ನನ್ನ ಮದುವೆಯಾಗಿ ಇಂದಿಗೆ 10 ವರ್ಷಗಳು ತುಂಬಿದವು. ಆದರೂ ನನ್ನ ಗಂಡ ಆರಂಭದಲ್ಲಿ ದಿನ ಹಾಗೂ ಈಗ ತಿಂಗಳಲ್ಲಿ 15 ದಿನ, ಮನೇಲಿ ಕೂತು ಏನೇ ಕೆಲಸ ಮಾಡ್ತೀಯಾ ಅಂತ ಕೇಳ್ತಿರ್ತಾರೆ.
ಅವರು ಹಾಗೆ ಕೇಳಿದಾಗೆಲ್ಲಾ ನನ್ನ ಎದೆಯಲ್ಲಿ ಗರಗಸ ಆಡಿಸಿದಂತಾಗುತ್ತಿತ್ತು. ಒಂದು ವೇಳೆ ನನ್ನ ಕೆಲಸದ ಮೌಲ್ಯಮಾಪನ ಮಾಡಿದರೆ ತಿಂಗಳಿಗೆ 15-18 ಸಾವಿರ ರೂ. ಸಂಬಳದಷ್ಟು ಕೆಲಸ ಮಾಡುತ್ತೇನೆ. ಅದರ ಮೇಲೆ ಗಂಡನ ವ್ಯಂಗ್ಯದ ಬಾಣಗಳನ್ನು ಕೇಳಿ ಮನಸ್ಸು ನೋಯುತ್ತದೆ. ಆದರೂ ಭಾರತೀಯ ಮಹಿಳೆಯಾಗಿದ್ದರಿಂದ ಹೇಗೋ ಸಹಿಸಿಕೊಂಡು ಇದ್ದುಬಿಡುತ್ತೇನೆ.
ಬೆಳಗ್ಗೆ ಬೇಗ ಏಳುತ್ತೇನೆ. ಒಬ್ಬೊಬ್ಬರು ಒಂದೊಂದು ಬಗೆಯ ತಿಂಡಿಗಳನ್ನು ಇಷ್ಟಪಡುತ್ತಾರೆ. ಅವರೆಲ್ಲರ ಇಚ್ಛೆಗಳನ್ನು ಪೂರೈಸುವಷ್ಟರಲ್ಲಿ 9 ಗಂಟೆಯಾಗುತ್ತದೆ. ಮಕ್ಕಳಿಗೆ ಸ್ನಾನ ಮಾಡಿಸಿ, ಡ್ರೆಸ್ ಮಾಡಿ, ತಿಂಡಿ ತಿನ್ನಿಸಿ ಸ್ಕೂಲ್ ವ್ಯಾನ್‌ನಲ್ಲಿ ಬಿಟ್ಟುಬರ್ತೀನಿ. ನಂತರ ಗಂಡನಿಗೆ ತಿಂಡಿ, ಆಫೀಸಿಗೆ ಊಟದ ಕ್ಯಾರಿಯರ್ ಕೊಡಬೇಕು. ಗಂಡ ಆಫೀಸಿಗೆ ಹೋದ ನಂತರ ಮನೆಯ ಕಸ ಗುಡಿಸಿ ಒರೆಸುತ್ತೇನೆ. ಪಾತ್ರೆ ತೊಳೆದು ಬಟ್ಟೆ ಒಗೆಯುತ್ತೇನೆ. ಅತ್ತೆ ಮಾವನಿಗೆ ಆಗಾಗ್ಗೆ ಕಾಫಿ ಮಾಡಿಕೊಡುತ್ತೇನೆ. ಆಮೇಲೆ ಅತ್ತೆಯ ಮಂಡಿಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುತ್ತೇನೆ. ಸಂಜೆ ಮಕ್ಕಳು ಶಾಲೆಯಿಂದ ಬಂದ ಮೇಲೆ ಹಾಲು, ತಿಂಡಿ ಕೊಡುತ್ತೇನೆ. ಪಾಠ ಓದಿಸುತ್ತೇನೆ. ನಂತರ ರಾತ್ರಿ ಊಟ ಮಾಡಿಸಿ, ಇವರಿಗೆ ಊಟ ಬಡಿಸಿ ಹಾಸಿಗೆಯ ಮೇಲೆ ಗಂಡನ ಮರ್ಜಿಗೆ ಅನುಸಾರವಾಗಿ ನನ್ನನ್ನು ಒಪ್ಪಿಸಿಕೊಳ್ಳುತ್ತೇನೆ. ಇಷ್ಟಾದರೂ ಗಂಡ ಟೀಕೆ ಮಾಡ್ತಿರ್ತಾರೆ.
