ಕಥೆ – ರಮಣಿ ಶೇಖರ್
ನಾನು ಬಸ್ಸಿಗಾಗಿ ಕಾಯುತ್ತ ನಿಂತಿದ್ದೆ. ಕಾರೊಂದು ನನ್ನ ಸನಿಹ ಬಂದು ನಿಂತಿತು. ದೀಪಕ್ ಕಾರಿನಿಂದ ಕೆಳಗಿಳಿದು ತಡವರಿಸುತ್ತಾ ಹೇಳಿದರು, “ಅಂಜಲಿ, ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು.”
ನಾನು ಮುಖ ತಿರುಗಿಸಿಕೊಂಡು ಕಠೋರವಾಗಿ ಹೇಳಿದೆ, “ನಿಮ್ಮ ಜೊತೆ ಮಾತಾಡೋದು ನನಗೇನೂ ಬೇಕಿಲ್ಲ.”
“ಅಂಜಲಿ ಹುಡುಗಾಟ ಆಡಬೇಡ. ಆಫೀಸಿಗೆ ಹೋಗ್ತಿದ್ದೀಯಾ? ಬಾ ನಿನ್ನನ್ನ ಅಲ್ಲಿಗೆ ಕರ್ಕೊಂಡು ಹೋಗ್ತೀನಿ.”
“ಥ್ಯಾಂಕ್ ಯು. ನಾನು ಬಸ್ಸಿನಲ್ಲೇ ಹೋಗ್ತೀನಿ.”
“ಅಂಜಲಿ, ವಿಕ್ಕಿ ಬಗ್ಗೆ ನಿನ್ನ ಜೊತೆ ಮಾತನಾಡಬೇಕು.”
“ವಿಕ್ಕಿಯಿಂದ ಈಗ ನಿಮಗೇನು ಆಗಬೇಕಾಗಿದೆ?” ನಾನು ರೋಷದಿಂದ ಕಿರುಚಿದೆ.
“ಏನು ಮಾತಾಡ್ತೀ ಅಂಜಲಿ, ವಿಕ್ಕಿ ನನ್ನ ಮಗನೇ ಅಲ್ವೇ? ಅವನು ಅಮೆರಿಕಾಗೆ ಹೋಗಿ ಓದಬೇಕೂಂತ ಇದ್ದಾನೇಂತ ಕೇಳಿದೆ.”
“ಅದಕ್ಕೆ?” ನಾನು ಹುಬ್ಬುಗಂಟಿಕ್ಕಿದೆ.
“ನಾನು. ಅವನಿಗೆ ನೆರವಾಗೋಣಾಂತ….”
“ಅವನು ನಿಮ್ಮಿಂದ ಯಾವ ನೆರವನ್ನೂ ಸ್ವೀಕರಿಸೋದಿಲ್ಲ ಅನ್ನೋದು ನಿಮಗೆ ಚೆನ್ನಾಗಿ ಗೊತ್ತು.”
“ಇರಬಹುದು. ಆದರೆ ನೀನಾದ್ರೂ ತೊಗೋಬಹುದು.”
“ಇಲ್ಲ. ನಾನು ವಿಕ್ಕಿಗೆ ತಿಳಿಸದೆ ನಿಮ್ಮಿಂದ ಒಂದು ಪೈಸೆ ಕೂಡಾ ತೆಗೆದುಕೊಳ್ಳಲ್ಲ.”
“ಅಯ್ಯೋ! ಅಂಜಲಿ, ನೀನ್ಯಾಕೆ ಅರ್ಥನೇ ಮಾಡಿಕೊಳ್ತಿಲ್ಲ? ಇದು ವಿಕ್ಕಿಯ ಭವಿಷ್ಯದ ಪ್ರಶ್ನೆ. ಅವನ ಬಗ್ಗೆ ನನ್ನ ಹೊಣೆಗಾರಿಕೆಯೂ ಇದ್ದೇ ಇದೆ.”
“ಈ ಬಗ್ಗೆ ನಾನು ನಿಮ್ಮಿಂದ ಏನನ್ನೂ ಕೇಳಬಯಸುವುದಿಲ್ಲ. ದಾರಿ ಬಿಡಿ, ನನ್ನ ಬಸ್ಸು ಬಂತು.”
ದೀಪಕ್ ಕಾರನ್ನೇರಿ ಕುಳಿತು ವೇಗವಾಗಿ ಹೊರಟುಹೋದರು. ನನ್ನ ಬಸ್‌ಅಪರೂಪಕ್ಕೆ ಸಾಕಷ್ಟು ಖಾಲಿ ಇತ್ತು. ನಾನು ಸೀಟಿಗೆ ಒರಗಿ ಕುಳಿತು ಬಿಕ್ಕಳಿಕೆಯನ್ನು ತಡೆಯುವ ಪ್ರಯತ್ನ ಮಾಡುತ್ತಾ ಕಣ್ಣು ಮುಚ್ಚಿದೆ. ದೀಪಕ್‌ರನ್ನು ಮೊದಲ ಬಾರಿಗೆ ಕಂಡ ನೆನಪುಗಳು ಮನಸ್ಸಿನ ಪರದೆಯ ಮೇಲೆ ಮೂಡಿಬಂದವು.
ನಮ್ಮ ಕಾಲೇಜಿನಲ್ಲಿ ಸಂಗೀತ ಸ್ಪರ್ಧೆ ಏರ್ಪಾಡಾಗಿತ್ತು. ಅದರಲ್ಲಿ ನಾನೂ ಭಾಗವಹಿಸಿದ್ದೆ. ನನ್ನ ಗೆಳತಿ ನೀನಾ ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದಳು. “ಅಂಜಲಿ ಜಡ್ಜ್ ಆಗಿ ಬಂದಿರುವವರನ್ನು ನೋಡಿದ್ಯಾ? ಒಳ್ಳೆ ಸಿನಿಮಾ ಹೀರೋ ಹಾಗೆ ಕಾಣಿಸ್ತಾರೆ ಅಲ್ವೇನೇ?”
“ಯಾರೇ ಅವ್ರು….?” ನಾನೂ ಕುತೂಹಲದಿಂದ ಪ್ರಶ್ನಿಸಿದೆ.
“ದೀಪಕ್ ಅಂತ, ಆಕಾಶವಾಣಿಯಲ್ಲಿ ಕೆಲಸ ಮಾಡ್ತಿದ್ದಾರೆ. ಅಬ್ಬಾ! ಎಂಥ ಮಧುರ ಸಂಗೀತ ಕೊಡ್ತಾರೆ ಗೊತ್ತಾ? ಅವರ `ರಾಗಸುಧಾ’ ಕಾರ್ಯಕ್ರಮ ನೀನು ಕೇಳಿಲ್ವಾ?”ಅಷ್ಟರಲ್ಲಿ ದೀಪಕ್ ಘೋಷಿಸಿದರು.
