ತಮ್ಮ ಯಶಸ್ವೀ ಚಿತ್ರ `ತ್ರೀ ಈಡಿಯಟ್ಸ್’ನ ಪ್ರಮೋಶನ್ಸ್ ಗಾಗಿ ಅಮೀರ್‌ ಖಾನ್‌ ಕರೀನಾ ವಿಶೇಷವಾಗಿ ಚಂದೇರಿಗೆ ಹೋಗುವುದು ದೊಡ್ಡ ವಿಷಯವಾಗಿತ್ತು. ಇದರಿಂದ ಕರೀನಾ ಅಲ್ಲಿನ ಸೀರೆಗಳನ್ನು ಎಷ್ಟು ಇಷ್ಟಪಡುತ್ತಾಳೆ ಎಂಬುದೂ ತಿಳಿದುಬಂತು. ಆಕೆ ಚಂದೇರಿಗೆ ಬಂದು ಕೆಲವು ವಿಶಿಷ್ಟ ಸೀರೆಗಳನ್ನು ಆರಿಸಿಕೊಂಡಿದ್ದೂ ಆಯ್ತು, ಅವು ಅಷ್ಟು ಖ್ಯಾತಿಗೊಂಡಿವೆ! ಮದುವೆಯಂಥ ಶುಭ ಸಮಾರಂಭಕ್ಕೆ ಚಂದೇರಿ ಸೀರೆಗಳನ್ನು ವಿಶೇಷವಾಗಿ ಆರಿಸುವುದು ಸಂಪ್ರದಾಯ. ಹಿಂದೆಲ್ಲ ರಾಜಮನೆತನದ ಮಹಿಳೆಯರಷ್ಟೇ ಚಂದೇರಿ ಸೀರೆಗಳನ್ನು ಉಡುತ್ತಿದ್ದರು. ಅದರಲ್ಲೂ ಈ ಚಿತ್ರದ ಮದುವೆಯ ದೃಶ್ಯಗಳಿಗಾಗಿ ಕರೀನಾ ಆರಿಸಿದ ಚಂದೇರಿ ಸೀರೆಗಳು ಈಗ ಅವಳ ಹೆಸರಿನಿಂದಲೇ ಖ್ಯಾತಿಗೊಂಡಿವೆ!

ಮಧ್ಯಪ್ರದೇಶದ ಚಿಕ್ಕ ಜಿಲ್ಲೆ ಅಶೋಕನಗರದ ಮುಖ್ಯ ತಾಲ್ಲೂಕು ಚಂದೇರಿ, ತನ್ನ ಐತಿಹಾಸಿಕ ಮಹತ್ವ ಮತ್ತು ವೈಭವಕ್ಕೆ ಪ್ರಸಿದ್ಧವಾಗಿದೆ. ಆದರೆ ಇಲ್ಲಿನ ಸೀರೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇದೆ, ನಮ್ಮ ರಾಷ್ಟ್ರೀಯ ಮಟ್ಟದಲ್ಲಂತೂ ಅತ್ಯುತ್ತಮ ಹೆಸರು ಗಳಿಸಿದೆ. ಚಂದೇರಿಯಲ್ಲಿ ಸೀರೆಗಳ ತಯಾರಿ 700 ವರ್ಷಗಳಷ್ಟು ಹಳೆಯದು. ಈ ಸೀರೆಗಳಿಗೆ ಆ ಕಾಲದಿಂದಲೂ ತಮ್ಮದೇ ಆದ ಐಡೆಂಟಿಟಿ ಇತ್ತು, ಆದರೆ ವ್ಯಾಪಾರದ ಇತಿಮಿತಿಯೂ ಇತ್ತು. ಸಿಂಧಿಯಾ ರಾಜಮನೆತನಕ್ಕೆ ಸೇರಿದ ಈ ಊರಿನ ಈ ಕಲೆಯ ಕುರಿತಾಗಿ ಆಡಳಿತಗಾರರು ವಿಶೇಷ ಗಮನಹರಿಸಿದರು. ನೇಕಾರರು, ಕುಶಲಕರ್ಮಿಗಳ ಪೂರೈಕೆಯೊಂದಿಗೆ, ಇದನ್ನು ದೊಡ್ಡ ಉದ್ಯಮವಾಗಿ ಬೆಳೆಸಲಾಯಿತು, ಸೀರೆಗಳ ವ್ಯಾಪಾರ ಜೋರಾಯಿತು.

