ಅದಾಗಲೇ ರಾತ್ರಿ 10 ಗಂಟೆ ದಾಟಿತ್ತು. 10ನೇ ಮಹಡಿಯಲ್ಲಿದ್ದ ತನ್ನ ಫ್ಲಾಟ್‌ನಿಂದ ಸೋಮು ಈ ಕೋಣೆಯ ಕಿಟಕಿಯಿಂದ ಒಮ್ಮೆ, ಆ ಕೋಣೆಯ ಕಿಟಕಿಯಿಂದ ಮತ್ತೊಮ್ಮೆ ಇಣುಕಿ ಕೆಳಗೆ ನೋಡುತ್ತಿದ್ದ. ಅವನ ಪತ್ನಿ ಸ್ವಾತಿ ಡಿನ್ನರ್‌ ಮುಗಿಸಿ, ಅಪಾರ್ಟ್‌ಮೆಂಟ್‌ಸುತ್ತಾ ವಾಕ್‌ ಮಾಡಲಿಕ್ಕೆಂದು ಹೋಗಿದ್ದಳು, ಅದವಳ ಡೇಲಿ ರೊಟೀನ್‌. ಆದರೆ ಬಹಳ ಹೊತ್ತಾದರೂ ಅವಳು ಮೇಲೆ ಬರಲೇ ಇಲ್ಲ. ಇವರ 6 ವರ್ಷದ ಮಗ ಧ್ರುವ ಟಿವಿಯಲ್ಲಿ ಕಾರ್ಟೂನ್‌ ನೋಡುತ್ತಿದ್ದ. ಸೋಮುವಿನ ಆಫೀಸ್‌ ಕೆಲಸ ಇನ್ನೂ ಮುಗಿದಿರಲಿಲ್ಲ, ಹೀಗಾಗಿ 10 ದಾಟಿದರೂ ಲ್ಯಾಪ್‌ಟಾಪ್‌ ಹರಡಿಕೊಂಡು ಕೆಲಸದಲ್ಲಿ ತಲ್ಲೀನನಾಗಿದ್ದ. ಬಹಳ ಬೋರ್‌ ಎನಿಸಿ, ಮನೆ  ಕೀ  ಜೇಬಿಗೆ ಹಾಕಿಕೊಂಡು, ಬಾಗಿಲು ಎಳೆದುಕೊಂಡು ಕೆಳಗೆ ಲಾನ್‌ ಕಡೆ ಹೊರಟ.

ಲಾನ್‌ನಲ್ಲಿ ಇನ್ನೂ ಜನರ ಓಡಾಟ ದಟ್ಟವಾಗಿತ್ತು. ಕೆಲವರು ವಾಕಿಂಗ್‌, ಹಲವರು ಜಿಮ್, ಹರಟೆಯಲ್ಲಿ ತಲ್ಲೀನರಾಗಿದ್ದರು. ಸೋಮುವಿಗೆ ಸ್ವಾತಿ ಎಲ್ಲೂ ಕಾಣಿಸಲಿಲ್ಲ. ಅವನು ಹಾಗೇ ಅಡ್ಡಾಡುತ್ತಾ ಅಪಾರ್ಟ್‌ಮೆಂಟ್‌ನ ಶಾಪಿಂಗ್‌ ಕಾಂಪ್ಲೆಕ್ಸ್ ಕಡೆಯೂ ಹುಡುಕಿ ನೋಡಿದ. ಸಣ್ಣಪುಟ್ಟ ಅರ್ಜೆಂಟ್‌ ಶಾಪಿಂಗ್‌ಗೆ ಇವರು ಅಲ್ಲಿಗೇ ಹೋಗುತ್ತಿದ್ದರು. ಅಲ್ಲಿಂದ ಪಾರ್ಕಿನ ಕಡೆ ಕಾರ್ನರ್‌ನಲ್ಲಿ ಬೆಳಕಿನ ಕಾಂತಿ ಕಡಿಮೆ ಇದ್ದ ಕಡೆ ಸ್ವಾತಿ ಬೇರೆ ಯಾರೋ ಗಂಡಸಿನೊಂದಿಗೆ ಗಹಗಹಿಸಿ ನಗುತ್ತಾ ಹರಟೆ ಹೊಡೆಯುತ್ತಿದ್ದಳು. ಅದನ್ನು ಕಂಡು ಅವನ ತಲೆ ಸುತ್ತಲಾರಂಭಿಸಿತು. ಅವಳ ಕೆನ್ನೆಗೊಂದು ಬಾರಿಸುವಷ್ಟು ಅವನಿಗೆ ಕೋಪ ಬಂತು. ಆದರೆ ಸುತ್ತಮುತ್ತಲ ಜನರ ಓಡಾಟ ಕಂಡು ತನ್ನ ಕೋಪ ನಿಯಂತ್ರಿಸಿಕೊಳ್ಳುತ್ತಾ, ಆ ಕಡೆ ಹುಡುಕುತ್ತಾ ಬಂದವನಂತೆ “ಸ್ವಾತಿ!“ ಎಂದು ಕಿರುಚಿದ.

ಬೆಚ್ಚಿಬಿದ್ದ ಸ್ವಾತಿ ತಿರುಗಿ ನೋಡಿದಳು. ಒಮ್ಮೆಲೇ ಅವಳ ಮುಖದಲ್ಲಿ ಹಲವು ಭಾವಗಳು ಸುಳಿದಾಡಿದವು. ಅಲ್ಲಿ ಓಡಾಡುತ್ತಿದ್ದ ಜನರೆಲ್ಲ ಬಹಳ ಪರಿಚಿತರು. ಹೀಗಾಗಿ ಆ ಸಂದರ್ಭ ನಿಭಾಯಿಸಲು ತನ್ನೊಂದಿಗಿದ್ದ ಗಂಡಸನ್ನು ಆಗತಾನೇ ಕಂಡವಳಂತೆ, “ಅರೆ ಪ್ರಶಾಂತ್‌…. ಹೇಗಿದ್ದೀರಿ?” ಎಂದು ಮಾತನಾಡಿಸಿದಳು. ಪ್ರಶಾಂತ್‌ ಬೇಕೆಂದೇ ಏನೂ ಅರಿಯದ ಅಮಾಯಕನಂತೆ, ಇವನ ಕಡೆ ತಿರುಗಿ, “ಹಾಯ್‌ ಸೋಮು! ಹೌ ಆರ್‌ ಯೂ? ಓ…. ಸ್ವಾತೀನೂ ಇಲ್ಲೇ ಇದ್ದಾರೆ…..” ಎಂದ.

ಸೋಮು ಕೋಪಕ್ಕೆ ಬುದ್ಧಿ ಕೊಡಬಾರದೆಂದು ಅದನ್ನು ಕಂಟ್ರೋಲ್ ‌ಮಾಡುತ್ತಾ ಲೋಕಾಭಿರಾಮವಾಗಿ ಅದೂ ಇದೂ ಮಾತನಾಡಿದ. ಸ್ವಾತಿ ಮೌನಕ್ಕೆ ಶರಣಾದಳು. ಸೋಮು ಹೆಚ್ಚುತ್ತಿದ್ದ ಚಳಿ, ಅಪಾರ್ಟ್‌ಮೆಂಟ್‌ನ ಪಾಲಿಟಿಕ್ಸ್ ಇತ್ಯಾದಿ ಬೇಡದ ವಿಷಯ ತೆಗೆದು ಹರಟಲಾರಂಭಿಸಿದ. ಸ್ವಲ್ಪ ದೂರ ಈ ದಂಪತಿಗಳ ಜೊತೆ ವಾಕಿಂಗ್‌ ನಾಟಕವಾಡಿದ ಪ್ರಶಾಂತ್‌, “ಮನೆಯವರು ಕಾಯುತ್ತಿರಬಹುದು,” ಎಂದು ಕೈ ಬೀಸಿ ಹೊರಟುಹೋದ.

ಪ್ರಶಾಂತ್‌ ಹೊರಟ ನಂತರ ಸೋಮು ಸ್ವಾತಿಯತ್ತ ಗುರಾಯಿಸುತ್ತಾ, “ಏನು ನಡೆಯುತ್ತಿದೆ ಇಲ್ಲಿ…. ಇಷ್ಟು ಹೊತ್ತಿನಲ್ಲಿ?” ಎಂದು ತೀಕ್ಷ್ಣವಾಗಿ ಕೇಳಿದ.

“ನೀವು ಕಣ್ಣಾರೆ ನೋಡಿದ್ರಿ ತಾನೇ……? ಹೇಗೆ ಬೇಕೋ ಅರ್ಥ ಮಾಡಿಕೊಳ್ಳಿ,” ಎಂದು ಉಡಾಫೆಯಿಂದ ನುಡಿದಳು. ಸ್ವಾತಿ ದಾಪುಗಾಲು ಹಾಕುತ್ತಾ ಮನೆ ಕಡೆ ಹೆಜ್ಜೆ ಹಾಕಿದಳು. ಇಬ್ಬರೂ ಮನೆಗೆ ಬಂದಾಗ ಟಿವಿ ಓಡುತ್ತಿತ್ತು, ಧ್ರುವ ಸೋಫಾದಲ್ಲೇ ಒರಗಿ ನಿದ್ರಿಸಿಬಿಟ್ಟಿದ್ದ. ಸ್ವಾತಿ ಅವನನ್ನು ಎತ್ತಿಕೊಂಡು ಹೋಗಿ ಅವನ ಕೋಣೆಯಲ್ಲಿ ಮಲಗಿಸಿ ಬಂದಳು. ಮಾರನೇ ದಿನ ಅವನು ಶಾಲೆಗೆ ಹೋಗಬೇಕಿತ್ತು.

