ಚೀಝೀ ಆಲೂ ಕಟ್‌ಲೆಟ್‌

ಮೂಲ ಸಾಮಗ್ರಿ : 3-4 ಬೆಂದ ಆಲೂ, 2-3 ಹಸಿಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಕರಿಯಲು ಎಣ್ಣೆ.

ಹೂರಣದ ಸಾಮಗ್ರಿ : ಅರ್ಧರ್ಧ ಕಪ್‌ ಚೀಸ್‌, ಸ್ಪ್ರೆಡ್‌ ಮೈದಾ, 4-5 ಚಮಚ ತುರಿದ ಪನೀರ್‌, 1 ಕಪ್‌ ಬ್ರೆಡ್‌ ಕ್ರಂಬ್ಸ್.

ವಿಧಾನ : ಬೆಂದ ಆಲೂ ಸಿಪ್ಪೆ ಸುಲಿದು ಮಸೆದಿಡಿ. ಹೂರಣದ ಸಾಮಗ್ರಿ ಹೊರತುಪಡಿಸಿ, ಉಳಿದೆಲ್ಲ ಮೂಲ ಸಾಮಗ್ರಿ ಇದಕ್ಕೆ ಹಾಕಿ ಮಿಶ್ರಣ ಕಲಸಿಡಿ. ಇದರಿಂದ ನಿಂಬೆ ಗಾತ್ರದ ಉಂಡೆ ಮಾಡಿ. ಹೂರಣ ಸಾಮಗ್ರಿ ಪೂರ್ತಿ ಬೆರೆಸಿ ಮಿಶ್ರಣ ಕಲಸಿ, ಸಣ್ಣ ಉಂಡೆಗಳಾಗಿಸಿ ಆಲೂ ಉಂಡೆಯಲ್ಲಿ ಮಧ್ಯ ರಂಧ್ರ ಮಾಡಿ, ಈ ಹೂರಣ ಇರಿಸಿ. ಮೈದಾಗೆ ತುಸು ಉಪ್ಪು, ಖಾರ, ಅರಿಶಿನ ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಅದರಲ್ಲಿ ಆಲೂ ಉಂಡೆ ಅದ್ದಿ, ಕಾದ ಎಣ್ಣೆಯಲ್ಲಿ  ಹೊಂಬಣ್ಣ ಬರುವಂತೆ ಕರಿದು, ಟೊಮೇಟೊಗೆ ಸಾಸ್‌ ಜೊತೆ ಸವಿಯಲು ಕೊಡಿ.

ಬೀಟ್‌ ರೂಟ್‌ ಪನೀರ್‌

AA-paneer-chukundri-(10)

ಸಾಮಗ್ರಿ : 250 ಗ್ರಾಂ ಪನೀರ್‌, ಅರ್ಧರ್ಧ ಕಪ್‌ ಕಾರ್ನ್‌ಫ್ಲೋರ್‌, ಮೈದಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗಟ್ಟಿ ಮೊಸರು, ಚಾಟ್‌ ಮಸಾಲ, ತಂದೂರಿ ಮಸಾಲ, ಹಸಿ ಮೆಣಸಿನ ಪೇಸ್ಟ್, 1-2 ಬೀಟ್‌ ರೂಟ್‌, ಕರಿಯಲು ಎಣ್ಣೆ.

ವಿಧಾನ : ಬೀಟ್‌ ರೂಟ್‌ ಸಿಪ್ಪೆ ಹೆರೆದು, ಕ್ಯೂಬ್‌ ಆಗಿ ಕತ್ತರಿಸಿ, ಬೇಯಿಸಿಕೊಳ್ಳಿ, ನಂತರ ಇದನ್ನು ಪೇಸ್ಟ್ ಮಾಡಿ. ಇದಕ್ಕೆ ಪನೀರ್‌ಬಿಟ್ಟು ಉಳಿದೆಲ್ಲ ಸಾಮಗ್ರಿ ಸೇರಿಸಿ, ಬೆರೆಸಿಕೊಳ್ಳಿ. ಆಮೇಲೆ ಪನೀರ್‌ ಕ್ಯೂಬ್ಸ್ ಸೇರಿಸಿ. ಸ್ವಲ್ಪ ಹೊತ್ತು ನೆನೆಯಲು ಬಿಡಿ. ಇದರಿಂದ ಪನೀರ್‌ ಬೇರ್ಪಡಿಸಿ ಕರಿದು ತೆಗೆಯಿರಿ.  ಉಳಿದದ್ದನ್ನು ಬಾಡಿಸಿ, ಅದಕ್ಕೆ ಪನೀರ್‌ ಸೇರಿಸಿ ಸವಿಯಲು ಕೊಡಿ.

