್ಳಿಯಂತೆ ಹಾಗೆಯೇ ಬೆಳೆಯುತ್ತ ಹೋಯಿತು. ಆ ಬಳಿಕ ಯಾವುದೇ ಭಾನುವಾರ ಕುಮಾರ್ ತನ್ನ ಗೆಳೆಯರ ಮನೆಗಳಿಗೆ ಹೋಗಲೇ ಇಲ್ಲ. ನೀಲಾಳಿಗೆ ಕುಮಾರನ ಪ್ರೀತಿಯ ಬಂಧನ ಸುರಕ್ಷತೆಯ ಅನುಭೂತಿ ನೀಡುತ್ತಲಿತ್ತು.
ಒಂದು ದಿನ ನೀಲಾ ಕುಮಾರನಿಗೆ ಹೇಳಿದಳು, “ನಾವು ಆದಷ್ಟು ಶೀಘ್ರ ಮದುವೆ ಮಾಡಿಕೊಳ್ಳಬೇಕು.”
ಕುಮಾರ್ ಅವಳ ಕೈಯನ್ನು ಮೃದುವಾಗಿ ಸ್ಪರ್ಶಿಸುತ್ತಾ, “ನೀಲಾ, ನನ್ನ ಪ್ರೀತಿಯ ಮೇಲೆ ನಂಬಿಕೆಯಿಡು. ನಾನು ಈಗಲೇ ಮದುವೆಯ ಬಗ್ಗೆ ಮಾನಸಿಕವಾಗಿ ಸಿದ್ಧನಾಗಿಲ್ಲ. ಆದರೆ ಪ್ರಸ್ತುತ ನನಗೆ ನಿನ್ನ ಸಹಾಯ ಹಾಗೂ ಸಹಕಾರ ಎರಡೂ ಅತ್ಯವಶ್ಯ,” ಎಂದಿದ್ದ. ಆಗ ಅವರಿಬ್ಬರ ನಡುವೆ ಬೆಸೆದುಕೊಂಡಿದ್ದ ಪ್ರೀತಿಯ ಎಳೆಯಲ್ಲಿ ಅಷ್ಟಿಷ್ಟು ಬಿರುಕು ಉಂಟಾಗುವ ಪ್ರಸಂಗವೊಂದು ಎದುರಾಯಿತು. ನೀಲಾಳ ಅಕ್ಕ ರಮಾ ಆಕಸ್ಮಿಕವಾಗಿ ಮೈಸೂರಿಗೆ ಬಂದುಬಿಟ್ಟರು. ನೀಲಾಗೆ ಒಮ್ಮೆಲೆ ದಿಗಿಲಾಯಿತು. ಆಕೆ ಕುಮಾರನಿಗೆ ಸಂಬಂಧಪಟ್ಟ ಪ್ರತಿಯೊಂದು ವಸ್ತುಗಳನ್ನು ಬಚ್ಚಿಡಲು ಪ್ರಯತ್ನಿಸಿದಳು. ಆದರೆ ರಮಾ ಅದನ್ನೆಲ್ಲ ಗಮನಿಸಿಬಿಟ್ಟಿದ್ದರು. ಅವರು ಕುಮಾರನನ್ನು ಕರೆಸಿ ಮದುವೆಯಾಗಲು ಒತ್ತಡ ಹೇರಿದರು. ಆದರೆ ಕುಮಾರನಿಗೆ ಸದ್ಯಕ್ಕೆ ಮದುವೆ ಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ.
ರಮಾ ಅಕ್ಕನಿಗೆ ಅವರಿಬ್ಬರ ಸಂಬಂಧದಲ್ಲಿ ಯಾವುದೇ ಭವಿಷ್ಯ ಕಂಡುಬರಲಿಲ್ಲ. ಅವರು ತಮ್ಮ ಮೈದುನ ವಿಶಾಲ್ ಜೊತೆ ನೀಲಾಳ ವಿವಾಹ ಮಾಡಬೇಕೆಂದು ನಿರ್ಧರಿಸಿದ್ದರು. ಕುಮಾರ್‌ಗೆ ಅದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಅವನು ಹೇಳದೆ ಕೇಳದೆ ನೀಲಾಳ ಹೆಸರಿನಲ್ಲಿ ಒಂದು ಚೀಟಿ ಬರೆದಿಟ್ಟು ಬೆಂಗಳೂರಿಗೆ ಹೊರಟುಹೋದ.