ಸ್ವಾತಿ ಬೆಡ್‌ ರೂಮಿಗೆ ಬಂದ ತಕ್ಷಣ ಸೋಮು ಮತ್ತೆ ಸಿಡುಕಿದ, “ಸ್ವಾತಿ…. ಇದೇನು ನಿನ್ನ ಹಾಳು ಹರಟೆ….?ಅದೂ ಅಷ್ಟು ಹೊತ್ತಿನಲ್ಲಿ ಪರಪುರುಷನೊಂದಿಗೆ…. ನೋಡಿದವರು ಏನೆಂದುಕೊಂಡಾರು?”

“ಹೀಗೇ…. ಏನೋ ಮಾತನಾಡುವುದಿತ್ತು. ಅವನೇನೂ ಅಪರಿಚಿತ ಪರಪುರುಷನವಲ್ಲ…… ನಿಮ್ಮ ಫ್ರೆಂಡ್‌ ಪ್ರಶಾಂತ್‌ ತಾನೇ? ನನಗೂ ಫ್ರೆಂಡೇ…. ಹೀಗಾಗಿ ವಾಕ್‌ ಮಾಡುತ್ತಾ ಮಾತನಾಡುತ್ತಿದ್ದೆ.”

“ಅದಕ್ಕೆಲ್ಲ ಒಂದು ಹೊತ್ತೂಗೊತ್ತು ಇಲ್ಲವೇ? ಅಂಥ ತಲೆ ಉರುಳುವಂಥ ವಿಷಯ ಏನಿತ್ತು?” ಅವಳ ನಿರುತ್ತರ ಅಲ್ಲಿಗೆ ಮಾತು ನಿಲ್ಲಿಸಿತು.

ಮಾರನೇ ಬೆಳಗ್ಗೆ ಸೋಮು ಬೇಗ ಎದ್ದು ಆಫೀಸಿಗೆ ಹೊರಡಲು ತಯಾರಾಗುತ್ತಿದ್ದ. ಅವನದೇ ಆದ ಸ್ವಂತ ಬಿಸ್‌ನೆಸ್‌ ಇತ್ತು. ಇತ್ತೀಚೆಗೆ ಅವನ ಬಿಸ್‌ನೆಸ್‌ ಸ್ವಲ್ಪ ಡಲ್ ಆಗಿತ್ತು…. ಹೀಗಾಗಿ ಎಲ್ಲಾ ಸಣ್ಣಪುಟ್ಟ ವಿಷಯಕ್ಕೂ ಅವನಿಗೆ ಬೇಗ ಕೋಪ ಬಂದುಬಿಡುತ್ತಿತ್ತು. ಸ್ವಾತಿಯ ಈ ಹೊಸ ಅವತಾರ ಅವನ ಕೋಪವನ್ನು ಇನ್ನೂ ಕೆರಳಿಸಿತ್ತು. ಹೀಗಾಗಿ ಬೆಳಗ್ಗೆ ಗರಂ ಆಗಿಯೇ ಕಳೆಯಿತು.

ಎಂದಿನ ಕಾಫಿ ತಿಂಡಿ ಮುಗಿಸಿ ಮೌನವಾಗಿ ಅವನು ಆಫೀಸಿಗೆ ಹೊರಟ. ಮಗನನ್ನು ಶಾಲೆಗೆ ಕಳುಹಿಸಿ, ಏನೋ ಬೇಸರವಾಗಿ ಸ್ವಾತಿ ಹಾಗೇ ಮಲಗಿದಳು.

ಸ್ವಾತಿ ಹಿಂದಿನ ರಾತ್ರಿ ನಡೆದುದನ್ನು ನೆನಿಸಿಕೊಂಡಳು. ಪ್ರಶಾಂತ್‌ನ ವ್ಯಕ್ತಿತ್ವಕ್ಕೆ ಎಂದೋ ಮಾರುಹೋಗಿದ್ದ ಸ್ವಾತಿ ನೆಪ ಹುಡುಕಿ ಅವನನ್ನು ಮಾತನಾಡಿಸುತ್ತಿದ್ದಳು. ಗಂಡನ ಬಗ್ಗೆ ಡೋಂಟ್‌ ಕೇರ್‌ ಆಗಿದ್ದ ಅವಳು ಪ್ರಶಾಂತನ ಮಾತುಗಳನ್ನು ಮೆಲುಕು ಹಾಕುವುದರಲ್ಲಿ ಸುಖ ಕಾಣುತ್ತಿದ್ದಳು.

ಪ್ರಶಾಂತ್‌ ಮತ್ತು ಸೋಮು ಪರಿವಾರಗಳು ಹೆಚ್ಚೂ ಕಡಿಮೆ ಒಟ್ಟಿಗೇ ಒಂದೇ ಸಲ ಆ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಅಲ್ಲಿನ ಜಿಮ್ ಗೆ ಸೋಮು ಅತಿ ವಿರಳ ಭೇಟಿ ನೀಡಿದರೆ, ಸ್ವಾತಿ ತಪ್ಪದೆ ಹೋಗುವಳು. ಅಲ್ಲೇ ಅವಳಿಗೆ ಪ್ರಶಾಂತನ ದೋಸ್ತಿ ಆದದ್ದು. ಪ್ರಶಾಂತನ ಪತ್ನಿ ಸ್ನೇಹಾ, ಅವರ ಮಕ್ಕಳಾದ ಆರ್ಯನ್‌ ಶುಭಾರನ್ನು ಹಲವು ಸಲ ಭೇಟಿಯಾಗಿ ಸ್ನೇಹ ಬೆಳೆಸಿದ್ದಳು. ಪರಸ್ಪರ ಎರಡೂ ಮನೆಯವರು ಬಂದು ಹೋಗಿ ಮಾಡುತ್ತಿದ್ದರು.

ಅದೇನು ದೈಹಿಕ ಆಕರ್ಷಣೆಯೋ ಏನೋ, ಜಿಮ್ ನಲ್ಲಿ ಒಟ್ಟೊಟ್ಟಿಗೆ ವರ್ಕ್‌ ಔಟ್‌ ಮಾಡುತ್ತಾ ಸ್ವಾತಿ ಪ್ರಶಾಂತ್‌ ತೀರಾ ನಿಕಟವಾದರು. ಯಾರಿಗೂ ತಿಳಿಯದಂತೆ ಪರಸ್ಪರ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಇಬ್ಬರ ಮನಸ್ಸೂ ನೈತಿಕತೆಯ ಎಲ್ಲಾ ಕಟ್ಟುಪಾಡುಗಳನ್ನೂ, ಸಮಾಜದ ವಿಧಿ ವಿಧಾನಗಳನ್ನು ಧಿಕ್ಕರಿಸಿ ದೈಹಿಕ ಮಿಲನಕ್ಕಷ್ಟೇ ಪ್ರಾಧಾನ್ಯತೆ ನೀಡುತ್ತಿದ್ದರು. ಸಮಯಾವಕಾಶ ಸಿಕ್ಕಾಗೆಲ್ಲ ಹೊರಗೆ ಸುತ್ತಾಡುವುದು, ಹೋಟೆಲ್‌, ಡಿನ್ನರ್‌, ಜೊತೆಯಾಗಿ ನಗು, ಸುತ್ತಾಟ…. ಇಬ್ಬರಿಗೂ ಈ ವಿಷಯದಲ್ಲಿ ಲೇಷ ಮಾತ್ರವೂ ಅಪರಾಧಿಪ್ರಜ್ಞೆ ಇರಲೇ ಇಲ್ಲ. ಇಂದಿನ ದಿನವನ್ನು ಮಜವಾಗಿ ಕಳೆದು ಬಿಡಬೇಕು, ಅನ್ನುವುದೊಂದೇ ಜೀವನದ ಗುರಿಯಾಗಿತ್ತು. ಅವರಿಗೆ ಅಪಾರ್ಟ್‌ಮೆಂಟ್‌ನ ಪರಿಚಿತರ ಗೊಡವೆಯೂ ಇರಲಿಲ್ಲ. ಧ್ರುವ ಇನ್ನೂ UKG ಕಲಿಯುತ್ತಿದ್ದ ಕೂಸು. ಅವನ ಜವಾಬ್ದಾರಿ ಎಲ್ಲಾ ಅವಳದೇ ಆಗಿತ್ತು. ಸೋಮು ಬಿಸ್‌ನೆಸ್‌ ಬಿಟ್ಟರೆ ಮನೆ ಕಡೆ ನಯಾಪೈಸೆಯೂ ಗಮನಹರಿಸದ ತುಸು ಬೇಜವಾಬ್ದಾರಿ ಗಂಡ ಎಂದೇ ಹೇಳಬೇಕು. ಅವನ ಈ ವಿರಕ್ತಿಯೇ ಅವಳು ಹೊರಗಿನ ಆಕರ್ಷಣೆಗೆ ಸಿಲುಕಲು ಮುಖ್ಯ ಕಾರಣ ಎಂದರೆ ಉತ್ಪ್ರೇಕ್ಷೆಯಲ್ಲ.