“ಪ್ರಥಮ ಬಹುಮಾನ ಕುಮಾರಿ ಅಂಜಲಿ ಅವರಿಗೆ ನೀಡಲಾಗಿದೆ…..” ಬೆಳ್ಳಿಯ ಕಪ್ ಸ್ವೀಕರಿಸುವಾಗ ನನ್ನ ಕೈ ಬೆರಳುಗಳು ಅವರ ಹಸ್ತಕ್ಕೆ ತಗುಲಿ, ಶರೀರದ ರಕ್ತವೆಲ್ಲ ಮುಖಕ್ಕೆ ನುಗ್ಗಿಬಂದಂತಾಯಿತು.
ನಾನು ಮನೆಗೆ ಬಂದು ಅಮ್ಮನಿಗೆ ಹೇಳಿದೆ, “ಅಮ್ಮಾ, ನಾನು ಮತ್ತೆ ಸಂಗೀತ ಕಲೀತೀನಿ.”
“ಎಲ್ಲ ನಾಲ್ಕು ನಾಲ್ಕು ದಿನ ಕಲೀತೀನಿ ಅಂತೀಯ. ಹೋಗ್ಲಿ ರುಕ್ಮಿಣಮ್ಮ ನಡೆಸುತ್ತಿರೋ ಸಂಗೀತ ಶಾಲೆಗೆ ಸೇರಿಕೊ.”
“ಬೇಡಮ್ಮ, ನಾನು ದೀಪಕ್ ಹತ್ರ ಸಂಗೀತ ಹೇಳಿಸ್ಕೋತೀನಿ.”
“ಯಾರೇ ಈ ದೀಪಕ್?”
“ನಿಮಗೆ ಗೊತ್ತಿಲ್ವಾ? ಅವರು ಬಹಳ ದೊಡ್ಡ ಸಂಗೀತ ವಿದ್ವಾನ್. ರೇಡಿಯೋದಲ್ಲಿ ಅವರ `ರಾಗಸುಧಾ’ ಕಾರ್ಯಕ್ರಮ ಬರುತ್ತೆ, ನೀವು ಕೇಳಿಲ್ವಾ?”
ದೀಪಕ್ ನನಗೆ ಸಂಗೀತ ಹೇಳಿಕೊಡಲು ಮನೆಗೆ ಬರತೊಡಗಿದರು. ಅವರು ಯಾವಾಗಲೂ `ಕಾಮನಬಿಲ್ಲಿನ ಉಯ್ಯಾಲೆಯಲ್ಲಿ ತೂಗಾಡೋಣ,’ ಎಂಬ ಹಾಡನ್ನು ಗುಣಿಗುಣಿಸುತ್ತಿದ್ದರು.
ಕ್ರಮೇಣ ನಮ್ಮಿಬ್ಬರಲ್ಲೂ ಅನುರಾಗ ಮೊಳೆಯಿತು. 3-4 ತಿಂಗಳು ಕಳೆದ ನಂತರ ನಾನು ಧೈರ್ಯ ಮಾಡಿ ಅಮ್ಮನಿಗೆ ಹೇಳಿದೆ, “ಅಮ್ಮಾ, ನಾನು ದೀಪಕ್‌ರನ್ನು ಪ್ರೇಮಿಸುತ್ತೇನೆ. ಅವರನ್ನು ಮದುವೆ ಮಾಡಿಕೊಳ್ಳುತ್ತೇನೆ.”
“ಒಬ್ಬ ಸಂಗೀತಗಾರನನ್ನು ಮದುವೆಯಾಗ್ತೀಯಾ ಅಂಜಲಿ? ನಿನಗೇನು ಬಂತು ಕೇಡುಗಾಲ? ಅವನಿಗೆ ಸಂಬಳ ಎಷ್ಟು ಬರುತ್ತೆ ಅಂದ್ಕೊಂಡಿದ್ದೀಯ? ಅವನು ಬೇಜವಾಬ್ದಾರಿ ಮನುಷ್ಯ. ಬದುಕೆಲ್ಲ ಒಂದೊಂದು ಪೈಸೆಗೂ ಲೆಕ್ಕ ಹಾಕ್ತಾ ಕಾಲ ಕಳೀಬೇಕು,” ಅಮ್ಮ ಬುದ್ಧಿ ಹೇಳಿದರು.
“ಅಮ್ಮಾ, ದೀಪಕ್ ನನ್ನ ಜೊತೆಗಾರರಾದರೆ, ನಾನು ಗುಡಿಸಲಿನಲ್ಲೇ ಸುಖವಾಗಿ ಇರ್ತೀನಿ,” ನಾನು ಪ್ರೇಮದ ಅಮಲಿನಲ್ಲಿ ತೇಲಾಡುತ್ತಿದ್ದೆ.
ಗುಡಿಸಲಿನಲ್ಲಿ ಅಲ್ಲವಾದರೂ ನಾವು ಒಂದು ಸಣ್ಣ ವಠಾರದಲ್ಲಿ ನಮ್ಮ ವೈವಾಹಿಕ ಜೀವನ ಪ್ರಾರಂಭಿಸಿದೆವು. ನಾವಿಬ್ಬರೂ ಚಕೋರ ಪಕ್ಷಿಗಳಂತೆ ಒಬ್ಬರನ್ನೊಬ್ಬರು ಬಿಟ್ಟು ಅಗಲುತ್ತಿರಲಿಲ್ಲ. ನಮ್ಮ ಬದುಕಿನಲ್ಲಿ ಸಂತೋಷದ ಸಾಗರ ಉಕ್ಕಿ ಬರುತ್ತಿತ್ತು.
ನಾವು ಪ್ರತಿದಿನ ಲಾಲ್‌ಬಾಗ್ ಸುತ್ತಿಕೊಂಡು ಬರುತ್ತಿದ್ದೆವು. ರಾಗಿ ಗುಡ್ಡದ ಬಂಡೆಯನ್ನೇರಿ ಕುಳಿತು ರಂಗುರಂಗಿನ, ವೈಭವದ ಕನಸು ಕಾಣುತ್ತಿದ್ದೆವು.
ಜಯನಗರದ ದೊಡ್ಡ ದೊಡ್ಡ ಬಂಗಲೆಗಳನ್ನು ತೋರಿಸುತ್ತ ದೀಪಕ್ ಒಂದು ದಿನ ಹೇಳಿದರು, “ಅಂಜಲಿ, ಒಂದು ದಿನ ನಾವು ಇಂಥ ಬಂಗಲೆಗಳಲ್ಲಿ ವಾಸಿಸುತ್ತೇವೆ. ಮನೆ ಮುಂದೆ ದೊಡ್ಡ ವಿದೇಶೀ ಕಾರು ನಿಂತಿರುತ್ತೆ. ಪ್ರತಿದಿನ ಪಂಚತಾರಾ ಹೋಟಲುಗಳಲ್ಲೇ ಊಟ ಮಾಡೋಣ.”
