ನಾಗು ನನ್ನ ಮುಂದೆ ಕಾಫಿ ಲೋಟ ಇಟ್ಟಳು. ಅಷ್ಟರಲ್ಲಿ ಪಕ್ಕದ ಮನೆಯ ಮಾಲತಿ ಕರೆದಳು, “ಸುಮಾ, ಇಲ್ಲಿ ಬಾ ನಿನಗೆ ಏನೋ ತೋರಿಸ್ಬೇಕು.”

“ಬಂದೆ,” ನಾನು ಕೂಡಲೇ ಉತ್ತರಿಸಿದೆ. ನಾನು ಉತ್ತರಿಸಲಿಲ್ಲವೆಂದರೆ ಅವಳು ಬಾಗಿಲು ತಟ್ಟಲು ಶುರು ಮಾಡುತ್ತಾಳೆಂದು ನನಗೆ ಗೊತ್ತಿತ್ತು. ನಿನ್ನೆ ತಾನೆ ಅವಳ ಗಂಡ ಮುಂಬೈನಿಂದ ಬಂದಿದ್ದಾರೆ. ಅವಳಿಗೆ ಒಂದಷ್ಟು ವಸ್ತುಗಳನ್ನು ತಂದಿರಬಹುದು. ಅವನ್ನು ನನಗೆ ತೋರಿಸಬಹುದು. ನಾನು ನಾಗುವಿಗೆ, “ಇನ್ನೊಂದು ಕಪ್‌ ಕಾಫಿ ಮಾಡಿಕೊಂಡು ಮಾಲತಿಯ ಮನೆಗೇ ತೆಗೆದುಕೊಂಡು ಬಾ. ಇಬ್ರೂ ಅಲ್ಲೇ ಕುಡೀತೀವಿ,” ಎನ್ನುತ್ತಾ, ನನ್ನ ಕಾಫಿ ಲೋಟ ಹಿಡಿದು ಮಾಲತಿಯ ಮನೆಗೆ ಹೋದೆ.

“ಬಾ….ಬಾ  ಕೂತ್ಕೋ…. ನೋಡು ಈ ಸೀರೆ ಎಷ್ಟು ಚೆನ್ನಾಗಿದೆ ಅಲ್ವಾ!”

“ಹೌದು. ತುಂಬಾ ಚೆನ್ನಾಗಿದೆ. ಮುಂಬೈನಿಂದ ಕಿರಣ್‌ ಇದನ್ನು ತಂದುಕೊಟ್ರಾ?” ನಾನು ಕೇಳಿದೆ.

“ಇನ್ಯಾರು ತರ್ತಾರೆ? ನನಗೆ ಇರೋದು ಅವರೊಬ್ಬರೇ. ಎದ್ರೆ ಕೂತರೆ ಅವರಿಗೆ ನನ್ನದೇ ಚಿಂತೆ. ನೋಡು ಈ ಸಾರಿ 3-3 ನೈಟಿಗಳನ್ನೂ ತಂದಿದ್ದಾರೆ. ಇದನ್ನು ನಿನ್ನೆ ರಾತ್ರಿ ಹಾಕ್ಕೊಂಡಿದ್ದೆ. ಏನು ಸೆಕ್ಸಿ ನೈಟಿ ಅಂತೀಯ. ಮಜಾ ಬಂತು. ತಿಂಗಳಿಗೆ 1 ಸಾರಿ ಇವರು ಬರ್ತಾರೆ. ಇವರು ತಂದುಕೊಟ್ಟಿದ್ದನ್ನು ಹಾಕ್ಕೊಂಡು ತೋರಿಸ್ತೀನಿ,” ಮಾಲತಿ ಖುಷಿಯಿಂದ ಹೇಳುತ್ತಿದ್ದಳು.

“ನೈಟಿಗಳು ತುಂಬಾ ಚೆನ್ನಾಗಿವೆ. ಬಹಳ ರಿಚ್‌ ಲುಕ್‌ ಕೊಡ್ತಿವೆ,” ನಾನು ನಗುತ್ತಾ ಹೇಳಿದೆ.

ಅಷ್ಟರಲ್ಲಿ ನಾಗು ಇನ್ನೊಂದು ಕಪ್‌ ಕಾಫಿ ತಂದಳು. ನಾನೂ ಮಾಲತಿ ಕಾಫಿ ಕುಡಿಯತೊಡಗಿದೆ. ಮಾಲತಿ ಒಂದೊಂದಾಗಿ ನನಗೆ ಎಲ್ಲ ವಸ್ತುಗಳನ್ನೂ ತೋರಿಸತೊಡಗಿದಳು. ಆದರೆ ನನ್ನ ಮನಸ್ಸು ನೈಟಿಗಳಲ್ಲೇ ಮುಳುಗಿತ್ತು.

ನಾನು ಆಶ್ಚರ್ಯಚಕಿತಳಾಗಿದ್ದೆ. ಅಂತಹ ನೈಟಿ ನನ್ನ ಬಳಿ ಇಲ್ಲವೆಂದಲ್ಲ. ಆದರೆ ನಾವಿರುವ ಮನೆ ಅಥವಾ ನಮ್ಮ ಅಂತಸ್ತಿನವರ ಮನೆಗಳಲ್ಲಿ ಇಂತಹ ನೈಟಿಗಳಿಂದ ಯಾವುದೇ ಪ್ರಯೋಜನವಿಲ್ಲ. ಆದರೂ 2 ಕೋಣೆಗಳಿರುವ ಫ್ಲ್ಯಾಟ್‌ಗಳಲ್ಲಿರುವ ನಮ್ಮಂತಹವರು ಇಂತಹ ಡ್ರೆಸ್‌ಗಳನ್ನು ಧರಿಸಲು ಹಂಬಲಿಸುತ್ತೇವೆ. ಯಾವುದೇ ಡ್ರೆಸ್‌ ಧರಿಸಲು ನಮಗೆ ಒಂದು ಪರಿಸರ ಬೇಕು. ಅದು  ನಮಗೆ ಸಿಗುವುದಿಲ್ಲ. ರಾತ್ರಿ ಏಕಾಂತವಾಗಿ ಗಂಡನೊಂದಿಗೆ ಇರಲೂ ಸಾಧ್ಯವಿಲ್ಲ. ಏಕೆಂದರೆ ಯಾವುದೇ ಹೊತ್ತಿನಲ್ಲಿ ನೆಂಟರು ಗಂಡ ಹೆಂಡತಿಯ ನಡುವೆ ವಕ್ಕರಿಸುತ್ತಾರೆ. ನಾವು ನಮ್ಮ ಮನೆಯನ್ನು ದೊಡ್ಡದು ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನಾವು ನಮ್ಮ ಪ್ರೀತಿಯ ಎಲ್ಲೆಗಳನ್ನು ಬಂಧಿಸಿದ್ದೇವೆ. ಮತ್ತೆ ಕಿರಣ್‌ಗೆ ಈ ಆಲೋಚನೆ ಹೇಗೆ ಬಂತು? ಕಿರಣ್‌ನ ಬ್ಯಾಕ್‌ ಗ್ರೌಂಡ್‌ ಅಷ್ಟು ಚೆನ್ನಾಗಿಲ್ಲ. ಅದಲ್ಲದೆ ಅವನು ಪ್ರಾಪರ್ಟಿ ಡೀಲಿಂಗ್‌ ಕೆಲಸ ಮಾಡುತ್ತಾನೆ. ಅದೊಂದು ಡ್ರೈ ಬಿಸ್‌ನೆಸ್‌.

