ಉ. ಭಾರತದ ರಾಜಾಸ್ಥಾನ್ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿ ಬೆಳೆದ ರಿಚಾ ಮೀನಾ, 2012ರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡು, ಒಂದಾದ ಮೇಲೊಂದರಂತೆ ಯಶಸ್ವೀ ಚಿತ್ರಗಳನ್ನು ನೀಡತೊಡಗಿದಳು. ಆಕೆ ಇದುವರೆಗೂ `ರನಿಂಗ್ ಶಾದಿ ಡಾಟ್ ಕಾಂ, ಮರ್ದಾನಿ-2, ಡ್ಯಾಡಿ’ ತರಹದ ದೊಡ್ಡ ಬಜೆಟ್ ಚಿತ್ರಗಳಲ್ಲಿ ಮಿಂಚಿದ್ದಾಳೆ. ಇತ್ತೀಚೆಗೆ ಇವಳ `ಕಸಾಯಿ’ ಹೆಚ್ಚು ಚರ್ಚೆಯಲ್ಲಿದೆ. ಇಷ್ಟು ಸಾಲದೆಂಬಂತೆ ಈ ಚಿಕ್ಕ ಅವಧಿಯಲ್ಲೇ ಇವಳು ನಟಿ, ನಿರ್ಮಾಪಕಿ, ಸಹನಿರ್ದೇಶಕಿಯಾಗಿ `ಘಮಂತು’ ಕಿರುಚಿತ್ರದಲ್ಲಿ ತೊಡಗಿಕೊಂಡಿದ್ದಾಳೆ, ಎಲ್ಲರ ಶಭಾಷ್‌ಗಿರಿ ಗಿಟ್ಟಿಸಿದ್ದಾಳೆ. ಅವಳೊಂದಿಗೆ ಗೃಹಶೋಭಾ ನಡೆಸಿದ ಮಾತುಕಥೆ :
2012ರಲ್ಲಿ ಬಾಲಿವುಡ್‌ನಲ್ಲಿ ನಿನ್ನ ಎಂಟ್ರಿ ಆಗಿದ್ದರೂ ಇದುವರೆಗೂ ಕೇವಲ 4-5 ಪ್ರಮುಖ ಚಿತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದೀಯಾ…..
ನಾನು ಇದುವವರೆಗೂ ಬೇಕಾದಷ್ಟು ಕೆಲಸ ಮಾಡಿದ್ದೇನೆ. ನಾನು ನ್ಯಾಷನಲ್ ಜ್ಯಾಗ್ರಫಿಕ್ ಚ್ಯಾನೆಲ್‌ಗಾಗಿ `ಸೀಕ್ರೆಟ್ಸ್ ಆಫ್ ತಾಜ್‌ಮಹಲ್’ ಎಂಬ ಒಂದು ಡಾಕ್ಯುಮೆಂಟರಿ ಸಹ ಮಾಡಿದ್ದೆ. ಇರಲ್ಲಿ ಮೊದಲ ಸಲ ಕ್ಯಾಮೆರಾ ಮುಂದೆ ನಿಂತು ಮುಮ್ತಾಜ್ ಆಗಿ ನಟಿಸಿದ್ದೆ. ಅದಾದ ನಂತರ ಇದೇ ಚ್ಯಾನೆಲ್‌ಗಾಗಿ `ಕಿಂಗ್ಸ್ : ಮಹಾರಾಜ ಆಫ್ ಇಂಡಿಯಾ’ ಶಾರ್ಟ್ ಫಿಲ್ಮ್ ತಯಾರಿಸಿದ್ದೆ. ಇದರಲ್ಲಿ ನಾನು ನೂರ್ ಜಹಾನ್ ಆಗಿದ್ದೆ. 