ರಶ್ಮಿ ತನ್ನ ಸ್ಕೂಟಿಯನ್ನು ಪಾರ್ಕಿಂಗ್ ಜಾಗದಿಂದ ತೆಗೆದು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಹಿಂದಿನಿಂದ ಜೋರಾಗಿ ಕಾರ್ ಹಾರ್ನ್ ಕೇಳಿಸಿತು.
`ಅಬ್ಬಾ, ಈ ಬೆಂಗಳೂರಿನಲ್ಲಿ ಜನರಿಗೆ ಒಂದು ನಿಮಿಷಾನೂ ಕಾಯೋ ಪೇಷನ್ಸ್ ಇಲ್ಲ,’ ಎಂದು ಗೊಣಗಿಕೊಂಡು ರಶ್ಮಿ ತನ್ನ ಸ್ಕೂಟಿಯನ್ನು ಪಕ್ಕಕ್ಕೆ ತಂದುಕೊಂಡು ಕಾರಿಗೆ ಜಾಗ ಮಾಡಿಕೊಟ್ಟಳು. ವೇಗವಾಗಿ ಮುಂದೆ ಹೋದ ಕಾರು ಮತ್ತದೇ ವೇಗದಲ್ಲಿ ಹಿಂದೆ ಬಂದು ರಶ್ಮಿ ಪಕ್ಕದಲ್ಲಿ ನಿಂತಿತು.
ಇದೇನಪ್ಪಾ ಅಂದುಕೊಂಡಳು ರಶ್ಮಿ. ಕಾರ್ ಡ್ರೈವ್ ಮಾಡುತ್ತಿದ್ದ ವ್ಯಕ್ತಿ ತನ್ನನ್ನು ಉದ್ದೇಶಿಸಿ ಏನೋ ಮಾತನಾಡಲು ಯತ್ನಿಸಿದಂತೆ ಅನಿಸಿತವಳಿಗೆ. ಕಾರ್ ಎಂಜಿನ್ ಆಫ್ ಮಾಡಿದ ವ್ಯಕ್ತಿ ತನ್ನೆದುರು ನಿಂತಾಗ ರಶ್ಮಿ ಆತನನ್ನೇ ದೀರ್ಘವಾಗಿ ದಿಟ್ಟಿಸಿದಳು. ಹಾಕಿರುವ ಬ್ಲ್ಯಾಕ್ ಪ್ಯಾಂಟ್, ಅದರ ಮೇಲೆ ಹಸಿರು ಉದ್ದ ತೋಳಿನ ಶರ್ಟ್, ಅಲೆ ಅಲೆಯಂತಿರುವ ಕಪ್ಪು ಗುಂಗುರು ಕೂದಲು. ಕಣ್ಣಿಗೆ ಸನ್ ಗ್ಲಾಸ್ ಧರಿಸಿ ತುಂಬಾ ಸ್ಮಾರ್ಟ್ ಆಗಿದ್ದ ಎತ್ತರದ ಹುಡುಗ.
“ಹೇಯ್, ನೀನು ರಶ್ಮಿ ಅಲ್ವಾ?” ಅಪರಿಚಿತನ ಬಾಯಲ್ಲಿ ತನ್ನ ಹೆಸರು ಕೇಳಿ ರಶ್ಮಿಗೆ ಆಶ್ಚರ್ಯವಾಯಿತು.
“ಹೌದು…. ನೀವು…?” ರಶ್ಮಿ ಅನುಮಾನಿಸಿದಾಗ ಆತ ತನ್ನ ಸನ್ ಗ್ಲಾಸ್ ತೆಗೆಯುತ್ತಾ, “ನಾನು ಅಭಿರಾಮ್,” ಎಂದ.
“ಅರೆ! ನೀನಾ? ಮೈಗಾಡ್ ಅನ್ ಬಿಲಿವೇಬಲ್!” ಕಾಲೇಜಿನಲ್ಲಿ ತನ್ನ ಜೊತೆಯಲ್ಲೇ ಎಂಜಿನಿಯರಿಂಗ್ ಓದಿದ ಅಭಿರಾಮ್ ನೆನಪು ಅವಳ ಮನದಲ್ಲಿ ಮೂಡಿತು. ಎತ್ತರ, ಸಪೂರ ದೇಹ, ಯಾವಾಗಲೂ ಚಿಂತಾಕ್ರಾಂತಾಗಿರುತ್ತಿದ್ದ ಮುಖ ಈಗ ಸಂಪೂರ್ಣ ಬದಲಾಗಿದೆ.
“ಹೇ ರಶ್ಮಿ, ಎಲ್ಲಿ ಕಳೆದುಹೋದೆ?” ಅಭಿರಾಮನ ಕೂಗಿಗೆ ಎಚ್ಚೆತ್ತ ರಶ್ಮಿ, “ನನಗೆ ನಂಬೋಕೇ ಆಗ್ತಿಲ್ಲ… ಎಷ್ಟೊಂದು ಬದಲಾಗಿದ್ದೀಯಾ? ಎಲ್ಲಿದ್ದೀಯಾ? ಏನ್ಮಾಡ್ತಿದ್ದೀಯಾ….?” ಪ್ರಶ್ನೆಗಳ ಸುರಿಮಳೆಯನ್ನೇ ಹಾಕಿದಳು ರಶ್ಮಿ.
“ನಾನು ಎಂ.ಎನ್.ಸಿ.ಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟು ಸಮಯ ಯುಎಸ್‌ನಲ್ಲಿದ್ದು ಇದೀಗ ಬೆಂಗಳೂರಿಗೆ ಬಂದು ಎರಡು ತಿಂಗಳಾಯಿತು. ನಿಂದೇನು ಕಥೆ? ರಿಸಲ್ಟ್ ಬರೋ ಮುಂಚೆಯೇ ಮದುವೆ ಮಾಡಿಕೊಂಡು ತುಮಕೂರು ಸೇರ್ಕೊಂಡಳು ಮತ್ತೆ ಇಲ್ಹೇಗೆ?”
“ನಾನೂ ಇಲ್ಲೇ ಕೆಲಸ ಮಾಡುತ್ತಿದ್ದೇನೆ,” ರಶ್ಮಿ ಇನ್ನೂ ಏನೋ ಹೇಳುವಷ್ಟರಲ್ಲಿ ಹಿಂದಿನಿಂದ ಬೇರೆ ವಾಹನಗಳು ದಾರಿಗಾಗಿ ಹಾರ್ನ್ ಮಾಡತೊಡಗಿದವು.
“ಅಭೀ, ತಗೋ ಇದು ನನ್ನ ವಿಸಿಟಿಂಗ್ ಕಾರ್ಡ್. ನನ್ನ ಮನೇ ವಿಳಾಸಾನೂ ಇದೆ. ಬರೋ ಶನಿವಾರ ಖಂಡಿತಾ ಮನೆಗೆ ಬಾ,” ಎಂದವಳೇ ಸ್ಕೂಟಿ ಹತ್ತಿ ಹೋದಳು. ಅಭಿರಾಮ್ ಕಾರು ಹತ್ತಿ ತನ್ನ ಮನೆಯ ಕಡೆಗೆ ಹೋದನು.
