ನನ್ನ ಕಥೆ ಕೇಳಿ ಪಾಠ ಕಲಿಯಿರಿ ಅಥವಾ ಕಲಿಯದಿರಿ ಅದು ನಿಮ್ಮಿಚ್ಛೆ. ಆದರೆ ನಾನಂತೂ ದಂತ ಚಿಕಿತ್ಸಕರನ್ನು ನೋಡಿದ ಕೂಡಲೇ ನನ್ನ ನಿಯಂತ್ರಣ ಕಳೆದುಕೊಳ್ತೀನಿ.

ಈ ಕಥೆ ಪೌರಾಣಿಕ ಕಾಲದ ಯಾವುದೋ ದಂತಕಥೆಯಲ್ಲ. ಆದರೆ ಇದು ನನ್ನ ದವಡೆಯ ಒಂದು ಹಲ್ಲಿನ ಅಲೌಕಿಕ ಕಥೆ. ಹಲ್ಲಿನಲ್ಲಿ ನೀರು ಒಸರಿ ಇದು ಆರಂಭವಾಯಿತು. ಈ ಕಥೆಯಲ್ಲಿನ ಡಾಕ್ಟರ್‌ರ ಅದ್ಭುತ ಸಹಾಯವನ್ನು ಮರೆಯಲಾಗುವುದಿಲ್ಲ. ನಾನು ಡೆಂಟಿಸ್ಟ್ ಬಳಿ ಹೋಗಿ ಹಲ್ಲಿನಲ್ಲಿ ಒಂದು ರೀತಿ ಬಿಸಿ, ಥಂಡಿ ಆಗುತ್ತದೆಂದು ಹೇಳಿದಾಗ ಅವರಿಗೆ ಖುಶಿಯಾಯಿತು. ಅವರು ತಮ್ಮ ಯಂತ್ರದಿಂದ ನೀರೆರಚಿ ಹಲ್ಲನ್ನು ಪರೀಕ್ಷಿಸಿ ಕೇಳಿದರು, “ಇಲ್ಲಿ ತಣ್ಣಗಾಗುತ್ತಾ?”

ನಾನು `ಹೌದು’ ಎಂದಾಗ ಅವರು ಏನೋ ಯೋಚಿಸುವ ಮುದ್ರೆಯಲ್ಲಿ ನಿಂತುಕೊಂಡರು.

“ಡಾಕ್ಟ್ರೇ ನನ್ನ ಹಲ್ಲು…..” ನನ್ನ ಮಾತು ಕೇಳಿ ಅವರ ಯೋಚನೆಗೆ ಭಂಗ ಬಂತು.

ಅವರು ಹೇಳಿದರು, “ನೋಡಿ, ಇದರಲ್ಲಿ ಸಣ್ಣ ರಂಧ್ರ ಕೊರೆಯಬೇಕು. ಆಮೇಲೆ ಹಲ್ಲಿನ ಬುಡದಲ್ಲಿ `ಪಸ್‌’ ಇದೆಯೇ ಎಂದು ನೋಡಬೇಕು.”

ನನಗೆ ಗಾಬರಿಯಾಗಿ ಹೇಳಿದೆ, “ಅದು ಹೇಗಾಗುತ್ತೆ ಸರ್‌, ಪಸ್‌ ಎಲ್ಲಿಂದ ಬರುತ್ತೆ?”

ಡಾಕ್ಟರ್‌ ಬುದ್ಧಿವಂತರು. ಅವರು ಹೇಳಿದರು, “ಅದನ್ನು ನೋಡೋದು ನಮ್ಮ ಕೆಲಸ.”

ನಂತರ ಅವರು ನನ್ನ ಬಾಯಲ್ಲಿ ಒಂದು ಮೆಶಿನ್‌ ಫಿಟ್‌ ಮಾಡಿ ರಂಧ್ರ ಕೊರೆಯಲು ಶುರು ಮಾಡಿದರು. ಸ್ವಲ್ಪ ಹೊತ್ತು ಮೆಶಿನ್ ಚಲಾಯಿಸಿದ ನಂತರ ಡಾಕ್ಟರ್‌,“ಈಗ ಉಗೀರಿ. ನೋಡೋಣ ಏನು ಬರುತ್ತೇಂತ,” ಎಂದರು.