“ಅದಂತೂ ಆ ಮೇಲಿನ ವಿಷಯ. ಈಗ ಕಾರದ ಕಡಲೆಬೀಜವನ್ನಾದ್ರೂ ಕೊಡಿಸಿ. ತುಂಬಾ ಹಸಿವಾಗ್ತಿದೆ.”
“ನಮಗೆ ಇಬ್ಬರು ಮಕ್ಕಳಾದರೆ ಸಾಕು. ನಾನು ಅವರ ಹೆಸರನ್ನೂ ಹುಡುಕಿದ್ದೀನಿ. ವಿಕ್ರಮ್, ಮಮತಾ ಹೇಗಿದೆ? ಪ್ರೀತಿಯಿಂದ ವಿಕ್ಕಿ, ಗುಡ್ಡಿ ಅಂತ ಕರೋಣ. ಮಗನನ್ನು ನಾನು ಸೈಂಟಿಸ್ಟ್ ಮಾಡ್ತೀನಿ, ಮಗಳು ಡಾಕ್ಟರ್ ಆಗ್ತಾಳೆ.”
“ಸರಿಯಪ್ಪಾ, ಒಳ್ಳೇ ಕನಸೇ ಕಾಣ್ತಿದ್ದೀರಿ. ಈಗ ಎದ್ದೇಳಿ. ರಾತ್ರಿಯಾಯ್ತು, ಮನೆಗೆ ಹೋಗೋಣ್ವಾ?”
ದೀಪಕ್ ಮೃದುವಾಗಿ ನನ್ನ ಹಣೆಗೆ ಮುತ್ತಿಟ್ಟರು, “ಅಂಜಲಿ, ನಾನು ನಿನ್ನ ಜೀವನವನ್ನು ಸುಖ ಸಂತೋಷಗಳಿಂದ ತುಂಬಿಬಿಡುತ್ತೇನೆ. ನೀನು ಹೊರಲಾಗದಷ್ಟು ಒಡವೆ ಮಾಡಿಸ್ತೀನಿ,” ಅವರ ಭಾವುಕತೆ ತುಂಬಿದ ಮಾತು ಕೇಳಿ ನಾನು ಕೋಪದಿಂದ ಹೇಳಿದೆ, “ಮನಸ್ಸಿನಲ್ಲೇ ಮಂಡಿಗೆ ಮೆಲ್ಲಬೇಡಿ. ಎದ್ದು ಏನಾದರೂ ಕೆಲಸ ನೋಡಿ.”
“ಅಂದರೆ?”
“ಪಕ್ಕದ ಮನೆಯಾಕೆ ಹೇಳ್ತಿದ್ದರು. ಯಾರೋ ಸರಾಫ್ ಅಂಗಡಿಯವರ ಮಗನ ಹುಟ್ಟುಹಬ್ಬದಲ್ಲಿ 3-4 ಹಾಡು ಹೇಳಿ, ಬಂದವರಿಗೆ ಮನರಂಜನೆ ನೀಡಿದರೆ ಕೈತುಂಬ ದುಡ್ಡು ಕೊಡ್ತಾರಂತೆ.”
“ಹೌದು, ನನಗೂ ಹೇಳಿದ್ರು.”
“ಹಾಗಾದ್ರೆ ಯಾಕೆ ಹೋಗಿ ನೋಡಬಾರದು?”
ಒಂದು ರಾತ್ರಿ ತಡವಾಗಿ ಬಂದ ದೀಪಕ್ ನನ್ನನ್ನೆತ್ತಿ ಗಿರ್ರನೆ ತಿರುಗಾಡಿಸಿ ಸಂತೋಷದಿಂದ ಹಾಡಿದರು, “ನಮ್ಮ ಭಾಗ್ಯದ ಬಾಗಿಲು ತೆರೆಯಿತು….”
“ಯಾವ ಭಾಗ್ಯದ ಬಾಗಿಲು ತೆರೆಯಿತು? ಹೂತಿಟ್ಟ ನಿಧಿ ಏನಾದ್ರೂ ಸಿಕ್ತಾ?”
“ಹಾಗೇ ತಿಳ್ಕೋ, ನನ್ನ ಚಿನ್ನಾರಿ! ನಾನು ಕಾದು ಕುಳಿತಿದ್ದ ಸುವರ್ಣಾವಕಾಶ ಇದೀಗ ಬಂದಿದೆ. ಇವತ್ತು ಪಾರ್ಟಿಗೆ ಚಲನಚಿತ್ರ ನಿರ್ಮಾಪಕ ಚಂದ್ರಯ್ಯ ನಾಯ್ಡು ಬಂದಿದ್ರು. ಅವರಿಗೆ ನನ್ನ ಹಾಡು ತುಂಬ ಇಷ್ಟವಾಯಿತು. ತಕ್ಷಣ ಒಂದು ಸಾವಿರ ರೂಪಾಯಿ ಮುಂಗಡ ಕೊಟ್ಟು, ಅವರ ಮುಂದಿನ ಚಿತ್ರಕ್ಕೆ ನನ್ನನ್ನು ಸಂಗೀತಗಾರನೆಂದು ಬುಕ್ ಮಾಡಿದ್ದಾರೆ.”
”ನೀವು ಸಿನಿಮಾ ಕೆಲಸ ಮಾಡ್ತೀರಾ?”
“ಅದಕ್ಕೇನೀಗ? ಆಕಾಶವಾಣಿಯಲ್ಲಿ ಕೆಲಸ ಮಾಡಿದಂತೆ ಸಿನಿಮಾದಲ್ಲೂ ಮಾಡೋಣ.”
“ಆದರೆ ಚಲನಚಿತ್ರ ಜಗತ್ತಿನ ಬಗ್ಗೆ ಏನೆಲ್ಲ ಕೇಳ್ತಿರ್ತೀವಲ್ಲ….”
“ಅರೆ, ನಮ್ಮ ಕೆಲಸ ನಾವು ಮಾಡಿಕೊಂಡಿದ್ರೆ, ಯಾರ ಗಂಟೇನು ಹೋಯ್ತು ಬಿಡು.”
ಬೆಂಗಳೂರಿನ 7-8 ಚಿತ್ರಮಂದಿರಗಳಲ್ಲಿ ದೀಪಕ್‌ರ ಮೊದಲ ಸಿನಿಮಾ ಬಿಡುಗಡೆಯಾಯ್ತು. ಮೊದಲನೆಯ ದಿನದ ಪ್ರೀಮಿಯರ್ ಶೋಗೆ ನಾವು ಹೋಗಿದ್ದೆವು. ಮಧ್ಯಾಂತರದಲ್ಲಿ ವೀಕ್ಷಕರು ದೀಪಕ್‌ರನ್ನು ಮುತ್ತಿದರು.