ಅದರಲ್ಲಿ ಗ್ಲಾಮರ್‌ ಹೆಸರೇ ಇರುವುದಿಲ್ಲ. ಮತ್ತೆ ಇದೆಲ್ಲಾ….? ಮಾಲತಿ ಎಂದಿನಂತೆ ಕಿರಣ್‌ನ ಗುಣಗಾನ ಮಾಡುತ್ತಲೇ ಇದ್ದಳು. ಅಷ್ಟರಲ್ಲಿ ನಮ್ಮ ಮನೆಯಲ್ಲಿ ಫೋನ್‌ ರಿಂಗ್‌ ಆಯಿತು. ನನಗೆ ಅಲ್ಲಿಂದ ಏಳಲು ನೆಪ ಸಿಕ್ಕಿತು.

“ಫೋನ್‌ ರಿಂಗ್‌ ಆಗ್ತಿದೆ. ನಾನು ಬರ್ತೀನಿ,” ಎಂದು ಹೇಳಿ ಮಾಲತಿಯ ಉತ್ತರಕ್ಕೂ ಕಾಯದೆ ಮನೆಗೆ ಹಿಂತಿರುಗಿದೆ.

ಮಾಲತಿ ಪದೇ ಪದೇ ತನ್ನ ಗಂಡನನ್ನು ಹೊಗಳುವುದು ಮತ್ತು ಗಂಡ ತನ್ನನ್ನು ಬಹಳ ಪ್ರೀತಿಸುತ್ತಾನೆಂದು ಹೇಳುವುದನ್ನು ಕೇಳಿದಾಗೆಲ್ಲಾ ನನಗೆ ಏನೋ ಸಂದೇಹವಾಗುತ್ತಿತ್ತು. ಮಾಲತಿ ತನ್ನ ಗಂಡ ಬಹಳ ಹಣ ಸಂಪಾದಿಸುತ್ತಿದ್ದಾನೆಂದು ತಿಳಿಸಿ ನನ್ನ ಹೊಟ್ಟೆ ಉರಿಸಲು ಬಯಸಿದ್ದಾಳೆಯೇ?

ಕೆಲವು ವರ್ಷಗಳ ಹಿಂದೆ ಅವನು ಒಬ್ಬ ಸಾಧಾರಣ ರಂಗನಟನಾಗಿದ್ದ. ಅವನ ಸೌಂದರ್ಯಕ್ಕೆ ತಕ್ಕಂತೆ ಸಣ್ಣ ಪುಟ್ಟ ಪಾತ್ರಗಳು ಸಿಗುತ್ತಿದ್ದವು. ಇದ್ದಕ್ಕಿದ್ದಂತೆ ಅವನು ಹೆಂಡತಿಯ ಮಾತು ಕೇಳಿ ತನ್ನ ವೃತ್ತಿ ಬದಲಾಯಿಸಿದ. ಲಕ್ಷಗಳಲ್ಲದಿದ್ದರೂ ತಿಂಗಳಿಗೆ ಸಾವಿರಾರು ರೂ ಸಂಪಾದಿಸುತ್ತಿದ್ದ. ಮನೆಗೆ ಅಗತ್ಯವಾದ ವಸ್ತುಗಳು ಬಂದಿದ್ದವು. ಒಂದು ಕಾರೂ ಇತ್ತು.

ನಾಗು ನನ್ನನ್ನು ಮತ್ತೊಮ್ಮೆ ಕರೆದಳು. ಅಷ್ಟರಲ್ಲಿ ನಾನು ಮನೆಗೆ ಬಂದಿದ್ದೆ. ಫೋನ್‌ ರಿಂಗ್‌ ಆಗೀ ಆಗೀ ನಿಶ್ಶಬ್ದವಾಗಿತ್ತು.

ಯಾರ ಫೋನ್‌ ಇರಬಹುದು ಎಂದು ನಾನು ಫೋನ್‌ನತ್ತ ಹೋದೆ. ಆಗಲೇ ಫೋನ್‌ ಪುನಃ ಸದ್ದಾಯಿತು. ನಾನು ಥಟ್ಟನೆ ರಿಸೀವರ್‌ ಎತ್ತಿ, “ಹಲೋ,” ಎಂದೆ.

“ಏನೇ ಮಾಡ್ತಾ ಇದ್ದೀಯ? ಫೋನ್‌ ಎತ್ತೋಕೆ ಇಷ್ಟು ಹೊತ್ತಾ?” ಅತ್ತಲಿಂದ ರೇಷ್ಮಾಳ ಧ್ವನಿ ಕೇಳಿಸಿತು. ಅವಳು ಎಂದಿನಂತೆ ಮಾದಕ ಧ್ವನಿಯಲ್ಲಿ ಕೇಳಿದಳು.

“ನಾನು ಪಕ್ಕದ ಮನೆಯಲ್ಲಿ……”

“ಪಕ್ಕದ ಮನೇನ ಯಾಕೇ ಹಾಳು ಮಾಡ್ತಿದ್ದೀಯಾ ಪಾಪ. ನಿನ್ನ ಗಂಡನ ಹೆಸರು ಹೇಳೋಕೆ ನಾಚಿಕೇನಾ? ಅವರು ನಿನ್ನನ್ನು ಯಾವಾಗಲೂ ಕಾಯ್ಕೊಂಡು ಇರ್ತಿದ್ರಾ?” ರೇಷ್ಮಾ ನಗುತ್ತಾ ಹೇಳಿದಳು.

“ರೇಷ್ಮಾ, ನೀನು ಬದಲಾಗಲ್ಲ, ನಿನ್ನ ಡಬಲ್ ಮೀನಿಂಗ್‌ ಡೈಲಾಗ್‌ಗಳೂ ಅಷ್ಟೇ,” ನಾನೂ ನಗುತ್ತಾ  ಹೇಳಿದೆ.

“ಬದಲಾಗಬೇಕು ಅನ್ನಿಸಿದಾಗ ಬದಲಾಗ್ತೀನಿ. ಮುಂಬೈಗೆ ಬಂದು ಇನ್ನೂ ಮಜಾ ಮಾಡೋಣಾಂತ. ನೀನೂ ಬಂದುಬಿಡು. ನಿನಗೂ ಮೋಜು ತೋರಿಸ್ತೀನಿ.”

“ನಾನು ಹೇಗೆ ಬರಲಿ? ನಮ್ಮ ಯಜಮಾನ್ರು ಸರ್ಕಾರಿ ಕೆಲಸದಲ್ಲಿರೋದು. ನಾನು ಸೀರಿಯಲ್, ಫಿಲ್ಮ್ ಗಳಿಗೆ ಬರೋದು ಕನಸಿನ ಮಾತು.”

