`ಸ್ಟೂಡೆಂಟ್‌ ಆಫ್‌ ದಿ ಇಯರ್‌’ ಚಿತ್ರದಿಂದ ಬಾಲಿವುಡ್‌ನಲ್ಲಿ ತನ್ನ ಕೆರಿಯರ್‌ ಶುರು ಹಚ್ಚಿಕೊಂಡ 21 ವರ್ಷದ ನಟಿ ಆಲಿಯಾ ಭಟ್ `ಹೈ ವೇ, ಟೂ ಸ್ಟೇಟ್ಸ್, ಹಂಪ್ಟಿ ಶರ್ಮ ಕೀ ದುಲ್ಹನಿಯಾ’ ಮುಂತಾದ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ವಹಿಸಿ, ತನ್ನ ಹೆಸರನ್ನು ನಂ.1 ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾಳೆ. ಈ ಕಾರಣದಿಂದಲೇ ಕತ್ರೀನಾ, ಕರೀನಾರ ಭಾರಿ ಸಂಭಾವನೆ ತೆರಲಾಗದ ನಿರ್ಮಾಪಕರು ಇಂದು ಆಲಿಯಾ ಎಂಬ ಗೆದ್ದೆತ್ತಿನ ಬಾಲ ಹಿಡಿದಿದ್ದಾರೆ. ಆಲಿಯಾ ಇದನ್ನು ಯೋಗಾಯೋಗ ಎನ್ನುತ್ತಾಳೆ, ಏಕೆಂದರೆ ಒಬ್ಬ ನಿರ್ಮಾಪಕ ಅಥವಾ ನಿರ್ದೇಶಕನಾಗಲಿ, ತಮ್ಮ ಕಥೆ ಮತ್ತು ಪಾತ್ರದ ಆಧಾರದಿಂದಲೇ ಸೂಕ್ತ ಕಲಾವಿದರನ್ನು ಆರಿಸುತ್ತಾರೆ ಎಂಬುದವಳ ಅಭಿಪ್ರಾಯ.

ಕೇವಲ ಹಿಂದಿ ಸಿನಿಮಾಗಳು ಮಾತ್ರವಲ್ಲದೆ, ಈಕೆ ಈಗ ಕಮರ್ಷಿಯಲ್ ಜಾಹೀರಾತುಗಳಲ್ಲೂ ಬೇಕಾದಷ್ಟು ಮಿಂಚುತ್ತಿದ್ದಾಳೆ. ಕೆಲವು ವರ್ಷಗಳ ಹಿಂದೆ ಗಾರ್ನಿಯರ್‌ ಫುಟ್‌ವೇರ್‌ ಕಂಪನಿಯ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದ ಆಲಿಯಾ ಜೊತೆ ನಡೆಸಿದ ಮಾತುಕಥೆಯ ಮುಖ್ಯಾಂಶಗಳು :

ಯಾವುದೇ ದೊಡ್ಡ ಬ್ರ್ಯಾಂಡ್‌ ಜೊತೆ ಐಡೆಂಟಿಟಿ ಇರುವುದು ನಿಮ್ಮ ಯಶಸ್ಸನ್ನು ಸೂಚಿಸುತ್ತದೆ. ಏನಂತೀರಿ?

ಗಾರ್ನಿಯರ್‌ ಜೊತೆ ಗುರುತಿಸಿಕೊಳ್ಳುವುದು ನನಗೆ ಹೆಮ್ಮೆಯ ಸಂಗತಿ! ಇದರೊಂದಿಗೆ ಅಟ್ಯಾಚ್‌ ಆದನಂತರ ನಾನು ನಟನೆಯ ಕ್ಷೇತ್ರದಲ್ಲಿ ಹೆಚ್ಚು ಯಶಸ್ವಿ ಆಗುತ್ತಿದ್ದೇನೆ ಅನಿಸುತ್ತಿದೆ. ಒಂದು ಕಾಲದಲ್ಲಿ ಜನ ನನ್ನ ನಟನೆ ಬಗ್ಗೆ ಟೀಕೆ ಮಾಡಿದ್ದೂ ಇದೆ, ಕುಚೋದ್ಯದ ಮಾತುಗಳಾಡಿದ್ದಾರೆ. ಆದರೆ `ಹೈ ವೇ’ ಚಿತ್ರದ ನಂತರ ಅಂಥವರ ಬಾಯಿಗೆ ಬೀಗ ಬಿತ್ತು. ಮುಂದಿನ ಚಿತ್ರಗಳಲ್ಲಿ ನನ್ನ ಕಡೆಯಿಂದ 200% ಉತ್ತಮ ಅಭಿನಯ ನೀಡಲು ಪ್ರಯತ್ನಿಸಿದ್ದೇನೆ. ಒಂದು ಮಾತಂತೂ ನಿಜ, ಯಶಸ್ಸೇ ಕಲಾವಿದರ ಶತ್ರು. ಕೆಲವರಂತೂ ಯಾವಾಗ ನಾವು ಏನಾದರೂ ತಪ್ಪು ಮಾಡುತ್ತೇವೋ, ಯಾವಾಗ ಹಿಡಿದುಹಾಕೋಣವೋ ಎಂದು ತುದಿಗಾಲಲ್ಲಿ ಕಾಯುತ್ತಿರುತ್ತಾರೆ.

