ನನ್ನ ಹೆಂಡತಿ ಶಿಲ್ಪಾಳ ಚಿಕ್ಕಮ್ಮ ಕವಿತಾ ಭಾನುವಾರ ಬೆಳಗ್ಗೆ 11 ಗಂಟೆಗೆ ಯಾವುದೆ ಮುನ್ಸೂಚನೆ ಇಲ್ಲದೆ ಮನೆಗೆ ಬಂದಾಗ ರೂಪಾ ಕೂಡ ಅಲ್ಲಿಯೇ ಇದ್ದಳು. ನಾನು ಅವರಿಬ್ಬರನ್ನು ಪರಿಚಯ ಮಾಡಿಸುತ್ತಾ, ಅಷ್ಟಿಷ್ಟು ಗಾಬರಿಗೊಳಗಾದೆ.

2 ನಿಮಿಷ ರೂಪಾ ಜೊತೆ ಮಾತನಾಡಿದ ಬಳಿಕ ಅವರು ಅಡುಗೆ ಮನೆಗೆ ನೀರು ಕುಡಿಯಲೆಂದು ಹೆಜ್ಜೆ ಹಾಕಿದಾಗ, ನಾನು ಅವರ ಹಿಂದೆ ಹಿಂದೆಯೇ ಹೋದೆ.

“ಶಿಲ್ಪಾ ಎಲ್ಲಿಗೆ ಹೋಗಿದ್ದಾಳೆ?” ಎಂದು ಅವರು ತುಂಟತನದ ಧ್ವನಿಯಲ್ಲಿ ಕೇಳಿದಾಗ, ನನ್ನ ಗಾಬರಿ ಇನ್ನಷ್ಟು ಹೆಚ್ಚಾಯಿತು.

“ಅವಳು ತವರಿಗೆ ಹೋಗಿದ್ದಾಳೆ ಚಿಕ್ಕತ್ತೆ,” ನಾನು ನನ್ನ ಧ್ವನಿಯನ್ನು ಸಾಮಾನ್ಯಗೊಳಿಸುತ್ತಾ ಹೇಳಿದೆ.

“ಏನು ವಿಶೇಷ ಅಂತ ಹೋಗಿದ್ದಾಳೆ?”

“ಹಾಗೆ ಸುಮ್ಮನೇ ಹೋಗಿದ್ದಾಳೆ.”

“ಯಾವಾಗ ವಾಪಸ್‌ ಬರ್ತಾಳೆ?”

“ಮುಂದಿನ ಭಾನುವಾರ.”

“ಏನಪ್ಪಾ ನೀಲೇಶ್‌, ಶಿಲ್ಪಾಳ ಜೊತೆ ಇದೇನು ನಡೀತಿದೆ? ಅಂದಹಾಗೆ ಈ ರೂಪಾ ಯಾರು?”

ಚಿಕ್ಕತ್ತೆಯ ಈ ಸಂಬಂಧವಿಲ್ಲದ ಪ್ರಶ್ನೆಗಳನ್ನು ನಾನು ಕೇಳಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳದೆ ಇದ್ದಿದ್ದರೆ, ನಾನೀಗ ತಬ್ಬಿಬ್ಬಾಗಿ ಬಿಡುತ್ತಿದ್ದೆ. ಅವರು ಹೀಗೆಯೇ ಏನಾದರೂ ಕೇಳ್ತಾರೆಂದು ಗೊತ್ತಾಗಿ, ನಾನು ಅವರ ಜಾಲದಲ್ಲಿ ಸಿಲುಕಲಿಲ್ಲ.

ನಾನು ಅಷ್ಟೇ ಸಹಜವಾಗಿಯೇ ಉತ್ತರಿಸಿದೆ, “ಚಿಕ್ಕತ್ತೆ, ಈಕೆ ಶಿಲ್ಪಾಳ ಗೆಳತಿ. ಪಕ್ಕದ ಮನೆಯಲ್ಲಿ ಇರೋದು. ಶಿಲ್ಪಾಳನ್ನು ಭೇಟಿಯಾಗಲೆಂದು ಬಂದಿದ್ದಳು. ನೀವು ನನ್ನ ಹಾಗೂ ಆಕೆಯ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳಬೇಡಿ. ನಾನು ಪ್ರಾಮಾಣಿಕ ಪತಿಯಂದಿರಲ್ಲಿ ಒಬ್ಬ.”

“ಹಾಗೇ ಎಲ್ಲರೂ ಇರುತ್ತಾರೆ. ಸಿಕ್ಕಿಬೀಳು ತನಕ,” ತಮ್ಮ ನಗೆ ಚಟಾಕಿಯ ಬಗ್ಗೆ ಚಿಕ್ಕತ್ತೆ ಜೋರಾಗಿ ನಕ್ಕಾಗ ನಾನೂ ಕೂಡ ಅವರ ನಗುವಿನಲ್ಲಿ ಶಾಮೀಲಾದೆ.ಫ್ರಿಜ್‌ನಿಂದ ನೀರಿನ ಬಾಟಲ್ ಕೈಗೆ ತೆಗೆದುಕೊಳ್ಳುತ್ತಾ, ಅವರು ನನ್ನನ್ನು ಪುನಃ, “ನೀಲೇಶ್‌ನಿಮ್ಮಿಬ್ಬರ ಮದುವೆಯಾಗಿ ಇನ್ನೂ 3-4 ತಿಂಗಳು ಕೂಡ ಆಗಿಲ್ಲ. ಇಷ್ಟರಲ್ಲಿ ನೀನು ಅವಳನ್ನು ತವರಿಗೆ ಕಳಿಸಿಕೊಟ್ಟೆಯಾ?” ಛೇಡಿಸಿದರು.