3 ವರ್ಷಗಳ ಕಾಲ ಒಂದು ಪ್ರೊಡಕ್ಷನ್ ಹೌಸ್‌ನಲ್ಲಿ ವರ್ಕ್ ಮಾಡುತ್ತಾ ನಾನು ಎಡಿಟಿಂಗ್‌ನಲ್ಲಿ ಚೆನ್ನಾಗಿ ಪಳಗಿದೆ, ಸಹ ನಿರ್ದೇಶಕಿಯೂ ಆದೆ. ಹಲವು ಟಿವಿ ಧಾರಾವಾಹಿಗಳಿಗೆ ಕಾಸ್ಟಿಂಗ್ ಸಹ ಮಾಡಿದ್ದೇನೆ. 4 ಫೀಚರ್ ಫಿಲ್ಮ್ ಸಹ ಮಾಡಿದೆ. ನನ್ನ ಏಕಮಾತ್ರ ಉದ್ದೇಶವೆಂದರೆ, ಸದಾ ಉತ್ತಮ ಕ್ರಿಯೇಟಿವ್ ಕೆಲಸ ಮಾಡುತ್ತಿರಬೇಕೆಂಬುದು. ನನಗೆ ಧಾರಾವಾಹಿಗಳ ನಾಯಕಿಯಾಗುವ ಆಸೆಯಿಲ್ಲ. ಇದಕ್ಕಾಗಿ ನನಗೆ ಹಲವು ಆಫರ್ಸ್ ಬಂದಿದ್ದವು, ನಾನೇ ಒಪ್ಪಲಿಲ್ಲ. ನಾನು ಹಲವು ಜಾಹೀರಾತುಗಳಲ್ಲಿ ಮಾಡೆಲ್ ಆಗಿಯೂ ನಟಿಸಿರುವೆ. ನಾನು ಎಲ್ಲಿ ಸೂಟ್ ಆಗುವೆ, ಎಲ್ಲಿಲ್ಲ ಎಂಬುದು ನನಗೆ ಗೊತ್ತಿದೆ.
ಬಾಲಿವುಡ್ ಹೆಸರಾಗಿರುವುದೇ ಅಂಗಾಂಗ ಪ್ರದರ್ಶನಕ್ಕೆ…. ನೀನು ಇದಕ್ಕೆ ಒಪ್ಪದ ಕಾರಣ ಚಿತ್ರಗಳು ಕೈಬಿಟ್ಟು ಹೋದವೇ?
ಮಧ್ಯಮ ವರ್ಗದ ಹುಡುಗಿಯಾದ ನಾನು ನನಗಾಗಿ ಕೆಲವು ಲಿಮಿಟ್ಸ್ ಫಿಕ್ಸ್ ಮಾಡಿಕೊಂಡಿದ್ದೇನೆ, ಆ ಲಕ್ಷ್ಮಣರೇಖೆ ನಾನು ದಾಟಲಾರೆ! ಬಿಚ್ಚಮ್ಮನಾಗಿದ್ದರೆ ಮಾತ್ರ ಅವಕಾಶ ಅಂದರೆ ನನಗೆ ಅಂಥ ಚಿತ್ರಗಳೇ ಬೇಡ….. ಸೆಕ್ಸಿ ಗ್ಲಾಮರ್ ಪೋಸ್‌ಗಳ ಬದಲು ನನ್ನಲ್ಲಿನ ನೈಜ ನಟನೆಯ ಪ್ರತಿಭೆಯಿಂದ ನನಗೆ ಮುಂದೆ ಚಿತ್ರಗಳು ಸಿಗಬೇಕೆಂದು ಬಯಸುತ್ತೇನೆ. ಆ ಮೂಲಕ ಏನಾದರೂ ಸಾಧಿಸಲು ಇಷ್ಟಪಡುತ್ತೇನೆ. ನಾನೊಬ್ಬ ಅಪ್ಪಟ ಕಲಾವಿದೆ, ನಟಿಯೊಬ್ಬಳು ತನ್ನ ದೇಹ ಪ್ರದರ್ಶನದಿಂದ ಯಶಸ್ವಿ ಆಗುತ್ತಾಳೆ ಎಂದು ಎಲ್ಲರಿಗೂ ಗೊತ್ತು. ಆದರೆ ಆಗ ಯಾರೂ ಅವಳ ನಟನೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅವಳಿರುವುದೇ ಬಿಚ್ಚಮ್ಮನಾಗಿ ಎಂದಾಗಿಬಿಡುತ್ತದೆ. ನನ್ನ ಪ್ರಕಾರ, ಒಬ್ಬ ನಟಿ ತನ್ನ ಅಭಿನಯ ಪ್ರತಿಭೆಯಿಂದ ಮುಂದೆ ಬರಬೇಕೇ ಹೊರತು ಈ ರೀತಿಯ ಸೆಕ್ಸಿ ಪೋಸ್‌ಗಳಿಂದಲ್ಲ. ಇನ್ನೊಂದು ವಿಷಯ, ರಿಲೀಸ್ ಆಗುವ ಬಹುತೇಕ ಚಿತ್ರಗಳಲ್ಲಿ ನಟಿ ಕಾಣಿಸಿಕೊಳ್ಳಲೇಬೇಕು ಅಂತೇನಿಲ್ಲ. ಅವಳಿಗೆ ಒಪ್ಪುವಂಥ ಪಾತ್ರವಾದರೆ ಸರಿ. ಅದೇ ರೀತಿ, ಒಂದು ಚಿತ್ರ, ಆ ಪಾತ್ರಕ್ಕೆ ನಾನು ಒಪ್ಪುವಂತಿದ್ದು, ಅದರಲ್ಲಿ ಕಥೆಗೆ ತಕ್ಕಂತೆ ಎಕ್ಸ್ ಪೋಶರ್ ಅತಿ ಅನಿವಾರ್ಯವಾದರೆ, ಅದನ್ನು ನಿರ್ದೇಶಕರು ಕಲಾತ್ಮಕವಾಗಿ ಹೇಗೆ ತೋರಿಸುತ್ತಾರೆ ಎನ್ನುವುದರ ಮೇಲೆ ಆ ಚಿತ್ರ ಒಪ್ಪಿಕೊಳ್ಳುತ್ತೇನೆ. ಹೀಗಾಗಿ ಪ್ರತಿ ಚಿತ್ರದಲ್ಲಿ ದೇಹ ಪ್ರದರ್ಶನಕ್ಕೆ ಖಂಡಿತಾ ಒಪ್ಪುದಿಲ್ಲ. ಯಾವ ನಿರ್ದೇಶಕರ ಮೇಲೆ ನಂಬಿಕೆ ಇಲ್ಲವೋ ಅಂಥವರ ಜೊತೆ ಖಂಡಿತಾ ನಟಿಸಲಾರೆ. ಗುಂಪಲ್ಲಿ ಕುರಿ ಮಂದೆಯಾಗಿ ಬೆರೆತು ಹೋಗಲು ನನಗೆ ಇಷ್ಟವಿಲ್ಲ. ಸತ್ಯದ ಕಥೆ ಆಧಾರಿತ `ಕಸಾಯಿ’ ಚಿತ್ರದಲ್ಲಿ ನಾನು ಹೊಲಗದ್ದೆಗಳ ಮಧ್ಯೆ ರೊಮಾನ್ಸ್ ಮಾಡುವುದನ್ನು ಗಮನಿಸುವಿರಿ.
`ರನ್ನಿಂಗ್ ಶಾದಿ ಡಾಟ್ ಕಾಂ’ ಚಿತ್ರ ತಯಾರಾಗಿ 3-4 ವರ್ಷ ಬಿಡುಗಡೆ ಆಗಲೇ ಇಲ್ಲ. ಆ ಸಮಯದಲ್ಲಿ ನಿನ್ನ ಮನದಲ್ಲಿದ್ದ ಆಲೋಚನೆಗಳೇನು?