ಒಂದು ದಿನ ಅವರನ್ನು, “ನೀವು ಆಫೀಸಿನಲ್ಲಿ ಕೆಲಸ ಮಾಡಿದ ಮೇಲೆ ಬೇರೇನು ಮಾಡ್ತೀರಿ? ನಾನಂತೂ ನಿಮಗೆ ಬಿಟ್ಟಿಯಾಗಿ ಸಿಕ್ಕಿದ್ದೀನಿ, ನಿಮಗೆ ಏನು ಬೇಕೋ ಮಾಡಿಸಿಕೊಳ್ತೀರಿ,” ಎಂದು ಪ್ರಶ್ನಿಸಬೇಕೆಂದು ಆಸೆಯಾಯಿತು. ಆದರೆ ಮನೆಯ ಶಾಂತಿಗೆ ಯಾಕೆ ಭಂಗ ತರಬೇಕೂಂತ ಯೋಚಿಸಿ ಸುಮ್ಮನಾದೆ.
ಇತ್ತ ಮಕ್ಕಳೂ ದೊಡ್ಡವರಾಗುತ್ತಿದ್ದರು. ಒಂದು ದಿನ ದೊಡ್ಡ ಮಗನೂ ಕೂಡ “ಅಮ್ಮಾ, ನೀನು ಮನೇಲಿ ಏನು ಕೆಲಸ ಮಾಡ್ತೀಯಾ?” ಅಂತ ಕೇಳಿಬಿಟ್ಟ. ಈಗಲೇ ಹೀಗೆ. ಇನ್ನು ದೊಡ್ಡವನಾದ ಮೇಲೆ, ಅಮ್ಮ ನೀನಂತೂ ಮುದುಕಿ ಆದೆ. ನಿನ್ನಿಂದ ಯಾವ ಕೆಲಸ ಆಗಲ್ಲ ಅಂತ ನನ್ನನ್ನು ಮನೆಯಿಂದಾಚೆ ತಳ್ಳಬಹುದು. ಇಷ್ಟು ಕಷ್ಟಪಟ್ಟು ಕೆಲಸ ಮಾಡಿದ್ರೂ ಈ ನಿಂದನೆಗಳು, ವ್ಯಂಗ್ಯ ತಪ್ಪಿದ್ದಲ್ಲ. ನಾನೂ ಎಲ್ಲಾದ್ರೂ ಕೆಲಸಕ್ಕೆ ಸೇರಿದ್ರೆ ಚೆನ್ನಾಗಿತ್ತು. ಒಬ್ಬ ಕೆಲಸದವಳನ್ನು ಇಟ್ಟುಕೊಂಡು ಅವಳ ಕೈಲಿ ಕೆಲಸ ಮಾಡಿಸಬಹುದಿತ್ತು. ನಾನೂ ಸಂಬಳ ತಂದಿದ್ರೆ ನನಗೂ ಗೌರವ ಸಿಗುತ್ತಿತ್ತು. ಆದರೆ ಈಗ ನನಗೆ ವಯಸ್ಸು ಹೆಚ್ಚಾಗ್ತಿದೆ. ಭವಿಷ್ಯದ ಚಿಂತೆ ಕಾಡುತ್ತಿದೆ. ಇರಲಿ. ಇವರಿಗೆಲ್ಲಾ ಪಾಠ ಕಲಿಸೇ ಕಲಿಸ್ತೀನಿ. ನಾನು ಒಂದೇ ಸಮನೆ ಯೋಚಿಸುತ್ತಲೇ ಇದ್ದೆ, ಬಿ.ಪಿ. ಹೆಚ್ಚಿಸಿಕೊಳ್ಳುತ್ತಲೇ ಇದ್ದೆ. ರಾತ್ರಿಯೆಲ್ಲಾ ಎದ್ದಿರುತ್ತಿದ್ದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಕಡೆಗೂ ಒಂದು ದಿನ ಆ ಅವಕಾಶ ಬಂತು.
