ಸುಚಿತ್ರಾ ಅತ್ಯಂತ ಉತ್ಸಾಹದಿಂದ ಆಫ್‌ ಶೋಲ್ಡರ್‌ ಟಾಪ್‌ ಮತ್ತು ಬ್ಲ್ಯಾಕ್‌ ಕ್ಯಾಫ್ರಿ ಧರಿಸಿ ಕೂದಲಿಗೆ ಜೆಲ್ ‌ಲೇಪಿಸಿಕೊಂಡಳು. ಬಳಿಕ ಮ್ಯಾಚಿಂಗ್‌ ಜ್ಯೂವೆಲರಿ ಧರಿಸಲೆಂದು ಜ್ಯೂವೆಲರಿ ಬಾಕ್ಸ್ ತೆರೆದಾಗ ಒಮ್ಮೆಲೆ ಗಾಬರಿಗೊಂಡಳು.

ಆಕೆ ಗಾಬರಿಯಾಗಲು ಒಂದು ಮುಖ್ಯ ಕಾರಣ, ಎರಡು ಸಲವಷ್ಟೇ ಆಕೆ ಆ ಮ್ಯಾಚಿಂಗ್‌ ಜ್ಯೂವೆಲರಿ ಧರಿಸಿದ್ದಳು. ಆ ಆಭರಣದ ಹೊಳಪು ಹೊರಟುಹೋಗಿತ್ತು. ಆಕೆ ಅದಕ್ಕಾಗಿ ಖರ್ಚು ಮಾಡಿದ್ದ ಹಣವೆಲ್ಲ ವ್ಯರ್ಥವಾಗಿ ಹೋಗಿತ್ತು. ಅವಳ ಮೂಡ್‌ ಕೆಟ್ಟುಹೋಯಿತು. ಆಕೆ ಹೋಗಬೇಕೆಂದುಕೊಂಡಿದ್ದ ಪಾರ್ಟಿಗೂ ಹೋಗಲು ಆಗಲಿಲ್ಲ.

ನಿಮ್ಮ ಬಾಬತ್ತಿನಲ್ಲೂ ಹೀಗಾಗಬಾರದೆಂದರೆ, ಇಲ್ಲಿ ಕೊಟ್ಟ ಸಂಗತಿಗಳನ್ನು ಓದಿ.

ನೀವು ಜ್ಯೂವೆಲರಿ ಧರಿಸಿದ ಬಳಿಕ ಅದನ್ನು ಜ್ಯೂವೆಲರಿ ಬಾಕ್ಸ್ ನಲ್ಲಿ ಇಡುವ ಮೊದಲು ಅದಕ್ಕೆ ಸ್ವಲ್ಪ ಗಾಳಿ ತಗಲಲು ಬಿಡಿ. ಏಕೆಂದರೆ ಬೆವರಿನಿಂದ ಅದರ ಮೇಲೆ ಕಲೆಗಳು ಬೀಳಬಹುದು. ನಿಮ್ಮ ಆಭರಣ ಬೆಳ್ಳಿಯದ್ದು ಅಥವಾ ಪ್ಲಾಸ್ಟಿಕ್‌ನದ್ದು ಇರಬಹುದು.

ಕಾಸ್ಟ್ಯೂಮ್ ಜ್ಯೂವೆಲರಿ ವಿಭಿನ್ನ ಧಾತುಗಳಲ್ಲಿ ಅಂದರೆ ಮೆಟಲ್ ಪ್ಲೇಟೆಡ್‌ ಬ್ರ್ಯಾಸ್‌, ಬೆಳ್ಳಿ, ಸ್ಟೀಲ್, ಕ್ರಿಸ್ಟಲ್ ಮುಂತಾದವುಗಳಲ್ಲಿ ತಯಾರಾಗುತ್ತದೆ. ಒಂದು ವೇಳೆ ನಿಮ್ಮ ಝುಮುಕಿಗಳು, ಕಿವಿಯೋಲೆಗಳು ಹಿತ್ತಾಳೆ, ತಾಮ್ರ, ಕಂಚು, ಬೆಳ್ಳಿ ಅಥವಾ ಸ್ಟರ್ಲಿಂಗ್ ಸಿಲ್ವರ್‌ನಲ್ಲಿ ತಯಾರಿಸಲಾಗಿದ್ದರೆ ಪಾಲಿಶಿಂಗ್‌ ಪ್ಯಾಡ್‌ಗಳನ್ನು ಖರೀದಿಸಿ ಜ್ಯೂವೆಲರಿಯ ಮೇಲೆ ಉಜ್ಜಿ. ಜ್ಯೂವೆಲರಿ ಪುನಃ ಹೊಳಪು ಪಡೆದುಕೊಳ್ಳುತ್ತದೆ.