ಈ ಸಿನಿಮಾ ಇಂಡಸ್ಟ್ರಿಯ ಕಾರ್ಯವೈಖರಿ ನನಗೆ ಏನೇನೂ ಗೊತ್ತಿರಲಿಲ್ಲ. ಇದೇ ನನ್ನ ಕಷ್ಟಗಳ ಸರಣಿಯ ಮೊದಲ ಅನುಭವ. ಈ ಚಿತ್ರವನ್ನು ಉತ್ತಮ ಪ್ರತಿಭಾನ್ವಿತರೆಲ್ಲ ಕೂಡಿ ಮಾಡಿದ್ದರು. ಅಮಿತ್ ರಾವ್ ನಿರ್ದೇಶನ ಫೆಂಟಾಸ್ಟಿಕ್! ನಾವು ಒಂದೊಳ್ಳೆ ಕೆಲಸ ಮಾಡಿರುವ ತೃಪ್ತಿ ಪಡೆದಾಗ, ಸಣ್ಣಪುಟ್ಟ ಕೆಲಸದಲ್ಲಿ ಪಾಲ್ಗೊಳ್ಳಲು ಖಂಡಿತಾ ಇಷ್ಟವಾಗೋಲ್ಲ. ಹೀಗಾಗಿಯೇ ಸಣ್ಣಪುಟ್ಟ ಪಾತ್ರಗಳ ಚಿತ್ರಗಳು ದೊರಕಿದಾಗ ನಾನು ಒಪ್ಪಿಕೊಳ್ಳಲೇ ಇಲ್ಲ! ನಾನು ಇದೇ ಮಟ್ಟದ ಅಥವಾ ಇದಕ್ಕಿಂತ ಇನ್ನೂ ಉತ್ತಮ ಚಿತ್ರದ ಬ್ರೇಕ್‌ಗಾಗಿ ಕಾಯುತ್ತಿದ್ದೆ, ಬಹಳ ದಿನ ಅದು ಸಿಗಲೇ ಇಲ್ಲ….. ಡಿಪ್ರೆಶನ್, ಫ್ರಸ್ಟ್ರೇಶನ್‌ಗಳಿಂದ ಬೇಸತ್ತಿದ್ದ ಜನರ ದೊಡ್ಡ ಪಟ್ಟಿ ನನ್ನ ಬಳಿ ಇತ್ತು. ಹೀಗಾಗಿ ನಿರೀಕ್ಷೆ ಮಾಡುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ……
`ಮರ್ದಾನಿ, ಡ್ಯಾಡಿ’ಯಂಥ ಮಲ್ಟಿ ಬಿಗ್ ಬಜೆಟ್ ಸ್ಟಾರರ್ ಸುಪರ್ಬ್ ಬ್ಯಾನರ್‌ಗಳಡಿ ಚಿತ್ರಗಳಲ್ಲಿ ನಟಿಸಿದ್ದರೂ, ಹೊಸ ನಿರ್ದೇಶಕರ ಚಿತ್ರ `ಕಸಾಯಿ’ ಏಕೆ ಒಪ್ಪಿಕೊಂಡೆ?
ನನ್ನ ಅಭಿಪ್ರಾಯದಲ್ಲಿ ಬಿಗ್ ಬ್ಯಾನರ್ ಯಾ ಪ್ರೊಡಕ್ಷನ್ ಹೌಸ್ ದೊಡ್ಡ ಗ್ರೇಟ್ ಏನಲ್ಲ. ಕೇವಲ ಗಟ್ಟಿ ಕಥೆ, ಉತ್ತಮ ನಿರ್ದೇಶನ ಇರಬೇಕಷ್ಟೆ. ಕಲಾವಿದರಿಗಿಂತ ಅವರು ನಿರ್ವಹಿಸುವ ಪಾತ್ರವೇ ಹಿರಿದು. ಈ ಕಾರಣದಿಂದಾಗಿಯೇ ನಾನು ಗಜೇಂದ್ರ ಶಂಕರ್‌ರ `ಕಸಾಯಿ’ ಚಿತ್ರವನ್ನು ಕಣ್ಣುಮುಚ್ಚಿ ಒಪ್ಪಿಕೊಂಡೆ. ಫಿಲ್ಮ್ ಮೇಕಿಂಗ್ ಬಗ್ಗೆ ನನಗೆ ಹೆಚ್ಚಿನ ಒಲವಿದೆ, ಕಲೆ ಸಿನಿಮಾ ಕುರಿತು ಪ್ರೀತಿ ಇದೆ. ನಾನು ಕೇವಲ ಈ ಚಿತ್ರದ ಗಟ್ಟಿ ಕಥೆ ಮತ್ತು ನನ್ನ ಪಾತ್ರದ ಕುರಿತು ಬಹಳ ಶ್ರದ್ಧೆ ವಹಿಸಿದೆ. ರಾಜಾಸ್ಥಾನದ ಪ್ರಸಿದ್ಧ ಲೇಖಕ ಚರಣ್‌ಸಿಂಗ್‌ರ ಮೂಲ ಕಾದಂಬರಿ ಆಧಾರಿತ ಚಿತ್ರವಿದು. ಇಂಥ ಕಾದಂಬರಿಯನ್ನು ಚಿತ್ರ ಆಗಿಸಲು ತುಂಬಾ ಧೈರ್ಯ, ಪ್ರತಿಭೆ ಬೇಕು.