ಮಕ್ಕಳನ್ನು ಸ್ಕೂಲ್ ವ್ಯಾನ್‌ನಲ್ಲಿ ಕೂಡಿಸಿ ಮನೆಗೆ ಬಂದಾಗ ಗಂಡ ಏನೋ ಗೊಣಗುತ್ತಿದ್ದರು ನನ್ನನ್ನು ಕಂಡು ಅವರ ಗೊಣಗಾಟ ಹೆಚ್ಚಾಯಿತು. ನಾನು ಅವರ ಬಳಿ ಹೋಗಿ, “ಏನಾಯ್ತು?” ಎಂದು ಕೇಳಿದೆ.
“ನನ್ನ ಶೂಸ್ ಸಿಕ್ತು. ಸಾಕ್ಸ್ ಸಿಗ್ತಿಲ್ಲ.”
ನಾನು ಬೀರುವಿನಿಂದ ಸಾಕ್ಸ್ ತೆಗೆದುಕೊಟ್ಟು, “ಇಲ್ಲೆ ಇತ್ತಲ್ಲಾ,” ಎಂದೆ.
“ನೀನು ಯಾವಾಗಲೂ ಹೀಗೇ. ಬಚ್ಚಿಟ್ಟುಬಿಡ್ತಿಯ ಅದನ್ನ.”
ಅವರ ಮಾತು ಕೇಳಿ ನಾನು ಕೋಪದಿಂದ ಕಿರುಚಿದೆ, “ನಾನೇನು ನಿಮ್ಮ ಸಾಕ್ಸ್ ಹಾಕ್ಕೊಳ್ತೀನಾ? ನಾನ್ಯಾಕೆ ಅದನ್ನು ಬಚ್ಚಿಡಲಿ?”
“ಹಾಗಾದ್ರೆ ನನಗ್ಯಾಕೆ ಸಿಗಲಿಲ್ಲ?”
“ಸರಿಯಾಗಿ ಹುಡುಕಿದ್ರೆ ಸಿಗ್ತಿತ್ತು,” ನಾನೂ ಕಿರುಚಿದೆ.
“ಮಾಡೋದು ಮಾಡಿಬಿಟ್ಟು ಎದುರು ವಾದಿಸ್ತೀಯಾ.”
“ನಾನೂ ಇಡೀ ದಿನ ಕೆಲಸ ಮಾಡ್ತೀನ್ರಿ. ನನಗೆ ಮನೇಲಿ ಎಷ್ಟು ಕೆಲಸ ಇರುತ್ತೇಂತ ನಿಮಗೇನಾದ್ರೂ ಗೊತ್ತಾ?” ನಾನೂ ಕೋಪದಿಂದ ಹೇಳಿದೆ.
“ನಮ್ಮ ಆಫೀಸಿನ ಕೆಲಸ ನೋಡಿಬಿಟ್ರೆ ಅಷ್ಟೇ. ನೀನು ಒಂದು ದಿನ ಆ ಕೆಲಸ ಮಾಡೋಕಾಗಲ್ಲ. ನಿನಗೆ ಮನೇಲಿ ಏನು ಕೆಲಸ ಇದೆ?”
ನಾನು ಇದೇ ವ್ಯಂಗ್ಯ ಬಾಣಗಳನ್ನು ಪ್ರತೀಕ್ಷೆ ಮಾಡುತ್ತಿದ್ದೆ. ಅವರು ಹೀಗೆ ಹೇಳಲಿ, ನಾನು ಅದಕ್ಕೆ ಉತ್ತರಿಸೋಣಾಂತ. ಆದರೆ ನಾನು ಏನೂ ಹೇಳದೆ ಅಡುಗೆಮನೆಗೆ ಹೊರಟುಹೋದೆ.
ಸ್ವಲ್ಪ ಹೊತ್ತಿನ ನಂತರ ಅವರು ಜೋರಾಗಿ ಕಿರುಚಿದರು, “ನನ್ನ ಟಿಫಿನ್ ಕ್ಯಾರಿಯರ್ ಎಲ್ಲಿ? ಆಫೀಸಿಗೆ ಟೈಂ ಆಯ್ತು.”
ನಾನೂ ಅಷ್ಟೇ ಜೋರಾಗಿ ಕಿರುಚಿದೆ, “ನಾನು ತಿಂಡಿ ಮಾಡಿಲ್ಲ. ನನಗೆ ಮನೇಲಿ ಏನು ತಾನೆ ಕೆಲಸ ಇದೆ?”
