ಚಳಿಗಾಲ ಶುರುವಾಗುತ್ತಿದ್ದಂತೆ, ಉಣ್ಣೆಯ ಉಡುಗೆಗಳಿಗೆ ಕಬೋರ್ಡ್‌ನಿಂದ ಸ್ವಾತಂತ್ರ್ಯ ಸಿಕ್ಕಿ ಎಲ್ಲರ ಮೈ ಮೇಲೆ ನಲಿಯಲಾರಂಭಿಸುತ್ತವೆ. ಇವನ್ನು ಧರಿಸಿದ ನಂತರ ಒಗೆದು ನೀಟಾಗಿಸಿ ಎತ್ತಿಟ್ಟು ಬಳಸಬೇಕಷ್ಟೆ, ಆದರೆ ಇವುಗಳ ಸ್ವಚ್ಛತೆ ಶುಭ್ರತೆಯತ್ತ ಗಮನಕೊಡುವುದೇ ದೊಡ್ಡ ಕಷ್ಟದ ಕೆಲಸ. ದುಬಾರಿ ಬೆಲೆಯ ಶಾಲು ಹಾಗೂ ಭಾರಿ ಸ್ಟೆಟರ್ಸ್‌ನ್ನು ಯಾವ ರೀತಿ ಜೋಪಾನವಾಗಿ ಒಗೆದರೆ ಅದರ ಹೊಳಪು ಮಾಸದೆ ಉಳಿಯಬಲ್ಲದು ಎಂಬುದೊಂದು ದೊಡ್ಡ ಸವಾಲಾಗಿ ಕಾಡುತ್ತದೆ.

ಆದರೆ ಎಕ್ಸ್ ಪರ್ಟ್ಸ್ ಹೇಳುವುದೆಂದರೆ, ಉಣ್ಣೆಯ ಉಡುಗೆಗಳನ್ನು ಸರಿಯಾಗಿ ಶುಚಿಗೊಳಿಸದಿದ್ದರೆ, ಅವು ಹಾಳಾಗುವ ಸಂಭವ ಹೆಚ್ಚು. ಮುಖ್ಯವಾಗಿ ಅವು ತಮ್ಮ ಕಾಂತಿ ಕಳೆದುಕೊಂಡು ಕಳಾಹೀನವಾಗುತ್ತವೆ. ಆದ್ದರಿಂದ ಅವುಗಳ ವಾಷಿಂಗ್‌ ಕುರಿತು ಹೆಚ್ಚು ಎಚ್ಚರ ವಹಿಸಬೇಕು. ಅದನ್ನು ಮನೆಯಲ್ಲಿ ಮಾಡುವುದು ಹೇಗೆ? ಬನ್ನಿ, ಅದಕ್ಕಾಗಿ ಅನುಸರಿಸಬೇಕಾದ 4 ಹಂತಗಳನ್ನು ವಿವರವಾಗಿ ಗಮನಿಸೋಣ :