ನಾನು ಉಗಿದಾಗ ರಕ್ತ ಬಂತು. ನನ್ನ ಹಲ್ಲಿನ ಜೊತೆಗೆ ಡಾಕ್ಟರ್‌ ರಕ್ತವನ್ನೂ ಸುರಿಸಲಿದ್ದಾರೆ ಅನ್ನಿಸಿತು.

ಆಗ ಡಾಕ್ಟರ್‌ ಹೇಳಿದರು, “ನಿಮ್ಮ ಹಲ್ಲಿನ 2 ಎಕ್ಸ್-ರೇ ತೆಗಲೇಬೇಕು.”

“ಆಯ್ತು. ಅದನ್ನೂ ತೆಗೆದ್ಬಿಡಿ.”

ಅವರು ಎಕ್ಸ್-ರೇ ತೆಗೆದು ಬಹಳ ದೀರ್ಘವಾಗಿ ಅದನ್ನೇ ಗಮನಿಸುತ್ತಾ ಹೇಳಿದರು, “ತುಂಬಾ ಪಸ್‌ ಇದೆ. ನಿಮಗೆ ಔಷಧಿ ಬರೆದು ಕೊಡ್ತೀನಿ. ನೋವು ಹೆಚ್ಚಾದರೆ ನಾಳೆ ಬನ್ನಿ.”

“ಮೊದಲು ಬರೀ ಬಿಸಿ, ಥಂಡಿ ಆಗುತ್ತಿತ್ತು. ಈಗ ನೋವು ಶುರು ಆಗಿದೆ,” ನಾನು ಹೇಳಿದೆ.

“ಔಷಧಿ ತಗೊಳ್ಳಿ. ಎಲ್ಲ ಸರಿಹೋಗುತ್ತೆ. ಒಳಗೆ ತುಂಬಾ ಕೀವು ತುಂಬಿಕೊಂಡಿದೆ. ಹಲ್ಲನ್ನು ಸರಿಪಡಿಸೋಕೆ ಎರಡೂವರೆ ಸಾವಿರ ರೂ. ಪ್ಯಾಕೇಜ್‌ ಇದೆ,” ಡಾಕ್ಟರ್‌ ಹೇಳಿದರು.

ನನಗೆ ಭಯವಾಯಿತು. ನಾನು ಹೇಳಿದೆ, “ಡಾಕ್ಟ್ರೇ, ದುಡ್ಡು ಎಷ್ಟಾದ್ರೂ ತಗೊಳ್ಳಿ. ಹಲ್ಲು ಸರಿಪಡಿಸಿ.”

“ಏನೂ ಭಯ ಪಡಬೇಕಿಲ್ಲ. ಪಾನ್‌ ತಿನ್ನುವುದರಿಂದ ನಿಮ್ಮ ಹಲ್ಲು, ದವಡೆಗಳು ಸವೆದು ಹೋಗಿವೆ. ಎಲ್ಲಾ ಹಲ್ಲುಗಳಲ್ಲೂ ಸಮಸ್ಯೆ ಇದೆ. ಆದರೆ ಮೊದಲು ಈ ಹಲ್ಲನ್ನು ಸರಿಪಡಿಸೋಣ. ಇಲ್ಲದಿದ್ದರೆ  ಎಲ್ಲಾ ವಸಡುಗಳಿಗೂ ಚಿಕಿತ್ಸೆ ಮಾಡಬೇಕಾಗುತ್ತದೆ,” ಎಂದು ಡಾಕ್ಟರ್‌ ಹೇಳಿದರು.

ನಾನು ಹೊರಡತೊಡಗಿದಾಗ ಡಾಕ್ಟರ್‌ ಹೇಳಿದರು, “1500 ರೂ. ಕಟ್ಟಿ ಹೋಗಿ.”