ಜ್ಯೂವೆಲರಿ ಕ್ಲೀನರ್‌ನ್ನು ನಿಮಗೆ ಖರೀದಿಸಲು ಆಗದಿದ್ದಲ್ಲಿ, ಮನೆಯಲ್ಲಿಯೇ ಹಳೆಯ ಕಂಬಳಿಯ ಮೇಲೆ ಹಿತ್ತಾಳೆ ಅಥವಾ ಬೆಳ್ಳಿಯ ಆಭರಣಗಳನ್ನು ಉಜ್ಜಿ. ಆ ಆಭರಣಗಳು ಪುನಃ ಕಾಂತಿ ಪಡೆಯುತ್ತವೆ. ಒಂದು ವೇಳೆ ನಿಮ್ಮ ಆಭರಣ ತುಂಬಾ ಹಳೆಯದಾಗಿದ್ದರೆ, ಅವನ್ನು ಚಿನಿವಾರರ ಬಳಿ ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸಿ.

ಬೆಳ್ಳಿಯ ಆಭರಣಗಳನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾರ್ನಿಶ್‌ ರಿಮೂವರ್‌ನ್ನು ಕೂಡ ನೀವು ಉಪಯೋಗಿಸಬಹುದು. ಅದನ್ನು ಹತ್ತಿಯ ತುಂಡಿನ ಮೇಲೆ ಲೇಪಿಸಿ ನಿಧಾನವಾಗಿ ಉಜ್ಜಿ. ಅವು ಮೊದಲಿನಂತೆ ಹೊಳೆಯುತ್ತವೆ.

670px-Clean-Gold-Jewelry-Step-3

ನಿಮ್ಮ ಬಳಿ ಕ್ರಿಸ್ಟಲ್ ಆಭರಣವಿದ್ದರೆ, ಪಾತ್ರೆ ತೊಳೆಯುವ ಸೋಪನ್ನು ನೀರಲ್ಲಿ ಅದ್ದಿ ಅದರ ಮೇಲೆ ಹಳೆಯ ಟೂಥ್‌ ಬ್ರಶ್‌ನಿಂದ ಉಜ್ಜಿಕೊಂಡು ಆಭರಣವನ್ನು ಸ್ವಚ್ಛಗೊಳಿಸಬಹುದು.

ಆಭರಣಗಳನ್ನು ಸ್ವಚ್ಛಗೊಳಿಸಿದ ಬಳಿಕ ಪೇಪರ್‌ ಟವೆಲ್‌ನಲ್ಲಿ ಇಟ್ಟು ಜಿಪ್‌ ಲಾಕ್‌ ಬ್ಯಾಗಿನಲ್ಲಿಡಿ. ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ, ಬೇರೆ ಬೇರೆ ಆಭರಣಗಳನ್ನು ಪ್ರತ್ಯೇಕವಾಗಿಡಿ, ಏಕೆಂದರೆ ಒಂದಕ್ಕೊಂದು ಘರ್ಷಣೆಯಾಗದಿರಲಿ. ಜಿಪ್‌ ಲಾಕ್ ಬ್ಯಾಗ್‌ನ್ನು ಭದ್ರವಾಗಿಡಿ. ಏಕೆಂದರೆ ಗಾಳಿಯಿಂದಲೂ ಆಭರಣಗಳು ಹೊಳಪು ಕಳೆದುಕೊಳ್ಳುತ್ತವೆ.