ಮೊದಲ ಹಂತ

ಎಷ್ಟೋ ಸಲ ಮಹಿಳೆಯರು ಕಾಟನ್‌ ಬಟ್ಟೆಗಳಂತೆಯೇ ಉಣ್ಣೆಯ ಉಡುಗೆಗಳನ್ನೂ, ಧರಿಸಿದ ಪ್ರತಿ ಸಲ ಒಗೆಯಲು ಯತ್ನಿಸುತ್ತಾರೆ. ಆದರೆ ಖಂಡಿತಾ ಹಾಗೆ ಮಾಡಬಾರದು. ಸಾಧ್ಯವಾದಷ್ಟೂ ಉಲ್ಲನ್‌ ಡ್ರೆಸೆಸ್‌ನ್ನು ಕನಿಷ್ಠ ಬಾರಿ ಒಗೆಯಬೇಕು, ಅಂದರೆ ಆದಷ್ಟೂ ಉಣ್ಣೆಯ ಉಡುಗೆಗಳು ಕೊಳೆಯಾಗದಂತೆ ನೋಡಿಕೊಳ್ಳಬೇಕು ಎಂದರ್ಥ. ಅಸಲಿಗೆ ದ.ಭಾರತದಲ್ಲಿ ನಾವು ಉಣ್ಣೆಯ ಉಡುಗೆ ಬಳಸುವುದು ತುಸು ಕಡಿಮೆ ಆದ್ದರಿಂದ, ಧರಿಸಿದ 5-6 ಸಲದ ನಂತರವೇ ಒಗೆಯಬೇಕು. ಅವನ್ನು ಒಗೆಯಲೇಬೇಕಾದಾಗ, ಪಿಎಚ್‌ ಬ್ಯಾಲೆನ್ಸ್ಡ್ ಲಿಕ್ವಿಡ್‌ ಡಿಟರ್ಜೆಂಟ್‌ನ್ನೇ ಬಳಸಬೇಕು. ಇನ್ನೊಂದು ಗಮನಿಸಿಕೊಳ್ಳಬೇಕಾದ ಅಂಶವೆಂದರೆ, ಇದಕ್ಕಾಗಿ ನೀವು ಬಳಸುವ ಡಿಟರ್ಜೆಂಟ್‌ನಲ್ಲಿ ಸೋಡ ಅಂಶ ಇರಬಾರದು.

ಈ ಕುರಿತಾಗಿ ಬೆಂಗಳೂರಿನ ಗೃಹಿಣಿ ಮಾಧುರಿ ಹೇಳುತ್ತಾರೆ, ಚಳಿಗಾಲ ಶುರುವಾದಾಗ ಒಮ್ಮೆ ನಾನು ಎಲ್ಲ ಉಣ್ಣೆಯ ಉಡುಗೆಗಳನ್ನೂ ಬಿಸಿಲಿನಲ್ಲಿ ಹರಡಿ, ನಂತರ ಬಳಸಲು ಶುರು ಮಾಡುತ್ತೇನೆ. ಇಷ್ಟು ದಿನ ಅದು ಮಡಿಚಿ ಒಂದು ಕಡೆ ಇಟ್ಟಿದ್ದರಿಂದ ಬಂದಿರಬಹುದಾದ ವಾಸನೆ ಹೋಗಿ ಫ್ರೆಶ್‌ನೆಸ್‌ ಬರುತ್ತದೆ, ಜೊತೆಗೆ ಹೆಚ್ಚು ಬೆಚ್ಚಗಿರುತ್ತದೆ. ಆಕೆ ಹೇಳುವುದೆಂದರೆ, ನೇರವಾಗಿ ಬಿಸಿಲಿಗೆ ಒಡ್ಡುವ ಬದಲು, ಇವನ್ನು ಗಾಳಿಯಾಡುವ ಕಡೆ ನೆರಳಿನಲ್ಲಿ ಒಣಗಿಸುವುದು ಉತ್ತಮ.

ಎರಡನೇ ಹಂತ

ಉಣ್ಣೆಯ ಉಡುಗೆಗಳನ್ನು ಒಗೆಯುವ ಮೊದಲು ಅವನ್ನು 1 ಗಂಟೆ ಕಾಲ ತಣ್ಣೀರಿನಲ್ಲಿ ನೆನೆಸುವುದು ಲೇಸು. ಇದರಿಂದಾಗಿ ಅವುಗಳಲ್ಲಿ ಅಡಗಿದ ಧೂಳು, ಕೊಳೆ ಇತ್ಯಾದಿ ಬಿಟ್ಟುಕೊಳ್ಳುತ್ತದೆ. ಅವನ್ನು ಹೆಚ್ಚು ಹೊತ್ತು ತಿಕ್ಕಿ ಒಗೆಯಬೇಕಾದ ಪ್ರಮೇಯ ಇರುವುದಿಲ್ಲ. ತಣ್ಣೀರಿನಲ್ಲಿ ನೆನೆಸುವ ಮತ್ತೊಂದು ಲಾಭವೆಂದರೆ, ಅವು ಶ್ರಿಂಕ್‌ ಆಗುವ ಗೋಜಿಲ್ಲ.

