ಅವನು ಲೈಬ್ರೆರಿಗೆ ಬರುತ್ತಿರುವುದನ್ನು ನೋಡಿ, ಬಹುಶಃ ಯಾರೋ ಹೊಸ ಅಧಿಕಾರಿ ತಮ್ಮ ಆಫೀಸಿಗೆ ಸೇರಿರಬೇಕೆಂದು ಅಮಲಾ ಭಾವಿಸಿದಳು. ಆಕಾಶನೀಲಿಯ ಶರ್ಟ್‌ ಜೊತೆ ಗಾಢ ನೀಲಿ ಬಣ್ಣದ ಟೈ, ಹಾಲು ಬಿಳುಪಿನ ಪ್ಯಾಂಟ್‌ ಧರಿಸಿದ್ದ ಅವನ ವ್ಯಕ್ತಿತ್ವಕ್ಕೆ ಅವಳು ಒಮ್ಮೆಲೇ ಮಾರುಹೋದಳು. ಗೌರವರ್ಣದ ಕಟ್ಟುಮಸ್ತಾದ ದೇಹ, ನಿಯಂತ್ರಣಕ್ಕೆ ಸಿಗದೆ ಹಾರಾಡುತ್ತಿದ್ದ ಮುಂಗುರುಳು, ಹಿಂದಕ್ಕೆ ಬಾಚಿದ್ದ ದಟ್ಟ ಕೂದಲು ಅವನ ಆಕರ್ಷಕ ವ್ಯಕ್ತಿತ್ವಕ್ಕೆ ಹೆಚ್ಚು ಒಪ್ಪುತ್ತದೆ ಎನಿಸಿತು.

ಲೈಬ್ರೆರಿಗೆ ಬರುತ್ತಲೇ ಅವನು ಪತ್ರಿಕೆಗಳಿದ್ದ ರಾಕಿನ ಕಡೆ ನಡೆದ. ಅಲ್ಲಿದ್ದ ಯಾವುದೋ ಪತ್ರಿಕೆ ಎಳೆದುಕೊಂಡು ಅದರಲ್ಲಿ ಮಗ್ನನಾದ. ಅದಾದ ಮೇಲೆ ಅವನು ಕಾದಂಬರಿಗಳಿದ್ದ ಬೀರು ಕಡೆ ನಡೆದ. ತನ್ನ ಸೀಟ್‌ನಲ್ಲಿ ಕುಳಿತಿದ್ದ ಅಮಲಾ ಕಂಪ್ಯೂಟರ್‌ನಲ್ಲಿ ಹೊಸ ಪುಸ್ತಕಗಳ ಎಂಟ್ರಿ ಮಾಡತೊಡಗಿದಳು. ಸಾಕಷ್ಟು ತಡಕಾಡಿದ ನಂತರ ಆತ ಗ್ರಾಫಿಕ್‌ ಡಿಸೈನಿಂಗ್‌ ಕುರಿತಾದ ಪುಸ್ತಕ ಹಿಡಿದು ತಂದು ಅವಳ ಮುಂದೆ ಮೇಜಿನ ಮೇಲಿರಿಸಿದ.

“ದಯವಿಟ್ಟು ಈ ಪುಸ್ತಕವನ್ನು ನನ್ನ ಹೆಸರಿಗೆ ಇಶ್ಯು ಮಾಡ್ತೀರಾ…..?” ಎನ್ನುತ್ತಾ ಅವಳ ಮುಂದಿನ ಕುರ್ಚಿಯಲ್ಲಿ ಕುಳಿತ.

“ಪುಸ್ತಕ ಇಶ್ಯು ಮಾಡುವ ಮೊದಲು ನಿಮ್ಮ ಡೀಟೇಲ್ಸ್ ನ್ನು ಎಂಟ್ರಿ ಮಾಡಬೇಕಾಗುತ್ತದೆ….. ನಿಮ್ಮ ಹೆಸರು, ಡಿಪಾರ್ಟ್‌ಮೆಂಟ್‌, ವಿಳಾಸ ಎಲ್ಲಾ ಈ ಫಾರ್ಮ್ ನಲ್ಲಿ ತುಂಬಿಸಿ,” ಎಂದು ಅವನ ಮುಂದೆ ಒಂದು ಫಾರ್ಮ್ ತಳ್ಳಿದಳು ಅಮಲಾ.

“ಇದರ ಅಗತ್ಯವಿಲ್ಲ…. ಆಲ್ ರೆಡಿ ಎಂಟ್ರಿ ಮಾಡಿ ಕೊಟ್ಟಿದ್ದೇನೆ ಬಿಡಿ, ಕಳೆದ ಹಲವು ದಿನಗಳಿಂದ ರಜೆ ಮೇಲಿದ್ದೆ……. ನನ್ನ ಪತ್ನಿಗೆ ಹುಷಾರಿಲ್ಲ…. ನಾನು ನಿರಂಜನ್‌…. ನೀವು ಬಹುಶಃ ಈ ಆಫೀಸಿಗೆ ಹೊಸಬರಿರಬೇಕು….. ಇದಕ್ಕೆ ಮೊದಲು ಇಲ್ಲಿ ವಿಶಾಲಾಕ್ಷಿ ಮೇಡಂ ಕೂರುತ್ತಿದ್ದರು…..”

ಅಮಲಾ ತಕ್ಷಣ ಕಂಪ್ಯೂಟರಿನಲ್ಲಿ ನಿರಂಜನನ ಹೆಸರು ಹುಡುಕಿದಳು. ಆ ಪಟ್ಟಿಯಲ್ಲಿ ಇಡೀ ಆಫೀಸಿಗೆ ಇದ್ದುದೇ ಅದೊಂದು ಹೆಸರು, ಜೊತೆಗೆ ಫೋಟೋ ಸಹ ಪಕ್ಕದಲ್ಲೇ ಇತ್ತು. ಅಮಸಾ ಔಪಚಾರಿಕವಾಗಿ ಎಂಟ್ರಿ ಮಾಡಿಕೊಂಡು ಪುಸ್ತಕ ಇಶ್ಯು ಮಾಡಿದಳು. ಅವನು ಸ್ವಲ್ಪ ಹೊತ್ತು ಅಲ್ಲೇ ಇದ್ದು ಇವಳೆಡೆ ಮೋಹಕ ಮಂದಹಾಸ ಬೀರುತ್ತಾ, “ನಿಮ್ಮನ್ನು ಭೇಟಿ ಮಾಡಿದ್ದು ಒಳ್ಳೆಯದೆನಿಸಿತು…. ಮತ್ತೊಮ್ಮೆ ಭೇಟಿ ಆಗೋಣ,” ಎಂದು ಬೈ ಹೇಳಿ ಅಲ್ಲಿಂದ ವೇಗವಾಗಿ ಹೊರಟುಹೋದ.

ಗ್ರಾಫಿಕ್ಸ್ ವೆಬ್‌ ಡಿಸೈನಿಂಗ್‌ನ ಒಂದು ಬಹು ದೊಡ್ಡ ವ್ಯೂವ್ಲ್ಲಿ ಅವಳು ಹೊಸದಾಗಿ ಲೈಬ್ರೇರಿಯನ್‌ ಕೆಲಸಕ್ಕೆ ಸೇರಿದ್ದಳು. ಅಲ್ಲಿನ ಸಿಬ್ಬಂದಿ ಎಲ್ಲರೂ ಸಾಫ್ಟ್ ವೇರ್‌ ಎಂಜಿನಿಯರ್‌ಗಳಾಗಿದ್ದು, ಡಿಸೈನಿಂಗ್‌ನಲ್ಲಿ ಗಟ್ಟಿಗರೆನಿಸಿದ್ದರು. 1 ತಿಂಗಳ ಹಿಂದಷ್ಟೇ ಅವಳು ಅಲ್ಲಿ ಕೆಲಸಕ್ಕೆ ಸೇರಿದ್ದಳು. ಇಡೀ ದಿನ ಕೆಲಸದಲ್ಲಿ ಬಿಝಿ ಆಗಿದ್ದುದರಿಂದ, ಅವಳಿಗೆ ಅಲ್ಲಿ ಹೇಳಿಕೊಳ್ಳುವಂಥ ಗೆಳತಿಯರು ಯಾರೂ ಇರಲಿಲ್ಲ. ಬುಕ್‌ ಇಶ್ಯು ಮಾಡುವಾಗ ಅಥವಾ ಇನ್ನಿತರ ಮಾಹಿತಿ ನೀಡಬೇಕಾದಾಗ ಮಾತ್ರ ಅವಳು ಜನರೊಂದಿಗೆ ಮಾತನಾಡುತ್ತಿದ್ದಳು. ಈ ರೀತಿ ಅವಳಿಗೆ ಜನ ಸಂಪರ್ಕ ಕಡಿಮೆ ಎಂದೇ ಹೇಳಬೇಕು. ಹೀಗಾಗಿ ಯಾರಾದರೂ ಆತ್ಮೀಯವಾಗಿ ಮಾತನಾಡಿಸಿದಾಗ ಅವಳಿಗೆ ಬಹಳ ಖುಷಿಯಾಗುತ್ತಿತ್ತು.

ಕ್ರಮೇಣ ನಿರಂಜನ್‌ ವಾರಕ್ಕೊಮ್ಮೆ ಲೈಬ್ರೆರಿಗೆ ಬಂದು ಪುಸ್ತಕ ಬದಲಾಯಿಸಿಕೊಂಡು ಹೋಗತೊಡಗಿದ. ರಜೆಯಿಂದ ಮರಳಿದ ಮೇಲೆ ಅವನಿಗೆ ನೀಡಲಾಗಿದ್ದ ಹೊಸ ಪ್ರಾಜೆಕ್ಟ್ ಪ್ರಕಾರ, ಫೋಟೋ ಶಾಪ್‌ಗೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಮಾಡಬೇಕಾಗಿತ್ತು. ಈ ವಿಷಯದಲ್ಲಿ ಇನ್ನೂ ಅತ್ಯಧಿಕ ಮಾಹಿತಿಗಾಗಿ ಅವನು ಅನೇಕ ವಿದೇಶೀ ಪುಸ್ತಕಗಳನ್ನು ಪರಿಶೀಲಿಸಬೇಕಾಗಿತ್ತು.

ಅವನು ಪುಸ್ತಕಗಳ ಜೊತೆ ಇಂಟರ್‌ನೆಟ್‌ನಿಂದಲೂ ಅತ್ಯಗತ್ಯ ಮಾಹಿತಿ ಸಂಗ್ರಹಿಸತೊಡಗಿದ. ಇದೇ ವಿಷಯವಾಗಿ ಅವನು ಅನೇಕ ಸಲ ಲೈಬ್ರೆರಿಗೆ ಎಂದು ಪುಸ್ತಕಗಳಿಗಾಗಿ ತಡಕಾಡುತ್ತಿದ್ದ. ಅಲ್ಲಿಗೆ ಬಂದ ಮೇಲೆ ಅವನು ಅಗತ್ಯವಾಗಿ ಹಲವು ನಿಮಿಷ ಅಮಲಾ ಜೊತೆ ಮಾತನಾಡಿಕೊಂಡೇ ಹೋಗುತ್ತಿದ್ದ. ಹೀಗೆ ಇವರಿಬ್ಬರ ಪರಿಚಯ ಕ್ರಮೇಣ ಸ್ನೇಹಕ್ಕೆ ತಿರುಗಿತು. ಮಾತುಕಥೆ ಮಧ್ಯೆ ಅವನ ಪತ್ನಿಗೆ ದೊಡ್ಡ ಕಾಯಿಲೆ ಇರುವುದು ತಿಳಿಯಿತು. ದೇಹದ ರೋಗನಿರೋಧಕ ಶಕ್ತಿ, ದೈಹಿಕ ಚಟುವಟಿಕೆಗಳ ಮೇಲೆಯೇ ಆಕ್ರಮಣ ಮಾಡುವಂಥ ವಿಚಿತ್ರ ಕಾಯಿಲೆಯದು.

ಈ ಕಾರಣದಿಂದಾಗಿ ಈಗ ಅವನ ಪತ್ನಿ ಸ್ವಾತಿ ಹೊರಗೆ ಎಲ್ಲೂ ಓಡಾಡಲು ಆಗದೆ, ಸದಾ ಮನೆಯಲ್ಲೇ ವಿಶ್ರಾಂತಿ ಪಡೆಯುವಳು. ಮನೆಮಟ್ಟಿಗೆ ಓಡಾಡಿಕೊಂಡು ಸದಾ ಹಾಸಿಗೆ ಹಿಡಿದು ಬಿಳಚಿಕೊಂಡಿರುತ್ತಿದ್ದಳು. ಸದಾ ಸುಸ್ತು ಸಂಕಟದಲ್ಲಿ ನರಳುತ್ತಿದ್ದವಳಿಗೆ ನಸುನಗುತ್ತಾ ಬದುಕುವುದೇ ಮರೆತು ಹೋಗಿತ್ತು. ಕಳೆದ ತಿಂಗಳು ಅವಳ ರೋಗ ಉಲ್ಬಣಗೊಂಡಿದ್ದರಿಂದ, ನಿರಂಜನ್‌ ಇಡೀ ತಿಂಗಳು ರಜೆ ಹಾಕಿ ಅವಳ ಸೇವೆಗೆ ಮನೆಯಲ್ಲೇ ಉಳಿಯಬೇಕಾಯಿತು. ಅವರಿಗೆ 8 ತಿಂಗಳ ಒಂದು ಗಂಡು ಮಗು ಸಹ ಇತ್ತು. ಅದನ್ನು ಗಮನಿಸಿಕೊಳ್ಳಲೆಂದೇ ಸ್ವಾತಿಯ ತವರು ಶಿವಮೊಗ್ಗಾದಿಂದ ಅವಳ ತಂಗಿ ಶೃತಿ ಬಂದಿದ್ದಳು.