`ರನ್ನಿಂಗ್ ಶಾದಿ ಡಾಟ್ ಕಾಂ’ ಚಿತ್ರದಲ್ಲಿ ನಾನು ಸಂಪೂರ್ಣ ಹೊಸಬಳು. ಆ ಚಿತ್ರ ನೋಡಿದವರು ಇದೇನೋ ಎಳೆ ನಿಂಬೆಕಾಯಿ ಅಂದುಕೊಂಡಿದ್ದರೆ ಆಶ್ಚರ್ಯವಿಲ್ಲ. ಈ ಚಿತ್ರದಿಂದ ನನಗೆ ದೊಡ್ಡ ಬ್ರೇಕ್ ಸಿಕ್ಕಿತೆಂಬುದು ನಿಜ. ಈ ಚಿತ್ರದಿಂದ ಬೇಕಾದಷ್ಟು ಕಲಿತ ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಹಾಗಾಗಿಯೇ ಗಜೇಂದ್ರ ಶಂಕರ್ ಈ ಚಿತ್ರದ ಬಗ್ಗೆ ಪ್ರಸ್ತಾಪಿಸಿದಾಗ ಅವರ ಗಂಭೀರ ನಿರ್ದೇಶನದ ಅವರಿವಿದ್ದ ನಾನು ಕೂಡಲೇ ಒಪ್ಪಿದೆ. ಮುಂದೆ ನಿರೀಕ್ಷಿಸಿದಂತೆ ಈ `ಕಸಾಯಿ’ ಚಿತ್ರ 3-4 ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತು, ಪುರಸ್ಕಾರಗಳನ್ನು ಗಳಿಸಿತು. ನನಗೂ, ಮೀರಾ ವಸಿಷ್ಠಾರಿಗೂ ಪ್ರಶಸ್ತಿ ಲಭಿಸಿತು. ಇದನ್ನೆಲ್ಲ ಗಮನಿಸಿದಾಗ ನಾನು `ಕಸಾಯಿ’ ಚಿತ್ರ ಒಪ್ಪಿಕೊಂಡಿದ್ದೇ ಒಳ್ಳೆಯದೆನಿಸಿತು.
ನಿನಗೆ ಈ ಚಿತ್ರದಲ್ಲಿ ಇಷ್ಟವಾದ ಅಂಶಗಳೇನು?
ಈ ಚಿತ್ರದ ಗಟ್ಟಿ ಕಥೆ ಬಹಳ ಪ್ರಭಾಶಾಲಿ ಎನಿಸಿತು. ಇದು ನನ್ನನ್ನು ಮಾತ್ರವಲ್ಲ…. ಎಲ್ಲರನ್ನೂ ಪರವಶಗೊಳಿಸುವಂಥ ಚಿತ್ರ. ಇದು ಚರಿತ್ರಾರ್ಹ ಚಿತ್ರವಲ್ಲ, ಗ್ರಾಮೀಣ ಸೊಗಡಿನ ಜಾನಪದ ಕಥೆಯುಳ್ಳದ್ದು. ಇದರಲ್ಲಿ ಗ್ರಾಮ ಪಂಚಾಯ್ತಿ, ಸರಪಂಚರ ಚುನಾವಣೆಯ ಹಿನ್ನೆಲೆ ಇದೆ. ಇಲ್ಲಿ ಪ್ರತಿಯೊಂದು ಪಾತ್ರ ಜೀವಂತ, ತಮ್ಮದೇ ಆದ ಗುರಿ ಹೊಂದಿದೆ. ಇದರಲ್ಲಿ ನಾಯಕ ನಾಯಕಿ ಸೂರಜ್ ಮಿಸ್ರಿ ಪ್ರೇಮಿಗಳು. ಪ್ರೇಮ ಪ್ರಧಾನ ಕಥೆಯುಳ್ಳ ಚಿತ್ರ. ನಮ್ಮಿಬ್ಬರ ತಂದೆ ಶತ್ರು ಪಕ್ಷದವರು. ಹೀಗಾಗಿ ಮದುವೆಗೆ ಒಪ್ಪೋದಿಲ್ಲ. ನಾಯಕನ ತಾಯಿಗೆ ಮಗ ಆರಿಸಿದ ಹುಡುಗಿ ಇಷ್ಟವಿಲ್ಲ. ಹೀಗೆ ಮೆಲೋಡ್ರಾಮಾ ನಡೆಯುತ್ತದೆ. ದ್ವೇಷದ ದಳ್ಳುರಿ ಹೆಚ್ಚಾಗಿ ತಂದೆಯೇ ಮಗನನ್ನು ಕೊಲೆ ಮಾಡುವ ಭೀಕರತೆ ಇದೆ. ಆ ತಾಯಿ, ಈ ಪ್ರೇಯಸಿಯ ಪಾಡೇನು? ಚಿತ್ರ ನೋಡಿ ನೀವೇ ಹೇಳಿ.