“ಅಂತಹದ್ದೇನೂ ಇಲ್ಲ ಚಿಕ್ಕತ್ತೆ. ನಾನು ಅವಳನ್ನು ಮನಸಾರೆ ಪ್ರೀತಿಸುತ್ತೇನೆ. ಆದರೆ ಅವಳೇ ಹಠ ಮಾಡಿ ತವರಿಗೆ ಹೊರಟುಬಿಡುತ್ತಾಳೆ. ನನ್ನ ಮಾತು ಅವಳು ಕೇಳುವ ಹಾಗಿದ್ದಿದ್ದರೆ, ನಾನು ಒಂದು ರಾತ್ರಿಯೂ ಅವಳಿಂದ ದೂರ ಇರುತ್ತಿರಲಿಲ್ಲ,” ನಾನು ನನ್ನ ಧ್ವನಿಯನ್ನು ಎಷ್ಟು ಭಾವುಕನಾಗಿಸಿದೆ ಎಂದರೆ, ನನ್ನ ನಡತೆಯ ಬಗ್ಗೆ ಯಾರೂ ಸಂದೇಹಪಡಬಾರದು.

“ನಿಮ್ಮಿಬ್ಬರ ನಡುವೆ ಏನಾದರೂ ಮನಸ್ತಾಪ ಉಂಟಾಗಿಯೆಂದರೆ, ನನಗೆ ಅದರ ಬಗ್ಗೆ ವಿವರವಾಗಿ ತಿಳಿಸು. ನಾನು ನಿಮ್ಮ ಸಮಸ್ಯೆಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಬಗೆಹರಿಸಿಬಿಡ್ತೀನಿ,” ಅವರು ಸ್ಟೈಲಾಗಿ ಚಿಟಿಕೆ ಹೊಡೆಯುತ್ತ ಹೇಳಿದರು.

“ನಮ್ಮಿಬ್ಬರ ನಡುವೆ ಪ್ರೀತಿಯ ಬೇರುಗಳು ಬಹಳ ಗಟ್ಟಿಯಾಗಿವೆ. ನೀವು ಯಾವುದೇ ರೀತಿಯ ಆತಂಕ ಪಡುವುದು ಬೇಡ,” ಎಂದು ಹೇಳಿದಾಗ ಅವರು ಮುಗುಳ್ನಕ್ಕರು.

“ನೀನು ಒಳ್ಳೆಯ ಹುಡುಗನಪ್ಪ. ನನ್ನ ಮಾತುಗಳ ಬಗ್ಗೆ ತಪ್ಪು ತಿಳೀಬೇಡ,” ಎಂದು ಹೇಳುತ್ತಾ ನನ್ನನ್ನು ತಬ್ಬಿಕೊಂಡು ಅತ್ತ ಬಾಟಲಿಯಿಂದ ಗ್ಲಾಸಿಗೆ ನೀರು ಹುಯ್ಯತೊಡಗಿದರು.

ಬಳಿಕ ಅವರು ಡ್ರಾಯಿಂಗ್‌ ರೂಮಿಗೆ ತೆರಳಿ ಅಲ್ಲಿ ನಿಂತಿದ್ದ ರೂಪಾಳನ್ನು ಉದ್ದೇಶಿಸಿ, “ನೀನು ಬಹಳ ಸುಂದರವಾಗಿರುವೆ ರೂಪಾ….” ಎಂದರು.

“ಥ್ಯಾಂಕ್ಯೂ ಆಂಟಿ,” ಎಂದು ರೂಪಾ ಖುಷಿಗೊಂಡಳು.

“ಅಂದಹಾಗೆ ನೀನು ಮದುವೆಯಾಗಲು ಯಾವುದಾದರೂ ಹುಡುಗನನ್ನು ಹುಡುಕಿಕೊಂಡಿದ್ದೀಯಾ ಅಥವಾ ನಾನೇ ಯಾರಾದರೂ ಹುಡುಗನನ್ನು ಹುಡುಕಬೇಕಾ?”

“ನಾನು ಯಾವುದೇ ಹುಡುಗನನ್ನು ಹುಡುಕಿಲ್ಲ, ನಾನು ಈಗಲೇ ಮದುವೆಯಾಗಲು ಸಿದ್ಧಳಿಲ್ಲ ಆಂಟಿ.”

“ರೂಪಾ, ಮದುವೆಯಾಗಲು ಬಹಳ ತಡಮಾಡಬಾರದು. ಮದುವೆಯ ಬಳಿಕ ಹೀಗೆಯೇ ಖುಷಿಯಿಂದಿರಬಹುದು. ಇನ್ನೊಂದು ಮಾತು, ಆಮೇಲೆ ನಿನಗೆ ಒಳ್ಳೆಯ ಹುಡುಗರ ಸಂಬಂಧ ಬರುವುದೇ ತಪ್ಪಿ ಹೋಗುತ್ತದೆ. ನನ್ನ ಸಲಹೆಯೇನೆಂದರೆ, ನೀನು ಈಗಿಂದೀಗಲೇ ಮದುವೆಗೆ ಹ್ಞೂಂ ಎಂದು ಹೇಳಿಬಿಡು.”

“ನೀವು ಇಷ್ಟೊಂದು ಒತ್ತು ಕೊಟ್ಟು ತಿಳಿಹೇಳುತ್ತಿದ್ದೀರಿ ಎಂದರೆ, ನಾನು ಮದುವೆಗೆ ತಯಾರಾಗ್ತೀನಿ. ನೀವೇ ನನಗೆ ಒಳ್ಳೆಯ ವರನನ್ನು ಹುಡುಕಿಕೊಡಬೇಕು,” ಅವಳು ನಾಟಕೀಯ ಭಂಗಿಯಲ್ಲಿ ನಾಚಿಕೊಳ್ಳುತ್ತಾ ಹೇಳಿದಾಗ, ಚಿಕ್ಕತ್ತೆ ಜೋರಾಗಿ ನಕ್ಕರು.