ಅವರು ಕೋಪದಿಂದ ಭುಸುಗುಟ್ಟುತ್ತಾ ಆಫೀಸಿಗೆ ಹೊರಟುಹೋದರು. ನನಗೆ ಭಯ ಆಯ್ತು. ಆದರೂ ಮನಸ್ಸಿಗೆ ಧೈರ್ಯ ತಂದುಕೊಂಡು ನನಗೆ ಮಾತ್ರ ಅಡುಗೆ ಮಾಡಿಕೊಂಡು ತಿಂದು ಬೆಡ್ ರೂಮಿಗೆ ಬಂದೆ.
ನನ್ನ ಅತ್ತೆ ಮಾವ ನೆಂಟರೊಬ್ಬರ ಮನೆಗೆ ಹೋಗಿದ್ದರು. ಆದ್ದರಿಂದ ಏನೂ ಯೋಚನೆ ಇರಲಿಲ್ಲ. ಇವರನ್ನು ದಾರಿಗೆ ತಂದೇ ತರುತ್ತೇನೆ ಎಂದು ಮನದಲ್ಲಿ ನಿಶ್ಚಯಿಸಿದ್ದೆ. ನಾನೆಷ್ಟು ಮಹತ್ವಪೂರ್ಣ ಎಂದು ಇವರಿಗೆ ತಿಳಿಸಬೇಕಿತ್ತು.
ಸಂಜೆ ಇವರು ಬರುವ ಮುಂಚೆ ಮಕ್ಕಳು ಶಾಲೆಯಿಂದ ಬಂದರು. ಬಂದವರೇ ಕೈ ಕಾಲು ತೊಳೆದು ಅಡುಗೆಮನೆಗೆ ನುಗ್ಗಿದರು. ಆದರೆ ಅಡುಗೆ ಮನೆಯಲ್ಲಿ ಏನೂ ಇರಲಿಲ್ಲ. ಅವರು ನನ್ನತ್ತ ಓಡಿಬಂದಾಗ ನಾನು ಹೇಳಿದೆ, “ಮಕ್ಕಳೇ, ನಾನಿವತ್ತು ಸ್ಟ್ರೈಕ್ ಮಾಡ್ತಿದ್ದೀನಿ. ಏಕೆಂದರೆ ನಾನು ನಿಮ್ಮ ದೃಷ್ಟೀಲಿ, ನಿಮ್ಮ ಅಪ್ಪನ ದೃಷ್ಟೀಲಿ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಆದ್ದರಿಂದ ಈಗ ನೀವು ಎಲ್ಲ ಕೆಲಸಗಳನ್ನೂ ಅಪ್ಪನಿಂದ ಮಾಡಿಸಿಕೊಳ್ಳಿ ಅಥವಾ ನೀವೇ ಮಾಡಿ. ನಾನು ನಿಮ್ಮ ಯಾವ ಕೆಲಸದಲ್ಲೂ ಹಸ್ತಕ್ಷೇಪ ಮಾಡಲ್ಲ,” ಎಂದು ಹೇಳಿ ಬೆಡ್ ರೂಮ್ ಗೆ ಹೋಗಿ ಕಂಬಳಿ ಹೊದ್ದು ಮಲಗಿದೆ.
ಮಕ್ಕಳು ಮುಖ ಕೆಳಗೆ ಹಾಕಿ ಡ್ರಾಯಿಂಗ್ ರೂಮಿನಲ್ಲಿ ಕೂತು ಅಪ್ಪನಿಗಾಗಿ ಕಾಯತೊಡಗಿದರು. ಅವರನ್ನು ಕಂಡು ದಯೆ ಉಕ್ಕಿ ಬಂತು. ಆದರೆ, “ದಯೆಯೇ ದುಃಖಕ್ಕೆ ಮೂಲ ಕಾರಣ. ಈ ಮೋಹದಿಂದ ಮುಕ್ತಳಾಗಬೇಕು,” ಎಂದು ಯೋಚಿಸಿ ನನ್ನ ಹೃದಯವನ್ನು ಕಲ್ಲು ಮಾಡಿಕೊಂಡು ಮಲಗಿಯೇ ಇದ್ದೆ.
