ಸುರಿ ಮಳೆಯಲ್ಲಿ ನನ್ನಾಕೆಯ ಬೆಡಗು ಬಿನ್ನಾಣಗಳಿಗೆ ನಾನು ಕರಗಿಹೋದೆ. ಅವಳನ್ನು ಕರೆದುಕೊಂಡು ಮಾಳಿಗೆಯ ಮೇಲೆ ಹೋದೆ. ಆದರೆ ಅವಳ ಈ ಹಟಕ್ಕೆ ಇಂದಿನವರೆಗೆ ಬೆಲೆ ತೆರುತ್ತಲೇ ಇದ್ದೇನೆ, ಮುನಿಯಮ್ಮ ವಾಪಸ್‌ ಬರುವುದನ್ನೇ ಕಾಯುತ್ತಿದ್ದೇನೆ.

ಚಲನಚಿತ್ರಗಳಲ್ಲಿ ಸುರಿವ ಮಳೆಯಲ್ಲಿ ತೆಳುವಾದ ಬಟ್ಟೆಗಳಲ್ಲಿ ನೆನೆಯುತ್ತಾ, ವಯ್ಯಾರ ಮಾಡುತ್ತಾ ಹೀರೋನೊಂದಿಗೆ ಹಾಡುತ್ತಾ ಕುಣಿಯುವ ಹೀರೋಯಿನ್‌ಗಳನ್ನು ಕಂಡು ನನ್ನ ಹೆಂಡತಿ ವಿಚಲಿತಳಾಗುತ್ತಾಳೆ. ನನ್ನನ್ನೂ ವಿಚಲಿತಗೊಳ್ಳುವಂತೆ ಮಾಡುತ್ತಾಳೆ. ಹಾಗೆ ನೋಡಿದರೆ ನನ್ನ ಹೆಂಡತಿ ಬಹಳ ರಸಿಕಳು. ವಿಶೇಷವಾಗಿ ಹಸಿರು ವಾತಾವರಣ, ಮಳೆ ಸುರಿಯುತ್ತಿದ್ದರಂತೂ ಅವಳು ಇನ್ನಷ್ಟು ರೊಮ್ಯಾಂಟಿಕ್‌ ಆಗುತ್ತಾಳೆ.

ಒಮ್ಮೆ ಮಳೆಗಾಲದ ರಾತ್ರಿಯಲ್ಲಿ ನನ್ನ ಹೆಂಡತಿ ಚಡಪಡಿಸುತ್ತಾ ಎದ್ದಳು. ನನ್ನನ್ನು ಎಬ್ಬಿಸುತ್ತಾ, “ರೀ, ಈಗ ಹವಾಮಾನ ಸೊಗಸಾಗಿದೆ. ನಿಮ್ಮ ಮೇಲೆ ಪ್ರೀತಿ ಉಂಟಾಗಿದೆ,” ಎಂದಳು.

ನಾನು ನಿದ್ದೆಗಣ್ಣಿನಲ್ಲಿ ಹೇಳಿದೆ, “ಅದಕ್ಕೆ…..?”

“ಇಂಥ ವಾತಾವರಣದಲ್ಲಿ ಯಾರಾದರೂ ನಿದ್ದೆ ಮಾಡ್ತಾರಾ?” ನನ್ನಾಕೆ ಹೇಳಿದಳು.

“ನಾಳೆ ಆಪೀಸಿಗೆ ಹೋಗಬೇಕು. ಬಹಳ ಕೆಲಸ ಇದೆ.”

ಅವಳು ರೊಮ್ಯಾಂಟಿಕ್‌ ಮೂಡ್‌ನಲ್ಲಿ, “ಎಂದಾದರೂ ಒಮ್ಮೊಮ್ಮೆ ಪ್ರೀತಿಸೋದು ಕಲೀರಿ,” ಎಂದಳು.

ನಾನು ಬೇಸರದಿಂದ, “ಪ್ರೀತಿಯಿಂದ ಹೊಟ್ಟೆ ತುಂಬಲ್ಲ ಕಣೆ,” ಎಂದೆ.

ಅವಳು ವಯ್ಯಾರದಿಂದ, “ಕೆಲಸದ ಮಾತು ಬಿಡ್ರಿ, ಜೀವಮಾನವೆಲ್ಲ ಅದು ಇದ್ದೇ ಇರುತ್ತೆ. ಆದರೆ ಇಂಥ ಹವಾಮಾನ ನಮಗೆ ಮತ್ತೆ ಮತ್ತೆ ಸಿಗಲ್ಲ,” ಎಂದಳು.