“ಎಂಥ ಫೆಂಟಾಸ್ಟಿಕ್ ಸಂಗೀತ ಕೊಟ್ಟಿದ್ದೀರಿ ಸಾರ್! ಜನರಂತೂ ಎದ್ದೆದ್ದು ಕುಣೀತಿದ್ರು. ಈ ಸಿನಿಮಾ ಸಂಗೀತದಿಂದಾಗಿಯೇ ಹಿಟ್ ಆಗುತ್ತೆ. ನಿಮ್ಮ ಅದೃಷ್ಟ ಖುಲಾಯಿಸ್ತು ಬಿಡಿ.”
ನಮ್ಮೆದುರು ಒಬ್ಬ ಮಹಿಳೆ ನಿಂತಿದ್ದಳು. ಗೌರವರ್ಣ, ದಷ್ಟಪುಷ್ಟ ಶರೀರದ ಅವಳು ದೀಪಕ್‌ರನ್ನು ತಿಂದುಬಿಡುವಂತೆ ಹಸಿದ ಕಣ್ಣುಗಳಿಂದ ದುರುಗುಟ್ಟಿ ನೋಡುತ್ತಿದ್ದಳು.
“ದೀಪಕ್, ಚಿತ್ರರಂಗದ ಸುಪ್ರಸಿದ್ಧ ಗಾಯಕಿ ಸಂಗೀತಾರನ್ನು ಭೇಟಿ ಮಾಡಿ,” ಚಂದ್ರಯ್ಯ ಆಕೆಯನ್ನು ಪರಿಚಯಿಸಿದರು.
“ನಿಮ್ಮ ಸಂಗೀತ ಬಹಳ ಇಷ್ಟವಾಯಿತು. ಯಾವಾಗ್ಲಾದರೂ ಮನೆ ಕಡೆ ಬನ್ನಿ. ನಿಧಾನವಾಗಿ ಮಾತಾಡೋಣ.” ಸಂಗೀತಾ ನಗುನಗುತ್ತಾ ಹೇಳಿದಳು. ಅವಳು ಹೊರಟು ಹೋದ ಮೇಲೆ ಚಂದ್ರಯ್ಯ ಗಟ್ಟಿಯಾಗಿ ನಕ್ಕರು. ದೀಪಕ್‌ರ ಬೆನ್ನ ಮೇಲೆ ಜೋರಾಗಿ ಹೊಡೆಯುತ್ತಾ, “ಏನ್ಸಾರ್! ಒಮ್ಮೆಗೇ ಹುಲಿಯನ್ನೇ ಬಲೆಗೆ ಹಾಕ್ಕೊಂಡ್ಬಿಟ್ರಿ. ಸಂಗೀತಾ ದೇವಿಯ ಕೃಪಾದೃಷ್ಟಿ ಬಿತ್ತೆಂದರೆ, ನಿಮ್ಮ ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತೂಂತ್ಲೇ ಲೆಕ್ಕ. ಅವರ ಗುಂಪಿನಲ್ಲಿ ಸೇರಿಕೊಂಡರೆ ಚಿಟಕಿ ಹೊಡೆಯುವುದರೊಳಗೆ 10-12 ಸಿನಿಮಾ ಕೈ ಸೇರುತ್ತವೆ.”
ಈಗ ನಮ್ಮ ಹತ್ತಿರ ಬಂಗಲೆ, ಕಾರೂ ಇತ್ತು. ಇಬ್ಬರು ಮುದ್ದಾದ ಮಕ್ಕಳೂ ಹುಟ್ಟಿದ್ದರು. ಆದರೆ ಮೊದಲಿನ ಆತ್ಮೀಯತೆ ಕಣ್ಮರೆಯಾಗಿತ್ತು. ದೀಪಕ್‌ರದೇ ಬೇರೆಯಾದ ಸಂಗೀತದ ಕೋಣೆ ಇತ್ತು. ಅಲ್ಲಿ ಅವರನ್ನು ಮಿತ್ರಮಂಡಳಿಯರು ಯಾವಾಗಲೂ ಮುತ್ತಿಕೊಂಡಿರುತ್ತಿದ್ದರು.
“ಕಾಫಿ, ಟೀ ಕೊಡಬೇಡಿ. ಸಂಗೀತದ ಜೊತೆಗಾರ ಸುರೆ. ನಮಗೆ ಅದನ್ನೇ ಕುಡಿಸಿ,” ಎಂದು ಒತ್ತಾಯಿಸುತ್ತಿದ್ದರು.
ದೀಪಕ್ ಮತ್ತು ಸಂಗೀತಾರ ಬಗ್ಗೆ ಪತ್ರಿಕೆಗಳಲ್ಲಿ ಗಾಳಿ ಸುದ್ದಿಗಳನ್ನು ಓದಿದಾಗ ನನ್ನ ತಲೆ ಸಿಡಿದು ಹೋಗುತ್ತಿತ್ತು. ಹೊಟ್ಟೆ ಉರಿಯಿಂದ ದೀಪಕ್‌ರನ್ನು, “ಇದೆಲ್ಲ ಏನ್ರೀ?” ಎಂದು ಕೇಳುತ್ತಿದ್ದೆ.
“ಸಿನಿಮಾ ಪ್ರಪಂಚ ಅಂದ್ರೆ ಹಾಗೆ…. ಎಷ್ಟೇ ಎಚ್ಚರಿಕೆಯಿಂದ ಇದ್ದರೂ, ಕೊಚ್ಚೆ ಮೈ ಮೇಲೆ ಎಗರಿಬಿಡುತ್ತೆ,” ಅವರು ನಗುತ್ತಾ ಉತ್ತರಿಸುತ್ತಿದ್ದರು.
ಒಂದು ದಿನ ನಾನು ಅವರ ಎದೆಗೊರಗಿ, ನನ್ನ ತೋಳುಗಳಿಂದ ಅವರ ಕತ್ತನ್ನು ಬಳಸಿ ಒಂದು ಬೇಡಿಕೆಯನ್ನು ಮುಂದಿಟ್ಟೆ, “ನೀವು ಚಿತ್ರ ಜಗತ್ತನ್ನು ಏಕೆ ತೊರೆದು ಬರಬಾರದು?”
“ಹುಚ್ಚು ಹಿಡೀತೇನು? ಚಿತ್ರ ಜಗತ್ತು ಬಿಟ್ಟು ಬಂದರೆ ಮತ್ತೆ ಆಕಾಶವಾಣಿ ಸೇರಿ, ಬರೋ ನಾಲ್ಕು ಕಾಸಿನಲ್ಲಿ ಸಂಸಾರ ನಡೆಸಲೇನು? ಮತ್ತೆ ವಠಾರದ ಮನೆಯಲ್ಲಿ ಬದುಕಬೇಕೇ? ಅಂಜಲಿ, ನನಗೂ ಕೆಲವು ಆಸೆ, ಆಕಾಂಕ್ಷೆಗಳಿವೆ, ಕನಸುಗಳಿವೆ ಅನ್ನೋದನ್ನ ನೀನ್ಯಾಕೆ ಅರ್ಥ ಮಾಡಿಕೊಳ್ಳೋದಿಲ್ಲ.. ಚಿಕ್ಕಂದಿನಿಂದಲೂ ಎರಡು ಹೊತ್ತಿನ ಊಟ ತಿಂಡಿಗೂ ಪರದಾಡಬೇಕಾಗಿತ್ತು. ಈಗ ಸಿಕ್ಕಿದ ಅವಕಾಶ ಬಿಟ್ಟರಾಗುತ್ಯೇ? ಎಲ್ಲರ ಕಣ್ಣು ಕುಕ್ಕುವಂತೆ ಬದುಕಿ ತೋರಿಸಬೇಕು.”
