ಬೆಳಗ್ಗೆ 10 ಗಂಟೆಯ ವೇಳೆಗೆ ನಮ್ರತಾಳನ್ನು ಭೇಟಿಯಾಗಲೆಂದು ಅವಳ ಮನೆಗೆ ಹೋಗಿದ್ದೆ. ಅವಳು ಸುಮಂತ್‌ನನ್ನು ತನ್ನ ಬದುಕಿನಿಂದ ದೂರವಿರಿಸಬೇಕೆಂಬ ನಿರ್ಧಾರ ತಳೆದಿದ್ದಾದರೂ ಏಕೆ? ಎಂಬುದು ನನಗೆ ತಿಳಿಯಬೇಕಾಗಿತ್ತು. ನನ್ನ ಪ್ರಶ್ನೆ ಕೇಳಿ ನಮ್ರತಾಳಿಗೆ ತುಂಬಾ ಕಸಿವಿಸಿಯಾಯಿತು. ಸ್ವಲ್ಪ ಸಮಯ ಶಾಂತಳಾಗಿದ್ದು, ನಂತರ ಮಾತನಾಡತೊಡಗಿದಳು.

“ತನುಜಕ್ಕಾ, ಅವರು ತಮ್ಮ ದುಶ್ಚಟದಿಂದಾಗಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ, ಅಷ್ಟೇ ಅಲ್ಲ ನಮ್ಮಿಬ್ಬರ ಮಧ್ಯೆ ದೊಡ್ಡ ಕಂದಕವನ್ನೇ ಹುಟ್ಟು ಹಾಕಿದ್ದಾರೆ. ಆ ಕಂದಕವನ್ನು ಹೋಗಲಾಡಿಸಲು ನನಗೆ ಕಿಂಚಿತ್ತೂ ಆಶಾಭಾವನೆಯಿಲ್ಲ,” ಎನ್ನುತ್ತಾ ರೋದಿಸತೊಡಗಿದಳು.

“ಈಗ ವಿಪರೀತ ಕುಡಿತೀದ್ದಾನೇನು?” ಎಂದು ನಾನು ಚಿಂತಿತ ಸ್ವರದಲ್ಲಿ ಕೇಳಿದೆ.

“ಹೌದು ಅಕ್ಕ, ಸಂಜೆಗತ್ತಲು ಆವರಿಸಿದರೇ ಮುಗಿಯಿತು, ಅವರಿಗೆ ಕುಡಿಯದೇ ಇರಲಾಗುವುದಿಲ್ಲ. ಮನೆಯಲ್ಲಿ ಅವರ ತಂದೆತಾಯಿ ಕೂಡ ಕುಡಿಯುತ್ತಾರೆ. ಸುಮಂತ್‌ ಗೆಳೆಯರೊಂದಿಗೆ ಇದ್ದರೂ, ಕ್ಲಬ್‌ನಲ್ಲಿ ಇದ್ದರೂ ಸರಿ, ಕೈಯಲ್ಲಿ ಗ್ಲಾಸ್‌ಹಿಡಿದುಕೊಂಡೇ ಇರುತ್ತಾರೆ.

“ವ್ಯಾಪಾರ ವ್ಯವಹಾರದ ಅಭಿವೃದ್ಧಿಗಾಗಿ ಇಂತಹ ಪಾರ್ಟಿಗಳು ನಡೆಯುತ್ತಲೇ ಇರಬೇಕಾಗುತ್ತೆ ಎನ್ನುತ್ತಾರೆ. ಹೀಗೆ ದುಂದುವೆಚ್ಚ ಮಾಡಿಯೇ ಹತ್ತು ಲಕ್ಷಕ್ಕೂ ಹೆಚ್ಚು ಬಂಡವಾಳ ನಷ್ಟ ಮಾಡಿಕೊಂಡಿದ್ದಾರೆ.”

“ನೀನು ಸುಮಂತ್‌ನನ್ನು ತುಂಬಾ ಪ್ರೀತಿಸುತ್ತಿಯಲ್ಲವೇ?”

“ಅದೇನೊ ನಿಜ. ಆದ್ರೆ ಇವತ್ತಿನ ಪರಿಸ್ಥಿತಿ ನೋಡಿದರೆ ಜೀವನಪೂರ್ತಿ ಅವರೊಂದಿಗೆ ಇರುವುದು ಸಾಧ್ಯವೇ ಇಲ್ಲ.”

“ಪ್ರೀತಿಗೆ ಅದ್ಭುತ ಶಕ್ತಿ ಇರುತ್ತದೆ ನಮ್ರತಾ. ನೀನು ಇಷ್ಟು ಬೇಗ ಸೋಲು ಒಪ್ಪಿಕೊಳ್ಳಬಾರದು.”

“ಅಕ್ಕಾ ಪ್ಲೀಸ್‌, ನಾನೇನು ಪ್ರಯತ್ನ ಮಾಡಲಿಲ್ಲ ಎಂಬ ಆರೋಪ ಮಾತ್ರ ನನ್ನ ಮೇಲೆ ಹೊರಿಸುವ ಪ್ರಯತ್ನ ಮಾಡದಿರಿ. ನಾನು ಸುಮಂತ್‌ಗೆ ಕೈ ಜೋಡಿಸಿ ಬೇಡಿಕೊಂಡೆ. ಅತ್ತೂಕರೆದು ಮಾಡಿದೆ, ಕೊನೆಗೆ ಬೇಸರದಿಂದ ರೇಗಾಡಿದೆ, ಕೂಗಾಡಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಕುಡಿಯುವುದನ್ನು ಬಿಟ್ಟುಬಿಡುತ್ತೇನೆಂದು ಭರವಸೆ ಕೊಟ್ಟರೆ ಹೊರತು, ಯಾವತ್ತೂ ಆ ಚಟದಿಂದ ದೂರವಾಗಲಿಲ್ಲ,” ಎನ್ನುತ್ತಾ ಕಣ್ಣೀರು ಒರೆಸಿಕೊಂಡಳು.

“ಹೀಗಾಗಿ ನಾನವರಿಗೆ ಬುದ್ಧಿವಾದ ಹೇಳುವುದನ್ನೇ ನಿಲ್ಲಿಸಿಬಿಟ್ಟೆ. ಆಮೇಲಂತೂ, ಸುಧಾರಿಸುವುದಿರಲಿ ತೀರ ಅಸಹ್ಯ ಭಾಷೆಯಲ್ಲಿ ಮಾತನಾಡುವುದು, ಹೊಡೆಯುವುದು ಕೂಡ ಶುರುವಾಗಿಬಿಟ್ಟಿದೆ. ಒಂದು ಸಲ ಮಾತ್ರವಲ್ಲ, ಸುಮಾರು ಸಲ ನನ್ನ ಮೇಲೆಯೇ ಕೈ ಎತ್ತಿದ್ದಾರೆ….”

ಸ್ವಲ್ಪ ಹೊತ್ತು ನಿಶ್ಶಬ್ದವಾಗಿದ್ದು ನಂತರ ನಾನೇ ಕೇಳಿದೆ, “ಅಕಸ್ಮಾತ್‌ ಅವನು ಸಂಪೂರ್ಣ ಕುಡಿಯುವುದನ್ನು ನಿಲ್ಲಿಸಿಬಿಟ್ಟರೆ, ಮತ್ತೆ ನೀನು ಅವನನ್ನು ಸ್ವೀಕರಿಸಬಲ್ಲೆಯಾ?”

“ವ್ಯರ್ಥ ಕನಸುಗಳನ್ನು ತೋರಿಸಬೇಡಿ ಅಕ್ಕ.”

“ಮೊದಲು ನೀನು ನನ್ನ ಪ್ರಶ್ನೆಗೆ ಉತ್ತರ ಕೊಡು.”

“ನಾನೇನೊ ಸುಮಂತ್‌ನೊಂದಿಗೇ ಬಾಳಿ ಬದುಕಬೇಕೆಂದೇ ಆಶಿಸುತ್ತೇನೆ. ಆದರೆ ಇದನ್ನೆಲ್ಲ ಕಂಡು ಮದುವೆ ಮಾಡಿಕೊಳ್ಳುವುದೇ ಬೇಡ ಎನಿಸುತ್ತಿದೆ. ಪ್ರೀತಿ ಪ್ರೇಮದ ಬಗ್ಗೆ ನನಗೆ ವಿಶ್ವಾಸವೇ ಇಲ್ಲದಂತಾಗಿದೆ,” ಎಂದ ಅವಳ ಧ್ವನಿಯಲ್ಲಿ ವಿಪರೀತ ನೋವಿತ್ತು.

“ನಾನೀಗಲೇ ಸುಮಂತ್‌ನ ಬಳಿ ಹೋಗಿ ಮಾತನಾಡುತ್ತೇನೆ. ಸಾಯಂಕಾಲ ನೀನೂ ಕ್ಲಬ್‌ನತ್ತ ಬಂದುಬಿಡು. ಸುಮಂತ್‌ನೊಂದಿಗೆ ಮಾತನಾಡಿರುವುದನ್ನು ನಿನಗೆ ಹೇಳುತ್ತೇನೆ,” ಎಂದು ಹೇಳಿ ಅವಳ ಭುಜ ಮೃದುವಾಗಿ ತಟ್ಟಿ ನಾನು ಹೊರಡಲು ತಯಾರಾದೆ.