ಚಂದೇರಿಯಲ್ಲಿ 4 ಸಾವಿರಕ್ಕೂ ಹೆಚ್ಚು ನೇಕಾರ ಕುಟುಂಬಗಳಿವೆ. ಇವರ ಮುಂಜಾನೆ ನೇಯ್ಗೆಯಿಂದ ಆರಂಭವಾದರೆ, ಮುದ್ರಣ ಬಣ್ಣ ಕಟ್ಟುವಿಕೆ ಸಂಜೆಯವರೆಗೂ ನಡೆಯುತ್ತದೆ. ಪರಿಶ್ರಮ, ಕಲ್ಪನೆ ಹಾಗೂ ಕಲೆ ಬಗ್ಗೆ ಚಂದೇರಿಯ ಭವ್ಯ ಸೀರೆಗಳನ್ನು ನೋಡುತ್ತಲೇ ತಿಳಿಯಬಹುದಾಗಿದೆ. ಇದು ಸಾಮಾನ್ಯರ ಊಹೆಗೂ ನಿಲುಕದ್ದು. ಇದಕ್ಕಾಗಿ ನೇಕಾರರ ಕಲೆ, ಕಲ್ಪನಾಶೀಲತೆ, ಅದಕ್ಕೂ ಮಿಗಿಲಾದ ಕಠಿಣ ಪರಿಶ್ರಮ ಎಷ್ಟೆಂಬುದು ಆ ಸೀರೆ ಕಂಡಾಗಲೇ ತಿಳಿಯುವುದು, ಹೀಗಾಗಿಯೇ ಇವು ತುಸು ದುಬಾರಿ.

ಚಂದೇರಿ ಸೀರೆಗಳಿಗಾಗಿ ಸಾಕಷ್ಟು ಕಚ್ಚಾ ಸಾಮಗ್ರಿಗಳು ಅಂದರೆ ರೇಷ್ಮೆ, ಹತ್ತಿ, ಜರಿಯ ಬಳಕೆಯಾಗುತ್ತದೆ. ಇದಕ್ಕಾಗಿ ಕೊರಿಯಾ ಚೀನಾದಿಂದ ರೇಷ್ಮೆ ತರಿಸಲಾಗುತ್ತದೆ ಹಾಗೂ ಮರ್ಸ್‌ ರೈಸ್ಡ್ ಕಾಟನ್‌ ಕೊಯಂಬತ್ತೂರಿನಿಂದ ಬರುತ್ತದೆ. ಒಡಲಿನ ಬುಟ್ಟಾಗಳಿಗಾಗಿ ಬಳಸಲಾಗುವ ಉತ್ಕೃಷ್ಟ ಗುಣಮಟ್ಟದ ಎಳೆಗಳಿಗಾಗಿ ಸೂರತ್‌ನಿಂದ ಹಾಗೂ ಆಕರ್ಷಕ ಬಾರ್ಡರ್‌ಗಾಗಿ ಪುಣೆಯಿಂದ ಸ್ಪೆಷಲ್ ಸಿಲ್ಕ್ ತರಿಸಲಾಗುತ್ತದೆ.