ನೀಲಾ ಆಂತರಿಕವಾಗಿ ಕುಸಿದು ಹೋಗಿದ್ದಳು. ಆಕೆ ರಮಾ ಅಕ್ಕನಿಗೆ ಇರುವ ವಿಷಯವನ್ನೆಲ್ಲ ತಿಳಿಸಿದಳು. ಆ ದಿನದಿಂದ ನೀಲಾ ತನ್ನ ಮನೆಯವರೊಂದಿಗೂ ಸಂಪರ್ಕ ಕಡಿದುಕೊಂಡಳು. ಆ ಬಳಿಕ ಆಕೆ ಮತ್ತೆ ಕಾಲ್ ಸೆಂಟರ್‌ಗೆ ಹೋಗಲೇ ಇಲ್ಲ. ಇದರ ತಪ್ಪಿನ ಜವಾಬ್ದಾರಿಯನ್ನು ಕುಮಾರನ ಮೇಲೆ ಹೊರಿಸಲು ಆಕೆ ಸಿದ್ಧಳಿರಲಿಲ್ಲ. ಅಪರಾಧಿ ಭಾವ ಎಂದು ಭಾವಿಸದೆ, ಮಧುರ ಕ್ಷಣಗಳು ಎಂದು ಭಾವಿಸಿ ಅವನ್ನು ತನ್ನ ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡಳು.
ಕೆಲವು ದಿನಗಳ ಬಳಿಕ ಆಕೆಗೆ ಒಂದು ದೊಡ್ಡ ಪ್ರಕಾಶನ ಸಂಸ್ಥೆಯಲ್ಲಿ ಉದ್ಯೋಗ ದೊರಕಿತು. ಅವಳು ದಿನವಿಡೀ ಪುಸ್ತಕಗಳಲ್ಲಿಯೇ ಮುಳುಗಿರುತ್ತಿದ್ದಳು. ಏಕೆಂದರೆ ಕುಮಾರನ ನೆನಪು ಬಾರದಿರಲೆಂದು. ಎಂದಾದರೊಮ್ಮೆ ಕುಮಾರ್ ಬಂದೇ ಬರುತ್ತಾನೆ ಎಂಬ ಆಶಾಭಾವನೆಯನ್ನು ಆಕೆ ತನ್ನ ಮನಸ್ಸಿನ ಮೂಲೆಯಲ್ಲಿ ಇನ್ನೂ ಜೀವಂತಾಗಿಟ್ಟುಕೊಂಡಿದ್ದಳು. ಅವಳ ಸುಪ್ತ ಮನಸ್ಸು ಅವನಿಗಾಗಿ ಇನ್ನೂ ನಿರೀಕ್ಷಿಸುತ್ತಲಿತ್ತು. ಇದೇ ಕಾರಣದಿಂದ ತನ್ನ ಮನೆಯನ್ನು ಕೂಡ ಬದಲಿಸಿರಲಿಲ್ಲ. ಕುಮಾರ್ ಮನೆಯಿಂದ ಹೋಗುವಾಗ ಮನೆಯ ಪ್ರತಿಯೊಂದು ಸಾಮಾನುಗಳು ಹೇಗಿದ್ದಿ ಈಗಲೂ ಹಾಗೆಯೇ ಇದ್ದ. ನೀಲಾಳ ಜೀವನದಲ್ಲಿ ನಡೆದುಹೋದ ಘಟನೆಗಳು ತೆರೆದ ಪುಸ್ತಕದಂತೆ ರಾಜಶ್ರೀಯ ಮುಂದೆ ಬಂದುಬಿಟ್ಟಿದ್ದ. ಅವಳು ಮನಸ್ಸಿಲ್ಲದ ಮನಸ್ಸಿನಿಂದ ಕೂತುಬಿಟ್ಟಿದ್ದಳು. ಅವಳಿಗೆ ರಾತ್ರಿ 10 ಗಂಟೆಯ ರೈಲು ಇತ್ತು. ನೀಲಾಳ ಹಿಂದಿನ ಜೀವನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ರಾಜಶ್ರೀ ಅವಳಿಂದ ವಿದಾಯ ಪಡೆದು ಹೊರಟು ನಿಂತಳು. ಪ್ರಯಾಣದ ಸಂದರ್ಭದಲ್ಲಿ ಅವಳಿಗೆ ನಿದ್ದೆ ಬರಲೇ ಇಲ್ಲ. ಅವಳು ನೀಲಾಳ ಸೂತ್ರ ಹರಿದ ಜೀವನದ ಬಗ್ಗೆ ಯೋಚಿಸುತ್ತಿದ್ದಳು.
