“ಗುರು, ಇದ್ಯಾಕೆ ಹೀಗೆ ಜೋಲು ಮೋರೆ ಹಾಕಿಕೊಂಡು ಕುಳಿತಿರುವೆ? ಈಗ ನೀನು ಜಾಲಿ ಮಾಡೋ ಸಮಯ! ನಿನ್ನ ಪ್ರೇಯಸಿ ಇದೀಗ ನಿನ್ನ ಹೆಂಡ್ತಿ ಆಗ್ತಿದ್ದಾಳೆ, ಇದಕ್ಕಿಂತ ಇನ್ನೇನು ಬೇಕು? ನೀನಂತೂ ಮೈತುಂಬಾ ಮಚ್ಚೆ ತುಂಬಿಕೊಂಡೇ ಹುಟ್ಟಿದ್ದೀಯಾ ಬಿಡಪ್ಪ……” ಗೆಳೆಯ ವಿಜಯ್‌ನನ್ನು ಹುರಿದುಂಬಿಸುತ್ತಾ ಹೇಳಿದ ರಮೇಶ್‌.

ಆದರೆ ಮದುವೆ ಗಂಡಾಗಿ ಗೊತ್ತಾಗಿದ್ದರೂ ಲೇಶ ಮಾತ್ರ ಉತ್ಸಾಹವಿಲ್ಲದ ವಿಜಯ್‌ ಹೇಳಿದ, “ಬಡ್ಕೊಂಡ್ರು ನನ್ನ ಭಾಗ್ಯಕ್ಕೆ! ನಿನ್ನ ಮದುವೆ ಇನ್ನು ಫಿಕ್ಸ್ ಆಗಿಲ್ಲ….. ಅದಕ್ಕೆ ನನ್ನ ಕಷ್ಟ ನಿನಗೆ ಗೊತ್ತಾಗ್ತಾ ಇಲ್ಲ.”

“ಏನು ನಿನ್ನ ಮಾತಿನ ಅರ್ಥ? ನನಗಂತೂ ಏನೂ ಹೊಳೆಯುತ್ತಿಲ್ಲ. ನನಗೆ ಗೊತ್ತಿರೋದೆಲ್ಲ ಇಷ್ಟೆ….. ಲವ್ ಮ್ಯಾರೇಜ್ ಮನೆಯವರಿಂದ ಪಾಸ್‌ ಮಾಡಿಸಿಕೊಳ್ಳುವಷ್ಟರಲ್ಲಿ ಜನ 7 ಕೆರೆ ನೀರು ಕುಡಿಯುತ್ತಾರೆ. ಆದರೆ ನಿನ್ನ ಕೇಸಿನಲ್ಲಿ ಅಂತೂ ಒಂದೇ ತಿಂಗಳಲ್ಲಿ ಎಂಗೇಜ್‌ಮೆಂಟ್‌ 6 ತಿಂಗಳಲ್ಲೇ ಮದುವೆ ಅಂತ ಗೊತ್ತಾಗಿರುವಾಗ ಏನು ಕಷ್ಟವಪ್ಪ……”

ಅಷ್ಟರಲ್ಲಿ ವಿಜಯ್‌ ಮೊಬೈಲ್‌ಗೆ ಒಂದು ಮೆಸೇಜ್‌ ಬಂತು. `ಫ್ರೀ ಇದ್ದೀಯಾ?’ ವಿಜಯ್‌ ರಮೇಶನ ಮಾತನ್ನು ಅರ್ಧ ಬಿಟ್ಟು ರಶ್ಮಿಯ ಕರೆಗಾಗಿ ಎದ್ದು ನಿಂತ.

ವಿಜಯ್‌ ರಶ್ಮಿ ಮೊದಲಿನಿಂದಲೂ ಕಾಲೇಜಿನಲ್ಲಿ ಯುವ ಪ್ರೇಮಿಗಳು. ಈ ವಿಷಯವನ್ನು ಇವರ ಸಹಪಾಠಿಗಳೆಲ್ಲ ಬಿ.ಇ  ಕಲಿಯುವ ಮೊದಲ ವರ್ಷದಲ್ಲೇ ಗುರುತಿಸಿದ್ದರು. ಅದನ್ನು ಇವರಿಬ್ಬರೂ ಎಂದೂ ಮುಚ್ಚಿಡುವ ಪ್ರಯತ್ನ ಮಾಡಲೇ ಇಲ್ಲ. ಇಬ್ಬರೂ ಬೇರೆ ಜಾತಿಗೆ ಸೇರಿದವರು, ಸಸ್ಯಾಹಾರಿಗಳೇ ಆದ್ದರಿಂದ ಊಟತಿಂಡಿ ವಿಷಯದಲ್ಲಿ ಇಬ್ಬರಿಗೂ ಹೊಂದಾಣಿಕೆ ಕಷ್ಟವಾಗಲಿಲ್ಲ. ಆದರೆ ಇವರ ಮನೆಯವರಿಬ್ಬರೂ ಈ ಮದುವೆಗೆ ಸುಲಭ ಒಪ್ಪಿಗೆ ನೀಡಲಿಲ್ಲ.

