ವಡಾ ಪಾವ್

ಮೂಲ ಸಾಮಗ್ರಿ : 7-8 ಎಸಳು ಬೆಳ್ಳುಳ್ಳಿ, 4-5 ಹಸಿಮೆಣಸು, 3-4 ಬೆಂದ ಆಲೂ, ಅರ್ಧ ಸೌಟು ಎಣ್ಣೆ, ಒಗ್ಗರಣೆ ಸಾಮಗ್ರಿ, 2 ಚಿಟಕಿ ಅರಿಶಿನ, ತುಸು ಹೆಚ್ಚಿದ ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಬ್ಯಾಟರ್‌ ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, ತುಸು ಅರಿಶಿನ, ರುಚಿಗೆ ಉಪ್ಪು, ಖಾರ.

ಮಿರ್ಚಿ ಫ್ರೈಗಾಗಿ ಸಾಮಗ್ರಿ : ಉದ್ದಕ್ಕೆ ಸೀಳಿದ 5-6 ಉದ್ದದ (ಖಾರವಿಲ್ಲದ) ಹಸಿಮೆಣಸು, ಫ್ರೈ ಮಾಡಲು ಎಣ್ಣೆ. ತುಸು ಉಪ್ಪು, ನಿಂಬೆರಸ.

ವಡಾ ಪಾವ್ ‌ಚಟ್ನಿಗಾಗಿ ಸಾಮಗ್ರಿ : 4 ಚಮಚ ಎಣ್ಣೆ, ಅರ್ಧ ಕಪ್‌ ಶೇಂಗಾಬೀಜ, 4-5 ಎಸಳು ಬೆಳ್ಳುಳ್ಳಿ, ಅರ್ಧ ಕಪ್‌ ಫ್ರೈಡ್‌ಬೇಸನ್‌ ಬ್ಯಾಟರ್‌ ಕ್ರಂಬ್ಸ್, ರುಚಿಗೆ ಉಪ್ಪು, ಖಾರ, ಕರಿಯಲು ಎಣ್ಣೆ.

ಮೂಲ ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಒಗ್ಗರಣೆ ಸಾಮಗ್ರಿ, ಬೆಳ್ಳುಳ್ಳಿ, ಹಸಿಮೆಣಸು, ಅರಿಶಿನ ಮಸೆದ ಆಲೂ ಸೇರಿಸಿ ಬಾಡಿಸಿ. ನಂತರ ಉಪ್ಪು, ಕೊ. ಸೊಪ್ಪು, ನಿಂಬೆರಸ ಬೆರೆಸಿ ಕೆದಕಿ ಕೆಳಗಿಳಿಸಿ.

ಬ್ಯಾಟರಿ ಗೆ ವಿಧಾನ : ಒಂದು ಬೇಸನ್ನಿಗೆ ತುಸು ಹುರಿದ ಕಡಲೆಹಿಟ್ಟು, ಅರಿಶಿನ, ಉಪ್ಪು, ಖಾರ, ತುಸು ನೀರು ಬೆರೆಸಿ ಪಕೋಡ ತರಹ ಕಲಸಿ, ಕ್ರಂಬ್ಸ್ ಕರಿಯಿರಿ.

ವಡಾ ಪಾವ್ ‌ಗಾಗಿ ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಹಸಿಮೆಣಸು, ಬೆಳ್ಳುಳ್ಳಿ ಹಾಕಿ ಬಾಡಿಸಿ. ಇದನ್ನು ಬದಿಗಿರಿಸಿ, ಅದರಲ್ಲಿ ತುಸು ಎಣ್ಣೆ ಬಿಸಿ ಮಾಡಿ ಶೇಂಗಾ, ಬೆಳ್ಳುಳ್ಳಿ, ಫ್ರೈಡ್‌ ಬ್ಯಾಟರ್‌ ಕ್ರಂಬ್ಸ್, ಉಪ್ಪು, ಖಾರ ಹಾಕಿ ಕೆದಕಿ ಕೆಳಗಿಳಿಸಿ. ಇದನ್ನು ಮಿಕ್ಸಿಗೆ ಹಾಕಿ ತರಿತರಿ ಪೇಸ್ಟ್ ಮಾಡಿ. ಆಮೇಲೆ ಆಲೂ ಮಿಶ್ರಣವನ್ನು ಸಣ್ಣ ಉಂಡೆ ಮಾಡಿ, ಚಪ್ಪಟೆಯಾಗಿ ತಟ್ಟಿ ಉಳಿದ ಕಡಲೆಹಿಟ್ಟಿನಲ್ಲಿ ಅದ್ದಿಕೊಂಡು ವಡಾ ತರಹ ಕರಿಯಿರಿ. ಗುಂಡಗೆ ಪಾವ್ (ಬನ್‌) ಕತ್ತರಿಸಿ, ಬೆಣ್ಣೆ ಸವರಿ, ಪೇಸ್ಟ್ ಹಚ್ಚಿ ಮಧ್ಯೆ ವಡಾ ಇರಿಸಿ, ಫ್ರೈಡ್‌ ಬೆಳ್ಳುಳ್ಳಿ, ಮೆಣಸು ಇರಿಸಿ ಸವಿಯಲು ಕೊಡಿ.