ನಾನು ಗೊಣಗುತ್ತಾ 1500 ರೂ. ಕೊಟ್ಟೆ.

ಅವರು ದುಡ್ಡು ಪಡೆದು, “ಊಟ, ತಿಂಡಿ ಇನ್ನೊಂದು ಸೈಡ್‌ನಿಂದ ತಿನ್ನಿ. ನಾನು ಈಗ ತಾನೇ ರಫ್‌ ಫಿಲ್ಲಿಂಗ್‌ ಮಾಡಿದ್ದೀನಿ. ನೋವಿದ್ದರೆ ನಾಳೆ ಬನ್ನಿ,” ಎಂದರು.

ಸಂಜೆ ನೋವು ಶುರುವಾಯಿತು. ಮಾತ್ರೆ ನುಂಗಿದ ನಂತರ ನೋವು ಕಡಿಮೆಯಾಗಲಿಲ್ಲ. ಸಿವಿಯರ್‌ ಪೆಯ್ನ್ ಗಾಗಿ ಅವರು ಬೇರೊಂದು ಔಷಧಿ ಬರೆದುಕೊಟ್ಟಿದ್ದರು. ನಾನು ಮಗನನ್ನು ಕಳುಹಿಸಿ ಆ ಮಾತ್ರೆ ತರಿಸಿಕೊಂಡೆ. ಅದನ್ನು ತೆಗೆದುಕೊಂಡು ಹೇಗೋ ಒಂದು ರಾತ್ರಿಯನ್ನು ಕಳೆದೆ. ಬೆಳಗಾಗುವಷ್ಟರಲ್ಲಿ ಒಂದು ಕೆನ್ನೆ ಊದಿತ್ತು. ಇದಕ್ಕಿಂತ ಮೊದಲೇ ನಾನು ತುಂಬಾ ಚೆನ್ನಾಗಿದ್ದೆ ಅನ್ನಿಸಿತು.

ನಾನು ಮರುದಿನ ಆಫೀಸಿಗೆ ರಜೆ ಹಾಕಿ ಸೀದಾ ಡೆಂಟಿಸ್ಟ್ ಬಳಿ ಹೋದೆ. ಅವರು ನಗುತ್ತಾ, “ಬನ್ನಿ, ಬನ್ನಿ,” ಎಂದರು.

ಅವರು ಹಳೆಯ ಫಿಲ್ಲಿಂಗ್‌ ತೆಗೆದು ಕೊಂಚ ಔಷಧಿ ಹಾಕಿ ಹೊಸದಾಗಿ ಫಿಲ್ಲಿಂಗ್‌ ಮಾಡಿ ಹೇಳಿದರು, “3 ದಿನ ಬಿಟ್ಟು ಬನ್ನಿ.”

ಈ ರೀತಿಯ 3 ದಿನ ಬಿಟ್ಟು ಹೋಗುವ ಕಾರ್ಯಕ್ರಮ 4 ಬಾರಿ ಆದರೂ ನೋವಿನಿಂದ ಬಿಡುಗಡೆ ಸಿಗಲಿಲ್ಲ. ಅಷ್ಟರಲ್ಲಿ ಡಾಕ್ಟರ್ ಉಳಿದ ಸಾವಿರ ರೂ.ಗಳನ್ನೂ ವಸೂಲಿ ಮಾಡಿದರು.

5ನೇ ಬಾರಿ ಹೋದಾಗ ಎಲ್ಲ ಪರೀಕ್ಷಿಸಿ ಅವರು ಹೇಳಿದರು, “ಇತರ ಹಲ್ಲುಗಳ ಸುರಕ್ಷತೆಗಾಗಿ ನೀವು ಈ ಹಲ್ಲನ್ನು ತೆಗೆಸ್ಬೇಕು. ಇಲ್ಲದಿದ್ದರೆ ಬೇರೆ ಹಲ್ಲುಗಳಲ್ಲಿ ಸೋಂಕು ಹರಡುತ್ತೆ.”