ಅಂತಿಮ ವರ್ಷದ ಫೇರ್‌ವೆಲ್ ‌ಪಾರ್ಟಿಯಂದು ಸಹಪಾಠಿಗಳೆಲ್ಲ ಕೂಡಿ, ತಾವು ತಾವೇ ಖರ್ಚು ವಹಿಸಿಕೊಂಡು, ಇವರಿಬ್ಬರಿಗೂ ಸಾಂಕೇತಿಕ ವಿವಾಹ ಮಾಡಿಸಿ ಮುಗಿಸಿಬಿಟ್ಟಿದ್ದರು. ಅದಕ್ಕೆ ಇವರಿಬ್ಬರ ವಿರೋಧ ಇರಲಿಲ್ಲ. ಮುಂದೆ ಸಾಂಪ್ರದಾಯಿಕ ಅಸಲಿ ವಿವಾಹ ನಡೆಯುತ್ತದೋ ಇಲ್ಲವೋ, ಕೇವಲ ರೆಜಿಸ್ಟರ್ಡ್‌ ಮದುವೆ ಆಗಬೇಕಾಗಿ ಬಂದರೆ….. ಹೀಗಾದರೂ ಎಲ್ಲರ ಮುಂದೆ ಮದುವೆ ನಡೆಯಲಿ ಎಂದು ಸಂಭ್ರಮಿಸಿದರು. ಹೀಗೆ ಕಾಲ ಕಳೆದು, ಮುಂದೆ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸಕ್ಕೆ ಸೇರುವಂತಾಯಿತು. ಇಬ್ಬರೂ ಒಂದೇ ಸೆಕ್ಷನ್ನಿನ, ಒಂದೇ ಪ್ರಾಜೆಕ್ಟ್ ಗೆ ಕೆಲಸ ಮಾಡತೊಡಗಿದರು. ಹೀಗಾಗಿ ಇನ್ನಷ್ಟು, ಮತ್ತಷ್ಟು ನಿಕಟರಾಗಲು ಅನುಕೂಲವಾಯಿತು. ಹೇಗಾದರೂ ಸರಿ, ಮನೆಯವರನ್ನು ಒಪ್ಪಿಸಿಯೇ ತಾವು ಮದುವೆಗೆ ಮುಂದಾಗಬೇಕು ಎಂದು ನಿರ್ಧರಿಸಿದರು.

ವಿಜಯ್‌ ತನ್ನ ಮನೆಯವರ ಬಳಿ ರಶ್ಮಿ ಈಗ ತನ್ನದೇ ಕಂಪನಿಯಲ್ಲಿ ಕೆಲಸ ಮಾಡುವ ವಿಚಾರ ತಿಳಿಸಿದ. ಅವಳ ಸಂಬಳ, ಪ್ಯಾಕೇಜ್‌ ಕುರಿತೂ ಹೇಳಿದ. ಅನ್ಯ ಜಾತಿಯವಳಾದರೂ ಇಂದಿನ ಕಾಲಕ್ಕೆ ತಕ್ಕಂತೆ ದುಡಿಯುವ ಸೊಸೆ ಬರಲಿ, ಎಂದು ಒಬ್ಬನೇ ಮಗನ ನಿರ್ಧಾರಕ್ಕೆ ವಿರೋಧಿಸದೆ ಒಪ್ಪಿದರು. ಇಬ್ಬರಿಗೂ ಬಹುತೇಕ ಸಮಾನ ಸಂಬಳ ಇದ್ದುದರಿಂದ ಮುಂದೆ ಸಂಸಾರಕ್ಕೆ ಅನುಕೂಲ ಆಗುತ್ತಿತ್ತು.

ಎಲ್ಲಕ್ಕೂ ಮೊದಲು ವಿಜಯನ ತಂದೆ ಹೇಳಿದರು, “ನೋಡಪ್ಪ ದುಡಿಯುವ ಹುಡುಗಿ ಮನೆಗೆ ಸೊಸೆಯಾಗಿ ಬರುವುದು ಈಗಿನ ಕಾಲದಲ್ಲಿ ಬಹಳ ಮುಖ್ಯವಾಗಿದೆ. ಇಂದಿನ ಪೇಟೆ ಧಾರಣೆ ಅಷ್ಟು ದುಬಾರಿಯಾಗಿದೆ. ಮುಂದೆ ಮಕ್ಕಳ ಓದು, ಮದುವೆ ಕಾಲಕ್ಕೆ ಒಬ್ಬರ ಸಂಬಳದಿಂದ ಏನೇನೂ ಲಾಭ ಇಲ್ಲ. ರಶ್ಮಿಗೆ ಒಳ್ಳೆ ಸಂಬಳ, ಪ್ಯಾಕೇಜ್‌ ಇರುವುದು ಮುಂದಿನ ಭವಿಷ್ಯದ ದೃಷ್ಟಿಯಿಂದ ಭಾರಿ ಒಳ್ಳೆಯದು.

“ಬೆಂಗಳೂರಿನಂಥ ದುಬಾರಿ ನಗರದಲ್ಲಿ ಬಾಡಿಗೆ ಕೊಟ್ಟುಕೊಂಡು ಮಧ್ಯಮ ವರ್ಗದ ಜೀವನ ನಡೆಸುವುದು ಅಂದ್ರೆ ಕಬ್ಬಿಣದ ಕಡಲೆಯೇ ಸರಿ. ಇಬ್ಬರ ಸಂಬಳ ಕೂಡಿದಾಗ  ಏನಾದರೂ 4 ಕಾಸು ಉಳಿತಾಯ ಮಾಡಲು ಸಾಧ್ಯ! ನಿನ್ನದು ಪ್ರೇಮ ವಿವಾಹವಾದ್ದರಿಂದ ನಾವು ಬಾಯಿ ಬಿಟ್ಟು ವರದಕ್ಷಿಣೆ ಕೇಳುವ ಹಾಗಿಲ್ಲ. ಆದ್ದರಿಂದ ನಿನ್ನ ಮದುವೆಗೆ ಮನೆಯಿಂದ 1 ಪೈಸೆಯೂ ಖರ್ಚಿಗೆ ಸಿಗೋಲ್ಲ. ಇಬ್ಬರೂ ಶಾಸ್ತ್ರೋಕ್ತವಾಗಿ ಕಲ್ಯಾಣ ಮಂಟಪದಲ್ಲಿ ಮದುವೆ ಆಗ್ತೀರೋ, ದೇವಾಲಯದಲ್ಲಿ ಸರಳ ಮದುವೆ ಆಗಿ ರೆಜಿಸ್ಟರ್ಡ್‌ ಮಾಡಿಸುತ್ತೀರೋ ಅದು ನಿಮ್ಮಿಬ್ಬರಿಗೆ ಬಿಟ್ಟದ್ದು. ಹೀಗಾಗಿ ನಿಮ್ಮಿಬ್ಬರ ಉಳಿತಾಯದ ಹಣ ಏನಿದೆ, ಅದರಲ್ಲಿ ನಿಮ್ಮ ಮದುವೆ ಖರ್ಚ ತೂಗಿಸಿಕೊಳ್ಳಿ, ನಮ್ಮನ್ನು ಮಾತ್ರ ನಯಾ ಪೈಸೆ ಕೇಳಬೇಡಿ!” ಎಂದು ಕಡ್ಡಿ ಮುರಿದಂತೆ ಖಡಾಖಂಡಿತವಾಗಿ ಹೇಳಿಬಿಟ್ಟರು. ಮೊದಲಿನಿಂದಲೂ ಅವರಿಗೆ ಇದ್ದ ಐಡಿಯಾ ಎಂದರೆ ವಧು ಕಡೆಯಿಂದ 10 ಲಕ್ಷ ಮೊದಲೇ ವಸೂಲಿ ಮಾಡುವುದು, ಅದರಿಂದ, ಹುಡುಗನ ಕಡೆಯ ಖರ್ಚು ತೋರಿಸುವುದು ಎಂದಿತ್ತು. ಈಗಂತೂ ಇವರಿಬ್ಬರೇ ತಮಗೆ ಬೇಕಾದಂತೆ ಖರ್ಚು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ಹೀಗಾಗಿ ವಿಜಯ್‌ ತಲೆ ಮೇಲೆ ಕೈ ಹೊತ್ತು ಕುಳಿತ.

