ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗಿದ್ದ ಕಥಾಸ್ಪರ್ಧೆಯಲ್ಲಿ ಈ ಸಲ ನಿರ್ಣಾಯಕ ಮಂಡಳಿ ಅರುಣ್‌ ಕುಮಾರ್‌ನ ಕಥೆಯನ್ನು ಪ್ರಶಸ್ತಿ ಪುರಸ್ಕಾರಕ್ಕೆ ಅರ್ಹ ಕಥೆ ಎಂದು ಏಕಮತದಿಂದ ಆವರಿಸಿತು. ಮೊದಲ ಬಹುಮಾನಕ್ಕಾಗಿ ಆರಿಸಲಾಗಿದ್ದ ಈ ಕಥೆ, ಒಂದು ಅನಾಥ ಮಗುವಿನ ಕುರಿತದ್ದಾಗಿತ್ತು. ಬಾಲ್ಯದಲ್ಲಿಯೇ ತಾಯಿ ತಂದೆಯರನ್ನು ಕಳೆದುಕೊಂಡು ಅನಾಥವಾದ ಆ ಮಗು, ಜೀವನದ ಹಲವಾರು ಹೊಡೆತಗಳಿಗೆ ಸಿಲುಕಿ, ಹಂತ ಹಂತವಾಗಿ ಮೆಟ್ಟಿಲೇರಿ, ವ್ಯಾಪಾರದಲ್ಲಿ ಹೆಸರು ಗಳಿಸಿ, ರಾಜಕೀಯಕ್ಕಿಳಿದು ಕೊನೆಗೆ ಪ್ರಧಾನಮಂತ್ರಿ ಆಗುವ ಯಶಸ್ವೀ ಕಥಾಹಂದರ ಹೊಂದಿತ್ತು.

ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಮಾಧವಿ ಈ ಕಥೆಯನ್ನು ಶಿಫಾರಸ್ಸು ಮಾಡಿದಾಗ, ಇತರರೂ ಮಂಡಳಿಯಲ್ಲಿ ಒಪ್ಪಿದರು. ಮಾಧವಿ ಸಹ 3 ವರ್ಷಗಳ ಹಿಂದೆ ಇದೇ ಪ್ರಶಸ್ತಿಗೆ ಈ ಸಂಸ್ಥೆಯಿಂದಲೇ ಆಯ್ಕೆಯಾಗಿದ್ದಳು. ಈ ಕಥೆಯನ್ನು ಓದಿ ಬಹಳ ಪ್ರಭಾವಿತಳಾದ ಆಕೆ, ಅದನ್ನು ಬರೆದಿದ್ದ ಲೇಖಕನ ಹೆಸರು ಓದಿದಾಗ ಬಹಳ ವಿಚಲಿತಳಾದಳು. ಅರುಣ್‌ ಕುಮಾರ್‌….. ಹೆಸರೇನೋ ಅದೇ….. ಇವನು ಅವನಲ್ಲ ತಾನೇ? ಅವಳ ಮನದಲ್ಲಿ ಒಮ್ಮೆಲೇ ಹಲವಾರು ದ್ವಂದ್ವಗಳು ಶುರುವಾದವು.

“ಸಾರ್‌……” ಅವಳು ನಿರ್ಣಾಯಕ ಮಂಡಳಿಯ ಹಿರಿಯ ಲೇಖಕ ನಿಶಾಂತ್‌ರನ್ನು ಸಂಪರ್ಕಿಸಿ ಹೇಳಿದಳು, “ಈ `ಪ್ರಗತಿ’ ಕಥೆ ಏನೋ ಚೆನ್ನಾಗಿದೆ. ನಾನು ಈ ಕಥೆಯ ಲೇಖಕರ ಫೋಟೋ ನೋಡಬಹುದೇ?”

“ಅದು ಹಾಗಲ್ಲ ಮಾಧವಿ, ನಿನಗೆ ಗೊತ್ತಿರುವಂತೆ ಈ ಕಥಾ ಸ್ಪರ್ಧೆಗೆ ಯಾರೂ ಫೋಟೋ ಕಳಿಸುವ ಹಾಗಿಲ್ಲ ಅಂತ ಮೊದಲೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಇಲ್ಲದಿದ್ದರೆ ಓದುಗರು ನಿರ್ಣಾಯಕ ಮಂಡಳಿಯ ಆಯ್ಕೆ ವಿಧಾನದ ಪಾರದರ್ಶಿಕತೆಯ ಬಗ್ಗೆ ಸಂದೇಹಪಟ್ಟು ತಮ್ಮವರಿಗೇ ಪುರಸ್ಕಾರ ಕೊಟ್ಟುಕೊಂಡಿದ್ದಾರೆ ಎಂದು ಆರೋಪಿಸುತ್ತಾರೆ.”

“ಓಹ್‌ ಸಾರಿ….. ನಾನು ಆ ಪಾಯಿಂಟ್‌ ಮರೆತಿದ್ದೆ……” ಎಂದು ತನ್ನ ಮಾತನ್ನು ಸಮರ್ಥಿಸಿಕೊಂಡಳು.

“ಆದರೆ ಏನು ವಿಷಯಮ್ಮ?” ಅವರು ಕೇಳಿದರು.

“ಅಂಥ ಮುಖ್ಯವೇನೂ ಇಲ್ಲ…… ಸುಮ್ಮನೇ ಹಾಗೇ ಕೇಳಿದೆ.”

ಮಾಧವಿ ಮನೆಗೇನೋ ಬಂದಳು, ಆದರೆ ಅರಿಯದ ಒಂದು ಹೊರೆ ಅವಳ ಹೆಗಲಿಗೇರಿತ್ತು. ಅವಳು ಅದನ್ನು ಇಳಿಸಿ ಹೊರಗೆಸೆಯಲು ನೋಡಿದಳು, ಆದರೆ ಆ ಹೊರೆಯನ್ನು ಅಷ್ಟು ಸುಲಭವಾಗಿ ಇಳಿಸಲಾದೀತೇ? ಅವಳು ಮನೆಗೆ ಬಂದ ತಕ್ಷಣ ಮಗಳು ಅಖಿಲಾ ಅವಳನ್ನಪ್ಪಿ ಮುದ್ದಿಸಿದಳು. ಆದರೆ ಇಂದು ಮಾಧವಿಯ ಮನ ಕದಡಿತ್ತು. ಇಷ್ಟು ದಿನ ಮನದೊಳಗೇ ಅಡಗಿದ್ದ ಬೇಗುದಿಯನ್ನು ಈ ಹೆಸರು ಬಂದು ಮತ್ತೆ ಭುಗಿಲ್ ‌ಎಂದು ಕೆಣಕಬೇಕೇ?

ಮಾಧವಿ ಆ ಪ್ರಸಂಗವನ್ನು ಬಲವಂತಾಗಿ ಮರೆತಿದ್ದಳು…. ಆ ಪ್ರಸಂಗದ ಪ್ರತಿ ಮಾತನ್ನೂ ಮರೆತಿದ್ದಳೆಂದೇ ಹೇಳಬೇಕು. ಇಂದು ಈ ಹೆಸರು ಆ ಕಹಿ ಪ್ರಸಂಗವನ್ನು ಕೆದಕಿ ಅವಳ ದುಗುಡ ಹೆಚ್ಚಿಸಿತು. ಅವಳಿಗೆ ಕ್ರಮೇಣ ತಲೆನೋವು ಹೆಚ್ಚಾಯಿತು. ಯಾವುದೋ ಅರಿಯದ ನೋವು ಎದೆಯನ್ನು ಹಿಂಡತೊಡಗಿತು. ಭೂತಕಾಲ ಧುತ್ತೆಂದು ತನ್ನ ಮುಂದೆ ಪ್ರಕಟಗೊಂಡಂತೆ ಅನ್ನಿಸಿತು. ಆ ಗತಕಾಲವನ್ನು ಅವಳೆಂದೂ ವರ್ತಮಾನದಲ್ಲಿ ನೆನೆಯಲು ಬಯಸುತ್ತಲೇ ಇರಲಿಲ್ಲ. ಬೇಡವೆಂದರೂ ಆ ದೃಶ್ಯಗಳು ತೆರೆತೆರೆಯಾಗಿ ಅವಳ ಮಾನಸಿಕ ಪಟಲದ ಮೇಲೆ ಅಚ್ಚೊತ್ತತೊಡಗಿದವು.

ಗಡಿಯಾರ ರಾತ್ರಿ 12 ಎಂದು ಸಾರುತ್ತಿತ್ತು. ಹಿಂದಿನ ದಿನ ಕಳೆದು ಮರುದಿನ ಪ್ರವೇಶವಾಗಿದ್ದರೂ ಅವಳಿಗೆ ನಿದ್ದೆ ಮಾತ್ರ ಬರಲೇ ಇಲ್ಲ. ಮಧುಮಾಲತಿ ಇಂದೂ ಸಹ ಆ ವ್ಯಕ್ತಿಗಾಗಿ ಕಾಯುತ್ತಿರುವಂತೆ ಅನಿಸಿತು. ಅವನು ಕೇವಲ ಅವಳವನಾಗಿದ್ದ. ಆದರೆ ಈಗ ಎಲ್ಲಿದ್ದಾನೋ ಏನೇನೂ ತಿಳಿಯದು. ಅದೆಷ್ಟು ದಿನಗಳಿಂದ ಗಡಿಯಾರ ನೋಡುತ್ತಾ ಅವನು ಇಂದು ಬಂದಾನು, ನಾಳೆ ಬಂದಾನು….. ಎಂದು ಕಾದಿದ್ದೇ ಬಂತು. ಆದರೆ ಆ ನಿರ್ಮೋಹಿ ಮಾತ್ರ ಇವಳ ಬಗ್ಗೆ ಕಾಳಜಿ ವಹಿಸಲೇ ಇಲ್ಲ.

