ಬೆಂಗಳೂರಿನ ಪ್ರೇಮಿಗಳು ಕಲೆತು ಭೇಟಿಯಾಗಲು ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌, ಬ್ಯೂಗಲ್ ರಾಕ್‌ಗಳಿಗಿಂತ ಬೇರೆ ಜಾಗ ಬೇಕೇ? ಎಂದಿನಂತೆಯೇ ಆ ದಿನ ಪ್ರಿಯಾ ಸ್ವರೂಪ್‌ ತಮ್ಮ ನೆಚ್ಚಿನ ಕಬ್ಬನ್‌ ಪಾರ್ಕ್‌ಗೆ ಬಂದಿದ್ದರು. ಅಂದು ಭಾನುವಾರ ಬೆಳಗಿನ 8 ಗಂಟೆ ಸಮಯ. ಹೆಲ್ತ್ ಕಾನ್ಶಿಯಸ್‌ ಆಗಿದ್ದ ಎಷ್ಟೋ ಮಂದಿ ಇನ್ನೂ ವಾಕಿಂಗ್‌ಮಾಡುತ್ತಿದ್ದರು. ಕೆಲವರು ಜಾಗ್‌ ಮಾಡುತ್ತಿದ್ದರೆ, ಉಳಿದವರು ಬ್ರಿಸ್ಕ್ ವಾಕಿಂಗ್‌ನಲ್ಲಿ ತಲ್ಲೀನರು. ಇನ್ನುಳಿದವರು ಬಗೆಬಗೆಯ ವ್ಯಾಯಾಮ ಮಾಡುತ್ತಿದ್ದರು. ಕೆಲವರು ಅಲ್ಲಿಯೇ ಬೆಂಚುಗಳಲ್ಲಿ ಕುಳಿತು ಇವರೆಲ್ಲರನ್ನೂ ಗಮನಿಸುತ್ತಿದ್ದರು.

ಅಲ್ಲಿನ ಕಾರಂಜಿಯ ಹತ್ತಿರದ ಬೆಂಚಿನ ಮೇಲೆ ಕುಳಿತಿದ್ದ ಈ ಪ್ರೇಮಿಗಳು ಈ ಇಹಲೋಕವನ್ನೇ ಮರೆತು ಕಣ್ಣಲ್ಲಿ ಕಣ್ಣು ನೆಟ್ಟು, ಎಲ್ಲೋ ಕರಗಿ ಹೋಗಿದ್ದರು. ಪ್ರಿಯಾ ತನ್ನ ಬಟ್ಟಲು ಕಂಗಳನ್ನು ಅರಳಿಸುತ್ತಾ ಸ್ವರೂಪನನ್ನೇ ದಿಟ್ಟಿಸುತ್ತಾ ಇದ್ದುಬಿಟ್ಟಿದ್ದಳು. ಪರಸ್ಪರರಲ್ಲಿ ನೆಟ್ಟ ನೋಟ ಬದಲಾಗುವಂತಿರಲಿಲ್ಲ.

ಸ್ವರೂಪ್‌ ಅವಳ ಕೈ ಹಿಡಿದುಕೊಳ್ಳುತ್ತಾ ಹೇಳಿದ, “ಪ್ರಿಯಾ, ಇವತ್ತಂತೂ ನಿನ್ನ ಕಿಲ್ಲಿಂಗ್‌ ಲುಕ್ಸ್ ಪರವಶಗೊಳಿಸುವಂತಿದೆ.”

ಅವಳು ನಸುನಗುತ್ತಾ, “ಹೌದು ಡಾರ್ಲಿಂಗ್‌ ಇನ್ನು ಮುಂದೆ ನೀನು ಹಿಡಿದಿರುವ ಈ ನನ್ನ ಕೈಗಳನ್ನು ಶಾಶ್ವತವಾಗಿ ನಿನ್ನವಾಗಿಸಿಕೊಳ್ಳಬೇಕು.

ಇನ್ನು ಮುಂದೆ ನಾನಂತೂ ನಿನ್ನಿಂದ ಖಂಡಿತಾ ದೂರ ಇರಲಾರೆ. ನೀನೇ ನನ್ನ ತುಟಿಗಳ ನಗುವಿನ ಕೇಂದ್ರಬಿಂದು. ಎಷ್ಟು ದಿನ ಅಂತ ನಾವು ಹೀಗೆ ಬರೀ ಕದ್ದುಮುಚ್ಚಿ ಭೇಟಿ ಆಗೋದು?” ಎನ್ನುತ್ತಾ ಪ್ರಿಯಾ ಗಂಭೀರಳಾದಳು.

ಸ್ವರೂಪ್‌ ತುಸು ನಿಸ್ಸಹಾಯಕ ದನಿಯಲ್ಲಿ, “ಇದಕ್ಕೆ ಈಗ ನಾನು ಏನು ತಾನೇ ಹೇಳಲಿ…..? ನಿನಗಂತೂ ನಮ್ಮಮ್ಮನ ಬಗ್ಗೆ ಗೊತ್ತೇ ಇದೆ….. ಅವರಂತೂ ಬಡಪಟ್ಟಿಗೆ ಯಾವ ಹೆಣ್ಣನ್ನೂ ಮೆಚ್ಚುವವರಲ್ಲ….. ಇದಕ್ಕೆ ಮೇಲೆ…. ನಮ್ಮಿಬ್ಬರದೂ ಬೇರೆ ಜಾತಿ…..”

“ಅವರದು ಗತ್ತು ಗೈರತ್ತಿನ ಅತಿ ಶ್ರೀಮಂತಿಕೆ ದರ್ಪದ ಗೌಡರ ಮನೆತನದ ವಂಶ. ನಮ್ಮದು ಕೆಳ ಮಧ್ಯಮ ವರ್ಗದ ಬಾಡಿಗೆ ಮನೆಯಲ್ಲಿ ವಾಸಿಸುವ ಬ್ರಾಹ್ಮಣರ ಕುಟುಂಬ. ಹೀಗಿರುವಾಗ ನಮ್ಮಿಬ್ಬರಲ್ಲಿ ಈ ಪ್ರೇಮ ಇಷ್ಟು ಗಾಢವಾಗಿ ಬೆಳೆದು ಬಂದುಬಿಟ್ಟಿದೆ. ಇದರಲ್ಲಿ ನಮ್ಮ ತಪ್ಪಾದರೂ ಏನು? ಅವರಿಗೆ ನನ್ನನ್ನು ತಮ್ಮ ಸೊಸೆಯಾಗಿ ನೋಡುವ ವಿಶಾಲ ಮನೋಭಾವ ಬರಬೇಕು ಅಷ್ಟೆ. ಕಳೆದ 3 ವರ್ಷಗಳಿಂದ ಹೇಳುತ್ತಲೇ ಇದ್ದೇನೆ….. ನೀನು ಅಮ್ಮನ ಬಳಿ ನಿಧಾನವಾಗಿ ಈ ವಿಷಯ ಮಾತನಾಡು.”

“ಹೀಗೆ ಒಂದು ಸಲ ಇನ್‌ಡೈರೆಕ್ಟ್ ಆಗಿ ಹಿಂಟ್‌ ಕೊಟ್ಟೆ. ಅವರು ಲೇಶ ಮಾತ್ರವೂ ಒಪ್ಪಲು ಸಿದ್ಧರಿಲ್ಲ! ನಿನಗಂತೂ ಗೊತ್ತೇ ಇದೆ, ಅಮ್ಮನನ್ನು ಬಿಟ್ಟರೆ ನನಗೆ ಬೇರಾರೂ ಇಲ್ಲ. ಚಿಕ್ಕಂದಿನಲ್ಲೇ ನನ್ನ ತಂದೆ ತೀರಿಕೊಂಡಾಗಿನಿಂದ ಅವರು ನನ್ನನ್ನು ಬಹಳ ಕಷ್ಟಪಟ್ಟು ಪ್ರೀತಿಯಿಂದ ಬೆಳೆಸಿದ್ದಾರೆ. ಹಾಗಿರುವಾಗ ಅವರನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ.

“ಒಂದು ಸಲ ಅವರು ನಿನ್ನನ್ನು ಒಪ್ಪಿಬಿಡಲಿ ಸಾಕು, ನಂತರ ಯಾವ ತೊಂದರೆಯೂ ಇಲ್ಲ. ನೀನು ಅವರನ್ನು ಭೇಟಿ ಆಗೋದು, ನಾನೇ ಭೇಟಿ ಮಾಡಿಸುವುದು ಅಂತಿಟ್ಕೊ. ಅಕಸ್ಮಾತ್‌ ಅವರು ನಿನ್ನನ್ನು ಯಾವುದೋ ಕಾರಣಕ್ಕೆ ರಿಜೆಕ್ಟ್ ಮಾಡಿಬಿಟ್ಟರೆ….. ಆಮೇಲೆ ಸಹಜವಾಗಿ ನೀನೂ ನನ್ನಿಂದ ದೂರ ಆಗಿಬಿಡ್ತೀಯಾ. ಈ ಕೆಟ್ಟ ಭಯದಿಂದಲೇ ನಾನು ನಿನ್ನನ್ನು ಅವರಿಗೆ ಪರಿಚಯಿಸುತ್ತಿಲ್ಲ. ಏನು ಮಾಡಿ ಅವರನ್ನು ಒಪ್ಪಿಸಲಿ ಅಂತ ತಲೆ ಕೆಡುವ ಹಾಗೆ ಪ್ಲಾನ್‌ ಮಾಡ್ತಾ ಇರ್ತೀನಿ.”

“ನೋಡು ಸ್ವರೂ, ಈಗ ನಾನಂತೂ ನಿನ್ನನ್ನು ಬಿಟ್ಟು ಬೇರೆ ಯಾರನ್ನೋ ಮದುವೆ ಆಗಿ ಸೆಟಲ್ ಆಗುವುದು ಅನ್ನೋದು ನಡೆಯದ ಮಾತು. ಎಂದೆಂದೂ ನಾನು ನಿನ್ನನ್ನು ಬಿಟ್ಟಿರಲಾರೆ! ಹಾಗಿರುವಾಗ ಏನಾದರೂ ಮಾಡಿ ನಿಮ್ಮ ಅಮ್ಮನನ್ನು ಒಪ್ಪಿಸುವುದೊಂದೇ ಈಗ ಉಳಿದಿರುವ ದಾರಿ.”