ಅದೇ ತರಹ ಅತ್ತ ರಶ್ಮಿ ಮನೆಯಲ್ಲೂ, “ನೋಡಮ್ಮ, ಬೇಡ ಅಂದ್ರೂ ನೀನು ನಮ್ಮ ಜಾತಿಯವನಲ್ಲದ ಹುಡುಗನ್ನ ಮದುವೆ ಆಗ್ತೀನಿ ಅಂತ ಹಠ ಹೂಡಿರುವೆ. ನಿನಗಿಂತ ಇಬ್ಬರು ಚಿಕ್ಕವರು ಮದುವೆಗೆ ರೆಡಿ ಆಗುತ್ತಿದ್ದಾರೆ ಅಂತ ನೆನಪಿಟ್ಟುಕೋ. ನೀನು ಬೇರೆ ಜಾತಿಯವನನ್ನು ಮದುವೆ ಆಗುತ್ತಿರುವುದರಿಂದ ಅವರುಗಳ ಮದುವೆ ಸಮಯದಲ್ಲಿ ಇಬ್ಬರಿಗೂ ಹೆಚ್ಚಿಗೆ ವರದಕ್ಷಿಣೆ ಕೇಳುತ್ತಾರೆ.

“ಹಾಗಾಗಿ ನಿನ್ನ ಮದುವೆಗೆ ನಾವು ನಯಾ ಪೈಸೆ ಖರ್ಚು ಮಾಡುವುದಿಲ್ಲ. ನಿನ್ನ ಮದುವೆಯ ಹಣ ಅವರ ಹೆಚ್ಚಿನ ವರದಕ್ಷಿಣೆಗೆ ದಂಡ ತೆರಬೇಕಾಗಿದೆ. ಹೀಗಾಗಿ ನೀನುಂಟು, ಆ ಹುಡುಗ ಉಂಟು…. ನಿಮ್ಮಿಬ್ಬರ ಉಳಿತಾಯದಲ್ಲಿ ಎಷ್ಟು ಸಾಧ್ಯವೋ ಅದರಲ್ಲಿ ಮದುವೆ ಖರ್ಚು ಮಾಡಿಕೊಳ್ಳಿ. ಆಶೀರ್ವಾದ ಮಾಡಲು ನಾವು ಬರುತ್ತೇವಷ್ಟೆ!” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಹೀಗಾಗಿ ಸರಳ ಮದುವೆ ಒಂದೇ ಉಳಿದಿರು ದಾರಿ ಎಂದು ರಶ್ಮಿ ಸಹ ಅಂದುಕೊಳ್ಳುವ ಹಾಗಾಯಿತು.

ರಶ್ಮಿ ತಾಯಿ ತಂದೆ ತಮ್ಮಲ್ಲೇ ಮಾತನಾಡಿಕೊಂಡರು.

“ಈ ಲವ್ ಮ್ಯಾರೇಜ್‌ನ ದೊಡ್ಡ ಲಾಭವೆಂದರೆ ವರದಕ್ಷಿಣೆ ಕಾಟ ಇರೋದಿಲ್ಲ….. ಅದಕ್ಕೆ  ರಶ್ಮಿಗೆ ಹೇಳಿಬಿಟ್ಟಿದ್ದೀನಿ, ತನ್ನ ಆಯ್ಕೆಯ ಮದುವೆ ಆಗಬೇಕಿದ್ದರೆ ನೀನೂ ಆ ಹುಡುಗನೂ ಅರ್ಧರ್ಧ ಖರ್ಚು ವಹಿಸಿಕೊಂಡು ಹೇಗೆ ಬೇಕೋ ಹಾಗೆ ಮದುವೆಯಾಗಿ.  ನಮ್ಮ ಮಗಳು ರೂಪವತಿ, ಚೆನ್ನಾಗಿ ಕಲಿತಿದ್ದಾಳೆ, ಒಳ್ಳೆಯ ಕೆಲಸ, ಕೈ ತುಂಬಾ ಸಂಬಳ…. ಇನ್ನೇನು ಬೇಕು? ಅದೂ ನಮ್ಮದಲ್ಲದ ಜಾತಿಯವನಿಗೆ ಕೊಡುತ್ತಿರುವುದೇ ದೊಡ್ಡ ವಿಷಯ….. ಹೀಗಾಗಿ ಮುಂದಿನ ಮಗಳ ಮದುವೆ ಮಾಡುವಾಗ ನಮಗೆ ತೊಂದರೆ ತಪ್ಪಿದ್ದಲ್ಲ. ಆಗ ನಮ್ಮ ಖಜಾನೆ ಖಾಲಿ ಮಾಡಬೇಕಾದೀತು. ಹೀಗಾಗಿ ಈ ಹಿರಿ ಮಗಳ ಮದುವೆಗೆ ನಾವು ಖರ್ಚು ಮಾಡುವುದೇ ಬೇಡ!”