ಇದೇ ಯೋಚನೆಗಳಲ್ಲಿ ಮುಳುಗಿದ ಮಾಧವಿ ಮತ್ತೆ ಮತ್ತೆ ಚಲಿಸುತ್ತಿದ್ದ ಗಡಿಯಾರದ ಮುಳ್ಳುಗಳನ್ನೇ ನೋಡತೊಡಗಿದ್ದಳು, ಮಂಚದಿಂದ ಎದ್ದು ಬಂದು ಕಿಟಕಿ ಪರದೆ ಸರಿಸಿ ಹೊರಗಿನ ರಸ್ತೆ ದಿಟ್ಟಿಸುವಳು. ಬಹುಶಃ ಅವನೇನಾದರೂ ದೂರದಲ್ಲಿ ಕಂಡು ಬರಬಹುದೇನೋ ಎಂಬ ಹಂಬಲ ಇನ್ನೂ ದೂರವಾಗಿರಲಿಲ್ಲ. ಆದರೆ ಬರಿದಾದ ಅವಳ ಮನಸ್ಸಿನಂತೆ ಆ ರಸ್ತೆಯೂ ನಿರ್ಮಾನುಷ್ಯವಾಗಿತ್ತು. ಬಹಳ ದೂರದವರೆಗೂ ಯಾರೂ ಕಾಣಿಸುತ್ತಿರಲಿಲ್ಲ. ರಾತ್ರಿ ಸುಮಾರು 1 ಗಂಟೆ. ಯಾರೋ ಬಾಗಿಲು ತಟ್ಟಿದಂತಾಯಿತು. ಅವಳು ಧಾವಂತದಲ್ಲಿ ಓಡಿ ಹೋಗಿ ಬಾಗಿಲು ತೆರೆದಾಗ, ಅವಳ ಕಂಗಳು ನಂಬಲಾರದ ಆ ದೃಶ್ಯ ಕಂಡು ನಿಬ್ಬೆರಗಾಯಿತು, ಅವಾಕ್ಕಾದಳು. ಯಾರಿಗಾಗಿ ಅವಳು ಈ ನಡುರಾತ್ರಿಯವರೆಗೂ ಕಾಯುತ್ತಿದ್ದಳೋ ಆ ವ್ಯಕ್ತಿ ಚೆನ್ನಾಗಿ ಕುಡಿದು ತೂರಾಡುತ್ತಾ ಒಳಬಂದಿದ್ದ.

“ಇವತ್ತೂ ಹೀಗೆ ಕುಡಿದುಕೊಂಡು ಬಂದ್ರಾ?” ಅಳುತ್ತಾ ಮಾಧವಿ ಕೇಳಿದಳು.

“ಹೌದು, ಕುಡಿದು ಬಂದಿದ್ದೇನೆ. ನಿಮ್ಮಪ್ಪನ ಹಣವಲ್ಲ…… ನನ್ನ ಸ್ವಂತ ಹಣದಿಂದ!” ಎನ್ನುತ್ತಾ ಅವಾಚ್ಯ ಶಬ್ದ ಬಳಸಿದ ಆತ.

“ಯಾಕೆ ಹೀಗೆ ನಿಮ್ಮ ಜೀವನ, ಆರೋಗ್ಯ ಪೂರ್ತಿ ಹಾಳು ಮಾಡಿಕೊಳ್ಳುತ್ತಿದ್ದೀರಿ?”

“ಜೀವನ ಹಾ….ಳಾ…ಗು….ವು…ದೇ?” ಅಟ್ಟಹಾಸದ ನಗು ಅವನಿಂದ ಹೊರಟಿತು.

“ನಾನು….. ನಾನು…. ನನ್ನ…. ವೈವಾಹಿಕ ಜೀವನದಲ್ಲಿ ನೆಮ್ಮದಿ ಕಂಡಿದ್ದಾದರೂ ಯಾವತ್ತು? ನೀನು ಈ ಮನೆಗೆ ಕಾಲಿಟ್ಟಾಗಿನಿಂದ ನನ್ನ ಜೀವನ ರೌರವ ನರಕವಾಗಿದೆ!”

“ನಾನು ನಿಮಗೆ ಅಂಥದ್ದೇನು ಮಾಡಿದೆ?” ಬೆರಗಾಗಿ ಕೇಳಿದಳು.

“ನಾನೇನು ಬಯಸುತ್ತೇನೆ ಅಂತ ನಿನಗೆ ಚೆನ್ನಾಗೇ ಗೊತ್ತಿದೆ!”

“ಆದರೆ ಅದಕ್ಕಾಗಿ ನಾನೇನು ತಾನೇ ಮಾಡಬಲ್ಲೆ? ನಾನು ಡಾಕ್ಟರ್‌ ಬಳಿ ನನ್ನ ತಪಾಸಣೆ ಮಾಡಿಸಿದ್ದೇನೆ. ನಾನು ತಾಯಿಯಾಗಲು ಸಂಪೂರ್ಣ ಅರ್ಹಳಾಗಿದ್ದೇನೆ ಎಂದೇ ಟೆಸ್ಟ್ ರಿಪೋರ್ಟ್‌ ಹೇಳುತ್ತದೆ….. ಇಬ್ಬರೂ ಚೆಕ್‌ ಅಪ್‌ ಮಾಡಿಸಬೇಕೆಂದು ಅವರು ಮತ್ತೆ ಮತ್ತೆ ಹೇಳಿದ್ದರು…..”

ಛಟೀರ್‌……! ಅವಳು ಮುಂದೇನೂ ಹೇಳದಂತೆ ರಪ್ಪೆಂದು ಅವಳ ಕೆನ್ನೆಗೊಂದು ಏಟು ಬಿದ್ದಿತ್ತು.

“ಹಾಗಂದ್ರೆ…..? ನಾನೊಬ್ಬ ನಾಮರ್ದ….. ಕೈಲಾಗದವನು! ನನಗೆ ಮಕ್ಕಳು ಹುಟ್ಟಿಸುವ ಯೋಗ್ಯತೆ ಇಲ್ಲಾಂತ ಹೇಳ್ತಿದ್ದೀಯಾ?”

“ನಾನೆಲ್ಲಿ ಹಾಗೆ ಹೇಳಿದ್ದೆ…..? ನಾನು ಹೇಳೋದೂಂದ್ರೆ….”

“ಸ್ಪಷ್ಟೀಕರಣ ಕೊಡ್ತಾಳೆ…… ಪಾಪಿ……” ಮತ್ತೆ ಅವನು ಗಹಗಹಿಸಿ ಅವಾಚ್ಯ ಶಬ್ದ ಬಳಸತೊಡಗಿದ.

“ನಾನು ಎಲ್ಲರಂತೆ ನೆಟ್ಟಗಿರಬೇಕು ಅಂತ ನೀನು ಬಯಸುವುದಾದರೆ….. ಬೇಗ ನನ್ನ ಆಸೆ ಪೂರೈಸು….. ಮದುವೆಯಾಗಿ 5 ವರ್ಷ ಆಗಿಹೋಯ್ತು…..ಇಲ್ಲಿಯವರೆಗೂ ಮನೆಯಲ್ಲಿ ಮಗುವಿನ ಕಿಲಕಿಲ ನಗುವಿಲ್ಲ…. ನನ್ನ ಫ್ರೆಂಡ್ಸೆಲ್ಲಾ ಬಾಯಿಗೆ ಬಂದಂತೆ ಆಡಿಕೊಳ್ತಾರೆ. ಜಾಸ್ತಿ ಆಗೋಯ್ತು ನಿನ್ನ ಸಹವಾಸ….. ನಾನಿನ್ನು ಖಂಡಿತಾ ಸಹಿಸಲಾರೆ!”

“ನೀವು ಚೆಕ್‌ಅಪ್‌ ಮಾಡಿಸೋಲ್ಲ…. ನನ್ನಿಂದ ಮಗು ಬೇಕು ಅಂತೀರ…. ಇದು ನನ್ನೊಬ್ಬಳ ಕೈಯಲ್ಲಿದೆಯೇ?”

“ಅದೆಲ್ಲ ನನಗೆ ಬೇಕಿಲ್ಲ! ನಾನು ಏನು ಹೇಳ್ತೀನೋ ಅದನ್ನು ಮಾಡಿ ಸಾಯಿ…..” ಅವನ ಅಟ್ಟಹಾಸದ ನಗು ನಿಂತಿರಲಿಲ್ಲ.

“ನಾವೇಕೆ ಅನಾಥಾಶ್ರಮದಿಂದ ಒಂದು ಮಗುವನ್ನು ದತ್ತು ತೆಗೆದುಕೊಳ್ಳಬಾರದು?” ಅವಳು ಬಿಕ್ಕಳಿಸುತ್ತಲೇ ಹೇಳಿದಳು.

“ಏನಂದೆ? ಮತ್ತೆ ಹೇಳು…. ಅನಾಥಾಶ್ರಮದ ಮಗುವೇ?”

“ಇದರಲ್ಲಿ ತಪ್ಪೇನಿದೆ ಅಂತ?”

ಅದನ್ನು ಕೇಳಿಸಿಕೊಂಡ ಅವನು ಮತ್ತೆ ಮತ್ತೆ ತೆಗೆದು ಅವಳಿಗೆ ಬಾರಿಸಿದ. ಅವಳು ಅಸಹಾಯಕಳಾಗಿ ಜೋರಾಗಿ ಕಿರುಚಾಡತೊಡಗಿದಳು. ಅಷ್ಟಕ್ಕೂ ಅವನ ಕೋಪ ತಣಿಯದಾದಾಗ, ಅವಳನ್ನು ದರದರನೆ ಎಳೆದು ತಂದು ಮನೆಯಿಂದ ಹೊರಗೆ ದಬ್ಬಿದ. ಅವಳ ಬೆನ್ನ ಮೇಲೆ ಗುದ್ದುತ್ತಾ, “ಇವತ್ತಿನಿಂದ ಈ ಮನೆ ಬಾಗಿಲು ಶಾಶ್ವತವಾಗಿ ಮುಚ್ಚಿಹೋಯಿತು ಅಂತ ತಿಳಿ! ಎಲ್ಲಿಗೆ ಬೇಕೋ ಹಾಳಾಗಿ ಹೋಗು. ನನಗೂ ನಿನಗೂ ಋಣ ಹರಿಯಿತು…. ಹಾಳಾದ ಬಂಜೆ ನೀನು……” ಅವನ ಬಾಯಿಂದ ಓತಪ್ರೋತವಾಗಿ ಅವಾಚ್ಯ ಶಬ್ದಗಳು ಬರುತ್ತಲೇ ಇದ್ದವು.