“ಮಹಾತ್ವಾಕಾಂಕ್ಷೆ ಹೊಂದುವುದು ಬಹಳ ಒಳ್ಳೆಯದು. ಆದರೆ ಇತ್ತೀಚೆಗೆ ನಿಮಗೆ ನಮ್ಮೊಡನೆ ಕಳೆಯಲು ಕಿಂಚಿತ್ ಸಮಯ ಇಲ್ಲ. ನಿಮ್ಮ ಜೊತೆ ನಾಲ್ಕು ಮಾತಾಡ್ಬೇಕೂಂದ್ರೂ ನಾನು ಎಷ್ಟೋ ದಿನ ಕಾಯ್ಬೇಕಾಗುತ್ತೆ.”
ದೀಪಕ್ ನನ್ನನ್ನು ತಮ್ಮ ತೋಳುಗಳಿಂದ ಬಳಸಿ ಹಿಡಿದು, “ನಾನು ಯಾರಿಗೋಸ್ಕರ ಇಷ್ಟು ಕಷ್ಟಪಡ್ತಿದ್ದೀನಿ ಅಂತ ಅರ್ಥ ಮಾಡ್ಕೋ ಅಂಜಲಿ. ಯಾರಿಗಾಗಿ ಸಂಪಾದಿಸ್ತಿದ್ದೀನಿ ಹೇಳು? ನಿನಗೋಸ್ಕರ, ನಿನ್ನ ಮಕ್ಕಳಿಗೋಸ್ಕರ ಅಲ್ವೇನು?” ಎಂದರು.
“ನಮಗೆ ಹೆಚ್ಚು ದುಡ್ಡೇನೂ ಬೇಡ. ನಮಗೆ ನಿಮ್ಮ ಪ್ರೀತಿ ಬೇಕು.”
“ನನ್ನ ಪ್ರೀತೀನಾ? ಅದು ಎಂದೆಂದೂ ನಿನ್ನದೇ ಅಲ್ವೇನೆ ಹುಚ್ಚಿ!” ಅವರ ಬಾಹು ಬಂಧನದಲ್ಲಿ ನಾನು ನಲುಗಿದೆ. ಅಂದು ವಿಕ್ಕಿಯ ಹುಟ್ಟುಹಬ್ಬ. ಅಪ್ಪ ಬಂದ ನಂತರವೇ ಕೇಕ್ ಕತ್ತರಿಸುವುದಾಗಿ ವಿಕ್ಕಿ ಒಂದೇ ಹಠಹಿಡಿದಿದ್ದ.
“ವಿಕ್ಕಿ, ಹಠ ಮಾಡಬೇಡ. ನಿಮ್ಮ ಅಪ್ಪ ಯಾವುದೋ ಕೆಲಸದಲ್ಲಿರಬೇಕು,” ನಾನು ಸಮಾಧಾನಪಡಿಸಿದೆ.
ವಿಕ್ಕಿ ಮುಖ ತಿರುಗಿಸಿಕೊಂಡ. ಅವನಿಗೆ ಅಳುವೇ ಬಂದಿತು. ಇದರಿಂದ ಪಾರ್ಟಿಯ ಸಂಭ್ರಮವೆಲ್ಲ ಹಾಳಾಯಿತು.
ದೀಪಕ್ ಮನೆಗೆ ಬಂದಾಗ ನಾನು ಕೋಪದಿಂದ, “ಇದು ಮನೆಗೆ ಬರೋ ಹೊತ್ತೇನ್ರಿ? ಇವತ್ತು ವಿಕ್ಕಿ ಹುಟ್ಟಿದ ಹಬ್ಬ ಅನ್ನೋದಾದ್ರೂ ನೆನಪಿದ್ಯಾ? ಪಾಪಾ! ಮಗು ಇಷ್ಟೊತ್ತು ನಿಮ್ಮ ದಾರಿಯನ್ನೇ ನೋಡ್ತಿದ್ದ,” ಎಂದು ರೇಗಿದೆ.
“ಒಂದು ಹಾಡಿನ ರೆಕಾರ್ಡಿಂಗ್ ಇತ್ತು,” ದೀಪಕ್ ಸಬೂಬು ಹೇಳಿ, ತಕ್ಷಣ ಮಗನಿಗೆ ಉಡುಗೊರೆ ತರಲು ಹೋದರು. ಸ್ವಲ್ಪ ಹೊತ್ತಿನ ನಂತರ ಹಿಂದಿರುಗಿ ಬಂದು, ವಿಕ್ಕಿಯನ್ನು ಎಬ್ಬಿಸಿ, ಎತ್ತಿ ಮಡಿಲಲಿಟ್ಟುಕೊಂಡು ಮುದ್ದಾಡುತ್ತಾ, “ತಪ್ಪಾಯಿತು ಚಿನ್ನ. ನಾನು ನಿನಗೋಸ್ಕರ ಕೆಂಪು ಸೈಕಲ್ ತರೋಣಾಂತ ಪೇಟೆಗೆ ಹೋಗಿದ್ದೆ. ಅದಕ್ಕೇ ತಡವಾಯಿತು,” ಎಂದರು.
ವಿಕ್ಕಿ ಹರ್ಷದಿಂದ ಕುಣಿದಾಡಿದ. ಹೊಸ ಸೈಕಲ್ ಏರಿ ಮನೆಯೆಲ್ಲ ಸುತ್ತು ಹಾಕಿದ.
ಒಂದು ದಿನ ಸಂಗೀತಾ ಮನೆಗೆ ಬಂದಳು. ಯಾವ ಪೀಠಿಕೆಯೂ ಇಲ್ಲದೆ ನೇರವಾಗಿ, “ನಾನೂ ದೀಪಕ್ ಪರಸ್ಪರ ಪ್ರೀತಿಸುತ್ತಿದ್ದೀವಿ,” ಎಂದಳು.
“ಏನೆಂದಿರಿ?” ನನ್ನ ಉಸಿರೇ ಉಡುಗಿದಂತಾಗಿ, ಅವಳ ಮುಖವನ್ನೇ ದಿಟ್ಟಿಸಿದೆ.