ಸ್ವಲ್ಪ ಹೊತ್ತಿನ ಬಳಿಕ ಸುಮಂತ್‌ನ ಮನೆಯಲ್ಲಿ ಕಾಲಿರಿಸುತ್ತಿದ್ದಂತೆಯೇ ಆ ಮನೆ ಸೂತಕದಲ್ಲಿರುವಂತೆ ಭಾಸವಾಯಿತು. ಅವನ ತಂದೆ ದಿನೇಶ್‌ ಅಂಕಲ್ ಕೋಪದಿಂದ ಕುದಿಯುತ್ತಲಿದ್ದರು. ಸೀಮಾ ಆಂಟಿಯ ಕಣ್ಣುಗಳು ಊದಿಕೊಂಡಂತಾಗಿದ್ದು, ಈಗಷ್ಟೇ ಅವರು ವಿಪರೀತ ರೋದಿಸಿದ್ದಾರೆಂದು ಕಂಡುಬರುತ್ತಿತ್ತು.

ಸುಮಾರು ಮೂರು ತಿಂಗಳ ನಂತರ ನಾನು ಸುಮಂತ್‌ನನ್ನು ನೋಡಲು ಹೋಗಿದ್ದೆ. ಅವನ ಮುಖ ನಿಸ್ತೇಜಗೊಂಡಂತ್ತಿತ್ತು. ಕಣ್ಣುಗಳ ಸುತ್ತ ಕಪ್ಪು ಮನೆ ಮಾಡಿತ್ತು. ಅವರೆಲ್ಲ ನನ್ನನ್ನೂ ತಮ್ಮ ಕುಟುಂಬದ ಸದಸ್ಯಳೆಂದೇ ಭಾವಿಸುತ್ತಾರೆ. ಹೀಗಾಗಿ ಅವರು ತಮ್ಮ ವ್ಯಾಕುಲತೆಯ ಕಾರಣವನ್ನು ನನ್ನಿಂದ ತುಂಬಾ ಹೊತ್ತು ಮುಚ್ಚಿಡಲಾಗಲಿಲ್ಲ. ಸುಮಂತ್‌ನತ್ತ ತಿರಸ್ಕಾರದ ದೃಷ್ಟಿಯಿಂದ ನೋಡುತ್ತ ಹೇಳತೊಡಗಿದರು,

“ನೋಡಮ್ಮ ತನು, ಈಗಾಗಲೇ ಇವನು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಕೈಸುಟ್ಟುಕೊಂಡಿದ್ದಾನೆ. ಈಗ ಮತ್ತೆ 20 ಲಕ್ಷ ರೂಪಾಯಿ ಬೇಕಂತೆ ಈ ಮಹಾರಾಜನಿಗೆ! ಇವನು ಬಿಸ್‌ನೆಸ್‌ ಮಾಡೋಕೆ ಲಾಯಕ್ಕಾಗಿದ್ರೆ, ನಾನೂ ಹೇಗಾದ್ರೂ ಮಾಡಿ ಒಂದಿಪ್ಪತ್ತು ಲಕ್ಷ ಆರೆಂಜ್‌ ಮಾಡಬಹುದಿತ್ತು. ಆದರೇನು ಮತ್ತೆ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಹಾಳಾಗುವನೇ. ಹೀಗಾಗಿ ನಾನೀಗ ಇವನಿಗೆ ಬಿಸ್‌ನೆಸ್‌ಗೆಂದು ಒಂದು ನಯಾ ಪೈಸೆನೂ ಕೊಡೋಕೆ ಸಿದ್ಧನಿಲ್ಲ,” ಎಂದರು.

“ಅನಾವಶ್ಯಕ ಮಾತುಗಳನ್ನಾಡಿ ನೀವು ಸುಮ್ಮನೆ ತಲೆ ಕೆಡಿಸ್ಕೋಬೇಡಿ, ನನ್ನದೂ ತಲೆ ಕೆಡಿಸಬೇಡಿ ಡ್ಯಾಡಿ! ಇದೊಂದ್‌ ಸಲ ಕೊಟ್ಬಿಡಿ. ವರ್ಷದೊಳಗೇನೆ ವಾಪಸ್‌ ಕೊಟ್ಟು ಬಿಡುತ್ತೇನೆ,” ಎಂದು ಸುಮಂತ್‌ ಖಾರವಾಗಿಯೇ ಹೇಳಿದ.

“ಹೋಗ್ಲಿ ಇದೊಂದು ಸಾರಿ ಅವನಿಗೆ ಹೆಲ್ಪ್ ಮಾಡ್ಬಿಡಿ,” ಎಂದು ಸಂತೈಸಲು ಬಂದ ಹೆಂಡತಿಯತ್ತ ದಿನೇಶ್‌ ಅಂಕಲ್ ಕೆಂಡಾಮಂಡಲರಾಗಿ ನೋಡಿದರು.

“ಅಂಕಲ್, ಇಂತಹ ಮಹತ್ವದ ನಿರ್ಧಾರಗಳನ್ನು ಮನಸ್ಸು ಪ್ರಶಾಂತವಾಗಿರುವಾಗ ನಿರ್ಧರಿಸಬೇಕೆ ಹೊರತು, ಕೋಪ ತಾಪಗಳಿಂದ ಕುದಿಯುತ್ತಿರುವಾಗ ಅಲ್ಲ. ಸುಮಂತ್‌ಗೆ ಸಂಕಷ್ಟ ಕಾಲದಲ್ಲಿ ನೀವಲ್ಲದೆ ಇನ್ಯಾರು ಸಹಾಯ ಮಾಡಬಲ್ಲರು?” ಎಂದ ನನಗೆ ಇವರ ಕಲಹದಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುತ್ತಿದ್ದೇನೇನೋ ಎಂದೆನಿಸಿತ್ತು.

“ಇವನ ಸಂಕಷ್ಟಗಳ ಮೂಲ ಇವನ ಸ್ನೇಹಿತರೇ. ಅವರಿಗೆಲ್ಲ ಕಂಠಪೂರ್ತಿ ಕುಡಿಸಿ ಮೋಜು ಮಸ್ತಿ ಮಾಡುವುದನ್ನು ಬಿಟ್ಟರೆ, ಬೇರೆ ಯಾವ ಕೆಲಸ ಕಾರ್ಯ ಮಾಡಲು ಬರುವುದಿಲ್ಲ. ಇನ್ನು ಆ ಹುಡುಗಿ ನಮ್ರತಾ, ಇವನನ್ನು ಅದೆಷ್ಟೇ ಧಿಕ್ಕರಿಸಿದರೂ, ಇವನು ಅವಳ ಹಿಂದೆ ಸುತ್ತಾಡುವುದನ್ನು ಬಿಡುತ್ತಿಲ್ಲ.

“ಅಲ್ಲ ಇವನಿಗೆ ಏನು ಕಡಿಮೆ ಆಗಿದೆ ಅಂತ ಅವಳ ಹಿಂದೆಯೇ ತಿರುಗಬೇಕು? ಅವಳಿಗಿಂತಲೂ ಉತ್ತಮ ಹುಡುಗಿಯನ್ನು….”

“ನನಗೆ ಅವಳಿಗಿಂತಲೂ ಒಳ್ಳೆಯ ಹುಡುಗಿಯ ಅವಶ್ಯಕತೆ ಇಲ್ಲ, ಈ ಮನೆಯಲ್ಲಿ ನನಗೆ ಉಸಿರುಗಟ್ಟಿದಂತಾಗುತ್ತಿದೆ,” ಎಂದವನೇ ಸುಮಂತ್‌ ಸರಕ್ಕನೇ ಎದ್ದು ಹೊರನಡೆದುಬಿಟ್ಟ.

ನಾನು ತಕ್ಷಣ ಅವನ ಹಿಂದೆಯೇ ಓಡಿದೆ. ಅವನು ನನ್ನೊಂದಿಗೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸಾಯಂಕಾಲ ಕ್ಲಬ್‌ನಲ್ಲಿ ಸಿಗುತ್ತೇನೆ. ಆಗಲೇ ಮಾತನಾಡೋಣ ಎಂದವನೇ ಫ್ಯಾಕ್ಟರಿಗೆ ಹೊರಟುಹೋದ.

ಮಧ್ಯಾಹ್ನದ ಊಟ ಅವರ ಮನೆಯಲ್ಲಿಯೇ ಆಂಟಿ ಅಂಕಲ್ ಜೊತೆಗೇ ಆಯಿತು. ಅವರು ಬಿಯರ್‌ ಕುಡಿಯುತ್ತಲೇ ಊಟ ಮಾಡುತ್ತಿದ್ದರು.

“ಅವರೇ, ನಿಮ್ಮ ಮಡಿಕೇರಿಯಲ್ಲೂ ತುಂಬ ಚಳಿಯಂತೆ. ನಿನಗೆ ಅಲ್ಲಿ ಡ್ರಿಂಕ್ಸ್ ಅಭ್ಯಾಸವಾಗಿಲ್ಲವೇ ತನುಜಾ?” ಎಂದು ಸೀಮಾ ಆಂಟಿ ಗ್ಲಾಸಿಗೆ ಬಿಯರ್‌ ಸುರಿಯುತ್ತಾ ಕೇಳಿದರು.