ಈ ಕುರಿತಾಗಿ ಮೈಸೂರಿನ ಮೇಘನಾ ಹೇಳುತ್ತಾರೆ, ಉಣ್ಣೆಯ ಉಡುಗೆಗಳನ್ನು ಯಾವಾಗಲೂ ತಣ್ಣೀರಿನಲ್ಲೇ ಒಗೆಯಬೇಕು, ಬಿಸಿ ನೀರು ಖಂಡಿತಾ ಕೂಡದು. ಎಕ್ಸ್ಪರ್ಟ್ಸ್ ಪ್ರಕಾರ, ನೀರು ಅತ್ತ ಬಿಸಿಯೂ ಇರಬಾರದು, ಇತ್ತ ಕೊರೆಯುವ ತಂಪೂ ಇರಬಾರದು, ನಾರ್ಮಲ್ ಆಗಿದ್ದರೆ ಸರಿ. ಬಿಸಿ ನೀರಿನಿಂದ ಸ್ವೆಟರ್‌ ಇತ್ಯಾದಿ ಶ್ರಿಂಕ್‌ ಆದರೆ, ನೀರು ಹೆಚ್ಚು ತಂಪಾಗಿದ್ದಷ್ಟೂ ಅದರ ಮೃದುತ್ವ ಹಾಳಾಗುವ ಸಂಭವವಿದೆ.

ಮೂರನೇ ಹಂತ

ಅಕಸ್ಮಾತ್‌ ಉಣ್ಣೆಯ ಉಡುಪುಗಳ ಮೇಲೆ ಏನಾದರೂ ಗುರುತು, ಕಲೆ ತಗುಲಿಕೊಂಡರೆ, ನೇರವಾಗಿ ಅದರ ಮೇಲೆ ಸೋಪು ತಿಕ್ಕುವ ಬದಲು ಅದನ್ನು ತಣ್ಣೀರಿನಲ್ಲೇ ತೊಳೆದು, ಬಿಸಿಲಿನಲ್ಲಿ ಒಣಗಿಸಬೇಕು. ಕಾಟನ್‌ ಬಟ್ಟೆಗಳ ಮೇಲಾದ ಕಲೆ ತೊಲಗಿಸಲು ಬ್ರಶ್‌ ಮಾಡುವಂತೆ ಇಲ್ಲಿ ಉಜ್ಜಿ ಉಜ್ಜಿ ಬ್ರಶ್‌ ಮಾಡಬಾರದು. ಹಾಗೆ ಮಾಡುವುದರಿಂದ ಅದರ ನಿಟ್ಟಿಂಗ್‌ ಬಿಟ್ಟುಕೊಳ್ಳುವ, ಮಧ್ಯೆ ರಂಧ್ರಗಳಾಗುವ ಸಾಧ್ಯತೆಗಳಿವೆ.

ಇದರ ಮತ್ತೊಂದು ಗೃಹೋಪಾಯವೆಂದರೆ, ಸ್ವೆಟರ್‌ಗೆ ತಗುಲಿರುವ ಕಲೆ ತೆಗೆದುಹಾಕಲು, ಕಲೆ ಆಗಿರುವ ಜಾಗದ ಮೇಲೆ ಅಂಟವಾಳದ ಪೌಡರ್‌ ಉದುರಿಸಿ, ಕೈಯಿಂದ ಮೃದುವಾಗಿ ಉಜ್ಜಿ ತೊಳೆದರೆ, ಕಲೆ ಮಾಯ! ಅರ್ಧ ಬಕೆಟ್‌ ನೀರಿನಲ್ಲಿ ಅಂಟವಾಳದ ಪೌಡರ್‌ (ಮಾರುಕಟ್ಟೆಯಲ್ಲಿ ರೀಠಾ ಪೌಡರ್‌ ಹೆಸರಿನಲ್ಲಿ ಸುಲಭ ಲಭ್ಯ) ಹರಡಿ, ಅದರಲ್ಲಿ ಸ್ವೆಟರ್‌ ಇತ್ಯಾದಿ ನೆನೆಸುವುದರಿಂದ ಸಹ ಕಲೆ ತೊಲಗಿಸಲು ಸಹಾಯಕ.