ಅವನೊಂದಿಗೆ ಮಾತನಾಡುತ್ತಾ, ಅವನ ಕಷ್ಟ ಸುಖಗಳಿಗೆ ತನಗೆ ತಿಳಿದ ಮಟ್ಟಿಗೆ ಸ್ಪಂದಿಸುತ್ತಾ, ಅಮಲಾ ಏನೋ ಒಂದು ವಿಚಿತ್ರವಾದ ತೃಪ್ತಿ  ಕಂಡುಕೊಳ್ಳುತ್ತಿದ್ದಳು. ಇವಳ ನಯನಾಜೂಕಿನ ಸೂಕ್ಷ್ಮ ಮಾತುಗಾರಿಕೆ, ಹಿತಕರ ಕಣ್ಣೋಟ ಅವನನ್ನು ಸದಾ ಕಟ್ಟಿಹಾಕುತ್ತಿತ್ತು. ನಿರಂಜನ್‌ನಂಥ ಆಕರ್ಷಕ ವ್ಯಕ್ತಿಯ ಹಿಂದೆ ಇಷ್ಟೆಲ್ಲ ದುಃಖ ಅಡಗಿದೆಯೇ ಎಂದು ಅವಳು ವಿಸ್ಮಯಗೊಳ್ಳುವಳು.

ತನ್ನ ಮಾತುಕಥೆಯಿಂದ ಅವನ ಮನಸ್ಸಿಗೆ ಒಂದಿಷ್ಟು ಆಹ್ಲಾದತೆ ಒದಗಿಸಿ, ಅವನ ಮುಖದಲ್ಲಿ ಮಂದಹಾಸ ಚಿಮ್ಮಿಸಿ, ತಾನೂ ಪುಳುಕಗೊಳ್ಳುವಳು. ಅವನೊಂದಿಗಿನ ಒಡನಾಟ ಅವಳಿಗೆ ಬಲು ಹಿತಕರ ಎನಿಸುತ್ತಿತ್ತು. ಆತ್ಮೀಯತೆಯ ಅನುಭೂತಿಯಲ್ಲಿ ಮಿಂದು ರೋಮಾಂಚನಗೊಳ್ಳುತ್ತಿದ್ದಳು. ಹೀಗೆ ನಿಧಾನವಾಗಿ ಅವರ ಸ್ನೇಹ ಗಟ್ಟಿಗೊಳ್ಳುತ್ತಾ, ಪರಸ್ಪರ ಏಕವಚನದಲ್ಲಿ ಮಾತನಾಡುವಷ್ಟು ನಿಕಟರಾದರು. ಎಷ್ಟೋ ಸಂಜೆ ಒಟ್ಟಿಗೆ ಹೋಟೆಲ್‌ನಲ್ಲಿ ಕಾಫಿ ಕುಡಿದು, ಒಂದಿಷ್ಟು ಹರಟೆ, ನಂತರ ಬೀಳ್ಕೊಳ್ಳುವರು. ಆಫೀಸಿನ ಯಾಂತ್ರಿಕ ಬಿಡುವಿಲ್ಲದ ದುಡಿತದ ಮಧ್ಯೆ ಈ ಸ್ನೇಹ ಅವಳ ಪಾಲಿಗೆ ಮರಳುಗಾಡಿನ ಓಯಸಿಸ್ ಎನಿಸಿತು.

ನಿರಂಜನ್‌ ಜೊತೆ ಒಂದಿಷ್ಟು ಹೊತ್ತು ಕಳೆಯುವುದು, ಅವನ ಕಷ್ಟಸುಖ ಹಂಚಿಕೊಳ್ಳುವುದು, ಸಾಂತ್ವನ ಹೇಳುವುದು ಈಗ ಅವಳ ದಿನಚರ್ಯೆ ಆಗಿಹೋಯಿತು.

ಮನೆಗೆ ಹೋದ ಮೇಲೆ ಇದೇ ಗಂಗಿನಲ್ಲಿ ಇನ್ನಷ್ಟು ಹೊತ್ತು ಕಳೆದು, ನಂತರ ಅಮ್ಮನಿಗೆ ರಾತ್ರಿ ಅಡುಗೆ ಕೆಲಸ, ಇನ್ನಿತರ ಮನೆಗೆಲಸಗಳಲ್ಲಿ ನೆರವಾಗುತ್ತಿದ್ದಳು. ಸ್ವಲ್ಪ ಹೊತ್ತು ಬಿಟ್ಟು ಅಪ್ಪಾಜಿ ಆಫೀಸಿನಿಂದ ಬಂದ ಮೇಲೆ, ಎಲ್ಲರೂ ಒಟ್ಟಿಗೆ ಕಾಫಿ ಕುಡಿಯುವರು. ನಂತರ ತಾಯಿ ಮಗಳು ಟಿವಿ ಮುಂದೆ ಕುಳಿತರೆ, ತಂದೆ ಪೇಪರ್‌ ಅಥವಾ ಲ್ಯಾಪ್‌ಟಾಪ್‌ ಹರಡಿಕೊಂಡು ಆಫೀಸ್ ಕೆಲಸದಲ್ಲಿ ಮಗ್ನರಾಗುವರು.

ಬಹಳ ದಿನಗಳಿಂದ ಬೆಳೆದು ನಿಂತ ಮಗಳಿಗಾಗಿ ಅವರು ಒಬ್ಬ ಉತ್ತಮ ವರನ ಹುಡುಕಾಟದಲ್ಲಿದ್ದರು. ಅವರು ವೈವಾಹಿಕ ಅಂಕಣಗಳ ವೆಬ್‌ಸೈಟ್‌ನಿಂದ ವರನ ಪ್ರೊಫೈಲ್ ತೋರಿಸಿದರೆ, ತನಗರಿವಿಲ್ಲದೆ ಅವಳು ಅವನನ್ನು ನಿರಂಜನನಿಗೆ ಹೋಲಿಸಿ ಈ ವರ ಸರಿ ಇಲ್ಲ ಎಂದುಬಿಡುವಳು. ಅನಂಥ ಸ್ಛುರದ್ರೂಪಿ  ವ್ಯಕ್ತಿತ್ವ ಯಾರಿಗೂ ಇಲ್ಲ ಎಂಬುದೇ ಅವಳ ಅಭಿಪ್ರಾಯವಾಗಿರುತ್ತಿತ್ತು.

ಮಾರನೇ ದಿನ ಅವಳು ನಿರಂಜನ್‌ ಬಳಿ ಈ ವಿಷಯ ಪ್ರಸ್ತಾಪಿಸಿದಾಗೆಲ್ಲ, ಪ್ರತಿ ಸಲ ಅವನು ಪ್ರತಿ ಹುಡುಗನಲ್ಲೂ ಏನಾದರೊಂದು ದೋಷ ಹುಡುಕಿ ಅವಳು ಬೇರೆ ಹುಡುಗನನ್ನು ಆರಿಸಬೇಕೆಂದೇ ಸಲಹೆ ನೀಡುತ್ತಿದ್ದ. ಮನದಲ್ಲೇ ಇದೆಲ್ಲವನ್ನೂ ಲೆಕ್ಕ ಹಾಕುತ್ತಾ ಅಮಲಾ ನಿರಂಜನನ ಮನದಲ್ಲಿ ಏನಿರಬಹುದೆಂದು ತರ್ಕಿಸುವಳು. ಅವಳು ಮದುವೆಯಾಗಿ ಹೊರಟುಹೋದರೆ, ತಾನೊಬ್ಬ ಉತ್ತಮ ಗೆಳತಿಯನ್ನು ಕಳೆದುಕೊಳ್ಳುತ್ತೇನೆ ಎಂದೇ ಅವನು ಭಾವಿಸುತ್ತಿದ್ದ.

ಈಗ ಕ್ರಮೇಣ ಅವರಿಬ್ಬರಲ್ಲಿ ಸಲಿಗೆ ಹೆಚ್ಚತೊಡಗಿತು. ಇಬ್ಬರೂ ಮನ ಬಿಚ್ಚಿ ತಂತಮ್ಮ ಅಂತರಾಳದ ಭಾವನೆ ತೋಡಿಕೊಳ್ಳುವ ಮಟ್ಟಕ್ಕೆ ಬಂದಿದ್ದರು. ಹೀಗೆ ಒಂದು ಸಲ ಪತ್ನಿ ಸ್ವಾತಿಯ ಕಾಯಿಲೆ ಕುರಿತು ಹೇಳುತ್ತಾ, “ನಿನಗೆ ಗೊತ್ತಾ ಅಮಲಾ, ಮೇಲ್ನೋಟಕ್ಕೆ ಈ ರೋಗ ಅವಳನ್ನು 6 ತಿಂಗಳಿನಿಂದ ಕಾಡುತ್ತಿದೆ. ಆದರೆ ನಾನು ನನ್ನ ಪತ್ನಿಯ ಜೊತೆ ಸುಖವಾಗಿದ್ದುದು ಕೇವಲ 1 ವರ್ಷ ಮಾತ್ರ ಎನಿಸುತ್ತದೆ.

“3 ವರ್ಷಗಳ ಈ ವೈವಾಹಿಕ ಜೀವನ ಈಗಾಗಲೇ ರೋಸಿಹೋಗಿದೆ. ಎರಡೇ ವರ್ಷಗಳಲ್ಲಿ ಪ್ರೆಗ್ನೆಂಟ್‌ ಆದಳು. ಪ್ರೆಗ್ನೆನ್ಸಿಯಲ್ಲಿ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸಿದಳು. ನೂರಾರು ಬಗೆಯ ವೈದ್ಯ ಮಾಡಿದ್ದಾಯ್ತು. ನಂತರ ಮಗು ಆದ ಮೇಲೆ ಅವಳಿಂದ ಅದನ್ನು ಹೆಚ್ಚು ಸುಧಾರಿಸಲು ಆಗುತ್ತಲೇ ಇರಲಿಲ್ಲ……

“ಎಷ್ಟೋ ರಾತ್ರಿ ನಿದ್ರೆಗೆಟ್ಟು ನಾನೇ ಮಗುವನ್ನು ನೋಡಿಕೊಳ್ಳುತ್ತಿದ್ದೆ. ಕೊನೆಗೆ ಬೇರೆ ದಾರಿ ಇಲ್ಲದೆ ಅವಳ ತಂಗಿಯನ್ನು ಕರೆಸಿಕೊಳ್ಳುವಂತಾಯಿತು. ಶೃತಿ ಬಂದ ಮೇಲೆ ನೆಮ್ಮದಿಯಾಗಿ ನಾನು ಆಫೀಸ್‌ ಕೆಲಸಗಳಲ್ಲಿ ತೊಡಗುವಂತಾಯಿತು. ಅವಳ ಈ ರೋಗ ಎಂದು ವಾಸಿಯಾಗುತ್ತದೋ ಎನಿಸಿಬಿಟ್ಟಿದೆ. ಇದನ್ನೆಲ್ಲ ಸಂಭಾಳಿಸುತ್ತಾ ನನಗೆ ಯಾವಾಗ ಹುಚ್ಚು ಹಿಡಿಯುತ್ತದೋ ಗೊತ್ತಿಲ್ಲ,” ಎಂದು ಅವಳ ಹೆಗಲ ಮೇಲೆ ತಲೆಯಾನಿಸಿ ಕಣ್ಮುಚ್ಚಿ ಗದ್ಗದಿತನಾದ.

ಇದನ್ನೆಲ್ಲ ಕೇಳಿಸಿಕೊಳ್ಳುತ್ತಾ ಅವಳಿಗೆ ಅವನ ಮೇಲೆ ಹೆಚ್ಚು ಕನಿಕರ, ಪ್ರೀತಿ ಉಕ್ಕಿ ಬರುತ್ತಿತ್ತು. ಇಂಥ ಚೆಲುವ ಚೆನ್ನಿಗರಾಯನಿಗೆ ಇಷ್ಟೆಲ್ಲ ಸಾಂಸಾರಿಕ ತಾಪತ್ರಯಗಳೇ ಎನಿಸಿ ವಿಹ್ವಲಗೊಳ್ಳುತ್ತಿದ್ದಳು. ತನಗೆ ಅರಿವಿಲ್ಲದೆ ಹೆಗಲಿಗೊರಗಿದ್ದ ಅವನ ತಲೆ ಸವರಿ, ಆತ್ಮೀಯತೆಯಿಂದ ಸಂತೈಸುವಳು.