“ನಾವಿಬ್ಬರೂ ಮದುವೆಯಾಗಬೇಕೆಂದಿದ್ದೇವೆ. ನೀನು ಅವರಿಗೆ ವಿಚ್ಛೇದನ ಕೊಡಬೇಕು. ನಾನು ಅದಕ್ಕೆ ಹಣ ಕೊಡಲು ಸಿದ್ಧ. 5 ಲಕ್ಷ…. 10 ಲಕ್ಷ….”
ನಾನು ಏಟು ತಿಂದ ಹಾವಿನಂತೆ ಭುಸುಗುಟ್ಟುತ್ತಾ, “ನಾನು ಗುಂಡನನ್ನು ಮಾರೋದಿಲ್ಲ. ನೀನು ಬೀದಿ ನಾಯಿಯಂಥ ಹೆಣ್ಣು, ಮಾನ ಮರ್ಯಾದೆ ಬಿಟ್ಟೋಳು. ಇಲ್ಲಿಂದ ತೊಲಗಿ ಹೋಗು,” ಎಂದು ಕಿರುಚಿದೆ. ಚೆನ್ನಾಗಿ ಅವಮಾನ ಮಾಡಿ ಅವಳನ್ನು ಮನೆಯಿಂದ ಓಡಿಸಿದೆ.
ರಾತ್ರಿ ದೀಪಕ್ ಮನೆಗೆ ಬಂದಾಗ ಚೆನ್ನಾಗಿ ತರಾಟೆಗೆ ತೆಗೆದುಕೊಂಡೆ. ಅವರೂ ಸಿಟ್ಟಿನಿಂದ ರೇಗಾಡುತ್ತಾ, “ನೀನು ಸಂಗೀತಾಗೆ ಏನಂತ ಹೇಳಿದೆ? ಅಂಜಲಿ, ನಿನಗೆ ಯಾವಾಗ ಬುದ್ಧಿ ಬರುತ್ತೆ? ವ್ಯವಹಾರ ಜ್ಞಾನ ಯಾವಾಗ ಕಲೀತೀಯಾ? ಸಂಗೀತಾನ ಅವಮಾನಗೊಳಿಸುವುದೆಂದರೆ ನೀರಲ್ಲಿದ್ದುಕೊಂಡು ಮೊಸಳೆ ಜೊತೆ ವೈರ ಕಟ್ಟಿಕೊಂಡಂತೆ. ನಮ್ಮನ್ನು ಸಂಪೂರ್ಣವಾಗಿ ಹಾಳು ಮಾಡಿಬಿಡುವ ಶಕ್ತಿ ಅವಳಿಗಿದೆ,” ಎಂದರು.
“ಅಂದರೆ ನಾನೇನು ಮಾಡ್ಬೇಕಿತ್ತು? ಅವ್ಳಿಗೆ ನನ್ನ ಗಂಡನನ್ನು ಉಡುಗೊರೆಯಾಗಿ ಕೊಡಬೇಕಿತ್ತೆ? ಮದುವೆ ಆಗಿ ಮಕ್ಕಳ ತಂದೆ ಆಗಿರೋ ನಿಮ್ಮ ಹಿಂದೆ ಬಿದ್ದಿದ್ದಾಳಲ್ಲಾ, ಪ್ರಪಂಚದ ಗಂಡಸರೆಲ್ಲ ಸತ್ತು ಹೋಗಿದ್ದಾರೇನು?”
“ಅಂಜಲಿ, ನಾನು ನೋಡ್ತಾನೇ ಇದ್ದೀನಿ. ನೀನು ಯಾವತ್ತಿಗೂ ನನ್ನನ್ನು ಮುಂದೆ ಬರೋದಿಕ್ಕೇ ಬಿಡೋದಿಲ್ಲ. ಹೆಜ್ಜೆ ಹೆಜ್ಜೆಗೂ ಇಲ್ಲದ ಅಡ್ಡಿ ಉಂಟು ಮಾಡ್ತಿದ್ದೀಯ. ಈ ಕೆಲಸದಲ್ಲಿ ಪ್ರಗತಿ ಸಾಧಿಸಲು ಜನರ ಕೈಕಾಲು ಕಟ್ಟಬೇಕು. ಅವರು ಹೇಳಿದಂತೆ ಕುಣಿಬೇಕು. ಜನರ ಜೊತೆ ಸಂಬಂಧ ಬೆಳೆಸಬೇಕು. ಅವರ ಜೊತೆ ಪ್ರೀತಿಯ ನಾಟಕ ಆಡಬೇಕು.”
“ಹಾಗಾದ್ರೆ ನೀವೇ ಹಾಗೆಲ್ಲ ಮಾಡಿಕೊಳ್ಳಿ. ಜನರ ಕಾಲು ನೆಕ್ಕಿ, ಅವರು ಕುಣಿದಂತೆ ಕುಣಿಯಿರಿ. ನಾನು ಹಾಗೆಲ್ಲ ಮಾಡಲಾರೆ.”
“ಮಾಡಲಾರೆ ಎಂದರೆ ನನಗೂ ನಿನಗೂ ಸರಿ ಬರೋದಿಲ್ಲ,” ದೀಪಕ್ ಅರಚಿದರು.
“ಏನು ಹಾಗೆಂದ್ರೆ?”
“ಅದರ ಅರ್ಥವನ್ನು ತಿಳಿಸಬೇಕೇ? ನಾಟಕವಾಡಬೇಡ. ನಾನು ಮೇಲೆ ಬರುವ ಪ್ರಯತ್ನ ಮಾಡಿದಷ್ಟೂ, ನೀನು ನನ್ನನ್ನು ಪಾತಾಳಕ್ಕೇ ಎಳೀತಿದ್ದೀಯ. ನನ್ನ ಕಲೆ, ನನ್ನ ಖ್ಯಾತಿಯಿಂದ ನಿನಗೆ ಹೊಟ್ಟೆಕಿಚ್ಚು. ನನಗಂತೂ ಸಾಕಾಗ್ಬಿಟ್ಟಿದೆ. ಇನ್ನಿಲ್ಲಿ ಒಂದು ನಿಮಿಷ ಇರೋದಿಲ್ಲ!”