ಅವನ ಆ ಕಟು ಶಬ್ದಗಳು ಅವಳ ಕಿವಿಗೆ ಕಾದ ಸೀಸ ಆಗಿತ್ತು. ಅವಳು ಇನ್ನೂ ಆ ಮನೆಯ ಮುಂದೆಯೇ ನೆಲದ ಮೇಲೆ ಬಿದ್ದುಕೊಂಡು ನರಳುತ್ತಾ ಅಳುತ್ತಿದ್ದಳು. ಆಗ ಇದ್ದಕ್ಕಿದ್ದಂತೆ ಅವಳ ದೃಢ ಮನಸ್ಸಿನ ಶಕ್ತಿಯಿಂದ ಎದ್ದು ನಿಂತಳು.

ಸಿಂಹಿಣಿಯಂತೆ ಘರ್ಜಿಸುತ್ತಾ, ಅವನಿಗೆ ಶಾಪ ಹಾಕಿದಳು, “ಅಯ್ಯೋ ಪಾಪಿ! ಸ್ತ್ರೀಪರ ಕಾಳಜಿ ಇರುವ ಲೇಖಕನಂತೆ…. ಮನೆಯಲ್ಲಿ ಇರುವ ಹೆಣ್ಣನ್ನು ಹೆಣ್ಣಾಗಿಸಿ ಅದೇನು ಬರೆದು ಗುಡ್ಡೆ ಹಾಕಿಕೊಳ್ತೀಯಾ….. ನೀನು ಬರೆಯುವ ಒಂದೊಂದು ಶಬ್ದ ಹೆಣ್ಣಿನ ಮನ ಕರಗಿಸಿ ಕಣ್ಣೀರು ಬರಿಸುತ್ತದೆ….. ಆದರೆ ವಿನಾಕಾರಣ ನನ್ನನ್ನು ಗೋಳಾಡಿಸಿ ಸದಾ ಕಣ್ಣರಲ್ಲಿ ಕೈ ತೊಳೆಯುವಂತೆ ಮಾಡಿದ್ದೀಯಾ…..

“ಈ ಶಾಪ ನಿನ್ನನ್ನು ತಟ್ಟದೆ ಬಿಡದು. ಈ ರೀತಿ ಗೋಳಾಡಿಸಿ ದಿನದಿನ ಒಂದೊಂದು ಹೊಸ ಕಥೆ ಹುಡುಕುತ್ತೀಯಾ…… ಈ ನನ್ನ ಕಥೆಯನ್ನು ಬರೆದುಕೋ, ನಿನಗೆ ಬೇಗ ಪ್ರಸಿದ್ಧಿ ಸಿಗುತ್ತದೆ. ಹೆಣ್ಣು ಈ ದೇಶದಲ್ಲಿ ಗಂಡಸಿನ ಪಾಲಿಗೆ ಒಂದು ಕಥೆಗಿಂತ ಹೆಚ್ಚಿಗೇನೂ ಅಲ್ಲ…… ನನ್ನದೂ ನಿನಗೆ ಮತ್ತೊಂದು ಕಥೆಯೇ ಆಗುತ್ತದೆ. ಆದರೆ ಒಂದು ವಿಷಯ ನೆನಪಿಟ್ಟುಕೋ….. ಯೂ ಲರ್ನ್ಡ್ ಬ್ರೂಟ್‌! ನಿನಗೆ ಮಗುವಿನ ಸುಖ ಎಂದೂ ದೊರಕಲಾರದು…. ಒಂದಲ್ಲ ನೀನು ಇನ್ನೂ ಎರಡು ಮದುವೆಯಾದರೂ ಲಾಭ ಇಲ್ಲ,

ಮೊದಲು ಹೋಗಿ ಪರೀಕ್ಷೆ ಮಾಡಿಸಿಕೊಂಡು ನಿನ್ನ ಪುರುಷತ್ವ ಖಚಿತಪಡಿಸಿಕೋ……

“ನೀನು ನಾಮರ್ದನೋ ಅಲ್ಲವೋ ಸ್ಪಷ್ಟ ತಿಳಿಯುತ್ತದೆ. ನೀನೇನು ನನ್ನನ್ನು ಮನೆಯಿಂದ ಹೊರಗೆ ಅಟ್ಟುವುದು….. ನಾನೇ ಈ ಕೊಚ್ಚೆಯಿಂದ ಹೊರಗೆ ಹೋಗುತ್ತಿದ್ದೇನೆ. ನಿನ್ನ ಹೆಜ್ಜೆಯ ಧ್ವನಿ ಎಂದೆಂದೂ ನನ್ನ ಕಿವಿಗೆ ಕೇಳಿಸದಷ್ಟು ದೂರ ಹೋಗಿಬಿಡುವೆ!”

ಅವಳ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅವನು ಶಿಲಾಮೂರ್ತಿಯಾಗಿ ಹಾಗೇ ನಿಂತುಬಿಟ್ಟಿದ್ದ. ಅವನು ಅವಳನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಲೇ ಇಲ್ಲ. ಅರಿಯದ ಗುರಿಯನ್ನು ಹುಡುಕುತ್ತಾ ಅವಳು ಆ ಕತ್ತಿಯಲ್ಲಿ ಹಾಗೇ ಕರಗಿಹೋದಳು.

ಇಂದು 14 ಸುದೀರ್ಘ ವರ್ಷಗಳ ನಂತರ ಅವಳಿಗೆ ಮತ್ತೆ, ಅದೇ ಹೆಸರು ಕಾಣಿಸಿತ್ತು. ಈ 14 ವರ್ಷಗಳಲ್ಲಿ ಅವಳೆಷ್ಟು ವನವಾಸ, ಉಪವಾಸ ಅನುಭವಿಸಿದ್ದಳೋ…. ಅದೆಷ್ಟು ಸಂಘರ್ಷಗಳನ್ನು ಎದುರಿಸಿದ್ದಳೋ…. ಅವಳೇ ಬಲ್ಲಳು! ಆ ಎಲ್ಲಾ ಯಾತನೆಗಳ ಒಂದೊಂದು ಕ್ಷಣವೂ ಅವಳಿಗೆ ನೆನಪಿದೆ. ಒಬ್ಬೊಬ್ಬರ ಮನೆಯಲ್ಲಿ ಕಸಮುಸುರೆ, ಬಟ್ಟೆ ಒಗೆದು ಮಕ್ಕಳನ್ನು ಸುಧಾರಿಸಿ ಬೆಳೆಸುತ್ತಾ ಹಂತ ಹಂತವಾಗಿ ಹೇಗೆ ಮೇಲೇರಿ ಬಂದಳು ಎಂಬುದು ಅವಳಿಗೇ ಗೊತ್ತು.

ಹಿರಿಯ ಸಾಹಿತಿ, ವಿಮರ್ಶಕ ನಿಶಾಂತ್‌ರ ಭೇಟಿಯಾದುದು ಅವಳ ಅದೃಷ್ಟವೇ ಸರಿ. ಅವರ ಪ್ರೇರಣೆಯಿಂದಲೇ ಅವಳು `ಹೆಣ್ಣಿನ ಅಳಲು’ ಕಾದಂಬರಿ ರಚಿಸಿ ಕನ್ನಡ ಸಾಹಿತ್ಯದ ಸಾರಸ್ವತದ ಲೋಕದಲ್ಲಿ ತನ್ನದೇ ಆದ ಹಳೆ ಗುರುತು ಮೂಡಿಸುವಲ್ಲಿ ಅವಳು ಯಶಸ್ವಿಯಾಗಿದ್ದಳು. ಅದು ಎಲ್ಲಾ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ, ಎಷ್ಟೋ ವಿದೇಶಿ ಭಾಷೆಗಳಿಗೂ ಅನುವಾದಗೊಂಡು ಅವಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿಕೊಟ್ಟಿತು. `ಮಾಲತಿ’ ಆಗಿದ್ದ ಅವಳು `ಮಾಧವಿ’ ಎಂದು ತನ್ನ ಕಾವ್ಯನಾಮ ಬದಲಿಸಿಕೊಂಡಳು.

ಪುಸ್ತಕಗಳ ಪ್ರಕಟಣೆಯಿಂದ ದೊರೆಯುತ್ತಿದ್ದ ರಾಯಲ್ಟಿ ಹಣವನ್ನು ಹೆಚ್ಚಾಗಿ ಅನಾಥ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ಬಳಸುವಳು. ಉಳಿದ ಹಣದಲ್ಲಿ ಒಂದು ಮನೆ ಕೊಂಡು ಬೆಂಗಳೂರಿನಲ್ಲಿ ತಲೆ ಎತ್ತಿ ಬಾಳುವಂತಾದಳು. ಅನಾಥಾಲಯದಿಂದ ಒಬ್ಬ ಹೆಣ್ಣುಮಗುವನ್ನು ದತ್ತು ಪಡೆದಳು. ಅಖಿಲಾ ಬಂದ ಮೇಲೆ ಅವಳ ಜೀವದಲ್ಲಿ ಸಂತಸ ಹೆಚ್ಚಿತು. ಆದರೆ ಆ ಒಂದು ಹೆಸರು ಅವಳ ಎಲ್ಲಾ ಗತಕಾಲವನ್ನೂ ಕೆದಕಿಬಿಟ್ಟಿತ್ತು.

“ಇಲ್ಲ…. ಇಲ್ಲ…. ನಾನಂದುಕೊಳ್ಳುತ್ತಿರುವಂತೆ ಅದೇ ಧೂರ್ತ ವ್ಯಕ್ತಿಯನ್ನು ವೇದಿಕೆಯ ಮೇಲೆ ತಾನು ಸನ್ಮಾನಿಸುವಂತಾಗಬಾರದು! ಬಹುಶಃ ಈತ ಬೇರಾರೋ ಅರುಣ್‌ ಕುಮಾರ್‌ ಇರಬಹುದು….. ಈಗಿನ ಕಾಲದಲ್ಲಿ ಒಂದೇ ಹೆಸರಿನ ಹಲವು ವ್ಯಕ್ತಿಗಳು ಸಿಗುವುದು ಅಪರೂಪವೇನಲ್ಲ, ಎಂದು ಸಮಾಧಾನ ಪಟ್ಟುಕೊಂಡಳು.