ಮರುದಿನ ಸಂಜೆ ಸಂತೋಷ್ ತನ್ನ ತಾಯಿ ಹಾಗೂ ತಂಗಿಯೊಂದಿಗೆ ಅಲ್ಲಿಗೆ ಬಂದ. ರಾಜಶ್ರೀ ಒಳಗೆ ಪ್ರವೇಶಿಸುತ್ತಲೇ ಹುಡುಗನ ತಾಯಿಗೆ ಶಿಷ್ಟಾಚಾರದ ಪ್ರಕಾರ ನಮಸ್ಕರಿಸಿದಳು. ನಂತರ ಅವಳು ಹುಡುಗನತ್ತ ತಿರುಗಿ ಕೈ ಮುಂದೆ ಮಾಡಿ, “ಹಲೋ ಐ ಯಾಮ್ ರಾಜಶ್ರೀ,” ಎಂದಳು.
ಸಂತೋಷ್ ಕೂಡ ಎದ್ದು ನಿಂತು, “ಹಲೋ, ಐ ಯಾಮ್ ಸಂತೋಷ್ ಕುಮಾರ್,” ಎಂದು ಹೇಳಿದ. ಕೆಲವು ಔಪಚಾರಿಕ ಮಾತುಗಳ ಬಳಿಕ ರಾಜಶ್ರೀ, ಸಂತೋಷ್ ತಾಯಿಯನ್ನುದ್ದೇಶಿಸಿ, “ಆಂಟಿ, ನೀವು ತಪ್ಪು ತಿಳಿಯದಿದ್ದರೆ ಒಂದು ಮಾತು, ನಾನು ಸಂತೋಷ್ ಕುಮಾರ್ ಜೊತೆ ಸ್ವಲ್ಪ ಹೊತ್ತು ಮಾತನಾಡಬೇಕು.”
“ಹ್ಞಾಂ, ಹ್ಞಾಂ, ಧಾರಾಳಾಗಿ ಮಾತಾಡಮ್ಮ,” ಎಂದು ಸಂತೋಷ್ ತಾಯಿ ಹೇಳಿದರು. ಅವರಿಬ್ಬರೂ ಟೆರೇಸ್ ಮೇಲೆ ಹೋದರು. ಸ್ವಲ್ಪ ಹೊತ್ತಿನ ಮೌನದ ಬಳಿಕ ರಾಜಶ್ರೀ ಹೇಳಿದಳು, “ನೀವು ಧಾರವಾಡಕ್ಕೆ ಬರುವ ಮುಂಚೆ ಎಲ್ಲಿದ್ದಿರಿ?”
ಅವಳ ಆ ಪ್ರಶ್ನೆಗೆ ಅನುಚಕಿತನಾದ. ನಂತರ ಹೇಳಿದ, “ಮೈಸೂರಲ್ಲಿ.”