ದೀಪಕ್ ದಾಪುಗಾಲು ಹಾಕುತ್ತಾ ಹೊರಟಾಗ, ವಿಕ್ಕಿ, ಗುಡ್ಡಿ ಇಬ್ಬರೂ ಅವರ ಕಾಲುಗಳನ್ನು ತಮ್ಮ ಪುಟ್ಟ ಪುಟ್ಟ ಕೈಗಳಿಂದ ಹಿಡಿದುಕೊಂಡು, ಅವರನ್ನು ತಡೆಗಟ್ಟಿದರು. “ಅಪ್ಪಾ, ಅಪ್ಪಾ ಎಲ್ಲಿ ಹೋಗ್ತಿದ್ದೀರಿ? ನಮ್ಮನ್ನು ಬಿಟ್ಟು ಹೋಗ್ಬೇಡಿ,” ಎಂದು ಗೋಗರೆದರು. ಆದರೆ ದೀಪಕ್ ಆ ಪುಟ್ಟ ಕೈಗಳನ್ನು ಕಿತ್ತೊಗೆದು, ವೇಗವಾಗಿ ಹೊರಟುಹೋದರು. ಮುಂದೆ ದೀಪಕ್ ಕೊಡಲು ಬಂದ ಹಣವನ್ನು ಸ್ವೀಕರಿಸಲು ನನ್ನ ಸ್ವಾಭಿಮಾನ ಅಡ್ಡಿ ಮಾಡಿತು. ನಾನು ಮಕ್ಕಳೊಡನೆ ಅಮ್ಮನ ಬಳಿಗೆ ಹೊರಟುಹೋದೆ. ಬದುಕು ದುಸ್ತರವಾಯಿತು. ಒಂದೊಂದಾಗಿ ಒಡವೆಗಳನ್ನೆಲ್ಲ ಮಾರಿದೆ. ವಿಕ್ಕಿ ಹೈಸ್ಕೂಲಿನಲ್ಲಿದ್ದ. ಒಂದು ದಿನ ನನ್ನ ಬಳಿ ಬಂದು ಹೇಳಿದ, “ಅಮ್ಮಾ, ನನಗೆ ಒಂದು ಕೆಲಸ ಸಿಕ್ಕಿದೆ.”
“ಕೆಲಸಾನಾ?”
“ಹೌದು, ಪಕ್ಕದಲ್ಲಿರೋ ಪೆಟ್ರೋಲ್ ಬಂಕ್‌ನಲ್ಲಿ.”
“ವಿಕ್ಕಿ!” ನಾನು ಚೀರಿದೆ, “ನೀನು ಓದು ನಿಲ್ಲಿಸಿ ಕೆಲಸ ಮಾಡಬೇಕಿಲ್ಲ ಕಂದ.”
“ಹಾಗಾದ್ರೆ ಯಾವುದಾದ್ರೂ ಹೋಟಲ್‌ನಲ್ಲಿ ಮಾಣಿ ಆಗ್ತೀನಿ. ರಾತ್ರಿ ಸ್ಕೂಲಿಗೆ ಹೋಗ್ತೀನಿ.”
“ವಿಕ್ಕಿ, ನೀನೆಂದೂ ಕೆಲಸ ಮಾಡಬೇಡಪ್ಪ. ಅಗತ್ಯ ಬಿದ್ರೆ ನಾನೇ ಒಂದು ಕೆಲಸಕ್ಕೆ ಸೇರ್ತೀನಿ. ಇಲ್ಲಿ ಸಾವಿರಾರು ಹೆಂಗಸರು ದುಡಿದು ಮನೆಮಂದಿನೆಲ್ಲ ಸಾಕ್ತಾರೆ. ನೀನು ವಿದ್ಯಾವಂತನಾಗಿ ಒಳ್ಳೆ ಕೆಲಸಕ್ಕೆ ಸೇರಿದಾಗ ನಾನು ಕೆಲಸ ಬಿಟ್ಬಿಡ್ತೀನಿ. ವಿಕ್ಕಿ, ನೀನು ನಿಮ್ಮಮ್ಮನ್ನ ಚೆನ್ನಾಗಿ ನೋಡ್ಕೋತೀಯಲ್ವಾ ಕಂದ?” ವಿಕ್ಕಿ ನನ್ನನ್ನು ಗಾಢವಾಗಿ ಅಪ್ಪಿಕೊಂಡ.
ಸಂಸಾರ ಹೇಗೋ ನಡೆದುಕೊಂಡು ಹೋಗುತ್ತಿತ್ತು. ನನಗೆ ಗುಡ್ಡಿಯ ಬಗ್ಗೆ ಮಾತ್ರ ಚಿಂತೆ. ದೀಪಕ್ ನಮ್ಮನ್ನು ಬಿಟ್ಟು ಹೋದಾಗಿನಿಂದ ಅವಳಿಗೆ ಪ್ರತಿದಿನ ಸಣ್ಣಗೆ ಜ್ವರ ಬರುತ್ತಿತು. ಒಂದು ದಿನ ಡಾಕ್ಟರ್ ಹೇಳಿದರು, “ಮಗು ಅಪ್ಪನನ್ನು ನೆನೆಸಿಕೊಂಡು ಮನಸ್ಸಿನಲ್ಲೇ ಕೊರಗ್ತಿದೆ ಅಂತ ಕಾಣುತ್ತೆ.”
ಆದರೆ ಈ ಕಾಯಿಲೆಗೆ ನನ್ನ ಬಳಿ ಔಷಧಿ ಇರಲಿಲ್ಲ. ಒಂದು ದಿನ ನಾನು ವಿಕ್ಕಿಯ ಜೊತೆ ಮನೆಗೆ ಬಂದಾಗ, ಮನೆ ತುಂಬ ಆಟದ ಸಾಮಾನುಗಳನ್ನು ನೋಡಿದೆ.
“ಅರೆ ಗುಡ್ಡಿ….? ಇದೆಲ್ಲ ಎಲ್ಲಿಂದ ಬಂತಮ್ಮಾ?” ನಾನು ಆಶ್ಚರ್ಯದಿಂದ ಕೇಳಿದೆ.
“ಅಮ್ಮಾ…… ಅಮ್ಮಾ!” ಗುಡ್ಡಿ ಸಂತೋಷದಿಂದ ನನ್ನ ಸುತ್ತಲೂ ಕುಣಿದಾಡುತ್ತಾ, “ಅಪ್ಪ ಬಂದಿದ್ರು. ಸಿಂಗಾಪೂರಿನಿಂದ ನನಗೋಸ್ಕರ ಎಷ್ಟೊಂದು ಆಟದ ಸಾಮಾನು ತಂದಿದ್ದಾರೆ ನೋಡು. ಈ ಬೊಂಬೆ ಎಷ್ಟೊಂದು ಚೆನ್ನಾಗಿದೆ ಅಲ್ವಾ? ವಿಕ್ಕೀಗೆ ವಾಕ್‌ಮನ್ ತಂದಿದ್ದಾರೆ,” ಎಂದಳು.
“ಗುಡ್ಡೀ! ನೀನು ಇದೆಲ್ಲಾ ಯಾಕೆ ತಗೊಂಡೆ?” ವಿಕ್ಕಿ ಗರ್ಜಿಸಿದ. ಗುಡ್ಡಿ ಹೆದರಿ ನಡುಗಿದಳು.
