`ಏ ಇಶ್ಕ್ ನಹೀ ಆಸಾನ್‌’ ಎಲ್ಲಾ ಸಿ.ಡಿ.ಗಳ ನಡುವೆ ಇದೇ ಕಣ್ಣಿಗೆ ಏಕೆ ಬಿತ್ತೋ? ಹೌದಲ್ವಾ ಅಂತ ಮನಸ್ಸಿನಲ್ಲಿ ಅಂದುಕೊಂಡವನೇ ಪಲ್ಸರ್‌ ಹತ್ತಿ ನೇರವಾಗಿ ಮನೆ ಕಡೆ ಹೊರಟೆ.

“ಒಂದೊಳ್ಳೆ ಸಿ.ಡಿ. ತಗೊಂಡು ಬನ್ರಿ. ಈವತ್ತು ರಜಾ, ಮನೆಯಲ್ಲೇ ಇರ್ತಿವಲ್ಲ ಟಿ.ವಿ. ನೋಡಿ ನೋಡಿ ಬೇಜಾರಾಗಿದೆ. ಒಳ್ಳೆ ಸಿನಿಮಾ ಆದ್ರೂ ನೋಡೋಣ. ನೀವಂತೂ ಸಿನಿಮಾಗೆ ಕರ್ಕೊಂಡು ಹೋಗಿ ಹದಿನೈದು ವರ್ಷಾನೇ ಆಯ್ತು,” ಅಂತಾ ಶ್ವೇತಾ ಪ್ರೀತಿಯಿಂದ ಹೇಳಬಹುದಾದದ್ದನ್ನು ಸಿಡುಕುತ್ತಲೇ ಹೇಳಿದ್ದು ಮನೆ ಮುಂದೆ ಬೈಕ್‌ ನಿಲ್ಲಿಸಿದಾಗಲೇ ನೆನಪಾದದ್ದು.

ಗಾಡಿ ಸೌಂಡ್‌ ಕೇಳಿ ಒಳಗಿನಿಂದ ಖುಷಿಯಾಗಿ ಬಂದವಳೇ, “ಯಾವ ಸಿ.ಡಿ. ತಂದ್ರಿ?” ಎಂದಳು.

“ಎಲ್ಲಾ ನೀನು ನೋಡಿರೋದೇ, ಯಾವ್ದೂ ಹೊಸದು ಇರಲಿಲ್ಲ.”

“ನಿಮಗೇ ಅಂತ ಹೊಸ ಸಿನಿಮಾ ಪೈರೇಟ್‌ ಮಾಡಿ ಇಟ್ಟಿರ್ತಾರಾ? ಇರೋದ್ರಲ್ಲೇ ಒಂದೊಳ್ಳೆ ಸಿನಿಮಾ ಆಯ್ಕೆ ಮಾಡಿಕೊಂಡು ತರಬಾರದೇನ್ರಿ……”

“ಒಳ್ಳೇದು ಆಯ್ಕೆ ಮಾಡ್ಕೊಂಡಿದ್ರಲ್ಲಿ ನೀನೇ ಕಡೆಯವಳು ಕಣೆ. ಆಮೇಲೆ ನನ್ನ ಲೈಫ್‌ನಲ್ಲಿ ಯಾವ್ದೂ ಒಳ್ಳೇದು ಸಿಗಲಿಲ್ಲ.”

“ಆಹಾ! ಮಾತಲ್ಲೇ ಅರಮನೆ ಕಟ್ಟಿ, ನನ್ನ ರಾಣಿ ಹಾಗೆ ಕೂರಿಸಿಬಿಡ್ತೀರಿ,” ಅಂತ ಮುಖ ತಿರುಗಿಸಿಕೊಂಡು ಹೊರಟುಬಿಟ್ಟಳು.

ಒಳಗೆ ಬಂದವನೇ ಉಸ್ಸಪ್ಪ ಅಂತ ಕುಕ್ಕರಿಸಿದೆ. ಪಕ್ಕದಲ್ಲಿದ್ದ ದಿನಪತ್ರಿಕೆ ಕೈಗೆತ್ತಿಕೊಂಡೆ.