ಮ್ಯಾಂಗೋ ಫಲೂದಾ

mango_falooda

ಸಾಮಗ್ರಿ : 5-6 ಚಮಚ ಕಾಮಕಸ್ತೂರಿ ಬೀಜ (ಚಿಯಾ ಸೀಡ್ಸ್), 1-2 ಕಪ್‌ ಮಾವಿನ ತಿರುಳು, 1 ಕಪ್‌ ಉದ್ದಕ್ಕೆ ಹೆಚ್ಚಿದ ಮಾವು, 4 ಚಮಚ ಸಕ್ಕರೆ, 2 ಕಪ್‌ ಮಾವಿನ ಹೋಳು, ಅರ್ಧ ಕಪ್‌ ನಟ್ಸ್, 2 ಚಮಚ ರೋಸ್‌ ಸಿರಪ್‌, 4 ಸ್ಕೂಪ್‌ ವೆನಿಲಾ ಐಸ್‌ ಕ್ರೀಂ, ತುಸು ಕಂಡೆನ್ಸ್ಡ್ ಮಿಲ್ಕ್, ಅಲಂಕರಿಸಲು ಹೆಚ್ಚಿದ ಪುದೀನಾ.

ವಿಧಾನ : ಅರ್ಧ ಗಂಟೆ ಕಾಲ ಚಿಯಾ ಸೀಡ್ಸ್ ನ್ನು ಹಾಲಲ್ಲಿ ನೆನೆ ಹಾಕಿಡಿ. ಒಂದು ಸಣ್ಣ ಪಾತ್ರೆಯಲ್ಲಿ ನೀರು ಬಿಸಿ ಮಾಡಿ. ಅದಕ್ಕೆ ರೋಸ್‌ ಸಿರಪ್‌ ಬೆರೆಸಿ, ಮಂದ ಉರಿಯಲ್ಲಿ ಕುದಿಸುತ್ತಾ ಅದು ಜೆಲ್ಲಿ ತರಹ ಆಗುವಂತೆ ಮಾಡಿ. ಇದನ್ನು ಕೆಳಗಿಳಿಸಿ ಆರಿದ ಮೇಲೆ 2-3 ಗ್ಲಾಸಿಗೆ ಬಗ್ಗಿಸಿ, ಫ್ರಿಜ್‌ ನಲ್ಲಿರಿಸಿ ಕೂಲ್ ‌ಮಾಡಿ. ಅದು ಗ್ಲಾಸುಗಳಲ್ಲಿ ಪದರವಾಗಿ ಕಾಣಿಸಿದಾಗ, ಇದಕ್ಕೆ ಮಾವಿನ ಹೋಳು ಹಾಕಿ. ಇದರ ಮೇಲೆ ಹಾಲಲ್ಲಿ ನೆನೆದ ಚಿಯಾ ಸೀಡ್ಸ್, ನಟ್ಸ್ ಹಾಕಿಡಿ. ಇದರ ಮೇಲೆ ಸಕ್ಕರೆ ಪದರ ಬರಲಿ. ಇದರ ಮೇಲೆ ಐಸ್ ಕ್ರೀಂ ಹಾಕಿ, ಮೇಲೆ ಕೋಲ್ಡ್ ಮಿಲ್ಕ್ ಹಾಕಿಡಿ. ಇದರ ಮೇಲೆ ಉದ್ದಕ್ಕೆ ಹೆಚ್ಚಿದ ಮಾವು, ಕಂಡೆನ್ಸ್ಡ್ ಮಿಲ್ಕ್ ಹಾಕಿಡಿ. ಇದಾದ ಮೇಲೆ ಇದಕ್ಕೆ ರೋಸ್‌ ಸಿರಪ್‌, ಪುದೀನಾ, ಮಾವಿನ ತಿರುಳು, ತುಸು ಉಪ್ಪು, ಮೆಣಸು ಸಿರಪ್‌ ಉದುರಿಸಿ ಸವಿಯಲು ಕೊಡಿ.

ಮಾವಿನ ಪಾನಕ

Aam_panna1

 

ಮೂಲ ಸಾಮಗ್ರಿ : 5-6 ಹುಳಿ ಮಾವಿನಕಾಯಿ, 1 ಚಮಚ ಸೋಂಪು, ತುಸು ಶುಂಠಿಯ ತುರಿ, ಅರ್ಧ ಕಪ್‌ ಸಕ್ಕರೆ, ತುಸು ಹೆಚ್ಚಿದ ಪುದೀನಾ, ಉಪ್ಪು.