ಒಂದು ದಿನ ಹೋಟೆಲ್‌ವಲ್ಲಿ ಕುಳಿತಿದ್ದಾಗ ನಿರಂಜನ್‌ ಅಮಲಾಳನ್ನು ನೇರವಾಗಿಯೇ ಕೇಳಿದ, “ನಿನಗೆ ನಿನ್ನ ಸಂಗಾತಿಯು ಹೇಗಿರಬೇಕೆಂದು ಇಷ್ಟ?”

“ಹ್ಯಾಂಡ್‌ಸಂ ಆಗಿರಲಿ ಬಿಡಲಿ, ಆದರೆ ನನ್ನ ಕುರಿತು ಕೇರಿಂಗ್‌ ನೇಚರ್‌ ಇರಬೇಕು. ನನ್ನ ಕಷ್ಟಕಾಲದಲ್ಲಿ ಸದಾ ನನಗೆ ಜೊತೆ ಕೊಡುವವನಾಗಿರಬೇಕು, ನನ್ನನ್ನು ಬಿಟ್ಟು ಬೇರೆಯವರತ್ತ ಕಣ್ಣು ಹಾಯಿಸದವನಾಗಿರಬೇಕು. ಅದೇ….. ಈಗ ನೀನು ನನ್ನತ್ತ ಕಾಳಜಿ ವಹಿಸುತ್ತಿಲ್ಲವೇ ಹಾಗೆ…..”

“ನಾನು ಹ್ಯಾಂಡ್‌ಸಂ ಅಲ್ಲ ಅಂತೀಯಾ…..” ಮಕ್ಕಳ ತರಹ ಮುಖ ಮಾಡಿಕೊಂಡು ಮುಗ್ಧತೆಯಿಂದ ಪ್ರಶ್ನಿಸಿದ ನಿರಂಜನ್.

“ಛೇ… ಛೇ…. ನಾನೆಲ್ಲಿ ಹಾಗೆ ಹೇಳಿದೆ, ಬಿಡಪ್ಪ. ನೀನು ಸ್ವಾತಿ ಮೇಡಂನ ಎಷ್ಟು ಅಕ್ಕರೆಯಿಂದ ನೋಡಿಕೊಳ್ತಿ ಅಲ್ವಾ…. ಆ ದೃಷ್ಟಿಯಿಂದ ಹೇಳಿದ್ದು….. ಅಂದಹಾಗೆ…. ನೀನು ಯಾವ ಫಿಲಂ ಹೀರೋಗೂ ಕಡಿಮೆ ಇಲ್ಲ ಬಿಡು!” ಎಂದಾಗ ಚಿಂತೆಯಿಂದ ಸೀರಿಯಸ್‌ ಆಗಿದ್ದ ಇಬ್ಬರ ಮುಖದಲ್ಲೂ ನಗು ಹರಡಿತು. ಅಷ್ಟು ಸಾಲದೆಂಬಂತೆ ಸಲಿಗೆಯಿಂದ ಅವಳು ಅವನ ಕೆನ್ನೆ ಎಳೆದಳು.

ಅಮಲಾಳ ಕೈಯನ್ನು ತನ್ನ ಕೆನ್ನೆಗೊತ್ತಿಕೊಳ್ಳುತ್ತಾ ನಿರಂಜನ್‌ ಹೇಳಿದ, “ಪ್ಲೀಸ್‌ ಅಮು…. ದಯವಿಟ್ಟು ಹೀಗೆ ಮಾಡಬೇಡ. ಆದಷ್ಟೂ ನನ್ನನ್ನು ನಿನ್ನಿಂದ ದೂರವೇ ಇರಿಸಿಬಿಡು. ಇಲ್ಲದಿದ್ದರೆ ನಾವಿಬ್ಬರೂ ಕೇವಲ ಫ್ರೆಂಡ್ಸ್ ಅಷ್ಟೇ ಎನ್ನುವುದನ್ನು ನಾನು ಮರೆತೇ ಬಿಡುತ್ತೇನೆ!”

“ಮರೆತುಬಿಡ್ತೀಯಾ? ಹಾಗಿದ್ದರೆ ನನ್ನನ್ನು ಏನೆಂದು ಭಾವಿಸುವೆ?” ಒಲ್ಲದ ಮನದಿಂದ ಅವನ ಕೆನ್ನೆಯಿಂದ ಕೈ ಹಿಂಪಡೆಯುತ್ತಾ ಕೇಳಿದಳು. “ನಾನು ನಿನಗೆ ಹೇಗೆ ಬಿಡಿಸಿ ಹೇಳಲಿ? ಇದಂತೂ ನಿನಗೆ ಗೊತ್ತಲ್ಲವೇ….. ನಾವು ಇಷ್ಟು ನಿಕಟರಾದ ಮೇಲೆ… ಮತ್ತೆ ನನಗೆ ನಿನ್ನ ಮೇಲೆ ಆಸೆ ಆಗದೆ ಇರುತ್ತದೆಯೇ….. ಹಾಗೆ ನಿನ್ನ ತೋಳಲ್ಲಿ ಬಳಸಿ, ನಿನ್ನ ಮುದ್ದಾದ ತುಟಿಗಳಿಗೆ ಹೂ ಮುತ್ತು ನೀಡಿ….. ನಾನೂ ಮನುಷ್ಯನೇ ಅಲ್ಲವೇ? ನನ್ನಲ್ಲಿ ಆಸೆ ಕೆರಳುವುದಿಲ್ಲವೇ?

“ನಿನ್ನ ಪ್ರೀತಿಯ ಟಚ್‌ನಿಂದ ನನ್ನ ದೇಹದಲ್ಲಿ ಕರೆಂಟ್‌ ಹರಿದ ಹಾಗಾಯ್ತು! ಸತ್ಯ ಹೇಳು ಅಮು, ನಿನಗೂ ಈ ವಯಸ್ಸಿನಲ್ಲಿ ನನ್ನಂಥ ಗಂಡಸಿನ ಟಚ್‌ ಬೇಕೆಂದು ಅನಿಸುವುದಿಲ್ಲವೇ? ಯೌವನ ತುಂಬಿ ತುಳುಕುತ್ತಿರುವ ನಿನಗೆ ಒಂದು ಜೋಡಿ ಬೇಕೆನಿಸುವುದಿಲ್ಲವೇ?” ಅವಳ ಕೈಯನ್ನು ತನ್ನ ಕೈಗಳಲ್ಲಿ ಮೃದುವಾಗಿ ಅಮುಕುತ್ತಾ ಅವಳು ಪರವಶಗೊಳ್ಳುವಂತೆ ನುಡಿದ.

ಅದಕ್ಕೆ ಏನೂ ಉತ್ತರಿಸದೆ ಅಮಲಾ ಬಹಳ ಹೊತ್ತು ತಲೆ ತಗ್ಗಿಸಿಯೇ ಕುಳಿತಿದ್ದಳು. ಅವನಿಂದ ತನ್ನ ಕೈ ಹಿಂಪಡೆಯಲಿಲ್ಲ.

“ಅರೆ….. ನೀನು ಎಲ್ಲೋ ಭಾವನೆಗಳಲ್ಲಿ ಕಳೆದುಹೋಗಿದ್ದಿ….. ನಾನು ನಿನ್ನನ್ನು ಕಷ್ಟಕ್ಕೆ ಸಿಲುಕಿಸಲು ಹೀಗೆ ಕೇಳಿದ್ದಲ್ಲ. ಸುಮ್ಮನೆ….. ಸಹಜವಾಗಿ ಕೇಳಿದ್ದಷ್ಟೆ….. ನಡಿ, ಹಾಗೇ ಹೊರಗೆ ಒಂದು ರೌಂಡ್‌ ಅಡ್ಡಾಡುತ್ತಾ ಬೇರೇನಾದರೂ ಟಾಪಿಕ್ ಮಾತಾಡೋಣ,” ಎನ್ನುತ್ತಾ ಎದ್ದ ನಿರಂಜನ್‌ ಅವಳನ್ನು ಎಬ್ಬಿಸಿ, ಕೈ ಹಿಡಿದು ಮುನ್ನಡೆಸುವವನಂತೆ ದಾರಿ ತೋರಿದ. ಇಬ್ಬರೂ ನಸುನಗುತ್ತಾ ಹೋಟೆಲ್‌‌ನಿಂದ ಹೊರಬಂದು ಮರಗಳ ನೆರಳಿನಡಿಯಲ್ಲಿ ತಂಪು ಹವೆಗೆ ಮೈಯೊಡ್ಡಿ ಹಾಯಾಗಿ ನಡೆಯತೊಡಗಿದರು.

ಆ ರಾತ್ರಿ ಅಮಲಾಳಿಗೆ ಬಹಳ ಹೊತ್ತಾದರೂ ನಿದ್ದೆ ಬರಲೇ ಇಲ್ಲ. ನಿರಂಜನ್‌ ಹೇಳುತ್ತಿರುವುದರಲ್ಲಿ ಉತ್ಪ್ರೇಕ್ಷೆ ಇಲ್ಲ, ಎಲ್ಲ ಸಹಜವಾಗಿಯೇ ಇತ್ತು. ಅವನು ತನ್ನ ಸ್ಪರ್ಶದಿಂದ ಪುಳಕಗೊಂಡಿರುವಂತೆ ತಾನೂ ಅವನ ಸ್ಪರ್ಶದಿಂದ ಸುಖಿಸಿರಲಿಲ್ಲ ಎಂದು ಹೇಳಿದರೆ ಸುಳ್ಳಾದೀತು. ಅವನ ಮನಸ್ಸಿನಲ್ಲಿ ಏನು ನಡೆಯುತ್ತಿರಬಹುದು. ಅವನೋ ಮೊದಲೇ ವಿವಾಹಿತ. ಅವನಿಗೆ ಪತ್ನಿ ಇದ್ದರೂ ಇಲ್ಲದಂಥ ಸ್ಥಿತಿ. ಸದಾ ಖಾಲಿ ಖಾಲಿ ಮನಸ್ಸು…. ಏಕಾಂಗಿಯಾಗಿ ಕೊರಗುತ್ತಿರುತ್ತಾನೆ. ರಾತ್ರಿ ಹೊತ್ತು ಅವನಿಗೆ ನಿದ್ದೆ ಬರುವುದೂ ನಿಜವೇ? ಛೇ….. ಛೇ….! ಎಂಥ ವಿಷಮ ಪರಿಸ್ಥಿತಿ ಇದು! ಹೀಗೆ ಅಮಲಾ ನಿರಂಜನ್‌ ಇನ್ನಷ್ಟು ನಿಕಟರಾದರು. ಅವನ ಕಂಗಳಲ್ಲಿ ತನ್ನ ಬಗ್ಗೆ ಒಂದು ಹೊಸ ಬಯಕೆ ಹುಟ್ಟಿಕೊಂಡಿರುವುದನ್ನು ಗಮನಿಸಿದಳು. ಹಿಂದೆಲ್ಲ ಅವನು ಕಾಫಿಯ ನಂತರ ಅವಳನ್ನು ಮೆಟ್ರೋ ಸ್ಟೇಷನ್‌ವರೆಗೆ ಮಾತ್ರ ಕಾರಿನಲ್ಲಿ ಡ್ರಾಪ್‌ ಮಾಡುತ್ತಿದ್ದ, ಆದರೆ ಈಗ ಆದಷ್ಟೂ ಮನೆಯ ಹತ್ತಿರದ ರಸ್ತೆವರೆಗೆ ಬಂದು ಡ್ರಾಪ್‌ ಮಾಡಿ ಹೋಗುತ್ತಿದ್ದ.

ಅವಳು ಕಾರೇರಿ ಕುಳಿತಂತೆ, ರೊಮ್ಯಾಂಟಿಕ್‌ ಹಾಡು ಪ್ಲೇ ಮಾಡುತ್ತಾ, ಪ್ರಿಯಕರನ ಹಾಗೆ ಕಣ್ಣಲ್ಲೇ ಅವಳನ್ನು ನುಂಗುವಂತೆ ನೋಡುತ್ತಾ, ತುಟಿಗಳಲ್ಲಿ ಮಂದಹಾಸ ಬೀರುತ್ತಿದ್ದ. ಅದನ್ನು ಕಂಡು ಅವಳೂ ಮುಗುಳ್ನಗು ಬೀರುವಳು. ಮನೆಗೆ ಬಂದ ಮೇಲೂ ಸದಾ ಅವಳಿಗೆ ಕುಂತ್ರೆ ನಿಂತ್ರೆ ಅವನದೇ ಧ್ಯಾನವಾಗಿತ್ತು. ಜೀವಕ್ಕೆ ಸಮಾಧಾನ ಇಲ್ಲವಾಗಿತ್ತು.