“ಪೇಪರ್‌ ಹಿಡ್ಕೊಂಡು ಕೂತ್ಬಿಟ್ರೆ ಆಯ್ತು. ಮನೇಲಿ ಒಂದು ಕೆಲಸಕ್ಕೂ ಸಹಾಯ ಮಾಡಬೇಡಿ,” ಒಳಗಿನಿಂದಲೇ ಅವಳು ಗೊಣಗಾಡುತ್ತಿದ್ದುದು ಕೇಳಿಸಿತು.

“ಬಂದೆ ಬಂದೆ, ಯಾಕೆ ಸುಮ್ಮನೇ ಗೊಣಗ್ತೀಯಾ? ಏನು ಮಾಡಬೇಕು ಹೇಳು ಮಾಡ್ತೀನಿ,”ಎಂದೆ.

use-ke-liye-2

“ಈ ಬೆಳ್ಳುಳ್ಳಿನೆಲ್ಲಾ ಸುಲಿದಿಡಿ,” ಅಂತ ಅರ್ಧ ಕೆ.ಜಿ. ಬೆಳ್ಳುಳ್ಳಿ ತಟ್ಟೆಗೆ ಸುರಿದು ತಂದು ಕೈಗೆ ಕೊಟ್ಟಳು.

ಬೆಳ್ಳುಳ್ಳಿ ಸುಲಿಯಲು ಕೈಗೆತ್ತಿಕೊಂಡಾಗ ಮತ್ತೆ ನೆನಪಾಯಿತು `ಏ ಇಶ್ಕ್ ನಹೀ ಆಸಾನ್‌.’ ಆದ್ರೂ ಇದೆಲ್ಲವನ್ನೂ ಸಹಿಸಿಕೊಂಡು ಕಾಲಘಟ್ಟದ ಜೊತೆಗೆ ಇಬ್ಬರೂ ಪರಸ್ಪರ ಕಷ್ಟ ಸುಖದಲ್ಲಿ ಜೊತೆಯಾಗಿ ಹೆಜ್ಜೆ ಹಾಕುವುದೇ ಪ್ರೇಮದ ಸಿಹಿ ಬದುಕು ಅಂತ ಹೃದಯ ಹೇಳಿದರೂ, ಸಾಕಪ್ಪ ಇವಳ ಸಹವಾಸ ಅಂತ ಆ ಮನಸ್ಸು ಹಿಂದಿನಿಂದ ಕೆಣಕಿತು.

ನಾವಿಬ್ಬರೂ ಮದುವೆಗೆ ಮುಂಚೆ ಪರಸ್ಪರರನ್ನು ಪ್ರೀತಿಸುತ್ತಿದ್ದ ದಿನಗಳ ನೆನಪಾಯಿತು. ಇಂದಿನ ಹಾಗೆ ಆ ಕಾಲದಲ್ಲಿ ಮೊಬೈಲ್‌,  ಎಸ್‌.ಎಂ.ಎಸ್‌., ಇಮೇಲ್ ‌ಇಂಥ ಯಾವುದೇ ಎಲೆಕ್ಟ್ರಾನಿಕ್‌ ಮಾಧ್ಯಮಗಳು ಪ್ರೇಮಿಗಳ ಸಹಾಯಕ್ಕೆ ಇರಲಿಲ್ಲ. ಬಿಡುವು ಸಿಕ್ಕಾಗೆಲ್ಲಾ ಕೂತು ಪುಟಗಟ್ಟಲೆ ಪತ್ರ ಬರೆದು ವಾರಕ್ಕೆ ಒಂದು ದಿನ ಪೋಸ್ಟ್ ಮಾಡುತ್ತಿದ್ದೆ.