“ನೀನು ಸುಂದರಳಾಗಿರುವ ಜೊತೆಗೆ ಸ್ಮಾರ್ಟ್‌ ಆತ್ಮವಿಶ್ವಾಸದಿಂದ ತುಂಬಿರುವ ಯುವತಿ. ನೀನು ಯಾರ ಹೆಂಡತಿಯಾಗ್ತಿಯೋ ಅವನು ನಿಜವಾಗಿಯೂ ಖುಷಿಯಿಂದಿರುತ್ತಾನೆ,” ಚಿಕ್ಕತ್ತೆ ಭಾವಾವೇಶಕ್ಕೊಳಗಾಗಿ ಅವಳನ್ನು ಪ್ರೀತಿಯಿಂದ ಆಲಂಗಿಸಿಕೊಂಡು ಬಳಿಕ ಆಶೀರ್ವದಿಸಿದರು.

ನಂತರ ಅವಳ ಕಡೆ ನೋಡುತ್ತ ಹೋದರು, “ಅಂದಹಾಗೆ, ನೀನು ಯಾವ ಸೆಂಟ್‌ ಬಳಸ್ತೀಯಾ? ಬಹಳ ಒಳ್ಳೆಯ ಸುವಾಸನೆ ಬರುತ್ತಿದೆ!”

“ಆಂಟಿ, ನಾನು ಈ ಸೆಂಟ್‌ನ್ನು ಮಾಲ್ ನಲ್ಲಿ ಖರೀದಿಸಿದೆ. ಆದರೆ ಇದು ಅಷ್ಟು ದುಬಾರಿಯಲ್ಲ.”

“ನಾನೂ ಕೂಡ ಈ ಸೆಂಟ್‌ ಅವಶ್ಯವಾಗಿ ಖರೀದಿಸಿಕೊಂಡು ಬರ್ತೀನಿ. ನಾನಿಂದು ನೀಲೇಶ್‌ ಹಾಗೂ ಶಿಲ್ಪಾರ ಜೊತೆಗೆ ಎಲ್ಲಿಯಾದರೂ ಸುತ್ತಾಡೋಕೆ ಹೋಗಬೇಕೆಂಬ ಉದ್ದೇಶದಿಂದಲೇ ಬಂದಿದ್ದೆ. ಈಗ ನೀವು ಒಂದು ವಿಷಯ ಸ್ಪಷ್ಟಪಡಿಸಬೇಕು, ನೀವಿಬ್ಬರೂ ಎಲ್ಲಿಯಾದರೂ ಹೋಗು ಪ್ಲಾನ್‌ ಹಾಕಿಕೊಂಡಿದ್ದೀರಾ?”

“ಅಂತಹ ಯಾವುದೇ ಪ್ರೋಗ್ರಾಂ ಇಲ್ಲ. ನಾನೀಗ ಹೊರಡ್ತೀನಿ ಆಂಟಿ. ಶಿಲ್ಪಾ ಬಂದ ಬಳಿಕ ವಾಪಸ್‌ ಬರ್ತೀನಿ,” ಎಂದೆನ್ನುತ್ತಾ ಅವಳು ಹೊರಟು ನಿಂತಳು.

ನಾನು ಅವಳನ್ನು ತಡೆದು ನಿಲ್ಲಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಅವಳು ಚಿಕ್ಕತ್ತೆಗೆ ನಮಸ್ಕರಿಸುತ್ತಾ ತನ್ನ ಮನೆಗೆ ಹೊರಟಳು.

ಅವಳು ಹೊರಟುಹೋಗುತ್ತಿದ್ದಂತೆ ಚಿಕ್ಕತ್ತೆ ನನ್ನನ್ನು ಪುನಃ, “ನಾನು ಇಲ್ಲಿಗೆ ಹೇಳದೇ ಕೇಳದೇ ಬಂದು ನಿಮ್ಮಿಬ್ಬರ ಖುಷಿಗೆ ಭಂಗ ತಂದೆ ಎಂದು ನಿನಗನ್ನಿಸುತ್ತಿರಬೇಕಲ್ಲವೇ?” ಛೇಡಿಸಿದರು.

“ಚಿಕ್ಕತ್ತೆ, ನೀವು ನನ್ನ ಮೇಲೆ ವ್ಯರ್ಥವಾಗಿ ಸಂದೇಹಪಡ್ತಿದೀರಾ. ಶಿಲ್ಪಾಳ ಮುಂದೆ ದಯವಿಟ್ಟು ಹೀಗೆ ಹೇಳಲು ಹೋಗಬೇಡಿ. ಅವಳು ನನ್ನ ಮೇಲೆ ಸಂದೇಹಪಟ್ಟುಕೊಳ್ಳಲು ಶುರು ಹಚ್ಚಿಕೊಳ್ಳುತ್ತಾಳೆ,” ನಾನು ಸ್ವಲ್ಪ ಅಸಮಾಧಾನದಿಂದಲೇ ಹೇಳಿದೆ.

jadia2

“ನೀನು ಟೆನ್ಶನ್‌ ಮಾಡಿಕೊಳ್ಳಬೇಡ. ನನ್ನ ತಮಾಷೆ ಮಾಡುವ ಅಭ್ಯಾಸದ ಬಗ್ಗೆ ನಿನಗೆ ಗೊತ್ತೇ ಇದೆಯಲ್ಲ. ಈಗ ನೀನು ನನ್ನ ಜೊತೆ ಹೊರಡಲು ತಯಾರಾಗು.”

“ಎಲ್ಲಿಗೆ ಹೋಗಬೇಕು ಚಿಕ್ಕತ್ತೆ?”

“ನಾನು ಇವತ್ತು ಒಬ್ಬ ವಿಶೇಷ ವ್ಯಕ್ತಿಯನ್ನು ನಿನಗೆ ಭೇಟಿ ಮಾಡಿಸ್ತೀನಿ,” ಎಂದು ರಹಸ್ಯಮಯ ಸ್ವರದಲ್ಲಿ ಹೇಳಿ ನಕ್ಕರು.

“ಯಾರು ಆ ವ್ಯಕ್ತಿ ಚಿಕ್ಕತ್ತೆ?”

“ನಿನಗೆ ಒಂದು ವಿಷಯ ಗೊತ್ತೆ? ಈ ನಿನ್ನ ಚಿಕ್ಕ ಅತ್ತೆ ಎರಡನೇ ಮದುವೆ ಮಾಡಿಕೊಂಡಿರುವ ಬಗ್ಗೆ…..”