ಸಬ್ಬಕ್ಕಿ ಸ್ಪೆಷಲ್

AA-gatte-ka-munchurian-(2)

ಸಾಮಗ್ರಿ : 1 ಕಪ್‌ ಸಬ್ಬಕ್ಕಿ, ಅರ್ಧ ಕಪ್‌ ಅಕ್ಕಿಹಿಟ್ಟು, 1 ದೊಡ್ಡ ತುರಿದ ಕ್ಯಾರೆಟ್‌, 2 ಚಮಚ ಹುರಿದು ಪುಡಿ ಮಾಡಿದ ಶೇಂಗಾ, 1 ಈರುಳ್ಳಿ, ಬೆಂದ ಬಟಾಣಿ, ಹೆಚ್ಚಿದ ಕೊ.ಸೊಪ್ಪು, ಕರಿಯಲು ಎಣ್ಣೆ, ತುಸು ಕರಿಬೇವು, ಹಸಿ ಮೆಣಸು.

ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ನೀರು ಬೆರೆಸಿ ಕುದಿಸಿ. ಅದಕ್ಕೆ ಅಕ್ಕಿಹಿಟ್ಟು ಹಾಕಿ ಕೈಯಾಡಿಸಿ. ಉಪ್ಪು ಹಾಕಿ ಬೇಯಿಸಿ. ಇದಕ್ಕೆ ಸೋಸಿದ ಸಬ್ಬಕ್ಕಿ, ಉಳಿದೆಲ್ಲ ಹೆಚ್ಚಿದ ತರಕಾರಿ ಹಾಕಿ ಬಾಡಿಸಿ. ಒಂದು ಅಗಲ ಟ್ರೇ ಜಿಡ್ಡು ಮಾಡಿ ಈ ಗಟ್ಟಿ ಪದಾರ್ಥ ಅದಕ್ಕೆ ಹಾಕಿ ಹರಡಿರಿ. ಚೆನ್ನಾಗಿ ಸೆಟ್‌ ಆದ ಮೇಲೆ ಫ್ರಿಜ್‌ನಲ್ಲಿರಿಸಿ ಹೊರ ತೆಗೆಯಿರಿ. ಇದನ್ನು ಚೌಕಾಕಾರವಾಗಿ ಕತ್ತರಿಸಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದನ್ನು ಚೌಕಾಕಾರವಾಗಿ ಕತ್ತರಿಸಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಸೋರೆಕಾಯಿ ಸ್ಪೆಷಲ್ ಬೋಂಡ

AA-ghiya-ke-balls-(3)

ಸಾಮಗ್ರಿ : 1 ಚಿಕ್ಕ ಎಳೆ ಸೋರೆಕಾಯಿ, 1 ಕಪ್‌ ಕಡಲೆಹಿಟ್ಟು, ಅರ್ಧರ್ಧ ಕಪ್‌ ಕಾರ್ನ್‌ಫ್ಲೋರ್‌, ರವೆ, ತುಂಡರಿಸಿದ ಡ್ರೈ ಫ್ರೂಟ್ಸ್ (ಒಟ್ಟಾರೆ ಅರ್ಧ ಕಪ್‌), 4 ಚಮಚ ಕಡಲೆಬೀಜದ ತರಿ (ಹುರಿದು ಪುಡಿ ಮಾಡಿದ್ದು), ರುಚಿಗೆ ತಕ್ಕಷ್ಟು  ಉಪ್ಪು, ಖಾರ, ಚಾಟ್‌ಮಸಾಲ, ಧನಿಯಾ ಪುಡಿ, ಅಮ್ಚೂರ್‌ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನ ಪೇಸ್ಟ್, ಅರಿಶಿನ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಕೊ.ಸೊಪ್ಪು, ಪುದೀನಾ, ಕರಿಯಲು ಎಣ್ಣೆ.

ವಿಧಾನ : ಕಡಲೆಹಿಟ್ಟಿಗೆ ಹುರಿದ ರವೆ, ಕಾರ್ನ್‌ಫ್ಲೋರ್‌, ಉಪ್ಪು, ಖಾರ, ಅರಿಶಿನ ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಮಿಶ್ರಣ ಕಲಸಿಡಿ. ಸೋರೆಕಾಯಿ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಹೂರಣದ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಹಿಡಿದು, ಬೋಂಡ ಹಿಟ್ಟಿನಲ್ಲಿ ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಚಿತ್ರದಲ್ಲಿರುವಂತೆ ದ್ರಾಕ್ಷಿ, ಸಲಾಡ್‌ನಿಂದ ಅಲಂಕರಿಸಿ ಬಿಸಿಯಾಗಿ ಸವಿಯಲು ಕೊಡಿ.

ಆಲೂ ಎಳೆಗಳ ಮಿನಿ ಪಿಜ್ಜಾ

AA-Aloo-lache-ki-mini-pizza-(1)

ಬೇಸ್‌ ಸಾಮಗ್ರಿ : 1 ಕಪ್‌ ಸಿಪ್ಪೆ ಹೆರೆದು ತುರಿದ ಹಸಿ ಆಲೂ, 4 ಚಮಚ ಕಾರ್ನ್‌ಫ್ಲೋರ್‌, ತುಸು ನಿಂಬೆರಸ, ಉಪ್ಪು, ಮೆಣಸು, ರೀಫೈಂಡ್‌ಎಣ್ಣೆ.

ಟಾಪಿಂಗ್‌ ಸಾಮಗ್ರಿ : ಸಣ್ಣಗೆ ಹೆಚ್ಚಿದ 3 ಬಣ್ಣಗಳ ಒಂದಿಷ್ಟು ಕ್ಯಾಪ್ಸಿಕಂ, 2 ಈರುಳ್ಳಿ, ಅರ್ಧ ಕಪ್‌ ತುರಿದ ಚೀಸ್‌ ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓರಿಗ್ಯಾನೋ.

ವಿಧಾನ : ಬೇಸ್‌ ಗೆ ಬೇಕಾದ ಎಲ್ಲಾ ಸಾಮಗ್ರಿ ಚೆನ್ನಾಗಿ ಬೆರೆಸಿಕೊಳ್ಳಿ. ಆಲೂ ನೀರು ಬಿಟ್ಟುಕೊಂಡಾಗ ಬೇಸ್‌ ಬ್ಯಾಟರ್‌ ರೆಡಿ ಎಂದರ್ಥ. ಸೌಟನ್ನು ತಿರುವಿ ತುಸು ಮಸೆದು, ತವಾ ಮೇಲೆ ಎಣ್ಣೆ ಹಾಕಿ ಇದರಿಂದ 1-1 ಸೌಟು ಮಿಶ್ರಣ ಹಾಕಿ ಎರಡೂ ಬದಿ ಗರಿಗರಿ ಆಗುವಂತೆ ಬೇಯಿಸಿ. ಈಗ ಪ್ರತಿ ಬೇಸ್‌ ಮೇಲೂ ಟಾಪಿಂಗ್‌ ಸಾಮಗ್ರಿ, ತುರಿದ ಚೀಸ್‌ ಉದುರಿಸಿ. ಚೀಸ್‌ ಕರುಗುವವರೆಗೂ ಬೇಕ್‌ ಮಾಡಿ. ಓರಿಗ್ಯಾನೋ, ಮೆಣಸು ಉದುರಿಸಿ ಸವಿಯಲು ಕೊಡಿ.

ಗಸಗಸೆ ಪೂರಿ

AA-khuskhus-poori-(2)

ಮೂಲ ಸಾಮಗ್ರಿ : ಅರ್ಧರ್ಧ ಕಪ್‌ ಗೋಧಿಹಿಟ್ಟು, ಮೈದಾ, ಅಕ್ಕಿ ಹಿಟ್ಟು, ತುಪ್ಪ, ತುಸು ಓಮ, ಅರಿಶಿನ, ಉಪ್ಪು, ಖಾರ, ಕರಿಯಲು ಎಣ್ಣೆ.

ಹೂರಣದ ಸಾಮಗ್ರಿ : 7-8 ಚಮಚ ಗಸಗಸೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಏಲಕ್ಕಿ ಪುಡಿ, ಚಕ್ಕೆ ಪುಡಿ.