ಆ ವಾರ ಪತ್ರ ಬರದಿದ್ದರೆ ತವಕ ಹೆಚ್ಚಾಗುತ್ತಿತ್ತು. ಅವಳು ಬರೆದ ಹಳೆ ಪತ್ರಗಳನ್ನು ಓದಿಕೊಂಡು ಹೊಸ ಪತ್ರ ಬರೋವರೆಗೂ ದಿನ ನೂಕುವುದೆಂದರೆ ಎಷ್ಟೋ ವರ್ಷ ಕಳೆದ ಹಾಗಾಗುತ್ತಿತ್ತು.

ಕೆಲವೊಮ್ಮೆ ಪತ್ರ ಬರೆಯುವ ಸಮಯದಲ್ಲಿ ಕೇಳುವ ಹಾಡುಗಳೂ ಪತ್ರದಲ್ಲಿ ಬರೆಯಲ್ಪಡುತ್ತಿದ್ದವು. `ತೇರೇ ಮೇರೆ ಸಪನೆ ಅಬ್ ಏಕ್‌ ರಂಗ್‌ ಹೈ, ಹೋ ಜಹಾ ಬೀ ಲೇಜಾಯೆ ರಹೇ ಹಂ ಸಂಗ್‌ ಹೈ,’ ಹಾಡು ಬರೆದಿದ್ದು ಈಗಲೂ ನೆನಪಿದೆ. ಅದರಲ್ಲಿ ಬರುವ ಒಂದು ಸಾಲು ಹೀಗಿದೆ, `ತೇರೇ ದುಃಖ್‌ ಅಬ್‌ ಮೇರೆ, ಮೇರೆ ಸುಖ್‌ ಅಬ್‌ ತೇರೇ, ತೇರೇ ಏ ದೋ ನೈನಾ ಚಾಂದ್‌ ಔರ್ ಸೂರಜ್‌ ಮೇರೆ….’ ನಿಜಕ್ಕೂ ಎಂಥ ಅದ್ಭುತ ಸಾಹಿತ್ಯ.

ಈ ಹಾಡು ಕೇಳುತ್ತಿದ್ದರೆ ಎಂಥ ಕಲ್ಲು ಹೃದಯ ಕೂಡ ಪ್ರೇಮದ ಜಲಪಾತಕ್ಕೆ ಜಾರಿ ಬೀಳದೇ ಇರಲು ಸಾಧ್ಯವಿಲ್ಲ. ತಕ್ಷಣ ಒಂದು ಗಳಿಗೆ ಈಗಿನ ನಮ್ಮ ದಾಂಪತ್ಯದ ಬದುಕನ್ನು ಸಾಣೆಹಿಡಿದು ನೋಡಿದಾಗ, ಸಂಸಾರದಲ್ಲಿ ಬಂದ ಕಷ್ಟನಷ್ಟಗಳು, ಸುಖದುಃಖಗಳು, ನಗುಅಳು, ನಿಂದೆಅಪಮಾನ, ಮೇಲುಕೀಳು ಭಾವನೆ, ಪರಸ್ಪರ ನಿಂದೆ ಮುಂತಾದವೆಲ್ಲಾ ಬಂದವು. ಎಲ್ಲದರಲ್ಲೂ ಪರಸ್ಪರ ಸಹನೆ, ಹೊಂದಾಣಿಕೆ ಮಾಡಿಕೊಂಡೇ ಇಬ್ಬರೂ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುತ್ತಲೇ ಇದ್ದೀವಿ.

ಏನೇ ಅಡ್ಡಿ ಬಂದರೂ, ಎಷ್ಟೇ ವರ್ಷ ಆದರೂ ನಿಂಗೋಸ್ಕರ ಕಾದಿದ್ದು ಮದ್ವೆ ಆಗ್ತೀನಿ ಅಂತ ಇಬ್ಬರೂ ತೀರ್ಮಾನಿಸಿಕೊಂಡ್ವಿ. ಹಾಗೇ ಹಿರಿಯರನ್ನೆಲ್ಲಾ ಒಪ್ಪಿಸಿ ಮದುವೆ ಆದ್ವಿ.

