ಏರ್ ಏಷ್ಯಾ ಇಂಡಿಯಾ ಕ್ಯಾಬಿನ್‌ಕ್ರೂ ಡಿಪಾರ್ಟ್‌ಮೆಂಟ್ ಹೆಡ್ ಮೇಘಾ ಸಿಂಘಾನಿಯಾರದ್ದು ವಿಶಿಷ್ಟ ವ್ಯಕ್ತಿತ್ವ. 10 ವರ್ಷಕ್ಕೂ ಹೆಚ್ಚು ಕಾಲ ಈ ರಂಗದಲ್ಲಿರುವ ಅವರಿಗೆ ಸವಾಲುಗಳನ್ನು ಎದುರಿಸುವುದು ಬಹಳ ಇಷ್ಟ.
ಏವಿಯೇಷನ್ ಕ್ಷೇತ್ರದಲ್ಲಿ ಮಹಿಳೆಯರು ಕೆಲಸ ಮಾಡುವುದು ಗೌರವದ ಸಂಗತಿ. ಸುಂದರವಾಗಿರುವುದರ ಜೊತೆ ಜೊತೆಗೆ ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯದ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲಿ ಮಹಿಳೆ ಗ್ಲಾಮರಸ್ ಆಗಿರುವುದರ ಜೊತೆಗೆ ಫೈರ್ ಫೈಟರ್‌ನ ಕೆಲಸ ಕೂಡ ಮಾಡಬೇಕಾಗುತ್ತದೆ.
ಮೇಘಾ ಯಶಸ್ಸಿನ ಪಯಣದ ಬಗ್ಗೆ, ಅವರು ಎದುರಿಸಿದ ಸವಾಲುಗಳ ಬಗ್ಗೆ ಇಲ್ಲಿದೆ ಕೆಲವು ಮುಖ್ಯ ಸಂಗತಿಗಳು.
ಏವಿಯೇಷನ್ ಕ್ಷೇತ್ರದಲ್ಲಿ ಬರುವ ಮುಖ್ಯ ಉದ್ದೇಶ ಏನು?
ನನಗೆ ಆರಂಭದಿಂದಲೇ ಗ್ರೂಮಿಂಗ್, ಕೋಚಿಂಗ್ ಹಾಗೂ ಸರ್ವೀಸ್ ಸೆಕ್ಟರ್ ಬಗ್ಗೆ ಆಸಕ್ತಿ ಇತ್ತು. ಅದರ ಜೊತೆಗೆ ಏನನ್ನಾದರೂ ವಿಶೇಷವಾದದ್ದನ್ನು ಸಾಧಿಸಬೇಕೆಂಬ ಆಕಾಂಕ್ಷೆ ಇತ್ತು. 2004ರಲ್ಲಿ ಮಿಸ್ ಇಂಡಿಯಾ ಈವೆಂಟ್‌ನಲ್ಲಿ 30 ಮಹಿಳೆಯರ ಜೊತೆ ಫೈನಲ್ ರೌಂಡ್ ತಲುಪಿದ್ದು ಬಹುದೊಡ್ಡ ಸಂಗತಿ. ಆ ಬಳಿಕವೇ ನನಗೆ ಏರ್ ಏಷ್ಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಏರ್ ಲೈನ್ಸ್ ಕೇವಲ ಉದ್ಯೋಗವನ್ನಷ್ಟೇ ದೊರಕಿಸಿ ಕೊಡುವುದಿಲ್ಲ, ಅಲ್ಲಿ ಬಹಳಷ್ಟು ಕಲಿಯುವ ಅವಕಾಶ ದೊರಕುತ್ತದೆ ಎನ್ನುವುದನ್ನು ನಾನು ತಿಳಿದುಕೊಂಡೆ. 700 ಮಂದಿ ಹುಡುಗ ಹುಡುಗಿಯರಿಗೆ ತರಬೇತಿ ಕೊಡುತ್ತೇನೆನ್ನುವುದು ನನಗೆ ಬಹಳ ಖುಷಿ ಕೊಡುತ್ತದೆ.
ಈ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳೇನು? ಅವನ್ನು ನೀವು ಹೇಗೆ ಎದುರಿಸಿದಿರಿ?