ಅದಾದ 2 ವಾರಗಳ ನಂತರ ಸಾಹಿತಿ ನಿಶಾಂತ್‌ರಿಂದ ಫೋನ್‌ ಕಾಲ್ ಬಂದಿತು. ಅವರು ಹೇಳಿದ್ದು, “ಈ ಸಾಹಿತ್ಯ ಮಂಡಳಿಯವರು ಯಾವ ವ್ಯಕ್ತಿಗೆ ಪ್ರಶಸ್ತಿ ಪುರಸ್ಕಾರ ಕೊಡಬೇಕೆಂದು ನಿರ್ಧರಿಸಿ ಆಗಿದೆ. ಅದು ನಿನ್ನ ಕೈಯಿಂದೀ ಅವರಿಗೆ ಕೊಡಬೇಕಾಗಿದೆ,” ಇದನ್ನು ಕೇಳಿ ಅವಳಿಗೆ ಮಾತೇ ಹೊರಡದಂತಾಯಿತು.

`ಛೇ….. ತಾನು ಅಂದುಕೊಂಡಂತೆಯೇ ಅದೇ ಪಾಪಿಗೆ ಪ್ರಶಸ್ತಿ ಪುರಸ್ಕಾರ ತನ್ನಿಂದಲೇ ಕೊಡುವಂತಾದರೆ ಅದಕ್ಕಿಂತಲೂ ಘೋರವಾದುದು ಮತ್ತೊಂದಿರಲಾರದು ಎಂದುಕೊಂಡಳು. ತಾನೆಷ್ಟು ಬೇಡವೆಂದಕೊಂಡರೂ ಜನ ತನ್ನನ್ನು ಆ ನೀಚ ವ್ಯಕ್ತಿಯ ಕಡೆಗೇ ತಳ್ಳುತ್ತಿದ್ದಾರಲ್ಲ ಎಂದುಕೊಂಡಳು. ತಾನು ಖಂಡಿತಾ ಬರಲಾಗದು ಎಂದು ಅವಳು ನಿರಾಕರಿಸಿದಳು. ಆದರೆ ಅಂಚೆ ಮೂಲಕ ಆ ದಿನ ಸಭೆಗೆ ಬರಲಿರುವ ಎಲ್ಲಾ ಲೇಖಕರು, ಗಣ್ಯರಿಗೂ ಪ್ರಶಸ್ತಿ ಪುರಸ್ಕಾರ ವಿತರಿಸುವಳು ಮಾಧವಿಯೇ ಎಂದು ಈಗಾಗಲೇ ಸೂಚಿಸಿ ಆಗಿದೆ, ಬದಲಾಯಿಸಬೇಡಿ ಎಂದು ನಿಶಾಂತ್‌ ಹೇಳಿದರು.

“ಹಾಗೆ ಘೋಷಿಸುವ ಮೊದಲು ನೀವು ಒಮ್ಮೆ ನನ್ನನ್ನು ಕೇಳಬಹುದಿತ್ತಲ್ಲವೇ?” ಪ್ರಶ್ನಿಸಿದಳು ಮಾಧವಿ.

“ಅಯ್ಯೋ! ಇದ್ಯಾವ ದೊಡ್ಡ ವಿಷಯವಮ್ಮ…. ವೇದಿಕೆ ಏರಿ ನಾಲ್ಕು ಜನರಿಗೆ ಕಾಣಿಸಿಕೊಳ್ಳಲು ತಮಗೊಂದು ಅವಕಾಶ ಸಿಗಬಾರದೇ ಎಂದು ಜನ ಕಾಯುತ್ತಿರುತ್ತಾರೆ…. ನೀನೇನಮ್ಮ……”

“ಸಾರಿ ಸಾರ್‌, ನನಗೆ ಖಂಡಿತಾ ಬರಲಾಗದು!”

“ಆದರೆ ಹೀಗೆ ಆಮಂತ್ರಣ ಪತ್ರಿಕೆ ರೆಡಿ ಮಾಡಿಸಿದ್ದೇ ನಾನು ಕಣಮ್ಮ….. ಈಗ ಆ ಮಂಡಳಿಯ ಮುಂದೆ ನನ್ನ ಪ್ರತಿಷ್ಠೆ ಏನಾಗಬೇಕು….. ಈಗ ಎಲ್ಲಾ ಸದಸ್ಯರಿಗೂ ಸಹ ಆಹ್ವಾನಪತ್ರಿಕೆ ಕಳುಹಿಸಿದ್ದಾಗಿದೆ….. ಹೋಗಲಿ ಬಿಡಮ್ಮ, ನಿನ್ನಿಷ್ಟ!” ಅವರು ದೀರ್ಘ ನಿಟ್ಟುಸಿರಿಟ್ಟು ಫೋನ್‌ ಕಟ್‌ ಮಾಡಿದಾಗ ಅವರಿಗೆಷ್ಟು ಬೇಸರವಾಗಿದೆ ಎಂದು ಇವಳಿಗೆ ತಿಳಿಯಿತು.

ಅದಾಗಿ ಸ್ವಲ್ಪ ಹೊತ್ತಿಗೆ ತಾನೇ ಅವರಿಗೆ ಮತ್ತೆ ಫೋನ್‌ ಮಾಡಿ, “ಆಯ್ತು ಬಿಡಿ ಸಾರ್‌, ನಾನು ಬರ್ತೀನಿ…. ಆ ಪ್ರಶಸ್ತಿ ಪುರಸ್ಕಾರ ನೀಡಿದ ತಕ್ಷಣ ನಾನು ಹೊರಟುಬಿಡ್ತೀನಿ. ಬೇರೆ ಕಾರ್ಯಕ್ರಮ, ಊಟ ಇತ್ಯಾದಿಗಳಿಗೆ ನನಗೆ ಟೈಂ ಇಲ್ಲ.”

“ಸರಿ ಕಣಮ್ಮ….. ಇಷ್ಟಾದರೂ ದೊಡ್ಡ ಮನಸ್ಸು ಮಾಡಿದೆಯಲ್ಲ,” ಎಂದು ನಕ್ಕರು. ನಿಶಾಂತ್‌ ಅವಳ ಪಾಲಿಗೆ ಸದಾ ಆದರ್ಶ ವ್ಯಕ್ತಿ ಆಗಿದ್ದರು, ಹೀಗಾಗಿ ಅವರ ಮಾತು ತೆಗೆದುಹಾಕುವ ಹಾಗಿರಲಿಲ್ಲ. ಮಾಧವಿಯನ್ನು ಮಗಳ ಸಮಾನಾಗಿ ಕಾಣುತ್ತಿದ್ದರು. ಹೀಗಾಗಿ ಅವರ ಮಾತನ್ನು ತೆಗೆದುಹಾಕಲು ಆಗಲಿಲ್ಲ.

adhuri-kahani-story2

ಅಂದು ಪ್ರಶಸ್ತಿ ಪ್ರದಾನ ಸಮಾರಂಭದ ಸಂಜೆ 7ರ ಸಮಯ. ಆಗ ತಾನೇ ನಿಶಾಂತ್‌ ಇದೀಗ ಮಾಧವಿ ಮೂಲಕ ಲೇಖಕ ಅರುಣ್‌ಕುಮಾರ್‌ಗೆ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಘೋಷಿಸಿದರು. ಅವಳು ವೇದಿಕೆ ಮೇಲೆ ಬಂದು ಆ ವ್ಯಕ್ತಿಯ ಕಡೆಗೊಮ್ಮೆ ನೋಡಿ ನಿಶ್ಚೇಷ್ಟಿತಳಾದಳು….. ಆತನೂ ಇವಳೆಡೆ ನೋಡಿ ತಲೆ ತಗ್ಗಿಸಿಬಿಟ್ಟ. ಛೇ…. ಛೇ…. ಅದೇ ದರಿದ್ರ ವ್ಯಕ್ತಿ, ಇದೆಂಥ ಕರ್ಮ! ಈ ಘನಘೋರ ತನ್ನ ಕೈಯಿಂದಾಗಬಾರದೆಂದೇ ಅವಳು ಬಯಸಿದ್ದಳು, ಆದರೆ ಅದೇ ಈಗ ದಿಟವಾಯ್ತು.

ಯಾವ ವ್ಯಕ್ತಿ ಮಧುಮಾಲತಿ ತನ್ನಿಂದ ದೂರಾದ ಮೇಲೆ ಎಲ್ಲೋ ಅನಾಥಳಾಗಿ ಭಿಕ್ಷೆ ಬೇಡುತ್ತಾ ಅಥವಾ ಬೇರೆ ದಾರಿ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನಂಬಿದನ್ನೋ ಇಂದು ಅವಳು ಹಿಮಾಲಯದೆತ್ತರಕ್ಕೇರಿ ಸಾಹಿತ್ಯ ಶಿಖರ ತಲುಪಿ, ತನಗೇ ಪ್ರಶಸ್ತಿ ನೀಡುವ ಸ್ಥಾನಮಾನ ಗಿಟ್ಟಿಸಬಹುದೆಂದು ಊಹಿಸಲಾದರೂ ಸಾಧ್ಯವೇ? ವಿಧಿಯಾಟದ ಮುಂದೆ ತಾನೆಂಥ ಅಸಹಾಯಕ ಕ್ಷುದ್ರ ಪ್ರಾಣಿ ಎನಿಸಿ ಅವನು ನೆಲಕ್ಕಿಳಿದು ಹೋದ. ಆಕಾಶದೆತ್ತರಕ್ಕೆ ತ್ರಿವಿಕ್ರಮನಂತೆ ಅವಳು ಸಮಾಜದಲ್ಲಿ ಬೆಳೆದು ಗಣ್ಯಳೆನಿಸಿದ್ದರೆ, ಇಂದು ಅವಳ ಮುಂದೆ ಈತ ತೀರ ಕುಬ್ಜನಾಗಿ, ದೈನ್ಯನಾಗಿ, ಅವಳಿಂದ ಪಡೆಯಲು ಕೈ ಚಾಚಿದಾಗ, ಅವಳ ಕೈ ಮೇಲಾಯಿತು. ಅವಳನ್ನು ದೃಷ್ಟಿಸಿ ನೋಡಲಾಗದೆ ಕ್ಷಣ ಮಾತ್ರದಲ್ಲಿ ತಲೆ ತಗ್ಗಿಸಿಬಿಟ್ಟ. ಅವನ ಅಹಂಕಾರವೆಲ್ಲ ನೆಲಕ್ಕೆ ಅಪ್ಪಳಿಸಿದ ಶೀಶೆಯಂತೆ ಚೂರು ಚೂರಾಯಿತು. ಕೇವಲ ನೆಪ ಮಾತ್ರದ ಔಪಚಾರಿಕತೆಗಾಗಿ, ನಿಶಾಂತ್‌ರಿಂದ ಆ ಪ್ರಶಸ್ತಿ ಫಲಕ, ಪತ್ರಗಳನ್ನು ಪಡೆದು ಆತನ ಕೈಗಿತ್ತು, ಕ್ಷಣಮಾತ್ರ ಅಲ್ಲಿ ನಿಲ್ಲದೆ ಸರಸರ ನಡೆದು ಕೆಳಗಿಳಿದು ಬಂದುಬಿಟ್ಟಳು. ಅವನಿಗಂತೂ ಯಾಕೋ ತನಗೆ ಸನ್ಮಾನ ಮಾಡುವ ಬದಲು, ಚಪ್ಪಲಿಯಿಂದ ಹೊಡೆದಂತೆ ತಲೆ ತಗ್ಗಿಸಿ, ಧನ್ಯವಾದ ಹೇಳುವುದನ್ನೂ ಮರೆತು ಧೊಪ್ಪೆಂದು ಕುಸಿದು ಕುಳಿತ.