ಮಾರುಕಟ್ಟೆಯಲ್ಲಿ ಹಲವು ಬಗೆಯ ಆಭರಣ ಕ್ಲೀನರ್‌ಗಳು ಮಾರಾಟವಾಗುತ್ತವೆ. ಮೊದಲು ಅವುಗಳ ಮೇಲಿನ ನಿರ್ದೇಶನಗಳನ್ನು ಓದಿ, ಇಲ್ಲದಿದ್ದರೆ ಆಮೇಲೆ ಪಶ್ಚಾತ್ತಾಪಪಡುವಂತಹ ಸ್ಥಿತಿ ಉಂಟಾಗಬಾರದು. ಏಕೆಂದರೆ ಕೆಲವು ಫ್ಯಾಷನ್‌ ಜ್ಯೂವೆಲರಿಗಳು ಕೆಲವು ಬಗೆಯ ರಾಸಾಯನಿಕಗಳನ್ನು ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಎಚ್ಚರಿಕೆಯಿಂದ ಕಾರ್ಯ ಪ್ರವೃತ್ತರಾಗಿ.

ಫ್ಯಾಷನ್‌ ಜ್ಯೂವೆಲರಿಗಳು ಸೂಕ್ಷ್ಮವಾಗಿರುತ್ತವೆ. ಹೀಗಾಗಿ ಅವನ್ನು ಸ್ನಾನ ಮಾಡುವಾಗ ಮತ್ತು ಈಜುವಾಗ ಧರಿಸಲೇಬೇಡಿ. ನೀವು ಕಾಸ್ಟ್ಯೂಮ್ ಉಂಗುರ ಧರಿಸಿದ್ದರೆ, ಸೋಪ್‌ನಿಂದ ಕೈ ತೊಳೆದುಕೊಳ್ಳುವಾಗ ಆಭರಣದ ಸುರಕ್ಷತೆಯ ದೃಷ್ಟಿಯಿಂದ ಅದನ್ನು ನೀರಿನಿಂದ ಆದಷ್ಟು ದೂರವಿಡಿ.

ಕಾಸ್ಟ್ಯೂಮ್ ಜ್ಯೂವೆಲರಿಗಳೆಂದರೆ ಡ್ರೆಸ್‌ಗೆ ಮ್ಯಾಚ್‌ ಆಗುವಂತಹ ಅಗ್ಗದ ಸುಲಭ ಆಭರಣಗಳು. ಅವು ಹೆಚ್ಚು ದಿನಗಳ ಕಾಲ ಉಳಿಯಬೇಕೆಂದರೆ, ಅವನ್ನು ಬಳಸಿದ ಬಳಿಕ ಪೇಪರ್‌ ಟವೆಲ್ ಅಥವಾ ಟಿಶ್ಯೂ ಪೇಪರ್‌ನಿಂದ ಒರೆಸಬೇಕು. ಹೀಗೆ ಮಾಡುವುದರಿಂದ ಧೂಳಿನ ಕಣಗಳು ಮತ್ತು ಹೆಚ್ಚುವರಿ ತೈಲವನ್ನು ಟಿಶ್ಯೂ ಪೇಪರ್‌ ಹೀರಿಕೊಳ್ಳುತ್ತದೆ.

ಕಾಸ್ಟ್ಯೂಮ್ ಜ್ಯೂವೆಲರಿಗಳನ್ನು ಮೇಕಪ್‌ ಸಾಮಗ್ರಿಗಳಾದ ಲೋಶನ್‌, ನೇಲ್ ‌ಪಾಲಿಶ್‌ ರಿಮೂವರ್‌, ಸುಗಂಧದ್ರವ್ಯಗಳಿಂದ ದೂರವಿಡಿ.

ಕಪಾಟಿನ ಲಾಕರ್‌ನಲ್ಲಿ ಇಡುವ ಸಮಯದಲ್ಲಿ ನೀವು ಒಂದು ಸಂಗತಿಯನ್ನು ಗಮನದಲ್ಲಿಡಿ. ಜ್ಯೂವೆಲರಿ ಬಾಕ್ಸ್ನಲ್ಲಿ ಯಾವುದೇ ಆಭರಣಗಳನ್ನು ಒಂದಕ್ಕೊಂದು ತಗಲುವಂತೆ ಇಡಬೇಡಿ. ಬೆಳ್ಳಿಯ ಆಭರಣಗಳನ್ನು ಪ್ರತ್ಯೇಕವಾಗಿ ಹತ್ತಿಯ ಬಟ್ಟೆಯಲ್ಲಿ ಸುತ್ತಿಡಿ. ಅದೇ ರೀತಿ ಉಂಗುರಗಳು, ಬಳೆಗಳು, ಕಿವಿಯೋಲೆಗಳನ್ನು ಕೂಡ ಪ್ರತ್ಯೇಕವಾಗಿಡಿ.