ಸೋಮು ತಂದೆ ಮೊದಲಿನಿಂದಲೂ ಬಿಸ್‌ನೆಸ್‌ನಲ್ಲಿ ಅನುಕೂಲಸ್ಥರು. ಅವರ ಮನೆತನ ನೋಡಿಯೇ ಸ್ವಾತಿಯ ತಂದೆ ಮಗಳನ್ನು ಆ ಮನೆಗೆ ಕೊಡಲು ಮುಂದಾದರು. ಸ್ವಾತಿ ಹಾಗೂ ಸೋಮು ನಡುವೆ 10 ವರ್ಷಗಳ ಅಂತರ. ಈ ಕಾಲದಲ್ಲಿ ಯಾರು ಇಷ್ಟು ಅಂತರವಿಟ್ಟುಕೊಂಡು ಮದುವೆಯಾಗುತ್ತಾರೆ ಎಂದು ಅವಳು ತಾಯಿ ತಂದೆ ಜೊತೆ ಜಗಳವಾಡಿದ್ದಳು. ಮೂರು ಹೆಣ್ಣುಮಕ್ಕಳ ತಂದೆ ಅದಕ್ಕೆ ಪ್ರಾಶಸ್ತ್ಯ ಕೊಡದೆ, ಇಬ್ಬರು ಹಿರಿಯ ಹೆಣ್ಣುಮಕ್ಕಳ ಮದುವೆಯ ಸಾಲವೇ ತೀರಿಲ್ಲ, ಈಗ ಮತ್ತೆ ಹೆಚ್ಚು ರಿಸ್ಕ್ ತೆಗೆದುಕೊಳ್ಳಲಾಗದು ಎಂದು, ಸೋಮು ಮನೆಯವರು ಒಪ್ಪಿದ ತಕ್ಷಣ ಮಗಳ ವಿರೋಧ ಲೆಕ್ಕಿಸದೆ ಬಲವಂತವಾಗಿ ವಾಲಗ ಊದಿಸಿದ್ದರು. ಈ ರೀತಿ ದಾಂಪತ್ಯ ಅವಳ ಪಾಲಿಗೆ ಒಲ್ಲದ ಔತಣವಾಗಿತ್ತು. ಧ್ರುವ ಹುಟ್ಟಿ 5 ವರ್ಷಗಳವರೆಗೂ ಇದು ಹಾಗೂ ಹೀಗೂ ಡೋಲಾಯಮಾನವಾಗಿ ಸಾಗಿತು. ಅವರ ಅಪಾರ್ಟ್‌ಮೆಂಟ್‌ಗೆ ಪ್ರಶಾಂತನ ಆಗಮನವಾದಾಗಿನಿಂದ, ಈ ರೀತಿಯ ವ್ಯವಹಾರ ಮುಂದುವರಿದಿತ್ತು. ಮಗುವಿಗೆ 2 ವರ್ಷವಿದ್ದಾಗಲೇ ಒಂದು ಖಾಸಗಿ ಆ್ಯಡ್‌ ಏಜೆನ್ಸಿಯಲ್ಲಿ ಉನ್ನತ ಕೆಲಸ ಗಿಟ್ಟಿಸಿಕೊಂಡ ಸ್ವಾತಿ, ಆರ್ಥಿಕವಾಗಿ ಎಂದೂ ಗಂಡನ ಮೇಲೆ ಅವಲಂಬಿತಳಾಗುವ ಅಗತ್ಯ ಉಳಿಯಲಿಲ್ಲ. ತನ್ನ ಸಂಬಳವನ್ನೆಲ್ಲ ತನ್ನ ಬ್ಯಾಂಕ್ ಅಕೌಂಟ್‌ನಲ್ಲಿ ಹಾಕಿಕೊಂಡು ನೆಮ್ಮದಿಯಾಗಿದ್ದಳು. ಮನೆಯ ಸಮಸ್ತ ಖರ್ಚು ಸೋಮುವಿನದೇ ಆಗಿತ್ತು. ಬೇಬಿ ಸೆಂಟರ್‌ನಲ್ಲೇ  ಬೆಳೆದು ಧ್ರುವ ಇದೀಗ UKG ತಲುಪಿದ್ದ. ಅವಳಿಗೆ ಈ ರೀತಿಯ ಬಿಂದಾಸ್‌ ಜೀವನ ಒಗ್ಗಿಹೋಯಿತು. ಗಂಡನೆಂದರೆ ನಿರ್ಲಕ್ಷ್ಯವೇ ಅಧಿಕವಾಯಿತು.

ಅತಿ ಸುಂದರ ಪರ್ಸನಾಲ್ಟಿ, ಓವರ್‌ ಸ್ಮಾರ್ಟ್‌ನೆಸ್‌, ಗ್ಲಾಮರಸ್‌, ಫಿಟ್‌ & ಫೈನ್‌ ಆಗಿದ್ದ ಸ್ವಾತಿ ಸೋಮುವಿಗೆ ಇಜ್ಜೋಡು ಎಂದು ಯಾರು ಬೇಕಾದರೂ ಅರಿಯಬಹುದಿತ್ತು. ಇಬ್ಬರೂ ಪಾರ್ಟಿಗಳಿಗೆ ಒಟ್ಟಾಗಿ ಬಂದರೆ, ಅವಳು ಬೇಗ ಅಲ್ಲಿ ಎಲ್ಲರೊಂದಿಗೆ ಬೆರೆತುಹೋಗಿ ಆಕರ್ಷಣೆಯ ಕೇಂದ್ರಬಿಂದು ಆಗುತ್ತಿದ್ದಳು. ಸೋಮು ಗೆಳೆಯರೊಂದಿಗೆ ಹರಟುತ್ತಾ, ಕೈಲೊಂದು ಗ್ಲಾಸ್‌ ಹಿಡಿದು ಮೂಲೆ ಸೇರುತ್ತಿದ್ದ.

ಮೊದಲಿನಿಂದಲೂ ಅತಿ ಸೋಮಾರಿಯಾಗೇ ಬೆಳೆದಿದ್ದ ಸೋಮು, ಡಿಗ್ರಿ ಮುಗಿದ ತಕ್ಷಣ ಅಪ್ಪನ ಬಿಸ್‌ನೆಸ್‌ ಸಂಭಾಳಿಸುತ್ತಾ, ಸದಾ ಪಾರ್ಟಿ, ಗೆಳೆಯರು, ಕುಡಿತ ಎಂದು ಮೋಜು ಉಡಾಯಿಸುವ ಉಂಡಾಡಿ ಗಂಡನ ಸ್ವಭಾವದ ಬೇಜವಾಬ್ದಾರಿ ಗಂಡಸು.

ಅವಳ ಅತ್ತೆಮನೆಯವರು ಇವರ ಏರಿಯಾಗೆ ಹತ್ತಿರದಲ್ಲೇ ಇದ್ದರು. ಹೀಗಾಗಿ ದಿನಕ್ಕೊಮ್ಮೆ ಅಗತ್ಯವಾಗಿ ಅಲ್ಲಿಗೆ ಹೋಗಿ ಅವರ ಬೇಕು ಬೇಡಗಳನ್ನು ತನ್ನ ಕರ್ತವ್ಯ ಎಂಬಂತೆ ಪೂರೈಸುವಳು. ಅವರಿಗೊಬ್ಬ ಕುಕ್‌, ಮನೆಗೆಲಸಕ್ಕೆ ಆವಳು ಇದ್ದುದರಿಂದ ಇವಳಿಗೆ ಅವರ ಯೋಗಕ್ಷೇಮ ವಿಚಾರಿಸಿ ಆತ್ಮೀಯವಾಗಿ ಕಾಲ ಕಳೆಯುವುದೇ ಮುಖ್ಯವಾಗಿತ್ತು. ಕೆಲಸದಿಂದ ಮನೆಗೆ ಬರುವಾಗ ಅಗತ್ಯವಾಗಿ ಅವಳು ಅದನ್ನು ಮಾಡುವಳು. ನೆನೆದಾಗೆಲ್ಲ, ವಾರಾಂತ್ಯದಲ್ಲಿ ಧ್ರುವ ಅಜ್ಜಿ ಮನೆಗೆ ಹೋಗಿಬಿಡುತ್ತಿದ್ದ.

ಆ ವಿಧದಲ್ಲೂ ಅವಳು ಹಾಯಾಗಿರಲು ಸಾಧ್ಯವಾಗಿತ್ತು. ಸೊಸೆಗಿಂತ ಮೊಮ್ಮಗು ತಮ್ಮ ಬಳಿ ಹೆಚ್ಚು ಕಾಲ ಇರಲಿ ಎಂಬುದೇ ಅವರ ಆಸೆ ಆದ್ದರಿಂದ, ಆ ವಿಧದಲ್ಲೂ ಒಳ್ಳೆಯ ಸೊಸೆ ಎಂದೇ ಹೆಸರು ಪಡೆದಿದ್ದಳು.