ಮಸಾಲೆ ಸಾಮಗ್ರಿ : ತುಸು ಹುರಿದ ಜೀರಿಗೆ, 2-3 ಏಲಕ್ಕಿ, 8-10 ಕಾಳುಮೆಣಸು, ಚಿಟಕಿ ಉಪ್ಪು.

ಸರ್ವಿಂಗ್‌ ಸಾಮಗ್ರಿ : ತುಸು ಐಸ್‌ ಕ್ಯೂಬ್ಸ್, ಫ್ರಿಜ್‌ ನೀರು.

ವಿಧಾನ : ಮೊದಲು ಕುಕ್ಕರ್‌ಗೆ 2 ಕಪ್‌ ನೀರು ಬೆರೆಸಿ ಮಾವಿನಕಾಯಿ ಹಾಕಿ ಬೇಯಿಸಿ. ಇದು ಕೂಲ್ ‌ಆದ ನಂತರ, ಸಿಪ್ಪೆ ಬೇರ್ಪಡಿಸಿ, ಮಾವಿನಕಾಯಿ ಶುಂಠಿ ಜೊತೆ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ಒಂದು ಬಟ್ಟಲು ನೀರಿಗೆ ಹಾಕಿ ಸೋಂಪು ಸ್ವಲ್ಪ ಹೊತ್ತು ನೆನೆಯಲು ಬಿಡಿ.

ನಂತರ ಒಂದು ಬಾಣಲೆಗೆ ಜೀರಿಗೆ ಪುಡಿ, ಏಲಕ್ಕಿ, ಮೆಣಸು ಹಾಕಿ ಹುರಿದು, ಆರಿದ ನಂತರ ಪುಡಿ ಮಾಡಿ. ನಂತರ ಅದೇ ಮಿಕ್ಸಿಗೆ ಮ್ಯಾಂಗೋ ತಿರುಳು, ಶುಂಠಿಯ ಪೇಸ್ಟ್, ನೆನೆದ ಸೋಂಪು ಹಾಕಿ ಮತ್ತೊಮ್ಮೆ ಮಿಕ್ಸಿ ಚಲಾಯಿಸಿ. ನಂತರ ಇದಕ್ಕೆ ಸಕ್ಕರೆ, ಪುದೀನಾ, ತುಸು ಐಸ್‌ ಕ್ಯೂಬ್ಸ್ ಹಾಕಿ ಮತ್ತೆ ತಿರುವಿಕೊಳ್ಳಿ. ನಂತರ ಉದ್ದನೆಯ ಗ್ಲಾಸುಗಳಿಗೆ ಈ ಮಿಶ್ರಣವನ್ನು ಸಮನವಾಗಿ ತುಂಬಿಸಿ. ಮೇಲೆ ಇನ್ನಷ್ಟು ಐಸ್‌ ಹಾಕಿ. ಇದಕ್ಕೆ ಫ್ರಿಜ್‌ ನೀರು ಬೆರೆಸಿ ಕದಡಿರಿ. ಹೀಗೆ ತಯಾರಾದ ಪಾನಕವನ್ನು ಪುದೀನಾ, ಅಲಂಕರಿಸಿದ ಮಾವಿನ ಹೋಳಿನೊಂದಿಗೆ ಸವಿಯಲು ಕೊಡಿ.

ಆಲೂ ಪರೋಟ

ಆಲೂ ಪರೋಟ

ಮೂಲ ಸಾಮಗ್ರಿ : 2 ಕಪ್‌ ಗೋಧಿಹಿಟ್ಟು, 4-5 ಚಮಚ ಕಡಲೆಹಿಟ್ಟು, ಅರ್ಧ ಚಮಚ ಓಮ, ಅರ್ಧ ಸೌಟು ತುಪ್ಪ, ಚಿಟಕಿ ಉಪ್ಪು, ತುಸು ಎಣ್ಣೆ.

ಹೂರಣಕ್ಕೆ ಸಾಮಗ್ರಿ : 3-4 ಬೇಯಿಸಿ ಮಸೆದ ಆಲೂ, ಒಂದಿಷ್ಟು ತುರಿದ ಶುಂಠಿ, ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಜೀರಿಗೆ ಪುಡಿ, ಸೋಂಪು, ಅಮ್ಚೂರ್‌ಪುಡಿ, ಬೆಣ್ಣೆ, ಮೊಸರು, ಉಪ್ಪಿನಕಾಯಿ, ತುಸು ತುಪ್ಪ.