ಹೇರ್‌ ಸ್ಪ್ರೇ ಕಾಸ್ಟ್ಯೂಮ್ ಜ್ಯೂವೆಲರಿಯ ವೈರಿಯಿದ್ದಂತೆ. ಹೀಗಾಗಿ ಅದರಿಂದಲೂ ನಿಮ್ಮ ಆಭರಣಗಳನ್ನು ದೂರ ಇಡಿ.

ಅಮೋನಿಯಾ, ಅಸಿಟಿಕ್‌ ಆ್ಯಸಿಡ್‌ ವಿನಿಗರ್‌, ಆಲ್ಕೋಹಾಲ್ ‌ಮುಂತಾದವು ಈ ಆಭರಣಗಳ ಸ್ಪರ್ಶಕ್ಕೆ ಬರದಿರಲಿ.

costum-jwellery

ಆಭರಣಗಳನ್ನು ಧರಿಸುವ ಮುನ್ನ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡು ಒಣಗಿಸಿಕೊಳ್ಳಿ. ಏಕೆಂದರೆ ಕೈಗಳ ತೇವಾಂಶ ಆಭರಣಗಳ ಹೊಳಪನ್ನು ಕುಂದಿಸಬಹುದು.

ಜ್ಯೂವೆಲರಿ ಬಾಕ್ಸ್ ನಲ್ಲಿ ಆಭರಣಗಳನ್ನು ಇಡುವಾಗ ಬಾಕ್ಸ್ ನಲ್ಲಿ ಸೂಟ್‌ಕೇಸ್‌ ಅಥವಾ ಚಪ್ಪಲಿಗೆ ಜೊತೆಗೆ ಬರುವ ಸಿಲ್ವರ್‌ಪ್ರೊಟೆಕ್ಟರ್‌ ಸ್ಟ್ರಿಪ್ಸ್ ಅಥವಾ ಸಿಲಿಕಾದ ಚಿಕ್ಕ ಚಿಕ್ಕ ಪ್ಯಾಕೆಟ್‌ಗಳನ್ನು ಇಡಿ. ಇದರಿಂದ ಆಭರಣಗಳ ಬಣ್ಣ ಮಾಸುವುದಿಲ್ಲ.

ನಿಮ್ಮ ಬಳಿ ಮರದಿಂದ ಮಾಡಿದ ಆಭರಣಗಳಿದ್ದರೆ, ಅವನ್ನು ವುಡ್‌ ಕ್ಲೀನರ್‌ ಅಥಾ ವುಡ್‌ ಪಾಲಿಶ್‌ನಲ್ಲಿ ಸ್ವಲ್ಪ ನೀರು ಮಿಶ್ರಣ ಮಾಡಿಕೊಂಡು ಪಾಲಿಶ್‌ ಮಾಡಿ. ಆಭರಣಗಳು ಪುನಃ ಮಿಂಚುತ್ತವೆ.

ನೀವು ಸಿಲ್ವರ್‌ ಅಥವಾ ಗೋಲ್ಡ್ ಪ್ಲೇಟೆಡ್‌ ಆಭರಣಗಳ ಮೇಲ್ಭಾಗದಲ್ಲಿ ಪ್ರೊಟೆಕ್ಟಿವ್ ‌ಕೋಟಿಂಗ್‌ ಮಾಡಿಸಬಹುದು. ಇದರಿಂದ ಆಭರಣಗಳ ನಿರ್ವಹಣೆ ಉತ್ತಮ ರೀತಿಯಲ್ಲಿ ಆಗುತ್ತದೆ.