“ಆದರೆ ನಮ್ಮಮ್ಮನ ಮನಸ್ಸು ಗೆಲ್ಲೋದು ಅಂದ್ರೆ…. ಭಾರೀ ಕಷ್ಟದ ಕೆಲಸ. ಮರಳುಗಾಡಿನಲ್ಲಿ ಬಾವಿ ತೋಡಿದಂತೆ, ಅದೇ ಮರಳನ್ನು ಹಿಂಡಿ ಒಳ್ಳೆ ಎಣ್ಣೆ ತೆಗೆದಂತೆ ಅಂದುಕೊ.”

“ಸರಿ, ಹಾಗಿದ್ದರೆ ನಾನು ಈ ಸವಾಲನ್ನು ಸ್ವೀಕರಿಸುತ್ತೀನಿ. ನನಗಂತೂ ಇಂಥ ಛಾಲೆಂಜ್‌ ಎದುರಿಸಿ ಅದರಲ್ಲಿ ಗೆಲ್ಲುವುದು ಒಂದು ಹವ್ಯಾಸವೇ ಆಗಿದೆ,” ಎನ್ನುತ್ತಾ ಹತ್ತಿರ ಬಂದು ಅವನ ಕೊರಳಿಗೆ ತನ್ನ ಕೈಯನ್ನು ಮಾಲೆ ಹಾಕಿದಳು. ಅವಳ ಇಂಥ ಹಾವಭಾವಗಳಿಗೆ ಎಂದೋ ಮನಸೋತಿದ್ದ ಸ್ವರೂಪ್‌, ಅವಳನ್ನು ಹಾಗೇ ತನ್ನ ಎದೆಗೆ ಒರಗಿಸಿಕೊಳ್ಳುತ್ತಾ, “ಖಂಡಿತಾ! ಇದಕ್ಕೆ ಬೇಕಾದ ಸಹಕಾರ ನನ್ನ ಕಡೆ ಇರುತ್ತದೆ,” ಎಂದ. ನಂತರ ಇಬ್ಬರೂ ಹೊರಡಲು ಎದ್ದು ನಿಂತರು, ಅದಾಗಲೇ ತಡವಾಗಿತ್ತು.

“ಆದರೆ ಇದನ್ನೆಲ್ಲ ನೀನು ಹೇಗೆ ನಿಭಾಯಿಸ್ತೀಯಾ?” ಸ್ವರೂಪ್‌ ಕುತೂಹಲದಿಂದ ಕೇಳಿದ.

“ಅದು ನನ್ನ ಜವಾಬ್ದಾರಿ! ಅದಿರಲಿ, ನಿಮ್ಮಮ್ಮ ಇದೇ ವಾರ ಯಾವುದೋ ಬಿಸ್‌ನೆಸ್‌ ಮೀಟಿಂಗ್‌ಗಾಗಿ ಮುಂಬೈಗೆ ಹೊರಡುತ್ತಾರಲ್ಲವೇ? ಮೊನ್ನೆ ನೀನೇ ಹೇಳಿದ ಹಾಗಿತ್ತು.”

“ಹೌದು, ಮುಂದಿನ ಮಂಗಳಾರ ಅವರು ಹೊರಡುತ್ತಾರೆ. ಆದಷ್ಟು ಬೇಗ ಅವರಿಗೆ ಟಿಕೆಟ್‌ ಬುಕ್‌ ಮಾಡಿಸಬೇಕು.”

“ಹಾಗಿದ್ದರೆ ಒಂದು ಕೆಲಸ ಮಾಡು. ಒಂದರ ಬದಲು 2 ಟಿಕೆಟ್‌ ಬುಕ್‌ ಮಾಡಿಸು. ಈ ಸಲದ ಪ್ರಯಾಣದಲ್ಲಿ ನಾನು ಅವರಿಗೆ ಜೊತೆಯಾಗಿರುತ್ತೇನೆ….. ಆದರೆ ಅಪರಿಚಿತಳಾಗಿ ಅವರನ್ನು ಪ್ರಯಾಣದಲ್ಲೇ ಭೇಟಿ ಆಗ್ತೀನಿ. ಈ ಬಗ್ಗೆ ನೀನು ಅವರಿಗೆ ಏನೂ ಹೇಳಬಾರದು,” ಕಣ್ಣು ಕುಣಿಸುತ್ತಾ ಪ್ರಿಯಾ ಹೇಳಿದಾಗ ಸ್ವರೂಪನಿಗೆ ಇವಳ ಐಡಿಯಾ ಏನಿರಬಹುದು ಎಂದು ತುಸು ಆಶ್ಚರ್ಯವಾಯಿತು.

ಪ್ರಿಯಾಳಿಗೆ ತನ್ನ ಬಗ್ಗೆ ಸಂಪೂರ್ಣ ಭರವಸೆ ಇತ್ತು. ದೂರದ ಪ್ರಯಾಣದಲ್ಲಿ ನಾವು ಎದುರಿಗಿನ ವ್ಯಕ್ತಿಯನ್ನು ಸರಿಯಾಗಿ ಗುರುತಿಸಿ, ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತೇವೆ ಎಂಬ ದೃಢ ನಂಬಿಕೆ ಇತ್ತು. ಜೊತೆ ಜೊತೆಯಲ್ಲಿ ಪ್ರಯಾಣ ಮಾಡುವುದರಿಂದ ಗಂಟೆಗಟ್ಟಲೆ ಮಾತನಾಡಬಹುದು. ಪರಸ್ಪರರನ್ನು ಇಂಪ್ರೆಸ್‌ ಮಾಡಲು ಒಳ್ಳೆಯ ಅವಕಾಶ! ತಮ್ಮ ಸೊಸೆ ಕುರಿತಾಗಿ ಅವರ ಮನದಲ್ಲಿ ಏನಿದೆ? ಅಂತ ಸ್ಪಷ್ಟ ತಿಳಿಯಬಹುದು, ಅವರ ಮನದಲ್ಲಿ ತನಗಾಗಿ ಜಾಗ ಮಾಡಿಕೊಳ್ಳಬಹುದು. ಹೇಗಾದರೂ ಸರಿ, ಇದನ್ನು ಒಂದು ಅಂತಿಮ ಪರೀಕ್ಷೆ ಎಂಬಂತೆ ಎದುರಿಸಿ, ಇದರಲ್ಲಿ ಗೆದ್ದೇ ತೀರಬೇಕು ಎಂದು ನಿರ್ಧರಿಸಿದಳು.

ಸ್ವರೂಪ್‌ ನಸುನಗುತ್ತಾ ಅವಳ ಐಡಿಯಾ ಒಪ್ಪಿಕೊಂಡಿದ್ದ. ಆದರೆ ಇದರಲ್ಲಿ ಅವನಿಗೆ ಹೆಚ್ಚಿನ ಭರವಸೆ ಇರಲಿಲ್ಲ. ಆದರೂ ಅವನಿಗೆ ಪ್ರಿಯಾಳ ಈ ಪ್ರಾಮಾಣಿಕ ಪ್ರಯತ್ನದ ಬಗ್ಗೆ ಮೆಚ್ಚುಗೆ ಮೂಡಿತು. ಆದರೆ ಅವನಿಗೆ ಅಮ್ಮನ ಹಠಮಾರಿ ಸ್ವಭಾವದ ಬಗ್ಗೆ ಗೊತ್ತಿತ್ತು. ಆದರೂ ಅವನು ಒಪ್ಪಿಕೊಂಡಿದ್ದ.

ಅದೇ ದಿನ ಅವನು ಮುಂಬೈಗೆ ಹೊರಡುವ ರೈಲಿನಲ್ಲಿ 2 ಟಿಕೆಟ್‌ ಬುಕ್‌ ಮಾಡಿಸಿದ್ದ. ಹಿತಕರ ಎ.ಸಿ. ಕಂಪಾರ್ಟ್‌ಮೆಂಟ್‌ನ ಮೇಲೆ ಕೆಳಗಿನ ಬರ್ತ್‌ ಸಿಗುವ ಹಾಗೆ ವ್ಯವಸ್ಥೆ ಮಾಡಿಕೊಂಡ. ಬೇಕೆಂದೇ ಅಮ್ಮನಿಗೆ ಅಪ್ಪರ್‌ ಬರ್ತ್‌ ಸಿಗುವ ಹಾಗೆ ಮಾಡಿ ಪ್ರಿಯಾಳಿಗೆ ಲೋಯರ್‌ ಬರ್ತ್‌ ಫಿಕ್ಸ್ ಮಾಡಿಸಿದ್ದ.

ಮುಂಬೈಗೆ ಹೊರಡಬೇಕಾದ 2 ದಿನಗಳ ಹಿಂದಿನಿಂದಲೇ ಪ್ರಿಯಾ ಬೇಕಾದ ತಯಾರಿ ಶುರು ಮಾಡಿಕೊಂಡಿದ್ದಳು. ಇದು ಅವಳ ಜೀವನದ ಒಂದು ಪ್ರಮುಖ ಪ್ರಯಾಣವಾಗಿತ್ತು. ಅವಳ ವೈವಾಹಿಕ ಜೀವನಕ್ಕೆ ಇದು ಮುಖ್ಯ ತಿರುವಾಗಲಿತ್ತು. ತಮ್ಮಿಬ್ಬರ ಪ್ರೇಮದ ಬೆಸುಗೆ ಇದೇ ಪ್ರಯಾಣದ ಆಧಾರದ ಮೇಲೆ ನಿಂತಿತ್ತು. ಸ್ವರೂಪನ ತಾಯಿ ಜಾನಕಮ್ಮನನ್ನು ಇಂಪ್ರೆಸ್‌ ಮಾಡಲು ಬೇಕಾದ ಎಲ್ಲಾ ಸಾಮಗ್ರಿ ಜೋಡಿಸಿಕೊಂಡಳು, ಮಾನಸಿಕವಾಗಿ ಸಿದ್ಧಳಾದಳು. ರೈಲು ಸಂಜೆ ಬೆಂಗಳೂರಿನಿಂದ 4.35ಕ್ಕೆ ಹೊರಡಲಿತ್ತು. ಮಾರನೇ ದಿನ ಎಕ್ಸ್ ಪ್ರೆಸ್‌ ಮುಂಬೈ ತಲುಪಲಿತ್ತು. ಅಂತೂ ದೂರದ ಪ್ರಯಾಣ ಎಂಬುದರಲ್ಲಿ ಸಂದೇಹವಿಲ್ಲ. ಈ ದೀರ್ಘ ಪ್ರಯಾಣದ ಸದವಕಾಶವನ್ನು ಅವಳು ಸರಿಯಾಗಿ ಬಳಸಬೇಕಿತ್ತು. ಅವರ ಹೃದಯ ಗೆದ್ದು ತನ್ನ ಪರಿಚಯ ಬೆಳಸಬೇಕಿತ್ತು.

