ಇತ್ತೀಚೆಗಂತೂ ಐಸ್‌ಕ್ರೀಂ ಕುಲ್ಛಿ ಎರಡೂ ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲದೆ ವರ್ಷವಿಡೀ ಸವಿಯಬಹುದಾದ ಡೆಸರ್ಟ್ ಎನಿಸಿದೆ. ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರ ಅಚ್ಚುಮೆಚ್ಚು ಈ ಐಸ್‌ಕ್ರೀಂ. ಹಿಂದೆಲ್ಲ ಕೇವಲ ಕೆಲವೇ ಪ್ಲೇವರ್‌ಗಳಲ್ಲಿ ಐಸ್‌ಕ್ರೀಂ ಕುಲ್ಛಿ ಲಭಿಸುತ್ತಿತ್ತು, ಆದರೆ ಈಗ ಬಗೆ ಬಗೆಯ ಫ್ಲೇವರ್ಸ್, ಹಣ್ಣುಗಳ ರುಚಿಯಲ್ಲಿ ಇವು ಲಭ್ಯ. ಮಾರುಕಟ್ಟೆಯಿಂದ ಮತ್ತೆ ಮತ್ತೆ ಕೊಳ್ಳುವುದರಿಂದ ಇವು ತುಂಬಾ ದುಬಾರಿ ಆಗುತ್ತವೆ. ಬದಲಿಗೆ ನಾವು ಮನೆಯಲ್ಲಿ ಇದನ್ನು ಪ್ರೀತಿಯಿಂದ ತಯಾರಿಸಿದರೆ ಖಂಡಿತಾ ದುಬಾರಿ ಆಗೋಲ್ಲ, ಜೊತೆಗೆ ಆರೋಗ್ಯಕ್ಕೆ ಪೂರಕ ಸಹ. ಬನ್ನಿ, ಮಾರ್ಕೆಟ್‌ನಲ್ಲಿ ಲಭ್ಯವಿರುವಂಥ ಅದೇ ಗುಣಮಟ್ಟದ ಐಸ್‌ಕ್ರೀಂ, ಕುಲ್ಛಿ ಹೇಗೆ ಮನೆಯಲ್ಲೇ ತಯಾರಿಸಬಹುದೆಂದು ನೋಡೋಣ :
ಬೇಸಿಕ್ ಐಸ್‌ಕ್ರೀಂ
ಯಾವುದೇ ಫ್ಲೇವರ್ಡ್ ಐಸ್‌ಕ್ರೀಂ ಸೆಟ್ ಮಾಡುವ ಮೊದಲು ಬೇಸಿಕ್ ಐಸ್‌ಕ್ರೀಂ ತಯಾರಿಸಿಕೊಳ್ಳಬೇಕು. ಇದನ್ನು ತಯಾರಿಸಲು ಅರ್ಧ ಲೀ. ಗಟ್ಟಿ ಫುಲ್ ಕ್ರೀಂ ಹಾಲಿಗೆ, 4 ಚಮಚ ಬೇಕಿಂಗ ಪೌಡರ್, 4 ಚಮಚ ಕಾರ್ನ್‌ಫ್ಲೋರ್, ಅರ್ಧ ಸಣ್ಣ ಚಮಚ ಕಸ್ಟಡ್ ಪೌಡರ್, 10-12 ಚಮಚ (ರುಚಿಗೆ ತಕ್ಕಂತೆ) ಪುಡಿಸಕ್ಕರೆ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಇದನ್ನು ಚೆನ್ನಾಗಿ ಕುದಿಸಿ, ಕೆಳಗಿಳಿಸಿ ಆರಲು ಬಿಡಿ. ಮಧ್ಯೆ ಮಧ್ಯೆ ಕದಡುತ್ತಾ, ಕೆನೆ ಕಟ್ಟದಂತೆ ಜಾಗ್ರತೆ ವಹಿಸಿ.