ಆ ದಿನ ಲಂಚ್‌ ಟೈಂನಲ್ಲಿ ಅಮಲಾಳ ಟೇಬಲ್ ಬಳಿ ಬಂದ ನಿರಂಜನ್‌, ಅನ್ಯಮನಸ್ಕನಾಗಿ ಏನೋ ಚಿಂತಿಸುತ್ತಿರುವುದನ್ನು ಅವಳು ಗಮನಿಸಿದಳು. ಅವಳು ಊಟ ಮಾಡೋಣ ಎಂದು ಡಬ್ಬಿ ತೆರೆದಾಗ, “ಯಾಕೋ ಇವತ್ತು ಊಟ ಮಾಡೋಕ್ಕೇ ಮನಸ್ಸಿಲ್ಲ ಅಮು….. ಒಂದು ವಾರ ನಿನ್ನನ್ನು ಬಿಟ್ಟು ದೂರ ಇರಬೇಕಾಗಿದೆ…. ನಾಡಿದ್ದು 1 ವಾರ ಅಫಿಶಿಯಲ್ ಟ್ರೈನಿಂಗ್‌ಗಾಗಿ ಮುಂಬೈಗೆ ಹೋಗಬೇಕಿದೆ. ಮನೆಯಲ್ಲಿ  ಶೃತಿ ಬಂದಿರುವುದರಿಂದ ಸ್ವಾತಿ, ಮಗು ಕಿರಣ್‌ ಬಗ್ಗೆ ಏನೂ ಚಿಂತೆ ಇಲ್ಲ. ಆದರೆ ನಿನ್ನ ಬಿಟ್ಟು ಒಂದು ವಾರ ಹೇಗಿರಲಿ?”

“ನನ್ನ ಮೇಲೆ ನೀನು ಅಷ್ಟೊಂದು ಡಿಪೆಂಡ್‌ ಆಗಿಹೋದರೆ ಹೇಗೆ? ಒಂದು ವಿಧದಲ್ಲಿ ಇದು ಒಳ್ಳೆಯದೇ, ನನ್ನಿಂದ ತುಸು ದೂರ ಇರುವುದನ್ನು ಕಲಿಯಬಹುದು,” ಬೇಕೆಂದೇ ಅವನ ಕೈಗೆ ತನ್ನ ಕೆನ್ನೆ ತಗುಲುವಂತೆ ಮೇಜಿನ ಮೇಲೆ ತಲೆ ಇರಿಸುತ್ತಾ ತುಂಟ ಸ್ವರದಲ್ಲಿ ಹೇಳಿದಳು.

ಅವಳ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಳ್ಳುತ್ತಾ ಹೇಳಿದ, “ನೀನು ಹೀಗೇ ಸದಾ ನನ್ನ ಮನದಲ್ಲೇ ಅಡಗಿರುತ್ತೀಯಾ…. ಹೇಗೆ ತಾನೇ ದೂರ ಹೋಗಲಿ? 1 ವಾರ ನೋಡದೆ ಹೇಗಿರಲಿ? ನಾನಂತೂ ಆದಷ್ಟೂ ನಿನ್ನಲ್ಲೇ ಕರಗಿಹೋಗುವ ಕನಸು ಕಾಣುತ್ತಿರುತ್ತೇನೆ ಅಷ್ಟೆ, ಈ ಕೈಗಳೇ ನನ್ನ ಜೀವನಾಧಾರ…. ಈ ಮುಖಾರವಿಂದ ನನ್ನ ಹೃದಯದ ಪ್ರತಿಬಿಂಬ….. ಈ ತುಟಿಗಳು ನನ್ನ ಜೀವ…..”

ಅವನ ಕಾವ್ಯಮಯ ಪ್ರೇಮದ ಪಲುಕಿಗೆ ಅವಳು ಕರಗಿ ನೀರಾದಳು. ಸಂಜೆ ಕಾಫಿ ಕುಡಿಯುವಾಗಲೂ ಮತ್ತೆ ಅವಳಿಂದ ದೂರ ಹೋಗುತ್ತಿದ್ದೇನೆ ಎಂಬ ಅದೇ ವಿರಹದ ಮಾತುಗಳನ್ನೇ ಪುನರಾವರ್ತಿಸಿದ. ಮೆಟ್ರೋ ಸ್ಟೇಷನ್‌ ಬಳಿ ಅಂದು ಅವಳನ್ನು ಡ್ರಾಪ್ ಮಾಡಿದಾಗ, ತನ್ನ ಹೃದಯದ ಒಂದು ಭಾಗವೇ ದೂರವಾದಂತೆ ಅವನು ಪ್ರಲಾಪಿಸಿದ.

ನಿರಂಜನ್‌ ದೂರ ಹೊರಟ ಮೇಲೆ ಅಮಲಾ ಸಹ ಬಹಳ ಬೇಸರಗೊಂಡಳು. ತಾನು, ಅವನು, ತಮ್ಮಿಬ್ಬರ ನಡುವೆ ಈ ಹೊಸ ಸಂಬಂಧ…. ಇದು ಎಲ್ಲಿಗೆ ಹೋಗಿ ಮುಗಿಯುವುದೋ? ಆ ಇಡೀ ವಾರ ಅವನ ಧ್ಯಾನದಲ್ಲೇ ಅವಳು ಕಳೆದುಬಿಟ್ಟಳು.

1 ವಾರ ಕಳೆದ ಮೇಲೂ ಅವನು ಆಫೀಸಿಗೆ ಮರಳದಿದ್ದಾಗ ಅಮಲಾ ನಿಜಕ್ಕೂ ಚಿಂತೆಗೊಳಗಾದಳು. ಅವಳು ಎಷ್ಟೋ ಸಲ ಅವನಿಗೆ ಕರೆ ಮಾಡಿದಳು, ಪ್ರತಿ ಸಲ ಫೋನ್‌ ನಾಟ್‌ ರೀಚೆಬಲ್ ಆಗಿರುತ್ತಿತ್ತು. ಒಮ್ಮೆ ಕನೆಕ್ಟ್ ಆದಾಗಲೂ ಸಹ `ಹಲೋ…. ಹಲೋ….’ ಎನ್ನುವಷ್ಟರಲ್ಲಿ ಕಾಲ್ ‌ಕಟ್‌ ಆಯ್ತು.

`ನಾನೇಕೆ ಒಮ್ಮೆ  ನಿರಂಜನ್‌ನ ಮನೆಗೆ ಹೋಗಿ ಅವನ ಪತ್ನಿ ಸ್ವಾತಿಯನ್ನು ನೋಡಿಕೊಂಡು ಬರಬಾರದು? ಆಕೆಯನ್ನು ಕೇಳಿದರೆ ಯಾವಾಗ ಮರಳಿ ಬರುತ್ತಾನೆ ಇತ್ಯಾದಿ ವಿವರಗಳೂ ತಿಳಿಯಬಹುದು. ಹಾಗೇ ನಿರಂಜನ್‌ ಕುಮಾರನನ್ನೂ ಭೇಟಿಯಾಗಬಹುದು….. ಅಲ್ಲಿ ನಿರಂಜನ್‌ ಇಲ್ಲದಿದ್ದರೂ ಅವನ ದೇಹದ ಸುಗಂಧ ತುಂಬಿರುವ ವಸ್ತುಗಳಂತೂ ಸಿಗುತ್ತದಲ್ಲವೇ? ಈ ಮೋಹಪಾಶದಿಂದ  ತತ್ತರಿಸುತ್ತಿರುವ ತನಗೆ ಇದಕ್ಕಿಂತ ಬೇರೆ ಉತ್ತಮ ದಾರಿ ಕಾಣುತ್ತಿಲ್ಲ,’ ಎನಿಸಿತು. ತಕ್ಷಣ ಕಂಪ್ಯೂಟರ್‌ನಿಂದ ಅವನ ಮನೆಯ ವಿಳಾಸ ಗುರುತಿಸಿಕೊಂಡಳು.

ಮಾರನೇ ದಿನ ಭಾನುವಾರ. ಸ್ವಾತಿಗೊಂದು ಬೊಕೆ, ಮಗುವಿಗೆ ಕೆಲವು ಆಟಿಕೆ, ಸಿಹಿ ಖರೀದಿಸಿದ ಅವಳು ಕ್ಯಾಬ್‌ ಬುಕ್ ಮಾಡಿಕೊಡು ನೇರ ನಿರಂಜನನ ಮನೆ ಮುಂದೆ ಬಂದಿಳಿದಳು. ಅಪಾರ್ಟ್‌ಮೆಂಟ್‌ ಮುಂದಿಳಿದ ಅವಳಿಗೆ ಅವನ ಫ್ಲಾಟ್‌ಹುಡುಕುವುದರಲ್ಲಿ ಏನೂ ತೊಂದರೆ ಆಗಲಿಲ್ಲ. ನಿರಂಜನನ ಪತ್ನಿ ಮತ್ತು ಮತ್ತು ಅವಳ ತಂಗಿ ತನ್ನ ಪರಿಚಯಕ್ಕೆ ಹೇಗೆ ಪ್ರತಿಕ್ರಿಯೆ ತೋರುತ್ತಾರೋ ಎಂಬ ಕಸಿವಿಸಿ ಇದ್ದೇ ಇತ್ತು.

ಕರೆಗಂಟೆ ಒತ್ತಿದ ತಕ್ಷಣ ಬಾಗಿಲು ತೆರೆದ ಯುವತಿಯನ್ನು ಕಂಡು ಅವಳ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಕಾಲೇಜಿನ ಅವಳ ಒಂದು ವರ್ಷದ ಸೀನಿಯರ್‌ ನಮ್ರತಾ ಎದುರಿಗೆ ನಿಂತಿದ್ದಳು.

`ಓ…. ನಮ್ರತಾಳ ಅಕ್ಕನೇ ನಿರಂಜನನ ಪತ್ನಿ ಇರಬೇಕು,’ ಎಂದುಕೊಳ್ಳುತ್ತಾ ಅಮಲಾಳ ಎಲ್ಲಾ ಚಿಂತೆ ದೂರಾಯಿತು. ಬಹಳ ವರ್ಷಗಳ ನಂತರ ಕಂಡ ಕಾಲೇಜಿನ ಗೆಳತಿಯ ದರ್ಶನ, ನಮ್ರತಾಳನ್ನು ಆಶ್ಚರ್ಯದಿಂದ ಮೂಕಳಾಗಿಸಿತ್ತು.

“ಓಹ್‌….. ನಮ್ರತಾ! ಹೌ ಆರ್‌ಯೂ? ಇದು ನಿರಂಜನ್‌ ಅವರ ಮನೆಯಲ್ವಾ ನಾನು ಅವರ ಕೊಲೀಗ್‌. ಅವರೇ ನಿನ್ನ ಭಾವ ಅಂತ ನನಗೆ ಹೇಗೆ ಗೊತ್ತಾಗಬೇಕು? ಅವರ ಆಫೀಸಿನಲ್ಲಿ ನಾನು ಲೈಬ್ರೇರಿಯನ್‌ ಆಗಿದ್ದೀನಿ,” ಎನ್ನುತ್ತಾ ಹೂ, ಸಿಹಿ, ಆಟಿಕೆಗಳನ್ನು ನಮ್ರತಾಳ ಕೈಗಿತ್ತಳು.

“ಓಹೋ…. ನಿನಗೆ ಅವರ ಬಳಿ ಕೆಲಸವಿತ್ತೇ? ಈ ಫ್ರೆಂಡ್‌ನ ನೋಡಲಲ್ಲ ನೀನು ಬಂದದ್ದು…. ಆದರೆ ನಿರಂಜನ್‌ ನನ್ನ ಭಾವ ಅಲ್ಲ, ಅವರು ನನ್ನ ಪತಿ! ಆಫೀಸ್‌ ಕೆಲಸವಾಗಿ ಮುಂಬೈಗೆ ಹೋಗಿದ್ದಾರೆ. ಇನ್ನೇನು 2-3 ದಿನಗಳಲ್ಲಿ ಬಂದುಬಿಡುತ್ತಾರೆ. ಆದರೆ ನೀನೇಕೆ ಅವರನ್ನು ನನ್ನ ಭಾವ ಮಾಡಿದೆ?” ಎನ್ನುತ್ತಾ ಗೆಳತಿಯನ್ನು ಹಾರ್ದಿಕವಾಗಿ ಮನೆಯೊಳಗೆ ಬರಮಾಡಿಕೊಂಡಳು ನಮ್ರತಾ.

“ಅದೇನೂಂದ್ರೆ….. ನೀನಂತೂ ಬಿಡಮ್ಮ, ಕಾಲೇಜ್‌ ಡೇಸ್‌ ಹಾಗೇ ಇನ್ನೂ ಸ್ಲಿಂ ಟ್ರಿಂ ಆಗಿ ಯಂಗ್‌ ಆಗಿದ್ದೀಯ…. ನಿನ್ನನ್ನು ನೋಡಿದರೆ ಮದುವೆ ಆಗಿ ಮಗುವಿನ ತಾಯಿ ಅಂತ ಯಾರು ಹೇಳಲು ಸಾಧ್ಯ?” ಅಮಲಾಳ ಮಾತು ಗಂಟಲಲ್ಲೇ ಉಳಿಯಿತು.

“ಥ್ಯಾಂಕ್ಸ್ ಡಿಯರ್‌……” ನಮ್ರತಾ ಕಿಲಕಿಲ ನಕ್ಕಳು.