“ಇಲ್ಲ ಆಂಟಿ….” ಎಂದು ನಾನು ಬಲವಂತವಾಗಿ ಮುಖದ ಮೇಲೆ ಮುಗುಳ್ನಗೆ ತುಂಬಿಕೊಂಡು ಹೇಳಿದೆ.

ದಿನೇಶ್‌ ಅಂಕಲ್ ಇದೀಗ ಸ್ವಲ್ಪ ನಗುತ್ತಲೇ ಮಾತನಾಡತೊಡಗಿದರು.

“ಇತ್ತೀಚೆಗೆ ಜೀವನದ ಪ್ರತಿಯೊಂದು ಹಂತದಲ್ಲೂ ಸ್ಪರ್ಧೆ ಉಂಟಾಗಿದೆ. ಹೀಗಾಗಿಯೇ ಯುವಕರೆಲ್ಲ ಒತ್ತಡಕ್ಕೆ ಬಲಿಯಾಗುತ್ತಿದ್ದಾರೆ ಮತ್ತು ಆ ಒತ್ತಡವನ್ನು ಹದ್ದುಬಸ್ತಿನಲ್ಲಿ ಇಡಲು ಡ್ರಿಂಕ್ಸ್ ಗೆ ದಾಸರಾಗುತ್ತಿದ್ದಾರೆ.”

“ಈ ದುರಭ್ಯಾಸವನ್ನು ನಾವೆಲ್ಲ ಸಹಜ ಸಾಮಾಜಿಕ ಪ್ರಕ್ರಿಯೆ ಎಂದು ಪರಿಗಣಿಸದಿದ್ದರೆ, ಯುವಕರು ಕುಡಿಯುವುದನ್ನು ಕಡಿಮೆ ಮಾಡಬಹುದು ಅಂಕಲ್. ಆಧುನಿಕತೆ ನೆಪದಲ್ಲಿ ಈ ಹವ್ಯಾಸವನ್ನು  `ಸ್ಟೇಟಸ್‌’ ಎಂದು ಭಾವಿಸಿ ನಾವು ತಪ್ಪು ಮಾಡುತ್ತಿದ್ದೇವೆ. ಇದರಿಂದಾಗುವ ದುಷ್ಪರಿಣಾಮವನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ,” ಎಂದು ನಾನು ನನ್ನ ಮನದ ಮಾತುಗಳನ್ನು ಹೇಳಿದೆ.

ಅವರಿಬ್ಬರೂ ನನ್ನ ಮಾತು ಕೇಳಿಯೂ ಕೇಳಿಸದವರಂತೆ ಮೌನವಾಗಿದ್ದರು. ತಂತಮ್ಮ ತಪ್ಪುಗಳನ್ನು ಮನಸಾರೆ ಒಪ್ಪಿಕೊಂಡು, ಒಂದು ಹೊಸ ಬದಲಾವಣೆ ತರುವುದೆಂದರೆ ಅದೇನು ಸಾಮಾನ್ಯ ವಿಷಯವೇ? ಆ ದಿನ ಸಾಯಂಕಾಲ ಕ್ಲಬ್‌ನಲ್ಲಿ ಸುಮಂತ್‌ನ ವ್ಯಸನದಿಂದಾಗಿ ನಡೆದುಹೋದ ಘಟನೆ ತುಂಬಾ ನೋವನ್ನುಂಟು ಮಾಡಿತ್ತು. ಅವತ್ತೇ ಸಾಯಂಕಾಲ, ಸುಮಂತ್‌ನ ತಂದೆಯನ್ನು ನೋಡಲು ಅವರ ಸ್ನೇಹಿತರೊಬ್ಬರು ಮನೆಗೆ ಬಂದರು. ಆದ್ದರಿಂದ ನಾವು ಕ್ಲಬ್‌ ತಲುಪುವಷ್ಟರಲ್ಲಿ ತುಂಬಾ ಲೇಟಾಗಿತ್ತು. ಹಾಲ್‌ನಲ್ಲಿ ಕಾಲಿಡುತ್ತಿದ್ದಂತೆಯೇ, ಅಮಲಿನಲ್ಲಿದ್ದ ಸುಮಂತ್‌ನ ಆಕ್ರೋಶಭರಿತ ಆರ್ಭಟದ ಮಾತುಗಳು ಕೇಳಿಸತೊಡಗಿದ್ದವು. ಒಳಗಿನ ದೃಶ್ಯ ಕಣ್ಣಾರೆ ಕಂಡಾಗಲಂತೂ ನನಗೆ ತಲೆಸುತ್ತು ಬಂದಂತಾಯಿತು.

ಯಾರೋ ನಾಲ್ಕು ಜನ ಸುಮಂತ್‌ನನ್ನು ಅಲ್ಲಾಡದಂತೆ ಹಿಡಿದುಕೊಂಡಿದ್ದರು. ಅವನೆದುರು ನಮ್ರತಾ ತನ್ನ ತಂದೆ ತಾಯಿ ಜೊತೆಗೆ ನಿಂತಿರುವುದು ಅಸ್ಪಷ್ಟವಾಗಿ ಗೋಚರಿಸುತ್ತಿತ್ತು.

ನಮ್ರತಾಳ ಕುಟುಂಬದವರು ಎದುರಿಗೇ ಇದ್ದಾರೆಂಬುದನ್ನು ಮರೆತು ಏರುದನಿಯಲ್ಲಿ ಕೂಗಾಡುತ್ತಲಿದ್ದ, “ಐ ಲವ್ ಯೂ ನಮ್ರತಾ. ನನ್ನಿಂದ ದೂರವಾಗುವ ಪ್ರಯತ್ನ ಮಾಡಬೇಡ…. ನೀನಿಲ್ಲದೇ ನಾನು ಬದುಕಿರಲಾರೆ….”

ತನ್ನನ್ನು ಹಿಡಿತದಿಂದ ಬಿಡಿಸಿಕೊಳ್ಳುವ ಯತ್ನ ಮಾಡುತ್ತ ಆಯತಪ್ಪಿ ಕೆಳಗೆ ಬಿದ್ದುಬಿಟ್ಟ. ಅಲ್ಲಿ ಜಮಾಯಿಸಿದ್ದ ಜನ ಇವನ ಅವಾಂತರವನ್ನು ಕಂಡು ಗೊಳ್ಳನೇ ನಕ್ಕುಬಿಟ್ಟರು.

ಇದನ್ನೆಲ್ಲ ಗಮನಿಸಿ ಅಲ್ಲಿಗೆ ಬಂದ ಕ್ಲಬ್‌ ಸೆಕ್ರೆಟರಿ, ನಮ್ರತಾಳ ತಂದೆಯೊಂದಿಗೆ , “ಸರ್‌, ನೀವೆಲ್ಲ ನನ್ನೊಂದಿಗೆ ಬನ್ನಿ. ಕ್ಲಬ್‌ನಲ್ಲಿ ಇಂತಹ ಅನಾಗರಿಕ ವರ್ತನೆಗಳನ್ನು ಸಹಿಸಲಾಗುವುದಿಲ್ಲ. ತಕ್ಷಣವೇ ನಾನು ಕ್ರಮ ಕೈಗೊಳ್ಳುತ್ತೇನೆ. ನೀವೆಲ್ಲ ಇತ್ತ ಕಡೆಗೆ ಬಂದುಬಿಡಿ,” ಎಂದ.

ತಡಬಡಾಯಿಸುತ್ತ ಎದ್ದು ನಿಂತ ಸುಮಂತ್‌, “ನಮ್ರತಾ, ನನ್ನನ್ನು ಬಿಟ್ಟು ಹೋಗಬೇಡ…” ಎಂದು ಕೂಗತೊಡಗಿದ.

“ಇವರನ್ನು ಹೊರಕ್ಕೆ ಹಾಕಿಬಿಡಿ. ಇವರ ತಂದೆ ತಾಯಿ ಬಂದಾಗ ನನ್ನನ್ನು ಭೇಟಿ ಮಾಡಲು ತಿಳಿಸಿ,” ಎಂದು ಸೆಕ್ರೆಟರಿ ಬೌನ್ಸರ್‌ಗಳಿಗೆ ಸೂಚನೆ ನೀಡಿ ನಮ್ರತಾ ಮತ್ತು ಅವಳ ಕುಟುಂಬದವರನ್ನು ಲಾಂಜ್‌ನತ್ತ ಕರೆದೊಯ್ದ.

ನಾಲ್ಕು ಜನ ಬಲಿಷ್ಠ ಬೌನ್ಸರ್‌ಗಳು, ಸುಮಂತ್‌ನನ್ನು ಅನಾಮತ್ತಾಗಿ ಎತ್ತಿಕೊಂಡು ಎಕ್ಸಿಟ್‌ನತ್ತ ಹೊರಟರು, “ಏಯ್‌ ಬಿಡ್ರೋ ನನ್ನ, ಯೂ ಫೂಲ್ಸ್, ನನಗೂ ಇಲ್ಲಿ ಒಂದು ಕ್ಷಣ ನಿಲ್ಲಲು ಇಷ್ಟವಿಲ್ಲ!” ಎಂದು ಅರಚುತ್ತಾ ಅವರಿಂದ ಜೋರಾಗಿ ಕೊಸರಿಕೊಂಡು, ಹೊಯ್ದಾಡುತ್ತಾ ಆಚೆಗೆ ಹೊರಟ.

