ರವೆ ಗೋಧಿಹಿಟ್ಟಿನ ಶಿರಾ
ಸಾಮಗ್ರಿ : ಅರ್ಧ ಕಪ್ ತುಪ್ಪ, ಅರ್ಧರ್ಧ ಕಪ್ ರವೆ, ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಸಕ್ಕರೆ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ ಅರ್ಧ ಕಪ್), 2-2 ಚಿಟಕಿ ಏಲಕ್ಕಿ ಪುಡಿ, ಅರಿಶಿನ ಅಥವಾ ಹಾಲಲ್ಲಿ ನೆನೆದ 5-6 ಎಸಳು ಕೇಸರಿ, 1 ಕಪ್ ಹಾಲು.
ವಿಧಾನ : ಮೊದಲು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಇದರಲ್ಲಿ ದ್ರಾಕ್ಷಿ ಗೋಡಂಬಿ ಇತ್ಯಾದಿ ಹಾಕಿ ಹುರಿದು ತೆಗೆಯಿರಿ. ಇದರಲ್ಲಿ ರವೆ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನಂತರ ಗೋಧಿ ಹಿಟ್ಟು ಹಾಕಿ ಕೆದಕಬೇಕು. ನಡುನಡುವೆ ತುಪ್ಪ ಬೆರೆಸುತ್ತಾ ಗಂಟಾಗದಂತೆ ಹುರಿಯಿರಿ. ಆಮೇಲೆ ಸಕ್ಕರೆ, ಅರಿಶಿನ ಅಥವಾ ಕೇಸರಿ, ಅಗತ್ಯವಿದ್ದಷ್ಟು ಹಾಲು, ಬಿಸಿ ನೀರು ಬೆರೆಸುತ್ತಾ ಕೇಸರಿ ಭಾತ್‌ಗೆ ಮಾಡುವಂತೆ ಕೈಯಾಡಿಸಿ, ತಳ ಹಿಡಿಯದಂತೆ ಆಗಾಗ ತುಪ್ಪ ಬೆರೆಸುತ್ತಿರಿ. ಕೊನೆಯಲ್ಲಿ ಏಲಕ್ಕಿ, ದ್ರಾಕ್ಷಿ ಗೋಡಂಬಿ ಸಹ ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿರಿ. ಕೆಳಗಿಳಿಸಿ, ಮೇಲೆ ಇನ್ನಷ್ಟು ಡ್ರೈ ಫ್ರೂಟ್ಸ್ ಉದುರಿಸಿ ಬಿಸಿ ಬಿಸಿಯಾಗಿ ತುಪ್ಪ ಹಾಕಿ ಸವಿಯಲು ಕೊಡಿ.
ಬ್ರೆಡ್ ಮೊಸರುವಡೆ
ಸಾಮಗ್ರಿ : 10-12 ಬ್ರೆಡ್ ಸ್ಲೈಸ್, ಬ್ರೆಡ್ ನೆನೆಯಲು ಹಾಲು, 4-5 ಚಮಚ ಹುಳಿಸಿಹಿ ಚಟ್ನಿ, ಪುದೀನಾ ಚಟ್ನಿ, 2 ಕಪ್ ಮೊಸರು, ಒಂದಿಷ್ಟು ಸೀಡ್ಲೆಸ್ ದಾಳಿಂಬೆ, ಹುರಿದ ಜೀರಿಗೆ, ಉಪ್ಪು, ಖಾರ, ದ್ರಾಕ್ಷಿ-ಗೋಡಂಬಿ ಚೂರು, ಸೀಡ್ಲೆಸ್ ಬಿಳಿ, ಕಪ್ಪು ದ್ರಾಕ್ಷಿ (ಉದ್ದಕ್ಕೆ ಹೆಚ್ಚಿದ್ದು).