“ನೀವು ನನ್ನ ಜೊತೆ ತಮಾಷೆ ಮಾಡ್ತಿದಿರಿ ಅನಿಸುತ್ತೆ,”  ಎಂದು ನಾನು ಅಚ್ಚರಿಯ ಸ್ವರದಲ್ಲಿ ಕೇಳಿದೆ.

“ನಾನು ಸತ್ಯವನ್ನೇ ಹೇಳ್ತಿರುವೆ ನೀಲೇಶ್‌. ನಾನು ಮೊದಲು ಮದುವೆಯಾದ 6 ತಿಂಗಳಲ್ಲಿಯೇ, ನನ್ನ ಮೊದಲ ಪತಿ ರಾಜೀವ್‌ರಿಂದ ವಿಚ್ಛೇದನ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದೆ.”

“ಏಕೆ…..?”

“ಅದರೆ ಕಾರಣವನ್ನು ನಾನು ನಿನಗೆ ಆಮೇಲೆ ತಿಳಿಸ್ತೀನಿ. ಅಂದಹಾಗೆ ನಾನೀಗ ಭೇಟಿ ಮಾಡಿಸಲು ಕರೆದುಕೊಂಡು ಹೋಗ್ತಿರೋದು ಅವರನ್ನೇ…..”

“ನೀವು ಅವರನ್ನು ಭೇಟಿ ಆಗ್ತಾ ಇದೀರಾ?”

“ಹೌದು. ನಾನು ಇಂದು ಅವಶ್ಯವಾಗಿ ಅವರನ್ನು ಭೇಟಿ ಆಗಲು ಹೋಗ್ತೀನಿ. ಏಕೆಂದರೆ ಇಂದು ಅವರ ಹುಟ್ಟುಹಬ್ಬ.”

“ವಿಚ್ಛೇದನ ಪಡೆದುಕೊಂಡ ಬಳಿಕ ನೀವು ಅವರೊಂದಿಗೆ ಸಂಬಂಧವನ್ನು ಪೂರ್ತಿ ಕಡಿದುಕೊಂಡಿಲ್ಲವೇ?”

“ಕರೆಕ್ಟ್…..”

“ನನ್ನನ್ನು ಅವರೊಂದಿಗೆ ಭೇಟಿ ಮಾಡಿಸಲು ಏಕೆ ಕರೆದುಕೊಂಡು ಹೋಗ್ತಿರುವಿರಿ ಎಂಬುದನ್ನು ತಿಳಿಸಿ,” ಎಂದು ನಾನು ಕೇಳಿದೆ.

“ಹಳೆಯ ಗಂಡನನ್ನು ಏಕಾಂಗಿಯಾಗಿ ಭೇಟಿ ಮಾಡಲು ಹೋಗುವುದು ಜಾಣತನದ ವಿಷಯವೇ? ಕುಡಿದು ಹೊಡೆಯೋ ಅಭ್ಯಾಸ ಹೊಂದಿರುವ ವ್ಯಕ್ತಿ ಯಾವ ಮೂಡ್‌ ನಲ್ಲಿರುತ್ತಾನೋ? ನನ್ನ ರಕ್ಷಣೆಗೆಂದು ನಾನು ನಿನ್ನನ್ನು ಕರೆದುಕೊಂಡು ಹೊರಟಿರುವೆ.”

“ಅದರರ್ಥ ಮದ್ಯ ಸೇವಿಸಿ ಹೊಡೆಯುವ ಕಾರಣದಿಂದಲೇ ನೀವು ಅವರಿಗೆ ವಿಚ್ಛೇದನ ಕೊಟ್ಟುಬಿಟ್ಟಿರಿ ಅನಿಸುತ್ತೆ.”

“ಅದು ನಂಬರ್‌ 2ರ ಸ್ಥಾನದಲ್ಲಿ ಬರುವ ಮಹತ್ವದ ಕಾರಣವಾಗಿತ್ತು.”

“ಮತ್ತೆ ನಂಬರ್‌ 1 ಕಾರಣ ಏನು?”

“ನಾನು ನಿನಗೆ ಅವರ ಭೇಟಿಯ ಬಳಿಕ ಆ ಕಾರಣ ಹೇಳ್ತೀನಿ,” ಎಂದು ಹೇಳುತ್ತಾ, ಈ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡದೆ ನನ್ನನ್ನು ಬೆಡ್‌ ರೂಮಿನತ್ತ ನೂಕಿದರು.

ಒಂದು ಗಂಟೆಯ ಬಳಿಕ ಮನೆಯ ಕಾಲ್ ‌ಬೆಲ್ ‌ಒತ್ತಿದಾಗ ಚಿಕ್ಕತ್ತೆಯ ಮೊದಲ ಪತಿ ರಾಜೀವರ ಹಳೆಯ ನೌಕರ ರಾಮು ಬಾಗಿಲು ತೆರೆದ. ಅವನು ಚಿಕ್ಕತ್ತೆಯನ್ನು ಗುರುತಿಸಿದ್ದ. ಆದರೆ ರಾಜೀವ್ ‌ಚಿಕ್ಕತ್ತೆಯನ್ನು ನೋಡಿ ಖುಷಿಯೇನೂ ಪಡಲಿಲ್ಲ ಎನ್ನುವುದನ್ನು ನಾನು ಗಮನಿಸಿದೆ. ಚಿಕ್ಕತ್ತೆ ಅವನ ಜೊತೆ ಏನೂ ಮಾತನಾಡದೇ ಡ್ರಾಯಿಂಗ್‌ ರೂಮಿನತ್ತ ಹೋದರು.

“ಹ್ಯಾಪಿ ಬರ್ತ್‌ ಡೇ,” ಚಿಕ್ಕತ್ತೆ ತಮ್ಮ ಮಾಜಿ ಪತಿಗೆ ವಿಶ್‌ ಮಾಡಿದರು. ಅವರು ಒತ್ತಾಯ ಪೂರ್ವಕ ಎಂಬಂತೆ ಮುಗುಳ್ನಕ್ಕರು.