“ಈ ಶಾರ್ಟ್ಸ್ ನಲ್ಲಿ ನಿನ್ನ ನೋಡಿದವರು ನಿನ್ನನ್ನು ಹೇಗೆ ತಾನೇ ಮಗುವಿನ ತಾಯಿ ಅಂದುಕೊಳ್ಳಲು ಸಾಧ್ಯ?” ಅಮಲಾ ಜಾಗ್ರತೆ ವಹಿಸುತ್ತಾ ಹೇಳಿದಳು.

“ಓ…..ನಿರೂ ನಿನಗೆ ನಮ್ಮ ಕಿಟ್ಟು ಬಗ್ಗೆ ಹೇಳಿರಬೇಕಲ್ಲವೇ…. ಅವನಂತೂ ಅಪ್ಪನ ಹಾಗೇ ಬಹಳ ತುಂಟ ಬಿಡು. ನಿರೂ ಸಹಾಯವಿಲ್ಲದೆ ಮಗು ಸುಧಾರಿಸುವುದು ನನ್ನಿಂದಾಗದ ಕೆಲಸ….. ಈಗಷ್ಟೇ ನಿದ್ರೆಗೆ ಜಾರಿದ್ದಾನೆ ಬಡ್ಡಿ ಮಗ…. ಇಲ್ಲದಿದ್ದರೆ ಮನೆ ಪೂರ್ತಿ ಅಂಬೆಗಾಲಿಡುತ್ತಾ ಎಲ್ಲಾ ಸಾಮಗ್ರಿ ಚೆಲ್ಲಾಡಿ ಬಿಡುತ್ತಿದ್ದ….” ಅಲ್ಲಲ್ಲಿ ಹರಡಿದ್ದ ವಸ್ತು ಎತ್ತಿಡುತ್ತಾ ನಮ್ರತಾ ಹೇಳಿದಳು.

“ಮಗು ಇರೋ ಮನೆ ಅಂದ್ರೆ ಹಾಗೇ ಅಲ್ಲವೇ…. ಹಾಗೇ ಇರಬೇಕು ಬಿಡು,” ಎಂದು ಪತಿ ಪತ್ನಿ ಜೊತೆ ಮಗು ಇದ್ದ ಫೋಟೋ ನೋಡತೊಡಗಿದಳು ಅಮಲಾ.

“ಇರು, ನಿನಗೆ ಟೀ ಮಾಡಿ ತರ್ತೀನಿ. ನಮ್ಮ ರಂಗಿ ಇವತ್ತು ಲೀವ್‌, ಲ್ಲಾ ನಾನೇ ನೋಡಿಕೊಳ್ಳಬೇಕು,” ಎಂದು ಅಡುಗೆಮನೆಯತ್ತ ನಡೆದಳು ನಮ್ರತಾ. ಅಮಲಾಳ ತಲೆಗಂತೂ ಏನೂ ಹೊಳೆಯಲೇ ಇಲ್ಲ. `ಓ…. ನಮ್ರತಾ ನಿರಂಜನನ ಪತ್ನಿ! ಇವಳನ್ನು ನೋಡಿದರೆ ರೋಗಿಷ್ಟೆ ಅಂತ ಪ್ರಮಾಣ ಮಾಡಿದ್ರೂ ಯಾರೂ ನಂಬುವ ಹಾಗಿಲ್ಲ, ಅಷ್ಟು ಚುರುಕಾಗಿದ್ದಾಳೆ. ಹಾಗಿದ್ದರೆ ಪತ್ನಿ ಸದಾ ಹಾಸಿಗೆ ಹಿಡಿದಿರುತ್ತಾಳೆ ಅಂತ ನಿರಂಜನ್‌ ಹೇಳಿದ್ದು ಸುಳ್ಳೇ’ ಯಾರೋ ತನ್ನನ್ನು ಚೆನ್ನಾಗಿ ಏಮಾರಿಸಿದ್ದಾರೆ ಎಂದು ಅವಳಿಗೆ ತಕ್ಷಣ ಅರ್ಥವಾಯಿತು.

ನಮ್ರತಾಳ ಜೊತೆ ಕುಳಿತು ಟೀ ಕುಡಿಯುತ್ತಾ ಕಾಲೇಜಿನ ದಿನಗಳ ಬಗ್ಗೆ ಮಾತನಾಡುವಾಗಲೂ ಅಮಲಾ ಬಹಳ ಅನ್ಯಮನಸ್ಕಳಾಗಿಯೇ ಇದ್ದಳು. ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಅಲ್ಲದಿದ್ದರೂ ಹಾಯ್‌, ಹಲೋ ಫ್ರೆಂಡ್‌ಶಿಪ್‌ ಇದ್ದೇ ಇತ್ತು. “ಏನು ಯೋಚಿಸುತ್ತಿರುವೆ ಅಮಲಾ? ಟೀ ಕುಡಿ, ಆರಿಹೋಯ್ತು. ಹಾಗೇ ನಮ್ಮ ಮನೆ ತೋರಿಸ್ತೀನಿ ಬಾ. ಹರಟೆಯಲ್ಲಿ ನನಗೆ ಎಲ್ಲಾ ಮರತೇ ಹೋಯ್ತು,” ಎಂದು ಲವಲವಿಕೆಯಿಂದ ಮಾತನಾಡಿದಳು ನಮ್ರತಾ.

ವಟವಟ ಎಂದು ಬಾಯಿ ತುಂಬಾ ಮಾತನಾಡುವ ನಮ್ರತಾಳ ಮಾತಿನಿಂದ ತಾನು ಎಲ್ಲಿದ್ದೇನೆ ಎಂದು ಅಮಲಾ ಮತ್ತೊಮ್ಮೆ ಎಚ್ಚೆತ್ತುಕೊಳ್ಳುವಂತಾಯಿತು.

“ನಿರಂಜನ್‌ 2 ತಿಂಗಳ ಹಿಂದೆ ಪೂರ್ತಿ 1 ತಿಂಗಳು ಲಾಂಗ್‌ ಲೀವ್ ಇದ್ದರಲ್ಲ…. ಮೀಟಿಂಗ್‌ನಲ್ಲಿ ನಮ್ಮ ಸೀನಿಯರ್ಸ್ ಅವರನ್ನು ಬಹಳ ಮಿಸ್‌ ಮಾಡಿಕೊಳ್ತಿದ್ದರು,” ಅಮಲಾ ಮಾತು ತೇಲಿಸಿದಳು.

“ಹ್ಞಾಂ….. ಆಫೀಸಿನಲ್ಲಿ ನನಗೇನೋ ರೋಗ ಇದೆ ಅಂತ ಹೇಳಿ ಲಾಂಗ ಲೀವ್ ‌ತೆಗೆದುಕೊಂಡಿದ್ದರು. ಆದರೆ ಅಸಲಿಗೆ ಅದಲ್ಲ ವಿಷಯ, ನಿನ್ನ ಹತ್ತಿರ ಏನು ಮುಚ್ಚುಮರೆ….. ಅವರಿಗೆ ಬೇರೊಂದು ಕಂಪನಿಯ ಜಾಬ್‌ ಸಿಕ್ಕಿತ್ತು. ಆ ಜಾಬ್‌ ಸರಿಹೋಗುತ್ತಾ ನೋಡೋಕ್ಕೆ 1 ತಿಂಗಳ ಲೀವ್ ಹಾಕಿ ಹೋಗಿದ್ದರು. ಪ್ಯಾಕೇಜ್‌ ಎಲ್ಲಾ ಚೆನ್ನಾಗಿದ್ದರೂ ವರ್ಕ್‌ ಪ್ರೆಷರ್‌ ಅತ್ಯಧಿಕವಾಗಿ ಅವರಿಗೆ ಆಗಾಗ ತಲೆನೋವು ಬಂದುಬಿಡುತ್ತಿತ್ತು…… ಹೀಗಾಗಿ ಹೊಸ ಜಾಬ್‌ ಬೇಡ. ಅಂತ ಹಳೇ ಕೆಲಸಕ್ಕೇ ಶರಣಾದರು. ಅಲ್ಲಿದ್ದರೆ ಫ್ಯಾಮಿಲಿ ವಾತಾವರಣ, ಹಾಯಾಗಿದೆ ಅಂತ ಹೇಳ್ತಾ ಇರ್ತಾರೆ.”

“ಒಂದು ವಿಧದಲ್ಲಿ ಒಳ್ಳೆಯದೇ ಆಯ್ತಲ್ವಾ…… ಎಲ್ಲೋ ಇದ್ದ ನಾನೂ ನೀನೂ ಈ ನೆಪದಲ್ಲಿ ಭೇಟಿ ಆಗುವಂತಾಯ್ತು,” ಎಂದು ಕೃತಕ ನಗು ತಂದುಕೊಳ್ಳುತ್ತಾ ಹೇಳಿದಳು ಅಮಲಾ.

ಟೀ ಮುಗಿಸಿ, ಮಗುವನ್ನು ನೋಡಿದ ಶಾಸ್ತ್ರ ಮಾಡಿ ಅಲ್ಲಿಂದ ಭಾರವಾದ ಮನಸ್ಸಿನಿಂದ ಹೊರಟಳು ಅಮಲಾ. ಚಿಂತಾಗ್ರಸ್ತ ಮನ ಅವಳನ್ನು ಗಂಭೀರವಾಗಿ ಯೋಚಿಸಲಿಕ್ಕೂ ಬಿಡಲಿಲ್ಲ. ನಿರಂಜನ್‌ ತನ್ನ ಮುಗ್ಧತನದ ದುರುಪಯೋಗಪಡಿಸಿಕೊಂಡು ಇಂಥ ದೊಡ್ಡ ಮೋಸ ಮಾಡಬಹುದೆಂದು ಅವಳು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಅವನು ಹಾಗೆ ಮಾಡಿರಬಹುದೆಂದು ನಂಬಲು ಈಗಲೂ ಅವಳು ತಯಾರಿರಲಿಲ್ಲ.

ಮಾರನೇ ದಿನ ನಿರಂಜನ್‌ ಆಫೀಸಿಗೆ ಬಂದು ರಿಪೋರ್ಟ್‌ ಮಾಡಿಕೊಂಡಿದ್ದ. ತಾನು ಬಂದಿರುವ ವಿಚಾರವನ್ನು ಅವಳಿಗೆ ವಾಟ್ಸ್ಆ್ಯಪ್‌ ಮೆಸೇಜ್‌ ಮೂಲಕ ತಿಳಿಸಿದ್ದ. ಆದರೆ ಅವಳು ಅದಕ್ಕೇನೂ ಉತ್ತರ ಕೊಡಲಿಲ್ಲ.

ಆ ದಿನ ಲಂಚ್‌ ಟೈಂನಲ್ಲಿ ಅವಳಿಗೆ ಊಟ ಮಾಡುವ ಮನಸ್ಸೇ ಇರಲಿಲ್ಲ. ಅವಳು ಮೌನವಾಗಿ ತನ್ನ ಸೀಟ್‌ನಲ್ಲಿ ಕುಳಿತಿದ್ದಾಗ, ನಿರಂಜನ್‌ ಫ್ರೂಟ್‌ ಚಾಟ್‌ ಹಿಡಿದು ಬಂದ. ಅವಳ ಮೇಜಿನ ಮೇಲೆ ಅದನ್ನಿರಿಸಿ, ಅವಳೆದುರು ಕುಳಿತ.

“ನೀನು ಹಸಿದುಕೊಂಡು ನನಗಾಗಿ ಕಾಯುತ್ತಾ ಇರ್ತೀಯಾ ಅಂತ ಚೆನ್ನಾಗಿ ಗೊತ್ತಿತ್ತು….. ಮೊದಲು ಈ ಚಾಟ್‌ ಸವಿದ ನಂತರ ಧಾರಾಳವಾಗಿ ಬೈತೀಯಂತೆ!”

ಅವನ ಮಾತು ಕೇಳಿ ಅವಳೇನೋ ಸುಮ್ಮನಿದ್ದಳು. ಆದರೆ ಮನದಲ್ಲೇ ಕೋಪದಿಂದ ಕುದಿಯುತ್ತಿದ್ದಳು. “ಗೊತ್ತು ಬಿಡು, ನನ್ನ ಮೇಲೆ ಬಹಳ ಕೋಪ ಮಾಡಿಕೊಂಡಿದ್ದೀಯಾಂತ….. ಛೇ…. ಛೇ…. ಎಂಥ ಮೋಸಗಾರನ ಸ್ನೇಹ ಮಾಡಿದೆ ಅಂತ…… ಆದರೆ ನಾನೇಕೆ ಹಾಗೆ ಸುಳ್ಳು ಹೇಳಿದೆ ಅಂತ ನೀನು ತಿಳಿಯಬೇಕಲ್ಲವೇ?”

“ಅದೇನೇ ಕಾರಣ ಇರಲಿ…… ನೀನು ಮಾಡಿದ್ದು ಮಾತ್ರ ಅಕ್ಷಮ್ಯ!”