ಈಗೆಲ್ಲ ಬಣ್ಣದ ಬೆಡಗಿನ ಸೀರೆಗಳಿಗೆ ಬೇಡಿಕೆ ಹೆಚ್ಚು. ಇವುಗಳಿಗೆ ಬಣ್ಣಕಟ್ಟಲು 3 ಹಂತಗಳಿವೆ. ಇದಕ್ಕಾಗಿ ಬಿಡಿ ಎಳೆಗಳನ್ನು ಬಿಸಿ ನೀರಿನಲ್ಲಿ ಕುದಿಸಲಾಗುತ್ತದೆ. ನಂತರ ಬಣ್ಣಗಳನ್ನು ಕುದಿಸಿ, ಅದರಲ್ಲಿ ಬಿಸಿನೀರಿನಲ್ಲಿ ಕುದ್ದ ಎಳೆಗಳನ್ನು ಹಾಕಿ, ಕೊನೆಯಲ್ಲಿ ಬಣ್ಣ ಗಟ್ಟಿಯಾಗಿ ಹಿಡಿಯಿತೇ ಎಂದು ಖಾತ್ರಿಪಡಿಸಲು ಆ್ಯಸಿಡ್‌ ಬೆರೆಸುತ್ತಾರೆ.

ಚಂದೇರಿ ಸೀರೆ ತಯಾರಿಕೆಗಾಗಿ ಪರಂಪರಾಗತ ಉಪಕರಣಗಳ ಬಳಕೆಯಾಗುತ್ತದೆ. ಈ ಉಪಕರಣಗಳ ನೆರವಿನಿಂದಲೇ ಚಂದೇರಿ ಸೀರೆಗಳನ್ನು ನೋಡಿದಾಗ ಅಚ್ಚಳಿಯದ ಲುಕ್ಸ್ ಮನದಲ್ಲುಳಿಯುತ್ತವೆ. ಜೆಕಾರ್ಡ್‌, ಸ್ಪಿನ್ನಿಂಗ್‌, ರೀಲಿಂಗ್‌ ಡೈಯಿಂಗ್ ಸಾಮಗ್ರಿಗಳು ಎಷ್ಟು ಸ್ವಾರಸ್ಯಕರ ಎಂದರೆ ಈಗಲೂ ಚಂದೇರಿ ಸೀರೆಗಳಿಗಾಗಿ ಪ್ರಾಚೀನ ಕಾಲದ ಮಗ್ಗಗಳನ್ನೇ ಬಳಸುತ್ತಾರೆ. ಆದರೆ ಇತ್ತೀಚೆಗೆ ಅನುಕೂಲ ಹಾಗೂ ಬದಲಾವಣೆಗಾಗಿ, ಆಕರ್ಷಕ ಪ್ರಿಂಟ್ಸ್ ಗಾಗಿ ಮರದ ಕಬ್ಬಿಣದ ಫ್ರೇಮ್ ಲೂಮ್ಸ್ ಸಹ ಬಳಕೆಯಲ್ಲಿವೆ. ಡಿಸೈನ್ಸ್ ಪರ್ಫೆಕ್ಟ್ ಆಗಿರಲು ಜೆಕಾರ್ಡ್‌ ಹಾಗೂ ಡಾಮಿ ಯಂತ್ರಗಳನ್ನು ಬಳಸುತ್ತಾರೆ. ಇದಕ್ಕಾಗಿ ಬೆಂಗಳೂರು ಹಾಗೂ ಬನರಾಸ್ಸಿನ ಜೆಕಾರ್ಡ್‌ನ್ನೇ ಹೆಚ್ಚು ಬಳಸುತ್ತಾರೆ.