ಚಾಕಲೇಟ್ ಐಸ್‌ಕ್ರೀಂಗಾಗಿ ಮೇಲಿನ ಬೇಸಿಕ್ ಐಸ್‌ಕ್ರೀಂ ಮಿಶ್ರಣದೊಂದಿಗೆ 4 ಚಮಚ ಕೋಕೋ ಪುಡಿ, 2 ಚಮಚ ಡ್ರಿಂಕಿಂಗ್‌ಚಾಕಲೇಟ್, 50 ಗ್ರಾಂ ಡಾರ್ಕ್ ಚಾಕಲೇಟ್ ಸೇರಿಸಿ, ಇವೆಲ್ಲ ಚೆನ್ನಾಗಿ ಕರಗುವವರೆಗೂ ಮಂದ ಉರಿಯಲ್ಲಿ ಒಲೆ ಮೇಲಿರಿಸಿ ಕುದಿಸಬೇಕು, ನಂತರ ಕೆಳಗಿಳಿಸಿ ಆರಲು ಬಿಡಿ. ಈ ಮಿಶ್ರಣ ಸಂಪೂರ್ಣ ತಣ್ಣಗಾದಾಗ, ಇದನ್ನು ಫ್ರೀಝರ್‌ನಲ್ಲಿ ಗರಿಷ್ಠ ಕೂಲಿಂಗ್‌ಪಾಯಿಂಟ್‌ನಲ್ಲಿಟ್ಟು 8-10 ಗಂಟೆಗಳ ಕಾಲ ಸೆಟ್ ಆಗಲು ಬಿಡಿ. ನಂತರ ಇದನ್ನು ಫ್ರಿಜ್‌ನಿಂದ ಹೊರ ತೆಗೆಯಿರಿ. 50 ಗ್ರಾಂ ವಿಪ್ಡ್ ಕ್ರೀಂ ಹಾಕಿ ಐಸ್‌ಕ್ರೀಂ ಬೀಟರ್‌ನಿಂದ 15-20 ನಿಮಿಷ ಬೀಟ್ ಮಾಡಿ. ಹೀಗೆ ಮಾಡುವುದರಿಂದ ಅದು 3 ಪಟ್ಟು ಹಿಗ್ಗುತ್ತದೆ.
ಇದೀಗ ನಿಮ್ಮ ಬೇಸಿಕ್ ಐಸ್‌ಕ್ರೀಂ ರೆಡಿ ಆಯ್ತು. ಇದಕ್ಕೆ ಎಡಿಬಲ್ ಕಲರ್ಸ್, ಎಸೆನ್ಸ್ ಹಾಕಿ ನಂತರ ಬಯಸಿದ ಫ್ಲೇವರ್‌ನ ಐಸ್‌ಕ್ರೀಂನ್ನು ನೀವು ತಯಾರಿಸಬಹುದು. ಬಣ್ಣ ಎಸೆನ್ಸ್ ಬದಲಿಗೆ ನೀವು ರೆಡಿಮೇಡ್ ಲಭ್ಯವಿರುವ ಫ್ಲೇವರ್‌ನ ಕ್ರಶ್ ಯಾ ಸಿರಪ್ ಸಹ ಬಳಸಬಹುದು.
ಫ್ಲೇವರ್ ಹೀಗೆ ತಯಾರಿಸಿ
ನೀವು ಯಾ ಫ್ಲೇವರ್‌ನ ಐಸ್‌ಕ್ರೀಂ ತಯಾರಿಸ ಬಯಸುವಿರೋ, ಅದರ ಬಣ್ಣ ಮತ್ತು ಎಸೆನ್ ನ್ನು ರೆಡಿಮೇಡ್ ಖರೀದಿಸಿ. ಆದಷ್ಟೂ ದ್ರವ ರೂಪದ ಬಣ್ಣವನ್ನೇ ಆರಿಸಿ, ಅದು ಸುಲಭವಾಗಿ ಬೇಸ್‌ನಲ್ಲಿ ವಿಲೀನಗೊಳ್ಳುತ್ತದೆ.
ನೀವು ಬಯಸಿದ ಬಣ್ಣ ಎಸೆನ್ಸ್ ಬೆರೆಸಿ 5-10 ನಿಮಿಷ ಚೆನ್ನಾಗಿ ಬೀಟ್ ಮಾಡಿ. ಆಗ ಅದು ಬೇಸ್ ಮಿಶ್ರಣದಲ್ಲಿ ಸುಲಭವಾಗಿ ವಿಲೀನಗೊಳ್ಳುತ್ತದೆ. ಚಮಚದಿಂದ ಕದಡುವುದರಿಂದ ಬಣ್ಣ ಎಸೆನ್ಸ್ ಸುಲಭವಾಗಿ ವಿಲೀನವಾಗದು.