“ಥ್ಯಾಂಕ್ಯೂ ಕವಿತಾ. ಅಂದಹಾಗೆ ನನಗೆ ಒಂದು ವಿಷಯ ಅರ್ಥ ಆಗ್ತಾ ಇಲ್ಲ. ನೀವು ಪ್ರತಿ ವರ್ಷ ಇಲ್ಲಿಗೆ ಬಂದು ವಿಶ್‌ ಮಾಡುವ ಕಷ್ಟವನ್ನೇಕೆ ತೆಗೆದುಕೊಳ್ಳುತ್ತಿರುವಿರಿ?” ಎಂದು ಅವರು ಚಿಕ್ಕತ್ತೆಯನ್ನು ಟೀಕಿಸುವ ರೀತಿಯಲ್ಲಿ ಹೇಳಿದರು.

“ರಿಲ್ಯಾಕ್ಸ್ ರಾಜೀವ್‌, ಪ್ರತಿ ವರ್ಷ ನಾನು ವಿಶ್‌ ಮಾಡಲು ಇಲ್ಲಿಗೆ ಬರ್ತೀನಿ. ಏಕೆಂದರೆ ನನ್ನ ಹೊರತು ಇಲ್ಲಿಗೆ ಬೇರೆ ಯಾರೂ ಬರಲಾರರು ಎಂದು ನನಗೆ ಚೆನ್ನಾಗಿ ಗೊತ್ತು,” ಎಂದು ಅವರ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಹೇಳುವುದರ ಮೂಲಕ ಅವರ ಕೈಕುಲುಕಿದರು.

“ಹೌದು. ನೀನು ಸರಿಯಾಗೇ ಹೇಳ್ತಿರುವೆ. ಅಂದಹಾಗೆ ನಿನ್ನ ಜೊತೆಗೆ ಬಂದಿರುವ ಈ ಹುಡುಗ ಯಾರು?”

“ಇನು ನೀಲೇಶ್‌. ನನ್ನ ಹಿರಿಯ ಅಕ್ಕ ಅನಿತಾ ಮಗಳು ಶಿಲ್ಪಾಳ ಪತಿ,” ಎಂದು ಚಿಕ್ಕತ್ತೆ ನನ್ನನ್ನು ಅವರಿಗೆ ಪರಿಚಯ ಮಾಡಿಸಿದರು. ಆಗ ನಾನು ಎರಡೂ ಕೈ ಜೋಡಿಸಿ ನಮಸ್ಕರಿಸಿದೆ.

ನನ್ನ ನಮಸ್ಕಾರಕ್ಕೆ ಅವರು ತಲೆ ಅಲ್ಲಾಡಿಸಿ ಪ್ರತಿಕ್ರಿಯೆ ಸೂಚಿಸಿದರು. ನಂತರ ತಮ್ಮ ಮನೆ ಕೆಲಸದವನನ್ನು ಕರೆದು, “ರಾಮು, ಅತಿಥಿಗಳಿಗೆ ಬಾಯಿ ಸಿಹಿ ಮಾಡಲು ಫ್ರಿಜ್‌ ನಲ್ಲಿರುವ ಜಾಮೂನು ತಂದುಕೊಡು,” ಎಂದರು.

“ನಿಮಗೆ ಮಾತ್ರ ನನ್ನ ಮೆಚ್ಚಿನ ಸಿಹಿ ತಿಂಡಿ ತಂದಿಡುವುದು ಸದಾ ನೆನಪಲ್ಲಿ ಇರುತ್ತದೆ.”

“ನಿನ್ನ ಕುರಿತಾದ ನೆನಪುಗಳನ್ನು ಮರೆಯುವುದು ಅಷ್ಟು ಸುಲಭವಲ್ಲ ಕವಿತಾ.”

“ನಿಮಗೆ ನೀವೇ ಹಾನಿ ತಂದುಕೊಳ್ಳುವ ನನ್ನ ನೆನಪುಗಳನ್ನು ಮರೆತುಬಿಟ್ಟಿದ್ದರೆ ಇಂದು ನಿಮ್ಮ ಸಂಸಾರ ಸರಿದಾರಿಯಲ್ಲಿ ಸಾಗಿರುತ್ತಿತ್ತು.”

“ನಿನ್ನ ಜಾಗದಲ್ಲಿ ಬೇರೆ ಯಾವುದೇ ಮಹಿಳೆಯನ್ನು ತರಲು ಸಾಧ್ಯವಿಲ್ಲ. ಇದೇ ಯೋಚನೆಯ ಕಾರಣದಿಂದಲೇ ನಾನು ನನ್ನ ಕುಟುಂಬವನ್ನು ಪುನಃ ಕಟ್ಟಿಕೊಳ್ಳಲಿಲ್ಲ ಕವಿತಾ ರಾಣಿ.”

“ನನ್ನನ್ನು ಭಾವುಕಗೊಳಿಸಿ, ನಾಚಿಕೊಳ್ಳುವಂತೆ ಮಾಡುವ ನಿಮ್ಮ ಪ್ರಯತ್ನ ಈ ಸಲ ವಿಫಲವಾಗುತ್ತದೆ ರಾಜೀವ್‌,” ಚಿಕ್ಕತ್ತೆ ಉದಾಸತೆಯಿಂದ ಕೂಡಿದ ಧ್ವನಿಯಲ್ಲಿ ಹೇಳಿದರು.

“ನಾನು ಮತ್ತೆ ನಿಮಗೆ ಹೇಳ್ತೀನಿ, ನನ್ನಂತಹ ವಿಶ್ವಾಸಘಾತಕ ಪತ್ನಿಯ ನೆನಪನ್ನು ಇನ್ನೂ ಹೃದಯದಲ್ಲಿ ಇಟ್ಟುಕೊಂಡಿರುವುದು ಅಷ್ಟು ಜಾಣತನದ ಮಾತಲ್ಲ. ಅಷ್ಟೊಂದು ಚಿಕ್ಕ ವಿಷಯವನ್ನು ನಾನು ನಿಮಗೆ ಈವರೆಗೆ ತಿಳಿಸಿ ಹೇಳಲು ಆಗಿಲ್ಲ. ಆ ವಿಷಯದ ಬಗ್ಗೆ ನನಗೆ ಈಗಲೂ ಖೇದವಿದೆ ರಾಜೀವ್‌.”