ಅವಳು ಕೆಳಗಿಳಿದು ಬರುತ್ತಿದ್ದಾಗ, ಸಭಿಕರಲ್ಲೊಬ್ಬರು ಅವಳು ಭಾವಗೀತೆ ಹಾಡಬೇಕೆಂದು ಮನವಿ ಮಾಡಿಕೊಂಡರು. ಅವಳು ಯಾವುದೇ ಸಾಹಿತ್ಯ ವೇದಿಕೆ ಇರಲಿ, ಅಲ್ಲಿ ಕನ್ನಡ ಕವಿಗಳ ಭಾವಗೀತೆಗಳನ್ನು ಮನದುಂಬಿ ಹಾಡುತ್ತಾ ಎಲ್ಲರ ಮನದಲ್ಲಿ ಮನೆ ಮಾಡಿದ್ದಳು.

ಆಗ ನಿಶಾಂತ್‌ ಸಹ ಅವಳು ಸ್ವರಚಿತ ಕವನವಾಚನ ಮಾಡಬೇಕೆಂದು ಆಗ್ರಹಿಸಿದರು. ಆದರೆ ಅವಳ ಮನಸ್ಸು ಅಲ್ಲಿ ಇರಲೇ ಇಲ್ಲ. ಆದಷ್ಟು ಬೇಗ ಆ ಜಾಗ ಬಿಟ್ಟು ಮನೆಗೆ ಹೋಗಿಬಿಡಬೇಕೆಂದು ಬಯಸುತ್ತಿತ್ತು. ಆದರೆ ಅಂಥ ಹಿರಿಯ ಸಾಹಿತಿಗಳ ಮಾತನ್ನು ಧಿಕ್ಕರಿಸಲುಂಟೇ? ಪ್ರೇಕ್ಷಕ ಪ್ರಭು ಬಾಯಿ ಬಿಟ್ಟು ಕೇಳಿದಾಗ ಇಲ್ಲವೆನ್ನಲಾದೀತೇ……?`ಎದೆ ತುಂಬಿ ಹಾಡಿದೆನು ಅಂದು ನಾನು……’ ಭಾವಪೂರ್ಣವಾಗಿ ಅಳು ಹಾಡಿ ಮುಗಿಸಿದಾಗ ಕಿವಿಗಡಚ್ಚಿಕ್ಕು ಚಪ್ಪಾಳೆ! ಅದಾದ ಮೇಲೆ ಅವಳು ತನ್ನದೇ ಸ್ವರಚಿತ ಕವನ ವಾಚಿಸಿದಾಗ, ಮತ್ತಷ್ಟು ಚಪ್ಪಾಳೆಗಳ ಸುರಿಮಳೆಯಾಗಿ, ಹಿರಿಯ ಮಹಿಳಾ ಸಾಹಿತಿ ಅವಳಿಗೆ ನೆನಪಿನ ಕಾಣಿಕೆ, ಹೂಗುಚ್ಛ, ಶಾಲು ಹೊದಿಸಿ ಸನ್ಮಾನ ಮಾಡಿದಾಗ, ಇಡೀ ಸಭಾಂಗಣ ಚಪ್ಪಾಳೆಯಿಂದ ಮತ್ತೆ ತುಂಬಿಹೋಯಿತು.

ಅವಳ ಕವಿತೆಗಳಲ್ಲಿ ಹೃದಯಾಂತರಾಳದ ನೋವು ಮಡುವುಗಟ್ಟಿತ್ತು. ಜನ ಮಂತ್ರಮುಗ್ಧರಾಗಿ ತಲೆದೂಗುತ್ತಿದ್ದರು. ವೇದಿಕೆಯಲ್ಲಿದ್ದ ಸಾಹಿತಿಗಳೂ ಗೌರಾವಾದರಗಳಿಂದ ಎದ್ದು ನಿಂತು ಚಪ್ಪಾಳೆ ತಟ್ಟಿದಾಗ, ಆ ಕ್ಷುಲ್ಲಕ ವ್ಯಕ್ತಿ, ಸಭಾ ಮರ್ಯಾದೆಗಾಗಿ ತಾನೂ ಕರತಾಡನ ಮಾಡಲೇಬೇಕಾಯಿತು.

ಎಲ್ಲ ವಿಧದಲ್ಲೂ ಗೌರವಾದರ ಗಳಿಸಿ, ಸಭೆಗೆ, ವೇದಿಕೆಯ ಸಭಾಸದರಿಗೆ ಹೃತ್ಪೂರ್ವಕ ವಂದನೆ ಸಲ್ಲಿಸಿ ಅವಳು ಕೆಳಗಿಳಿದು ಬರುತ್ತಿದ್ದಂತೆ ಮತ್ತೆ ಚಪ್ಪಾಳೆಯ ಸುರಿಮಳೆ ಆಯಿತು. ಅದಾದ ಮೇಲೆ ಬೇರೆ ಕಾರ್ಯಕ್ರಮಗಳಿಗೆ ಉಳಿಯದೆ, ಅವಳು ತನ್ನ ಕಾರೇರಿ ಹೊರಟೇಬಿಟ್ಟಳು. ಊಟಕ್ಕೂ ನಿಲ್ಲದೆ ಹೊರಟುಬಿಟ್ಟಳಲ್ಲ ಎಂದು ಇತರ ಸಾಹಿತಿಗಳು ಮಾತನಾಡಿಕೊಂಡರು.

ಮನೆ ತಲುಪಿದ ಮಾಧವಿ ಬಿಕ್ಕಿ ಬಿಕ್ಕಿ ಅಳಲು ಬಯಸಿದಳು. ಆದರೆ ಯಾರೋ ಗಂಟಲನ್ನು ಒತ್ತಿ ಹಿಡಿದಂತೆ ಯಾವ ದನಿಯೂ ಹೊರಡಲೇ ಇಲ್ಲ. ಅವಳು ಇದೇ ಯೋಚನೆಗಳಲ್ಲಿ ಮುಳುಗಿದ್ದಾಗ ಯಾರೋ ಬಾಗಿಲು ಬಡಿದಂತಾಯಿತು.

“ಯಾರದು…..?” ಎನ್ನುತ್ತಾ ತನ್ನ ಕಣ್ಣೀರು ಒರೆಸಿಕೊಳ್ಳುತ್ತಾ, ಗಡಿಬಿಡಿಯಲ್ಲಿ ಬಾಗಿಲು ತೆರೆಯುವ ಬದಲು ಕಿಟಕಿ ತೆರೆದು ನೋಡುತ್ತಾಳೆ….. ಅದೇ ಆ ದುಷ್ಟ ವ್ಯಕ್ತಿ! ಇವನು ಹೇಗೆ ಇಲ್ಲಿಗೆ ಬಂದ? ಯಾಕಾಗಿ ಬಂದ? ಆ ವ್ಯಕ್ತಿಯನ್ನು ಕಂಡು ತಿರಸ್ಕಾರ ಉಕ್ಕುಕ್ಕಿ ಬಂತು.

ಅವನ ಮುಖ ಕಂಡೊಡನೆ ಸಿಡುಕಿದಳು, “ಈಗ ಇಲ್ಲಿಗೆ ಏನು ಮಾಡಲು ಬಂದಿರುವೆ?”

“ನಾನು….. ನಾನು ನಿನ್ನ ಬಳಿ ಕ್ಷಮೆ ಕೇಳಲು ಬಂದಿರುವೆ ಮಾಲತಿ….”

“ಯಾವ ಮಾಲತಿ? ಆ ಅಸಹಾಯಕ ಅಬಲೆ ಮಾಲತಿ ಸತ್ತು 14 ವರ್ಷ ಆಯಿತು. ನಾನು ಮಾಧವಿ! ನೀನು ಯಾರೋ ನನಗೆ ಗೊತ್ತಿಲ್ಲ. ಇಲ್ಲಿಂದ ತೊಲಗಿಹೋಗು!” ಕೊನೆ ಮಾತು ಹೇಳುವಾಗ ಕಿರುಚಿದ್ದಳು.

“ಖಂಡಿತಾ ಹೋಗಿಬಿಡ್ತೀನಿ….. ಒಂದೇ ಒಂದು ಸಲ ನಿನ್ನನ್ನು ಕ್ಷಮಿಸಿದ್ದೀನಿ ಅಂತ ಹೇಳಿಬಿಡು……” ಅವನು ಮಂಡಿಯೂರಿ ಅವಳಿಗೆ ಕೈ ಮುಗಿಯುತ್ತಾ ಬೇಡಿಕೊಂಡ.

“ನೀನು ಯಾರೆಂದೇ ನನಗೆ ಗೊತ್ತಿಲ್ಲ….. ನಿನ್ನನ್ನು ನಾನು ಕ್ಷಮಿಸಿ ಏನಾಗಬೇಕಾಗಿದೆ? ಈಗ ಮರ್ಯಾದೆಯಾಗಿ ಇಲ್ಲಿಂದ ಹೋಗ್ತಿಯೋ ಅಥವಾ ಪೊಲೀಸರಿಗೆ ಪೋನ್‌ ಮಾಡಿ ಕರೆಸಲೋ?” ಅವಳು ಕಿಟಕಿ ಮುಚ್ಚುತ್ತಾ ಅರಚಿದಳು.

ಸುಮಾರು 15 ನಿಮಿಷ ಅವಳು ಅಲ್ಲಾಡದೆ ಒಳಗೆ ಹಾಗೆ ಕುಳಿತಿದ್ದಳು. ಬಹುಶಃ ಇಷ್ಟು ಹೊತ್ತಿಗೆ ಅವನು ಹೊರಟು ಹೋಗಿರುತ್ತಾನೆ ಎಂದುಕೊಂಡಳು. ಅಲ್ಲಿ ಯಾರೂ ನಡೆದಾಡುತ್ತಿರುವ ಸದ್ದೂ ಇರಲಿಲ್ಲ. ಒಳ್ಳೆಯದೇ ಆಯ್ತು, ಹಾಳಾದವನ ಜೊತೆ ಸಂಪರ್ಕವೇ ಇಲ್ಲದಿರುವಾಗ ಇನ್ನು ಅವನನ್ನು ಕ್ಷಮಿಸುವ ಮಾತೇಕೆ? ತನ್ನ ಜೀವನವನ್ನು ನರಕ ಮಾಡಿದ್ದಲ್ಲದೆ, ಈಗ ಕ್ಷಮೆ ಕೇಳಲು ಬರುತ್ತಿದ್ದಾನೆ……ಆಗ ಅವಳ ಒಳ ಮನಸ್ಸು ಅವಳನ್ನು  ಧಿಕ್ಕರಿಸಿತು….. ವಾಹ್‌ ಮಾಧವಿ ವಾಹ್‌….. ಮಧು ಮಾಲತಿಯಿಂದ ಮಾಧವಿ ಆದ ಮಾತ್ರಕ್ಕೆ ಎಲ್ಲಾ ಬದಲಾಗಿಹೋಯ್ತೇ? ಆದರೆ ನಿನ್ನ ಮೂಲರೂಪದ ಸ್ತ್ರೀತ್ವ…..ಅದನ್ನು ಹೇಗೆ ಬದಲಾಯಿಸುವೆ? ನೀನು ಅವನನ್ನು ಸಂಪೂರ್ಣ ಮರೆತಿರುವೆ ಅಂತಾದರೆ ನಿನ್ನ ಕುತ್ತಿಗೆಯ ತಾಳಿ, ಬೈತಲೆಯ ಸಿಂಧೂರ…. ಇವೆಲ್ಲ ಯಾರಿಗಾಗಿ? ಕ್ರಾಂತಿ ರೂಪ ತಾಳಿ ಈಗಲೇ ಇದನ್ನೆಲ್ಲ ಕಿತ್ತೆಸೆದುಬಿಡು…. ಸಿಂಧೂರ, ಹಣೆಯ ಬೊಟ್ಟನ್ನು ಒರೆಸಿಬಿಡು….. ಅರುಣ್‌ ಕುಮಾರನ ಬಂಧನ ನೆನಪಿಸುವ ಈ ಚಿಹ್ನೆಗಳೆಲ್ಲ ಈಗೇಕೆ ಬೇಕು? ಆದರೆ ನೀನು ಹಾಗೆ ಮಾಡುವವಳಲ್ಲ…. ಮೇಲ್ನೋಟಕ್ಕೆ ನೀನು ಬದಲಾಗಿದ್ದಿ ಎಂದು ಏನೇ ಹೇಳಿಕೊಂಡರೂ ಮಾಧವಿ, ನಿನ್ನ ಮನಸ್ಸು ಅವನನ್ನು ಮರೆಯಲು ಸಾಧ್ಯವೇ…..? ಇಲ್ಲ…. ಎಂದೆಂದಿಗೂ ಇಲ್ಲ! ನಿನ್ನ ಭಾವಗೀತೆಗಳಲ್ಲಿ ಅಷ್ಟೊಂದು ನೋವು ಮಡುಗಟ್ಟಿರುವುದೇಕೆ? ಹೀಗಿದ್ದೂ ಅವನನ್ನು ಗುರುತಿಸುವುದಕ್ಕೆ ಹಿಂಜರಿಕೆ ಏಕೆ?

`ಬೇಡ….. ಸುಮ್ಮನಿದ್ದು ಬಿಡು….. ನಿನ್ನಿಂದ ಮುಂದೇನೂ ಕೇಳಲು ಇಷ್ಟವಿಲ್ಲ!’ ಎಂದು ತನ್ನ ಆತ್ಮಸಾಕ್ಷಿಗೆ ತಾನೇ ಹೇಳಿಕೊಂಡಳು ಮಾಧವಿ.

ಅವಳ ಈ ಬಿಕ್ಕಳಿಸುವಿಕೆ ಕೇಳಿ ಮಗಳು ಅಖಿಲಾ ನಿದ್ದೆಯಿಂದ ಎಚ್ಚೆತ್ತಳು. ಹೇಗೋ ಮಾಡಿ ಅವಳನ್ನು ಮಲಗಿಸಿದ್ದಾಯಿತು. ಆದರೆ ತಾನು ಮಾತ್ರ ನಿದ್ದೆ ಮಾಡಲು ಆಗಲೇ ಇಲ್ಲ. ಹಳೆಯ ದಿನಗಳ ನೆನಪು ಅವಳನ್ನು ಮತ್ತೆ ಧುತ್ತೆಂದು ಆವರಿಸಿದವು.

ರಾತ್ರಿ 1 ಗಂಟೆ ಇರಬಹುದು, ಫೋನ್‌ ರಿಂಗಾಯಿತು. ಅವಳಿಗಂತೂ ನಿದ್ದೆ ಬಂದೇ ಇರಲಿಲ್ಲ. ಅನಳಿಗೆ ಫೋನ್‌ ರಿಸೀವ್ ‌ಮಾಡಲು ಮನಸ್ಸಾಗಲಿಲ್ಲ. ಆದರೆ ಅದು ಮತ್ತೆ ಮತ್ತೆ ಬಡಿದುಕೊಂಡಾಗ ಎತ್ತಿಕೊಳ್ಳಲೇ ಬೇಕಾಯಿತು.

“ಹಲೋ…. ಯಾರಿದು?”

“ನಾನು ನಿಶಾಂತ್‌ ಮಾತಾಡ್ತಿದ್ದೀನಮ್ಮ…..” ಆ ಕಡೆಯಿಂದ ಧ್ವನಿ ಬಲು ಮಂದ ಗತಿಯಲ್ಲಿತ್ತು.

“ಇಷ್ಟು ರಾತ್ರಿ ಆಯ್ತು…. ಎಲ್ಲ ಸರಿ ಇದೆಯೇ?” ಬಲು ಗಾಬರಿಯಿಂದ ಕೇಳಿದಳು.

“ನಾನೀಗ ಒಂದು ಕೇಳ್ತೀನಿ, ಸತ್ಯ ಹೇಳಬೇಕಮ್ಮ….. ನಿನಗೆ ಮೊದಲಿನಿಂದಲೂ ಈ ಅರುಣ್‌ ಕುಮಾರ್‌ ಗೊತ್ತಿತ್ತೇ?”

ಅವಳ ಕಿವಿಗೆ ಕಾದ ಸೀಸ ಸುರಿದಂತಾಯಿತು….. ಆದರೂ ಸಂಭಾಳಿಸಿಕೊಂಡು ಕೇಳಿದಳು, “ಈ ತಡರಾತ್ರಿಯಲ್ಲಿ ಇದೆಂಥ ಪ್ರಶ್ನೆ ಕೇಳ್ತಿದ್ದೀರಿ ಸಾರ್‌?”

“ಇರಲಿ, ಆತ ಗೊತ್ತೋ…. ಇಲ್ಲವೋ ಹೇಳಮ್ಮ……”

“ಹ್ಞಾಂ…… ಒಂದು ಕಾಲದಲ್ಲಿ ಆತ ನನ್ನ ಪತಿ ಆಗಿದ್ದ…..” ಆಗಿದ್ದ ಎಂಬ ಪದ ಒತ್ತಿ ಹೇಳಿದಳು.

“ಆಗಿದ್ದ ಅಲ್ಲಮ್ಮ….. ಈಗಲೂ ಸಹ….ಯಾಕಂದ್ರೆ ನಿಮ್ಮಿಬ್ಬರ ವಿಚ್ಛೇದನ ಇನ್ನೂ ಆಗಿಲ್ಲ…..”

“ಆದರೆ….. ವಿಷಯ ಏನು ಅಂತ ಹೇಳಿ?”

“ಬಹುಶಃ ಈಗ ಆತ ಬದುಕಿ ಉಳಿಯಲಾರ ಅನ್ಸುತ್ತೆ. ಆತ ನಿನ್ನೆ ನಿನ್ನ ಮನೆಗೆ ಬಂದಿದ್ದಾಗ ನೀನು ಬಾಗಿಲು ತೆರೆಯಲಿಲ್ಲವಂತೆ. ಬಹಳ ಹೊತ್ತು ಅಲ್ಲೇ ಕಾದು ಕುಳಿತಿದ್ದರಂತೆ. ಆದರೂ ಬಾಗಿಲು ತೆರೆಯಲಿಲ್ಲ. ಇನ್ನು ಸ್ವಲ್ಪ ಹೊತ್ತಿಗಾದರೂ ತೆರೆಯಬಹುದು ಅಂತ ಹಿಂತಿರುಗಿ ನೋಡುತ್ತಾ ನೋಡುತ್ತಲೇ ಅಲ್ಲಿಂದ ಹೊರಟು ಹೋದರಂತೆ. ಅನ್ಯಮನಸ್ಕರಾಗಿ ನಡೆಯುತ್ತಿದ್ದುದರಿಂದ ಎದುರಿನಿಂದ ವೇಗವಾಗಿ ಬರುತ್ತಿದ್ದ ಲಾರಿ ಗುದ್ದಿದ್ದು ಗೊತ್ತಾಗಲೇ ಇಲ್ಲ….. ಭೀಕರ ಅಪಘಾತವಾಗಿ ತಲೆಗೆ ಪೆಟ್ಟು ಬಿದ್ದು ಧಾರಾಳ ರಕ್ತ ಹೋಯಿತು.

