ರಿಂಗ್ ರೋಡ್ ಶುಭ’ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ವಿಷಯಗಳು ಮಾಧ್ಯಮದ ಮೂಲಕ ಎಲ್ಲರಿಗೂ ತಿಳಿದೇ ಇದೆ. ಇದೊಂದು ನೈಜ ಘಟನೆಯಾಧಾರಿತ ಚಿತ್ರ. ಹೆಣ್ಣುಮಕ್ಕಳೇ ಸೇರಿ ಮಾಡಿರುವ ಚಿತ್ರವಿದು. ಕ್ಯಾಮೆರಾ ಹಿಂದಿರುವ ಎಲ್ಲ ತಂತ್ರಜ್ಞರೂ ಹೆಣ್ಣುಮಕ್ಕಳೇ. ನಿರ್ಮಾಪಕಿ, ನಿರ್ದೇಶಕಿ, ಸಂಭಾಷಣೆ, ಸಂಗೀತ ಎಲ್ಲ ವಿಭಾಗಗಳಲ್ಲೂ ಹೆಣ್ಣುಮಕ್ಕಳನ್ನೇ ಕಾಣುವಂಥ ವಿಶೇಷ ಚಿತ್ರವಿದು.
ಬಹುಶಃ ಸಿನಿಮಾ ಇತಿಹಾಸದಲ್ಲೇ ಇಂಥ ಪ್ರಯತ್ನ ಮೊದಲು ಎನ್ನಬಹುದು. ನಿರ್ದೇಶಕಿಯರು, ನಟಿಯರು ಬಹಳ ಇದ್ದಾರೆ. ಆದರೆ ಬರೀ ಮಹಿಳೆಯರೇ ಸೇರಿ ಒಂದು ಚಿತ್ರ ಮಾಡುವುದಿದೆಯಲ್ಲ ಅದು ನಿಜಕ್ಕೂ ಹೆಮ್ಮೆ ತರುವಂಥ ವಿಷಯ. ಆದರೆ ಅರು ಯಾರು ಹಾಗೆಂದುಕೊಳ್ಳದೇ ನಾವೊಂದು ಸಿನಿಮಾ ಮಾಡಿದ್ದೇವೆ. ಹೆಣ್ಣುಮಕ್ಕಳು ಅಂತ ನಾವೇನು ಯಾವುದೇ ಮಡಿವಂತಿಕೆ ಇಟ್ಟುಕೊಳ್ಳದೇ ನೈಜ ಕಥೆಗೆ ಏನು ಬೇಕೊ ಎಲ್ಲವನ್ನೂ ಬಹಳ ಬೋಲ್ಡ್ ಆಗಿಯೇ ಕೊಟ್ಟಿದ್ದೇವೆ ಎನ್ನುತ್ತಾರೆ.
`ರಿಂಗ್ ರೋಡ್ ಶುಭ’ ಚಿತ್ರದ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಪುಣೆ ಫಿಲಂ ಇನ್ಸ್ಟಿಟ್ಯೂಟ್ನಿಂದ ಬಂದರು. ಕನ್ನಡದಲ್ಲಿ `ಬನ್ನಿ ಮತ್ತೆ ಪ್ರೀತ್ಸೋಣ’ ಚಿತ್ರದಲ್ಲಿ ಅಸೋಸಿಯೇಟಾಗಿ ಕೆಲಸ ಮಾಡಿದ್ದಿದೆ.
`ರಿಂಗ್ ರೋಡ್ ಶುಭ’ ಚಿತ್ರಕ್ಕಾಗಿ ತಮ್ಮದೇ ಆದ ಪ್ರತಿಭಾವಂತ ತಂಡವನ್ನು ಕಟ್ಟಿಕೊಂಡು ಹೊಸ ಸಾಹಸ ಮಾಡಲು ಹೊರಟಾಗ ಎಲ್ಲರಿಂದಲೂ ಪ್ರೋತ್ಸಾಹ ಸಿಕ್ಕಿತು. ನಿರ್ಮಾಪಕಿ ರಜನಿ ರವೀಂದ್ರದಾಸ್ ಯಾವುದೇ ವಿಷಯಕ್ಕೂ ತಲೆ ಹಾಕದೇ ನೀವು ಮಾಡಿ ನಾನಿದ್ದೇನೆ ಎಂದು ಹಣ ಹಾಕಿದ್ದಾರೆ. `ರಿಂಗ್ ರೋಡ್ ಶುಭ’ ಚಿತ್ರದ ಪ್ರೋಮೋ ಈಗಾಗಲೇ ಹೊರಬಿದ್ದಿದ್ದು ಸಾಕಷ್ಟು ಕುತೂಹಲ ಹುಟ್ಟಿಸುತ್ತಿದೆ. ರೇಖಾರಾಣಿಯರ ಪಂಚಿಂಗ್ ಡೈಲಾಗ್ಸ್ ಎಲ್ಲರನ್ನೂ ಆಕರ್ಷಿಸುತ್ತಿದೆ.