ಚಿಕ್ಕತ್ತೆ ತಮ್ಮನ್ನು ವಿಶ್ವಾಸಘಾತುಕಿ, ನಂಬಿಕೆಗೆ ಅರ್ಹರಲ್ಲದವರು ಎಂದು ಏಕೆ ಹೇಳಿದ್ದರೋ ಏನೋ ರಾಜೀವ್ ‌ಅವರು ತಮ್ಮ ಮನೆಗೆಲಸದವರಿಗೆ ಏನೋ ಕೆಲಸ ಹೇಳಲು ಹೊರಗೆ ಕರೆದುಕೊಂಡು ಹೋದರು. ಆಗ ನಾನು ಚಿಕ್ಕತ್ತೆಗೆ ನನ್ನ ಮನಸ್ಸಿನಲ್ಲಿ ಬಿರುಗಾಳಿಯ ಅಲೆ ಎಬ್ಬಿಸಿದ್ದ ಪ್ರಶ್ನೆ ಕೇಳಿದೆ, “ನಿಮ್ಮನ್ನು ನೀವು ವಿಶ್ವಾಸಘಾತಕಿ ಎಂದು ಕರೆದುಕೊಂಡಿರಿ ”

ಅವರು ನನ್ನ ಕಣ್ಣಲ್ಲಿ ದೃಷ್ಟಿ ಹರಿಸುತ್ತಾ ಉತ್ತರ ಹೇಳಲು ಶುರು ಮಾಡಿದರು, “ನೀಲೇಶ್‌, ನಮ್ಮಿಬ್ಬರಲ್ಲಿ ಯಾವ ಕಾರಣಕ್ಕೆ ವಿಚ್ಛೇದನ ಆಯಿತೋ, ಅದರ ನಂಬರ್‌ 2 ನಿನಗೆ ಆಗಲೇ ತಿಳಿಸಿರುವೆ. ಇವರು ತಮ್ಮ ಗೆಳೆಯರ ಜೊತೆ ಸೇರಿಕೊಂಡು ಆಗಾಗ ಮದ್ಯ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರು. ನನಗೆ ಮದ್ಯ ಸೇವನೆ ಮಾಡುವವರನ್ನು ಕಂಡರೆ ಬಹಳ ಕೋಪ ಬರುತ್ತಿತ್ತು. ಆ ಕಾರಣದಿಂದ ನಾನು ಅವರೊಂದಿಗೆ ಜಗಳವಾಡುತ್ತಿದ್ದರೆ, ಅವರು ನನ್ನ ಮೇಲೆ ಕೈ ಮಾಡುತ್ತಿದ್ದರು. ಆಗ ನಾನು ಕೋಪಿಸಿಕೊಂಡು ತವರಿಗೆ ಹೊರಟುಹೋಗುತ್ತಿದ್ದೆ. ಅವರು ನನಗೆ ಹೋಗಲು ಅವಕಾಶ ಕೊಡುತ್ತಿದ್ದರು. ಏಕೆಂದರೆ ಅವರಿಗೆ ತಮ್ಮ ಸ್ನೇಹಿತರ ಜೊತೆ  ಮದ್ಯ ಸೇವನೆ ಮಾಡಲು ಮತ್ತಷ್ಟು ಅವಕಾಶ ಸಿಗುತ್ತಿತ್ತು. ಮತ್ತೆ ಯಾವಾಗ ನನ್ನ ನೆನಪು ಆಗುತ್ತಿತ್ತೊ ಆಗ ನನ್ನನ್ನು ಕರೆಯಲು ಬರುತ್ತಿದ್ದರು. ಇನ್ನು ಮುಂದೆ ನಾನು ಕುಡಿಯುವುದಿಲ್ಲ ಎಂದು ನನ್ನ ಮುಂದೆ ಪ್ರಮಾಣ ಮಾಡಿದಾಗ ನಾನು ಪುನಃ ಅವರೊಂದಿಗೆ ಹೊರಟು ನಿಲ್ಲುತ್ತಿದ್ದೆ.

“ಆದರೆ ಅವರ ಪ್ರಮಾಣ ಸುಳ್ಳು ಎಂದು ಸಾಬೀತಾಗುತ್ತಿತ್ತು. ಮದ್ಯ ಸೇವನೆ ಮಾಡುವ ಅವರ ಅಭ್ಯಾಸವೇ ಗೆಲುವು ಸಾಧಿಸುತ್ತಿತ್ತು. ನಮ್ಮಿಬ್ಬರ ನಡುವೆ ಪುನಃ ಜಗಳವಾಗುತ್ತಿತ್ತು. ನಾನು ತವರಿಗೆ ಪಲಾಯನ ಮಾಡುತ್ತಿದ್ದೆ. ಇದು ಸುಮಾರು 3 ತಿಂಗಳ ಕಾಲ ಹಾಗೆಯೇ ನಡೆಯಿತು. ಈ ಮಧ್ಯೆ ಅಮಿತ್‌ ನನ್ನ ಜೀವನದಲ್ಲಿ ಬಂದರು.”

“ಈ ಅಮಿತ್‌ ಯಾರು?”