ವಿಧಾನ : ಒಂದು ಬಟ್ಟಲಿಗೆ ಮೂಲ ಸಾಮಗ್ರಿ ಬೆರೆಸಿಕೊಂಡು, ತುಸು ನೀರು ಸೇರಿಸಿ, ಪೂರಿ ಹಿಟ್ಟಿನಂತೆ ಮೃದುವಾಗಿ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ತೆಳು ಬಟ್ಟೆಯಲ್ಲಿ ಸುತ್ತಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಈರುಳ್ಳಿ ಹಾಕಿ ಬಾಡಿಸಿ. ನಂತರ ಶುಂಠಿ, ಹಸಿಮೆಣಸು, ಉಪ್ಪು, ಖಾರ, ಮಸಾಲೆ ಬೆಂದ ಆಲೂ  ಒಂದೊಂದಾಗಿ ಹಾಕಿ ಬಾಡಿಸಬೇಕು. ಹೀಗೆ ಆಲೂ ಪಲ್ಯ ರೆಡಿ ಮಾಡಿ. ನಂತರ ನೆನೆದ ಹಿಟ್ಟಿಗೆ ಮತ್ತೆ ತುಪ್ಪ ಹಾಕಿ ನಾದಿಕೊಳ್ಳಿ. ಸಣ್ಣ ಉಂಡೆಗಳಾಗಿ ಮಾಡಿ ಲಟ್ಟಿಸಿ. ಇದರ ನಡುವೆ 2-3 ಚಮಚ ಹೂರಣ ತುಂಬಿಸಿ, ಎಲ್ಲಾ ಬದಿಯಿಂದ ಕ್ಲೋಸ್‌ ಮಾಡಿ, ತುಪ್ಪ ಸವರಿ, ಮತ್ತೆ ಲಟ್ಟಿಸಿ. ಹೀಗೆ ತಯಾರಾದದ್ದನ್ನು ಕಾವಲಿಗೆ ಹಾಕಿ, ರೀಫೈಂಡ್‌ಎಣ್ಣೆ ಬಿಡುತ್ತಾ ಎರಡೂ ಬದಿ ಹೊಂಬಣ್ಣ ಬರುವಂತೆ ಬೇಯಿಸಿ. ನಂತರ ಇದರ ಮೇಲೆ ಬೆಣ್ಣೆ ಹಾಕಿ, ಮೊಸರು, ಉಪ್ಪಿನಕಾಯಿ ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಆಲೂ ಚಾಟ್

Aloo_chaat_logo

ಚಾಟ್‌ ಮಸಾಲಾಗಾಗಿ ಸಾಮಗ್ರಿ : 2 ಚಮಚ ಮೆಣಸು, 3 ಚಮಚ ಜೀರಿಗೆ, 2 ಚಮಚ ಸೋಂಪು, ಅರ್ಧ ಚಮಚ ಓಮ, 1 ಚಮಚ ಧನಿಯಾ, 1-2 ಚಮಚ ಸಕ್ಕರೆ, 1 ಚಮಚ ಅಮ್ಚೂರ್‌ಪುಡಿ, 1 ಚಮಚ ಖಾರ, ಚಿಟಕಿ ಅರಿಶಿನ, ರುಚಿಗೆ ಉಪ್ಪು.

ಫ್ರೈ ಸಾಮಗ್ರಿ : 4-5 ಆಲೂ ಬೇಯಿಸಿ ಬಿಲ್ಲೆಗಳಾಗಿಸಿ, ಕರಿಯಲು ಎಣ್ಣೆ.

ಚಾಟ್‌ ತಯಾರಿಸಲು ಸಾಮಗ್ರಿ : ಹೆಚ್ಚಿದ ಈರುಳ್ಳಿ, ತುಸು ಶುಂಠಿ, ಕೊ.ಸೊಪ್ಪು, ಪುದೀನಾ, ನಿಂಬೆರಸ, ಉಪ್ಪು.

ಚಾಟ್‌ ಮಸಾಲ ವಿಧಾನ : ಬಾಣಲೆ ಬಿಸಿ ಮಾಡಿ ಅದರಲ್ಲಿ ಚಾಟ್‌ ಮಸಾಲಾ ಸಾಮಗ್ರಿ ಎಲ್ಲಾ ಹಾಕಿ ಹುರಿಯಿರಿ. ಇದನ್ನು ಕೆಳಗಿಳಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ. ಜೊತೆಗೆ ಉಪ್ಪು, ಸಕ್ಕರೆ, ಅಮ್ಚೂರ್‌, ಖಾರ ಸೇರಿಸಿ ನುಣ್ಣಗೆ ಪುಡಿ ಮಾಡಿ.

ಆಲೂ ಫ್ರೈ ವಿಧಾನ : ತುಸು ಅಳ್ಳಕವಾದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಬೆಂದ ಆಲೂ ಬಿಲ್ಲೆ ಹಾಕಿ ಎರಡೂ ಬದಿ ಹೊಂಬಣ್ಣ ಬರುವಂತೆ ಫ್ರೈ ಮಾಡಿ. ಇನ್ನು ಪ್ಲೇಟಿಗೆ ಹಾಕಿ ಆರಲು ಬಿಡಿ.