ರಶ್ಮಿಯ ಕುತ್ತಿಗೆಯಲ್ಲಿ ಮಾಂಗಲ್ಯ ಹಾಕಿರಲಿಲ್ಲ ಎಂದುಕೊಂಡ ಅಭಿ. ಅಷ್ಟರಲ್ಲಿ ತನ್ನ ಯೋಚನೆ ಬಗ್ಗೆ ತನಗೇ ನಗು ಬಂತು. ಈಗಿನ ಕಾಲದಲ್ಲಿ ಎಷ್ಟು ಜನ ಇದನ್ನೆಲ್ಲಾ ಅನುಸರಿಸುತ್ತಾರೆ ಎಂದುಕೊಂಡ. ತನ್ನ ಕಾಲೇಜು ದಿನಗಳ ನೆನಪಾಯಿತು. ಅಭೀ, ರಶ್ಮಿ, ಚೈತ್ರಾ, ಸುಧೀರ್ ಮತ್ತು ಸುಜಯ್ ಒಂದು ಗ್ಯಾಂಗ್. ಅವರಲ್ಲಿ ಅಭಿಯೇ ಸ್ಟಡೀಸ್‌ನಲ್ಲಿ ಎಲ್ಲರಿಗಿಂತ ಮುಂದೆ. ಆದರೆ ಆರ್ಥಿಕವಾಗಿ ಹಿಂದುಳಿದ ಮನೆಯಿಂದ ಬಂದಿದ್ದ. ಒಂದೊಂದ್ಸಲ ಫೀಸ್ ಕಟ್ಟುವುದು ತಡವಾಗಿ ಆಫೀಸ್‌ನಿಂದ ಛೀಮಾರಿ ಕೂಡ ಹಾಕಿಸಿಕೊಳ್ಳುತ್ತಿದ್ದ. ತುಂಬಾ ಸಲ ರಶ್ಮಿಯೇ ಅವನ ಫೀಸ್ ಕಟ್ಟಲು ಸಹಾಯ ಮಾಡುತ್ತಿದ್ದಳು. ಹೋಟೆಲ್‌ಗೆ ಹೋದಾಗಲೂ ಅಭೀ ಪಾಲಿನ ಬಿಲ್ಲನ್ನು ಅವಳೇ ಭರಿಸುತ್ತಿದ್ದಳು.
ರಶ್ಮಿ ಅಪ್ಪ ಅಮ್ಮನ ಒಬ್ಬಳೇ ಮಗಳು. ಅತೀ ಶ್ರೀಮಂತಳಲ್ಲದ್ದಿದರೂ ದುಡ್ಡಿಗೇನೂ ಕೊರತೆಯಿರಲಿಲ್ಲ. ಅವಳ ಸರಳತೆ, ಮುಗ್ಧತೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಅವಳನ್ನು ಎಲ್ಲರ ಅಚ್ಚುಮೆಚ್ಚಿನವಳನ್ನಾಗಿಸಿತ್ತು. ಫೈನಲ್ ಎಗ್ಸಾಮ್ ಮುಗಿದು ರಿಸ್ಟ್ ಬರೋ ಮುಂಚೇನೇ ರಶ್ಮಿಗೆ ಮದುವೆ ಆಗಿತ್ತು. ಅವಳು ತುಮಕೂರಿನ ಶ್ರೀಮಂತ ಹುಡುಗ ದೀಪಕ್‌ನನ್ನು ಮದುವೆಯಾಗಿದ್ದಳು. ಅಷ್ಟು ಶ್ರೀಮಂತನನ್ನು ಮದುವೆಯಾಗಿದ್ದ ರಶ್ಮಿಗೆ ಕೆಲಸ ಮಾಡೋ ಅವಶ್ಯಕತೇನೇ ಇರಲಿಲ್ಲ.
ರಿಸಲ್ಟ್ ಬಂದೊಡನೆ ಅಭಿರಾಮ್ ಕೆಲಸದ ಸಲುವಾಗಿ ಯುಎಸ್‌ಎಗೆ ಹೋಗಿದ್ದ. ಈಗಿನಂತೆ ಮೊಬೈಲ್, ಎಸ್‌ಎಂಎಸ್, ಇಮೇಲ್‌ಗಳೂ ಅಷ್ಟಾಗಿ ಇರಲಿಲ್ಲ. ಕೆಲಸದ ಒತ್ತಡದ ಮಧ್ಯೆ ಎಂದೂ ಅಭಿಗೆ ತನ್ನ ಗೆಳೆಯರೊಡನೆ ಸಂಬಂಧ ಮುಂದುವರಿಸಲಾಗಲಿಲ್ಲ. ಬೆಂಗಳೂರಿಗೆ ಬಂದಾಗಿನಿಂದ ತನ್ನ ಹಳೆ ಗೆಳೆಯರನ್ನು ಭೇಟಿ ಮಾಡಬೇಕೆಂದುಕೊಳ್ಳುತ್ತಿದ್ದ. ಅಂತಹ ಅವಕಾಶ ಇಂದು ನಿರಾಯಾಸವಾಗಿ ಬಂದೊದಗಿತ್ತು. ಅದರಲ್ಲೂ ತನ್ನ ಅಚ್ಚುಮೆಚ್ಚಿನ ಗೆಳತಿ ರಶ್ಮಿಯನ್ನು ಭೇಟಿಯಾಗಿ ತುಂಬ ಸಂತೋಷಗೊಂಡಿದ್ದ.
ಅಭಿ ಶನಿವಾರ ಬೆಳಗ್ಗೆ ಸರಿಯಾಗಿ 10 ಗಂಟೆಗೆ ರಶ್ಮಿಯ ಮನೆ ತಲುಪಿದ. ರಶ್ಮಿ ಹಾರ್ದಿಕ ನಗುವಿನೊಂದಿಗೆ ಅಭಿಯನ್ನು ಸ್ವಾಗತಿಸಿದಳು. ನೀಲಿ ಚೂಡಿದಾರ್, ಯಾವುದೇ ಮೇಕಪ್ ಇಲ್ಲದ ಮುಖ, ಕುತ್ತಿಗೆಯವರೆಗೆ ಕತ್ತರಿಸಿದ ಕೂದಲು, ಹಣೆಯಲ್ಲಿ ಒಂದು ಸಣ್ಣ ಬೊಟ್ಟು. ಇಷ್ಟೇ ಸರಳ ಉಡುಪಿನಲ್ಲಿ ರಶ್ಮಿ ಮುದ್ದಾಗಿ ಕಾಣಿಸುತ್ತಿದ್ದಳು. ಅಂದಿನ ರಶ್ಮಿ ಸ್ವಲ್ಪವೂ ಬದಲಾಗಿಲ್ಲ ಅಂದುಕೊಂಡ ಅಭಿ.
“ಕಾಫಿ ಕುಡಿಯುತ್ತಾ ಮಾತಾಡೋಣ,” ಎಂದು ಅಡುಗೆ ಕೋಣೆಯಿಂದ 2 ಕಪ್ ಕಾಫಿ ತಂದು ಅಭಿಗೊಂದು ಕಪ್ ಕೊಟ್ಟು ಅವನೆದುರಿಗೆ ಸೋಫಾದಲ್ಲಿ ತಾನು ಕುಳಿತಳು ರಶ್ಮಿ.
ಆಭಿ ಮನೆಯನ್ನೆಲ್ಲ ಒಮ್ಮೆ ಅವಲೋಕಿಸಿದ. ತುಂಬಾ ನೀಟಾಗಿ ಸಿಂಪಲ್ಲಾಗಿ ಅಲಂಕರಿಸಿತ್ತು. ಮೊದಲಿನಿಂದಲೂ ರಶ್ಮಿ ಎಲ್ಲದರಲ್ಲೂ ನೀಟ್. ಎಲ್ಲಿಯೂ ಮಕ್ಕಳ ಅಥವಾ ಗಂಡನ ಸುಳಿವಿರಲಿಲ್ಲ.
“ಎಲ್ಲಿ ನಿನ್ನ ಹಸ್ಬೆಂಡ್, ಮಕ್ಕಳು ಯಾರೂ ಕಾಣಿಸುತ್ತಿಲ್ಲ?” ಮದುವೆಯಾಗಿ 6 ವರ್ಷದಲ್ಲಿ ಮಕ್ಕಳಾಗಿರುತ್ತವೆ ಎಂಬುದು ಅವನ ಲೆಕ್ಕಾಚಾರ.
“ಇಲ್ಲ ಒಬ್ಬಳೇ ಇದ್ದೀನಿ,” ಕ್ಲುಪ್ತವಾಗಿ ಉತ್ತರಿಸಿದಳು.