“ಊರಲ್ಲಿರುವ ನಿನ್ನ ಮಾವ ಅಮಿತ್‌ ಅವರೇ ನನ್ನ ಈಗಿನ ಗಂಡ. ಅವರ ಮೊದಲ ಪತ್ನಿ ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು. ಅವರು ನನ್ನ ದಾಂಪತ್ಯ ಜೀವನದ ತೊಂದರೆ ತಾಪತ್ರಯಗಳನ್ನು ತಿಳಿದು ಬಹಳ ಕೋಪಿತರಾಗುತ್ತಿದ್ದರು. ನನಗಾಗಿ ಅವರ ಮನಸ್ಸಿನಲ್ಲಿ ಸಹಾನುಭೂತಿಯ ಗಾಢ ಭಾವನೆ ಮೂಡಿತು. ಮೊದಲು ಅವರು ನನ್ನ ಹಿತಚಿಂತಕರಾದರು. ಬಳಿಕ ನನ್ನ ಒಳ್ಳೆಯ ಸ್ನೇಹಿತರಾದರು. ನಂತರ ಈ ಸ್ನೇಹ ಪ್ರೀತಿಯಲ್ಲಿ ಬದಲಾಯಿತು.

“ಈ ರಾಜೀವ್ ‌ಕೂಡ ಬಹಳ ಒಳ್ಳೆಯ ಹೃದಯವಂತ ವ್ಯಕ್ತಿ. ನಮ್ಮಿಬ್ಬರ ನಡುವಿನ ಪ್ರೀತಿಯ ಬಂಧ ಕೂಡ ಗಟ್ಟಿಯಾಗಿತ್ತು. ಆದರೆ ತಮ್ಮ ಕುಡಿತದ ಚಟವನ್ನು ಮುಂದುವರಿಸಲು ಅವರು ನನ್ನನ್ನು ತವರಿಗೆ ಆಗಾಗ ಓಡಿಹೋಗಲು ಅವಕಾಶ ಕೊಟ್ಟು ಬಹುದೊಡ್ಡ ತಪ್ಪು ಮಾಡಿದರು. ವಿಧುರ ಅಮಿತ್‌ ಈ ತಪ್ಪಿನ ಲಾಭ ಪಡೆದು ತಮ್ಮ ಗೃಹಸ್ಥ ಜೀವನನ್ನು ಕಟ್ಟಿಕೊಂಡರು. ಮತ್ತೊಂದೆಡೆ ಇನ್ನೂ ಚಿಗುರು ಹಂತದಲ್ಲಿದ್ದ ರಾಜೀವ್ ‌ಕೌಟುಂಬಿಕ ಜೀವನ ನೆಲಕಚ್ಚಿತು.

“ರಾಜೀವ್ ನನ್ನ ಮುಂದೆ ಹಲವು ಸಲ ಕೈ ಜೋಡಿಸಿ ವಿನಂತಿಸಿಕೊಂಡಿದ್ದರು. ಚಿಕ್ಕ ಮಗುವಿನ ಹಾಗೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದರೆ ಅಷ್ಟರಲ್ಲಾಗಲೇ ಅಮಿತ್‌ ನನ್ನ ಹೃದಯದಲ್ಲಿ ಬೇರು ಬಿಟ್ಟಿದ್ದರು. ನಾನು ಅಮಿತ್‌ ಜೊತೆ ಭವಿಷ್ಯದ ಕನಸು ಕಾಣಲಾರಂಭಿಸಿದ್ದೆ. ನಾನು ಇವರಿಗೆ ನಂಬಿಕೆ ದ್ರೋಹ ಮಾಡಿದೆ. ಅದೇ ನಮ್ಮ ನಡುವೆ ವಿಚ್ಛೇದನದ ಮೊದಲ ಹಾಗೂ ಮುಖ್ಯ ಕಾರಣವಾಯಿತು. ನಾನು ರಾಜೀವ್ ಜೊತೆಗೆ ಬಹು ದೊಡ್ಡ ತಪ್ಪು ಮಾಡಿದೆ. ಈವರೆಗೂ ನಾನು ನನ್ನ ಮನಸ್ಸಿನಲ್ಲಿ ಕೂತಿರುವ ಅಪರಾಧ ಪ್ರಜ್ಞೆಯಿಂದ ಮುಕ್ತಳಾಗಿಲ್ಲ. ಇದೇ ಕಾರಣದಿಂದ ವಿಚ್ಛೇದನ ಆಗಿದ್ದರೂ ಕೂಡ ನಾನು ಇವರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಬರ್ತಾ ಇರ್ತೀನಿ. ನಾನಿಂದು ನಿನ್ನನ್ನು ಇಲ್ಲಿಗೆ ಏಕೆ ಕರೆದುಕೊಂಡು ಬಂದಿರುವೆ ಎಂಬ ಕಾರಣ ನಿನಗೆ ಗೊತ್ತಾ……?”

“ಏಕೆ?” ನನಗೆ ಒಂದಷ್ಟು ವಿಷಯ ಅರಿವಿಗೆ ಬಂದಿತ್ತು. ಆ ಕಾರಣದಿಂದ ನನ್ನ ಮನಸ್ಸು ತಳಮಳಗೊಂಡಿತ್ತು.

“ನೀನೂ ಕೂಡ ರಾಜೀವ್ ಹಿಂದೊಮ್ಮೆ ಮಾಡಿದ ತಪ್ಪನ್ನೇ ಮಾಡ್ತಿರುವೆ ಅನಿಸುತ್ತಿದೆ. ಅವರು ಇತಿಮಿತಿಯಿಲ್ಲದೆ ಮದ್ಯ ಸೇವನೆ ಮಾಡುವುದಕ್ಕಾಗಿ ನನ್ನನ್ನು ತವರಿಗೆ ಓಡಿಹೋಗಲು ಅವಕಾಶ ಕೊಡುತ್ತಿದ್ದರು. ನೀನು ರೂಪಾಳ ಜೊತೆಗೆ ಚಕ್ಕಂದ ಆಡಲು ಶಿಲ್ಪಾಳಿಗೆ ತನ್ನ ತವರಿಗೆ ಹೋಗಲು ತಕ್ಷಣವೇ ಅನುಮತಿ ಕೊಟ್ಟುಬಿಡುತ್ತಿ ಅನಿಸುತ್ತೆ ನಾಳೆ……”

“ರೂಪಾಳ ಜೊತೆಗೆ ನಾನೇನಾದರೂ……”