“ಡೋಂಟ್‌ ವರಿ ಸುಮಾ, ನಾನು ಬರುವ ತಿಂಗಳು ಬೆಂಗಳೂರಿಗೆ ಬರ್ತಿದ್ದೀನಿ. ಪೂರ್ತಿ ಸ್ಕ್ರಿಪ್ಟ್ ನಿನ್ನಿಂದಲೇ ಬರಿಸ್ತೀನಿ. ಬೆಂಗಳೂರಿಗೆ ಬಂದ ಮೇಲಾದ್ರೂ ನನ್ನ ಜೊತೆ ಸ್ವಲ್ಪ ಸಮಯ ಕಳೀತೀಯಾ?”

“ಖಂಡಿತಾ. ಅದು ನನ್ನ ಕನಸು. ಬೆಂಗಳೂರಿಗೆ ಬಂದ ಕೂಡಲೇ ನನಗೆ ಫೋನ್‌ ಮಾಡು. ನೀನು ಇಲ್ಲಿ ಇರೋಕೆ ವ್ಯವಸ್ಥೆ ಮಾಡ್ತೀನಿ.”

“ಬೇಡ ಬೇಡ. ನಾನು ಹೊಟೇಲ್‌ನಲ್ಲಿ ಇಳ್ಕೋತೀನಿ. ನನ್ನ ಮೋಜನ್ನು ಯಾಕೆ ಹಾಳುಮಾಡ್ತೀಯ?”

“ಅಂದ್ರೆ….?”

“ನೀನಂತೂ ಬದುಕಿನಲ್ಲಿ ಮಜಾ ಮಾಡೋದು ಕಲಿಯಲೇ ಇಲ್ಲ.”

“ನೀನು ಏನು ಹೇಳ್ತಿದ್ದೀಯ….. ನನಗೆ ಅರ್ಥ ಆಗ್ತಿಲ್ಲ.”

“ದಡ್ಡಿ, ಎಷ್ಟು ಬಿಡಿಸಿ ಹೇಳಿದ್ರೂ ಅರ್ಥ ಆಗಲ್ಲ. ನಾನು ಬೆಂಗಳೂರಿಗೆ ಬಂದಾಗ ನಿಧಾನವಾಗಿ ಅರ್ಥ ಮಾಡಿಸ್ತೀನಿ ಸರಿ, ಫೋನ್ ಇಡ್ತೀನಿ. ನನ್ನ ಡೇಟ್‌ ಬಂದಿದ್ದಾರೆ.”

“ಡೇಟ್‌…..” ಎಂದ್ರೆ ಅಷ್ಟರಲ್ಲಿ ಫೋನ್‌ ಕಟ್‌ ಆಯ್ತು. ಏನು ಹೇಳಿದ್ದು ಅವಳು ಡೇಟ್‌ ಅಂತಾನೇ? ಏನೋ ಇರಬಹುದು ಬಿಟ್ಹಾಕು. ರೇಷ್ಮಾ ಬೆಂಗಳೂರಿಗೆ ಬರ್ತಿದ್ದಾಳೆ ಅನ್ನೋದೇ ಖುಷಿಯ ಸುದ್ದಿ. ಅವಳು ಹಿಂದೆ ಬೆಂಗಳೂರಿನಲ್ಲಿ ಟಿವಿಗಾಗಿ ಹಲವು ಸೀರಿಯಲ್ ಗಳನ್ನೂ ಟೆಲಿಚಿತ್ರಗಳನ್ನು ನಿರ್ಮಿಸಿದ್ದಳು.

ಅವಳು ಮುಂಬೈಗೆ ಹೋಗಿ ಸೀರಿಯಲ್ ಗಳನ್ನು ನಿರ್ಮಿಸಿದಳು. ಜೊತೆಗೆ ಅಲ್ಲಿಯೇ ನೆಲೆಸಿದಳು. ಅವಳು ಬೆಂಗಳೂರಿನಲ್ಲಿ ಇದ್ದಾಗ ನಾನು ಆಗಾಗ್ಗೆ ಅವಳ ಟೆಲಿಫಿಲ್ಮ್ ಗಳ ಸ್ಕ್ರಿಪ್ಟ್ ಬರೆಯುತ್ತಿದ್ದೆ. ಆಗ ನಮ್ಮ ಗೆಳೆತನ ಬಹಳ ಗಾಢವಾಗಿತ್ತು. ನಾವಿಬ್ಬರೂ ಅಕ್ಕ ತಂಗಿಯರೆಂದೇ ಎಲ್ಲರೂ ಅಂದುಕೊಂಡಿದ್ದರು. ಅವಳು ಅನೇಕ ಸೀರಿಯಲ್ ಗಳನ್ನು ಮಾಡಿದಳು. ಕಾರು, ಫ್ಲ್ಯಾಟ್‌ಖರೀದಿಸಿದಳು. ಒಂದು ಆಫೀಸ್‌ ತೆರೆದಳು. ಆದರೆ ಅವಳು ನನ್ನನ್ನು ಮರೆಯಲಿಲ್ಲ. ಅವಳು ಮುಂಬೈಗೆ ಹೋದನಂತರ ಹಲವಾರು ಬಾರಿ ನನ್ನನ್ನು ಕರೆದಳು. ಆದರೆ ನಾನು ಹೋಗಲಾಗಲಿಲ್ಲ. ನನ್ನ ಗಂಡ ಬೆಂಗಳೂರಿನಲ್ಲಿ ಸರ್ಕಾರಿ ನೌಕರಿಯಲ್ಲಿ ಇರುದರಿಂದ ನಾನು ಅವರನ್ನು ಬಿಟ್ಟು ಮುಂಬೈನಲ್ಲಿ ಇರುವುದು ಅಸಂಭವ. ಆದರೆ ಈಗ ರೇಷ್ಮಾ ಬೆಂಗಳೂರಿನಲ್ಲಿಯೇ ಬಹಳ ದಿನ ಇರಲು ಬರುತ್ತಿರುವುದರಿಂದ ನಾನು ಅವಳೊಂದಿಗೆ ಕೆಲಸ ಮಾಡಬಹುದು.

ನಾನು ಇವರಿಗೆ ರೇಷ್ಮಾಳಿಂದ ಫೋನ್‌ ಬಂದಿತ್ತು, ಅವಳು ನನ್ನಿಂದ ಸ್ಕ್ರಿಪ್ಟ್ ಬರೆಸಲು ಇಚ್ಛಿಸುತ್ತಾಳೆ ಎಂದಾಗ ಅವರಿಗೂ ಖುಷಿಯಾಯಿತು. ಏಕೆಂದರೆ ಇದರಿಂದಾಗಿ ನಾನು ನನ್ನ ಟ್ಯಾಲೆಂಟ್‌ನ್ನು ಅದುಮಿಟ್ಟುಕೊಂಡಿದ್ದೀನಿ ಎಂದು ಅವರಿಗೆ ಅನ್ನಿಸುತ್ತಿತ್ತು. ಅವರು ನನಗೆ ಒಪ್ಪಿಗೆಯನ್ನಿತ್ತರು. ಲೇಖನ ಶುರು ಮಾಡಿದ ಮೇಲೆ ರಾತ್ರಿ ತುಂಬಾ ತಡವಾಗುತ್ತದೆ ಎಂದು ನಾನು ಹೇಳಿದ್ದೆ.