ಅರ್ಧ ಲೀ. ಹಾಲಿನ ಐಸ್‌ಕ್ರೀಂಗೆ 3-4 ಹನಿಗಿಂತ ಹೆಚ್ಚಾಗಿ ಫ್ಲೇವರ್ ಹಾಕಬಾರದು. ಕೇಸರಿ, ವೀಳ್ಯದೆಲೆ, ಗುಲಾಬಿ ಇತ್ಯಾದಿ ಎಸೆನ್ಸ್ ಬಹಳ ತೀಕ್ಷ್ಣವಾಗಿರುತ್ತದೆ, ಹೀಗಾಗಿ ಇವನ್ನು 1-2 ಹನಿ ಅಷ್ಟೇ ಹಾಕಿ. ಎಸೆನ್ಸ್ ಪ್ರಮಾಣ ಹೆಚ್ಚಿದರೆ ಐಸ್‌ಕ್ರೀಂ ರುಚಿ ಹದಗೆಡುತ್ತದೆ.
ಬಟರ್ ಸ್ಕಾಚ್, ಕೇಸರಿ, ಟೂಟಿಫ್ರೂಟಿ, ಪಿಸ್ತಾ, ನಟ್ಸ್ ಐಸ್‌ಕ್ರೀಂಗಳಲ್ಲಿ ಡ್ರೈಫ್ರೂಟ್ಸ್, ಸ್ಕಾಚ್, ಗುಲಾಬಿ ಇತ್ಯಾದಿಗಳನ್ನು ಐಸ್‌ಕ್ರೀಂ ಅರ್ಧ ಸೆಟ್ ಆದಮೇಲೆಯೇ ಹಾಕಬೇಕು. ಇದನ್ನು ಚಮಚದಿಂದ ನಿಧಾನವಾಗಿ ಕದಡುತ್ತಾ ಬೆರೆಸಬೇಕು. ನೀವು ಇವನ್ನು ಇಡಿಯಾಗಿ ಹಾಕುವ ಬದಲು ತುಸು ಕ್ರಶ್ ಮಾಡಿ ಹಾಕಿರಿ.
ಕೋಕೋನಟ್ ಫ್ಲೇವರ್‌ಗಾಗಿ ಎಳನೀರಿನ ಜೊತೆ ಅದರ ತೆಳ್ಳನೆಯ ಬಿಳಿ ತಿರುಳನ್ನೂ ಸೇರಿಸಿ ರುಬ್ಬಿಕೊಂಡು ಇದಕ್ಕೆ ಬೆರೆಸಿಕೊಳ್ಳಿ. ಇದರಿಂದ ಐಸ್‌ಕ್ರೀಂನಲ್ಲಿ ತೆಂಗಿನ ಸಹಜ ರುಚಿ ಬರುತ್ತದೆ.
ನೇರಳೆ, ಸೀಬೆ, ಸಪೋಟ, ಲೀಚಿ ಹಣ್ಣುಗಳಂಥ ಬೀಜಸಹಿತ ಹಣ್ಣುಗಳ ರುಚಿಗಾಗಿ, ಮೊದಲು ಇದರ ತಿರುಳಿನಿಂದ ಬೀಜ ಬೇರ್ಪಡಿಸಿ ಸೋಸಿಕೊಳ್ಳಿ. ನಂತರ ಅದನ್ನು ಐಸ್‌ಕ್ರೀಮಿಗೆ ಬೆರೆಸಿರಿ. ಅಂಜೂರ ಮತ್ತು ಬಾದಾಮಿ ಫ್ಲೇವರ್‌ಗಾಗಿ, ಇದನ್ನು ಮೊದಲೇ 5-6 ಗಂಟೆ ಕಾಲ ಕಾದಾರಿದ ಹಾಲಲ್ಲಿ ನೆನೆಸಿ ತರಿತರಿಯಾಗಿ ರುಬ್ಬಿ, ಐಸ್‌ಕ್ರೀಂ ಬೇಸ್‌ನ ಹಂತದಲ್ಲಿ ಅದಕ್ಕೆ ಬೆರೆಸಿ ಕದಡಿಕೊಂಡು ರೀಸೆಟ್ ಮಾಡಿ.