“ದಾರಿಯಲ್ಲಿ ಹೋಗುತ್ತಿದ್ದವರು ಯಾರೋ ಗಮನಿಸಿ ಹತ್ತಿರದ ಸರ್ಕಾರಿ ಧರ್ಮಾಸ್ಪತ್ರೆಗೆ ಸೇರಿಸಿದ್ದಾರೆ. ಸಾವುಬದುಕಿನ ಮಧ್ಯೆ ಕೆಲವೇ ಕ್ಷಣಗಳು ಉಳಿದಿವೆಯಷ್ಟೆ. ಡಾಕ್ಟರ್‌ ಅವರು ಉಳಿಯುವುದಿಲ್ಲ ಎಂದರು. ನಾನು ಅಪಘಾತಕ್ಕೀಡಾಗಿದ್ದ ನಮ್ಮ ನೆಂಟರನ್ನು ನೋಡಲು ಅಕಸ್ಮಾತ್‌ ಅಲ್ಲಿಗೆ ಬಂದಾಗ, ನಿನ್ನೆ ತಾನೇ ಇವರಿಗೆ ಸನ್ಮಾನ ಮಾಡಿದೆವಲ್ಲ ಅಂತ ಡಾಕ್ಟರ್‌ ಬಳಿ ವಿಚಾರಿಸಿದೆ.

“ಪ್ರಜ್ಞೆ ಬಂದಾಗಿನಿಂದ ಮಾಧವಿ…. ಮಾಲತಿ…. ಪ್ರಸಿದ್ಧ ಲೇಖಕಿ….. ನಿನ್ನನ್ನು ನೋಡಬೇಕು ಅಂತ ಬಡಬಡಿಸುತ್ತಾ ಅರೆಬರೆ ವಿಷಯ ತಿಳಿಸಿದರು. ನೀನು ಮೊನ್ನೆ ಹೇಳಿದ್ದೆಲ್ಲ ತಾಳೆ ಹಾಕಿದಾಗ ವಿಷಯ ಅರ್ಥವಾಯಿತು. ನೀನು ಬೇಗ ಮಾರ್ಕೆಟ್‌ ಬಳಿಯ ಈ ಆಸ್ಪತ್ರೆಗೆ ಬಂದು ಅವರನ್ನು ಒಮ್ಮೆ ನೋಡಿದರೆ ಆ ಜೀವ ನೆಮ್ಮದಿಯಾಗಿ ಪ್ರಾಣ ಬಿಡಬಹುದು……”

“ಆದರೂ ಇದನ್ನೆಲ್ಲ ಇಷ್ಟು ಕರಾರುಾಕ್ಕಾಗಿ ನನಗೆ ಸಂಬಂಧಿಸಿದಂತೆ ಹೇಗೆ ಹೇಳಿದಿರಿ?”

“ನಿನ್ನೆ ನೀನು ಪ್ರೋಗ್ರಾಂ ಮುಗಿಯುವ ಮೊದಲೇ ಮನೆಗೆ ಹೊರಟುಬಿಟ್ಟೆ. ಆಗ ಆತನೂ ನಿನ್ನ ಹಿಂದೆಯೇ ಫಾಲೋ ಮಾಡಿಕೊಂಡು ಬಂದರು. ನನಗೆ ಯಾಕೋ ಸ್ವಲ್ಪ ಸಂದೇಹ ಬಂತು. ಏಕೆಂದರೆ ಈತನ ಹೆಸರು ಬಂದಾಗೆಲ್ಲ ನೀನು ಬಹಳ ಅಪ್‌ಸೆಟ್‌ ಆಗುತ್ತಿದ್ದೆ. ಇದೆಲ್ಲ ನೆನಪಾಗಿ ಏನೋ ಗಂಭೀರ ವಿಷಯ ಇರಬೇಕು ಅಂತ ನಾನು ಆತನನ್ನು ಫಾಲೋ ಮಾಡಿಕೊಂಡು ಬಂದೆ.

“ನಿನ್ನ ಮನೆಯ ಮುಂದೆ ಬಂದು ಆತ ಇಳಿದರು. ಅಷ್ಟು ಹೊತ್ತಿಗೆ ನೀನು ಮನೆಯ ಒಳಗೆ ಹೊರಟುಹೋಗಿದ್ದೆ. ನಾನು ಸ್ವಲ್ಪ ಹೊತ್ತು ನಿನ್ನ ಮನೆಯಿಂದ ದೂರ ನಿಂತು ಗಮನಿಸತೊಡಗಿದೆ. ಬಹಳ ಹೊತ್ತು ಕಾದು ಆತ ಕಾಲೆಳೆದು ನಡೆಯುತ್ತಾ ಹೊರಟಾಗ, ನಾನು ಮಾತನಾಡಿಸೋಣ ಎಂದು ರಸ್ತೆಯ ಆ ಬದಿಯಿಂದ ಈ ಬದಿಗೆ ಬರುವಷ್ಟರಲ್ಲಿ ಲಾರಿ ಬಂದು ಗುದ್ದಿ, ಅಪಘಾತ ಆಗಿಯೇ ಹೋಗಿತ್ತು! ಆಗ ನಾನೇ ಆತನನ್ನು ಕರೆತಂದು ಆಸ್ಪತ್ರೆಗೆ ಸೇರಿಸಿದೆ. ಆತ ಬದುಕಲಾರ ಎಂದೇ ಡಾಕ್ಟರ್‌ ಹೇಳಿದರು.”

“ನಾನು…. ನಾನು… ಈಗಲೇ ಬರ್ತೀನಿ…..” ಮಾಧವಿ ರಿಸೀವರ್‌ ಇರಿಸಿ ಹೊರಡಲು ಸಿದ್ಧಳಾದಳು. ಅವಳು ತನ್ನ ಮಂಗಳ ಸೂತ್ರದ ಕಡೆ ಒಮ್ಮೆ ನೋಡಿಕೊಂಡಾಗ, ಅದರ ಒಂದು ಕೊಂಡಿ ಬಿಟ್ಟುಕೊಂಡಿತ್ತು. ಅದರಲ್ಲಿ ಕಳೆಯೇ ಇರಲಿಲ್ಲ…… ನಿನ್ನೆಯವರೆಗೂ ಹೊಳೆಯುತ್ತಿದ್ದ ಅದು ಇಂದು ಕಳಾಹೀನವಾಗಿತ್ತು. ಅವಳು ಮಗಳನ್ನು ಎಬ್ಬಿಸಿ, ಕಾರಿನ ಹಿಂದಿನ ಸೀಟಿನಲ್ಲಿ ಮಲಗಿಸಿ, ಆಸ್ಪತ್ರೆ ಕಡೆ ಕಾರು ತಿರುಗಿಸಿದಳು.

“ಅಮ್ಮಾ….. ಇಷ್ಟು ಹೊತ್ತಿನಲ್ಲಿ ನಾವು ಎಲ್ಲಿಗೆ ಹೋಗ್ತಿದ್ದೀವಿ?” ನಿದ್ದೆಗಣ್ಣಿನಲ್ಲೇ ಮಗಳು ಕೇಳಿದಳು.

“ನಿನ್ನ ಅಪ್ಪನನ್ನು ಭೇಟಿಯಾಗಲು……”

“ಇಲ್ಲ…… ಇಲ್ಲ…..  ಅಪ್ಪ ಎಲ್ಲೋ ಕಳೆದುಹೋಗಿದ್ದಾರೆ ಎಂದು ನೀನೇ ಎಷ್ಟೋ ಸಲ ಹೇಳಿದ್ದಿ…..” ಮಗುವಿನ ಮಾತು ಸ್ಪಷ್ಟವಾಗಿತ್ತು.

“ಹೌದಮ್ಮ….. ಆದರೆ ಈಗ ಸಿಕ್ಕಿದ್ದಾರಮ್ಮ……”

“ಅಂದ್ರೆ….. ಇನ್ನೇಲೆ ಅವರು ನಮ್ಮ ಜೊತೆ ಇರ್ತಾರಾ?”

“ಹೌದಮ್ಮ…. ಹಾಗೇ ಕಾಣುತ್ತೆ.”

“ಹಾಗಿದ್ದೆರೆ ಬಲು ಮಜವಾಗಿರುತ್ತೆ ಅಮ್ಮ……” ಮಗು ಖುಷಿಯಲ್ಲಿ ಹೇಳಿತು.

“ಸರಿ….. ನೀನು ಮಲಗಮ್ಮ….. ನನಗೆ ರಾತ್ರಿ ಡ್ರೈವಿಂಗ್‌ ಅಭ್ಯಾಸವಿಲ್ಲ…..” ಎಂದಾಗ ಮಗು ಮಗ್ಗಲು ಬದಲಿಸಿತು.

ಅವಳು ಆಸ್ಪತ್ರೆ ಒಳಗೆ ಬರುತ್ತಿದ್ದಂತೆ ಎದುರಿಗೆ ನಿಶಾಂತ್‌ ಕಂಡರು. ಅವರು ಒಳಗಿನ ಲಾಂಜ್‌ನಲ್ಲಿ ಕುಳಿತು ಹಾಗೇ ತೂಕಡಿಸುತ್ತಿದ್ದರು. ಪರಿಚಿತ ಕಾಲು ನಡಿಗೆಯ ಸಪ್ಪಳ ಅವರನ್ನು ಎಚ್ಚರಿಸಿತು.

“ಓ….. ಬಂದಿಯಾಮ್ಮ…… ನಾನು ಆಗಿನಿಂದ ನಿನಗಾಗಿ ಕಾಯ್ತಿದ್ದೆ……”

“ಎಲ್ಲಿದ್ದಾರೆ ಅವರು?”

“ಎಮರ್ಜೆನ್ಸಿ ವಾರ್ಡ್‌ನ ಐ.ಸಿ.ಯುನಲ್ಲಿದ್ದಾರೆ. ಹೊರಗಿನ ಕಿಂಡಿಯಿಂದ ಸ್ಪಷ್ಟ ಕಾಣಿಸುತ್ತದೆ. ಈ ಕಡೆ 2ನೇ ಕೋಣೆ…..” ಎಂದು ದಾರಿ ತೋರಿಸಿದರು.