ಈಗ ನೆನಪಾಗುತ್ತೆ, ಅದಕ್ಕೇ ಹೇಳಿರಬೇಕು `ಏ ಇಶ್ಕ್ ನಹೀ ಆಸಾನ್‌’ ಅಂತ. ಆಗ ನಮ್ಮ ಮಾವ ಶ್ವೇತಾ ಸ್ವಲ್ಪ ತಡವಾಗಿ ಕಾಲೇಜಿಂದ ಮನೆಗೆ ಬಂದ್ರೆ ಅವನ ಜೊತೆ ಸುತ್ತಾಕ್‌ ಹೋಗಿದ್ಯೇನೆ ಅಂತ ಬೆಲ್ಟಲ್ಲಿ ಹೊಡೆದರೂ ಅದನ್ನೆಲ್ಲಾ ಸಹಿಸಿಕೊಂಡಿದ್ದ ಹುಡುಗಿ.

ಈಗ ನಾನೇನಾದ್ರೂ ಅಂದುಬಿಟ್ರೆ, “ಥೂ! ನಂದೂ ಒಂದು ಬದುಕಾ? ಹೊರಗೆ ದುಡ್ಕೊಂಡು ಬಂದು, ಮನೇಲಿ ಜೀತ ಮಾಡಿದ್ರೂ ನೆಮ್ಮದಿನೇ ಇಲ್ಲ,” ಅಂತ ಶುರು ಮಾಡಿಬಿಡ್ತಾಳೆ.

ಇದೇ ಸಂದರ್ಭದಲ್ಲಿ ನನ್ನ ಮನೆಮಂದಿಯನ್ನೆಲ್ಲಾ ಎಳೀತಿದ್ಲು, ಏನೇ ಮಾತಾಡಿದ್ರೂ ಅರಚಿ ಮಾತಾಡೋದು. ಆದಷ್ಟೂ ಸೈಲೆಂಟಾಗಿ ಇರಬೇಕು ಅಂತ ಪ್ರಯತ್ನ ಮಾಡಿದ್ರೂ ಸಾಧ್ಯವಾಗದೆ ಸಿಟ್ಟು ಬಂದು, “ಥೂ! ಹೋಗೀ ಹೋಗಿ ಈ ಬಾಯಿಬಡ್ಕಿನಾ ಕಟ್ಟಿಕೊಂಡುಬಿಟ್ಟೆ,” ಅಂತಿದ್ದೆ.

`ಇವಳಿಗಿಂತ ಬ್ಯೂಟಿಫುಲ್ ಆಗಿರೋ ಹುಡ್ಗೀರು ನನ್‌ ಮದ್ವೆ ಮಾಡ್ಕೋಳಕ್ಕೆ ಕ್ಯೂ ನಿಂತಿದ್ರೂ, ತಲೆ ಕೆಟ್ಟವನ ಹಾಗೆ ಇವ್ಳ ಹಿಂದೆ ತಿರುಗುತ್ತಿದ್ದೆ,’ ಅಂತ ಮನಸ್ಸಿನಲ್ಲೇ ಅಂದ್ಕೊತ್ತಿದ್ದೆ. ಜೋರಾಗಿ ಹೇಳುವ ಹಾಗಿಲ್ವಲ್ಲಾ….!

ಆದ್ರೆ ಒಂದು ವಿಷಯಾನಾ ಹೇಳಲೇ ಬೇಕು. ನಾನು ಕೆಲಸ ಬಿಟ್ಟು ಮನೇಲೆ ಕುಳಿತುಕೊಂಡಿದ್ದಾಗ ಅವಳೇ ದುಡಿದು ಸಂಸಾರದ ನೊಗ ಹೊತ್ತು ಮುನ್ನಡೆಸಿದ್ದನ್ನು ನಾನು ಮರೆಯುವ ಹಾಗಿಲ್ಲ. ಅವಳಿಗೆ ಏನೇ ಕಷ್ಟ ಇದ್ರೂ ಹೇಳಿಕೊಳ್ಳದೆ ಮೂಕ ಎತ್ತಿನಂತೆ ದುಡಿದಿದ್ಲು. ನನ್ನ ಕಟ್ಟಿಕೊಂಡು ಎಂಥ ತ್ಯಾಗ ಮಾಡಿದ್ಲು ಅಂತ ವಿವರಿಸಲು ಸಾಧ್ಯವೇ ಇಲ್ಲ. ಒಂದು ಒಳ್ಳೇ ಸೀರೆ ಕೂಡ ಅವ್ಳು ತೆಗೆದುಕೊಳ್ಳಲಿಲ್ಲ. ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಾಗಿಲ್ಲ ಅಂದ್ಕೋತೀನಿ.