ವಿಧಾನ : ಬ್ರೆಡ್ ಅಂಚು ಕತ್ತರಿಸಿ, ಇವನ್ನು ಹಾಲಿನಲ್ಲಿ ನೆನೆಹಾಕಿಡಿ. ನಂತರ ಇನ್ನು ಹೊರತೆಗೆದು ಲಘು ಒತ್ತಿಕೊಂಡು, ಅದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು ತುಂಬಿಸಿ, ವಡೆ ಆಕಾರ ಕೊಡಿ. ಇನ್ನು ಸರ್ವಿಂಗ್ ಬೌಲ್‌ನಲ್ಲಿ ಜೋಡಿಸಿಕೊಂಡು ಸೀಲ್ ಮಾಡಿ. ಈಗ ಇದರ ಮೇಲೆ ಮೊಸರು, 2 ಬಗೆ ಚಟ್ನಿ, ಜೀರಿಗೆ ಪುಡಿ, ಉಪ್ಪು, ಖಾರ, ಉಳಿದ ಎಲ್ಲಾ ಸಾಮಗ್ರಿ ಉದುರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ಅರ್ಧ ಗಂಟೆ ಫ್ರಿಜ್‌ನಲ್ಲಿರಿಸಿ ಸವಿಯಲು ಕೊಡಿ.
ಡಲ್ಗೋನಾ ಕೋಲ್ಡ್ ಕಾಫಿ
ಸಾಮಗ್ರಿ : 2 ಚಮಚ ಇನ್‌ಸ್ಟೆಂಟ್ ಕಾಫಿ ಪುಡಿ, 3 ಚಮಚ ಸಕ್ಕರೆ, 1 ಗ್ಲಾಸ್ (ಫ್ರಿಜ್‌ನಲ್ಲಿರಿಸಿದ್ದ) ಕೋಲ್ಡ್ ಮಿಲ್ಕ್, ತುಸು ಐಸ್ ಕ್ಯೂಬ್ಸ್, ಚಾಕೋ ಚಿಪ್ಸ್.
ವಿಧಾನ : ಒಂದು ಬಟ್ಟಲಿಗೆ ಕಾಫಿ ಪುಡಿ, ಸಕ್ಕರೆ, ತುಸು ಬಿಸಿ ನೀರು ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಸರ್ವಿಂಗ್ ಕಪ್ಸ್ ಗೆ ಇದನ್ನು ಬಗ್ಗಿಸಿ ಕೋಲ್ಡ್ ಮಿಲ್ಕ್, ಚಾಕೊ ಚಿಪ್ಸ್ ನಿಂದ ತುಂಬಿಸಿ. ಮೇಲೆ ಐಸ್ ಕ್ಯೂಬ್ಸ್ ಹಾಕಿ ಸವಿಯಲು ಕೊಡಿ.
ಚಾಕಲೇಟ್ ಓರಿಯೋ ಕಾಫಿ
ಸಾಮಗ್ರಿ : ಅಗತ್ಯವಿದ್ದಷ್ಟು ಚಾಕಲೇಟ್, ಸಕ್ಕರೆ, ಚಾಕಲೇಟ್ ಸಿರಪ್, ಐಸ್ ಕ್ಯೂಬ್ಸ್, 4-5 ಓರಿಯೋ ಬಿಸ್ಕತ್ತು, ಅರ್ಧ ಚಮಚ ಇನ್‌ಸ್ಟೆಂಟ್ ಕಾಫಿ ಪುಡಿ, ವೆನಿಲಾ ಐಸ್ ಕ್ರೀಂ, 1 ಕಪ್ ಹಾಲು.
ವಿಧಾನ : ಮಿಕ್ಸಿಯ ಜೂಸರ್ ಜಾರ್‌ಗೆ ಚಾಕಲೇಟ್, ತುಂಡರಿಸಿದ ಓರಿಯೋ ಬಿಸ್ಕತ್ತು, ಕಾಫಿಪುಡಿ, ಸಕ್ಕರೆ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ನಂತರ ಉಳಿದ ಸಾಮಗ್ರಿ ಬೆರೆಸಿ ಮತ್ತೆ ಚಲಾಯಿಸಿ. ಇದೀಗ ಕಾಫಿ ರೆಡಿ. ಗಾಜಿನ ಗ್ಲಾಸ್‌ಗಳ ಒಳಭಾಗಕ್ಕೆ ಸಿರಪ್ ಸವರಿ, ತುಸು ವೆನಿಲಾ ಐಸ್ ಕ್ರೀಂ ಹಾಕಿ ರೆಡಿಯಾದ ಕಾಫಿ ಸರ್ವ್ ಮಾಡಿ.