ಫ್ರೂಟ್ ಕಾಕ್‌ಟೇಲ್‌ನಂಥ ಮಿಕ್ಸ್ ಫ್ಲೇವರ್ ಐಸ್‌ಕ್ರೀಂಗಾಗಿ
ಪ್ಲೇನ್ ವೆನಿಲಾಗೆ ಆರೆಂಜ್, ಸ್ಟ್ರಾಬೆರಿ, ಮ್ಯಾಂಗೋ ಕ್ರಶ್ ಜೊತೆಗೆ ಗೋಡಂಬಿ, ಬಾದಾಮಿ, ಪಿಸ್ತಾಗಳಂಥ ನಟ್ಸ್ ಬೆರೆಸಿರಿ. ಆಗ ನಿಮ್ಮ ಐಸ್‌ಕ್ರೀಂ ರುಚಿ ಹೆಚ್ಚುತ್ತದೆ.
ಸ್ವಾದಿಷ್ಟ ಕುಲ್ಛಿಗಾಗಿ
ಕುಲ್ಛಿಗಾಗಿ 2 ಲೀ. ಗಟ್ಟಿ ಹಾಲನ್ನು ಕಾಯಿಸಿದ ಮೇಲೆ ಮಂದ ಉರಿಯಲ್ಲಿ 10 ನಿಮಿಷ ಕುದಿಸಿರಿ. ನಂತರ ಅದನ್ನು ಕದಡುತ್ತಾ ಅದು ಅರ್ಧದಷ್ಟು ಹಿಂಗುವವರೆಗೂ ಕುದಿಸುತ್ತಿರಿ. 200 ಗ್ರಾಂ ಸಕ್ಕರೆ ಬೆರೆಸಿ ಪುನಃ 10 ನಿಮಿಷ ಕುದಿಸಿ, ಕೆಳಗಿಳಿಸಿ. ಇದು ಚೆನ್ನಾಗಿ ಆರಲಿ. ಕೇಸರಿ ಕುಲ್ಛಿಗಾಗಿ ಕುದಿ ಹಾಲಿಗೆ ಹಾಲಲ್ಲಿ ನೆನೆಸಿದ ಕೇಸರಿ ಬೆರೆಸಿರಿ. ರಬಡಿ (ಗಟ್ಟಿ ಕೆನೆ) ಕುಲ್ಛಿಗಾಗಿ ಹೀಗೆ ಸಿದ್ಧಗೊಂಡ ಕೋಲ್ಡ್ ಹಾಲಿಗೆ ರಬಡಿ ಬೆರೆಸಬೇಕು. ಕೊನೆಯಲ್ಲಿ ಮಿಶ್ರಣ ಸಂಪೂರ್ಣ ಕೋಲ್ಡ್ ಆದಾಗ, ಇದಕ್ಕೆ ರೋಸ್ ಎಸೆನ್ಸ್, ತುಂಡರಿಸಿದ ದ್ರಾಕ್ಷಿ, ಪಿಸ್ತಾ, ಬಾದಾಮಿ, ಗೋಡಂಬಿ ಬೆರೆಸಿರಿ. ಹೀಗೆ ರೆಡಿಯಾದ ಮಿಶ್ರಣವನ್ನು ಕುಲ್ಛಿ ಅಚ್ಚುಗಳಿಗೆ ತುಂಬಿಸಿ, ಫ್ರೀಝರಿನಲ್ಲಿಟ್ಟು ಸೆಟ್ ಮಾಡಿ.
ಕೋಲ್ಡ್ ಹಾಲಿಗೆ ಮ್ಯಾಂಗೋ, ಗುಲ್ಕಂದ್, ಫ್ರೂಟ್ ಜ್ಯಾಂ ಇತ್ಯಾದಿ ಫ್ಲೇವರ್ ಬೆರೆಸಿಕೊಂಡು ಬೇಕಾದ ಕುಲ್ಛಿ ತಯಾರಿಸಿ. ಬಿಸಿ ಹಾಲಿಗೆ ಎಂದೂ ಎಸೆನ್ಸ್, ಹಣ್ಣಿನ ತಿರುಳು ಬೆರೆಸಬೇಡಿ. ಇದು ಒಡೆದೀತು.