“ನಿಲ್ಲು ಸುಮಂತ್‌…. ನಿಲ್ಲು!” ಎಂದು ಅವನು ನಮ್ಮ ಹತ್ತಿರಕ್ಕೆ ಬಂದಾಗ, ನಾನೇ ಮುಂದೆ ಹೋಗಿ ಅವನನ್ನು ತಡೆಯುವ ಪ್ರಯತ್ನ ಮಾಡಿದೆ.

“ಬಿಟ್ಟುಬಿಡು ತನು ನನ್ನನ್ನು,” ಎನ್ನುತ್ತಾ ಜೋರಾಗಿ ನನ್ನಿಂದ ಕೊಸರಿಕೊಂಡು ಹೊರಟೇಬಿಟ್ಟ. ಒಂದು ಕ್ಷಣ ಅವನ ಕಣ್ಣುಗಳನ್ನೇ ದಿಟ್ಟಿಸಿ ನೋಡಿದ್ದೆ. ಆ ಕಣ್ಣುಗಳ ತುಂಬ ಕ್ರೋಧ ತುಂಬಿಕೊಂಡಿತ್ತು. ಇದೀಗ ಅವನು ಸ್ಥಿಮಿತ ಕಳೆದುಕೊಂಡು ಯಾರೊಂದಿಗಾದರೂ ಹೊಡೆದಾಡಲೂ ಹಿಂಜರಿಯದಂಥ ಆಕ್ರೋಶ ಕಾಣಿಸಿತ್ತು.

“ಇವನು ಕುಡಿಯುವುದನ್ನು ಬಿಡದಿದ್ದರೆ, ನಮ್ರತಾ ಇವನನ್ನು ಮದುವೆ ಮಾಡಿಕೊಳ್ಳಲೇಬಾರದು,” ಎಂದು ಆಂಟಿ ಹೇಳಿದಾಗ ಅದ್ಯಾಕೋ ನನಗೂ ಅವರ ಮಾತು ಸರಿ ಎನಿಸಿತ್ತು. ಈಗ ಸುಮಂತ್‌ ಮತ್ತಿನಲ್ಲಿ, ಭಾವನೆಗಳ ತೊಳಲಾಟಕ್ಕೆ ಸಿಕ್ಕಿಕೊಂಡಿದ್ದ.

ತಕ್ಷಣ ನಾನು ಅಣ್ಣ ಅರುಣ್‌ಗೆ ಫೋನ್‌ ಮಾಡಿ ಸುಮಂತ್‌ನನ್ನು ಸಂಭಾಳಿಸುವಂತೆ ರಿಕ್ವೆಸ್ಟ್ ಮಾಡಿಕೊಂಡೆ. ಕೂಡಲೇ ಅರುಣ್‌ ಕೂಡ ಸುಮಂತ್‌ನನ್ನು ಹಿಂಬಾಲಿಸಿಕೊಂಡು ಹೊರನಡೆದಿದ್ದ. ನಂತರ ದಿನೇಶ್‌ ಅಂಕಲ್, ಸೀಮಾ ಆಂಟಿ ಇಬ್ಬರೂ ಲಾಂಜ್‌ನತ್ತ ತೆರಳಿ ಸೆಕ್ರೆಟರಿ, ನಮ್ರತಾ ಮತ್ತವಳ ತಂದೆ ತಾಯಂದಿರನ್ನು ಭೇಟಿ ಮಾಡಿದರು. ಒಂದು ತಾಸಿನ ಸುದೀರ್ಘ ಚರ್ಚೆಯ ಬಳಿಕ ದಿನೇಶ್‌ ಅಂಕಲ್ ಪರಿಸ್ಥಿತಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ನಮ್ರತಾ ತನ್ನ ತಂದೆ ತಾಯಿಯ ಜೊತೆಗೆ ಹೊರಟುಹೋದಳು. ನಂತರ ತಡ ರಾತ್ರಿಯವರೆಗೂ ಸುಮಂತ್‌ ಮತ್ತು ಅರುಣ್‌ರ ಮೊಬೈಲ್‌ಗಳು ನಾಟ್‌ ರೀಚೆಬಲ್ ಆಗಿದ್ದರಿಂದ ನಮ್ಮೆಲ್ಲರಿಗೂ ಟೆನ್ಶನ್‌ ಶುರುವಾಗಿತ್ತು.

ರಾತ್ರಿ 11 ಗಂಟೆಯ ನಂತರ ಅರುಣ್‌ ಅಣ್ಣನ ಕಾಲ್ ‌ಬಂದಿತು, “ಇಲ್ಲಿ ಎಲ್ಲ ಸರಿಯಾಗಿದೆ. ನಮ್ಮ ಬಗ್ಗೆ ಚಿಂತಿಸಬೇಡಿ. ಸುಮಂತ್‌ನನ್ನ ಜೊತೆಯಲ್ಲಿಯೇ ಇದ್ದಾನೆ. 2-3 ಗಂಟೆ ನಂತರ ಸುಮಂತ್‌ನನ್ನು ಅವರ ಮನೆಗೆ ಬಿಟ್ಟುಬರುತ್ತೇನೆ,” ಎಂದಾಗಲೇ ನಾವೆಲ್ಲ ಉಸಿರಾಡುವಂತಾಯಿತು.

ಕ್ಲಬ್‌ನಿಂದ ನೇರವಾಗಿ ನಾನೂ ಕೂಡ ದಿನೇಶ್‌ ಅಂಕಲ್ ಜೊತೆ ಅವರ ಮನೆಗೇ ಬಂದೆ. ಸುಮಂತ್‌ ಹಾಗೂ ಅರುಣ್‌ ಅಣ್ಣನ ಕುರಿತು ಇಬ್ಬರೂ ತುಂಬಾ ಭೀತಿಗೊಂಡಿದ್ದರು. ಬೆಳಗ್ಗೆ ಸುಮಾರು ಮೂರು ಗಂಟೆಯ ಸಮಯಕ್ಕೆ ಅವರಿಬ್ಬರೂ ಮನೆಗೆ ಬಂದಿದ್ದರು. ಸುಮಂತ್‌ನ ಪರಿಸ್ಥಿತಿ ಕಂಡು ಎಲ್ಲರಿಗೂ ಗಾಬರಿಯಾಯಿತು.

ಅವನು ಧರಿಸಿದ್ದ ಬಟ್ಟೆಗಳು ಅಲ್ಲಲ್ಲಿ ಹರಿದು ಹೋಗಿದ್ದವು. ಬಲಗಣ್ಣು ಬೇರೆ ಊದಿಕೊಂಡಿತ್ತು. ಮುಖದ ಮೇಲೆ ಹಲ್ಲೆ ಮಾಡಿದ ಗಾಯದ ಗುರುತುಗಳೂ ಗೋಚರಿಸುತ್ತಿದ್ದವು. ಅರುಣ್‌ ಪರಿಸ್ಥಿತಿ ಹಾಗೇನೂ ಆಗಿರಲಿಲ್ಲ. ಆದರೆ ಹೊರನೋಟಕ್ಕೆ ಅವರಿಬ್ಬರು ಯಾರೊಂದಿಗೊ ಘರ್ಷಣೆ ಮಾಡಿಕೊಂಡು ಬಂದಂತಿತ್ತು.

ಸುಮಂತ್‌ ತುಂಬಾ ವ್ಯಾಕುಲನಾದಂತೆ ಕಾಣಿಸುತ್ತಿದ್ದ. ಏನೊಂದೂ ಮಾತನಾಡದೆ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ. ಅರುಣ್‌ ನಮಗೆಲ್ಲ ಕ್ಲುಪ್ತವಾಗಿ ತಿಳಿಸಿದ್ದೇನೆಂದರೆ, “ಅಮಲಿನಲ್ಲಿ ಕಾರ್‌ ಡ್ರೈವ್ ಮಾಡಿಕೊಂಡು ಹೋಗುತ್ತಿರುವಾಗ, ಯಾರೋ ಒಬ್ಬ ಸ್ಕೂಟರ್‌ನವನಿಗೆ ಗುದ್ದಿಸಿದ್ದಾನೆ. ತಪ್ಪು ಸ್ಕೂಟರ್‌ನವನದೇ ಇದ್ದರೂ, ಸುಮಂತ್‌ ನಶೆಯಲ್ಲಿದ್ದುದರಿಂದ ಅಲ್ಲಿ ಸೇರಿದವರೆಲ್ಲ ಇವನ ಮೇಲೆಯೇ ಅಪವಾದ ಹೊರಿಸಿದರು.

ಹೀಗಿರುವಾಗ, ಮೊದಲೇ ಕೋಪದಲ್ಲಿದ್ದ ಸುಮಂತ್‌ ಸ್ಕೂಟರ್‌ನವನ ಮೇಲೆ ಹಲ್ಲೆ ಮಾಡಿಬಿಟ್ಟ. ನಾನು ಅವನನ್ನು ಅದೆಷ್ಟೇ ಕಂಟ್ರೋಲ್ ‌ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಆಕ್ರೋಶಗೊಂಡ ಪಬ್ಲಿಕ್‌ ಸುಮಂತ್‌ನನ್ನು ತರಾಟೆಗೆ ತೆಗೆದುಕೊಂಡು ಎರಡು ಧರ್ಮದೇಟನ್ನೂ ಕೊಟ್ಟಿತು.