ಸಂಜೆ ಗಂಡ ಮನೆಗೆ ಬಂದಾಗ ಅವರ ಬಳಿ ಮಕ್ಕಳು ದೂರಿದರು, “ಅಮ್ಮ ಇವತ್ತು ಸ್ಟ್ರೈಕ್ ಮಾಡ್ತಿದ್ದಾರೆ.”
ಗಂಡ ರೂಮಿನೊಳಗೆ ಬಂದು. ನನ್ನನ್ನು ಚೆನ್ನಾಗಿ ಬೈದರು, ಕೂಗಾಡಿದರು. ಆದರೆ ನಾನು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಅವರೇ ಸೋತು ಸುಸ್ತಾಗಿ ಒಳಹೋದರು. ಅಡುಗೆಮನೆಯಲ್ಲಿ ಪಾತ್ರೆಗಳನ್ನು ಕುಕ್ಕುವುದು, ಬೀಳಿಸುವ ಶಬ್ದಗಳು ಬರುತ್ತಿದ್ದವು. ನನಗೆ ಒಳಗೊಳಗೇ ಖುಷಿಯಾಗುತ್ತಿತ್ತು. ನಾನು ಮೆಲ್ಲಗೆ ಎದ್ದು ಅಡುಗೆಮನೆಗೆ ಹೋಗಿ ಅಡಗಿಸಿಟ್ಟಿದ್ದ ಊಟ ತಿಂದು ತೇಗಿ ಮತ್ತೆ ಮಲಗಿಬಿಟ್ಟೆ. ಇವರು ಯಾವಾಗ ಒಳಗೆ ಬಂದು ಮಲಗಿದರು ಎಂದು ತಿಳಿಯಲೇ ಇಲ್ಲ.
ನನಗೆ ಬೆಳಗ್ಗೆ ಎಚ್ಚರವಾದರೂ ನಿದ್ದೆಯಲ್ಲಿದ್ದಂತೆ ಅಭಿನಯಿಸುತ್ತಿದ್ದೆ. ಇವರು ಎದ್ದು ಹಾಸಿಗೆ ಸುತ್ತಿ, ಮಕ್ಕಳಿಗೆ ತಿಂಡಿ ತಯಾರಿಸಲು ಅಡುಗೆಮನೆಗೆ ಹೋದರು. ಆಗಲೇ ಹಾಲಿನವನು ಬಂದ. ಇವರು ಹಾಲು ತೆಗೆದುಕೊಳ್ಳಲು ಹೋದಾಗ ತಲೆಯಲ್ಲಿ ದ. ಆಫ್ರಿಕಾದ ನಕ್ಷೆಯ ತರಹ ಇದ್ದ ರೊಟ್ಟಿ ಸೀದು ವಾಸನೆ ಬರುತ್ತಿತ್ತು. ಓಡಿ ಒಳಗೆ ಬರುವಾಗ ಸೋಫಾಗೆ ಡಿಕ್ಕಿ ಹೊಡೆದರು. ಎಲ್ಲಾ ಹಾಲು ನೆಲದ ಪಾಲಾಯಿತು. ಚೆಲ್ಲಿದ್ದ ಹಾಲನ್ನು ಒರೆಸುವಷ್ಟರಲ್ಲಿ ಆಫೀಸಿಗೆ ತಡವಾಗಿತ್ತು. ಅಂದು ಖಾಲಿ ಹೊಟ್ಟೆಯಲ್ಲಿ ಟಿಫಿನ್ ಬಾಕ್ಸ್ ಕೂಡ ಇಲ್ಲದೆ ಆಫೀಸಿಗೆ ಹೋದರು.
ಮಧ್ಯಾಹ್ನ ಒಂದಿಬ್ಬರು ಭೇಟಿಯಾಗಲು ಬಂದಾಗ ನನಗೆ ಹುಷಾರಿಲ್ಲವೆಂದು ವಾಪಸ್ ಕಳಿಸಿದೆ. ನಂತರ ನನಗೆ ಅಡುಗೆ ಮಾಡಿ ಕೊಂಡೆ. ಊಟ ಮಾಡುವಾಗ ತುತ್ತು ಗಂಟಲೊಳಗೆ ಇಳಿಯುತ್ತಿರಲಿಲ್ಲ. ಧೈರ್ಯ ಮಾಡಿ, ಮೋಹ ಮಾಯೆಗಳಿಂದ ಮುಕ್ತಳಾಗಿ ಹೊಟ್ಟೆ ತುಂಬಾ ಊಟ ಮಾಡಿ ಮತ್ತೆ ಕೋಪ ಗೃಹಕ್ಕೆ ಹೋಗಿ ಮಲಗಿಕೊಂಡೆ.