ರಶ್ಮಿಯ ತಾಯಿ ತಂದೆ ಇದೇ ವಿಚಾರವನ್ನು ತಿರುಗಿಸಿ ತಿರುಗಿಸಿ ಹೀಗೆ ಮಾತನಾಡಿಕೊಳ್ಳುತ್ತಿದ್ದರು. “ದಿನೇ ದಿನೇ ಗಗನಕ್ಕೇರುತ್ತಿರುವ ಬೆಲೆ ಕಂಡರೆ, ಮುಂದೆ ಬರೀ ನೀರು ಕುಡಿದೇ ಬದುಕಿರಬೇಕು ಅನ್ಸುತ್ತೆ. ನಾವು ರಶ್ಮಿಗೆ ಹೇಳಿದ್ದೇ ಸರಿ. ಈಗ ಇವಳ ಮದುವೆಗೆ ಅಂತ ಇರಿಸಿದ್ದ ಹಣವನ್ನು ಬ್ಯಾಂಕಿನಲ್ಲಿ ಎಫ್‌.ಡಿಗೆ ಹಾಕಿಟ್ಟರೆ, ಮುಂದೆ ಚಿಕ್ಕವರಿಬ್ಬರ ಮದುವೆ ಖರ್ಚಿಗೆ ದಾರಿ ಆಯ್ತು.”

ಈ ರೀತಿ ಎರಡೂ ಕಡೆಯವರು ಮದುವೆ ಖರ್ಚು ವಹಿಸಿಕೊಳ್ಳುವುದಿಲ್ಲ ಎಂದು ಕೈ ಎತ್ತಿಬಿಟ್ಟರು. ರಶ್ಮಿ ವಿಜಯ್‌ ಆಫೀಸಿನ ಕೆಲಸದ ನಡುವೆ ಬಿಡುವು ದೊರೆತಾಗೆಲ್ಲ ತಮ್ಮ ಮದುವೆ ಖರ್ಚಿನಲ್ಲಿ ಏನೆಲ್ಲ ಕಡಿತ ಮಾಡಬಹುದು, ಎಷ್ಟು ಕನಿಷ್ಠ ಮೊತ್ತದಲ್ಲಿ ಮದುವೆ ಮುಗಿಸಬಹುದು ಎಂಬುದನ್ನು ಲೆಕ್ಕ ಹಾಕುವುದೇ ಆಗಿಹೋಯ್ತು.

11 ಗಂಟೆ ಕಾಫಿ ಬ್ರೇಕ್‌ನಲ್ಲಿ ಇಬ್ಬರೂ ಕ್ಯಾಂಟೀನಿನಲ್ಲಿ ಸಂಧಿಸಿದರು. ವಿಜಯ್‌ 2 ಕಪ್‌ ಕಾಫಿ ಹಿಡಿದು ರಶ್ಮಿ ಕುಳಿತಿದ್ದ ಟೇಬಲ್ ಬಳಿ ಬಂದ.

“ಎಂಗೇಜ್‌ಮೆಂಟ್‌ ಎಲ್ಲಿ ಮಾಡಿಕೊಳ್ಳುವುದು ಅಂತ ಫಿಕ್ಸ್ ಆಯ್ತಾ?” ಕಾಫಿ ಕಪ್‌ ಪಡೆದುಕೊಳ್ಳುತ್ತಾ ರಶ್ಮಿ ಕೇಳಿದಳು.

“ಬೆಂಗಳೂರಿನ ಹೋಟೆಲ್‌ಗಳ ಮಿನಿ ಹಾಲ್ ‌ಎಷ್ಟು ದುಬಾರಿ ಅಂತ ನಿನಗೆ ಗೊತ್ತೇ ಇದೆ. ಇದಕ್ಕೆ ಪೂರಕವಾಗಿ ಡಿ.ಜೆ., ಓವರ್‌ ಆಲ್ ಡೆಕೋರೇಶನ್‌ ಖರ್ಚು ಎಕ್ಸ್ ಟ್ರಾ….. ಒಟ್ಟಾರೆ ಇದಕ್ಕೆ 15-20 ಸಾವಿರ ಇಲ್ಲದೆ ಆಗೋದೇ ಇಲ್ಲ ಬಿಡು.”

“ಎರಡೂ ಕಡೆ ಅತಿಥಿಗಳು ಸೇರಿ ಒಟ್ಟು 125-150 ಆಗೇ ಆಗುತ್ತೆ ಅಲ್ಲವೇ?” ರಶ್ಮಿ ಕೇಳಿದಳು.

“ನಮ್ಮ ಕಡೆಯವರು ಗಂಡಿನ ಕಡೆ ಅತಿಥಿಗಳು….. ಹೀಗಾಗಿ ವೆಲ್ ‌ಕಂ ಡ್ರಿಂಕ್ಸ್, ಕೈಗೊಂದು ಮಿನಿ ಸ್ವೀಟ್‌ ಬಾಕ್ಸ್ ಕೊಡಲೇ ಬೇಕಾಗುತ್ತೆ!” ವಿಜಯ್‌ ಕಣ್ಣು ಮಿಟುಕಿಸಿದಾಗ ರಶ್ಮಿ ಅವನತ್ತ ಕೆಕ್ಕರಿಸಿಕೊಂಡು ನೋಡಿದಳು. ಅವನಿಗೆ ನಗು ತಡೆಯಲು ಆಗಲಿಲ್ಲ.

“ಮತ್ತೆ ನಮ್ಮಿಬ್ಬರ ಹೊಸ ಡ್ರೆಸ್‌? ಅದನ್ನಂತೂ ಕೊಳ್ಳಲೇಬೇಕಲ್ಲ…..” ರಶ್ಮಿ ನೆನಪಿಸಿದಳು.