ಅಷ್ಟರಲ್ಲಿ ಪೊಲೀಸ್‌ ಗಸ್ತು ವಾಹನ ಅಲ್ಲಿಗೆ ಬಂದಿತು. ಪೊಲೀಸರು ಇಬ್ಬರನ್ನೂ ಸ್ಟೇಷನ್‌ಗೆ ಎಳೆದೊಯ್ದರು. ಸ್ಕೂಟರ್‌ನವನನ್ನು ಮತ್ತು ಸುಮಂತ್‌ ಇಬ್ಬರನ್ನೂ ಲಾಕಪ್‌ಗೆ ತಳ್ಳಿದರು. ಹೀಗಾಗಿ ಠಾಣೆಯಲ್ಲಿಯೇ ಸುಮಾರು 4-5 ಗಂಟೆ ಕಳೆಯಬೇಕಾಗಿ ಬಂದಿತು. ಅಲ್ಲಿಂದ ನೇರವಾಗಿ ಮನೆಗೇ ಬಂದಿದ್ದೇವೆ.”

“ಆಗಲೇ ನನಗೊಂದು ಫೋನ್‌ ಮಾಡಿ ತಿಳಿಸಬಾರದೇ?” ಎಂದು ಎಲ್ಲವನ್ನೂ ಕೇಳಿಸಿಕೊಂಡ ದಿನೇಶ್‌ ಅಂಕಲ್ ನಡುಗುವ ಧ್ವನಿಯಲ್ಲಿ ಕೇಳಿದರು.

“ಮನೆಯಲ್ಲಿ ಯಾರಿಗೂ ತಿಳಿಸಬಾರದೆಂದು ಸುಮಂತ್‌ನೇ ನನ್ನನ್ನು ನಿರ್ಬಂಧಿಸಿದ್ದ ಅಂಕಲ್.”

ಸುಮಂತ್‌ನ ತಂದೆ ತಾಯಿ ಅವನ ರೂಮ್ ನತ್ತ ತೆರಳಿದರು. ಸ್ವಲ್ಪ ಸಮಯದ ನಂತರ ಮರಳಿ ಹಾಲ್‌ನಲ್ಲಿ ನಮ್ಮತ್ತ ಬಂದಾಗ, ಅವರಿಬ್ಬರೂ ತುಂಬಾ ವಿಚಲಿತರಾಗಿದ್ದರು. ಅವರೊಂದಿಗೆ ಮಾತನಾಡುವುದಿಲ್ಲವೆಂದು ಹಠ ಹಿಡಿದ ಸುಮಂತ್‌ ಬಾಗಿಲನ್ನೇ ತೆರೆಯಲಿಲ್ಲವಂತೆ.

ಅರುಣ್‌ ಅಣ್ಣ ಮನೆಗೆ ಹೊರಡೋಣ ಎನ್ನತೊಡಗಿದ್ದ. ಆದರೆ ನಾನೇ, ಸುಮಂತ್‌ನನ್ನು ಭೇಟಿ ಮಾಡಿ, ಮಾತನಾಡಿಸಿಕೊಂಡೇ ಹೋಗೋಣ ಎಂದು ತಡೆಹಿಡಿದೆ. ಈಗ ನಾನೇ ಖುದ್ದಾಗಿ ಹೋಗಿ ಸುಮಂತ್‌ನ ರೂಮ್ ಬಾಗಿಲು ತಟ್ಟಿದೆ.

ನಾನು ಮತ್ತು ಸುಮಂತ್‌ ಒಟ್ಟಿಗೇ ಬೆಳೆದರು. ನಮ್ಮ ಮಧ್ಯೆ ಆಳವಾದ ಸ್ನೇಹವಿತ್ತು. ಹೀಗಾಗಿ ನಾನು ಒಂದೇ ಸಲ ಡೋರ್‌ ನಾಕ್ ಮಾಡಿ “ಬಾಗಿಲು ತೆರೆಯೋ,” ಎಂದ ಕೂಡಲೇ ಬಾಗಿಲು ತೆರೆದಿದ್ದ.

ತಲೆ ತಗ್ಗಿಸಿಕೊಂಡೇ ಮಂಚದ ಮೇಲೆ ಕುಳಿತುಕೊಂಡ. ಏನು ಮಾಡುವುದು? ಎಲ್ಲಿಂದ ಶುರು ಮಾಡುವುದು? ಎಂದು ತೋಚದೆ ನಾನು ಅವನ ಪಕ್ಕದಲ್ಲಿ ಮೌನವಾಗಿ ಕುಳಿತುಬಿಟ್ಟೆ. ಕೆಲವು ಕ್ಷಣಗಳಲ್ಲಿ ಅವನ ಅವಮಾನಗೊಂಡ ಮನಸ್ಸು ನೋವಿನಿಂದ ಕಣ್ಣೀರು ಸುರಿಸತೊಡಗಿತ್ತು. ಜೊತೆಗೆ ಕಂಪಿಸುವ ಧ್ವನಿಯಲ್ಲಿ ತನ್ನ ನೋವನ್ನು ಹೊರಹಾಕತೊಡಗಿದ.

“ತನು, ಒಬ್ಬ ಸ್ಕೂಟರ್‌ನವನೊಂದಿಗೆ ನಾನು ಜೈಲು ಪಾಲಾಗಬೇಕಾಯಿತು,” ಎಂದ ಅವನ ಧ್ವನಿಯಲ್ಲಿ ಅಪಾರ ನೋವು ಗೋಚರಿಸಿತ್ತು.

“ಅವನು ಸೇದಿದ ಬೀಡಿ ಹೊಗೆಯನ್ನು ಪದೇ ಪದೇ ನನ್ನ ಮುಖಕ್ಕೆ ಬಿಡುತ್ತಿದ್ದ. ದ್ವೇಷದಿಂದ ನನ್ನನ್ನೇ ಗುರಾಯಿಸುತ್ತಿದ್ದ. ನಾನೇನಾದ್ರೂ ಮಾತನಾಡಿದ್ರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಹೊಡೆದಾಟ ಬಡಿದಾಟ ಆಗಬಹುದಿತ್ತು. ಅವನಿಗೇನು ಬಿಡು, ಆದರೆ ನನ್ನ ಮಾನ ಹರಾಜಾಗುತ್ತಿತ್ತಲ್ಲ.

“ಕ್ಲಬ್‌ನಲ್ಲಿಯೂ ಅಷ್ಟೇ, ಬೌನ್ಸರ್‌ಗಳು ನನ್ನನ್ನು ಎತ್ತಿ ಹೊರಹಾಕಿದರು. ವೈಟರ್‌ಗಳು ಕೂಡ ತಳ್ಳಾಡಿದರು. ಕೆಲಸಕ್ಕೆ ಬಾರದವರೆಲ್ಲ ಕೂಗಾಡಿ ಗಲಾಟೆ ಮಾಡಿದರು. ಎಂತೆಂಥವರೆಲ್ಲ ನನ್ನನ್ನು ಅವಮಾನಿಸಿದರಲ್ಲ….”

“ನಾನು ಅಷ್ಟೊಂದು ಕೆಟ್ಟವನಾ ತನು? ನನಗೆ ಅವಮಾನ ಆಗುತ್ತಿರುವುದನ್ನು ನೋಡಿಯೂ ಕೂಡ ನನ್ನವರು ಅಂತ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲವಲ್ಲ. ಆ ಸಮಯದಲ್ಲಿ ಮಮ್ಮಿ ಡ್ಯಾಡಿ ಎಲ್ಲಿದ್ದರು? ನೀನೆಲ್ಲಿದ್ದೆ? ನನ್ನ ಆತ್ಮೀಯ ಸ್ನೇಹಿತರೆನಿಸಿಕೊಂಡ ಅವರೆಲ್ಲಾ ಏಕೆ ನನಗೆ ಆಸರೆಯಾಗಲಿಲ್ಲ?”

amalu-2

“ಅದ್ಸರಿ ಸುಮಂತ್‌, ಅರುಣ್‌ ನಮಗೆ ಫೋನ್‌ ಮಾಡ್ತೀನಿ ಅಂದಾಗ ನೀನೇಕೆ ಅವನನ್ನು ತಡೆದೆ? ನಮಗೆ ವಿಷಯ ತಿಳಿದಿದ್ದರೆ ನೀನು ಜೈಲು ಪಾಲಾಗುವುದನ್ನು ಹೇಗಾದರೂ ತಪ್ಪಿಸಬಹುದಿತ್ತಲ್ಲ?” ಎನ್ನುವಾಗ ನನ್ನ ಧ್ವನಿಯೂ ದುಃಖದಿಂದ ಕಂಪಿಸುತ್ತಿತ್ತು.