ರೋಝಿ ಡಿಲೈಟ್
ಸಾಮಗ್ರಿ : 4-5 ಬ್ರೆಡ್ ಸ್ಲೈಸ್, 5-6 ಚಮಚ ರೋಸ್ ಸಿರಸ್, 1 ಗಿಟಕು ತೆಂಗಿನ ತುರಿ, 4 ಚಮಚ ಠಂಡಾಯಿ ಪೌಡರ್ (ರೆಡಿಮೇಡ್ ಲಭ್ಯ), ಅಗತ್ಯವಿದ್ದಷ್ಟು ಟೂಟಿಫ್ರೂಟಿ, ಡ್ರೈ ಫ್ರೂಟ್ಸ್, ಚಾಕೋಚಿಪ್ಸ್, 250 ಗ್ರಾಂ ತುರಿದ ಪನೀರ್.
ವಿಧಾನ : ಕುಕೀ ಕಟರ್‌ನಿಂದ ಬ್ರೆಡ್‌ನ್ನು ಗುಂಡಗೆ ಕತ್ತರಿಸಿ. ಒಂದು ಅಗಲ ಟ್ರೇನಲ್ಲಿ ಪನೀರ್ ಉದುರಿಸಿ. ಇದರ ಮೇಲೆ ಠಂಡಾಯಿ ಪೌಡರ್ ಉದುರಿಸಿ. ಇದನ್ನು ಕೈಯಿಂದ ಮಸೆದು ಬೆರೆಸಿರಿ. ಈ ಮಿಶ್ರಣವನ್ನು ಎಲ್ಲಾ ಬ್ರೆಡ್ ಸ್ಲೈಸ್ ಮೇಲೂ ಹರಡಿರಿ. ಅದರ ಮೇಲೆ ಟೂಟಿಫ್ರೂಟಿ…. ಇತ್ಯಾದಿ ಎಲ್ಲಾ ಅಲಂಕಾರಿಕ ಸಾಮಗ್ರಿ ಉದುರಿಸಿ. ಇದರ ಮೇಲೆ ಮತ್ತೊಂದು ಬ್ರೆಡ್ ಸ್ಲೈಸ್‌ನಿಂದ ಕ್ಲೋಸ್ ಮಾಡಿ, ಅದುಮಿಡಿ. ಇದನ್ನು ರೋಸ್ ಸಿರಪ್‌ನಲ್ಲಿ ಅದ್ದಿ ಜೋಡಿಸಿ. ಇದರ ಮೇಲೆ ತೆಂಗಿನ ತುರಿ ಉದುರಿಸಿ, 1 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ, ನಂತರ ಸವಿಯಲು ಕೊಡಿ.
ಸ್ಪೆಷಲ್ ಶಂಕರಪೋಳಿ
ಸಾಮಗ್ರಿ : 1 ಕಪ್ ಸಣ್ಣ ರವೆ, ಅರ್ಧ ಕಪ್ ಮೈದಾ, 4 ಚಮಚ ತುಪ್ಪ, ತುಸು ಬಿಸಿ ನೀರು, 1 ಸಣ್ಣ ಚಮಚ ಓಮ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್ ಮಸಾಲ, ಕರಿಯಲು ಎಣ್ಣೆ.
ವಿಧಾನ : ಒಂದು ಬಟ್ಟಲಿಗೆ ಹುರಿದ ರವೆ, ಮೈದಾ, ಉಪ್ಪು, ಖಾರ, ಮಸಾಲೆ, ತುಪ್ಪ, ಓಮ, ತುಸು ಬಿಸಿ ನೀರು ಬೆರೆಸಿ ಮಿಶ್ರಣ ಕಲಸಿಡಿ. ಇದನ್ನು ನೆನೆಯಲು ಬಿಟ್ಟು ತುಪ್ಪ ಬೆರೆಸಿ ಮತ್ತೆ ನಾದಿಕೊಳ್ಳಿ. ನಂತರ ಇದರಿಂದ ದಪ್ಪ ಚಪಾತಿ ಲಟ್ಟಿಸಿ ಚಿತ್ರದಲ್ಲಿರುವಂತೆ ವಿವಿಧ ಆಕಾರದಲ್ಲಿ ಕತ್ತರಿಸಿ. ಇವನ್ನು ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಕರಿಯಿರಿ. ಹಾಗೇ ಸವಿಯಬಹುದು, ಡಬ್ಬದಲ್ಲಿ ಇರಿಸಿ ಬೇಕಾದಾಗ ಸವಿಯಬಹುದು.