“ಇದರಲ್ಲಿ ನನ್ನ ತಪ್ಪಿದೆ ಅಂತ ಒಪ್ಪಿಕೊಳ್ತೀನಿ….. ಆದರೆ ಏನು ಮಾಡಲಿ? ನೀಲಿ ಬಣ್ಣದ ಸೀರೆಯುಟ್ಟು ನೀನು ಆಕಾಶ ಸುಂದರಿಯಾಗಿ ನಡೆದು ಬರುತ್ತಿರುವಾಗ….. ಇದೇ ಫೋಟೋವನ್ನೇ ಅಲ್ಲವೇ ನೀನು 2 ವರ್ಷಕ್ಕೆ ಮೊದಲು ವೈವಾಹಿಕ ವೆಬ್ ಸೈಟ್‌ನಲ್ಲಿ ಹಾಕಿದ್ದು….. ಆ ಫೋಟೋ ನೋಡುತ್ತಲೇ ನಾನು ಹುಚ್ಚನಂತಾಗಿದ್ದೆ. ನನ್ನ ಪೇರೆಂಟ್ಸ್ ಗೆ ಹೇಳಿದ್ದೆ, ಮೊದಲ ಸಲ ಈ ಹುಡುಗಿ ನನಗೆ ಬಹಳ ಮೆಚ್ಚುಗೆ ಆಗಿದ್ದಾಳೆ ಅಂತ…. ಇದೇ ಹುಡುಗಿಯನ್ನು ನನಗೆ ಫಿಕ್ಸ್ ಮಾಡಿಸಿ ಅಂತಾನೂ ಹೇಳಿದ್ದೆ….

“ಆದರೆ ಶ್ರೀಮಂತರ ಮನೆತನದ ಒಬ್ಬಳೇ ಮಗಳಾಗಿದ್ದ ನಮ್ರತಾ ನಮ್ಮ ಮನೆಯವರಿಗೆ ಒಪ್ಪಿಗೆಯಾದಳು. ಅವರ ಕಣ್ಣು ಕುಕ್ಕುವಂತೆ ಅವಳ ಆಸ್ತಿ ಇತ್ತು. ಹೀಗಾಗಿ ಅವಳನ್ನು ನನ್ನ ಕುತ್ತಿಗೆಗೆ ಗಂಟು ಹಾಕಿದರು. ಕ್ರಮೇಣ ನಿನ್ನನ್ನು ಮರೆಯತೊಡಗಿದೆ, ಆದರೆ ಇಲ್ಲಿ ಆಫೀಸಿನಲ್ಲಿ ಸಾಕ್ಷಾತ್‌ ಆಗಿ ನೋಡಿದಾಗ….. ಹಾಗೇ ನೋಡುತ್ತಾ ನಿಂತುಬಿಟ್ಟೆ! ಫೋಟೋಗಿಂತ ಬಹಳ ಸುಂದರವಾಗಿದ್ದಿ ನೀನು….. ಹೀಗಾಗಿ ನನ್ನನ್ನು ನಾನು ಕಂಟ್ರೋಲ್ ಮಾಡಿಕೊಳ್ಳಲು ಆಗಲೇ ಇಲ್ಲ…. ಈಗ ನೀನು ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು….. ನಿನಗೇ ಬಿಟ್ಟದ್ದು!”

“ಆದರೆ ಹೀಗೆ ನಾಟಕ ಆಡುವ ಬದಲು ನಿಜ ಹೇಳಬಹುದಿತ್ತಲ್ಲ?” ಈ ಸಲ ನಿರಂಜನ್‌ ಸತ್ಯ ಹೇಳಿದ್ದರಿಂದ ಅವಳ ಕೋಪ ಶಾಂತವಾಗತೊಡಗಿತು. ತಾನು ವೆಡ್ಡಿಂಗ್‌ಡಾಟ್ ಕಾಮ್ ವೆಬ್‌ ಸೈಟ್‌ನಲ್ಲಿ 2 ವರ್ಷಗಳ ಹಿಂದೆ ಇದೇ ನೀಲಿ ಸೀರೆಯ ಫೋಟೋ ಹಾಕಿದ್ದೆ ಎಂದು ಚೆನ್ನಾಗಿ ನೆನಪಿತ್ತು.

“ನಾನು ಸತ್ಯ ಹರಿಶ್ಚಂದ್ರನ ಹಾಗೆ ನಿಜ ಹೇಳಿದ್ದಿದ್ದರೆ ನೀನು ನನಗೆ ಇಷ್ಟು ಕ್ಲೋಸ್‌ ಆಗಲು ಸಾಧ್ಯವಿತ್ತೇ? ನಿನ್ನ ಪ್ರೇಮದ ಪರಿ ಹೇಗಿರುತ್ತದೋ ಎಂದು ನೋಡಬಯಸಿದ್ದೆ ಅಷ್ಟೆ. ಒಂದಲ್ಲ ಒಂದು ದಿನ ನೀನು ಬೇರೆಯವರನ್ನು ಮದುವೆಯಾಗಿ ದೂರ ಆಗುವವಳೇ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು…

“ಇಡೀ ಜೀವನಪೂರ್ತಿ ನಿನ್ನನ್ನು ನನ್ನವಳನ್ನಾಗಿಸಿ ಬಂಧಿಸಿಡಲು ಸಾಧ್ಯವಿಲ್ಲ ಎಂದು ಗೊತ್ತು, ಕೆಲವು ದಿನಗಳ ಮಟ್ಟಿಗಾದರೂ ಪ್ರೇಮಿ ಆಗಿರಬಹುದಲ್ಲವೇ? ನನ್ನನ್ನು ನಂಬು ಅಮಲಾ, ಈ ಬಾರಿ ನಾನು ಖಂಡಿತಾ ಸುಳ್ಳು ಹೇಳುತ್ತಿಲ್ಲ!”

ಇದನ್ನೆಲ್ಲ ಕೇಳಿಸಿಕೊಂಡು ಅಮಲಾ ಸ್ವಲ್ಪ ಹೊತ್ತು ಮೌನವಾಗಿ ಕುಳಿತಿದ್ದಳು. ನಂತರ ಏನನ್ನೋ ಯೋಚಿಸಿ ಹೇಳಿದಳು, “ಸಾರಿ, ಇದರ ಹಿಂದೆ ಇಷ್ಟೆಲ್ಲ ಹಿನ್ನೆಲೆ ಇರಲು ಸಾಧ್ಯ ಎಂದು ನನಗೆ ಗೊತ್ತಿರಲಿಲ್ಲ…. ನನ್ನನ್ನು ಕ್ಷಮಿಸುವೆಯಾ?”

“ಥ್ಯಾಂಕ್ಸ್ ಅಮು…. ಆದರೆ ನಿನ್ನ ಬಳಿ ಕ್ಷಮೆ ಕೇಳಬೇಕಾದವನು ನಾನು! ಹೋಗಲಿಬಿಡು, ಆಗಿದ್ದೆಲ್ಲ ಒಳ್ಳೆಯದಕ್ಕೆ ಅಂತ ಭಾವಿಸೋಣ. ಸರಿ, ಎಂದಿನಂತೆ ಸಂಜೆ ಹೋಟೆಲ್‌ನಲ್ಲಿ ಕಾಫಿಗೆ ಸಿಗೋಣ, ಥ್ಯಾಂಕ್ಸ್ ಅಗೇನ್‌…..” ಎಂದು ಹೊರಟುಹೋದ.

ಸಂಜೆ ಹೋಟೆಲ್‌‌ನಲ್ಲಿ ಕಾಫಿಗೆಂದು ಕುಳಿತಾಗ ಅಮಲಾ ತಾನೇ ಮಾತು ಶುರು ಮಾಡಿದಳು, “ಮತ್ತೆ ನಮ್ರತಾ ನನ್ನ ಬಗ್ಗೆ ಬೇರೆ ಏನೇನು ಹೇಳಿದಳು?”

“ಅದೇ…. ನೀವಿಬ್ಬರೂ ಕಾಲೇಜಿನ ಹಳೆಯ ಸಹಪಾಠಿಗಳು, ಉತ್ತಮ ಗೆಳತಿಯರು ಎಂದು ಕಾಲೇಜಿನ ಕಥೆ ಹೇಳುತ್ತಿದ್ದಳು. ನೀನು ಅವಳ ಗೆಳತಿ ಆಗಿ ಬಂದದ್ದು ನಿಜಕ್ಕೂ ಎಂಥ ಕಾಕತಾಳೀಯ ಅಲ್ಲವೇ…..? ನಿನ್ನನ್ನು ನಮ್ಮ ಮನೆಯಲ್ಲಿ ಕಂಡದ್ದೇ ಬಹಳ ಖುಷಿಯಾಯ್ತು ಎಂದು ಹೇಳುತ್ತಿದ್ದಳು.”

“ಇಲ್ಲ! ನಮ್ರತಾ ಖಂಡಿತಾ ಹಸಿ ಸುಳ್ಳು ಹೇಳುತ್ತಿದ್ದಾಳೆ……”

“ಏನು ಹಾಗಂದ್ರೆ? ನೀವಿಬ್ಬರೂ ಒಟ್ಟಿಗೆ ಒಂದೇ ಕಾಲೇಜಿನಲ್ಲಿ ಓದಲಿಲ್ಲವೇ?”

“ಅದಲ್ಲ ವಿಷಯ….. ನನ್ನನ್ನು ನಿಮ್ಮ ಮನೆಯಲ್ಲಿ ದಿಢೀರ್‌ ಎಂದು ನೋಡಿ ಶಾಕ್‌ ಆದ ಅವಳು, ನಾನಿನ್ನೂ ಅವಿವಾಹಿತೆ……. ಹುಡುಕಿಕೊಂಡು ಸಹೋದ್ಯೋಗಿ ಮನೆಗೆ ಬಂದಿದ್ದು ಅವಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ ಅಂತ ಮುಖ ನೋಡಿದರೆ ಚೆನ್ನಾಗಿ ಗೊತ್ತಾಗುತ್ತದೆ. ಯಾಕೆ ಗೊತ್ತೆ? ನಾನು ಅಲ್ಲಿಗೆ ಹೋಗುತ್ತಲೇ ಅಕ್ಷಯ್‌ ತಕ್ಷಣ ಅಲ್ಲಿಂದ ವಾಪಸ್ಸು ಹೊರಡಬೇಕಾಯಿತು!”

“ಯಾವ ಅಕ್ಷಯ್‌? ಎಲ್ಲಿಂದ ಹೊರಡಬೇಕಾಯಿತು?” ಅವನು ತುಸು ಹುಬ್ಬುಗಂಟಿಕ್ಕುತ್ತಾ ಆತಂಕದಲ್ಲಿ ಕೇಳಿದ.

“ಅದೇ….. ನಮ್ಮ ಹಳೆಯ ಕ್ಲಾಸ್‌ಮೇಟ್‌ ಅಕ್ಷಯ್‌! ನಮ್ರತಾ ಅವನೂ ಒಂದೇ ಬ್ಯಾಚ್‌, ನಾನು ಅಲ್ಲಿಗೆ ಬಂದ್ದಿದ್ದಾಗ ಅದಾಗಲೇ ಅವನು ಬಂದಿದ್ದ. ನಾನು ಆ ಘಳಿಗೆಯಲ್ಲಿ ಅಲ್ಲಿ ಬರಬಹುದೆಂದು ಕನಸಿನಲ್ಲೂ ಊಹಿಸಿರದ ಅವರಿಬ್ಬರೂ ಟೋಟಲಿ ಶಾಕ್‌ಆಗಿದ್ದರು.

“ಹಲೋ ಎಂದು ಎರಡು ಮಾತಾಡಿ ಹೊರಟೇಬಿಟ್ಟ. ಅವನು ಹೊರಡುವಾಗ ಮೆಸೇಜ್‌ ಮಾಡ್ತೀನಿ ಅಂತ ನಮ್ರತಾಗೆ ಸನ್ನೆ ಮಾಡಿ ತೋರಿಸಿದ್ದು, ಇವಳು ತಲೆ ಆಡಿಸಿದ್ದು ಎಲ್ಲಾ ಗೊತ್ತಾಯ್ತು. ಏನೂ ತಿಳಿಯದವಳಂತೆ ನಾನು ಸುಮ್ಮನಾಗಿಬಿಟ್ಟೆ.”

“ಆದರೆ ಇಷ್ಟು ವರ್ಷಗಳಲ್ಲಿ ಯಾವ ಅಕ್ಷಯನ ಮಾತನ್ನೂ ನಮ್ರತಾ ಹೇಳೇ ಇರಲಿಲ್ಲವಲ್ಲ…..? ಇತ್ತೇ ನನಗೆ ಅದು ಗೊತ್ತಾಗಿದ್ದು!” ಗಾಬರಿಯಲ್ಲಿ ಹೇಳಿದ ನಿರಂಜನ್‌.

mahaki-rat-kir-story2

“ಆದರೆ ತಾವಿಬ್ಬರೂ ಆಗಾಗ ಭೇಟಿ ಆಗುತ್ತಲೇ ಇರುತ್ತೇವೆ ಅಂತ ನಮ್ರತಾ ಬಹಳ ಸಹಜವಾಗಿ ಹೇಳಿದಳು. ಇಬ್ಬರಿಗೂ ಚೈನೀಸ್‌ ಡಿಶೆಸ್‌ ಅಂದ್ರೆ ಮೊದಲಿನಿಂದಲೂ ಪಂಚಪ್ರಾಣ. ಹೀಗಾಗಿ ಕಾಲೇಜಿನ ದಿನಗಳಲ್ಲಿ ಯಾವ ಯಾವ ಹೋಟೆಲ್‌‌ಗೆ ಹೋಗುತ್ತಿದ್ದರೋ ಈಗಲೂ ಅಲ್ಲಿಗೇ ಹೋಗ್ತಾರಂತೆ….. ಇತ್ತ ಮಗುವಾದ ಮೇಲೆ ನಮ್ರತಾ ಫ್ರೀಯಾಗಿ ಹಾಗೆ ಹೋಗಲು ಸಾಧ್ಯವಿಲ್ಲದ್ದರಿಂದ ಅಕ್ಷಯ್‌ ತಾನೇ ನಿಮ್ಮ ಮನೆಗೆ ಬರತೊಡಗಿದನಂತೆ….. ಫ್ರೆಂಡ್‌ಶಿಪ್‌ ಮೇಂಟೇನ್‌ ಮಾಡೋದನ್ನು ಅಕ್ಷಯ್ ಚೆನ್ನಾಗಿಯೇ ಬಲ್ಲ.”