ಅವಳು ಸಮಯಕ್ಕೆ ಮೊದಲೇ ರೈಲ್ವೆ ಸ್ಟೇಷನ್‌ ತಲುಪಿದಳು. ಬಹಳ ಕಾತರದಿಂದ ಸ್ವರೂಪ್‌ ಮತ್ತು ಅವನ ತಾಯಿಯ ಆಗಮನಕ್ಕಾಗಿ ಕಾಯತೊಡಗಿದಳು. ಅದಾದ ಸ್ವಲ್ಪ ಹೊತ್ತಿಗೆ ಸ್ವರೂಪ್‌ ಅಮ್ಮನ ಲಗೇಜ್‌ ಹಿಡಿದು ಬರುತ್ತಿರುವುದು ಕಾಣಿಸಿತು. ಜೊತೆಗೆ ಅವನ ತಾಯಿ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದರು. ದೂರದಿಂದಲೇ ಇಬ್ಬರೂ ಕಣ್ಣಲ್ಲೇ ಆಲ್ ದಿ ಬೆಸ್ಟ್ ಹೇಳಿಕೊಂಡರು.

ರೈಲು ಬರುತ್ತಲೇ ಪ್ರಿಯಾ ಛಂಗನೆ ಏರಿ, ತನ್ನ ಬರ್ತ್‌ ಇದ್ದ ಕಡೆ ಹೋಗಿ, ಸಾಮಗ್ರಿಗಳನ್ನು ಜೋಡಿಸಿಕೊಂಡಳು. ಸಮಯಕ್ಕೆ ಸರಿಯಾಗಿ ಎಕ್ಸ್ ಪ್ರೆಸ್‌ ಹೊರಟಿತು. ಎಣಿಸಿದಂತೆಯೇ ಸ್ವರೂಪನ ತಾಯಿಗೆ ಕೆಳಗಿನಿಂದ ಮೇಲಿನ ಬರ್ತ್‌ಗೆ ಹತ್ತುವುದು ಕಷ್ಟವಾಯಿತು. ಹೀಗಾಗಿ ಪ್ರಿಯಾ ತನ್ನ ಬರ್ತ್‌ನ್ನು ಅವರಿಗೆ ಬಿಟ್ಟುಕೊಟ್ಟು, ತನ್ನ ಲಗೇಜ್‌ ಪೂರ್ತಿ ಮೇಲೆ ಶಿಫ್ಟ್ ಮಾಡಿಕೊಂಡಳು. ಈ ರೀತಿ ತಮ್ಮ ಪ್ರಯಾಣ ಸುಖಕರವಾಗಿ ಆರಂಭಗೊಂಡಿದ್ದು ಅವರಿಗೂ ಖುಷಿ ಎನಿಸಿತು.

ಅವರಿಗೆ ಮಂಡಿನೋವು ಇದ್ದುದರಿಂದ ಮೇಲೆ ಹತ್ತಿ ಇಳಿದು ಸರ್ಕಸ್‌ ಮಾಡುವುದು ತಪ್ಪಿತು ಎಂದು ಖುಷಿಯಾಯಿತು. ಹೀಗಾಗಿ ಮೊದಲ ಪರಿಚಯದಲ್ಲೇ ಪ್ರಿಯಾ ಅವರ ಸ್ನೇಹಮಯ ದೃಷ್ಟಿ ಗಿಟ್ಟಿಸಿದಳು. ಈ ಕಾಲದಲ್ಲೂ ಹಿರಿಯರಿಗೆ ನೆರವಾಗುವ ಸಾತ್ವಿಕ ಗುಣ ಇಂದಿನ ಯುವಜನತೆಗೆ ಇದೆ ಎಂದು ಅವರಿಗೆ ಮೆಚ್ಚುಗೆಯಾಯಿತು. ನಂತರ ತಮಗೆ ಸಹಾಯ ಮಾಡಿದ ಆ ಹುಡುಗಿಯನ್ನು ಸರಿಯಾಗಿ ದಿಟ್ಟಿಸಿ ನೋಡಿದರು. ಒಳ್ಳೆಯ ಮನೆತನದ ಉತ್ತಮ ಸಂಸ್ಕಾರವಂತ ಹುಡುಗಿ ಎಂಬ ಸದ್ಭಾವನೆ ಮೂಡಿತು. ಮೇಲೆ ಲಗೇಜ್‌ ಜೋಡಿಸಿಕೊಂಡ ಪ್ರಿಯಾ ಕೆಳಗಿಳಿದು ಬಂದು ಅವರ ಬಳಿ ಕುಳಿತು ನಿಧಾನವಾಗಿ ಮಾತಿಗೆ ಆರಂಭಿಸಿದಳು. ಅವಕಾಶ ಸಿಗುತ್ತಲೇ ಅವಳು ತನ್ನ ಬಗ್ಗೆ ಚುಟುಕಾಗಿ ಪರಿಚಯ ನೀಡಿದಳು. ತಾನು ಡಿಗ್ರಿ ಮುಗಿಸಿದ ನಂತರ, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ, ವಯಸ್ಸಾದ ತನ್ನ ತಾಯಿ ತಂದೆಯರಿಗೆ ಆರ್ಥಿಕ ನೆರವು ನೀಡುತ್ತಿದ್ದೇನೆ ಎಂದು ವಿವರಿಸಿದಳು. ರಾತ್ರಿ 8 ಗಂಟೆ ಆದಾಗ ಇಬ್ಬರೂ ತಾವು ತಂದಿದ್ದ ಬುತ್ತಿ ಬಿಚ್ಚಿ, ಪರಸ್ಪರ ಬದಲಾಯಿಸಿಕೊಂಡು ರುಚಿ ಸವಿದರು. ಪ್ರಿಯಾ ತಂದಿದ್ದ ಪುಳಿಯೋಗರೆ ಅವರಿಗೆ ಬಹಳ ಇಷ್ಟವಾಯಿತು. ಅವರು ನೀಡಿದ ಚಪಾತಿ ಪಲ್ಯ ಪ್ರಿಯಾಳಿಗೆ ಖುಷಿ ನೀಡಿತು.

ಪ್ರಿಯಾಳ ಪುಳಿಯೋಗರೆ ಲೊಟ್ಟೆ ಹಾಕುತ್ತಾ, “ಬಹಳ ಚೆನ್ನಾಗಿದೆ ಕಣಮ್ಮ. ನಿಮ್ಮ ಮನೆಯಲ್ಲಿ ಅಡುಗೆಯವರು ಬರುತ್ತಾರಾ? ಅಮ್ಮನಿಗೆ ಹುಷಾರು ಇರಲ್ಲ ಅಂದೆ. ಇಷ್ಟೆಲ್ಲ ಅವರೇ ಮಾಡ್ತಾರಾ?”

“ಸುತ್ತು ಕೆಲಸಕ್ಕೆ ಅಂತ ಒಬ್ಬರು ಬರ್ತಾರೆ ಆಂಟಿ. ಆದರೆ ಅಡುಗೆಮನೆ ಜವಾಬ್ದಾರಿ ಮಾತ್ರ ನನ್ನದೇ! ಅಮ್ಮ ನನಗೆ ಮೊದಲಿನಿಂದ ತರಬೇತಿ ನೀಡಿದ್ದಾರೆ. ಹೀಗಾಗಿ ಪಿ.ಯು.ಸಿ ಸೇರಿದಾಗಿನಿಂದ ಬಹುತೇಕ ಬಹಳ ಸಹಾಯ ಮಾಡುತ್ತಾ, ಡಿಗ್ರಿ ಸೇರಿದ ಬಳಿಕ ಅಮ್ಮ ಆರೋಗ್ಯ ತಪ್ಪಿದಾಗ, ನಾನೇ ಪೂರ್ತಿ ಮ್ಯಾನೇಜ್‌ ಮಾಡ್ತೀನಿ. ನಮ್ಮ ಕೈಯಾರೆ ಅಡುಗೆ ಮಾಡುವುದರಿಂದ ಆರೋಗ್ಯದ ಜೊತೆ ಹೆಚ್ಚಿನ ಪ್ರೀತಿವಿಶ್ವಾಸ ಬೆರೆತಿರುತ್ತೆ ಅಂತ ನನ್ನ ಅಭಿಪ್ರಾಯ.”

ಅವಳ ಮಾತು ಕೇಳಿ ಜಾನಕಮ್ಮ ಮುಗುಳ್ನಕ್ಕರು, “ನಿನ್ನ ತಾಯಿ ನಿನಗೆ ಬಹಳ ಒಳ್ಳೆಯ ಸಂಸ್ಕಾರ ಕಲಿಸಿದ್ದಾರಮ್ಮ, ಉತ್ತಮ ಅಭ್ಯಾಸ ರೂಢಿಸಿದ್ದಾರೆ. ಆಮೇಲೆ ಬೇರೆ ಏನೇನು ಕಲಿಸಿದ್ದಾರೆ?”

“ಎಂದೂ ಯಾರ ಮನಸ್ಸಿಗೂ ನೋಯುವಂತೆ ನಡೆದುಕೊಳ್ಳಬಾರದು, ಎಷ್ಟು ಸಾಧ್ಯವೋ ಬೇರೆಯವರಿಗೆ ಸಹಾಯ ಮಾಡಬೇಕು. ನಾವು ಮೇಲೇರಲು ಪರರ ಸಹಾಯಕ್ಕಾಗಿ ಎದುರು ನೋಡಬಾರದು. ಬದಲಿಗೆ ನಮ್ಮ ಕಠಿಣ ಪರಿಶ್ರಮ, ಕಷ್ಟಸಹಿಷ್ಣುತೆಗಳಿಂದ ಸಾಧಿಸಬೇಕು, ಪ್ರೀತಿವಾತ್ಸಲ್ಯದಿಂದ ಇತರರ ಮನ ಗೆಲ್ಲಬೇಕು….”