ತನ್ನ ಗೆಳೆಯರ ಕೂಟ, ಸಿಗರೇಟ್‌, ಹೆಂಡ, ಪಾರ್ಟಿ, ಬಿಸ್‌ನೆಸ್‌ ಲೋಕದಲ್ಲಿ ಮುಳುಗಿಹೋಗಿದ್ದ ಸೋಮುವಿಗೆ ತನಗಿಂತ 10 ವರ್ಷ ಕಿರಿಯವಳಾದ ಹೆಂಡತಿ ಜೊತೆ ರೊಮ್ಯಾಂಟಿಕ್‌ ಆಗಿ ವ್ಯವಹರಿಸುವುದು ಹೇಗೆಂದು ಗೊತ್ತಿರಲಿಲ್ಲ. ಹೆಂಡತಿ ಎಂದರೆ ತಾನು ಕರೆದಾಗೆಲ್ಲ ಆಸೆ ತೀರಿಸುವವಳು ಅಷ್ಟೆ ಎಂಬುದೊಂದೇ ಬಹುತೇಕ ಗಂಡಂದಿರ ಸೆಕ್ಕ, ಅದಕ್ಕೆ ಸೋಮು ಹೊರತಾಗಿರಲಿಲ್ಲ.

ಇಂಥ ಅಯೋಮಯ ಸ್ಥಿತಿಯಲ್ಲಿದ್ದ ಸ್ವಾತಿ, ಪ್ರಶಾಂತನ ಭೇಟಿಯಿಂದ ಪ್ರಪಲ್ಲಿತಳಾಗಿದ್ದಳು. ಅವಳ ಹೃದಯ ಪ್ರಶಾಂತನಿಗಾಗಿ ಮಿಡಿಯತೊಡಗಿತು. ವಿವಾಹಿತನಾಗಿದ್ದರೂ ಹೆಂಡತಿಯಿಂದ ರೋಸಿಹೋಗಿದ್ದ ಪ್ರಶಾಂತ್‌, ತಾನಾಗಿ ಒಲಿದು ಬಂದ ಸ್ವಾತಿಯನ್ನು ಅದೇ ರೀತಿಯ ಪ್ರೇಮದಿಂದ ಸ್ಪಂದಿಸತೊಡಗಿದ. ಅವಳ ಪ್ರತಿಯೊಂದು ಆಸೆಯನ್ನೂ ಪೂರೈಸಲು ತುಡಿಯುತ್ತಿದ್ದ. ಸೋಮು ಬಿಸ್‌ನೆಸ್‌ ಸಲುವಾಗಿ ದೆಹಲಿ, ಮುಂಬೈ ಎಂದು ಟೂರ್‌ ಹೊರಟಾಗ, ಧ್ರುವ ಶಾಲೆಯಲ್ಲಿರುವ ಸಮಯ ನೋಡಿಕೊಂಡು, ಅವಳೊಂದಿಗೆ ಕಾಲ ಕಳೆಯುತ್ತಿದ್ದ. ಯಾವ ನಿಯಮಕ್ಕೂ ಒಳಪಡದ ಈ ಇಬ್ಬರೂ, ಸಮಾಜದ ಎಲ್ಲಾ ಕಟ್ಟಳೆಗಳನ್ನೂ ಮೀರಿ ಒಂದಾಗಿ ನಲಿಯುವುದೇ ಸುಖವೆಂದು ನಂಬಿದರು.

ಪತಿಯಿಂದ ಪಡೆಯಾಲಾಗದ ಭಾವಾವೇಶದ ತೀವ್ರತೆ, ಪ್ರೇಮಾನುರಾಗಗಳನ್ನು ಪ್ರಶಾಂತನಲ್ಲಿ ಕಂಡು, ಅವನ ಆದರಣೆ, ಅನುಸರಣೆಯಿಂದ ಬೀಗುತ್ತಾ ಮೈಮರೆಯುತ್ತಿದ್ದಳು ಸ್ವಾತಿ. ಪತಿಯ ಬಲವಂತದ ಕಾಮಾಲಾಸೆಗೂ, ಪ್ರಶಾಂತನ ಪ್ರೀತಿಗೂ ತಾನಾಗಿ ಸಮರ್ಪಿತಳಾಗಿ ಅಜಗಜಾಂತರ ವ್ಯತ್ಯಾಸ ಗಮನಿಸಿಕೊಂಡಿದ್ದಳು.

ಸೋಮು ಸಮಯಾವಕಾಶ ಸಿಕ್ಕಿದಾಗೆಲ್ಲ ಪಾರ್ಟಿಗಳಲ್ಲಿ ಇವಳ ಮುಂದೆಯೇ ಬೇರೆ ಹೆಂಗಸರೊಡನೆ ಫ್ಲರ್ಟ್‌ ಮಾಡುತ್ತಿದ್ದ. ಸ್ವಾತಿ ಆಕ್ಷೇಪಿಸಿದಾಗ, ಅದನ್ನು ಅಷ್ಟು ಸಣ್ಣತನದಲ್ಲಿ ನೋಡಬೇಡ, ಕೂಪ ಮಂಡೂಕವಾಗದೆ ಸೋಶಿಯಲ್ ಆಗಿರುವುದನ್ನು ಕಲಿ ಎನ್ನುತ್ತಿದ್ದ. ಒಮ್ಮೆ ಅಲ್ಲ, ಹಲವು ಸಲ ಸೋಮು ತನ್ನ ಕಸಿನ್ಸ್ ಜೊತೆ ಓವರ್‌ ಆಗಿ ವರ್ತಿಸುತ್ತಿರುವುದನ್ನು ಅವಳು ಕಣ್ಣಾರೆ ಕಂಡು ಖಂಡಿಸಿದ್ದರೂ, ಅವನು ಸುಧಾರಣೆ ಹೊಂದಲೇ ಇಲ್ಲ. ಪರಸ್ತ್ರೀ ಎದುರು ಹಾಗೇ ನಡೆದುಕೊಳ್ಳುವುದೇ ಗಂಡಸ್ತನ ಎಂದು ಅಹಂಕಾರದಿಂದ ಹೇಳಿಕೊಳ್ಳುತ್ತಿದ್ದ. ಅದೆಲ್ಲ ನೆನಪಿಗೆ ಬಂದಿದ್ದರಿಂದಲೇ ಅವನು ಪ್ರಶಾಂತನ ಬಳಿ ಹರಟುತ್ತಿದ್ದ ಹೆಂಡತಿಯನ್ನು ಹೆಚ್ಚು ಖಂಡಿಸಲಾರದವನಾಗಿದ್ದ. ಹೀಗೆ ಇಡೀ ದಿನ ಪ್ರಶಾಂತನ ನೆನಪಲ್ಲೇ ಕಳೆದಳು ಸ್ವಾತಿ.

ಅತ್ತ ಹಿಂದಿನ ರಾತ್ರಿ ಪ್ರಶಾಂತ್‌ ಮನೆ ತಲುಪುವ ಹೊತ್ತಿಗೆ ಮಕ್ಕಳು, ಸ್ನೇಹಾ ಎಲ್ಲರೂ ಮಲಗಿಬಿಟ್ಟಿದ್ದರು. ಪ್ರಶಾಂತ್‌ ಡ್ರೆಸ್‌ ಚೇಂಜ್‌ ಮಾಡಿ ಮಲಗಲು ಬಂದಾಗ, ಇನ್ನೂ ನಿದ್ದೆಗೆ ಜಾರಿರದ ಸ್ನೇಹಾ ಕೇಳಿದಳು, “ಇದೇನು ಇಷ್ಟು ಲೇಟ್ ಮಾಡಿದ್ರಿ?”

“ಹ್ಞಾಂ…. ಊಟ ಆದ ಮೇಲೆ ವಾಕಿಂಗ್‌ ಮಾಡುವುದು ಒಳ್ಳೆಯದು.”

“ಯಾರ ಜೊತೆ ಇದ್ದಿರಿ…….?”

“ಸೋಮು ಸ್ವಾತಿ ಸಿಕ್ಕಿದ್ದರು. ಹಾಗೇ ಮಾಮೂಲಿ ವಿಷಯ ಮಾತನಾಡುತ್ತಾ ವಾಕಿಂಗ್‌ ಮುಗಿಸಿದೆ.”

ಸ್ನೇಹಾ ಸುಮ್ಮನಾದಳು. ಇತ್ತೀಚೆಗೆ ಪತಿ ಸ್ವಾತಿ ಜೊತೆ ಹೆಚ್ಚು ಸಲುಗೆ ವಹಿಸುತ್ತಿರುವುದು ಅವಳ ಗಮನಕ್ಕೆ ಬಂದಿತ್ತು. ಅವನನ್ನು ನೇರವಾಗಿ ಎದುರು ಹಾಕಿಕೊಂಡು ಜಗಳವಾಡುವುದು ಅವಳಿಗೆ ಬೇಕಿರಲಿಲ್ಲ. ಜಗಳ ಪ್ರಕೋಪಕ್ಕೆ ಹೋದರೆ ತಾನು ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೊರಡಬೇಕಾಗುತ್ತದೆ. ಈಗ ತಾನೇ 10ನೇ, 12ನೇ ತರಗತಿ ಕಲಿಯುತ್ತಿರುವ ಮಕ್ಕಳನ್ನು ಕಟ್ಟಿಕೊಂಡು ಒಬ್ಬಂಟಿಯಾಗಿ ಹೇಗೆ ತಾನು ಹೋರಾಡುವುದು? ಅದೂ ಅವಳು ಅಪ್ಪಟ ಗೃಹಿಣಿ, ಆರ್ಥಿಕವಾಗಿ 100% ಅವನ ಮೇಲಂಯೇ ಅವಲಂಬಿತಳು.