ವಾಣಿ ಹರಿಕೃಷ್ಣ ಸಂಗೀತ ನಿರ್ದೇಶಕಿಯಾಗಿ ಚಿತ್ರಕ್ಕೆ ಹಾಡುಗಳನ್ನು ಒದಗಿಸುವುದರ ಜೊತೆಗೆ ತಂಡದ ಜೊತೆಗೆ ಆಸಕ್ತಿಯಿಂದ ಎಲ್ಲ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. `ರಿಂಗ್ ರೋಡ್ ಶುಭ’ ಚಿತ್ರದ ಆಡಿಯೋ ಬಿಡುಗಡೆ ಪಬ್ವೊಂದರಲ್ಲಿ ಮೇಳೈಸಿದಾಗ ಎಲ್ಲರಿಗೂ ಆಶ್ಚರ್ಯ ಹುಟ್ಟಿಸಿತ್ತು. ಸಿನಿಮಾರಂಗದಲ್ಲಿ ದೊಡ್ಡ ಸಮಾರಂಭ ಮಾಡಿ ಜನರೆದುರು ಹಾಡುಗಳ ಸಿ.ಡಿ. ಬಿಡುಗಡೆ ಮಾಡೋದು ವಾಡಿಕೆ. ಆದರೆ ತಂಡದ ಮಹಿಳಾಮಣಿಗಳು ನಾವೇ ಬೇರೆ, ನಮ್ಮ ಸ್ಟೈಲೇ ಬೇರೇ ಎನ್ನುವಂತೆ ವಿಭಿನ್ನವಾಗಿ ಸಿ.ಡಿ. ಬಿಡುಗಡೆ ಮಾಡಿದರು. ಮಾಧ್ಯಮದವರು ಮೊದಲಿನಿಂದಲೂ ನಮ್ಮನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಈ ಸಂತಸವನ್ನು ಅವರೊಂದಿಗೆ ಹಂಚಿಕೊಳ್ಳಬೇಕಿತ್ತು. ಹಾಗೆಯೇ ಅವರ ಮೂಲಕ ಮನೆ ಮನೆ ಬಾಗಿಲಿಗೆ ಸುದ್ದಿ ತಲುಪುತ್ತೆ. ಅಷ್ಟೇ ಅಲ್ಲ, ಇಲ್ಲಿರುವ ಎಲ್ಲರೂ ನಮ್ಮ ಸ್ನೇಹಿತರೇ ಆಗಿರೋದ್ರಿಂದ ಇದೊಂದು ರೀತಿಯ ಗೆಟ್ ಟು ಗೆದರ್ ಅಂತ ಇಲ್ಲಿ ಮಾಡಲಾಯ್ತು ಎಂದು ಸಾಹಿತ್ಯ, ಸಂಭಾಷಣೆ ರಚಿಸಿರುವ ರೇಖಾರಾಣಿ ಪಂಚಿಂಗ್ ಮಾತನ್ನು ತೇಲಿಬಿಟ್ಟರು.
`ರಿಂಗ್ ರೋಡ್ ಶುಭ’ದಲ್ಲಿ ವಿಶೇಷವಾಗಿ ನಟಿಸಿರುವ ನಾಯಕ ದುನಿಯಾ ವಿಜಯ್ ಒಂದು ರೂಪಾಯಿ ಸಂಭಾವನೆ ಪಡೆದು ನಟಿಸಿರುವುದಷ್ಟೇ ಅಲ್ಲ, ಹೆಣ್ಣುಮಕ್ಕಳೇ ಸೇರಿ ಮಾಡಿರುವ ಈ ಚಿತ್ರದಲ್ಲಿ ನಟಿಸುವುದಕ್ಕೆ ಹೆಮ್ಮೆಯಾಗಿತ್ತು ಎನ್ನುತ್ತಾರೆ.
ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಅವರನ್ನು ಹುಲಿಗೆ ಹೋಲಿಸುವ ವಿಜಯ್ ಜೋಡಿಯಾಗಿ ನಿಖಿತಾ ನಟಿಸಿದ್ದಾಳೆ.
ಶುಭ ಪಾತ್ರದಲ್ಲಿ ನವ ತಾರೆ ಖುಷಿ ನಟಿಸಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾಳೆ.