ಪ್ರಿಯಾ ಹೇಳುತ್ತಿದ್ದುದನ್ನು ಜಾನಕಮ್ಮ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು.

“ಈ ಸದ್ಗುಣಗಳ ಜೊತೆಗೆ ಹಾಡು, ಹಸೆ, ಪರೋಪಕಾರದ ಗುಣ, ಹಿರಿಯರ ಆದರ ಸತ್ಕಾರ….. ಇತ್ಯಾದಿಗಳ ಬಗ್ಗೆ ಹೇಳಿಕೊಟ್ಟಿದ್ದಾರೆ.”

ಜಾನಕಮ್ಮನರಿಗೆ ಪ್ರಿಯಾಳ ಒಂದೊಂದು ಮಾತೂ ಬಹಳ ಇಷ್ಟವಾಗತೊಡಗಿತು. ಈ ಮಧ್ಯೆ ಅವರಿಗೆ ಬಾತ್‌ರೂಮಿಗೆ ಹೋಗಬೇಕೆನಿಸಿತು. ಅವರು ಅದಕ್ಕಾಗಿ ಹೊರಟಾಗ ಬೇರೆಯವರು ಇರಿಸಿದ್ದ ಬ್ರೀಫ್‌ಕೇಸಿಗೆ ಕಾಲು ತಗುಲಿ ಬೀಳುವಂತಾಯಿತು. ಕಾಲಿಗೆ ಬಹಳ ನೋವಾಯಿತು ಹೆಬ್ಬೆರೆಳಿನ ಬಳಿ ಸ್ವಲ್ಪ ರಕ್ತ ಕೂಡ ಜಿನುಗಿತು. ಇದನ್ನು ಗಮನಿಸಿ ಅವರ ಬಳಿ ಓಡಿ ಬಂದ ಪ್ರಿಯಾ, ಹತ್ತಿರದ ಸೀಟಿನಲ್ಲಿ ಅವರನ್ನು ಕೂರಿಸಿ, ಓಡಿಹೋಗಿ ತನ್ನ ಫಸ್ಟ್ ಏಡ್‌ ಬಾಕ್ಸ್ ತಂದಳು.

ಅವರು ಬೆರಗಾಗಿ ಕೇಳಿದರು, “ನೀನು ದೂರದ ಪ್ರಯಾಣ ಹೊರಟಾಗೆಲ್ಲ ಈ ಔಷಧಿ ಬಾಕ್ಸ್ ಇಟ್ಟುಕೊಂಡಿರ್ತೀಯಾ?”

“ಹೌದು ಆಂಟಿ, ಏಟು ನನಗೆ ತಗುಲಲಿ ಅಥವಾ ಯಾರಿಗೇ ಇರಲಿ, ತಕ್ಷಣ ನೆರವಿಗೆ ಇದು ಬೇಕೇ ಬೇಕು. ಅವರಿಗೆ ಸ್ವಲ್ಪ ಬ್ಯಾಂಡೇಜ್‌ ಮಾಡಿ, ಬಾಮ್ ತಿಕ್ಕಿದರೆ ನನ್ನ ಮನಸ್ಸಿಗೂ ನಿರಾಳ ಎನಿಸುತ್ತೆ. ಇನ್ನೊಬ್ಬರ ಕಷ್ಟಸುಖಕ್ಕೆ ನೆರವಾಗುವುದೇ ನಿಜವಾದ ಮಾನವೀಯತೆ ಅಲ್ಲವೇ?” ಎನ್ನುತ್ತಾ ತಾನು ಹೇಳಿದಂತೆ ಅವರ ಹೆಬ್ಬೆರಳಿಗೆ ಲೈಟ್‌ಆಗಿ ಬ್ಯಾಂಡೇಜ್‌ ಮಾಡಿ, ಉಳುಕಾಗಿದ್ದ ಕಾಲಿನ ಭಾಗಕ್ಕೆ ಬಾಮ್ ಹಚ್ಚಿ ಲೇಸಾಗಿ ನೀವಿ ಉಪಚರಿಸಿದಳು.

ಇದೇ ಅವಕಾಶ ಎಂದು ಅವರ ಪಾದ ಮುಟ್ಟಿ ನಮಸ್ಕರಿಸಿದಳು. ಜಾನಕಮ್ಮನವರಿಗೆ ನಿಜಕ್ಕೂ ಮನಸ್ಸು ತುಂಬಿ ಬಂತು. ಅವಳ ಬೆನ್ನು ಸವರುತ್ತಾ ಪ್ರೀತಿಯಿಂದ ವಿಚಾರಿಸಿದರು, “ನಿನ್ನ ತಂದೆ ಏನು ಮಾಡುತ್ತಾರಮ್ಮ? ನಿನ್ನ ತಾಯಿ ಹಿಂದೆ ಕೆಲಸಕ್ಕೆ ಹೋಗುತ್ತಿದ್ದರೆ?” ಅವಳ ಮನೆಯರ ಬಗ್ಗೆ ತಿಳಿಯುವ ಕುತೂಹಲ ತೋರಿಸಿದರು. ಪ್ರಿಯಾ ಯಾವ ಸಂಕೋಚ ಇಲ್ಲದೆ ಸಹಜವಾಗಿ, “ನಮ್ಮ ತಂದೆ ಪ್ರೈಮರಿ ಶಾಲೆಯ ರಿಟೈರ್ಡ್‌ ಮೇಷ್ಟ್ರು. ಈಗ ಮನೆ ಹತ್ತಿರ ಒಂದಿಷ್ಟು ಮಕ್ಕಳಿಗೆ ಪಾಠ ಹೇಳಿಕೊಡ್ತಾರೆ. ನಮ್ಮ ತಾಯಿಗೆ ಹೆಚ್ಚು ದಿನ ಆರೋಗ್ಯ ಸರಿ ಇರೋಲ್ಲ, ಬೆಡ್‌ ರೆಸ್ಟ್. ಅವಕಾಶ ಆದಾಗ ಎದ್ದು ಸಣ್ಣಪುಟ್ಟ ಕೆಲಸ ಮಾಡಿಕೊಳ್ತಾರೆ. ನನ್ನ ತಮ್ಮ ಎಂಜಿನಿಯರಿಂಗ್‌ ಕಲಿಯುತ್ತಿದ್ದಾನೆ, ನಾನೇ ಹಿರಿ ಮಗಳು. ನಾನು ಎಂಎನ್‌ಸಿಯಲ್ಲಿ ಕೆಲಸದಲ್ಲಿದ್ದೇನೆ. ತಿಂಗಳಿಗೆ 40 ಸಾವಿರ ರೂ. ಸಂಬಳ. ಮನೆ ನಡೆಸುವ ಜವಾಬ್ದಾರಿ ನನ್ನದೇ, ಇಷ್ಟರಲ್ಲಿ ಪ್ರಮೋಶನ್ ಆಗಬಹುದೆಂದು ಕಾಯುತ್ತಿದ್ದೇನೆ. ನಾವು ತುಂಬಾ ಅನುಕೂಲಸ್ಥರಲ್ಲ ಆಂಟಿ, ಸಣ್ಣ ಬಾಡಿಗೆ ಮನೆಯಲ್ಲಿದ್ದೇವೆ,”

“ಹಣ ಮುಖ್ಯ ಅಲ್ಲವೇ ಅಲ್ಲಮ್ಮ. ರೂಪಕ್ಕಿಂತ ಗುಣ ಮುಖ್ಯ. ಮತ್ತೆ ಬೇರೇನು ಹವ್ಯಾಸಗಳಿವೆ ನಿನಗೆ” ಎಂದು ಅಕ್ಕರೆಯಿಂದ ವಿಚಾರಿಸಿದರು.

“ನನ್ನ ತಾಯಿ ಮದುವೆಗೆ ಮುಂಚೆ ಭರತನಾಟ್ಯದಲ್ಲಿ ಪ್ರವೀಣೆ ಎನಿಸಿದ್ದರು. ಅನಾರೋಗ್ಯದ ಕಾರಣ ಅದನ್ನು ಮುಂದುವರಿಸಲಿಲ್ಲ. ಹೀಗಾಗಿ ನನಗೆ ಮನೆ ಮಟ್ಟಿಗೆ ಸಂಗೀತ, ನೃತ್ಯ ಸಹ ಕಲಿಸಿದ್ದಾರೆ. ಅದರಲ್ಲಿ ಉತ್ತಮ ಅಭಿರುಚಿ ಇದೆ. ಹಾಗೆ ಕವಿತೆ ಬರೆಯೋದು, ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅ.ನ.ಕೃ, ತ್ರಿವೇಣಿ, ಮಾಸ್ತಿ, ಕಾರಂತರ ಕಾದಂಬರಿಗಳನ್ನೆಲ್ಲ ಓದಿದ್ದೇನೆ. ಫೋಟೋಗ್ರಫಿ ನನ್ನ ಮತ್ತೊಂದು ಹವ್ಯಾಸ, ಬಗೆಬಗೆಯ ಹೊಸ ವ್ಯಂಜನ ತಯಾರಿಸಿ, ವಿಶೇಷ ಸಂದರ್ಭಗಳಲ್ಲಿ ಎಲ್ಲರಿಗೂ ಬಡಿಸಿ ಅತಿಥಿಗಳ ಮೆಚ್ಚುಗೆ ಗಳಿಸುವುದು ತುಂಬಾ ಇಷ್ಟ……”

ರೈಲು ವೇಗವಾಗಿ ಮುಂದೆ ಓಡುತ್ತಿತ್ತು. ಇತ್ತ ಪ್ರಿಯಾ ಜಾನಕಮ್ಮನವರ ಮಾತುಕಥೆ ಸರಾಗವಾಗಿ ನಡೆಯುತ್ತಿತ್ತು.