ಸ್ನೇಹಾಳಿಗೆ ಪ್ರಶಾಂತನ ಸ್ವಭಾವ ಚೆನ್ನಾಗಿ ಗೊತ್ತು. ಎಲ್ಲದಕ್ಕೂ ಕೂಗಾಡುವುದು, ರೇಗಾಡುವುದೊಂದೇ ಅವನಿಗೆ ಗೊತ್ತಿದ್ದದ್ದು. ಇವನ ಈ ಸ್ವಭಾವ ತಿಳಿಯದೆ, ಮನೆಯ ಹೊರಗೆ ಪರೋಪಕಾರಿ, ಆದರೆ ಮನೆಗೆ ಮಾತ್ರ ಮಾರಿ ಅಂತಿರುವ ಗಂಡನ ಗುಣ ತಿಳಿಯದೆ ಸ್ವಾತಿ ಅವನಿಗೆ ಮರುಳಾಗಿದ್ದಾಳೆ ಎಂದೇ ಸ್ನೇಹಾ ತರ್ಕಿಸಿದಳು. ಇಷ್ಟು ವರ್ಷಗಳ ವೈವಾಹಿಕ ಜೀವನದಲ್ಲಿ ಅವನು ಹೆಂಡತಿಯನ್ನು ಆದರಿಸಿ ನಡೆದುಕೊಂಡವನೇ ಅಲ್ಲ. ಪರಸ್ತ್ರೀಯರನ್ನು ಓಲೈಸುವುದರಲ್ಲಿ ಸದಾ ಮುಂದು. ಸ್ನೇಹಾಳ ಕೊನೆ ತಂಗಿ ಮೇಲೂ ಅವನು ಕಣ್ಣು ಹಾಕಿದ್ದ. ತಂಗಿ ಸ್ಮಿತಾಳ ಚಂಚಲ ಬುದ್ಧಿ ಗೊತ್ತಿದ್ದ ಸ್ನೇಹಾ, ಅವಳನ್ನು ಹೆಚ್ಚಿಗೆ ಮನೆಗೆ ಬರ ಮಾಡಿಕೊಳ್ಳುತ್ತಿರಲಿಲ್ಲ. ಅಂತೂ ಮದುವೆಯಾಗಿ ಅವಳು ತುಸು ದೂರ ಹೋದ ಮೇಲೆ ಇವಳಿಗೆ ನೆಮ್ಮದಿಯಾಯಿತು. ಅದೆಷ್ಟು ಹೆಂಗಸರ ಜೊತೆ ಹೀಗೆ ಫ್ಲರ್ಟ್‌ ಮಾಡುತ್ತಿರುತ್ತಾನೋ ಏನೋ…. ಕೆಳ ಮಧ್ಯವ ವರ್ಗದಿಂದ ಬಂದ ಸ್ನೇಹಾ ತನ್ನ ಮಕ್ಕಳ ಉಜ್ವಲ ಭವಿಷ್ಯವೊಂದೇ ಬಾಳಿನ ಗುರಿ ಎಂದು ಭಾವಿಸಿದ್ದಳು.

ಆದರೆ ಗಂಡನ ಹೊರಗಿನ ಪ್ರಣಯ ಪ್ರಸಂಗ ಮಿತಿ ಮೀರುತ್ತಿದೆ ಎಂದು ಸ್ನೇಹಾಗೆ ಎನಿಸಿತು. ಇವರಿಬ್ಬರ ಅತಿಯಾದ ಓಡಾಟ, ಈ ಅಫೇರ್‌, ವ್ಯಾಮೋಹ…. ಇವೆಲ್ಲದಕ್ಕೂ ಹೇಗಾದರೂ ಕೊನೆ ಕಾಣಿಸಲೇಬೇಕು ಎಂದು ಮತ್ತೆ ಮತ್ತೆ ಅದನ್ನೇ ಯೋಚಿಸುತ್ತಿದ್ದವಳಿಗೆ ಎಷ್ಟು ಹೊತ್ತಾದರೂ ನಿದ್ದೆ ಬರಲೇ ಇಲ್ಲ. ಮಲಗಿದ ಸ್ವಲ್ಪ ಹೊತ್ತಿಗೆ ಪ್ರಶಾಂತ್‌ ಗೊರಕೆ ಹೊಡೆಯಲಾರಂಭಿಸಿದ್ದ. ಮಕ್ಕಳಿಗೂ ಸಹ ಈ ವಿಷಯ ಗೊತ್ತಾಗಿದೆ ಎಂಬುದು ಸಂಕಟದ ವಿಷಯ. ಇಂದಿನ ಮಕ್ಕಳು ಬಲು ಚುರುಕು, ಪ್ರೈಮರಿ ಶಾಲೆಯಲ್ಲೇ ಇಂಥ ವಿಷಯ ಗ್ರಹಿಸುವವರು ಹೈಸ್ಕೂಲು ಮುಟ್ಟಿದ ಮೇಲೆ ತಿಳಿಯದೆ ಇರಲು ಸಾಧ್ಯವೇ? ಅಂಥವರಿಗೆ ತಂದೆ ಬಗ್ಗೆ ಹೇಗೆ ತಾನೇ ಗೌರವ ಮೂಡಲು ಸಾಧ್ಯ? ಇದು ತಮ್ಮ ಸಂಸಾರದ ನೆಮ್ಮದಿಯನ್ನು ಎಷ್ಟು ಹದಗೆಡಿಸುತ್ತಿದೆ ಎಂದು ಗಾಬರಿಗೊಂಡಳು. ಮಕ್ಕಳಂತೂ ತಂದೆಯನ್ನು ಮಾತನಾಡಿಸುವುದನ್ನೇ ಬಿಟ್ಟರು. ಇತ್ತೀಚೆಗೆ ಕೌಟುಂಬಿಕವಾಗಿ ಎಲ್ಲರೂ ಹೊರಗೆ ಹೋಗಿ ಬಂದದ್ದೇ ಇಲ್ಲ. ಇವೆಲ್ಲ ಚಿಂತಿಸಿ ಅವಳಿಗೆ ನಿದ್ದೆ ಬರುವಷ್ಟರಲ್ಲಿ ಬೆಳಗಿನ ಜಾದ ಕೋಳಿ ಕೂಗಿತ್ತು.

ಮಾರನೇ ಬೆಳಗ್ಗೆ ಮಕ್ಕಳು ಶಾಲೆಗೆ ಹೊರಟ ಮೇಲೆ ಗಂಡನ ಬಳಿ ಈ ಬಗ್ಗೆ ಮಾತನಾಡಲು ನಿರ್ಧರಿಸಿದಳು. ಮಕ್ಕಳು ಹೊರಟ ನಂತರ ಗಂಡನ ಬಳಿ ಬಂದು ಪೀಠಿಕೆ ಇಲ್ಲದೆ ಶುರು ಮಾಡಿದಳು, “ಪ್ರಶಾಂತ್‌, ಮಕ್ಕಳಿಗೆ ಈಗಾಗಲೇ ನಿನ್ನ ಸ್ವಾತಿಯ ವಿಚಾರ ಗೊತ್ತಾಗಿದೆ. ಅವರು ಅದರಿಂದ ಸದಾ ಮೂಡ್‌ ಕೆಡಿಸಿಕೊಳ್ಳುತ್ತಾರೆ…. ಅಷ್ಟು ಸಾಲದು ಅಂತ ಅಪಾರ್ಟ್‌ಮೆಂಟ್‌ನವರಿಗೂ ಗೊತ್ತಾಗಿ ವ್ಯಂಗ್ಯವಾಗಿ ಆಡಿಕೊಳ್ಳುತ್ತಾರೆ. ನನ್ನ ಎಷ್ಟೋ ಫ್ರೆಂಡ್ಸ್ ನಿಮ್ಮಿಬ್ಬರನ್ನೂ ಬಹಳ ಕಡೆ ನೋಡಿದ್ದಾರೆ.

“ಎಲ್ಲರಿಗೂ ಸಮಜಾಯಿಷಿ ಹೇಳಿ ಹೇಳಿ ಸಾಕಾಗಿದೆ. ವಯಸ್ಸಿಗೆ ಬಂದ ಮಕ್ಕಳು, ನಮಗೂ ವಯಸ್ಸಾಗುತ್ತಿದೆ ಅನ್ನೋ ಜ್ಞಾನ ಇರಬೇಕು. ಇದೆಲ್ಲ ಖಂಡಿತಾ ಸರಿಯಲ್ಲ! ಹಿಂದಿನಿಂದಲೂ ನಿನ್ನ ಇದೇ ತರಹದ ಹಿಂಸೆ ಅನುಭವಿಸುತ್ತಾ ಸಾಕಾಗಿದೆ ನನಗೆ. ನೀನು ಅವಳಿಗಾಗಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಿರುವೆ, ಇದು ಮಹಾ ತಪ್ಪು!” ಎಂದಳು.