“ಸಂತೋಷ್ ಕುಮಾರ್, ನಾನು ನಿಮ್ಮನ್ನು ಕೇವಲ `ಕುಮಾರ್’ ಎಂದಷ್ಟೇ ಕರೆಯಬಹುದೇ? ನೀಲಾ ಸಹ ನಿಮ್ಮನ್ನು ಅದೇ ಹೆಸರಿನಿಂದ ಕರೆಯುತ್ತಿದ್ದಳು ಅಲ್ವೇ?” ರಾಜಶ್ರೀ ಸ್ವಲ್ಪ ಕಟು ಧ್ವನಿಯಲ್ಲಿ ಹೇಳಿದಳು. ಸಂತೋಷ್ ಕುಮಾರನ ಮುಖಭಾವ ಒಮ್ಮಲೇ ಬದಲಾಯಿತು. ತನ್ನ ಕಳ್ಳತನ ಪತ್ತೆಯಾಯಿತು ಎಂಬಂತೆ ಅವನು ತಲೆ ತಗ್ಗಿಸಿದ.
ರಾಜಶ್ರೀ ಮುಂದುವರಿದು ಕೇಳಿದಳು, “ನೀವು ನೀಲಾಗೆ ಹಾಗೇಕೆ ಮಾಡಿದಿರಿ? ಮದುವೆಗೂ ಮುಂಚೆ ನನಗೆ ನೀಲಾ ಭೇಟಿಯಾದದ್ದು ಒಳ್ಳೆಯದೇ ಆಯಿತು. ನಿಮ್ಮ ಫೋಟೋವನ್ನು ಆಕೆಯ ಜೊತೆ ನೋಡದೇ ಇದ್ದಿದ್ದರೆ, ನೀವೇ ನೀಲಾಳ ಕುಮಾರ್ ಎಂದು ನನಗೆ ಗೊತ್ತೇ ಆಗುತ್ತಿರಲಿಲ್ಲ. ಸಂತೋಷ್ ಬಳಿ ಯಾವುದೇ ಉತ್ತರವಿರಲಿಲ್ಲ. ಅವನು ಅಚ್ಚರಿಯಿಂದ ಗಾಬರಿಗೊಂಡವನಂತೆ ರಾಜಶ್ರೀಯ ಕಡೆ ನೋಡುತ್ತಿದ್ದ. ಆಕೆಯ ಒಂದೊಂದು ಮಾತುಗಳು ಅವನ ಗಾಯವನ್ನು ಕೆದಕಿ ಪುನಃ ಹೊಸ ಗಾಯ ಮಾಡಿದಂತಿತ್ತು, “ಆದರೆ, ನಿಮಗೆ ನೀಲಾ ಹೇಗೆ…..?” ಅವನ ಬಾಯಿಂದ ಅರ್ಧ ವಾಕ್ಯವಷ್ಟೇ ಹೊರಬಂದು ಇನ್ನರ್ಧ ಮಾತುಗಳು ಬಾಯಿಯಲ್ಲಿಯೇ ಉಳಿದವು.
“ಹೇಗೆಂದರೆ ನೀಲಾ ನನ್ನ ಬಾಲ್ಯದ ಗೆಳತಿ,” ರಾಜಶ್ರೀ ಹೇಳಿದಳು.
ಸಂತೋಷ್‌ಗೆ ಯಾರೋ ತನ್ನನ್ನು ಆಕಾಶದಿಂದ ಕೆಳಗೆ ದೂಡಿದಂತೆ ಭಾಸವಾಯಿತು. “ಆಕೆ ಕೇವಲ ಒಬ್ಬ ಗೆಳತಿಯಂತೆ….” ಅವನ ಮಾತನ್ನು ಅರ್ಧದಲ್ಲಿಯೇ ತುಂಡರಿಸುತ್ತ, “ನೀವು ಒಬ್ಬ ಗೆಳತಿಯ ಜೊತೆ ಹೀಗೆ ಮಾಡ್ತೀರಿ ಅಂದ್ರೆ, ನಾನು ನಿಮಗೆ ಏನೂ ಅಲ್ಲ. ನಿಮಗೆ ನೀಲಾಳ ನೆನಪು ಸ್ವಲ್ಪವು ಬರಲಿಲ್ಲ. “ನೀಲಾ ನಿಮ್ಮೊಂದಿಗೆ ಮದುವೆಗೂ ಮುಂಚೆಯೇ ದೈಹಿಕ ಸಂಪರ್ಕ ಹೊಂದಿದ್ದಳು. ನನಗೂ ಮೋಸ ಮಾಡುವ ಯೋಚನೆ ನಿಮಗೆ ಹೇಗೆ ಬಂತು? ನೀವು ನೀಲಾಳನ್ನು ಮರೆತು ಇನ್ನೊಬ್ಬರೊಂದಿಗೆ ಮದುವೆಯಾಗಲು ಹೇಗೆ ಯೋಚಿಸಿದಿರಿ? ನೀಲಾ ಈಗಲೂ ನಿಮಗಾಗಿ ಕಾಯುತ್ತ ಕುಳಿತಿದ್ದಾಳೆ,” ಎಂದಳು.