ಸಂಜೆ ಇವರು ಆಫೀಸಿನಿಂದ ಬಂದಾಗ ಇವರ ಕೋಪ ಮುಗಿಲಿಗೇರಿತ್ತು. ಅಡುಗೆಮನೆಗೆ ಹೋಗಿ ಕಿರುಚುತ್ತಿದ್ದರು. ಮನಸ್ಸಿನಲ್ಲಿದ್ದ ಭಾವನೆಗಳನ್ನು ಹೊರಹಾಕುತ್ತಿದ್ದಾರೆ ಎಂದು ನನಗೆ ಅರ್ಥವಾಯಿತು. ನಾನು ಏನೂ ಮಾತಾಡಲಿಲ್ಲ. ರಾತ್ರಿ ರೂಮಿನಲ್ಲಿ ಒಬ್ಬಳೇ ಮಲಗಿದ್ದೆ. ಮರುದಿನ ಭಾನುವಾರ. ಬೆಳಗ್ಗೆ ಇಬ್ಬರೂ ಕಸ ಗುಡಿಸುತ್ತಿದ್ದರು. ಇವರು ಒಂದು ವಾರದ ಬಟ್ಟೆಗಳನ್ನು ಒಗೆಯುತ್ತಿದ್ದರು. ಮಧ್ಯಾಹ್ನ 3 ಗಂಟೆಗೆ ಊಟ ಮಾಡಿದರು. ಚಿಕ್ಕ ಮಗ ಊಟ ಚೆನ್ನಾಗಿಲ್ಲವೆಂದು ತಿನ್ನಲಿಲ್ಲ. ಇದು ನನ್ನ ಗಂಡನಿಗೆ ಅವಮಾನವಾಗಿತ್ತು. ಅವರ ಅಹಂಗೆ ಪೆಟ್ಟಾಗಿತ್ತು. ಅವರು ಮಗನನ್ನು ಚೆನ್ನಾಗಿ ಬೈದರು. ಅವನು ಜೋರಾಗಿ ಅಳತೊಡಗಿದ. ನಾನು ಹಾಗೇ ಮಲಗಿದ್ದೆ. ಭಾನುವಾರವಾಗಿದ್ದರಿಂದ ಅಡುಗೆಮನೆಗೆ ಹೋಗಿ ನನಗೆ ತಿನ್ನಲು ಏನನ್ನೂ ಮಾಡಿಕೊಳ್ಳಲಾಗಲಿಲ್ಲ. ಆದರೆ ಚಿಕ್ಕ ಮಗ ಅಪ್ಪನಿಂದ ಬೈಸಿಕೊಂಡಿದ್ದು ನನಗೆ ಬೆಂಬಲವಾಗಿ ನಿಂತ.
ನಾನು ಅವನನ್ನು ಕರೆದು ಗುಟ್ಟಾಗಿ ರವೆ ಇಡ್ಲಿ, ಮಸಾಲೆ ದೋಸೆ ತರಿಸಿಕೊಂಡೆ. ಇಬ್ಬರೂ ಸದ್ದಿಲ್ಲದೆ ತಿಂದೆ. ಹೀಗೇ 4-5 ದಿನಗಳು ಕಳೆದವು. ಗಂಡನಂತೂ ಬಹಳ ಚಿಂತಿತರಾಗಿದ್ದರು. ನಾನು ಶಾಂತಳಾಗಿಯೇ ಇದ್ದೆ. ಅವರು ದಿನ ಆಫೀಸಿಗೆ ಲೇಟಾಗಿ ಹೋಗುತ್ತಿದ್ದರು. ಅಷ್ಟರಲ್ಲಿ ಅವರಿಗೆ ಶೋಕಾಸ್ ನೋಟೀಸ್ ಕೂಡ ಬಂದಿತ್ತು. ಬಹುಶಃ ಅವರು ಆಫೀಸಿನಲ್ಲಿ ನನ್ನ ಆರೋಗ್ಯ ಸರಿಯಿಲ್ಲ ಎಂದು ಹೇಳಿರಬೇಕು. ಒಂದು ದಿನ ಇದ್ದಕ್ಕಿದ್ದಂತೆ ಅವರ ಬಾಸ್ ನನ್ನನ್ನು ನೋಡಲು ಮನೆಗೆ ಬಂದುಬಿಟ್ಟರು.