ಮನೆ ಹಾಗೂ ವಿಮಾನದಲ್ಲಿ ಕೆಲಸ ಮಾಡುವುದರಲ್ಲಿ ಬಹಳ ವ್ಯತ್ಯಾಸವಿದೆ. ಏಕೆಂದರೆ ಇಲ್ಲಿ ಬಹಳಷ್ಟು ಬಗೆಯ ಮಾನಸಿಕತೆಯ ಜನರು ಕಂಡುಬರುತ್ತಾರೆ. ಅಂಥವರ ಜೊತೆ ಸರ್ವೀಸ್ ಜೊತೆಗೆ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ. ಕ್ಯಾಬಿನ್‌ಕ್ರೂದಲ್ಲಿ ಕೇವಲ ಅಲಂಕರಿಸಿಕೊಂಡು ಆಹಾರ ಪೂರೈಸುವುದಷ್ಟೇ ಅಲ್ಲ, ಫಸ್ಟ್ ಏಡ್, ಸೇಫ್ಟಿ, ಸೆಕ್ಯುರಿಟಿ ಮುಂತಾದವುಗಳ ಬಗೆಗೂ ತಿಳಿದಿರಬೇಕಾಗುತ್ತದೆ.
ಅವರು ಫೈರ್ ಫೈಟರ್ ತರಹ ಕೆಲಸ ಮಾಡಬೇಕಾಗುತ್ತದೆ. ತುರ್ತು ಸ್ಥಿತಿಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಅದಕ್ಕಾಗಿ 3 ತಿಂಗಳು ತರಬೇತಿ ಇರುತ್ತದೆ. ಹೊಸ ಸಂಗತಿಗಳನ್ನು ತಿಳಿದುಕೊಂಡ ಬಳಿಕ ನನ್ನ ಕಣ್ತೆರೆಯಿತು. ಒಂದು ಯೂನಿಫಾರ್ಮ್ ನೊಳಗೆ ಎಷ್ಟೊಂದು ಯೂನಿಫಾರ್ಮ್ ಗಳಿರುತ್ತವೆ ಎನ್ನುವುದು ಅರಿವಿಗೆ ಬಂತು. ಪ್ರಯಾಣಿಕರನ್ನು ಅವರು ತಲುಪಬೇಕಾದ ಸ್ಥಳಕ್ಕೆ ತಲುಪಿಸುವುದು ಬಹಳ ಖುಷಿ ಕೊಡುತ್ತದೆ.
ನಿಮಗೆ ಎಂದಾದರೂ ಗ್ಲಾಸ್ ಸೀಲಿಂಗ್ ಸಮಸ್ಯೆ ಎದುರಿಸಬೇಕಾಗಿ ಬಂತಾ?
ಏವಿಯೇಷನ್ ಇಂಡಸ್ಟ್ರಿಯಲ್ಲಿ ಅಂತಹ ಸಂಗತಿಗಳಿಲ್ಲ. ಇಲ್ಲಿ ಎಲ್ಲ ಕಡೆಗೂ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇದು ಸರ್ವೀಸ್ ರಿಲೇಟೆಡ್ ಕ್ಷೇತ್ರ. ಹೀಗಾಗಿ ಇಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಇಲ್ಲಿ ಮಹಿಳೆಯರಿಗೆ ಪ್ರಮೋಶನ್‌ಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಇಲ್ಲ. ಇಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ 3 ಪಟ್ಟು ಹೆಚ್ಚಿಗೆ ಇದೆ.
ಈ ಕ್ಷೇತ್ರದಲ್ಲಿ ಮಹಿಳೆಯೊಬ್ಬಳಿಗೆ ಭವಿಷ್ಯ ರೂಪಿಸಿಕೊಳ್ಳುವುದು ಕಷ್ಟಕರವೇ?
ಕಷ್ಟವೇನಿಲ್ಲ. ಆದರೆ ಸಾಕಷ್ಟು ಚಾಲೆಂಜಸ್ ಮಾತ್ರ ಇವೆ. ಏಕೆಂದರೆ ಇಲ್ಲಿ ಶಿಫ್ಟ್ ಗಳಲ್ಲಿ ಕೆಲಸ ನಡೆಯುತ್ತಿರುತ್ತದೆ. ಮನಸ್ಸು ಮಾಡಿದರೆ ಕೆಲಸ ಕಷ್ಟವೇನಲ್ಲ. ಯಾವುದೇ ವಯಸ್ಸಿನ ಮಹಿಳೆಯರು ಫಿಟ್ ಆಗಿದ್ದರೆ, ಇಲ್ಲಿ ಕೆಲಸ ಮಾಡಬಹುದು. ಹೆರಿಗೆ ರಜೆ ಸಹ ಕೊಡಲಾಗುತ್ತದೆ.
ಕೋವಿಡ್ ಸಮಯದಲ್ಲಿ ಟೀಮ್ ನ್ನು ಲೀಡ್ ಮಾಡುವುದು ಕಷ್ಟಕರ ಅನಿಸಿತಾ?