ನಾನು `ಆಯ್ತು’ ಎಂದ ಕೂಡಲೇ ಅವರು ಅನಸ್ತೀಶಿಯಾ ಇಂಜೆಕ್ಷನ್‌ ಕೊಟ್ಟು ಅಲ್ಲಾಡದ ಹಲ್ಲನ್ನು ಕೀಳುವ ಪ್ರಕ್ರಿಯೆ ಆರಂಭಿಸಿದರು. ಹಾಗೆ ಮಾಡುವಾಗ ಹಲ್ಲು ಅರ್ಧಕ್ಕೇ ಮುರಿದುಹೋಯಿತು.

ಡಾಕ್ಟರ್‌ ಸಹಜವಾಗಿ ಹೇಳಿದರು, “ಛೇ, ಹಲ್ಲು ಮುರಿದೋಯ್ತು. ಈಗ ಆಪರೇಷನ್‌ ಮಾಡಿ ಉಳಿದದ್ದು ತೆಗೀಬೇಕು,” ನಾನು ಅವರನ್ನು ದುರುಗುಟ್ಟಿ ನೋಡಿದಾಗ ಅವರು, “ಗಾಬರಿ ಪಡಬೇಕಾಗಿಲ್ಲ. ಆಪರೇಷನ್‌ ಫೀಸ್‌ 1500 ರೂ. ಕಟ್ಟಿಬಿಡಿ. ರಕ್ತ ನಿಲ್ತಿಲ್ಲ. ಆಪರೇಷನ್‌ ಈಗ್ಲೇ ಮಾಡ್ಬೇಕು,” ಎಂದರು.

ನಾನು ಹೆದರಿ 1500 ರೂ. ಕಟ್ಟಿದೆ. ಆಗ ಆಪರೇಷನ್‌ ಪ್ರಕ್ರಿಯೆ ಆರಂಭವಾಯಿತು. ಅವರು ದವಡೆಯ ಬಳಿ ಕತ್ತರಿಸಿ ಉಳಿದಿದ್ದ ಹಲ್ಲನ್ನು ತೆಗೆದು 2 ಹೊಲಿಗೆ ಹಾಕಿ ಹತ್ತಿಯಿಂದ ಹಲ್ಲಿದ್ದ ಹಳ್ಳವನ್ನು ತುಂಬಿದರು.

ಹೀಗೆ ನಾನು 4 ಸಾವಿರ ರೂ. ಖರ್ಚು ಮಾಡಿಯೂ ನನ್ನ ಹಲ್ಲನ್ನು ಉಳಿಸಿಕೊಳ್ಳಲಾಗಲಿಲ್ಲ. ಜೊತೆಗೆ ನೋವು ಬೇರೆ. ಆಪರೇಷನ್ ಆಗಿ 15 ದಿನಗಳ ನಂತರ ನೋವಿನಿಂದ ಬಿಡುಗಡೆ ಸಿಕ್ಕಿತು. ನಾನು ಉಳಿದಿದ್ದ ಹಲ್ಲುಗಳಿಂದ ಊಟ ಮಾಡತೊಡಗಿದೆ. ನಂತರ ಏನೇ ಆಗಲಿ, ಇನ್ನೆಂದೂ ಡೆಂಟಿಸ್ಟರ ಬಳಿ ಹೋಗಬಾರದೆಂದು ನಿರ್ಧರಿಸಿದೆ. ನನ್ನ ಈ ಚಿಕ್ಕದಾದ ದಂತಕಥೆಯಿಂದ ನೀವು ಕೊಂಚ ಪಾಠ ಕಲಿತಿರೋ ಸರಿ, ಇಲ್ಲದಿದ್ದರೆ ನೀವು ಸಹ ನನ್ನಂತೆ 2 ತಿಂಗಳವರೆಗೆ ಡೆಂಟಲ್ ಕ್ಲಿನಿಕ್‌ಗೆ ಭೇಟಿ ನೀಡುತ್ತಿರಬೇಕಾಗುತ್ತದೆ, ಎಚ್ಚರ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