“ಹೌದು ಮತ್ತೆ…. ನನಗೊಂದು ಸಫಾರಿ ಡ್ರೆಸ್‌, ನಿನಗೊಂದು ಕಾಂಜೀವರಂ ರೇಷ್ಮೆ ಸೀರೆ ಬ್ಲೌಸ್‌, ಬ್ರೈಡಲ್ ಮೇಕಪ್‌…. ಇತ್ಯಾದಿ ಬೇಕೇಬೇಕಲ್ಲವೇ?”

“ಇದೆಲ್ಲ ದುಬಾರಿ ಆಗ್ತಿದೆ….. ನೀನು ನೀಟಾಗಿ ಐರನ್‌ ಮಾಡಿದ ಖಾದಿ ಡ್ರೆಸ್‌ ಹಾಕಿಕೋ…. ಬುದ್ಧಿ ಜೀವಿ ಕಳೆ ಬರುತ್ತೆ, ನಾನು ವೆಸ್ಟ್ರನ್‌ ಧರಿಸುತ್ತೇನೆ. ಇರುವದರಲ್ಲಿ ಅಡ್ಜಸ್ಟ್ ಮಾಡಿದರಾಯ್ತು,” ಎಂದಳು.

ವಿಜಯ್‌ಗೆ ರೇಗಿತು, “ಆಹಾ…. ನನ್ನ ಡ್ರೆಸ್‌ ನಲ್ಲೇ ಎಲ್ಲಾ ಕಾಸ್ಟ್ ಕಟಿಂಗ್‌….. ನಿನಗೆ ಮಾತ್ರ. ಇಂಡೋವೆಸ್ಟರ್ನ್‌ ಡ್ರೆಸ್ ಆಗಬೇಕಾ? ಇದರ ಬದಲು ನಿನ್ನ ಬಳಿ ಇರುವ ಹೊಸ ರೇಷ್ಮೆ ಸೀರೆ ಉಟ್ಟುಕೋ….. ಬೇಕಾದಷ್ಟಾಯಿತು.”

ಯಾಕೋ ಮಾತು ಸರಿಹೋಗ್ತಿಲ್ಲ ಎಂದು ರಶ್ಮಿ ಕಾಫಿ ಮುಗಿಸಿ ಎದ್ದಳು. ವಿಜಯನೂ ತನ್ನ ಸೆಕ್ಷನ್‌ ಕಡೆ ನಡೆದ.

2 ದಿನ ಮೌನವಾಗಿಯೇ ಇದ್ದುಬಿಟ್ಟರು. ಮತ್ತೆ ವಿಜಯನೇ ಮಾತನಾಡಿಸಬೇಕಾಯಿತು. ಅಂದು ಶನಿವಾರ. ಅಳೆದು ಸುರಿದೂ ತಾನೇ ಫೋನಾಯಿಸಿ ಹೇಳಿದ, “ಹಲೋ ರಶ್ಮಿ, ಇಂದು ಶಾಪಿಂಗ್‌ಗೆ ಹೋಗೋಣವೇ?”

“ಯಾವ ಘನಂದಾರಿ ಶಾಪಿಂಗ್‌ ಅಂತೀನಿ…..”

“ಇನ್ನೂ ನೀನು ಕೋಪ ಬಿಟ್ಟಿಲ್ಲವೇ? ಐ ಆ್ಯಮ್ ಸಾರಿ,  ನಿನಗೆ ಯಾವ ಡ್ರೆಸ್‌ ಇಷ್ಟವೋ ಅದನ್ನೇ ಧರಿಸು.”

“ಏನೋ ಎಲ್ಲಾ ಬಿಟ್ಟಿ ಬರುತ್ತೆ ಅನ್ನೋ ಹಾಗೆ ಹೇಳಿದ್ದೀಯಾ? ಬ್ರೈಡಲ್ ವೆಸ್ಟರ್ನ್‌ ಡ್ರೆಸ್‌ ಅಂದ್ರೆ ಸುಮ್ನೆ ಅಲ್ಲ ಅಪ್ಪ….. 15-50 ಸಾವಿರ ಆಗುತ್ತಂತೆ…. ಊಟ, ಹಾಲ್‌,  ಡ್ರೆಸ್‌, ಇಬ್ಬರ ರಿಂಗ್‌, ತಾಂಬೂಲ ಸೇರಿಸಿ ಎಂಗೇಜ್‌ಮೆಂಟ್‌ ಖರ್ಚೇ 23 ಲಕ್ಷ ಬರುತ್ತೆ. ಎಲ್ಲಿಂದ  ಸುಧಾರಿಸುವುದು?”

“ಹೌದು ಹೌದು…. ಚಿನ್ನದ ಬೆಲೆ ಗಗನಕ್ಕೇರಿದೆ. ಸುಮಾರಾಗಿರುವ ಉಂಗುರ ಅಂದ್ರೂ ಇಬ್ಬರದೂ ಸೇರಿ ಅದೇ 1 ಲಕ್ಷ ಆಗುವ ಹಾಗೆ ಕಾಣ್ತಿದೆ……” ಎಂದ ವಿಜಯ್‌.

“ಆಹಾ….. ಒಂದು ಕಾಲದಲ್ಲಿ ನಾನು ವಜ್ರದುಂಗುರ ಇಲ್ಲದೆ ಲಗ್ನಪತ್ರಿಕೆಯೇ ಮಾಡಿಕೊಳ್ಳುವುದಿಲ್ಲ ಅಂತ ಶಪಥ ಮಾಡಿದ್ದೆ…… ಒಂದು ಸೂಪರ್ಬ್‌ ಇಂಡೊವೆಸ್ಟರ್ನ್‌ ಡ್ರೆಸ್‌ ಧರಿಸಲು ಬಯಸಿದ್ದೆ…. ಇಂದು ಈ ದಿನ ನನಗೆ ಈ ಗತಿ ಬಂತೆ? ಅದರಿಲಿ ಮೇಕಪ್‌, ಫೋಟೋಗ್ರಾಫರ್‌ಗೆ ಎಷ್ಟಾಗುತ್ತೆ ಅಂತ ವಿಚಾರಿಸಿದೆಯಾ?”