ಇಲ್ಲಿ ಕೆಲಸ ಮಾಡುವ ಕ್ಯಾಬಿನ್‌ಕ್ರೂ 18 ರಿಂದ 25ರ ನಡುವೆ ಇರುತ್ತಾರೆ. ಇಂಥವರು ಕೋವಿಡ್ ಸಮಯದಲ್ಲಿ ಮನೆಗೆ ಹೋಗುವುದು ಸಾಧ್ಯವಿರಲಿಲ್ಲ. ಏಕೆಂದರೆ ಆಗ ವಿಮಾನ ಸಂಚಾರ ಇರಲಿಲ್ಲ. ಕೆಲಸ ಇಲ್ಲದೆ ಇರುವುದರಿಂದ ಅವರು ಆತಂಕಗೊಂಡಿದ್ದರು. ಆಗ ನಾನು ಅವರಿಗಾಗಿ ಟ್ರೇನಿಂಗ್ ವ್ಯವಸ್ಥೆ ಮಾಡಿದೆ. ಪ್ರತಿದಿನ ಅವರೊಂದಿಗೆ ಮಾತನಾಡಿ, ಅವರ ಯೋಗಕ್ಷೇಮ ವಿಚಾರಿಸಿಕೊಳ್ತಿದ್ದೆ. ಅವರನ್ನು ನಾನು ಮಾನಸಿಕವಾಗಿ ಬಲಗೊಳಿಸಲು ಪ್ರಯತ್ನ ಮಾಡ್ತಿದ್ದೆ.
ನಿಮ್ಮ ಜೀವನದ ಮೋಟಿವೇಶನ್ ಫ್ಯಾಕ್ಟರ್ ಏನು?
ನನಗೆ ಫ್ಲೈ ಮಾಡುವುದು ಬಹಳ ಇಷ್ಟ. ನಾನು ಭಾರತದಲ್ಲಿರುವ ಎಂತಹ ಮ್ಯಾನೇಜರ್ ಎಂದರೆ, ನನ್ನ ಬಳಿ ಕ್ಯಾಬಿನ್‌ಕ್ರೂ ಲೈಸೆನ್ಸ್ ಇದೆ. ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡುವುದೇ ನನ್ನ ಮುಖ್ಯ ಗುರಿ. ಪ್ರತಿದಿನ ಹೊಸ ಕೆಲಸ, ಹೊಸ ಸಂಗತಿ, ಹೊಸ ಜನರೊಂದಿಗೆ ಕೆಲಸ ಮಾಡುವುದರಿಂದ ನನಗೆ ಮೋಟಿವೇಶನ್ ದೊರಕುತ್ತದೆ.
ಕೋವಿಡ್ ಸಮಯದಲ್ಲಿ ಏನೇನು ಸಂಕಷ್ಟ ಅನುಭವಿಸಿದಿರಿ?
ಕೋವಿಡ್ ಕಾಲದಲ್ಲಿ ಮೊದಲು ಲಾಕ್ ಡೌನ್ ಆಯ್ತು. ಬಳಿಕ ಆಫೀಸ್‌ಗಳು ಓಪನ್ ಆದರೂ ಹಲವು ನಿರ್ಬಂಧಗಳು ಇದ್ದವು. ಮನೆಗೆ ಹೋಗುವುದು ಸವಾಲಿನ ಕೆಲಸ ಎನಿಸುತ್ತಿತ್ತು. ಸಕಲ ಎಚ್ಚರಿಕೆ ವಹಿಸುತ್ತ ಕೆಲಸ ಮಾಡುತ್ತಿದ್ದೆ. ನನ್ನ ಬಳಿ ಒಂದು ಆಕ್ಸಿಮೀಟರ್ ಕೂಡ ಇತ್ತು. 94ಕ್ಕಿಂತ ಕಡಿಮೆಯಾದರೆ ನಾನು ವೈದ್ಯರನ್ನು ಕಾಣುತ್ತಿದ್ದೆ.
ಬಿಡುವಿನ ವೇಳೆಯಲ್ಲಿ ಏನು ಮಾಡಲು ಇಷ್ಟಪಡುವಿರಿ?
ಗಾರ್ಡನಿಂಗ್, ಪುಸ್ತಕ ಓದುವುದು, ಜಿಮ್, ಯೋಗ, ಎಕ್ಸ್ ಪರ್ಟ್‌ಗಳ ಜೊತೆ ವರ್ಚುವಲ್‌ನಲ್ಲಿ ಹೊಸ ವಿಷಯದ ಬಗ್ಗೆ ತಿಳಿದುಕೊಳ್ಳುತ್ತೇನೆ.
– ಜಿ. ಸುಮಾ