ನಾಲ್ಕನೇ ಹಂತ

ooni-kapade-dhoain

ಸ್ವೆಟರ್‌ ಇತ್ಯಾದಿಗಳು ಎಷ್ಟೇ ಕೊಳಕಾಗಿರಲಿ, ಅದರ ಮೇಲೆ ಎಷ್ಟೇ ಧೂಳಿರಲಿ, ನೀರಿನಲ್ಲಿ ನೆನೆಸುವುದರಿಂದ ಅದರ ಎಲ್ಲಾ ಕೊಳೆ ತೊಲಗುತ್ತದೆ. ಇದಾದ ಮೇಲೆ ಅದರ ಕಲೆ ತೊಲಗಿಸಲು ಕಾಟನ್‌ ಬಟ್ಟೆ ತರಹ ಅದನ್ನು ಉಜ್ಜಿ ಬ್ರಶ್‌ ಮಾಡಲು ಹೋದರೆ, ಅದರ ಕಲೆ ಹೋಗುತ್ತದೋ ಇಲ್ಲವೋ, ಅದರ ನಿಟ್ಟಿಂಗ್‌ ಖಂಡಿತಾ ಹಾಳಾಗುತ್ತದೆ. ಜೊತೆಗೆ ಅದರ ಉಲ್ಲನ್‌ ಎಳೆಗಳು (ಬಾಬ್‌ ಲಿಂಗ್ಸ್) ಸಹ ಎದ್ದು ನಿಲ್ಲುತ್ತವೆ. ಈ ರೀತಿ ಆದರೆ ಒಟ್ಟಾರೆ ಸ್ವೆಟರ್‌ನ ಆಕಾರ ಕೆಡುತ್ತದೆ, ಅಂದ ಹಾಳಾಗುತ್ತದೆ. ಉಣ್ಣೆಯ ವಸ್ತ್ರಗಳನ್ನು ಒಗೆದು ಹಿಂಡಿದಾಗಲೂ ಹೀಗೇ ಆಗುತ್ತದೆ.

ಆದ್ದರಿಂದ ಉಣ್ಣೆಯ ವಸ್ತ್ರಗಳನ್ನು ಒಗೆದ ಬಳಿಕ ಎಂದೂ ಅವನ್ನು ಹಿಂಡಬೇಡಿ. ಹಾಗೇ ತಂತಿ ಮೇಲೆ ಒಣಗಲು ಹರಡಿ, ತಾನಾಗಿ ನೀರು ಸೋರಿಹೋಗುವಂತೆ ಮಾಡಿ. ಎಂದೂ ಅವನ್ನು ಹ್ಯಾಂಗರ್‌ನಲ್ಲಿ ನೇತು ಹಾಕಬಾರದು, ಇದರಿಂದಲೂ ಅದರ ಆಕಾರ ಕೆಡುವ ಸಾಧ್ಯತೆಗಳಿವೆ. ಬದಲಿಗೆ ತಂತಿ ಮೇಲೆ ಹರಡಿ ಒಣಗಿಸಬೇಕು. ತುಂಬಾ ತೀಕ್ಷ್ಣ ಬಿಸಿಲಿಗೆ ಒಡ್ಡದೆ, ನೆರಳಿನಲ್ಲೇ ಒಣಗಿಸಬೇಕು. ಹಾಗೆ ಮಾಡಿದರೆ ಅದರ ಬಣ್ಣ ಮಾಸುತ್ತದೆ.