ಅವಳ ಮುಖದಲ್ಲಿ ದುಃಖ, ಸಿಟ್ಟು ಬೇಸರ ಇದೆಯೇ? ಎಂದು ಅವಳ ಮುಖವನ್ನೇ ಅವಲೋಕಿಸಿದ. ಆದರೆ ಅವಳ ಮುಖದಲ್ಲಿ ಯಾವುದೇ ಭಾವನೆ ಇರಲಿಲ್ಲ.
“ಅಂದರೆ?” ಅಭಿ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ.
“ಏನು ಹೇಳ್ಲಿ ನಿಂಗೆ….. ಇಲ್ಲಿ ನಡೆದ ವಿಷಯ ಏನೂ ತಿಳಿದಿಲ್ಲ. ಏಕೆಂದರೆ ನೀನು ನನ್ನ ಮದುವೆಗೆ ಬಂದವನು ಮತ್ತೆ ಅಮೆರಿಕಕ್ಕೆ ಹೊರಟುಹೋದೆ. ಮತ್ತೆ ಈಗಲೇ ನಮ್ಮ ಭೇಟಿ,” ಅಭಿಗೆ ರಶ್ಮಿಯ ಮಾತಿನಿಂದ ದಿಗಿಲಾಯಿತು.
“ನನ್ನ ಮದುವೆ ಆಯಿತು. ಆದರೆ ನಾನು ದೀಪಕ್‌ಗೆ ಹೆಂಡತಿ ಆಗಲಿಲ್ಲ,” ಅಭಿಗೆ ಶಾಕ್.
“ರಶ್ಮಿ, ಸರಿಯಾಗಿ ಬಿಡಿಸಿ ಹೇಳು,” ಅಭಿ ಒತ್ತಾಯಿಸಿ ಕೇಳಿದ ನಂತರ ರಶ್ಮಿ ಹೇಳಿದ್ದು ಇಷ್ಟು.
ಮದುವೆಯಾದ ಮೊದಲ ರಾತ್ರಿಯೇ ದೀಪಕ್ ತನ್ನಲ್ಲಿ ಸತ್ಯ ಹೇಳಿದ್ದ. ತಾನು ಮೊದಲೇ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದು ಅವಳು ಅನ್ಯ ಜಾತಿಯವಳಾಗಿದ್ದರಿಂದ ಮನೆಯಲ್ಲಿ ಒಪ್ಪಿರಲಿಲ್ಲ. ಅಪ್ಪ ಬೇರೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಪ್ರೀತಿಸಿದ ಆ ಹುಡುಗಿಯನ್ನು ಮದುವೆಯಾದರೆ ಆಸ್ತಿಯಲ್ಲಿ ನಯಾ ಪೈಸೆ ದಕ್ಕುವುದಿಲ್ಲ ಎಂದು ಅಪ್ಪ ಖಡಾ ಖಂಡಿತವಾಗಿ ಹೇಳಿದ್ದರು. ಮದುವೆ ಮೊದಲೇ ಈ ವಿಷಯ ತಿಳಿಸೋಣ ಅಂದರೆ ಅಪ್ಪ ಅಮ್ಮನ ಬೆದರಿಕೆ ತನ್ನನ್ನು ಅಸಹಾಯಕನನ್ನಾಗಿಸಿತ್ತು. ಶ್ರೀಮಂತಿಕೆಯಲ್ಲಿ ಬೆಳೆದು ಏಕಾಏಕಿ ಬೀದಿಗೆ ಬೀಳುವುದು ದೀಪಕ್‌ಗೆ ಇಷ್ಟವಿರಲಿಲ್ಲ. ಹಾಗಾಗಿ ಬೇರೆ ದಾರಿಯಿಲ್ಲದೆ ಮದುವೆಗೆ ಒಪ್ಪಿಗೆ ನೀಡಿದ್ದ. ಮದುವೆಯ ನಂತರ ಏನಾದ್ರೂ ಮಾಡಿ ಪ್ರೀತಿಸಿದವಳನ್ನು ಮದುವೆಯಾಗುವ ಉದ್ದೇಶ ಹೊಂದಿದ್ದ.
ದೀಪಕ್ ಮಾತಿಗೆ ರಶ್ಮಿಗೆ ದಿಕ್ಕೇ ತೋಚದಾಗಿತ್ತು. ಆದರೆ ಮೊದಲಿನಿಂದಲೂ ರಶ್ಮಿ ತುಂಬಾ ಧೈರ್ಯವಂತೆ, ಹೆಚ್ಚಾಗಿ ಬುದ್ಧಿವಂತೆ. ಅವಳು ಬೇರೆಯವರಂತೆ ಅತ್ತು ಕರೆಯಲಿಲ್ಲ. ಬದಲಾಗಿ ದೀಪಕ್‌ಗೆ ಪ್ರೀತಿಸಿದವಳ ಜೊತೆಯಾಗಲೂ ಸಹಕರಿಸುವುದಾಗಿ ಭರವಸೆ ಇತ್ತಳು. ಆದರೆ ತನ್ನನ್ನು ಯಾವುದೇ ರೀತಿಯಲ್ಲಿ ಕಟ್ಟಿಹಾಕದೆ ತನಗಿಷ್ಟ ಬಂದ ರೀತಿಯಿರಲು ಒಪ್ಪಿದರೆ ತಾನು ಹೆಸರಿಗೆ ಮಾತ್ರ ಹೆಂಡತಿಯಾಗಿ ಅವನ ಪ್ಲ್ಯಾನ್‌ಗೆ ಸಹಾಯ ಮಾಡುವುದಾಗಿ ತಿಳಿಸಿದಳು.
ಬೆಂಗಳೂರಿನಲ್ಲಿ ಕೆಲಸಕ್ಕೆ ಪ್ರಯತ್ನಿಸಿ ಕೆಲವೇ ದಿನಗಳಲ್ಲಿ ದೀಪಕ್ ಮನೆಯಿಂದ ಹೊರಟುಬಂದಿದ್ದಳು. ಅಪ್ಪ ಅಮ್ಮನಿಗೂ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡಿರಲಿಲ್ಲ. ಅತ್ತೆ ಮಾವನಂತೂ `ಈಗ ನಿನಗೆ ಕೆಲಸ ಮಾಡುವ ಅಗತ್ಯವೇನಿದೆ?’ ಎಂದು ತಡೆಯಲು ಪ್ರಯತ್ನಿಸಿದರು. ಆದರೆ ದೀಪಕ್‌ನ ಸಹಕಾರದಿಂದ ಸುಲಭವಾಗಿ ಬೆಂಗಳೂರಿಗೆ ಬಂದುಬಿಟ್ಟಿದ್ದಳು. ಉತ್ತಮ ಅಂಕ ಗಳಿಸಿದ್ದ ರಶ್ಮಿ ನಿರಾಯಾಸವಾಗಿ ಕೆಲಸ ದೊರಕಿಸಿಕೊಂಡು ಬೇರೆ ಬಾಡಿಗೆ ಮನೆ ಮಾಡಿ ಒಂದು ರೀತಿಯಲ್ಲಿ ದೀಪಕ್‌ನಿಂದ ಸ್ವತಂತ್ರವಾಗಿಬಿಟ್ಟಿದ್ದಳು. ಹೀಗೆ ದೀಪಕ್ ಊರಿನಲ್ಲಿ, ರಶ್ಮಿ ಬೆಂಗಳೂರಿನಲ್ಲಿ ಒಂದು ವರ್ಷ ಬೇರೆಯವರ ಕಣ್ಣಿಗೆ ಮಾತ್ರ ಗಂಡ ಹೆಂಡತಿ ತರಹ ಇದ್ದರು. ಅಷ್ಟರಲ್ಲಿ ದೀಪಕ್‌ನ ಅಪ್ಪ ಹೃದಯಾಘಾತವಾಗಿ ತೀರಿಕೊಂಡರು. ದೀಪಕ್‌ಗೆ ಮುಂದಿನ ದಾರಿ ಸುಗಮವಾಗಿತ್ತು. ಇಬ್ಬರೂ ಡೈವೋರ್ಸ್ ಪಡೆದು ಬೇರೆಯಾದರು. ರಶ್ಮಿಯ ಮದುವೆ ಈ ರೀತಿ ತೋಪಾಗಿದ್ದು ಅವಳ ಅಪ್ಪ ಅಮ್ಮನಿಗೆ ಸಹಿಸಲಾರದ ದುಃಖ ತಂದಿತ್ತು. ಆಗಾಗ ಬೆಂಗಳೂರಿಗೆ ಬಂದು ರಶ್ಮಿಯ ಜೊತೆ ಕೆಲ ದಿನ ಇದ್ದು ಹೋಗುತ್ತಿದ್ದರು. ರಶ್ಮಿ ಯಾವುದೇ ಏರಿಳಿತವಿಲ್ಲದೇ ನಿರ್ಲಿಪ್ತವಾಗಿ ತನ್ನ ಕಥೆ ಹೇಳಿ ಮುಗಿಸಿದಳು.