ಅಕ್ಕಿಯ ವಡೆ
ಸಾಮಗ್ರಿ : 1 ಕಪ್ ಅಕ್ಕಿಹಿಟ್ಟು, ಅರ್ಧ ಕಪ್ ಕಡೆದ ಮೊಸರು, ತುಸು ನೀರು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹೆಚ್ಚಿದ ಹಸಿ ಮೆಣಸು, ಬೇಕಿಂಗ್ ಸೋಡ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಯಲು ಎಣ್ಣೆ.
ವಿಧಾನ : ಒಂದು ಬಟ್ಟಲಿಗೆ ಮೊಸರು, ಅಕ್ಕಿಹಿಟ್ಟು, ನೀರು ಬೆರೆಸಿ ತೆಳ್ಳಗೆ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಒಂದು ಬಾಣಲೆಯ ಒಳಭಾಗ ಪೂರ್ತಿ ಎಣ್ಣೆ ಸವರಿ ಜಿಡ್ಡು ಮಾಡಿ. ನಂತರ ಇದರಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಹಸಿ ಮೆಣಸು, ಕರಿಬೇವು ಹಾಕಿ ಚಟಪಟಾಯಿಸಿ. ನಂತರ ಹಿಟ್ಟು ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ಅದು ತುಸು ಗಟ್ಟಿ ಆದಾಗ ಕೆಳಗಿಳಿಸಿ. ಆರಿದ ಮೇಲೆ ಬೇಕಿಂಗ್ ಸೋಡ ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಇದರಿಂದ ಅಂಗೈ ಮೇಲೆ ಜಿಡ್ಡು ಸವರಿ, ವಡೆ ತಟ್ಟಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿಯಾದ ಇದನ್ನು ಟೊಮೇಟೊ ಸಾಸ್ ಜೊತೆ ಸಂಜೆ ಕಾಫಿ ಟೀ ಟೈಂನಲ್ಲಿ ಕೊಡಿ.
ಆಲೂ ಬದನೆ ಪಲ್ಯ
ಸಾಮಗ್ರಿ : 4-5 ಬದನೆ, 3 ಬೆಂದ ಆಲೂ, 8-10 ಎಸಳು ಬೆಳ್ಳುಳ್ಳಿ, 3-4 ಸಣ್ಣ ಟೊಮೇಟೊ, 1-2 ಹೆಚ್ಚಿದ ಈರುಳ್ಳಿ, 3-4 ಹಸಿ ಮೆಣಸು, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಒಗ್ಗರಣೆ ಸಾಮಗ್ರಿ, ಎಣ್ಣೆ.
ವಿಧಾನ : ಮೊದಲು ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಹಸಿ ಮೆಣಸು, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಬದನೆ ಹೋಳು ಹಾಕಿ ಬಾಡಿಸಿ. ಇದಕ್ಕೆ ಉಪ್ಪು, ಖಾರ ಹಾಕಿ ಕೆದಕಿರಿ. ಕೊನೆಯಲ್ಲಿ ಮಸೆದ ಆಲೂ ಸೇರಿಸಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ಕೆಳಗಿಳಿಸಿ ಕೊ.ಸೊಪ್ಪು, ಪುದೀನಾ ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಚಪಾತಿ, ದೋಸೆಗೆ ಸವಿಯಲು ಕೊಡಿ.
ಹುಳಿಸಿಹಿ ಸಮೋಸಾ
ಕಣಕದ ಸಾಮಗ್ರಿ : 2 ಕಪ್ ಮೈದಾ, ಅರ್ಧ ಕಪ್ ತುಪ್ಪ, ರುಚಿಗೆ ಉಪ್ಪು, ಕರಿಯಲು ಎಣ್ಣೆ.
ಹೂರಣದ ಸಾಮಗ್ರಿ : ಒಂದಿಷ್ಟು ಖಾರಾಸೇವೆ, 4 ಚಮಚ ಕೊಬ್ಬರಿ ತುರಿ, ತುಸು ಧನಿಯಾ, ಸೋಂಪು, ಜೀರಿಗೆ, ಓಮ, 10-12 ತುಂಡರಿಸಿದ ಗೋಡಂಬಿ, 8-10 ಒಣದ್ರಾಕ್ಷಿ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸಕ್ಕರೆ, ಗರಂಮಸಾಲ, ತುರಿದ ಹುಳಿಮಾವು, 1 ದೊಡ್ಡ ಕಪ್ ಬೇಯಿಸಿ ಮಸೆದ ಆಲೂ, ಹೆಚ್ಚಿದ 2 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು.