ಮಹಾರಾಷ್ಟ್ರದ ಗಡಿ ಮುಟ್ಟಿದ್ದ ರೈಲು ಆಕಸ್ಮಿಕವಾಗಿ ಒಂದೆಡೆ ನಿಂತೇಬಿಟ್ಟಿತು. ಮುಂಬೈ ತಲುಪಲು ಇನ್ನೂ ಬಹಳ ಸಮಯವಿತ್ತು. ಎಲ್ಲೆಡೆ ದಟ್ಟ ಕಾಡಿನ ವಾತಾವರಣ. ಸುತ್ತಮುತ್ತ ನಾಗರಿಕತೆಯ ಗಂಧಗಾಳಿ ಸಹ ಇರಲಿಲ್ಲ. ಆಹಾರ ಲಭ್ಯ ಆಗುವಂಥ ಅಂಗಡಿ, ಜನರ ಸುಳಿವು ಏನೂ ಇರಲಿಲ್ಲ. ಮುಂದಿನ 8-9 ಗಂಟೆಗಳ ಕಾಲ ತಾಂತ್ರಿಕ ದೋಷದಿಂದಾಗಿ ರೈಲು ಅಲ್ಲೇ ನಿಲ್ಲುತ್ತದೆ ಎಂಬ ವಿಷಯ ಇವರಿಗೆ ಖಾತ್ರಿಯಾಯಿತು. ಅಸಲಿಗೆ, ರೈಲ್ವೆ ಹಳಿಗಳಲ್ಲಿ ಬಿರುಕು ಮೂಡಿದ್ದರಿಂದ ರೈಲಿನ ಮುಂದಿನ ಕೋಚ್ ಉರುಳುವುದರಲ್ಲಿತ್ತು. ಡ್ರೈವರ್‌ನ ಅಪಾರ ಚಾಕಚಕ್ಯತೆಯಿಂದ ಅಪಘಾತ ಆಗುವುದು ತಪ್ಪಿ, ಹಳಿಗಳ ದುರಸ್ತಿಗಾಗಿ ಕಾಯುವಂತಾಯಿತು. ಹಳಿಯಿಂದ ಕೆಳಗೆ ಇಳಿಯಲಿದ್ದ ಕೋಚ್‌ನ್ನು ಸರಿಪಡಿಸಿ ಸುಸ್ಥಿತಿಗೆ ತರಲು, ಅದರಲ್ಲಿದ್ದ ಪ್ರಯಾಣಿಕರನ್ನು ಇಳಿಸಿ, ಕ್ರೇನ್‌ ತರಿಸಿ, ಅದನ್ನು ಸರಿಪಡಿಸುವುದಕ್ಕೆ ಹಲವು ಗಂಟೆಗಳೇ ಬೇಕಾಗಿದ್ದವು. ಪ್ರಯಾಣಿಕರಿಗೆ ಸಾವು ನೋವು ಆಗಿರಲಿಲ್ಲ ಎಂಬುದೇ ದೊಡ್ಡ ವಿಷಯ. ಆಸ್ತಿಪಾಸ್ತಿಗಳ ಹಾನಿಯೂ ಆಗಿರಲಿಲ್ಲ.

ek-safar-aise-bhi-story2

ರಾತ್ರಿ 12 ಗಂಟೆಯಲ್ಲಿ ರೈಲು ನಿಂತು ಹೋಗಿತ್ತು. ಇದೀಗ ಮಾರನೇ ಬೆಳಗ್ಗೆ 6 ಗಂಟೆ ಆಗುವುದರಲ್ಲಿತ್ತು. ಆ ಜಾಗದ ಪರಿಸರವೇ ಹಾಗಿತ್ತು, ಒಂದೇ ಒಂದು ಅಂಗಡಿಯೂ ಕಾಣುತ್ತಿರಲಿಲ್ಲ. ರೈಲಿನ ಪ್ಯಾಂಟ್ರಿ ಕಾರಿನಲ್ಲಿ ಈಗ ಯಾವ ಆಹಾರ ಸಾಮಗ್ರಿಯೂ ಇರಲಿಲ್ಲ. ಎಲ್ಲರ ಬಳಿ ಇದ್ದುದನ್ನೇ ಹೇಗೋ ಅಡ್ಜಸ್ಟ್ ಮಾಡಿಕೊಂಡರು. ಮಧ್ಯಾಹ್ನ 12 ಗಂಟೆ ಆಗುವುದರಲ್ಲಿತ್ತು. ಹಸಿವಿನಿಂದ ಜಾನಕಮ್ಮನವರಿಗೆ ಬಹಳ ತಲೆನೋವು ಬಂದಿತ್ತು. ಒಂದಿಷ್ಟು ಬಿಸಿ ಟೀ ಕುಡಿದರೆ ತಲೆನೋವು ಹೋಗುತ್ತದೆ ಎನಿಸಿತು. ಆದರೆ ಏನು ಮಾಡುವುದು? ಪ್ರಿಯಾ ಹೋಗಿ ಪ್ಯಾಂಟ್ರಿಯಿಂದ ಬಿಸಿ ನೀರು ಹೊಂದಿಸಿ ತಂದಳು. ತನ್ನ ಬಳಿ ಇದ್ದ ಟೀ ಬ್ಯಾಗ್‌, ಸಕ್ಕರೆ, ಮಿಲ್ಕ್ ಪೌಡರ್‌ ಅದಕ್ಕೆ ಬೆರೆಸಿ ಹೇಗೋ ಟೀ ತಯಾರಿಸಿಯೇ ಬಿಟ್ಟಳು! ತನ್ನ ಬ್ಯಾಗಿನಲ್ಲಿದ್ದ ಕರಿದ ಅವಲಕ್ಕಿ, ಖಾರದ ಮಂಡಕ್ಕಿ ತೆಗೆದು ಪೇಪರ್‌ ಪ್ಲೇಟಿನಲ್ಲಿ ಹಾಕಿ ಅವರಿಗೆ ಕೊಟ್ಟಳು. ತಿಂಡಿ ಟೀ ಸೇವಿಸಿದ ಮೇಲೆ ಅವರಿಗೆ ಜೀವ ಬಂತು, ಅವಳಿಗೂ ಎಷ್ಟೋ ಶಕ್ತಿ ಬಂದಂತಾಯಿತು ಅಂತೂ ಅವರ ತಲೆನೋವು ದೂರವಾಯ್ತು.

ಪ್ರಿಯಾಳ ಬ್ಯಾಗಿನಲ್ಲಿ ಡಿಯೋ ಸ್ಪ್ರೇ ಜೊತೆ ಬೇರೋನೋ ಇದ್ದುದನ್ನು ಗಮನಿಸಿ ಅದೇನೆಂದು ಅವರು ಕೇಳಿದರು.

ಪ್ರಿಯಾ ಹೇಳಿದಳು, “ಆಂಟಿ, ಇದು ಪೆಪ್ಪರ್‌ ಸ್ಪ್ರೇ! ಹೆಣ್ಣು ಮಕ್ಕಳನ್ನು ಯಾರಾದರೂ ದುಷ್ಟತನದಿಂದ ನೋಡಿದರೆ ಅವರಿಗೆ ಇದರ ಸ್ಪ್ರೇ ತಗುಲಿಸಿ, ಅವರು ತಮ್ಮ ಮಾನಪ್ರಾಣ ಉಳಿಸಿಕೊಳ್ಳಬಹುದು. ಇಷ್ಟು ಮಾತ್ರವಲ್ಲ, ನನ್ನ ಸ್ವರಕ್ಷಣೆಗಾಗಿ ಒಂದು ಭಾರಿ ಚಾಕು ಕೂಡ ಇಟ್ಟುಕೊಂಡಿರ್ತೀನಿ. ಜೊತೆಗೆ ಕರಾಟೆಯಲ್ಲಿ ನಾನು ಬ್ಯಾಕ್‌ ಬೆಲ್ಟ್ ಚಾಂಪಿಯನ್‌ ಆಗಿದ್ದೀನಿ. ಈ ರೀತಿ ನನ್ನ ರಕ್ಷಣೆಯ ಹೊಣೆ ನನ್ನದೇ ಎಂಬ ಜವಾಬ್ದಾರಿ ಹೊಂದಿದ್ದೇನೆ.”

“ಇದಂತೂ ಪರ್ಫೆಕ್ಟ್ ಆಯ್ತು,” ಮೆಚ್ಚುಗೆಯಿಂದ ಹೇಳಿದರು.

“ಅದು ಸರಿ ಪ್ರಿಯಾ, ನೀನು ನಿನ್ನ ಸಂಬಳ ಹೇಗೆ ಖರ್ಚು ಮಾಡ್ತೀಯಾ? ಮನೆ ಖರ್ಚಿಗೆ ಕೊಡ್ತೀಯಾ? ಅದು ಸರಿ ನಿನ್ನ ಖರ್ಚು ಅಂತ ಫ್ಯಾಷನೆಬಲ್ ಡ್ರೆಸ್‌, ಮೇಕಪ್‌ ಸಾಮಗ್ರಿ ಅಂತ ಉಳಿದದ್ದು ಖರ್ಚಾಗುತ್ತದೆ ಅಲ್ಲವೇ? ಉಳಿದದ್ದು ನಿನ್ನ ಸ್ವಂತ ಖರ್ಚು ಇದ್ದೇ ಇರುತ್ತದೆ.”

“ಇಲ್ಲ ಆಂಟಿ…. ಅಂಥದ್ದೇನಿಲ್ಲ. ನನ್ನ ಇಡೀ ಸಂಬಳವನ್ನು 4 ಭಾಗ ಮಾಡ್ತೀನಿ. 2 ಭಾಗ ಮನೆ ಖರ್ಚಿಗೆ ಅಮ್ಮನಿಗೆ ಕೊಡ್ತೀನಿ. ಉಳಿದ 1 ಭಾಗ ತಮ್ಮನ ಎಂಜಿನಿಯರಿಂಗ್‌ ಶಿಕ್ಷಣ ಖರ್ಚು, ಹಾಗೂ ಕೊನೆಯ ಭಾಗ ನನ್ನ ಸ್ವಂತ ಖರ್ಚಿಗೆ ಇರಿಸಿಕೊಂಡು, ಅದರಲ್ಲಿ ಅರ್ಧ ಭಾಗ ಉಳಿತಾಯ ಖಾತೆಗೆ ಕಟ್ಟುತ್ತೇನೆ. ಅದರಲ್ಲಿ ಆರ್‌.ಡಿ. ಮಾಡಿಸಿ, ಹಣ ಪೂರ್ತಿ ಆದಾಗ ಎಫ್‌.ಡಿ.ಗೆ ಹಾಕಿಸ್ತೀನಿ. ಒಮ್ಮೊಮ್ಮೆ ಸಮಾಜ ಸೇವೆಗೂ ಅಲ್ಪಸ್ವಲ್ಬ ಬಳಿಸ್ತೀನಿ.”