ಅದರಿಂದ ಅವರಿಗೇನೂ ತೊಂದರೆ ಇರಲಿಲ್ಲ. ಅದಕ್ಕಿಂತ ಹೆಚ್ಚಿಗೆ ಏನೂ ಇರಲಿಲ್ಲ. ನಾನೀಗ ರೇಷ್ಮಾ ಬರುವುದನ್ನೇ ಕಾಯುತ್ತಿದ್ದೆ.

ರೇಷ್ಮಾ ಏರ್‌ಪೋರ್ಟ್‌ನಲ್ಲಿ ಇಳಿದ ಕೂಡಲೇ ನನಗೆ ಫೋನ್‌ ಮಾಡಿದಳು. ಹೋಟೆಲ್ ತಲುಪಿದ ಮೇಲೆ ಅವಳು ಮತ್ತೆ ನನಗೆ ಫೋನ್‌ ಮಾಡಿ ಕರೆದಳು. ನಾನು ಸಿದ್ಧಳಾಗಿ ಕೂತಿದ್ದೆ. ನಾನು ಹೋಟೆಲ್ ಗೆ ಹೊರಡತೊಡಗಿದಾಗ ಮಾಲತಿ ಬಂದಳು. ಅವಳು, “ನೋಡು ಸುಮಾ, ನಿನ್ನಿ ಜ್ಯೂವೆಲರಿ ಶಾಪ್‌ಗೆ ಹೋಗಿದ್ದೆ. ಈ ವಜ್ರದುಂಗುರ ತಂದೆ…. ಹೇಗಿದೆ?” ಎಂದಳು.

“ಬಹಳ ಸುಂದರವಾಗಿದೆ,” ನಾನು ನೋಡಿ ಥಟ್ಟನೆ ಹೇಳಿದೆ.

ಮಾಲತಿಗೆ ಅದು ಸರಿಹೋಗಲಿಲ್ಲ, “ಎಲ್ಲಿಗೋ ಹೋಗ್ತಿದ್ದೀಯಾ? ಅರ್ಜೆಂಟ್‌ನಲ್ಲಿದ್ದೀಯಾ?” ಎಂದಳು.

“ಹೌದು, ಟಿ.ವಿ ಸೀರಿಯಲ್ ಗೆ ಬರಿಯೋ ಕೆಲಸ ಸಿಕ್ತಿದೆ. ಮಾತಾಡಿ ಬರೋಣಾಂತ. ಪ್ರೊಡ್ಯೂಸರ್‌ ನಾಳೆ ಹೊರಟುಹೋಗ್ತಾರೆ. ಇವತ್ತು ರಜಾನೂ ಇತ್ತು  ಅದಕ್ಕೆ…. ಸಾರಿ ಸಂಜೆ ಮಾತಾಡೋಣ,” ಎಂದೆ.

ಮಾಲತಿಯ ಮುಖ ಸಪ್ಪಗಾಯಿತು. ಅವಳಿಗೆ ಟಿವಿ ಸೀರಿಯಲ್ ಮತ್ತು ಆ್ಯಕ್ಟಿಂಗ್‌ ವಿಷಯಗಳು ಹಿಡಿಸಲ್ಲ. ಅವಳು ತನ್ನ ಗಂಡನಿಗೆ ಸಣ್ಣಪುಟ್ಟ ಪಾತ್ರಗಳನ್ನು ಮಾಡುವುದು ಬಿಟ್ಟು ಯಾವುದಾದರೂ ದೊಡ್ಡ ಕೆಲಸ ಮಾಡಲು ಹೇಳಿದ್ದಳು. ಈಗ ಅವನು ಪ್ರಾಪರ್ಟಿ ಡೀಲಿಂಗ್‌ನಲ್ಲಿ ಚೆನ್ನಾಗಿ ಸಂಪಾದಿಸುತ್ತಿದ್ದಾನೆ. ಹೀಗಾಗಿ ಅವಳು ಬಹಳ ಖುಷಿಯಾಗಿದ್ದಾಳೆ. ಅದಕ್ಕಿಂತ ಹೆಚ್ಚಾಗಿ ಅವಳು ಖುಷಿಯಾಗಿರಲು ಕಾರಣವೇನೆಂದರೆ ಗಂಡ ಅವಳನ್ನು ಬಹಳ ಪ್ರೀತಿಸುತ್ತಾನೆ. ಅವಳು ಮನಸ್ಸಿಗೆ ಬಂದದ್ದನ್ನು ಖರೀದಿಸಲು ಅವಳಿಗೆ ದುಡ್ಡು ಕೊಡುತ್ತಾನೆ.

“ಸುರೇಶ್‌ಗೆ ಗೊತ್ತಾ ನೀನು…..?”

`ಓಹೋ. ಅರಿಗೆ ಹೇಳಿಯೇ ಹೊರಡ್ತಿರೋದು,” ಎಂದು ಹೇಳಿ ನಾನು ಮನೆಗೆ ಬೀಗ ಹಾಕತೊಡಗಿದೆ. ಮಾಲತಿ ಮುಖ ಗಂಟಿಕ್ಕಿ ಹೊರಟುಹೋದಳು. ನನಗೆ ರೇಷ್ಮಾಳೊಂದಿಗೆ ಸೇರುವ ಖುಷಿಯಿತ್ತು. ಹೀಗಾಗಿ ಮಾಲತಿಯೊಂದಿಗೆ ಹರಟೆ ಹೊಡೆಯಲು ಸಮಯ ಇರಲಿಲ್ಲ.

ಹೋಟೆಲ್ ತಲುಪಿದ ಕೂಡಲೇ ರೇಷ್ಮಾ ಸುತ್ತಲೂ ಅನೇಕ ಜನರಿದ್ದುದನ್ನು ನೋಡಿದೆ. ನಾನು ಹೋದ ಕೂಡಲೇ ಅವಳೆದ್ದು ಬಂದು ನನ್ನನ್ನು ಆಲಂಗಿಸಿದಳು.

“ಹಾಯ್‌ ಮೈ ಸ್ವೀಟ್‌ ಹಾರ್ಟ್‌! ಬಹಳ ದಿನಗಳ ಬಳಿಕ ನಾವಿಬ್ಬರೂ ಸೇರ್ತಿದ್ದೇವೆ,” ಎಂದಳು.

“ಹೌದು. ಬಹಳ ದಿನಗಳ ನಂತರ ಸೇರ್ತಿದ್ದೇವೆ. ನಾನು ನಿನ್ನನ್ನು ಎಷ್ಟು ಮಿಸ್‌ ಮಾಡಿಕೊಳ್ತಿದ್ದೆ ಗೊತ್ತಾ?” ಎಂದೆ.