ಗಂಡ ಕೆಳಗೆ ಅಡುಗೆಮನೆಯಲ್ಲಿದ್ದರು. ನಾನು ಮೇಲೆ ರೂಮಿನಲ್ಲಿ ಮಲಗಿದ್ದೆ. ಬಾಸ್‌ನನ್ನು ನೋಡಿ ಅವರು ಗಾಬರಿಯಾದರು. ನಂತರ ಓಡುತ್ತಾ ನನ್ನ ಬಳಿ ಬಂದು ವಿನಂತಿಸಿಕೊಂಡರು, “ಪ್ಲೀಸ್, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳೆ. ಬಾಸ್ ಮುಂದೆ ಆರೋಗ್ಯ ಸರಿಯಿಲ್ಲಾಂತ ನಾಟಕ ಮಾಡು. ನನಗೆ ನನ್ನ ತಪ್ಪಿನ ಅರಿವಾಗಿದೆ. ನನ್ನ ಕೆಲಸ ಉಳಿಸಿಕೊಡು.”
ಇವರು ಇಷ್ಟು ಕೇಳಿಕೊಂಡಿದ್ದಕ್ಕೆ ನಾನು ಒಪ್ಪಿಕೊಂಡೆ. ಆರೋಗ್ಯ ಸರಿಯಿಲ್ಲಾಂತಾ ಚೆನ್ನಾಗಿ ನಾಟಕ ಮಾಡಿದೆ. ಬಾಸ್ ತಂದಿದ್ದ ಹಣ್ಣುಗಳನ್ನು ನನ್ನ ಬಳಿ ಇಟ್ಟು ಸ್ವಲ್ಪ ಹೊತ್ತು ಕೂತಿದ್ದು ನಂತರ ಹೊರಟುಹೋದರು.
ಬಾಸ್ ಹೋದ ನಂತರ ಇವರು ಬಂದು ಹೇಳಿದರು, “ಈ ಒಂದು ವಾರದಲ್ಲಿ ಮನೆಯಲ್ಲಿ ನೀನೆಷ್ಟು ಕೆಲಸಗಳನ್ನು ಮಾಡ್ತಿದ್ದೀಯಾಂತ ತಿಳಿದುಕೊಂಡೆ. ಒಂದು ವೇಳೆ ನೀನು ಹೀಗೇ ಸ್ಚ್ರೈಕ್ ಮುಂದುವರೆಸಿದ್ರೆ ನನ್ನ ನೌಕರಿ ಹೋಗುತ್ತೆ. ಇನ್ನು ಮುಂದೆ ಮನೇಲಿ ಕೂತು ಏನು ಕೆಲಸ ಮಾಡ್ತೀಯಾಂತ ಯಾವತ್ತೂ ಕೇಳಲ್ಲ, ಪ್ರಾಮಿಸ್.”
ಗಂಡ ತಮ್ಮ ಅಸ್ತ್ರಗಳನ್ನು ಕೆಳಗೆ ಹಾಕಿ ಶರಣಾಗತರಾಗಿದ್ದರು. ಅತ್ತ ಪರದೆ ಹಿಂದೆ ನಿಂತಿದ್ದ ಇಬ್ಬರು ಮಕ್ಕಳ ಕಣ್ಣುಗಳಲ್ಲೂ ಪಶ್ಚಾತ್ತಾಪದ ಭಾವನೆ ಇತ್ತು. ಹೀಗಾಗಿ ಅವರುಗಳನ್ನು ಕ್ಷಮಿಸುವುದೇ ಯೋಗ್ಯವೆಂದುಕೊಂಡೆ. ಅಂದಿನಿಂದ ಗಂಡ ಹಾಗೂ ಇಬ್ಬರೂ ಮಕ್ಕಳು ನೀನು ಏನು ಕೆಲಸ ಮಾಡ್ತೀಯಾಂತ ನನಗೆ ಕೇಳಿಲ್ಲ.