“ಇದರಲ್ಲಿ ಸಮಾಜ ಸೇವೇನಾ…..?”

“ಹೌದು ಆಂಟಿ, ಯಾರಾದರೂ ನನ್ನ ಬಳಿ ತಮ್ಮ ಸಮಸ್ಯೆ ತೆಗೆದುಕೊಂಡು ಬಂದಾಗ ನನ್ನ ಮಟ್ಟಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡ್ತೀನಿ. ಯಾರೂ ಬರದಿದ್ದರೆ ನಾನೇ ಸ್ಲಂ ಏರಿಯಾಗೆ ಹೋಗಿ ಗುಡಿಸಲು ವಾಸಿಗಳ ಮಕ್ಕಳ ಶಿಕ್ಷಣದ ಖರ್ಚಿಗೆ ಕೊಟ್ಟು ಬರ್ತೀನಿ.”

ಹೀಗೆ ಇವರ ಮಾತು ಮುಂದುವರಿದಂತೆ ರೈಲು ಹೊರಡುವ ಸೂಚನೆ ಸಿಕ್ಕಿತು.

ಕೊನೆಗೆ ಜಾನಕಮ್ಮ ಮುಖ್ಯ ಘಟ್ಟಕ್ಕೆ ಬಂದರು. “ನನಗೆ ಒಬ್ಬ ಮಗ ಇದ್ದಾನೆ ಸ್ವರೂಪ್‌. ಅವನೂ ಬೆಂಗಳೂರಿನಲ್ಲಿ ದೊಡ್ಡ ಅಂತಾರಾಷ್ಟ್ರೀಯ ಎಂಎನ್‌ಸಿ ಕಂಪನಿಯಲ್ಲಿ ಅತಿ ಉನ್ನತ ಹುದ್ದೆಯಲ್ಲಿ ಸಂಪಾದಿಸುತ್ತಾನೆ…..”

ಸ್ವರೂಪನ ಹೆಸರು ಕೇಳುತ್ತಲೇ ಅವಳ ಕಂಗಳಲ್ಲಿ ಹೊಳಪು ತುಂಬಿಕೊಂಡಿತು. ತಕ್ಷಣ ಅವರು ಮಾತಿನ ವರಸೆ ಬದಲಾಯಿಸಿ, “ಅದು ಸರಿ ಕಣಮ್ಮ…. ನಿನಗೆ ಯಾರೂ ಬಾಯ್‌ ಫ್ರೆಂಡ್‌ ಇಲ್ಲವೇ?” ಎಂದರು.

ಪ್ರಿಯಾ 2 ಕ್ಷಣ ಅವರ ಕಂಗಳನ್ನೇ ದಿಟ್ಟಿಸಿ ಸತ್ಯ, ಸುಳ್ಳು ಏನು ಹೇಳಲಿ ಎಂದು ಯೋಚಿಸಿ, “ಇದ್ದಾನೆ,” ಎಂದಳು.

“ಓಹ್‌…. ನೀನು ಅವನನ್ನು ಬಹಳ ಪ್ರೇಮಿಸುತ್ತೀಯಾ? ಅವನನ್ನೇ ಮದುವೆ ಆಗಬೇಕು ಅಂತಿದ್ದೀಯಾ?”

ಇಂಥ ಸಂದಿಗ್ಧದ ಪ್ರಶ್ನೆಗೆ ಅವಳು ಏನು ತಾನೇ ಉತ್ತರಿಸುತ್ತಾಳೆ? ಇಂಥ ಪ್ರಶ್ನೆಗೆ ಸತ್ಯ ಹೇಳುವುದಕ್ಕಿಂತ ನೇರವಾಗಿ ಹ್ಞೂಂ ಎಂದುಬಿಟ್ಟರೆ, ತನ್ನ ಕಾಲ ಮೇಲೆ ತಾನೇ ಕೊಡಲಿ ಹಾಕಿಕೊಂಡಂತಾಗುತ್ತದೆ.

ಏನೋ ಒಂದು ಉತ್ತರ ಕೊಡಬೇಕಿತ್ತು, ಹೀಗಾಗಿ ನಗುನಗುತ್ತಲೇ ಮಾತು ತೇಲಿಸುತ್ತಾ, “ಆಂಟಿ, ಮದುವೆ ಆಗಬೇಕು ಅಂತ ಏನೋ ಬಯಸುತ್ತಿದ್ದೀನಿ. ಆದರೆ ಮುಂದೆ ಇನ್ನೇನು ಕಷ್ಟ ಕಾದಿದೆಯೋ ಅಂತ ಭಯ ಆಗುತ್ತೆ. ಅಂದಹಾಗೆ ನೀವು ನಿಮ್ಮ ಮಗನಿಗಾಗಿ ಎಂಥ ಸೊಸೆ ಆರಿಸಬೇಕು ಅಂತಿದ್ದೀರಿ?”

“ಪ್ರಾಮಾಣಿಕಳು, ಬುದ್ಧಿವಂತೆ, ಸುಸಂಸ್ಕೃತೆ ಹೃದಯದಿಂದ ಸುಂದರಳಾಗಿ ಇರಬೇಕು.”

ಇಬ್ಬರೂ ಪರಸ್ಪರ ಸ್ವಲ್ಪ ಹೊತ್ತು ಹಾಗೇ ನೋಡುತ್ತಾ ಇದ್ದುಬಿಟ್ಟರು. ನಂತರ ಪ್ರಿಯಾ ದೃಷ್ಟಿ ತಗ್ಗಿಸಿದಳು. ಇವರಿಗೆ ಇದಕ್ಕಿಂತ ನೇರವಾಗಿ ಹಾಗೂ ಸ್ಪಷ್ಟವಾಗಿ ಹೇಗೆ ಹೇಳುವುದು ಎಂದು ಗೊತ್ತಾಗಲಿಲ್ಲ. ಇಬ್ಬರೂ ಆ ಕುರಿತಾಗಿ ಮತ್ತೆ ಮಾತು ಮುಂದುವರಿಸಲಿಲ್ಲ. ಪ್ರಿಯಾಳ ಮನಸ್ಸಿನಲ್ಲಿ ಮತ್ತೆ ದೊಡ್ಡ ಗೊಂದಲ ಎದ್ದಿತ್ತು. ಜಾನಕಮ್ಮ ತನ್ನನ್ನು ಸೊಸೆಯಾಗಿ ಆರಿಸಿಕೊಂಡರೋ ಇಲ್ಲವೋ ಎಂದು ಅವಳಿಗೆ ಸ್ಪಷ್ಟ ಅರ್ಥ ಆಗಲಿಲ್ಲ. ತಕ್ಷಣ ಅವಳು ನಡೆದಿದ್ದನ್ನೆಲ್ಲ ಸ್ವರೂಪನಿಗೆ ಮೆಸೇಜ್‌ ಮಾಡಿ ತಿಳಿಸಿದಳು. ಅವರೂ ಏನೋ ಚಿಂತಿಸುತ್ತಾ ಮೌನವಾಗಿದ್ದರು. ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಪ್ರಿಯಾ ಹಾಗೆ ಮಲಗಿಬಿಟ್ಟಳು. ಅವರು ತನ್ನನ್ನು ಕೂಗಿ ಕರೆದಂತೆ ಎನಿಸಿದಾಗ ಎದ್ದು ನೋಡುತ್ತಾಳೆ, ಅದಾಗಲೇ ಮುಂಬೈ ಬಂದಿತ್ತು. ಇದೀಗ ಅವರಿಗೆ ಅವಳು ವಿದಾಯ ಹೇಳಲೇಬೇಕಿತ್ತು. ಸ್ಟೇಷನ್‌ನಿಂದ ಇಳಿದ ನಂತರ ಅವಳು ಮುಂದೆ ಬಂದು ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾ, ಹಾಗೆ ಅವರ ಕುತ್ತಿಗೆಗೆ ಜೋತುಬಿದ್ದು, ದೂರ ಸರಿಯುತ್ತಿರುವ ನೆಂಟಳಂತೆ ಕಂಬನಿ ಮಿಡಿದಳು. ಮನಸ್ಸಿನಲ್ಲಿ ಅವಳಿಗೆ ಅರಿಯದ ಆತಂಕ ಮನೆ ಮಾಡಿತ್ತು. ಅವರೇ ತನಗೆ ಏನಾದರೂ ಹೇಳಲಿ ಎಂದು ಕಾದಳು. ಆದರೆ ಅವರೇನೂ ಹೇಳಲಿಲ್ಲ. ಅವರು ಹೋಗಬೇಕಾದಲ್ಲಿಗೆ ಊಬರ್‌ ಟ್ಯಾಕ್ಸಿ ಬುಕ್‌ ಮಾಡಿ, ಲಗೇಜ್‌ ಇರಿಸಿಕೊಟ್ಟು, ಕಣ್ಮರೆ ಆಗುವವರೆಗೂ ಅವರಿಗೆ ಕೈ ಬೀಸುತ್ತಾ ನಿಂತು, ಅಲ್ಲಿಂದ ನೇರ ದಾದರ್‌ನಲ್ಲಿದ್ದ ತನ್ನ ಚಿಕ್ಕಮ್ಮನ ಮನೆಗೆ ಹೊರಟಳು. ಇಂಟರ್‌ ವ್ಯೂ ಸಲುವಾಗಿ ಬಂದಿರುವುದಾಗಿ ತಿಳಿಸಿ, ಅಲ್ಲಿ 2 ದಿನ ಇದ್ದು, ಬೆಂಗಳೂರಿಗೆ ಹೊರಟುಬಿಟ್ಟಳು.