ಚಂದೇರಿ ಸೀರೆಯ ಸಾವಿರಾರು ಬಗೆಯ ಡಿಸೈನ್‌ಗಳು, ಇಲ್ಲಿನ ನೇಕಾರರ ಕಲ್ಪನಾಶಕ್ತಿಗೊಂದು ಕೈಗನ್ನಡಿ. ಇದಕ್ಕೆ ಇವರಿಗೆ ಪ್ರಕೃತಿಯಿಂದ 100% ಪ್ರೇರಣೆ ದೊರಕುತ್ತದೆ. ಡಿಸೈನಿನ ಡಯಾಗ್ರಾಮ್ ರಚಿಸುವುದು ಇವರ ಮೊದಲ ಕೆಲಸ, ಇದು ಸೀರೆಯ ಮೊದಲ ಪರಿಕಲ್ಪನೆ ಎಂದೂ ಹೇಳಬಹುದು. ಸಾಧಾರಣ ಪಟ್ಟಿಯ ಪಿಟಿನ್‌ ಬಾರ್ಡ್‌ರ್‌, ಗಾಢ ಪಟ್ಟಿಗಳ ಸೀರೆ, ಚೆಕ್ಸ್ ವುಳ್ಳ ಪಿಟನ್‌ ಬಾರ್ಡರ್‌, ಜಂಗ್ಲಾ ಬಾರ್ಡರ್‌ ಹಾಗೂ ಜಂಗ್ಲಾ ಪಟ್ಟಿಯ ಸಹಿತ ಡಜನ್‌ ಗಟ್ಟಲೆ ಡಿಸೈನಿನ ಚಂದೇರಿ ಸೀರೆಗಳನ್ನು ನೋಡಿಯೇ ತಣಿಯಬೇಕು.

ಅಸಲಿ ಚಂದೇರಿ ಸೀರೆಗಳ ಹೆಗ್ಗುರುತು ಹಾಗೂ ವೈಶಿಷ್ಟ್ಯತೆ ಎಂದರೆ ಇದರ ಪಟ್ಟಿ ಹಾಗೂ ಬಾರ್ಡ್‌ರ್‌ಗಳ ಡಿಸೈನ್‌ ಒಂದೇ ತರಹ ಎನಿಸುತ್ತದೆ. ಆದರೆ ಸೀರೆಗಳ ತೂಕ ಬಲು ಕಡಿಮೆ. ಇದು ಎಷ್ಟು ತೆಳು ಎಂದರೆ ಕೈಬೆರಳಿಗೆ ಧರಿಸಿದ ಉಂಗುರದ ನಡುವೆ ತೂರಿಸಿ ಸಲೀಸಾಗಿ ಹೊರಗೆ ಎಳೆಯಬಹುದು. ಇದರ ಜರಿಯಂತೂ ಎಂದೂ ಕಪ್ಪಾಗದು, ಹಾಗೇ ಇದರ ಮೇಲೆ ಬೇರೆ ಬಣ್ಣ ಹಾಕಲಾಗದು.