ಈ ಬಾರಿ ನನ್ನಾಕೆಯ ರೊಮ್ಯಾಂಟಿಕ್‌ ಬೆಡಗು ಬಿನ್ನಾಣಗಳಿಗೆ ನಾನು ಕರಗಿಹೋದೆ. ಅವಳ ಕೈ ಹಿಡಿದು ರಾತ್ರಿ 1 ಗಂಟೆಗೆ ಸುರಿಯುವ ಮಳೆಯಲ್ಲಿ ಮಾಳಿಗೆಯ ಮೇಲೆ ಕರೆದುಕೊಂಡು ಬಂದೆ. ಸುತ್ತಲೂ ಗಾಢಾಂಧಕಾರವಿತ್ತು. ಇಡೀ ನಗರ ಮಳೆಯಲ್ಲಿ ತೋಯುತ್ತಿತ್ತು.

ನನ್ನಾಕೆ ಮೆಲ್ಲಗೆ ಹಾಡು ಗುನುಗುಟ್ಟುತ್ತಿದ್ದಳು. ನನಗೂ ಅದಕ್ಕೆ ಆ್ಯಕ್ಟ್ ಮಾಡಲು ಹೇಳಿದಳು. ಅವಳ ಹಾಡು ಹೀಗಿತ್ತು :

ಸ್ವಾತಿ ಮುತ್ತಿನ ಮಳೆ ಹನಿಯೇ, ಮೆಲ್ಲ ಮೆಲ್ಲನೆ ಧರೆಗಿಳಿಯೇ ನನ್ನಾ ರಾಜನ ಪ್ರೀತಿಯ……ಹಾಡುತ್ತಾ ಹಾಡುತ್ತಾ ಅವಳ ಧ್ವನಿ ತಾರಕಕ್ಕೇರುತ್ತಿತ್ತು. ಅವಳು ನಿಶ್ಚಿಂತೆಯಿಂದ ಹಾಡಿಗೆ ಅಭಿನಯಿಸುತ್ತಲೂ ಇದ್ದಳು.

ಒಂದೇ ಹಾಡಿಗೆ ಮುಗಿಯಿತು ಅಂದುಕೊಂಡ್ರಾ? ಮತ್ತೆ ಶುರುವಾಯಿತು ನೋಡಿ : ಪಟಪಟ ಮಳೆ ಹನಿ…. ಬಾನಿಂದ ಜಾರುತಿದೆ… ನಾವಿಬ್ಬರೂ ಛಾವಣಿಯ ಮೇಲೆ ಹಾಡಿ ಕುಣಿಯುತ್ತಿದ್ದಾಗ ಬೀಟ್‌ ಪೊಲೀಸನೊಬ್ಬ ನಮ್ಮ ರಸ್ತೆಗೆ ಬಂದ. ಛಾವಣಿಯ ಮೇಲೆ ಯಾರೋ ಕಳ್ಳರು ಹತ್ತಿರಬೇಕು ಎಂದು ಅವನಿಗೆ ಅನ್ನಿಸಿತು. ಅವನು ಛಾವಣಿಯ ಮೇಲೆ ಟಾರ್ಚ್‌ ಬೆಳಕನ್ನು ಬಿಡುತ್ತಾ ಜೋರಾಗಿ ಸೀಟಿ ಊದಿದ. ಏನಾದರೂ ಎಡವಟ್ಟು ಆಗಬಾರದೆಂದು ನಾನು ಅವಳಿಗೆ ಕೆಳಗೆ ಹೋಗುವಂತೆ ಹೇಳಿದೆ. ಆದರೆ ಅವಳು ಹೊರಡಲು ತಯಾರಾಗಲಿಲ್ಲ. ಆಗ ನಾನು ಸುರಿ ಮಳೆಯಲ್ಲೇ ಅವಳನ್ನು ಕೆಳಗೆ ಕೂಡಿಸಿದೆ. ಸ್ವಲ್ಪ ಹೊತ್ತಿನ ಬಳಿಕ ಪೊಲೀಸ್‌ ಹೊರಟುಹೋದ.