ವಿಧಾನ : ಮೊದಲು ಮೂಲ ಸಾಮಗ್ರಿ ಮೃದುವಾಗಿ ಬರುವಂತೆ ನೀರು ಬೆರೆಸಿ ಹಿಟ್ಟು ಕಲಸಿಡಿ. ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು 1 ಗಂಟೆ ಕಾಲ ನೆನೆಯಲು ಬಿಡಿ. ಮೊದಲು ಗಸಗಸೆ ಡ್ರೈ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ವೆಟ್‌ ಮಿಕ್ಸಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿ. ಇದನ್ನು ತುಸು ಎಣ್ಣೆ ಹಾಕಿ ಹಸಿ ವಾಸನೆ ಹೋಗುವಂತೆ ಕೆದಕಿ ಕೆಳಗಿಳಿಸಿ. ನೆನೆದ ಹಿಟ್ಟಿನಿಂದ ಪೂರಿ ಲಟ್ಟಿಸಿ, ಅದರ ಮಧ್ಯೆ 1-1 ಚಮಚ ಗಸಗಸೆ ಮಿಶ್ರಣ ಹರಡಿ, ಮಡಿಚಿ ಮತ್ತೆ ಲಟ್ಟಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಪೂರಿ ಕರಿಯಿರಿ. ಸ್ವಾದಿಷ್ಟ ಗಸಗಸೆ ಪೂರಿ ರೆಡಿ!

ದಾಲ್ ಪುವಾ ಸ್ಟ್ರಾಬೆರಿ ಜ್ಯಾಂ ದಾಲ್‌ ಪುವಾ

AA-Dal-puva-aur-strawberry-jam-(4)

ಸಾಮಗ್ರಿ : ಅರ್ಧರ್ಧ ಕಪ್‌ ಉದ್ದಿನ ಬೇಳೆ, ಹೆಸರುಬೇಳೆ, ಅಕ್ಕಿ, ತುಸು ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಪೇಸ್ಟ್, ಉಪ್ಪು, ಕರಿಯಲು ಎಣ್ಣೆ.

ಸ್ಟ್ರಾಬೆರಿ ಜ್ಯಾಮಿಗೆ ಸಾಮಗ್ರಿ : 8-10 ಸ್ಟ್ರಾಬೆರಿ, ಅರ್ಧ ಕಪ್‌ ಸಕ್ಕರೆ, ತುಸು ನಿಂಬೆರಸ.

ವಿಧಾನ : ಹಿಂದಿನ ರಾತ್ರಿ ಬೇಳೆ ತೊಳೆದು ನೆನೆ ಹಾಕಿಡಿ. ಅದೇ ತರಹ ಅಕ್ಕಿಯನ್ನೂ ಕೂಡ. ಮಾರನೇ ಬೆಳಗ್ಗೆ ಮೊದಲು ಅಕ್ಕಿ ಸಹಿತ ಉಳಿದ ಪೇಸ್ಟ್ ಹಾಕಿ ನಂತರ ಬೇಳೆಯನ್ನು ಬೇರೆಯಾಗಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಉಪ್ಪು ಸೇರಿಸಿ ಎಲ್ಲವನ್ನೂ ಕೂಡಿಸಿ ಮತ್ತೊಮ್ಮೆ ಮಿಕ್ಸಿ ಚಲಾಯಿಸಿ. ಅರ್ಧ ಗಂಟೆ ನೆನೆಯಲು ಬಿಟ್ಟು ಎಣ್ಣೆ ಬಿಸಿ ಮಾಡಿಕೊಂಡು, 1-1 ಸೌಟು ಗಟ್ಟಿ ಮಿಶ್ರಣವನ್ನು ವಡೆ ತರಹ ಕರಿದು ತೆಗೆಯಿರಿ. ಇದೀಗ ದಾಲ್ ‌ಪುವಾ ರೆಡಿ.

ಜ್ಯಾಮಿಗಾಗಿ ವಿಧಾನ : ಮೊದಲು ಸ್ಟ್ರಾಬೆರಿ ಪೇಸ್ಟ್ ಮಾಡಿಡಿ. ಒಂದು ಬಾಣಲೆಗೆ ತುಸು ತುಪ್ಪ ಹಾಕಿ, ಅದಕ್ಕೆ ಸಕ್ಕರೆ ಸೇರಿಸಿ ಕರಗಲು ಬಿಡಿ. ನಂತರ ಇದಕ್ಕೆ ಸ್ಟ್ರಾಬೆರಿ ಸೇರಿಸಿ ಮಂದ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ಕೊನೆಯಲ್ಲಿ ನಿಂಬೆಹಣ್ಣು ಹಿಂಡಿಕೊಂಡು ಎಲ್ಲಾ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ ಆರಲು ಬಿಡಿ. ದಾಲ್ ‌ಪುವಾ ಮೇಲೆ ಈ ಜ್ಯಾಂ ಹರಡಿ ಸವಿಯಲು ಕೊಡಿ.