“ಓಹ್‌ ರಿಯಲೀ, ಸೋ ಸ್ವೀಟ್‌. ಬಾ ಕೂತ್ಕೋ,” ಅವಳು ಡಬಲ್ ಬೆಡ್‌ ಮೇಲೆ ತನ್ನ ಪಕ್ಕ ಕೂರಿಸಿಕೊಂಡಳು.

“ನೋಡಿ, ಇವಳು ನನ್ನ ಸ್ವೀಟ್‌ ಹಾರ್ಟ್‌ ಸುಮಾ. ನನ್ನ ಹಳೆಯ ಸಂಗಾತಿ. ಬಹಳ ಒಳ್ಳೆಯ ರೈಟರ್‌. ನಮ್ಮ ಸ್ನೇಹಕ್ಕೆ ಆಗಲೇ 15 ವರ್ಷ ಆಗಿರ್ಬೇಕು, ಅಲ್ವಾ ಸುಮಾ?”

“ಇನ್ನೂ ಜಾಸ್ತಿ ಆಗಿದೆ,” ನಾನು ನಕ್ಕೆ. ಎಲ್ಲರ ಮುಖದಲ್ಲೂ ಗೌರವದ ಭಾವನೆ ಇತ್ತು.

“ಸುಮಾ, ಇವರು ನನ್ನ ಡೈರೆಕ್ಟರ್‌ ವಿನಯ್‌, ಇವರು ಮ್ಯೂಸಿಕ್‌ ಡೈರೆಕ್ಟರ್‌ ಸಂತೋಷ್‌, ಇವರು ರಾಹುಲ್‌, ರಜತ್‌, ಪ್ರಿಯಾ, ರೂಪಾ ಮತ್ತು ರಾಣಿ. ಇವರೆಲ್ಲರೂ ಕಲಾವಿದರು. ಜೊತೆಗೆ ನನ್ನ ಸಣ್ಣಪುಟ್ಟ ಕೆಲಸಗಳನ್ನೂ ಮಾಡ್ತಾರೆ. ನನ್ನನ್ನು ಇರುವ ಯಾವುದೇ ಕೆಲಸ ಮಾಡೋಕೂ ಬಿಡಲ್ಲ,” ರೇಷ್ಮಾ ನಕ್ಕಾಗ ಎಲ್ಲರೂ ಮುಗುಳ್ನಕ್ಕರು.

ಇವರೆಲ್ಲರೂ ಆರ್ಟಿಸ್ಟ್ ಗಳಿಗಿಂತ ಚಮಚಾಗಳು ಎನಿಸಿತು.

“ರಾಣಿ ಒಳ್ಳೆಯ ಹೇರ್‌ ಡ್ರೆಸರ್‌ ಕೂಡ. ನನ್ನ ಫ್ರೆಂಡ್‌ ತರಹ ಇದ್ದಾಳೆ. ರಾಹುಲ್ ಸ್ವಲ್ಪ ತಿಂಡಿ, ಕಾಫಿ ತರಿಸು,” ರೇಷ್ಮಾ ಹೇಳಿದಳು.

“ಆಯ್ತು ಮೇಡಂ,” ರಾಹುಲ್ ‌ರಿಸೀವರ್‌ ಎತ್ತಿ ನಂಬರ್‌ ಒತ್ತತೊಡಗಿದ.

ಸ್ವಲ್ಪ ಹೊತ್ತಿಗೆ ಎಲ್ಲರಿಗೂ ಒಂದಷ್ಟು ಕೆಲಸ ಒಪ್ಪಿಸಿ ರೇಷ್ಮಾ ಅವರನ್ನು ಕಳಿಸಿದಳು. ಈಗ ರೂಮಿನಲ್ಲಿ ನಾನು ಮತ್ತು ರೇಷ್ಮಾ ಇಬ್ಬರೇ ಇದ್ದೆವು.

nakali-vajradha-holapu

“ನಾನು ಹೊಸ ಸೀರಿಯಲ್ ಮಾಡ್ತಿದ್ದೀನಿ. ನೀನು ಚೆನ್ನಾಗಿ ಸ್ಕ್ರಿಪ್ಟ್ ಮಾಡಬೇಕು. ನಿನಗೊಂದಷ್ಟು ಹೊಸ ಕಥೆಗಳನ್ನು ಹೇಳ್ತೀನಿ. ನೀನು ಮುಂದುವರಿಸು,” ಎಂದು ಅವಳು ಕಥೆ ಹೇಳತೊಡಗಿದಳು. ಅವಳ ಮಾತುಗಳಲ್ಲಿ ಒಬ್ಬ ವಿದುಷಿಯ ಝಲಕ್‌ ಇತ್ತು.

ನಾನು ಎಲ್ಲ ವಿಷಯಗಳನ್ನೂ ನೋಟ್‌ ಮಾಡಿಕೊಳ್ಳತೊಡಗಿದೆ. ನಂತರ ಅವಳು ಕೆಲವು ರಿಸರ್ಚ್‌ ಪೇಪರ್‌ಗಳನ್ನು ಕೊಟ್ಟಳು. ಅವನ್ನು ಆಧರಿಸಿ ಕಥೆಗಳ ಸ್ಕ್ರಿಪ್ಟ್ ಫಾರ್ಮಾಟ್‌ ಸಿದ್ಧಗೊಳಿಸಬೇಕಿತ್ತು. ಮಾತುಕಥೆ ಪೂರ್ತಿಯಾದ ನಂತರ ನಾನು ರೇಷ್ಮಾಗೆ ಹೇಳಿದೆ, “ಇಷ್ಟು ವರ್ಷಗಳಲ್ಲಿ ನೀನು ಬಹಳ ಸ್ಟಡಿ ಮಾಡಿದ್ದೀಯ. ಬಹಳ ತಿಳಿವಳಿಕೆ ಇದೆ ನಿನಗೆ. ಬಹಳ ಮಾಹಿತಿಗಳನ್ನು ಇಟ್ಕೊಂಡಿದ್ದೀಯ ನೀನು.”

“ನನ್ನ ಬಳಿ ತುಂಬಾ ಮಾಹಿತಿ ಇದೆ. ಬೇಕಾದ್ರೆ ನಿನಗೂ ಹೇಳ್ತೀನಿ,” ಎಂದು ಅವಳು ಗಾಢವಾಗಿ ನನ್ನನ್ನು ನೋಡಿದಳು.

“ನೀನು ಮೊದಲಿನ ರೇಷ್ಮಾ ಅನ್ನಿಸ್ತಿಲ್ಲಾ…..”

“ಅಲ್ಲವೇ ಅಲ್ಲ,” ರೇಷ್ಮಾ ಅದೇ ದೃಷ್ಟಿಯಿಂದ ನನ್ನನ್ನು ನೋಡಿ ನಗುತ್ತಾ ಹೇಳಿದಳು, “ಒಂದು ವಿಷಯ ಹೇಳು, ನಿನ್ನ ಗಂಡ ನಿನ್ನನ್ನು ಚೆನ್ನಾಗಿ ನೋಡ್ಕೋತಿದ್ದಾರಾ?”