“ಹಣ ನನ್ನದು, ಸಂಪಾದನೆ ನನ್ನದು! ಅದನ್ನು ಎಲ್ಲಿ ಖರ್ಚು ಮಾಡಿದರೇನು? ಇನ್ನು ವಯಸ್ಸಿನ ಮಾತು….. ನನಗೆ ವಯಸ್ಸಾಗಿದೆ ಅಂತ ನೀನು ಅಂದುಕೊಂಡಿದ್ದಿ…… ಹಾಗೇನಿಲ್ಲ, ಅವಳ ಜೊತೆ ಚೆನ್ನಾಗಿ ಎಂಜಾಯ್‌ ಮಾಡ್ತಿದ್ದೇನೆ. ಮನೆಯ ಸಂಸಾರದ ಜಂಜಾಟ ಸಾಕಾಯ್ತು ಅಂತಾನೇ ಹೊರಗಿನ ನೆಮ್ಮದಿ ಕಂಡುಕೊಂಡಿದ್ದೀನಿ. ಇನ್ನು ಅಪಾರ್ಟ್‌ಮೆಂಟ್‌ನವರ ವಿಷಯ….. ನಾನು ಯಾರಿಗೂ ಕೇರ್‌ ಮಾಡುವವನಲ್ಲ…. ಸರೀನಾ? ಬೇರೇನಾದರೂ ವಿಷಯ ಹೇಳಬೇಕಿತ್ತಾ?” ಎಂದು ವ್ಯಂಗ್ಯವಾಗಿ ಅವನು ಹೇಳಿದಾಗ ಅವಳಿಗೆ ಮೈಯೆಲ್ಲ ಉರಿದಂತೆ ಸಿಟ್ಟೇರಿತು.

“ಇಂಥದ್ದನ್ನೆಲ್ಲ ಇನ್ನೂ ನಾನು ಸಹಿಸಿಕೊಂಡಿರೋಲ್ಲ!”

“ಏನು ಮಾಡ್ತೀಯಾ? ತವರಿಗೆ ಹೋಗ್ತೀಯಾ…. ಹೋಗು. ವಾಯರ್‌ ನೋಟಿಸ್‌ ಕಳುಹಿಸ್ತೀಯಾ…. ಕೊಡು! ಮಕ್ಕಳು ಚೆನ್ನಾಗಿರಬೇಕು ಅಂದ್ರೆ ತೆಪ್ಪಗಿರು, ಸಂಸಾರಕ್ಕಂತೂ ನಾನು ಯಾವತ್ತೂ ಮೋಸ ಮಾಡಿಲ್ಲವಲ್ಲ….. ಬೇಡ ಅಂದ್ರೆ ನಿನ್ನ ದಾರಿ ನೋಡಿಕೊಂಡು ಹೋಗ್ತಾ ಇರು!” ಎಂದು ಗಹಗಹಿಸಿ ನಗುತ್ತಾ ಅವನು ಆಫೀಸ್‌ಗೆ ಹೊರಟು ಹೋದ.

ಅವಳಿಗೆ ಅಸಹಾಯಕತೆಯಿಂದ ಅಳು ಉಕ್ಕಿ ಬಂತು. ತಾನು ಏನು ತಾನೇ ಮಾಡಬಲ್ಲೆ? ತವರಿನಲ್ಲಿ ತನಗೆ ಯಾವ ಆಸರೆ? ಇವರು ಒಬ್ಬನೇ ಮಗನ ಅನ್ನದ ಹಂಗಿಗೆ ಸಿಕ್ಕಿಕೊಂಡ ನಿವೃತ್ತ ತಂದೆ ತನಗೇನು ಸಹಾಯ ಮಾಡಲು ಸಾಧ್ಯ? ಎಂದೋ ಹಬ್ಬಕ್ಕೆ ಒಮ್ಮೆ ಕುಂಕುಮಕ್ಕೆಂದು ತವರಿಗೆ ಹೋದರೆ ಮುಖ ಸಿಂಡರಿಸುವ ಅಣ್ಣ ಅತ್ತಿಗೆ ಮಕ್ಕಳ ಸಮೇತ ತನ್ನನ್ನು ಕಾಪಾಡುತ್ತಾರೆಯೇ? ಬೇರೆ ಮನೆ ಮಾಡಿಕೊಂಡಿರಲು, ತನಗೆ ಯಾವ ಸಂಪಾದನೆ ಇದೆ? ತನಗೆ ಹೊಟ್ಟೆಗಿಲ್ಲವಾದಾಗ ಮಕ್ಕಳನ್ನು ಹೇಗೆ ಸಾಕುವುದು? ಅವರ ಓದು…. ಮುಂದಿನ ಭವಿಷ್ಯ….? ಕಂಬನಿ ಮಿಡಿಯುತ್ತಲೇ ಅವಳು ತನ್ನ ಮನೆಗೆಲಸ ಮುಂದುವರಿಸಿದಳು. ಸೋಮುವನ್ನು ಸಂಪರ್ಕಿಸಿ ಇದನ್ನೆಲ್ಲ ಹೇಳಬೇಕು ಎನಿಸಿತು. ಅವನ ಫೋನ್‌ ನಂಬರ್‌ ಇರಲಿಲ್ಲ. ಅವಳು ಸ್ವಾತಿ ಬಳಿ ಮಾತು ಬಿಟ್ಟು ಎಷ್ಟೋ ದಿನ ಆಗಿತ್ತು. ಹೇಗಾದರೂ ಅವನನ್ನು ಸಂಪರ್ಕಿಸಿ ವಿಚಾರ ಪ್ರಸ್ತಾಪಿಸಬೇಕು ಎಂದು ಚಡಪಡಿಸಿದಳು. ಅಕಸ್ಮಾತ್‌ ಸ್ವಾತಿ ಎದುರಾದರೂ, ಅಹಂಕಾರದಿಂದ ಇವಳೆಡೆ ನೋಡಿ ನಕ್ಕು ಸ್ವಾತಿ ಮುಂದೆ ಸಾಗುತ್ತಿದ್ದಳು. ಆಗ ಇನ್ನಷ್ಟು ಕೋಪದಿಂದ ಕುದ್ದು ಸ್ನೇಹಾ ಸುಮ್ಮನಾಗುತ್ತಿದ್ದಳು.

ತನ್ನ ಗೆಳತಿಯೊಬ್ಬಳ ಮೂಲಕ ಸ್ವಾತಿ ಕೆಲವು ದಿನಗಳ ಮಟ್ಟಿಗೆ ತವರಿಗೆ ಹೋಗಿರುವ ವಿಚಾರ ಸ್ನೇಹಾಳಿಗೆ ತಿಳಿಯಿತು. ಇದೇ ಸಂದರ್ಭ ಎಂದು ಅಂದು ಸಂಜೆ ಸೋಮುವನ್ನು ಭೇಟಿಯಾಗಲು ಸ್ನೇಹಾ ಅವನ ಫ್ಲಾಟ್‌ಗೆ ಹೋದಳು. ಪ್ರಶಾಂತ್‌ 10 ಗಂಟೆಗೆ ಮುಂಚೆ ಮನೆ ಸೇರುತ್ತಿರಲಿಲ್ಲ.

ಯಾವುದೇ ಪೀಠಿಕೆ ಇಲ್ಲದೆ ಸ್ನೇಹಾ ನೇರವಾಗಿ ವಿಷಯಕ್ಕೆ ಬಂದಳು, “ನೋಡಿ ಸೋಮು, ಇಡೀ ಅಪಾರ್ಟ್‌ಮೆಂಟ್‌ಗೆ ಗೊತ್ತಿದೆ…. ನನ್ನ ಗಂಡ ನಿಮ್ಮ ಸ್ವಾತಿ ಮಾಡುತ್ತಿರುವ ದುರ್ವ್ಯವಹಾರ…. ನಿಮಗೂ ಇದು ಗೊತ್ತಿರಬೇಕು. ಹೆಂಗಸಾಗಿ ನಾನು ಗಂಡನ ಜೊತೆ ಹೋರಾಡಿದೆ. ಸಂಪಾದನೆ ಇಲ್ಲದ ನಾನು ಹೆಚ್ಚಿಗೇನೂ ಮಾಡಲಾರೆ.

dil-jungali-story2

ಆದರೆ ನೀವು ಹೆಂಡತಿಯನ್ನು ದಂಡಿಸಿ ಹದ್ದುಬಸ್ತಿನಲ್ಲಿಡಲೇಬೇಕು! ನೀವೇಕೆ ಅವಳನ್ನು ತಡೆಯುತ್ತಿಲ್ಲ?”

“ಎಲ್ಲಾ ಗೊತ್ತು…. ನೀವು ಪ್ರಶಾಂತ್‌ನನ್ನು ಕಟ್ಟಿಹಾಕಬೇಕಿತ್ತು.”

“ಹೇಳಿದೆನಲ್ಲ…. ಮೂರೂ ಬಿಟ್ಟ ಗಂಡಸು ಅದು…. ಬೀದೀಲಿ ನಿಂತು ಜೋರಾಗಿ ಬಾಯಿ ಬಡಿದುಕೊಳ್ಳಬೇಕಷ್ಟೆ…..”