ಸುನಿಲ್ ಪುರಾಣಿಕ್ ಪುತ್ರ ಈ ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದಾನೆ.
“ಪುರುಷರಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಎಂಬುದನ್ನು ಈಗಾಗಲೇ ಅನೇಕ ಬಾರಿ ಮಹಿಳೆಯರು ಸಾಬೀತುಪಡಿಸಿ ತೋರಿಸಿದ್ದಾರೆ. ಪ್ರತಿಭಾವಂತ ಮಹಿಳೆಯರೇ ಒಟ್ಟಾಗಿ ಕಲೆತು ಸಿನಿಮಾ ಮಾಡುವ ಅವಕಾಶ ಬಂದೊದಗಿ ಇಂದು `ರಿಂಗ್ ರೋಡ್ ಶುಭ’ ಕಣ್ಣು ಮುಂದೆ ಬಂದು ನಿಂತಿದೆ. ಸ್ತ್ರೀಯರೇ ಚಿತ್ರದ ಎಲ್ಲಾ ವಿಭಾಗಗಳಲ್ಲಿರುವಾಗ ಈ ಸಿನಿಮಾದಲ್ಲಿ ಕೆಲಸ ಮಾಡುವುದು ನನ್ನ ಅದೃಷ್ಟವೆಂದೇ ಭಾವಿಸಿ ಈ ಚಿತ್ರದ ಸಂಗೀತ ನಿರ್ದೇಶಕಿಯಾಗಿ ಖುಷಿಯಿಂದ ಕಾರ್ಯ ನಿರ್ವಹಿಸಿದ್ದೇನೆ,” ಎಂದು ವಾಣಿ ಹರಿಕೃಷ್ಣ ಹೇಳುತ್ತಾರೆ. ಕನ್ನಡದ ಗಾಯಕ ಗಾಯಕಿಯರಿಂದಲೇ ಹಾಡಿಸಬೇಕೆಂಬುದು ನನಗೆ ಬಹಳ ದಿನಗಳಿಂದ ಆಸೆ ಇತ್ತು. ಆ ನನ್ನ ಆಸೆಯನ್ನು `ರಿಂಗ್ ರೋಡ್ ಶುಭ’ ಚಿತ್ರದ ನಿರ್ಮಾಪಕಿ, ನಿರ್ದೇಶಕಿ ಈಡೇರಿಸಿದ್ದಾರೆ. ಇಲ್ಲಿ ಹಾಡಿರುವ ಎಲ್ಲರೂ ಅದ್ಭುತವಾದ ದನಿಯಾಗಿದ್ದಾರೆ ಎಂದು ವಾಣಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
`ಕನಸಿಗೆ ಕೊನೆಯಿಲ್ಲ’ ಎನ್ನುವ ರೇಖಾರಾಣಿ ಸಾಹಿತ್ಯವಿರುವ ಕ್ಲೈಮ್ಯಾಕ್ಸ್ ಹಾಡನ್ನು ಕಿಚ್ಚ ಸುದೀಪ್ ಹಾಡಿರೋದು ವಿಶೇಷ. `ರಿಂಗ್ ರೋಡ್ ಶುಭ’ ಚಿತ್ರದ ಈ ಮಹಿಳಾ ತಂಡ ಮುಂದೆಯೂ ಸಹ ಒಟ್ಟಾಗಿ ಸಿನಿಮಾ ಮಾಡಬೇಕೆಂಬ ಆಸೆ ಹುಟ್ಟುಹಾಕುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಇಂಥವೊಂದು ವಿನೂತನ, ವಿಶೇಷ ತಂಡದ ಬಗ್ಗೆ ಎಲ್ಲರಿಗೂ ಗೌರವವಿದೆ. ಚಿತ್ರವನ್ನು ಈಗಾಗಲೇ ವಿತರಕ ಭಾಷಾ ತೆಗೆದುಕೊಂಡಿದ್ದಾರೆ. ಭಾಷಾ ತೆಗೆದುಕೊಳ್ಳುವ ಎಲ್ಲ ಚಿತ್ರಗಳು ಯಶಸ್ವಿಯಾಗುತ್ತೆ ಎನ್ನುವ ಮಾತಿದೆ.
ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು ಎನ್ನುವ ಹಾಗೆ ಇಡೀ ತಂಡ ತಲೆ ಎತ್ತಿ ನಿಂತಿದೆ. ಇವರ ಈ ಸಾಹಸದ ಪಯಣ ರಿಂಗ್ ರೋಡ್ನಲ್ಲಿ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸೋಣ.
– ಸರಸ್ವತಿ