ಸ್ವಲ್ಪ ಹೊತ್ತು ಮೌನ ವಹಿಸಿದ ಸಂತೋಷ್ ನಂತರ ಹೇಳಿದ, “ ನಾನು ಅದೆಷ್ಟೋ ಸಲ ಅಲ್ಲಿಗೆ ಹೋಗಬೇಕೆಂದು ಯೋಚಿಸಿದೆ. ಆದರೆ ನನ್ನ ಹೆಜ್ಜೆಗಳು ಮುಂದೆ ಹೋಗಲಿಲ್ಲ. ನೀಲಾ ಬಳಿ ಹೋಗುವ ಎಲ್ಲ ದಾರಿಗಳನ್ನು ನಾನೇ ಮುಚ್ಚಿಹಾಕಿದ್ದೆ.”
“ನೀಲಾ ಈಗಲೂ ಅದೇ ಉತ್ಸಾಹದಲ್ಲಿ ನಿಮ್ಮ ದಾರಿ ಕಾಯುತ್ತಿದ್ದಾಳೆ. ನಿಮ್ಮ ಹಾಗೂ ನೀಲಾ ನಡುವಿನ ಸಂಬಂಧದ ಬಗ್ಗೆ ಗೊತ್ತಾದಾಗ ನನಗೆ ಬಹಳ ಕೋಪ ಬಂದಿತು. ಆದರೆ ಸ್ವಲ್ಪ ಯೋಚನೆ ಮಾಡಿದಾಗ, ನಾನು ನಿಮ್ಮ ಜೀವನದಲ್ಲಿ ಬಹಳ ತಡವಾಗಿ ಬಂದಳು.
“ಆದರೆ ನೀಲಾ ಹಾಗೂ ನಿಮ್ಮ ನಡುವಿನ ಜೀವನಸೂತ್ರ ಬಹಳ ಮೊದಲೇ ರೂಪುಗೊಂಡಿದೆ. ಈಗಲೂ ತಡವಾಗಿಲ್ಲ ಸಂತೋಷ್, ನೀಲಾ ಬಳಿ ಹೋಗಿ. ನಿಮ್ಮ ಹೃದಯ ಕೂಡ ಅದನ್ನೇ ಬಯಸುತ್ತದೆ ಎಂಬುದನ್ನು ನಾನು ಬಲ್ಲೆ. ಯಾವ ಸಂಬಂಧವನ್ನು ನೀಲಾಗಿಯೇ ತೊರೆದು ಬಂದಿರುವಿರೊ, ಅದನ್ನು ಪುನಃ ಜೋಡಿಸುವ ಕೆಲಸಕ್ಕೂ ನೀವೇ ಮೊದಲು ಹೆಜ್ಜೆ ಇಡಬೇಕು,” ರಾಜಶ್ರೀ ಸಂತೋಷ್‌ಗೆ ತಿಳಿವಳಿಕೆ ನೀಡುತ್ತ ಹೇಳಿದಳು.