ಈಗ ಮಳೆ ಇನ್ನೂ ಜೋರಾಯಿತು. ನನ್ನಾಕೆ ಕುಳಿತುಕೊಂಡೇ ನನ್ನ ಎದೆಯ ಮೇಲೆ ತನ್ನ ತಲೆಯಿಟ್ಟು ಹೇಳಿದಳು, “ಇಂದು ಸಮಯ ಇಲ್ಲೇ ನಿಂತುಹೋಗಲಿ. ಮಳೆ ಸುರಿಯುತ್ತಲೇ ಇರಲಿ, ನಾವಿಬ್ಬರೂ ಹೀಗೇ ಮಳೆಯಲ್ಲಿ ನೆನೆಯುತ್ತಿರೋಣ,” ನಂತರ ಜೋರಾಗಿ ನಗತೊಡಗಿದಳು.

ಆಗಲೇ ಪಕ್ಕದ ಮನೆಯ ಲೈಟ್‌ ಆನ್‌ ಆಯಿತು, “ರೀ ಯಾರ್ರೀ ಅದು. ಏನು ಮಾಡೋದಿದ್ರೂ ಸದ್ದಾಗದಂತೆ ಮಾಡಿ. ಇದು ಮರ್ಯಾದಸ್ತರು ಇರೋ ಜಾಗ,” ಎಂದು ಮನೆಯಾತ ಕಿರುಚಿದ. ನನಗೆ ಮತ್ತೆ ಭಯವಾಯಿತು. ರಾತ್ರಿಯ ಮಂದಬೆಳಕಿನಲ್ಲಿ, ತೆಳುವಾದ ಬಟ್ಟೆಗಳಲ್ಲಿ ನೆಂದಿದ್ದ ನನ್ನಾಕೆ ಯಾವುದೇ ಹೀರೋಯಿನ್‌ಗೂ ಕಡಿಮೆ ಇರಲಿಲ್ಲ. ನಾನು ಅವಳನ್ನು ಇಷ್ಟು ಸುಂದರವಾಗಿ ಹಿಂದೆಂದೂ ನೋಡಿರಲಿಲ್ಲ.

ಆಗಲೇ ಒಂದು ಬೆಕ್ಕು ಎಲ್ಲಿಂದಲೋ ಬಂದು ಛಾವಣಿಯ ಮೇಲೆ ಎಗರಿತು. ನನ್ನಾಕೆ ಭಯದಿಂದ ನನ್ನನ್ನು ಹಿಡಿದುಕೊಳ್ಳಲು ಓಡಿಬಂದಾಗ ಅವಳ ಕಾಲು ಉಳುಕಿತು. ಅವಳು ನೋವಿನಿಂದ ಕಿರುಚಿದಳು. ಇದರೊಂದಿಗೆ ಅವಳಿಗೆ 2-3 ಸೀನುಗಳು ಬಂದವು.

ಈಗ ಅವಳಿಗೆ ನಡೆಯಲೂ ಆಗುತ್ತಿರಲಿಲ್ಲ. ಹೀಗಾಗಿ ರೊಮ್ಯಾನ್ಸ್ ಹಾಳಾಗಿಹೋಗಿತ್ತು. ನನ್ನ ಕೈ ಹಿಡಿದುಕೊಂಡು ನಿಧಾನವಾಗಿ ಕೆಳಗಿಳಿ ಎಂದು ಅವಳಿಗೆ ಹೇಳಿದೆ.

“ಅಲ್ರೀ, ಸ್ವಲ್ಪ ತೊಂದರೆ ಬಂದರೂ ದೂರ ಓಡ್ತೀರಿ. ಇನ್ನು ಇಡೀ ಜೀವನ ಹೇಗೆ ನಿಭಾಯಿಸ್ತೀರಿ? ನನ್ನನ್ನು ಎತ್ತಿಕೊಂಡು ಕೆಳಗೆ ಹೋಗೋಕೆ ಆಗಲ್ವಾ?”

ರೊಮ್ಯಾಂಟಿಕ್‌ ಮೂಡ್‌ ಹಾಳು ಮಾಡಬಾರದು ಎಂದು ನನಗೆ ಅನ್ನಿಸಿತು. ಅವಳನ್ನು ಎತ್ತಿಕೊಂಡು ಕೆಳಗೆ ಬಂದೆ. ಅಷ್ಟರಲ್ಲಿ ಅವಳಿಗೆ 4-5 ಸೀನುಗಳು ಬಂದವು.

ನನ್ನಾಕೆ ಫಿಲ್ಮೀ ಸ್ಟೈಲ್‌ನಲ್ಲಿ, “ಸ್ವಲ್ಪ ಸ್ಟವ್ ಅಂಟಿಸಿ ಕಾಫಿ ಮಾಡ್ರಿ,” ಎಂದಳು.