ಸುಖ ದುಃಖದ ಮಾರ್ಗ ಎಲ್ಲರಿಗೋಸ್ಕರ ಮಾಡಿರುವ ರಸ್ತೆ. ಖಂಡಿತಾ ಯಾವಾಗಾದ್ರೂ ಸುಖದ ಮಾರ್ಗ ಸಿಕ್ಕೇ ಸಿಗುತ್ತೆ. ನಮ್ಮ ಸಂಸಾರದ ಬಂಡಿ ಹಳ್ಳಕೊಳ್ಳದ ರಸ್ತೆ ಬಿಟ್ಟು ಸಮತಟ್ಟಾದ ಮಾರ್ಗ ಹಿಡಿದೇ ಹಿಡಿಯುತ್ತೆ ಎನ್ನುವ ಫಿಲಾಸಫಿ ನನ್ನನ್ನು ಕಾಡುತ್ತಲೇ ಇತ್ತು. ಸುಖದ ನಿರೀಕ್ಷೆ ಮಾಡುವವರು ದುಃಖವನ್ನೂ ಸಹಿಸಿಕೊಳ್ಳಬೇಕು ಅಲ್ವೇ!

“ರೀ…. ಆಯ್ತಾ,” ಎಂದು ಕೂಗಿದಾಗಲೇ ವಾಸ್ತವಕ್ಕೆ ಬಂದೆ.

“ಎರಡು ಗಂಟೆಯಿಂದ ಒಲೆ ಮುಂದೆ ನಿಂತ್ಕೊಂಡು ನಿಮ್ ಹೂಟ್ಟೆಗೆ ಬೇಯಿಸ್ತಾ ಇದ್ದೀನಿ. ಇನ್ನೂ ಎರಡು ಬೆಳ್ಳುಳ್ಳಿ ಸ್ಕುಲ್ಕೊಂಡು ಕೂತಿದ್ದೀರಾ? ನಿಮಗೆ ಏನಾದ್ರೂ ಒಂದು ಕೆಲಸ ಹೇಳಿಬಿಟ್ರೆ ಅದನ್ನೇ ಹಿಡ್ಕೊಂಡು ಕೂತ್ಬಿಡಿ,” ಎಂದು ರೇಗಿಕೊಂಡು ಬಂದ್ಲು.

ಅಷ್ಟರಲ್ಲಿ ಒಂದು ನಿರ್ಧಾರಕ್ಕೆ ಬಂದಿದ್ದೆ. ನಿಜಕ್ಕೂ ನನ್ನ ಆಯ್ಕೆ ಫೆಂಟಾಸ್ಟಿಕ್‌! ಎಲ್ಲಾ ಕಷ್ಟ ಸುಖಗಳೊಂದಿಗೆ ನಮ್ಮ ದಾಂಪತ್ಯದ ಬದುಕಿಗೆ ಹದಿನೈದರ ಹರೆಯ…… ಸೌಟು ಹಿಡಿದುಕೊಂಡು ಅಡುಗೆಮನೆಯಿಂದ ಹೊರಗೆ ಬಂದವಳನ್ನು ನೋಡಿ, `ಬೆಳದಿಂಗಳಾಗಿ ಬಾ…… ತಂಗಾಳಿಯಾಗಿ ನಾನು…..’ ಅನ್ನಿಸಿತು. ಕನ್ನಡಕದ ಸಂದಿನಿಂದ ಅವಳನ್ನೇ ನೋಡಿ ಒಂದು ಚಿಕ್ಕ ಸ್ಮೈಲ್ ಕೊಟ್ಟೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