“ಆದರೆ ನಮ್ರತಾ ಇದನ್ನೆಲ್ಲ ನನಗೆ ಹೇಳಬಹುದಿತ್ತಲ್ಲ…. ಯಾಕೆ ಮುಚ್ಚಿಟ್ಟಳು? ಇದನ್ನೆಲ್ಲ ಕೇಳಿಸಿಕೊಂಡು ನನಗೆ ಎಷ್ಟು ಕೋಪ ಬರ್ತಿದೆ ಅಂದ್ರೆ, ಈಗಲೇ ಫೋನಿನಲ್ಲಿ ಅವಳಿಗೆ, `ನಿನ್ನ ಅಕ್ಷಯ್‌ ಬಳಿ ಈಗಲೇ ಹೊರಟುಹೋಗು!’ ಅಂತ ರೇಗಾಡಿ ಬಿಡುವಷ್ಟು!” ಎಂದು ಸಿಡುಕಿದ ನಿರಂಜನ್‌.

“ಹೋಗಲಿ ಕೋಪ ಬಿಟ್ಟು ಬಿಡು. ಇದೋ ಕಾಫಿ ಬಂತು….. ತಗೋ,” ಎನ್ನುತ್ತಾ ಕಾಫಿ ಕಪ್ಪನ್ನು ಅವನತ್ತ ಸರಿಸಿದಳು.

“ನಮ್ರತಾ ನನಗೆ ಇಂಥ ವಿಶ್ವಾಸದ್ರೋಹ ಬಗೆಯಬಹುದು ಅಂತ ನಾನೆಂದೂ ಅಂದುಕೊಂಡಿರಲಿಲ್ಲ….. ಅವಳೇಕೆ ಅಕ್ಷಯನ ವಿಷಯ ಮುಚ್ಚಿಡಬೇಕು? ಮೊದಲಿನಿಂದಲೂ ನನ್ನನ್ನೇ ಬಹಳ ಪ್ರೀತಿಸುವುದಾಗಿ ಹೇಳುತ್ತಿರುತ್ತಾಳೆ. ನೋಡಿದ್ಯಾ ಅವಳ ಪ್ರೀತಿ…. ಎಂಥ ಮೋಸಗಾತಿ!” ಮಾತುಮಾತಿನಲ್ಲೂ ಅವನ ಕೋಪ ಹೆಚ್ಚುತ್ತಿತ್ತು. ಅಂದು ಕಾಫಿ ಕುಡಿಯಲು ಅವನಿಗೆ ಮನಸ್ಸೇ ಇರಲಿಲ್ಲ. ಆಟದಲ್ಲಿ ಸೋತ ಕ್ರೀಡಾಪಟುವಂತೆ ಕೈ ಕೈ ಹಿಸುಕಿಕೊಳ್ಳುತ್ತಾ ಹೇಳಿದ.

“ಅವಳು ನಿನ್ನನ್ನು ಪ್ರೀತಿಸುತ್ತಾಳೆ ಅನ್ನುವುದರಲ್ಲಿ ಎರಡು ಮಾತಿಲ್ಲ….. ಹಾಗೇಂತ ಅವಳಿಗೆ ಅಂತ ಒಂದು ಪರ್ಸನಲ್ ಲೈಫ್ ಬೇಡವೇ? ಅವಳು ನಿನಗೆ ಹೇಳದಿದ್ದರೆ ಏನಂತೆ? ಅವಳಿಗೆ ತನ್ನದೇ ಆದ ಕಾರಣಗಳಿರಬೇಕು!”

“ಆದರೆ ಪತಿಪತ್ನಿಯ ಸಂಬಂಧ ಅಡಗಿರುವುದೇ ವಿಶ್ವಾಸದ ಮೇಲಲ್ಲವೇ? ಇಬ್ಬರೂ ಪರಸ್ಪರ ಎಲ್ಲಾ ವಿಷಯ ಹೇಳಿಕೊಳ್ಳಬೇಕಲ್ಲವೇ? ನಿನಗೆ ಇದು ಗೊತ್ತಾಗೋಲ್ಲ ಬಿಡು, ಯಾಕಂದ್ರೆ ನಿನಗೆ ಇನ್ನೂ ಮದುವೆ ಆಗಿಲ್ಲ ನೋಡು…. ಅದಕ್ಕೆ.”

“ಹೌದು, ಮದುವೆ ಆಗಿಲ್ಲ ನಿಜ. ಆದರೆ ನಿನ್ನ ಈ ಮಾತನ್ನು ನಾನು ಅಕ್ಷರಶಃ ಒಪ್ಪುತ್ತೇನೆ. ಪತಿ ಪತ್ನಿ ಪರಸ್ಪರ ವಿಶ್ವಾಸದಿಂದಲೇ ತಮ್ಮ ಸಂಬಂಧ ನಿಭಾಯಿಸಲು ಸಾಧ್ಯ ಅಂತ. ನೋಡಿದ್ಯಾ….. ಯಾವುದೋ ಅಕ್ಷಯನ ಬಗ್ಗೆ ನಿನ್ನ ಮನೆಯಲ್ಲಿ ನಿನ್ನ ಪತ್ನಿ ಜೊತೆ ನೋಡಿದ್ದೆ ಅಂದಿದ್ದಕ್ಕೆ ನಿನಗೆ ಇಷ್ಟು ಕೋಪ ಬರ್ತಿದೆಯಲ್ಲ, ನಾನು ನೀನು ಎಂಥ ಸಂಬಂಧ ಹೊಂದಿದ್ದೆವು ಅಂತ ನಮ್ರತಾಗೆ ಆವತ್ತೇ ನಾನು ಹೇಳಿಬಿಟ್ಟಿದ್ದರೆ ಆಗ ಅವಳ ದೃಷ್ಟಿಯಲ್ಲಿ ನೀನು ಏನಾಗುತ್ತಿದ್ದೆ?”

ನಿರಂಜನ್‌ ಅವಾಕ್ಕಾಗಿ ಅವಳ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದ.

“ನೋಡು, ಪತಿ ಪತ್ನಿ ಯಾರಿಗೆ ಆಗಲಿ, ಅವರ ಪರ್ಸನಲ್ ಫ್ರೆಂಡ್ಸ್ ಇದ್ದೇ ಇರ್ತಾರೆ. ಅವರು ಗಂಡು, ಹೆಣ್ಣು ಯಾರಾದರೂ ಆಗಿರಬಹುದು. ಇದರಲ್ಲಿ ತಪ್ಪೇನು ಬಂತು? ನಮ್ರತಾಳಿಗೆ ಒಂದಿಷ್ಟು ಸುಳಿವು ಕೊಡದೆ ನೀನು ನನ್ನೊಂದಿಗೆ ಇಷ್ಟು ಸಲಿಗೆ ವಹಿಸಬಹುದಾದರೆ ನಮ್ರತಾ ಯಾರೋ ಅಕ್ಷಯ್‌ ಜೊತೆ ಸ್ನೇಹ ಹೊಂದಿದ್ದರೆ ತಪ್ಪೇನಿದೆ?

“ಮೊದಲಿನಿಂದಲೂ ನಾನು ಯಾರು ಅಂತ ನಿನಗೆ ಗೊತ್ತಿತ್ತು, ಇಷ್ಟಪಡ್ತಿದ್ದೆ….. ಅದಕ್ಕೆ ಇಂಥ ಸಂಬಂಧ ಮುಂದುವರಿಸಿದೆ. ಅದೇ ತರಹ ನಮ್ರತಾ ಸಹ ಅಕ್ಷಯ್‌ನನ್ನು ಮೆಚ್ಚಿರಬಹುದು, ವಿಧಿಯಿಲ್ಲದೆ ಹೆತ್ತವರಿಗಾಗಿ ನಿನ್ನನ್ನು ಕಟ್ಟಿಕೊಂಡಿರಬಹುದು. ಹಾಗೇಂತ ಹಳೆಯ ಸ್ನೇಹ ಮರೆತುಬಿಡಬೇಕೇ? ಅದರ ಬಗ್ಗೆ ನಿನಗೆ ಹೇಳದೆ ಇದ್ದುದರಲ್ಲಿ ತಪ್ಪೇನಿದೆ? ನೀನು ಮಾಡಿದ್ರೆ ಸರಿ, ಗಂಡಸು. ಹೆಣ್ಣಾದ ಕಾರಣ ಅವಳು ವಿವಾಹಿತೆ ಅನ್ನೋ ಒಂದೇ ಕಾರಣಕ್ಕೆ ಹೀಗೆ ಮಾಡಬಾರದೇ? ನಿಮ್ಮಿಬ್ಬರಲ್ಲಿ ಈಗ ಯಾರು ಉತ್ತಮರು?”

“ಆದರೆ ನನ್ನ ಇಷ್ಟವಿಲ್ಲದೆ ಬೇರೆ ದಾರಿ ಇಲ್ಲದೆ ಅವಳನ್ನು ನಾನು ಮದುವೆ ಆಗಿದ್ದೆ.”

“ಅವಳಿಗೂ ಅಂಥದೇ ಏನೋ ಒಂದು ಕಷ್ಟ ಬಂದಿರಬೇಕು. ಇದರಲ್ಲಿ ಅವಳ ತಪ್ಪಾದರೂ ಏನು? ನೀನು ಅವಳನ್ನು ಬಲವಂತವಾಗಿ ಮದುವೆ ಆದಂತೆ, ಅವರಮ್ಮ ಅಪ್ಪನ ಒತ್ತಡಕ್ಕೆ ಮಣಿದು ಅವಳು ನಿನ್ನನ್ನು ಕಟ್ಟಿಕೊಂಡಿರಬೇಕಲ್ಲವೇ?”

ಸ್ವಲ್ಪ ಹೊತ್ತು ಯೋಚಿಸಿದ ನಂತರ ನಿರಂಜನ್‌ ಹೇಳಿದ, “ಹೌದು, ನೀನು ಹೇಳುತ್ತಿರುವ ತರ್ಕ ಸರಿಯಾಗೇ ಇದೆ. ಇಂಥ ವಿಚಾರಗಳು ಎಂದೂ ನನ್ನ ತಲೆಗೆ ಬಂದಿರಲೇ ಇಲ್ಲ!”

“ಹೆಣ್ಣಿಗೊಂದು ನ್ಯಾಯ…. ಗಂಡಿಗೊಂದು ನ್ಯಾಯ….. ತಪ್ಪು ಅಂತ ಈಗ ನೀನು ಒಪ್ಪಿಕೊಳ್ತೀಯಾ ತಾನೇ?” ಹೌದೆಂಬಂತೆ ನಿರಂಜನ್‌ ತಲೆ ತಗ್ಗಿಸಿದ.

ಆಗ ಅಮಲಾ ಜೋರಾಗಿ ಕಿಲಕಿಲ ಎಂದು ನಕ್ಕಳು.“ನನ್ನನ್ನು ನೋಡಿ ವ್ಯಂಗ್ಯವಾಗಿ ನಗಬೇಕು ಅನ್ಸುತ್ತೆ ಅಲ್ವಾ…… ನಗು ನಗು!” ಅಸಹಾಯಕನಾಗಿ ನಿರಂಜನ್‌ ಅವಳಿಗೆ ಹೇಳಿದ.