ಈ ಚಿತ್ರದಲ್ಲಿ ನಿನ್ನ ಪಾತ್ರ ಕುರಿತು……
ಈ ಚಿತ್ರದಲ್ಲಿ ನಾನು ಹಳ್ಳಿಗಾಡಿನ ಹುಡುಗಿ ಮಿಸ್ರಿಯ ಪಾತ್ರ ವಹಿಸಿದ್ದೇನೆ. ಇವಳು ಹಳ್ಳಿಯ ಸರಪಂಚರ ಮೊಮ್ಮಗ ಸೂರಜ್‌ನನ್ನು ಪ್ರೇಮಿಸುತ್ತಾಳೆ. ಇಬ್ಬರೂ ಮದುವೆ ಆಗಬಯಸುತ್ತಾರೆ. ಒಂದು ಸಲ ಇಬ್ಬರೂ ಹೊಲದಲ್ಲಿ ದೈಹಿಕವಾಗಿ ಒಂದಾದಾಗ, ಆ ವಿಷಯ ಹುಡುಗಿಯ ಮನೆಯವರಿಗೆ ಗೊತ್ತಾಗಿ ರಾದ್ಧಾಂತವಾಗುತ್ತದೆ. ಎರಡೂ ಮನೆಗಳವರು ಮದುವೆಗೆ ಒಪ್ಪದೆ ಮಾರಾಮಾರಿ ಜಗಳವಾಗುತ್ತದೆ. ಇದು ವಿಕೋಪಕ್ಕೆ ಹೋಗಿ ತಂದೆಯೇ ಮಗನ ಕೊಲೆ ಮಾಡುತ್ತಾನೆ. ಕಥೆ ಮುಂದುವರಿದಾಗ ನಾಯಕಿ ಗರ್ಭಿಣಿ ಆಗುತ್ತಾಳೆ. ಮುಂದೆ ಅವಳನ್ನು ರಾಜಕೀಯ ಮೊಹರೆ ಆಗಿಸಿ ಚುನಾವಣೆ ಗೆಲ್ಲುವ ಹುನ್ನಾರ ನಡೆಯುತ್ತದೆ. ಮಿಸ್ರಿಯ ಪಾತ್ರದಲ್ಲಿ ಹಲವಾರು ಘಟ್ಟಗಳಿವೆ. ಮೊದಮೊದಲು ಅವಳು ಹಳ್ಳಿಯ ಮುಗ್ಧ, ತುಂಟಾಟದ ಹುಡುಗಿ. ಮುಂದಿನ ಘಟ್ಟದಲ್ಲಿ ಅವಳ ಪ್ರೇಮಿಯ ಸರಸ, ನಂತರ ಕೊಲೆ. ಹೀಗೆ ಅವಳ ಜೀವನ ಬಹಳ ಏರುಪೇರಾಗುತ್ತದೆ. ಒಬ್ಬ ಕಲಾವಿದೆಯಾಗಿ ನಾನು ಇಲ್ಲಿ ಎಲ್ಲಾ ಭಾವನೆಗಳನ್ನೂ ವಿಭಿನ್ನವಾಗಿ ಪ್ರಕಟಿಸಿದ್ದೇನೆ, ಎಂದೇ ಭಾವಿಸುತ್ತೇನೆ.