ಖಾರದ ಶಂಕರಪೋಳಿ

AA-IDli-do-pyaza-(1)

ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, ಅರ್ಧ ಕಪ್‌ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಅರಿಶಿನ, ಓಮ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಕರಿಯಲು ಎಣ್ಣೆ.

ವಿಧಾನ : 1 ಈರುಳ್ಳಿ ಜೊತೆ 5-6 ಎಸಳು ಬೆಳ್ಳುಳ್ಳಿ, ತುಸು ಶುಠಿ ಹಾಕಿ ರುಬ್ಬಿಕೊಳ್ಳಿ. ಈ ಪೇಸ್ಟ್ ಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, ಗಟ್ಟಿಯಾಗಿ ಹಿಟ್ಟು ಕಲಸಿ ತುಪ್ಪ ಹಾಕಿ ನಾದಿಕೊಳ್ಳಿ. 1 ಗಂಟೆ ಬಿಟ್ಟು ಮತ್ತೆ ನಾದಿಕೊಂಡು ದಪ್ಪ ಚಪಾತಿಗಳಾಗಿ ಲಟ್ಟಿಸಿ, ವಜ್ರಾಕೃತಿಯಲ್ಲಿ ಚಿತ್ರದಲ್ಲಿರುವಂತೆ ಕತ್ತರಿಸಿ. ಕಾದ ಎಣ್ಣೆಯಲ್ಲಿ ಕರಿದು, ಕಾಫಿ ಟೀ ಜೊತೆ ಸವಿಯಲು ಕೊಡಿ.

ಬೇಸನ್‌ ಡ್ರೈ ಮಂಚೂರಿಯನ್‌

AA-meete-besani-appe-(1)

ಮೂಲ ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನ ಪೇಸ್ಟ್, ಅರಿಶಿನ, ಸೋಡ, ಕರಿಯಲು ಎಣ್ಣೆ.

ಮಂಚೂರಿಯನ್‌ ಸಾಮಗ್ರಿ : 3 ಬಗೆಯ ಕ್ಯಾಪ್ಸಿಕಂ, 1 ಕ್ಯಾರೆಟ್‌, 1 ಕಪ್‌ ಹೆಚ್ಚಿದ ಎಲೆಕೋಸು, 2 ಈರುಳ್ಳಿ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಟೊಮೇಟೊ ಸಾಸ್‌, ಸೋಯಾ ಸಾಸ್‌, ಚಿಲೀ ಸಾಸ್‌, ಟೊಬ್ಯಾಸ್ಕೋ ಸಾಸ್‌, ಫ್ರೈಡ್‌ ರೈಸ್‌ ಮಸಾಲ.

ವಿಧಾನ : ಮೂಲ ಸಾಮಗ್ರಿ ಎಲ್ಲಾ ಸೇರಿಸಿ, ತುಸು ನೀರು ಬೆರೆಸಿ ಇದನ್ನು ಚಪಾತಿ ಹಿಟ್ಟಿನಂತೆ ಗಟ್ಟಿಯಾಗಿ ಕಲಸಿ. ಇದರಿಂದ ದಪ್ಪಗೆ ಲಟ್ಟಿಸಿ, ಕ್ಯೂಬ್ಸ್ ತರಹ ಕಟ್‌ ಮಾಡಿ, ಕುದಿವ ನೀರಲ್ಲಿ ಬೇಯಿಸಿ. ನಂತರ ನೀರನ್ನು ಸೋಸಿಕೊಂಡು ಆರಲು ಬಿಟ್ಟು, ಆಮೇಲೆ ಈ ಬೇಸನ್‌ ಕ್ಯೂಬ್ಸ್ ನ್ನು ಎಣ್ಣೆಯಲ್ಲಿ ಕರಿಯಿರಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಎಲ್ಲಾ ತರಕಾರಿ ಹಾಕಿ, ನೀರು ಚಿಮುಕಿಸಿ, ಬಾಡಿಸುತ್ತಾ ಬೇಯಿಸಿ. ನಂತರ ಉಳಿದೆಲ್ಲ ಸಾಸ್‌, ಮಸಾಲ ಹಾಕಿ ಚೆನ್ನಾಗಿ ಕೈಯಾಡಿಸಿ. ಇದಕ್ಕೆ ಬೇಸನ್ ಕ್ಯೂಬ್ಸ್ ಸೇರಿಸಿ ಕೆದಕಿ ಕೆಳಗಿಳಿಸಿ. ಬಿಸಿ ಇರುವಾಗಲೇ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