ಒಂದಿಷ್ಟು ಕಿವಿಮಾತು
ಐಸ್‌ಕ್ರೀಂ ಸೆಟ್ ಮಾಡಲು ಪ್ಲಾಸ್ಟಿಕ್ ಅಥವಾ ಅಲ್ಯುಮಿನಿಯಂನ ಮುಚ್ಚಳಗಳಂಥ ಕಂಟೇನರ್ ಬಳಸಿಕೊಳ್ಳಿ. ಕಂಟೇನರ್‌ಗೆ ಮುಚ್ಚಳ ಹಾಕುವುದರಿಂದ ಮೊದಲು ಸಿಲ್ವರ್ ಫಾಯಿಲ್‌ನಿಂದ ಕವರ್ ಮಾಡಿಬಿಡಿ.
ಐಸ್‌ಕ್ರೀಂ ಕಂಟೇನರ್‌ನ್ನು ಮತ್ತೆ ಮತ್ತೆ ಓಪನ್ ಮಾಡಿ ನೋಡಲು ಹೋಗಬೇಡಿ. ಇದರಿಂದಾಗಿ ಅದಕ್ಕೆ ಗಾಳಿ ತುಂಬಿಕೊಳ್ಳುತ್ತದೆ. ಇದರಿಂದ ಐಸ್‌ಕ್ರೀಂ ಮೇಲೆ ಐಸ್ ಗಡ್ಡೆ ಕಟ್ಟಿಕೊಳ್ಳುತ್ತದೆ.
ಅರ್ಧ ಸೆಟ್ ಆದ ಐಸ್‌ಕ್ರೀಂನ್ನು ಮತ್ತೆ ಗೊಟಾಯಿಸುವುದರಿಂದ ಅದು ಬಹಳಷ್ಟು ಸಾಫ್ಟ್ ರುಚಿಕರ ಆಗುತ್ತದೆ.
ಐಸ್‌ಕ್ರೀಂ ಸೆಟ್ ಆಗಲು ಅದನ್ನು ಎತ್ತಿರಿಸುವಾಗ, ಫ್ರಿಜ್ ತಾಪಮಾನ ಅತ್ಯಧಿಕ ಆಗಿರಲಿ. ಹೀಗೆ ಸೆಟ್ ಆದ ಮೇಲೆ 23 ಡಿಗ್ರಿ ಮಾಡಿ ಬಿಡಿ. ಇದರಿಂದಾಗಿ ಸರ್ವ್ ಮಾಡುವಾಗ ಸ್ಕೂಪ್ ಸಲೀಸಾಗಿ ಹೊರಬರುತ್ತದೆ. ಅಧಿಕ ತಾಪಮಾನದಲ್ಲಿ ಸೆಟ್ ಆದ ಐಸ್‌ಕ್ರೀಂ ಅತ್ಯಧಿಕ ಕಠೋರ ಆಗಬಹುದು, ಇದರಿಂದ ಸರ್ವ್ ಮಾಡುವಾಗ ಸ್ಕೂಪ್ ಒಡೆಯುವು ಅವಕಾಶವಿದೆ.
ಹೆಚ್ಚು ಜನರಿಗೆ ಐಸ್‌ಕ್ರೀಂ ಸರ್ವ್ ಮಾಡಬೇಕಾ? ಆಗ ಸ್ಕೂಪ್‌ರನ್ನು ಸದಾ ಬಿಸಿ ನೀರಲ್ಲಿ ಅದ್ದಿರಿಸಬೇಕು. ಇದರಿಂದಾಗಿ ಸ್ಕೂಪರ್‌ಬೇಗ, ಸಲೀಸಾಗಿ ಹೊರಬರುತ್ತದೆ.
ಕುಲ್ಛಿಯಲ್ಲಿ ಉತ್ತಮ ಲುಕ್ಸ್ ತರಲು, ಕುಲ್ಛಿ ಅಚ್ಚಿನ ಜೊತೆಗೆ, ರೆಡಿಮೇಡ್ ಸಿಗುವ ಬಿದಿರಿನ ತೆಳು ಅಚ್ಚು ಸಹ ಕೊಳ್ಳಿರಿ.