ಚಂದೇರಿ ಸೀರೆಗಳ ನೇಕಾರರು ಸದಾ ಸಾಂಪ್ರದಾಯಿಕ ಡಿಸೈನ್‌ಗಳಿಗಷ್ಟೇ ಅಂಟಿಕೊಂಡಿರುತ್ತಾರೆ ಎಂದೇನಲ್ಲ. ಕಾಲಕ್ಕೆ ತಕ್ಕಂತೆ, ಸೀರೆಯ ಡಿಮ್ಯಾಂಡ್‌ ಇದ್ದ ಹಾಗೆ ಅದು ಬದಲಾಗುತ್ತಿರುತ್ತದೆ. ಕೆಲವು ವರ್ಷಗಳ ಹಿಂದೆ ಇದರ ನೇಯ್ಗೆ ಕೇವಲ ರೇಷ್ಮೆ ಎಳೆಗಳ ಮೇಲೆ ರೇಷ್ಮೆ ಎಂದು ಸೀಮಿತವಾಗಿದ್ದುದು, ಮುಂದೆ ರೇಷ್ಮೆ ಜೊತೆ ಕಾಟನ್‌ ಎಂದಾಯ್ತು. ಅಂದರೆ ಬದಲಾವಣೆ ತಲೆದೋರಿದೆ. ವಿನ್ಯಾಸದ ವಿಷಯದಲ್ಲಿ ಚಂದೇರಿ ಹಾದು ಬಂದ ದಾರಿ, ನೇಕಾರರಿಗೆ ಮಾತ್ರವಲ್ಲದೆ, ವ್ಯಾಪಾರಿಗಳಿಗೂ ನೆನಪಿರುವಂತೆ, ಸೀರೆಗಳು ಬಿಳಿಯ ಕಾಟನ್‌ನಿಂದಲೇ ನೇಯಲ್ಪಡುತ್ತಿತ್ತು. ಅದನ್ನು ಕೇಸರಿಯಲ್ಲಿ ತೊಳೆದು, ಒಂದು ಹೊಂಬಣ್ಣದ ಮೆರುಗು ಹಾಗೂ ಸುವಾಸನೆ ಬರುವಂತೆ ಮಾಡಲಾಗುತ್ತಿತ್ತು. ಇತ್ತೀಚೆಗಂತೂ 90% ಸೀರೆಗಳು ರೇಷ್ಮೆ ಮತ್ತು ಕಾಟನ್ನಿನ ಮಿಶ್ರಣದಲ್ಲಿ ತಯಾರಾಗುತ್ತವೆ.

ಇಂದೂ ಸಹ ಆರ್ಡರ್‌ ಇದ್ದಂತೆ, ಚಿನ್ನಬೆಳ್ಳಿಯ ಎಳೆಗಳ ಸೀರೆಗಳು ತಯಾರಾಗುತ್ತವೆ. ಇದಕ್ಕಾಗಿ ಅತಿ ವಿಶಿಷ್ಟ ಬಗೆಯ ಸೂಜಿಗಳನ್ನು ಬಳಸುತ್ತಾರೆ. ಇಂಥ ಆರ್ಡರ್‌ ಭಾರಿ ಶ್ರೀಮಂತರ ಕಡೆಯಿಂದ ಬರುತ್ತಿರುತ್ತದೆ. ಈ ಸೀರೆಗಳ ಡಿಸೈನಿನಲ್ಲಿ ಹೆಚ್ಚಾಗಿ ಹಣ್ಣು, ಹೂ, ಬಳ್ಳಿ, ಖಗೋಳ ಚಿಹ್ನೆಗಳ ಬುಟ್ಟಾಗಳನ್ನೇ ಬಿಡಿಸುತ್ತಾರೆ. ಯಾವ ಸೀರೆಯ ಮೇಲೆ ಅತ್ಯಧಿಕ ಬುಟ್ಟಾಗಳಿರುತ್ತವೋ ಅದು ಅಷ್ಟೇ ದುಬಾರಿ ಎನಿಸುತ್ತದೆ, ಏಕೆಂದರೆ ಇದನ್ನು ಕೇವಲ ಕೈಗಳಿಂದಷ್ಟೇ ನೇಯುತ್ತಾರೆ.

ಚಂದೇರಿ ಸೀರೆಗಳ ಪ್ರಸಿದ್ಧಿಗೆ ಒಂದು ಮುಖ್ಯ ಕಾರಣ ಎಂದರೆ, ಅದಕ್ಕಾಗಿ ಕೆಲಸ ಮಾಡುವ ಕುಶಲಕರ್ಮಿಗಳು ಬೇರೆ ಬೇರೆ ಇರುತ್ತಾರೆ ಹಾಗೂ ತಮ್ಮ ಕೆಲಸದಲ್ಲಿ ಅತಿ ನಿಪುಣರು. ಅಂದರೆ ಎಳೆಗಳನ್ನು ಜೋಡಿಸಿ ನೇಯುವವರು ಅದನ್ನಷ್ಟೇ ಗಮನಿಸಿದರೆ ರೀಲಿಂಗ್‌, ಡೈಯಿಂಗ್‌, ಮಿಕ್ಸಿಂಗ್‌ ವಿಭಾಗಗಳೆಲ್ಲವನ್ನೂ ಬೇರೆ ಬೇರೆಯರೇ ನಿಭಾಯಿಸುತ್ತಾರೆ.