“ಮತ್ತೆ ಎಷ್ಟು ದಿನಾಂತ ಹೀಗೆ? ಮತ್ತೆ ಮದುವೆ ಆಗೋ ಬಗ್ಗೆ ಆಲೋಚನೆ?” ಅಭಿ ಪ್ರಶ್ನಿಸಿದ.
“ಹ್ಞೂಂ…. ಅಪ್ಪ ಅಮ್ಮ ಇನ್ನೊಂದು ಮದುವೆ ಆಗಲು ಒತ್ತಾಯಿಸುತ್ತಿದ್ದಾರೆ. ನಾನು ಇಷ್ಟು ದಿನ ಆರಾಮವಾಗಿರೋಣ ಅಂತ ಸುಮ್ಮನಿದ್ದೆ. ಈಗ ಒಳ್ಳೇ ಪ್ರಪೋಸ್ ಸಿಕ್ಕರೆ ಮದುವೆ ಆಗುವುದಾಗಿ ಹೇಳಿದ್ದೇನೆ.”
ಅಭಿಗೆ ರಶ್ಮಿಯ ಬಗ್ಗೆ ಹೆಮ್ಮೆ ಅನಿಸುತ್ತಿತ್ತು. ತನ್ನನ್ನು ನಂಬಿಸಿ ಮದುವೆ ಆಗಿ ಮೋಸ ಮಾಡಿದ್ದ ದೀಪಕ್‌ಗೇ ಸಹಾಯ ಮಾಡಿದ್ದಾಳೆ. ಇವಳು ಮೊದಲಿನಿಂದಲೂ ಹೀಗೆ. ಎಲ್ಲರಿಗೂ ಸಹಾಯ ಮಾಡುವಳು. ಅವಳ ಈ ಗುಣವೇ ರಶ್ಮಿಯನ್ನು ಅಭಿಯ ಅಚ್ಚುಮೆಚ್ಚಿನ ಗೆಳತಿಯನ್ನಾಗಿಸಿತ್ತು. ಮತ್ತೆ ಮಾಮೂಲಿ ಮಾತುಕತೆ, ಊಟದ ನಂತರ ಅಭಿ ಹೊರಟುಹೋದ. ಒಂದು ವಾರ ಬಿಟ್ಟು ಅಭಿ ಫೋನ್ ಮಾಡಿದ್ದ. ವೀಕೆಂಡ್‌ನಲ್ಲಿ ತನ್ನ ಬರ್ತ್‌ಡೇ ಪಾರ್ಟಿಗೆ ಆಹ್ವಾನಿಸಿದ್ದ, “ಖಂಡಿತಾ ಮಿಸ್ ಮಾಡ್ಕೊಳ್ಳಬೇಡ ರಶ್ಮಿ,” ಒತ್ತಾಯ ಮಾಡಿ ಹೇಳಿದ್ದ. ರಶ್ಮಿಗೂ ವೀಕೆಂಡ್‌ನಲ್ಲಿ ಯಾವುದೇ ಕೆಲಸವಿರಲಿಲ್ಲ. ಹಾಗಾಗಿ ಖಂಡಿತಾ ಬರುವುದಾಗಿ ಭರವಸೆ ಇತ್ತಳು.
ಅಂದು ಶನಿಾರ. ಸಂಜೆ ಅಭಿ ಪಾರ್ಟಿ ಹೋಟೆಲ್ ಒಬೆರಾಯ್‌ನಲ್ಲಿ. ಗೋಲ್ಡನ್ ವರ್ಕ್ ಇದ್ದ ಕೆಂಪು ಘಾಘ್ರಾ ಚೋಲಿ, ಅದಕ್ಕೆ ಮ್ಯಾಚಿಂಗ್ ಆಗಿ ಕೆಂಪು ಹರಳಿನ ನೆಕ್ಲೆಸ್ ಧರಿಸಿದ್ದಳು. ಚೆನ್ನಾಗಿ ಶ್ಯಾಂಪೂ ಮಾಡಿದ್ದ ಕೂದಲನ್ನು ಹಾಗೆಯೇ ಬಿಟ್ಟಿದ್ದಳು. ಒಂದು ಕೈಗೆ ಗೋಲ್ಡನ್ ಚೈನ್ ವಾಚ್ ಮತ್ತು ಇನ್ನೊಂದು ಕೈಗೆ ಕೆಂಪು ಹರಳಿನ ಬಳೆ. ಅಂತೂ ಬಹಳ ಮುದ್ದಾಗಿ ಕಾಣಿಸುತ್ತಿದ್ದಳು. ಹೈಹೀಲ್ ಚಪ್ಪಲ್ ಧರಿಸಿ, ಕೈಯಲ್ಲಿ ಗೋಲ್ಡನ್ ವರ್ಕ್‌ನ ಸುಂದರ ಪರ್ಸ್ ಹಿಡಿದು ಹೊರಟಳು ರಶ್ಮಿ. ಈ ಅಲಂಕಾರದಲ್ಲಿ ಸ್ಕೂಟಿಯಲ್ಲಿ ಹೋಗಲು ಇಷ್ಟವಾಗದೆ ಆಟೋ ಹಿಡಿದು ಅಭಿ ಹೇಳಿದ ಹೋಟೆಲ್ ಒಬೆರಾಯ್‌ಗೆ ಸರಿಯಾಗಿ ಸಾಯಂಕಾಲ 6 ಗಂಟೆಗೆ ತಲುಪಿದಳು.
ರಶ್ಮಿ ಅಭಿಗಾಗಿ ಅತ್ತಿತ್ತ ಹುಡುಕುತ್ತಿರುವಾಗ, “ಹಾಯ್ ರಶ್ಮಿ, ಅಂತೂ ಬಂದೆಯಲ್ಲ. ಎಲ್ಲಿ ಕೈಕೊಡುತ್ತಿಯೋ ಅಂದುಕೊಂಡೆ,” ಅಭಿ ಕೂಗಿಗೆ ತಿರುಗಿ ನೋಡಿದಳು ರಶ್ಮಿ. ಅಭಿ ಬಿಳಿ ಅಂಗಿಯ ಮೇಲೆ ನೀಲಿ ಕೋಟ್, ನೀಲಿ ಪ್ಯಾಂಟ್, ಕೋಟಿಗೆ ಸಿಕ್ಕಿಸಿದ ರೆಡ್ ರೋಸ್‌ನಲ್ಲಿ ಥೇಟ್ ಮದುಮಗನಂತೆ ಕಾಣಿಸುತ್ತಿದ್ದ.
“ವಿಶ್ ಯೂ ಹ್ಯಾಪಿ ಬರ್ತ್‌ಡೇ ಅಭೀ. ತುಂಬಾ ಹ್ಯಾಂಡ್ ಸಮ್ ಆಗಿ ಕಾಣಿಸುತ್ತಿದ್ದೀಯ,” ಮುಚ್ಚುಮರೆಯಿಲ್ಲದೆ ತನಗೆ ಅನಿಸಿದ್ದನ್ನು ಹೇಳಿದಳು ರಶ್ಮಿ.