“ಅಯ್ಯೋ….. ಅದರ ಬಗ್ಗೆ ನಾನು ಯೋಚಿಸಿಯೇ ಇರಲಿಲ್ಲ….”

“2 ದಿನಗಳಿಂದ ನಿದ್ದೆ ಮಾಡುತ್ತಿದ್ದೆಯಾ? ನಾನು ಎಲ್ಲಾ ವಿಚಾರಿಸಿದ್ದೀನಿ ಬಿಡು. ಅಗ್ಗದ ಫೋಟೋಗ್ರಾಫರ್‌ ಅಂದ್ರೂ 50 ಸಾವಿರ  ಆಗುತ್ತೆ. ಸ್ಟಾಂಡರ್ಡ್‌ ಫೋಟೋಗ್ರಾಫರ್‌ ಕುರಿತ ಮಾತೇ ಬೇಡ. ಇನ್ನು ಮೇಕಪ್‌ ವಿಚಾರ….. ಮದುವೆಯ ಬ್ರೈಡಲ್ ಮೇಕಪ್‌ಗೆ 20 ಸಾವಿರ, ಎಂಗೇಜ್‌ಮೆಂಟ್‌ಗೆ 10 ಸಾವಿರ ಅಂತ ಫಿಕ್ಸ್ ಆಗಿದೆ.”

“ಅಯ್ಯೋ…. ಹೌದಾ?”  ಹಾವು ತುಳಿದವನಂತೆ ಬೆಚ್ಚಿ ಕೇಳಿದ ವಿಜಯ್‌, “ನೀನು ನೆನಪಿಸಿದ್ದು ಒಳ್ಳೆಯದಾಯ್ತು. ಮತ್ತೆ ಈ ಬಾಜಾಬಜಂತ್ರಿ, ಬ್ಯಾಂಡ್‌ಸೆಟ್‌ಗೆ ಇನ್ನೊಂದಷ್ಟು ಜಾಸ್ತಿ ಖರ್ಚಾಗುತ್ತೇನೋ?”

“ಅದರದ್ದೂ ವಿಚಾರಿಸಿ ಆಯ್ತು. ವರಪೂಜೆ ದಿನ ವರನನ್ನು ಓಪನ್‌ ಕಾರಿನಲ್ಲಿ ಕರೆಸುವುದು, ಮೆರವಣಿಗೆ ಮುಂದೆ ಪಟಾಕಿ ಸಿಡಿಸುವುದು ಇತ್ಯಾದಿ ಕ್ಯಾನ್ಸಲ್ ಮಾಡಿದರೂ 13 ಸಾವಿರಕ್ಕೆ ಕಡಿಮೆ ಆಗೋಲ್ಲ!” ಎಂದಳು ರಶ್ಮಿ.

“ಹಾಗಾದರೆ….. ನೀನು ಎಲ್ಲದಕ್ಕೂ ಸೇರಿಸಿ ಬಜೆಟ್‌ ರೆಡಿ ಮಾಡಿರಬೇಕು ಅಲ್ವೇ ರಶ್ಮಿ?” ವಿಜಯ್‌ ಉತ್ಸಾಹದಿಂದ ಹೇಳಿದ.

“ಅಯ್ಯೋ ಬಿಡು…. ಎಂಗೇಜ್‌ಮೆಂಟ್‌ ಅಥವಾ ಮದುವೆ ಒಂದನ್ನು ಮಾತ್ರ ನಾವು ಮಾಡಿಕೊಳ್ಳಲು ಸಾಧ್ಯ……”

“ಒಂದು ಕೆಲಸ ಮಾಡೋಣ, ಸುಮಾರಾಗಿ ಒಂದು ಎಂಗೇಜ್‌ಮೆಂಟ್‌ ಫಂಕ್ಷನ್‌ ಅಂತ ಮಾಡಿಕೊಳ್ಳೋಣ. ಅದಾದ ಮೇಲೆ ಒಂದೇ ಮನೆಯಲ್ಲಿ ಸಂಸಾರ ಶುರು ಮಾಡೋಣ. ಬಾಡಿಗೆ, ಊಟದ ಖರ್ಚು ಇತ್ಯಾದಿ ಎಷ್ಟೋ ಉಳಿತಾಯ ಆಗುತ್ತೆ. ನಮ್ಮ ಬಳಿ 10-12 ಲಕ್ಷ ಒಟ್ಟುಗೂಡಿದಾಗ ಗ್ರಾಂಡಾಗಿ ಮದುವೆ ಮಾಡಿಕೊಳ್ಳೋಣ.”

“ಆಹಾ…. ಎಂಥ ಅದ್ಭುತ ಪ್ಲಾನಿಂಗ್‌!” ವ್ಯಂಗ್ಯವಾಗಿ ಹೇಳಿದಳು ರಶ್ಮಿ, “ಮೊದಲು ನಿನ್ನ ಸಂಪ್ರದಾಯಸ್ಥ ತಾಯಿ ತಂದೆಯರನ್ನು ವಿಚಾರಿಸಿ ಈ ಯೋಜನೆ ಬಗ್ಗೆ ಆಲೋಚಿಸು.”

“ಹಾಗಾದರೆ ಏನು ಮಾಡುವುದು ಅಂತ ನೀನೇ ಹೇಳು…. ನಮ್ಮಿಬ್ಬರ ಹಣ ಒಟ್ಟುಗೂಡಿಸಿದರೂ ಖಂಡಿತಾ 10 ಲಕ್ಷ ಕೂಡ ಆಗೋಲ್ಲ….” ವಿಜಯ್‌ ಬೇಸರದಿಂದ ಹೇಳಿದ.

“ಎಂಗೇಜ್‌ಮೆಂಟ್‌ ಮನೆ ಹಾಳಾಯ್ತು…. ಡೈರೆಕ್ಟ್ ಆಗಿ ಮದುವೆ ಆಗಿಬಿಡೋಣ. ಒಟ್ಟಿಗೆ ವಾಸ ಮಾಡಲು ಆರಂಭಿಸಿದರೆ ಎಷ್ಟೋ ಖರ್ಚು ಕಡಿಮೆ ಆಗುತ್ತೆ…. ಮಧುಚಂದ್ರ ಮರೆತು ಬಿಡೋದೇ ಲೇಸು, ಮದುವೆ ಅಂತ ಆದ್ರೆ ಸಾಕಾಗಿದೆ!” ಎಂದಳು ರಶ್ಮಿ.

