ಮಳೆಗಾಲದ ದಿನಗಳಲ್ಲಿ ಮನೆಯಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತಾ, ಬಜ್ಜಿ ಪಕೋಡ ಸವಿಯುತ್ತಾ, ಪುಸ್ತಕ ಓದಿ ಟೈಂಪಾಸ್ ಮಾಡುವುದು ಎಷ್ಟು ಆನಂದದಾಯಕಿವೋ, ಹೊರಗೆ ಹೋಗಿ ನೀರಲ್ಲಿ ನೆನೆದು ಬಟ್ಟೆಗಳನ್ನು ಗಲೀಜು ಮಾಡಿಕೊಳ್ಳುವುದು ಅಷ್ಟೇ ಬೇಜಾರಿನ ವಿಷಯವಾಗಿದೆ. ಮಳೆಯಲ್ಲಿ ನೆನೆದು ಹೋಗುತ್ತೇವಲ್ಲ ಎಂದು ಒಳ್ಳೆಯ ಬಟ್ಟೆ ಧರಿಸಲು ಮನಸ್ಸೇ ಬರುವುದಿಲ್ಲ. ತಮ್ಮ ಮೆಚ್ಚಿನ ದುಬಾರಿ ಉಡುಗೆ ಧರಿಸಲಾಗದು ಎಂದು ಬಹಳಷ್ಟು ಜನ ದೂರುತ್ತಾರೆ. ಆದರೆ ಈ ಸೀಸನ್‌ನಲ್ಲಿ ಕೆಲವು ಎಚ್ಚರಿಕೆ ಕ್ರಮಗಳನ್ನು ಕೈಗೊಂಡು, ಎಚ್ಚರಿಕೆಯಿಂದ ಡ್ರೆಸ್ ಆರಿಸಿದರೆ, ಇಂಥ ದೂರುಗಳಿಗೆ ಅವಕಾಶ ಇರುವುದಿಲ್ಲ. ಮಳೆಗಾಲಕ್ಕಾಗಿಯೇ ಉಪಯುಕ್ತ ಎನಿಸುವ ಡ್ರೆಸ್‌ಗಳ ಶಾಪಿಂಗ್ ಮಾಡುವುದು ಲೇಸು. ಬೇಗ ಮುದುಡುವ, ಬಣ್ಣ ಹರಡಿಕೊಳ್ಳುವಂಥ ಬಟ್ಟೆಗಳನ್ನು ಈ ಸೀಸನ್‌ನಲ್ಲಿ ಧರಿಸಬೇಡಿ. ಕೆಲವಾರು ತಿಂಗಳುಗಳಿಂದ ವಾರ್ಡ್ ರೋಬ್‌ನಲ್ಲೇ ಬಿದ್ದಿರುವ, ಹೆಚ್ಚು ಬಳಕೆ ಆಗದ ಉಡುಗೆಗಳನ್ನು ಹೊರತೆಗೆಯಲು ಇದು ಸಕಾಲ.
ಫ್ಲೋರ್ ಪ್ರಿಂಟ್‌ನ ಟೀಶರ್ಟ್, ಕೇಪ್ರಿ, ಜೀನ್ಸ್ ಮುಂತಾದ ಈ ದಿನಗಳಿಗೆ ಸೂಕ್ತ. ನೀವು ಸಿಲ್ಕ್ ಕಾಟನ್‌ಗೆ ಬದಲಾಗಿ ಪಾಲಿಯೆಸ್ಟರ್, ಟೆರಿಕಾಟ್, ನೈಲಾನ್ ಡ್ರೆಸೆಸ್ ಧರಿಬಹುದು. ಈ ಉಡುಗೆಗಳು ರಿಂಕಲ್ ಫ್ರೀ ಆಗಿರುವುದರ ಜೊತೆ, ಒಣಗಿದ ತಕ್ಷಣ ಹಿಂದೆ ಇದ್ದಂಥ ಸ್ಥಿತಿಗೇ ಬೇಗ ಮರಳುತ್ತವೆ. ಇದರಹೊರತಾಗಿ ಮಳೆಗಾಲದಲ್ಲಿ ಬಿಳಿ ಬಟ್ಟೆಗಳನ್ನು ಧರಿಸಲು ಹೋಗಲೇಬೇಡಿ. ಆದ್ದರಿಂದ ಈ ಸೀಸನ್‌ನಲ್ಲಿ ಬ್ರೈಟ್ ಕಲರ್ಸ್ ಸರಿ ಎನಿಸುತ್ತದೆ. ಗ್ರೀನ್, ಪಿಂಕ್, ಬ್ಲೂ, ಆರೆಂಜ್ ಇಂಪ್ರೆಸಿವ್ ಎನಿಸುತ್ತವೆ. ಜೊತೆಗೆ ಭಾರಿ ಎನಿಸುವ ಸಲ್ವಾರ್ ಕಮೀಜ್, ದುಪಟ್ಟಾ, ಕಾಟನ್ ಸೀರೆಗಳು ಇತ್ಯಾದಿಗಳನ್ನು ಮಳೆಗಾಲದಲ್ಲಿ ಧರಿಸದೇ ಇರುವುದೇ ಒಳ್ಳೆಯದು. ಡ್ರೆಸ್ ಜೊತೆಗೆ ಪರ್ಸ್, ಬೆಲ್ಟ್, ಸ್ಯಾಂಡಲ್ ಇತ್ಯಾದಿ ವಾಟರ್ ಪ್ರೂಫ್ ಆಗಿರಬೇಕು. ಈ ಕಾಲದಲ್ಲಿ ನಿಮ್ಮ ಪಾದ, ಚಪ್ಪಲಿಗಳ ಕಡೆ ಹೆಚ್ಚಿನ ಗಮನ ಕೊಡಬೇಕು. ಆಫೀಸ್ ತಲುಪಿದಾಗ ಅಥವಾ ಮನೆಗೆ ಮರಳಿದ ತಕ್ಷಣ ಒದ್ದೆ ಚಪ್ಪಲಿಗಳನ್ನು ಬದಲಾಯಿಸಿ. ಆದ್ದರಿಂದ ಎರಡೂ ಕಡೆ ಒಂದು ಜೊತೆ ಹೆಚ್ಚುವರಿ ಶೂ, ಚಪ್ಪಲಿಗಳು ಇರಲಿ. ಮನೆ ತಲುಪಿದ ಮೇಲೆ ಬೆಚ್ಚಗಿನ ನೀರಿನಿಂದ ಕಾಲು ತೊಳೆಯಿರಿ. ಸೋಪು ಬಳಸಬಹುದು, 5 ನಿಮಿಷ ಮಸಾಜ್ ಮಾಡಿದರೆ ಇನ್ನೂ ಒಳ್ಳೆಯದು. ಪಾದಗಳು ಅಥವಾ ಚಪ್ಪಲಿ ಶೂಗಳು ಒದ್ದೆಯಾಗಿದ್ದರೆ, ಫಂಗಲ್ ಇನ್‌ಫೆಕ್ಷನ್ ತಪ್ಪದು. ಒದ್ದೆ ಬಟ್ಟೆಗಳ ಒಗೆಯುವಿಕೆ ಹಾಗೂ ಅದನ್ನು ಒಣಗಿಸುವುದು ಈ ಕಾಲದ ಕಷ್ಟದ ಕೆಲಸ. ಈ ಕಾಲದಲ್ಲಿ ಬಟ್ಟೆಗಳ ಸರಿಯಾದ ಸಂರಕ್ಷಣೆ ಮಾಡದಿದ್ದರೆ, ಉಡುಪು ಮಾತ್ರವಲ್ಲ, ನಿಮ್ಮ ಆರೋಗ್ಯ ಕೆಡುತ್ತದೆ. ಕೇವಲ ಮಳೆಗಾಲದ ಮೇಲೆ ದೋಷ ಹೊರಿಸಿಸುವುದಾದರೆ ಲಾಭವಿಲ್ಲ, ಒಮ್ಮೊಮ್ಮೆ ನಾವು ಆರಿಸಿದ ಉಡುಗೆಗಳೂ ಸೂಕ್ತ ಆಗಿರುವುದಿಲ್ಲ.
ಬಟ್ಟೆಗಳಿಗೆ ಕೆಸರಿನ ಕಲೆ ಮೆತ್ತಿಕೊಳ್ಳುವುದು ಈ ಮಳೆಗಾಲದ ದೊಡ್ಡ ಸಮಸ್ಯೆ. ಇದರಿಂದ ತಪ್ಪಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ನೆನಪಿಡಿ :
ಮಳೆಯಲ್ಲಿ ಹೊರಗೆ ಹೋಗುವ ಮೊದಲು ರೇನ್ ಕೋಟ್ ಧರಿಸಲೇಬೇಕು ಎಂಬುದನ್ನು ನೆನಪಿಡಿ. ಜೊತೆಗೆ ಮಳೆ ಬರುತ್ತಿರಲಿ ಬಿಡಲಿ, ಹೊರಗೆ ಹೊರಡುವಾಗ ಛತ್ರಿ ಇರಲೇಬೇಕು.
ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ಬಟ್ಟೆ ಒಣಗಲು ಹೆಚ್ಚು ಸಮಯ ಬೇಕು. ಆದ್ದರಿಂದ ಡ್ರೈಯರ್ ಇರುವ ವಾಷಿಂಗ್ ಮೆಷಿನ್‌ನ್ನೇ ಖರೀದಿಸಿ, ಅದರಲ್ಲಿ ಒಣಗಿಸಿ, ನಂತರ ಹೊರಗೆ ಹರಡಬೇಕು. ಒದ್ದೆ ಬಟ್ಟೆ ಧರಿಸುವುದರಿಂದ ಚರ್ಮದ ರೋಗಗಳು, ನ್ಯುಮೋನಿಯಾ, ಟೈಫಾಯ್ಡ್, ಶೀತ, ನೆಗಡಿ, ಕೆಮ್ಮು ಬರುತ್ತವೆ.