“ಥ್ಯಾಂಕ್ಸ್ ರಶ್ಮಿ…..”
“ಎಲ್ಲಿ ಪಾರ್ಟಿಗೆ ಯಾರೂ ಇನ್ನೂ ಬಂದಿಲ್ವಾ?” ಅನುಮಾನಿಸುತ್ತಾ ಪ್ರಶ್ನಿಸಿದಳು ರಶ್ಮಿ.
“ಇಲ್ಲಾ ಕಣೇ, ಈ ಪಾರ್ಟಿಗೆ ನೀನೊಬ್ಬಳೇ ಆಹ್ವಾನಿತಳು,” ಕೆಂಪುಡುಪಿನಲ್ಲಿ ಸುಂದರವಾಗಿ ಕಾಣಿಸುತ್ತಿದ್ದ ಅವಳನ್ನೇ ಮೆಚ್ಚುಗೆಯಿಂದ ನೋಡುತ್ತಾ ನುಡಿದ ಅಭಿ. “ಇಷ್ಟು ಸಮಯದ ನಂತರ ನೀನು ನನಗೆ ಸಿಕ್ಕಿದ್ದೀಯಾ? ನಿನ್ನ ಜೊತೆ ಆರಾಮವಾಗಿ ಹಳೆಯದನ್ನು ನೆನಪಿಸಿಕೊಂಡು ಊಟ ಮಾಡೋಣಾಂತ. ನೀನು ಸುಮ್ಮನೆ ಕರೆದರೆ ಬರೋಲ್ಲ. ಅದಕ್ಕೆ ಬರ್ತ್‌ಡೇ ಅಂತ ಸುಳ್ಳು ಹೇಳಿದೆ,” ಅಭಿ ನಕ್ಕ.
ರಶ್ಮಿಗೂ ಅಭಿ ಮಾತು ಕೇಳಿ ನಗು ಬಂತು. ಇವನ ಬರ್ತ್‌ಡೇ ಪಾರ್ಟಿ ಅಂತ ಇಷ್ಟೆಲ್ಲ ಡ್ರೆಸ್ ಮಾಡಿಕೊಂಡು ಬಂದೆನಲ್ಲ ಎಂದೆನಿಸಿತು. ಅಭಿ ಅವಳ ಕಾಲೇಜ್‌ಮೇಟ್. ಅವನು ಮೊದಲಿನಿಂದಲೂ ತುಂಬಾ ಸಂಕೋಚ ಸ್ವಭಾವದವನು. ಆದರೆ ಈಗ ಹಾಗಿಲ್ಲ. ತುಂಬಾ ಬೋಲ್ಡ್ ಆಗಿದ್ದಾನೆ. ಮೊದಲಿನ ಹಿಂಜರಿಕೆ ಇಲ್ಲ. ತುಂಬ ಕಾನ್ಛಿಡೆಂಟ್ ಆಗಿದ್ದಾನೆ ಅನಿಸಿತು ರಶ್ಮಿಗೆ.
“ಬಾ ರಶ್ಮಿ, ಇಲ್ಲೇ ಕೂರೋಣ,” ಮೊದಲೇ ರಿಸರ್ವ್ ಮಾಡಿದ್ದ ಟೇಬಲ್‌ಗೆ ಕರೆದೊಯ್ದ ಅಭಿ.
ಹೋಟೆಲ್‌ನ ವಾತಾವರಣ ತುಂಬಾ ಚೆನ್ನಾಗಿತ್ತು. ವೀಕೆಂಡ್‌ಗಾಗಿ ಹೊರಗಡೆ ಪೂಲ್ ಸುತ್ತಾ ಡೈನಿಂಗ್ ಟೇಬಲ್ ಹಾಕಲಾಗಿತ್ತು. ವೀಕೆಂಡ್ ಅನುಭವವನ್ನು ಸ್ಮರಣೀಯನ್ನಾಗಿರಿಸಲು ಕ್ಯಾಂಡಲ್ ಲೈಟ್ ಡಿನ್ನರ್ ವ್ಯವಸ್ಥೆ ಮಾಡಲಾಗಿತ್ತು. ಸುತ್ತಾ ಕಣ್ಣಾಡಿಸಿದಳು ರಶ್ಮಿ.
ಎಲ್ಲಾ ಟೇಬಲ್‌ಗಳಲ್ಲೂ ಹುಡುಗ ಹುಡುಗಿ ಜೋಡಿಗಳೇ ಹರಟೆ ಹೊಡೆಯುತ್ತಾ ತಿನ್ನುತ್ತಾ ಇದ್ದ ದೃಶ್ಯ ಕಾಣಿಸುತ್ತಿತ್ತು. ಬಹುಶಃ ಲವ್ ಬರ್ಡ್‌ಗಳಿಗೆ ಈ ಜಾಗ ಸೂಕ್ತ ಎಂದುಕೊಂಡಳು ರಶ್ಮಿ. ಎಲ್ಲವನ್ನೂ ಅಭಿಯೇ ಆರ್ಡರ್ ಮಾಡಿದ. ಬರೀ ಅವನದೇ ಮಾತು ಮಾತು. ತನ್ನ ಅಮೆರಿಕದ ವರ್ಕ್ ಲೈಫ್ ಬಗ್ಗೆ ವಿವರಿಸುತ್ತಾ ತಾನು ಈ ಮಟ್ಟಕ್ಕೆ ಹೇಗೆ ತಲುಪಿದೇ ಎಂದು ವಿವರಿಸಿದ. ಮೌನನಾಗಿ ಅವನ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ರಶ್ಮಿ ನಡುನಡುವೆ ತನ್ನ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಳು.
“ಗಂಟೆ ಹತ್ತಾಯಿತು ಅಭಿ. ಹೊರಡೋಣವೇ?” ರಶ್ಮಿಯ ಮಾತಿಗೆ ಅಭಿ ಎಚ್ಚೆತ್ತ.
ರಶ್ಮಿಯನ್ನೇ ದಿಟ್ಟಿಸಿದ. ಆ ಮಂದವಾದ ಬೆಳಕಿನಲ್ಲಿ ರಶ್ಮಿ ಅಪ್ಸರೆಯಂತೆ ಕಾಣಿಸುತ್ತಿದ್ದಾಳೆ ಅಂದುಕೊಂಡ. ತಕ್ಷಣ ಅವಳ ಬಲಗೈ ಹಿಡಿದುಕೊಂಡ. ಇದನ್ನು ನಿರೀಕ್ಷಿಸದ ರಶ್ಮಿ ಒಮ್ಮೆಲೇ ಅವಾಕ್ಕಾದಳು. ಅಭಿ ಇಷ್ಟು ಸಲಿಗೆ ತೆಗೆದುಕೊಳ್ಳುತ್ತಾನೆ ಎಂದುಕೊಂಡಿರಲಿಲ್ಲ. ಅವಳು ರಿಯಾಕ್ಟ್ ಮಾಡುವ ಮೊದಲೇ ಅವಳ ಕೈಗೆ ಯಾವುದೋ ಹಳೆಯ ಮಡಚಿದ ಕಾಗದವೊಂದನ್ನು ಕೊಟ್ಟ. ರಶ್ಮಿಗೆ ಆಶ್ಚರ್ಯದಿಂದ, “ಅಭೀ ಏನೋ ಇದು?” ಎಂದು ಅನುಮಾನಿಸುತ್ತಾ ಪ್ರಶ್ನಿಸಿದಳು.