ಆಲೂ ಚಾಟ್‌ ವಿಧಾನ : ಒಂದು ಬೇಸನ್ನಿಗೆ ಆಲೂ ಫ್ರೈ ಹಾಕಿಡಿ. ಇದರ ಮೇಲೆ ಈರುಳ್ಳಿ, ಶುಂಠಿ, ಕೊ. ಸೊಪ್ಪು, ಉಪ್ಪು, ಚಾಟ್ ಮಸಾಲ ಉದುರಿಸಿ, ನಿಂಬೆಹಣ್ಣು ಹಿಂಡಿಕೊಳ್ಳಿ. ತಕ್ಷಣ ಸರ್ವ್ ‌ಮಾಡಿ.

ತವಾ ಪಲಾವ್

Tawa_pulav

‌ಸಾಮಗ್ರಿ : ಅರ್ಧ ಕಪ್‌ ಹಸಿ ಬಟಾಣಿ, ಅರ್ಧ ಸೌಟು ರೀಫೈಂಡ್‌ ಎಣ್ಣೆ, ಒಗ್ಗರಣೆಗೆ ಸಾಮಗ್ರಿ, 2-3 ಹೆಚ್ಚಿದ ಈರುಳ್ಳಿ, ಕೊ. ಸೊಪ್ಪು, 1 ಕಪ್‌ ಎಲೆಕೋಸು, 1-2 ಕ್ಯಾಪ್ಸಿಕಂ, 4-5 ಹುಳಿ ಟೊಮೇಟೊ, ಅರ್ಧ ಕಪ್‌ ಬೇಯಿಸಿ ಮಸೆದ ಆಲೂ ಬಟಾಣಿ, 2 ಕಪ್‌ ಉದುರಾದ ಅನ್ನ, ರುಚಿಗೆ ತಕ್ಕಷ್ಟು ಉಪ್ಪು, ಅಚ್ಚ ಖಾರದ ಪೇಸ್ಟ್, ನಿಂಬೆರಸ, ಪಾವ್ ‌ಭಾಜಿ ಮಸಾಲ, ಗರಂ ಮಸಾಲ, ಚಾಟ್ ಮಸಾಲ, ತುಸು ಬೆಣ್ಣೆ, 7-8 ಒಣ ಮೆಣಸು, 4-5 ಎಸಳು ಬೆಳ್ಳುಳ್ಳಿ, ತುಸು ಜೀರಿಗೆ, ನಿಂಬೆ ಬಿಲ್ಲೆ, ಕರಿದ ಹಪ್ಪಳ, ಈರುಳ್ಳಿ, ಟೊಮೇಟೊ ರಾಯ್ತಾ.

ವಿಧಾನ : ಮೊದಲು ಮಿಕ್ಸಿಗೆ ನೆನೆದ ಒಣ ಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿ ಪೇಸ್ಟ್ ಮಾಡಿದರೆ ಅಚ್ಚ ಖಾರದ ಪೇಸ್ಟ್ ರೆಡಿ. ಒಂದು ಬಾಣಲೆಯಲ್ಲಿ ತುಸು ಬೆಣ್ಣೆ, ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ನಂತರ ಈರುಳ್ಳಿ ಹಾಕಿ ಬಾಡಿಸಿ ನಂತರ ಒಂದೊಂದಾಗಿ ಎಲ್ಲಾ ತರಕಾರಿ ಹಾಕಿ ಬಾಡಿಸಿ. ಆಮೇಲೆ ಶುಂಠಿ-ಬೆಳ್ಳುಳ್ಳಿ, ಅಚ್ಚ ಖಾರದ ಪೇಸ್ಟ್ ಹಾಕಿ ಕೈಯಾಡಿಸಿ. ನಂತರ ಉಪ್ಪು, ಎಲ್ಲಾ ಮಸಾಲೆ ಸೇರಿಸಿ ಕೆದಕಬೇಕು. ಆಮೇಲೆ ಅನ್ನ ಸೇರಿಸಿ, ಪಲಾವ್ ‌ಉದುರಾಗುವಂತೆ ನಡುನಡುವೆ ಬೆಣ್ಣೆ ಬೆರೆಸುತ್ತಾ ಎಲ್ಲಾ ಮಿಕ್ಸ್ ಮಾಡಿ. ಆಮೇಲೆ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಮಿಶ್ರಗೊಳಿಸಿ ಕೆಳಗಿಳಿಸಿ. ಇದನ್ನು ಟೊಮೇಟೊ ಬಿಲ್ಲೆಗಳಿಂದ ಅಲಂಕರಿಸಿ, ಬಿಸಿಬಿಸಿಯಾಗಿ ಹಪ್ಪಳ, ರಾಯ್ತಾ ಜೊತೆ ಸವಿಯಲು ಕೊಡಿ.