`ಕಸಾಯಿ’ ಚಿತ್ರ ರಾಜಾಸ್ಥಾನಿ ಹುಡುಗಿಯರ ಕುರಿತು ವಿವರವಾಗಿ ತಿಳಿಸುತ್ತದೆ. ನೀನೂ ಅದೇ ರಾಜ್ಯದವಳು, ನಿನ್ನ ದೃಷ್ಟಿಯಲ್ಲಿ ಅಲ್ಲಿ ಹೆಣ್ಣಿನ ಸ್ಥಿತಿ ಹೇಗಿದೆ?
ರಾಜಾಸ್ಥಾನ ರಾಜ್ಯ ಪ್ರಗತಿಪರ ರಾಜ್ಯ ಎನ್ನಬಹುದು. ಅಲ್ಲಿನ ಎಷ್ಟೋ ಹೆಂಗಸರು ಬ್ಯಾಂಕ್ ನೌಕರಿ, ಶಿಕ್ಷಕರು, ವೈದ್ಯರು, ಎಂಜಿನಿಯರ್‌ಗಳಾಗಿದ್ದಾರೆ. ನಾನಿರುವ ಹಳ್ಳಿಯಲ್ಲಿ ಅನಕ್ಷರಸ್ಥರೇ ಇಲ್ಲ. ಇಲ್ಲಿ ಪ್ರತಿಯೊಬ್ಬ ಹುಡುಗಿ ತನ್ನ ಇಷ್ಟದ ಕೆಲಸಗಳನ್ನು ಮಾಡಬಹುದು. ನಾನು ಕುಗ್ರಾಮದಲ್ಲಿ ಓದಿ ಮುಂದೆ ಬಂದಳು, ನನ್ನ ನಟನಾ ವೃತ್ತಿಗೆ ಮನೆಯವರು ವಿರೋಧಿಸಲಿಲ್ಲ. ಮೊದಲು ನೀನು ನಿನ್ನ ಕೆರಿಯರ್ ರೂಪಿಸಿಕೋ, ಆಮೇಲೆ ಮದುವೆ ಎಂದೇ ಪ್ರೋತ್ಸಾಹಿಸುತ್ತಿದ್ದಾರೆ. ನನ್ನ ತಾಯಿ ತಂದೆಯರ ಸಪೋರ್ಟ್ ಇಲ್ಲದಿದ್ದರೆ ಇಂದು ನಾನು ಈ ಮಟ್ಟಕ್ಕೆ ಏರುತ್ತಿರಲಿಲ್ಲ. ನನ್ನ ದೃಷ್ಟಿಯಲ್ಲಿ ಹೆಣ್ಣುಮಕ್ಕಳನ್ನು ಬಲವಂತವಾಗಿ ಕಂಟ್ರೋಲ್ ಮಾಡುವ ಬದಲು ಅವಳಿಷ್ಟದಂತೆ ಮುಂದುವರಿಯಲು ಬಿಡುವುದೇ ಸರಿ. ಅವಳಿಗೆ ಭರವಸೆ ತುಂಬಿಸಿ, ಬೆಳೆಯಲು ಪ್ರೋತ್ಸಾಹಿಸಿ. ಮುಂದೆ ಸರಿ ಹೆಜ್ಜೆ ಇಡಲು ಧೈರ್ಯ ತುಂಬಿಸಿ. ಪ್ರತಿ ಹುಡುಗಿಯ ಶಕ್ತಿ ಹೆಚ್ಚಿಸುವ ಕೆಲಸ ಆಗಬೇಕು. ಆಗ ಮಾತ್ರ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ನಮ್ಮ ದೇಶದಲ್ಲಿ, ವಿಶ್ವದಲ್ಲಿ ಎಲ್ಲೆಡೆ ಹೆಣ್ಣು ಪ್ರಗತಿ ಕಾಣಲು ಸಾಧ್ಯ ಎಂದು ನಂಬುತ್ತೇನೆ.