“ರಶ್ಮೀ, ಇದು ನಿನಗಾಗಿಯೇ ಕೊಡಬೇಕೆಂದು ಕಾಲೇಜು ದಿನಗಳಲ್ಲಿ ಬರೆದ ಪತ್ರ. ನೀನು ಯಾವಾಗಲೂ ನನಗೆ ಸಹಾಯ ಮಾಡುತ್ತಿದ್ದೆ. ನಿನಗೆ ನನ್ನ ಮೇಲೆ ಅನುಕಂಪ ಜಾಸ್ತಿ ಇತ್ತು. ಆದರೆ ನಾನು ಒಳಗೊಳಗೇ ನಿನ್ನನ್ನು ಆರಾಧಿಸುತ್ತಿದ್ದೆ, ಪೂಜಿಸುತ್ತಿದ್ದೆ, ಪ್ರೇಮಿಸುತ್ತಿದ್ದೆ….. ನಿನ್ನಲ್ಲಿ ನನ್ನ ಪ್ರೀತಿಯನ್ನು ಹೇಳುವ ಧೈರ್ಯ ನನಗಿರಲಿಲ್ಲ.
“ಏಕೆಂದರೆ ನೀನು ಎಲ್ಲಾ ರೀತಿಯಿಂದಲೂ ನನಗಿಂತ ಮೇಲಿದ್ದೆ. ಆದರೂ ಕಾಲೇಜು ಬಿಡುವ ಮೊದಲು ನಿನಗೆ ಹೇಳಲೇಬೇಕೆಂದು ಈ ಪತ್ರವನ್ನು ಬರೆದೆ. ಅದನ್ನು ಕೊಡೋಣ ಎಂದು ಆ ದಿನ ಕಾಲೇಜಿಗೆ ಬಂದೆ. ಆದರೆ ನೀನು ಅದೇ ದಿನ ನಿನ್ನ ಮದುವೆ ಎಂಗೇಜ್‌ಮೆಂಟ್ ವಿಷಯ ಹೇಳಿದೆ.
“ನನಗೆ ಆಘಾತವಾಯ್ತು. ದಿಕ್ಕೇ ತೋಚಲಿಲ್ಲ. ನನ್ನಲ್ಲಿ ಹಣ, ಕೆಲಸ ಏನೂ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿ ಏನೂ ಮಾಡಲಾರದೇ ಈ ಪತ್ರವನ್ನು ಜೇಬಲ್ಲೇ ಉಳಿಸಿಕೊಂಡಿದ್ದೆ. ಆದರೆ ನಿನ್ನ ಮೇಲಿನ ಪ್ರೀತಿ ನನ್ನೊಳಗೆ ಸದಾ ಹಸಿರಾಗಿತ್ತು. ಅಮೆರಿಕದ ದಿನಗಳಲ್ಲೂ ಈ ಪತ್ರವನ್ನು ನನ್ನ ಜೊತೆಯೇ ಇಟ್ಟುಕೊಂಡಿದ್ದೆ. ನೀನು ಇನ್ನೊಬ್ಬನ ಹೆಂಡತಿ ಆದ ಮೇಲೂ ನನ್ನ ಪ್ರೀತಿ ಸಾಯಲಿಲ್ಲ.
“ಏಕೆಂದರೆ ನನ್ನದು ನಿಜವಾದ ಪ್ರೀತಿ. ನನ್ನ ಪ್ರಕಾರ ನಾವು ಯಾರನ್ನಾದರೂ ನಿಜವಾಗಿ ಪ್ರೀತಿಸಿದರೆ, ಅವರು ದೂರವಾದರೂ ಅಥವಾ ಮದುವೆ ಆಗಿ ಹೋದ ತಕ್ಷಣ ಪ್ರೀತೀನೂ ಹೊರಟು ಹೋಗುವುದಿಲ್ಲ ಎಂದು ನನ್ನ ಅಭಿಪ್ರಾಯ. ಹಾಗೊಂದು ವೇಳೆ ಆದಲ್ಲಿ ಅದು ನಿಜವಾದ ಪ್ರೀತೀನೇ ಅಲ್ಲ. ನಿಜವಾಗಿ ವ್ಯಕ್ತಪಡಿಸಲಾಗದಿದ್ದರೂ ಸಾಯೋತನಕ ನಮ್ಮಲ್ಲಿ ಗುಪ್ತವಾಗಿ ಇದ್ದು ಬಿಡುತ್ತದೆ. ನೀನು ಬೇರೊಬ್ಬನ ಹೆಂಡತಿಯಾದ ಕೂಡಲೇ ನಿನ್ನ ಮೇಲಿನ ನನ್ನ ಪ್ರೀತಿ ಹೊರಟುಹೋಗಿರಲಿಲ್ಲ.
“ಆದರೆ ನಿನ್ನ ಲೈಫ್‌ನಲ್ಲಿ ಬಂದು ನಿನ್ನ ಜೀವನ ಹಾಳು ಮಾಡುವಂತಹ ಹುಚ್ಚುತನ ಕೆಟ್ಟತನ ನನ್ನಲ್ಲಿರಲಿಲ್ಲ. ಬಹುಶಃ ನಾನು ಬೇರೆಯವರನ್ನು ಮದುವೆ ಆಗಿದ್ದರೂ ನಿನ್ನ ಮೇಲಿನ ನನ್ನ ಪ್ರೀತಿ ಕಡಿಮೆ ಆಗುತ್ತಿರಲಿಲ್ಲ. ಈ ಪ್ರೀತಿ ನನ್ನಲ್ಲೇ ಒಳಗೊಳಗೇ ಉಳಿದಿರುತ್ತಿತ್ತು. ನಿನಗಿದು ವಿಚಿತ್ರ ಎನಿಸಿರಬಹುದು. ಆದರಿದು ಸತ್ಯ,” ಎನ್ನುತ್ತಾ ತನ್ನ ಕೋಟಿಗೆ ಸಿಕ್ಕಿಸಿದ್ದ ಕೆಂಪು ಗುಲಾಬಿಯನ್ನು ಅವಳ ಕೈಗೆ ಕೊಡುತ್ತಾ, “ರಶ್ಮೀ ಐ ಲವ್ ಯೂ….ಈ ಮಾತನ್ನು ಯಾವತ್ತೋ ಹೇಳಬೇಕೆಂದಿದ್ದೆ. ಇವತ್ತು ಅವಕಾಶ ಸಿಕ್ಕಿದೆ. ಆವತ್ತಿನಷ್ಟೇ ಈಗಲೂ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಿನಗೆ ನನ್ನ ಪ್ರೀತಿ ಮೇಲೆ ನಂಬಿಕೆ ಇದ್ದರೆ ನನ್ನ ಪ್ರೀತಿಗೆ ಒಪ್ಪಿಗೆ ನೀಡಿ, ನನ್ನ ಬಾಳ ಸಂಗಾತಿಯಾಗು,” ಅವಳ ಕೈ ಹಿಡಿದು ಪ್ರೇಮ ನಿವೇದನೆ ಮಾಡಿಕೊಂಡ ಅಭಿ.
ರಶ್ಮಿ ಅವನ ಮಾತು ಕೇಳಿ ಆಘಾತಕ್ಕೊಳಗಾಗಿದ್ದಳು. ತಾನೆಣಿಸದ ನಾಟಕೀಯ ಹಂತಕ್ಕೆ ತಲುಪಿತ್ತು ಈ ಬರ್ತ್‌ಡೇ ಪಾರ್ಟಿ. ಅವನ ಕೈಯಲ್ಲಿದ್ದ ಅವಳ ಕೈ ಅವನ ಸ್ಪರ್ಶಕ್ಕೆ ಬೆಚ್ಚಗಾಗಿತ್ತು. ರಮಣೀಯ ರಾತ್ರಿ. ಇಷ್ಟು ಸುಂದರ ಯುವಕ ತನ್ನ ಪ್ರೀತಿಯ ನಿವೇದನೆ ಮಾಡುತ್ತಿದ್ದರೆ, ಬಹುಶಃ ರಶ್ಮಿ ಟೀನೇಜ್ ಹುಡುಗಿಯಾಗಿದ್ದಿದ್ದರೆ ಅಲ್ಲೇ ಕರಗಿಬಿಡುತ್ತಿದ್ದಳೋ ಏನೋ. ರಶ್ಮಿಯ ಹೃದಯ ತೀವ್ರವಾಗಿ ಹೊಡೆದುಕೊಳ್ಳುತ್ತಿತ್ತು.