ಫ್ಯಾಷನ್‌ ಜ್ಯೂವೆಲರಿಗಳು ಬೆವರು ಮತ್ತು ದೇಹದಿಂದ ಹೊರಹೊಮ್ಮುವ ಅನೇಕ ಬಗೆಯ ಆ್ಯಸಿಡ್‌ಗಳ ಸಂಪರ್ಕಕ್ಕೆ ಬಂದಾಗ ಅದರ ಬಣ್ಣದ ಮೇಲೆ ಪ್ರಭಾವ ಉಂಟಾಗುವುದು ಸಹಜ. ಹೀಗಾಗಿ ಅವುಗಳ ನಿರ್ವಹಣೆಗಾಗಿ ನಾಜೂಕಿನ ಬಟ್ಟೆ, ಸಿಲಿಕಾನ್ ಪ್ಯಾಕೆಟ್ಸ್ ಅಥವಾ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವ ಜಿಪ್‌ ಲಾಕ್‌ ಪ್ಲಾಸ್ಟಿಕ್‌ ಬ್ಯಾಗ್‌ ನಿಮ್ಮ ಬಳಿ ಇಟ್ಟುಕೊಳ್ಳಿ. ಕೃತಕ ಮುತ್ತುಗಳು ಬೆವರಿನಿಂದ ತಮ್ಮ ಹೊಳಪು ಕಳೆದುಕೊಳ್ಳುತ್ತವೆ. ಹೀಗಾಗಿ ಮುತ್ತಿನ ಸರವನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ತೆಗೆದಿಡಿ. ಅದಕ್ಕೆ ಅಂಟಿಕೊಂಡಿರುವ ಬೆವರಿನ ವಾಸನೆ ಹೊರಟುಹೋಗಲಿ. ನಂತರ ಹತ್ತಿ ಅಥವಾ ಟಿಶ್ಯೂ ಪೇಪರಿನಲ್ಲಿ ಸುತ್ತಿ ಇಡಿ.

ಪಾತ್ರೆಗಳನ್ನು ತೊಳೆಯುವಾಗ ಅಥವಾ ಇತರೆ ಸ್ವಚ್ಛತೆಯ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಕೃತಕ ಆಭರಣಗಳನ್ನು ತೆಗೆದಿಡಿ.

ಆಭರಣಗಳನ್ನು ಸ್ವಚ್ಛಗೊಳಿಸುವಾಗ ಎಲ್ಲ ಆಭರಣಗಳನ್ನು ಏಕಕಾಲಕ್ಕೆ ಒಂದೇ ದ್ರಾವಣದಲ್ಲಿ ಹಾಕಬೇಡಿ. ಆ ರಾಸಾಯನಿಕ ಅಥವಾ ಸೋಪ್‌ನ ದ್ರಾವಣ ಮುತ್ತು ಅಥವಾ ಆಭರಣಗಳಿಗೆ ಮಾರಕವಾಗಿ ಪರಿಣಮಿಸಬಹುದು.

ಸ್ನಾನ ಮಾಡುವ ಮುನ್ನ ಆಭರಣಗಳನ್ನು ತೆಗೆದಿಡಿ.

ಸಾಮಾನ್ಯವಾಗಿ ಕೊರಳಲ್ಲಿ ಸರ ಧರಿಸಿದಾಗ ಹಿಂಭಾಗದ ಕ್ಲಿಪ್‌ನಲ್ಲಿ ಕೂದಲು ಸಿಲುಕಿಕೊಳ್ಳುತ್ತವೆ. ಅದು ಸುಂದರವಾಗಿ ಕಾಣುವುದೂ ಇಲ್ಲ ಹಾಗೂ ಕತ್ತಿಗೆ ಕಿರಿಕಿರಿಯೂ ಹೌದು. ಹೀಗಾಗಿ ಸರ ತೆಗೆದ ಬಳಿಕ ಪ್ಲಕರ್‌ನ ಸಹಾಯದಿಂದ ಕೂದಲನ್ನು ನಿವಾರಿಸಿ. ಇದನ್ನು ಬಹಳ ನಿಧಾನವಾಗಿ ಮಾಡಿ. ಏಕೆಂದರೆ ಸರದ ಎಳೆಗೆ ತೊಂದರೆಯಾಗದಿರಲಿ.

– ಪಿ. ಮಾಳವಿಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