ಸರ್ವ್ ಮಾಡುವಾಗ ಮುಚ್ಚಳದ ಅಚ್ಚುಗಳನ್ನು, 1 ನಿಮಿಷ ಕೊಳಾಯಿ ನೀರಿನಡಿ ಹಿಡಿಯಿರಿ. ನಂತರ ಬಿದಿರಿನ ಕಡ್ಡಿಗಳಿಂದ ಕದಡಿಕೊಳ್ಳಿ. ಆಗ ಕುಲ್ಛಿ ಸುಲಭವಾಗಿ ಹೊರಬರುತ್ತದೆ. ಇದನ್ನು ಪ್ಲೇಟ್‌ನಲ್ಲಿ ಇರಿಸಿ ಸರ್ವ್ ಮಾಡಿ.
ಕ್ಯಾಲಿಫೋರ್ನಿಯಾ ವಾಲ್‌ನಟ್ ಮಿಲ್ಕ್ ಕುಲ್ಛಿ
ಸಾಮಗ್ರಿ : 1 ಕಪ್ ಖೋವಾ, 4 ಕಪ್ ಕ್ಯಾಲಿಫೋರ್ನಿಯಾ ವಾಲ್‌ನಟ್ ಮಿಲ್ಕ್, 1 ಕಪ್ ಕೆಸ್ಟರ್ ಶುಗರ್, ತುಸು (ಹಾಲಲ್ಲಿ ನೆನೆಸಿದ್ದು), ಕೇಸರಿ ಎಳೆ, ತುಸು ಹಳದಿ ಬಣ್ಣ, ಟಾಪಿಂಗ್‌ಗಾಗಿ ಅರ್ಧ ಕಪ್ ಕ್ಯಾಲಿಫೋರ್ನಿಯಾ ವಾಲ್‌ನಟ್ಸ್, ಹೆಚ್ಚಿದ ಹಣ್ಣಿನ ಹೋಳು.
ವಿಧಾನ : ದಪ್ಪ ತಳದ ಪಾತ್ರೆಯಲ್ಲಿ ವಾಲ್‌ನಟ್ ಮಿಲ್ಕ್ ಕಾಯಿಸಿ, ಅರ್ಧದಷ್ಟಾಗುವವರೆಗೂ ಹಿಂಗಿಸಿ. ಇದಕ್ಕೆ ಖೋವಾ, ಸಕ್ಕರೆ, ಕೇಸರಿ ಎಸಳು, ಹಳದಿ ಬಣ್ಣ, ತುಂಡರಿಸಿದ ವಾಲ್ ನಟ್ಸ್ ಹಾಕಿ ಕೈಯಾಡಿಸುತ್ತಿರಿ, ಕೆಳಗಿಳಿಸಿದ ನಂತರ ತಣ್ಣಗಾಗಲು ಬಿಡಿ. ಆಮೇಲೆ ಈ ಮಿಶ್ರಣವನ್ನು ಕುಲ್ಛಿ ಅಚ್ಚುಗಳಿಗೆ ತುಂಬಿಸಿ ರಾತ್ರಿಯಿಡೀ ಫ್ರೀಝರಿನಲ್ಲಿಟ್ಟು ಸೆಟ್ ಆಗಲು ಬಿಡಿ. ರೆಡಿ ಆದ ಕುಲ್ಛಿಗಳನ್ನು ಅಚ್ಚಿನಿಂದ ತೆಗೆದು ತುಂಡರಿಸಿದ ವಾಲ್‌ನಟ್ಸ್, ಹಣ್ಣಿನ ಹೋಳಿನೊಂದಿಗೆ ಸವಿಯಲು ಕೊಡಿ.