ಇನ್ನೇನು ಮಾಡೋದು? ನಾನು ಸ್ಟವ್ ಅಂಟಿಸಿ ಕಾಫಿ ಮಾಡಿ ಅವಳಿಗೆ ಕೊಟ್ಟು ನಾನೂ ಕುಡಿದೆ. ಅಷ್ಟರಲ್ಲಿ ಅವಳ ಕಾಲು ಪೂರಿಯಂತೆ ಉಬ್ಬಿತ್ತು. ಜ್ವರ ಬಂದಿತ್ತು.

ಬೆಳಗ್ಗೆ ಡಾಕ್ಟರ್‌ ಬಳಿ ತೋರಿಸಿದಾಗ ನ್ಯೂಮೋನಿಯಾ ಬಂದಿದೆ, ಟ್ರೀಟ್‌ಮೆಂಟ್‌ ಕೊಡಬೇಕು ಎಂದರು. ನಾನು ಆಫೀಸಿಗೆ ರಜೆ ಹಾಕಬೇಕಾಯಿತು.

ಆಗಲೇ ಕೆಲಸದ ಮುನಿಯಮ್ಮ ಬಂದು ಹೇಳಿದಳು, “ನಿನ್ನೆ ರಾತ್ರಿ ನಿಮ್ಮ ಮಾಳಿಗೆ ಮೇಲೆ ಇಬ್ಬರು ಕಳ್ಳರು ಬಂದಿದ್ರು. ಬೀಟ್ ಪೊಲೀಸ್‌ ಕೂಡ ನೋಡಿದ. ನಾನು ಟಾರ್ಚ್‌ ಹಿಡಿದು ಪಕ್ಕದ ಮನೆಯ ಮಾಳಿಗೆ ಮೇಲೆ ಬಂದೆ.”

ನನ್ನಾಕೆ, “ಆಮೇಲೆ ಏನಾಯ್ತು? ಕಳ್ಳರು ಸಿಕ್ಕಿಬಿದ್ರಾ?” ಎಂದು ಕೇಳಿದಳು.

ಮುನಿಯಮ್ಮ ನಾಚುತ್ತಾ, “ಅಲ್ಲಿ ಬಂದು ನೋಡಿದ್ರೆ ನೀವು ಮತ್ತೆ ಸಾಹೇಬರು ಹಾಡಿ ಕುಣೀತಿದ್ರಿ. ನಾನು ವಾಪಸ್ ಹೊರಟುಹೋದೆ,” ಎಂದಳು.

“ಆದರೆ ಏನಾಯ್ತೂಂತ ನಮಗೆ ಗೊತ್ತಾಗಲೇ ಇಲ್ಲ,” ನಾನು ಹೇಳಿದೆ.

ಅದಕ್ಕೆ ಮುನಿಯಮ್ಮ ವೈಯಾರದಿಂದ, “ಸಾಹೇಬ್ರೇ, ಗೊತ್ತಾಗ್ಲೇ ಇಲ್ಲ ಅಂತೀರಿ. ಅಮ್ಮಾವರ ಕಾಲು ಉಳುಕಿದ್ದು, ಶೀತ ಜ್ವರ ಬಂದಿದ್ದು ಡಾಕ್ಟರ್‌ ಹತ್ತಿರ ಹೋಗಿದ್ದು ಇದೆಲ್ಲಾ ಸುಳ್ಳಾ? ನೀವು ಅಮ್ಮಾವರೂ ಇಬ್ಬರೂ ಮಾಳಿಗೆ ಮೇಲೆ ಸಿನಿಮಾದಲ್ಲಿ ತೋರಿಸೋ ಹಾಗೆ ಮಾಡ್ತಿದ್ದು ನೋಡಿ ನಮ್ಮ ಏರಿಯಾದ 8-10 ಜನ ದೊಣ್ಣೆ ಹಿಡ್ಕೊಂಡು ನಿಂತಿದ್ರು. ನಾನು ಅವರಿಗೆ ಎಲ್ಲಾ ವಿವರಿಸಿ ವಾಪಸ್‌ ಕಳಿಸಿದೆ,” ಎಂದಳು.