ತುಂಟತನದಿಂದ ಕೂಡಿದ ಅವಳ ದೃಷ್ಟಿ ಕಂಡು ಅವಳೀಗ ಕಾಲೆಳೆಯುವ ಮೂಡ್‌ನಲ್ಲಿದ್ದಾಳೆ ಅನಿಸಿತು. ನಾನು ಹೇಳಿದೆ, “ಚೆನ್ನಾಗಿ ನೋಡ್ಕೋತಾರೆ. ನನ್ನನ್ನು ನೋಡಿದ್ರೆ ಗೊತ್ತಾಗಲ್ವಾ?”

“ಒಂದು ವಿಷಯ ಹೇಳು. ದಿನ ಒಂದೇ ರೀತಿಯ ಆಹಾರ ಸೇವಿಸೀ ಸೇವಿಸೀ ಬೋರ್‌ ಆಗಲ್ವಾ? ಕೊಂಚ ಡಿಫರೆಂಟ್‌ ಆಗಿ ತಿನ್ನಲು ಮನಸ್ಸಾಗಲ್ವಾ?”

“ನಿನ್ನ ಮಾತುಗಳು ನನಗೆ ಸರಿಹೋಗಲ್ಲ…. ಬೇರೇನಾದರೂ ಹೇಳು.”

“ನಾನು ಹೇಳೋದು ಅದೇ. ದಿನ ನೋಡಿದ್ದನ್ನೇ ನೋಡಿ ಬೇಸರ ಆಗಲ್ವಾ? ಬಿಲೀವ್ ‌ಮಿ. ನಾನು ಬಿಂದಾಸ್‌ ಆಗಿ ಬದುಕೋದನ್ನು ಮುಂಬೈನಲ್ಲಿ ಕಲಿತೆ. ದೆಹಲಿಯಲ್ಲಂತೂ ಪುಕ್ಕಲು ಜನ ಇರ್ತಾರೆ,” ಅವಳು ಬೆಲ್ ‌ಬಾರಿಸಿದಳು.

“ಏನು?” ನಾನು ಆಶ್ಚರ್ಯದಿಂದ ಕೇಳಿದೆ.

“ಈಗ ನೋಡು. ನಾನು ಬೆಳಗ್ಗೆ ಬಂದಿದ್ದು, ಸಂಜೆ ಆಗೋಯ್ತು. ನನಗೆ ಬಹಳ ಆಯಾಸ ಆಗಿದೆ. ಈಗ ನನ್ನ ಮೈಂಡ್‌ ರಿಲ್ಯಾಕ್ಸ್ ಮಾಡಿಕೊಳ್ಳೋಕೆ ಜೈಪುರ್‌ನಿಂದ ಗಂಡನನ್ನು ಕರೆಸಿಕೊಳ್ಳೋಕಾಗುತ್ತಾ? ಹಸಿವಾದ ತಕ್ಷಣ ಅಲ್ಲೇ, ಆಗಲೇ ಊಟ ಹುಡುಕ್ಬೇಕಾ? ಅಥವಾ ಮನೆ ಊಟಕ್ಕೆ ಕಾಯ್ಕೊಂಡು ಕೂತ್ಕೋಬೇಕಾ ಹೇಳು?”

“ನೀನೋ ನಿನ್ನ ಮಾತೋ…. ಉಫ್‌,” ನಾನು ಮಾತು ಮುಗಿಸುವ ಮೊದಲೇ ಬಾಗಿಲನ್ನು ತಟ್ಟಿ ರಾಹುಲ್ ‌ಒಳಗೆ ಬಂದ.

“ಎಸ್‌ ಮೇಡಂ.”

“ಜಯರಾಮ್ ಎಲ್ಲಿ?”

“ಮೇಡಂ. ಅವನು ನಾಡಿದ್ದು ಶೂಟಿಂಗ್‌ಗೆ ಬೇಕಾದ ಸಾಮಾನುಗಳನ್ನು ತರಲು ಮಾರ್ಕೆಟ್‌ಗೆ ಹೋಗಿದ್ದಾನೆ. ಸ್ವಲ್ಪ ಹೊತ್ತಿಗೆ ಮುಂಚೆ ಫೋನ್‌ ಮಾಡಿದ್ದ, ಬರ್ತಿರಬೇಕು.”

“ಆಯ್ತು. ಬಂದ ಕೂಡಲೇ ನನ್ನ ಹತ್ರ ಕಳಿಸು. ನೀನು ಡ್ರಿಂಕ್ಸ್ ರೆಡಿ ಮಾಡು.”

“ಓಕೆ ಮೇಡಂ,” ರಾಹುಲ್ ಹೇಳಿದ.

“ನೀನು ಯಾವತ್ತೂ ಎಂಜಾಯ್‌ ಮಾಡಲ್ವಾ?”

“ಮಾಡ್ತೀನಲ್ಲಾ. ನಾವು ಆಗಾಗ್ಗೆ ಔಟಿಂಗ್‌ಗೆ ಹೋಗ್ತೀವಿ.”

“ಥತ್‌ ತೇರೀಕಿ,” ರೇಷ್ಮಾ ಹಣೆ ಚಚ್ಚಿಕೊಂಡಳು. ರಾಹುಲ್ ಡ್ರಿಂಕ್ಸ್ ರೆಡಿ ಮಾಡಿಟ್ಟು ಹೊರಟ.

“ಬಾ. ನನ್ನ ಜೊತೆ ಕೂತ್ಕೋ. ನಾವಿಬ್ರೂ ಒಟ್ಟಿಗೆ ಎಂಜಾಯ್‌ ಮಾಡೋಣ,” ಎಂದ ರೇಷ್ಮಾ ನನ್ನ ಕೈ ಹಿಡಿದು ಒತ್ತಿದಳು.

“ಅಂದ್ರೆ?”

“ನಾನು ಜಯರಾಮ್ ನನ್ನು ಕರೆಸಿದ್ದೀನಿ. ಅವನು ಬಹಳ ಸ್ಮಾರ್ಟ್‌ ಆಗಿ ಸಖತ್ತಾಗಿದ್ದಾನೆ. ಅವನು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸ್ತಿದ್ದ. ಆ್ಯಕ್ಟಿಂಗ್‌ ಏನೂ ಗೊತ್ತಿಲ್ಲ ಅವನಿಗೆ. ನಾನು ಅವನಿಗೆ ಪ್ರೊಡಕ್ಷನ್‌ ಕಂಟ್ರೋಲರ್‌ ಕೆಲಸ ಕೊಟ್ಟೆ. ಅವನ ರೂಪ ನೋಡಿ ಬಹಳಷ್ಟು ಹುಡುಗಿಯರು ನನ್ನ ಬಳಿ ಆ್ಯಕ್ಟಿಂಗ್‌ ಮಾಡೋಕೆ ಬರ್ತಾರೆ. ಜೊತೆಗೆ ಅವನು ನನ್ನ ಕೆಲಸಕ್ಕೂ ಆಗ್ತಾನೆ,” ರೇಷ್ಮಾ ಕಣ್ಣುಗಳಲ್ಲಿ ನಶೆ ತುಂಬಿತ್ತು. ನನ್ನ ಮನಸ್ಸಿನಲ್ಲಿ ಆಶ್ಚರ್ಯ ಮೂಡಿತ್ತು. ಆದರೆ ಮುಖದಲ್ಲಿ ಅದರ ಭಾವ ಪ್ರಕಟಪಡಿಸಲಿಲ್ಲ.