ಕ್ಯಾಲಿಫೋರ್ನಿಯಾ ವಾಲ್‌ನಟ್ ಮಿಲ್ಕ್ ತಯಾರಿಸುವ ವಿಧಾನ
1 ಕಪ್ ಕ್ಯಾಲಿಫೋರ್ನಿಯಾ ವಾಲ್‌ನಟ್ಸ್ ನ್ನು 2 ಕಪ್ ಹಾಲಲ್ಲಿ 2 ಗಂಟೆ ಕಾಲ ನೆನೆಹಾಕಿ. ನಂತರ ಇದನ್ನು ಹಾಲಿನ ಸಮೇತ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ನಂತರ ಒಂದು ತೆಳು ಬಟ್ಟೆಯಲ್ಲಿ ಸೋಸಿಕೊಂಡು ಚರಟ ಬೇರ್ಪಡಿಸಿ. ನಂತರ ಇದನ್ನು ಗ್ಲಾಸಿಗೆ ಹಾಕಿ ಫ್ರಿಜ್‌ನಲ್ಲಿರಿಸಿ ತಣ್ಣಗೆ ಮಾಡಿ. ಹೀಗೆ ತಣ್ಣಗಿನ ವಾಲ್‌ನಚ್ಸ್ ಮಿಲ್ಕ್ ಸಿದ್ಧಪಡಿಸಿರಿ.
– ಕೆ. ಪ್ರತಿಭಾ
ಫಲೂದಾ ತಯಾರಿಸುವ ವಿಧಾನ
ಅರ್ಧ ಕಪ್ ಅಖರೋಟ್ ಯಾ ಕಾರ್ನ್‌ಫ್ಲೋರ್‌ನ್ನು ತುಸು ಹಾಲಿನಲ್ಲಿ ಬೆರೆಸಿಕೊಂಡು ಮಿಶ್ರಣ ಸಿದ್ಧಪಡಿಸಿ. ಒಂದು ಪ್ಯಾನಿಗೆ ಇದನ್ನು ಹಾಕಿ ಮಂದ ಉರಿಯಲ್ಲಿ ಕೈಯಾಡಿಸಿ. ಈ ಮಿಶ್ರಣ ಪೂರ್ತಿ ಗಟ್ಟಿ ಆದಾಗ, ಕೆಳಗಿಳಿಸಿ ಆರಲು ಬಿಡಿ. ತಣ್ಣಗಿನ ಈ ಮಿಶ್ರಣವನ್ನು ಚಕ್ಕುಲಿ ಒರಳಿಗೆ ಹಾಕಿ ಓಂಪುಡಿ ಬಿಲ್ಲೆಯ ನೆರವಿನಿಂದ ಒತ್ತುತ್ತಾ, ನೇರವಾಗಿ ತಣ್ಣೀರಿಗೆ ಇಳಿಸಬೇಕು. ಅರ್ಧ ಗಂಟೆ ಬಿಟ್ಟು ನೀರಿನಿಂದ ಈ ಎಳೆಗಳನ್ನು ಸೋಸಿಕೊಂಡು, ಕುಲ್ಛಿ ಮೇಲೆ ಹಾಕಿ ಸವಿಯಲು ಕೊಡಿ.
ಸ್ಕಾಚ್ ತಯಾರಿಸುವ ವಿಧಾನ
8-10 ಗೋಡಂಬಿ, ಪಿಸ್ತಾ, ಬಾದಾಮಿಗಳನ್ನು ಚೂರುಗಳಾಗಿಸಿ. ಬೇಕಾದರೆ ಕಡಲೆಬೀಜ ಸಹ ಬೆರೆಸಿಕೊಳ್ಳಿ. 4 ಚಮಚ ಸಕ್ಕರೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ. ಇದು ಕರಗುತ್ತಿದ್ದಂತೆ, ಡ್ರೈಫ್ರೂಟ್ಸ್ ಹಾಕಿ ಕೆದಕಬೇಕು. 2-3 ನಿಮಿಷಗಳ ನಂತರ ಇದನ್ನು ಪ್ಲೇಟ್ ಮೇಲೆ ಹರಡಿರಿ. ಸ್ವಲ್ಪ ಹೊತ್ತಿಗೆ ಇದು ಗಟ್ಟಿ ಆಗುತ್ತದೆ. ಇದನ್ನು ತರಿತರಿಯಾಗಿ ಪುಡಿ ಮಾಡಿ, ಏರ್ ಟೈಟ್‌ಕಂಟೇನರ್‌ಗೆ ಹಾಕಿ, ಬೇಕಾದಾಗ ಬಳಸಿಕೊಳ್ಳಿ.