ಸಿನಿಮಾದಲ್ಲಿ ಹುಡುಗಿಯರು ಕೆಲಸ ಮಾಡುವುದರ ಕುರಿತು ರಾಜಾಸ್ಥಾನದ ಗಂಡಸರು ಹೇಗೆ ಪ್ರತಿಕ್ರಿಯಿಸುತ್ತಾರೆ?
ಜನ ಬಾಲಿವುಡ್ ಕುರಿತಾಗಿ ಕೇಳುವ ನಾನಾ ರೋಚಕ ಕಥೆಗಳಿಂದ ಎಲ್ಲರ ಮನದಲ್ಲೂ ಒಂದು ವಿಧದ ಭಯವಿದೆ. ಜನ ತಮ್ಮ ಮನೆ ಹೆಣ್ಣುಮಕ್ಕಳು ಸಿನಿಮಾಗೆ ಬರಬಾರದೆಂದೇ ಬಯಸುತ್ತಾರೆ. ರಾಜಾಸ್ಥಾನದ ಜನರಿಗೆ ಬಾಲಿವುಡ್ ಕಲಾವಿದರ ಬಗ್ಗೆ ಸತ್ಯ ಗೊತ್ತಿಲ್ಲ. ಪೇಪರ್, ಮೀಡಿಯಾದಲ್ಲಿ ತೋರಿಸುವುದನ್ನೇ ನಿಜ ಅಂದುಕೊಳ್ಳುತ್ತಾರೆ. ಯಾವ ತಾಯಿ ತಂದೆಯರೂ ತಮ್ಮ ಗಂಡು, ಹೆಣ್ಣುಮಕ್ಕಳು ದಾರಿ ತಪ್ಪುವುದನ್ನು ಬಯಸುವುದಿಲ್ಲ. ನಾನು ಸಿನಿಮಾಗೆ ಹೋಗಿ ನನ್ನ ಜೀವನದ ಅಮೂಲ್ಯ ದಿನಗಳನ್ನು ಹಾಳು ಮಾಡಿಕೊಳ್ಳುವೆನೇನೋ ಎಂಬ ಭಯ ನಮ್ಮ ಮನೆಯವರಿಗಿತ್ತು. ಅವರ ಮನದಲ್ಲಿ ಹಲವು ಪ್ರಶ್ನೆಗಳಿದ್ದವು. ಆದರೆ ನಾನು ನಟಿ ಆಗಲೇಬೇಕೆಂದು ನಿರ್ಧರಿಸಿದ್ದೆ. ನಿಧಾನವಾಗಿ ನಾನು ಅವರ ಆತ್ಮವಿಶ್ವಾಸ ಗಳಿಸಿದೆ.
ಇತ್ತೀಚೆಗೆ ಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದೀಯಾ?
ನಾನು ಪಿ. ನಳಿನಿ ನಿರ್ದೇಶನದ ಒಂದು ಗುಜರಾತಿ ಚಿತ್ರ `ಲಾಸ್ಟ್ ಫಿಲ್ಮ್ ಶೋ’ದಲ್ಲಿ ನಟಿಸುತ್ತಿದ್ದೇನೆ. ಇದರಲ್ಲಿ ನಾನು ಗಾಂಧೀಜಿ ಪತ್ನಿ ಕಸ್ತೂರ ಬಾ ಅವರ ಪಾತ್ರ ನಿರ್ವಹಿಸಿದ್ದೇನೆ. ಒಂದು ಶಾಟ್ ಫೀಚರ್ ಫಿಲ್ಮ್`ಘಮಂತು’ ಚಿತ್ರದ ಸಂಪೂರ್ಣ ನಿರ್ಮಾಣ, ಸಹ ನಿರ್ದೇಶನ, ನಾಯಕಿಯ ನಟನೆ ಮಾಡುವುದರ ಜೊತೆ ಇಡೀ ತಂಡದ ಪರಿಶ್ರಮ ಹೊತ್ತಿದ್ದೇನೆ. ಮುಂದೆ ನನಗೆ ದಕ್ಷಿಣದ ಚಿತ್ರಗಳಲ್ಲೂ ನಟಿಸಬೇಕು ಎಂದು ಬಹಳ ಆಸೆ ಇದೆ!
– ಶಾಂತಿ ತ್ರಿಪಾಠಿ