“ನೋಡು ರಶ್ಮಿ, ನಿನ್ನ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ನೀನು ನನಗೆ ಆಗಲೇ ಉತ್ತರ ಹೇಳಬೇಕಾಗಿಲ್ಲ. ಒಂದೆರಡು ದಿನ ಯೋಚನೆ ಮಾಡಿ ಹೇಳು,” ಅಭಿ ಅವಳಿಗೆ ತಕ್ಷಣಕ್ಕೆ ಬಿಡುಗಡೆ ನೀಡಿದ್ದ.
“ಬಾ, ಮನೆಗೆ ಡ್ರಾಪ್ ಮಾಡ್ತೀನಿ,” ಎಂದ. ರಶ್ಮಿ ಮಾತಿಲ್ಲದೇ ಕಾರ್ ಹತ್ತಿದಳು. ಕಾರಿನಲ್ಲಿ ರಶ್ಮಿ ಅಭಿಯ ಮುಖವನ್ನೂ ನೋಡಲಿಲ್ಲ. ಏನೋ ಹಿಂಜರಿಕೆ. ದಾರಿಯುದ್ದಕ್ಕೂ ಮೌನವಾಗಿ ಡ್ರೈವ್ ಮಾಡಿದ ಅಭಿ ಅವಳನ್ನು ಮನೆಗೆ ಬಿಟ್ಟು, “ನಿನ್ನ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ. ಗುಡ್ ನೈಟ್,” ಎಂದು ಹೇಳಿ ಹೊರಟುಹೋದ.
ಮನೆಗೆ ಬಂದವಳೇ ಬಟ್ಟೆಯನ್ನೂ ಬದಲಿಸದೇ ಹಾಗೇನೇ ಸೋಫಾ ಮೇಲೆ ಕುಳಿತುಬಿಟ್ಟಳು ರಶ್ಮಿ. ಅವಳ ತಲೆ ತುಂಬಾ ಅಭೀನೇ ತುಂಬಿಕೊಂಡಿದ್ದ. ಅಷ್ಟರಲ್ಲಿ ಮೊಬೈಲ್ ರಿಂಗ್ ಆಯ್ತು. ಅವಳಮ್ಮನ ಫೋನ್, “ಹೇಗಿದ್ದೀಯಾ ರಶ್ಮೀ…..?” ಅಮ್ಮನ ಧ್ವನಿ ಕೇಳಿ ಸ್ವಲ್ಪ ಮನಸ್ಸಿಗೆ ಹಾಯೆನಿಸಿತ್ತು.
ಅವರು ತನ್ನ ತಂಗಿಯ ಮಗಳ ಮದುವೆಗೆ ತುಮಕೂರಿಗೆ ಹೋಗಿ ಬಂದಿದ್ದರು. ಬರೀ ಆ ಮದುವೆ ವಿಷಯಾನೇ ಅಮ್ಮ ಮಾತನಾಡಿದ್ದು. ಕೊನೆಗೆ ಅಮ್ಮ ಹೇಳಿದರು, “ರಶ್ಮೀ, ಅಲ್ಲಿ ದೀಪಕ್ ಮತ್ತು ಅವನಮ್ಮ ಬಂದಿದ್ದರು….”
ರಶ್ಮೀ ಏನೂ ಮಾತನಾಡಲಿಲ್ಲ. ಅಮ್ಮನೇ ಮತ್ತೆ ಮುಂದುವರಿಸಿದರು, “ದೀಪಕ್ ತುಂಬಾ ಇಳಿದುಹೋಗಿದ್ದಾನೆ. ನಿನ್ನನ್ನು ಮದುವೆಯಾಗಿ ನಿನಗೆ ಮೋಸ ಮಾಡಿದ ಅವನಿಗೆ ದೇವರು ಸರಿಯಾಗೇ ಶಿಕ್ಷೆ ಕೊಟ್ಟಿದ್ದಾನೆ,” ಅಮ್ಮ ಹೇಳುತ್ತಿದ್ದಂತೆ ರಶ್ಮಿಗೆ ಆಶ್ಚರ್ಯವಾಯ್ತು.
“ಯಾಕಮ್ಮಾ, ದೀಪಕ್‌ಗೆ ಏನಾಯ್ತು?”
“ನಿನ್ನ ಡೈವೋರ್ಸ್ ಆದ ಮೇಲೆ ಅಮ್ಮನನ್ನು ಒಪ್ಪಿಸಿ ಪ್ರೀತಿಸಿದ ಹುಡುಗಿಯನ್ನು ಮದುವೆ ಆಗಬೇಕೆಂದಿದ್ದ. ಆದರೆ ಅವಳು ಅವಳಪ್ಪನ ಒತ್ತಾಯಕ್ಕೆ ಬೇರೆ ಮದುವೆ ಆದಳಂತೆ.”
“ಛೇ, ದೀಪಕ್‌ಗೆ ಹೀಗಾಗಬಾರದಿತ್ತು,” ರಶ್ಮಿಗೆ ದೀಪಕ್ ಬಗ್ಗೆ ಅಯ್ಯೋ ಎನಿಸಿತು.
“ಈಗ ಆಘಾತದಿಂದ ಚೇತರಿಸಿಕೊಂಡಿದ್ದು, ಬೇರೆ ಮದುವೆ ಆಗೋಕೆ ಒಪ್ಪಿದ್ದಾನಂತೆ. ನೀನು ಮತ್ತೆ ಮದುವೆ ಆಗಿಲ್ಲಾಂತ ಅವರಿಗೆ ಗೊತ್ತಾಗಿದೆ. ಹಾಗಾಗಿ ನೀನು ಒಪ್ಪಿದರೆ ನಿನ್ನನ್ನು ಮತ್ತೆ ಮದುವೆ ಮಾಡಿಕೊಳ್ಳೋ ಪ್ರಸ್ತಾಪ ಮಾಡಿದ್ದಾರೆ.”
ರಶ್ಮಿ ಏನೂ ಹೇಳಲಿಲ್ಲ.
“ಅಲ್ಲಾ ಕಣೇ, ನನಗೂ ಇದು ಸರಿ ಎನಿಸುತ್ತಿದೆ. ಹೇಗೂ ನಿನ್ನನ್ನು ಒಮ್ಮೆ ಮದುವೆ ಆದವನೇ….” ಅಮ್ಮ ಹೇಳುತ್ತಿರುವಂತೆಯೇ ಅಪ್ಪ ಫೋನ್ ಕೈಗೆ ತೆಗೆದುಕೊಂಡು, “ನೋಡಮ್ಮ ರಶ್ಮಿ, ನಿನ್ನ ಅಮ್ಮ ಹೇಳಿದರು ಎಂದು ನೀನು ಒಪ್ಪಬೇಕಾಗಿಲ್ಲ. ನಿನ್ನ ಅಮ್ಮ ಹಳೆಯ ಕಾಲದವರು,” ಎಂದರು.
ರಶ್ಮಿಗೂ ತನ್ನ ಅಮ್ಮನ ಆತಂಕ ಗೊತ್ತಿತ್ತು. ತನ್ನ ಒಬ್ಬಳೇ ಮಗಳ ಮದುವೆ ಮುರಿದು ಬಿದ್ದದ್ದೇ ಅವರ ಚಿಂತೆ. ಒಳಗೊಳಗೇ ತುಂಬಾ ಕೊರಗುತ್ತಿದ್ದರು. ಹಾಗಾಗಿ ರಶ್ಮಿಗೆ ಅಮ್ಮನ ಮೇಲೇನೂ ಬೇಸರವಾಗಲಿಲ್ಲ.