“ನೋ…, ಅರುಣ್‌ ಸುಳ್ಳು ಹೇಳುತ್ತಿದ್ದಾನೆ. ನಾನು ಅದೆಷ್ಟು ಬಾರಿ ಅನನ್ನು ಕೂಗಿ ಕರೆದೆ…. ಆ ಮನುಷ್ಯ ನನ್ನತ್ತ ತಿರುಗಿಯೂ ನೋಡಲಿಲ್ಲ. ನನಗೆ ಅವನ ಮೇಲೆ ತುಂಬಾ ಕೋಪ ಬಂದಿದೆ.”

“ಈಗ ಕೋಪ ಮಾಡಿಕೊಂಡರೂ ಉಪಯೋಗವಿಲ್ಲ. ದುಃಖಪಟ್ಟರೂ ಪ್ರಯೋಜನವಿಲ್ಲ. ರಾತ್ರಿ ನಡೆದದ್ದನ್ನೆಲ್ಲ ಒಂದು ಕೆಟ್ಟ ಕೆನಸು ಎಂದು ಮರೆತುಬಿಡು ಸುಮಂತ್‌,” ಎಂದು ಮೃದುವಾಗಿ ತಿಳಿ ಹೇಳಿದೆ.

“ಇಲ್ಲ ತನು, ನಾನ್ಯಾವತ್ತೂ ಈ ರಾತ್ರಿಯನ್ನು ಮರೆಯಲು ಆಗುವುದಿಲ್ಲ. ಇಂದು ನನಗಾಗಿರುವ ಅವಮಾನದಿಂದಾಗಿ ಆತ್ಮಹತ್ಯೆ ಮಾಡಿಕೊಂಡು ಬಿಡಬೇಕೆಂದು ಅನಿಸುತ್ತಿದೆ. ನಾಳೆಯಿಂದ ಜನರಿಗೆ ಹೇಗೆ ಮುಖ ತೋರಿಸಲಿ ಎಂಬುದೇ ತಿಳಿಯುತ್ತಿಲ್ಲ,“ ಎಂದು ಜರ್ಜರಿತನಾಗಿ ಹೇಳಿದ.

ನನಗೆ ಕೋಪ ನೆತ್ತಿಗೇರಿತು, “ಹುಚ್ಚುಚ್ಚಾಗಿ ಮಾತನಾಡಬೇಡ ಸುಮಂತ್‌, ನೀನು ಕಂಠಪೂರ್ತಿ ಕುಡಿಯದಿದ್ದರೆ ಇದೆಲ್ಲ ಆಗುತ್ತಿತ್ತಾ?”

“ತಮಗೆ ಸೇರಬೇಕಾದ ಪ್ರೀತಿ, ವಾತ್ಸಲ್ಯ ಯಾರಿಗೆ ಸಿಗುವುದಿಲ್ಲವೋ ಅಂತಹರಿಗೆ ಡ್ರಿಂಕ್ಸೇ ಆಸರೆಯಾಗುತ್ತದೆ.”

“ವಾಹ್‌, ಇದಪ್ಪ ಮಾತು ಅಂದ್ರೆ. ಕೂಗಾಡಿ, ಕಿರುಚಾಡಿ, ಅರಚಾಡಿ, ಹೊಡೆದಾಡಿ ಇಲ್ಲದೇ ಇರೋ ಸೀನ್‌ಗಳನ್ನೆಲ್ಲ ಕ್ರಿಯೇಟ್ ಮಾಡಿದ್ರೆ ನಮ್ರತಾ ಪ್ರೀತಿಯನ್ನು ಗೆಲ್ಲಬಹುದು ಎಂದುಕೊಂಡಿರುವೆಯಾ?”

“ಹಾಗಲ್ಲ ತನು…., ಮಮ್ಮಿ, ಡ್ಯಾಡಿಗೂ ನನ್ನ ಬಗ್ಗೆ ಕಾಳಜಿ ಇಲ್ಲವಾಗಿಬಿಟ್ಟಿದೆಯಲ್ಲ. ಅವರ ನಿರ್ಲಕ್ಷ್ಯತೆಯ ಧೋರಣೆಯೇ ನನ್ನನ್ನು ಮತ್ತಷ್ಟು ಕುಡಿಯುವಂತೆ ಮಾಡುತ್ತಿದೆ,” ಎಂದು ಕೋಪದಿಂದಲೇ ಕೂಗಿದ.

“ಅದೇ ನೋಡು, ನೀನು ವಿಪರೀತ ಕುಡಿಯುವುದರ ಪರಿಣಾಮವೇ ಇಂದು ರಾತ್ರಿ ನಡೆದಿರುವ ಘಟನೆ. ಇನ್ನು ಮೇಲಾದರೂ ದಯವಿಟ್ಟು ಕುಡಿಯುವುದನ್ನು ಬಿಟ್ಟುಬಿಡು ಸುಮಂತ್‌….”

ನಿರುತ್ತರನಾದ ಸುಮಂತ್‌ ಮೌನವಾಗಿ ಕುಳಿತುಬಿಟ್ಟ. ಇನ್ನೂ ಭಾವುಕಳಾದ ನಾನು, “ಈ ನಿನ್ನ ದುರಭ್ಯಾಸದಿಂದಾಗಿ ಎಲ್ಲ ಸಂಬಂಧಗಳಲ್ಲೂ ವಿಷಪ್ರಾಷನವಾಗಿ ಬದುಕಿನ ನೆಮ್ಮದಿ ಸಂತೋಷಗಳೆಲ್ಲ ಹಾಳಾಗುತ್ತಿವೆ. ಅದಕ್ಕಾದ್ರೂ ನೀನು ಕುಡಿಯುವುದನ್ನು ಬಿಡಲೇಬೇಕು,” ಎಂದೆ.

“ಹೌದು ತನು, ನನಗೆ ಈ ಕುಡಿತದ ಬಗ್ಗೆ ಮತ್ತು ನನ್ನ ಬಗ್ಗೆಯೂ ಅಸಹ್ಯವೆನಿಸುತ್ತಿದೆ. ಆದರೆ ಕುಡಿಯುವುದನ್ನು ಬಿಡುವುದು ಸುಲಭವಲ್ಲ. ಈ ಮುಂಚೆಯೂ ಕುಡಿಯುವುದನ್ನು ನಿಲ್ಲಿಸಿಬಿಡುವ ಪ್ರಯತ್ನ ಮಾಡಿಯಾಗಿದೆ.

“ಆದರೆ ಗೆಳೆಯರೊಂದಿಗೆ ಸೇರಿದಾಗ ನನಗರಿವಿಲ್ಲದಂತೆಯೇ  ಮಧು ಬಟ್ಟಲು ನನ್ನ ಕೈಗೆ ಬಂದಿರುತ್ತದೆ. ನಾನು ಕುಡಿಯುವುದಿಲ್ಲ ಎಂದು ಹೇಳಿದ ಮಾತು ಸುಳ್ಳಾಗಿಬಿಡುತ್ತದೆ…. ಮತ್ತೆ ನನಗೆ ಸೋಲುಂಟಾಗುತ್ತದೆ,” ಎಂದ ಸುಮಂತನ ಕಣ್ಣುಗಳಲ್ಲಿ ನಿರಾಶೆಯ ಕಾರ್ಮೋಡ ಕವಿದಿದ್ದವು.

“ಈ ಬಾರಿ ನಾನು ನಿನ್ನನ್ನು ಸೋಲಲು ಬಿಡುವುದಿಲ್ಲ ಸುಮಂತ್‌. ಇಂದು ಸಂಜೆಯೇ ನೀನೂ ನನ್ನೊಂದಿಗೆ ಮಡಿಕೇರಿಗೆ ಹೊರಟು ಬಾ. ನಿನ್ನ ಸ್ನೇಹಲೋಕದಿಂದ ಬಹುದೂರ ಪ್ರಶಾಂತ ವಾತಾವರಣದಲ್ಲಿ ಕೆಲವು ದಿನ ಕಳೆದರೆ, ನಿನ್ನಲ್ಲಿ ಹೊಸ ಚೈತನ್ಯ, ನವೋಲ್ಲಾಸ, ಇಚ್ಛಾಶಕ್ತಿ, ಆತ್ಮವಿಶ್ವಾಸಗಳೆಲ್ಲ ವೃದ್ಧಿಗೊಳ್ಳುತ್ತವೆ. ಆಗ ನೀನೊಬ್ಬ ಗಟ್ಟಿಗನಾಗುವೆ ಮತ್ತು ಜೀವನದಲ್ಲಿ ಎಂತಹ ಸಂಕಷ್ಟಗಳು ಎದುರಾದರೂ ನಿನಗೆ ಮದಿರೆಯ ಆಸರೆ ಬೇಕಾಗುವುದಿಲ್ಲ. ನಿನ್ನ ದಿಟ್ಟತನವೇ ನಿನಗೆ ಆಸರೆಯಾಗಿ ಕೈಗೊಳ್ಳುವ ಪ್ರತಿ ಕಾರ್ಯದಲ್ಲೂ ಜಯ ಸಿಗುವಂತಾಗುತ್ತದೆ. ನೀನೀಗ ನನ್ನ ಜೊತೆ ಬಂದರೆ ಅಷ್ಟೇ ಸಾಕು. ಪ್ಲೀಸ್‌, ಇಲ್ಲ ಅನ್ನಬೇಡ,” ಎಂದೆ.