ಬಣ್ಣ ಬಿಟ್ಟುಕೊಳ್ಳದ ಬಟ್ಟೆ ಆಗಿದ್ದರೆ, ಕೆಸರಿನ ಕಲೆಗಳ ಮೇಲೆ ಆಲೂ ಬಿಲ್ಲೆ ಕತ್ತರಿಸಿ ಚೆನ್ನಾಗಿ ಉಜ್ಜಬೇಕು. 5 ನಿಮಿಷಗಳ ನಂತರ ತಣ್ಣೀರಿನಲ್ಲಿ ನೆನೆಸಿ, ನಂತರ ಒಗೆಯಬೇಕು.
ಕಲೆ ತೊಲಗಿಸಲು ಉಪ್ಪು ಸಹ ಒಳ್ಳೆಯದು. ಕಲೆ ತಗುಲಿದ ಜಾಗದಲ್ಲಿ ಉಪ್ಪಿನಿಂದ ಉಜ್ಜಬೇಕು.
ಒಂದು ಬಕೆಟ್ ನೀರಿಗೆ ತುಸು ವಿನಿಗರ್ ಬೆರೆಸಿ, ಅದರಲ್ಲಿ ಕಲೆ ತಗಲಿದ ಬಟ್ಟೆಗಳನ್ನು 1-2 ತಾಸು ನೆನೆಸಿ ಒಗೆದರೆ, ಕಲೆಗಳ ಕಾಟ ತಪ್ಪುತ್ತದೆ.
ಕೆಸರು ಮೆತ್ತಿದ ತಕ್ಷಣ ಬೇಗ ಬಟ್ಟೆ ಒಗೆಯುತ್ತೀರಾದರೆ ಅದನ್ನು ಮೊದಲು ಗಂಜಿ ಬೆರೆಸಿದ ನೀರಲ್ಲಿ ನೆನೆಸಬೇಕು. ಒಂದು ತಾಸಿನ ನಂತರ ಸಾದಾ ತಣ್ಣೀರಲ್ಲಿ ಅರ್ಧ ಗಂಟೆ ನೆನೆಸಬೇಕು. ನಂತರ ಸಣ್ಣ ಬ್ರಶ್‌ನಿಂದ ಕಲೆ ಭಾಗವನ್ನು ಚೆನ್ನಾಗಿ ಉಜ್ಜಿದರೆ ಅದು ಬಿಟ್ಟುಹೋಗುತ್ತದೆ.
ಇಂಥ ಕಲೆ ನಿವಾರಿಸಲು ಆ ಭಾಗಕ್ಕೆ ಶೇವಿಂಗ್ ಕ್ರೀಂ ಸವರಿ, ನಂತರ ಬ್ರಶ್ ಮಾಡಬಹುದು.
ಕಲೆ ಹಳೆಯದಾಗಿದ್ದರೆ ಅದನ್ನು ತೊಲಗಿಸಲು ಅಮೋನಿಯಾ ವಾಶ್ ಮಾಡಬೇಕು. 1 ಕಪ್ ಬಿಸಿ ನೀರಿಗೆ 2 ಚಮಚ ಅಮೋನಿಯಾ ಪೌಡರ್ ಹಾಕಿ, ಈ ಮಿಶ್ರಣವನ್ನು ಕಲೆಯ ಭಾಗದ ಮೇಲೆ ಮತ್ತೆ ಮತ್ತೆ ಸವರಿ, ಒಗೆಯಿರಿ.
ಈ ಮಳೆಗಾಲದಲ್ಲಿ ಒಣ ಬಟ್ಟೆಗಳಿಂದಲೂ ಒಮ್ಮೊಮ್ಮೆ ದುರ್ಗಂಧ ಬರುತ್ತದೆ. ಆದ್ದರಿಂದ ನಿಮ್ಮ ವಾರ್ಡ್ ರೋಬ್‌ನಲ್ಲಿ ಕರ್ಪೂರದ ಪೌಡರ್ ಉದುರಿಸಿ. ಅದರ ಮೇಲೆ ಪೇಪರ್ ಹರಡಿ, ಅದರ ಮೇಲೆ ಬಟ್ಟೆ ಇರಿಸಿ.
ಮನೆಗೆ ಬಂದ ತಕ್ಷಣ ನೆನೆದ ಬಟ್ಟೆ ಒಣಗಿಸಬೇಕು. ಆಗದಿದ್ದರೆ ಬಕೆಟ್ ನೀರಿನಲ್ಲಿ ನೆನೆಸಿಡಿ. ಇಲ್ಲದಿದ್ದರೆ ಬಟ್ಟೆಗೆ ಕಪ್ಪು ಕಲೆ ತಗಲುವ ಸಾಧ್ಯತೆಗಳಿವೆ.
– ಎಂ.ಕೆ. ಗೀತಾ