ನಂತರ ಅವಳು ಸ್ವರೂಪ್‌ನನ್ನು ಭೇಟಿಯಾಗಿ ನಡೆದ ಕಥೆಯನ್ನೆಲ್ಲಾ ವಿವರಿಸಿದಳು. ಬಾಯ್‌ ಫ್ರೆಂಡ್‌ ವಿಷಯಕ್ಕೆ ಬಾಯಿತಪ್ಪಿ `ಹ್ಞೂಂ’ ಎಂದದ್ದನ್ನು ಹೇಳಿಬಿಟ್ಟಳು. ಈಗ ಅವನಿಗೂ ಸಹ ಗೊಂದಲ ಉಂಟಾಗಿತ್ತು. ಅಮ್ಮ ಅವಳನ್ನು ಒಪ್ಪಿಕೊಂಡರೋ ಇಲ್ಲವೋ ತಿಳಿಯಲೇ ಇಲ್ಲ. ಶನಿವಾರ ಅವರು ವಾಪಸ್ಸು ಮರಳಲಿದ್ದರು. ಆ 2 ದಿನಗಳಲ್ಲಿ ಇವರಿಗೆ ಬಹಳ ಟೆನ್ಶನ್‌ ಕಾಡತೊಡಗಿತು. ಇದೀಗ ಅವರ ಜೀವನದ ಬಹು ದೊಡ್ಡ ನಿರ್ಧಾರ ಆಗುವುದರಲ್ಲಿತ್ತು.

ಅಂತೂ ಶನಿವಾರ ಸಂಜೆ ಜಾನಕಮ್ಮ ಬೆಂಗಳೂರಿಗೆ ಬಂದರು. ಸ್ವರೂಪ್‌ ತಾನೇ ಸ್ಟೇಷನ್‌ಗೆ ಹೋಗಿ ಅವರನ್ನು ಕರೆತಂದ. ಅಮ್ಮನನ್ನು ನೇರವಾಗಿ ಕೇಳುವಂತಿಲ್ಲ. ಅವರೇನು ನಿರ್ಧರಿಸಿದ್ದಾರೋ ತಿಳಿಯುತ್ತಿಲ್ಲ…. ಮತ್ತೇನು ಮಾಡುವುದು? ಅವರು ತಾವೇ ನಡೆದ ಪ್ರಸಂಗ ತಿಳಿಸಿ, ಪ್ರಿಯಾ ಬಗ್ಗೆ ಹೇಳಲಿ ಎಂದು ತುದಿಗಾಲಲ್ಲಿ ಕಾದಿದ್ದ. ಆದರೆ ಹಾಗೇನೂ ನಡೆಯಲೇ ಇಲ್ಲ. ಆ ಭಾನುವಾರ ನೀರಸವಾಗಿ ಕಳೆಯಿತು. ಈಗಂತೂ ಅವನ ಪರಿಸ್ಥಿತಿ ಪರೀಕ್ಷೆ ಬರೆದು ರಿಸಲ್ಟ್ ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಿಂತಲೂ ಹೀನಾಯವಾಗಿತ್ತು.

ಕೊನೆಗೆ ತಡೆಯಲಾರದೆ ತಾನೇ ಕೇಳಿಬಿಟ್ಟ, “ಅಮ್ಮಾ, ನಿನ್ನ ಮುಂಬೈ ಪ್ರಯಾಣ ಹೇಗಿತ್ತು? ಇಲ್ಲಿಂದ ಸುಖವಾಗಿ ಹೋಗಿ ತಲುಪಿದೆಯಾ? ಹೋದ ಕೆಲಸ ಆಯಿತೇ?”

“ಎಲ್ಲಾ ಬಹಳ ಚೆನ್ನಾಗಿತ್ತು,” ಅವರು ಚುಟುಕಾಗಿ ಉತ್ತರಿಸಿದ್ದರು. ಇವರ ತಂದೆ ಬಿಸ್‌ನೆಸ್‌ ಸಲುವಾಗಿ ಮುಂಬೈನಲ್ಲಿ ಫ್ರೆಂಡ್ ಜೊತೆ ಪಾರ್ಟ್‌ನರ್‌ ಆಗಿದ್ದರು. ಅಲ್ಲಿನ ಕೆಲವು ದಾಖಲೆಗಳಿಗೆ ಮುಂದೆ ಜಾನಕಮ್ಮನೇ ಉತ್ತರಾಧಿಕಾರಿ ಎಂದು ಕೋರ್ಟ್‌ನಲ್ಲಿ ಡಾಕ್ಯುಮೆಂಟೇಶನ್‌ ಮಾಡಿಸಬೇಕಿತ್ತು. ಅಂತೂ ಆ ವ್ಯವಹಾರವನ್ನೆಲ್ಲ ಸಲೀಸಾಗಿ ಮುಗಿಸಿಕೊಂಡು ಬಂದಿದ್ದರು. ಅವರ ಅಣ್ಣನ ಮನೆ ಮಾತುಂಗಾದಲ್ಲಿತ್ತು. ಹೀಗಾಗಿ ಅಲ್ಲಿ ತಂಗಲು, ಕಛೇರಿ ಕೆಲಸ ಮುಗಿಸಿಕೊಳ್ಳಲು ಅಣ್ಣ ನೆರವಾಗಿದ್ದರು.

ಸ್ವರೂಪ್‌ ಮತ್ತೆ 1-2 ಗಂಟೆ ಕಾಲ ಕಾದರೂ ಅಮ್ಮ ರೈಲು ಪ್ರಯಾಣದ ಬಗ್ಗೆ ಹೆಚ್ಚಿನ ವಿವರ ಏನೂ ಹೇಳಲೇ ಇಲ್ಲ. ಕೊನೆಗೆ ತಡೆಯಲಾರದೆ ತಾನೇ ಕೇಳಿಬಿಟ್ಟ, “ಮತ್ತೆ…. ಆ ಹುಡುಗಿ ನಿನ್ನ ಜೊತೆ ಅದೇ ಕೋಚ್‌ನಲ್ಲಿ ಬಂದಿದ್ದಳಲ್ಲ, ಪ್ರಯಾಣದಲ್ಲಿ ನಿನ್ನನ್ನು ವಿಚಾರಿಸಿಕೊಂಡಳಾ ಅಥವಾ ಅವಳ ಪಾಡಿಗಿ ಇದ್ದುಬಿಟ್ಟಳಾ? ಅವಳೂ ಒಬ್ಬಳೇ ಇದ್ದಳು, ನಿನ್ನದು ಮೇಲಿನ ಬರ್ತ್‌…. ಅವಳದು ಕೆಳಗಿನ ಬರ್ತ್‌ ಅಲ್ವಾ, ಅದಕ್ಕೆ ಕೇಳಿದೆ.”

“ಆದರೆ…. ಆ ಹುಡುಗಿ ಬಗ್ಗೆ ಯಾಕೆ ಕೇಳ್ತಿದ್ದೀಯಾ? ನಿನಗೆ ಗೊತ್ತೇ ಆ ಹುಡುಗಿ?” ಅವರು ಸಹಜವಾಗಿ ಕೇಳಿದರು.

ತಾನು ರೆಡ್‌ ಹ್ಯಾಂಡ್‌ಆಗಿ ಸಿಕ್ಕಿಬಿದ್ದೆನೇ ಎಂದು ಅವನಿಗೆ ತಕ್ಷಣ ಗಾಬರಿಯಾಯಿತು.

“ಅದೇನಿಲ್ಲಮ್ಮ… ಪಾಪ, ಅಷ್ಟು ದೂರದ ಪ್ರಯಾಣ, ನಿನಗೆ ಕಷ್ಟವಾಯ್ತೋ ಏನೋ ಅಂತ ವಿಚಾರಿಸುತ್ತಿದ್ದೆ.”

“ಓ ಹಾಗಾ…. ಏನೂ ಕಷ್ಟ ಆಗ್ಲಿಲ್ಲ ಬಿಡು. ಆ ಹುಡುಗಿ ಕೂಡ ಒಳ್ಳೆಯವಳೆ,” ಎಂದು ಸಂಜೆ ಶಾಪಿಂಗ್‌ ಎಂದು ಹೊರಟುಬಿಟ್ಟರು.

ಹೊರಡುವ ಮುಂಚೆ ಒಂದು ಕ್ಷಣ ನಿಂತು ಹೇಳಿದರು, “ಆದರೆ ಆ ಹುಡುಗಿಯ ಒಂದು ವಿಷಯ ಮಾತ್ರ ನನಗೆ ಅರ್ಥ ಆಗವೇ ಇಲ್ಲ. ನನ್ನ ಎಡಗಾಲಿಗೆ ಅಲ್ಲಿ ಏಟು ತಗುಲಿತು. ಪಾಪಾ, ಆಗ ಆ ಹುಡುಗಿ ಏನು ಮಾಡಿದಳು ಗೊತ್ತೇ?”

“ಏನಾಯ್ತಮ್ಮ?” ಮುಗ್ಧವಾಗಿ ಮಗರಾಯ ಪ್ರಶ್ನಿಸಿದ.

“ಅವಳು ಕಾಲಿಗೆ ಬ್ಯಾಂಡೇಜ್‌ ಕಟ್ಟುವ ನೆಪದಲ್ಲಿ ನನ್ನ ಪಾದ ಮುಟ್ಟಿ ಕಣ್ಣಿಗೊತ್ತಿಕೊಂಡು, ಮೌನವಾಗಿ ಆಶೀರ್ವಾದ ಪಡೆದಳು. ನಂತರ ನಾನು ಬೇಕೆಂದೇ ಅವಳನ್ನು ನಿನಗೆ ಯಾರಾದರೂ ಬಾಯ್‌ ಫ್ರೆಂಡ ಇದ್ದಾರಾ ಅಂತ ಕೇಳಿದರೆ, 2 ಕ್ಷಣ ಅವಕ್ಕಾದಳು. ನನಗೆ ಏನು ಉತ್ತರ ಕೊಡಬೇಕು ಅಂತ ಯೋಚಿಸುತ್ತಿದ್ದಳು ಅನ್ಸುತ್ತೆ.

“ಮತ್ತೊಂದು ವಿಷಯ ಗೊತ್ತೇ? ನನ್ನ ಬಗ್ಗೆ ಅವಳ ಬಳಿ ಹೇಳುವಾಗ ಒಬ್ಬ ಮಗನಿದ್ದಾನೆ ಸ್ವರೂಪ್‌ ಅಂತ ವಿವರಿಸುತ್ತಿದ್ದೆ. ಅವಳ ಕಂಗಳಲ್ಲಿ ತಕ್ಷಣ ವಿಚಿತ್ರ ಹೊಳಪು ತುಂಬಿಕೊಂಡಿತು. ತಕ್ಷಣ ದೃಷ್ಟಿ ತಗ್ಗಿಸಿದಳು, ತುಸು ಮೌನವಾದಳು. ಈ ಹುಡುಗಿ ಯಾಕೆ ಹೀಗೆ ಮಾಡುತ್ತಿದ್ದಾಳೆ ಅಂತ ಅರ್ಥವಾಗದೆ ಗೊಂದಲಕ್ಕೆ ಒಳಗಾದೆ.”