“ನನ್ನ ಪ್ರಯತ್ನಗಳೂ ಫಲಿಸುತ್ತಿಲ್ಲ….” ಎಂದು ಉಡಾಫೆಯಿಂದ ಅವನು ಭುಜ ಹಾರಿಸಿದಾಗ….

`ಥೂ! ಇವನೆಂಥ ಗಂಡಸು…. ಇದೆಂಥ ನಿರ್ಲಕ್ಷ್ಯದ ಸ್ವಭಾವ….’  “ಹಾಗಾದರೆ…. ಇದು ಹೀಗೇ ನಡೆಯಲಿ ಅಂತ ಬಿಟ್ಟುಬಡ್ತೀರಾ….?”

“ನಾನು ತಾನೇ ಏನು ಮಾಡಲಿ?”

“ಅಂದ್ರೆ…. ನೀವು ಹೇಳೋದು…..?” ಸಿಡುಕಿದಳು ಸ್ನೇಹಾ.

“ಅಂದ್ರೆ…. ನಾನು ಸ್ಟ್ರಾಂಗ್‌ ಪೊಸಿಷನ್‌ನಲ್ಲಿ ಇಲ್ಲ. ಹಿಂದೆ ಗಂಡನಾಗಿ ನಾನೂ ಇಂಥದ್ದೇ ತಪ್ಪು ಮಾಡಿದ್ದೆ. ಅದನ್ನೇ ಅವಳು ಅಂದು ಆಡಿ ತೋರಿಸ್ತಾಳೆ, ಹೀಗಾಗಿ ಸುಮ್ಮನಾಗಿದ್ದೇನೆ.

“ಈಗ ನನ್ನ ಬಿಸ್‌ನೆಸ್‌ ಪೂರ್ತಿ ಡಲ್ ಆಗಿದೆ. ನನಗೆ ಅದರಲ್ಲೇ ತಲೆ ಕೆಡುತ್ತದೆ. ಇನ್ನೂ ಸ್ವಾತೀನಾ ಕಂಟ್ರೋಲ್ ಮಾಡೋದು, ಅವಳನ್ನು ಕಾವಲು ಕಾಯುತ್ತಾ ಕೂರೋದು ಆಗದ ಮಾತು. ಈಗ ಬಹುತೇಕ ಮನೆ ನಡೆಯುತ್ತಿರುವುದೇ ಅವಳ ಸಂಪಾದನೆಯಿಂದ…. ಆದರೆ, ಏನಾದರೂ ಮಾಡಲೇಬೇಕು. ಅವಳು ವಾಪಸ್ಸು ಬರಲಿ, ಈ ಸಲ ಗಟ್ಟಿಯಾಗಿ ಮಾತಾಡ್ತೀನಿ.”

ಇನ್ನಿದಕ್ಕಿಂತ ಈ ಕೈಲಾಗದ ಗಂಡಸು ಏನೂ ಮಾಡಲಾರ ಎಂದು ಸ್ನೇಹಾ ಅಲ್ಲಿಂದ ವಾಪಸ್ಸು ಮನೆಗೆ ಬಂದಳು. ಅವಳು ಹೋದಾಗಿನಿಂದ ತನಗಾದ ಅವಮಾನ ನೆನೆದು ಸೋಮು ನೊಂದುಕೊಳ್ಳುತ್ತಾ, ತಲೆ ಮೇಲೆ ಕೈ ಹೊತ್ತು ಕುಳಿತ. ಹೆಂಡತಿ ಆವದಳು ಅಫೇರ್‌ ನಡೆಸುತ್ತಿದ್ದರೂ ಅದನ್ನು ಖಂಡಿಸಲಾಗದ ಗಂಡನ ಅಸಹಾಯಕತೆಗೆ ಏನು ಹೇಳಬೇಕು? ಏನಾದರಾಗಲಿ, ಈ ಸಲ ಅವಳನ್ನು ಸರಿದಾರಿಗೆ ತರಲೇಬೇಕೆಂದು ನಿರ್ಧರಿಸಿದ.

ಆ ದಿನ ಏನೋ ಕಾರಣಕ್ಕೆ ಸ್ವಾತಿ ಫೋನ್‌ ಮಾಡಿದಾಗ, ಸೋಮು ಅವಳೊಂದಿಗೆ ಒರಟಾಗಿ ನಡೆದುಕೊಂಡ. ಅದಕ್ಕೆ ಅವಳು ಎಳ್ಳಷ್ಟೂ ಸೊಪ್ಪು ಹಾಕಲಿಲ್ಲ. ಅವಳು ಯಾವಾಗ ಎಲ್ಲದಕ್ಕೂ ಸಿದ್ಧಳಾಗಿದ್ದಳೋ, ಗಂಡನ ಮಾತು ಕಾಲ ಕಸವಾಗಿತ್ತು.

ಮಾರನೇ ದಿನ ಸ್ವಾತಿ ಮನೆಗೆ ಹಿಂದುರುಗಿದಳು. ಮಗನನ್ನು ಶಾಲೆ ವ್ಯಾನ್‌ ಹತ್ತಿಸಿ ಬಂದ ಸ್ವಾತಿ, ಆಫೀಸಿಗೆ ಹೋಗಲು ಸಿದ್ಧಳಾಗತೊಡಗಿದಳು. ಆಗ ಸೋಮು ಅವಳ ಬಳಿ ಮಾತಿಗೆ ನಿಂತ. ಏನೋ ಗಂಭೀರ ಮಾತುಕಥೆ ನಡೆಯಲಿದೆ ಎಂದು ಅವಳು ಊಹಿಸಿದಳು.

“ಸ್ವಾತಿ! ನಿನ್ನ ದುರ್ವ್ಯವಹಾರ ಏನೇ ಇದ್ದರೂ ಅದನ್ನು ಕಟ್ಟಿಡು…. ಇದೆಲ್ಲ ಚೆನ್ನಾಗಿಲ್ಲ…. ಇಲ್ಲದಿದ್ದರೆ…..”

ಒಂದೇ ಕ್ಷಣದಲ್ಲಿ ಸೊಂಟಕ್ಕೆ ಸೀರೆ ಸೆರಗು ಸಿಗಿಸಿ ಸ್ವಾತಿ ಸಿಡಿಯಲು ಸನ್ನದ್ಧಳಾದಳು…. “ಇಲ್ಲದಿದ್ದರೆ ಏನೀಗ?”

“ತುಂಬಾ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತೆ!”

“ಅದೇ ಏನಾಗಿಬಿಡುತ್ತೆ ಅಂತ ಕೇಳ್ತಿದ್ದೀನಿ…..”

“ನೀನು ಮಾಡ್ತಾ ಇರೋದನ್ನು ನಾನು ಖಂಡಿತಾ ಸಹಿಸೋಲ್ಲ……”

“ಯಾಕೆ? ಇದೆಲ್ಲ ನೀನು ಆಡದ ಆಟಗಳಾ…..? ನೀನು ಮಾಡದ ಯಾವ ಪಾಪ ನಾನು ಮಾಡ್ತಿದ್ದೀನಿ….? ನೀನು ಮಾಡಿದರೆ ಸರಿ, ನಾನು ಮಾಡಿದರೆ ಮಾತ್ರ ತಪ್ಪಾ? ನಿನ್ನೆಲ್ಲ ಕರ್ಮ ನಾನು ಸಹಿಸಿಕೊಂಡ ಹಾಗೆ ನೀನೂ ತೆಪ್ಪಗೆ ಬಿದ್ದಿರು!”

“ಸ್ವಾತಿ….. ನೀನು ನನ್ನ ಹೆಂಡತಿ! ಗಂಡ ದಾರಿ ತಪ್ಪಿದರೆ ಹೆಂಡತಿ ಹಾದರ ಮಾಡುವುದು ಸರಿ ಅಂತ ಯಾರು ಹೇಳ್ತಾರೆ…..?”

“ಇದರಲ್ಲಿ ಯಾರೇನು ಬಂದು ಹೇಳೋದು ಕೇಳೋದು? ನಿನಗೆ ಸರಿ ಅನ್ನಿಸಿದ್ದನ್ನು ಮಾಡಿ ನೀನು ಮೆರೆದೆ….. ನನಗೆ ಬೇಕಾದ್ದನ್ನು ನಾನು ಮಾಡಿಕೊಳ್ತೀನಿ…. ನಿನಗಾಗಿ, ನಿನ್ನ ಮನೆಯವರಿಗಾಗಿ, ಮಗುವಿಗಾಗಿ ಮಾಡಿದ್ದು ಸಾಕು….. ಈಗ ನನಗಾಗಿ ನಾನು ಬಯಸಿದ್ದನ್ನು ಮಾಡಿದರೆ ಏನು ತಪ್ಪು? ನನ್ನ ಸಂತೋಷ, ನೆಮ್ಮದಿ ಯಾವುದೂ ನಿನಗೆ ಬೇಕಿರಲಿಲ್ಲ, ಅದೀಗ ನನಗೆ ಸಿಗುತ್ತಿದೆ. ನಾನೇಕೆ ತಲೆ ಕೆಡಿಸಿಕೊಳ್ಳಲಿ? ಇದರಲ್ಲಿ ತಪ್ಪೇನಿದೆ? ಇದನ್ನೆಲ್ಲ ನೀನು ತಪ್ಪು ಮಾಡುವ ಮುಂಚೆ ತಿಳಿಯಬೇಕಿತ್ತು.”