ವಿಧಾನ : ಒಂದು ಬೇಸನ್ನಿಗೆ ಮೈದಾ, ತುಸು ಉಪ್ಪು, ಚಿಟಕಿ ಅರಿಶಿನ, ನೀರು ಬೆರೆಸಿ ಮೃದುವಾದ ಪೂರಿ ಹಿಟ್ಟಿನಂತೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು 1 ಗಂಟೆ ಕಾಲ ನೆನೆಯಲು ಬಿಡಿ. ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ, ಓಮ, ಸೋಂಪಿನ ಒಗ್ಗಣೆ ಕೊಡಿ. ದ್ರಾಕ್ಷಿ-ಗೋಡಂಬಿಗಳನ್ನು ತುಪ್ಪದಲ್ಲಿ ಬೇರೆಯಾಗಿ ಹುರಿದಿಡಿ. ನಂತರ ಇದಕ್ಕೆ ಹೆಚ್ಚಿದ ಕರಿಬೇವು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದ ಮಸಾಲೆ, ಕೊಬ್ಬರಿ ಹಾಕಿ ಕೆದಕಬೇಕು. ಹುಳಿಮಾವು ಹಾಕಿ ಕೆದಕಿರಿ. ನಂತರ ಮಸೆದ ಆಲೂ ಸೇರಿಸಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ಕೊನೆಯಲ್ಲಿ ಖಾರಾಸೇವೆ ಹಾಕಿ ಕೆದಕಿ ಕೆಳಗಿಳಿಸಿ. ಇದಕ್ಕೆ ಪುದೀನಾ, ಕೊ.ಸೊಪ್ಪು ಬೆರೆಸಿಕೊಳ್ಳಿ. ನೆನೆದ ಮೈದಾದಿಂದ ಪುಟ್ಟ ಪೂರಿ ಲಟ್ಟಿಸಿ, ಅರ್ಧ ಚಂದ್ರಾಕಾರ ಮಾಡಿ. ಒಂದನ್ನು ಶಂಖು ತರಹ ಮಡಿಚಿ ಮಧ್ಯೆ 2-3 ಚಮಚ ಹೂರಣ ತುಂಬಿಸಿ, ಒದ್ದೆ ಕೈಯಿಂದ ಅಂಚನ್ನು ಸೀಲ್ ಮಾಡಿ. ಈ ರೀತಿ ಎಲ್ಲಾ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಗರಿಗರಿಯಾಗಿ ಕರಿಯಿರಿ. ಬಿಸಿಯಾಗಿ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಜೋಳದ ಢೋಕ್ಲಾ
ಸಾಮಗ್ರಿ : ಅರ್ಧ ಕಪ್ ಜೋಳದ ಹಿಟ್ಟು, ಕಡಲೆಹಿಟ್ಟು, 1 ಕಪ್ ಸಾದಾ ರವೆ, 1 ಹುಳಿ ಮಾವಿನ ತುರಿ, 2 ಕಪ್ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನ ಪೇಸ್ಟ್, ಈನೋ ಫ್ರೂಟ್ ಸಾಲ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ತುಸು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಇಂಗು, ಅರ್ಧ ಕಪ್ ತೆಂಗಿನ ತುರಿ, ಹೆಚ್ಚಿದ ಕೊ.ಸೊಪ್ಪು, ಪುದೀನಾ.