ನೀವು ನಿಮ್ಮ ಸೌಂದರ್ಯದ ಕುರಿತು ಎಷ್ಟು ಎಚ್ಚರಿಕೆ ವಹಿಸುತ್ತೀರಿ?

ನಾನು ನನ್ನ ಸೌಂದರ್ಯದ ಕುರಿತು ಸದಾ ಎಚ್ಚರಿಕೆ ವಹಿಸುತ್ತೇನೆ. ಸುಂದರವಾಗಿ ಕಾಣಿಸುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ….? ಆದರೆ ಎಷ್ಟೋ ಜನ ಸುಂದರವಾಗಿದ್ದರೂ ಹಾಗೆ ಕಂಡುಬರುವುದಿಲ್ಲ. ಆದ್ದರಿಂದಲೇ ನಿಮ್ಮನ್ನು ನೀವು ಸುಂದರವಾಗಿದ್ದೀವಿ ಅಂದುಕೊಳ್ಳುವುದು ಬಲು ಮುಖ್ಯ. ನಾನೆಂದೂ ಚಪಲಕ್ಕಾಗಿ ಸಿಕ್ಕಾಪಟ್ಟೆ ತಿನ್ನಲು ಹೋಗುವುದಿಲ್ಲ. ನಾನು ಯಾವಾಗಲೂ ಪೌಷ್ಟಿಕ ಆಹಾರವನ್ನೇ ಸೇವಿಸುತ್ತೇನೆ. ನಿಯಮಿತವಾಗಿ, ಸಮಯಕ್ಕೆ  ತಕ್ಕಂತೆ  ವರ್ಕ್‌ ಔಟ್‌ ಮಾಡುತ್ತೇನೆ. ಚೆನ್ನಾಗಿ ನಿದ್ದೆ ಮಾಡುತ್ತೀನಿ. ನಾನು ಯಾವುದೇ ಉಡುಗೆ ಧರಿಸಲಿ, ಅದು ನನಗೆ ಒಪ್ಪುತ್ತಿದೆಯೋ ಇಲ್ಲವೋ ಎಂದು ಖಾತ್ರಿ ಪಡಿಸಿಕೊಳ್ಳುತ್ತೇನೆ. ಏಕೆಂದರೆ ಸೂಟೆಬಲ್ ಡ್ರೆಸ್‌ ಮಾತ್ರವೇ ನಿಮ್ಮ ಸೌಂದರ್ಯಕ್ಕೆ ಪೂರಕ. ನಾನು ಕೂದಲಿಗೆ ಸದಾ ಬ್ರ್ಯಾಂಡೆಡ್‌ಶ್ಯಾಂಪೂ, ಹೇರ್‌ ಆಯಿಲ್ಸ್ ನ್ನೇ ಬಳುಸುತ್ತೇನೆ. ಎಷ್ಟೋ ಸಲ ಪಾತ್ರಕ್ಕೆ ತಕ್ಕಂತೆ ಕೂದಲಿಗೆ ಕಲರಿಂಗ್‌ ಅಥವಾ ಸೆಟ್ಟಿಂಗ್ಸ್ ಮಾಡಿಸಬೇಕಾಗುತ್ತದೆ. ಆಗ ಅಸ್ತವ್ಯಸ್ತಗೊಳ್ಳುವ ಕೂದಲನ್ನು ನಾನು ಉತ್ತಮ ಶ್ಯಾಂಪೂ, ಕಂಡೀಶನರ್‌ ಬಳಸಿ ಸರಿಪಡಿಸಿಕೊಳ್ಳುತ್ತೇನೆ, ಆಗ ಮಾತ್ರವೇ ಅದು ಆರೋಗ್ಯಕರವಾಗಿರುತ್ತದೆ. ಇಷ್ಟಲ್ಲದೆ ಬೇಸಿಗೆ, ಮಳೆಗಾಲ ಅಂತ ತಲೆಗೂದಲಿನ ಮೇಲೆ ಬೇರೆ ಬೇರೆ ಪ್ರಭಾವಗಳಾಗುತ್ತಿರುತ್ತದೆ. ಆಗಲೂ ಅದರ ವಿಶೇಷ ಆರೈಕೆ ಮಾಡುತ್ತೇನೆ.

ನೀವೀಗ ಯೂಥ್‌ ಐಕಾನ್‌ ಎನಿಸಿದ್ದೀರಿ. ಹೀಗಿರುವಾಗ ನಿಮ್ಮ ಜವಾಬ್ದಾರಿ ಎಷ್ಟು ಹೆಚ್ಚಿದೆ?