“ಸ್ವಾತಿ, ಈ ದುರ್ವ್ಯವಹಾರ  ಬಿಟ್ಟು ನೆಟ್ಟಗಿರು…. ಇಲ್ಲದಿದ್ದರೆ ನಿನಗೆ ಡೈವೋರ್ಸ್‌ ಕೊಡ್ತೀನಿ! ನಿಮ್ಮಿಬ್ಬರ ವ್ಯವಹಾರದ ಬಗ್ಗೆ ಕೋರ್ಟಿನಲ್ಲಿ ಹೇಳಿದರೆ ಎಲ್ಲರೆದುರು ಮಾನ ಹೋಗುವುದು ನಿನಗೆ ಅನ್ನೋದು ನೆನಪಿರಲಿ!”

“ಅಷ್ಟೇ ತಾನೇ? ನಡಿ ಕೋರ್ಟಿಗೆ…. ಅಲ್ಲಿ ಅದೇನು ಕಿಸೀತೀಯೋ ನೋಡೇ ಬಿಡ್ತೀನಿ. ನಿನಗಿಲ್ಲದ ಮಾನ ಮರ್ಯಾದೆಯ ಗೊಡವೆ ನನಗೇಕೆ? ಹೆಂಡತಿಯನ್ನು ನೆಟ್ಟಗಿಟ್ಟುಕೊಳ್ಳಲಾರದ ಗಂಡನ ಭಂಡತನ ನೀನಾಗಿ ಊರಿಗೆ ಟಾಂಟಾಂ ಮಾಡಿದರೆ ಅದರಲ್ಲಿ ನನಗೇನೂ ನಷ್ಟವಿಲ್ಲ. ನಿನ್ನ ಚಾಕರಿ ತಪ್ಪುತ್ತದೆ, ಹಾಯಾಗಿ ತವರಿನಲ್ಲಿ ನೆಮ್ಮದಿಯಾಗಿರ್ತೀನಿ.”

“ಅದೆಲ್ಲ ಅಷ್ಟು ಸುಲಭವಲ್ಲ…. ನಿಮ್ಮಿಬ್ಬರನ್ನೂ ಸುಮ್ಮನೆ ಬಿಡೋಲ್ಲ…. ಅವನನ್ನೂ ಕೋರ್ಟಿಗೆಳೆದು ಛೀಮಾರಿ ಹಾಕಿಸ್ತೀನಿ.”

“ಹೌದೇನು? ಅದ್ಯಾವ ಕಾನೂನು ನನ್ನ ಏನು ಮಾಡುತ್ತೆ ನೋಡೇ ಬಿಡ್ತೀನಿ. ನಾನು ಲಾಯರ್‌ನ ಅಪಾಯಿಂಟ್‌ ಮಾಡಿ ಹೋರಾಡ್ತೀನಿ. ಯಾರನ್ನು ಭಯಪಡಿಸ್ತಿದ್ದೀಯಾ? ಹೊಸ ಕಾನೂನು ಗೊತ್ತಿದೆ ತಾನೇ? ಹಾದರ ಮಾಡೋದು ಅವರವರ ಪರ್ಸನಲ್ ವಿಚಾರಕ್ಕೆ ಬಿಟ್ಟದ್ದು. ಕಾನೂನಿನ ಪ್ರಕಾರ ಅಪರಾಧವಲ್ಲ. ನಿನಗಿಲ್ಲದ ಕಾನೂನಿನ ಭಯ ನನಗೇಕೆ? ನಿನಗಿರುವಷ್ಟು ಹಕ್ಕು ಬಾಧ್ಯತೆಗಳೂ ನನಗೂ ಇವೆ ಎಂದು ಕೋರ್ಟ್‌ ಹೇಳುತ್ತೆ!”

“ಏನಿದು ನಿನ್ನ ವಿತಂಡ ವಾದ?”

“ಹೌದು…. ಮದುವೆ ಆದಾಗಿನಿಂದ ನೀನು ಮಾಡಿದ ಫ್ಲರ್ಟಿಂಗ್‌, ಪರಸ್ತ್ರೀ ಸಹವಾಸಗಳ ಪಟ್ಟಿ ಇದೆ. ಅದೆಲ್ಲ ತಪ್ಪು ಅಲ್ಲ ಅಂತಾದರೆ ನಾನು ಮಾಡಿದ್ದು ಮಾತ್ರ ಹೇಗೆ ತಪ್ಪಾಗುತ್ತೆ?”

“ಆದರೆ ಯಾವ ಕೋರ್ಟೂ ಹೀಗೆ ಅನೈತಿಕ ವ್ಯವಹಾರ ಮಾಡಿ ಅಂತ ಲೈಸೆನ್ಸ್ ಕೊಟ್ಟಿಲ್ಲ.”

“ಇದರಿಂದ ಒಂದು ತಿಳಿದುಕೋ…. ನೀನು ನನಗೆ ಮಾಲೀಕನೂ ಅಲ್ಲ….. ನಾನು ನಿನಗೆ ಗುಲಾಮಳೂ ಅಲ್ಲ…… ನಿನಗೆ ಬೇಕಾದಂತೆ ನೀನು ಬೀದಿ ಸುತ್ತು, ನನಗೆ ಬೇಕಾದಂತೆ ನಾನಿರ್ತೀನಿ… ಈಗ ನಾನು ಆಫೀಸಿಗೆ ಹೋದ ಮೇಲೆ ನೀನು ಮೊದಲಿನಿಂದಲೂ ಏನೇನು ಅನ್ಯಾಯ ಮಾಡಿದ್ದೆ ಅಂತ ಪಟ್ಟಿ ಮಾಡಿಕೋ.

“ಹೌದು, ಪ್ರಶಾಂತ್‌ ಜೊತೆ ನನಗೆ ಅಫೇರ್‌ ಇದೆ, ಅದು ನನ್ನ ಮನಸ್ಸಿನ ಖುಷಿಯ ವಿಚಾರ. ನಿನಗೆ ಬೇಕಾದಂತೆ ನೀನಿರಬಹುದು ಅಂದ್ರೆ ನನಗೆ ಬೇಕಾದಂತೆ ನಾನೇಕೆ ಹಾಗಿರಬಾರದು? ನಿನ್ನ ತರಹ ಸಾಂಸಾರಿಕ ವಿಷಯದಲ್ಲಿ ನಾನು ಬೇಜವಾಬ್ದಾರಿ ತೋರಿಲ್ಲ. ನಿನಗಿಂತ ಹೆಚ್ಚಾಗಿಯೇ ಈ ಸಂಸಾರಕ್ಕಾಗಿ ದುಡಿದಿದ್ದೇನೆ. ಗಂಡಸಿಗೊಂದು ನ್ಯಾಯ….. ಹೆಂಗಸಿಗೊಂದು ನ್ಯಾಯ ಅನ್ನೋದ ಯಾವ ಕಾಲ?

“ಹಿಂದೆ ಸತಿ ನಳಾಯಿನಿ ಅಂತ ಇದ್ದಳಂತೆ. ಗಂಡನನ್ನು ನಿಷ್ಠೆಯಿಂದ ಸೇವಿಸುತ್ತಿದ್ದ ಆ ಪತಿವ್ರತೆ, ಅವನಿಗೆ ತೆವಲು ಹಿಡಿದಾಗ ಕುಷ್ಠರೋಗದ ಅವನನ್ನು ಬುಟ್ಟಿಯಲ್ಲಿ ಹೊತ್ತು ಹೋಗಿ ಸೂಳೆ ಮನೆಗೆ ಬಿಟ್ಟು, ಮಾರನೇ ಬೆಳಗ್ಗೆ ವಾಪಸ್ಸು ಹೊತ್ತು ತರುತ್ತಿದ್ದಳಂತೆ…. ಅಂಥ ಸತಿಶಿರೋಮಣಿಗೆ ಸಿಕ್ಕಿದ ಲಾಭ ಏನು? ಆ ಪಾಪಿ ಗಂಡ ಸತ್ತಾಗ ವೈಧವ್ಯದ ಪಟ್ಟ. ತಪ್ಪೇ ಮಾಡದ ಅಹಲ್ಯೆಗೆ ಶಾಪ ತಗುಲಿ ಕಲ್ಲಾದಳು…. ಗಂಡನೂ ಜಿಂಕೆಯಾಗಿ ತನ್ನ ಬಳಿಯೇ ಬಿದ್ದಿರಲಿ ಎಂದು ಮರು ಶಾಪ ಕೊಟ್ಟಳಂತೆ! ಅವಳು ಮಾಡಿದ್ದೇ ಸರಿ. ನಿನಗೀಗ ಏನು ಬೇಕೋ ಮಾಡಿಕೋ…. ನಾನು ಆಫೀಸಿಗೆ ಹೊರಡಬೇಕು,” ಎಂದು ಅವಳು ಹೊರಟಾಗ ಸೋಮು ತಲೆ ಮೇಲೆ ಕೈ ಹೊತ್ತು ಕುಳಿತ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