“ನಿನಗೆ ಗೊತ್ತಲ್ವಾ ಸುಮಾ. ಮೊದಲ ಫೈನಾನ್ಶಿಯರ್‌ ನನ್ನನ್ನು ಕಂಡು ಜಾರಿದ್ದ. ಆದರೆ ಅವನ ಹೆಂಡತಿ ರಂಜಿನಿ ಜಯರಾಮ್ ನಿಗೆ ಜಾರಿದ್ದಳು. ನಾನು ಹಾಗೂ ರಂಜಿನಿ ಎಷ್ಟು ಸಾರಿ ಜಯರಾಮ್ ನನ್ನು ಒಟ್ಟಿಗೆ ಶೇರ್‌ ಮಾಡಿಕೊಂಡಿದ್ದೇವೋ? ನೀನು ಗಾಬರಿಯಾಗಬೇಡ. ಇದು ನಮ್ಮ ಸ್ಟೈಲ್. ಜಸ್ಟ್ ಫಾರ್‌ ರಿಲ್ಯಾಕ್ಸೇಶನ್‌. ಜಯರಾಮ್ ನನಗೆ ಫೀಮೇಲ್ ಆರ್ಟಿಸ್ಟ್ ಗಳನ್ನು ಒದಗಿಸುತ್ತಾನೆ. ನಾನು ಅದಕ್ಕೆ ಅವನಿಗೆ ಪ್ರತಿ ತಿಂಗಳೂ 20 ಸಾವಿರ ರೂ. ಕೊಡ್ತೀನಿ. ಅವನು ನನ್ನ ಮೈಂಡ್‌ ಫ್ರೆಶ್‌ಮಾಡಿದಾಗೆಲ್ಲಾ 10-20 ಸಾವಿರ ರೂ. ಅಥವಾ ನನ್ನ ಬಳಿ ಇರೋ ಬಟ್ಟೆಗಳ ರಾಶೀನ ಅವನಿಗೆ ಕೊಟ್ಟುಬಿಡ್ತೀನಿ,” ರೇಷ್ಮಾ ಹೇಳಿದಳು.

ನನಗೆ ರೇಷ್ಮಾಳ ವಾಸ್ತವತೆ ಕಂಡು ಆಶ್ಚರ್ಯವಾಗಿತ್ತು. “ಸರಿ, ಪ್ರತಿ ವ್ಯಕ್ತಿಯೂ ತನಗೆ ಬೇಕಾದಂತೆ ಬದುಕುತ್ತಾನೆ. ನಿನಗೆ ಇದರಲ್ಲಿ ಸಂತೋಷ ಇದೆ. ನನಗೆ ಇನ್ನೊಂದರಲ್ಲಿ ಸಂತೋಷ ಇದೆ,” ಎಂದೆ. ಆಗ ಅವಳು ಹೇಳಿದಳು, “ಹ್ಯಾವ್ ಎ ಚೇಂಜ್ ಡಿಯರ್‌…. ಒಂದು ಸಾರಿ ಅವನನ್ನು ನೋಡಿದರೆ ಬಿಟ್ಟುಹೋಗೋಕೆ ಮನಸ್ಸೇ ಬರಲ್ಲ. ನಾನೇನು ನಿನ್ನ ಗಂಡನನ್ನು ಬಿಟ್ಟುಬಿಡೂಂತ ಹೇಳ್ತಿಲ್ಲ. ಯಾವಾಗ್ಲೋ ಒಮ್ಮೊಮ್ಮೆ ಇಟ್ಕೋಬಹುದು. ಏನಂತೀ?”

ರೇಷ್ಮಾ ಕುಡೀತಿದ್ದಳು. ಜಯರಾಮನ ವರ್ಣನೆ ಜಾಸ್ತಿ ಇತ್ತು. ಅಷ್ಟರಲ್ಲಿ ಬಾಗಿಲ ಬಳಿ ಶಬ್ದವಾಯಿತು. ಬಹುಶಃ ಜಯರಾಮ್ ಬಂದಿರಬೇಕು. ನನ್ನ ಬೆನ್ನು ಬಾಗಿಲ ಕಡೆ ಇತ್ತು.

“ಬಾ ಜಯ್‌, ಬಾ. ಸಾಮಾನು ಅಲ್ಲೇ ಇಡು,” ರೇಷ್ಮಾ ಜಯರಾಮ್ ನನ್ನು ಹತ್ತಿರ ಕರೆದು ಕೈ ಹಿಡಿದೆಳೆದು ಮಂಚದ ಮೇಲೆ ಕೂಡಿಸಿಕೊಂಡಳು. ಜಯ್‌ ಕೂಡಾ ರೇಷ್ಮಾಳ ಕೆನ್ನೆಗೆ ಕೆನ್ನೆ ಕೂಡಿಸಿದ.

“ನನ್ನ ಫ್ರೆಂಡ್‌ನ ಭೇಟಿ ಮಾಡು ಜಯ್‌.” ನನ್ನ ಕಣ್ಣು ತೆರೆದಂತೇ ಇತ್ತು. ಜಯರಾಮ್ ಕೂಡ ನನ್ನನ್ನು ನೋಡಿದ. ಅವನ ಬಾಯಿ ಕೂಡ ತೆರೆದಂತೇ ಇತ್ತು. ರೇಷ್ಮಾ ರೆಪ್ಪೆ ಮಿಟುಕಿಸುವಷ್ಟರಲ್ಲಿ ಜಯರಾಮನನ್ನು ಒಂದು ತೋಳಿನಿಂದ ಅಪ್ಪಿಕೊಂಡು ಇನ್ನೊಂದು ಕೈನಿಂದ ಅವನು ಅಂಗಿಯ ಬಟನ್‌ಗಳನ್ನು ಬಿಚ್ಚಿ ಮಲಗಿಕೊಂಡಳು.

“ಜಯ್‌…. ಡಿಯರ್‌ ಜಯ್‌…..”