“ನಮಗೆ ಯಾರ ದಾನ, ಭಿಕ್ಷೇಗಳೂ ಬೇಕಾಗಿಲ್ಲ. ಯಾರೂ ನಮಗೆ ದಯೆ ತೋರಿಸಬೇಕಾಗಿಲ್ಲ. ಅಮ್ಮಾ, ಈ ಸಾಮಾನೆಲ್ಲ ಈಗ್ಲೇ ವಾಪಸ್ಸು ಕಳಿಸಿಕೊಟ್ಬಿಡು. ಇಲ್ಲಾಂದ್ರೆ ಇವನ್ನೆಲ್ಲಾ ಮೋರಿಗೆ ಎಸೆದ್ಬಿಡ್ತೀನಿ!” ವಿಕ್ಕಿ ಸಿಟ್ಟಿನಿಂದ ಕೂಗಾಡಿದ. ಗುಡ್ಡಿ ಬಿಕ್ಕಿಸಿ ಅಳತೊಡಗಿದಳು. ನಾನು ಸ್ತಬ್ಧಳಾಗಿ ವಿಕ್ಕಿಯನ್ನೇ ನೋಡಿದೆ. ಅವನ ಮುಖ ಕೋಪದಿಂದ ಕಪ್ಪಿಟ್ಟಿತ್ತು. ಕಣ್ಣುಗಳು ಉರಿಯುವ ಕೆಂಡಗಳಾಗಿದ್ದವು. ಮುಷ್ಟಿಗಳನ್ನು ಬಿಗಿಹಿಡಿದಿದ್ದ.
ನಾನೇ ಈ ಜ್ವಾಲೆಯನ್ನು ಹುಟ್ಟಿಸಿದ್ದೇನೆ. ಬೆಂಕಿಗೆ ತೈಲ ಎರಚಿ, ವಿಶ್ವವನ್ನೇ ಆಹುತಿ ತೆಗೆದುಕೊಳ್ಳುವ ಕಿಚ್ಚೆಬ್ಬಿಸಿದ್ದೇನೆ ಎನಿಸಿತು ನನಗೆ.ವಿಕ್ಕಿ ಗುಡ್ಡಿಗೆ ತಿಳಿಸಿ ಹೇಳುತ್ತಿದ್ದ, “ಗುಡ್ಡಿ, ನಿನಗೆ ಅಮ್ಮನ ಬೋಳು ಕೈ ಕಾಣಿಸ್ತಿಲ್ವಾ? ಅಮ್ಮನ ತಲೆ ಕೂದಲು ದಿಢೀರನೆ ಬೆಳ್ಳಗಾಗಿದ್ದು ನೋಡಿಲ್ವಾ? ಅಮ್ಮನ ಮುಖದ ಮೇಲೆ ಒಂದೇ ಒಂದು ನಗು ನೋಡಿ ಯಾವ ಕಾಲವಾಯ್ತು? ಇದಕ್ಕೆಲ್ಲ ಅಪ್ಪ ಅಮ್ಮನಿಗೆ ಮಾಡಿದ ಅನ್ಯಾಯವೇ ಕಾರಣ. ಇಂಥ ಅಪ್ಪನನ್ನು ನಾವು ಖಂಡಿತ ದ್ವೇಷಿಸಬೇಕು.”
ವರ್ಷಗಳು ಉರುಳಿದವು. ಗುಡ್ಡಿಯ ಮದುವೆಯನ್ನು ವಿಜೃಂಭಣೆಯಿಂದ ನಡೆಸಿದ್ದೆವು. ಅವಳು ಮಧುಚಂದ್ರಕ್ಕೆ ಹೊರಟು ನಿಂತಿದ್ದಾಳೆ. ಮಂಗಳವಾದ್ಯಗಳ ಮಧುರ ಸಂಗೀತ ಮನೆಯನ್ನು ಆವರಿಸಿದೆ. ನಾನು ಕಿಟಕಿಯಿಂದ ಹೊರಗೆ ಇಣುಕಿ ನೋಡಿದೆ. ಚಿರಪರಿಚಿತವಾದ ಕಪ್ಪು ಕಾರು ನಿಂತಿರುವುದು ಕಾಣಿಸಿತು. ದೀಪಕ್ ಸಿಗರೇಟು ಸೇದುತ್ತಾ ಕಾರಿಗೆ ಒರಗಿ ನಿಂತಿದ್ದರು.
ಅವರನ್ನು ನೋಡಿ ನನಗೆ ಒಂದು ರೀತಿಯ ಆನಂದವಾಯಿತು. ಆಳವಾದ ಪ್ರೀತಿ ಇಷ್ಟೊಂದು ತೀವ್ರವಾದ ದ್ವೇಷವಾಗಿ ಬದಲಾಯಿಸಬೇಕೇ? ದೀಪಕ್ ನನ್ನನ್ನು ಪದೇ ಪದೇ ನೋಯಿಸುತ್ತಿದ್ದರು. ನಾನೂ ಅವರು ಅಷ್ಟೇ ದುಃಖಿಸುವಂತೆ ಮಾಡಿದ್ದೆ. ಅವರು ನನಗೆ ಸೇರಬೇಕಾದ ಪ್ರೀತಿಯನ್ನು ಬೇರೊಬ್ಬ ಹೆಂಗಸಿಗೆ ಧಾರೆ ಎರೆದರೆ, ನಾನು ಅವರು ಮತ್ತು ಅವರ ಮಕ್ಕಳ ನಡುವೆ ದೊಡ್ಡ ಕೋಟೆಯನ್ನೇ ನಿರ್ಮಿಸಿದ್ದೆ.
ಇದ್ದಕ್ಕಿದ್ದಂತೆ ನನಗೆ ಏನೋ ಹೊಳೆಯಿತು. ನಾನು ಗುಡ್ಡಿಯನ್ನು ಕರೆದೆ, “ಮಗೂ, ಹೊರಗೆ ನಿಮ್ಮ ತಂದೆ ಬಂದು ನಿಂತಿದ್ದಾರೆ. ನೀನು ನಿನ್ನ ಗಂಡನ ಜೊತೆ ಹೋಗಿ ಅವರ ಆಶೀರ್ವಾದ ತಗೋಮ್ಮಾ…”
ಗುಡ್ಡಿ ಹೊರಗೆ ಓಡಿದಳು. ತನ್ನ ತಂದೆಯನ್ನು ಅಪ್ಪಿಕೊಂಡು ನೀರವವಾಗಿ ರೋದಿಸಿದಳು. ದೀಪಕ್ ಕಣ್ಣುಗಳಿಂದಲೂ ಕಣ್ಣೀರು ಹರಿಯುತ್ತಿತ್ತು.
ನಾನು ಮೌನವಾಗಿ ನಿಂತು ಈ ದೃಶ್ಯವನ್ನು ನೋಡುತ್ತಿದ್ದೆ. ನನ್ನ ಪಕ್ಕದಲ್ಲಿ ವಿಕ್ಕಿ ಪ್ರತಿಮೆಯಂತೆ ಅಚಲನಾಗಿ ನಿಂತಿದ್ದ. ಆದರೆ ಅವನ ಕಣ್ಣೆವೆಗಳೂ ಒದ್ದೆಯಾಗಿದ್ದವು.