“ಒಂದು ಗ್ರಾಂಡ್‌ ಕಾರು ಖರೀದಿಸೋಣ ಅಂತ ಆಸೆಪಡ್ತಿದ್ದೆ. ಈ ರೀತಿ ಮದುವೆ ನಂತರ ನಿಂಗೆ ಸರ್‌ಪ್ರೈಸ್‌ ಕೊಡೋಣ ಅಂತಿದ್ದೆ…. ಬ್ಯಾಂಕಿನಿಂದ ತುಸು ಲೋನ್‌  ತೆಗೆದುಕೊಂಡರೆ ಅಡ್ಜಸ್ಟ್ ಆಗುತ್ತೆ…. ಈಗ ಎಲ್ಲಾ ಹೋಯ್ತು ಬಿಡು.”

“ಸರಿ….. ಒಂದು ಕೆಲಸ ಮಾಡು, ಮಧ್ಯಾಹ್ನ 2 ಗಂಟೆ ಹೊತ್ತಿಗೆ ಶಾಪಿಂಗ್‌ ಕಾಂಪ್ಲೆಕ್ಸ್ ಹತ್ತಿರ ಬಾ, ಏನಾದರೂ ಬೇರೆ ವ್ಯವಸ್ಥೆ ಆಗುತ್ತಾ ನೋಡೋಣ,” ರಶ್ಮಿ ಹೇಳಿದಾಗ ವಿಜಯ್‌ ಕೋಲೆ ಬಸವನಂತೆ ಗೋಣಾಡಿಸಿದ.

ಇವರು ಶಾಪಿಂಗ್‌ ಮಾಲ್‌ನಲ್ಲಿ ಭೇಟಿಯಾದಾಗ, ಆಕಸ್ಮಿಕವಾಗಿ ರಮೇಶ್‌ ಸಹ ಅಲ್ಲಿಗೆ ಬಂದ. ಮೂವರೂ ಫುಡ್‌ ಕೋರ್ಟ್‌ಗೆ ಹೋಗಿ ಕುಳಿತರು. ಅವರು ಮೌನವಾಗಿ ಕುಳಿತಿರುವುದನ್ನು ಕಂಡು ರಮೇಶ್‌ ತಾನೇ ಆರಂಭಿಸಿದ, “ಅಯ್ಯೋ….. ಇದೇನಾಗಿ ಹೋಯ್ತು ಅಂತ ತಲೆ ಮೇಲೆ ಆಕಾಶ ಬಿದ್ದರ ಹಾಗೆ ಜೋಲು ಮೋರೆ ಹಾಕಿಕೊಂಡು ಕುಳಿತಿದ್ದೀರಿ…..”

“ಅಯ್ಯೋ….. ಏನು ಹೇಳೋದೋ ಹೋಗಪ್ಪ. ನಮ್ಮಿಬ್ಬರ ಮನೆಯವರೂ ಮದುವೆಗೆ ಅಂತೂ ಒಪ್ಪಿದರು. ಆದರೆ ಖರ್ಚು ಮಾಡಲು ಬಿಲ್‌ಕುಲ್ ‌ತಯಾರಿಲ್ಲ. ನಮ್ಮ ಬಳಿ ಇರುವ ಅಲ್ಪ ಸ್ವಲ್ಪದ ಉಳಿತಾಯದಲ್ಲಿ ಕಲ್ಯಾಣ ಮಂಟಪಕ್ಕೆ ಹೋಗಿ, ನಾಲ್ಕಾರು ಜನರನ್ನು ಕರೆಸಿ ಮದುವೆ ಮಾಡಿಕೊಳ್ಳೋದು ಸಾಧ್ಯವೇ ಇಲ್ಲ,” ವಿಜಯ್‌ ಬೇಸರದಲ್ಲಿ ಗೊಣಗಿದ.

ವಿಜಯನ ಮಾತಿಗೆ ಯೋಚಿಸಿ ನುಡಿದ ರಮೇಶ್‌, “ನೀನು ಹೇಳುವುದೂ ಒಂದು ವಿಧದಲ್ಲಿ ಸರಿಯಾಗೇ ಇದೆ. ಪ್ರತಿ ಕಿಲೋ ಈರುಳ್ಳಿ ಬೆಲೆ 75/, ಬೆಳ್ಳುಳ್ಳಿ 200/, ಆಲೂ 50/ ಅಂತ ಆದರೆ ಏನನ್ನು ಕೊಂಡು ಏನು ಮಾಡೋದು? ನಿಮ್ಮಿಬ್ಬರ ಮನೆಗಳಲ್ಲೂ ನಾನ್‌ವೆಜ್‌ ಇಲ್ಲದ್ದರಿಂದ ಬಚವಾದಿರಿ, ಮದುವೆಗೆ ಅದನ್ನೂ ಮಾಡಿಸಬೇಕಿದ್ದರೆ ಇನ್ನೂ ತೋಪಾಗಿ ಹೋಗುತ್ತಿತ್ತು.