ಸಬ್ಬಕ್ಕಿ ವಡೆ

Sabudana_vada1

ಸಾಮಗ್ರಿ : 1 ಕಪ್‌ ಸಬ್ಬಕ್ಕಿ, 2 ಬೇಯಿಸಿ ಮಸೆದ ಆಲೂ, ತುಸು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, 15-20 ಕರಿಬೇವು, ಕೊ.ಸೊಪ್ಪು, ಪುದೀನಾ, ಅರ್ಧ ಕಪ್‌ ಹುರಿದು ತರಿ ಮಾಡಿದ ಶೇಂಗಾ, ಜೀರಿಗೆ, ಸೋಂಪು, 2 ಕಪ್‌ ಮೊಸರು, 2 ಚಿಟಕಿ ಬೇಕಿಂಗ್‌ ಸೋಡ, ರುಚಿಗೆ ಖಾರ, ಉಪ್ಪು, 2 ಚಮಚ ಸಕ್ಕರೆ, ಕರಿಯಲು ಎಣ್ಣೆ, ತುರಿದ ಹುಳಿ ಮಾವು.

ವಿಧಾನ : ಎಲ್ಲಕ್ಕೂ ಮೊದಲು ಸಬ್ಬಕ್ಕಿ ತೊಳೆದು 5-6 ಗಂಟೆ ಕಾಲ ನೆನೆಸಿಡಿ. ಒಂದು ಬಟ್ಟಲಲ್ಲಿ ಮೊಸರು, ಸಕ್ಕರೆ, ಉಪ್ಪು, ತುರಿದ ಹುಳಿಮಾವು, ಅದರ ಮೇಲೆ ಹುರಿದ ಸೋಂಪು ಹಾಕಿ ಕದಡಿ ಸಿಹಿ ಮೊಸರು ಸಿದ್ಧಪಡಿಸಿ. ಒಂದು ಬೇಸನ್ನಿಗೆ ನೆನೆದ ಸಬ್ಬಕ್ಕಿ, ಮಸೆದ ಆಲೂ, ಹೆಚ್ಚಿದ ಪದಾರ್ಥ, ಶೇಂಗಾ, ಜೀರಿಗೆ, ತುಸು ಮೊಸರು, ಸೋಡ, ಉಪ್ಪು ಎಲ್ಲಾ ಸೇರಿಸಿ ಮಿಶ್ರಣ ಕಲಸಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಇದರಿಂದ ಜಿಡ್ಡು ಸವರಿದ ಅಂಗೈ ಮೇಲೆ ವಡೆ ತಟ್ಟಿ, ಹೊಂಬಣ್ಣ ಬರುವಂತೆ ಕರಿಯಿರಿ. ನಂತರ ಟಿಶ್ಯು ಪೇಪರ್‌ ಮೇಲೆ ಹರಡಿ, ಅದರ ಹೆಚ್ಚುವರಿ ಎಣ್ಣೆ ಹೋಗಲಾಡಿಸಿ. ಇದನ್ನು ಸಿಹಿ ಮೊಸರಲ್ಲಿ ನೆನೆಸಿ ಇದರ ಮೇಲೆ ಕೊ.ಸೊಪ್ಪು ಉದುರಿಸಿ, ಸವಿಯಲು ಕೊಡಿ.

ಹೆಸರುಬೇಳೆ ಖಿಚಡಿ

Moong_dal_khichdi

ಸಾಮಗ್ರಿ : 2 ಕಪ್‌ ಅಕ್ಕಿ, 1 ಕಪ್‌ ಹೆಸರುಬೇಳೆ, ಅರ್ಧ ಸೌಟು ತುಪ್ಪ, 1-2 ಕ್ಯಾರೆಟ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್. ಅರಿಶಿನ, ತುಸು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಧನಿಯಾಪುಡಿ, ಖಾರ, ಒಂದಿಷ್ಟು ಹೆಚ್ಚಿದ ಬೀನ್ಸ್, ಹಸಿ ಬಟಾಣಿ, ಹೆಚ್ಚಿದ ಕೊ. ಸೊಪ್ಪು, ಪುದೀನಾ, ಕರಿಬೇವು.