ಕೆಲವು ಕ್ಷಣ ನನ್ನ ಮುಖವನ್ನೇ ದಿಟ್ಟಿಸಿ ನೋಡಿದ ಸುಮಂತ್‌, ನನ್ನ ಕಣ್ಣಿಂದ ಸುರಿದ ಹನಿಗಳನ್ನು ಅಕ್ಕರೆಯಿಂದ ಒರೆಸುತ್ತ, ಮುಖದ ಮೇಲೆ ಬಲವಂತದ ನಗುವನ್ನು ತುಂಬಿಕೊಳ್ಳುತ್ತ, ಅತ್ಯಂತ ಪ್ರಯಾಸದಿಂದ, “ನೀನು ಅದ್ಯಾವ ಜನ್ಮದ ಅಕ್ಕನೋ…. ತಂಗಿಯೋ…. ನಿನ್ನ ಮಾತು ಮೀರಲಾರೆ,” ಎಂದ. ಸುಮಾರು ಅರ್ಧಗಂಟೆಯ ನಂತರ ನಾನು ಅರುಣ್‌ ಮರಳಿ ಮನೆಗೆ ಹೊರಟೆ. ನನ್ನ ಮನಸ್ಸಿನಲ್ಲಾಗುತ್ತಿದ್ದ ಆಂದೋಲನವನ್ನು ಗಮನಿಸಿ ಅರುಣ್‌ ಹೇಳಿದ, ಅವನ ಸ್ವರದಲ್ಲಿ ತೀವ್ರ ಗಂಭೀರತೆ ಇತ್ತು.

“ಹೌದು ತನು, ನಾನು ಬೇಕೆಂದೇ ಸುಮಂತ್‌ನನ್ನು ಜೈಲಿಗೆ ಹಾಕಿದ ವಿಚಾರವನ್ನು ನಿಮಗ್ಯಾರಿಗೂ ತಿಳಿಸಲಿಲ್ಲ. ನಾವು ಹೋಗಿದ್ದ ಪೊಲೀಸ್‌ ಸ್ಟೇಷನ್‌ ಸಬ್‌ಇನ್ಸ್ ಪೆಕ್ಟರ್‌ ಗಣೇಶ್‌ ನನ್ನ ಹಳೆಯ ಸ್ನೇಹಿತ. ಕ್ಲಾಸ್‌ಮೇಟ್‌ ಕೂಡ ಆಗಿದ್ದ. ನಶೆಯ ಅಮಲಿನಲ್ಲಿದ್ದ ಸುಮಂತ್‌ ಅವನ ಜೊತೆಗೂ ಗರ್ವದಿಂದ ಮಾತಾಡಿದ, ಹೀಗಾಗಿ ಕುಡಿದ ಅಮಲಿನಲ್ಲಿ ಎಗರಾಡುವವರಿಗೆ ಸ್ವಲ್ಪ ಹೊತ್ತು ಮಾವನ ಮನೆಯ ರುಚಿ ತೋರಿಸಿದರೆ ಎಲ್ಲ ಸರಿಹೋಗುತ್ತದೆ ಸುಮ್ಮನಿರು ಎಂದ ಗಣೇಶ್‌, ಆ ಸ್ಕೂಟರ್‌ ನನೊಂದಿಗೆಯೇ ಇವನನ್ನು ಜೈಲಿಗೆ ಹಾಕಿ ಪಾಠ ಕಲಿಸಿದ.

“ನಾನು ತಡೆದಿದ್ದರೆ ಸುಮಂತ್‌ನನ್ನು ಜೈಲಿಗೆ ಹಾಕುವುದನ್ನು ತಪ್ಪಿಸಬಹುದಿತ್ತು. ಆದರೆ ಗಣೇಶ್‌ ಹೇಳಿದ್ದರಲ್ಲೂ ಅರ್ಥವಿತ್ತು. ಹೀಗಾಗಿಯೇ ನಾನ್ಯಾರಿಗೂ ವಿಷಯ ತಿಳಿಸಲಿಲ್ಲ. ಪೊಲೀಸ್‌ ಮಾವನ ಮನೆಯ 3-4 ಗಂಟೆಗಳ ಆತಿಥ್ಯದಿಂದ ಈಗಲಾದರೂ ಸ್ವಲ್ಪ ಸುಮಂತ್‌ನಲ್ಲಿ ಬದಲಾವಣೆ ಬಂದಿರಬಹುದು ಎಂದುಕೊಳ್ಳುತ್ತೇನೆ,” ಎಂದ ಅರುಣ್‌.

ನಾನು ಕೆಲವು ಹೊತ್ತು ಮೌನವಾಗಿ ಇದೇ ವಿಷಯವನ್ನು ಮನನ ಮಾಡಿ ನೋಡಿದಾಗ, ಅಣ್ಣನ ನಿರ್ಧಾರವೇನೋ ಕಠಿಣ ಎನಿಸಿತಾದರೂ, ಅದರಿಂದಾಗಿ ಸುಮಂತ್‌ನ ಮೇಲಾದ ಪರಿಣಾಮ ಒಳ್ಳೆಯದೇ ಆಗಿತ್ತು. ಮತ್ತೆ ಕೆಲವು ಗಂಟೆಗಳ ಬಳಿಕ ಮಡಿಕೇರಿಗೆ ಹೊರಡಲು ನನ್ನ ಲಗೇಜ್‌ ಪ್ಯಾಕ್‌ ಮಾಡಲಾರಂಭಿಸಿದೆ.

ನಮ್ರತಾಳನ್ನು ಹೊರತುಪಡಿಸಿ, ಸುಮಂತ್‌ನ ಕೆಲವೇ ಕೆಲವು ಉತ್ತಮ ಸ್ನೇಹಿತರಿಗೆ ಫೋನ್‌ ಮಾಡಿ ಸುಮಂತ್‌ನನ್ನು ನನ್ನ ಜೊತೆಗೆ ಮಡಿಕೇರಿಗೆ ಕರೆದೊಯ್ಯುತ್ತಿರುವ ವಿಷಯ ತಿಳಿಸಿದ್ದೆ. ಅವರೆಲ್ಲರೂ, ಸುಮಂತ್‌ ಏನಾದರೂ ಮಾಡಿ ಕುಡಿಯೋ ಅಭ್ಯಾಸವನ್ನು ಬಿಟ್ಟುಬಿಟ್ಟರೆ ಸಾಕು ಎಂದು ಆಶಿಸುವಂಥವರು.ರಾತ್ರಿಯ ಬಸ್‌ ಹಿಡಿಯಬೇಕಾಗಿತ್ತು. ಬಸ್‌ ಸ್ಟ್ಯಾಂಡ್‌ವರೆಗೂ ಹೋಗಲು ಅರುಣ್‌ ಟ್ಯಾಕ್ಸಿ ಬುಕ್‌ ಮಾಡಿದ್ದ. 7 ಗಂಟೆ ಸುಮಾರಿಗೆ ಸುಮಂತ್‌ ಅದೇ ಟ್ಯಾಕ್ಸಿಯಲ್ಲಿ ತನ್ನ ತಂದೆತಾಯಿಯೊಂದಿಗೆ ನಮ್ಮ ಮನೆಗೆ ಬಂದ.

ನಮ್ಮ ಮನೆಯಲ್ಲಿ ಹೆಜ್ಜೆ ಇಡುತ್ತಿದ್ದಂತೆಯೇ ಅವನಿಗೊಂದು ಅಚ್ಚರಿ ಕಾದಿತ್ತು. ಅವನನ್ನು ಬೀಳ್ಕೊಡಲೆಂದೇ ಅವನ ಇಬ್ಬರು ಆತ್ಮೀಯ ಗೆಳೆಯರು, ಅವನ ಚಿಕ್ಕಪ್ಪನ ಸಂಪೂರ್ಣ ಪರಿವಾರ ಮತ್ತು ನಾವು ಓದಿದ್ದ ಹಳೆಯ ಶಾಲೆಯ ಅಚ್ಚುಮೆಚ್ಚಿನ ಶಿಕ್ಷಕಿ ಜಲಜಾ ಮೇಡಂ ಎಲ್ಲರೂ ಅವನಿಗೆ ಆಲ್ ದಿ ಬೆಸ್ಟ್ ಹೇಳೋಣವೆಂದು ಕಾದು ನಿಂತಿದ್ದರು. ಆ ಕಾಲದಲ್ಲಿ ಸುಮಂತ್‌ ಜಲಜಾ ಮೇಡಂಗೆ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ.

ಎಲ್ಲರೂ ಸುಮಂತ್‌ನನ್ನು ಆಲಂಗಿಸಿ ಕೊಂಡು, ಪ್ರೀತಿಯಿಂದ `ಆಲ್ ದಿ ಬೆಸ್ಟ್’ ಎಂದು ಹಾರೈಸುತ್ತಾ ಅವನ ಆತ್ಮವಿಶ್ವಾಸ ಒಗ್ಗೂಡಿಸುವ ಕೆಲವು ಮಾತುಗಳನ್ನು ಹೇಳಿದರು. ಜಲಜಾ ಮೇಡಂ, “ಹಿರಿಯರ ವಿಶ್ವಾಸ ಮತ್ತು ಕಿರಿಯರ ಅಭಿಮಾನಗಳನ್ನು ಮರಳಿ ಪಡೆಯಬೇಕೆಂದರೆ, ನಿನ್ನನ್ನು ನೀನು ಸಂಪೂರ್ಣ ಬದಾಲಾಯಿಸಿ ಕೊಳ್ಳಲೇಬೇಕು ಸುಮಂತ್‌,” ಎನ್ನುತ್ತ ಮೃದುವಾಗಿ ಅವನ ಭುಜ ತಟ್ಟಿದರು. ಆಗ ಸುಮಂತ್‌ನ ಕಣ್ಣೀರ ಕಟ್ಟೆ ಒಡೆದಿತ್ತು.