ಈ ಸಲಹೆಗಳನ್ನು ಗಮನಿಸಿ

ಸ್ವೆಟರ್‌ ಮೇಲೆ ತಗುಲಿದ ಆಳವಾದ ಕಲೆಗಳನ್ನು ತಕ್ಷಣ ನೀರಿನಿಂದ ತೊಳೆಯಬೇಕು, ಇಲ್ಲದಿದ್ದರೆ ಕಲೆ ತೊಲಗಿಸುವುದು ಕಷ್ಟ. ಇಂಕ್‌, ಕಾಫಿ ಟೀ, ಅರಿಶಿನ ಸಾಂಬಾರ್‌ ಮಸಾಲೆಗಳ ಕಲೆಗಳು ಬಲು ಹಠಮಾರಿ, ಬೇಗನೇ ಹೋಗುವುದಿಲ್ಲ. ಆದ್ದರಿಂದ ತಕ್ಷಣ ಅವನ್ನು ನೀರಿನಲ್ಲಿ ತೊಳೆಯುವುದೇ ಒಳ್ಳೆಯದು.

ನಿಮ್ಮ ಉಲ್ಲನ್‌ಡ್ರೆಸೆಸ್‌ ಸದಾ ಹೊಸದರಂತಿರಲು, ಅವುಗಳಲ್ಲಿ ಅಡಗಿದ ಧೂಳಿನ ಕಣಗಳು ಅವನ್ನು ಹಳೆಯದಂತೆ ತೋರ್ಪಡಿಸದಿರಲು, ಅವನ್ನು ಒಗೆಯುವಾಗ ಮೃದುವಾಗಿ ಬಟರ್‌ ಪೇಪರ್‌ ಅಥವಾ ಸಾಲ್ಟ್ ಪೇಪರ್‌ನಿಂದ ಉಜ್ಜಬೇಕು. ಇದರಿಂದ ಧೂಳು ಹೋಗುವುದಲ್ಲದೆ, ಅದರ ಎಳೆಗಳು ಎದ್ದು ನಿಲ್ಲುವುದಿಲ್ಲ.

ನಿಮ್ಮ ಸ್ವೆಟರ್‌ ಇತ್ಯಾದಿಗಳ ಬಣ್ಣ ಫೇಡ್‌ ಆಗದಂತಿರಿಸಲು, ಅವನ್ನು ನೆನೆಸುವಾಗ ಬಕೆಟ್‌ ನೀರಿಗೆ ತುಸ ಸೈಂಧವ ಲವಣ (ಬ್ಲ್ಯಾಕ್‌ ಸಾಲ್ಟ್) ಬೆರೆಸಿಡಿ.

ಅವುಗಳ ಕಲೆ ತೊಲಗಿಸಲು ಎಂದೂ ಬ್ಲೀಚ್‌, ಸೋಡ, ಅಮೋನಿಯಾಗಳನ್ನು ಬಳಸೀಲೇಬಾರದು.

ರಾತ್ರಿ ನಿದ್ದೆ ಮಾಡುವಾಗ, ಸ್ವೆಟರ್‌ ಇತ್ಯಾದಿ ಉಲ್ಲನ್‌ ಡ್ರೆಸ್‌ ಧರಿಸಬಾರದು, ಇದರಿಂದ ಅವುಗಳ ಬಾಬ್‌ ಲಿಂಗ್ಸ್ ಹಾಳಾಗುತ್ತವೆ.

ಮೊದಲು ನೀರಿನಲ್ಲಿ ನೆನೆಸಿ, ನಂತರ ವಾಷಿಂಗ್‌ ಮೆಷಿನ್‌ಗೆ ಹಾಕಿ ಒಗೆಯಿರಿ.

ಅಕಸ್ಮಾತ್‌ ಸ್ವೆಟರ್‌ ಮೇಲೆ ಎಣ್ಣೆ, ಜಿಡ್ಡಿನಂಶ ತಗುಲಿದರೆ ಆ ಭಾಗಕ್ಕೆ ಧಾರಾಳವಾಗಿ ಟಾಲ್ಕಂ ಪೌಡರ್‌ ಚಿಮುಕಿಸಿ, ಮಡಿಚಿಡಿ. ಮಾರನೇ ದಿನ ತೆರೆದು ನೋಡಿದರೆ ಅದು ಸರಿಹೋಗಿರುತ್ತದೆ.

– ಜಿ. ಅನುರಾಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