ಸಂತೋಷ್ ಏನನ್ನಾದರೂ ಹೇಳುವ ಮುಂಚೆಯೇ ರಾಜಶ್ರೀ ತನ್ನ ಮೊಬೈಲ್ ಕೈಗೆತ್ತಿಕೊಂಡು ನೀಲಾಗೆ ಫೋನ್ ಮಾಡಿ ಸಂತೋಷ್ ಕೈಗಿತ್ತಳು,
“ಹಲೋ ರಾಜಶ್ರೀ,” ನೀಲಾ ಮಾತನಾಡಿದಳು. ಅದಕ್ಕೆ ಪ್ರತ್ಯುತ್ತರ ಎಂಬಂತೆ ಕುಮಾರನ ಕರುಣೆಯಿಂದ ಕೂಡಿದ ಧ್ವನಿ ಕೇಳಿ ಬಂತು, “ಹೇಗಿದ್ದೀಯಾ ನೀಲಾ?” ಕುಮಾರನ ಧ್ವನಿ ಕೇಳಿ ನೀಲಾಗೆ ಅಚ್ಚರಿ.
“ನೀಲಾ, ನನ್ನನ್ನು ಕ್ಷಮಿಸಲು ಸಾಧ್ಯವಾಗುತ್ತಾ?” ಎಂದು ಅವಳಲ್ಲಿ ಬಿನ್ನವಿಸಿಕೊಂಡಾಗ, ನೀಲಾಳಿಗೆ ಒಮ್ಮೆಲೇ ದುಃಖ ಉಮ್ಮಳಿಸಿ ಬಂತು. ಅವಳ ಆ ಬಿಕ್ಕಳಿಕೆಯಲ್ಲಿ ಸಂತೋಷನ ಬಗೆಗಿನ ಪ್ರೀತಿ, ದುಃಖ, ಖಿನ್ನತೆ ಎಲ್ಲ ಇದ್ದ.
“ನೀಲಾ, ನನ್ನನ್ನು ಕ್ಷಮಿಸು. ನಾಳೆಯೇ ನಾನು ನಿನ್ನನ್ನು ಕರೆದುಕೊಂಡು ಹೋಗಲು ಬರುತ್ತಿದ್ದೇನೆ. ನೀನು ಅಳು ನಿಲ್ಲಿಸು ಎಂದು ನಾನು ಹೇಳುವುದಿಲ್ಲ. ಏಕೆಂದರೆ ನಿನ್ನ ಎಲ್ಲ ದುಃಖ ಕಣ್ಣೀರಿನ ರೂಪದಲ್ಲಿ ಕೊಚ್ಚಿಹೋಗಲಿ. ಅದನ್ನು ಎದುರಿಸಲು ಬಹುಶಃ ನನಗೆ ಆಗಲಿಕ್ಕಿಲ್ಲ.”
ಫೋನ್ ಸಂಭಾಷಣೆ ಕೊನೆಗೊಂಡಾಗ ಸಂತೋಷನ ಕಣ್ಣುಗಳೂ ಒದ್ದೆಯಾಗಿದ್ದವು. ಅವನು ಆ ಕ್ಷಣವೇ ರಾಜಶ್ರೀಯ ಕೈಗಳನ್ನು ಹಿಡಿದುಕೊಂಡು ಕೃತಜ್ಞತೆಯ ಭಾವದಿಂದ, “ಥ್ಯಾಂಕ್ಯೂ, ರಾಜಶ್ರೀ. ನಾನೇನು ಬಯಸ್ತೀನಿ ಎಂಬುದನ್ನು ಅರಿತುಕೊಂಡಿದ್ದಕ್ಕೆ. ನೀಲಾಳ ಹೊರತು ನನ್ನ ಜೀವನವೇ ನೀರಸ ಎನಿಸುತ್ತಿತ್ತು,” ಎಂದ.
ನೀಲಾ ಮತ್ತು ಸಂತೋಷರ ಜೀವನ ಈಗ ಕತ್ತಿಯ ಕೂಪದಿಂದ ಬೆಳಕಿನ ಲೋಕದತ್ತ ಹೆಜ್ಜೆ ಇಟ್ಟಿತ್ತು…