ಅವಳು ಸರ ಸರ ಅತ್ತ ಹೊರಟಳು. ಮಗಳು ಹಿಂಬಾಲಿಸಿದಳು. ಹೊರಗಿನಿಂದ ಕಿಂಡಿ ಮೂಲಕ ಇಣುಕಿ ನೋಡಿ ಖಾತ್ರಿ ಪಡಿಸಿಕೊಂಡಳು. ನೇರ ಡ್ಯೂಟಿ ಡಾಕ್ಟರ್‌ ಕೋಣೆಗೆ ಹೋಗಿ ವಿಷಯ ತಿಳಿಸಿದಳು. ಅವರು ಜೊತೆಯಲ್ಲಿ ಬಂದು ಐ.ಸಿ.ಯು ಕೋಣೆ ಒಳಗೆ ಕರೆದೊಯ್ದರು. ಮಗು ಬೇಡ ಎಂದು ಹೊರಗೆ ನಿಲ್ಲಿಸಿದ್ದರು.

ಆತನನ್ನು ನೋಡಿದಾಗ ಹೌಹಾರಿದಳು. ದೇಹ ಕೃಶವಾಗಿ ಕಟ್ಟಿಗೆಯಂತೆ ಒಣಗಿತ್ತು. ಪ್ರಜ್ಞೆ ಮರಳಿತ್ತು. ಮಾಧವಿಯನ್ನು ಕಂಡು ಏಳಲಾಗದೆ ಮಲಗಿದ್ದಲಿಂದಲೇ ಕೈ ಮುಗಿದ. ಇವಳೇ ಮುಂದೆ ಬಂದು ಸಾಂತ್ವನ ಹೇಳುವಂತೆ ಆ ಕೈಗಳನ್ನು ಹಿಡಿದುಕೊಂಡಳು.

“ಇದೇನು…. ಹೀಗೆ ಆಗಿ ಹೋಗಿದ್ದೀರಿ?” ಮಾತಿಗಿಂತ ಅಳು ಜೋರಾಯಿತು.

“ಎಲ್ಲ ನನ್ನ ಕರ್ಮದ ಫಲ….  ನನಗೆ ಈ ಶಿಕ್ಷೆ ಸರಿಯಾಗಿದೆ, ಆಗಬೇಕಾದ್ದೇ ಬಿಡು. ಇನ್ನು ಕೆಲವು ಕ್ಷಣಗಳಷ್ಟೇ ಈ ಜೀವ…. ಅದು ನಿನ್ನ ಮುಂದೆ ಹೋಗಲೀಂತ ಕರೆಸಿದೆ….. ದಯವಿಟ್ಟು ನನ್ನ ಕ್ಷಮಿಸಿ ಬಿಡು…..” ಮತ್ತೆ ಕೈ ಜೋಡಿಸುತ್ತಾ ಕುಸಿದುಹೋದ ಆತ.

“ಇಲ್ಲ….. ನಿಮಗೆ ಏನೂ ಆಗೋಲ್ಲ…. ನಾನು ಬಂದುಬಿಟ್ಟೆ….. ನಾನು ಹೇಗಾದರೂ ಕಾಪಾಡಿಕೊಳ್ತೀನಿ…..”

“ಈಗ ಯಾರೂ ನನ್ನ ರಕ್ಷಿಸಲಾರರು ಮಾಲತಿ…. ಕ್ಷಮಿಸಿದ್ದೀನಿ ಅಂತ ಒಂದು ಸಲ ಹೇಳಿಬಿಡು…..” ಅವಳ ಕಣ್ಣೀರೇ ಉತ್ತರ.

“ಮಗು ಎಲ್ಲಿ……?” ಕಿಟಕಿಯಿಂದ ಇಣುಕಿ ಮಗುವನ್ನು ಕಂಡಿದ್ದರಿಂದ ಕೇಳಿದ. ವೈದ್ಯರ ಅನುಮತಿ ಮೇರೆಗೆ ಅಂತಿಮ ಕ್ಷಣ ಎಣಿಸುತ್ತಿದ್ದ ರೋಗಿ ಬಳಿ ಮಗುವನ್ನು ಕರೆತರಲಾಯಿತು.

“ನನ್ನ ಮಗಳು….. ದತ್ತು ಪಡೆದಿದ್ದೇನೆ…..”

“ಒಳ್ಳೆಯದನ್ನೇ ಮಾಡಿದೆ ಮಾಲತಿ….. ನಿನಗೆ ಒಂದು ದಿಕ್ಕಾಯಿತು. ಈ ಕೊನೆ ಘಳಿಗೆಯಲ್ಲಿ ನನ್ನನ್ನು ನೋಡಲು ಬಂದು ನೀನು ದೊಡ್ಡ ಉಪಕಾರ ಮಾಡಿರುವೆ. ನನ್ನದು ಅನಾಥ ಹೆಣ ಆಗೋಲ್ಲ….. ಕಳೆದ 2 ವರ್ಷಗಳಿಂದ ನನಗೆ ಇದೇ ಕೊರಗಾಗಿತ್ತು….. ಇನ್ನು ನಿಶ್ಚಿಂತೆಯಿಂದ ಕಣ್ಣು ಮುಚ್ಚುತ್ತೇನೆ,” ಎನ್ನುತ್ತಾ ಮಗುವನ್ನು ಹತ್ತಿರ ಕರೆಸಿಕೊಂಡು ನಿಧಾನವಾಗಿ ಅದರ ತಲೆ ಸವರಿದ.

ನಿಜಕ್ಕೂ ಆ ಘಳಿಗೆಯಲ್ಲಿ ಅವಳು ತಟಸ್ಥಳಾಗಿದ್ದಳು. ಯಾರಾದರೂ ತೀರಿಕೊಳ್ಳುವ ಘಳಿಗೆಯಲ್ಲಿ ನಮ್ಮವರು, ಪರರು ಎಂದೆಲ್ಲ ಭೇದ ಎಲ್ಲಿ ಬಂತು?

“ನಿನ್ನ ಹತ್ತಿರ ಕೊನೆಯದಾಗಿ 1-2 ಮಾತು ಹೇಳಿಬಿಡ್ತೀನಿ…. ಈ ಪಾಪಿಗೆ ಕ್ಷಮೆ ಇರಲಿ…. ನಿನ್ನ  ದೃಷ್ಟಿಯಲ್ಲಿ ನಾನು ಭೂಮಿಗಿಳಿದು ಹೋಗಿದ್ದೇನೆ….. ಆದರೆ ಮಾಲತಿ, ನಿನ್ನ ಆ ಶಾಪ ನನ್ನನ್ನು ತಟ್ಟದೆ ಬಿಡಲಿಲ್ಲ….. ಯೌವನವಿದ್ದಾಗ ಅಹಂಕಾರ ತುಂಬಿತ್ತು….. 50+ ನಂತರ ಜೀವನ ಮತ್ತೆ ಸುಧಾರಿಸಿಕೊಳ್ಳಲಾಗದಂತೆ ಪಾಠ ಕಲಿಸಿತು.

“ಭೀಕರ ಲಿವರ್‌ ಕ್ಯಾನ್ಸರ್‌ ಬಂದು, ಹೆಂಡ ಇರಲಿ…… 2 ಹನಿ ನೀರು ಕುಡಿಯುವುದು ಸಹ ಕಷ್ಟವಾಯಿತು. ನಿನಗೆ ಮಾಡಬಾರದ ಅನ್ಯಾಯ ಮಾಡಿದ್ದಕ್ಕಾಗಿ 2 ವರ್ಷ ಸತತ ನರಳಿದೆ…. ಕೊನೆ ಘಳಿಗೆಯ ಭೇಟಿ ಅಂತ ಬಂದಾಗ ಲಾರಿ ಗುದ್ದಿ ಉಪಕಾರವನ್ನೇ ಮಾಡಿತು. ನಿನ್ನ ಮನೆ ಹುಡುಕಿಕೊಂಡು ಬಂದು ಇಂದು ಸುಖವಾಗಿ ಇಹೋಕದ ವ್ಯಾಪಾರ ಮುಗಿಸುತ್ತಿದ್ದೇನೆ.

“ನನ್ನ ಬರವಣಿಗೆಯಲ್ಲಿ ತೋರುತ್ತಿದ್ದ ಯಾವ ಆದರ್ಶವನ್ನೂ ಪಾಲಿಸಲಿಲ್ಲ. ನಿನಗೆ ಘೋರ ಅನ್ಯಾಯ ಮಾಡಿದ ಈ ಪಾಪಿಯನ್ನು ಕ್ಷಮಿಸಿದೆ ಅಂತ ಹೇಳಿಬಿಡು….. ಮಾ…ಲ….ತಿ…” ಅಷ್ಟರಲ್ಲಿ ಆತನ ತಲೆ ಪಕಕ್ಕೆ ಒರಗಿತು.

ಮಾರನೇ ದಿನ ಹಲವು ಸಾಹಿತಿಗಳ ಸಮ್ಮುಖದಲ್ಲಿ ಆತನನ್ನು ಚಿತಾಗಾರಕ್ಕೆ ಕರೆದೊಯ್ದು ಮಾಧವಿ ಅಂತಿಮ ಸಂಸ್ಕಾರ ನೆರವೇರಿಸಿದಳು. ಎಲ್ಲಾ ಮುಗಿದು ಅಲ್ಲಿಂದ ಹೊರಡುವಾಗ ಆ ಮುಖ ಮತ್ತೆ ಎದುರಿಗೆ ಬಂದು, “ಮಾಲತಿ…. ನಿನಗೆ ಧನ್ಯವಾದ…… ನನ್ನ ಅಪೂರ್ಣ ಕಥೆಗೆ ಇಂದು ನೀನು ಪರಿಪೂರ್ಣತೆ ತಂದುಕೊಟ್ಟೆ!” ಎಂದಂತೆ ಅನಿಸಿತು.

ಅವಳು ಮಗಳ ಕೈ ಹಿಡಿದು ಕಾರನ್ನು ಏರಿದಳು. ಆತ ಕೊನೆ ಘಳಿಗೆಯಲ್ಲಿ ಮಗುವಿಗಾಗಿ ಎಂದು ತನ್ನೆಲ್ಲ ಆಸ್ತಿಯನ್ನೂ ಮಾಲತಿ ಹೆಸರಿಗೆ ಮಾಡಿಸಿದ್ದ ಪತ್ರ ನೀಡಿದ್ದ ಕವರ್‌ ಕಾರಿನಲ್ಲೇ ಇತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