“ನನ್ನೊಂದಿಗೆ ಸುಳ್ಳು ಹೇಳುವುದರ ಲಾಭವೇನು ನೀಲೇಶ್‌? ನಾನು ನಿನ್ನನ್ನು ಅಡುಗೆಮನೆಯಲ್ಲಿ ಹಾಗೂ ರೂಪಾಳನ್ನು ಡ್ರಾಯಿಂಗ್‌ ರೂಮಿನಲ್ಲಿ ತಬ್ಬಿಕೊಂಡಿದ್ದೆ. ನಿನ್ನ ಬಟ್ಟೆಯಿಂದ ರೂಪಾ ಲೇಪಿಸಿಕೊಂಡಿದ್ದ  ಸೆಂಟ್‌ ವಾಸನೆ ಹೊರಹೊಮ್ಮುತ್ತಿತ್ತು. ನೀನು ಹುಡುಗಿಯರು ಬಳಸುವ ಸೆಂಟ್‌ನ್ನು ಏಕೆ ಬಳಸ್ತಿರುವೆ?”

“ನಾನು ನನ್ನ ತಪ್ಪು ಒಪ್ಪಿಕೊಳ್ತೀನಿ ಚಿಕ್ಕತ್ತೆ,” ಎಂದು ಹೇಳುತ್ತ ಇನ್ನಷ್ಟು ಮುಜುಗರಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ಒತ್ತಡಗ್ರಸ್ತ ಧ್ವನಿಯಲ್ಲಿಯೇ ಕೇಳಿದೆ, “ನನಗೊಂದು ವಿಷಯ ಸ್ಪಷ್ಟಪಡಿಸಿ, ಅದೇನೆಂದರೆ, ತವರಿನಲ್ಲಿ ಇರುವುದನ್ನು ಅಭ್ಯಾಸ ಮಾಡಿಕೊಂಡಿರುವ ನನ್ನ ಶಿಲ್ಪಾಗೆ ಅಲ್ಲಿ ಯಾರದಾದರೂ ಜೊತೆಗೆ ಪ್ರೀತಿಯ ಚಕ್ಕರ್‌ ನಡಿತೀದಿಯಾ?”

“ಇಲ್ಲ ನೀಲೇಶ್‌, ಆದರೆ ಎಂದೂ ಹೀಗಾಗುವುದಿಲ್ಲ ಎಂದು ನಾನು ಗ್ಯಾರಂಟಿ ಕೊಡಲಾರೆ. ರೂಪಾಳೊಂದಿಗೆ ಮೋಜು ಮಾಡಲು ನೀನು ನಿನ್ನ ವೈವಾಹಿಕ ಜೀವನದ ಖುಷಿ ಹಾಗೂ ಸುರಕ್ಷತೆಯನ್ನು ಪಣಕ್ಕಿಟ್ಟಿರುವೆ. ಇದೇನು ನಿನ್ನ ತಿಳಿವಳಿಕೆ ನಾಳೆ ಯಾರಾದರೂ ಅವಳ ಜೀವನದಲ್ಲಿ ಬಂದುಬಿಟ್ರೆ ನೀನು ಏನು ಮಾಡುವೆ?”

“ಹಾಗಾಗಲು ನಾನು ಅವಕಾಶ ಕೊಡುವುದಿಲ್ಲ,” ಉದ್ವೇಗದ ಧ್ವನಿಯಲ್ಲಿ ನಾನು ಉಸುರಿದೆ.

“ರಾಜೀವ್ ‌ಕೂಡ ಎಂದೂ ನನ್ನನ್ನು ಕಳೆದುಕೊಳ್ಳುವ ಕಲ್ಪನೆ ಮಾಡಿರಲಿಲ್ಲ. ನಾನು ಹೇಗೆ ಜೀವನದಲ್ಲಿ ಬದಲಾದೆನೊ ಹಾಗೆಯೇ ಶಿಲ್ಪಾ ಕೂಡ ಬದಲಾಗುವುದಿಲ್ಲ ಎಂದು ಹೇಗೆ ಹೇಳ್ತೀಯಾ?”

“ನಾನು ನಾಳೆಯೇ ಅವಳನ್ನು ವಾಪಸ್‌……”

“ನಾಳೆ ಏಕೆ…..? ಇಂದೇ ಏಕಾಗಬಾರದು ನೀಲೇಶ್‌?”

“ಹೌದು ಇಂದೇ……”

“ಈಗಲೇ ನೀನು ಹೋಗಿ ಅವಳನ್ನು ಏಕೆ ಕರೆದುಕೊಂಡು ಬರಬಾರದು?”

“ಈಗಲೇ ಹೊರಡಲಾ…..?”

“ಹೌದು ಹೊರಡು. ಒಳ್ಳೆಯ ಕೆಲಸದಲ್ಲಿ ತಡ ಏಕೆ?”

“ಚಿಕ್ಕತ್ತೆ ನಾನು ನಿಮಗೆ ಈ ವಿಷಯದಲ್ಲಿ ಭರವಸೆ ಕೊಡುವುದೇನೆಂದರೆ, ಶಿಲ್ಪಾಳ ಜೊತೆಗಿನ ಪರಸ್ಪರ ಪ್ರೀತಿಯ ಬೇರುಗಳನ್ನು ನಾನು ಇನ್ನಷ್ಟು ಭದ್ರಗೊಳಿಸಲು ಪ್ರಯತ್ನಿಸುವೆ. ಸಕಾಲಕ್ಕೆ ನನ್ನ ಕಣ್ಣು ತೆರೆದಿಸಿದ್ದಕ್ಕೆ ಧನ್ಯವಾದ,” ಎಂದು ಹೇಳುತ್ತಾ ನಾನು ಅವರ ಕಾಲುಗಳನ್ನು ಮುಟ್ಟಿ ನಮಸ್ಕರಿಸುತ್ತಾ ಶಿಲ್ಪಾಳತ್ತ ಕರೆತರಲು ಬಾಗಿಲಿನತ್ತ ಓಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