ವಿಧಾನ : ಮೊದಲು ಮಿಕ್ಸಿಗೆ 1 ಕಪ್ ಮಾವಿನ ತುರಿಗೆ ಮಜ್ಜಿಗೆ ಬೆರೆಸಿ ನೀಟಾಗಿ ಪೇಸ್ಟ್ ಮಾಡಿ. ಒಂದು ಬೇಸನ್ನಿಗೆ ಜೋಳದ ಹಿಟ್ಟು, 3 ಬಗೆಯ ಪೇಸ್ಟ್, ತುಸು ಹುರಿದ ರವೆ, ಕಡಲೆಹಿಟ್ಟು, ಉಪ್ಪು, ಮಾವಿನ ಪೇಸ್ಟ್, ಉಳಿದ ಮಜ್ಜಿಗೆ ಎಲ್ಲಾ ಬೆರೆಸಿಕೊಂಡು ಈ ಮಿಶ್ರಣವನ್ನು 1 ಗಂಟೆ ಕಾಲ ನೆನೆಯಲು ಬಿಡಿ. ನಂತರ ಈನೋಸಾಲ್ಟ್ ನ್ನು 1 ಚಮಚ ನೀರಲ್ಲಿ ಕದಡಿಕೊಂಡು ಈ ಮಿಶ್ರಣಕ್ಕೆ ಬೆರೆಸಿರಿ. ಇದು ಇಡ್ಲಿ ಹಿಟ್ಟಿನ ಹದಕ್ಕಿರಲಿ. ನಂತರ ಇಡ್ಲಿ ಕುಕ್ಕರ್‌ನಲ್ಲಿ ಬಟ್ಟಲಿಗೆ ತುಪ್ಪ ಸವರಿ, ಅದಕ್ಕೆ ಈ ಮಿಶ್ರಣ ಹರಡಿ, 15-20 ನಿಮಿಷ ಹಬೆಯಲ್ಲಿ ಬೇಯಿಸಿ. ಅದು ಕೂಲಾದಂತೆ, ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಈ ಒಗ್ಗರಣೆಯನ್ನು ಬೆಂದ ಢೋಕ್ಲಾ ಮೇಲೆ ಹರಡಿರಿ, ತೆಂಗಿನ ತುರಿ, ಕೊ.ಸೊಪ್ಪು, ಪುದೀನಾ, ತುರಿದ ಮಾವು ಉದುರಿಸಿ ಚೌಕಾಕಾರವಾಗಿ ಕತ್ತರಿಸಿ ಕಾಯಿ ಚಟ್ನಿ ಜೊತೆ ಸವಿಯಲು ಕೊಡಿ.
ಮ್ಯಾಂಗೋ ಪಾನಕ
ಸಾಮಗ್ರಿ : 1 ಹುಳಿ ಮಾವಿನ ಹೋಳು, ಅರ್ಧ ಕಪ್ ಸಕ್ಕರೆ, ಹಾಲಲ್ಲಿ ನೆನೆದ 3-4 ಎಸಳು ಕೇಸರಿ, 2 ಚಿಟಕಿ ಏಲಕ್ಕಿಪುಡಿ.
ವಿಧಾನ : ಮೊದಲು ಮಾವಿನ ಸಿಪ್ಪೆ ಹೆರೆದು ಹೋಳು ಮಾಡಿ, ಅದಕ್ಕೆ ಸಕ್ಕರೆ ಹಾಕಿ ಕಡಿಮೆ ನೀರಲ್ಲಿ ಬೇಯಿಸಿ. ಕೆಳಗಿಳಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ಮಿಕ್ಸಿಯ ಕೊನೆ ಸುತ್ತಿನಲ್ಲಿ ಏಲಕ್ಕಿ, ಕೇಸರಿ ಹಾಕಿ ಮತ್ತೆ ಚಲಾಯಿಸಿ. ನಂತರ ಇದನ್ನು ಒಲೆ ಮೇಲೆ ಕುದಿಸಿ, ಕೆಳಗಿಳಿಸಿ ಆರಲು ಬಿಡಿ. ಐಸ್ ಕ್ಯೂಬ್ಸ್ ಹಾಕಿ ಸವಿಯಲು ಕೊಡಿ.
ಮ್ಯಾಂಗೋ ಸ್ಕ್ವಾಶ್
ಸಾಮಗ್ರಿ : 2 ಮಾಗಿದ ಮಾವು, ಹಾಲಲ್ಲಿ ನೆನೆದ 2-3 ಎಸಳು ಕೇಸರಿ, 1 ಕಪ್ ಪುಡಿಸಕ್ಕರೆ, 2 ಕಪ್ ಕೋಲ್ಡ್ ಮಿಲ್ಕ್, ತುಸು ಪುಡಿ ಐಸ್.
ವಿಧಾನ : ಮೊದಲು ಮಿಕ್ಸಿಗೆ ಸಿಪ್ಪೆ ಹೆರೆದ ಮಾವಿನ ಹೋಳು ಹಾಗೂ ಉಳಿದೆಲ್ಲ ಸಾಮಗ್ರಿ ಬೆರೆಸಿ ಚೆನ್ನಾಗಿ ಬ್ಲೆಂಡ್ ಮಾಡಿ. ಗ್ಲಾಸಿಗೆ ಸುರಿದು, ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.