“ಬಿಡಪ್ಪಾ, ಅಮ್ಮನ ಬಗ್ಗೆ ನಂಗೊತ್ತಿಲ್ಲಾ?” ಎಂದು ರಶ್ಮಿ ಅಪ್ಪನಲ್ಲಿ ಅಂದು ಅಭಿಯ ಜೊತೆ ನಡೆದ ಘಟನೆಯನ್ನೂ ಹೇಳಿಕೊಂಡಳು.
“ನೋಡಮ್ಮಾ, ನೀನು ಬುದ್ಧಿವಂತಳು. ದೀಪಕ್ ಅಥವಾ ಅಭೀ ಯಾರಾದ್ರೂ ನಮ್ಮ ಅಭ್ಯಂತರವಿಲ್ಲ. ನಿನ್ನ ನಿರ್ಧಾರದ ಮೇಲೆ ನಮಗೆ ಗೌರವವಿದೆ. ಆದರೆ ಯಾವುದಕ್ಕೂ ಸರಿಯಾಗಿ ಯೋಚನೆ ಮಾಡಿ ನಿರ್ಧರಿಸು,” ಎಂದವರೇ ಮಾತು ಮುಗಿಸಿದರು.
ರಶ್ಮಿಗೆ ಆಘಾತದ ಮೇಲೆ ಆಘಾತ. ಒಂದೇ ದಿನ ಎರಡು ಪ್ರಪೋಸ್ಸ್! ತಲೆ ಚಿಟ್ಟು ಹಿಡಿಯತೊಡಗಿತ್ತು. ಅಭಿ ನಿಜವಾಗ್ಲೂ ತನ್ನನ್ನು ತುಂಬಾ ಪ್ರೀತಿಸುತ್ತಾನೆ. ಅದಕ್ಕೆ ಅವನು ಇಟ್ಟುಕೊಂಡ ಪ್ರೇಮಪತ್ರವೇ ಸಾಕ್ಷಿ. ಅವನು ತನ್ನಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುವಾಗ ಅವನ ಕಣ್ಣಲ್ಲಿ ನಿಜವಾದ ಪ್ರೀತಿ ಪ್ರತಿಫಲಿಸುತ್ತಿತ್ತು. ಅವನ ಮಾತಲ್ಲಿ ಖಂಡಿತಾ ಸುಳ್ಳಿರಲಿಲ್ಲ ಎಂದು ಅವಳಿಗೆ ಮನದಟ್ಟಾಗಿತ್ತು. ಅವನಿಗೆ ನಾನಲ್ಲದೇ ಬೇರೆ ಹುಡುಗಿ ಸಿಗುವುದೇನೂ ಕಷ್ಟಲ್ಲ. ಒಳ್ಳೆಯ ಕೆಲಸ, ನೋಡೋಕೂ ರೂಪವಂತ… ಮತ್ತೆ ದೀಪಕ್ ಮದುವೆ ಮೋಸ ಬಿಟ್ಟರೆ ಒಳ್ಳೆಯವನೇ. ಬೇರೆಯವರಾಗಿದ್ದರೆ ತನ್ನ ಜೊತೆ ಸಂಸಾರ ಮಾಡಿಕೊಂಡೇ ಗೊತ್ತಾಗದಂತೇ ಪ್ರೀತಿಸಿದವಳ ಜೊತೇನೂ ಸಂಬಂಧ ಇರಿಸಿಕೊಂಡು ಹೋಗುತ್ತಿದ್ದರು. ಅಥವಾ ತನ್ನ ದೇಹ ಸುಖ ಉಂಡ ಮೇಲೆ ತನ್ನ ಕಥೆ ಹೇಳಿ ದೂರವಾಗಬಹುದಿತ್ತು. ಆದರೆ ದೀಪಕ್ ತುಂಬಾ ಸಭ್ಯಸ್ಥ. ಒಂದು ವರ್ಷದಲ್ಲಿ ಒಂದು ದಿನ ತನ್ನನ್ನು ಕಾಮನೆಯ ಕಣ್ಣಲ್ಲಿ ನೋಡಿರಲಿಲ್ಲ. ತುಂಬಾ ಗೌರವಯುತವಾಗಿ ನಡೆದುಕೊಂಡಿದ್ದ. ಮತ್ತೆ ಇಲ್ಲಿನತನಕ ತನ್ನ ಸುದ್ದಿಗೆ ಬಂದಿರಲಿಲ್ಲ. ಪಾಪ, ಪ್ರೀತಿಸಿದವಳು ಕೈ ಕೊಟ್ಟಾಗ ತುಂಬಾ ನೊಂದಿರಬೇಕು ಎಂದುಕೊಂಡಳು. ಅಮ್ಮನನ್ನು ನೋಡಿದರೆ `ದೀಪಕ್ ಹೇಗಿದ್ದರೂ ನಿನ್ನ ಗಂಡನಾಗಿದ್ದ. ಅವನೇ ಸೂಕ್ತ,’ ಎಂದ ಹಾಗಿತ್ತು. ಮತ್ತೆ ಸಮಾಜದ ಒಪ್ಪಿಗೆಗೆ ಹೋದರೂ ದೀಪಕ್‌ನೇ ಹೆಚ್ಚು ಸೂಕ್ತ ಅನಿಸಿತ್ತು. ತನ್ನ ನಿರ್ಧಾರಕ್ಕೆ ಕಾಯುತ್ತಿರುವ ವ್ಯಕ್ತಿಗಳಿಗೆ ತನ್ನ ಸರಿಯಾದ ನಿರ್ಧಾರವನ್ನು ತಿಳಿಸುವುದು ತುಸು ಕಷ್ಟವೆನಿಸಿತ್ತು. ಎಲ್ಲಾ ರೀತಿಯಲ್ಲಿ ಯೋಚಿಸಿ ಕೊನೆಗೊಂದು ತೀರ್ಮಾನಕ್ಕೆ ಬಂದ ಮೇಲೆ ಹೋಗಿ ಮಲಗಿ ನಿದ್ರಿಸಿದಳು ರಶ್ಮಿ.
ಬೆಳಗೆದ್ದವಳೇ ಕಾಫಿ ಕುಡಿದು ಅಪ್ಪನಿಗೆ ಫೋನ್ ಮಾಡಿ, “ಅಪ್ಪಾ, ದೀಪಕ್‌ಗೆ ನಾನು ಅನಿವಾರ್ಯತೆ. ಆದರೆ ಅಭಿಗೆ ಹಂಬಲಿಕೆ. ದೀಪಕ್‌ಗೆ ನಾನು ಬೇರೆಯವರಿಗಿಂತ ಉತ್ತಮ ಆಯ್ಕೆ. ಏಕೆಂದರೆ ಹೇಗೂ ಒಂದು ಸಲ ಮದುವೆ ಆಗಿದ್ದವಳು.
“ಹಾಗಾಗಿ ಓ.ಕೆ. ಆದರೆ ಅಭಿಗೆ ನಾನು ವರ್ಷಾನುಗಟ್ಟಲೆಯಿಂದ ಗುಪ್ತಪ್ರೇಮಿ. ನನಗಾಗಿ ಹಂಬಲಿಸಿ ಹಂಬಲಿಸಿ ಮೊದಲನೇ ಚಾನ್ಸ್ ಮಿಸ್ ಮಾಡಿಕೊಂಡಿದ್ದರೂ ಎರಡನೇ ಅವಕಾಶವನ್ನು ಸರಿಯಾದ ಸಮಯದಲ್ಲಿ ಬಳಸಿಕೊಂಡ. ಅಭಿಯ ಪ್ರೀತಿಯೇ ನನಗೆ ಹೆಚ್ಚು! ಅಭಿಯೇ ನನ್ನ ಆಯ್ಕೆ…..” ಅಪ್ಪನಿಗೆ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸುತ್ತಾ ತನ್ನ ಮುಂದಿನ ಜೀವನದ ದಾರಿಗೆ ನಾಂದಿ ಹಾಡಿದಳು.