ಅಂದರೆ ಕಿರಣನೇ ಜಯರಾಮ್ ಹೆಸರಿನಲ್ಲಿ ಇಲ್ಲಿ ಕೆಲಸ ಮಾಡ್ತಿದ್ದಾನೆ? ಜಯ್‌ನ ಮುಖ ವಿವರ್ಣವಾಗಿತ್ತು. ನಾನು ಎದ್ದು ನಿಂತೆ. ಪ್ರಾಪರ್ಟಿ ಡೀಲಿಂಗ್‌  ದಂಧೆ ಇದೇನಾ? ನನ್ನ ತಲೆ ತಿರುಗುತ್ತಿತ್ತು. ನನ್ನ ಕಣ್ಣೆದುರಿಗೆ ಮಾಲತಿಯ ನಗುಮುಖ ಬಂತು. ಕಿರಣ್‌ನನ್ನನ್ನು ಬಹಳ ಪ್ರೀತಿಸುತ್ತಾರೆ, ಅವರು ಹೊಸ ಹೊಸ ನೈಟಿಗಳನ್ನು ತಂದುಕೊಡುತ್ತಾರೆ, ಒಂದು ಡೀಲ್ ಮಾಡಿದರೆ 10-20 ಸಾವಿರ ರೂ. ಸಿಗುತ್ತದೆ. ಅಂದರೆ ರೇಷ್ಮಾ ಬಿಚ್ಚಿಹಾಕಿದ್ದು ಕೂಡ ತನ್ನ ಹೆಂಡತಿಗೆ ತಂದುಕೊಡುತ್ತಾನೆ.

“ನಾನು ಹೊರಡ್ತೀನಿ,” ನಾನು ವೇಗವಾಗಿ ಹೊರಗೆ ಹೊರಟೆ. ಜಯ್‌ ರೇಷ್ಮಾಳಿಂದ ಬೇರೆಯಾಗಲು ಬಯಸುತ್ತಿದ್ದ.

“ಊಂ. ಅವಳು ಹೋಗ್ಲಿಬಿಡು. ಅವಳು ಇರೋದಿಲ್ಲ. ನನ್ನ ಮೂಡ್‌ ಹಾಳು ಮಾಡಬೇಡ ಜಯ್‌…..”

ಜಯ್‌ ಅಲ್ಲೇ ಉಳಿದುಕೊಂಡ.

ನಾನು ಹೋಟೆಲ್ ‌ನ ಪೋರ್ಟಿಕೋದಲ್ಲಿದ್ದೆ. ನನ್ನ ಮನಸ್ಸು ರೇಷ್ಮಾಳ ಕೋಣೆಯಲ್ಲಿತ್ತು. ಅಲ್ಲೇನು ನಡೆಯುತ್ತಿದೆಯೆಂದು ನಾನು ಆರಾಮವಾಗಿ ಯೋಚಿಸಬಹುದಿತ್ತು. ನನ್ನ ತಲೆ ನೋಯುತ್ತಿತ್ತು. ಇಷ್ಟು ವರ್ಣರಂಜಿತವಾದದ್ದನ್ನು, ಇಷ್ಟು ಹೊಳಪಾಗಿದ್ದನ್ನು, ಇಂತಹ ವಾಸ್ತವತೆಯ ಇಷ್ಟು ನಗ್ನತೆಯನ್ನು ನನಗೆ ಸಹಿಸಿಕೊಳ್ಳಲು ಆಗಿರಲಿಲ್ಲ. ಮನೆಗೆ ಹೋಗಿ ತಣ್ಣೀರಿನಲ್ಲಿ ಸ್ನಾನ ಮಾಡಿ ವಿಶ್ರಾಂತಿ ಪಡೆಯುತ್ತೇನೆ. ಮನೆ ತಲುಪಿದಾಗ ಮಾಲತಿ ಮತ್ತೆ ಮನೆಗೆ ಬಂದಳು.

ಅವಳು ಕೇಳಿದಳು, “ಮೀಟಿಂಗ್‌ ಚೆನ್ನಾಗಿತ್ತಾ? ಕೆಲಸ ಸಿಕ್ತಾ?”

“ಹೂಂ,” ನಾನು ಮಾಲತಿಯ ಸೌಂದರ್ಯ ನೋಡುತ್ತಿದ್ದೆ. ಅವಳಿಗೆ ಎಲ್ಲಾ ನಿಜವನ್ನು ಹೇಳಿಬಿಡಲೇ ಎನ್ನಿಸುತ್ತಿತ್ತು.

“ನಾನು ಈಗ ಆ ಡೈಮಂಡ್‌ ರಿಂಗ್‌ ತೋರಿಸ್ಲಾ? ನೀನು ಆಗಲೇ ಸರಿಯಾಗಿ ನೋಡಿರಲಿಲ್ಲ,” ಎಂದಳು.

“ಮಾಲತಿ, ಕಿರಣ್‌ ಎಲ್ಲಿ? ಈ ಸಾರಿ ಬರಲಿಲ್ವಾ?” ನಾನು ಕೇಳಿದೆ.

“ಅವರು ಈ ಬಾರಿ ದೊಡ್ಡ ಡೀಲ್ ‌ಫೈನ್‌ ಮಾಡೋದಿದೆ ಅಂದಿದ್ರು. ಎಲ್ಲಾ ಮುಗಿಸ್ಕೊಂಡು ಒಟ್ಟಿಗೆ ಬರಬಹುದು,” ಎಂದಳು.

“ಹೌದಾ….?” ನಾನು ಕೇಳಿದೆ.

ಪಾಪ ಮಾಲತಿ, ಒಬ್ಬ ಮಿಡಲ್ ಕ್ಲಾಸ್‌ ಮಹಿಳೆಗೆ ಫೈವ್ ಸ್ಟಾರ್‌ ಹೋಟೆಲ್ ‌ರೂಮುಗಳ ವಾಸ್ತವತೆ ಏನು ಗೊತ್ತಿರುತ್ತೆ? ದೊಡ್ಡ ದೊಡ್ಡ ಮನುಷ್ಯರ ಮೈಂಡ್‌ ರಿಲ್ಯಾಕ್ಸೇಶನ್‌ ಬಗ್ಗೆ ಏನು ಗೊತ್ತಿರುತ್ತದೆ? ದೊಡ್ಡ ದೊಡ್ಡ ಶೋರೂಮ್ ಗಳಿಗೆ ಹೋಗಿ ಗಂಡನ ನೈಜ ಗುಣವನ್ನು ಎಲ್ಲಿ ತಿಳಿದುಕೊಳ್ಳಲಾಗುತ್ತದೆ? ಅವಳು ಗಂಡನ ಬಗ್ಗೆ ವಿಶ್ವಾಸ ಹೊಂದಿದ್ದಾಳೆ. ಅವನ ಸುಳ್ಳು ಪ್ರೀತಿಯ ತೋರಿಕೆಯಿಂದ ಸಂತೋಷವಾಗಿದ್ದಾಳೆ. ನಾನ್ಯಾಕೆ ಆ ವಿಶ್ವಾಸವನ್ನು ಒಡೆಯಲಿ? ಹೀಗಾಗಿ ಅವಳ ಡೈಮಂಡ್‌ ರಿಂಗ್‌ನ ಕಪಟ ಕಾಂತಿಯಲ್ಲಿ ಅವಳಿಗೆ ಖುಷಿ ಕೊಡಲು ಪ್ರಯತ್ನಿಸತೊಡಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