ನನ್ನ ಜವಾಬ್ದಾರಿ ಎಂದರೆ ನಾನು ನನ್ನ ಅಭಿಮಾನಿ ಯುವಜನತೆಗೆ ಸರಿಯಾದ ಮಾರ್ಗದರ್ಶನ ನೀಡಬೇಕಿದೆ. ನಾನು ಯಾವುದೇ ಪಾತ್ರದಲ್ಲಿ  ಏನೇ ಮಾಡಿದರೂ ಅದು ಸರಿಯೇ ಅಲ್ಲವೇ ಎಂದು 2 ಸಲ ಪರೀಕ್ಷಿಸುತ್ತೇನೆ, ಅದು ದುಷ್ಪ್ರಭಾವ ಬೀರುವಂತಿರಬಾರದು. ನನ್ನ ಅಭಿಮಾನಿಗಳೆಲ್ಲ ಯುವಜನತೆಯೇ ಎಂದು ತಿಳಿದು ಹೆಮ್ಮೆ ಎನಿಸುತ್ತದೆ, ಸಂತೃಪ್ತಿ ತುಂಬಿದೆ.

ನಿಮ್ಮ ರೋಲ್ ಮಾಡೆಲ್ ‌ಯಾರು ಅಂತೀರಿ?

ನನ್ನ ತಾಯಿ! ನಾನು ಚಿಕ್ಕವಳಿದ್ದಾಗಿನಿಂದ ಅವರ ಪ್ರತಿಯೊಂದು ಹಾವಭಾವವನ್ನೂ ಅನುಕರಿಸುತ್ತಿದ್ದೆ. ಅವರಂತೆಯೇ ಹೇರ್‌ ಸ್ಟೈಲ್‌, ಮಾತುಕಥೆ ಎಲ್ಲಾ ಫಾಲೋ ಮಾಡುತ್ತಿದ್ದೆ. ಇವತ್ತಿಗೂ ಸಹ ನಾನು ಅವರಿಂದ ಸ್ಟೈಲ್ ‌ಟಿಪ್ಸ್ ಬಗ್ಗೆ ಕೇಳುತ್ತಿರುತ್ತೇನೆ.

ನಿಮ್ಮನ್ನು ಫಿಟ್‌ ಆಗಿರಿಸಿಕೊಳ್ಳಲು ಏನು ಮಾಡ್ತೀರಿ?

Alia-Bhatt-2

ನಾನು ನಿಯಮಿತವಾಗಿ ವ್ಯಾಯಾಮ ಮಾಡುತ್ತೀನಿ. ಧಾರಾಳವಾಗಿ ನೀರು ಕುಡಿಯುತ್ತಿರುತ್ತೀನಿ. ರೆಗ್ಯುಲರ್‌ ಕಾಫಿ ಟೀ ಬದಲು ಗ್ರೀನ್‌ ಟೀ ಕುಡಿಯುತ್ತೇನೆ. ಜೊತೆಗೆ ಸಾಧ್ಯವಾದಷ್ಟೂ ಟೆನ್ಶನ್ಸ್ ಬಿಟ್ಟು ಸಂತೋಷವಾಗಿರಲು ಪ್ರಯತ್ನಿಸುತ್ತೇನೆ. ಹಿಂದೆಲ್ಲ ಕಣ್ಣುಮುಚ್ಚಿಕೊಂಡು ಪೂರಿ, ಚನಾ ಬಟೂರಾ, ಪಿಜ್ಜಾ ಬರ್ಗರ್‌ ತಿಂದುಬಿಡುತ್ತಿದ್ದೆ. ಈಗ ಹಾಗೆ ಮಾಡದೆ ಕೇರ್‌ ಫುಲ್ ಆಗಿರ್ತೀನಿ.

ನಿಮ್ಮ ಆಸೆಗಳು ಯಾವುದಾದರೂ ಅಪೂರ್ಣವಾಗಿವೆಯೇ?

ನಾನೊಂದು ವೃದ್ಧಾಶ್ರಮ ತೆರೆಯಬೇಕೆಂದಿರುವೆ, ಇದು ಸಂಪೂರ್ಣ ಉಚಿತ ಆಗಿರುತ್ತದೆ. ನಾನು ನನ್ನ ಅಜ್ಜಿತಾತಂದಿರನ್ನು ಬಹಳ ಮಿಸ್‌ ಮಾಡಿಕೊಳ್ತೀನಿ. ನನ್ನ ಬಾಲ್ಯದಲ್ಲಿ ಅವರು ಊರಿನಿಂದ ನಮ್ಮ ಮನೆಗೆ ಬಂದಾಗ ಬಲು ಖುಷಿಯಿಂದ ಅವರ ಮುಂದೆ ಡ್ಯಾನ್ಸ್ ಮಾಡಿ ತೋರಿಸುತ್ತಿದ್ದೆ. ನಮ್ಮಮ್ಮ ಇಬ್ಬರು ಅಜ್ಜಿ ತಾತಂದಿರನ್ನೂ ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ತಮ್ಮ ಕುಟುಂಬದಿಂದ ದೂರವಾದ ಇಂಥ ಅಸಹಾಯಕರ ಸೇವೆ ಮಾಡಬೇಕೆಂಬುದೇ ನನ್ನ ಗುರಿ.

– ಜಿ. ಸುಮಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