ವಿಧಾನ : ಮೊದಲು ಕುಕ್ಕರ್‌ಗೆ ತುಸು ತುಪ್ಪ ಹಾಕಿ ಹೆಸರುಬೇಳೆಯನ್ನು ವೈಟ್‌ ಆಗಿ ಹುರಿದು ತೆಗೆಯಿರಿ. ನಂತರ ಇದಕ್ಕೆ ಅಕ್ಕಿ, ಉಪ್ಪು, ಅರಿಶಿನ, ಖಾರ, ಉದ್ದಕ್ಕೆ ಹೆಚ್ಚಿದ ಕ್ಯಾರೆಟ್‌ ಹಾಕಿ ತುಪ್ಪದೊಂದಿಗೆ ಕೆದಕಬೇಕು. ಬೇಳೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಬೆರೆಸಿ 2-3 ಸೀಟಿ ಬರುವಂತೆ ಬೇಯಿಸಿ. ಇದನ್ನು ಕೆಳಗಿಳಿಸಿ ಕೂಲ್ ಆಗಿಸಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ, ತುಪ್ಪ ಬಿಸಿ ಮಾಡಿ ಜೀರಿಗೆ, ಸೋಂಪಿನ ಒಗ್ಗರಣೆ ಕೊಡಿ. ನಂತರ ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಬಾಡಿಸಿ. ಆಮೇಲೆ ಬೀನ್ಸ್, ಹಸಿ ಬಟಾಣಿ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಧನಿಯಾಪುಡಿ ಹಾಕಿ ಕೆದಕಬೇಕು. ಇದಕ್ಕೆ ಬೆಂದ ಖಿಚಡಿ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ. ಮೇಲೆ ಕರಿಬೇವು, ಕೊ. ಸೊಪ್ಪು, ಪುದೀನಾ ಉದುರಿಸಿ ನಿಂಬೆಹಣ್ಣು ಹಿಂಡಿಕೊಂಡು ತಕ್ಷಣ ಸವಿಯಲು ಕೊಡಿ.

ಪನೀರ್‌ ಭುರ್ಜಿ

Paneer_burji

ಸಾಮಗ್ರಿ : 500 ಗ್ರಾಂ ಪನೀರ್‌, ಅರ್ಧ ಸೌಟು ತುಪ್ಪ, ಒಗ್ಗರಣೆಗೆ ಎಣ್ಣೆ, ಸಾಮಗ್ರಿ, 2-3 ಈರುಳ್ಳಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ತುಸು ಹೆಚ್ಚಿದ ಟೊಮೇಟೊ, ಹಸಿ ಮೆಣಸು, ಕೊ. ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಳಿ ಮೊಸರು, 2-3 ಕಪ್ ಪನೀರ್‌ ಕ್ರಂಬ್ಸ್, ಅಲಂಕರಿಸಲು ಈರುಳ್ಳಿ ಬಿಲ್ಲೆ, ನಿಂಬೆ ಬಿಲ್ಲೆ, ಕೊ. ಸೊಪ್ಪು.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ, ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಇದಕ್ಕೆ ಹಸಿ ಮೆಣಸು, ಟೊಮೇಟೊ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಉಪ್ಪು, ಖಾರ, ಅರಿಶಿನ ಹಾಕಿ ಕೆದಕಬೇಕು. ಆಮೇಲೆ ಇದಕ್ಕೆ ತುರಿದ ಪನೀರ್‌ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ. ಮಂದ ಉರಿ ಮಾಡಿ ಇದಕ್ಕೆ ಮೊಸರು, ಕೊ. ಸೊಪ್ಪು ಹಾಕಿ ಮಿಕ್ಸ್ ಮಾಡಿ. ಇದರ ಮೇಲೆ ಪನೀರ್‌ ಕ್ರಂಬ್ಸ್ ಹರಡಿ, ಉಳಿದ ಸಾಮಗ್ರಿಗಳಿಂದ ಅಲಂಕರಿಸಿ ಬಿಸಿ ಬಿಸಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

ಸ್ಪೈಸಿ ಇಡ್ಲಿ

Rawa_idili

ಸಾಮಗ್ರಿ : 1 ಕಪ್‌ ಸಣ್ಣ ರವೆ, ಅರ್ಧ ಕಪ್‌ ಹುಳಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಫ್ರೂಟ್‌ ಸಾಲ್ಟ್, 10-12 ಗೋಡಂಬಿ, 7-8 ದ್ರಾಕ್ಷಿ, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ತುಸು ಎಣ್ಣೆ, ಒಗ್ಗರಣೆ ಸಾಮಗ್ರಿ, ಇಂಗು.

ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ, ತುಪ್ಪ ಬಿಸಿ ಮಾಡಿ ಇಂಗಿನ ಒಗ್ಗರಣೆ ಕೊಡಿ. ಇದಕ್ಕೆ ಹಸಿ ಮೆಣಸು, ಗೋಡಂಬಿ, ದ್ರಾಕ್ಷಿ ಹಾಕಿ ಹುರಿಯಿರಿ. ನಂತರ ಇದಕ್ಕೆ ಉಪ್ಪು, ಶುಂಠಿ, ರವೆ ಹಾಕಿ ಮಂದ ಉರಿಯಲ್ಲಿ ಹುರಿಯಬೇಕು. ಇದನ್ನು ಒಂದು ಬಟ್ಟಲಿಗೆ ಹಾಕಿ ಅದಕ್ಕೆ ಮೊಸರು, ತುಸು ನೀರು ಬೆರೆಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ. 20 ನಿಮಿಷ ಬಿಟ್ಟು ಇದಕ್ಕೆ ಫ್ರೂಟ್‌ ಸಾಲ್ಟ್ ಸೇರಿಸಿ. ಇದನ್ನು ಹಬೆಯಲ್ಲಿ ಇಡ್ಲಿ ಸ್ಟಾಂಡಿನಲ್ಲಿ ಬೇಯಿಸಿ, ಕಾಯಿ ಚಟ್ನಿ ಜೊತೆ ಸವಿಯಲು ಕೊಡಿ.