ನಾನು ನನ್ನಾಕೆಗೆ ನೀರು ತರಲು ಅಡುಗೆಮನೆಗೆ ಹೋದಾಗ ನನ್ನ ಹಿಂದೆಯೇ ಬಂದ ಮುನಿಯಮ್ಮ, “ನಿಜ ಹೇಳಿ ಸಾಹೇಬ್ರೇ, ರಾತ್ರಿ ಮಳೇಲಿ ನೆಂದಿದ್ದು ಹೇಗಿತ್ತು? ನಮ್ಮ ಗುಡಿಸಲುಗಳಲ್ಲಿ ಮಾಳಿಗೇನೇ ಇರಲ್ಲ. ಗುಡಿಸಿಲಿನಿಂದ ಆಚೆ ಬಂದರೆ ಬೀದಿ ನಾಯಿಗಳ ಕಾಟ,” ಎಂದಳು.

ನಾನು ಏನಾದರೂ ಹೇಳುವ ಮೊದಲೇ ನನ್ನಾಕೆ ಕುಂಟುತ್ತಾ ಬಂದು, “ನಿನಗೆ ಮಾಡೋಕೆ ಕೆಲಸ ಇಲ್ವಾ? ಪತ್ತೇದಾರಿ ಮಾಡ್ತಿದ್ದೀಯಾ?” ಎಂದಳು.

ಮುನಿಯಮ್ಮನಿಗೆ ಕೋಪ ಬಂತು, “ಅಮ್ಮಾವ್ರೆ, ಮಾಡೋದು ಕಳ್ಳರ ಕೆಲಸ, ನನಗೇ ರೋಫ್‌ ಹಾಕ್ತಿದ್ದೀರ. ನಾನೇ ನಿಮ್ಮನ್ನು ಕಾಪಾಡಿದ್ದು. ಇಲ್ಲದಿದ್ರೆ ಇಷ್ಟು ಹೊತ್ತಿಗೆ ಪೊಲೀಸ್‌ ಸ್ಟೇಷನ್‌ನಲ್ಲಿ ಇರ್ತಿದ್ರಿ. ನಿಮ್ಮ ರೋಫ್‌ ಎಲ್ಲಾ ಬೇರೆಯವರ ಮೇಲೆ ತೋರಿಸಿ. ನಾನು ನಿಮ್ಮ ಮನೇಲಿ ಇನ್ನು ಮುಂದೆ ಕೆಲಸ ಮಾಡಲ್ಲ,” ಎಂದಳು.

“ಬೇಡ ಹೋಗು. ಈಗ ನಿನ್ನ ಅಗತ್ಯ ಇಲ್ಲ. ಹೇಗೂ ಯಜಮಾನರು ರಜದಲ್ಲಿದ್ದಾರೆ. ಅವರೇ ಎಲ್ಲ ಕೆಲಸ ಮಾಡ್ತಾರೆ. ಒಂದು ತಿಂಗಳಲ್ಲಿ ನಿನ್ನ ಕೋಪ ಇಳಿದಿದ್ರೆ ಆಗ ಕೆಲಸಕ್ಕೆ ಬಾ,” ಎಂದು ನನ್ನಾಕೆ ಹೇಳಿದಳು.

`ಹ್ಞೂಂ, ಮುನಿಯಮ್ಮನ ಕೆಲಸ ನನಗೇ ಬಿತ್ತು,’ ಎಂದು ನಾನು ಯೋಚಿಸುತ್ತಿದ್ದೆ. ಈಗ ನನ್ನಾಕೆಯ ಸೇವೆ ಮಾಡುವುದರ ಜೊತೆ ಜೊತೆಯಲ್ಲಿ ಮನೆ ಕೆಲಸ ಮಾಡಬೇಕು. ನನಗೆ ಗಾಬರಿಯಿಂದ ಜ್ವರ ಬಂತು.

ಮುನಿಯಮ್ಮ ಕೋಪದಿಂದ ಕಣ್ಣು ತಿರುಗಿಸುತ್ತಾ ಆಚೆ ಹೋದಳು. ನನ್ನಾಕೆ ಮಾತ್ರ ಮಳೆಗಾಲದ ಆನಂದ ಅನುಭವಿಸುತ್ತಾ ಮಂಚದ ಮೇಲೆಯೇ ಹಾಡತೊಡಗಿದಳು  ಮಳೆ ಬಂತು ಮಳೆ……, ಪಟಪಟ ಮಳೆ ಹನಿ….ಬಾನಿಂದ ಜಾರುತಿದೆ…..  ನಾನು ಅವಳ ಸೇವೆ ಮತ್ತು ಮನೆಗೆಲಸ ಮಾಡುತ್ತಾ ಮಳೆಯ ಆನಂದ ಅನುಭವಿಸುತ್ತಿದ್ದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