ಕುಶಲಕರ್ಮಿಗಳು ಹಾಗೂ ನೇಕಾರರಿಗೆ ಬೇಕಾದ ಎಲ್ಲಾ ಕಚ್ಚಾ ಸಾಮಗ್ರಿ, ಸಲಕರಣೆಗಳನ್ನೂ ಉದ್ಯಮಿ ಒದಗಿಸುತ್ತಾನೆ. ಈ ಕೆಲಸಗಾರರಿಗೆ ಉತ್ತಮ ಮಜೂರಿಯೂ ಸಿಗುತ್ತದೆ. ಒಟ್ಟಾರೆ ದೃಷ್ಟಿಯಿಂದ ಈ ಕೆಲಸಗಾರರ ಸ್ಥಿತಿ ಅಂಥ ಉತ್ತಮವೇನಲ್ಲ, ಆದರೆ ಕಳೆದ 4-5 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. 2010ರ ಕಾಮನ್‌ ವೆಲ್ತ್ ‌ಗೇಮ್ಸ್ ನಲ್ಲಿ 10 ಸಾವಿರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಚಂದೇರಿ ಸೀರೆಗಳೇ ಮೆರೆದವು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೇಕಾರರ ಕೌಶಲ ಮನ್ನಣೆ ಗಳಿಸಿತು.

ಉಳಿದ ಬ್ರ್ಯಾಂಡೆಡ್‌ ಸೀರೆಗಳ ತರಹ ಚಂದೇರಿ ಸೀರೆಗಳು ಎಲ್ಲೆಡೆ ಸಿಗುವುದಿಲ್ಲ. ಸಾಮಾನ್ಯವಾಗಿ ಆರ್ಡರ್‌ ದೊರೆತಾಗ ಮಾತ್ರವೇ ಇವು ತಯಾರಾಗುತ್ತವೆ, ಆದ್ದರಿಂದ ಆಯ್ದ ಕೆಲವೇ ವ್ಯಾಪಾರಿಗಳು ಮಾತ್ರ ಇದರ ಮಾರಾಟ ಮಾಡುತ್ತಾರೆ. ವಿದೇಶಗಳಿಗೂ ಸಾಕಷ್ಟು ದೊಡ್ಡ ಮೊತ್ತದಲ್ಲಿ ಇದು ರಫ್ತಾಗುತ್ತದೆ.

ಕರೀನಾ ಅಥವಾ ರಾಜಮನೆತನಕ್ಕೆ ಸೇರಿದ ಮಹಿಳೆಯರ ತರಹ, ಚಂದೇರಿ ಸೀರೆಗಳು ಈಗ ಎಲ್ಲಾ ಸಾಮಾನ್ಯ ಮಹಿಳೆಯರ ಅಚ್ಚುಮೆಚ್ಚಿನ ಆಯ್ಕೆಯಾಗಿವೆ. ಇದನ್ನು ಖರೀದಿಸಲು ಚಂದೇರಿಗೇ ಹೋಗಬೇಕಾಗುತ್ತದೆ ಅಥವಾ ಯಾರಾದರೂ ದೊಡ್ಡ ವಿಶ್ವಸನೀಯ ವಿತರಕರ ಮುಖಾಂತರ ಅತಿ ಮೃದು, ಮಖಮಲ್ ನಂಥ, ಬಣ್ಣ ಬಣ್ಣದ, ಸೆಲ್ಫ್ ಡಿಸೈನಿನ ಈ ಸೀರೆಗಳನ್ನು ತರಿಸಬಹುದಾಗಿದೆ.

– ಭಾರತಿ ಭೂಷಣ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