“ಒಂದು ಕೆಲಸ ಮಾಡು, ನಿನ್ನ ಮನೆಯಿಂದ ಮದುವೆ ದಿಬ್ಬಣ ಹೊರಡಿಸಿ ನೇರ ರಶ್ಮಿ ಮನೆಗೆ ಬಂದುಬಿಡು, ಹೋಟೆಲ್ ‌ಹಾಲ್ ಇತ್ಯಾದಿ ಯೋಚನೆ ಮಾಡಲೇಬೇಡಿ. ಎಲ್ಲಕ್ಕೂ ಉತ್ತಮ ಐಡಿಯಾ ಎಂದರೆ ಮದುವೆ ಮುಹೂರ್ತ ಏಕಾದಶಿ ದಿನ ಇಟ್ಟುಕೊಳ್ಳಿ. ಯಾರಿಗೂ ಊಟ ಹಾಕಿಸುವ ಬಾಬತ್ತೇ ಇರೋಲ್ಲ……”

“ಅದು ಹೇಗೆ?” ಇಬ್ಬರೂ ಒಟ್ಟಿಗೆ ಆಶ್ಚರ್ಯದಿಂದ ಕೇಳಿದರು. “ಆ ದಿನ ಊಟ ಹಾಕಿಸುವ ಗೋಜೇ ಇಲ್ಲ. 1-1 ಪೇಪರ್‌ ಪ್ಲೇಟ್‌ನಲ್ಲಿ ಸಜ್ಜಿಗೆ ಉಪ್ಪಿಟ್ಟು ಹಾಕಿಕೊಟ್ಟರೆ ಮುಗಿದೇ ಹೋಯಿತು. ಎಲ್ಲಾ ತರಕಾರಿ, ಇನ್ನಿತರ ಎಷ್ಟೋ ಬೆಣ್ಣೆ, ತುಪ್ಪ, ಎಣ್ಣೆ, ಪನೀರ್‌ಖರ್ಚು ಉಳಿದೇ ಹೋಯ್ತು. ಈ ರೀತಿ `ಏಕಾದಶಿ’ ವ್ರತದಿಂದ ಎಷ್ಟೋ ಲಕ್ಷ ಖರ್ಚು ಉಳಿಸಬಹುದು, ಜನರೂ ವ್ರತದ ಆಹಾರ ಸೇವಿಸಿ ಧನ್ಯರಾಗುತ್ತಾರೆ.”

“ಸರಿ, ಹೋಟೆಲ್ ‌ಊಟ ತಿಂಡಿ ಬಿಟ್ಟು ಉಳಿದ ಖರ್ಚಿದೆಯಲ್ಲ….. ಅದಕ್ಕೆ ಏನು ಮಾಡುವುದು?”

“ಮದುವೆಗೆ ಬೇಕಾದ ಡ್ರೆಸ್‌, ಕೃತಕ ಒಡವೆಗಳನ್ನು ಬಾಡಿಗೆಗೆ ಪಡೆದು ಸಂಜೆ ಹಿಂದಿರುಗಿಸಿ. ಎಷ್ಟೋ ಲಕ್ಷಗಳ ಉಳಿತಾಯವಾಯ್ತು. ಮೇಕಪ್‌, ಫೋಟೋಗ್ರಾಫರ್‌ಗೆ ಖರ್ಚು ಮಾಡದೆ ಬೇರೆ ದಾರಿ ಇಲ್ಲ. ಜೀವನ ಪೂರ್ತಿ ಆಮೇಲೆ ಆಲ್ಬಂ ನೋಡಿಕೊಳ್ಳಬಹುದಲ್ವಾ?”

ವಿಜಯ್‌ ಇನ್ನೂ ಯೋಚಿಸುತ್ತಿರುವುದನ್ನು ಕಂಡು ರಮೇಶ್‌ ಮತ್ತೆ ಕೇಳಿದ, “ಇನ್ನೇನು ಯೋಚನೆ? ಎಲ್ಲಾ ಪರಿಹಾರ ಆಯ್ತಲ್ಲ?”

“ಹೀಗೆ ಎಲ್ಲಾ ಖರ್ಚೂ ಈ ಮದುವೆ ಗಾಟೆಯಲ್ಲೇ ಕಳೆದುಹೋದರೆ ನಮ್ಮ ಹೊಸ ಸಂಸಾರಕ್ಕೆ ಪಾತ್ರೆ ಪಡಗ, ಗೃಹೋಪಕರಣ ಇತ್ಯಾದಿಗಳು ಎಲ್ಲಿಂದ ಬರಬೇಕು? ರೆಂಟ್‌ ಅಗ್ರಿಮೆಂಟ್‌, ಗ್ಯಾಸ್‌ ಸಿಲಿಂಡರ್‌, ವಾಷಿಂಗ್‌ ಮೆಶೀನ್‌, ಮಿಕ್ಸಿ, ಫ್ರಿಜ್‌ ಇಲ್ಲದೆ ಹೊಸ ಸಂಸಾರ ಹೂಡುವುದು ಹೇಗೆ?” ವಿಜಯ್‌ ರಶ್ಮಿಯವರ ಖರ್ಚು ಹನುಮಂತನ ಬಾಲವಾಗಿತ್ತು.

“ಹಾಗಿದ್ದರೆ ದೇವಾಲಯದಲ್ಲಿ ತಾಳಿ ಕಟ್ಟಿ, ರೆಜಿಸ್ಟರ್ಡ್‌ ಆಫೀಸಿನಲ್ಲಿ ಸೈನ್‌ ಹಾಕಿ ಹಾರ ಬದಲಾಯಿಸಿಕೊಳ್ಳಿ. ನಿಮ್ಮ ಬಳಿ ಇರುವ ಹಣದಲ್ಲಿ ಸಂಸಾರಕ್ಕೆ ಸಾಧನ ಕೊಂಡುಕೊಳ್ಳಿ.”

“ಮತ್ತೆ, ನಾನು ಇಷ್ಟು ದಿನಗಳಿಂದ ಕಾಣುತ್ತಿದ್ದ ಕನಸು… ಎಂಗೇಜ್‌ಮೆಂಟ್‌, ವರಪೂಜೆ, ಮುಹೂರ್ತ, ವೈಭವದ ಮದುವೆ, ಆರತಕ್ಷತೆ….. ಎಲ್ಲಾ ಮರೆತುಬಿಡಬೇಕೇ…..?”

“ಎಲ್ಲದರ ಬೆಲೆ ಗಗನಕ್ಕೇರಿರುವಾಗ ಇದನ್ನೆಲ್ಲ ಮರೆತು ಸರಳ ಮದುವೆ ಆಗೋದೊಂದೋ ದಾರಿ,” ವಿಜಯ್‌ ಹೇಳಿದಾಗ ಒಪ್ಪಲೇಬೇಕಾಯಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