ಅಮ್ಮನ ಮಾತು ಕೇಳಿ ಸ್ವರೂಪನ ಮುಖದಲ್ಲಿ ಗಾಬರಿಯ ಅಲೆಗಳು ಮೂಡಿದವು. ಅವನು ಅಮ್ಮನನ್ನೇ ದೃಷ್ಟಿಸುತ್ತಿದ್ದ. ಅವರೇನೋ ಇವನ ಪರೀಕ್ಷೆಯ ಫಲಿತಾಂಶ ಹೇಳುತ್ತಾರೆ, ಅನ್ನುವ ಹಾಗೆ.ನಂತರ ಜಾನಕಮ್ಮ ಮುಂದುವರಿಸಿದರು, “ನಿನಗೆ ಮತ್ತೊಂದು ವಿಷಯ ಹೇಳಬೇಕು ಸ್ವರೂಪ್‌. ಅವಳು ಮಲಗಿದ್ದಾಗ ಫೋನ್‌ ಹತ್ತಿರವೇ ಇರಿಸಿಕೊಂಡಿದ್ದಳು. ನಾನು ಬಾತ್‌ರೂಮಿಗೆ ಅಂತ ಎದ್ದು ಹೊರಬರುವಾಗ ನೋಡ್ತೀನಿ, `ಸ್ವರೂಪ್‌’ ಅಂತ ನಿನ್ನ ಹೆಸರಲ್ಲಿ ಸೇವ್ ಆಗಿದ್ದ ಹಲವು ಮೆಸೇಜ್‌ ಬರುತ್ತಲೇ ಇತ್ತು. ಇದೇನು ಯೋಗಾಯೋಗವೋ ಇವಳ ಬಾಯ್‌ ಫ್ರೆಂಡ್‌ ಹೆಸರೂ ಸ್ವರೂಪ್‌ ಇರಬಹುದೇ ಅಂದುಕೊಂಡೆ. ಅಲ್ಲಿಂದ ವಾಪಸ್ಸು ಬಂದು ನೋಡ್ತೀನಿ ಆಗಲೂ ಮೆಸೇಜ್‌ ಬರ್ತಿತ್ತು. ಆ ಹುಡುಗಿ ಹಾಯಾಗಿ ನಿದ್ರಿಸಿಬಿಟ್ಟಿದ್ದಳು.

“ಮೆಸೇಜ್‌ ಪಾಪ್‌ಅಪ್‌ ಮೋಡ್‌ನಲ್ಲಿತ್ತು. ಅದು ನನಗೆ ಸ್ಪಷ್ಟವಾಗಿ ಕಾಣಿಸಿತು. `ಡೋಂಟ್‌ವರಿ ಪ್ರಿಯಾ….. ಅಮ್ಮನ ಜೊತೆ ನಿನ್ನ ಈ ಪ್ರಯಾಣ ನಮ್ಮಿಬ್ಬರಿಗೂ ಬಹಳ ಮಹತ್ವಪೂರ್ಣವಾದುದು. ಅಮ್ಮ ಒಂದು ಸಲ ನಿನ್ನನ್ನು ಒಪ್ಪಿಕೊಂಡುಬಿಟ್ಟರೆ ನಂತರ ನಾವಿಬ್ಬರೂ ಶಾಶ್ವತ ಒಂದಾಗಬಹುದು.’

“ಆಗಂತೂ ನನ್ನ ಸಂದೇಹ ತೀರಿತು, ನಂಬಿಕೆ ಮೂಡಿತು. ನೀವಿಬ್ಬರೂ ಕೂಡಿಯೇ ನನ್ನನ್ನು ಫೂಲ್ ಮಾಡ್ತಿದ್ದೀರಿ ಅಂತ…..” ಆ ಮಾತು ಹೇಳುವಾಗ ಅವರ ಧ್ವನಿ ಗಂಭೀರವಾಗಿತ್ತು.

“ಇಲ್ಲಮ್ಮ…. ಹಾಗೇನೂ ಇಲ್ಲ…..” ಅವನು ಅಮ್ಮನ ಭುಜ ಹಿಡಿದು ವಿಶ್ವಾಸ ಮೂಡಿಸಲು ಯತ್ನಿಸಿದ. ಅದಕ್ಕೆ ಅವರು ತಕ್ಷಣ ಹಿಂದೆ ಸರಿಯುತ್ತಾ ಹೇಳೇಬಿಟ್ಟರು, “ನೋಡೋ ಸ್ವರೂಪ, ಒಂದು ಮಾತು ಚೆನ್ನಾಗಿ ನೆನಪಿಟ್ಟುಕೋ.”

“ಏನಮ್ಮ ಅದು?” ಸ್ವರೂಪನಿಗೆ ನಿಜಕ್ಕೂ ಗಾಬರಿ ಆಯ್ತು.

“ನೀನು ಮೆಚ್ಚಿಕೊಂಡ ಈ ಹುಡುಗಿ….”

ತನ್ನ ಹೃದಯದ ಬಡಿತ ನಿಂತಂತಾಯಿತು ಅವನಿಗೆ. ಅವರು ಕಿಲಕಿಲ ನಗುತ್ತಾ ಹೇಳಿದರು, “ಅಯ್ಯೋ ಮಂಕು ಮುಂಡೇದೇ…. ಕನ್ನಡಿಯಲ್ಲಿ ಹೋಗಿ ನಿನ್ನ ಮುಖ ನೋಡಿಕೋ…. ಇಂಗು ತಿಂದ ಮಂಗನಾಗಿದ್ದೀಯ. ಪರೀಕ್ಷೆಯಲ್ಲಿ ಫೇಲ್ ‌ಆದ ವಿದ್ಯಾರ್ಥಿಯಂತೆ ನಿಂತುಬಿಟ್ಟಿದ್ದೀಯ…. ನಾನು ಹೇಳ್ತಾ ಇದ್ದದ್ದು…. ನಿನ್ನ ಮೆಚ್ಚಿನ ಹುಡುಗಿ ನನಗೂ ಬಹಳ ಬಹಳ ಹಿಡಿಸಿದ್ದಾಳೆ ಅಂತ…. ನನಗೆ ಖಂಡಿತಾ ಇಂಥ ಹುಡುಗಿಯೇ ಸೊಸೆಯಾಗಿ ಬೇಕಿತ್ತು. ನಿಜಕ್ಕೂ ಈ ಪ್ರಿಯಾ ತುಂಬಿದ ಕೊಡ ಅನ್ನಿಸಿತು. ರಿಯಲಿ ಐ ಲೈಕ್‌ ಯುವರ್‌ ಚಾಯ್ಸ್’ ಎಂದರು.

ಅಮ್ಮನ ಮಾತು ಕೇಳಿ ಅವನಿಗೆ ಖುಷಿಯಿಂದ ಕುಣಿದಾಡುವಂತಾಯಿತು.

“ನೀವು ಬಯಸಿದ್ದರೆ ಬೇರೆ ರೀತಿಯಲ್ಲೇ ಮದುವೆ ಆಗಬಹುದಿತ್ತು. ಆದರೆ ಹಾಗೇನೂ ಮಾಡದೆ ನನ್ನ ಅನುಮತಿ ಸಿಗಲಿ ಅಂತ ಪ್ರಾಮಾಣಿಕವಾಗಿ ಹೀಗೆ ಪ್ರಯತ್ನಿಸಿ, ಅದರಲ್ಲಿ ಆ ಹುಡುಗಿ ನಿಯತ್ತಿನಿಂದ ನಡೆದುಕೊಂಡಳಲ್ಲ, ಅದು ನನಗೆ ಬಹಳ ಹಿಡಿಸಿತು. “ಈಗಿನ ಕಾಲದ ಹುಡುಗರು ಹುಚ್ಚು ಮನಸ್ಸಿನವರು. ತಾವು ಹೇಳಿದ್ದೇ ಸರಿ, ಮಾಡಿದ್ದೇ ಸರಿ ಎಂಬಂತೆ ಹಠ ಹೂಡುತ್ತಾರೆ. ಹಿರಿಯರ ಅನುಮತಿ, ಆಶೀರ್ವಾದ ಇಲ್ಲದೆ ಬೇಕಾದವರನ್ನು ಕಟ್ಟಿಕೊಂಡು ಬಂದು ಎದುರಿಗೆ ನಿಲ್ಲಿಸುತ್ತಾರೆ. ಅಂಥ ಯಾವ ಕೆಲಸ ಮಾಡದೆ ಹೇಗಾದರೂ ನನ್ನ ಮನಸ್ಸು ಗೆಲ್ಲಲೇಬೇಕು ಅಂತ ಆ ಹುಡುಗಿ ಅಷ್ಟೆಲ್ಲ ಪ್ರಯತ್ನಪಟ್ಟಿದ್ದು ನನಗೆ ಹೆಮ್ಮೆ ಎನಿಸಿತು. ಅಷ್ಟು ಮಾತ್ರವಲ್ಲ, ಬಾಯ್‌ ಫ್ರೆಂಡ್‌ ವಿಷಯ ಬಂದಾಗ ತನಗೆ ಯಾರೂ ಇಲ್ಲ ಅಂತ ಅವಳು ಸುಳ್ಳು ಹೇಳಲಿಲ್ಲ, ಫೋನ್‌ ಆಫ್‌ ಮಾಡಲಿಲ್ಲ. ತನ್ನ ಪ್ರಾಮಾಣಿಕತೆಯಿಂದ ಅವಳು ಗೆದ್ದಿದ್ದಾಳೆ!”

ಸ್ವರೂಪ್‌ ಓಡಿಬಂದು ಅಮ್ಮನನ್ನು ಅಪ್ಪಿಕೊಂಡ. “ನಡಿ, ಇವತ್ತೇ ಅವರ ಮನೆಗೆ ಹೋಗಿ ಶಾಸ್ತ್ರೋಕ್ತವಾಗಿ ಹುಡುಗಿ ಕೇಳೋಣ,” ಎಂದಾಗ ಅವನು ಕುಣಿದಾಡಿಬಿಟ್ಟ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