“ನೀನು ನಿರಾತಂಕವಾಗಿ ಹೋಗಿ ಬಾ ಸುಮಂತ್‌. ಈ ದುಶ್ಚಟದಿಂದಾಗಿ ನಮ್ಮ ಪರಿವಾರದ ಸದಸ್ಯರೆಲ್ಲ ಹಾಳಾಗದಂತೆ ನೋಡಿಕೊಳ್ಳುವ ಜಾವಾಬ್ದಾರಿ ನನಗಿರಲಿ,” ಎಂದ, ಯಾವ ದುಶ್ಚಟ ಇಲ್ಲದ ಸುಮಂತ್‌ನ ಚಿಕ್ಕಪ್ಪನ ದೃಷ್ಟಿ ಮಾತ್ರ ಸುಮಂತ್‌ನ ತಂದೆಯತ್ತಲೇ ಇತ್ತು.

“ಹೌದು ಮಗು, ನಮಗೆ ಹಾನಿ ಮಾಡುವಂತಹ ವಿಷವನ್ನು ನಾವು ಸ್ವಲ್ಪವೇ ಕುಡಿದರೆಷ್ಟು, ವಿಪರೀತ ಕುಡಿದರೆಷ್ಟು? ಅದು ಮಾಡುವ ವಿನಾಶಕ್ಕೆ ನಾವೇ ಬಲಿಯಾಗಬೇಕು ಎಂಬ ವಿಷಯ ನನಗೀಗ ಮನದಟ್ಟಾಗಿದೆ. ಸಾಧ್ಯವಾದಷ್ಟು ಬೇಗ ನೀನು ಹೊಸ ಮನುಷ್ಯನಾಗಿ ಮರಳಿ ಬಾ. ನೀನು ಮರಳಿ ಬಂದಾಗ ನಮ್ಮ ಕೈಗಳಲ್ಲೂ ಶರಾಬಿನ ಲೋಟಗಳು ಇರುವುದಿಲ್ಲ ಎಂದು ಮಾತ್ರ ಹೇಳಬಲ್ಲೆ,” ಹೊಸ ಚೈತನ್ಯ ಅರಸಿಕೊಂಡು ಹೊರಟು ನಿಂತ ತಮ್ಮ ಮಗನನ್ನು ತಬ್ಬಿಕೊಳ್ಳುತ್ತ ದಿನೇಶ್‌ ಅಂಕಲ್ ಮತ್ತು ಸೀಮಾ ಆಂಟಿ ಇಬ್ಬರೂ ಕಣ್ಣೀರು ಸುರಿಸತೊಡಗಿದರು.

“ನಾವಿರಬೇಕಾದ್ರೆ, ನೀನು ಈ ಕಡೆಗೆ ಯೋಚನೆಯೇ ಮಾಡಬೇಡ ಸುಮಂತ್‌! ನಾವೆಲ್ಲ ಅಂಕಲ್ ಗೆ ಸಹಾಯ ಮಾಡಿ ನಿನ್ನ ಬಿಸ್‌ನೆಸ್‌ನ್ನು ಸರಿಯಾಗಿ ನೋಡಿಕೊಳ್ತೀವಿ. ನೀನು ನಿರುಮ್ಮಳನಾಗಿ ಹೋಗಿ, ಹೊಸ ಶಕ್ತಿಯೊಂದಿಗೆ ಮರಳಿ ಬಾ,” ಎಂದ ತನ್ನ ಸ್ನೇಹಿತರ ನಿರ್ಮಲ ಸಹಕಾರವನ್ನು ಕಂಡ ಸುಮಂತ್‌, ಬಹುದಿನಗಳ ನಂತರ ಮನಪೂರ್ವಕವಾಗಿ ನಸುನಕ್ಕ.

ಅಷ್ಟರಲ್ಲಿ ಟ್ಯಾಕ್ಸಿ ಡ್ರೈವರ್‌ ಜೋರಾಗಿ ಹಾರ್ನ್‌ ಬಾರಿಸಿದ. ಇಲ್ಲದಿದ್ದರೆ, ಇವರ ಹೃದಯಸ್ಪರ್ಶಿ ಬೀಳ್ಕೊಡುವ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಟಿಕೆಟ್‌ ಬುಕ್‌ ಮಾಡಿದ್ದ ಬಸ್‌ ಮಡಿಕೇರಿ ತಲುಪಿಬಿಡುತ್ತಿತ್ತೋ ಏನೋ ಗೊತ್ತಿಲ್ಲ? ಅವಸರವಸರವಾಗಿ ನಮ್ಮ ಲಗೇಜುಗಳನ್ನು ಟ್ಯಾಕ್ಸಿಯಲ್ಲಿ ಹಾಕಿದರು. ನಾವಿಬ್ಬರು ಟ್ಯಾಕ್ಸಿಯಲ್ಲಿ ಕುಳಿತ. ಎಲ್ಲರೂ ಕೈಬೀಸುತ್ತ, ಆರ್ದ್ರಗೊಂಡ ಮನಸ್ಸುಗಳಿಂದ ವಿದಾಯ ಹೇಳಿದರು. ಐದು ನಿಮಿಷಗಳ ಪ್ರಯಾಣದ ನಂತರ ಸುಮಂತ್‌, “ತನು, ಇನ್ನು ಮೇಲೆ ನಾನು ಯಾರ ಮನಸ್ಸನ್ನೂ ನೋಯಿಸುವುದಿಲ್ಲ. ನನ್ನ ಮೇಲೆ ಇಟ್ಟಿರುವ ಇವರೆಲ್ಲರ ನಂಬಿಕೆಯನ್ನು ಹುಸಿಯಾಗಲು ಬಿಡುವುದಿಲ್ಲ. ನನ್ನನ್ನು ನಾನು ಬದಲಾಯಿಸಿಕೊಂಡೇ ತೀರುತ್ತೇನೆ,” ಎಂದ ಅವನ ಗಂಟಲುಬ್ಬಿ ಬಂದಿತ್ತು.

“ವೆರಿ ಗುಡ್‌, ನಿನ್ನ ಈ ಸಂಕಲ್ಪವನ್ನು ಇನ್ನೂ ಬಲಪಡಿಸುವ ಒಂದು ಶಕ್ತಿ ನನ್ನ ಬಳಿ ಇದೆ. ತಗೋ ಇದನ್ನ…..,” ಎನ್ನುತ್ತಾ ಅವನಿಗೆ ಒಂದು ಗ್ರೀಟಿಂಗ್‌ ಕೊಟ್ಟೆ. ನಮ್ರತಾ ಮಧ್ಯಾಹ್ನವೇ ಅದನ್ನು ನನ್ನ ಕೈಗಿಟ್ಟು ಹೋಗಿದ್ದಳು.

“ಬೀಸುವ ಬಿರುಗಾಳಿಗೆ ಎದೆಯೊಡ್ಡಿ ಮುನ್ನುಗ್ಗುವ ಶಕ್ತಿ ನಿಮ್ಮದಾಗಲಿ, ಬದುಕು ಚೈತನ್ಯ ನಿಮಗೆ ಬೇಗ ಸಿಗಲಿ,” ಎಂದು ಹಾರೈಸುತ್ತೇನೆ. ಇತಿ ನಿಮ್ಮ ನಿರೀಕ್ಷೆಯಲ್ಲಿ  ನಮ್ರತಾ.” ಎಂದು ಬರೆದಿದ್ದ ಗ್ರೀಟಿಂಗ್‌ ಕಾರ್ಡ್‌ ನೋಡಿದ ತಕ್ಷಣ ಸುಮಂತ್‌ನ ಮುಖದಲ್ಲಿ ಉಲ್ಲಾಸದ ಬೆಳ್ಳಿರೇಖೆಗಳು ಮಿನುಗಿದವು.

ನಾನು ಸುಮಂತ್‌ನ ಕೈಯನ್ನು ಮೃದುವಾಗಿ ಅದುಮುತ್ತ, “ಜೀವನದ ಸಂಕಷ್ಟಗಳನ್ನು ಎದುರಿಸಲು ನಮಗೇ ಯಾವುದೇ ಅಮಲಿನ ಶಕ್ತಿ ಬೇಕಾಗಿಲ್ಲ ಸುಮಂತ್‌! ಕಾಯಕವೇ ಕೈಲಾಸ ಎಂದು ನಂಬಿ ಬದುಕಿದರೆ ಎಂತಹ ಅಸಾಧ್ಯ ಕೆಲಸವನ್ನೂ ಸಾಧಿಸಿಬಿಡಬಹುದು,” ಎಂದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