ವೆಜಿಟೆಬಲ್ ಫ್ರೈಡ್‌ ರೈಸ್‌

fried_rice_2

ಸಾಮಗ್ರಿ : ಅರ್ಧ ಸೌಟು ಎಣ್ಣೆ, ಒಂದಿಷ್ಟು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಈರುಳ್ಳಿ, ಬೇಬಿ ಕಾರ್ನ್‌, ಬೀನ್ಸ್, ಕ್ಯಾರೆಟ್‌, ಹಸಿ ಬಟಾಣಿ, 1 ಕಪ್‌ ಬಿಸಿ ಉದುರಾದ ಅನ್ನ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಬಿಳಿ ಮೆಣಸು, ವಿನಿಗರ್‌, ಸೋಯಾ ಸಾಸ್‌, ವೈಟ್‌ ಸಾಸ್‌, ಚಿಲೀ ಸಾಸ್‌, ಟೊಮೇಟೊ ಸಾಸ್‌.

ವಿಧಾನ : ಬಾಣಲೆಯಲ್ಲಿ ಎಣ್ಣೆ, ತುಪ್ಪ ಬಿಸಿ ಮಾಡಿ ಶುಂಠಿ, ಬೆಳ್ಳುಳ್ಳಿ ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಇದಕ್ಕೆ ಹಸಿ ಮೆಣಸು, ಬಾಕಿ ಎಲ್ಲಾ ಹೆಚ್ಚಿದ ತರಕಾರಿ ಹಾಕಿ 3-4 ನಿಮಿಷ ಚೆನ್ನಾಗಿ ಬಾಡಿಸಿ. ಆಮೇಲೆ ಇದಕ್ಕೆ ಉದುರಾದ ಅನ್ನ ಸೇರಿಸಿ ಕೆದಕಬೇಕು. ನಂತರ ಉಪ್ಪು, ವೈಟ್‌ ಪೆಪ್ಪರ್‌, ಎಲ್ಲಾ ಬಗೆಯ ಸಾಸ್‌ ಬೆರೆಸಿ. ಬೇಗ ಬೇಗ ಕೈಯಾಡಿಸಿ. ಕೆಳಗಿಳಿಸುವ ಮುನ್ನ ಕೊ. ಸೊಪ್ಪು ಉದುರಿಸಿ, ಟಾಸ್‌ ಮಾಡಿ, ಬಿಸಿಯಾಗಿ ಸವಿಯಲು ಕೊಡಿ.

ಉದ್ದಿನ ಪಕೋಡಾ

AA-urad-dal-pakora

ಸಾಮಗ್ರಿ : 1 ಬಟ್ಟಲು ಗೋಲ ಉದ್ದಿನ ಬೇಳೆ, ಹೆಚ್ಚಿದ 2 ಈರುಳ್ಳಿ, ತುಸು ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1 ಬೆಂದ ಆಲೂ, 2 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ತುಸು ಹೆಚ್ಚಿದ ಕೊ.ಸೊಪ್ಪು, ಮೂಲಂಗಿ ತುರಿ, ಅರ್ಧರ್ಧ ಕಪ್ ಕಡಲೆಹಿಟ್ಟು, ಅಕ್ಕಿಹಿಟ್ಟು, ಕರಿಯಲು ಎಣ್ಣೆ.

ವಿಧಾನ : ಮೊದಲು ಗೋಲ ಉದ್ದಿನಬೇಳೆಯನ್ನು ಅರ್ಧಂಬರ್ಧ ಬೇಯಿಸಿ. 1 ಬೇಸನ್ನಿಗೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸು, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಮಸೆದ ಆಲೂ, ಉಪ್ಪು, ಖಾರ, ಕಡಲೆಹಿಟ್ಟು, ಅಕ್ಕಿಹಿಟ್ಟು, ಮೂಲಂಗಿ ತುರಿ ಎಲ್ಲಾ ಬೆರೆಸಿಕೊಳ್ಳಿ. ಇದನ್ನು ಪಕೋಡ ತರಹ ಕಲಸಿ, ಕಾದ ಎಣ್ಣೆಯಲ್ಲಿ ಚೂರು ಚೂರೇ ಹಾಕಿ ಕರಿಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