“ಇಲ್ಲ…. ಇಲ್ಲ…. ನನ್ನ ಸ್ಥಿತಿ ಕಂಡು ನನ್ನ ಬಗ್ಗೆಯೇ ನಗು ಬರ್ತಿದೆ. ನಿನ್ನ ರೂಪ ನೋಡಿ ಮನಸೋತು ಇಷ್ಟೆಲ್ಲ ಸಲಿಗೆ ನೀಡಿದ್ದರಿಂದ ತಾನೇ ನೀನು ನನ್ನನ್ನು ಈ ಮಟ್ಟಕ್ಕೆ ಬಳಸಿಕೊಂಡಿದ್ದು, ನೀನು ವಿವಾಹಿತ ಅಂತ ತಿಳಿದ ಮೇಲೆ 2 ಅಡಿ ದೂರ ನಿಂತು, ಕೇವಲ ಸ್ನೇಹದ ದೃಷ್ಟಿಯಲ್ಲಿ ಔಪಚಾರಿಕತೆಗೆ ಎಷ್ಟು ಬೇಕೋ ಅಷ್ಟೇ ಒಬ್ಬ ಸಹೋದ್ಯೋಗಿಯಾಗಿ ನಾನು ವ್ಯವಹರಿಸಿದ್ದರೆ ಇಂದು ನಾನು ನಿನ್ನ ಬಳಿ ಯಾಮಾರಬೇಕಾದ ಈ ದುರ್ಗತಿ ನನಗೆ ಬರುತ್ತಿತ್ತೇ! ಅದಕ್ಕೆ ನನ್ನನ್ನು ಕಂಡು ನನಗೇ ನಗು ಬಂತು, ಅಸಹ್ಯ ಆಗುತ್ತಿದೆ. ನಮ್ಮ ಚಿನ್ನವೇ ತಗಡು ಅಂತಾದಾಗ ಆಚಾರಿ ಅದನ್ನು ಸರಿಪಡಿಸಿಕೊಡಲಿಲ್ಲ ಅಂತ ಅವನನ್ನು ಬೈದು ಏನು ಪ್ರಯೋಜನ? ಇವತ್ತು ನನಗೆ ಬಂದ ಈ ವಿವೇಕ ಅಂದು ಎಲ್ಲಿ ಹೋಗಿತ್ತು?”

“ಛೇ….ಛೇ…. ನಿನ್ನನು ನೀನ್ಯಾಕೆ ಬೈದುಕೊಳ್ತೀಯಾ?”

“ಹೌದು ಮತ್ತೆ……. ತಂತಿ ಮೇಲೆ ಸೀರೆ ಬಿದ್ದರೂ, ಸೀರೇಯೇ ತಂತಿ ಮೇಲೆ ಬಿದ್ದರೂ, ಅದನ್ನು ನಿಧಾನವಾಗಿ ಬಿಡಿಸಿಕೊಳ್ಳಬೇಕೇ ಹೊರತು ಹಿಡಿದು ಜಗ್ಗಬಾರದು, ಹರಿಯುವುದು ಸೀರೆಯೇ! ಹೆಣ್ಣಿನ ಸ್ಥಿತಿಯೂ ಅಷ್ಟೆ, ಅದರಲ್ಲಿಯೂ ಮುಖ್ಯವಾಗಿ ಅವಿವಾಹಿತ ಹುಡುಗಿಯರದು. ನನಗೆ ವಿವೇಕ ಸರಿ ಇದ್ದಿದ್ದರೆ ಇಂದು ಇಷ್ಟೆಲ್ಲ ಅನುಭವಿಸಬೇಕಾದ ಕರ್ಮ ನನಗೆ ಯಾಕೆ ಬರುತ್ತಿತ್ತು…..?

“ಅಷ್ಟು ಮಾತ್ರವಲ್ಲ…. ಅಕ್ಷಯ್‌ ಕೇವಲ ನನ್ನ ಕಲ್ಪನೆಯ ಪಾತ್ರ ಅಷ್ಟೆ. ನಮ್ರತಾ ದೇವರಾಣೆಗೂ ಗಂಗೆಯಷ್ಟೇ ಪರಿಶುದ್ಧ ಮನಸ್ಸಿನವಳು. ಎಂದೂ ಯಾವ ಪರ ಪುರುಷನನ್ನೂ ಕಂಡು ಮರುಳಾದವಳಲ್ಲ. ನಿನ್ನನ್ನು ಕಾಯಾ, ವಾಚಾ, ಮನಸಾ ಪ್ರೇಮಿಸುವ, ಆರಾಧಿಸುವ ಧರ್ಮಪತ್ನಿ! ಆದರೆ ಅವಳ ಮುಂದೆ ನೀನು…. ಛೀ! ಛೀ!  ಹೊಲಸು ಕ್ಯಾರೆಕ್ಟರ್‌ನಿನ್ನದು!”

“ಅಂದ್ರೆ…..? ಅಕ್ಷಯ್‌ ಕುರಿತು ನೀನು ಇಷ್ಟು ಹೊತ್ತು ಹೇಳಿದ್ದೆಲ್ಲ ಕೇವಲ ಕಲ್ಪನೆ…. ಅಷ್ಟು ಮಾತ್ರವೇ ಏನು?”

“ಇನ್ನೇನು ಮತ್ತೆ? ನೋಡಿದ್ಯಾ….. ನಿನ್ನ ಧ್ವನಿಯಲ್ಲಿ ಅದೆಷ್ಟು ಸಂತಸ ತುಂಬಿಕೊಳ್ಳುತ್ತಿದೆ ಅಂತ! ಇದನ್ನೇ ಗಂಡಂದಿರ ಬುದ್ಧಿ ಅನ್ನುವುದು! ನನ್ನ ಹೆಂಡತಿ ಮಾತ್ರ ನನಗೆ ಪರಿಪೂರ್ಣ ಪರಿಶುದ್ಧಳಾಗಿರಬೇಕು ಅಂತ ಪ್ರತಿಯೊಬ್ಬ ಗಂಡನೂ ಬಯಸುವ ಹಾಗೆಯೇ ಹೆಂಡತಿಯೂ ಬಯಸಿದರೆ ತಪ್ಪೇನು? ಮಾನಸಿಕ ವ್ಯಭಿಚಾರ ಯಾರೇ ಮಾಡಿದರೂ ತಪ್ಪು ತಪ್ಪೇ ಅಲ್ಲವೇ?

“ಈ ವಿಷಯ ನಿನ್ನ ತಲೆಗೇರಲಿ ಅಂತಾನೇ ಹೀಗೆ ಮಾಡಿದೆ. ನಿನ್ನ ತಪ್ಪು ಏನು, ನಮ್ರತಾ ಮುಂದೆ ನೀನೆಂಥ ಅಪರಾಧಿ ಅಂತ ಈಗಾದರೂ ತಿಳಿಯಿತೇ? ಇನ್ನು ಮುಂದಾದರೂ ಎಂದೂ ಯಾವ ಹೆಣ್ಣನ್ನು ಈ ದೃಷ್ಟಿಯಲ್ಲಿ ನೋಡಬೇಡ. ಆಗಿದ್ದು ಆಯ್ತು, ಇನ್ನಾದರೂ ನಮ್ರತಾಳಿಗೆ ಆದರ್ಶ ಪತಿಯಾಗಿ, ಅವಳನ್ನು ಸದಾ ಸರ್ವದಾ ನಿನ್ನವಳನ್ನಾಗಿ ಕಾಪಾಡಿಕೋ.

“ಒಂದೇ ಒಂದು ಕ್ಷಣದ ಆವೇಶದಲ್ಲಿ ಅಂದು ಈ ಎಲ್ಲಾ ವಿಷಯ ನಮ್ರತಾ ಮುಂದೆ ಹೇಳಿಬಿಟ್ಟಿದ್ದರೆ ನಿನ್ನ ಸಂಸಾರದ ಗತಿ ಏನಾಗುತ್ತಿತ್ತು? ಅಂಥ ಶ್ರೀಮಂತರ ಮನೆ ಹುಡುಗಿ ಒಂದ ಕ್ಷಣದಲ್ಲಿ ನಿನಗೆ ಸೋಡಾಚೀಟಿ ಕೊಟ್ಟು ಮಗು ಜೊತೆ ಹೋಗಿಬಿಡುತ್ತಿದ್ದಳು…. ಅತ್ತ ಅವಳೂ ಇಲ್ಲ, ಇತ್ತ ನಾನೂ ಇಲ್ಲ ಅನ್ನುವ ನಾಯಿ ಪಾಡು ನಿನ್ನದಾಗುತ್ತಿತ್ತು.

“ತಪ್ಪೇ ಆದರೂ ಒಂದು ಕ್ಷಣ ನಿನ್ನನ್ನು ಪ್ರೀತಿಸಿದ್ದೆ ಅನ್ನುವ ಪ್ರಾಮಾಣಿಕತೆಗಾಗಿ ನಿನ್ನ ಸಂಸಾರ ಮುರಿಯುವ ಕೆಲಸ ಮಾಡಲಿಲ್ಲ ನಾನು. ಎರಡೂ ಕೈ ಸೇರಿದರೆ ಚಪ್ಪಾಳೆ, ನನ್ನ ಸಹವಾಸ ಇಲ್ಲದೆ ನೀನು ಇಷ್ಟು ಮುಂದುವರಿಯುತ್ತಿರಲಿಲ್ಲ. ನಾನೂ ಇಲ್ಲಿ ಅಪರಾಧಿ ಆದ್ದರಿಂದ ನಿನ್ನನ್ನು ಅವಳ ಮುಂದೆ ಬಿಟ್ಟು ಕೊಡಲಿಲ್ಲ!”

“ಥ್ಯಾಂಕ್ಸ್ ಅಷ್ಟೇ ಹೇಳಿದರೆ ನಿನ್ನ ಮುಂದೆ ನಾನು ಮತ್ತಷ್ಟು ಅಲ್ಪನಾಗುತ್ತೇನೆ. ನೀನು ಸೌಂದರ್ಯದಲ್ಲಿ ಮಾತ್ರವಲ್ಲ, ವಿವೇಕದಲ್ಲೂ ಮಹಾ ಗಟ್ಟಿಗಿತ್ತಿ ಅಂತ ಈಗ ಸಾಧಿಸಿ ತೋರಿಸಿರುವೆ. ನನ್ನ ಹೆಂಡತಿ ಮುಂದೆ ನನ್ನ ಮಾನ ಉಳಿಸಿದ್ದಕ್ಕಾಗಿ ನಿನಗೆ ಎಂದೆಂದೂ ಕೃತಜ್ಞನಾಗಿ ಇರ್ತೀನಿ.

“ಇನ್ನು ಮುಂದೆ ಎಂದೆಂದೂ ಪರಸ್ತ್ರೀಯತ್ತ ಇಂಥ ದೃಷ್ಟಿಯಿಂದ ನೋಡಲಾರೆ! ಪರನಾರಿ ಸಹೋದರತ್ವದ ಗುಣ ಬೆಳೆಸಿಕೊಳ್ಳುವೆ. ನನ್ನ ಕಣ್ಣು ತೆರೆಸಿದ ನೀನು ನಿಜಕ್ಕೂ ಮಹಾನ್‌!” ಎಂದು ತನಗರಿವಿಲ್ಲದೆ ಅವಳಿಗೆ ಕೈ ಜೋಡಿಸಿದ ನಿರಂಜನ್.

“ಇಷ್ಟು ಹೇಳಿದೆಯಲ್ಲ…… ಈ ಮಾತನ್ನು ಎಂದೆಂದೂ ಮರೆಯಬೇಡ! ನಮ್ರತಾಳಂಥ ಪತ್ನಿ ದೊರಕಿರುವುದು ನಿನ್ನ ಪುಣ್ಯ. ನಿನ್ನ ಸಂಸಾರವನ್ನು ಚೆನ್ನಾಗಿ ಉಳಿಸಿಕೋ. ನಾನೂ ಅಷ್ಟೇ ಅಪ್ಪ ಅಮ್ಮ ತೋರಿಸಿದ ವರನನ್ನು ಮದುವೆಯಾಗಿ ಒಬ್ಬ ಆದರ್ಶ ಪತ್ನಿಯಾಗಿ ನನ್ನ ಪತಿಗೆ ನನ್ನ ಪ್ರೀತಿ ಮೀಸಲು ಎಂದು ತೋರಿಸುವೆ,” ಎಂದಾಗ ಇಬ್ಬರಿಗೂ ತಮ್ಮ ತಪ್ಪಿನ ಅರಿವಾಗಿತ್ತು.

ಎಂದಿನಂತೆ ತಮ್ಮ ಸಹಜ ಸ್ನೇಹ, ಶಿಷ್ಟಾಚಾರದ ಗಡಿ ದಾಟದಂತೆ ನಡೆದುಕೊಳ್ಳುವುದಾಗಿ ಇಬ್ಬರೂ ಪ್ರಮಾಣ ಮಾಡಿ ಅಲ್ಲಿಂದ ಹೊರಟರು. ಅವಳನ್ನು ಕಾರಿನಲ್ಲಿ ಮೆಟ್ರೋವರೆಗೂ ಡ್ರಾಪ್‌ ಮಾಡಿ, ನಿರಂಜನ್‌ ಪತ್ನಿಗೆ ತಕ್ಕ ಪತಿಯಾಗಿರಲು ದೃಢ ನಿಶ್ಚಯದೊಂದಿಗೆ ಹೊರಟ. ಇತ್ತ ಅಮಲಾ ಕಳೆದ ವಾರ ತನ್ನನ್ನು ನೋಡಿಕೊಂಡು ಹೋಗಿದ್ದ ಹುಡುಗ ಎಲ್ಲಾ ರೀತಿಯಲ್ಲೂ ಒಪ್ಪಿಗೆ ಎಂದು ತಾಯಿ ತಂದೆಗೆ ತಿಳಿಸಿ ಹೊಸ ಬಾಳು ಎದುರಿಸಲು ಮಾನಸಿಕವಾಗಿ ದೃಢ ಸಂಕಲ್ಪ ಕೈಗೊಂಡಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